वाचनम्
ಭಾಗಸೂಚನಾ
ವಿಭೀಷಣನ ರಾಜ್ಯಾಭಿಷೇಕ, ಹನುಮಂತನ ಮೂಲಕ ಸೀತಾದೇವಿಗೆ ಸಂದೇಶ
ಮೂಲಮ್ - 1
ತೇ ರಾವಣ ವಧಂ ದೃಷ್ಟ್ವಾದೇವಗಂಧರ್ವ ದಾನವಾಃ ।
ಜಗ್ಮುಃ ಸ್ವೈಃ ಸ್ವೈರ್ವಿಮಾನೈಸ್ತೇ ಕಥಯಂತಃ ಶುಭಾಃ ಕಥಾಃ ॥
ಅನುವಾದ
ದೇವ, ಗಂಧರ್ವ, ದಾನವರು ಶ್ರೀರಾಮನಿಂದ ರಾವಣನ ವಧೆಯಾದುದನ್ನು ನೋಡಿ, ಅದರ ಮಂಗಳಕರ ಕಥೆಗಳನ್ನು ಹೇಳಿಕೊಳ್ಳುತ್ತಾ ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು.॥1॥
ಮೂಲಮ್ - 2
ರಾವಣಸ್ಯ ವಧಂ ಘೋರಂ ರಾಘವಸ್ಯ ಪರಾಕ್ರಮಮ್ ।
ಸುಯುದ್ಧಂ ವಾನರಾಣಾಂ ಚ ಸುಗ್ರೀವಸ್ಯ ಚ ಮಂತ್ರಿತಮ್ ॥
ಮೂಲಮ್ - 3½
ಅನುರಾಗಂ ಚ ವೀರ್ಯಂ ಚ ಮಾರುತೇ ರ್ಲಕ್ಷ್ಮಣಸ್ಯ ಚ ।
ಪತಿವ್ರತಾತ್ವಂ ಸೀತಾಯಾ ಹನೂಮತಿ ಪರಾಕ್ರಮಮ್ ॥
ಕಥಯಂತೋ ಮಹಾಭಾಗಾ ಜಗ್ಮುರ್ಹೃಷ್ಟಾ ಯಥಾಗತಮ್ ।
ಅನುವಾದ
ರಾವಣನ ಭಯಂಕರ ವಧೆ, ಶ್ರೀರಾಮನ ಪರಾಕ್ರಮ, ವಾನರರ ಉತ್ತಮಯುದ್ಧ, ಸುಗ್ರೀವನ ಮಂತ್ರಾಲೋಚನೆ, ಶ್ರೀರಾಮನ ಕುರಿತು ಲಕ್ಷ್ಮಣ-ಹನುಮಂತರ ಭಕ್ತಿ, ಅವರಿಬ್ಬರ ಪರಾಕ್ರಮ, ಸೀತೆಯ ಪಾತಿವ್ರತ್ಯ, ಹನುಮಂತನ ಪುರುಷಾರ್ಥದ ಮಾತುಗಳನ್ನು ಹೇಳಿಕೊಳ್ಳುತ್ತಾ ಆ ಮಹಾ ಭಾಗ ದೇವತೆಗಳೇ ಮೊದಲಾದವರು ಸಂತೋಷಗೊಂಡು ಹೊರಟುಹೋದರು.॥2-3॥
ಮೂಲಮ್ - 4½
ರಾಘವಸ್ತು ರಥಂ ದಿವ್ಯಮಿಂದ್ರದತ್ತಂ ಶಿಖಿಪ್ರಭಮ್ ॥
ಅನುಜ್ಞಾಪ್ಯ ಮಹಾಬಾಹುರ್ಮಾತಲಿಂ ಪ್ರತ್ಯಪೂಜಯತ್ ।
ಅನುವಾದ
