११९ रामेण स्वपितृवार्ताश्रवणम्

वाचनम्
ಭಾಗಸೂಚನಾ

ಮಹಾದೇವನ ಆಜ್ಞೆಯಂತೆ ವಿಮಾನದಲ್ಲಿ ಬಂದ ದಶರಥನನ್ನು ರಾಮ-ಲಕ್ಷ್ಮಣರು ಸಂದರ್ಶಿಸಿದುದು, ದಶರಥನು ರಾಮ-ಲಕ್ಷ್ಮಣರಿಗೂ ಸೀತೆಗೂ ಸಂದೇಶವನ್ನಿತ್ತು ಸ್ವರ್ಗಕ್ಕೆ ತೆರಳಿದುದು

ಮೂಲಮ್ - 1

ಏತಚ್ಛ್ರುತ್ವಾ ಶುಭಂ ವಾಕ್ಯಂ ರಾಘವೇಣಾನುಭಾಷಿತಮ್ ।
ಇದಂ ಶುಭತರಂ ವಾಕ್ಯಂ ವ್ಯಾಜಹಾರ ಮಹೇಶ್ವರಃ ॥

ಅನುವಾದ

ಶ್ರೀರಘುನಾಥನು ಹೇಳಿದ ಶುಭವಚನಗಳನ್ನು ಕೇಳಿ ಶ್ರೀಮಹಾದೇವನು ಹೀಗೆ ಶುಭಕರ ಮಾತನ್ನು ಹೇಳಿದರು.॥1॥

ಮೂಲಮ್ - 2

ಪುಷ್ಕರಾಕ್ಷ ಮಹಾಬಾಹೋ ಮಹಾವಕ್ಷಃ ಪರಂತಪ ।
ದಿಷ್ಟ್ಯಾ ಕೃತಮಿದಂ ಕರ್ಮ ತ್ವಯಾ ಧರ್ಮಭೃತಾಂ ವರ ॥

ಅನುವಾದ

ಪುಷ್ಕರಾಕ್ಷನೇ! ಮಹಾಬಾಹುವೇ! ವಿಶಾಲಕ್ಷನೇ! ಪರಂತಪನೇ! ಧರ್ಮಾತ್ಮರಲ್ಲಿ ಶ್ರೇಷ್ಠನಾದವನೇ! ನೀನು ರಾವಣವಧೆಯ ಕಾರ್ಯವನ್ನು ನೆರವೇರಿಸಿದುದು ಸೌಭಾಗ್ಯದ ಮಾತಾಗಿದೆ.॥2॥

ಮೂಲಮ್ - 3

ದಿಷ್ಟ್ಯಾ ಸರ್ವಸ್ಯ ಲೋಕಸ್ಯ ಪ್ರವೃದ್ಧಂ ದಾರುಣಂ ತಮಃ ।
ಅಪಾವೃತ್ತಂ ತ್ವಯಾ ಸಂಖ್ಯೇ ರಾಮ ರಾವಣಜಂ ಭಯಮ್ ॥

ಅನುವಾದ

ಶ್ರೀರಾಮಾ! ರಾವಣನಿಂದ ಉಂಟಾದ ಭಯ-ದುಃಖ ಸಮಸ್ತ ಲೋಕಗಳಿಗೆ ಗಾಢಾಂಧಕಾರದಂತೆ ಇತ್ತು, ಅದನ್ನು ನೀನು ಯುದ್ಧದಲ್ಲಿ ತೊಲಗಿಸಿಬಿಟ್ಟೆ.॥3॥

ಮೂಲಮ್ - 4

ಆಶ್ವಾಸ್ಯ ಭರತಂ ದೀನಂ ಕೌಸಲ್ಯಾಂ ಚ ಯಶಸ್ವಿನೀಮ್ ।
ಕೈಕೇಯೀಂ ಚ ಸುಮಿತ್ರಾಂ ಚ ದೃಷ್ಟ್ವಾ ಲಕ್ಷ್ಮಣಮಾತರಮ್ ॥

ಮೂಲಮ್ - 5

ಪ್ರಾಪ್ಯ ರಾಜ್ಯಮಯೋಧ್ಯಾಯಾಂ ನಂದಯಿತ್ವಾ ಸುಹೃಜ್ಜನಮ್ ।
ಇಕ್ಷ್ವಾಕೂಣಾಂ ಕುಲೇ ವಂಶಂ ಸ್ಥಾಪಯಿತ್ವಾ ಮಹಾಬಲ ॥

ಮೂಲಮ್ - 6

ಇಷ್ಟ್ವಾತುರಗಮೇಧೇನ ಪ್ರಾಪ್ಯ ಚಾನುತ್ತಮಂ ಯಶಃ ।
ಬ್ರಾಹ್ಮಣೇಭ್ಯೋ ಧನಂ ದತ್ತ್ವಾ ತ್ರಿದಿವಂ ಗಂತು ಮರ್ಹಸಿ ॥

