११७ लङ्कां प्रति देवैः आगमनम्

वाचनम्
ಭಾಗಸೂಚನಾ

ದೇವತೆಗಳೆಲ್ಲರೂ ಶ್ರೀರಾಮನ ಬಳಿಗೆ ಬಂದು ಅವನು ಭಗವಂತನೆಂದು ಪ್ರತಿಪಾದಿಸಿ ಸ್ತುತಿಸಿದುದು

ಮೂಲಮ್ - 1

ತತೋ ಹಿ ದುರ್ಮನಾ ರಾಮಃ ಶ್ರುತ್ವೈವಂ ವದತಾಂ ಗಿರಃ ।
ದಧ್ಯೌ ಮುಹೂರ್ತಂ ಧರ್ಮಾತ್ಮಾ ಭಾಷ್ಪವ್ಯಾಕುಲಲೋಚನಃ ॥

ಅನುವಾದ

ಅನಂತರ ಧರ್ಮಾತ್ಮಾ ಶ್ರೀರಾಮನು ಹಾಹಾಕಾರ ಮಾಡುತ್ತಿರುವ ವಾನರ ಮತ್ತು ರಾಕ್ಷಸರ ಮಾತನ್ನು ಕೇಳಿ ಮನಸ್ಸಿನಲ್ಲೇ ಬಹಳ ದುಃಖಿತನಾಗಿ, ಕಂಬನಿ ತುಂಬಿಕೊಂಡು ಎರಡುಗಳಿಗೆ ಏನೋ ಯೋಚಿಸುತ್ತಿದ್ದನು.॥1॥

ಮೂಲಮ್ - 2

ತತೋ ವೈಶ್ರವಣೋ ರಾಜಾ ಯಮಶ್ಚ ಪಿತೃಭಿಃ ಸಹ ।
ಸಹಸ್ರಾಕ್ಷೋ ದೇವೇಶೋ ವರುಣಶ್ಚ ಜಲೇಶ್ವರಃ ॥

ಮೂಲಮ್ - 3

ಷಡರ್ಧನಯನಃ ಶ್ರೀಮಾನ್ಮಹಾದೇವೋ ವೃಷಧ್ವಜಃ ।
ಕರ್ತಾ ಸರ್ವಸ್ಯ ಲೋಕಸ್ಯ ಬ್ರಹ್ಮಾ ಬ್ರಹ್ಮವಿದಾಂ ವರಃ ॥

ಮೂಲಮ್ - 4

ಏತೇ ಸರ್ವೇ ಸಮಾಗಮ್ಯ ವಿಮಾನೈಃ ಸೂರ್ಯ ಸಂನಿಭೈಃ ।
ಆಗಮ್ಯ ನಗರೀಂ ಲಂಕಾಮಭಿಜಗ್ಮುಶ್ಚ ರಾಘವಮ್ ॥

ಅನುವಾದ

ಆಗಲೇ ವಿಶ್ರವಸ್ಸುವಿನ ಪುತ್ರ ಯಕ್ಷರಾಜ ಕುಬೇರ, ಪಿತೃಗಳ ಸಹಿತ ಯಮಧರ್ಮನು, ದೇವತೆಗಳೊಡೆಯ ಸಹಸ್ರಾಕ್ಷ ಇಂದ್ರ, ಜಲಾಧಿಪತಿ ವರುಣ, ತ್ರಿನೇತ್ರಧಾರಿ ಶ್ರೀಮಾನ್ ವೃಷಭಧ್ವಜ ಮಹಾದೇವನು ಹಾಗೂ ಸಮಸ್ತ ಜಗತ್ಸ್ರಷ್ಟಾ ಬ್ರಹ್ಮವೇತ್ತರಲ್ಲಿ ಶ್ರೇಷ್ಠ ಬ್ರಹ್ಮದೇವರು-ಹೀಗೆ ಎಲ್ಲ ದೇವತೆಗಳು ಸೂರ್ಯತುಲ್ಯ ವಿಮಾನಗಳಿಂದ ಲಂಕೆಯಲ್ಲಿ ಶ್ರೀರಘುನಾಥನ ಬಳಿಗೆ ಬಂದರು.॥2-4॥

ಮೂಲಮ್ - 5

ತತಃ ಸಹಸ್ತಾಭರಣಾನ್ಪ್ರಗೃಹ್ಯ ವಿಪುಲಾನ್ಭುಜಾನ್ ।
ಅಬ್ರುವಂಸ್ತ್ರಿ ದಶಶ್ರೇಷ್ಠಾ ರಾಘವಂ ಪ್ರಾಂಜಲಿಂ ಸ್ಥಿತಮ್ ॥

