१२३ पुष्पके सीता-रामसंवादः

वाचनम्
ಭಾಗಸೂಚನಾ

ಅಯೋಧ್ಯೆಗೆ ಪ್ರಯಾಣಿಸುತ್ತಿದ್ದಾಗ ಶ್ರೀರಾಮನು ಸೀತೆಗೆ ಮಾರ್ಗದ ಪರಿಚಯ ಮಾಡಿಸಿದುದು

ಮೂಲಮ್ - 1

ಅನುಜ್ಞಾತಂ ತು ರಾಮೇಣ ತದ್ವಿಮಾನಮನುತ್ತಮಮ್ ।
ಹಂಸಯುಕ್ತಂ ಮಹಾನಾದಮುತ್ಪಪಾತ ವಿಹಾಯಸಮ್ ॥

ಅನುವಾದ

ಶ್ರೀರಾಮನು ಆಜ್ಞೆ ಪಡೆದು ಆ ಹಂಸಯುಕ್ತ ಉತ್ತಮ ವಿಮಾನವು ಮಹಾಶಬ್ದ ಮಾಡುತ್ತಾ ಆಕಾಶದಲ್ಲಿ ಹಾರ ತೊಡಗಿತು.॥1॥

ಮೂಲಮ್ - 2

ಪಾತಯಿತ್ವಾ ತತಶ್ಚಕ್ಷುಃ ಸರ್ವತೋ ರಘುನಂದನಃ ।
ಅಬ್ರವೀನ್ಮೈಥಿಲೀಂ ಸೀತಾಂ ರಾಮಃ ಶಶಿನಿಭಾನನಾಮ್ ॥

ಅನುವಾದ

ಆಗ ರಘುಕುಲನಂದನ ಶ್ರೀರಾಮನು ಸುತ್ತಲೂ ನೋಡಿ ಚಂದ್ರನಂತೆ ಮನೋಹರ ಮುಖವುಳ್ಳ ಮಿಥಿಲೇಶಕುಮಾರೀ ಸೀತೆಯಲ್ಲಿ ಹೇಳಿದನು.॥2॥

ಮೂಲಮ್ - 3

ಕೈಲಾಸ ಶಿಖರಾಕಾರೇ ತ್ರಿಕೂಟಶಿಖರೇ ಸ್ಥಿತಾಮ್ ।
ಲಂಕಾಮೀಕ್ಷಸ್ವ ವೈದೇಹಿ ನಿರ್ಮಿತಾಂ ವಿಶ್ವಕರ್ಮಣಾ ॥

ಅನುವಾದ

ವಿದೇಹರಾಜನಂದಿನೀ! ಕೈಲಾಸ ಶಿಖರದಂತೆ ಸುಂದರ ತ್ರಿಕೂಟ ಪರ್ವತದ ವಿಶಾಲ ಶೃಂಗದಲ್ಲಿ ನೆಲೆಸಿದ, ವಿಶ್ವಕರ್ಮನು ರಚಿಸಿದ ಲಂಕಾಪುರಿಯನ್ನು ನೋಡು, ಎಷ್ಟು ಸುಂದರವಾಗಿ ಕಾಣುತ್ತಿದೆ.॥.॥

ಮೂಲಮ್ - 4

ಏತದಾಯೋಧನಂ ಪಶ್ಯ ಮಾಂಸ ಶೋಣಿತ ಕರ್ದಮಮ್ ।
ಹರೀಣಾಂ ರಾಕ್ಷಸಾನಾಂ ಚ ಸೀತೇ ವಿಶಸನಂ ಮಹತ್ ॥

ಅನುವಾದ

ಇತ್ತ ಈ ಯುದ್ಧಭೂಮಿಯನ್ನು ನೋಡು ಇಲ್ಲಿ ರಕ್ತ-ಮಾಂಸದ ಕೆಸರೇ ತುಂಬಿದೆ. ಸೀತೇ! ಈ ಯುದ್ಧಕ್ಷೇತ್ರದಲ್ಲಿ ವಾನರರ ಮತ್ತು ರಾಕ್ಷಸರ ಮಹಾಸಂಹಾರವಾಗಿತ್ತು.॥.॥

ಮೂಲಮ್ - 5

ಏಷ ದತ್ತವರಃ ಶೇತೇ ಪ್ರಮಾಥೀ ರಾಕ್ಷಸೇಶ್ವರಃ ।
ತವ ಹೇತೋರ್ವಿಶಾಲಾಕ್ಷಿ ರಾವಣೋ ನಿಹತೋ ಮಯಾ ॥

ಅನುವಾದ

ವಿಶಾಲಲೋಚನೇ! ಈ ರಾಕ್ಷಸರಾಜಾ ರಾವಣನು ಬೂದಿಯರಾಶಿಯಾಗಿ ಮಲಗಿದ್ದಾನೆ. ಇವನು ಬಹಳ ಹಿಂಸಕನಾಗಿದ್ದನು ಮತ್ತು ಇವನಿಗೆ ಬ್ರಹ್ಮದೇವರು ವರ ಕೊಟ್ಟಿದ್ದನು. ಆದರೆ ನಿನಗಾಗಿ ನಾನು ಇವನನ್ನು ವಧಿಸಿಬಿಟ್ಟೆ.॥5॥

ಮೂಲಮ್ - 6

ಕುಂಭಕರ್ಣೋಽತ್ರ ನಿಹತಃ ಪ್ರಹಸ್ತಶ್ಚ ನಿಶಾಚರಃ ।
ಧೂಮ್ರಾಕ್ಷಶ್ಚಾತ್ರ ನಿಹತೋ ವಾನರೇಣ ಹನೂಮತಾ ॥

ಅನುವಾದ

ಇಲ್ಲೇ ನಾನು ಕುಂಭಕರ್ಣನನ್ನು ವಧಿಸಿದೆ. ಇಲ್ಲೇ ನಿಶಾಚರ ಪ್ರಹಸ್ತನು ಸತ್ತು ಹೋದನು. ಇದೇ ರಣರಂಗದಲ್ಲಿ ವಾನರವೀರ ಹನುಮಂತನು ಧೂಮ್ರಾಕ್ಷನನ್ನು ವಧಿಸಿದುದು.॥6॥

ಮೂಲಮ್ - 7

ವಿದ್ಯುನ್ಮಾಲೀ ಹತಶ್ಚಾತ್ರ ಸುಷೇಣೇನ ಮಹಾತ್ಮನಾ ।
ಲಕ್ಷ್ಮಣೇನೇಂದ್ರಜಿಚ್ಚಾತ್ರ ರಾವಣಿರ್ನಿಹತೋ ರಣೇ ॥

ಅನುವಾದ

ಇಲ್ಲೇ ಮಹಾಮನಾ ಸುಷೇಣನು ವಿದ್ಯುನ್ಮಾಲಿಯನ್ನು ಕೊಂದಿದ್ದನು, ಇದೇ ರಣಭೂಮಿಯಲ್ಲಿ ಲಕ್ಷ್ಮಣನು ರಾವಣಪುತ್ರ ಇಂದ್ರಜಿತು ವನ್ನು ಸಂಹರಿಸಿದುದು.॥7॥