ಬಳಿಕ ಮಹಾಬಾಹು ಭಗವಾನ್ ಶ್ರೀರಾಮನು ಇಂದ್ರನು ಕಳಿಸಿದ ಅಗ್ನಿಯಂತೆ ದೇದೀಪ್ಯಮಾನವಾದ ದಿವ್ಯರಥವನ್ನು ಕೊಂಡು ಹೋಗಲು ಹೇಳಿ, ಮಾತಲಿಯನ್ನು ಬಹಳವಾಗಿ ಸಮ್ಮಾನಿಸಿದನು.॥4॥
ಮೂಲಮ್ - 5½
ರಾಘವೇಣ್ಯಾಭ್ಯನುಜ್ಞಾತೋ ಮಾತಲಿಃ ಶಕ್ರಸಾರಥಿಃ ॥
ದಿವ್ಯಂ ತಂ ರಥಮಾಸ್ಥಾಯ ದಿವಮೇವೋತ್ಪತಾತ ಹ ।
ಅನುವಾದ
ಆಗ ಇಂದ್ರಸಾರಥಿ ಮಾತಲಿಯು ಶ್ರೀರಾಮ ಚಂದ್ರನ ಅಪ್ಪಣೆಯಂತೆ ಆ ದಿವ್ಯರಥದಲ್ಲಿ ಕುಳಿತು ದೇವಲೋಕಕ್ಕೆ ತೆರಳಿದನು.॥5॥
ಮೂಲಮ್ - 6½
ತಸ್ಮಿಂಸ್ತು ದಿವಮಾರೂಢೇ ಸರಥೇ ರಥಿನಾಂ ವರಃ ॥
ರಾಘವಃ ಪರಮಪ್ರೀತಃ ಸುಗ್ರೀವಂ ಪರಿಷಸ್ವಜೇ ।
ಅನುವಾದ
ರಥಸಹಿತ ಮಾತಲಿಯು ದೇವ ಲೋಕಕ್ಕೆ ತೆರಳಿದ ಬಳಿಕ ರಥಿಗಳಲ್ಲಿ ಶ್ರೇಷ್ಠ ಶ್ರೀರಾಮನು ಬಹಳ ಸಂತೋಷದಿಂದ ಸುಗ್ರೀವನನ್ನು ಬಿಗಿದಪ್ಪಿಕೊಂಡನು.॥6॥
ಮೂಲಮ್ - 7½
ಪರಿಷ್ವಜ್ಯ ಚ ಸುಗ್ರೀವಂ ಲಕ್ಷ್ಮಣೇನಾಭಿವಾದಿತಃ ॥
ಪೂಜ್ಯಮಾನೋ ಹರಿಗಣೈರಾಜಗಾಮ ಬಲಾಲಯಮ್ ।
ಅನುವಾದ
ಸುಗ್ರೀವನನ್ನು ಆಲಿಂಗಿಸಿಕೊಂಡ ಬಳಿಕ ಅವನು ಲಕ್ಷ್ಮಣನ ಕಡೆಗೆ ನೋಡಿದಾಗ ಲಕ್ಷ್ಮಣನು ಶ್ರೀರಾಮನ ಚರಣಗಳಲ್ಲಿ ವಂದಿಸಿದನು. ಮತ್ತೆ ವಾನರ ಸೈನಿಕರಿಂದ ಸಮ್ಮಾನಿತರಾಗಿ ಶಿಬಿರಕ್ಕೆ ಮರಳಿದನು.॥7॥
ಮೂಲಮ್ - 8
ಅಥೋವಾಚ ಸ ಕಾಕುತ್ಸ್ಥಃ ಸಮೀಪ ಪರಿವರ್ತಿನಮ್ ॥
ಮೂಲಮ್ - 9½
ಸೌಮಿತ್ರಿಂ ಸತ್ತ್ವಸಂಪನ್ನಂ ಲಕ್ಷ್ಮಣಂ ದೀಪ್ತತೇಜಸಮ್ ।
ವಿಭೀಷಣಮಿಮಂ ಸೌಮ್ಯ ಲಂಕಾಯಾಮಭಿಷೇಚಯ ॥