ಅನುವಾದ

ಮಹಾವೀರನೇ! ಈಗ ದುಃಖೀ ಭರತನನ್ನು ಸಂತೈಸಿ, ಯಶಸ್ವಿನೀ ಕೌಸಲ್ಯಾ, ಕೈಕೇಯಿ, ಲಕ್ಷ್ಮಣಜನನೀ ಸುಮಿತ್ರೆಯನ್ನು ಸಂದರ್ಶಿಸು. ಅಯೋಧ್ಯೆಯ ರಾಜ್ಯವನ್ನು ಪಡೆದು, ಸುಹೃದಯರನ್ನು ಆನಂದಗೊಳಿಸ, ಇಕ್ಷ್ವಾಕು ಕುಲದಲ್ಲಿ ತನ್ನ ವಂಶವನ್ನು ಸ್ಥಾಪಿಸಿ, ಅಶ್ವಮೇಧ ಯಜ್ಞವನ್ನು ಮಾಡಿ, ಸರ್ವೋತ್ತಮ ಯಶವನ್ನು ಗಳಿಸಿ, ಬ್ರಾಹ್ಮಣರಿಗೆ ಹೇರಳ ಧನವನ್ನು ಕೊಟ್ಟು, ತನ್ನ ಪರಮಧಾಮವನ್ನು ಸೇರು.॥4-6॥

ಮೂಲಮ್ - 7

ಏಷ ರಾಜಾ ದಶರಥೋ ವಿಮಾನಸ್ಥಃ ಪಿತಾ ತವ ।
ಕಾಕುತ್ಸ್ಥ ಮಾನುಷೇ ಲೋಕೇ ಗುರುಸ್ತವ ಮಹಾಯಶಾಃ ॥

ಅನುವಾದ

ಕಾಕುತ್ಸ್ಥಕುಲನಂದನ! ಅದೋ ನೋಡು, ನಿಮ್ಮ ಪಿತಾ ರಾಜಾದಶರಥನು ವಿಮಾನದಲ್ಲಿ ಕುಳಿತಿರುವನು. ಮನುಷ್ಯ ಲೋಕದಲ್ಲಿ ಇವನೇ ನಿಮ್ಮ ಮಹಾಯಶಸ್ವಿ ಗುರುವಾಗಿದ್ದನು.॥7॥

ಮೂಲಮ್ - 8

ಇಂದ್ರಲೋಕಂ ಗತಃ ಶ್ರೀಮಾಂಸ್ತ್ವಯಾ ಪುತ್ರೇಣ ತಾರಿತಃ ।
ಲಕ್ಷ್ಮಣೇನ ಸಹ ಭ್ರಾತ್ರಾ ತ್ವಮೇನಮಭಿವಾದಯ ॥

ಅನುವಾದ

ಈ ಶ್ರೀಮಾನ್ ನರೇಶನು ಇಂದ್ರಲೋಕವನ್ನು ಪಡೆದಿರುವನು. ನಿನ್ನಂತ ಪುತ್ರನು ಇವನನ್ನು ಉದ್ಧರಿಸಿದನು. ನೀನು ಅನುಜ ಲಕ್ಷ್ಮಣನೊಂದಿಗೆ ಇವನಿಗೆ ನಮಸ್ಕರಿಸು.॥8॥

ಮೂಲಮ್ - 9

ಮಹಾದೇವವಚಃ ಶ್ರುತ್ವಾ ರಾಘವಃ ಸಹಲಕ್ಷ್ಮಣಃ ।
ವಿಮಾನಶಿಖರಸ್ಥಸ್ಯಪ್ರಣಾಮಮಕರೋತ್ಪಿತುಃ ॥

ಅನುವಾದ

ಮಹಾದೇವನ ಮಾತನ್ನು ಕೇಳಿ ಲಕ್ಷ್ಮಣ ಸಹಿತ ಶ್ರೀರಾಮನು ವಿಮಾನದಲ್ಲಿ ಕುಳಿತಿರುವ ತನ್ನ ತಂದೆಗೆ ವಂದಿಸಿದನು.॥9॥

ಮೂಲಮ್ - 10

ದೀಪ್ಯಮಾನಂ ಸ್ವಯಾ ಲಕ್ಷ್ಮ್ಯಾ ವಿರಜೋಂಬರ ಧಾರಿಣಮ್ ।
ಲಕ್ಷ್ಮಣೇನ ಸಹ ಭ್ರಾತ್ರಾ ದದರ್ಶ ಪಿತರಂ ಪ್ರಭುಃ ॥

ಅನುವಾದ

ಲಕ್ಷ್ಮಣಸಹಿತ ಭಗವಾನ್ ಶ್ರೀರಾಮನು ತಂದೆಯನ್ನು ಚೆನ್ನಾಗಿ ನೋಡಿದನು. ಅವನು ನಿರ್ಮಲ ವಸಧರಿಸಿ ತನ್ನ ದಿವ್ಯ ಶೋಭೆಯಿಂದ ದೇದೀಪ್ಯ ಮಾನನಾಗಿದ್ದನು.॥10॥