ಅನುವಾದ

ಭಗವಾನ್ ಶ್ರೀರಾಮನು ಅವರ ಮುಂದೆ ಕೈಮುಗಿದು ನಿಂತುಕೊಂಡಿದ್ದನು. ಆ ಶ್ರೇಷ್ಠದೇವತೆಗಳು ಆಭೂಷಣಗಳಿಂದ ಅಲಂಕೃತ ತಮ್ಮ ವಿಶಾಲ ಭುಜಗಳನ್ನೆತ್ತಿಕೊಂಡು ರಾಮನಲ್ಲಿ ಹೇಳಿದರು.॥5॥

ಮೂಲಮ್ - 6

ಕರ್ತಾ ಸರ್ವಸ್ಯ ಲೋಕಸ್ಯ ಶ್ರೇಷ್ಠೋ ಜ್ಞಾನವತಾಂ ವರಃ ।
ಉಪೇಕ್ಷಸೇ ಕಥಂ ಸೀತಾಂ ಪತಂತೀಂ ಹವ್ಯವಾಹನೇ ।
ಕಥಂ ದೇವಗಣ ಶ್ರೇಷ್ಠಮಾತ್ಮಾನಂ ನಾವಬುಧ್ಯಸೇ ॥

ಅನುವಾದ

ಶ್ರೀರಾಮಾ! ನೀನು ಸಮಸ್ತ ವಿಶ್ವದ ಉತ್ಪಾದಕನೂ, ಜ್ಞಾನಿಗಳಲ್ಲಿ ಶ್ರೇಷ್ಠನೂ, ಸರ್ವವ್ಯಾಪಕನೂ ಆಗಿರುವೆ. ಮತ್ತೆ ಈಗ ಬೆಂಕಿಯಲ್ಲಿ ಬಿದ್ದ ಸೀತೆಯನ್ನು ಏಕೆ ಉಪೇಕ್ಷಿಸುತ್ತಿರುವೆ? ನೀನು ಸಮಸ್ತ ದೇವತೆಗಳಲ್ಲಿ ಶ್ರೇಷ್ಠ ವಿಷ್ಣುವೇ ಆಗಿರುವೆ. ಇದನ್ನು ಏಕೆ ತಿಳಿಯುತ್ತಿಲ್ಲ.॥6॥

ಮೂಲಮ್ - 7

ಋತಧಾಮಾ ವಸುಃ ಪೂರ್ವಂ ವಸೂನಾಂ ಚ ಪ್ರಜಾಪತಿಃ ।
ತ್ರಯಾಣಾಮಪಿ ಲೋಕಾನಾಮಾದಿಕರ್ತಾ ಸ್ವಯಂಪ್ರಭುಃ ॥

ಅನುವಾದ

ಹಿಂದೆ ವಸುಗಳ ಪ್ರಜಾಪತಿ ಋತಧಾಮಾ ಎಂಬ ವಸು ನೀನೇ ಆಗಿರುವೆ. ನೀನು ಮೂರು ಲೋಕಗಳ ಆದಿಕರ್ತಾ ಸ್ವಯಂ ಪ್ರಭುವಾಗಿರುವೆ.॥7॥

ಮೂಲಮ್ - 8

ರುದ್ರಾಣಾಮಷ್ಟಮೋ ರುದ್ರಃ ಸಾಧ್ಯಾನಾಮಪಿ ಪಂಚಮಃ ।
ಅಶ್ವಿನೌ ಚಾಪಿ ತೇ ಕರ್ಣೌ ತೇ ಸೂರ್ಯಾಚಂದ್ರಮಸೌದೃಶೌ ॥

ಅನುವಾದ

ರುದ್ರರಲ್ಲಿ ಎಂಟನೆಯ ರುದ್ರನೂ ಮತ್ತು ಸಾಧ್ಯರಲ್ಲಿ ಐದನೆಯ ಸಾಧ್ಯನೂ ನೀನೇ ಆಗಿರುವೆ. ಇಬ್ಬರೂ ಅಶ್ವಿನೀಕುಮಾರರೇ ನಿನ್ನ ಕಿವಿಗಳಾಗಿವೆ ಹಾಗೂ ಸೂರ್ಯ-ಚಂದ್ರರೇ ಕಣ್ಣುಗಳಾಗಿವೆ.॥8॥

