११६ सीता-रामसंवादः

वाचनम्
ಭಾಗಸೂಚನಾ

ಸೀತೆಯು ಶ್ರೀರಾಮನಿಗೆ ನಿಂದಾಪೂರ್ವಕ ಉತ್ತರಕೊಟ್ಟು, ತನ್ನ ಸತೀತ್ವವನ್ನು ಸಿದ್ಧಪಡಿಸಲು ಅಗ್ನಿಯಲ್ಲಿ ಪ್ರವೇಶಿಸಿದುದು

ಮೂಲಮ್ - 1

ಏವಮುಕ್ತಾ ತು ವೈದೇಹೀ ಪರುಷಂ ರೋಮಹರ್ಷಣಮ್ ।
ರಾಘವೇಣ ಸರೋಷೇಣ ಶ್ರುತ್ವಾ ಪ್ರವ್ಯಥಿತಾಭವತ್ ॥

ಅನುವಾದ

ಶ್ರೀರಾಮನು ರೋಷಗೊಂಡು ಹೇಳಿದ ಅತಿ ಕಠೋರವೂ, ಮೈನವಿರೇಳಿಸುವಂತಹ ಮಾತುಗಳನ್ನು ಕೇಳಿದಾಗ ವಿದೇಹ ಕುಮಾರೀ ಸೀತೆಯ ಮನಸ್ಸಿನಲ್ಲಿ ಅತ್ಯಂತ ದುಃಖವಾಯಿತು.॥1॥

ಮೂಲಮ್ - 2

ಸಾ ತದಾಶ್ರುತಪೂರ್ವಂ ಹಿ ಜನೇ ಮಹತಿ ಮೈಥಿಲೀ ।
ಶ್ರುತ್ವಾ ಭರ್ತೃವಚೋ ಘೋರಂ ಲಜ್ಜಯಾ ವನತಾಭವತ್ ॥

ಅನುವಾದ

ಇಷ್ಟು ದೊಡ್ಡ ಜನಸಮುದಾಯದಲ್ಲಿ ಹಿಂದೆ ಎಂದೂ ಕೇಳದಿರುವ ತನ್ನ ಸ್ವಾಮಿಯು ಹೇಳಿದ ಭಯಂಕರ ಮಾತನ್ನು ಕೇಳಿ ಮಿಥಿಲೇಶಕುಮಾರಿ ಲಜ್ಜೆಯಿಂದ ತಲೆ ತಗ್ಗಿಸಿದಳು.॥2॥

ಮೂಲಮ್ - 3

ಪ್ರವಿಶಂತೀವ ಗಾತ್ರಾಣಿ ಸ್ವಾನಿ ಸಾ ಜನಕಾತ್ಮಜಾ ।
ವಾಕ್ಶರೈಸ್ತೈಃ ಸಶಲ್ಯೇವ ಭೃಶಮಶ್ರೂಣ್ಯವರ್ತಯತ್ ॥

ಅನುವಾದ

ಆ ವಾಗ್ಬಾಣಗಳಿಂದ ಪೀಡಿತಳಾದ ಜನಕಕಿಶೋರೀ ತನ್ನ ಅಂಗಾಂಗಳಲ್ಲೇ ಹುದುಗಿಹೋದಳು. ಆಕೆಯ ಕಣ್ಣುಗಳಿಂದ ಧಾರಾಕಾರವಾಗಿ ಕಂಬನಿ ಹರಿಯಿತು.॥3॥

ಮೂಲಮ್ - 4

ತತೋ ಭಾಷ್ಪ ಪರಿಕ್ಲಿನ್ನಂ ಪ್ರಮಾರ್ಜಂತೀ ಸ್ವಮಾನನಮ್ ।
ಶನೈರ್ಗದ್ಗದಯಾ ವಾಚಾ ಭರ್ತಾರಮಿದಮಬ್ರವೀತ್ ॥

ಅನುವಾದ

ಕಂಬನಿಗಳಿಂದ ನೆನೆದ ತನ್ನ ಮುಖವನ್ನು ಸೆರಗಿನಿಂದ ಒರೆಸಿಕೊಳ್ಳುತ್ತಾ ಅವಳು ನಿಧಾನವಾಗಿ ಗದ್ಗದಿತ ವಾಣಿಯಿಂದ ತನ್ನ ಪತಿಯಲ್ಲಿ ಹೀಗೆ ಹೇಳಿದಳು.॥4॥

ಮೂಲಮ್ - 5

ಕಿಂ ಮಾಮಸದೃಶಂ ವಾಕ್ಯಮೀದೃಶಂ ಶ್ರೋತ್ರದಾರುಣಮ್ ।
ರೂಕ್ಷಂ ಶ್ರಾವಯಸೇ ವೀರ ಪ್ರಾಕೃತಃ ಪ್ರಾಕೃತಾಮಿವ ॥

