वाचनम्
ಭಾಗಸೂಚನಾ
ಶ್ರೀರಾಮನು ಸೀತೆಯನ್ನು ಪರಿಗ್ರಹಿಸಲು ನಿರಾಕರಿಸುದುದು
ಮೂಲಮ್ - 1
ತಾಂ ತು ಪಾರ್ಶ್ವೇ ಸ್ಥಿತಾಂ ಪ್ರಹ್ವಾಂ ರಾಮಃ ಸಂಪ್ರೇಕ್ಷ್ಯ ಮೈಥಿಲೀಮ್ ।
ಹೃದಯಾಂತರ್ಗತಂ ಭಾವಂ ವ್ಯಾಹರ್ತುಮುಪಚಕ್ರಮೇ ॥
ಅನುವಾದ
ಮಿಥಿಲೇಶಕುಮಾರಿಯು ವಿನಯಪೂರ್ವಕವಾಗಿ ತನ್ನ ಬಳಿಯಲ್ಲಿ ನಿಂತಿರುವುದನ್ನು ನೋಡಿ ಶ್ರೀರಾಮಚಂದ್ರನು ತನ್ನ ಹಾರ್ದಿಕ ಅಭಿಪ್ರಾಯವನ್ನು ತಿಳಿಸತೊಡಗಿದನು.॥1॥
ಮೂಲಮ್ - 2
ಏಷಾಸಿ ನಿರ್ಜಿತಾ ಭದ್ರೇ ಶತ್ರುಂ ಜಿತ್ವಾ ರಣಾಜಿರೇ ।
ಪೌರುಷಾದ್ಯದನುಷ್ಠೇಯಂ ಮಯೈತದುಪಪಾದಿತಮ್ ॥
ಅನುವಾದ
ಮಂಗಳ ಸ್ವರೂಪಳೇ! ಸಮರಾಂಗಣದಲ್ಲಿ ಶತ್ರುವನ್ನು ಪರಾಜಿತಗೊಳಿಸಿ ನಾನು ನಿನ್ನನ್ನು ಅವನ ಸೆರೆಯಿಂದ ಬಿಡಿಸಿದೆ. ಪುರುಷಾರ್ಥದಿಂದ ಏನೆಲ್ಲ ಮಾಡಬಹುದೋ, ಅದೆಲ್ಲವನ್ನೂ ನಾನು ಮಾಡಿರುವೆನು.॥2॥
ಮೂಲಮ್ - 3
ಗತೋಽಸ್ಮ್ಯಂತಮಮರ್ಷಸ್ಯ ಧರ್ಷಣಾ ಸಂಪ್ರಮಾರ್ಜಿತಾ ।
ಅವಮಾನಶ್ಚ ಶತ್ರುಶ್ಚ ಯುಗಪನ್ನಿಹತೌ ಮಯಾ ॥
ಅನುವಾದ
ಈಗ ನನ್ನ ಕ್ರೋಧದ ಅಂತ್ಯವಾಯಿತು. ನನ್ನ ಮೇಲೆ ಬಂದ ಕಲಂಕವನ್ನು ನಾನು ನಿರಾಕರಿಸಿದೆ. ಶತ್ರುವಿನಿಂದಾದ ಅಪಮಾನ ಮತ್ತು ಶತ್ರುವನ್ನು ಒಟ್ಟಿಗೆ ನಾಶಮಾಡಿಬಿಟ್ಟೆ.॥3॥
ಮೂಲಮ್ - 4
ಅದ್ಯ ಮೇ ಪೌರುಷಂ ದೃಷ್ಟಮದ್ಯ ಮೇ ಸಫಲಃ ಶ್ರಮಃ ।
ಅದ್ಯ ತೀರ್ಣಪ್ರತಿಜ್ಞೋಽಹಂ ಪ್ರಭವಾಮ್ಯದ್ಯಚಾತ್ಮನಃ ॥
ಅನುವಾದ