ಮೂಲಮ್ - 11

ಹರ್ಷೇಣ ಮಹತಾಽಽವಿಷ್ಟೋ ವಿಮಾನಸ್ಥೋ ಮಹೀಪತಿಃ ।
ಪ್ರಾಣೈಃ ಪ್ರಿಯತರಂ ದೃಷ್ಟ್ವಾ ಪುತ್ರಂ ದಶರಥಸ್ತದಾ ॥

ಅನುವಾದ

ವಿಮಾನದಲ್ಲಿ ಕುಳಿತಿರುವ ಮಹಾರಾಜ ದಶರಥನು ಪ್ರಾಣಪ್ರಿಯ ಪುತ್ರ ಶ್ರೀರಾಮನನ್ನು ನೋಡಿ ಬಹಳ ಪ್ರಸನ್ನನಾದನು.॥1.॥

ಮೂಲಮ್ - 12

ಆರೋಪ್ಯಾಂಕೇ ಮಹಾಬಾಹುರ್ವರಾಸನಗತಃ ಪ್ರಭುಃ ।
ಬಾಹುಭ್ಯಾಂ ಸಂಪರಿಷ್ವಜ್ಯ ತತೋ ವಾಕ್ಯಂ ಸಮಾದದೇ ॥

ಅನುವಾದ

ಶ್ರೇಷ್ಠ ಆಸನದಲ್ಲಿ ಕುಳಿತಿದ್ದ ಮಹಾಬಾಹು ನರೇಶನು ಅವನನ್ನು ತೊಡೆಯಲ್ಲಿ ಕುಳ್ಳಿರಿಸಿಕೊಂಡು ಬಾಹುಗಳಿಂದ ಬಿಗಿದಪ್ಪಿಕೊಂಡು ಈ ಪ್ರಕಾರ ಹೇಳಿದನು.॥1.॥

ಮೂಲಮ್ - 13

ನ ಮೇ ಸ್ವರ್ಗೋ ಬಹುಮತಃ ಸಂಮಾನಶ್ಚ ಸುರರ್ಷಭೈಃ ।
ತ್ವಯಾ ರಾಮ ವಿಹೀನಸ್ಯ ಸತ್ಯಂ ಪ್ರತಿಶೃಣೋಮಿತೇ ॥

ಅನುವಾದ

ರಾಮ! ನಿನ್ನಿಂದ ಆಗಲಿ ನನಗೆ ಸ್ವರ್ಗದಸುಖ ಹಾಗೂ ದೇವತೆಗಳಿಂದ ಪ್ರಾಪ್ತವಾದ ಸಮ್ಮಾನವೂ ಕೂಡ ಒಳ್ಳೆಯದೆನಿಸುವುದಿಲ್ಲ; ಇದನ್ನು ಸತ್ಯ ವಾಗಿ ಹೇಳುತ್ತಿದ್ದೇನೆ.॥13॥

ಮೂಲಮ್ - 14

ಅದ್ಯ ತ್ವಾಂ ನಿಹತಾಮಿತ್ರಂ ದೃಷ್ಟ್ವಾಸಂಪೂರ್ಣಮಾನಸಮ್ ।
ನಿಸ್ತೀರ್ಣ ವನವಾಸಂ ಚ ಪ್ರೀತಿರಾಸೀತ್ಪುರಾ ಮಮ ॥

ಅನುವಾದ

ಇಂದು ನೀನು ಶತ್ರುಗಳನ್ನು ವಧಿಸಿ ಪೂರ್ಣಮನೋರಥನಾಗಿರುವೆ, ನೀನು ವನವಾಸದ ಅವಧಿಯನ್ನು ಮುಗಿಸಿರುವೆ. ಇದೆಲ್ಲವನ್ನು ನೋಡಿ ನನಗೆ ಬಹಳ ಸಂತೋಷವಾಗಿದೆ.॥14॥

ಮೂಲಮ್ - 15

ಕೈಕೇಯ್ಯಾಯಾನಿ ಚೋಕ್ತಾನಿ ವಾಕ್ಯಾನಿ ವದತಾಂವರ ।
ತವ ಪ್ರವ್ರಾಜನಾರ್ಥಾನಿ ಸ್ಥಿತಾನಿ ಹೃದಯೇ ಮಮ ॥

ಅನುವಾದ

ವಾಗ್ಮಿಗಳಲ್ಲಿ ಶ್ರೇಷ್ಠ ನಾದ ರಘುನಂದನ! ನಿನ್ನನ್ನು ಕಾಡಿಗೆ ಕಳಿಸಲು ಕೈಕೇಯಿಯು ಹೇಳಿದ ಮಾತುಗಳು ಇಂದು ಕೂಡ ನನ್ನ ಮನಸ್ಸಿನಲ್ಲಿ ಇವೆ.॥15॥

