११४ विभीषणेन रामान्तिके सीताप्रेषणम्

वाचनम्
ಭಾಗಸೂಚನಾ

ಶ್ರೀರಾಮನ ಆಜ್ಞೆಯಂತೆ ವಿಭೀಷಣನು ಸೀತೆಯನ್ನು ಶ್ರೀರಾಮನ ಬಳಿಗೆ ಕರೆತಂದುದು, ಸೀತೆಯು ಪ್ರಿಯತಮನ ಮುಖಚಂದ್ರನನ್ನು ದರ್ಶಿಸಿದುದು

ಮೂಲಮ್ - 1

ತಮುವಾಚ ಮಹಾಪ್ರಾಜ್ಞಃ ಸೋಽಭಿವಾದ್ಯ ಪ್ಲವಂಗಮಃ ।
ರಾಮಂ ಕಮಲಪತ್ರಾಕ್ಷಂ ವರಂ ಸರ್ವಧನುಷ್ಮತಾಮ್ ॥

ಅನುವಾದ

ಅನಂತರ ಪರಮ ಬುದ್ಧಿಶಾಲೀ ವಾನರ ವೀರ ಹನುಮಂತನು ಸಮಸ್ತ ಧನುರ್ಧಾರಿಗಳಲ್ಲಿ ಶ್ರೇಷ್ಠನಾದ ಕಮಲನಯನ ಶ್ರೀರಾಮನಿಗೆ ನಮಸ್ಕರಿಸಿ ಹೇಳಿದನು.॥1॥

ಮೂಲಮ್ - 2

ಯನ್ನಿಮಿತ್ತೋಽಯಮಾರಂಭಃ ಕರ್ಮಣಾಂ ಯಃ ಫಲೋದಯಃ ।
ತಾಂ ದೇವೀಂ ಶೋಕಸಂತಪ್ತಾಂ ದ್ರಷ್ಟುಮರ್ಹಸಿ ಮೈಥಿಲೀ ॥

ಅನುವಾದ

ಭಗವಂತಾ! ಯಾರಿಗಾಗಿ ಈ ಯುದ್ಧಾದಿ ಕರ್ಮಗಳನ್ನು ಪ್ರಾರಂಭಿಸಿತ್ತೋ, ಆ ಶೋಕಸಂತಪ್ತ ಮಿಥಿಲೇಶ ಕುಮಾರೀ ಸೀತಾದೇವಿಗೆ ನೀವು ದರ್ಶನ ಕೊಡಿರಿ.॥2॥

ಮೂಲಮ್ - 3

ಸಾ ಹಿ ಶೋಕಸಮಾವಿಷ್ಟಾ ಭಾಷ್ಪಪರ್ಯಾಕುಲೇಕ್ಷಣಾ ।
ಮೈಥಿಲೀ ವಿಜಯಂ ಶ್ರುತ್ವಾ ದ್ರಷ್ಟುಂ ತ್ವಾಮಭಿಕಾಂಕ್ಷತಿ ॥

ಅನುವಾದ

ಅವಳು ಶೋಕದಲ್ಲಿ ಮುಳುಗಿದ್ದು, ಕಣ್ಣುಗಳು ಕಂಬನಿ ತುಂಬಿಕೊಂಡಿವೆ. ನಿಮ್ಮ ವಿಜಯದ ಸಮಾಚಾರ ಕೇಳಿ ಆ ಮೈಥಿಲಿಯು ನಿಮ್ಮನ್ನು ದರ್ಶಿಸಲು ಬಯಸುತ್ತಿರುವಳು.॥3॥

ಮೂಲಮ್ - 4

ಪೂರ್ವಕಾತ್ ಪ್ರತ್ಯಯಾಚ್ಚಾಹಮುಕ್ತೋ ವಿಶ್ವಸ್ತಯಾ ತಯಾ ।
ದ್ರಷ್ಟುಮಿಚ್ಛಾಮಿ ಭರ್ತಾರಮಿತಿ ಪರ್ಯಾಕುಲೇಕ್ಷಣಾ ॥

ಅನುವಾದ

ಮೊದಲ ಸಲ ನಾನು ನಿಮ್ಮ ಸಂದೇಶವನ್ನಿತ್ತಿಕೊಂಡು ಹೋಗಿದ್ದೆನೋ, ಅಂದಿನಿಂದ ಅವರಿಗೆ ನನ್ನ ಮೇಲೆ ಇವನು ನನ್ನ ಸ್ವಾಮಿಯ ಆತ್ಮೀಯನೆಂಬ ವಿಶ್ವಾಸ ಉಂಟಾಗಿತ್ತು. ಅದೇ ವಿಶ್ವಾಸದಿಂದ ಕೂಡಿ ಅವರು ಕಣ್ಣಿರು ತುಂಬಿ ‘ನಾನು ಪ್ರಾಣನಾಥನ ದರ್ಶನ ಮಾಡಲು ಬಯಸುತ್ತಿರುವೆನು’ ಎಂದು ನನ್ನಲ್ಲಿ ಹೇಳಿದರು.॥.॥

