वाचनम्
ಭಾಗಸೂಚನಾ
ಮಂದೋದರಿಯ ವಿಲಾಪ, ರಾವಣನ ದಹನ ಸಂಸ್ಕಾರ
ಮೂಲಮ್ - 1
ತಾಸಾಂ ವಿಲಪಮಾನಾನಾಂ ತದಾ ರಾಕ್ಷಸ ಯೋಷಿತಾಮ್ ।
ಜ್ಯೇಷ್ಠಪತ್ನೀ ಪ್ರಿಯಾ ದೀನಾ ಭರ್ತಾರಂ ಸಮುದೈಕ್ಷತ ॥
ಮೂಲಮ್ - 2
ದಶಗ್ರೀವಂ ಹತಂ ದೃಷ್ಟ್ವಾ ರಾಮೇಣಾಚಿಂತ್ಯಕರ್ಮಣಾ ।
ಪತಿಂ ಮಂದೋದರೀ ತತ್ರ ಕೃಪಣಾ ಪರ್ಯದೇವಯತ್ ॥
ಅನುವಾದ
ಆಗ ಹೀಗೆ ವಿಲಾಪಿಸುತ್ತಿರುವ ರಾಕ್ಷಸಿಯರ ಮಧ್ಯದಲ್ಲಿ ರಾವಣನ ಜೇಷ್ಠಪತ್ನಿಯಾದ, ಅವನಿಗೆ ಪ್ರಿಯಳಾದ ಮಂದೋದರಿಯು ಅಚಿಂತ್ಯಕರ್ಮನಾದ ಶ್ರೀರಾಮನಿಂದ ಹತನಾದ ತನ್ನ ಪತಿ ದಶಮುಖ ರಾವಣನನ್ನು ಆ ಸ್ಥಿತಿಯಲ್ಲಿ ನೋಡಿ, ಅತ್ಯಂತ ದೀನಳಾಗಿ ದುಃಖದಿಂದ ಹೀಗೆ ಪ್ರಲಾಪಿಸತೊಡಗಿದಳು.॥1-2॥
ಮೂಲಮ್ - 3
ನನು ನಾಮ ಮಹಾಬಾಹೋ ತವ ವೈಶ್ರವಣಾನುಜ ।
ಕ್ರುದ್ಧಸ್ಯ ಪ್ರಮುಖೇ ಸ್ಥಾತುಂ ತ್ರಸ್ಯತ್ಯಪಿ ಪುರಂದರಃ ॥
ಅನುವಾದ
ಕುಬೇರನ ಅನುಜನೇ! ಮಹಾಬಾಹುವೇ! ಪತಿಯೇ! ಕ್ರುದ್ಧನಾದ ನಿನ್ನ ಎದುರಿಗೆ ನಿಲ್ಲಲು ಆಗ ಇಂದ್ರನೂ ಕೂಡ ಭಯಪಡುತ್ತಿದ್ದನು.॥3॥
ಮೂಲಮ್ - 4
ಋಷಯಶ್ಚ ಮಹಾಂತೋಽಪಿ ಗಂಧರ್ವಾಶ್ಚ ಯಶಸ್ವಿನಃ ।
ನನು ನಾಮ ತವೋದ್ವೇಗಾಚ್ಚಾರಣಾಶ್ಚ ದಿಶೋ ಗತಾಃ ॥
ಅನುವಾದ
ದೊಡ್ಡ ದೊಡ್ಡ ಋಷಿಗಳು, ಯಶಸ್ವೀ ಗಂಧರ್ವರು, ಚಾರಣರು ನಿಮ್ಮ ಭಯದಿಂದ ದಿಕ್ಕಾಪಾಲಾಗಿ ಓಡಿಹೋಗಿದ್ದರು.॥4॥
ಮೂಲಮ್ - 5
ಸ ತ್ವಂ ಮಾನುಷಮಾತ್ರೇಣ ರಾಮೇಣ ಯುಧಿ ನಿರ್ಜಿತಃ ।
ನ ವ್ಯಪತ್ರಪಸೇ ರಾಜನ್ ಕಿಮಿದಂ ರಾಕ್ಷಸೇಶ್ವರ ॥
ಅನುವಾದ
ಅಂತಹ ನೀವು ಇಂದು ಒಬ್ಬ ಮಾನವ ಮಾತ್ರನಿಂದ ಸೋತುಹೋದಿರಲ್ಲ! ರಾಜನೇ! ಇದರಿಂದ ನಿಮಗೆ ನಾಚಿಕೆಯಾಗುವುದಿಲ್ಲವೇ? ರಾಕ್ಷಸೇಶ್ವರನೇ! ಇದೇನಿದು ಏಕೆ ಮಾತಾಡುವುದಿಲ್ಲ.॥5॥
ಮೂಲಮ್ - 6
ಕಥಂ ತ್ರೈಲೋಕ್ಯಮಾಕ್ರಮ್ಯ ಶ್ರಿಯಾ ವೀರ್ಯೇಣ ಚಾನ್ವಿತಮ್ ।
ಅವಿಷಹ್ಯಂ ಜಘಾನ ತ್ವಾಂ ಮಾನುಷೋ ವನಗೋಚರಃ ॥
ಅನುವಾದ
ನೀವು ಮೂರು ಲೋಕಗಳನ್ನು ಗೆದ್ದು ಸಂಪತ್ಶಾಲೀ ಮತ್ತು ಪರಾಕ್ರಮಿ ಆಗಿದ್ದೆ. ನಿಮ್ಮ ವೇಗವನ್ನು ಸಹಿಸಲು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ. ಹೀಗಿರುವಾಗ ನಿಮ್ಮಂತಹ ವೀರನನ್ನು ಒಬ್ಬ ವನವಾಸೀ ಮನುಷ್ಯನು ಹೇಗೆ ಕೊಂದನು.॥.॥
ಮೂಲಮ್ - 7
ಮಾನುಷಾಣಾಮವಿಷಯೇ ಚರತಃ ಕಾಮರೂಪಿಣಃ ।
ವಿನಾಶಸ್ತವ ರಾಮೇಣ ಸಂಯುಗೇ ನೋಪಪದ್ಯತೇ ॥
ಅನುವಾದ
ಮನುಷ್ಯರು ಹೋಗಲು ಸಾಧ್ಯವಿಲ್ಲದ ದೇಶಗಳಲ್ಲಿ ನೀವು ಸಂಚರಿಸುತ್ತಿದ್ದೆ. ನೀವು ಇಚ್ಛಾನುಸಾರ ರೂಪವನ್ನು ಧರಿಸಲು ಸಮರ್ಥರಿದ್ದರೂ ಯುದ್ಧದಲ್ಲಿ ರಾಮನ ಕೈಯಿಂದ ನಿಮ್ಮ ವಿನಾಶವಾದುದು ಹೇಗೆ ಸಂಭವಿಸಿತು? ಇದನ್ನು ನಂಬಲಿಕ್ಕೆ ಸಾಧ್ಯವಿಲ್ಲ.॥7॥
ಮೂಲಮ್ - 8
ನ ಚೈತತ್ಕರ್ಮ ರಾಮಸ್ಯ ಶ್ರದ್ಧಧಾಮಿ ಚಮೂಮುಖೇ ।
ಸರ್ವತಃ ಸಮುಪೇತಸ್ಯ ತವ ತೇನಾಭಿಮರ್ಶನಮ್ ॥
ಅನುವಾದ
ಯುದ್ಧದಲ್ಲಿ ಎಲ್ಲೆಡೆ ವಿಜಯ ಪಡೆಯುವ ನಿಮ್ಮ ಪರಾಜಯವಾದುದು ಶ್ರೀರಾಮನ ಕಾರ್ಯವೆಂದು ನಾನು ನಂಬುವುದಿಲ್ಲ. (ಏಕೆಂದರೆ ನೀವು ಅವನನ್ನು ಸಾಮಾನ್ಯ ಮನುಷ್ಯನೆಂದು ತಿಳಿದಿದ್ದಿರಿ..॥8॥
ಮೂಲಮ್ - 9
ಅಥವಾ ರಾಮರೂಪೇಣ ಕೃತಾಂತಃ ಸ್ವಯಮಾಗತಃ ।
ಮಾಯಾಂ ತವ ವಿನಾಶಾಯ ವಿಧಾಯಾ ಪ್ರತಿತರ್ಕಿತಾಮ್ ॥
ಅನುವಾದ
ಅಥವಾ ಸಾಕ್ಷಾತ್ ಕಾಲವೇ ಮಾಯೆಯಿಂದ ನಿಮ್ಮ ವಿನಾಶಕ್ಕಾಗಿ ಶ್ರೀರಾಮನ ರೂಪದಿಂದ ಇಲ್ಲಿಗೆ ಬಂದಿರುವನೋ? ಇದು ತರ್ಕಿಸಲು ಸಾಧ್ಯವಾಗುತ್ತಿಲ್ಲ.॥9॥
ಮೂಲಮ್ - 10½
ಅಥವಾ ವಾಸವೇನ ತ್ವಂ ಧರ್ಷಿತೋಽಸಿ ಮಹಾಬಲ ।
ವಾಸವಸ್ಯ ತು ಕಾ ಶಕ್ತಿಸ್ತ್ವಾಂ ದ್ರಷ್ಟುಮಪಿ ಸಂಯುಗೇ ॥
ಮಹಾಬಲಂ ಮಹಾವೀರ್ಯಂ ದೇವಶತ್ರುಂ ಮಹೌಜಸಮ್ ।
ಅನುವಾದ
ಮಹಾಬಲಿ ವೀರನೇ! ಅಥವಾ ಸಾಕ್ಷಾತ್ ಇಂದ್ರನೇ ನಿಮ್ಮ ಮೇಲೆ ಆಕ್ರಮಣ ಮಾಡಿದನೋ? ಆದರೆ ಯುದ್ಧದಲ್ಲಿ ನಿಮ್ಮ ಕಡೆಗೆ ಕಣ್ಣೆತ್ತಿ ನೋಡಲು ಇಂದ್ರನಲ್ಲಿ ಶಕ್ತಿ ಎಲ್ಲಿದೆ? ಏಕೆಂದರೆ ನೀವು ಮಹಾಬಲೀ, ಮಹಾಪರಾಕ್ರಮೀ ಮತ್ತು ಮಹಾತೇಜಸ್ವೀ ದೇವಶತ್ರು ಆಗಿದ್ದೀರಿ.॥10½॥
ಮೂಲಮ್ - 11
ವ್ಯಕ್ತಮೇಷ ಮಹಾಯೋಗೀ ಪರಮಾತ್ಮಾ ಸನಾತನಃ ॥
ಮೂಲಮ್ - 12
ಅನಾದಿಮಧ್ಯನಿಧನೋ ಮಹತಃ ಪರಮೋ ಮಹಾನ್ ।