ಮೂಲಮ್ - 16

ತ್ವಾಂ ತು ದೃಷ್ಟ್ವಾಕುಶಲಿನಂ ಪರಿಷ್ವಜ್ಯ ಸಲಕ್ಷ್ಮಣಮ್ ।
ಅದ್ಯ ದುಃಖಾದ್ವಿಮುಕ್ತೋಽಸ್ಮಿ ನೀಹಾರಾದಿವ ಭಾಸ್ಕರಃ ॥

ಅನುವಾದ

ಇಂದು ಲಕ್ಷ್ಮಣಸಹಿತ ನಿನ್ನನ್ನು ಕ್ಷೇಮವಾಗಿ ನೋಡಿ, ಆಲಿಂಗಿಸಿಕೊಂಡು ನಾನು ಎಲ್ಲ ದುಃಖಗಳಿಂದ ಬಿಡುಗಡೆ ಹೊಂದಿರುವೆನು.॥16॥

ಮೂಲಮ್ - 17

ತಾರಿತೋಽಹಂ ತ್ವಯಾ ಪುತ್ರ ಸುಪುತ್ರೇಣ ಮಹಾತ್ಮನಾ ।
ಅಷ್ಟಾವಕ್ರೇಣ ಧರ್ಮಾತ್ಮಾ ಕಹೋಲೋ ಬ್ರಾಹ್ಮಣೋ ಯಥಾ ॥

ಅನುವಾದ

ಮಗು! ಅಷ್ಟಾವಕ್ರನು ತನ್ನ ಧರ್ಮಾತ್ಮಾ ಪಿತಾ ಕಹೋಲ ಎಂಬ ಬ್ರಾಹ್ಮಣನನ್ನು ಉದ್ಧರಿಸಿ ದಂತೆಯೇ ನಿನ್ನಂತಹ ಮಹಾತ್ಮಾ ಪುತ್ರನು ನನ್ನನ್ನು ಉದ್ಧರಿ ಸಿದನು.॥17॥

ಮೂಲಮ್ - 18

ಇದಾನೀಂ ತು ವಿಜಾನಾಮಿ ಯಥಾ ಸೌಮ್ಯ ಸುರೇಶ್ವರೈಃ ।
ವಧಾರ್ಥಂ ರಾವಣಸ್ಯೇಹ ಪಿಹಿತಂ ಪುರುಷೋತ್ತಮ ॥

ಅನುವಾದ

ಸೌಮ್ಯ! ರಾವಣನನ್ನು ವಧಿಸಲಿಕ್ಕಾಗಿ ಸ್ವತಃ ಪುರುಷೋತ್ತಮನು ಭಗವಂತನು ನಿನ್ನ ರೂಪದಲ್ಲಿ ಅವತರಿಸಿರುವನು ಎಂದು ಇಂದು ಈ ದೇವತೆಗಳಿಂದ ನನಗೆ ತಿಳಿಯಿತು.॥18॥

ಮೂಲಮ್ - 19

ಸಿದ್ಧಾರ್ಥಾ ಖಲು ಕೌಸಲ್ಯಾಯಾ ತ್ವಾಂ ರಾಮ ಗೃಹಂ ಗತಮ್ ।
ವನಾನ್ನಿ ವೃತ್ತಂ ಸಂಹೃಷ್ಟಾ ದ್ರಕ್ಷ್ಯತೇ ಶತ್ರುಸೂದನಮ್ ॥

ಅನುವಾದ

ಶ್ರೀರಾಮಾ! ಕೌಸಲ್ಯೆಯ ಜೀವನ ಸಾರ್ಥಕವಾಯಿತು. ಅವಳು ವನವಾಸದಿಂದ ಮರಳಿದ ನಿನ್ನಂತಹ ಶತ್ರುಸೂದನ ವೀರಪುತ್ರನನ್ನು ತನ್ನ ಮನೆಯಲ್ಲಿ ಹರ್ಷೋಲ್ಲಾಸದಿಂದ ನೋಡುವಳು.॥19॥

ಮೂಲಮ್ - 20

ಸಿದ್ಧಾರ್ಥಾಃ ಖಲು ತೇ ರಾಮ ನರಾ ಯೇ ತ್ವಾಂ ಪುರೀಂ ಗತಾಮ್ ।
ರಾಜ್ಯೇ ಚೈವಾಭಿಷಿಕ್ತಂ ಚ ದ್ರಕ್ಷ್ಯಂತಿ ವಸುಧಾಧಿಪಮ್ ॥

ಅನುವಾದ

ರಘುನಂದನ! ಅಯೋಧ್ಯೆಗೆ ಹೋಗಿ ನಿನಗೆ ರಾಜಸಿಂಹಾಸನದಲ್ಲಿ ರಾಜನಾಗಿ ಪಟ್ಟಾಭಿಕ್ತನಾಗಿರುವುದನ್ನು ನೋಡಿದ ಆ ಪ್ರಜೆಯೂ ಕೃತಾರ್ಥವಾಗುವುದು.॥20॥

