वाचनम्
ಭಾಗಸೂಚನಾ
ಶ್ರೀರಾಮನ ಆಜ್ಞೆಯಂತೆ ವಿಭೀಷಣನಿಂದ ವಾನರರ ವಿಶೇಷ ಸತ್ಕಾರ, ಸುಗ್ರೀವ ವಿಭೀಷಣರೊಂದಿಗೆ ವಾನರರನ್ನು ಕರೆದುಕೊಂಡು, ಪುಷ್ಪಕವಿಮಾನದ ಮೂಲಕ ಅಯೋಧ್ಯೆಗೆ ಶ್ರೀರಾಮನ ಪ್ರಯಾಣ
ಮೂಲಮ್ - 1
ಉಪಸ್ಥಿತಂ ತು ತಂ ಕೃತ್ವಾ ಪುಷ್ಪಕಂ ಪುಷ್ಪಭೂಷಿತಮ್ ।
ಅವಿದೂರೇ ಸ್ಥಿತೋ ರಾಮಮಿತ್ಯುವಾಚ ವಿಭೀಷಣಃ ॥
ಅನುವಾದ
ಹೂವುಗಳಿಂದ ಸುಮಲಂಕೃತವಾದ ಪುಷ್ಪಕವಿಮಾನವನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ವಿಭೀಷಣನು ಶ್ರೀರಾಮನಲ್ಲಿ ಏನೋ ಹೇಳಲು ವಿಚಾರಮಾಡಿದನು.॥1॥
ಮೂಲಮ್ - 2
ಸ ತು ಬದ್ಧಾಂಜಲಿಪುಟೋ ವಿನೀತೋ ರಾಕ್ಷಸೇಶ್ವರಃ ।
ಅಬ್ರವೀತ್ ತ್ವರಯೋಪೇತಃ ಕಿಂ ಕರೋಮೀತಿ ರಾಘವಮ್ ॥
ಅನುವಾದ
ವಿಭೀಷಣನು ಕೈಮುಗಿದುಕೊಂಡು ವಿನಯದಿಂದ, ಅವಸರದಿಂದ ಶ್ರೀರಘುನಾಥನಲ್ಲಿ- ‘ಪ್ರಭೋ! ಈಗೇನು ಸೇವೆ ಮಾಡಲೀ’ ಎಂದು ಕೇಳಿದನು.॥2॥
ಮೂಲಮ್ - 3
ತಮಬ್ರವೀನ್ಮಹಾತೇಜಾ ಲಕ್ಷ್ಮಣಸ್ಯೋಪಶೃಣ್ವತಃ ।
ವಿಮೃಶ್ಯರಾಘವೋ ವಾಕ್ಯಮಿದಂ ಸ್ನೇಹಪುರಸ್ಕೃತಮ್ ॥
ಅನುವಾದ
ಆಗ ಮಹಾತೇಜಸ್ವೀ ಶ್ರೀರಘುನಾಥನು ಏನೋ ಯೋಚಿಸಿ ಲಕ್ಷ್ಮಣನು ಕೇಳುವಂತೆ ಸ್ನೇಹದಿಂದ ಇಂತೆಂದನು.॥3॥
ಮೂಲಮ್ - 4
ಕೃತಪ್ರಯತ್ನಕರ್ಮಾಣಃ ಸರ್ವ ಏವ ವನೌಕಸಃ ।
ರತ್ನೈರರ್ಥೈಶ್ಚ ವಿವಿಧೈಃ ಸಂಪೂಜ್ಯಂತಾಂ ವಿಭೀಷಣ ॥
ಅನುವಾದ
ವಿಭೀಷಣ! ಈ ವಾನರರೆಲ್ಲ ಯುದ್ಧದಲ್ಲಿ ಭಾರೀ ಪ್ರಯತ್ನ ಹಾಗೂ ಪರಿಶ್ರಮಮಾಡಿರುವರು; ಆದ್ದರಿಂದ ನೀನು ನಾನಾ ಪ್ರಕಾರದ ವಸ-ರತ್ನ-ಧನಾದಿಗಳಿಂದ ಇವರೆಲ್ಲರನ್ನೂ ಸತ್ಕರಿಸು.॥4॥
