वाचनम्
ಭಾಗಸೂಚನಾ
ಹನುಮಂತನು ಸೀತೆಯೊಡನೆ ಮಾತನಾಡಿ, ಸೀತಾದೇವಿಯ ಸಂದೇಶವನ್ನು ರಾಮನಿಗೆ ತಿಳಿಸಿದುದು
ಮೂಲಮ್ - 1
ಇತಿ ಪ್ರತಿಸಮಾದಿಷ್ಟೋ ಹನುಮಾನ್ಮಾರುತಾತ್ಮಜಃ ।
ಪ್ರವಿವೇಶ ಪುರೀಂ ಲಂಕಾಂ ಪೂಜ್ಯಮಾನೋ ನಿಶಾಚರೈಃ ॥
ಅನುವಾದ
ಭಗವಾನ್ ಶ್ರೀರಾಮನ ಸಂದೇಶ ಪಡೆದ ಪವನಪುತ್ರ ಹನುಮಂತನು ನಿಶಾಚರರಿಂದ ಸಮ್ಮಾನಿತನಾಗಿ ಲಂಕಾಪುರಿ ಯನ್ನು ಪ್ರವೇಶಿಸಿದನು.॥1॥
ಮೂಲಮ್ - 2
ಪ್ರವಿಶ್ಯ ಚ ಪುರೀಂ ಲಂಕಾಮನುಜ್ಞಾಪ್ಯ ವಿಭೀಷಣಮ್ ।
ತತಸ್ತೇನಾಭ್ಯನುಜ್ಞಾತೋ ಹನೂಮಾನ್ ವೃಕ್ಷವಾಟಿಕಾಮ್ ॥
ಅನುವಾದ
ಪುರಿಯಲ್ಲಿ ಪ್ರವೇಶ ಮಾಡಿ ಅವನು ವಿಭೀಷಣನ ಅಪ್ಪಣೆ ಪಡೆದು ಹನುಮಂತನು ಅಶೋಕವನಕ್ಕೆ ಹೋದನು.॥2॥
ಮೂಲಮ್ - 3
ಸಂಪ್ರವಿಶ್ಯ ಯಥಾನ್ಯಾಯಂ ಸೀತಾಯಾ ವಿದಿತೋ ಹರಿಃ ।
ದದರ್ಶ ಮೃಜಯಾ ಹೀನಾಂ ಸಾತಂಕಾಂ ರೋಹಿಣೀಮಿವ ॥
ಅನುವಾದ
ಅಶೋಕವನವನ್ನು ಪ್ರವೇಶಿಸಿ ನ್ಯಾಯಾನುಸಾರ ಅವನು ಸೀತೆಗೆ ತಾನು ಬಂದ ಸೂಚನೆಯನ್ನು ಕೊಟ್ಟನು. ಬಳಿಕ ಹತ್ತಿರ ಹೋಗಿ ದರ್ಶನ ಮಾಡಿದನು. ಅವಳು ಸ್ನಾನಾದಿಗಳಿಂದ ರಹಿತಳಾದ್ದರಿಂದ ಸ್ವಲ್ಪ ಮಲಿನಳಂತೆ ಕಂಡುಬರುತ್ತಿದ್ದಳು ಹಾಗೂ ಸಶಂಕಳಾದ ರೋಹಿಣಿಯಂತೆ ಅನಿಸುತ್ತಿತ್ತು.॥3॥
ಮೂಲಮ್ - 4
ವೃಕ್ಷಮೂಲೇ ನಿರಾನಂದಾಂ ರಾಕ್ಷಸೀಭಿಃ ಪರೀವೃತಾಮ್ ।
ನಿಭೃತಃ ಪ್ರಣತಃ ಪ್ರಹ್ವಃ ಸೋಽಭಿಗಮ್ಯಾಭಿವಾದ್ಯ ಚ ॥
ಅನುವಾದ
ಸೀತಾದೇವಿಯು ರಾಕ್ಷಸಿಯರಿಂದ ಪರಿವೃತಳಾಗಿ ವೃಕ್ಷದ ಕೆಳಗೆ ಆನಂದಶೂನ್ಯಳಾಗಿ ಕುಳಿತ್ತಿದ್ದಳು. ಹನುಮಂತನು ಶಾಂತ-ವಿನೀತ ಭಾವದಿಂದ ಎದುರಿಗೆ ಹೋಗಿ ಪ್ರಣಾಮಗೈದು ಸುಮ್ಮನೇ ನಿಂತುಕೊಂಡನು.॥4॥
ಮೂಲಮ್ - 5
ದೃಷ್ಟ್ವಾ ತಮಾಗತಂ ದೇವೀ ಹನೂಮಂತಂ ಮಹಾಬಲಮ್ ।
ತೂಷ್ಣೀಮಾಸ್ತ ತದಾ ದೃಷ್ಟ್ವಾಸ್ಮೃತ್ವಾ ಹೃಷ್ಟಾಭವತ್ ತದಾ ॥
ಅನುವಾದ
ಮಹಾಬಲಿ ಹನುಮಂತನು ಬಂದಿರುವುದನ್ನು ನೋಡಿ ಸೀತಾದೇವಿಯು ಆತನನ್ನು ಗುರುತಿಸಿ ಮನಸ್ಸಿನಲ್ಲೇ ಸಂತೋಷಗೊಂಡಳು. ಆದರೆ ಏನನ್ನು ಮಾತನಾಡದೆ ಮೌನವಾಗಿ ಕುಳಿತ್ತಿದ್ದಳು.॥5॥
ಮೂಲಮ್ - 6
ಸೌಮ್ಯಂ ತಸ್ಯಾ ದೃಷ್ಟ್ವಾ ಮುಖಂ ಹನೂಮನ್ ಪ್ಲವಂಗೋತ್ತಮಃ ।
ರಾಮಸ್ಯ ವಚನಂ ಸರ್ವಮಾಖ್ಯಾತುಮುಪಚಕ್ರಮೇ ॥
ಅನುವಾದ
ಸೀತೆಯ ಮುಖದಲ್ಲಿ ಸೌಮ್ಯಭಾವ ಕಂಡುಬರುತ್ತಿತ್ತು. ಆಕೆಯನ್ನು ನೋಡಿ ಕಪಿಶ್ರೇಷ್ಠ ಹನುಮಂತನು ಶ್ರೀರಾಮನು ತಿಳಿಸಿದ ಎಲ್ಲ ಮಾತುಗಳನ್ನು ಹೇಳತೊಡಗಿದನು.॥6॥
ಮೂಲಮ್ - 7
ವೈದೇಹಿ ಕುಶಲೀ ರಾಮಃ ಸಹಸುಗ್ರೀವ ಲಕ್ಷ್ಮಣಃ ।
ಕುಶಲಂ ಚಾಹ ಸಿದ್ಧಾರ್ಥೋ ಹತಶತ್ರುರಮಿತ್ರಜಿತ್ ॥
ಅನುವಾದ
ವಿದೇಹನಂದಿನಿ! ಶ್ರೀರಾಮಚಂದ್ರನು ಲಕ್ಷ್ಮಣ-ಸುಗ್ರೀವರೊಂದಿಗೆ ಕ್ಷೇಮದಿಂದ ಇರುವನು. ಅವನು ಶತ್ರುವನ್ನು ವಧಿಸಿ ಸಫಲ ಮನೋರಥವಾಗಿ ಶತ್ರುವಿಜಯೀ ಶ್ರೀರಾಮನು ನಿಮ್ಮ ಕ್ಷೇಮವನ್ನು ಕೇಳಿರುವನು.॥7॥