ತಮಸಃ ಪರಮೋ ಧಾತಾ ಶಂಖಚಕ್ರಗದಾಧರಃ ॥
ಮೂಲಮ್ - 13
ಶ್ರೀವತ್ಸವಕ್ಷಾ ನಿತ್ಯಶ್ರೀರಜಯ್ಯಃ ಶಾಶ್ವತೋ ಧ್ರುವಃ ।
ಮಾನುಷಂ ರೂಪಮಾಸ್ಥಾಯ ವಿಷ್ಣುಃ ಸತ್ಯಪರಾಕ್ರಮಃ ॥
ಮೂಲಮ್ - 14½
ಸರ್ವೈಃ ಪರಿವೃತೋ ದೇವೈರ್ವಾನರತ್ವಮುಪಾಗತೈಃ ।
ಸರ್ವಲೋಕೇಶ್ವರಃ ಶ್ರೀಮಾನ್ಲ್ಲೋಕಾನಾಂ ಹಿತಕಾಮ್ಯಯಾ ॥
ಸರಾಕ್ಷಸ ಪರೀವಾರಂ ದೇವಶತ್ರುಂ ಭಯಾವಹಮ್ ।
ಅನುವಾದ
ಖಂಡಿತವಾಗಿ ಈ ಶ್ರೀರಾಮನು ಮಹಾಯೋಗಿ, ಸನಾತನ ಪರಮಾತ್ಮನೇ ಆಗಿದ್ದಾನೆ. ಇವನಿಗೆ ಆದಿ, ಮಧ್ಯ, ಅಂತ್ಯವಿಲ್ಲ. ಇವನು ಮಹತೋಮಹಿಮನಾಗಿದ್ದಾನೆ, ಅಜ್ಞಾನಾಂಧಕಾರ ದಿಂದ ಅತೀತ ಹಾಗೂ ಎಲ್ಲವನ್ನು ಧರಿಸುವ ಪರಮೇಶ್ವರನಾಗಿದ್ದಾನೆ. ಅವನು ಕೈಗಳಲ್ಲಿ ಶಂಖ, ಚಕ್ರ, ಗದೆ ಧರಿಸುತ್ತಾನೆ, ಅವನ ವಕ್ಷಃಸ್ಥಳದಲ್ಲಿ ಶ್ರೀವತ್ಸಲಾಂಛನವಿದೆ, ಭಗವತಿ ಲಕ್ಷ್ಮಿಯು ಎಂದೂ ಇವನನ್ನು ಬಿಟ್ಟಿರುವುದಿಲ್ಲ, ಅವನನ್ನು ಸೋಲಿಸುವುದು ಸರ್ವಥಾ ಅಸಂಭವವಾಗಿದೆ. ಅವನು ನಿತ್ಯ ಸ್ಥಿರ ಹಾಗೂ ಸರ್ವಲೋಕಾಧೀಶ್ವರನಾಗಿದ್ದಾನೆ. ಆ ಸತ್ಯಪರಾಕ್ರಮ ಭಗವಾನ್ ವಿಷ್ಣುವೇ ಸಮಸ್ತ ಲೋಕಗಳ ಹಿತವನ್ನು ಮಾಡುವ ಇಚ್ಛೆಯಿಂದ ಮನುಷ್ಯರೂಪಧರಿಸಿ, ವಾನರ ರೂಪದಿಂದ ಪ್ರಕಟರಾದ ಸಮಸ್ತ ದೇವತೆಗಳೊಂದಿಗೆ ಬಂದು ರಾಕ್ಷಸರ ಸಹಿತ ನಿಮ್ಮನ್ನು ವಧಿಸಿದನು; ಏಕೆಂದರೆ ನೀವು ದೇವತೆಗಳ ಶತ್ರು ಮತ್ತು ಸಮಸ್ತ ಜಗತ್ತಿಗೆ ಭಯಂಕರರಾಗಿದ್ದೀರಿ.॥11-14½॥
ಮೂಲಮ್ - 15½
ಇಂದ್ರಿಯಾಣಿ ಪುರಾ ಜಿತ್ವಾ ಜಿತಂ ತ್ರಿಭುವನಂ ತ್ವಯಾ ॥
ಸ್ಮರದ್ಭಿರಿವ ತದ್ ವೈರಮಿಂದ್ರಿಯೈರೇವ ನಿರ್ಜಿತಃ ।
ಅನುವಾದ
ಸ್ವಾಮಿ! ಮೊದಲು ನೀವು ತನ್ನ ಇಂದ್ರಿಯಗಳನ್ನು ಗೆದ್ದು ಮೂರು ಲೋಕಗಳ ಮೇಲೆ ವಿಜಯ ಪಡೆದಿದ್ದೀರಿ. ಆ ವೈರವನ್ನು ನೆನೆದು ಇಂದು ಇಂದ್ರಿಯಗಳೇ ನಿಮ್ಮನ್ನು ಪರಾಜಯಗೊಳಿಸಿವೆ.॥15½॥
ಮೂಲಮ್ - 16½
ಯದೈವ ಹಿ ಜನಸ್ಥಾನೇ ರಾಕ್ಷಸೈರ್ಬಹುಭಿರ್ವೃತಃ ॥
ಖರಸ್ತು ನಿಹತೋ ಭ್ರಾತಾ ತದಾ ರಾಮೋ ನ ಮಾನುಷಃ ।
ಅನುವಾದ
ಜನಸ್ಥಾನದಲ್ಲಿ ಅನೇಕ ರಾಕ್ಷಸರಿಂದ ಆವೃತನಾಗಿದ್ದರೂ ನಿಮ್ಮ ತಮ್ಮ ಖರನನ್ನು ಶ್ರೀರಾಮನೇ ಕೊಂದು ಹಾಕಿದನೆಂದು ನಾನು ಕೇಳಿದಾಗಲೇ ಶ್ರೀರಾಮನು ಸಾಧಾರಣ ಮನುಷ್ಯನಲ್ಲ ಎಂಬ ವಿಶ್ವಾಸ ಉಂಟಾಗಿತ್ತು.॥16½॥
ಮೂಲಮ್ - 17½
ಯದೈವ ನಗರೀಂ ಲಂಕಾಂ ದುಷ್ಪ್ರವೇಶಾಂ ಸುರೈರಪಿ ॥
ಪ್ರವಿಷ್ಟೋ ಹನುಮಾನ್ವೀರ್ಯಾತ್ತದೈವ ವ್ಯಥಿತಾ ವಯಮ್ ।
ಅನುವಾದ
ದೇವತೆಗಳಿಗೂ ಪ್ರವೇಶಿಸಲು ಕಠಿಣವಾದ ಲಂಕೆಯನ್ನು ಹನುಮಂತನು ಬಲವಂತವಾಗಿ ನುಗ್ಗಿ ಬಂದಾಗಲೇ ನಾವು ಭಾವೀ ಅನಿಷ್ಟದ ಆಶಂಕೆಯಿಂದ ವ್ಯಥಿತರಾಗಿದ್ದೆವು.॥17½॥
ಮೂಲಮ್ - 18½
ಕ್ರ್ರಿಯತಾಮವಿರೋಧಶ್ಚ ರಾಘವೇಣೇತಿ ಯನ್ಮಯಾ ॥
ಉಚ್ಯಮಾನೋ ನ ಗೃಹ್ಣಾಸಿ ತಸ್ಯೇಯಂ ವ್ಯುಷ್ಟಿರಾಗತಾ ।
ಅನುವಾದ
ಪ್ರಾಣನಾಥ! ನೀವು ರಘುನಾಥನಲ್ಲಿ ವೈರ-ವಿರೋಧ ಮಾಡಬೇಡಿರೆಂದು ನಾನು ಪದೇ ಪದೇ ಹೇಳಿದ್ದೆ; ಆದರೆ ನೀವು ನನ್ನ ಮಾತನ್ನು ಒಪ್ಪಲಿಲ್ಲ. ಅವರ ಲವೇ ಇಂದು ದೊರೆತಿದೆ.॥18½॥
ಮೂಲಮ್ - 19½
ಅಕಸ್ಮಾಚ್ಚಾಭಿಕಾಮೋಽಸಿ ಸೀತಾಂ ರಾಕ್ಷಸಪುಂಗವ ॥
ಐಶ್ವರ್ಯಸ್ಯ ವಿನಾಶಾಯ ದೇಹಸ್ಯ ಸ್ವಜನಸ್ಯ ಚ ।
ಅನುವಾದ
ರಾಕ್ಷಸರಾಜನೇ! ನೀವು ತನ್ನ ಐಶ್ವರ್ಯದ, ಶರೀರದ, ಸ್ವಜನರ ವಿನಾಶ ಮಾಡಲೆಂದೇ ಅಕಸ್ಮಾತ್ ಸೀತೆಯ ಕಾಮನೆ ಮಾಡಿದಿರಿ.॥19½॥
ಮೂಲಮ್ - 20
ಅರುಂಧತ್ಯಾ ವಿಶಿಷ್ಟಾಂ ತಾಂ ರೋಹಿಣ್ಯಾಶ್ಚಾಪಿ ದುರ್ಮತೇ ॥
ಮೂಲಮ್ - 21
ಸೀತಾಂ ಧರ್ಷಯತಾ ಮಾನ್ಯಾಂ ತ್ವಯಾಹ್ಯಸದೃಶಂ ಕೃತಮ್ ।
ವಸುಧಾಯಾಹಿ ವಸುಧಾಂ ಶ್ರಿಯಃ ಶ್ರೀಂ ಭರ್ತೃವತ್ಸಲಾಮ್ ॥
ಅನುವಾದ
ಮತಿಗೆಟ್ಟವನೇ! ಭಗವತೀ ಸೀತೆಯು ಆರುಂಧತಿ, ರೋಹಿಣಿಯರಿಗಿಂತಲೂ ವಿಶಿಷ್ಟವಾದ ಪತಿವ್ರತೆ ಯಾಗಿದ್ದಾಳೆ. ಆಕೆಯು ಕ್ಷಮಾಗುಣದಲ್ಲಿ ವಸುಧೆಗೂ ಮೀರಿಸಿರುವಳು. ಸಂಪತ್ತಿನಲ್ಲಿ ಮಹಾಲಕ್ಷ್ಮಿಗೂ ಮಿಗಿಲಾದವಳು. ಭೃರ್ತೃವಾತ್ಸಲ್ಯದಿಂದ ಕೂಡಿದ, ಎಲ್ಲರಿಗೂ ಪೂಜನೀಯಳಾದ ಸೀತಾದೇವಿಯನ್ನು ತಿರಸ್ಕಾರಮಾಡಿ ನೀವು ದೊಡ್ಡ ಅನುಚಿತಕಾರ್ಯ ಮಾಡಿದೆ.॥20-21॥
ಮೂಲಮ್ - 22