ಮೂಲಮ್ - 5
ಸಹಾಮೀಭಿಸ್ತ್ವಯಾ ಲಂಕಾ ನಿರ್ಜಿತಾ ರಾಕ್ಷಸೇಶ್ವರ ।
ಹೃಷ್ಟೈಃ ಪ್ರಾಣಭಯಂ ತ್ಯಕ್ತ್ವಾ ಸಂಗ್ರಾಮೇಷ್ವನಿವರ್ತಿಭಿಃ ॥
ಅನುವಾದ
ರಾಕ್ಷಸೇಶ್ವರನೇ! ಸಂಗ್ರಾಮದಲ್ಲಿ ಎಂದೂ ಹಿಮ್ಮೆಟ್ಟದೆ ಇರುವ ಈ ವೀರವಾನರರು ಹರ್ಷೋತ್ಸಾಹದಿಂದ ತುಂಬಿಕೊಂಡಿರುವರು. ಪ್ರಾಣದ ಹಂಗನ್ನು ತೊರೆದು ಕಾದಾಡುವ ಈ ವಾನರರ ಸಹಾಯದಿಂದ ನೀನು ಲಂಕೆಯ ವಿಜಯ ಸಾಧಿಸಿದೆ.॥5॥
ಮೂಲಮ್ - 6
ತ ಇಮೇ ಕೃತಕರ್ಮಾಣಃ ಸರ್ವ ಏವ ವನೌಕಸಃ ।
ಧನರತ್ನಪ್ರದಾನೈಶ್ಚ ಕರ್ಮೈಷಾಂ ಸಫಲಂ ಕುರು ॥
ಅನುವಾದ
ಈ ವಾನರರೆಲ್ಲರೂ ತಮ್ಮ ಕಾರ್ಯವನ್ನು ಪೂರ್ಣಗೊಳಿಸಿರುವರು; ಆದ್ದರಿಂದ ಇವರಿಗೆ ರತ್ನ-ಧನ-ವಾಹನಾದಿಗಳನ್ನು ಕೊಟ್ಟು ನೀನು ಇವರ ಕಾರ್ಯವನ್ನು ಸಲಗೊಳಿಸು.॥6॥
ಮೂಲಮ್ - 7
ಏವಂ ಸಂಮಾನಿತಾಶ್ಚೈತೇ ನಂದ್ಯಮಾನಾ ಯಥಾತ್ವಯಾ ।
ಭವಿಷ್ಯಂತಿ ಕೃತಜ್ಞೇನ ನಿರ್ವೃತಾ ಹರಿಯೂಥಪಾಃ ॥
ಅನುವಾದ
ನೀನು ಕೃತಜ್ಞನಾಗಿ ಇವರ ಸಮ್ಮಾನ ಮತ್ತು ಅಭಿನಂದನೆ ಮಾಡಿದರೆ ಈ ವಾನರದಳಪತಿಗಳು ಬಹಳ ಸಂತುಷ್ಟರಾಗುವರು.॥7॥
ಮೂಲಮ್ - 8
ತ್ಯಾಗಿನಂ ಸಂಗ್ರಹೀತಾರಂ ಸಾನುಕ್ರೋಶಂ ಜಿತೇಂದ್ರಿಯಮ್ ।
ಸರ್ವೇ ತ್ವಾಮವಗಚ್ಛಂತಿ ತತಃ ಸಂಬೋಧಯಾಮಿ ತೇ ॥
ಅನುವಾದ