ಮೂಲಮ್ - 8

ಅಂಗದೇನಾತ್ರ ನಿಹತೋ ವಿಕಟೋ ನಾಮ ರಾಕ್ಷಸಃ ।
ವಿರೂಪಾಕ್ಷಶ್ಚ ದುಷ್ಪ್ರೇಕ್ಷೋ ಮಹಾಪಾರ್ಶ್ವ ಮಹೋದರೌ ॥

ಅನುವಾದ

ಇಲ್ಲೇ ಅಂಗದನು ವಿಕಟನೆಂಬ ರಾಕ್ಷಸ ವಧೆ ಮಾಡಿದ್ದನು. ನೋಡಲೂ ಕೂಡ ಕಠಿಣವಾಗಿದ್ದ ವಿರೂಪಾಕ್ಷ, ಮಹಾಪಾರ್ಶ್ವ ಮತ್ತು ಮಹೋದರರೂ ಇಲ್ಲೇ ಹತರಾದರು.॥8॥

ಮೂಲಮ್ - 9

ಅಕಂಪನಶ್ಚ ನಿಹತೋ ಬಲಿನೋಽನ್ಯೇ ಚ ರಾಕ್ಷಸಾಃ ।
ತ್ರಿಶಿರಾಶ್ಚಾತಿಕಾಯಶ್ಚ ದೇವಾಂತಕ ನರಾಂತಕೌ ॥

ಅನುವಾದ

ಅಕಂಪನ ಹಾಗೂ ಇತರ ಬಲಿಷ್ಠ ರಾಕ್ಷಸರೂ ಇಲ್ಲೇ ಕಾಲವಶರಾದರು. ತ್ರಿಶಿರಾ, ದೇವಾಂತಕ, ನರಾಂತಕರೂ ಕೂಡ ಇಲ್ಲೇ ಸತ್ತುಹೋದರು.॥9॥

ಮೂಲಮ್ - 10

ಯುದ್ಧೋನ್ಮತ್ತಶ್ಚ ಮತ್ತಶ್ಚ ರಾಕ್ಷಸ ಪ್ರವರಾವುಭೌ ।
ನಿಕುಂಭಶ್ಚೈವ ಕುಂಭಶ್ಚ ಕುಂಭಕರ್ಣಾತ್ಮಜೌ ಬಲೀ ॥

ಅನುವಾದ

ಯುದ್ಧೋನ್ಮತ್ತ ಮತ್ತು ಮತ್ತ ಎಂಬ ಎರಡು ಶ್ರೇಷ್ಠ ರಾಕ್ಷಸರು ಹಾಗೂ ಕುಂಭ-ನಿಕುಂಭ ಈ ಕುಂಭಕರ್ಣನ ಇಬ್ಬರೂ ಪುತ್ರರು ಇಲ್ಲೇ ಮೃತ್ಯುವನ್ನೈದಿದರು.॥10॥

ಮೂಲಮ್ - 11

ವಜ್ರದಂಷ್ಟ್ರಶ್ಚ ದಂಷ್ಟ್ರಶ್ಚ ಬಹವೋ ರಾಕ್ಷಸಾ ಹತಾಃ ।
ಮಕರಾಕ್ಷಶ್ಚ ದುರ್ಧರ್ಷೋ ಮಯಾ ಯುಧಿ ನಿಪಾತಿತಃ ॥

ಅನುವಾದ

ವಜ್ರದ್ರಂಷ್ಟ್ರ ಮತ್ತು ದಂಷ್ಟ್ರ ಮೊದಲಾದ ಅನೇಕ ರಾಕ್ಷಸರು ಇಲ್ಲೇ ಕಾಲಕ್ಕೆ ತುತ್ತಾದರು. ದುಧರ್ಷವೀರ ಮಕರಾಕ್ಷನನ್ನು ಇದೇ ಯುದ್ಧಸ್ಥಳದಲ್ಲಿ ನಾನು ಕೊಂದುಹಾಕಿದೆ.॥11॥

ಮೂಲಮ್ - 12

ಅಕಂಪನಶ್ಚ ನಿಹತಃ ಶೋಣಿತಾಕ್ಷಶ್ಚ ವೀರ್ಯವಾನ್ ।
ಯೂಪಾಕ್ಷಶ್ಚ ಪ್ರಜಂಘಶ್ಚ ನಿಹತೌ ತು ಮಹಾಹವೇ ॥

ಅನುವಾದ

ಅಕಂಪನ ಮತ್ತು ಪರಾಕ್ರಮಿ ಶೋಣಿತಾಕ್ಷರೂ ಇಲ್ಲೇ ಮೃತರಾದರು. ಯೂಪಾಕ್ಷ ಮತ್ತು ಪ್ರಜಂಘನೂ ಇದೇ ಮಹಾಸಂಗ್ರಾಮದಲ್ಲಿ ಹತರಾಗಿದ್ದರು.॥12॥

ಮೂಲಮ್ - 13

ವಿದ್ಯುಜ್ಜಿಹ್ವೋಽತ್ರ ನಿಹತೋ ರಾಕ್ಷಸೋ ಭೀಮದರ್ಶನಃ ।
ಯಜ್ಞಶತ್ರುಶ್ಚ ನಿಹತಃ ಸುಪ್ತಘ್ನಶ್ಚ ಮಹಾಬಲಃ ॥

ಅನುವಾದ

ನೋಡಿದಾಗಲೇ ಭಯಗೊಳ್ಳುವಂತಹ ರಾಕ್ಷಸ ವಿದ್ಯುಜ್ಜಿಹ್ವ ಇಲ್ಲೇ ಮೃತ್ಯುವಿಗೆ ತುತ್ತಾದನು. ಯಜ್ಞಶತ್ರು ಮತ್ತು ಮಹಾಬಲಿ ಸುಪ್ತಘ್ನನನ್ನು ಇಲ್ಲೆ ಕೊಲ್ಲಲಾಯಿತು.॥13॥

ಮೂಲಮ್ - 14½

ಸೂರ್ಯಶತ್ರುಶ್ಚ ನಿಹತೋ ಬ್ರಹ್ಮಶತ್ರುಸ್ತಥಾಪರಃ ।
ಅತ್ರ ಮಂದೋದರೀ ನಾಮ ಭಾರ್ಯಾ ತಂ ಪರ್ಯದೇವಯತ್ ॥
ಸಪತ್ನೀನಾಂ ಸಹಸ್ರೇಣ ಸಾಗ್ರೇಣ ಪರಿವಾರಿತಾ ।

ಅನುವಾದ

ಸೂರ್ಯಶತ್ರು, ಬ್ರಹ್ಮಶತ್ರು ಎಂಬ ನಿಶಾಚರರ ವಧೆಗಳನ್ನು ಇಲ್ಲೇ ಮಾಡಲಾಯಿತು. ಇಲ್ಲೇ ರಾವಣನ ಭಾರ್ಯೆ ಮಂಡೋದರಿಯು ಅವನಿಗಾಗಿ ವಿಲಾಪಿಸಿದ್ದಳು. ಆಗ ಅವಳು ಸಾವಿರಕ್ಕಿಂತ ಹೆಚ್ಚಿನ ಸವತಿಯರಿಂದ ಪರಿವೃತಳಾಗಿದ್ದಳು.॥14½॥