ಇಂದು ಎಲ್ಲರೂ ನನ್ನ ಪರಾಕ್ರಮ ನೋಡಿದರು. ಈಗ ನನ್ನ ಪರಿಶ್ರಮ ಸಫಲವಾಯಿತು. ಈಗ ನಾನು ಪ್ರತಿಜ್ಞೆಯನ್ನು ಪೂರ್ಣಗೊಳಿಸಿ, ಅದರ ಭಾರಮುಕ್ತನಾಗಿ ಸ್ವತಂತ್ರನಾದೆನು.॥4॥
ಮೂಲಮ್ - 5
ಯಾ ತ್ವಂ ವಿರಹಿತಾ ನೀತಾ ಚಲಚಿತ್ತೇನ ರಕ್ಷಸಾ ।
ದೈವಸಂಪಾದಿತೋ ದೋಷೋ ಮಾನುಷೇಣ ಮಯಾ ಜಿತಃ ॥
ಅನುವಾದ
ನೀನು ಆಶ್ರಮದಲ್ಲಿ ಒಬ್ಬಂಟಿಗಳಾಗಿದ್ದಾಗ ಆ ಚಂಚಲಚಿತ್ತ ರಾಕ್ಷಸನು ನಿನ್ನನ್ನು ಕದ್ದು ತಂದಿದ್ದ ಈ ದೋಷ ದೈವವಶದಿಂದ ನನ್ನ ಮೇಲೆ ಬಂದಿತ್ತು. ಅದನ್ನು ನಾನು ಮಾವನಸಾಧ್ಯ ಪುರುಷಾರ್ಥದಿಂದ ತೊಳೆದು ಹಾಕಿದೆ.॥5॥
ಮೂಲಮ್ - 6
ಸಂಪ್ರಾಪ್ತಮವಮಾನಂ ಯಸ್ತೇಜಸಾ ನ ಪ್ರಮಾರ್ಜತಿ ।
ಕಸ್ತಸ್ಯ ಪೌರುಷೇಣಾರ್ಥೋ ಮಹತಾಪ್ಯಲ್ಪತೇಜಸಃ ॥
ಅನುವಾದ
ಯಾವ ಮನುಷ್ಯನು ತನಗಾದ ಅಪಮಾನವನ್ನು ತನ್ನ ತೇಜ-ಬಲದಿಂದ ತೊಡೆದುಹಾಕುವುದಿಲ್ಲವೋ, ಆ ಮಂದ ಬುದ್ಧಿಯ ಮಾನವನ ಮಹಾಪುರುಷಾರ್ಥದಿಂದಲಾದರೂ ಏನು ಲಾಭವಿದೆ.॥6॥
ಮೂಲಮ್ - 7
ಲಂಘನಂ ಚ ಸಮುದ್ರಸ್ಯ ಲಂಕಾಯಾಶ್ಚಾಪಿ ಮರ್ದನಮ್ ।
ಸಫಲಂ ತಸ್ಯ ಚ ಶ್ಲಾಘ್ಯಮದ್ಯ ಕರ್ಮ ಹನೂಮತಃ ॥
ಅನುವಾದ
ಹನುಮಂತನು ಸಮುದ್ರವನ್ನು ಲಂಘಿಸಿ, ಲಂಕೆಯ ವಿಧ್ವಂಸ ಮಾಡಿದ ಅವನ ಪ್ರಶಂಸನೀಯ ಕಾರ್ಯ ಇಂದು ಸಫಲವಾಯಿತು.॥7॥
ಮೂಲಮ್ - 8
ಯುದ್ಧೇ ವಿಕ್ರಮತಶ್ಚೈವ ಹಿತಂ ಮಂತ್ರಯತಸ್ತಥಾ ।
ಸುಗ್ರೀವಸ್ಯ ಸಸೈನ್ಯಸ್ಯ ಸಫಲೋಽದ್ಯ ಪರಿಶ್ರಮಃ ॥
ಅನುವಾದ