ಅನುರಕ್ತಂ ಚ ಭಕ್ತಂ ಚ ತಥಾ ಪೂರ್ವೋಪಕಾರಿಣಮ್ ।
ಅನುವಾದ
ಅಲ್ಲಿಗೆ ಬಂದು ಶ್ರೀರಾಮನು ತನ್ನ ಬಳಿಯಲ್ಲಿ ನಿಂತಿರುವ ಬಲ ಮತ್ತು ಉದ್ದೀಪ್ತತೇಜದಿಂದ ಸಂಪನ್ನನಾದ ಸುಮಿತ್ರಾಕುಮಾರನಲ್ಲಿ ಸೌಮ್ಯನೇ! ಈಗ ನೀನು ಲಂಕೆಗೆ ಹೋಗಿ ವಿಭೀಷಣನ ಪಟ್ಟಾಭಿಷೇಕ ಮಾಡು; ಏಕೆಂದರೆ ಇವನು ನನ್ನ ಪ್ರಿಯನೂ, ಭಕ್ತನೂ, ಉಪಕಾರ ಮಾಡಿದವನೂ ಆಗಿದ್ದಾನೆ.॥8-9॥
ಮೂಲಮ್ - 10½
ಏಷ ಮೇ ಪರಮಃ ಕಾಮೋ ಯದೀಮಂ ರಾವಣಾನುಜಮ್ ॥
ಲಂಕಾಯಾಂ ಸೌಮ್ಯ ಪಶ್ಯೇಯಮಭಿಷಿಕ್ತಂ ವಿಭೀಷಣಮ್ ।
ಅನುವಾದ
ಸೌಮ್ಯ! ರಾವಣನ ತಮ್ಮನಾದ ವಿಭೀಷಮನು ಲಂಕೆಯ ರಾಜ್ಯಕ್ಕೆ ಅಭಿಷಿಕ್ತನಾಗಿರುವುದನ್ನು ನಾನು ನೋಡಲು ಇಚ್ಛಿಸುತ್ತೇನೆ.॥10॥
ಮೂಲಮ್ - 11
ಏವಮುಕ್ತಸ್ತು ಸೌಮಿತ್ರೀ ರಾಘವೇಣ ಮಹಾತ್ಮನಾ ॥
ಮೂಲಮ್ - 12½
ತಥೇತ್ಯುಕ್ತ್ವಾ ಸುಸಂಹೃಷ್ಟಃ ಸೌವರ್ಣಂ ಘಟಮಾದದೇ ।
ತಂ ಘಟಂ ವಾನರೇಂದ್ರಾಣಾಂ ಹಸ್ತೇ ದತ್ತ್ವಾ ಮನೋಜವಾನ್ ॥
ವ್ಯಾದಿದೇಶ ಮಹಾಸತ್ತ್ವಾನ್ ಸಮುದ್ರಸಲಿಲಂ ತದಾ ।
ಅನುವಾದ
ಮಹಾತ್ಮಾ ಶ್ರೀರಘುನಾಥನು ಹೀಗೆ ಹೇಳಿದಾಗ ಲಕ್ಷ್ಮಣನಿಗೆ ಬಹಳ ಸಂತೋಷವಾಗಿ, ‘ಹಾಗೆಯೇ ಆಗಲಿ’ ಎಂದು ಹೇಳಿ ಸ್ವರ್ಣ ಕಲಶವನ್ನು ವಾನರ ಸೇನಾಪತಿಗಳಿಗೆ ಕೊಟ್ಟು, ಆ ಮಹಾಶಕ್ತಿಶಾಲಿ, ಮನೋವೇಗವುಳ್ಳ ವಾನರರಿಗೆ ಸಮುದ್ರದ ನೀರನ್ನು ತರಲು ಹೇಳಿದನು.॥11-12॥
ಮೂಲಮ್ - 13½
ಅತಿಶೀಘ್ರಂ ತತೋ ಗತ್ವಾ ವಾನರಾಸ್ತೇ ಮನೋಜವಾಃ ॥
ಆಗತಾಸ್ತುಜಲಂ ಗೃಹ್ಯ ಸಮುದ್ರಾದ್ ವಾನರೋತ್ತಮಾಃ ।