ಮೂಲಮ್ - 15½

ಏತತ್ತು ದೃಶ್ಯತೇ ತೀರ್ಥಂ ಸಮುದ್ರಸ್ಯ ವರಾನನೇ ॥
ಯತ್ರ ಸಾಗರಮುತ್ತೀರ್ಯ ತಾಂ ರಾತ್ರಿಮುಷಿತಾವಯಮ್ ।

ಅನುವಾದ

ಸುಮುಖಿಯೇ! ಇಲ್ಲಿ ಸಮುದ್ರವನ್ನು ದಾಟಿ ನಾವು ರಾತ್ರೆಯನ್ನು ಕಳೆದಿರುವ ಸಮುದ್ರತೀರ್ಥವು ಕಂಡು ಬರುತ್ತಿದೆ, ನೋಡು.॥15½॥

ಮೂಲಮ್ - 16½

ಏಷ ಸೇತುರ್ಮಯಾ ಬದ್ಧಃ ಸಾಗರೇ ಸಲಿಲಾರ್ಣವೇ ॥
ತವ ಹೇತೋರ್ವಿಶಾಲಾಕ್ಷಿ ನಲಸೇತುಃ ಸುದುಷ್ಕರಃ ।

ಅನುವಾದ

ವಿಶಾಲಲೋಚನೇ! ಉಪ್ಪುನೀರಿನ ಸಮುದ್ರದಲ್ಲಿ ಕಟ್ಟಿಸಿದ ಸೇತುವೆ ಇದಾಗಿದೆ, ಇದು ನಲಸೇತು ಎಂದು ವಿಖ್ಯಾತವಾಗಿದೆ. ದೇವಿ! ನಿನಗಾಗಿಯೇ ಈ ಅತ್ಯಂತ ದುಷ್ಕರ ಸೇತುವೆಯನ್ನು ಕಟ್ಟಲಾಯಿತು.॥16½॥

ಮೂಲಮ್ - 17½

ಪಶ್ಯ ಸಾಗರಮಕ್ಷೋಭ್ಯಂ ವೈದೇಹಿ ವರುಣಾಲಯಮ್ ॥
ಅಪಾರಮಿವಗರ್ಜಂತಂ ಶಂಖಶುಕ್ತಿಸಮಾಕುಲಮ್ ।

ಅನುವಾದ

ವಿದೇಹನಂದಿನೀ! ಈ ಅಕ್ಷೋಭ್ಯ ವರುಣಾಲಯ ಸಮುದ್ರವನ್ನು ನೋಡು, ಅದು ಅಪಾರವಾಗಿ ಕಂಡುಬರುತ್ತಿದೆ. ಶಂಖ ಮತ್ತು ಮುತ್ತಿನ ಚಿಪ್ಪುಗಳಿಂದ ತುಂಬಿದ ಈ ಸಾಗರ ಹೇಗೆ ಗರ್ಜಿಸುತ್ತಿದೆ ನೋಡು.॥17½॥

ಮೂಲಮ್ - 18½

ಹಿರಣ್ಯನಾಭಂ ಶೈಲೇಂದ್ರಂಕಾಂಚನಂ ಪಶ್ಯಮೈಥಿಲಿ ॥
ವಿಶ್ರಮಾರ್ಥಂ ಹನುಮತೋ ಭಿತ್ತ್ವಾಸಾಗರಮುತ್ಥಿತಮ್ ।

ಅನುವಾದ

ಮಿಥಿಲೇಶಕುಮಾರೀ! ಈ ಸುವರ್ಣಮಯ ಪರ್ವತರಾಜ ಹಿರಣ್ಯ ನಾಭನನ್ನು ನೋಡು, ಅದು ಹನುಮಂತನಿಗೆ ವಿಶ್ರಾಂತಿ ಕೊಡಲು ಸಮುದ್ರದ ಜಲರಾಶಿಯಿಂದ ಮೇಲಕ್ಕೆ ಎದ್ದು ಬಂದಿತ್ತು.॥18½॥

ಮೂಲಮ್ - 19½

ಏತತ್ಕುಕ್ಷೌ ಸಮುದ್ರಸ್ಯ ಸ್ಕಂಧಾವಾರ ನಿವೇಶನಮ್ ॥
ಅತ್ರ ಪೂರ್ವಂ ಮಹಾದೇವಃ ಪ್ರಸಾದಮಕರೋದ್ ವಿಭುಃ ।

ಅನುವಾದ

ಈ ಸಮುದ್ರದ ಗರ್ಭದಲ್ಲಿ ದ್ವೀಪವಿದೆ, ಅಲ್ಲಿ ನಾನು ಸೈನ್ಯದ ಶಿಬಿರ ಹೂಡಿದ್ದೆ. ಇಲ್ಲೆ ಹಿಂದೆ ಭಗವಾನ್ ಮಹಾದೇವನು ನನ್ನ ಮೇಲೆ ಕೃಪೆದೋರಿದ್ದನು. ಸೇತು ಕಟ್ಟುವ ಮೊದಲು ನನ್ನಿಂದ ಸ್ಥಾಪಿತನಾಗಿ ಅವನು ಇಲ್ಲಿ ವಿರಾಜಿಸುತ್ತಿರುವನು.॥19½॥

ಮೂಲಮ್ - 20½

ಏತತ್ತು ದೃಶ್ಯತೇ ತೀರ್ಥಂ ಸಾಗರಸ್ಯ ಮಹಾತ್ಮನಃ ॥
ಸೇತುಬಂಧ ಇತಿ ಖ್ಯಾತಂ ತ್ರೈಲೋಕ್ಯೇನ ಚ ಪೂಜಿತಮ್ ।

ಅನುವಾದ

ಈ ಪುಣ್ಯಸ್ಥಳದಲ್ಲಿ ವಿಶಾಲಕಾಯ ಸಮುದ್ರದ ತೀರ್ಥ ಕಂಡು ಬರುತ್ತಿದೆ, ಅದು ಸೇತು ನಿರ್ಮಾಣದ ಮೂಲಪ್ರದೇಶದಲ್ಲಿದ್ದುದರಿಂದ ಸೇತುಬಂಧ ಎಂಬ ಹೆಸರಿನಿಂದ ವಿಖ್ಯಾತನಾಗಿ ಮೂರು ಲೋಕಗಳಿಂದ ಪೂಜಿತವಾಗುವುದು.॥20½॥

ಮೂಲಮ್ - 21½

ಏತತ್ಪವಿತ್ರಂ ಪರಮಂ ಮಹಾಪಾತಕ ನಾಶನಮ್ ॥
ಅತ್ರ ರಾಕ್ಷಸರಾಜೋಽಯಮಾಜಗಾಮ ವಿಭೀಷಣಃ ।

ಅನುವಾದ

ಈ ತೀರ್ಥವು ಪರಮಪವಿತ್ರ ಹಾಗೂ ಮಹಾಪಾತಕಗಳನ್ನು ನಾಶಮಾಡುವಂತಹದಾಗುವುದು. ಇಲ್ಲೇ ರಾಕ್ಷಸರಾಜ ವಿಭೀಷಣನು ಶರಣಾಗಿ ಬಂದಿದ್ದನು.॥21½॥