ಮೂಲಮ್ - 5

ಏವಮುಕ್ತೋ ಹನುಮತಾ ರಾಮೋ ಧರ್ಮಭೃತಾಂ ವರಃ ।
ಆಗಚ್ಛತ್ಸಹಸಾ ಧ್ಯಾನಮೀಷದ್ವಾಷ್ಪ ಪರಿಪ್ಲುತಃ ॥

ಮೂಲಮ್ - 6

ಸ ದೀರ್ಘಮಭಿನಿಃಶ್ವಸ್ಯ ಜಗತೀಮವಲೋಕಯನ್ ।
ಉವಾಚ ಮೇಘ ಸಂಕಾಶಂ ವಿಭೀಷಣಮುಪಸ್ಥಿತಮ್ ॥

ಅನುವಾದ

ಹನುಮಂತನು ಹೀಗೆ ಹೇಳಿದಾಗ ಧರ್ಮಾತ್ಮರಲ್ಲಿ ಶ್ರೇಷ್ಠ ಶ್ರೀರಾಮಚಂದ್ರನು ಧ್ಯಾನಸ್ಥನಾದನು. ಅವನ ಕಣ್ಣುಗಳಲ್ಲಿ ಕಂಬನಿ ತುಂಬಿ ದೀರ್ಘವಾದ ನಿಟ್ಟುಸಿರುಬಿಟ್ಟು ನೆಲವನ್ನು ನೋಡುತ್ತಾ ಬಳಿಯಲ್ಲೇ ನಿಂತಿದ್ದ ಮೇಘದಂತೆ ಶ್ಯಾಮಲಕಾಂತಿಯುಳ್ಳ ವಿಭೀಷಣನಲ್ಲಿ ಹೇಳಿದನು .॥5-6॥

ಮೂಲಮ್ - 7

ದಿವ್ಯಾಂಗರಾಗಾಂ ವೈದೇಹೀಂ ದಿವ್ಯಾಭರಣಭೂಷಿತಾಮ್ ।
ಇಹ ಸೀತಾಂ ಶಿರಃ ಸ್ನಾತಾಮುಪಸ್ಥಾಪಯ ಮಾ ಚಿರಮ್ ॥

ಅನುವಾದ

ನೀನು ಸೀತೆಗೆ ಅಭ್ಯಂಜನ ಸ್ನಾನ ಮಾಡಿಸಿ, ದಿವ್ಯ ಅಂಗರಾಗವನ್ನು ಪೂಸಿ, ದಿವ್ಯ ಆಭೂಷಣಗಳಿಂದ ಅಲಂಕಾರ ಮಾಡಿಸಿ ಬೇಗನೇ ನನ್ನ ಬಳಿಗೆ ಕರೆದುಕೊಂಡು ಬಾ.॥7॥

ಮೂಲಮ್ - 8

ಏವಮುಕ್ತಸ್ತು ರಾಮೇಣ ತ್ವರಮಾಣೋ ವಿಭೀಷಣಃ ।
ಪ್ರವಿಶ್ಯಾಂತಃಪುರಂ ಸೀತಾಂ ಸ್ತ್ರೀಭಿಃ ಸ್ವಾಭಿರಚೋದಯತ್ ॥

ಅನುವಾದ

ಶ್ರೀರಾಮನು ಹೀಗೆ ಹೇಳಿದಾಗ ವಿಭೀಷಣನು ಲಗುಬಗೆಯಿಂದ ತನ್ನ ಅಂತಃಪುರಕ್ಕೆ ಹೋಗಿ ತನ್ನ ಪತ್ನಿಯರನ್ನು ಕಳಿಸಿ ಸೀತೆಗೆ ನಾನು ಬರುವುದಾಗಿ ತಿಳಿಸಿದನು.॥8॥

ಮೂಲಮ್ - 9

ತತಃ ಸೀತಾಂ ಮಹಾಭಾಗಾಂ ದೃಷ್ಟ್ವೋವಾಚ ವಿಭೀಷಣಃ ।
ಮೂರ್ಧ್ನಿ ಬದ್ಧಾಂಜಲಿಃ ಶ್ರೀಮಾನ್ವಿನೀತೋ ರಾಕ್ಷಸೇಶ್ವರಃ ॥

ಅನುವಾದ

ಬಳಿಕ ಶ್ರೀಮಾನ್ ರಾಕ್ಷಸರಾಜ ವಿಭೀಷಣನು ಸ್ವತಃ ಹೋಗಿ ಮಹಾಭಾಗಾ ಸೀತೆಯನ್ನು ದರ್ಶಿಸಿ ಅಂಜಲಿಬದ್ಧನಾಗಿ ವಿನೀತಭಾವದಿಂದ ಹೇಳಿದನು .॥9॥