ಮೂಲಮ್ - 9

ಅಂತೇ ಚಾದೌ ಚ ಮಧ್ಯೇ ಚ ದೃಶ್ಯಸೇ ಚ ಪರಂತಪ ।
ಉಪೇಕ್ಷಸೇ ಚ ವೈದೇಹೀಂ ಮಾನುಷಃ ಪ್ರಾಕೃತೋ ಯಥಾ ॥

ಅನುವಾದ

ಪರಂತಪ ದೇವನೇ! ಸೃಷ್ಟಿಯ ಆದಿ-ಮಧ್ಯ-ಅಂತ್ಯದಲ್ಲಿ ನೀನೇ ಕಂಡುಬರುವೆ. ಹೀಗಿರುವಾಗ ಒಬ್ಬ ಸಾಧಾರಣ ಮನುಷ್ಯನಂತೆ ನೀನು ಸೀತೆಯನ್ನು ಏಕೆ ಉಪೇಕ್ಷಿಸುತ್ತಿರುವೆ.॥9॥

ಮೂಲಮ್ - 10

ಇತ್ಯುಕ್ತೋ ಲೋಕಪಾಲೈಸ್ತೈಃ ಸ್ವಾಮೀ ಲೋಕಸ್ಯ ರಾಘವಃ ।
ಅಬ್ರವೀತ್ ತ್ರಿದಶಶ್ರೇಷ್ಠಾನ್ ರಾಮೋ ಧರ್ಮಭೃತಾಂವರಃ ॥

ಅನುವಾದ

ಆ ಲೋಕಪಾಲಕರು ಹೀಗೆ ಹೇಳಿದಾಗ ಧರ್ಮಾತ್ಮರಲ್ಲಿ ಶ್ರೇಷ್ಠ ಲೋಕನಾಥ ರಘುನಾಥ ಶ್ರೀರಾಮನು ಆ ಶ್ರೇಷ್ಠ ದೇವತೆಗಳಲ್ಲಿ ಹೇಳಿದನು.॥10॥

ಮೂಲಮ್ - 11

ಆತ್ಮಾನಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಮ್ ।
ಸೋಹಂ ಯಶ್ಚ ಯತಶ್ಚಾಹಂ ಭಗವಾಂಸ್ತದ್ಬ್ರವೀತುಮೇ ॥

ಅನುವಾದ

ದೇವತೆಗಳಿರಾ! ನಾನಾದರೋ ಮನುಷ್ಯ ದಶರಥ ಪುತ್ರ ರಾಮನೆಂದೇ ತಿಳಿಯುತ್ತೇನೆ. ಭಗವಾನ್! ನಾನು ಯಾರು ಮತ್ತು ಎಲ್ಲಿಂದ ಬಂದವನು ಎಂಬುದೆಲ್ಲವನ್ನು ನೀವೇ ತಿಳಿಸಿರಿ.॥11॥

ಮೂಲಮ್ - 12

ಇತಿ ಬ್ರುವಾಣ ಕಾಕುತ್ಸ್ಥಂ ಬ್ರಹ್ಮಾ ಬ್ರಹ್ಮವಿದಾಂ ವರಃ ।
ಅಬ್ರವೀಚ್ಛೃಣು ಮೇ ವಾಕ್ಯಂ ಸತ್ಯಂ ಸತ್ಯಪರಾಕ್ರಮ ॥

ಅನುವಾದ

ಶ್ರೀರಘುನಾಥನು ಹೀಗೆ ಹೇಳಿದಾಗ ಬ್ರಹ್ಮವೇತ್ತರಲ್ಲಿ ಶ್ರೇಷ್ಠ ಬ್ರಹ್ಮದೇವರು ಅವನಲ್ಲಿ ಹೀಗೆ ಹೇಳಿದರು- ಸತ್ಯಪರಾಕ್ರಮಿ ರಘುವೀರನೇ! ಸತ್ಯವಾದ ನನ್ನ ಮಾತನ್ನು ಕೇಳು.॥12॥

ಮೂಲಮ್ - 13

ಭವಾನ್ನಾರಾಯಣೋ ದೇವಃ ಶ್ರೀಮಾಂಶ್ಚಕ್ರಾಯುಧಃ ಪ್ರಭುಃ ।
ಏಕಶೃಂಗೋ ವರಾಹಸ್ತ್ವಂ ಭೂತಭವ್ಯಸಪತ್ನಜಿತ್ ॥