ಅನುವಾದ
ಆ ಮನೋವೇಗೀ ಶ್ರೇಷ್ಠವಾನರರು ಕೂಡಲೇ ಹೋಗಿ ಸಮುದ್ರದ ನೀರನ್ನು ಎತ್ತಿಕೊಂಡು ಬಂದರು.॥13॥
ಮೂಲಮ್ - 14
ತತಸ್ತ್ವೇಕಂ ಘಟಂ ಗೃಹ್ಯ ಸಂಸ್ಥಾಪ್ಯ ಪರಮಾಸನೇ ॥
ಮೂಲಮ್ - 15
ಘಟೇನ ತೇನ ಸೌಮಿತ್ರಿರಭ್ಯಷಿಂಚದ್ ವಿಭೀಷಣಮ್ ।
ಲಂಕಾಯಾಂ ರಕ್ಷಸಾಂ ಮಧ್ಯೇ ರಾಜಾನಂ ರಾಮಶಾಸನಾತ್ ॥
ಮೂಲಮ್ - 16
ವಿಧಿನಾ ಮಂತ್ರದೃಷ್ಟೇನ ಸುಹೃದ್ಗಣ ಸಮಾವೃತಮ್ ।
ಅಭ್ಯಷಿಂಚಂ ಸ್ತದಾ ಸರ್ವೇ ರಾಕ್ಷಸಾ ವಾನರಾಸ್ತಥಾ ॥
ಅನುವಾದ
ಅನಂತರ ಲಕ್ಷ್ಮಣನು ಒಂದು ಕಲಶವನ್ನು ಉತ್ತಮ ಆಸನದಲ್ಲಿ ಸ್ಥಾಪಿಸಿ, ಆ ಕಲಶದ ನೀರಿನಿಂದ ವೇದೋಕ್ತ ವಿಧಾನದಿಂದ ಲಂಕೆಯ ಸಿಂಹಾಸನದ ಮೇಲೆ ವಿಭೀಷಣನ ರಾಜ್ಯಾಭಿಷೇಕ ಮಾಡಿದನು. ಆಗ ರಾಕ್ಷಸರಿಂದ ಪರಿವೃತನಾಗಿ ವಿಭೀಷಣನು ರಾಜಸಿಂಹಾಸನದಲ್ಲಿ ವಿರಾಜಿಸುತ್ತಿದ್ದನು. ಲಕ್ಷ್ಮಣನ ಬಳಿಕ ಎಲ್ಲ ರಾಕ್ಷಸರು ಮತ್ತು ವಾನರರೂ ಅವನ ಅಭಿಷೇಕ ಮಾಡಿದರು.॥14-16॥
ಮೂಲಮ್ - 17
ಪ್ರಹರ್ಷಮತುಲಂ ಗತ್ವಾ ತುಷ್ಟುವೂ ರಾಮಮೇವ ಹಿ ।
ತಸ್ಯಾಮಾತ್ಯಾ ಜಹೃಷಿರೇ ಭಕ್ತಾ ಯೇ ಚಾಸ್ಯ ರಾಕ್ಷಸಾಃ ॥
ಮೂಲಮ್ - 18
ದೃಷ್ಟ್ವಾಭಿಷಿಕ್ತಂ ಲಂಕಾಯಾಂ ರಾಕ್ಷಸೇಂದ್ರಂ ವಿಭೀಷಣಮ್ ।
ರಾಘವಃ ಪರಮಾಂ ಪ್ರೀತಿಂ ಜಗಾಮ ಸಹಲಕ್ಷ್ಮಣಃ ॥
ಅನುವಾದ
