१२१ रामेण अयोध्यानिर्वर्तनसिद्धता

वाचनम्
ಭಾಗಸೂಚನಾ

ಅಯೋಧ್ಯೆಗೆ ಹೊರಡಲು ಶ್ರೀರಾಮನ ಸಿದ್ಧತೆ, ವಿಭೀಷಣನು ಪುಷ್ಪಕ ವಿಮಾನದಲ್ಲಿ ಹೋಗುವಂತೆ ಶ್ರೀರಾಮನನ್ನು ಪ್ರಾರ್ಥಿಸಿದುದು

ಮೂಲಮ್ - 1

ತಾಂ ರಾತ್ರಿಮುಷಿತಂ ರಾಮಂ ಸುಖೋದಿತಮರಿಂದಮಮ್ ।
ಅಬ್ರವೀತ್ಪ್ರಾಂಜಲಿರ್ವಾಕ್ಯಂ ಜಯಂ ಪೃಷ್ಟ್ವಾ ವಿಭೀಷಣಃ ॥

ಅನುವಾದ

ಅಂದಿನ ರಾತ್ರೆ ವಿಶ್ರಾಂತಿ ಪಡೆದು ಶತ್ರುಸೂದನ ಶ್ರೀರಾಮನು ಮರುದಿನ ಪ್ರಾತಃಕಾಲದಲ್ಲಿ ಸುಖವಾಗಿ ಎಚ್ಚರಗೊಂಡಾಗ ಕುಶಲ ಪ್ರಶ್ನೆಗಳ ಬಳಿಕ ವಿಭೀಷಣನು ಕೈಮುಗಿದು ಹೇಳಿದನು.॥1॥

ಮೂಲಮ್ - 2

ಸ್ನಾನಾನಿ ಚಾಂಗರಾಗಾಣಿ ವಸ್ತ್ರಾಣ್ಯಾಭರಣಾನಿ ಚ ।
ಚಂದನಾನಿ ಚ ದಿವ್ಯಾನಿ ಮಾಲ್ಯಾನಿ ವಿವಿಧಾನಿ ಚ ॥

ಅನುವಾದ

ರಘುನಂದನ! ಸ್ನಾನಕ್ಕಾಗಿ ನೀರು, ಅಂಗರಾಗ, ವಸ್ತ್ರ, ಅಭೂಷಣ, ಚಂದನ, ಬಗೆ-ಬಗೆಯ ಮೂಲೆಗಳು ನಿನ್ನ ಸೇವೆಗಾಗಿ ಸಿದ್ಧವಾಗಿವೆ.॥2॥

ಮೂಲಮ್ - 3

ಅಲಂಕಾರವಿದಶ್ಚೈತಾ ನಾರ್ಯಃ ಪದ್ಮನಿಭೇಕ್ಷಣಾಃ ।
ಉಪಸ್ಥಿತಾಸ್ತ್ವಾಂ ವಿಧಿವತ್ಸ್ನಾಪಯಿಷ್ಯಂತಿ ರಾಘವ ॥

ಅನುವಾದ

ರಘುವೀರನೇ! ಶೃಂಗಾರ ಕಲೆಯನ್ನು ತಿಳಿದಿರುವ ಕಮಲಾಕ್ಷಿಯರಾದ ಈ ನಾರಿಯರೂ ಕೂಡ ನಿನ್ನ ಸೇವೆಗಾಗಿ ಬಂದು ನಿಂತಿರುವರು. ಇವರು ವಿಧಿವತ್ತಾಗಿ ನಿನಗೆ ಸ್ನಾನಮಾಡಿಸುವರು.॥3॥

ಮೂಲಮ್ - 4

ಏವಮುಕ್ತಸ್ತು ಕಾಕುತ್ಥ್ಸಃ ಪ್ರತ್ಯುವಾಚ ವಿಭೀಷಣಮ್ ।
ಹರೀನ್ಸುಗ್ರೀವಮುಖ್ಯಾಂಸ್ತ್ವಂ ಸ್ನಾನೇನೋಪನಿಮಂತ್ರಯ ॥