ಅನುವಾದ

ವೀರನೇ! ಇಂತಹ ಕಠೋರ, ಅನುಚಿತ, ಕರ್ಣಕರ್ಕಶ, ಒಣಮಾತುಗಳನ್ನು ನೀವು ನನಗೆ ಏಕೆ ಹೇಳುತ್ತಿರುವಿರಿ? ಯಾವನಾದರೂ ಕೀಳಾದ ಮನುಷ್ಯನು ಸಂಸ್ಕಾರ ಹೀನಳಾದ ಸ್ತ್ರೀಯಲ್ಲಿಯೂ ಹೇಳಲು ಯೋಗ್ಯವಲ್ಲದ ಮಾತುಗಳನ್ನು ಹೇಳುತ್ತಿರುವಿರಲ್ಲ ಏಕೆ.॥5॥

ಮೂಲಮ್ - 6

ನ ತಥಾಸ್ಮಿ ಮಹಾಬಾಹೋ ಯಥಾಮಾಮವಗಚ್ಛಸಿ ।
ಪ್ರತ್ಯಯಂ ಗಚ್ಚ ಮೇ ಸ್ವೇನ ಚಾರಿತ್ರೇಣೈವ ತೇ ಶಪೇ ॥

ಅನುವಾದ

ಮಹಾಬಾಹೋ! ನೀವು ನನ್ನನ್ನು ಈಗ ತಿಳಿಯುವಂತೆ ನಾನಿಲ್ಲ. ನನ್ನ ಮೇಲೆ ವಿಶ್ವಾಸವಿಡಿರಿ. ನಾನು ನನ್ನ ಸದಾಚಾರದ ಮೇಲೆ ಆಣೆಯಿಟ್ಟು ಹೇಳುತ್ತೇನೆ. ನಾನು ಸಂದೇಹಪಡಲು ಯೋಗ್ಯಳಾಗಿಲ್ಲ.॥6॥

ಮೂಲಮ್ - 7

ಪೃಥಕ್ ಸ್ತ್ರೀಣಾಂ ಪ್ರಚಾರೇಣ ಜಾತಿಂ ತ್ವಂ ಪರಿಶಂಕಸೇ ।
ಪರಿತ್ಯಜೇಮಾಂ ಶಂಕಾಂ ತು ಯದಿ ತೇಽಹಂ ಪರೀಕ್ಷಿತಾ ॥

ಅನುವಾದ

ಅಸಭ್ಯ ಸ್ತ್ರೀಯರ ಆಚರಣೆಯನ್ನೇ ನೋಡಿ, ನೀನು ಸೀಜಾತಿಯನ್ನೇ ಸಂಶಯ ದೃಷ್ಟಿಯಿಂದ ನೋಡುವುದು ಉಚಿತವಲ್ಲ. ನೀವು ನನ್ನನ್ನು ಚೆನ್ನಾಗಿ ಪರೀಕ್ಷಿಸಿದ್ದರೆ, ನಿಮ್ಮ ಸಂದೇಹವನ್ನು ಮನಸ್ಸಿನಿಂದ ತೆಗೆದು ಹಾಕಿ.॥7॥

ಮೂಲಮ್ - 8

ಯದಹಂ ಗಾತ್ರಸಂಸ್ಪರ್ಶಂ ಗತಾಸ್ಮಿ ವಿವಶಾ ಪ್ರಭೋ ।
ಕಾಮಕಾರೋ ನ ಮೇ ತತ್ರ ದೈವಂ ತತ್ರಾಪರಾಧ್ಯತಿ ॥

ಅನುವಾದ

ಪ್ರಭೋ! ರಾವಣನ ಶರೀರಕ್ಕೆ ನನ್ನ ಶರೀರದ ಸ್ಪರ್ಶವಾದುದು ನನ್ನ ವಿವಶತೆಯೇ ಕಾರಣವಾಗಿದೆ. ನಾನು ಸ್ವೇಚ್ಛೆಯಿಂದ ಹೀಗೆ ಮಾಡಿರಲಿಲ್ಲ. ಇದರಲ್ಲಿ ನನ್ನ ದುರ್ಭಾಗ್ಯದ್ದೇ ದೋಷವಾಗಿದೆ.॥8॥

ಮೂಲಮ್ - 9

ಮದಧೀನಂ ತು ಯತ್ತನ್ಮೇ ಹೃದಯಂ ತ್ವಯಿ ವರ್ತತೇ ।
ಪರಾಧೀನೇಷು ಗಾತ್ರೇಷು ಕಿಂ ಕರಿಷ್ಯಾಮ್ಯನೀಶ್ವರೀ ॥

ಅನುವಾದ

ನನ್ನ ಅಧೀನದಲ್ಲಿರುವ ನನ್ನ ಹೃದಯ ಸದಾ ನಿಮ್ಮಲ್ಲೇ ನೆಲೆಗೊಂಡಿತ್ತು. (ಅದರಮೇಲೆ ಬೇರೆ ಯಾರೂ ಅಧಿಕಾರ ನಡೆಸಲಾರರು) ಆದರೂ ನನ್ನ ಶರೀರ ಪರಾಧೀನವಾಗಿತ್ತು. ಅದನ್ನು ಬೇರೆಯವರು ಸ್ಪರ್ಶಿಸಿದರೆ ವಿವಶಳಾದ ಅಬಲೆಯಾದ ನಾನು ಏನು ಮಾಡಬಲ್ಲೆ.॥9॥