ಅವನು ಅತ್ಯಂತ ಸಂತೋಷ ಗೊಂಡು ಶ್ರೀರಾಮನನ್ನೇ ಸ್ತುತಿಸತೊಡಗಿದನು. ರಾಕ್ಷಸೇಂದ್ರ ವಿಭೀಷಣನನ್ನು ಲಂಕೆಯ ರಾಜ್ಯದಲ್ಲಿ ಅಭಿಷಿಕ್ತನಾದುದನ್ನು ನೋಡಿ ಅವನ ಮಂತ್ರಿಗಳು ಹಾಗೂ ಪ್ರೇಮಿ ರಾಕ್ಷಸರು ಬಹಳ ಸಂತೋಷಗೊಂಡರು. ಜೊತೆಗೆ ಲಕ್ಷ್ಮಣ ಸಹಿತ ಶ್ರೀರಾಮನಿಗೂ ಬಹಳ ಸಂತೋಷವಾಯಿತು.॥17-18॥
ಮೂಲಮ್ - 19
ಸ ತದ್ರಾಜ್ಯಂ ಮಹತ್ಪ್ರಾಪ್ಯ ರಾಮದತ್ತಂ ವಿಭೀಷಣಃ ।
ಸಾಂತ್ವಯಿತ್ವಾ ಪ್ರಕೃತಯಸ್ತತೋ ರಾಮಮುಪಾಗಮತ್ ॥
ಅನುವಾದ
ಶ್ರೀರಾಮಚಂದ್ರನು ಕರುಣಿಸಿದ ಆ ವಿಶಾಲ ರಾಜ್ಯವನ್ನು ಪಡೆದು ವಿಭೀಷಣನು ತನ್ನ ಪ್ರಜೆಗೆ ಸಾಂತ್ವನ ನೀಡಿ ಶ್ರೀರಾಮನ ಬಳಿಗೆ ಬಂದನು.॥19॥
ಮೂಲಮ್ - 20
ದಧ್ಯಕ್ಷತಾನ್ಮೋದಕಾಂಶ್ಚ ಲಾಜಾಃ ಸುಮನಸಸ್ತಥಾ ।
ಆಜಹ್ರುರಥ ಸಂಹೃಷ್ಟಾಃ ಪೌರಾಸ್ತಸ್ಮೈ ನಿಶಾಚರಾಃ ॥
ಅನುವಾದ
ಆಗ ಹರ್ಷಗೊಂಡ ನಗರ ನಿವಾಸೀ ನಿಶಾಚರರು ವಿಭೀಷಣನಿಗೆ ಅರ್ಪಿಸಲು ಮೊಸರು, ಅಕ್ಷತೆ, ಮಿಠಾಯಿ, ಅರಳು, ಹೂವು ತೆಗೆದುಕೊಂಡು ಬಂದರು.॥20॥
ಮೂಲಮ್ - 21
ಸ ತಾನ್ಗೃಹೀತ್ವಾ ದುರ್ಧರ್ಷೋ ರಾಘವಾಯ ನ್ಯವೇದಯತ್ ।
ಮಾಂಗಲ್ಯಂ ಮಂಗಲಂ ಸರ್ವಂ ಲಕ್ಷ್ಮಣಾಯ ಚ ವೀರ್ಯವಾನ್ ॥
ಅನುವಾದ
ದುರ್ಧರ್ಷ ಪರಾಕ್ರಮಿ ವಿಭೀಷಣನು ಅವೆಲ್ಲ ಮಾಂಗಲಿಕ ವಸ್ತುಗಳನ್ನು ತೆಗೆದುಕೊಂಡು ಶ್ರೀರಾಮಲಕ್ಷ್ಮಣರಿಗೆ ಅರ್ಪಿಸಿದನು.॥21॥
ಮೂಲಮ್ - 22
ಕೃತಕಾರ್ಯಂ ಸಮೃದ್ಧಾರ್ಥಂ ದೃಷ್ಟ್ವಾ ರಾಮೋ ವಿಭೀಷಣಮ್ ।
ಪ್ರತಿಜಗ್ರಾಹ ತತ್ಸರ್ವಂ ತಸ್ಯೈವ ಪ್ರಿಯಕಾಮ್ಯಯಾ ॥
ಅನುವಾದ
ಶ್ರೀರಘುನಾಥನು ವಿಭೀಷಣನನ್ನು ಕೃತಕೃತ್ಯ ಮತ್ತು ಸಫಲ ಮನೋರಥನಾದುದನ್ನು ನೋಡಿ, ಅವನ ಸಂತೋಷಕ್ಕಾಗಿ ಆ ಎಲ್ಲ ಮಾಂಗಲಿಕ ವಸ್ತುಗಳನ್ನು ಸ್ವೀಕರಿಸಿದನು.॥22॥