ಮೂಲಮ್ - 10

ದಿವ್ಯಾಂಗರಾಗಾ ವೈದೇಹೀ ದಿವ್ಯಾಭರಣಭೂಷಿತಾ ।
ಯಾನಮಾರೋಹ ಭದ್ರಂ ತೇ ಭರ್ತಾ ತ್ವಾಂ ದ್ರಷ್ಟುಮಿಚ್ಛತಿ ॥

ಅನುವಾದ

ವಿದೇಹಕುಮಾರೀ! ನಿಮಗೆ ಮಂಗಳವಾಗಲೀ, ನೀವು ಸ್ನಾನ ಮಾಡಿ ದಿವ್ಯ ಅಂಗರಾಗ ಹಾಗೂ ದಿವ್ಯವಸ್ತ್ರಾಭರಣಗಳಿಂದ ಅಲಂಕರಿಸಿಕೊಂಡು ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳಿ. ನಿಮ್ಮ ಪತಿಯು ನಿಮ್ಮನ್ನು ನೋಡಲು ಬಯಸುತ್ತಿರುವನು.॥10॥

ಮೂಲಮ್ - 11

ಏವಮುಕ್ತಾ ತು ವೈದೇಹೀ ಪ್ರತ್ಯುವಾಚ ವಿಭೀಷಣಮ್ ।
ಅಸ್ನಾತ್ವಾ ದ್ರಷ್ಟುಮಿಚ್ಛಾಮಿ ಭರ್ತಾರಂ ರಾಕ್ಷಸೇಶ್ವರ ॥

ಅನುವಾದ

ಅವನು ಹೀಗೆ ಹೇಳಿದಾಗ ವೈದೇಹಿಯು ವಿಭೀಷಣನಲ್ಲಿ ರಾಕ್ಷಸರಾಜನೇ! ನಾನು ಸ್ನಾನಾದಿ ಮಾಡದೆಯೇ ಈಗಲೇ ಪತಿಯ ದರ್ಶನ ಮಾಡಲು ಬಯಸುತ್ತಿದ್ದೇನೆ, ಎಂದು ಉತ್ತರಿಸಿದಳು.॥11॥

ಮೂಲಮ್ - 12

ತಸ್ಯಾಸ್ತದ್ವಚನಂ ಶ್ರುತ್ವಾ ಪ್ರತ್ಯುವಾಚ ವಿಭೀಷಣಃ ।
ಯಥಾಽಽಹ ರಾಮೋ ಭರ್ತಾ ತೇ ತತ್ತಥಾ ಕರ್ತುಮರ್ಹಸಿ ॥

ಅನುವಾದ

ಸೀತೆಯ ಮಾತನ್ನು ಕೇಳಿ ವಿಭೀಷಣನೆಂದ - ದೇವಿ! ನಿಮ್ಮ ಪತಿದೇವ ಶ್ರೀರಾಮಚಂದ್ರನು ಆಜ್ಞಾಪಿಸಿದಂತೆಯೇ ನೀವು ಮಾಡಬೇಕು.॥12॥

ಮೂಲಮ್ - 13

ತಸ್ಯ ತದ್ವಚನಂ ಶ್ರುತ್ವಾ ಮೈಥಿಲೀ ಪತಿದೇವತಾ ।
ಭರ್ತೃಭಕ್ತ್ಯಾವೃತಾ ಸಾಧ್ವೀ ತಥೇತಿ ಪ್ರತ್ಯಭಾಷತ ॥

ಅನುವಾದ

ಅವನ ಮಾತನ್ನು ಕೇಳಿ ಪತಿಭಕ್ತಿಯಿಂದ ಸುರಕ್ಷಿತ ಹಾಗೂ ಪತಿಯನ್ನೇ ದೇವರೆಂದು ತಿಳಿದ ಸಾಧ್ವಿಸೀತೆಯು ‘‘ಹಾಗೆಯೇ ಆಗಲಿ’ ಎಂಬ ಸ್ವಾಮಿಯ ಆಜ್ಞೆಯನ್ನು ಶಿರಸಾವಹಿಸಿದಳು.॥13॥

ಮೂಲಮ್ - 14

ತತಃ ಸೀತಾಂ ಶಿರಃ ಸ್ನಾತಾಂ ಸಂಯುಕ್ತಾಂ ಪ್ರತಿಕರ್ಮಣಾ ।
ಮಹಾರ್ಹಾಭರಣೋಪೇತಾಂ ಮಹಾರ್ಹಾಂಬರ ಧಾರಿಣೀಮ್ ॥