ಅನುವಾದ

ವಿಭೀಷಣನು ಹೀಗೆ ಹೇಳಿದಾಗ ಶ್ರೀರಾಮನು ಅವನಲ್ಲಿ ಹೇಳಿದನು- ಮಿತ್ರಾ! ನೀನು ಸುಗ್ರಿವಾದಿ ವಾನರವೀರರನ್ನು ಸ್ನಾನಕ್ಕಾಗಿ ಒತ್ತಾಯಿಸು.॥4॥

ಮೂಲಮ್ - 5

ಸ ತು ತಾಮ್ಯತಿ ಧರ್ಮಾತ್ಮಾ ಮಮ ಹೇತೋಃ ಸುಖೋಚಿತಃ ।
ಸುಕುಮಾರೋ ಮಹಾಬಾಹುರ್ಭರತಃ ಸತ್ಯಸಂಶ್ರಯಃ ॥

ಅನುವಾದ

ನನಗೆ ಈಗಲಾದರೋ ಸತ್ಯವನ್ನು ಆಶ್ರಯಿಸಿದ ಧರ್ಮಾತ್ಮಾ ಮಹಾಬಾಹು ಭರತನು ಬಹಳ ಕಷ್ಟಪಡುತ್ತಿದ್ದಾನೆ. ಅವನು ಸುಕುಮಾರನಾಗಿದ್ದು ಸುಖ ಪಡಲು ಯೋಗ್ಯನಾಗಿದ್ದಾನೆ.॥5॥

ಮೂಲಮ್ - 6

ತಂ ವಿನಾ ಕೈಕಯೀಪುತ್ರಂ ಭರತಂ ಧರ್ಮಚಾರಿಣಮ್ ।
ನ ಮೇ ಸ್ನಾನಂ ಬಹುಗತಂ ವಸ್ತ್ರಾಣ್ಯಾಭರಣಾನಿ ಚ ॥

ಅನುವಾದ

ಆ ಧರ್ಮ ಪರಾಯಣ ಕೈಕೇಯಿ ಕುಮಾರನನ್ನು ನೋಡದೆ, ನನಗೆ ಸ್ನಾನವಾಗಲೀ, ಈ ಉತ್ತಮ ವಸಾಭೂಷಣಗಳನ್ನು ಧರಿಸುವುದಾಗಲೀ ಮೆಚ್ಚುವುದಿಲ್ಲ.॥6॥

ಮೂಲಮ್ - 7

ಏತತ್ಪಶ್ಯ ಯಥಾ ಕ್ಷಿಪ್ರಂ ಪ್ರತಿಗಚ್ಛಾಮ ತಾಂ ಪುರೀಮ್ ।
ಅಯೋಧ್ಯಾಂ ಗಚ್ಛತೋ ಹ್ಯೇಷ ಪಂಥಾಃ ಪರಮದುರ್ಗಮಃ ॥

ಅನುವಾದ

ನಾವು ಆದಷ್ಟು ಬೇಗ ಅಯೋಧ್ಯೆಗೆ ಮರಳಿ ಹೋಗುವುದರ ಕುರಿತು ನೀನು ಗಮನಕೊಡು; ಏಕೆಂದರೆ ಇಲ್ಲಿಂದ ಕಾಲ್ನಡಿಗೆಯಿಂದ ಪ್ರಯಾಣಮಾಡಲು ಮಾರ್ಗವು ದುರ್ಗಮವಾಗಿದೆ, ದೂರವಾಗಿದೆ.॥7॥

ಮೂಲಮ್ - 8

ಏವಮುಕ್ತಸ್ತು ಕಾಕುತ್ಸ್ಥಂ ಪ್ರತ್ಯುವಾಚ ವಿಭೀಷಣಃ ।
ಅಹ್ನಾ ತ್ವಾಂ ಪ್ರಾಪಯಿಷ್ಯಾಮಿ ತಾಂ ಪುರೀಂ ಪಾರ್ಥಿವಾತ್ಮಜ ॥