ಮೂಲಮ್ - 21

ಅನುರಕ್ತೇನ ಬಲಿನಾ ಶುಚಿನಾ ಧರ್ಮಚಾರಿಣಾ ।
ಇಚ್ಛಾಮಿ ತ್ವಾಮಹಂ ದ್ರಷ್ಟುಂ ಭರತೇನ ಸಮಾಗತಮ್ ॥

ಅನುವಾದ

ಭರತನು ತುಂಬಾ ಧರ್ಮಾತ್ಮ, ಪವಿತ್ರ, ಬಲಿಷ್ಠನಾಗಿದ್ದಾನೆ. ಅವನು ನಿನ್ನಲ್ಲಿ ನಿಜವಾದ ಅನುರಾಗವಿಟ್ಟಿರುವನು. ನೀನು ಅವನೊಡಗೂಡುವುದನ್ನು ನಾನು ಬೇಗನೇ ನೋಡಲು ಬಯಸುವೆನು.॥21॥

ಮೂಲಮ್ - 22

ಚತುರ್ದಶ ಸಮಾಃ ಸೌಮ್ಯ ವನೇ ನಿರ್ಯಾತಿತಾಸ್ತ್ವಯಾ ।
ವಸತಾ ಸೀತಯಾ ಸಾರ್ಧಂ ಮತ್ಪ್ರೀತ್ಯಾ ಲಕ್ಷ್ಮಣೇನ ಚ ॥

ಅನುವಾದ

ಸೌಮ್ಯನೇ! ನೀನು ನನ್ನ ಸಂತೋಷಕ್ಕಾಗಿ ಲಕ್ಷ್ಮಣ ಮತ್ತು ಸೀತೆಯೊಂದಿಗೆ ಇರುತ್ತಾ ಕಾಡಿನಲ್ಲಿ ಹದಿನಾಲ್ಕು ವರ್ಷಕಳೆದೆ.॥22॥

ಮೂಲಮ್ - 23

ನಿವೃತ್ತ ವನವಾಸೋಽಸಿ ಪ್ರತಿಜ್ಞಾ ಪೂರಿತಾ ತ್ವಯಾ ।
ರಾವಣಂ ಚ ರಣೇ ಹತ್ವಾ ದೇವತಾಃ ಪರಿತೋಷಿತಾಃ ॥

ಅನುವಾದ

ಈಗ ನಿನ್ನ ವನವಾಸದ ಅವಧಿ ಮುಗಿದುಹೋಗಿದೆ. ನನ್ನ ಪ್ರತಿಜ್ಞೆಯನ್ನು ನೀನು ಪೂರ್ಣಗೊಳಿಸಿ, ಸಂಗ್ರಾಮದಲ್ಲಿ ರಾವಣನನ್ನು ವಧಿಸಿ ದೇವತೆಗಳನ್ನು ಸಂತುಷ್ಟಗೊಳಿಸಿದೆ.॥23॥

ಮೂಲಮ್ - 24

ಕೃತಂ ಕರ್ಮ ಯಶಃ ಶ್ಲಾಘ್ಯಂ ಪ್ರಾಪ್ತಂ ತೇ ಶತ್ರುಸೂದನ ।
ಭ್ರಾತೃಭಿಃ ಸಹ ರಾಜ್ಯಸ್ಥೋ ದೀರ್ಘಮಾಯುರವಾಪ್ನುಹಿ ॥

ಅನುವಾದ

ಶತ್ರೂಸೂದನ! ಇದೆಲ್ಲ ಕಾರ್ಯಗಳನ್ನೂ ನೀನು ಮಾಡಿಬಿಟ್ಟಿರುವೆ. ಇದರಿಂದ ನೀನು ಪರಮಶ್ಲಾಘ್ಯ ವಾದ ಯಶಸ್ಸನ್ನು ಪಡೆದಿರುವೆ. ಇನ್ನು ನೀನು ತಮ್ಮಂದಿರೊಂದಿಗೆ ರಾಜನಾಗಿ ದೀರ್ಘಾಯುಸ್ಸನ್ನು ಪಡೆ.॥24॥

ಮೂಲಮ್ - 25

ಇತಿ ಬ್ರುವಾಣಂ ರಾಜಾನಂ ರಾಮಃ ಪ್ರಾಂಜಲಿರಬ್ರವೀತ್ ।
ಕುರು ಪ್ರಸಾದಂ ಧರ್ಮಜ್ಞ ಕೈಕೇಯ್ಯಾ ಭರತಸ್ಯ ಚ ॥

ಅನುವಾದ

ದಶರಥನು ಹೀಗೆ ಹೇಳಿದಾಗ ಶ್ರೀರಾಮನು ಕೈಮುಗಿದು ಹೇಳಿದನು-ಧರ್ಮಜ್ಞ ಮಹಾರಾಜಾ! ನೀವು ಕೈಕೇಯಿ ಮತ್ತು ಭರತನ ಮೇಲೆ ಪ್ರಸನ್ನರಾಗಿರಿ. ಅವರಿಬ್ಬರ ಮೇಲೆ ಕೃಪೆದೋರಿರಿ.॥25॥