ಸೈನ್ಯಸಹಿತ ಸುಗ್ರೀವನು ಯುದ್ಧದಲ್ಲಿ ಪರಾಕ್ರಮ ತೋರಿಸಿ, ಆಗಾಗ ನನಗೆ ಹಿತಕರ ಸಲಹೆ ಕೊಡುತ್ತಾ ಇದ್ದನು. ಅವನ ಪರಿಶ್ರಮವೂ ಈಗ ಸಾರ್ಥಕವಾಯಿತು.॥8॥
ಮೂಲಮ್ - 9
ವಿಭೀಷಣಸ್ಯ ಚ ತಥಾ ಸಫಲೋಽದ್ಯ ಪರಿಶ್ರಮಃ ।
ವಿಗುಣಂ ಭ್ರಾತರಂ ತ್ಯಕ್ತ್ವಾ ಯೋ ಮಾಂ ಸ್ವಯಮುಪಸ್ಥಿತಃ ॥
ಅನುವಾದ
ಈ ವಿಭೀಷಣನು ದುರ್ಗುಣಗಳಿಂದ ತುಂಬಿ ತನ್ನ ಅಣ್ಣನನ್ನು ತ್ಯಜಿಸಿ ನನ್ನ ಬಳಿ ಉಪಸ್ಥಿತನಾದನು. ಇಷ್ಟರವರೆಗೆ ಇವನು ಮಾಡಿದ ಪರಿಶ್ರಮ ನಿಷ್ಪಲವಾಗಲಿಲ್ಲ.॥9॥
ಮೂಲಮ್ - 10
ಇತ್ಯೇವಂ ವದತಃ ಶ್ರುತ್ವಾ ಸೀತಾರಾಮಸ್ಯ ತದ್ವಚಃ ।
ಮೃಗೀವೋತ್ಫುಲ್ಲನಯನಾ ಬಭೂವಾಶ್ರುಪರಿಪ್ಲುತಾ ॥
ಅನುವಾದ
ಹೀಗೆ ಹೇಳುತ್ತಿರುವ ಶ್ರೀರಾಮನ ಮಾತುಗಳನ್ನು ಕೇಳಿ ಚಿಗರೆಯಂತೆ ವಿಕಸಿತ ಕಣ್ಣುಗಳುಳ್ಳ ಸೀತೆಯ ಕಣ್ಣುಗಳಲ್ಲಿ ನೀರು ತುಂಬಿ ಬಂತು.॥10॥
ಮೂಲಮ್ - 11
ಪಶ್ಯತಸ್ತಾಂ ತು ರಾಮಸ್ಯ ಸಮೀಪೇಹೃದಯಪ್ರಿಯಾಮ್ ।
ಜನವಾದಭಯಾದ್ರಾಜ್ಞೋ ಬಭೂವ ಹೃದಯಂ ದ್ವಿಧಾ ॥
ಅನುವಾದ
ಅವಳು ತನ್ನ ಸ್ವಾಮಿಯ ಹೃದಯವಲ್ಲಭೆಯಾಗಿದ್ದಳು. ಆಕೆಯ ಪ್ರಾಣವಲ್ಲಭನು ಅವಳನ್ನು ಸಮೀಪದಲ್ಲೇ ನೋಡುತ್ತಿದ್ದರೂ ಲೋಕಾಪವಾದದ ಭಯದಿಂದ ರಾಜಾ ಶ್ರೀರಾಮನ ಹೃದಯ ಆಗ ವಿದೀರ್ಣದಂತಾಗಿತ್ತು.॥11॥
ಮೂಲಮ್ - 12
ಸೀತಾಮುತ್ಪಲ ಪತ್ರಾಕ್ಷೀಂ ನೀಲಕುಂಚಿತ ಮೂರ್ಧಜಾಮ್ ।
ಅವದದ್ವೈ ವರಾರೋಹಾಂ ಮಧ್ಯೇ ವಾನರರಕ್ಷಸಾಮ್ ॥
ಅನುವಾದ
ಕಪ್ಪಾದ ಗುಂಗುರು ಕೂದಲುಗಳುಳ್ಳ ಕಮಲಲೋಚನೆಯಾದ ಸುಂದರೀ ಸೀತೆಯಲ್ಲಿ ವಾನರರು ಮತ್ತು ರಾಕ್ಷಸರು ತುಂಬಿದ ಸಭೆಯಲ್ಲಿ ಪುನಃ ಹೀಗೆ ಹೇಳತೊಡಗಿದನು.॥12॥