ಅನುವಾದ

ಶ್ರೀರಾಮನು ಹೀಗೆ ಹೇಳಿದಾಗ ವಿಭೀಷಣನು ಅವನಲ್ಲಿ ಹೀಗೆ ಹೇಳಿದನು- ರಾಜಕುಮಾರನೇ! ನೀನು ಇದರ ಕುರಿತು ಚಿಂತಿಸಬೇಡ. ನಾನು ಒಂದೇ ದಿನದಲ್ಲಿ ನಿಮ್ಮ ಅಯೋಧ್ಯಗೆ ತಲುಪಿಸುತ್ತೇನೆ.॥8॥

ಮೂಲಮ್ - 9

ಪುಷ್ಪಕಂ ನಾಮ ಭದ್ರಂ ತೇ ವಿಮಾನಂ ಸೂರ್ಯಸನ್ನಿಭಮ್ ।
ಮಮ ಭ್ರಾತುಃ ಕುಬೇರಸ್ಯ ರಾವಣೇನ ಬಲೀಯಸಾ ॥

ಮೂಲಮ್ - 10

ಹೃತಂ ನಿರ್ಜಿತ್ಯ ಸಂಗ್ರಾಮೇ ಕಾಮಗಂ ದಿವ್ಯ ಮುತ್ತಮಮ್ ।
ತ್ವದರ್ಥೇ ಪಾಲಿತಂ ಚೇದಂ ತಿಷ್ಠತ್ಯತುಲವಿಕ್ರಮ ॥

ಅನುವಾದ

ನಿನಗೆ ಮಂಗಳ ವಾಗಲಿ. ನನ್ನ ಬಳಿ ಹಿರಿಯಣ್ಣ ಕುಬೇರನ ಸೂರ್ಯತುಲ್ಯ ತೇಜಸ್ವೀ ಪುಷ್ಪಕವಿಮಾನವಿದೆ. ಅದನ್ನು ಮಹಾಬಲಿ ರಾವಣನು ಕುಬೇರನನ್ನು ಸೋಲಿಸಿತಂದಿದ್ದನು. ಅತುಲ ಪರಾಕ್ರಮಿ ಶ್ರೀರಾಮಾ! ಇಚ್ಛಾನುಸಾರವಾಗಿ ಚಲಿಸುವ ಆ ದಿವ್ಯ, ಉತ್ತಮ ವಿಮಾನವನ್ನು ನಿನಗಾಗಿಯೇ ಇರಿಸಿಕೊಂಡಿರುವೆನು.॥9-10॥

ಮೂಲಮ್ - 11

ತದಿದಂ ಮೇಘಸಂಕಾಶಂ ವಿಮಾನಮಿಹ ತಿಷ್ಠತಿ ।
ತೇನ ಯಾಸ್ಯಸಿ ಯಾನೇನ ತ್ವಮಯೋಧ್ಯಾಂ ಗತಜ್ವರಃ ॥

ಅನುವಾದ

ಮೇಘದಂತೆ ಕಂಗೊಳಿಸುವ ಆ ದಿವ್ಯವಿಮಾನ ಇಲ್ಲಿ ಇದೆ. ಅದರ ಮೂಲಕ ನಿಶ್ಚಿಂತನಾಗಿ ನೀನು ಅಯೋಧ್ಯೆಗೆ ಹೋಗಬಲ್ಲೆ.॥11॥

ಮೂಲಮ್ - 12

ಅಹಂ ತೇ ಯದ್ಯನುಗ್ರಾಹ್ಯೋ ಯದಿ ಸ್ಮರಸಿ ಮೇ ಗುಣಾನ್ ।
ವಸ ತಾವದಿಹ ಪ್ರಾಜ್ಞ ಯದ್ಯಸ್ತಿ ಮಯಿ ಸೌಹೃದಮ್ ॥