ಅನುವಾದ

ನೀನು ಚಕ್ರಧರಿಸುವ ಸರ್ವಸಮರ್ಥ ಶ್ರೀಮಾನ್ ಭಗವಾನ್ ನಾರಾಯಣನಾಗಿರುವೆ. ಏಕಶೃಂಗನಾದ ವರಾಹನೂ ನೀನೇ. ದೇವತೆಗಳ ಹಿಂದಿನ-ಮುಂದಿನ ಶತ್ರುಗಳನ್ನು ಜಯಿಸುವವನೂ ನೀನೇ ಆಗಿರುವೆ.॥13॥

ಮೂಲಮ್ - 14

ಅಕ್ಷರಂ ಬ್ರಹ್ಮ ಸತ್ಯಂ ಚ ಮಧ್ಯೇ ಚಾಂತೇ ಚ ರಾಘವ ।
ಲೋಕಾನಾಂ ತ್ವಂ ಪರೋ ಧರ್ಮೋ ವಿಷ್ವಕ್ಸೇನಶ್ಚತುರ್ಭುಜಃ ॥

ಅನುವಾದ

ರಘುನಂದನ! ನೀನು ಅವಿನಾಶೀ ಬ್ರಹ್ಮನಾಗಿರುವೆ. ಸೃಷ್ಟಿಯ ಆದಿ- ಮಧ್ಯ-ಅಂತ್ಯದಲ್ಲಿ ಸತ್ಯಸ್ವರೂಪದಿಂದ ಇರುವನು ನೀನೇ. ನೀನೇ ಲೋಕಗಳ ಪರಮಧರ್ಮನಾಗಿರುವೆ. ನೀನೇ ವಿಶ್ವಕ್ ಸೇನ ಹಾಗೂ ಚತುರ್ಭುಜಧಾರೀ ಶ್ರೀಹರಿಯಾಗಿರುವೆ.॥14॥

ಮೂಲಮ್ - 15

ಶಾರ್ಙ್ಗಧನ್ವಾ ಹೃಷೀಕೇಶಃ ಪುರುಷಃ ಪುರುಷೋತ್ತಮಃ ।
ಅಜಿತಃ ಖಡ್ಗಧೃಗ್ ವಿಷ್ಣುಃ ಕೃಷ್ಣಶ್ಚೈವ ಬೃಹದ್ಭಲಃ ॥

ಅನುವಾದ

ನೀನೇ ಶಾರ್ಙ್ಗಧನ್ವಾ, ಹೃಷಿಕೇಶ, ಅಂತರ್ಯಾಮಿ ಮತ್ತು ಪುರುಷೋತ್ತಮ ನಾಗಿರುವೆ. ನೀನು ಯಾರಿಂದಲೂ ಪರಾಜಿತನಾಗದವನು. ನೀನು ನಂದಕ ಎಂಬ ಖಡ್ಗವನ್ನು ಧರಿಸುವ ವಿಷ್ಣು ಹಾಗೂ ಮಹಾಬಲೀ ಕೃಷ್ಣನಾಗಿರುವೆ.॥15॥

ಮೂಲಮ್ - 16

ಸೇನಾನೀರ್ಗ್ರಾಮಣೀಶ್ಚ ತ್ವಂ ಬುದ್ಧಿಃ ಸತ್ತ್ವಂ ಕ್ಷಮಾ ದಮಃ ।
ಪ್ರಭವಶ್ಚಾಪ್ಯಯಶ್ಚತ್ವಮುಪೇಂದ್ರೋ ಮಧುಸೂದನಃ ॥

ಅನುವಾದ

ನೀನೇ ದೇವಸೇನಾಪತಿ ಹಾಗೂ ಜನಪದಗಳ ನಾಯಕನೂ ಆಗಿರುವೆ. ಬುದ್ಧಿ, ಸತ್ತ್ವ, ಕ್ಷಮೆ, ಇಂದ್ರಿಯ ನಿಗ್ರಹ ಹಾಗೂ ಸೃಷ್ಟಿ ಮತ್ತು ಪ್ರಳಯದ ಕಾರಣವಾಗಿರುವೆ. ನೀನೇ ಉಪೇಂದ್ರ ಮತ್ತು ಮಧುಸೂದನನಾಗಿರುವೆ.॥16॥