ಮೂಲಮ್ - 13
ಯತ್ಕರ್ತವ್ಯಂ ಮನುಷ್ಯೇಣ ಧರ್ಷಣಾಂ ಪ್ರತಿಮಾರ್ಜತಾ ।
ತತ್ಕೃತಂ ರಾವಣಂ ಹತ್ವಾ ಮಯೇದಂ ಮಾನಕಾಂಕ್ಷಿಣಾ ॥
ಅನುವಾದ
ತನ್ನ ತಿರಸ್ಕಾರದ ಪ್ರತಿಕಾರ ಮಾಡಲು ಯಾವ ಮನುಷ್ಯನ ಕರ್ತವ್ಯವಿದೆಯೋ, ಅವೆಲ್ಲವನ್ನು ನಾನು ನನ್ನ ಮಾನರಕ್ಷಣೆಗಾಗಿ ಅಭಿಲಾಷೆಯಿಂದ ರಾವಣನ ವಧೆಮಾಡಿ ಪೂರ್ಣಗೊಳಿಸಿದೆ.॥13॥
ಮೂಲಮ್ - 14
ನಿರ್ಜಿತಾ ಜೀವಲೋಕಸ್ಯ ತಪಸಾ ಭಾವಿತಾತ್ಮನಾ ।
ಅಗಸ್ತ್ಯೇನ ದುರಾಧರ್ಷಾ ಮುನಿನಾ ದಕ್ಷಿಣೇವ ದಿಕ್ ॥
ಅನುವಾದ
ತಪಸ್ಸಿನಿಂದ ಸಂಭಾವಿತವಾದ ಅಂತಃಕರಣವುಳ್ಳ ಮಹರ್ಷಿ ಅಗಸ್ತ್ಯರು ವಾತಾಪಿ ಮತ್ತು ಇಲ್ಪಲರ ಭಯಗೊಂಡ ಜೀವ ಜಗತ್ತಿಗಾಗಿ ದುರ್ಗಮವಾದ ದಕ್ಷಿಣ ದಿಕ್ಕನ್ನು ಗೆದ್ದಂತೆಯೇ ನಾನು ರಾವಣನ ವಶದಲ್ಲಿ ಇದ್ದ ನಿನ್ನನ್ನು ಗೆದ್ದುಕೊಂಡಿದ್ದೇನೆ.॥14॥
ಮೂಲಮ್ - 15
ವಿದಿತಶ್ಚಾಸ್ತು ಭದ್ರಂ ತೇ ಯೋಽಯಂ ರಣಪರಿಶ್ರಮಃ ।
ಸುತೀರ್ಣಃ ಸುಹೃದಾಂ ವೀರ್ಯಾನ್ನ ತ್ವದರ್ಥಂ ಮಯಾ ಕೃತಃ ॥
ಅನುವಾದ
ನಿನಗೆ ಮಂಗಳವಾಗಲಿ. ನಾನು ಮಾಡಿದ ಯುದ್ಧದ ಪರಿಶ್ರಮ ಹಾಗೂ ಈ ಮಿತ್ರರ ಪರಾಕ್ರಮದಿಂದ ಪಡೆದ ವಿಜಯ, ಇದೆಲ್ಲ ನಿನ್ನನ್ನು ಪಡೆಯಲು ಅಲ್ಲವೆಂಬುದನ್ನು ನೀನು ತಿಳಿದುಕೊಳ್ಳಬೇಕು.॥15॥
ಮೂಲಮ್ - 16
ರಕ್ಷತಾ ತು ಮಯಾ ವೃತ್ತಮಪವಾದಂ ಚ ಸರ್ವತಃ ।
ಪ್ರಖ್ಯಾತಸ್ಯಾತ್ಮವಂಶಸ್ಯ ನ್ಯಂಗಂ ಚ ಪರಿಮಾರ್ಜತಾ ॥