ಮೂಲಮ್ - 13

ಲಕ್ಷ್ಮಣೇನ ಸಹ ಭ್ರಾತ್ರಾ ವೈದೇಹ್ಯಾ ಭಾರ್ಯಯಾ ಸಹ ।
ಅರ್ಚಿತಃ ಸರ್ವಕಾಮೈಸ್ತ್ವಂ ತತೋ ರಾಮ ಗಮಿಷ್ಯಸಿ ॥

ಅನುವಾದ

ಶ್ರೀರಾಮಾ! ನೀನು ನನ್ನನ್ನು ಕೃಪಾಪಾತ್ರನೆಂದು ತಿಳಿದಿದ್ದರೆ, ನನ್ನಲ್ಲಿ ಏನಾದರೂ ಗುಣಗಳನ್ನು ನೋಡುತ್ತಿರುವೆಯಾದರೆ, ನನ್ನ ಕುರಿತು ನಿನಗೆ ಸೌಹಾರ್ದವಿದ್ದರೆ, ಈಗ ಅನುಜ ಲಕ್ಷ್ಮಣ ಹಾಗೂ ಪತ್ನಿ ಸೀತೆಯೊಂದಿಗೆ ಕೆಲವು ದಿನ ಇಲ್ಲಿ ಇರಬೇಕು. ನಾನು ಮನೋವಾಂಛಿತ ಎಲ್ಲ ವಸ್ತುಗಳಿಂದ ನಿಮ್ಮನ್ನು ಸತ್ಕರಿಸುವೆನು. ನನ್ನ ಸತ್ಕಾರವನ್ನು ಸ್ವೀಕರಿಸಿದ ಬಳಿಕ ನೀವು ಅಯೋಧ್ಯೆಗೆ ತೆರಳಿರಿ.॥12-13॥

ಮೂಲಮ್ - 14

ಪ್ರೀತಿಯುಕ್ತಸ್ಯ ವಿಹಿತಾಂ ಸಸೈನ್ಯಃ ಸಸುಹೃದ್ಗಣಃ ।
ಸತ್ಕ್ರಿಯಾಂ ರಾಮ ಮೇ ತಾವದ್ ಗೃಹಾಣ ತ್ವಂ ಮಯೋದ್ಯತಾಮ್ ॥

ಅನುವಾದ

ರಘುನಂದನ! ನಾನು ಸಂತೋಷವಾಗಿ ನಿಮ್ಮನ್ನು ಸತ್ಕರಿಸಲು ಬಯಸುತ್ತಿದ್ದೇನೆ. ನಾನು ಮಾಡುವ ಸತ್ಕಾರವನ್ನು ನೀವು ಸುಹೃದರೊಂದಿಗೆ ಮತ್ತು ಸೈನ್ಯದೊಂದಿಗೆ ಸ್ವೀಕರಿಸಿರಿ.॥14॥

ಮೂಲಮ್ - 15

ಪ್ರಣಯಾದ್ ಬಹುಮಾನಾಚ್ಚ ಸೌಹೃದೇನ ಚ ರಾಘವ ।
ಪ್ರಸಾದಯಾಮಿ ಪ್ರೇಷ್ಯೋಽಹಂ ನ ಖಲ್ವಾಜ್ಞಾಪಯಾಮಿ ತೇ ॥

ಅನುವಾದ

ರಘುವೀರ! ನಾನು ಕೇವಲ ಪ್ರೇಮ, ಸಮ್ಮಾನ, ಸೌಹಾರ್ದದಿಂದಲೇ ನಿಮ್ಮಲ್ಲಿ ಪ್ರಾರ್ಥಿಸುತ್ತಿದ್ದೇನೆ. ನಿಮ್ಮನ್ನು ಪ್ರಸನ್ನ ಗೊಳಿಸಲು ಬಯಸುತ್ತಿದ್ದೇನೆ. ನಾನು ನಿಮ್ಮ ಸೇವಕನಾದ್ದರಿಂದ ನಿಮ್ಮಲ್ಲಿ ವಿನಂತಿಸಿಕೊಳ್ಳುವೆನು; ಆಜ್ಞೆ ಕೊಡುತ್ತಿಲ್ಲ.॥1.॥