ಹೀಗೆ ಮಾಡುವುದರಿಂದ ವಿಭೀಷಣನು ಉಚಿತ ಸಂದರ್ಭದಲ್ಲಿ ಧನದ ತ್ಯಾಗ ಹಾಗೂ ದಾನ ಮಾಡುತ್ತಾನೆ, ಸರಿಯಾದ ಸಮಯದಲ್ಲಿ ನ್ಯಾಯೋಚಿತವಾಗಿ ಧನ-ರತ್ನಾದಿಗಳ ದಾನದಿಂದ ಮಿತ್ರರ ಸಂಗ್ರಹ ಮಾಡುತ್ತಾನೆ; ದಯಾಳು ಮತ್ತು ಜಿತೇಂದ್ರಿಯನಾಗಿದ್ದಾನೆ ಎಂದು ಎಲ್ಲ ಜನರು ಹೇಳಿಕೊಳ್ಳುವರು. ಅದಕ್ಕಾಗಿ ನಿನಗೆ ಹೀಗೆ ಮಾಡಲು ತಿಳಿಸುತ್ತಿದ್ದೇನೆ.॥8॥
ಮೂಲಮ್ - 9
ಹೀನಂ ರತಿಗುಣೈಃ ಸರ್ವೈರಭಿಹಂತಾರಮಾಹವೇ ।
ಸೇನಾ ತ್ಯಜಂತಿ ಸಂವಿಗ್ನಾ ನೃಪಂತಿಂ ತೇ ನರೇಶ್ವರ ॥
ಅನುವಾದ
ನರೇಶ್ವರನೇ! ಯಾವ ರಾಜನು ಸೇವಕರಲ್ಲಿ ಪ್ರೇಮವನ್ನುಂಟುಮಾಡುವ ದಾನ-ಮಾನಾದಿ ಗುಣಗಳಿಂದ ರಹಿತನಾಗಿರುವನೋ ಅವನನ್ನು ಯುದ್ಧದ ಸಂದರ್ಭದಲ್ಲಿ ಉದ್ವಿಗ್ನವಾದ ಸೈನ್ಯವು ಬಿಟ್ಟುಹೋಗುತ್ತದೆ. ಇವನು ವ್ಯರ್ಥವಾಗಿ ನಮ್ಮನ್ನು ಶೋಷಿಸುತ್ತಿದ್ದಾನೆ, ನಮ್ಮನ್ನು ಸಾಕುವ, ನಮ್ಮ ಯೋಗಕ್ಷೇಮದ ಚಿಂತೆ ಇವನಿಗೆ ಇಲ್ಲವೇ ಇಲ್ಲ ಎಂದು ಅವರು ತಿಳಿಯುತ್ತಾರೆ.॥9॥
ಮೂಲಮ್ - 10
ಏವಮುಕ್ತಸ್ತು ರಾಮೇಣ ವಾನರಾಂಸ್ತಾನ್ವಿಭೀಷಣಃ ।
ರತ್ನಾರ್ಥಸಂವಿಭಾಗೇನ ಸರ್ವಾನೇವಾಭ್ಯಪೂಜಯತ್ ॥
ಅನುವಾದ
ಶ್ರೀರಾಮನು ಹೀಗೆ ಹೇಳಿದಾಗ ವಿಭೀಷಣನು ಆ ವಾನರರೆಲ್ಲರಿಗೆ ರತ್ನ-ಧನ-ವಾಹಾನಾದಿಗಳನ್ನು ಕೊಟ್ಟು ಎಲ್ಲರನ್ನು ಸತ್ಕರಿಸಿದನು.॥10॥
ಮೂಲಮ್ - 11
ತತಸ್ತಾನ್ ಪೂಜಿತಾನ್ದೃಷ್ಟ್ವಾರತ್ನಾಥೈರ್ಹರಿಯೂಥಪಾನ್ ।
ಆರುರೋಹ ತದಾ ರಾಮಸ್ತದ್ ವಿಮಾನಮನುತ್ತಮಮ್ ॥
ಮೂಲಮ್ - 12
ಅಂಕೇನಾದಾಯ ವೈದೇಹೀಂ ಲಜ್ಜಮಾನಾಂ ಯಶಸ್ವಿನೀಮ್ ।
ಲಕ್ಷ್ಮಣೇನ ಸಹ ಭ್ರಾತ್ರಾ ವಿಕ್ರಾಂತೇನ ಧನುಷ್ಮತಾ ॥
ಅನುವಾದ