ಮೂಲಮ್ - 10

ಸಹ ಸಂವೃದ್ಧಭಾವೇನ ಸಂಸರ್ಗೇಣ ಚ ಮಾನದ ।
ಯದಿತೇಽಹಂ ನ ವಿಜ್ಞಾತಾ ಹತಾ ತೇನಾಸ್ಮಿ ಶಾಶ್ವತಮ್ ॥

ಅನುವಾದ

ಇತರರಿಗೆ ಮಾನಕೊಡುವ ಪ್ರಾಣನಾಥನೇ! ನಮ್ಮಿಬ್ಬರ ಪರಸ್ಪರ ಅನುರಾಗವು ದಿನೇ ದಿನೇ ಹೆಚ್ಚುತ್ತಲೇ ಇತ್ತು. ನಾವಿಬ್ಬರೂ ಜೊತೆ ಜೊತೆಯಲ್ಲೇ ಇದ್ದೆವು. ಹೀಗಿದ್ದರೂ ನೀವು ನನ್ನನ್ನು ಚೆನ್ನಾಗಿ ತಿಳಿಯದಿದ್ದರೆ ನಾನು ಶಾಶ್ವತವಾಗಿ ಸತ್ತು ಹೋದಂತೆಯೇ ಸರಿ.॥10॥

ಮೂಲಮ್ - 11

ಪ್ರೇಷಿತಸ್ತೇ ಮಹಾ ವೀರೋ ಹನುಮಾನವಲೋಕಕಃ ।
ಲಂಕಾಸ್ಥಾಹಂ ತ್ವಯಾ ರಾಜನ್ ಕಿಂ ತದಾ ನ ವಿಸರ್ಜಿತಾ ॥

ಅನುವಾದ

ಮಹಾರಾಜರೇ! ಲಂಕೆಗೆ ನನ್ನನ್ನು ನೋಡಲು ನೀವು ಮಹಾವೀರ ಹನುಮಂತನನ್ನು ಕಳಿಸಿಕೊಟ್ಟಾಗಲೇ ನನ್ನನ್ನು ಏಕೆ ತ್ಯಜಿಸಲಿಲ್ಲ.॥11॥

ಮೂಲಮ್ - 12

ಪ್ರತ್ಯಕ್ಷಂ ವಾನರಸ್ಯಾಸ್ಯ ತ್ವದ್ವಾಕ್ಯಸಮನಂತರಮ್ ।
ತ್ವಯಾ ಸಂತ್ಯಕ್ತಯಾ ವೀರ ತ್ಯಕ್ತಂ ಸ್ಯಾಜ್ಜೀವಿತಂ ಮಯಾ ॥

ಅನುವಾದ

ಆಗ ವಾನರವೀರ ಹನುಮಂತನ ಮುಖದಿಂದ ನೀವು ತ್ಯಜಿಸಿದ ಮಾತನ್ನು ಕೇಳಿ ಕೂಡಲೇ ಅವನ ಮುಂದೆಯೇ ನಾನು ನನ್ನ ಪ್ರಾಣಗಳನ್ನು ತ್ಯಜಿಸಿಬಿಡುತ್ತಿದೆ.॥12॥

ಮೂಲಮ್ - 13

ನ ವೃಥಾ ತೇ ಶ್ರಮೋಽಯಂ ಸ್ಯಾತ್ಸಂಶಯೇ ನ್ಯಸ್ಯ ಜೀವಿತಮ್ ।
ಸುಹೃಜ್ಜನ ಪರಿಕ್ಲೇಶೋ ನ ಚಾಯಂ ವಿಫಲಸ್ತವ ॥

ಅನುವಾದ

ಮತ್ತೆ ಹೀಗೆ ತನ್ನ ಜೀವನವನ್ನು ಸಂಕಟಕ್ಕೊಡ್ಡಿ ನಿಮಗೆ ಯುದ್ಧಾದಿ ವ್ಯರ್ಥ ಪರಿಶ್ರಮ ಮಾಡಬೇಕಾಗಿರಲಿಲ್ಲ ಹಾಗೂ ನಿಮ್ಮ ಈ ಮಿತ್ರರೂ ಕೂಡ ಅಕಾರಣವಾಗಿ ಕಷ್ಟಪಡುತ್ತಿರಲಿಲ್ಲ.॥13॥