ಮೂಲಮ್ - 8
ವಿಭೀಷಣ ಸಹಾಯೇನ ರಾಮೇಣ ಹರಿಭಿಃ ಸಹ ।
ನಿಹತೋ ರಾವಣೋ ದೇವಿ ಲಕ್ಷ್ಮಣೇನ ಚ ವೀರ್ಯವಾನ್ ॥
ಅನುವಾದ
ದೇವಿ! ವಿಭೀಷಣನ ಸಹಾಯ ಪಡೆದು ವಾನರರು ಮತ್ತು ಲಕ್ಷ್ಮಣ ಸಹಿತ ಶ್ರೀರಾಮನು ಬಲವಿಕ್ರಮ ಸಂಪನ್ನ ರಾವಣನನ್ನು ಯುದ್ಧದಲ್ಲಿ ವಧಿಸಿ ಬಿಟ್ಟನು.॥8॥
ಮೂಲಮ್ - 9
ಪ್ರಿಯಮಾಖ್ಯಾಮಿ ತೇ ದೇವಿ ಭೂಯಶ್ಚ ತ್ವಾಂ ಸಭಾಜಯೇ ।
ತವ ಪ್ರಭಾವಾದ್ ಧರ್ಮಜ್ಞೇ ಮಹಾನ್ ರಾಮೇಣ ಸಂಯುಗೇ ॥
ಮೂಲಮ್ - 10
ಲಬ್ಧೋಽಯಂ ವಿಜಯಃ ಸೀತೇ ಸ್ವಸ್ಥಾ ಭವ ಗತಜ್ವರಾ ।
ರಾವಣಶ್ಚ ಹತಃ ಶತ್ರುರ್ಲಂಕಾ ಚೈವ ವಶೀಕೃತಾ ॥
ಅನುವಾದ
ಧರ್ಮವನ್ನು ಅರಿತ ಸೀತಾ ದೇವಿಯೇ! ನಿಮ್ಮ ಪಾತಿವ್ರತ್ಯಧರ್ಮದ ಪ್ರಭಾವದಿಂದಲೇ ಯುದ್ಧದಲ್ಲಿ ಶ್ರೀರಾಮನು ಈ ಮಹಾವಿಜಯವನ್ನು ಪಡೆದಿರುವನು. ಈಗ ನೀವು ನಿಶ್ಚಿಂತರಾಗಿ ಸ್ವಸ್ಥರಾಗಿರಿ. ನಮ್ಮ ಶತ್ರು ರಾವಣನು ಹತನಾಗಿ ಲಂಕೆಯು ಶ್ರೀರಾಮನ ಅಧೀನವಾದ ಈ ಪ್ರಿಯಸುದ್ದಿಯನ್ನು ನಿಮಗೆ ಹೇಳಿ, ನೀವು ಹೆಚ್ಚು ಸಂತೋಷವಾದುದನ್ನು ನೋಡಲು ಬಯಸುವೆನು.॥9-10॥
ಮೂಲಮ್ - 11
ಮಯಾ ಹ್ಯಲಬ್ಧನಿದ್ರೇಣ ಧೃತೇನ ತವ ನಿರ್ಜಯೇ ।
ಪ್ರತಿಜ್ಞೈಷಾ ವಿನಿಸ್ತೀರ್ಣಾ ಬದ್ಧ್ವಾಸೇತುಂ ಮಹೋದಧೌ ॥
ಅನುವಾದ
ಶ್ರೀರಾಮನು ನಿಮಗೆ ಈ ಸಂದೇಶ ಕಳಿಸಿರುವನು- ದೇವಿ! ನಾನು ನಿನ್ನ ಉದ್ಧಾರಕ್ಕೆ ಮಾಡಿದ ಪ್ರತಿಜ್ಞೆಗಾಗಿ ನಿದ್ದೆಗೆಟ್ಟು, ಅವಿಶ್ರಾಂತ ಪ್ರಯತ್ನಮಾಡಿ, ಸಮುದ್ರಕ್ಕೆ ಸೇತುವೆ ನಿರ್ಮಿಸಿ ರಾವಣನ ವಧೆಯ ಮೂಲಕ ಆ ಪ್ರತಿಜ್ಞೆಯನ್ನು ಪೂರ್ಣಗೊಳಿಸಿದೆ.॥11॥
ಮೂಲಮ್ - 12
ಸಂಭ್ರಮಶ್ಚ ನ ಕರ್ತವ್ಯೋ ವರ್ತಂತ್ಯಾ ರಾವಣಾಲಯೇ ।
ವಿಭೀಷಣ ವಿಧೇಯಂ ಹಿ ಲಂಕೈಶ್ವರ್ಯಮಿದಂ ಕೃತಮ್ ॥
ಮೂಲಮ್ - 13
ತದಾಶ್ವಸಿಹಿ ವಿಸ್ರಬ್ಧಂ ಸ್ವಗೃಹೇ ಪರಿವರ್ತಸೇ ।
ಅಯಂ ಚಾಭ್ಯೇತಿ ಸಂಹೃಷ್ಟಸ್ತ್ವದ್ದರ್ಶನಸಮುತ್ಸುಕಃ ॥
ಅನುವಾದ
ಈಗ ನೀನು ರಾವಣನ ಮನೆಯಲ್ಲಿರುವೆನೆಂದು ಭಯಪಡಬೇಕಾಗಿಲ್ಲ; ಏಕೆಂದರೆ ಲಂಕೆಯ ಸಕಲೈಶ್ವರ್ಯವು ಈಗ ವಿಭೀಷಣನ ಅಧೀನ ದಲ್ಲಿದೆ. ಆದುದರಿಂದ ನೀನೀಗ ನಿನ್ನ ಮನೆಯಲ್ಲೇ ಇರುವುದಾಗಿ ಭಾವಿಸಿ ನಿಶ್ಚಿಂತಳಾಗಿ ಧೈರ್ಯವನ್ನು ತಾಳು. ವಿಭೀಷಣನೂ ಕೂಡ ಆನಂದಭರಿತನಾಗಿ ನಿನ್ನನ್ನು ಸಂದರ್ಶಿಸಲು ಉತ್ಕಂಠಿತನಾಗಿ ಈಗ ನಿನ್ನ ಬಳಿಗೆ ಬರುತ್ತಾನೆ.॥12-13॥
ಮೂಲಮ್ - 14
ಏವಮುಕ್ತಾ ತು ಸಾದೇವೀ ಸೀತಾ ಶಶಿನಿಭಾನನಾ ।
ಪ್ರಹರ್ಷೇಣಾವರುದ್ಧಾ ಸಾ ವ್ಯಾಹರ್ತುಂ ನ ಶಶಾಕ ಹ ॥
ಅನುವಾದ
ಹನುಮಂತನು ಹೀಗೆ ಹೇಳಿದಾಗ ಚಂದ್ರಮುಖಿ ಸೀತಾದೇವಿಗೆ ಬಹಳ ಹರ್ಷವಾಯಿತು. ಹರ್ಷದಿಂದ ಕಂಠ ಉಮ್ಮಳಿಸಿ ಬಂದು ಏನನ್ನು ಮಾತನಾಡದಾದರು.॥14॥
ಮೂಲಮ್ - 15
ತತೋಽಬ್ರವೀದ್ಧರಿವರಃ ಸೀತಾಮಪ್ರತಿಜಲ್ಪತೀಮ್ ।