ಅನುವಾದ
ಸದಾಚಾರದ ರಕ್ಷಣೆ, ಎಲ್ಲೆಡೆ ಹರಡಿದ ಅಪವಾದದ ನಿವಾರಣ ಮತ್ತು ನಮ್ಮ ಸುವಿಖ್ಯಾತ ವಂಶಕ್ಕೆ ತಗಲಿದ ಕಲಂಕವನ್ನು ನಿವಾರಿಸಲೆಂದೇ ನಾನು ಇದೆಲ್ಲ ಮಾಡಿರುವೆನು.॥16॥
ಮೂಲಮ್ - 17
ಪ್ರಾಪ್ತಚಾರಿತ್ರ ಸಂದೇಹಾ ಮಮ ಪ್ರತಿಮುಖೇ ಸ್ಥಿತಾ ।
ದೀಪೋ ನೇತ್ರಾತುರಸ್ಯೇವ ಪ್ರತಿಕೂಲಾಸಿ ಮೇ ದೃಢಾ ॥
ಅನುವಾದ
ನಿನ್ನ ಚಾರಿತ್ರ್ಯದಲ್ಲಿ ಸಂದೇಹ ಉಪಸ್ಥಿತವಾಗಿದೆ, ಹೀಗಿರುವಾಗಲೂ ನನ್ನ ಎದುರಿಗೆ ನಿಂತಿರುವೆಯಲ್ಲ! ಕಣ್ಣಿನ ರೋಗಿಗೆ ದೀಪವು ಸಹ್ಯವಾಗದಂತೆ ಇಂದು ನೀನು ನನಗೆ ಅತ್ಯಂತ ಅಪ್ರಿಯವಾಗಿ ಕಾಣುತ್ತಿರುವೆ.॥17॥
ಮೂಲಮ್ - 18
ತದ್ಗಚ್ಛ ತ್ವಾನುಜಾನೇಽದ್ಯ ಯಥೇಷ್ಟಂ ಜನಕಾತ್ಮಜೇ ।
ಏತಾ ದಶ ದಿಶೋ ಭದ್ರೇ ಕಾರ್ಯಮಸ್ತಿ ನ ಮೇ ತ್ವಯಾ ॥
ಅನುವಾದ
ಅದ್ದರಿಂದ ಜನಕಕುಮಾರೀ! ನೀನು ಬಯಸಿದ್ದಲ್ಲಿಗೆ ಹೊರಟು ಹೋಗು. ನಾನು ನಿನಗೆ ಅನುಮತಿಕೊಡುತ್ತಿದ್ದೇನೆ. ಭದ್ರೆ! ದಶದಿಕ್ಕುಗಳೂ ನಿನಗಾಗಿ ತೆರೆದುಕೊಂಡಿವೆ. ಈಗ ನಿನ್ನಿಂದ ನನಗೆ ಯಾವ ಪ್ರಯೋಜನವೂ ಇಲ್ಲ.॥18॥
ಮೂಲಮ್ - 19
ಕಃ ಪುಮಾಂಸ್ತು ಕುಲೇ ಜಾತಃ ಸ್ತ್ರಿಯಂ ಪರಗೃಹೋಷಿತಾಮ್ ।
ತೇಜಸ್ವೀ ಪುನರಾದದ್ಯಾತ್ ಸುಹೃಲ್ಲೋಭೇನ ಚೇತಸಾ ॥
ಅನುವಾದ
ಸತ್ಕುಲ ಪ್ರಸೂತನಾದ ಮತ್ತು ಪರಾಕ್ರಮಿಯಾದ ಯಾವ ಮನುಷ್ಯನು ತಾನೇ ಪರಪುರುಷನ ಮನೆಯಲ್ಲಿ ಬಹಳ ದಿವಸವಿದ್ದ ಸ್ತ್ರೀಯನ್ನು ಇವಳು ನನ್ನೊಡನೆ ಚಿರಕಾಲವಿದ್ದವಳು, ನನಗೆ ಅತ್ಯಂತ ಪ್ರಿಯಳಾಗಿದ್ದಾಳೆ ಎಂಬ ಲೋಭದಿಂದ ಕೂಡಿದ ಮನಸ್ಸಿನಿಂದ ಪರಿಗ್ರಹಿಸುವನು.॥19॥