ಮೂಲಮ್ - 14

ತ್ವಯಾ ತು ನೃಪಶಾರ್ದೂಲ ರೋಷಮೇವಾನುವರ್ತತಾ ।
ಲಘುನೇವ ಮನುಷ್ಯೇಣ ಸ್ತ್ರೀತ್ವಮೇವ ಪುರಸ್ಕೃತಮ್ ॥

ಅನುವಾದ

ನೃಪಶ್ರೇಷ್ಠನೇ! ಕೋಪವನ್ನೇ ಅನುಸರಿಸುತ್ತಿರುವ ನೀವು ಪಾಮರನಾದ ಮನುಷ್ಯನಂತೆ ಸಾಧಾರಣ ಸ್ತ್ರೀಯೊಬ್ಬಳ ಚಾಪಲ್ಯವನ್ನೇ ಪುರಸ್ಕರಿಸುತ್ತಿರುವಿರಲ್ಲ.॥14॥

ಮೂಲಮ್ - 15

ಅಪದೇಶೋಮೇ ಜನಕಾನ್ನೋತ್ಪತ್ತಿರ್ವಸುಧಾತಲಾತ್ ।
ಮಮ ವೃತ್ತಂ ಚ ವೃತ್ತಜ್ಞ ಬಹು ತೇ ನ ಪುರಸ್ಕೃತಮ್ ॥

ಅನುವಾದ

ಸದಾಚಾರವನ್ನು ತಿಳಿದಿರುವವನೇ! ಯಜ್ಞಭೂಮಿಯಲ್ಲಿ ನಾನು ಜನಕನಿಗೆ ದೊರೆತ ಕಾರಣ ನಾನು ಜಾನಕಿ ಎಂಬ ಹೆಸರನ್ನು ಪಡೆದಿದ್ದೇನೆ. ವಾಸ್ತವವಾಗಿ ನಾನು ಭೂಮಿಯಿಂದ ಹುಟ್ಟಿದವಳು. ಅಯೋನಿಜೆ. ಮಾನವ ಜಾತಿಗಿಂತಲೂ ವಿಲಕ್ಷಣವಾಗಿ ಹುಟ್ಟಿದವಳು. ಅಂತೆಯೇ ನನ್ನ ಚಾರಿತ್ರ್ಯವೂ ವಿಲಕ್ಷಣವಾದುದು, ದಿವ್ಯವಾದುದು. ಇದ್ಯಾವುದನ್ನು ನೀನು ಪುರಸ್ಕರಿಸುತ್ತಿಲ್ಲವಲ್ಲ.॥15॥

ಮೂಲಮ್ - 16

ನ ಪ್ರಮಾಣೀಕೃತಃ ಪಾಣಿರ್ಬಾಲ್ಯೇ ಮಮ ನಿಪೀಡಿತಃ ।
ಮಮ ಭಕ್ತಿಶ್ಚ ಶೀಲಂ ಚ ಸರ್ವಂ ತೇ ಪೃಷ್ಠತಃ ಕೃತಮ್ ॥

ಅನುವಾದ

ಬಾಲ್ಯದಲ್ಲೇ ನೀವು ನನ್ನ ಪಾಣಿಗ್ರಹಣ ಮಾಡಿದಿರಿ, ಇದರ ಕಡೆಗೂ ಗಮನಕೊಡಲಿಲ್ಲ. ನಿಮ್ಮ ಕುರಿತು ನನ್ನ ಹೃದಯದಲ್ಲಿ ಭಕ್ತಿ, ನನ್ನಲ್ಲಿರುವ ಶೀಲ ಇವೆಲ್ಲವನ್ನು ಹಿಂದೆ ತಳ್ಳಿ, ಒಮ್ಮೆಲೇ ಮರೆತುಬಿಟ್ಟಿರಿ.॥16॥

ಮೂಲಮ್ - 17

ಇತಿ ಬ್ರುವಂತೀ ರುದತೀ ಭಾಷ್ಪಗದ್ಗದಭಾಷಿಣೀ ।
ಉವಾಚ ಲಕ್ಷ್ಮಣಂ ಸೀತಾ ದೀನಂ ಧ್ಯಾನಪರಾಯಣಮ್ ॥

ಅನುವಾದ

ಇಷ್ಟು ಹೇಳುತ್ತಾ-ಹೇಳುತ್ತಾ ಸೀತೆಯ ಗಂಟಲು ಕಟ್ಟಿಕೊಂಡಿತು. ಅವಳು ಅಳುತ್ತಾ ಕಣ್ಣೀರು ಸುರಿಸುತ್ತಾ, ದುಃಖಿತನಾಗಿ ಹಾಗೂ ಚಿಂತಾಮಗ್ನನಾಗಿ ಕುಳಿತಿರುವ ಲಕ್ಷ್ಮಣನಲ್ಲಿ ಗದ್ಗದಿತಳಾಗಿ ನುಡಿದಳು.॥17॥

ಮೂಲಮ್ - 18

ಚಿತಾಂ ಮೇ ಕುರು ಸೌಮಿತ್ರೇ ವ್ಯಸನಸ್ಯಾಸ್ಯ ಭೇಷಜಮ್ ।
ಮಿಥ್ಯಾಪವಾದೋಪಹತಾ ನಾಹಂ ಜೀವಿತುಮುತ್ಸಹೇ ॥