ಕಿಂ ತ್ವಂ ಚಿಂತಯಸೇ ದೇವಿ ಕಿಂ ಚ ಮಾಂ ನಾಭಿಭಾಷಸೇ ॥
ಅನುವಾದ
ಸೀತೆಯು ಮೌನವಾಗಿರುವುದನ್ನು ನೋಡಿ ಕಪಿವರ ಮಾರುತಿಯು ಹೇಳಿದನು - ದೇವಿ! ನೀನೇನು ಯೋಚಿಸುತ್ತಿರುವೆ? ನನ್ನ ಬಳಿ ಏಕೆ ಮಾತನಾಡುವುದಿಲ್ಲ.॥15॥
ಮೂಲಮ್ - 16
ಏವಮುಕ್ತಾ ಹನುಮತಾ ಸೀತಾ ಧರ್ಮಪಥೇ ಸ್ಥಿತಾ ।
ಅಬ್ರವೀತ್ಪರಮಪ್ರೀತಾ ಭಾಷ್ಪಗದ್ಗದಯಾ ಗಿರಾ ॥
ಅನುವಾದ
ಹನುಮಂತನು ಹೀಗೆ ಕೇಳಿದಾಗ ಧರ್ಮಪರಾಯಣಳಾದ ಸೀತಾದೇವಿಯು ಅತ್ಯಂತ ಪ್ರಸನ್ನಳಾಗಿ ಆನಂದಾಶ್ರುಗಳನ್ನು ಸುರಿಸುತ್ತಾ ಗದ್ಗದವಾಣಿಯಿಂದ ನುಡಿದಳು.॥16॥
ಮೂಲಮ್ - 17
ಪ್ರಿಯಮೇತದುಪಶ್ರುತ್ಯ ಭರ್ತುರ್ವಿಜಯ ಸಂಶ್ರಿತಮ್ ।
ಪ್ರಹರ್ಷವಶಮಾಪನ್ನಾ ನಿರ್ವಾಕ್ಯಾಸ್ಮಿ ಕ್ಷಣಾಂತರಮ್ ॥
ಅನುವಾದ
ತನ್ನ ಸ್ವಾಮಿಯ ವಿಜಯಕ್ಕೆ ಸಂಬಂಧಿಸಿದ ಈ ಪ್ರಿಯ ಸುದ್ಧಿ ಕೇಳಿ ನಾನು ಆನಂದಮಗ್ನಳಾಗಿದ್ದೆ. ಅದರಿಂದ ಸ್ವಲ್ಪ ಸಮಯದವರೆಗೆ ಬಾಯಿಂದ ಮಾತೆ ಹೊರಡಲಿಲ್ಲ.॥17॥
ಮೂಲಮ್ - 18
ನ ಹಿ ಪಶ್ಯಾಮಿ ಸದೃಶಂ ಚಿಂತಯಂತೀ ಪ್ಲವಂಗಮ ।
ಆಖ್ಯಾನಕಸ್ಯ ಭವತೋ ದಾತುಂ ತವ ಪ್ರತ್ಯಭಿನಂದನಮ್ ॥
ಅನುವಾದ
ವಾನರವೀರನೇ! ಇಂತಹ ಪ್ರಿಯ ಸಮಾಚಾರ ತಿಳಿಸಿದ್ದರಿಂದ ನಿನಗೆ ಏನಾದರೂ ಉಡುಗೊರೆ ಕೊಡಲು ಬಯಸುತ್ತಿದ್ದೇನೆ; ಆದರೆ ತುಂಬಾ ಯೋಚಿಸಿಯೂ ನಿನಗೆ ಕೊಡಬಹುದಾದ ಯಾವುದೇ ಯೋಗ್ಯ ವಸ್ತು ಕಂಡುಬರುವುದಿಲ್ಲ.॥18॥
ಮೂಲಮ್ - 19
ನ ಹಿ ಪಶ್ಯಾಮಿ ತತ್ಸೌಮ್ಯ ಪೃಥಿವ್ಯಾಮಪಿ ವಾನರ ।
ಸದೃಶಂ ಯತ್ಪ್ರಿಯಾಖ್ಯಾನೇ ತವ ದತ್ವಾ ಭವೇತ್ಸುಖಮ್ ॥
ಅನುವಾದ
ಸೌಮ್ಯ ವಾನರವೀರನೇ! ಈ ಪ್ರಿಯಸುದ್ದಿಗೆ ಅನುರೂಪವಾಗುವಂತಹ, ಅದನ್ನು ನಿನಗೆ ಕೊಟ್ಟು ನಾನು ಸಂತುಷ್ಟಳಾಗುವಂತಹ ಯಾವ ವಸ್ತುವೂ ಭೂಮಂಡಲದಲ್ಲಿ ನನಗೆ ಕಾಣುವುದಿಲ್ಲ.॥19॥
ಮೂಲಮ್ - 20
ಹಿರಣ್ಯಂ ವಾ ಸುವರ್ಣಂ ವಾ ರತ್ನಾನಿ ವಿವಿಧಾನಿ ಚ ।
ರಾಜ್ಯಂ ವಾ ತ್ರಿಷು ಲೋಕೇಷು ಏತನ್ನಾರ್ಹತಿ ಭಾಷಿತಮ್ ॥
ಅನುವಾದ
ಚಿನ್ನ, ಬೆಳ್ಳಿ, ನಾನಾ ವಿಧದ ರತ್ನಗಳು, ಅಥವಾ ಮೂರು ಲೋಕದ ರಾಜ್ಯವೂ ಈ ಪ್ರಿಯಸುದ್ಧಿಗೆ ಸರಿಯಾಗಲಾರದು.॥20॥
ಮೂಲಮ್ - 21
ಏವಮುಕ್ತಸ್ತು ವೈದೇಹ್ಯಾ ಪ್ರತ್ಯುವಾಚ ಪ್ಲವಂಗಮಃ ।
ಗೃಹೀತ ಪ್ರಾಂಜಲಿರ್ಹರ್ಷಾತ್ ಸೀತಾಯಾಃ ಪ್ರಮುಖೇ ಸ್ಥಿತಃ ॥
ಅನುವಾದ
ವೈದೇಹಿಯು ಹೀಗೆ ಹೇಳಿದಾಗ ವಾನರ ವೀರ ಹನುಮಂತನು ಪರಮಹರ್ಷಗೊಂಡು ಸೀತೆಯ ಎದುರಿಗೆ ಕೈಮುಗಿದು ನಿಂತುಕೊಂಡು ಹೀಗೆ ಹೇಳಿದನು .॥21॥
ಮೂಲಮ್ - 22
ಭರ್ತುಃ ಪ್ರಿಯಹಿತೇ ಯುಕ್ತೇ ಭರ್ತು ರ್ವಿಜಯಕಾಂಕ್ಷಿಣಿ ।
ಸ್ನಿಗ್ಧಮೇವಂ ವಿಧಂ ವಾಕ್ಯಂ ತ್ವಮೇವಾರ್ಹಸ್ಯನಿಂದಿತೆ ॥
ಅನುವಾದ
ಪತಿಯ ವಿಜಯವನ್ನು ಬಯಸುವ, ಪತಿಯ ಪ್ರೀತಿ ಮತ್ತು ಹಿತದಲ್ಲೇ ಸಂಲಗ್ನಲಾದ ಸೀತಾದೇವಿಯೇ! ನೀವು ಮಾತ್ರ ಇಂತಹ ಸ್ನೇಹಪೂರ್ಣ ಮಾತನ್ನು ಆಡಬಲ್ಲಿರಿ. (ನಿಮ್ಮ ಮಾತಿನಿಂದಲೇ ಎಲ್ಲವನ್ನು ನಾನು ಪಡೆದುಕೊಂಡೆ.॥22॥