ಮೂಲಮ್ - 17

ಇಂದ್ರಕರ್ಮಾ ಮಹೇಂದ್ರಸ್ತ್ವಂ ಪದ್ಮನಾಭೋ ರಣಾಂತಕೃತ್ ।
ಶರಣ್ಯಂ ಶರಣಂ ಚ ತ್ವಾಮಾಹುರ್ದಿವ್ಯಾ ಮಹರ್ಷಯಃ ॥

ಅನುವಾದ

ಇಂದ್ರನನ್ನು ಉತ್ಪನ್ನ ಮಾಡಿದ ಮಹೇಂದ್ರನು ಮತ್ತು ಯುದ್ಧವನ್ನು ಅಂತ್ಯಗೊಳಿಸುವ ಶಾಂತಸ್ವರೂಪ ಪದ್ಮನಾಭನೂ ನೀನೇ ಆಗಿರುವೆ. ದಿವ್ಯ ಮಹರ್ಷಿಗಳು ನಿನ್ನನ್ನು ಶರಣ ದಾತಾ ಹಾಗೂ ಶರಣಾಗತವತ್ಸಲನೆಂದು ಹೇಳುತ್ತಾರೆ.॥17॥

ಮೂಲಮ್ - 18

ಸಹಸ್ರಶೃಂಗೋ ವೇದಾತ್ಮಾ ಶತಶೀರ್ಷೋ ಮಹರ್ಷಭಃ ।
ತ್ವಂ ತ್ರಯಾಣಾಂ ಹಿ ಲೋಕಾನಾಮಾದಿಕರ್ತಾ ಸ್ವಯಂಪ್ರಭುಃ ॥

ಅನುವಾದ

ನೀನೇ ಸಾವಿರ ಶಾಖೆಗಳುಳ್ಳ ಸಾಯವೇದ ಸ್ವರೂಪನು, ನೂರಾರು ವಿಧಿ ವಾಕ್ಯರೂಪೀ ಮಸ್ತಕಗಳಿಂದ ಕೂಡಿದ ವೇದಸ್ವರೂಪ ಮಹಾವೃಷಭನೂ, ಲೋಕಗಳ ಆದಿಕರ್ತನೂ, ಸ್ವಯಂಪ್ರಭುವೂ ಆಗಿರುವೆ.॥18॥

ಮೂಲಮ್ - 19

ಸಿದ್ಧಾನಾಮಪಿ ಸಾಧ್ಯಾನಾಮಾಶ್ರಯಶ್ಚಾಸಿ ಪೂರ್ವಜಃ ।
ತ್ವಂ ಯಜ್ಞಸ್ತ್ವಂ ವಷಟ್ಕಾರಸ್ತ್ವಮೋಂಕಾರಃ ಪರಾತ್ಪರಃ ॥

ಅನುವಾದ

ನೀನು ಸಿದ್ಧ ಮತ್ತು ಸಾಧ್ಯರ ಆಶ್ರಯನೂ, ಪೂರ್ವಜನೂ ಆಗಿರುವೆ. ಯಜ್ಞ, ವಷಟ್ಕಾರ, ಓಂಕಾರನೂ ಆಗಿರುವೆ. ಶ್ರೇಷ್ಠರಲ್ಲಿ ಶ್ರೇಷ್ಠ ಪರಮಾತ್ಮನೂ ನೀನೇ ಆಗಿರುವೆ.॥19॥

ಮೂಲಮ್ - 20

ಪ್ರಭವಂ ನಿಧನಂ ಚಾಪಿ ನೋ ವಿದುಃ ಕೋ ಭವಾನಿತಿ ।
ದೃಶ್ಯಸೇ ಸರ್ವಭೂತೇಷು ಗೋಷು ಚ ಬ್ರಾಹ್ಮಣೇಷು ಚ ॥

ಅನುವಾದ

ನಿನ್ನ ಆವಿರ್ಭಾವ ಮತ್ತು ತಿರೋಭಾವವನ್ನು ಯಾರೂ ಅರಿಯರು. ನೀನು ಯಾರಾಗಿದ್ದೀ ಎಂಬುದೂ ಯಾರಿಗೂ ತಿಳಿದಿಲ್ಲ. ಸಮಸ್ತ ಪ್ರಾಣಿಗಳಲ್ಲಿ, ಗೋವುಗಳಲ್ಲಿ, ಬ್ರಾಹ್ಮಣರಲ್ಲಿ ನೀನೇ ಕಂಡುಬರುವೆ.॥20॥