ಅನುವಾದ

ಅನಂತರ ವೈದೇಹಿಯು ತಲೆಗೆ ಸ್ನಾನಮಾಡಿ ಸುಂದರವಾಗಿ ಶೃಂಗರಿಸಿಕೊಂಡು, ಬಹುಮೂಲ್ಯ ವಸ್ತ್ರಾಭೂಷಣಗಳನ್ನು ಧರಿಸಿ ಹೊರಟಳು.॥14॥

ಮೂಲಮ್ - 15

ಆರೋಪ್ಯ ಶಿಬಿಕಾಂ ದೀಪ್ತಾಂ ಪರಾರ್ಧ್ಯಾಂಬರ ಸಂವೃತಾಮ್ ।
ರಕ್ಷೋಭಿರ್ಬಹುಭಿರ್ಗುಪ್ತಾಮಾಜಹಾರ ವಿಭೀಷಣಃ ॥

ಅನುವಾದ

ಆಗ ವಿಭೀಷಣನು ಅಮೂಲ್ಯ ವಸ್ತುಗಳಿಂದ ಆವೃತಳಾದ ಕಾಂತಿಯುಕ್ತ ಸೀತಾದೇವಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ, ಅನೇಕ ನಿಶಾಚರರಿಂದ ಸುತ್ತಲೂ ರಕ್ಷಿಸುತ್ತಿರುವಂತೆ ಭಗವಾನ್ ಶ್ರೀರಾಮನ ಬಳಿಕೆ ಕರೆ ತಂದನು.॥15॥

ಮೂಲಮ್ - 16

ಸೋಽಭಿಗಮ್ಯ ಮಹಾತ್ಮಾನಂ ಜ್ಞಾತ್ವಾಪಿ ಧ್ಯಾನಮಾಸ್ಥಿತಮ್ ।
ಪ್ರಣತಶ್ಚ ಪ್ರಹೃಷ್ಟಶ್ಚ ಪ್ರಾಪ್ತಾಂ ಸೀತಾಂ ನ್ಯವೇದಯತ್ ॥

ಅನುವಾದ

ಭಗವಾನ್ ಶ್ರೀರಾಮನು ಧ್ಯಾನಸ್ಥನಾಗದ್ದಾನೆ ಎಂದು ತಿಳಿದರೂ ವಿಭೀಷಣನು ಅವನ ಬಳಿಗೆ ಹೋಗಿ, ನಮಸ್ಕರಿಸಿ ಸಂತೋಷದಿಂದ-‘ಪ್ರಭೋ! ಸೀತಾದೇವಿಯರು ಬಂದಿರುವರು’ ಎಂದು ವಿನಂತಿಸಿಕೊಂಡನು.॥16॥

ಮೂಲಮ್ - 17

ತಾಮಾಗತಾಮುಪಶ್ರುತ್ಯ ರಕ್ಷೋಗೃಹಚಿರೋಷಿತಾಮ್ ।
ರೋಷಂ ಹರ್ಷಂ ಚ ದೈನ್ಯಂ ಚ ರಾಘವಃ ಪ್ರಾಪ ಶತ್ರುಹಾ ॥

ಅನುವಾದ

ರಾಕ್ಷಸನ ಮನೆಯಲ್ಲಿ ಬಹಳ ದಿನವಿದ್ದು ಇಂದು ಸೀತೆಯು ಬಂದಿರುವಳು, ಎಂದು ಯೋಚಿಸಿ ಆಕೆಯ ಆಗಮನದ ಸಮಾಚಾರ ಕೇಳಿ ಶತ್ರುಸೂದನ ಶ್ರೀರಾಘವನಿಗೆ ಆಗ ರೋಷ, ಹರ್ಷ, ದುಃಖ ಒಟ್ಟಿಗೆ ಪ್ರಾಪ್ತವಾದುವು.॥1.॥

ಮೂಲಮ್ - 18

ತತೋ ಯಾನಗತಾಂ ಸೀತಾಂ ಸವಿಮರ್ಶಂ ವಿಚಾರಯನ್ ।
ವಿಭೀಷಣಮಿದಂ ವಾಕ್ಯಮಹೃಷ್ಟೋ ರಾಘವೋಽಬ್ರವೀತ್ ॥

ಅನುವಾದ

ಅನಂತರ ‘ಸೀತೆಯು ಪಲ್ಲಕ್ಕಿಯಲ್ಲಿ ಬಂದಿರುವಳು’ ಈ ವಿಚಾರವಾಗಿ ತರ್ಕ-ವಿತರ್ಕಪೂರ್ಣ ವಿಚಾರ ಮಾಡಿ ಶ್ರೀರಾಮನಿಗೆ ಸಂತೋಷವಾಗಲಿಲ್ಲ. ಅವನು ವಿಭೀಷಣ ನಲ್ಲಿ ಇಂತೆಂದನು .॥18॥