ಸೀತಾಂ ಸರ್ವಾನವದ್ಯಾಂಗೀಮರಣ್ಯೇ ವಿಜನೇ ಶುಭಾಮ್ ।
ಆನಯಿತ್ವಾ ತು ತಾಂ ದೀನಾಂ ಛದ್ಮನಾಽಽತ್ಮಸ್ವದೂಷಣಮ್ ॥
ಮೂಲಮ್ - 23
ಅಪ್ರಾಪ್ಯ ಚೈವ ತಂ ಕಾಮಂ ಮೈಥಿಲೀ ಸಂಗಮೇ ಕೃತಮ್ ।
ಪತಿವ್ರತಾಯಾಸ್ತಪಸಾ ನೂನಂ ದಗ್ಧೋಽಸಿ ಮೇ ಪ್ರಭೋ ॥
ಅನುವಾದ
ಪ್ರಾಣನಾಥಾ! ಸರ್ವಾಂಗ ಸುಂದರಿ ಶುಭಲಕ್ಷಣೆಯಾದ ಸೀತೆಯು ನಿರ್ಜನ ವನದಲ್ಲಿ ವಾಸಿಸುತ್ತಿದ್ದಳು. ದೀನೆಯಾಗಿದ್ದ ಅವಳನ್ನು ಮೋಸದಿಂದ ಇಲ್ಲಿಗೆ ಕರೆತಂದು ಅತ್ಯಂತ ಕಲಂಕಿತವಾದ ಕಾರ್ಯವನ್ನೇ ಮಾಡಿದಿರಿ. ಮೈಥಿಲಿಯ ಜೊತೆಗೆ ಸಮಾಗಮ ಮಾಡಬೇಕಿದ್ದಿದ್ದ ನಿಮ್ಮ ಆಸೆಯೂ ಕೈಗೂಡಲಿಲ್ಲ. ಬದಲಾಗಿ ಪತಿವ್ರತೆಯಾದ ಸೀತಾದೇವಿಯ ತಪಸ್ಸಿನಿಂದಲೇ ಸುಟ್ಟು ಬೂದಿಯಾದಿರಿ. ಇದು ನಿಶ್ಚಯ.॥22-23॥
ಮೂಲಮ್ - 24
ತದೈವ ಯನ್ನ ದಗ್ಧಸ್ತ್ವಂ ಧರ್ಷಯಂಸ್ತನುಮಧ್ಯಮಾಮ್ ।
ದೇವಾ ಬಿಭ್ಯತಿ ತೇ ಸರ್ವೇಸೇಂದ್ರಾಃ ಸಾಗ್ನಿ ಪುರೋಗಮಾಃ ॥
ಅನುವಾದ
ತನ್ವಂಗೀ ಸೀತೆಯನ್ನು ಅಪರಹಿಸುವಾಗಲೇ ನೀವು ಸುಟ್ಟು ಬೂದಿಯಾಗಿಲ್ಲ. ಇದು ಆಶ್ಚರ್ಯದ ಮಾತಾಗಿದೆ. ಆಗ ಇಂದ್ರ, ಅಗ್ನಿ ಮೊದಲಾದ ದೇವತೆಗಳು ನಿನಗೆ ಭಯಪಡುತ್ತಿದ್ದರು, ಅದರಿಂದ ಬೆಂದು ಹೋಗಲಿಲ್ಲ.॥24॥
ಮೂಲಮ್ - 25
ಅವಶ್ಯಮೇವ ಲಭತೇ ಫಲಂ ಪಾಪಸ್ಯ ಕರ್ಮಣಃ ।
ಭತೃಃ ಪರ್ಯಾಗತೇ ಕಾಲೇ ಕರ್ತಾ ನಾಸ್ತ್ಯತ್ರ ಸಂಶಯಃ ॥
ಅನುವಾದ
ಪ್ರಾಣವಲ್ಲಭನೇ! ಕಾಲವು ಬಂದಾಗ ಕರ್ತೃವಿಗೆ ಅವನ ಪಾಪ ಕರ್ಮದ ಫಲ ಅವಶ್ಯವಾಗಿ ಸಿಗುತ್ತದೆ, ಎಂಬುದರಲ್ಲಿ ಸಂದೇಹವೇ ಇಲ್ಲ.॥25॥
ಮೂಲಮ್ - 26
ಶುಭಕೃಚ್ಛುಭಮಾಪ್ನೋತಿ ಪಾಪಕೃತ್ ಪಾಪಮಶ್ನುತೇ ।
ವಿಭೀಷಣಃ ಸುಖಂ ಪ್ರಾಪ್ತಸ್ತ್ವಂ ಪ್ರಾಪ್ತಃ ಪಾಪಮೀದೃಶಮ್ ॥
ಅನುವಾದ
ಶುಭಕರ್ಮ ಮಾಡುವವನಿಗೆ ಉತ್ತಮ ಫಲ ಸಿಗುತ್ತದೆ ಹಾಗೂ ಪಾಪಿಗೆ ಪಾಪದ ಫಲ-ದುಃಖ ಅನುಭವಿಸ ಬೇಕಾಗುತ್ತದೆ. ವಿಭೀಷಣನಿಗೆ ತನ್ನ ಶುಭ ಕರ್ಮಗಳಿಂದ ಸುಖಪ್ರಾಪ್ತವಾಯಿತು. ನಿಮಗೆ ಇಂತಹ ದುಃಖ ಅನುಭವಿಸಬೇಕಾಯಿತು.॥26॥
ಮೂಲಮ್ - 27
ಸಂತ್ಯನ್ಯಾಃ ಪ್ರಮದಾಸ್ತುಭ್ಯಂ ರೂಪೇಣಾಭ್ಯಧಿಕಾಸ್ತತಃ ।
ಅನಂಗವಶಮಾಪನ್ನಸ್ತ್ವಂ ತು ಮೋಹಾನ್ನ ಬುಧ್ಯಸೇ ॥
ಅನುವಾದ
ನಿಮ್ಮ ಅಂತಃಪುರದಲ್ಲಿ ಸೀತಾದೇವಿಗಿಂತಲೂ ಹೆಚ್ಚು ಸುಂದರ ರೂಪವುಳ್ಳ ಇತರ ಯುವತಿಯರಿದ್ದಾರೆ; ಆದರೂ ನೀವು ಕಾಮವಶರಾಗಿ ಮೋಹವಶದಿಂದ ಇದನ್ನು ತಿಳಿಯದೇ ಹೋದಿರಿ.॥27॥
ಮೂಲಮ್ - 28
ನ ಕುಲೇನ ನ ರೂಪೇಣ ನ ದಾಕ್ಷಿಣ್ಯೇನ ಮೈಥಿಲೀ ।
ಮಯಾಧಿಕಾ ವಾ ತುಲ್ಯಾ ವಾ ತತ್ ತು ಮೋಹಾನ್ನಬುಧ್ಯಸೇ ॥
ಅನುವಾದ
ಮೈಥಿಲಿಸೀತೆಯು ಕುಲದಲ್ಲಿ, ರೂಪದಲ್ಲಿ, ದಾಕ್ಷಿಣ್ಯಾದಿ ಗುಣಗಳಲ್ಲಿ ನನಗಿಂತ ಹೆಚ್ಚಿನವಳಲ್ಲ. ಅವಳು ನನಗೆ ಸರಿಸಮಾನಳೂ ಅಲ್ಲ; ಆದರೂ ಮೋಹವಶರಾಗಿ ನೀವು ಇದರ ಕಡೆಗೆ ಗಮನವೇ ಕೊಟ್ಟಿಲ್ಲ.॥28॥
ಮೂಲಮ್ - 29
ಸರ್ವದಾ ಸರ್ವಭೂತಾನಾಂ ನಾಸ್ತಿ ಮೃತ್ಯುರಲಕ್ಷಣಃ ।
ತವ ತದ್ವದಯಂ ಮೃತ್ಯುರ್ಮೈಥಿಲೀಕೃತ ಲಕ್ಷಣಃ ॥
ಅನುವಾದ
ಪ್ರಪಂಚದಲ್ಲಿ ಎಂದೂ ಯಾವುದೇ ಪ್ರಾಣಿಯ ಮೃತ್ಯು ಅಕಾರಣವಾಗುವುದಿಲ್ಲ. ಈ ನಿಯಮಕ್ಕನುಸಾರ ಸೀತೆಯೇ ನಿಮ್ಮ ಮೃತ್ಯುವಿನ ಕಾರಣಳಾದಳು.॥29॥
ಮೂಲಮ್ - 30
ಸೀತಾ ನಿಮಿತ್ತಜೋ ಮೃತ್ಯುಸ್ತ್ವಯಾ ದೂರಾದುಪಾಹೃತಃ ।
ಮೈಥಿಲೀ ಸಹ ರಾಮೇಣ ವಿಶೋಕಾ ವಿಹರಿಷ್ಯತಿ ॥
ಅಲ್ಪಪುಣ್ಯಾ ತ್ವಹಂ ಘೋರೇ ಪತಿತಾ ಶೋಕಸಾಗರೇ ।
ಅನುವಾದ
ಸೀತೆಯ ಕಾರಣದಿಂದ ಆಗುವ ಮೃತ್ಯುವನ್ನು ನೀವು ಸ್ವತಃ ದೂರದಿಂದ ಕರೆಸಿಕೊಂಡಿರಿ. ಮೈಥಿಲಿಯು ಇನ್ನು ಶೋಕರಹಿತಳಾಗಿ ಶ್ರೀರಾಮನೊಂದಿಗೆ ವಿಹರಿಸುವಳು. ಆದರೆ ನನ್ನ ಪುಣ್ಯ ಬಹಳ ಅಲ್ಪವಾಗಿತ್ತು, ಇದರಿಂದ ಅದು ಬೇಗನೇ ಮುಗಿದು ನಾನು ಘೋರವಾದ ಶೋಕ ಸಾಗರದಲ್ಲಿ ಬಿದ್ದಿರುವೆನು.॥30॥
ಮೂಲಮ್ - 31
ಕೈಲಾಸೇ ಮಂದರೇ ಮೇರೌ ತಥಾ ಚೈತ್ರರಥೇ ವನೇ ॥
ಮೂಲಮ್ - 32
ದೇವೋದ್ಯಾನೇಷು ಸರ್ವೇಷು ವಿಹೃತ್ಯ ಸಹಿತಾ ತ್ವಯಾ ।
ವಿಮಾನೇನಾನುರೂಪೇಣ ಯಾ ಯಾಮ್ಯತುಲಯಾಶ್ರಿಯಾ ॥
ಮೂಲಮ್ - 33
ಪಶ್ಯಂತೀ ವಿವಿಧಾನ್ ದೇಶಾಂಸ್ತಾಂಸ್ತಾಂಶ್ಚಿತ್ರಸ್ರಗಂಬರಾ ।
ಭ್ರಂಶಿತಾ ಕಾಮಭೋಗೇಭ್ಯಃ ಸಾಸ್ಮಿವೀರ ವಧಾತ್ತವ ॥
ಅನುವಾದ