ವಾನರ ಯೂಥಪತಿಗಳು ರತ್ನ-ಧನದಿಂದ ಪೂಜಿತರಾದುದನ್ನು ನೋಡಿ, ಆಗ ಭಗವಾನ್ ಶ್ರೀರಾಮನು ನಾಚಿಕೊಂಡ ಮನಸ್ವಿನೀ ಸೀತೆಯನ್ನು ಕಂಕುಳಲ್ಲೆತ್ತಿಕೊಂಡು, ಪರಾಕ್ರಮಿ ಧನುರ್ಧರ ಲಕ್ಷ್ಮಣನೊಂದಿಗೆ ಆ ಉತ್ತಮ ವಿಮಾನದಲ್ಲಿ ಆರೂಢನಾದನು.॥11-12॥
ಮೂಲಮ್ - 13
ಅಬ್ರವೀತ್ಸ ವಿಮಾನಸ್ಥಃ ಪೂಜಯನ್ಸರ್ವವಾನರಾನ್ ।
ಸುಗ್ರೀವಂ ಚ ಮಹಾವೀರ್ಯಂಕಾಕುತ್ಸ್ಥಃ ಸವಿಭೀಷಣಮ್ ॥
ಅನುವಾದ
ವಿಮಾನದಲ್ಲಿ ಕುಳಿತು ಸಮಸ್ತ ವಾನರರನ್ನು ಆದರಿಸುತ್ತಾ ಆ ಕಕುತ್ಸ್ಥಕುಲಭೂಷಣ ಶ್ರೀರಾಮನು ವಿಭೀಷಣ ಸಹಿತ ಮಹಾಪರಾಕ್ರಮಿ ಸುಗ್ರೀವನಲ್ಲಿ ಇಂತೆಂದನು.॥13॥
ಮೂಲಮ್ - 14
ಮಿತ್ರಕಾರ್ಯಂ ಕೃತಮಿದಂ ಭವದ್ಭಿರ್ವಾನರರ್ಷಭಾಃ ।
ಅನುಜ್ಞಾತಾ ಮಯಾ ಸರ್ವೇ ಯಥೇಷ್ಟಂ ಪ್ರತಿಗಚ್ಛತ ॥
ಅನುವಾದ
ವಾನರಶ್ರೇಷ್ಠ ವೀರರೇ! ನೀವೆಲ್ಲರೂ ನಿಮ್ಮ ಈ ಮಿತ್ರನ ಕಾರ್ಯವನ್ನು ಮಿತ್ರೋಚಿತ ರೀತಿಯಿಂದ ಚೆನ್ನಾಗಿಯೇ ನೆರವೇರಿಸಿದ್ದೀರಿ. ಈಗ ನೀವೆಲ್ಲರೂ ನಿಮಗಿಷ್ಟವಾದ ಸ್ಥಾನಗಳಿಗೆ ತೆರಳಿರಿ.॥14॥
ಮೂಲಮ್ - 15
ಯತ್ತು ಕಾರ್ಯಂ ವಯಸ್ಯೇನಸ್ನಿಗ್ಧೇನ ಚ ಹಿತೇನ ಚ ।
ಕೃತಂ ಸುಗ್ರೀವ ತತ್ಸರ್ವಂ ಭವತಾಧರ್ಮಭೀರುಣಾ ॥
ಅನುವಾದ
ಸುಗ್ರೀವ ಸಖನೇ! ಒಬ್ಬ ಹಿತೈಷಿ, ಪ್ರೇಮಿಮಿತ್ರನು ಮಾಡಬೇಕಾದುದೆಲ್ಲವನ್ನು ನೀನು ಪೂರ್ಣಮಾಡಿ ತೋರಿದ್ದೀಯೆ. ಏಕೆಂದರೆ ನೀನು ಅಧರ್ಮದಿಂದ ಭಯಪಡುವವನಾಗಿರುವೆ.॥15॥
ಮೂಲಮ್ - 16
ಕಿಷ್ಕಿಂಧಾಂ ಪ್ರತಿಯಾಹ್ಯಾಶು ಸ್ವಸ್ಯೇನ್ಯೇನಾಭಿ ಸಂವೃತಃ ।