ಮೂಲಮ್ - 16

ಏವಮುಕ್ತಸ್ತತೋ ರಾಮಃ ಪ್ರತ್ಯುವಾಚ ವಿಭೀಷಣಮ್ ।
ರಕ್ಷಸಾಂ ವಾನರಾಣಾಂ ಚ ಸರ್ವೇಷಾಮೇವ ಶೃಣ್ವತಾಮ್ ॥

ಅನುವಾದ

ವಿಭೀಷಣನು ಹೀಗೆ ಹೇಳಿದಾಗ ಶ್ರೀರಾಮನು ಸಮಸ್ತ ರಾಕ್ಷಸರು, ವಾನರರು ಕೇಳುವಂತೆ ಹೇಳಿದನು.॥1.॥

ಮೂಲಮ್ - 17

ಪೂಜಿತೋಽಸ್ಮಿ ತ್ವಯಾ ವೀರ ಸಾಚಿವ್ಯೇನ ಪರೇಣ ಚ ।
ಸರ್ವಾತ್ಮನಾ ಚ ಚೇಷ್ಟಾಭಿಃಸೌಹೃದೇನ ಪರೇಣ ಚ ॥

ಅನುವಾದ

ವೀರರೇ! ನನ್ನ ಪರಮಸುಹೃದ್ ಮತ್ತು ಉತ್ತಮ ಸಚಿವರಾಗಿ ನೀವು ಎಲ್ಲ ರೀತಿಯ ಸಮಯೋಚಿತ ಕಾರ್ಯಗಳಿಂದ ನನ್ನನ್ನು ಸಮ್ಮಾನಿಸಿ, ಪೂಜಿಸಿದಿರಿ.॥17॥

ಮೂಲಮ್ - 18

ನ ಖಲ್ವೇತನ್ನ ಕುರ್ಯಾಂ ತೇ ವಚನಂ ರಾಕ್ಷಸೇಶ್ವರ ।
ತಂ ತು ಮೇ ಭ್ರಾತರಂ ದ್ರಷ್ಟುಂ ಭರತಂ ತ್ವರತೇ ಮನಃ ॥

ಮೂಲಮ್ - 19

ಮಾಂ ನಿವರ್ತಯಿತುಂ ಯೋಽಸೌ ಚಿತ್ರಕೂಟಮುಪಾಗತಃ ।
ಶಿರಸಾ ಯಾಚತೋ ಯಸ್ಯ ವಚನಂ ನ ಕೃತಂ ಮಯಾ ॥

ಅನುವಾದ

ರಾಕ್ಷಸೇಶ್ವರನೇ! ನಿನ್ನ ಈ ಮಾತನ್ನು ಖಂಡಿತವಾಗಿ ತಳ್ಳಿ ಹಾಕುವುದಿಲ್ಲ; ಆದರೆ ಈಗ ನನ್ನ ಮನಸ್ಸು ನನ್ನ ತಮ್ಮನಾದ ಭರತನನ್ನು ನೋಡಲು ತವಕಪಡುತ್ತಿವೆ. ಅವನು ನನ್ನನ್ನು ಮರಳಿ ಕರೆದುಕೊಂಡು ಹೋಗಲು ಚಿತ್ರಕೂಟದವರೆಗೆ ಬಂದಿದ್ದನು. ನನ್ನ ಚರಣಗಳಲ್ಲಿ ತಲೆಬಾಗಿ ಬೇಡಿಕೊಂಡರೂ ಅವನ ಮಾತನ್ನು ನಾನು ಕೇಳಲಿಲ್ಲ.॥18-19॥