ಮೂಲಮ್ - 23
ತತಃ ಶೈಲೋಪಮಂ ವೀರಂ ಪ್ರಾಂಜಲಿಂ ಪ್ರಣತಂ ಸ್ಥಿತಮ್ ।
ಉವಾಚೇದಂ ವಚೋ ರಾಮೋ ಹನೂಮಂತಂ ಪ್ಲವಂಗಮಮ್ ॥
ಅನುವಾದ
ಅನಂತರ ಕೈಮುಗಿದುಕೊಂಡು ವಿನೀತಭಾವದಿಂದ ನಿಂತಿರುವ ಪರ್ವತಾಕಾರ ವೀರವಾನರ ಹನುಮಂತನಲ್ಲಿ ಶ್ರೀರಾಮನು ಹೇಳಿದನು.॥23॥
ಮೂಲಮ್ - 24
ಅನುಜ್ಞಾಪ್ಯ ಮಹಾರಾಜಮಿಮಂ ಸೌಮ್ಯ ವಿಭೀಷಣಮ್ ।
ಪ್ರವಿಶ್ಯ ನಗರೀಂ ಲಂಕಾಂ ಕೌಶಲಂ ಬ್ರೂಹಿ ಮೈಥಿಲೀಮ್ ॥
ಅನುವಾದ
ಸೌಮ್ಯ! ನೀನು ಈ ಮಹಾರಾಜ ವಿಭೀಷಣನ ಅನುಮತಿ ಪಡೆದು ಲಂಕೆಯನ್ನು ಪ್ರವೇಶಿಸಿ ಮಿಥಿಲೇಶಕುಮಾರಿ ಸೀತೆಯ ಬಳಿ ಕ್ಷೇಮಸಮಾಚಾರ ಕೇಳು.॥24॥
ಮೂಲಮ್ - 25
ವೈದೇಹ್ಯೈ ಮಾಂ ಚ ಕುಶಲಂ ಸುಗ್ರೀವಂ ಚ ಸಲಕ್ಷ್ಮಣಮ್ ।
ಆಚಕ್ಷ್ವವದತಾಂ ಶ್ರೇಷ್ಠ ರಾವಣಂ ಚ ಹತಂ ರಣೇ ॥
ಮೂಲಮ್ - 26
ಪ್ರಿಯಮೇತದಿಹಾಖ್ಯಾಹಿ ವೈದೇಹ್ಯಾಸ್ತ್ವಂ ಹರೀಶ್ವರ ।
ಪ್ರತಿಗೃಹ್ಯ ತು ಸಂದೇಶಮುಪಾವರ್ತಿತುಮರ್ಹಸಿ ॥
ಅನುವಾದ
ಜೊತೆಗೆ ಆ ವೈದೇಹಿಗೆ ಸುಗ್ರೀವ-ಲಕ್ಷ್ಮಣ ಸಹಿತ ನನ್ನ ಕ್ಷೇಮಸಮಾಚಾರವನ್ನು ನಿವೇದಿಸು, ಶ್ರೇಷ್ಠ ಕಪೀಶ್ವರನೇ! ನೀನು ಸೀತೆಗೆ ರಾವಣನು ಯುದ್ಧದಲ್ಲಿ ಹತನಾದುದನ್ನು ತಿಳಿಸು. ಬಳಿಕ ಆಕೆಯ ಸಂದೇಶವನ್ನೆತ್ತಿಕೊಂಡು ಮರಳಿ ಬಾ.॥25-26॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರಹನ್ನೆರಡನೆಯ ಸರ್ಗ ಪೂರ್ಣವಾಯಿತು.॥112॥