ಮೂಲಮ್ - 22½

ಏಷಾ ಸಾ ದೃಶ್ಯತೇ ಸೀತೇ ಕಿಷ್ಕಿಂಧಾ ಚಿತ್ರಕಾನನಾ ॥
ಸುಗ್ರೀವಸ್ಯ ಪುರೀ ರಮ್ಯಾ ಯತ್ರ ವಾಲೀ ಮಯಾ ಹತಃ ।

ಅನುವಾದ

ಸೀತೇ! ಈ ವಿಚಿತ್ರ ವನಪ್ರದೇಶದಲ್ಲಿ ಸುಶೋಭಿತ ಕಿಷ್ಕಿಂಧೆ ಕಂಡುಬರುತ್ತಿದೆ. ಅದು ವಾನರರಾಜ ಸುಗ್ರೀವನ ಸುರಮ್ಯ ನಗರಿಯಾಗಿದೆ. ಇಲ್ಲೇ ನಾನು ವಾಲಿಯನ್ನು ವಧಿಸಿದುದು.॥22½॥

ಮೂಲಮ್ - 23½

ಅಥ ದೃಷ್ಟ್ವಾಪುರೀಂ ಸೀತಾ ಕಿಷ್ಕಿಂಧಾಂ ವಾಲಿಪಾಲಿತಾಮ್ ॥
ಅಬ್ರವೀತ್ಪ್ರಶ್ರಿತಂ ವಾಕ್ಯಂ ರಾಮಂ ಪ್ರಣಯಸಾಧ್ವಸಾ ।

ಅನುವಾದ

ಅನಂತರ ವಾಲಿಪಾಲಿತ ಕಿಷ್ಕಿಂಧಾಪುರಿಯನ್ನು ದರ್ಶಿಸಿ ಸೀತೆಯು ಪ್ರೇಮವಿಹ್ವಲಳಾಗಿ ಶ್ರೀರಾಮನಲ್ಲಿ ವಿನಯಪೂರ್ವಕ ಕೇಳಿದಳು.॥23½॥

ಮೂಲಮ್ - 24

ಸುಗ್ರೀವ ಪ್ರಿಯ ಭಾರ್ಯಾಭಿಸ್ತಾರಾಪ್ರಮುಖತೋ ನೃಪ ॥

ಮೂಲಮ್ - 25

ಅನ್ಯೇಷಾಂ ವಾನರೇಂದ್ರಾಣಾಂ ಸ್ತ್ರೀಭಿಃ ಪರಿವೃತಾ ಹ್ಯಹಮ್ ।
ಗಂತುಮಿಚ್ಛೇ ಸಹಾಯೋಧ್ಯಾಂ ರಾಜಧಾನೀಂ ತ್ವಯಾ ಸಹ ॥

ಅನುವಾದ

ಮಹಾರಾಜಾ! ನಾನು ಸುಗ್ರೀವನ ತಾರೆಯೇ ಮೊದಲಾದ ಪ್ರಿಯ ಭಾರ್ಯೆಯರನ್ನು ಹಾಗೂ ಇತರ ವಾನರೇಶ್ವರರ ಸ್ತ್ರೀಯರನ್ನೂ ಜೊತೆಗೆ ಕರೆದುಕೊಂಡು ನಿಮ್ಮೊಂದಿಗೆ ನಿಮ್ಮ ರಾಜಧಾನಿ ಅಯೋಧ್ಯೆಗೆ ಹೋಗಲು ಬಯಸುತ್ತೇನೆ.॥24-25॥*

ಟಿಪ್ಪನೀ
  • ಸೀತೆಯು ಇಲ್ಲಿ ವಾನರಸ್ತ್ರೀಯರನ್ನು ಕರೆದುಕೊಂಡು ಹೋಗುವ ಮಾತು ಹೇಳಿದ್ದರಿಂದ ವಿಮಾನವು ಕಿಷ್ಕಿಂಧೆಯಲ್ಲಿ ಇಳಿದು ಒಂದುದಿನ ಉಳಿಯಬೇಕಾಯಿತು. ಹೀಗೆ ರಾಮಾಯಣ ತಿಲಕಕಾರರ ಮಾತಾಗಿದೆ. ಅವರು ಹೇಳಿದಂತೆ ಅಶ್ವೀನ ಶುಕ್ಲ ಚತುರ್ಥಿಯಂದು ಕಿಷ್ಕಿಂಧೆಯಲ್ಲಿ ಇದ್ದು ಪಂಚಮಿಯಂದು ಅಲ್ಲಿಂದ ಹೊರಟಿದ್ದರು. ಭಗವಾನ್ ಶ್ರೀರಾಮನು ಅಲ್ಲಿ ಉಳಿದು ಅದೇ ದಿನ ಅಂಗದನಿಗೆ ಕಿಷ್ಕಿಂಧೆಯ ಯುವರಾಜ ಪಟ್ಟ ಕಟ್ಟಿದ್ದನು. ಇದು ಮಹಾಭಾರತದ ವನಪರ್ವದ ಅಧ್ಯಾಯ 291 ಶ್ಲೋಕ 58-59ರಿಂದ ಸೂಚಿತವಾಗುತ್ತದೆ.
ಮೂಲಮ್ - 26½

ಏವಮುಕ್ತೋಽಥ ವೈದೇಹ್ಯಾ ರಾಘವಃ ಪ್ರತ್ಯುವಾಚ ತಾಮ್ ।
ಏವಮಸ್ತ್ವಿತಿ ಕಿಷ್ಕಿಂಧಾಂಪ್ರಾಪ್ಯ ಸಂಸ್ಥಾಪ್ಯ ರಾಘವಃ ॥
ವಿಮಾನಂ ಪ್ರೇಕ್ಷ್ಯ ಸುಗ್ರೀವಂ ವಾಕ್ಯಮೇತದುವಾಚ ಹ ।

ಅನುವಾದ

ವಿದೇಹನಂದಿನೀ ಸೀತೆಯು ಹೀಗೆ ಹೇಳಿದಾಗ ಶ್ರೀರಾಮನು ‘ಹಾಗೆಯೇ ಆಗಲಿ’ ಎಂದು ಹೇಳಿದನು. ಮತ್ತೆ ಕಿಷ್ಕೆಂಧೆಗೆ ಹೋಗಿ ಅವರು ವಿಮಾನವನ್ನು ನಿಲ್ಲಿಸಿ, ಸುಗ್ರೀವನನ್ನು ನೋಡಿ ಇಂತೆಂದನು.॥26॥

ಮೂಲಮ್ - 27

ಬ್ರೂಹಿ ವಾನರಶಾರ್ದೂಲ ಸರ್ವಾನ್ವಾನರಪುಂಗವಾನ್ ॥

ಮೂಲಮ್ - 28½

ಸ್ತ್ರಿಭಿಃ ಪರಿವೃತಾಃ ಸರ್ವೇ ಹ್ಯಯೋಧ್ಯಾಂ ಯಾಂತು ಸೀತಯಾ ।
ತಥಾ ತ್ವಮಪಿಸರ್ವಾಭಿಃ ಸ್ತ್ರೀಭಿಃ ಸಹ ಮಹಾಬಲ ॥
ಅಭಿತ್ವರಯ ಸುಗ್ರೀವ ಗಚ್ಛಾಮಃ ಪ್ಲವಗಾಧಿಪ ।