ಅನುವಾದ

ಸುಮಿತ್ರಾನಂದನ! ನನಗಾಗಿ ಚಿತೆಯನ್ನು ರಚಿಸು. ನನ್ನ ದುಃಖಕ್ಕೆ ಇದೇ ಮದ್ದಾಗಿದೆ. ಮಿಥ್ಯಾ ಕಲಂಕದಿಂದ ಕಳಂಕಿತಳಾಗಿ ನಾನು ಬದುಕಿರಲಾರೆ.॥18॥

ಮೂಲಮ್ - 19

ಅಪ್ರೀತೇನ ಗುಣೈರ್ಭರ್ತ್ರಾ ತ್ಯಕ್ತಾಯಾ ಜನಸಂಸದಿ ।
ಯಾ ಕ್ಷಮಾ ಮೇ ಗತಿರ್ಗಂತುಂ ಪ್ರವೇಕ್ಷ್ಯೇ ಹವ್ಯವಾಹನಮ್ ॥

ಅನುವಾದ

ನನ್ನ ಸ್ವಾಮಿ ನನ್ನ ಗುಣಗಳಿಂದ ಪ್ರಸನ್ನನಾಗಿಲ್ಲ. ಇವರು ತುಂಬಿದ ಸಭೆಯಲ್ಲಿ ನನ್ನನ್ನು ಪರಿತ್ಯಜಿಸಿದರು. ಇಂತಹ ಸ್ಥಿತಿಯಲ್ಲಿ ನನಗೆ ಉಚಿತವಾದ ಮಾರ್ಗದಲ್ಲಿ ನಡೆಯಲ್ಲಿ ನಾನು ಅಗ್ನಿಪ್ರವೇಶ ಮಾಡುವೆನು.॥19॥

ಮೂಲಮ್ - 20

ಏವಮುಕ್ತಸ್ತು ವೈದೇಹ್ಯಾ ಲಕ್ಷ್ಮಣಃ ಪರವೀರಹಾ ।
ಅಮರ್ಷವಶಮಾಪನ್ನೋ ರಾಘವಂ ಸಮುದೈಕ್ಷತ ॥

ಅನುವಾದ

ವಿದೇಹನಂದಿನಿಯು ಹೀಗೆ ಹೇಳಿದಾಗ ಶತ್ರುವೀರರನ್ನು ಸಂಹರಿಸುವ ಲಕ್ಷ್ಮಣನು ಕ್ರೋಧಾ ವಿಷ್ಟನಾಗಿ ಶ್ರೀರಾಮಚಂದ್ರನ ಕಡೆಗೆ ನೋಡಿದನು. (ಸೀತೆಯ ಆ ಅಪಮಾನವನ್ನು ಅವನಿಂದ ಸಹಿಸಲಾಗಲಿಲ್ಲ..॥20॥

ಮೂಲಮ್ - 21

ಸ ವಿಜ್ಞಾಯ ಮನಶ್ಛಂದಂ ರಾಮಸ್ಯಾಕಾರಸೂಚಿತಮ್ ।
ಚಿತಾಂ ಚಕಾರ ಸೌಮಿತ್ರಿರ್ಮತೇ ರಾಮಸ್ಯ ವೀರ್ಯವಾನ್ ॥

ಅನುವಾದ

ಆದರೆ ಶ್ರೀರಾಮನ ಮುಖಭಾವದಿಂದಲೇ ಅವನ ಹಾರ್ದಿಕ ಅಭಿಪ್ರಾಯವನ್ನು ತಿಳಿದ ಸೌಮಿತ್ರಿಯು ಅವನ ಸಮ್ಮತಿಯಿಂದಲೇ ಚಿತೆಯನ್ನು ಸಿದ್ಧಪಡಿಸಿದನು.॥21॥

ಮೂಲಮ್ - 22

ನಹಿ ರಾಮಂ ತದಾ ಕಶ್ಚಿತ್ಕಾಲಾಂತಕಯಮೋಪಮಮ್ ।
ಅನುನೇತುಮಥೋ ವಕ್ತುಂ ದ್ರಷ್ಟುಂ ವಾಪ್ಯಶಕತ್ಸುಹೃತ್ ॥

ಅನುವಾದ

ಆಗ ಶ್ರೀರಾಮನು ಪ್ರಳಯಕಾಲದ ಸಂಹಾರಕಾರೀ ಯಮ ರಾಜನಂತೆ ಜನರ ಮನಸ್ಸಿನಲ್ಲಿ ಭಯವನ್ನುಂಟುಮಾಡುತ್ತಿದ್ದನು. ಅವನ ಯಾವ ಮಿತ್ರನೂ ಕೂಡ ಅವನನ್ನು ಸಮಜಾಯಿಸಲು, ಏನಾದರೂ ಹೇಳಲು, ಅಥವಾ ಅವನ ಕಡೆಗೆ ನೋಡುವುದಕ್ಕೂ ಸಾಹಸ ಮಾಡದಾದರು.॥22॥