ಮೂಲಮ್ - 20

ಕೌಸಲ್ಯಾಂ ಚ ಸುಮಿತ್ರಾಂ ಚ ಕೈಕೇಯೀಂ ಚ ಯಶಸ್ವಿನೀಮ್ ।
ಗುಹಂ ಚ ಸುಹೃದಂ ಚೈವ ಪೌರಾಂಜನಪದೈಃ ಸಹ ॥

ಅನುವಾದ

ಅವನು ಮಾತ್ರವಲ್ಲದೆ ತಾಯಂದಿರಾದ ಕೌಸಲ್ಯೆ, ಸುಮಿತ್ರೆ, ಯಶಸ್ವಿನೀ ಕೈಕೇಯಿ, ಮಿತ್ರಗುಹ, ನಗರದ ಪ್ರಜೆಗಳನ್ನೂ ನೋಡಲು ನಾನು ಉತ್ಕಂಠಿತನಾಗಿದ್ದೇನೆ.॥20॥

ಮೂಲಮ್ - 21

ಅನುಜಾನೀಹಿ ಮಾಂ ಸೌಮ್ಯ ಪೂಜಿತೋಽಸ್ಮಿ ವಿಭೀಷಣ ।
ಮನ್ಯುರ್ನ ಖಲು ಕರ್ತವ್ಯಃ ಸಖೇ ತ್ವಾಂ ಚಾನುಮಾನಯೇ ॥

ಅನುವಾದ

ಸೌಮ್ಯ ವಿಭೀಷಣನೇ! ಈಗ ನೀನು ನನಗೆ ಹೋಗಲು ಅನುಮತಿ ಕೊಡು. ನಾನು ನಿನ್ನಿಂದ ಬಹಳ ಸಮ್ಮಾನಿತನಾಗಿದ್ದೇನೆ. ಸಖನೇ! ನನ್ನ ಈ ಹಠದ ಕಾರಣ ನನ್ನ ಮೇಲೆ ಸಿಟ್ಟಾಗಬಾರದು ಎಂದು ನಿನ್ನಲ್ಲಿ ಪದೇಪದೇ ಪ್ರಾರ್ಥಿಸುತ್ತೇನೆ.॥21॥

ಮೂಲಮ್ - 22

ಉಪಸ್ಥಾಪಯ ಮೇ ಶೀಘ್ರಂ ವಿಮಾನಂ ರಾಕ್ಷಸೇಶ್ವರ ।
ಕೃತಕಾರ್ಯಸ್ಯ ಮೇ ವಾಸಃ ಕಥಂ ಸ್ಯಾದಿಹ ಸಂಮತಃ ॥

ಅನುವಾದ

ರಾಕ್ಷಸರಾಜನೇ! ಈಗ ಶೀಘ್ರವಾಗಿ ನನಗಾಗಿ ಪುಷ್ಪಕ ವಿಮಾನವನ್ನು ತರಿಸು. ಇಲ್ಲಿಯ ನನ್ನ ಕಾರ್ಯಪೂರ್ಣವಾದ ಮೇಲೆ ಇಲ್ಲಿ ನಿಲ್ಲುವುದು ನನಗೆ ಹೇಗೆ ಸರಿಯಾಗಬಲ್ಲದು.॥2.॥

ಮೂಲಮ್ - 23

ಏವಮುಕ್ತಸ್ತು ರಾಮೇಣ ರಾಕ್ಷಸೇಂದ್ರೋ ವಿಭೀಷಣಃ ।
ವಿಮಾನಂ ಸೂರ್ಯಸಂಕಾಶಮಾಜುಹಾವ ತ್ವರಾನ್ವಿತಃ ॥

ಅನುವಾದ

ಶ್ರೀರಾಮಚಂದ್ರನು ಹೀಗೆ ಹೇಳಿದಾಗ ರಾಕ್ಷಸರಾಜ ವಿಭೀಷಣನು ಲಗುಬಗೆಯಿಂದ ಆ ಸೂರ್ಯತುಲ್ಯ ತೇಜಸ್ವೀ ವಿಮಾನವನ್ನು ಆಹ್ವಾನಿಸಿದನು.॥23॥