ಅನುವಾದ

ವಾನರಶ್ರೇಷ್ಠನೇ! ನೀನು ಸಮಸ್ತ ವಾನರ ಯೂಥಪತಿಗಳಿಗೆ ಹೇಳು- ಅವರೆಲ್ಲರೂ ತಮ್ಮ ತಮ್ಮ ಪತ್ನಿಯರನ್ನು ಕರೆದುಕೊಂಡು ಸೀತೆಯ ಜೊತೆಗೆ ಅಯೋಧ್ಯೆಗೆ ಬರಲಿ. ಮಹಾಬಲೀ ವಾನರರಾಜ ಸುಗ್ರೀವನೇ! ನೀನು ನಿನ್ನ ಎಲ್ಲ ಪತ್ನಿಯರೂ ಜೊತೆಗೆ ಹೋಗಲು ಹೊರಡಲಿ; ಅದರಿಂದ ನಾವೆಲ್ಲರೂ ಬೇಗನೆ ಅಲ್ಲಿಗೆ ಹೋಗಬಲ್ಲೆವು.॥27-28॥

ಮೂಲಮ್ - 29

ಏವಮುಕ್ತಸ್ತು ಸುಗ್ರೀವೋ ರಾಮೇಣಾಮಿತತೇಜಸಾ ॥

ಮೂಲಮ್ - 30

ವಾನರಾಧಿಪತಿಃ ಶ್ರೀಮಾಂಸ್ತೈಶ್ಚ ಸರ್ವೈಃ ಸಮಾವೃತಃ ।
ಪ್ರವಿಶ್ಯಾಂತಃಪುರಂ ಶೀಘ್ರಂ ತಾರಾಮುದ್ವೀಕ್ಷ್ಯಸೋಽಬ್ರವೀತ್ ॥

ಅನುವಾದ

ಅಮಿತ ತೇಜಸ್ವೀ ರಘುನಾಥನು ಹೀಗೆ ಹೇಳಿದಾಗ ಎಲ್ಲ ವಾನರರಿಂದ ಸುತ್ತುವರಿದ ಶ್ರೀಮಾನ್ ವಾನರರಾಜ ಸುಗ್ರೀವನು ಶೀಘ್ರವಾಗಿ ಅಂತಃಪುರವನ್ನು ಪ್ರವೇಶಿಸಿ ತಾರೆಯನ್ನು ಕಂಡು ಹೀಗೆ ಹೇಳಿದನು.॥29-30॥

ಮೂಲಮ್ - 31

ಪ್ರಿಯೇ ತ್ವಂ ಸಹ ನಾರೀಭಿರ್ವಾನರಣಾಂ ಮಹಾತ್ಮನಾಮ್ ।
ರಾಘವೇಣಾಭ್ಯನುಜ್ಞಾತಾ ಮೈಥಿಲೀ ಪ್ರಿಯಕಾಮ್ಯಯಾ ॥

ಮೂಲಮ್ - 32

ತ್ವರ ತ್ವಮಭಿಗಚ್ಛಾಮೋ ಗೃಹ್ಯ ವಾನರಯೋಷಿತಃ ।
ಅಯೋಧ್ಯಾಂ ದರ್ಶಯಿಷ್ಯಾಮಃ ಸರ್ವಾ ದಶರಥ ಸ್ತ್ರಿಯಃ ॥

ಅನುವಾದ

ಪ್ರಿಯೆ! ನೀನು ಮಿಥಿಲೇಶ ಕುಮಾರೀ ಸೀತೆಯ ಪ್ರಿಯವನ್ನು ಮಾಡುವ ಇಚ್ಛೆಯಿಂದ ಶ್ರೀರಾಮನ ಆಜ್ಞಾನುಸಾರ ಎಲ್ಲ ಮುಖ್ಯ ಮುಖ್ಯ ಮಹಾತ್ಮಾ ವಾನರ ಪತ್ನಿಯರೂ ಹೊರಡಲು ಬೇಗನೆ ಸಿದ್ಧತೆ ಮಾಡು. ನಾವು ಈ ವಾನರ ಪತ್ನಿಯರನ್ನು ಜೊತೆಗೆ ಅಯೋಧ್ಯೆಗೆ ಕರೆದುಕೊಂಡು ಹೋಗಿ ದಶರಥನ ಎಲ್ಲ ರಾಣಿಯ ದರ್ಶನ ಮಾಡಿಸುವೆನು.॥31-32॥

ಮೂಲಮ್ - 33

ಸುಗ್ರೀವಸ್ಯ ವಚಃ ಶ್ರುತ್ವಾ ತಾರಾ ಸರ್ವಾಂಗ ಶೋಭನಾ ।
ಆಹೂಯ ಚಾಬ್ರವೀತ್ಸರ್ವಾ ವಾನರಾಣಾಂ ತು ಯೋಷಿತಃ ॥

ಅನುವಾದ

ಸುಗ್ರೀವನ ಮಾತನ್ನು ಕೇಳಿ ಸರ್ವಾಂಗ ಸುಂದರೀ ತಾರೆಯು ಸಮಸ್ತ ವಾನರ ಪತ್ನಿಯರನ್ನು ಕರೆದು ಹೀಗೆ ಹೇಳಿದಳು.॥33॥

ಮೂಲಮ್ - 34

ಸುಗ್ರೀವೇಣಾಭ್ಯನುಜ್ಞಾತಾ ಗಂತುಂ ಸರ್ವೈಶ್ಚ ವಾನರೈಃ ।
ಮಮ ಚಾಪಿ ಪ್ರಿಯಂ ಕಾರ್ಯಮಯೋಧ್ಯಾದರ್ಶನೇನ ಚ ॥

ಮೂಲಮ್ - 35

ಪ್ರವೇಶಂ ಚೈವ ರಾಮಸ್ಯ ಪೌರಜಾನಪದೈಃ ಸಹ ।
ವಿಭೂತಿಂ ಚೈವ ಸರ್ವಾಸಾಂ ಸ್ತ್ರೀಣಾಂ ದಶರಥಸ್ಯ ಚ ॥

ಅನುವಾದ

ಸಖಿಯರೇ! ಸುಗ್ರೀವನ ಆಜ್ಞಾನುಸಾರ ನೀವೆಲ್ಲರೂ ತಮ್ಮ ಪತಿಯರೊಂದಿಗೆ ಅಯೋಧ್ಯೆಗೆ ಹೋಗಲು ಬೇಗನೇ ಸಿದ್ಧರಾಗಿರಿ. ಅಯೋಧ್ಯೆಯನ್ನು ದರ್ಶನ ಮಾಡಿ ನೀವು ನನ್ನ ಪ್ರಿಯವಾದ ಕಾರ್ಯವನ್ನು ಮಾಡುವಿರಿ. ಅಲ್ಲಿ ಪುರವಾಸಿಗಳ, ಜನಪದದ ಜನರೊಂದಿಗೆ ಶ್ರೀರಾಮನು ನಗರ ಪ್ರವೇಶ ಮಾಡುವ ಮಹೋತ್ಸವವನ್ನು ನಮಗೆ ನೋಡಲು ಸಿಗಬಹುದು. ನಾವು ಅಲ್ಲಿ ಮಹಾರಾಜಾ ದಶರಥನ ಸಮಸ್ತ ರಾಣಿಯರ ವೈಭವದ ದರ್ಶನವೂ ನಮಗಾಗಬಹುದು.॥34-35॥