ವೀರನೇ! ನಾನು ವಿಚಿತ್ರ ವಸ್ತ್ರಾಭೂಷಣಗಳನ್ನು ಧರಿಸಿ, ಅನುಪಮ ಶೋಭಾಸಂಪನ್ನೆಯಾಗಿ ಮನೋನುಕೂಲ ವಿಮಾನದ ಮೂಲಕ ನಿಮ್ಮೊಂದಿಗೆ ಕೈಲಾಸ, ಮಂದರಾಚಲ, ಮೇರುಪರ್ವತ, ಚೈತ್ರರಥವನ ಹಾಗೂ ಎಲ್ಲ ದೇವೋದ್ಯಾನಗಳಲ್ಲಿ ವಿಹರಿಸುತ್ತಾ, ನಾನಾ ರೀತಿಯ ದೇಶಗಳನ್ನು ನೋಡುತ್ತಾ ತಿರುಗಾಡುತ್ತಿದ್ದೆ, ಆದರೆ ಇಂದು ನಿಮ್ಮ ವಧೆಯಾದ್ದರಿಂದ ಸಮಸ್ತ ಕಾಮಭೋಗಗಳಿಂದ ವಂಚಿತಳಾದೆ.॥31-33॥
ಮೂಲಮ್ - 34
ಸೈವಾನ್ಯೇವಾಸ್ಮಿ ಸಂವೃತ್ತಾ ಧಿಗ್ರಾಜ್ಞಾಂ ಚಂಚಲಾಃ ಶ್ರಿಯಮ್ ।
ಹಾ ರಾಜನ್ಸುಕುಮಾರಂ ತೇ ಸುಭ್ರು ಸುತ್ವಕ್ಸಮುನ್ನಸಮ್ ॥
ಮೂಲಮ್ - 35
ಕಾಂತಿಶ್ರೀದ್ಯುತಿಭಿಸ್ತುಲ್ಯಮಿಂದುಪದ್ಮ ದಿವಾಕರೈಃ ।
ಕಿರೀಟ ಕೂಟೋಜ್ಜ್ವಲಿತಂ ತಾಮ್ರಾಸ್ಯಂ ದೀಪ್ತಕುಂಡಲಮ್ ॥
ಮೂಲಮ್ - 36
ಮದ ವ್ಯಾಕುಲಲೋಲಾಕ್ಷಂ ಭೂತ್ವಾ ಯತ್ಪಾನಭೂಮಿಷು ।
ವಿವಿಧ ಸ್ರಗ್ಧರಂ ಚಾರು ವಲ್ಗುಸ್ಮಿತಕಥಂ ಶುಭಮ್ ॥
ಮೂಲಮ್ - 37½
ತದೇವಾದ್ಯ ತವೇದಂ ಹಿ ವಕ್ತ್ರಂ ನ ಭ್ರಾಜತೇ ಪ್ರಭೋ ।
ರಾಮಸಾಯಕನಿರ್ಭಿನ್ನಂ ರಕ್ತಂ ರುಧಿರವಿಸ್ರವೈಃ ॥
ವಿಶೀರ್ಣಮೇದೋಮಸ್ತಿಷ್ಕಂ ರೂಕ್ಷಂ ಸ್ಯಂದನರೇಣುಭಿಃ ।
ಅನುವಾದ
ನಾನು ಅದೇ ರಾಣಿ ಮಂದೋದರಿಯಾಗಿದ್ದೇನೆ, ಆದರೆ ಇಂದು ಸಾಮಾನ್ಯ ಸ್ತ್ರೀಯಂತಾದೆನು. ರಾಜರ ಚಂಚಲವಾದ ರಾಜ್ಯ-ಲಕ್ಷ್ಮಿಗೆ ಧಿಕ್ಕಾರವಿರಲಿ. ಹಾ ರಾಜನೇ! ನಿಮ್ಮ ಯಾವ ಸುಕುಮಾರ ಮುಖಮಂಡಲ, ಸುಂದರ ಹುಬ್ಬುಗಳು, ಮನೋಹರ ತ್ವಚೆ, ಎತ್ತರವಾದ ಮೂಗಿನಿಂದ ಕೂಡಿತ್ತೋ, ಕಾಂತಿ, ಶೋಭಾ, ತೇಜದಿಂದ ಕ್ರಮವಾಗಿ ಚಂದ್ರ, ಸೂರ್ಯ ಮತ್ತು ಕವಲವನ್ನು ಲಜ್ಜಿತಗೊಳಿಸುತ್ತಿತ್ತೋ, ಕಿರೀಟಗಳಿಂದ ಸಮೂಹವು ಯಾವುದನ್ನು ಬೆಳಗುತ್ತಿತ್ತೋ, ಯಾರ ಅಧರ ತಾಮ್ರದಂತೆ ಕೆಂಪಾಗಿದ್ದವೋ, ಯಾವುದರಲ್ಲಿ ದೀಪ್ತಿಮಂತ ಕುಂಡಲಗಳು ಹೊಳೆಯುತ್ತಿದ್ದವೋ, ಪಾನ ಭೂಮಿಯಲ್ಲಿ ಯಾರ ನೇತ್ರಗಳು ಅಮಲಿನಿಂದ ಚಂಚಲವಾಗಿ ಕಾಣುತ್ತಿದ್ದವೋ, ನಾನಾ ರೀತಿಯ ಪುಷ್ಪಗುಚ್ಛಗಳನ್ನು ಧರಿಸುತ್ತಿದ್ದನೋ, ಸುಂದರ ಮನೋಹರವಾಗಿದ್ದು, ನಸುನಕ್ಕು ಮಧುರವಾಗಿ ಮಾತನಾಡುತ್ತಿತ್ತೋ ಆ ನಿಮ್ಮ ಮುಖಾರವಿಂದ ಇಂದು ಕಳೆಗುಂದಿದೆ. ಪ್ರಭೋ! ಅದು ಶ್ರೀರಾಮನ ಸಾಯಕಗಳಿಂದ ವಿದೀರ್ಣವಾಗಿ ರಕ್ತರಂಜಿತವಾಗಿದೆ. ಮೇದಸ್ಸು ಮತ್ತು ಮಸ್ತಿಷ್ಕ ಭಿನ್ನ ಭಿನ್ನವಾಗಿದೆ. ರಥದ ಧೂಳಿನಿಂದ ಮುಖದಲ್ಲಿ ರುಕ್ಷತೆ ಬಂದಿದೆ.॥34-37½॥
ಮೂಲಮ್ - 38½
ಹಾ ಪಶ್ಚಿಮಾ ಮೇ ಸಂಪ್ರಾಪ್ತಾ ದಶಾ ವೈಧವ್ಯದಾಯಿನೀ ॥
ಯಾ ಮಯಾಽಽಸೀನ್ನ ಸಂಬುದ್ಧಾ ಕದಾಚಿದಪಿ ಮಂದಯಾ ।
ಅನುವಾದ
ಅಯ್ಯೋ! ಮಂದಮತಿಯಾದ ನಾನು ಯಾವ ಅವಸ್ಥೆಯನ್ನು ಎಂದೂ ಯೋಚಿಸಿಯೇ ಇರಲಿಲ್ಲವೋ, ಅಂತಹ ವೈಧವ್ಯವನ್ನುಂಟುಮಾಡುವ ಅಧೋಗತಿಯು ಇಂದು ನನಗೆ ಪ್ರಾಪ್ತವಾಯಿತು.॥38॥
ಮೂಲಮ್ - 39½
ಪಿತಾ ದಾನವರಾಜೋ ಮೇ ಭರ್ತಾ ಮೇ ರಾಕ್ಷಸೇಶ್ವರಃ ॥
ಪುತ್ರೋ ಮೇ ಶಕ್ರನಿರ್ಜೇತಾ ಇತ್ಯಹಂ ಗರ್ವಿತಾ ಭೃಶಮ್ ।
ಅನುವಾದ
ದಾನವರಾಜ ಮಯನು ನನ್ನ ತಂದೆ, ರಾಕ್ಷಸ ರಾಜಾ ರಾವಣ ನನ್ನ ಪತಿ ಮತ್ತು ಇಂದ್ರನನ್ನು ಗೆದ್ದ ಇಂದ್ರಜಿತು ನನ್ನ ಪುತ್ರ - ಇದೆಲ್ಲವನ್ನು ಯೋಚಿಸಿ ನಾನು ಅತ್ಯಂತ ಗರ್ವ ಪಡುತ್ತಿದ್ದೆ.॥39॥
ಮೂಲಮ್ - 40½
ದೃಪ್ತಾರಿಮಥನಾಃ ಶೂರಾಃ ಪ್ರಖ್ಯಾತ ಬಲಪೌರುಷಾಃ ॥
ಅಕುತಶ್ಚಿದ್ಭಯಾ ನಾಥಾ ಮಮೇತ್ಯಾಸೀನ್ಮತಿರ್ಧ್ರುವಾ ।
ಅನುವಾದ
ನನ್ನ ರಕ್ಷಕರು ಇಂತಹ ದರ್ಪತುಂಬಿದ, ಶತ್ರುಗಳನ್ನು ನಾಶಮಾಡಲು ಸಮರ್ಥರೂ, ಕ್ರೂರಿಗಳೂ, ವಿಖ್ಯಾತ ಬಲ-ಪೌರುಷಸಂಪನ್ನರೂ, ಯಾರಿಗೂ ಹೆದರದೇ ಇರುವವರು ಎಂಬ ವಿಶ್ವಾಸ ನನಗಿತ್ತು.॥40॥
ಮೂಲಮ್ - 41½
ತೇಷಾಮೇವಂ ಪ್ರಭಾವಾಣಾಂ ಯುಷ್ಮಾಕಂ ರಾಕ್ಷಸರ್ಷಭಾಃ ॥
ಕಥಂ ಭಯಮಸಂಬುದ್ಧಂ ಮಾನುಷಾದಿದಮಾಗತಮ್ ।
ಅನುವಾದ
ರಾಕ್ಷಸ ಶಿರೋಮಣಿಗಳೇ! ಇಂತಹ ಪ್ರಭಾವಶಾಲಿ ನಿಮಗೆ ಮನುಷ್ಯನಿಂದ ಅಜ್ಞಾತ ಭಯ ಹೇಗೆ ಪ್ರಾಪ್ತವಾಯಿತು.॥41॥
ಮೂಲಮ್ - 42
ಸ್ನಿಗ್ಧೇಂದ್ರ ನೀಲನೀಲಂ ತು ಪ್ರಾಂಶುಶೈಲೋಪಮಂ ಮಹತ್ ॥
ಮೂಲಮ್ - 43
ಕೇಯೂರಾಂಗದ ವೈಢೂರ್ಯಮುಕ್ತಾಹಾರ ಸ್ರಗುಜ್ಜ್ವಲಮ್ ।
ಕಾಂತಂ ವಿಹಾರೇಷ್ವಧಿಕಂ ದೀಪ್ತಂ ಸಂಗ್ರಾಮಭೂಮಿಷು ॥