ಸ್ವರಾಜ್ಯೇ ವಸ ಲಂಕಾಯಾಂ ಮಯಾದತ್ತೇ ವಿಭೀಷಣ ।
ನ ತ್ವಾಂ ಧರ್ಷಯಿತುಂ ಶಕ್ತಾಃ ಸೇಂದ್ರಾ ಅಪಿ ದಿವೌಕಸಃ ॥
ಅನುವಾದ
ವಾನರರಾಜನೇ! ಈಗ ನೀನು ನಿನ್ನ ಸೈನ್ಯದೊಂದಿಗೆ ಬೇಗನೇ ಕಿಷ್ಕಿಂಧೆಗೆ ತೆರಳು. ವಿಭೀಷಣ! ನೀನೂ ಕೂಡ ನಾನು ಕೊಡ ಮಾಡಿದ ಲಂಕೆಯ ರಾಜ್ಯದಲ್ಲಿ ಸ್ಥಿರನಾಗು. ಇನ್ನು ಇಂದ್ರಾದಿ ದೇವತೆಗಳೂ ಕೂಡ ನಿನ್ನನ್ನು ಎದುರಿಸಲಾರರು.॥16॥
ಮೂಲಮ್ - 17
ಅಯೋಧ್ಯಾಂ ಪ್ರತಿಯಾಸ್ಯಾಮಿ ರಾಜಧಾನೀಂ ಪಿತುರ್ಮಮ ।
ಅಭ್ಯನುಜ್ಞಾತುಮಿಚ್ಛಾಮಿ ಸರ್ವಾನಾಮಂತ್ರಯಾಮಿ ವಃ ॥
ಅನುವಾದ
ಈಗ ನಾನು ನನ್ನ ತಂದೆಯ ರಾಜಧಾನೀ ಅಯೋಧ್ಯೆಗೆ ಹೋಗುವೆನು. ಅದಕ್ಕಾಗಿ ನಿಮ್ಮೆಲ್ಲರಲ್ಲಿ ಅನುಮತಿಯನ್ನು ಬಯಸುತ್ತಿದ್ದೇನೆ.॥17॥
ಮೂಲಮ್ - 18
ಏವಮುಕ್ತಾಸ್ತು ರಾಮೇಣ ಹರೀಂದ್ರಾ ಹರಯಸ್ತಥಾ ।
ಊಚುಃ ಪ್ರಾಂಜಲಯಃ ಸರ್ವೇ ರಾಕ್ಷಸಶ್ಚ ವಿಭೀಷಣಃ ॥
ಅನುವಾದ
ಶ್ರೀರಾಮಚಂದ್ರನು ಹೀಗೆ ಹೇಳಿದಾಗ ಎಲ್ಲ ವಾನರ ಸೇನಾಪತಿಗಳು ಮತ್ತು ರಾಕ್ಷಸ ರಾಜ ವಿಭೀಷಣನು ಕೈಮುಗಿದು ಹೇಳತೊಡಗಿದನು.॥18॥
ಮೂಲಮ್ - 19
ಅಯೋಧ್ಯಾಂ ಗಂತುಮಿಚ್ಛಾಮಃ ಸರ್ವಾನ್ನಯತು ನೋ ಭವಾನ್ ।
ಮುದ್ಯುಕ್ತಾ ವಿಚರಿಷ್ಯಾಮೋ ವನಾನ್ಯುಪನನಾನಿ ಚ ॥
ಅನುವಾದ
ಭಗವಂತಾ! ನಾವೂ ಅಯೋಧ್ಯೆಗೆ ಬರಲು ಬಯಸುತ್ತಿದ್ದೇವೆ. ನೀವು ನಮ್ಮನ್ನು ಜೊತೆಗೆ ಕರೆದುಕೊಂಡು ಹೋಗಿರಿ. ಅಲ್ಲಿ ನಾವು ಸಂತೋಷದಿಂದ ವನ-ಉಪವನಗಳಲ್ಲಿ ಸಂಚರಿಸುವೆವು.॥19॥