ಮೂಲಮ್ - 21

ದಿಕ್ಷು ಸರ್ವಾಸು ಗಗನೇ ಪರ್ವತೇಷು ನದೀಷು ಚ ।
ಸಹಸ್ರಚರಣಃ ಶ್ರೀಮಾನ್ ಶತಶೀರ್ಷಃ ಸಹಸ್ರದೃಕ್ ॥

ಅನುವಾದ

ಸಮಸ್ತ ದಿಕ್ಕುಗಳಲ್ಲಿ, ಆಕಾಶದಲ್ಲಿ, ಪರ್ವತಗಳಲ್ಲಿ, ನದಿಗಳಲ್ಲಿಯೂ ನೀನೇ ಇರುವೆ. ನಿನಗೆ ಸಾವಿರಾರು ಚರಣ, ನೂರಾರು ಮಸ್ತಕಗಳು, ಸಾವಿರಾರು ನೇತ್ರಗಳು ಇವೆ.॥21॥

ಮೂಲಮ್ - 22

ತ್ವಂ ಧಾರಯಸಿ ಭೂತಾನಿ ಪೃಥಿವೀಂ ಸರ್ವಪರ್ವತಾನ್ ।
ಅಂತೇ ಪೃಥಿವ್ಯಾಃ ಸಲಿಲೇ ದೃಶ್ಯಸೇ ತ್ವಂ ಮಹೋರಗಃ ॥

ಅನುವಾದ

ನೀನೇ ಸಮಸ್ತ ಪ್ರಾಣಿಗಳನ್ನು, ಪೃಥಿವಿಯನ್ನು, ಸಮಸ್ತ ಪರ್ವತಗಳನ್ನು ಧರಿಸುವವನು, ಪೃಥಿವಿಯ ಅಂತ್ಯವಾದ ಮೇಲೂ ನೀನು ನೀರಿನಲ್ಲಿ ಮಹಾಸರ್ಪ-ಶೇಷಶಾಯಿಯಾಗಿರುವೆ.॥22॥

ಮೂಲಮ್ - 23

ತ್ರೀನ್ಲ್ಲೋಕಾನ್ಧಾರಯನ್ ರಾಮ ದೇವಗಂಧರ್ವ ದಾನವಾನ್ ।
ಅಹಂ ತೇ ಹೃದಯಂ ರಾಮ ಜಿಹ್ವಾ ದೇವೀ ಸರಸ್ವತೀ ॥

ಅನುವಾದ

ಶ್ರೀರಾಮ! ನೀನೇ ಮೂರು ಲೋಕಗಳನ್ನು ಹಾಗೂ ದೇವತೆ, ಗಂಧರ್ವ, ದಾನವರನ್ನು ಧರಿಸುವ ವಿರಾಟ ಪುರುಷನಾರಾಯಣನಾಗಿರುವೆ. ಬ್ರಹ್ಮನಾದ ನಾನು ನಿನ್ನ ಹೃದಯ ಮತ್ತು ಸರಸ್ವತೀ ದೇವಿಯು ನಿನ್ನ ಜಿಹ್ವೆಯಾಗಿರುವಳು.॥23॥

ಮೂಲಮ್ - 24

ದೇವಾ ರೋಮಾಣಿ ಗಾತ್ರೇಷು ನಿರ್ಮಿತಾಃ ಬ್ರಹ್ಮಣಾ ಪ್ರಭೋ ।
ನಿಮೇಷಸ್ತೇ ಸ್ಮೃತಾರಾತ್ರಿರುನ್ಮೇಷೋ ದಿವಸಸ್ತಥಾ ॥

ಅನುವಾದ

ಪ್ರಭೋ! ಬ್ರಹ್ಮನಾದ ನಾನು ಸೃಷ್ಟಿಸಿದ ದೇವತೆಗಳೆಲ್ಲ ನಿನ್ನ ವಿರಾಟ್ ಶರೀರದಲ್ಲಿ ರೋಮಗಳಾಗಿವೆ. ನೀನು ಕಣ್ಣು ಮುಚ್ಚುವುದೇ ರಾತ್ರಿ, ತೆರೆಯುವುದು ಹಗಲು ಆಗಿದೆ.॥24॥