ಮೂಲಮ್ - 23
ತವೈತದ್ವಚನಂ ಸೌಮ್ಯೇ ಸಾರವತ್ ಸಿಗ್ಧಮೇವ ಚ ।
ರತ್ನೌಘಾದ್ವಿವಿಧಾಚ್ಚಾಪಿ ದೇವರಾಜ್ಯಾದ್ ವಿಶಿಷ್ಯತೇ ॥
ಅನುವಾದ
ಸೌಮ್ಯ! ನಿಮ್ಮ ಮಾತು ಸಾರಗರ್ಭಿತ ಹಾಗೂ ಸ್ನೇಹಯುಕ್ತವಾಗಿದೆ; ಆದ್ದರಿಂದ ಬಗೆ ಬಗೆಯ ರತ್ನರಾಶಿ ಮತ್ತು ದೇವತೆಗಳ ರಾಜ್ಯಕ್ಕಿಂತಲೂ ಮಿಗಿಲಾಗಿದೆ.॥23॥
ಮೂಲಮ್ - 24
ಅರ್ಥತಶ್ಚ ಮಯಾ ಪ್ರಾಪ್ತಾ ದೇವರಾಜ್ಯಾದಯೋ ಗುಣಾಃ ।
ಹತಶತ್ರುಂ ವಿಜಯಿನಂ ರಾಮಂ ಪಶ್ಯಾಮಿ ಸುಸ್ಥಿತಮ್ ॥
ಅನುವಾದ
ಶ್ರೀರಾಮನು ತನ್ನ ಶತ್ರುವನ್ನು ವಧಿಸಿ ವಿಜಯಿಯಾಗಿ ಕ್ಷೇಮದಿಂದಿರುವನು ಎಂದು ನಾನು ನೋಡಿದಾಗಲೇ ನನ್ನ ಎಲ್ಲ ಪ್ರಯೋಜನಗಳು ಸಿದ್ಧವಾಗಿ ದೇವತೆಗಳ ರಾಜ್ಯಾದಿ ಎಲ್ಲ ಉತ್ಕೃಷ್ಟ ಪದಾರ್ಥಗಳು ನನಗೆ ದೊರಕಿದೆ ಎಂದು ಅನುಭವಿಸುತ್ತೇನೆ.॥24॥
ಮೂಲಮ್ - 25
ತಸ್ಯ ತದ್ವಚನಂ ಶ್ರುತ್ವಾ ಮೈಥಿಲೀ ಜನಕಾತ್ಮಜಾ ।
ತತಃ ಶುಭತರಂ ವಾಕ್ಯಮುವಾಚ ಪವನಾತ್ಮಜಮ್ ॥
ಅನುವಾದ
ಅವನ ಮಾತನ್ನು ಕೇಳಿ ಮೈಥಿಲಿ ಜಾನಕಿಯು ಆ ಪವನ ಕುಮಾರನಲ್ಲಿ ಹೀಗೆ ಪರಮಸುಂದರ ಮಾತನ್ನು ಹೇಳಿದಳು.॥25॥
ಮೂಲಮ್ - 26
ಅತಿಲಕ್ಷಣ ಸಂಪನ್ನಂ ಮಾಧುರ್ಯ ಗುಣಭೂಷಿತಮ್ ।
ಬುದ್ಧ್ಯಾ ಹ್ಯಷ್ಟಾಂಗಯಾ ಯುಕ್ತಂ ತ್ವಮೇವಾರ್ಹಸಿ ಭಾಷಿತುಮ್ ॥
ಅನುವಾದ
ವೀರವರನೇ! ನಿನ್ನ ವಾಣಿಯು ಉತ್ತಮ ಲಕ್ಷಣಗಳಿಂದ ಕೂಡಿದ್ದು, ಮಾಧುರ್ಯ ಗುಣಗಳಿಂದ ಭೂಷಿತ ಹಾಗೂ ಬುದ್ಧಿಯ ಎಂಟು ಗುಣಗಳಿಂದ* ಅಲಂಕೃತವಾಗಿದೆ. ಇಂತಹ ವಾಣಿ ನೀನು ಮಾತ್ರ ಮಾತನಾಡಬಲ್ಲೆ.॥2.॥
ಮೂಲಮ್ - 27
ಶ್ಲಾಘನೀಯೋಽನಿಲಸ್ಯ ತ್ವಂ ಸುತಃ ಪರಮಧಾರ್ಮಿಕಃ ।
ಬಲಂ ಶೌರ್ಯಂ ಶ್ರುತಂ ಸತ್ತ್ವಂ ವಿಕ್ರಮೋ ದಾಕ್ಷ್ಯಮುತ್ತಮಮ್ ॥
ಮೂಲಮ್ - 28
ತೇಜಃ ಕ್ಷಮಾ ಧೃತಿಃಸ್ಥೈರ್ಯಂ ವಿನೀತತ್ವಂ ನ ಸಂಶಯಃ ।
ಏತೇ ಚಾನ್ಯೇ ಚ ಬಹವೋ ಗುಣಾಸ್ತ್ವಯ್ಯೇವ ಶೋಭನಾಃ ॥
ಅನುವಾದ
ನೀನು ವಾಯುದೇವರ ಪ್ರಶಂಸನೀಯ ಪುತ್ರ ಹಾಗೂ ಪರಮಧರ್ಮಾತ್ಮನಾಗಿರುವೆ. ಶಾರೀರಿಕ ಬಲ, ಶೌರ್ಯ, ಶಾಸ್ತ್ರಜ್ಞಾನ, ಮಾನಸಿಕ ಬಲ, ಪರಾಕ್ರಮ, ಉತ್ತಮ ದಕ್ಷತೆ, ತೇಜ, ಕ್ಷಮೆ, ಧೈರ್ಯ, ಸ್ಥಿರತೆ, ವಿನಯ ಹಾಗೂ ಇತರ ಅನೇಕ ಸುಂದರಗುಣಗಳು ಕೇವಲ ನಿನ್ನಲ್ಲೇ ಇವೆ; ಇದರಲ್ಲಿ ಸಂಶಯವೇ ಇಲ್ಲ.॥27-28॥
ಮೂಲಮ್ - 29
ಅಥೋವಾಚ ಪುನಃ ಸೀತಾಮಸಂಭ್ರಾಂತೋ ವಿನೀತವತ್ ।
ಪ್ರಗೃಹೀತಾಂಜಲಿರ್ಹರ್ಷಾತ್ಸೀತಾಯಾಃ ಪ್ರಮುಖೇ ಸ್ಥಿತಃ ॥
ಅನುವಾದ
ಬಳಿಕ ಸೀತೆಯ ಎದುರಿಗೆ ಯಾವುದೇ ಗಾಬರಿ ಇಲ್ಲದೆ ನಿಂತಿರುವ ಹನುಮಂತನು ಕೈಮುಗಿದುಕೊಂಡು ವಿನೀತಭಾವದಿಂದ ಪುನಃ ಹರ್ಷ ದಿಂದ ಇಂತೆಂದನು.॥29॥
ಮೂಲಮ್ - 30
ಇಮಾಸ್ತು ಖಲು ರಾಕ್ಷಸ್ಯೋ ಯದಿ ತ್ವಮನುಮನ್ಯಸೇ ।