ಮೂಲಮ್ - 36½

ತಾರಯಾ ಚಾಭ್ಯನುಜ್ಞಾತಾಃ ಸರ್ವಾ ವಾನರಯೋಷಿತಃ ।
ನೇಪಥ್ಯವಿಧಿಪೂರ್ವಂ ತು ಕೃತ್ವಾ ಚಾಪಿ ಪ್ರದಕ್ಷಿಣಮ್ ॥
ಅಧ್ಯಾರೋಹನ್ವಿಮಾನಂ ತತ್ಸೀತಾ ದರ್ಶನಕಾಂಕ್ಷಯಾ ।

ಅನುವಾದ

ತಾರೆಯ ಈ ಆಜ್ಞೆಯನ್ನು ಪಡೆದು ಎಲ್ಲ ವಾನರ ಪತ್ನಿಯರು ಸಿಂಗರಿಸಿಕೊಂಡು ಬಂದು ಆ ವಿಮಾನದ ಪ್ರದಕ್ಷಿಣೆ ಮಾಡಿ ಸೀತೆಯ ದರ್ಶನದ ಇಚ್ಛೆಯಿಂದ ಅವರು ವಿಮಾನವನ್ನು ಹತ್ತಿದರು.॥36½॥

ಮೂಲಮ್ - 37½

ತಾಭಿಃ ಸಹೋತ್ಥಿತಂ ಶೀಘ್ರಂ ವಿಮಾನಂ ಪ್ರೇಕ್ಷ್ಯ ರಾಘವಃ ॥
ಋಶ್ಯಮೂಕಸಮೀಪೇ ತು ವೈದೇಹೀ ಪುನರಬ್ರವೀತ್ ।

ಅನುವಾದ

ಅವರೆಲ್ಲರೊಂದಿಗೆ ವಿಮಾನವು ಬೇಗನೆ ಮೇಲಕ್ಕೆದ್ದಿರುವುದನ್ನು ನೋಡಿ ಶ್ರೀರಘುನಾಥನ ಋಷ್ಯಮೂಕದ ನಿಕಟ ಬಂದಾಗ ಪುನಃ ವಿದೇಹಿನಂದಿನಿಯಲ್ಲಿ ಹೇಳಿದನು.॥37½॥

ಮೂಲಮ್ - 38½

ದೃಶ್ಯತೇಽಸೌ ಮಹಾನ್ ಸೀತೇ ಸವಿದ್ಯುದಿವ ತೋಯದಃ ॥
ಋಶ್ಯಮೂಕೋ ಗಿರಿವರಃ ಕಾಂಚನೈರ್ಧಾತುಭಿರ್ವೃತಃ ।

ಅನುವಾದ

ಸೀತೇ! ಮಿಂಚಿನೊಂದಿಗೆ ಮೇಘದಂತೆ, ಸುವರ್ಣಧಾತುಗಳಿಂದ ಕೂಡಿದ ಶ್ರೇಷ್ಠಪರ್ವತ ಕಾಣುತ್ತಿದೆಯಲ್ಲ ಅದೇ ಋಷ್ಯಮೂಕ ಪರ್ವತ.॥38½॥

ಮೂಲಮ್ - 39½

ಅತ್ರಾಹಂ ವಾನರೇಂದ್ರೇಣ ಸುಗ್ರೀವೇಣ ಸಮಾಗತಃ ॥
ಸಮಯಶ್ಚ ಕೃತಃ ಸೀತೇ ವಧಾರ್ಥಂ ವಾಲಿನೋ ಮಯಾ ।

ಅನುವಾದ

ಸೀತೇ! ಇಲ್ಲೆ ವಾನರರಾಜ ಸುಗ್ರೀವನು ನನ್ನನ್ನು ಭೆಟ್ಟಿಯಾಗಿದ್ದನು ಮತ್ತು ಮಿತ್ರತೆಯನ್ನು ಮಾಡಿದ ಮೇಲೆ ವಾಲಿಯ ವಧೆಮಾಡುವ ಪ್ರತಿಜ್ಞೆ ಮಾಡಿದ್ದೆ.॥39½॥

ಮೂಲಮ್ - 40½

ಏಷಾ ಸಾ ದೃಶ್ಯತೇ ಪಂಪಾ ನಲಿನೀ ಚಿತ್ರಕಾನನಾ ॥
ತ್ವಯಾ ವಿಹೀನೋ ಯತ್ರಾಹಂ ವಿಲಲಾಪ ಸುದುಃಖಿತಃ ।

ಅನುವಾದ

ಇದೇ ಆ ಪಂಪಾ ಎಂಬ ಪುಷ್ಕರಿಣಿಯಾಗಿದೆ, ಅದು ತಟವರ್ತಿ ವಿಚಿತ್ರ ಕಾನನಗಳಿಂದ ಸುಶೋಭಿತವಾಗಿದೆ. ಇಲ್ಲೇ ನಿನ್ನ ವಿಯೋಗದಿಂದ ಅತ್ಯಂತ ದುಃಖಿಯಾಗಿ ನಾನು ವಿಲಾಪ ಮಾಡಿದ್ದೆ.॥40½॥

ಮೂಲಮ್ - 41½

ಅಸ್ಯಾಸ್ತೀರೇ ಮಯಾ ದೃಷ್ಟಾ ಶಬರೀ ಧಮರಚಾರಿಣೀ ॥
ಅತ್ರ ಯೋಜನಬಾಹುಶ್ಚ ಕಬಂಧೋ ನಿಹತೋ ಮಯಾ ।

ಅನುವಾದ

ಇದೇ ಪಂಪಾತೀರದಲ್ಲಿ ನನಗೆ ಧರ್ಮಪರಾಯಣಾ ಶಬರಿಯ ದರ್ಶನವಾಗಿತ್ತು. ಒಂದು ಯೋಜನ ಉದ್ದದ ಭುಜವುಳ್ಳ ಕಬಂಧ ಎಂಬ ಅಸುರನನ್ನು ವಧಿಸಿದ ಸ್ಥಾನ ಇಲ್ಲೇ ಇದೆ.॥41½॥

ಮೂಲಮ್ - 42

ದೃಶ್ಯತೇಽಸೌ ಜನಸ್ಥಾನೇ ಶ್ರೀಮಾನ್ಸೀತೇ ವನಸ್ಪತಿಃ ॥

ಮೂಲಮ್ - 43

ಜಟಾಯುಶ್ಚ ಮಹಾತೇಜಾಸ್ತವ ಹೇತೋರ್ವಿಲಾಸಿನಿ ।
ರಾವಣೇನ ಹತೋ ಯತ್ರ ಪಕ್ಷಿಣಾಂ ಪ್ರವರೋ ಬಲೀ ॥

ಅನುವಾದ

ವಿಲಾಸಶಾಲಿನೀ ಸೀತೆ! ಜನಸ್ಥಾನದಲ್ಲಿ ಆ ಶೋಭಾಶಾಲೀ ವಿಶಾಲ ವೃಕ್ಷ ಕಾಣುತ್ತಿದೆಯಲ್ಲ, ಆಲ್ಲೆ ಬಲವಂತ ಹಾಗೂ ಮಹಾತೇಜಸ್ವೀ ಪಕ್ಷಿಶ್ರೇಷ್ಠ ಜಟಾಯು ನಿನ್ನನ್ನು ರಕ್ಷಿಸಿದ ಕಾರಣದಿಂದ ರಾವಣನ ಕೈಯಿಂದ ಹತನಾದನು.॥42-43॥