ಮೂಲಮ್ - 23

ಅಧೋಮುಖಂ ಸ್ಥಿತಂ ರಾಮಂ ತತಃ ಕೃತ್ವಾ ಪ್ರದಕ್ಷಿಣಮ್ ।
ಉಪಾವರ್ತತ ವೈದೇಹೀ ದೀಪ್ಯಮಾನಂ ಹುತಾಶನಮ್ ॥

ಅನುವಾದ

ಭಗವಾನ್ ಶ್ರೀರಾಮನು ತಲೆ ತಗ್ಗಿಸಿ ನಿಂತಿದ್ದನು. ಅದೇ ಸ್ಥಿತಿಯಲ್ಲಿ ಸೀತೆಯು ಅವನಿಗೆ ಪ್ರದಕ್ಷಿಣೆ ಬಂದು, ಬಳಿಕ ಪ್ರಜ್ವಲಿತ ಅಗ್ನಿಯ ಬಳಿಗೆ ನಡೆದಳು.॥23॥

ಮೂಲಮ್ - 24

ಪ್ರಣಮ್ಯ ದೇವತೇಭ್ಯಶ್ಚ ಬ್ರಾಹ್ಮಣೇಭ್ಯಶ್ಚ ಮೈಥಿಲೀ ।
ಬದ್ಧಾಂಜಲಿಪುಟಾ ಚೇದಮುವಾಚಾಗ್ನಿ ಸಮೀಪತಃ ॥

ಅನುವಾದ

ಅಲ್ಲಿ ದೇವತೆಗಳಿಗೆ, ಬ್ರಾಹ್ಮಣರಿಗೆ ನಮಸ್ಕಾರ ಮಾಡಿ ಮಿಥಿಲೇಶ ಕುಮಾರಿಯು ಕೈಮುಗಿದುಕೊಂಡು ಯಜ್ಞನಾರಾಯಣರಲ್ಲಿ ಹೀಗೆ ಪ್ರಾರ್ಥಿಸಿದಳು.॥24॥

ಮೂಲಮ್ - 25

ಯಥಾ ಮೇ ಹೃದಯಂ ನಿತ್ಯಂ ನಾಪಸರ್ಪತಿ ರಾಘವಾತ್ ।
ತಥಾ ಲೋಕಸ್ಯ ಸಾಕ್ಷೀ ಮಾಂ ಸರ್ವತಃ ಪಾತು ಪಾವಕಃ ॥

ಅನುವಾದ

ನನ್ನ ಹೃದಯ ಎಂದೂ ಒಂದು ಕ್ಷಣವಾದರೂ ಶ್ರೀರಘುನಾಥನಿಂದ ದೂರವಾಗದಿದ್ದರೆ ಸಮಸ್ತ ಜಗತ್ತಿನ ಸಾಕ್ಷಿ ಅಗ್ನಿದೇವನೇ ನನ್ನನ್ನು ರಕ್ಷಿಸು.॥25॥

ಮೂಲಮ್ - 26

ಯಥಾ ಮಾಂ ಶುದ್ಧ ಚಾರಿತ್ರಾಂ ದುಷ್ಟಾಂ ಜಾನಾತಿ ರಾಘವಃ ।
ತಥಾ ಲೋಕಸ್ಯ ಸಾಕ್ಷೀ ಮಾಂ ಸರ್ವತಃ ಪಾತು ಪಾವಕಃ ॥

ಅನುವಾದ

ಶ್ರೀರಾಮನು ಭಾವಿಸಿರುವಂತೆ ನಾನು ದೂಷಿತ ಳಾಗಿರದೆ ಶುದ್ಧಚಾರಿತ್ರ್ಯವುಳ್ಳವಳಾಗಿದ್ದರೆ ಲೋಕಸಾಕ್ಷಿಯಾದ ಅಗ್ನಿದೇವನು ನನ್ನನ್ನು ಸರ್ವರೀತಿಗಳಲ್ಲಿ ರಕ್ಷಿಸಲಿ.॥26॥

ಮೂಲಮ್ - 27

ಕರ್ಮಣಾ ಮನಸಾ ವಾಚಾ ಯಥಾ ನಾತಿಚರಾಮ್ಯಹಮ್ ।
ರಾಘವಂ ಸರ್ವಧರ್ಮಜ್ಞಂ ತಥಾ ಮಾಂ ಪಾತು ಪಾವಕಃ ॥

ಅನುವಾದ

ನಾನು ಮನಸ್ಸು, ವಾಣಿ, ಕ್ರಿಯೆಯಿಂದ ಎಂದಿಗೂ ಧರ್ಮಜ್ಞ ಶ್ರೀರಘುನಾಥನನ್ನು ಅತಿಕ್ರಮಿಸಲಿಲ್ಲವಾದರೆ ಅಗ್ನಿದೇವನೇ ನನ್ನನ್ನು ರಕ್ಷಿಸು.॥27॥