ಮೂಲಮ್ - 44½
ಭಾತ್ಯಾಭರಣಭಾಭಿರ್ಯದ್ ವಿದ್ಯುದ್ಭಿರಿವ ತೋಯದಃ ।
ತದೇವಾದ್ಯ ಶರೀರಂ ತೇ ತೀಕ್ಷ್ಣೈರ್ನೈಕಶರೈಶ್ಚಿತಮ್ ॥
ಪುನರ್ದುರ್ಲಭ ಸಂಸ್ಪರ್ಶಂ ಪರಿಷ್ವಕ್ತುಂ ನಶಕ್ಯತೇ ।
ಅನುವಾದ
ಮನೋಹರ ಇಂದ್ರನೀಲಮಣಿಯಂತೆ ಶ್ಯಾಮಲವಾಗಿದ್ದ, ಪರ್ವತ ಶಿಖರದಂತೆ ಎತ್ತರವಾಗಿದ್ದ, ಕೇಯೂರಾಂಗದಗಳಿಂದಲೂ ಮುಕ್ತಾಹಾರಗಳಿಂದಲೂ ಪುಷ್ಪಹಾರಗಳಿಂದಲೂ ಉಜ್ವಲಿಸುತ್ತಿದ್ದ, ವಿಹರಿಸುವ ಸ್ಥಾನಗಳಲ್ಲಿ ಹೆಚ್ಚು ಶಾಂತಿಯಿಂದ ಬೆಳಗುತ್ತಿದ್ದ, ಸಂಗ್ರಾಮ ಭೂಮಿಯಲ್ಲಿ ದೇದೀಪ್ಯಮಾನನಾಗಿ ಕಾಣುತ್ತಿದ್ದ, ತೊಟ್ಟಿದ್ದ ಆಭರಣಗಳ ಪ್ರಭೆಯಿಂದ ಮಿಂಚಿನ ಮೂಲೆಗಳಿಂದ ಸಮಲಂಕೃತವಾದ ಮೇಘಮಂಡಲದಂತೆಯೇ ಕಾಣುತ್ತಿದ್ದ ನಿನ್ನ ಈ ಶರೀರವು ತೀಕ್ಷ್ಣವಾದ ಬಾಣಗಳಿಂದ ತುಂಬಿಹೋಗಿದೆ. ಇನ್ನು ಮುಂದೆ ಇಂತಹ ಶರೀರವನ್ನು ಸ್ಪರ್ಶಿಸಲು ದುರ್ಲಭವಾಗುವುದು. ಬಾಣಗಳಿಂದಾಗಿ ನಾನು ಇದನ್ನು ಆಲಿಂಗಿಸಲಾರದೆ ಹೋಗಿರುವೆನು.॥42-44॥
ಮೂಲಮ್ - 45
ಶ್ವಾವಿಧಃ ಶಲಲೈರ್ಯದ್ವದ್ ಬಾಣೈರ್ಲಗ್ನೈರ್ನಿರಂತರಮ್ ॥
ಮೂಲಮ್ - 46½
ಸ್ವರ್ಪಿತೈರ್ಮರ್ಮಸು ಭೃಶಂ ಸಂಛಿನ್ನಸ್ನಾಯು ಬಂಧನಮ್ ।
ಕ್ಷಿತೌ ನಿಪತಿತಂ ರಾಜನ್ಶ್ಯಾಮಂ ವೈರುಧಿರಸಚ್ಛವಿ ॥
ವಜ್ರಪ್ರಹಾರಾಭಿಹತೋ ವಿಕೀರ್ಣ ಇವ ಪರ್ವತಃ ।
ಅನುವಾದ
ರಾಜನೇ! ಮುಳ್ಳು ಹಂದಿಯ ದೇಹ ಮುಳ್ಳುಗಳಿಂದ ತುಂಬಿರುವಂತೆಯೇ ನಿಮ್ಮ ಶರೀರದಲ್ಲಿ ಒಂದು ಅಂಗುಲ ಜಾಗವೂ ಇಲ್ಲದಷ್ಟು ಬಾಣಗಳು ನೆಟ್ಟಿವೆ. ಅವೆಲ್ಲ ಬಾಣಗಳು ಮರ್ಮಸ್ಥಾನಗಳಲ್ಲಿ ನೆಟ್ಟಿವೆ ಹಾಗೂ ಅವುಗಳಿಂದ ಸ್ನಾಯುಬಂಧನ ಛಿನ್ನ ಭಿನ್ನವಾಗಿದೆ. ಈ ಸ್ಥಿತಿಯಲ್ಲಿ ಪೃಥಿವಿಯಲ್ಲಿ ಬಿದ್ದ ನಿಮ್ಮ ಶ್ಯಾಮಲ ಶರೀರದ ಮೇಲೆ ರಕ್ತದ ಕೆಂಪು ಬಣ್ಣ ಹರಡಿದೆ. ವಜ್ರಾಯುಧದಿಂದ ನುಚ್ಚುನೂರಾಗಿ ಚೆಲ್ಲಿಹೋದ ಪರ್ವತದಂತೆ ಕಂಡುಬರುತ್ತಿದೆ.॥45-46॥
ಮೂಲಮ್ - 47½
ಹಾ ಸ್ವಪ್ನಃ ಸತ್ಯಮೇವೇದಂ ತ್ವಂ ರಾಮೇಣ ಕಥಂ ಹತಃ ॥
ತ್ವಂ ಮೃತ್ಯೋರಪಿ ಮೃತ್ಯುಃ ಸ್ಯಾಃ ಕಥಂ ಮೃತ್ಯುವಶಂ ಗತಃ ।
ಅನುವಾದ
ನಾಥ! ಇದು ಸ್ವಪ್ನವೋ, ನಿಜವೋ? ಅಯ್ಯೋ! ನೀವು ಶ್ರೀರಾಮನ ಕೈಯಿಂದ ಹೇಗೆ ಹತರಾದಿರಿ? ನೀವಾದರೋ ಮೃತ್ಯುವಿಗೂ ಮೃತ್ಯುವಾಗಿದ್ದವರು, ಮತ್ತೆ ಮೃತ್ಯುವಶ ಹೇಗಾದಿರಿ.॥47॥
ಮೂಲಮ್ - 48
ತ್ರೈಲೋಕ್ಯವಸುಭೋಕ್ತಾರಂ ತ್ರೈಲೋಕ್ಯೋದ್ವೇಗದಂ ಮಹತ್ ॥
ಮೂಲಮ್ - 49
ಜೇತಾರಂ ಲೋಕಪಾಲಾನಾಂ ಕ್ಷೇಪ್ತಾರಂ ಶಂಕರಸ್ಯ ಚ ।
ದೃಪ್ತಾನಾಂ ನಿಗೃಹೀತಾರಮಾವಿಷ್ಕೃತ ಪರಾಕ್ರಮಮ್ ॥
ಅನುವಾದ
ನೀವು ಮೂರು ಲೋಕದ ಸಂಪತ್ತನ್ನೂ ಅನುಭವಿಸಿದಿರಿ, ತ್ರಿಲೋಕದ ಪ್ರಾಣಿಗಳನ್ನು ಉದ್ವೇಗದಲ್ಲಿ ಕೆಡಹಿದಿರಿ. ನೀವು ಲೋಕಪಾಲರನ್ನು ಗೆದ್ದು, ಕೈಲಾಸ ಪರ್ವತವನ್ನು ಶ್ರೀ ಶಿವನ ಸಹಿತ ಎತ್ತಿಕೊಂಡಿರಿ; ದೊಡ್ಡ ದೊಡ್ಡ ಅಭಿಮಾನೀ ವೀರರನ್ನು ಯುದ್ಧದಲ್ಲಿ ಸೆರೆ ಹಿಡಿದು ನೀವು ಪರಾಕ್ರಮ ಪ್ರಕಟಿಸಿದಿರಿ.॥48-49॥
ಮೂಲಮ್ - 50
ಲೋಕಕ್ಷೋಭಯಿತಾರಂ ಚ ಸಾಧುರ್ಭೂತ ವಿದಾಣಮ್ ।
ಓಜಸಾ ದೃಪ್ತವಾಕ್ಯಾನಾಂ ವಕ್ತಾರಂ ರಿಪುಸಂನಿಧೌ ॥
ಅನುವಾದ
ನೀವು ಸಮಸ್ತ ಜಗತ್ತನ್ನು ಕ್ಷೋಭಗೊಳಿಸಿ, ಸಾಧುಪುರುಷರಿಗೆ ಹಿಂಸಿಸಿ, ಶತ್ರುಗಳಲ್ಲಿ ಬಲವಂತವಾಗಿ ಅಹಂಕಾರಪೂರ್ಣ ಮಾತನಾಡುತ್ತಿದ್ದೆ.॥50॥
ಮೂಲಮ್ - 51
ಸ್ವಯೂಥ ಭೃತ್ಯಗೋಪ್ತಾರಂ ಹಂತಾರಂ ಭೀಮಕರ್ಮಣಾಮ್ ।
ಹಂತಾರಂ ದಾನವೇಂದ್ರಾಣಾಂ ಯಕ್ಷಾಣಾಂ ಚ ಸಹಸ್ರಶಃ ॥
ಅನುವಾದ
ಭಯಾನಕ ಪರಾಕ್ರಮ ತೋರುವ ನೀವು ವಿಪಕ್ಷಿಯರನ್ನು ಕೊಂದು, ತನ್ನ ಪಕ್ಷದ ಜನರನ್ನು, ಸೇವಕರನ್ನು ರಕ್ಷಿಸಿದಿರಿ. ದಾನವರ ಸೇನಾಪತಿಗಳನ್ನು, ಸಾವಿರಾರು ಯಕ್ಷರನ್ನು ಕೂಡ ಯಮನಾಲಯಕ್ಕೆ ಅಟ್ಟಿದೆ.॥51॥
ಮೂಲಮ್ - 52
ನಿವಾತಕವಚಾನಾಂ ತು ನಿಗೃಹೀತಾರಮಾಹವೇ ।
ನೈಕಯಜ್ಞವಿಲೋಪ್ತಾರಂ ತ್ರಾತಾರಂ ಸ್ವಜನಸ್ಯ ಚ ॥
ಅನುವಾದ
ಸಮರಾಂಗಣದಲ್ಲಿ ನಿವಾತ ಕವಚ ಎಂಬ ದಾನವರನ್ನು ನೀವು ದಮನ ಮಾಡಿ ಅನೇಕ ಯಜ್ಞಗಳನ್ನು ನಾಶ ಮಾಡಿಬಿಟ್ಟಿರಿ ಹಾಗೂ ಆತ್ಮೀಯ ಜನರನ್ನು ರಕ್ಷಿಸಿದಿರಿ.॥52॥
ಮೂಲಮ್ - 53
ಧರ್ಮವ್ಯವಸ್ಥಾಭೇತ್ತಾರಂ ಮಾಯಾ ಸ್ರಷ್ಟಾರಮಾಹವೇ ।