ಮೂಲಮ್ - 26

ಸಪುತ್ರಾಂ ತ್ವಾಂ ತ್ಯಜಾಮೀತಿ ಯದುಕ್ತಾ ಕೈಕಯೀ ತ್ವಯಾ ।
ಸ ಶಾಪಃ ಕೈಕಯೀಂ ಘೋರಃ ಸಪುತ್ರಾಂ ನ ಸ್ಪೃಶೇತ್ಪ್ರಭೋ ॥

ಅನುವಾದ

ಪ್ರಭೋ! ನೀವು ಕೈಕೆಯಲ್ಲಿ - ‘ನಾನು ಪುತ್ರಸಹಿತ ನಿನ್ನನ್ನು ತ್ಯಜಿಸಿದ್ದೇನೆ’ ಎಂಬ ನಿಮ್ಮ ಘೋರಶಾಪವು ಪುತ್ರಸಹಿತ ಕೈಕೆಯಿಗೆ ತಟ್ಟದೆ ಹೋಗಲಿ.॥26॥

ಮೂಲಮ್ - 27

ತಥೇತಿ ಸ ಮಹಾರಾಜೋ ರಾಮಮುಕ್ತ್ವಾ ಕೃತಾಂಜಲಿಮ್ ।
ಲಕ್ಷ್ಮಣಂ ಚ ಪರಿಷ್ವಜ್ಯ ಪುನರ್ವಾಕ್ಯಮುವಾಚ ಹ ॥

ಅನುವಾದ

ಆಗ ‘ಹಾಗೆಯೇ ಆಗಲೀ’ ಎಂದು ರಾಮನಲ್ಲಿ ಹೇಳಿ ದಶರಥನು ಅವನ ಪ್ರಾರ್ಥನೆಯನ್ನು ಸ್ವೀಕರಿಸಿದನು. ಕೈಮುಗಿದು ನಿಂತಿದ್ದ ಲಕ್ಷ್ಮಣನನ್ನು ಅಪ್ಪಿಕೊಂಡು ಹೀಗೆ ಹೇಳಿದನು.॥27॥

ಮೂಲಮ್ - 28

ರಾಮಂ ಶುಶ್ರೂಷತಾ ಭಕ್ತ್ಯಾ ವೈದೇಹ್ಯಾ ಸಹ ಸೀತಯಾ ।
ಕೃತಾ ಮಮ ಮಹಾಪ್ರೀತಿಃ ಪ್ತಾಪ್ತಂ ಧರ್ಮಫಲಂ ಚ ತೇ ॥

ಅನುವಾದ

ವತ್ಸ! ನೀನು ವಿದೇಹನಂದಿನೀ ಸೀತೆಯೊಂದಿಗೆ ಶ್ರೀರಾಮನ ಭಕ್ತಿಪೂರ್ವಕವಾಗಿ ಸೇವೆ ಮಾಡಿ ನನನ್ನು ಬಹಳ ಸಂತೋಷಪಡಿಸಿರುವೆ. ನಿನಗೆ ಧರ್ಮದ ಫಲ ಪ್ರಾಪ್ತವಾಗಿದೆ.॥28॥

ಮೂಲಮ್ - 29

ಧರ್ಮಂ ಪ್ರಾಪ್ಯಸಿ ಧರ್ಮಜ್ಞ ಯಶಶ್ಚ ವಿಪುಲಂ ಭುವಿ ।
ರಾಮೇ ಪ್ರಸನ್ನೇ ಸ್ವರ್ಗಂ ಚ ಮಹಿಮಾನಂ ತಥೋತ್ತಮಮ್ ॥

ಅನುವಾದ

ಧರ್ಮಜ್ಞನೇ! ಭವಿಷ್ಯದಲ್ಲಿಯೂ ನಿನಗೆ ಧರ್ಮದ ಫಲ ಸಿಗುವುದು ಮತ್ತು ಭೂಮಂಡಲದಲ್ಲಿ ಮಹಾಯಶ ದೊರೆಯುವುದು. ಶ್ರೀರಾಮನ ಪ್ರಸನ್ನತೆಯಿಂದ ನಿನಗೆ ಉತ್ತಮ ಸ್ವರ್ಗ ಹಾಗೂ ಮಹತ್ವಪ್ರಾಪ್ತವಾಗುವುದು.॥2.॥

ಮೂಲಮ್ - 30

ರಾಮಂ ಶುಶ್ರೂಷ ಭದ್ರಂ ತೇ ಸುಮಿತ್ರಾನಂದವರ್ಧನ ।
ರಾಮಃ ಸರ್ವಸ್ಯ ಲೋಕಸ್ಯ ಶುಭೇಷ್ವಭಿರತಃ ಸದಾ ॥

ಅನುವಾದ

ಸುಮಿತ್ರಾನಂದವರ್ಧನ ಲಕ್ಷ್ಮಣ! ನಿನಗೆ ಮಂಗಳವಾಗಲೀ. ನೀನು ಶ್ರೀರಾಮನು ಸೇವೆ ನಿರಂತರ ಮಾಡುತ್ತಾ ಇರು. ಈ ರಾಮನು ಸದಾ ಸಮಸ್ತ ಲೋಕಗಳ ಹಿತದಲ್ಲಿ ತತ್ಪರನಾಗಿರುತ್ತಾನೆ.॥30॥