ಮೂಲಮ್ - 44

ಖರಶ್ಚ ನಿಹತೋ ಯತ್ರ ದೂಷಣಶ್ಚ ನಿಪಾತಿತಃ ।
ತ್ರಿಶಿರಾಶ್ಚ ಮಹಾವೀರ್ಯೋ ಮಯಾಬಾಣೈರಜಿಹ್ಮಗೈಃ ॥

ಅನುವಾದ

ನನ್ನ ಬಾಣಗಳಿಂದ ಖರ-ದೂಷಣರು ಧರಾಶಾಯಿಯಾದರೋ, ಮಹಾ ಪರಾಕ್ರಮಿ ತ್ರಿಶರನನ್ನು ಕೊಂದುಹಾಕಿದೆನೋ ಅದೇ ಈ ಸ್ಥಾನವಾಗಿದೆ.॥44॥

ಮೂಲಮ್ - 45½

ಏತತ್ ತದಾಶ್ರಮಪದಮಸ್ಮಾಕಂ ವರವರ್ಣಿನಿ ।
ಪರ್ಣಶಾಲಾ ತಥಾ ಚಿತ್ರಾ ದೃಶ್ಯತೇ ಶುಭದರ್ಶನೇ ॥
ಯತ್ರ ತ್ವಂ ರಾಕ್ಷಸೇಂದ್ರೇಣ ರಾವಣೇನ ಹೃತಾ ಬಲಾತ್ ।

ಅನುವಾದ

ವರವರ್ಣಿನೀ! ಶುಭದಶದರ್ಶನೇ! ಇಲ್ಲೇ ನಮ್ಮ ಆಶ್ರಮವಿದೆ ಹಾಗೂ ಆ ವಿಚಿತ್ರ ಪರ್ಣಶಾಲೆ ಕಂಡುಬರುತ್ತಿದೆ. ಅಲ್ಲಿಗೆ ಬಂದು ರಾವಣನು ಬಲವಂತ ವಾಗಿ ನಿನ್ನನ್ನು ಅಪಹರಿಸಿದ್ದನು.॥45½॥

ಮೂಲಮ್ - 46½

ಏಷಾ ಗೋದಾವರೀ ರಮ್ಯಾ ಪ್ರಸನ್ನಸಲಿಲಾ ಶುಭಾ ।
ಅಗಸ್ತ್ಯಸ್ಯಾಶ್ರಮಶ್ಚೈವ ದೃಶ್ಯತೇ ಕದಲೀವೃತಃ ॥

ಅನುವಾದ

ಇದು ಸ್ವಚ್ಛ ಜಲರಾಶಿಯಿಂದ ಸುಶೋಭಿತ ಮಂಗಲಮಯಿ ರಮಣೀಯ ಗೋದಾವರಿಯಾಗಿದೆ. ಅದೇ ಬಾಳೆಯ ಗಿಡಗಳ ಗುಂಪಿನಿಂದ ಆವರಿಸಿದ ಮಹರ್ಷಿ ಅಗಸ್ತ್ಯರ ಆಶ್ರಮ ಕಂಡುಬರುತ್ತಿದೆ.॥46½॥

ಮೂಲಮ್ - 47

ದೀಪ್ತಶ್ಚೈವಾಶ್ರಮೋ ಹ್ಯೇಷ ಸುತೀಕ್ಷ್ಣಸ್ಯ ಮಹಾತ್ಮನಃ ॥

ಮೂಲಮ್ - 48

ದೃಶ್ಯತೇ ವೈದೇಹಿ ಚೈವ ಶರಭಂಗಾಶ್ರಮೋ ಮಹಾನ್ ।
ಉಪಯಾತಃ ಸಹಸ್ರಾಕ್ಷೋ ಯತ್ರ ಶಕ್ರಃ ಪುರಂದರಃ ॥

ಅನುವಾದ

ಇಲ್ಲಿ ಮಹಾತ್ಮಾ ಸುತೀಕ್ಷ್ಣರ ಪ್ರಕಾಶಮಾನ ಆಶ್ರಮವಿದೆ. ವಿದೇಹನಂದಿನೀ! ಸಹಸ್ರನೇತ್ರಧಾರೀ ಪುರಂದರ ಇಂದ್ರನು ಆಗಮಿಸಿದ ಶರಭಂಗ ಮುನಿಯ ಆಶ್ರಮ ಕಂಡುಬರುತ್ತಿದೆ ನೋಡು.॥47-48॥

ಮೂಲಮ್ - 49

ಅಸ್ಮಿನ್ದೇಶೇ ಮಹಾಕಾಯೋ ವಿರಾಧೋ ನಿಹತೋ ಮಯಾ ।
ಏತೇ ತೇ ತಾಪಸಾದೇವಿ ದೃಶ್ಯಂತೇ ತನುಮಧ್ಯಮೇ ॥

ಅನುವಾದ

ನಾನು ಮಹಾಕಾಯ ವಿರಾಧನನ್ನು ವಧಿಸಿದ ಸ್ಥಾನ ಇದೇ ಆಗಿದೆ. ದೇವಿ! ಸುಂದರೀ! ಇಲ್ಲಿ ಕಂಡುಬರುವ ತಾಪಸರನ್ನು ನಾವು ಮೊದಲು ದರ್ಶನ ಮಾಡಿದ್ದೆವು.॥49॥

ಮೂಲಮ್ - 50

ಅತ್ರಿಃ ಕುಲಪತಿರ್ಯತ್ರ ಸೂರ್ಯವೈಶ್ವಾನರೋಪಮಃ ।
ಅತ್ರ ಸೀತೇ ತ್ವಯಾ ದೃಷ್ಟಾ ತಾಪಸೀ ಧರ್ಮಚಾರಿಣೀ ॥

ಅನುವಾದ

ಸೀತೆ! ಈ ತಾಪಸಾಶ್ರಮದಲ್ಲೇ ಸೂರ್ಯಾಗ್ನಿಗಳಂತಹ ತೇಜಸ್ವೀ ಕುಲಪತಿ ಅತ್ರಿಮುನಿಗಳು ವಾಸಿಸುತ್ತಾರೆ. ಇಲ್ಲೇ ನೀನು ಧರ್ಮಪರಾಯಣಾ ತಪಸ್ವಿನೀ ಅನುಸೂಯೆಯನ್ನು ದರ್ಶಿಸಿದ್ದೆ.॥50॥