ಮೂಲಮ್ - 20
ರಾವಣಾಂಕ ಪರಿಕ್ಲಿಷ್ಟಾಂ ದೃಷ್ಟಾಂ ದುಷ್ಟೇನ ಚಕ್ಷುಷಾ ।
ಕಥಂ ತ್ವಾಂ ಪುನರಾದದ್ಯಾಂ ಕುಲಂ ವ್ಯಪದಿಶನ್ಮಹತ್ ॥
ಅನುವಾದ
ರಾವಣನು ನಿನ್ನನ್ನು ಎತ್ತಿಕೊಂಡು ಹೋದನು ಹಾಗೂ ನಿನ್ನ ಮೇಲೆ ದೂಷಿತ ದೃಷ್ಟಿಯನ್ನು ಬೀರಿರುವನು. ಇಂತಹ ಸ್ಥಿತಿಯಲ್ಲಿ ನನ್ನ ಕುಲವನ್ನು ಮಹಾವೆಂದು ಹೇಳುವ ನಾನು ನಿನ್ನನ್ನು ಹೇಗೆ ಪುನಃ ಪರಿಗ್ರಹಿಸಲಿ.॥20॥
ಮೂಲಮ್ - 21
ಯದರ್ಥಂ ನಿರ್ಜಿತಾ ಮೇ ತ್ವಂ ಸೋಽಯಮಾಸಾದಿತೋ ಮಯಾ ।
ನಾಸ್ತಿ ಮೇ ತ್ವಯ್ಯಭಿಷ್ವಂಗೋ ಯಥೇಷ್ಟಂ ಗಮ್ಯತಾಮಿತಿ ॥
ಅನುವಾದ
ಯಾವ ಉದ್ದೇಶದಿಂದ ನಾನು ನಿನ್ನನ್ನು ಗೆದ್ದಿದ್ದೆನೋ, ಅದು ಸಿದ್ಧ ವಾಯಿತು. ನನ್ನ ಕುಲದ ಕಳಂಕ ತೊಳೆದುಹೋಯಿತು. ಈಗ ನನಗೆ ನಿನ್ನ ಕುರಿತು ಮಮತೆ, ಆಸಕ್ತಿ ಇಲ್ಲ, ಆದ್ದರಿಂದ ನೀನು ಬಯಸಿದಲ್ಲಿಗೆ ಹೋಗಬಲ್ಲೆ.॥21॥
ಮೂಲಮ್ - 22
ತದದ್ಯ ವ್ಯಾಹೃತಂ ಭದ್ರೇ ಮಯೈತತ್ ಕೃತಬುದ್ಧಿನಾ ।
ಲಕ್ಷ್ಮಣೇವಾಥ ಭರತೇ ಕುರು ಬುದ್ಧಿಂ ಯಥಾಸುಖಮ್ ॥
ಅನುವಾದ
ಭದ್ರೆ! ಇದು ನನ್ನ ನಿಶ್ಚಿತ ವಿಚಾರವಾಗಿದೆ. ಇದಕ್ಕನುಸಾರವೇ ಇಂದು ನಾನು ನಿನ್ನ ಮುಂದೆ ಈ ಮಾತುಗಳನ್ನು ಹೇಳಿರುವೆನು. ನೀನು ಬಯಸಿದರೆ ಭರತ ಅಥವಾ ಲಕ್ಷ್ಮಣನ ರಕ್ಷಣೆಯಲ್ಲಿ ಸುಖವಾಗಿ ಇರುವ ವಿಚಾರ ಮಾಡಬಲ್ಲೆ.॥22॥