ಮೂಲಮ್ - 24

ತತಃ ಕಾಂಚನಚಿತ್ರಾಂಗಂ ವೈಡೂರ್ಯಮಣಿವೇದಿಕಮ್ ।
ಕೂಟಾಗಾರೈಃ ಪರಿಕ್ಷಿಪ್ತಂ ಸರ್ವತೋ ರಜತಪ್ರಭಮ್ ॥

ಅನುವಾದ

ಆ ವಿಮಾನದ ಪ್ರತಿಯೊಂದು ಭಾಗ ಚಿನ್ನದಿಂದ ಮುಚ್ಚಿತ್ತು, ಅದರಿಂದ ಅದು ವಿಚಿತ್ರವಾಗಿ ಶೋಭಿಸುತ್ತಿತ್ತು. ಅದರೊಳಗೆ ವೈಢೂರ್ಯಮಣಿಯ ವೇದಿಗಳಿದ್ದವು, ಅಲ್ಲಲ್ಲಿ ಗುಪ್ತಗೃಹ ಗಳಿದ್ದು ಅದು ಎಲ್ಲೆಡೆ ಬೆಳ್ಳಿಯಂತೆ ಹೊಳೆಯುತ್ತಿತ್ತು.॥24॥

ಮೂಲಮ್ - 25

ಪಾಂಡುರಾಭಿಃ ಪತಾಕಾಭಿರ್ಧ್ವಜೈಶ್ಚ ಸಮಲಂಕೃತಮ್ ।
ಶೋಭಿತಂ ಕಾಂಚನೈರ್ಹರ್ಮ್ಯೆರ್ಹೇಮಪದ್ಮವಿಭೂಷಿತೈಃ ॥

ಅನುವಾದ

ಅದು ಬಿಳಿಯ-ಹಳದಿ ಬಣ್ಣದ ಪತಾಕೆಗಳಿಂದ, ಧ್ವಜಗಳಿಂದ ಅಲಂಕೃತವಾಗಿತ್ತು. ಅದರಲ್ಲಿ ಸ್ವರ್ಣಕಮಲಗಳಿಂದ ಸುಸಜ್ಜಿತ ಸ್ವರ್ಣಮಯ ಉಪ್ಪರಿಗೆಗಳಿಂದ ಆ ವಿಮಾನವು ಶೋಭಿಸುತ್ತಿತ್ತು.॥2.॥

ಮೂಲಮ್ - 26

ಪ್ರಕೀರ್ಣಂ ಕಿಂಕಿಣೀಜಾಲೈರ್ಮುಕ್ತಾ ಮಣಿಗವಾಕ್ಷಕಮ್ ।
ಘಂಟಾಜಾಲೈಃ ಪರಿಕ್ಷಿಪ್ತಂ ಸರ್ವತೋ ಮಧುರಸ್ವನಮ್ ॥

ಅನುವಾದ

ಅದರ ಸುತ್ತಲು ಸಣ್ಣ-ಸಣ್ಣ ಗಂಟೆಗಳ ಜಾರರಿಗಳು ಇದ್ದವು. ಅದರಲ್ಲಿ ಮುತ್ತು ಮತ್ತು ಮಣಿಗಳ ಕಿಡಕಿಗಳಿದ್ದು, ಮಧುರ ಧ್ವನಿ ಹೊರಡಿಸುವ ಗಂಟೆಗಳು ಕಟ್ಟಿದ್ದರು.॥26॥

ಮೂಲಮ್ - 27

ತಂ ಮೇರುಶಿಖರಾಕಾರಂ ನಿರ್ಮಿತಂ ವಿಶ್ವಕರ್ಮಣಾ ।
ಬೃಹದ್ಭಿರ್ಭೂಷಿತಂ ಹರ್ಮ್ಯೈರ್ಮುಕ್ತಾರಜತಶೋಭಿತೈಃ ॥