ಹಂತುಮಿಚ್ಚಾಮಿ ತಾಃ ಸರ್ವಾ ಯಾಭಿಸ್ತ್ವಂ ತರ್ಜಿತಾ ಪುರಾ ॥
ಅನುವಾದ
ದೇವಿ! ನೀವು ಅಪ್ಪಣೆ ಕೊಟ್ಟರೆ ಮೊದಲು ನಿಮ್ಮನ್ನು ಬಹಳ ಭಯಪಡಿಸಿ ಗದರಿಸುತ್ತಿದ್ದ ಎಲ್ಲ ರಾಕ್ಷಸಿಯರನ್ನು ಕೊಂದು ಹಾಕಲು ಬಯಸುತ್ತೇನೆ.॥30॥
ಮೂಲಮ್ - 31
ಕ್ಲಿಶ್ಯಂತೀಂ ಪತಿದೇವಾಂ ತ್ವಾಮಶೋಕವನಿಕಾಂ ಗತಾಮ್ ।
ಘೋರ ರೂಪ ಸಮಾಚಾರಾಃ ಕ್ರೂರಾಃ ಕ್ರೂರತರೇಕ್ಷಣಾಃ ॥
ಮೂಲಮ್ - 32
ಇಹ ಶ್ರುತಾ ಮಯಾ ದೇವಿ ರಾಕ್ಷಸ್ಯೋ ವಿಕೃತಾನನಾಃ ।
ಅಸಕೃತ್ಪರುಷೈರ್ವಾಕ್ಯೈರ್ವದಂತ್ಯೋ ರಾವಣಾಜ್ಞಯಾ ॥
ಅನುವಾದ
ನಿಮ್ಮಂತಹ ಪತಿವ್ರತೆ ದೇವಿ ಅಶೋಕವನಲ್ಲಿ ಕುಳಿತು ಕ್ಲೇಶಗಳನ್ನು ಅನುಭವಿಸುತ್ತಿರುವಾಗ ಈ ಭಯಂಕರ ರೂಪ ಮತ್ತು ಆಚಾರದಿಂದ ಕೂಡಿದ, ಅತ್ಯಂತ ಕ್ರೂರ ದೃಷ್ಟಿಯುಳ್ಳ, ವಿಕರಾಳ ಮುಖವುಳ್ಳ ರಾಕ್ಷಸಿಯರು ನಿಮಗೆ ಪದೇ ಪದೇ ಕಠೋರ ಮಾತುಗಳಿಂದ ಗದರಿಸುತ್ತಿದ್ದರು. ರಾವಣನ ಆಜ್ಞೆಯಂತೆ ಎಂತೆಂತಹ ಮಾತು ನಿಮ್ಮಲ್ಲಿ ಹೇಳುತ್ತಿದ್ದುದನ್ನು ನಾನು ಇಲ್ಲಿ ಇದ್ದು ಕೇಳಿರುವೆನು.॥31-32॥
ಮೂಲಮ್ - 33
ವಿಕೃತಾ ವಿಕೃತಾಕಾರಾಃ ಕ್ರೂರಾಃ ಕ್ರೂರಕಚೇಕ್ಷಣಾಃ ।
ಇಚ್ಛಾಮಿ ವಿವಿಧೈರ್ಘಾತೈರ್ಹಂತುಮೇತಾಃ ಸುಧಾರುಣಾಃ ॥
ಅನುವಾದ
ಇವರೆಲ್ಲರೂ ವಿಕರಾಳ, ವಿಕಟ ಆಕಾರದ ಕ್ರೂರ ಹಾಗೂ ಅತ್ಯಂತ ದಾರುಣರಾಗಿದ್ದಾರೆ. ಇವರ ಕಣ್ಣುಗಳಿಂದ, ಕೂದಲು ಗಳಿಂದಲೂ ಕ್ರೂರತೆ ಒಸರುತ್ತದೆ. ನಾನು ಇವರೆಲ್ಲರನ್ನೂ ವಧಿಸಲು ಇಚ್ಛಿಸುತ್ತೇನೆ.॥33॥
ಮೂಲಮ್ - 34
ರಾಕ್ಷ್ಯಸ್ಯೋ ದಾರುಣ ಕಥಾ ವರಮೇತತ್ ಪ್ರಯಚ್ಛ ಮೇ ।
ಮುಷ್ಟಿಭಿಃ ಪಾರ್ಷ್ಣಿಘಾತೈಶ್ಚ ವಿಶಾಲೈಶ್ಚೈವ ಬಾಹುಭಿಃ ॥
ಮೂಲಮ್ - 35
ಜಂಘಾಜಾನುಪ್ರಹಾರೈಶ್ಚ ದಂತಾನಾಂ ಚೈವ ಪೀಡನೈಃ ।
ಕರ್ತನೈಃ ಕರ್ಣನಾಸಾನಾಂ ಕೇಶಾನಾಂಲುಂಚನೈಸ್ತಥಾ ॥
ಮೂಲಮ್ - 36½
ನಿಪಾತ್ಯ ಹಂತುಮಿಚ್ಛಾಮಿ ತವ ವಿಪ್ರಿಯಕಾರಿಣೀಃ ।
ಏವಂ ಪ್ರಹಾರೈರ್ಬಹುಭಿಃ ಸಂಪ್ರಹಾರ್ಯ ಯಶಸ್ವಿನಿ ॥
ಘಾತಯೇ ತೀವ್ರ ರೂಪಾಭಿರ್ಯಾಭಿಸ್ತ್ವಂ ತರ್ಜಿತಾ ಪುರಾ ।
ಅನುವಾದ
ಗುದ್ದುಗಳಿಂದ, ಒದೆಗಳಿಂದ, ಅಂಗೈ ಏಟುಗಳಿಂದ, ಮೊಣಕಾಲಿನ ಹೊಡೆತದಿಂದ, ಇವರನ್ನು ಗಾಯಗೊಳಿಸಿ, ಹಲ್ಲು ಉದುರಿಸಿ ಬಿಡುತ್ತೇನೆ. ಇವರ ಮೂಗು ಕಿವಿಗಳನ್ನು ತುಂಡರಿಸಿ, ತಲೆಯ ಕೂದಲುಗಳನ್ನು ಕಿತ್ತು ಬಿಡುವೆನು. ಯಶಸ್ವಿನಿ! ಹೀಗೆ ಅನೇಕ ಪ್ರಹಾರಗಳಿಂದ ಇವರೆಲ್ಲರನ್ನು ಹೊಡೆದು, ಕ್ರೂರವಾಗಿ ಮಾತನಾಡುವ ಈ ಅಪ್ರಿಯಕಾರಿಣಿ ರಾಕ್ಷಸಿಯನ್ನು ಅಪ್ಪಳಿಸಿ ಕೊಂದುಹಾಕುವೆನು. ಮೊದಲು ನಿಮ್ಮನ್ನು ಗದರಿಸಿದ ಭಯಾನಕರೂಪವುಳ್ಳ ರಾಕ್ಷಸಿಯರೆಲ್ಲರನ್ನು ಈಗಲೇ ನಾನು ಕಾಲವಶರಾಗಿಸುವೆನು. ಇದಕ್ಕಾಗಿ ನೀನು ಕೇವಲ ಅಪ್ಪಣೆ ಕೊಡಿರಿ.॥34-36½॥
ಮೂಲಮ್ - 37½
ಇತ್ಯುಕ್ತಾ ಸಾ ಹನುಮತಾ ಕೃಪಣಾ ದೀನವತ್ಸಲಾ ॥