ಮೂಲಮ್ - 19

ರಾಕ್ಷಸಾಧಿಪತೇ ಸೌಮ್ಯ ನಿತ್ಯಂ ಮದ್ವಿಜಯೇ ರತ ।
ವೈದೇಹೀ ಸನ್ನಿಕರ್ಷಂಮೇ ಶೀಘ್ರಂ ಸಮುಪಗಚ್ಛತು ॥

ಅನುವಾದ

ಸದಾ ನನ್ನ ವಿಜಯಕ್ಕಾಗಿ ತತ್ಪರನಾಗಿರುವ ಸೌಮ್ಯ ವಿಭೀಷಣನೇ! ನೀನು ವಿದೇಹ ಕುಮಾರಿಯಲ್ಲಿ ಹೇಳು -ಅವಳು ಶೀಘ್ರವಾಗಿ ನನ್ನ ಬಳಿಗೆ ಬರಲಿ.॥19॥

ಮೂಲಮ್ - 20

ತಸ್ಯ ತದ್ವಚನಂ ಶ್ರುತ್ವಾ ರಾಘವಸ್ಯ ವಿಭೀಷಣಃ ।
ತೂರ್ಣಮುತ್ಸಾರಣಂ ತತ್ರ ಕಾರಯಾಮಾಸ ಧರ್ಮವಿತ್ ॥

ಅನುವಾದ

ಶ್ರೀರಘುನಾಥನ ಮಾತನ್ನು ಕೇಳಿ ಧರ್ಮಜ್ಞ ವಿಭೀಷಣನು ಕೂಡಲೇ ಅಲ್ಲಿಂದ ಬೇರೆ ಜನರನ್ನು ದೂರಗೊಳಿಸಲು ಪ್ರಾರಂಭಿಸಿದನು.॥20॥

ಮೂಲಮ್ - 21

ಕಂಚುಕೋಷ್ಣೀಷಿಣಸ್ತತ್ರ ವೇತ್ರಜರ್ಝರಪಾಣಯಃ ।
ಉತ್ಸಾರಯಂತಸ್ತಾನ್ ಯೋಧಾನ್ ಸಮಂತಾತ್ ಪರಿಚಕ್ರಮುಃ ॥

ಅನುವಾದ

ಮುಂಡಾಸುಗಳನ್ನು ಸಮವಸ್ತ್ರಗಳನ್ನು ಧರಿಸಿದ ಅನೇಕ ಸಿಪಾಯಿಗಳು ಕೈಯಲ್ಲಿ ಬೆತ್ತವನ್ನು ಹಿಡಿದು ತಿರುಗಿಸುತ್ತಾ ಆ ವಾನರ ಯೋಧರನ್ನು ದೂರಸರಿಸುತ್ತಾ ಎಲ್ಲೆಡೆ ಸಂಚರಿಸ ತೊಡಗಿದರು.॥21॥

ಮೂಲಮ್ - 22

ಋಕ್ಷಾಣಾಂ ವಾನರಾಣಾಂ ಚ ರಾಕ್ಷಸಾನಾಂ ಚ ಸರ್ವಶಃ ।
ವೃಂದಾನ್ಯುತ್ಸಾರ್ಯಮಾಣಾನಿ ದೂರಮುತ್ತಸ್ಥುರಂತತಃ ॥

ಅನುವಾದ

ಅವರಿಂದ ಓಡಿಸಿದ ಕರಡಿಗಳು, ವಾನರರು ಮತ್ತು ರಾಕ್ಷಸರು ಕೊನೆಗೆ ದೂರ ಹೋಗಿ ನಿಂತುಕೊಂಡರು.॥22॥

ಮೂಲಮ್ - 23

ತೇಷಾಮುತ್ಸಾರ್ಯಮಾಣಾನಾಂ ನಿಃಸ್ವನಃ ಸುಮಹಾನಭೂತ್ ।
ವಾಯುನೋದ್ಧೂಯಮಾನಸ್ಯ ಸಾಗರಸ್ಯೇವ ನಿಃಸ್ವನಃ ॥

ಅನುವಾದ

ಬಿರುಗಾಳಿಯ ಹೊಡೆತದಿಂದ ಉಂಟಾದ ಸಮುದ್ರದ ಗರ್ಜನೆಯಂತೆ, ಅಲ್ಲಿಂದ ಓಡಿಸಿದ ಆ ವಾನರರು ಅಲ್ಲಿ ದೊಡ್ಡ ಕೋಲಾಹಲವೆಬ್ಬಿಸಿದರು.॥23॥

ಮೂಲಮ್ - 24

ಉತ್ಸಾರ್ಯಮಾಣಾಂಸ್ತಾನ್ದೃಷ್ಟ್ವಾಸಮಂತಾಜ್ಜಾತ ಸಂಭ್ರಮಾನ್ ।
ದಾಕ್ಷಿಣ್ಯಾತ್ತದಮರ್ಷಾಚ್ಚ ವಾರಯಾಮಾಸ ರಾಘವಃ ॥