ದೇವಾಸುರನೃಕನ್ಯಾನಾಮಾಹರ್ತಾರಂ ತತಸ್ತತಃ ॥
ಅನುವಾದ
ನೀವು ಧರ್ಮದ ವ್ಯವಸ್ಥೆಯನ್ನು ಮುರಿಯುವರೂ, ಸಂಗ್ರಾಮದಲ್ಲಿ ಮಾಯೆಯನ್ನು ಸೃಷ್ಟಿಸಿದ್ದಿರಿ, ದೇವತೆಗಳ, ಅಸುರರ, ಮನುಷ್ಯರ ಕನ್ಯೆಯರನ್ನು ಎಲ್ಲ ಕಡೆಯಿಂದ ಕದ್ದು ತರುತ್ತಿದ್ದೆ.॥53॥
ಮೂಲಮ್ - 54
ಶತ್ರುಸ್ತ್ರೀಶೋಕದಾತಾರಂ ನೇತಾರಂ ಸ್ವಜನಸ್ಯ ಚ ।
ಲಂಕಾದ್ವೀಪಸ್ಯ ಗೋಪ್ತಾರಂ ಕರ್ತಾರಂ ಭೀಮಕರ್ಮಣಾಮ್ ॥
ಮೂಲಮ್ - 55½
ಅಸ್ಮಾಕಂ ಕಾಮಭೋಗಾನಾಂ ದಾತಾರಂ ರಥಿನಾಂ ವರಮ್ ।
ಏವಂ ಪ್ರಭಾವಂ ಭರ್ತಾರಂ ದೃಷ್ಟ್ವಾರಾಮೇಣ ಪಾತಿತಮ್ ॥
ಸ್ಥಿರಾಸ್ಮಿ ಯಾ ದೇಹಮಿಮಂ ಧಾರಯಾಮಿ ಹತಪ್ರಿಯಾ ।
ಅನುವಾದ
ನೀವು ಶತ್ರುವಿನ ಸ್ತ್ರೀಯರಿಗೆ ಶೋಕ ಕೊಡುವವರೂ, ಸ್ವಜನರ ಮುಖಂಡರೂ, ಲಂಕೆಯ ರಕ್ಷಕರೂ, ಭಯಾನಕ ಕರ್ಮಮಾಡುವವರೂ, ನಮಗೆಲ್ಲರಿಗೆ ಕಾಮೋಪಭೋಗದ ಸುಖ ಕೊಡುವವರಾಗಿದ್ದಿರಿ. ಇಂತಹ ಪ್ರಭಾವಶಾಲಿ ಹಾಗೂ ರಥಿಕರಲ್ಲಿ ಶ್ರೇಷ್ಠನಾದ ತನ್ನ ಪ್ರಿಯತಮ ಪತಿಯನ್ನು ಶ್ರೀರಾಮನು ಧರಾಶಾಯಿಯಾಗಿಸಿದುದನ್ನು ನೋಡಿಯೂ ನಾನು ಇಷ್ಟರವರೆಗೆ ಶರೀರ ಧರಿಸಿಕೊಂಡಿರು ವೆನಲ್ಲ! ಪ್ರಿಯತಮನು ಸತ್ತುಹೋದರೂ ನಾನು ಬದುಕಿದ್ದೇನಲ್ಲ! ಇದು ನನ್ನ ಪಾಷಾಣಹೃದಯದ ಪರಿಚಯವಾಗಿದೆ.॥54-55॥
ಮೂಲಮ್ - 56½
ಶಯನೇಷು ಮಹಾರ್ಹೇಷು ಶಯಿತ್ವಾ ರಾಕ್ಷಸೇಶ್ವರ ॥
ಇಹಕಸ್ಮಾತ್ಪ್ರಸುಪ್ತೋಽಸಿ ಧರಣ್ಯಾಂ ರೇಣುಗುಂಠಿತಃ ।
ಅನುವಾದ
ರಾಕ್ಷಸರಾಜನೇ! ನೀವಾದರೋ ಬಹುಮೂಲ್ಯ ಮಂಚದಲ್ಲಿ ಮಲಗಿರುವವರು, ಮತ್ತೆ ಇಲ್ಲಿ ನೆಲದಲ್ಲಿ ಧೂಳನ್ನು ಮೆತ್ತಿಕೊಂಡು ಮಲಗಿರುವಿರಲ್ಲ.॥56॥
ಮೂಲಮ್ - 57½
ಯದಾ ಮೇ ತನಯಃ ಶಸ್ತೋ ಲಕ್ಷ್ಮಣೇನೇಂದ್ರಜಿದ್ಯುಧಿ ॥
ತದಾತ್ವಭಿಹತಾ ತೀವ್ರಮದ್ಯ ತ್ವಸಿನ್ನಿಪಾತಿತಾ ।
ಅನುವಾದ
ಲಕ್ಷ್ಮಣನು ಯುದ್ಧದಲ್ಲಿ ನನ್ನ ಮಗ ಇಂದ್ರಜಿತುವನ್ನು ಕೊಂದಾಗ ನನಗೆ ಆಳವಾದ ಆಘಾತವಾಗಿತ್ತು ಮತ್ತು ಇಂದು ನಿಮ್ಮ ವಧೆಯಾದುದರಿಂದ ನಾನು ಸತ್ತೇ ಹೋದೆ.॥57॥
ಮೂಲಮ್ - 58½
ಸಾಹಂ ಬಂಧುಜನೈರ್ಹೀನಾ ಹೀನಾ ನಾಥೇನ ಚ ತ್ವಯಾ ।
ವಿಹೀನಾ ಕಾಮಭೋಗೈಶ್ಚ ಶೋಚಿಷ್ಯೇ ಶಾಶ್ವತೀಃ ಸಮಾಃ ।
ಅನುವಾದ
ಈಗ ನಾನು ಬಂಧುಜನರಿಂದ ಹೀನ, ನಿಮ್ಮಂತಹ ಸ್ವಾಮಿಯಿಂದ ರಹಿತಳಾಗಿ, ಕಾಮಭೋಗದಿಂದ ವಂಚಿತಳಾಗಿ, ಅನಂತ ವರ್ಷಗಳವರೆಗೆ ಶೋಕದಲ್ಲಿ ಮುಳುಗಿರುವೆನು.॥58॥
ಮೂಲಮ್ - 59½
ಪ್ರಪನ್ನೋ ದೀರ್ಘಮಧ್ವಾನಂ ರಾಜನ್ನದ್ಯ ಸುದುರ್ಗಮಮ್ ॥
ನಯ ಮಾಮಪಿ ದುಃಖಾರ್ತಾಂ ನ ವರ್ತಿಷ್ಯೇ ತ್ವಯಾ ವಿನಾ ।
ಅನುವಾದ
ರಾಜನೇ! ಇಂದು ನೀವು ಹೋಗಿರುವ ಅತ್ಯಂತ ದುರ್ಗಮ ಹಾಗೂ ವಿಶಾಲ ಮಾರ್ಗದಲ್ಲೇ ದುಃಖಿತೆಯಾದ ನನ್ನನ್ನು ಕೊಂಡುಹೋಗಿರಿ. ನಾನು ನೀವಿಲ್ಲದೆ ಬದುಕಿರಲಾರೆನು.॥59॥
ಮೂಲಮ್ - 60½
ಕಸ್ಮಾತ್ತ್ವಂ ಮಾಂ ವಿಹಾಯೇಹ ಕೃಪಣಾಂ ಗಂತುಮಿಚ್ಛಸಿ ॥
ದೀನಾಂ ವಿಲಪತೀಂ ಮಂದಾಂ ಕಿಂ ಚ ಮಾಂ ನಾಭಿಭಾಷಸೇ ।
ಅನುವಾದ
ಅಯ್ಯೋ! ಅಸಹಾಯಕಳಾದ ನನ್ನನ್ನು ಇಲ್ಲೇ ಬಿಟ್ಟು ನೀವು ಬೇರೆಡೆಗೆ ಹೋಗಲು ಬಯಸುವಿರಾ? ನಾನು ದೀನ ಅಭಾಗಿನೀಯಾಗಿ ನಿಮಗಾಗಿ ಅಳುತ್ತಿದ್ದೇನೆ. ನೀವು ನನ್ನಲ್ಲಿ ಏಕೆ ಮಾತನಾಡುವುದಿಲ್ಲ.॥60½॥
ಮೂಲಮ್ - 61½
ದೃಷ್ಟ್ವಾನ ಖಲ್ವಭಿಕ್ರುದ್ಧೋ ಮಾಮಿಹಾನವಕುಂಠಿತಾಮ್ ॥
ನಿರ್ಗತಾಂ ನಗರದ್ವಾರಾತ್ಪದ್ಭ್ಯಾಮೇವಾಗತಾಂ ಪ್ರಭೋ ।
ಅನುವಾದ
ಪ್ರಭೋ! ಇಂದು ನನ್ನ ಮುಖದ ಪರದೆಯೂ ಇಲ್ಲದೆ ನಾನು ನಗರ ದ್ವಾರದಿಂದ ಕಾಲ್ನಡಿಗೆಯಲ್ಲಿ ಇಲ್ಲಿಗೆ ಬಂದಿರುವೆನು. ಈ ಸ್ಥಿತಿಯಲ್ಲಿ ನನ್ನನ್ನು ನೋಡಿ ಕೋಪಗೊಳ್ಳುವುದಿಲ್ಲ ತಾನೇ.॥61½॥
ಮೂಲಮ್ - 62½
ಪಶ್ಯೇಷ್ಟದಾರ ದಾರಾಂಸ್ತೇ ಭ್ರಷ್ಟಲಜ್ಜಾವಕುಂಠನಾನ್ ॥
ಬಹಿರ್ನಿಷ್ಪತಿತಾನ್ಸರ್ವಾನ್ಕಥಂ ದೃಷ್ಟ್ವಾನ ಕುಪ್ಯಸಿ ।
ಅನುವಾದ
ನೀವು ನಿಮ್ಮ ಪತ್ನಿಯರನ್ನು ತುಂಬಾ ಪ್ರೇಮಿಸುತ್ತಿದ್ದೆ, ಇಂದು ನಿಮ್ಮ ಎಲ್ಲ ಪತ್ನಿಯರು ಲಜ್ಜೆಬಿಟ್ಟು, ಮುಖಪರದೆ ತೊರೆದು ಹೊರಗೆ ಬಂದಿರುವರು. ಇವರನ್ನು ನೋಡಿ ನಿಮಗೆ ಏಕೆ ಕ್ರೋಧ ಉಂಟಾಗುವುದಿಲ್ಲ.॥62½॥
ಮೂಲಮ್ - 63½
ಅಯಂ ಕ್ರೀಡಾ ಸಹಾಯಸ್ತೇಽನಾಥೋ ಲಾಲಪ್ಯತೇ ಜನಃ ॥