ಹನೂಮಂತಮುವಾಚೇದಂ ಚಿಂತಯಿತ್ವಾ ವಿಮೃಶ್ಯ ಚ ।
ಅನುವಾದ
ಹನುಮಂತನು ಹೀಗೆ ಹೇಳಿದಾಗ ಕರುಣಾಮಯ ಸ್ವಭಾವವುಳ್ಳ ದೀನವತ್ಸಲೆ ಸೀತೆಯು ಮನಸ್ಸಿನಲ್ಲೇ ಏನೋ ಯೋಚಿಸಿ ಅವನಲ್ಲಿ ಹೀಗೆ ಹೇಳಿದಳು.॥37½॥
ಮೂಲಮ್ - 38
ರಾಜಸಂಶ್ರಯವಶ್ಯಾನಾಂ ಕುರ್ವಂತೀನಾಂ ಪರಾಜ್ಞಯಾ ॥
ಮೂಲಮ್ - 39
ವಿಧೇಯಾನಾಂ ಚ ದಾಸೀನಾಂ ಕಃ ಕುಪ್ಯೇದ್ವಾನರೋತ್ತಮ ।
ಭಾಗ್ಯವೈಷಮ್ಯದೋಷೇಣ ಪುರಸ್ತಾದ್ದುಶ್ಚರಿತೇನ ಚ ॥
ಮೂಲಮ್ - 40
ಮಯೈತತ್ಪ್ರಾಪ್ಯತೇ ಸರ್ವಂ ಸ್ವಕೃತಂ ಹ್ಯುಪಭುಜ್ಯತೇ ।
ಮೈವಂ ವದ ಮಹಾಬಾಹೋ ದೈವೀ ಹ್ಯೇಷಾ ಪರಾ ಗತಿಃ ॥
ಅನುವಾದ
ಕಪಿಶ್ರೇಷ್ಠನೇ! ಈ ಬಡಪಾಯಿಗಳು ರಾಜನ ಆಶ್ರಯದಲ್ಲಿದ್ದು ಪರಾಧೀನರಾಗಿದ್ದರು. ಬೇರೆಯವರ ಆಜ್ಞೆಯಿಂದಲೇ ಎಲ್ಲವನ್ನು ಮಾಡುತ್ತಿದ್ದರು; ಆದ್ದರಿಂದ ಒಡೆಯನ ಆಜ್ಞೆಯನ್ನು ಪಾಲಿಸುವ ಈ ದಾಸಿಯರ ಮೇಲೆ ಯಾರು ತಾನೇ ಕ್ರೋಧಗೊಳ್ಳುವರು? ನನ್ನ ಭಾಗ್ಯವೇ ಚೆನ್ನಾಗಿರಲಿಲ್ಲ. ನನ್ನ ಹಿಂದಿನ ಜನ್ಮದ ದುಷ್ಕರ್ಮವೇ ತನ್ನ ಫಲ ಕೊಡುತ್ತಿತ್ತು, ಅದಕ್ಕಾಗಿ ನನಗೆ ಇದೆಲ್ಲ ಕಷ್ಟಗಳು ಪ್ರಾಪ್ತವಾದುವು; ಏಕೆಂದರೆ ಎಲ್ಲ ಪ್ರಾಣಿಗಳು ತಾವು ಮಾಡಿದ ಶುಭಾಶುಭ ಕರ್ಮಗಳ ಫಲವನ್ನೇ ಅನುಭವಿಸುತ್ತಾರೆ. ಮಹಾಬಾಹೋ! ನೀನು ಇವರನ್ನು ಕೊಲ್ಲುವ ಮಾತನ್ನು ಹೇಳಬೇಡ. ನನಗಾಗಿ ದೈವದ ವಿಧಾನವೇ ಹೀಗಿತ್ತು.॥38-40॥
ಮೂಲಮ್ - 41
ಪ್ರಾಪ್ತವ್ಯಂ ತು ದಶಾಯೋಗಾನ್ಮಯೈತದಿತಿ ನಿಶ್ಚಿತಮ್ ।
ದಾಸೀನಾಂ ರಾವಣಸ್ಯಾಹಂ ಮರ್ಷಯಾಮೀಹ ದುರ್ಬಲಾ ॥
ಅನುವಾದ
ನನಗೆ ಹಿಂದಿನ ಕರ್ಮ ಜನಿತ ದೆಸೆಯಿಂದ ಇವೆಲ್ಲ ದುಃಖಗಳನ್ನು ಖಂಡಿತವಾಗಿ ಭೋಗಿಸುವುದಿತ್ತು; ಇದಕ್ಕಾಗಿ ರಾವಣನ ದಾಸಿಯರಿಂದ ಏನಾದರೂ ಅಪರಾಧ ನಡೆದಿದ್ದರೆ, ಅದನ್ನು ನಾನು ಕ್ಷಮಿಸುತ್ತೇನೆ; ಏಕೆಂದರೆ ಇವರ ಕುರಿತು ದಯೆಯ ಉದ್ರೇಕದಿಂದ ನಾನು ದುರ್ಬಲಳಾಗಿದ್ದೇನೆ.॥41॥
ಮೂಲಮ್ - 42
ಆಜ್ಞಪ್ತಾ ರಾಕ್ಷಸೇನೇಹ ರಾಕ್ಷಸ್ಯಸ್ತರ್ಜಯಂತಿ ಮಾಮ್ ।
ಹತೇ ತಸ್ಮಿನ್ನ ಕುರ್ವಂತಿ ತರ್ಜನಂ ಮಾರುತಾತ್ಮಜ ॥
ಅನುವಾದ
ಪವನಕುಮಾರನೇ! ಆ ರಾಕ್ಷಸನ ಆಜ್ಞೆಯಿಂದಲೇ ಇವರು ನನ್ನನ್ನು ಗದರಿಸುತ್ತಿದ್ದರು. ಅವನು ಸತ್ತುಹೋದಾಗಿನಿಂದ ಈ ಬಡಪಾಯಿಗಳು ನನಗೆ ಏನನ್ನು ಹೇಳುವುದಿಲ್ಲ. ಭಯಪಡಿಸುವುದು, ಗದರಿಸುವುದೆಲ್ಲ ಬಿಟ್ಟು ಬಿಟ್ಟಿರುವರು.॥42॥
ಮೂಲಮ್ - 43
ಅಯಂ ವ್ಯಾಘ್ರಸಮೀಪೇ ತು ಪುರಾಣೋ ಧರ್ಮಸಂಹಿತಃ ।
ಋಕ್ಷೇಣ ಗೀತಃ ಶ್ಲೋಕೋಽಸ್ತಿ ತಂ ನಿಬೋಧ ಪ್ಲವಂಗಮ ॥
ಅನುವಾದ
ವಾನರವೀರನೇ! ಈ ವಿಷಯದಲ್ಲಿ ಹಳೆಯ ಒಂದು ಧರ್ಮಸಮ್ಮತ ಶ್ಲೋಕವಿದೆ. ಅದನ್ನು ಯಾವುದೋ ಹುಲಿಗೆ ಕರಡಿಯು ಹೇಳಿತ್ತು*. ಅದನ್ನು ನಾನು ತಿಳಿಸುತ್ತೇನೆ, ಕೇಳು.॥43॥
ಟಿಪ್ಪನೀ