ಮೂಲಮ್ - 28

ಆದಿತ್ಯೋ ಭಗವಾನ್ವಾಯುರ್ದಿಶಶ್ಚಂದ್ರಸ್ತಥೈವ ಚ ।
ಅಹಶ್ಚಾಪಿ ತಥಾ ಸಂಧ್ಯೇ ರಾತ್ರಿಶ್ಚ ಪೃಥಿವೀ ತಥಾ ।
ಯಥಾನ್ಯೇಽಪಿ ವಿಜಾನಂತಿ ತಥಾ ಚಾರಿತ್ರ ಸಂಯುತಾಮ್ ॥

ಅನುವಾದ

ಭಗವಾನ್ ಸೂರ್ಯ, ವಾಯು, ದಿಕ್ಕುಗಳು, ಚಂದ್ರ, ಹಗಲು, ರಾತ್ರೆ, ಎರಡೂ ಸಂಧ್ಯೆಗಳು, ಪೃಥಿವಿದೇವಿ ಹಾಗೂ ಇತರ ದೇವತೆಗಳೂ ಕೂಡ ನಾನು ಶುದ್ಧಚಾರಿತ್ರ್ಯವುಳ್ಳವಳೆಂದು ತಿಳಿದಿದ್ದರೆ ಅಗ್ನಿದೇವನು ನನ್ನನ್ನು ಎಲ್ಲ ರೀತಿಯಿಂದ ರಕ್ಷಿಸಲಿ.॥28॥

ಮೂಲಮ್ - 29

ಏವಮುಕ್ತ್ವಾ ತು ವೈದೇಹೀ ಪರಿಕ್ರಮ್ಯ ಹುತಾಶನಮ್ ।
ವಿವೇಶ ಜ್ವಲನಂ ದೀಪ್ತಂ ನಿಃಶಂಕೇನಾಂತರಾತ್ಮನಾ ॥

ಅನುವಾದ

ಹೀಗೆ ಹೇಳಿ ವೈದೇಹಿಯು ಅಗ್ನಿದೇವನಿಗೆ ಪ್ರದಕ್ಷಣೆ ಮಾಡಿ, ನಿಃಶಂಕವಾದ ಮನಸ್ಸಿನಿಂದ ಆ ಪ್ರಜ್ವಲಿತ ಅಗ್ನಿಯಲ್ಲಿ ಪ್ರವೇಶಿಸಿದಳು.॥29॥

ಮೂಲಮ್ - 30

ಜನಶ್ಚ ಸುಮಹಾಂಸ್ತತ್ರ ಬಾಲವೃದ್ಧ ಸಮಾಕುಲಃ ।
ದದರ್ಶಮೈಥಿಲೀಂ ದೀಪ್ತಾಂ ಪ್ರವಿಶಂತೀಂ ಹುತಾಶನಮ್ ॥

ಅನುವಾದ

ಬಾಲಕರು, ವೃದ್ಧರೂ ತುಂಬಿದ ಅಲ್ಲಿಯ ಮಹಾ ಜನಸಮುದಾಯವು ಆ ದೀಪ್ತಿಮತಿ ಸೀತೆಯು ಉರಿಯುವ ಅಗ್ನಿಯನ್ನು ಪ್ರವೇಶಿಸಿದುದನ್ನು ನೋಡಿದರು.॥30॥

ಮೂಲಮ್ - 31

ಸಾ ತಪ್ತನವಹೇಮಾಭಾ ತಪ್ತಕಾಂಚನಭೂಷಣಾ ।
ಪಪಾತ ಜ್ವಲನಂ ದೀಪ್ತಂ ಸರ್ವಲೋಕಸ್ಯ ಸನ್ನಿಧೌ ॥

ಅನುವಾದ

ಪುಟಕ್ಕೆ ಹಾಕಿದ ಚಿನ್ನದಂತೆ ಕಾಂತಿಯುಳ್ಳ ಸೀತೆಯು, ಶುದ್ಧಗೊಳಿಸಿದ ಚಿನ್ನದ ಆಭರಣಗಳನ್ನು ಧರಿಸಿದ್ದ ಆಕೆಯು ಎಲ್ಲ ಜನರು ಹತ್ತಿರದಿಂದ ನೋಡುನೋಡುತ್ತಾ ಆ ಉರಿಯುವ ಅಗ್ನಿಯಲ್ಲಿ ಹಾರಿದಳು.॥31॥

ಮೂಲಮ್ - 32

ದದೃಶುಸ್ತಾಂ ವಿಶಾಲಾಕ್ಷೀಂ ಪತಂತೀಂ ಹವ್ಯವಾಹನಮ್ ।
ಸೀತಾಂ ಸರ್ವಾಣಿ ರೂಪಾಣಿ ರುಕ್ಮವೇದಿನಿಭಾಂ ತದಾ ॥