ಅನುವಾದ

ಓಡಿಸಲ್ಪಟ್ಟವರ ಮನಸ್ಸಿನಲ್ಲಿ ಉದ್ವೇಗ ಉಂಟಾಗುತ್ತಿತ್ತು. ಎಲ್ಲೆಡೆ ಈ ಉದ್ವೇಗವನ್ನು ನೋಡಿದ ಶ್ರೀರಾಮನು ತನ್ನ ಸಹಜ ಉದಾರತೆಯಿಂದಾಗಿ ಆ ಓಡಿಸುವವರಿಗೆ ರೋಷಪೂರ್ವ ತಡೆದನು.॥24॥

ಮೂಲಮ್ - 25

ಸಂರಂಭಾಚ್ಚಾಬ್ರವೀದ್ ರಾಮಶ್ಚಕ್ಷುಷಾ ಪ್ರದಹನ್ನಿವ ।
ವಿಭೀಷಣಂ ಮಹಾಪ್ರಾಜ್ಞಂ ಸೋಪಾಲಂಭಮಿದಂ ವಚಃ ॥

ಅನುವಾದ

ಆಗ ಶ್ರೀರಾಮನು ಓಡಿಸುತ್ತಿರುವ ಸಿಪಾಯಿಗಳ ಕಡೆಗೆ ಅವರನ್ನು ಸುಟ್ಟು ಭಸ್ಮಮಾಡಿಬಿಡುವಂತೆ ನೋಡುತ್ತಿದ್ದನು. ಅವನು ಪರಮ ಬುದ್ಧಿವಂತ ವಿಭೀಷಣನನ್ನು ತೆಗಳುತ್ತಾ ಕ್ರೋಧದಿಂದ ಹೇಳಿದನು .॥25॥

ಮೂಲಮ್ - 26

ಕಿಮರ್ಥಂ ಮಾಮನಾದೃತ್ಯ ಕ್ಲಿಶ್ಯತೇಽಯಂ ತ್ವಯಾ ಜನಃ ।
ನಿವರ್ತಯೈನಮುದ್ವೇಗಂ ಜನೋಽಯಂ ಸ್ವಜನೋ ಮಮ ॥

ಅನುವಾದ

ನೀನು ನನ್ನ ಅನಾದರಗೋಳಿಸಿ ಇವರೆಲ್ಲರಿಗೆ ಏಕೆ ಕಷ್ಟಕೊಡುತ್ತಿರುವೆ? ಈ ಉದ್ವೇಗಜನಕ ಕಾರ್ಯವನ್ನು ನಿಲ್ಲಿಸು. ಇಲ್ಲಿ ಇರುವವರೆಲ್ಲರೂ ನನ್ನ ಆತ್ಮೀಯ ಜನರಾಗಿದ್ದಾರೆ.॥26॥

ಮೂಲಮ್ - 27

ನ ಗೃಹಾಣಿ ನ ವಸ್ತ್ರಾಣಿ ನ ಪ್ರಾಕಾರಾಸ್ತಿರಸ್ಕ್ರಿಯಾ ।
ನೇದೃಶಾ ರಾಜ ಸತ್ಕಾರಾ ವೃತ್ತಮಾವರಣಂ ಸ್ತ್ರಿಯಾಃ ॥

ಅನುವಾದ

ಮನೆಗಳಾಗಲೀ, ವಸ್ತ್ರಗಳಾಗಲೀ, ಪ್ರಾಕಾರಗಳಾಗಲಿ ಸ್ತ್ರೀಯರಿಗೆ ಅವಗುಂಠನವಾಗುವುದಿಲ್ಲ. ಈ ರೀತಿ ಜನರನ್ನು ದೂರಕ್ಕಟ್ಟುವ ನಿಷ್ಠುರವಾದ ಕಾರ್ಯವೂ ಸ್ತ್ರೀಯರಿಗೆ ಆವರಣ ಅಥವಾ ಪರದೆ ಆಗುವುದಿಲ್ಲ. ಸ್ತ್ರೀಯರಿಗೆ ಸಚ್ಚಾರಿತ್ರ್ಯವೇ ಅಭೇದ್ಯ ಆವರಣವಾಗುತ್ತದೆ.॥27॥

ಮೂಲಮ್ - 28

ವ್ಯಸನೇಷು ನ ಕೃಚ್ಛ್ರೇಷು ನ ಯುದ್ಧೇಷು ಸ್ವಯಂವರೇ ।
ನ ಕ್ರತೌ ನೋ ವಿವಾಹೇ ವಾ ದರ್ಶನಂ ದುಷ್ಯತೇ ಸ್ತ್ರಿಯಾಃ ॥