ಮೂಲಮ್ - 20
ದೃಷ್ಟ್ವಾ ತ್ವಾಮಭಿಷೇಕಾರ್ದ್ರಂ ಕೌಸಲ್ಯಾಮಭಿವಾದ್ಯ ಚ ।
ಅಚಿರಾದಾಗಮಿಷ್ಯಾಮಃ ಸ್ವಗೃಹಾನ್ ನೃಪಸತ್ತಮ ॥
ಅನುವಾದ
ನೃಪಶ್ರೇಷ್ಠನೇ! ಪಟ್ಟಾಭಿಷೇಕದ ಸಮಯ ಮಂತ್ರಪೂರಿತ ಜಲದಿಂದ ಒದ್ದೆಯಾದ ನಿಮ್ಮ ಶ್ರೀವಿಗ್ರಹದ ದರ್ಶನ ಮಾಡಿ, ಮಾತೆ ಕೌಸಲ್ಯೆಯ ಚರಣಗಳಲ್ಲಿ ತಲೆಬಾಗಿ ನಾವು ಬೇಗನೇ ನಮ್ಮ ಮನೆಗಳಿಗೆ ಮರಳುವೆವು.॥20॥
ಮೂಲಮ್ - 21
ಏವಮುಕ್ತಸ್ತು ಧರ್ಮಾತ್ಮಾ ವಾನರೈಃ ಸವಿಭೀಷಣೈಃ ।
ಅಬ್ರವೀದ್ವಾನರಾನ್ ರಾಮಃ ಸಸುಗ್ರೀವ ವಿಭೀಷಣಾನ್ ॥
ಅನುವಾದ
ವಿಭೀಷಣ ಸಹಿತ ವಾನರರು ಈ ಪ್ರಕಾರ ಕೇಳಿಕೊಂಡಾಗ ಶ್ರೀರಾಮನು ಸುಗ್ರೀವ ಹಾಗೂ ವಿಭೀಷಣ ಸಹಿತ ಆ ವಾನರರಲ್ಲಿ ಹೇಳಿದನು.॥21॥
ಮೂಲಮ್ - 22
ಪ್ರಿಯಾತ್ಪ್ರಿಯತರಂ ಲಬ್ಧಂ ಯದಹಂ ಸಸುಹೃಜ್ಜನಃ ।
ಸರ್ವೈರ್ಭವದ್ಭಿಃ ಸಹಿತಃ ಪ್ರೀತಿಂ ಲಪ್ಸ್ಯೇಪುರೀಂ ಗತಃ ॥
ಅನುವಾದ
ಮಿತ್ರರೇ! ಇದಾದರೋ ನನಗೆ ಅತ್ಯಂತ ಪ್ರಿಯವಾಗಿದೆ. ನಾನು ನೀವೆಲ್ಲ ಸುಹೃದ ರನ್ನು ಅಯೋಧ್ಯೆಗೆ ಕೊಂಡುಹೋದರೆ ಪರಮಪ್ರಿಯ ವಸ್ತುವಿನ ಲಾಭವಾದೀತು. ಇದರಿಂದ ಹೆಚ್ಚಿನ ಸಂತೋಷದ ಸಂಗತಿ ಬೇರೆನಿರಬಹುದು.॥22॥
ಮೂಲಮ್ - 23
ಕ್ಷಿಪ್ರಮಾರೋಹ ಸುಗ್ರೀವ ವಿಮಾನಂ ಸಹ ವಾನರೈಃ ।
ತ್ವಮಪ್ಯಾರೋಹ ಸಾಮಾತ್ಯೋ ರಾಕ್ಷಸೇಂದ್ರ ವಿಭೀಷಣ ॥
ಅನುವಾದ
ಸುಗ್ರೀವನೇ! ನೀನು ಎಲ್ಲ ವಾನರರೊಂದಿಗೆ ಬೇಗನೇ ಈ ವಿಮಾನವನ್ನು ಏರಿರಿ. ರಾಕ್ಷಸರಾಜಾ ವಿಭೀಷಣನೇ! ನೀನೂ ಕೂಡ ಮಂತ್ರಿಗಳೊಂದಿಗೆ ವಿಮಾನದಲ್ಲಿ ಆರೂಢನಾಗು.॥23॥