ಮೂಲಮ್ - 25

ಸಂಸ್ಕಾರಾಸ್ತ್ವಭವನ್ ವೇದಾ ನೈತದಸ್ತಿ ತ್ವಯಾ ವಿನಾ ।
ಜಗತ್ಸರ್ವಂ ಶರೀರಂ ತೇ ಸ್ಥೈರ್ಯಂ ತೇವ ಸುಧಾತಲಮ್ ॥

ಅನುವಾದ

ವೇದಗಳೇ ನಿನ್ನ ಸಂಸ್ಕಾರ (ಉಸಿರು) ಆಗಿದೆ. ನೀನಿಲ್ಲದೆ ಈ ಜಗತ್ತಿಗೆ ಅಸ್ತಿತ್ವವಿಲ್ಲ. ಸಮಸ್ತ ವಿಶ್ವವೂ ನಿನ್ನ ಶರೀರವಾಗಿದೆ. ಪೃಥಿವಿಯೇ ನಿನ್ನ ಸ್ಥೈರ್ಯವಾಗಿದೆ.॥25॥

ಮೂಲಮ್ - 26

ಅಗ್ನಿಃ ಕೋಪಃ ಪ್ರಸಾದಸ್ತೇ ಸೋಮಃ ಶ್ರೀವತ್ಸಲಕ್ಷಣಃ ।
ತ್ವಯಾ ಲೋಕಾಸ್ತ್ರಯಃ ಕ್ರಾಂತಾಃ ಪುರಾಸ್ವೈರ್ವಿಕ್ರಮೈಸ್ತ್ರಿಭಿಃ ॥

ಅನುವಾದ

ಅಗ್ನಿಯೇ ನಿನ್ನ ಕೋಪವು, ಚಂದ್ರನು ಪ್ರಸನ್ನತೆ ಯಾಗಿದೆ. ವಕ್ಷಃಸ್ಥಳದಲ್ಲಿ ಶ್ರೀವತ್ಸವನ್ನು ಧರಿಸುವ ಭಗವಾನ್ ವಿಷ್ಣುವೂ ನೀನೇ ಆಗಿರುವೆ. ಹಿಂದೆ ನೀನೇ ಮೂರು ಹೆಜ್ಜೆಗಳಿಂದ ಮೂರು ಲೋಕಗಳನ್ನು ಅಳೆದವನು.॥26॥

ಮೂಲಮ್ - 27

ಮಹೇಂದ್ರಶ್ಚ ಕೃತೋ ರಾಜಾ ಬಲಿಂ ಬದ್ಧ್ವಾ ಸುದಾರುಣಮ್ ।
ಸೀತಾ ಲಕ್ಷ್ಮೀರ್ಭವಾನ್ವಿಷ್ಣುರ್ದೇವಃ ಕೃಷ್ಣಃ ಪ್ರಜಾಪತಿಃ ॥

ಅನುವಾದ

ನೀನೇ ಅತ್ಯಂತ ದಾರುಣ ದೈತ್ಯರಾಜ ಬಲಿಯನ್ನು ಬಂಧಿಸಿ, ಇಂದ್ರನನ್ನು ಮೂರು ಲೋಕಗಳ ರಾಜನನ್ನಾಗಿಸಿದೆ. ಸೀತೆ ಸಾಕ್ಷಾತ್ ಲಕ್ಷ್ಮೀಯಾಗಿರುವಳು ಮತ್ತು ನೀನು ಭಗವಾನ್ ವಿಷ್ಣು ಆಗಿರುವೆ. ನೀನೇ ಸಚ್ಚಿದಾನಂದಸ್ವರೂಪೀ ಭಗವಾನ್ ಶ್ರೀಕೃಷ್ಣ ಮತ್ತು ಪ್ರಜಾಪತಿಯಾಗಿರುವೆ.॥27॥

ಮೂಲಮ್ - 28

ವಧಾರ್ಥಂ ರಾವಣಸ್ಯೇಹ ಪ್ರವಿಷ್ಣೋ ಮಾನುಷೀಂ ತನುಮ್ ।
ತದಿದಂ ನಸ್ತ್ವಯಾ ಕಾರ್ಯಂ ಕೃತಂ ಧರ್ಮಭೃತಾಂ ವರ ॥

ಅನುವಾದ

ಧರ್ಮಾತ್ಮರಲ್ಲಿ ಶ್ರೇಷ್ಠ ರಘುವೀರನೇ! ನೀನು ರಾವಣನನ್ನು ವಧಿಸಲಿಕ್ಕಾಗಿಯೇ ಈ ಲೋಕದಲ್ಲಿ ಮನುಷ್ಯನಾಗಿ ಅವತರಿಸಿ ನಮ್ಮ ಕಾರ್ಯವನ್ನು ನೆರವೇರಿಸಿದೆ.॥28॥