ಮೂಲಮ್ - 51

ಅಸೌ ಸುತನು ಶೈಲೇಂದ್ರಶ್ಚಿತ್ರಕೂಟಃ ಪ್ರಕಾಶತೇ ।
ಅತ್ರ ಮಾಂ ಕೈಕಯೀಪುತ್ರಃ ಪ್ರಸಾದಯಿತುಮಾಗತಃ ॥

ಅನುವಾದ

ಸುಂದರೀ! ಅದೋ ಗಿರಿರಾಜ ಚಿತ್ರಕೂಟ ಪ್ರಕಾಶಿಸುತ್ತಿದೆ. ಅಲ್ಲೇ ಕೈಕೇಯಿಕುಮಾರ ಭರತನು ನನ್ನನ್ನು ಪ್ರಸನ್ನಗೊಳಿಸಿ ಹಿಂದಕ್ಕೆ ಕರೆದುಕೊಂಡು ಹೋಗಲು ಬಂದಿದ್ದನು.॥51॥

ಮೂಲಮ್ - 52

ಏಷಾ ಸಾ ಯಮುನಾ ರಮ್ಯಾ ದೃಶ್ಯತೇ ಚಿತ್ರಕಾನನಾ ।
ಭರದ್ವಾಜಾಶ್ರಮಃ ಶ್ರೀಮಾನ್ ದೃಶ್ಯತೇ ಚೈಷ ಮೈಥಿಲಿ ॥

ಅನುವಾದ

ಮೈಥಿಲೀ! ವಿಚಿತ್ರ ಕಾನನಗಳಿಂದ ಸುಶೋಭಿತ ರಮಣೀಯ ಈ ಯಮುನಾ ನದಿ ಕಂಡುಬರುತ್ತಿದೆ ಹಾಗೂ ಶೋಭಾಶಾಲೀ ಭರದ್ವಾಜಾಶ್ರಮ ಕಂಡುಬರುತ್ತಿದೆ.॥52॥

ಮೂಲಮ್ - 53

ಇಯಂ ಚ ದೃಶ್ಯತೇ ಗಂಗಾ ಪುಣ್ಯಾ ತ್ರಿಪಥಗಾ ನದೀ ।
ನಾನಾ ದ್ವಿಜಗಣಾಕೀರ್ಣಾ ಸಂಪ್ರಪುಷ್ಪಿತಕಾನನಾ ॥

ಅನುವಾದ

ಈ ಪುಣ್ಯಸಲಿಲೆ ತ್ರಿಪಥಗಾ ಗಂಗಾನದಿ ಕಾಣುತ್ತಿದೆಯಲ್ಲ! ಅದರ ತಟದಲ್ಲಿ ನಾನಾ ಪ್ರಕಾರದ ಪಕ್ಷಿಗಳು ಕಲರವ ಮಾಡುತ್ತಿವೆ. ದ್ವಿಜವೃಂದವು ಪುಣ್ಯಕರ್ಮಗಳಲ್ಲಿ ನಿರತರಾಗಿದ್ದಾರೆ. ಇದರ ತೀರದ ವೃಕ್ಷಗಳು ಸುಂದರ ಹೂವುಗಳಿಂದ ತುಂಬಿವೆ.॥53॥

ಮೂಲಮ್ - 54

ಶೃಂಗಬೇರಪುರಂ ಚೈತದ್ಗುಹೋ ಯತ್ರ ಸಖಾ ಮಮ ।
ಏಷಾ ಸಾ ದೃಶ್ಯತೇ ಸೀತೇ ಸರಯೂರ್ಯೂಪಮಾಲಿನೀ ॥

ಮೂಲಮ್ - 55

ಏಷಾ ಸಾ ದೃಶ್ಯತೇ ಸೀತೇ ರಾಜಧಾನೀ ಪಿತುರ್ಮಮ ।
ಅಯೋಧ್ಯಾಂ ಕುರು ವೈದೇಹಿ ಪ್ರಣಾಮಂ ಪುನರಾಗತಾ ॥

ಅನುವಾದ

ಇದು ಶೃಂಗಾರವೇರಪುರವಾಗಿದೆ, ಅಲ್ಲಿ ನನ್ನ ಮಿತ್ರ ಗುಹನಿರುತ್ತಾನೆ. ಸೀತೇ! ಈ ಯೂಪಮಾಲೆಗಳಿಂದ ಅಲಂಕೃತ ಸರಯೂ ಕಂಡುಬರುತ್ತಿದೆ. ಅದರ ತೀರದಲ್ಲಿ ನನ್ನ ತಂದೆಯ ರಾಜಧಾನಿ ಇದೆ. ವಿದೇಹನಂದಿನೀ! ನೀನು ವನವಾಸದ ಬಳಿಕ ಮರಳಿ ಅಯೋಧ್ಯೆಗೆ ಬಂದಿರುವೆ. ಅದರಿಂದ ಈ ಪುರಿಗೆ ನಮಸ್ಕರಿಸು.॥54-55॥

ಮೂಲಮ್ - 56

ತತಸ್ತೇ ವಾನರಾಃ ಸರ್ವೇ ರಾಕ್ಷಸಾಃ ಸ ವಿಭೀಷಣಃ ।
ಉತ್ಪತ್ಯೋತ್ಪತ್ಯ ಸಂಹೃಷ್ಟಾಸ್ತಾಂ ಪುರೀಂ ದದೃಶುಸ್ತದಾ ॥

ಅನುವಾದ

ಆಗ ವಿಭೀಷಣ ಸಹಿತ ಎಲ್ಲ ರಾಕ್ಷಸರು, ವಾನರರು ಅತ್ಯಂತ ಹರ್ಷ ಉಲ್ಲಾಸಿತರಾಗಿ ನೆಗೆದಾಡುತ್ತಾ ಆ ಪುರಿಯ ದರ್ಶನ ಮಾಡತೊಡಗಿದರು.॥56॥

ಮೂಲಮ್ - 57

ತತಸ್ತು ತಾಂ ಪಾಂಡುರಹರ್ಮ್ಯಮಾಲಿನೀಂ
ವಿಶಾಲಕಕ್ಷ್ಯಾಂ ಗಜವಾಜಿಭುರ್ವೃತಾಮ್ ।
ಪುರೀಮಪಶ್ಯನ್ ಪ್ಲವಗಾಃ ಸರಾಕ್ಷಸಾಃ
ಪುರೀಂ ಮಹೇಂದ್ರಸ್ಯ ಯಥಾಮರಾವತೀಮ್ ॥

ಅನುವಾದ

ಅನಂತರ ಆ ವಾನರ ಮತ್ತು ರಾಕ್ಷಸರು ಬಿಳಿಯ ಮಹಡಿಗಳಿಂದ ಅಲಂಕೃತ ಹಾಗೂ ವಿಶಾಲ ಭವನಗಳಿಂದ ವಿಭೂಷಿತ ಅಯೋಧ್ಯಾಪುರಿಯನ್ನು, ಆನೆ-ಕುದುರೆಗಳಿಂದ ತುಂಬಿದ, ದೇವೇಂದ್ರನ ಅಮರಾವತಿಯಂತೆ ಶೋಭಿತವಾದ ಅದನ್ನು ನೋಡತೊಡಗಿದರು.॥57॥

ಮೂಲಮ್ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರಇಪ್ಪತ್ತಮೂರನೆಯ ಸರ್ಗ ಪೂರ್ಣವಾಯಿತು.॥123॥

ಅನುವಾದ