ನ ಚೈನಮಾಶ್ವಾಸಯಸಿ ಕಿಂ ವಾ ನ ಬಹುಮನ್ಯಸೇ ।
ಅನುವಾದ
ಸ್ವಾಮಿ! ನಿಮ್ಮ ಕ್ರೀಡಾ ಸಹಚರೀ ಈ ಮಂದೋದರಿಯು ಇಂದು ಅನಾಥಳಾಗಿ ವಿಲಾಪಿಸುತ್ತಿರುವಳು. ನೀವು ಏಕೆ ಆಶ್ವಾಸನೆ ಕೊಡುವುದಿಲ್ಲ, ಅಥವಾ ಹೆಚ್ಚು ಆದರವೇಕೆ ಕೊಡುವುದಿಲ್ಲ.॥63½॥
ಮೂಲಮ್ - 64
ಯಾಸ್ತ್ವಯಾ ವಿಧವಾ ರಾಜನ್ಕೃತಾ ನೈಕಾಃ ಕುಲಸ್ತ್ರಿಯಃ ॥
ಮೂಲಮ್ - 65½
ಪತಿವ್ರತಾ ಧರ್ಮರತಾ ಗುರುಶುಶ್ರೂಷಣೇ ರತಾಃ ।
ತಾಭಿಃ ಶೋಕಾಭಿತಪ್ತಾಭಿಃ ಶಪ್ತಃ ಪರವಶಂ ಗತಃ ॥
ತ್ವಯಾ ವಿಪ್ರಕೃತಾಭಿಶ್ಚ ತದಾ ಶಪ್ತಸ್ತದಾಗತಮ್ ।
ಅನುವಾದ
ರಾಜನೇ! ನೀವು ಅನೇಕ ಕುಲಲನೆಯರನ್ನು, ಗುರುಗಳ ಸೇವೆಯಲ್ಲಿ ತೊಡಗಿದವರನ್ನು, ಧರ್ಮ ಪರಾಯಣಾ, ಪತಿವ್ರತೆಯಾಗಿದ್ದವರನ್ನು ವಿಧವೆಯಾಗಿಸಿರಿ, ಅವರ ಅಪಮಾನ ಮಾಡಿದಿರಿ. ಆದ್ದರಿಂದ ಆಗ ಅವರು ಶೋಕ ಸಂತಪ್ತರಾಗಿ ನಿಮಗೆ ಕೊಟ್ಟ ಶಾಪದ ಫಲದಿಂದಲೇ ನೀವು ಶತ್ರುವಿಗೆ ಮತ್ತು ಮೃತ್ಯುವಿಗೆ ಈನವಾಗಬೇಕಾಯಿತು.॥64-65½॥
ಮೂಲಮ್ - 66½
ಪ್ರವಾದಃ ಸತ್ಯಮೇವಾಯಂ ತ್ವಾಂ ಪ್ರತಿ ಪ್ರಾಯಶೋ ನೃಪ ॥
ಪತಿವ್ರತಾನಾಂ ನಾಕಸ್ಮಾತ್ ಪತಂತ್ಯಶ್ರೂಣಿ ಭೂತಲೇ ।
ಅನುವಾದ
ಮಹಾರಾಜಾ! ‘ಪತಿವ್ರತೆಯರ ಕಣ್ಣೀರು ನಿಷ್ಕಾರಣವಾಗಿ ಭೂಮಿಯ ಮೇಲೆ ಬೀಳುವುದಿಲ್ಲ’ ಎಂಬ ಈ ಲೋಕೋಕ್ತಿಯು ನಿಮ್ಮ ವಿಷಯದಲ್ಲಿ ಸತ್ಯವಾಗಿಯೇ ಘಟಿಸಿದೆ.॥66½॥
ಮೂಲಮ್ - 67½
ಕಥಂ ಚ ನಾಮ ತೇ ರಾಜನ್ಲ್ಲೋಕಾನಾಕ್ರಮ್ಯ ತೇಜಸಾ ॥
ನಾರೀ ಚೌರ್ಯಮಿದಂ ಕ್ಷುದ್ರಂ ಕೃತಂ ಶೌಂಡೀರ್ಯಮಾನಿನಾ ।
ಅನುವಾದ
ರಾಜನೇ! ನೀವಾದರೋ ತನ್ನ ತೇಜದಿಂದ ಮೂರು ಲೋಕಗಳನ್ನು ಆಕ್ರಾಂತಗೊಳಿಸಿ ತನ್ನನ್ನು ಭಾರೀ ಶೂರನೆಂದು ತಿಳಿಯುತ್ತಿದ್ದೆ. ಹೀಗಿರುವಾಗ ಪರಸ್ತ್ರೀಯರನ್ನು ಅಪಹರಿಸುವ ಈ ನೀಚ ಕಾರ್ಯ ಹೇಗೆ ಮಾಡಿದಿರಿ.॥67½॥
ಮೂಲಮ್ - 68½
ಅಪನೀಯಾ ಶ್ರಮಾದ್ರಾಮಂ ಯನ್ಮೃಗಚ್ಛದ್ಮನಾ ತ್ವಯಾ ॥
ಆನೀತಾ ರಾಮಪತ್ನೀ ಸಾ ಅಪನೀಯ ಚ ಲಕ್ಷ್ಮಣಮ್ ।
ಅನುವಾದ
ಮಾಯಾಮೃಗದ ನೆಪದಿಂದ ಶ್ರೀರಾಮ-ಲಕ್ಷ್ಮಣರನ್ನು ಆಶ್ರಮದಿಂದ ದೂರ ಓಡಿಸಿದೆ. ಬಳಿಕ ನೀವು ಶ್ರೀರಾಮಪತ್ನೀ ಸೀತೆಯನ್ನು ಕದ್ದು ಇಲ್ಲಿಗೆ ತಂದಿರಿ, ಇದು ಎಷ್ಟು ದೊಡ್ಡ ಹೇಡಿತನ.॥68½॥
ಮೂಲಮ್ - 69½
ಕಾತರ್ಯಂ ಚ ನ ತೇ ಯುದ್ಧೇ ಕದಾಚಿತ್ ಸಂಸ್ಮರಾಮ್ಯಹಮ್ ॥
ತತ್ತು ಭಾಗ್ಯವಿಪರ್ಯಾಸಾನ್ನೂನಂ ತೇಽಪಕ್ವಲಕ್ಷಣಮ್ ।
ಅನುವಾದ
ಯುದ್ಧದಲ್ಲಿ ಎಂದೂ ನೀವು ಹೇಡಿತನ ತೋರಿದುದು ನನಗೆ ಜ್ಞಾಪಕವಿಲ್ಲ. ಆದರೆ ದೌರ್ಭಾಗ್ಯದಿಂದ ಆ ದಿನ ಸೀತೆಯನ್ನು ಹರಣಮಾಡುವಾಗ ಖಂಡಿತ ನಿಮ್ಮಲ್ಲಿ ಹೇಡಿತನ ಬಂದಿತ್ತು. ಅದು ಬೇಗನೇ ನಿಮ್ಮ ವಿನಾಶದ ಸೂಚನೆ ಕೊಡುತ್ತಿತ್ತು.॥69½॥
ಮೂಲಮ್ - 70
ಅತೀತಾನಾಗತಾರ್ಥಜ್ಞೋ ವರ್ತಮಾನ ವಿಚಕ್ಷಣಃ ॥
ಮೂಲಮ್ - 71½
ಮೈಥಿಲೀಮಾಹೃತಾಂ ದೃಷ್ಟ್ವಾ ಧ್ಯಾತ್ವಾ ನಿಃಶ್ವಸ್ಯ ಚಾಯತಮ್ ।
ಸತ್ಯವಾಕ್ಸ ಮಹಾಭಾಗೋ ದೇವರೋಮೇ ಯದಬ್ರವೀತ್ ॥
ಅಯಂ ರಾಕ್ಷಸಮುಖ್ಯಾನಾಂ ವಿನಾಶಃ ಪರ್ಯುಪಸ್ಥಿತಃ ।
ಅನುವಾದ
ಮಹಾಬಾಹೋ! ನನ್ನ ಮೈದುನ ವಿಭೀಷಣನು ಸತ್ಯವಾದಿಯೂ, ಭೂತ-ಭವಿಷ್ಯವನ್ನು ತಿಳಿದವನೂ, ವರ್ತಮಾನ ತಿಳಿಯುವುದರಲ್ಲಿ ಕುಶಲನೂ ಆಗಿದ್ದಾನೆ. ಕದ್ದು ತಂದಿರುವ ಮೈಥಿಯನ್ನು ನೋಡಿ ಅವನು ಮನಸ್ಸಿನಲ್ಲೇ ವಿಚಾರ ಮಾಡಿ ನಿಟ್ಟುಸಿರುಬಿಟ್ಟು ‘ಆಗ ಮುಖ್ಯ ಮುಖ್ಯ ರಾಕ್ಷಸರ ವಿನಾಶದ ಸಮಯ ಉಪಸ್ಥಿತವಾಗಿದೆ’ ಎಂಬು ಮಾತು ಹೇಳಿದ್ದನು.॥70-71½॥
ಮೂಲಮ್ - 72
ಕಾಮಕ್ರೋಧಸಮುತ್ಥೇನ ವ್ಯಸನೇನ ಪ್ರಸಂಗಿನಾ ॥
ಮೂಲಮ್ - 73
ನಿರ್ವೃತ್ತಸ್ತ್ವತ್ಕ್ರತೇನರ್ಥಃ ಸೋಽಯಂ ಮೂಲಹರೋ ಮಹಾನ್ ।
ತ್ವಯಾ ಕೃತಮಿದಂ ಸರ್ವಮನಾಥಂ ರಕ್ಷಸಂ ಕುಲಮ್ ॥
ಅನುವಾದ
ಕಾಮ-ಕ್ರೋಧದಿಂದಾಗಿ ನಿಮ್ಮ ಆಸಕ್ತಿವಿಷಯಕ ದೋಷ ದಿಂದ ಇವೆಲ್ಲ ಐಶ್ವರ್ಯ ನಾಶವಾಗಿ ಹೋಯಿತು. ಬೇರು ನಾಶಗೊಳಿಸುವ ಈ ಮಹಾ ಅನರ್ಥ ಪ್ರಾಪ್ತವಾಯಿತು. ಇಂದು ನೀವು ರಾಕ್ಷಸ ಕುಲವನ್ನು ಅನಾಥಗೊಳಿಸಿದಿರಿ.॥72-73॥
ಮೂಲಮ್ - 74
ನ ಹಿ ತ್ವಂ ಶೋಚಿತವ್ಯೋ ಮೇ ಪ್ರಖ್ಯಾತ ಬಲಪೌರುಷಃ ।
ಸ್ತ್ರೀಸ್ವಭಾವಾತ್ತು ಮೇ ಬುದ್ಧಿಃ ಕಾರುಣ್ಯೇ ಪರಿವರ್ತತೇ ॥
ಅನುವಾದ