ಮೂಲಮ್ - 31

ಏತೇ ಸೇಂದ್ರಾಸ್ತ್ರಯೋ ಲೋಕಾಃ ಸಿದ್ಧಾಶ್ಚ ಪರಮರ್ಷಯಃ ।
ಅಭಿವಾದ್ಯ ಮಹಾತ್ಮಾನಮರ್ಚಂತಿ ಪುರುಷೋತ್ತಮಮ್ ॥

ಅನುವಾದ

ನೋಡು, ಇಂದ್ರನಂತೆ ಮೂರು ಲೋಕಗಳು, ಸಿದ್ಧರು, ಮಹರ್ಷಿಗಳೂ ಪರಮಾತ್ಮಸ್ವರೂಪ ಪುರುಷೋತ್ತಮ ರಾಮನಿಗೆ ವಂದಿಸಿ ಪೂಜಿಸುತ್ತಿದ್ದಾರೆ.॥31॥

ಮೂಲಮ್ - 32

ಏತತ್ತದುಕ್ತಮವ್ಯಕ್ತಮಕ್ಷರಂ ಬ್ರಹ್ಮಸಮ್ಮಿತಮ್ ।
ದೇವಾನಾಂ ಹೃದಯಂ ಸೌಮ್ಯ ಗುಹ್ಯಂ ರಾಮಃ ಪರಂತಪಃ ॥

ಅನುವಾದ

ಸೌಮ್ಯ! ಪರಂತಪನಾದ ಈ ಶ್ರೀರಾಮನು ದೇವತೆಗಳ ಹೃದಯ ಮತ್ತು ಪರಮಗುಹ್ಯನಾಗಿದ್ದಾನೆ. ಇವನೇ ವೇದ ಗಳಿಂದ ಪ್ರತಿಪಾದಿತ ಅವ್ಯಕ್ತ ಹಾಗೂ ಅವಿನಾಶೀ ಬ್ರಹ್ಮನಾಗಿದ್ದಾನೆ.॥32॥

ಮೂಲಮ್ - 33

ಅವಾಪ್ತಧರ್ಮಾಚರಣಂ ಯಶಶ್ಚ ವಿಪುಲಂ ತ್ವಯಾ ।
ರಾಮಂ ಶುಶ್ರೂಷತಾ ವ್ಯಗ್ರಂ ವೈದೇಹ್ಯಾ ಸಹ ಸೀತಯಾ ॥

ಅನುವಾದ

ವಿದೇಹನಂದಿನೀ ಸೀತೆಯೊಂದಿಗೆ ಶಾಂತಭಾವದಿಂದ ಇವರ ಸೇವೆ ಮಾಡುತ್ತಾ ನೀನು ಸಮಸ್ತ ಧರ್ಮಾಚರಣೆಯ ಫಲ ಮತ್ತು ಮಹಾಯಶವನ್ನು ಪಡೆದುಕೊಂಡಿರುವೆ.॥3.॥

ಮೂಲಮ್ - 34

ಇತ್ಯುಕ್ತ್ವಾ ಲಕ್ಷ್ಮಣಂ ರಾಜಾ ಸ್ನುಷಾಂ ಬದ್ಧಾಂಜಲಿಂ ಸ್ಥಿತಾಮ್ ।
ಪುತ್ರೀತ್ಯಾಭಾಷ್ಯ ಮಧುರಂ ಶನೈರೇನಾಮುವಾಚ ಹ ॥

ಅನುವಾದ

ಲಕ್ಷ್ಮಣನಲ್ಲಿ ಹೀಗೆ ಹೇಳಿ ರಾಜಾದಶರಥನು ಕೈಮುಗಿದು ನಿಂತಿರುವ ಸೊಸೆ ಸೀತೆಯನ್ನು ಮಗಳೇ ಎಂದು ಕರೆದು ನಿಧಾನವಾಗಿ ಮಧುರವಾಗಿ ಹೀಗೆ ಹೇಳಿದನು.॥34॥

ಮೂಲಮ್ - 35

ಕರ್ತವ್ಯೋ ನ ತು ವೈದೇಹಿ ಮನ್ಯುಸ್ತ್ಯಾಗಮಿಮಂ ಪ್ರತಿ ।
ರಾಮೇಣೇದಂ ವಿಶುದ್ಧ್ಯರ್ಥಂ ಕೃತಂ ವೈ ತ್ವದ್ಧಿತೈಷಿಣಾ ॥