- ಬಹಳ ಹಿಂದಿನ ಘಟನೆ-ಒಂದು ಹುಲಿಯು ಒಬ್ಬಬೇಡನನ್ನು ಬೆನ್ನಟ್ಟಿತ್ತು. ವ್ಯಾಧನು ಒಂದು ಮರವನ್ನು ಹತ್ತಿದನು. ಆ ಮರದ ಮೇಲೆ ಮೊದಲೇ ಒಂದು ಕರಡಿ ಕೂತ್ತಿತ್ತು. ಹುಲಿಯು ಮರದ ಬುಡಕ್ಕೆ ಹೋಗಿ, ಮರದ ಮೇಲಿನ ಕರಡಿಗೆ ಹೇಳಿತು-ನಾವಿಬ್ಬರೂ ವನ್ಯಜೀವಿಗಳು, ಈ ಬೇಡನು ನಮ್ಮಿಬ್ಬರಿಗೂ ಶತ್ರುವಾಗಿದ್ದಾನೆ; ಆದ್ದರಿಂದ ಇವನನ್ನು ಮರದಿಂದ ಕೆಳಗೆ ತಳ್ಳಿಬಿಡು. ಆಗ ಕರಡಿ ಎಂದಿತು-ಈ ವ್ಯಾಧನು ನನ್ನ ನಿವಾಸಕ್ಕೆ ಬಂದು ಒಂದು ರೀತಿಯಿಂದ ಶರಣು ಬಂದಿರುವನು. ಆದ್ದರಿಂದ ಇವನನ್ನು ಕೆಳಗೆ ತಳ್ಳಲಾರೆ. ತಳ್ಳಿಬಿಟ್ಟರೆ ಧರ್ಮದ ಹಾನಿಯಾದೀತು. ಹೀಗೆ ಹೇಳಿ ಕರಡಿ ಮಲಗಿಬಿಟ್ಟಿತು. ಆಗ ಹುಲಿಯು ಬೇಡನಿಗೆ ಹೇಳಿತು. ನೋಡು, ಈ ಮಲಗಿರುವ ಕರಡಿಯನ್ನು ಕೆಳಗೆ ಬೀಳಿಸು, ನಾನು ನಿನ್ನನ್ನು ರಕ್ಷಿಸುವೆನು. ಅದು ಹಾಗೆ ಹೇಳಿದಾಗ ವ್ಯಾಧನು ಆ ಕರಡಿಯನ್ನು ತಳ್ಳಿದನು. ಆದರೆ ಕರಡಿ ಅಭ್ಯಾಸಬಲದಿಂದ ಮತ್ತೊಂದು ರೆಂಬೆಯನ್ನು ಹಿಡಿದುಕೊಂಡು ಕೆಳಗೆ ಬೀಳಲಿಲ್ಲ. ಆಗ ಹುಲಿಯು ಕರಡಿಗೆ ಹೇಳಿತು-ಈ ಬೇಡನು ನಿನ್ನನ್ನು ಬೀಳಿಸಲು ಬಯಸುತ್ತಿದ್ದನು. ಆದ್ದರಿಂದ ಅಪರಾಧಿಯಾಗಿದ್ದಾನೆ. ಅದಕ್ಕಾಗಿ ಈಗ ಇವನನ್ನು ಕೆಳಕ್ಕೆ ಬೀಳಿಸಿ ಬಿಡು. ಹುಲಿಯು ಹಿಂದೆ ಪದೇ ಪದೇ ಪ್ರಚೋದಿಸುತ್ತಿದ್ದರೂ ಕರಡಿಯು ಆ ಬೇಡನನ್ನು ಬೀಳಿಸಲಿಲ್ಲ. ಹಾಗೂ ‘ನ ಪರಃ ಪಾಪಮಾದತೆ’ ಈ ಶ್ಲೋಕವನ್ನು ಹೇಳಿ ಹುಲಿಗೆ ಮುಖಮುರಿಯುವಂತೆ ಉತ್ತರಿಸಿತು. (ರಾಮಾಯಣಭೂಷಣ ಟೀಕೆಯಿಂದ)
ಮೂಲಮ್ - 44
ನ ಪರಃ ಪಾಪಮಾದತ್ತೇ ಪರೇಷಾಂ ಪಾಪ ಕರ್ಮಣಾಮ್ ।
ಸಮಯೋ ರಕ್ಷಿತವ್ಯಸ್ತು ಸಂತಶ್ಚಾರಿತ್ರಭೂಷಣಾಃ ॥
ಅನುವಾದ
ಶ್ರೇಷ್ಠ ಪುರುಷರು ಕೆಡುಕು ಮಾಡುವ ಪಾಪಿಗಳ ಪಾಪವನ್ನು ತಾವು ಮಾಡುವುದಿಲ್ಲ. ಬದಲಾಗಿ ಅವರೊಂದಿಗೆ ತಾನೂ ಪಾಪಪೂರ್ಣವಾಗಿ ವರ್ತಿಸುವುದಿಲ್ಲ. ಆದ್ದರಿಂದ ತನ್ನ ಪ್ರತಿಜ್ಞೆ ಹಾಗೂ ಸದಾಚಾರವನ್ನೇ ರಕ್ಷಿಸಬೇಕು. ಏಕೆಂದರೆ ಸಾಧುಪುರುಷರು ತಮ್ಮ ಉತ್ತಮ ಚರಿತ್ರದಿಂದಲೇ ವಿಭೂಷಿತರಾಗಿರುತ್ತಾರೆ. ಸದಾಚಾರವೇ ಅವರ ಆ ಭೂಷಣವಾಗಿದೆ.॥44॥
ಮೂಲಮ್ - 45
ಪಾಪಾನಾಂ ವಾ ಶುಭಾನಾಂ ವಾ ವಧಾರ್ಹಾಣಾಮಥಾಪಿ ವಾ ।
ಕಾರ್ಯಂ ಕಾರುಣ್ಯಮಾರ್ಯೇಣ ನ ಕಶ್ಚಿನ್ನಾಪರಾಧ್ಯತಿ ॥
ಅನುವಾದ
ಯಾರೇ ಪಾಪಿ ಅಥವಾ ಪುಣ್ಯಾತ್ಮಾ, ಇಲ್ಲವೇ ವಧೆಗೆ ಯೋಗ್ಯ ಅಪರಾಧ ಮಾಡಿದವನೇ ಆಗಿರಲಿ ಶ್ರೇಷ್ಠ ಪುರುಷರು ಅವರ ಮೇಲೆ ದಯೆ ಮಾಡಬೇಕು; ಏಕೆಂದರೆ ಯಾವುದೇ ಅಪರಾದ ಮಾಡದ ವ್ಯಕ್ತಿ ಯಾರೂ ಇಲ್ಲ.॥45॥
ಮೂಲಮ್ - 46
ಲೋಕಹಿಂಸಾ ವಿಹಾರಾಣಾಂ ಕ್ರೂರಾಣಾಂ ಪಾಪಕರ್ಮಣಾಮ್ ।
ಕುರ್ವತಾಮಪಿ ಪಾಪಾನಿ ನೈವ ಕಾರ್ಯಮಶೋಭನಮ್ ॥
ಅನುವಾದ
ಯಾರು ಜನರ ಹಿಂಸೆಯಲ್ಲೇ ರಮಿಸುತ್ತಾ, ಸದಾ ಪಾಪವನ್ನೇ ಆಚರಿಸುವನೋ, ಆ ಕ್ರೂರ ಸ್ವಭಾವದ ಪಾಪಿಗಳಿಗೂ ಎಂದೂ ಅಮಂಗಳ ಮಾಡಬಾರದು.॥46॥