ಅನುವಾದ

ವಿಪತ್ಕಾಲದಲ್ಲಿ, ಶಾರೀರಿಕ ಅಥವಾ ಮಾನಸಿಕ ಪೀಡೆ ಯುಂಟಾದಾಗ, ಯುದ್ಧದಲ್ಲಿ, ಸ್ವಯಂವರದಲ್ಲಿ, ಯಜ್ಞದಲ್ಲಿ, ವಿವಾಹದಲ್ಲಿ ಸ್ತ್ರೀಯರನ್ನು ನೋಡುವುದು ದೋಷಾಸ್ಪದವಾಗುವುದಿಲ್ಲ.॥28॥

ಮೂಲಮ್ - 29

ಸೈಷಾ ವಿಪದ್ಗತಾ ಚೈವ ಕೃಚ್ಛ್ರೇಣ ಚ ಸಮನ್ವಿತಾ ।
ದರ್ಶನೇ ನಾಸ್ತಿ ದೋಷೋಽಸ್ಯಾ ಮತ್ಸಮೀಪೇ ವಿಶೇಷತಃ ॥

ಅನುವಾದ

ಈ ಸೀತೆ ಈಗ ವಿಪತ್ತಿನಲ್ಲಿ ಇದ್ದಾಳೆ, ಮಾನಸಿಕ ಕಷ್ಟದಿಂದಲೂ ಕೂಡಿರುವಳು, ವಿಶೇಷವಾಗಿ ನನ್ನ ಬಳಿ ಇದ್ದಾಳೆ; ಅದಕ್ಕಾಗಿ ಇವಳು ಪರದೆ ಇಲ್ಲದೆಯೇ ಎಲ್ಲರ ಎದುರಿಗೆ ಬರುವುದು ದೋಷದ ಸಂಗತಿಯಲ್ಲ.॥29॥

ಮೂಲಮ್ - 30

ವಿಸೃಜ್ಯ ಶಿಬಿಕಾಂ ತಸ್ಮಾತ್ ಪದ್ಭ್ಯಾಮೇವಾಪಸರ್ಪತು ।
ಸಮೀಪೇ ಮಮ ವೈದೇಹೀಂ ಪಶ್ಯಂತ್ವೇತೇ ವನೌಕಸಃ ॥

ಅನುವಾದ

ಆದ್ದರಿಂದ ಜಾನಕಿಯು ಪಲ್ಲಕ್ಕಿ ಬಿಟ್ಟು ಕಾಲ್ನಡಿಗೆಯಿಂದಲೇ ನನ್ನ ಬಳಿಗೆ ಬರಲಿ ಹಾಗೂ ಎಲ್ಲ ವಾನರರು ಅವಳ ದರ್ಶನ ಮಾಡಲಿ.॥30॥

ಮೂಲಮ್ - 31

ಏವಮುಕ್ತಸ್ತು ರಾಮೇಣ ಸವಿಮರ್ಶೋ ವಿಭೀಷಣಃ ।
ರಾಮಸ್ಯೋಪಾನಯತ್ ಸೀತಾಂ ಸನ್ನಿಕರ್ಷಂ ವಿನೀತವತ್ ॥

ಅನುವಾದ

ಶ್ರೀರಾಮನು ಹೀಗೆ ಹೇಳಿದಾಗ ವಿಭೀಷಣನು ವಿಚಾರಮಗ್ನನಾದನು ಹಾಗೂ ವಿನೀತಭಾವದಿಂದ ಸೀತೆಯನ್ನು ಅವನ ಬಳಿಗೆ ಕರೆದುಕೊಂಡು ಬಂದನು.॥31॥

ಮೂಲಮ್ - 32

ತತೋ ಲಕ್ಷ್ಮಣ ಸುಗ್ರೀವೌ ಹನೂಮಾಂಶ್ಚ ಪ್ಲವಂಗಮಃ ।
ನಿಶಮ್ಯ ವಾಕ್ಯಂ ರಾಮಸ್ಯ ಬಭೂವುರ್ವ್ಯಥಿತಾ ಭೃಶಮ್ ॥

ಅನುವಾದ

ಆಗ ಶ್ರೀರಾಮಚಂದ್ರನ ಮಾತನ್ನು ಕೇಳಿ ಲಕ್ಷ್ಮಣ, ಸುಗ್ರೀವ, ಕಪಿವರ ಹನುಮಂತ ಮೂವರೂ ಅತ್ಯಂತ ವ್ಯಥಿತಗೊಂಡರು.॥32॥