ಮೂಲಮ್ - 24
ತತಃ ಸಪುಷ್ಪಕಂ ದಿವ್ಯಂ ಸುಗ್ರೀವಃ ಸಹ ವಾನರೈಃ ।
ಆರುರೋಹ ಮುದಾಯುಕ್ತಃ ಸಾಮಾತ್ಯಶ್ಚ ವಿಭೀಷಣಃ ॥
ಅನುವಾದ
ಆಗ ವಾನರರ ಸಹಿತ ಸುಗ್ರೀವ ಮತ್ತು ಮಂತ್ರಿಗಳೊಂದಿಗೆ ವಿಭೀಷಣನು ಬಹಳ ಸಂತೋಷದಿಂದ ಆ ದಿವ್ಯ ಪುಷ್ಪಕ ವಿಮಾನವನ್ನು ಹತ್ತಿದರು.॥24॥
ಮೂಲಮ್ - 25
ತೇಷ್ವಾರೂಢೇಷು ಸರ್ವೇಷು ಕೌಬೇರಂ ಪರಮಾಸನಮ್ ।
ರಾಘವೇಣಾಭ್ಯನುಜ್ಞಾತಮುತ್ಪಪಾತ ವಿಹಾಯಸಮ್ ॥
ಅನುವಾದ
ಅವರೆಲ್ಲರೂ ಹತ್ತಿದ ಬಳಿಕ ಕುಬೇರನ ಆ ಪರಮಾಸನ ವಿಮಾನವು ಶ್ರೀರಘುನಾಥನ ಆಜ್ಞೆ ಪಡೆದು ಆಕಾಶಕ್ಕೆ ಹಾರಿತು.॥25॥
ಮೂಲಮ್ - 26
ಖಗತೇನ ವಿಮಾನೇನ ಹಂಸಯುಕ್ತೇನ ಭಾಸ್ವತಾ ।
ಪ್ರಹೃಷ್ಟಶ್ಚ ಪ್ರತೀತಶ್ಚ ಬಭೌ ರಾಮಃ ಕುಬೇರವತ್ ॥
ಅನುವಾದ
ಆಕಾಶಕ್ಕೆ ನೆಗೆಯುತ್ತಲೇ ಆ ಹಂಸಯುಕ್ತ ತೇಜಸ್ವೀ ವಿಮಾನದ ಮೂಲಕ ಪ್ರಯಾಣ ಮಾಡುತ್ತಾ ಪುಳಕಿತ ಮತ್ತು ಪ್ರಸನ್ನಚಿತ್ತನಾದ ಶ್ರೀರಾಮನು ಸಾಕ್ಷಾತ್ ಕುಬೇರನಂತೆಯೇ ಶೋಭಿಸಿದನು.॥26॥
ಮೂಲಮ್ - 27
ತೇ ಸರ್ವೇ ವಾನರರ್ಕ್ಷಾಶ್ಚ ರಾಕ್ಷಸಾಶ್ಚ ಮಹಾಬಲಾಃ ।
ಯಥಾಸುಖಮಸಂಬಾಧಂ ದಿವ್ಯೇ ತಸ್ಮಿನ್ನುಪಾವಿಶನ್ ॥
ಅನುವಾದ
ಎಲ್ಲ ವಾನರರು, ಕರಡಿಗಳು, ಮಹಾಬಲಿ ರಾಕ್ಷಸರು ಆ ದಿವ್ಯವಿಮಾನದಲ್ಲಿ ಸ್ವಲ್ಪವೂ ಒತ್ತಡವಿಲ್ಲದೆ ಸುಖವಾಗಿ ಕುಳಿತಿದ್ದರು.॥27॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರಇಪ್ಪತ್ತೆರಡನೆಯ ಸರ್ಗ ಪೂರ್ಣವಾಯಿತು.॥122॥