ಮೂಲಮ್ - 47
ಏವಮುಕ್ತಸ್ತು ಹನುಮಾನ್ ಸೀತಯಾ ವಾಕ್ಯಕೋವಿದಃ ।
ಪ್ರತ್ಯುವಾಚ ತತಃ ಸೀತಾಂ ರಾಮಪತ್ನೀ ಮನಿಂದಿತಾಮ್ ॥
ಅನುವಾದ
ಸೀತೆಯು ಹೀಗೆ ಹೇಳಿದಾಗ ವಾಕ್ಯಕೋವಿದನಾದ ಹನುಮಂತನು ಆ ಸತೀ-ಸಾಧ್ವೀ ಶ್ರೀರಾಮಪತ್ನಿಗೆ ಹೀಗೆ ಉತ್ತರಿಸಿದನು.॥47॥
ಮೂಲಮ್ - 48
ಯುಕ್ತಾ ರಾಮಸ್ಯ ಭವತೀ ಧರ್ಮಪತ್ನೀ ಗುಣಾನ್ವಿತಾ ।
ಪ್ರತಿಸಂದಿಶ ಮಾಂ ದೇವಿ ಗಮಿಷ್ಯೇ ಯತ್ರ ರಾಘವಃ ॥
ಅನುವಾದ
ದೇವಿ! ನೀವು ಶ್ರೀರಾಮನ ಧರ್ಮಪತ್ನಿಯಾಗಿದ್ದೀರಿ. ಆದ್ದರಿಂದ ಇಂತಹ ಸದ್ಗುಣಗಳಿಂದ ಸಂಪನ್ನರಾಗಿರುವುದು ಉಚಿತವೇ ಆಗಿದೆ. ಈಗ ನೀವು ನಿಮ್ಮ ಕಡೆಯಿಂದ ನನಗೆ ಸಂದೇಶ ಹೇಳಿರಿ. ನಾನು ಶ್ರೀರಾಮನ ಬಳಿಗೆ ಹೋಗುವೆನು.॥48॥
ಮೂಲಮ್ - 49
ಏವಮುಕ್ತಾ ಹನುಮತಾ ವೈದೇಹೀ ಜನಕಾತ್ಮಜಾ ।
ಸಾಬ್ರವೀದ್ದ್ರಷ್ಟುಮಿಚ್ಛಾಮಿ ಭರ್ತಾರಂ ಭಕ್ತವತ್ಸಲಮ್ ॥
ಅನುವಾದ
ಹನುಮಂತನು ಹೀಗೆ ಹೇಳಿದಾಗ ವಿದೇಹನಂದಿನೀ ಜಾನಕಿಯು ಹೇಳಿದಳು - ನಾನು ನನ್ನ ಭಕ್ತವತ್ಸಲ ಸ್ವಾಮಿಯ ದರ್ಶನ ಮಾಡಲು ಬಯಸುತ್ತಿರುವೆನು.॥49॥
ಮೂಲಮ್ - 50
ತಸ್ಯಾಸ್ತದ್ವಚನಂ ಶ್ರುತ್ವಾ ಹನೂಮಾನ್ಮಾರುತಾತ್ಮಜಃ ।
ಹರ್ಷಯನ್ಮೈಥಿಲೀಂ ವಾಕ್ಯಮುವಾಚೇದಂ ಮಹಾಮತಿಃ ॥
ಅನುವಾದ
ಸೀತೆಯ ಮಾತನ್ನು ಕೇಳಿ ಪರಮ ಬುದ್ಧಿವಂತ ಪವನನಂದನನು ಆ ಮಿಥಿಲೇಶ ಕುಮಾರಿಯ ಹರ್ಷವನ್ನು ಹೆಚ್ಚಿಸುತ್ತಾ ಇಂತೆಂದನು.॥50॥
ಮೂಲಮ್ - 51
ಪೂರ್ಣಚಂದ್ರಮುಖಂ ರಾಮಂ ದ್ರಕ್ಷ್ಯಸ್ಯದ್ಯ ಸ ಲಕ್ಷ್ಮಣಮ್ ।
ಸ್ಥಿತಮಿತ್ರಂ ಹತಾಮಿತ್ರಂ ಶಚೀವೇಂದ್ರಂ ಸುರೇಶ್ವರಮ್ ॥
ಅನುವಾದ
ದೇವಿ! ಶಚಿಯು ದೇವೇಂದ್ರನ ದರ್ಶನ ಮಾಡುವಂತೆಯೇ ನೀವು ಪೂರ್ಣಚಂದ್ರನಂತೆ ಮನೋಹರ ಮುಖವುಳ್ಳ ಮಿತ್ರರು ಇದ್ದು ಶತ್ರುಗಳು ನಾಶವಾದ ಶ್ರೀರಾಮನನ್ನು ಮತ್ತು ಲಕ್ಷ್ಮಣರನ್ನು ಇಂದೇ ನೋಡುವಿರಿ.॥51॥
ಮೂಲಮ್ - 52
ತಾಮೇವಮುಕ್ತ್ವಾಭ್ರಾಜಂತೀಂ ಸೀತಾಂ ಸಾಕ್ಷಾದಿವಶ್ರಿಯಮ್ ।
ಆಜಗಾಮ ಮಹಾತೇಜಾ ಹನೂಮಾನ್ ಯತ್ರ ರಾಘವಃ ॥
ಅನುವಾದ
ಸಾಕ್ಷಾತ್ ಲಕ್ಷ್ಮಿಯಂತೆ ಸುಶೋಭಿತಳಾದ ಸೀತಾದೇವಿಯಲ್ಲಿ ಹೀಗೆ ಹೇಳಿ, ಮಹಾತೇಜಸ್ವೀ ಹನುಮಂತನು ಅಲ್ಲಿಂದ ಮರಳಿ ಶ್ರೀರಾಮನು ವಿರಾಜಿಸು ತ್ತಿದ್ದಲ್ಲಿಗೆ ಬಂದನು.॥52॥
ಮೂಲಮ್ - 53
ಸಪದಿ ಹರಿವರಸ್ತತೋ ಹನೂಮಾನ್
ಪ್ರತಿವಚನಂ ಜನಕೇಶ್ವರಾತ್ಮಜಾಯಾಃ ।
ಕಥಿತಮಕಥಯದ್ಯಥಾಕ್ರಮೇಣ
ತ್ರಿದಶವರ ಪ್ರತಿಮಾಯ ರಾಘವಾಯ ॥
ಅನುವಾದ
ಅಲ್ಲಿಂದ ಮರಳಿದ ಕಪಿವರ ಹನುಮಂತನು ದೇವೇಂದ್ರನಂತೆ ತೇಜಸ್ವೀ ಶ್ರೀರಘುನಾಥನಲ್ಲಿ ಜನಕಕಿಶೋರಿ ಸೀತೆಯು ಹೇಳಿದ ಉತ್ತರವನ್ನು ಕ್ರಮವಾಗಿ ತಿಳಿಸಿದನು.॥53॥
ಮೂಲಮ್ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರ ಹದಿಮೂರನೆಯ ಸರ್ಗ ಪೂರ್ಣವಾಯಿತು. ॥113॥