ಮೂಲಮ್ - 33

ಕಲತ್ರನಿರಪೇಕ್ಷೈಶ್ಚ ಇಂಗಿತೈರಸ್ಯ ದಾರುಣೈಃ ।
ಅಪ್ರೀತಮಿವ ಸೀತಾಯಾಂ ತರ್ಕಯಂತಿ ಸ್ಮ ರಾಘವಮ್ ॥

ಅನುವಾದ

ಶ್ರೀರಾಮಚಂದ್ರನ ಭಯಂಕರ ಚೇಷ್ಟೆಗಳಿಂದ ಅವನು ಪತ್ನಿಯಿಂದ ನಿರಪೇಕ್ಷನಾದಂತೆ ಸೂಚಿಸುತ್ತಿತ್ತು. ಅದಕ್ಕಾಗಿ ಆ ಮೂವರೂ ಶ್ರೀರಾಮನು ಸೀತೆಯಲ್ಲಿ ಕೋಪಿಸಿ ಕೊಂಡಿರು ವಂತೆ ಕಾಣುತ್ತಿದ್ದಾನೆ ಎಂದು ಅಂದಾಜು ಮಾಡಿದರು.॥33॥

ಮೂಲಮ್ - 34

ಲಜ್ಜಯಾ ತ್ವವಲೀಯಂತೀ ಸ್ವೇಷು ಗಾತ್ರೇಷು ಮೈಥಿಲೀ ।
ವಿಭೀಷಣೇನಾನುಗತಾ ಭರ್ತಾರಂ ಸಾಭ್ಯವರ್ತತ ॥

ಅನುವಾದ

ಮುಂದೆ ಮುಂದೆ ಸೀತೆ ಹೋಗುತ್ತಿದ್ದಳು, ಹಿಂದೆ ವಿಭೀಷಣ ಬರುತ್ತಿದ್ದನು. ಅವಳು ನಾಚಿಕೆಯಿಂದ ಮುದ್ದೆಯಾಗಿದ್ದಳು. ಹೀಗೆ ಅವಳು ತನ್ನ ಪತಿದೇವನ ಮುಂದೆ ಉಪಸ್ಥಿತಳಾದಳು.॥34॥

ಮೂಲಮ್ - 35

ವಿಸ್ಮಯಾಚ್ಚ ಪ್ರಹರ್ಷಾಚ್ಚ ಸ್ನೇಹಾಚ್ಚ ಪತಿದೇವತಾ ।
ಉದೈಕ್ಷತ ಮುಖಂ ಭರ್ತುಃ ಸೌಮ್ಯಂ ಸೌಮ್ಯತರಾನನಾ ॥

ಅನುವಾದ

ಸೀತೆಯ ಮುಖ ಅತ್ಯಂತ ಸೌಮ್ಯಭಾವದಿಂದ ಕೂಡಿತ್ತು. ಅವಳು ಪತಿಯನ್ನೆ ದೇವತೆ ಎಂದು ತಿಳಿಯು ತ್ತಿದ್ದಳು. ಆಕೆಯು ಬಹಳ ವಿಸ್ಮಯ, ಹರ್ಷ, ಸ್ನೇಹದೊಂದಿಗೆ ತನ್ನ ಸ್ವಾಮಿಯ ಮನೋಹರ ಮುಖವನ್ನು ದರ್ಶಿಸಿದಳು.॥35॥

ಮೂಲಮ್ - 36

ಅಥ ಸಮಪನುದನ್ಮನಃ ಕ್ಲಮಂ ಸಾ
ಸುಚಿರಮದೃಷ್ಟ ಮುದೀಕ್ಷ್ಯ ವೈ ಪ್ರಿಯಸ್ಯ ।
ವದನಮುದಿತಪೂರ್ಣಚಂದ್ರ ಕಾಂತಂ
ವಿಮಲಶಶಾಂಕನಿಭಾನನಾ ತದಾಽಽಸೀತ್ ॥

ಅನುವಾದ

ಉದಯಿಸುತ್ತಿರುವ ಪೂರ್ಣ ಚಂದ್ರನನ್ನು ನಾಚಿಸುವ ಪ್ರಿಯತಮನ ಸುಂದರ ಮುಖವನ್ನು ನೋಡಲು ಬಹಳ ದಿನಗಳಿಂದ ವಂಚಿತಳಾಗಿದ್ದ ಸೀತೆಯು ಮನತುಂಬಿ ನಿಟ್ಟಿಸುತ್ತಾ ತನ್ನ ಮನಸ್ಸಿನ ಪೀಡೆಯನ್ನು ದೂರಗೊಳಿಸಿದಳು. ಆಗ ಆಕೆಯ ಮುಖ ಪ್ರಸನ್ನತೆಯಿಂದ ಅರಳಿತು ಮತ್ತು ನಿರ್ಮಲಚಂದ್ರನಂತೆ ಶೋಭಿಸತೊಡಗಿತು.॥3.॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರ ಹದಿನಾಲ್ಕನೆಯ ಸರ್ಗ ಪೂರ್ಣವಾಯಿತು.॥114॥