ಮೂಲಮ್ - 29

ನಿಹತೋ ರಾವಣೋ ರಾಮ ಪ್ರಹೃಷ್ಟೋ ದಿವಮಾಕ್ರಮ ।
ಅಮೋಘಂ ಬಲವೀರ್ಯಂ ತೇ ನ ತೇಽಮೋಘಾಃ ಪರಾಕ್ರಮಾಃ ॥

ಅನುವಾದ

ಶ್ರೀರಾಮಾ! ನಿನ್ನಿಂದ ರಾವಣನು ಹತನಾದನು. ಈಗ ನೀನು ಸಂತೋಷ ದಿಂದ ತನ್ನ ದಿವ್ಯಧಾಮಕ್ಕೆ ಆಗಮಿಸು. ನಿನ್ನ ಬಲ ಅಮೋಘವಾಗಿದೆ. ನಿನ್ನ ಪರಾಕ್ರಮವೂ ವ್ಯರ್ಥವಾಗುವಂತಹುದಲ್ಲ.॥29॥

ಮೂಲಮ್ - 30

ಅಮೋಘಂ ದರ್ಶನಂ ರಾಮ ಅಮೋಘಸ್ತವ ಸಂಸ್ತವಃ ।
ಅಮೋಘಾಸ್ತೇ ಭವಿಷ್ಯಂತಿ ಭಕ್ತಿಮಂತೋನರಾ ಭುವಿ ॥

ಅನುವಾದ

ಶ್ರೀರಾಮಾ! ನಿನ್ನ ದರ್ಶನ ಅಮೋಘವಾಗಿದೆ. ನಿನ್ನ ಸ್ತುತಿಯೂ ಅಮೋಘವಾಗಿದೆ. ನಿನ್ನಲ್ಲಿ ಭಕ್ತಿಯನ್ನಿಟ್ಟು ಮನುಷ್ಯರೂ ಈ ಭೂಮಂಡಲದಲ್ಲಿ ಅಮೋಘರಾಗಿದ್ದಾರೆ.॥30॥

ಮೂಲಮ್ - 31

ಯೇ ತ್ವಾಂ ದೇವಂ ಧ್ರುವಂ ಭಕ್ತಾಃ ಪುರಾಣಂ ಪುರುಷೋತ್ತಮಮ್ ।
ಪ್ರಾಪ್ನುವಂತಿ ತಥಾ ಕಾಮಾನಿಹಲೋಕೇ ಪರತ್ರ ಚ ॥

ಅನುವಾದ

ನೀನು ಪುರಾಣ ಪುರುಷನಾಗಿರುವೆ. ದಿವ್ಯರೂಪಧಾರಿ ಪರಮಾತ್ಮಾ ನಿನ್ನಲ್ಲಿ ಭಕ್ತಿಯನ್ನು ಇಟ್ಟಿರುವವರು ಈ ಲೋಕ ಮತ್ತು ಪರಲೋಕಗಳಲ್ಲಿ ತಮ್ಮ ಮನೋರಥ ಪಡೆಯುವರು.॥31॥

ಮೂಲಮ್ - 32

ಇದಮಾರ್ಷಂ ಸ್ತವಂ ದಿವ್ಯಮಿತಿಹಾಸಂ ಪುರಾತನಮ್ ।
ಯೇ ನರಾಃ ಕೀರ್ತಯಿಷ್ಯಂತಿ ನಾಸ್ತಿ ತೇಷಾಂ ಪರಾಭವಃ ॥

ಅನುವಾದ

ಇದು ಪರಮಋಷಿ ಬ್ರಹ್ಮದೇವರು ಮಾಡಿದ ದಿವ್ಯಸ್ತೋತ್ರ ಹಾಗೂ ಪುರಾತನ ಇತಿಹಾಸವಾಗಿದೆ. ಇದನ್ನು ಕೀರ್ತಿಸುವವರು ಎಂದಿಗೂ ಪರಾಭವ ಹೊಂದುವುದಿಲ್ಲ.॥32॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರಹದಿನೇಳನೆಯ ಸರ್ಗ ಪೂರ್ಣವಾಯಿತು.॥117॥