ಮೂಲಮ್ - 23
ಶತ್ರುಘ್ನೇ ವಾಥ ಸುಗ್ರೀವೇ ರಾಕ್ಷಸೇಂದ್ರೇ ವಿಭೀಷಣೇ ।
ನಿವೇಶಯ ಮನಃ ಸೀತೇ ಯಥಾ ವಾ ಸುಖಮಾತ್ಮನಾ ॥
ಅನುವಾದ
ಸೀತೇ! ನೀನು ಬಯಸುವೆಯಾದರೆ ಶತ್ರುಘ್ನ, ವಾನರರಾಜ ಸುಗ್ರೀವ ಅಥವಾ ರಾಕ್ಷಸರಾಜಾ ವಿಭೀಷಣನ ಬಳಿಯಲ್ಲಿಯೂ ಇರಬಲ್ಲೆ. ನಿನಗೆ ಸುಖಸಿಗುವಲ್ಲಿ ನಿನ್ನ ಮನಸ್ಸನ್ನು ತೊಡಗಿಸು.॥23॥
ಮೂಲಮ್ - 24
ನಹಿ ತ್ವಾಂ ರಾವಣೋ ದೃಷ್ಟ್ವಾ ದಿವ್ಯರೂಪಾಂ ಮನೋರಮಾಮ್ ।
ಮರ್ಷಯೇತ ಚಿರಂ ಸೀತೇ ಸ್ವಗೃಹೇ ಪರ್ಯವಸ್ಥಿತಾಮ್ ॥
ಅನುವಾದ
ಸೀತೇ! ನಿನ್ನಂತಹ ದಿವ್ಯರೂಪ ಸೌಂದರ್ಯದಿಂದ ಸುಶೋಭಿತ ಮನೋರಮ ನಾರಿಯು ತನ್ನ ಮನೆಯಲ್ಲಿರುವುದನ್ನು ನೋಡಿ ರಾವಣನು ಚಿರಕಾಲ ನಿನ್ನಿಂದ ದೂರವುಳಿಯುವ ಕಷ್ಟವನ್ನು ಸಹಿಸುತ್ತಿರಲಿಲ್ಲವೇನೋ.॥24॥
ಮೂಲಮ್ - 25
ತತಃ ಪ್ರಿಯಾರ್ಹಶ್ರವಣಾ ತದಪ್ರಿಯಂ
ಪ್ರಿಯಾದುಪಶ್ರುತ್ಯಚಿರಸ್ಯಮಾನಿನೀ ।
ಮುಮೋಚಭಾಷ್ಪಂ ರುದತೀ ತದಾ ಭೃಶಂ
ಗಜೇಂದ್ರಹಸ್ತಾಭಿಹತೇವ ವಲ್ಲರೀ ॥
ಅನುವಾದ
ಸದಾ ಪ್ರಿಯವಾದ ಮಾತುಗಳನ್ನು ಕೇಳಲು ಯೋಗ್ಯನಾಗಿದ್ದ ಮಾನಿನೀ ಸೀತೆಯು ಬಹಳ ಕಾಲಾನಂತರ ದೊರಕಿದ ತನ್ನ ಪ್ರಿಯ ತಮನ ಬಾಯಿಯಿಂದ ಇಂತಹ ಅಪ್ರಿಯ ಮಾತನ್ನು ಕೇಳಿ ಆಗ ಆನೆಯ ಸೊಂಡಿಲಿನಿಂದ ಹತವಾದ ಬಳ್ಳಿಯಂತೆ ಸೊರಗಿ ಸೊಪ್ಪಾಗಿ ಕಣ್ಣೀರು ಸುರಿಸಿದಳು.॥25॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರಹದಿನೈದನೆಯ ಸರ್ಗ ಪೂರ್ಣವಾಯಿತು.॥115॥