ಅನುವಾದ

ಸ್ವರ್ಣನಿರ್ಮಿತ ವೇದಿಯಂತೆ ಕಾಂತಿಯುಳ್ಳ ವಿಶಾಲಲೋಚನೆ ಸೀತಾದೇವಿಯು ಅಗ್ನಿಯಲ್ಲಿ ಬೀಳುತ್ತಿರುವುದನ್ನು ಆಗ ಸಮಸ್ತ ಪ್ರಾಣಿಗಳು ನೋಡಿದರು.॥32॥

ಮೂಲಮ್ - 33

ದದೃಶುಸ್ತಾಂ ಮಹಾಭಾಗಾಂ ಪ್ರವಿಶಂತೀಂ ಹುತಾಶನಮ್ ।
ಋಷಯೋ ದೇವಗಂಧರ್ವಾ ಯಜ್ಞೇ ಪೂರ್ಣಾಹುತೀಮಿವ ॥

ಅನುವಾದ

ಯಜ್ಞದಲ್ಲಿ ಪೂರ್ಣಾಹುತಿಯು ಅಗ್ನಿಯಲ್ಲಿ ಬೀಳುವಂತೆ ಮಹಾಭಾಗಾ ಸೀತೆಯು ಪ್ರಜ್ವಲಿತ ಅಗ್ನಿಯನ್ನು ಪ್ರವೇಶಿಸುವುದನ್ನು ಋಷಿಗಳು, ದೇವತೆಗಳು, ಗಂಧರ್ವರೂ ನೋಡಿದರು.॥33॥

ಮೂಲಮ್ - 34

ಪ್ರಚುಕ್ರುಶುಃ ಸ್ತ್ರಿಯಃ ಸರ್ವಾಸ್ತಾಂದೃಷ್ಟ್ವಾ ಹವ್ಯವಾಹನೇ ।
ಪತಂತೀಂ ಸಂಸ್ಕೃತಾಂ ಮಂತ್ರೈರ್ವಸೋರ್ಧಾರಾಮಿವಾಧ್ವರೇ ॥

ಅನುವಾದ

ಯಜ್ಞದಲ್ಲಿ ಮಂತ್ರಗಳಿಂದ ಸಂಸ್ಕೃತವಾದ ವಸೋರ್ಧಾರೆಯು ಯಜ್ಞನಾರಾಯಣನಲ್ಲಿ ಬೀಳುವಂತೆ ದಿವ್ಯಆಭೂಷಣಗಳಿಂದ ಅಲಂಕೃತ ಸೀತೆಯು ಬೆಂಕಿಗೆ ಬೀಳುವುದನ್ನು ನೋಡಿ ಅಲ್ಲಿಗೆ ಬಂದಿರುವ ಎಲ್ಲ ಸ್ತ್ರೀಯರು ಕೂಗಿಕೊಂಡರು.॥34॥

ಮೂಲಮ್ - 35

ದದೃಶುಸ್ತಾಂ ತ್ರಯೋ ಲೋಕಾ ದೇವಗಂಧರ್ವ ದಾನವಾಃ ।
ಶಪ್ತಾಂ ಪತಂತೀಂ ನಿರಯೇ ತ್ರಿದಿವಾದ್ದೇವತಾಮಿವ ॥

ಅನುವಾದ

ಶಾಪಗ್ರಸ್ತಳಾದ ದೇವತೆಯೊಬ್ಬಳು ನರಕಕ್ಕೆ ಬೀಳುವಂತೆ ಭಗವತಿ ಸೀತೆಯು ಅಗ್ನಿಯಲ್ಲಿ ಬೀಳುವುದನ್ನು ಮೂರು ಲೋಕಗಳ ದಿವ್ಯಪ್ರಾಣಿಗಳು, ಋಷಿಗಳು, ದೇವತೆಗಳು, ಗಂಧರ್ವರು, ದಾನವರು ನೋಡಿದರು.॥35॥

ಮೂಲಮ್ - 36

ತಸ್ಯಾಮಗ್ನಿಂ ವಿಶಂತ್ಯಾಂ ತು ಹಾಹೇತಿ ವಿಪುಲಃ ಸ್ವನಃ ।
ರಕ್ಷಸಾಂ ವಾನರಾಣಾಂ ಚ ಸಂಬಭೂವಾದ್ಭುತೋಪಮಃ ॥

ಅನುವಾದ

ಸೀತೆಯು ಅಗ್ನಿಯಲ್ಲಿ ಪ್ರವೇಶಿಸುವಾಗ ರಾಕ್ಷಸರು ಮತ್ತು ವಾನರರು ಜೋರಾಗಿ ಹಾಹಾಕಾರ ಮಾಡತೊಡಗಿದರು. ಅವರ ಆ ಅರ್ತನಾದ ಎಲ್ಲೆಡೆ ಪ್ರತಿಧ್ವನಿಸಿತು.॥36॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರಹದಿನಾರನೆಯ ಸರ್ಗ ಪೂರ್ಣವಾಯಿತು.॥116॥