ಅನುವಾದ

ವಿದೇಹನಂದಿನೀ! ನಿನ್ನ ಈ ತ್ಯಾಗದಿಂದ ಶ್ರೀರಾಮನ ಮೇಲೆ ನೀನು ಕುಪಿತಳಾಗಬಾರದು; ಏಕೆಂದರೆ ಇವನು ನಿನ್ನ ಹಿತೈಷಿಯಾಗಿದ್ದು, ಜಗತ್ತಿನಲ್ಲಿ ನಿನ್ನ ಪವಿತ್ರತೆಯನ್ನು ಪ್ರಕಟ ಪಡಿಸಲಿಕ್ಕಾಗಿ ಇಂತಹ ವ್ಯವಹಾರಗೈದಿರುವನು.॥35॥

ಮೂಲಮ್ - 36

ಸುದುಷ್ಕರಮಿದಂ ಪುತ್ರಿ ತವ ಚಾರಿತ್ರಲಕ್ಷಣಮ್ ।
ಕೃತಂ ಯತ್ ತ್ತೇಽನ್ಯನಾರೀಣಾಂ ಯಶೋ ಹ್ಯಭಿಭವಿಷ್ಯತಿ ॥

ಅನುವಾದ

ಮಗಳೇ! ನೀನು ನಿನ್ನ ವಿಶುದ್ಧ ಚರಿತ್ರವನ್ನು ಸಮರ್ಥಿಸಲು ಮಾಡಿದ ಅಗ್ನಿಪ್ರವೇಶದಂತಹ ಕಾರ್ಯ ಅತಿದುಷ್ಕರವಾದುದು. ನಿನ್ನ ಈ ಕರ್ಮ ಇತರ ನಾರಿಯರ ಯಶವನ್ನು ಮುಚ್ಚಿಬಿಡುತ್ತದೆ.॥36॥

ಮೂಲಮ್ - 37

ನ ತ್ವಂ ಕಾಮಂ ಸಮಾಧೇಯಾ ಭರ್ತೃ ಶುಶ್ರೂಷಣಂ ಪ್ರತಿ ।
ಅವಶ್ಯಂ ತು ಮಯಾ ವಾಚ್ಯಮೇಷ ತೇದೈವತಂ ಪರಮ್ ॥

ಅನುವಾದ

ಪತಿಸೇವೆಯ ಸಂಬಂಧದಲ್ಲಿ ನಿನಗೆ ಯಾವುದೇ ಉಪದೇಶದ ಆವಶ್ಯಕತೆ ಇಲ್ಲ; ಆದರೂ ಶ್ರೀರಾಮನೇ ನಿನಗಾಗಿ ಎಲ್ಲಕ್ಕಿಂತ ದೊಡ್ಡ ದೇವತೆಯಾಗಿದ್ದಾನೆ. ಇಷ್ಟನ್ನಾದರೂ ನಾನು ಅವಶ್ಯವಾಗಿ ತಿಳಿಸುತ್ತೇನೆ.॥37॥

ಮೂಲಮ್ - 38

ಇತಿ ಪ್ರತಿಸಮಾದಿಶ್ಯ ಪುತ್ರೌ ಸೀತಾಂ ಚ ರಾಘವಃ ।
ಇಂದ್ರ್ರಲೋಕಂ ವಿಮಾನೇನ ಯಯೌ ದಶರಥೋ ನೃಪಃ ॥

ಅನುವಾದ

ಈ ಪ್ರಕಾರ ಇಬ್ಬರೂ ಪುತ್ರರಿಗೆ ಮತ್ತು ಸೀತೆಗೆ ಆದೇಶ ಹಾಗೂ ಉಪದೇಶ ಕೊಟ್ಟು ರಘುವಂಶಿ ರಾಜಾ ದಶರತನು ವಿಮಾನದ ಮೂಲಕ ಇಂದ್ರಲೋಕಕ್ಕೆ ತೆರಳಿದನು.॥38॥

ಮೂಲಮ್ - 39

ವಿಮಾನಮಾಸ್ಥಾಯ ಮಹಾನುಭಾವಃ
ಶ್ರಿಯಾ ಚ ಸಂಹೃಷ್ಟತನುರ್ನೃಪೋತ್ತಮಃ ।
ಆಮಂತ್ರ್ಯ ಪುತ್ರೌ ಸಹ ಸೀತಯಾ ಚ
ಜಗಾಮ ದೇವಪ್ರವರಸ್ಯ ಲೋಕಮ್ ॥

ಅನುವಾದ

ನೃಪಶ್ರೇಷ್ಠ ಮಹಾನುಭಾವ ದಶರಥನು ಅದ್ಭುತ ಶೋಭೆಯಿಂದ ಸಂಪನ್ನನಾಗಿದ್ದನು. ಅವನ ಶರೀರ ಹರ್ಷದಿಂದ ಪುಳಕಿತವಾಗಿತ್ತು. ಅವನು ವಿಮಾನದಲ್ಲಿ ಕುಳಿತು ಸೀತಾಸಹಿತ ಇಬ್ಬರೂ ಪುತ್ರರಿಂದ ಬೀಳ್ಕೊಂಡು ದೇವೇಂದ್ರನ ಲೋಕಕ್ಕೆ ಹೊರಟುಹೋದನು.॥39॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರ ಹತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥119॥