ಅನುವಾದ

ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟ ಆ ವಿಮಾನವು ಸುಮೇರು ಶಿಖರದಂತೆ ಎತ್ತರವಾಗಿದ್ದು ಮುತ್ತು ಬೆಳ್ಳಿಯಿಂದ ಸುಸಜ್ಜಿತ ದೊಡ್ಡ ದೊಡ್ಡ ಕೋಣೆಗಳಿಂದ ವಿಭೂಷಿತವಾಗಿತ್ತು.॥27॥

ಮೂಲಮ್ - 28

ತಲೈಃ ಸ್ಫಾಟಕಚಿತ್ರಾಂಗೈರ್ವೈಢೂರ್ಯೈಶ್ಚ ವರಾಸನೈಃ ।
ಮಹಾರ್ಹಾಸ್ತರಣೋಪೇತೈರುಪಪನ್ನಂ ಮಹಾಧನೈಃ ॥

ಅನುವಾದ

ಅದರ ನೆಲ ಚಿತ್ರಿತ ಸ್ಫಟಿಕಮಣಿಗಳಿಂದ ನಿರ್ಮಿತವಾಗಿತ್ತು. ಅದರಲ್ಲಿ ಬಹುಮೂಲ್ಯ ನೀಲಮಣಿಯ ಸಿಂಹಾಸನವಿದ್ದು, ಅದರ ಮೇಲೆ ಅಮೂಲ್ಯ ಮೇಲುಹೊದಿಕೆ ಹಾಸಿತ್ತು.॥28॥

ಮೂಲಮ್ - 29

ಉಪಸ್ಥಿತಮನಾಧೃಷ್ಯಂ ತದ್ವಿಮಾನಂ ಮನೋಜವಮ್ ।
ನಿವೇದಯಿತ್ವಾ ರಾಮಾಯ ತಸ್ಥೌ ತತ್ರ ವಿಭೀಷಣಃ ॥

ಅನುವಾದ

ಅಂದು ಮನೋವೇಗದಿಂದ ಕೂಡಿದ್ದು, ಅದರ ಗತಿ ಎಲ್ಲಿಯೂ ತಡೆಯುತ್ತಿರಲಿಲ್ಲ. ವಿಭೀಷಣನು ಶ್ರೀರಾಮನಲ್ಲಿ ಅವನ ಸೇವೆಗೆ ಉಪಸ್ಥಿತವಾದ ಸೂಚನೆಯನ್ನಿತ್ತು ಅಲ್ಲಿ ನಿಂತುಕೊಂಡನು.॥29॥

ಮೂಲಮ್ - 30

ತತ್ಪುಷ್ಪಕಂ ಕಾಮಗಮಂ ವಿಮಾನ-
ಮುಪಸ್ಥಿತಂ ಭೂಧರ ಸಂನಿಕಾಶಮ್ ।
ದೃಷ್ಟ್ವಾತದಾ ವಿಸ್ಮಯಮಾಜಗಾಮ
ರಾಮಃ ಸಸೌಮಿತ್ರಿರುದಾರಸತ್ತ್ವಃ ॥

ಅನುವಾದ

ಪರ್ವತದಂತೆ ಎತ್ತರವಾದ ಇಚ್ಛಾನುಸಾರ ಚಲಿಸುವ ಆ ಪುಷ್ಪಕವಿಮಾನವು ಕೂಡಲೆ ಉಪಸ್ಥಿತವಾದುದನ್ನು ನೋಡಿ ಲಕ್ಷ್ಮಣಸಹಿತ ಉದಾರಚಿತ್ತನಾದ ಶ್ರೀರಾಮನಿಗೆ ಬಹಳ ವಿಸ್ಮಯವಾಯಿತು.॥30॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರಇಪ್ಪತ್ತೊಂದನೆಯ ಸರ್ಗ ಪೂರ್ಣವಾಯಿತು.॥121॥