ನೀವು ನಿಮ್ಮ ಬಲ-ಪೌರುಷಗಳಿಗೆ ವಿಖ್ಯಾತರಿದ್ದಿರಿ, ಆದ್ದರಿಂದ ನಿಮಗಾಗಿ ಶೋಕಿಸುವುದ ಉಚಿತವಲ್ಲದಿದ್ದರೂ ಸೀಸ್ವಭಾವದ ಕಾರಣ ನನ್ನ ಹೃದಯದಲ್ಲಿ ದೀನತೆ ಆವರಿಸಿದೆ.॥74॥
ಮೂಲಮ್ - 75
ಸುಕೃತಂ ದುಷ್ಕ್ರತಂ ಚ ತ್ವಂ ಗೃಹೀತ್ವಾ ಸ್ವಾಂ ಗತಿಂ ಗತಃ ।
ಆತ್ಮಾನಮನುಶೋಚಾಮಿ ತ್ವದ್ವಿನಾಶೇನ ದುಃಖಿತಾಮ್ ॥
ಅನುವಾದ
ನೀವು ನಿಮ್ಮ ಪಾಪ-ಪುಣ್ಯವನ್ನೆತ್ತಿಕೊಂಡು ವೀರೋಚಿತ ಗತಿಯನ್ನು ಪಡೆದಿರುವಿರಿ. ನಿಮ್ಮ ವಿನಾಶದಿಂದ ನಾನು ಮಹಾದುಃಖದಲ್ಲಿ ಬಿದ್ದಿರುವೆನು, ಅದರಿಂದ ಪದೇ ಪದೇ ನಿಮಗಾಗಿ ಶೋಕಿಸುತ್ತಿದ್ದೇನೆ.॥75॥
ಮೂಲಮ್ - 76
ಸುಹೃದಾಂ ಹಿತಕಾಮಾನಾಂ ನ ಶ್ರುತಂ ವಚನಂ ತ್ವಯಾ ।
ಭ್ರಾತೃಣಾಂ ಚೈವ ಕಾರ್ತ್ಸ್ನ್ಯೇನ ಹಿತಮುಕ್ತಂ ದಶಾನನ ॥
ಅನುವಾದ
ಮಹಾರಾಜ ದಶಾನನ! ನಿಮ್ಮ ಹಿತವನ್ನು ಬಯಸುವ ಸುಹೃದಯರು, ಬಂಧುಗಳು ನಿಮ್ಮಲ್ಲಿ ಹಿತದ ಮಾತನ್ನು ಹೇಳಿದ್ದರು; ಆದರೆ ನೀವು ಅದನ್ನು ಅಲಕ್ಷ ಮಾಡಿದಿರಿ.॥76॥
ಮೂಲಮ್ - 77
ಹೇತ್ವರ್ಥಯುಕ್ತಂ ವಿಧಿವಚ್ಛ್ರೇಯಸ್ಕರಮದಾರುಣಮ್ ।
ವಿಭೀಷಣೇನಾಭಿಹಿತಂ ನ ಕೃತಂ ಹೇತುಮತ್ತ್ವಯಾ ॥
ಅನುವಾದ
ವಿಭೀಷಣನ ಮಾತು ಯುಕ್ತಿಯುಕ್ತ ಪ್ರಯೋಜನ ಪೂರ್ಣವಾಗಿತ್ತು. ವಿವತ್ತಾಗಿ ನಿಮ್ಮ ಮುಂದೆ ಪ್ರಸ್ತುತಪಡಿಸಿದ್ದ. ಅದು ಶ್ರೇಯಸ್ಕರವಾಗಿದ್ದು, ಬಹಳ ಸೌಮ್ಯ ಭಾಷೆಯಲ್ಲಿ ಹೇಳಿದ್ದನು; ಆದರೆ ಆ ಯುಕ್ತಯುಕ್ತ ಮಾತನ್ನು ನೀವು ಒಪ್ಪಿಕೊಳ್ಳಲಿಲ್ಲ.॥77॥
ಮೂಲಮ್ - 78
ಮಾರೀಚ ಕುಂಭಕರ್ಣಾಭ್ಯಾಂ ವಾಕ್ಯಂ ಮಮ ಪಿತುಸ್ತಥಾ ।
ನ ಕೃತಂ ವೀರ್ಯಮತ್ತೇನ ತಸ್ಯೇದಂ ಫಲಮೀದೃಶಮ್ ॥
ಅನುವಾದ
ನೀವು ನಿಮ್ಮ ಬಲದ ಗರ್ವದಿಂದ ಉನ್ಮತ್ತರಾಗಿದ್ದೆ. ಆದ್ದರಿಂದ ಮಾರೀಚ, ಕುಂಭಕರ್ಣ, ನನ್ನ ತಂದೆ ಹೇಳಿದ ಮಾತನ್ನು ನೀವು ಮನ್ನಿಸಲಿಲ್ಲ. ಅದರ ಇಂತಹ ಫಲ ನಿಮಗೆ ದೊರೆತಿದೆ.॥78॥
ಮೂಲಮ್ - 79½
ನೀಲಜೀಮೂತ ಸಂಕಾಶ ಪೀತಾಂಬರ ಶುಭಾಂಗದ ।
ಸ್ವಗಾತ್ರಾಣಿ ವಿನಿಕ್ಷಿಪ್ಯ ಕಿಂ ಶೇಷೇ ರುಧಿರಾವೃತಃ ॥
ಪ್ರಸುಪ್ತ ಇವ ಶೋಕಾರ್ತಾಂ ಕಿಂ ಮಾಂ ನ ಪ್ರತಿಭಾಷಸೇ ।
ಅನುವಾದ
ಪ್ರಾಣನಾಥ! ನೀಲಮೇಘದಂತೆ ನಿಮ್ಮ ಬಣ್ಣ ಶ್ಯಾಮಲವಾಗಿದೆ. ನೀವು ಹಳದಿ ಬಟ್ಟೆ ಉಟ್ಟು, ಬಾಹುಗಳಲ್ಲಿ ತೋಳ್ಬಂದಿ ಧರಿಸುತ್ತಿದ್ದೆ. ಇಂದು ರಕ್ತಸಿಕ್ತವಾದ ಶರೀರವನ್ನು ಚೆಲ್ಲಿ ಇಲ್ಲಿ ಏಕೆ ಮಲಗಿರುವಿರಿ? ನಾನು ಶೋಕದಿಂದ ಪೀಡಿತನಾಗಿದ್ದೇನೆ, ನೀವು ಗಾಢವಾದ ನಿದ್ದೆಯಲ್ಲಿ ಮಲಗಿದ ಮನುಷ್ಯನಂತೆ ನನ್ನ ಮಾತಿಗೆ ಏಕೆ ಉತ್ತರಿಸುವುದಿಲ್ಲ? ನಾಥ! ಹೀಗೇಕೆ ಆಗುತ್ತಿದೆ.॥79½॥
ಮೂಲಮ್ - 80½
ಮಹಾವೀರ್ಯಸ್ಯ ದಕ್ಷಸ್ಯ ಸಂಯುಗೇಷ್ವಪಲಾಯಿನಃ ॥
ಯಾತುಧಾನಸ್ಯ ದೌಹಿತ್ರೀಂ ಕಿಂ ಮಾಂ ನ ಪ್ರತಿಭಾಷಸೇ ।
ಅನುವಾದ
ಮಹಾಪರಾಕ್ರಮಿ, ಯುದ್ಧಕುಶಲ, ಸಮರಾಂಗಣದಲ್ಲಿ ಎಂದೂ ಬೆನ್ನು ತೋರದ ಸುಮಾಲಿ ಎಂಬ ರಾಕ್ಷಸನ ಮೊಮ್ಮಗಳು ನಾನಾಗಿದ್ದೇನೆ. ಈಗ ನನ್ನಲ್ಲಿ ಏಕೆ ಮಾತನಾಡುವುದಿಲ್ಲ.॥80½॥
ಮೂಲಮ್ - 81½
ಉತ್ತಿಷ್ಠೋತ್ತಿಷ್ಠ ಕಿಂ ಶೇಷೇ ನವೇ ಪರಿಭವೇ ಕೃತೇ ॥
ಅದ್ಯ ವೈ ನಿರ್ಭಯಾ ಲಂಕಾಂ ಪ್ರವಿಷ್ಟಾಃ ಸೂರ್ಯರಶ್ಮಯಃ ।
ಅನುವಾದ
ರಾಕ್ಷಸರಾಜನೇ! ಏಳಿರಿ, ರಾಮನಿಂದ ನಿಮ್ಮ ಹೊಸದಾದ ಪರಾಭವವಾದರೂ ಹೇಗೆ ಮಲಗಿರುವಿರಿ? ಇಂದೇ ಈ ಸೂರ್ಯನ ಕಿರಣಗಳು ನಿರ್ಭಯವಾಗಿ ಲಂಕೆಯನ್ನು ಪ್ರವೇಶಿಸುತ್ತಿವೆ.॥81½॥
ಮೂಲಮ್ - 82
ಯೇನ ಸೂದಯಸೇ ಶತ್ರೂನ್ಸಮರೇ ಸೂರ್ಯವರ್ಚಸಾ ॥
ಮೂಲಮ್ - 83½
ವಜ್ರಂ ವಜ್ರಧರಸ್ಯೇವ ಸೋಽಯಂ ತೇ ಸತತಾರ್ಚಿತಃ ।
ರಣೇ ಬಹುಪ್ರಹರಣೋ ಹೇಮಜಾಲ ಪರಿಷ್ಕೃತಃ ॥
ಪರಿಘೋ ವ್ಯವಕೀರ್ಣಸ್ತೇ ಬಾಣೈಶ್ಛಿನ್ನಃ ಸಹಸ್ರಧಾ ।
ಅನುವಾದ
ವೀರವರನೇ! ನೀವು ರಣರಂಗದಲ್ಲಿ ಸೂರ್ಯತುಲ್ಯ ತೇಜಸ್ವೀ ಪರಿಘ ದಿಂದ ಶತ್ರುಗಳನ್ನ ಸಂಹರಿಸುತ್ತಿದ್ದೆ. ಇಂದ್ರನ ವಜ್ರಾಯುಧದಂತೆ ಅದು ಸದಾ ನಿಮ್ಮಿಂದ ಪೂಜಿಸಲ್ಪಡುತ್ತಿತ್ತು. ರಣ ರಂಗದಲ್ಲಿ ಅಸಂಖ್ಯ ಶತ್ರುಗಳ ಪ್ರಾಣ ಅಪಹರಿಸಿದ ಆ ನಿಮ್ಮ ಪರಿಘವು ಶ್ರೀರಾಮನ ಬಾಣದಿಂದ ನುಚ್ಚುನೂರಾಗಿ ಎಲ್ಲೆಡೆ ಚೆಲ್ಲಿಹೋಗಿದೆ.॥82-83½॥
ಮೂಲಮ್ - 84½
ಪ್ರಿಯಾಮಿವೋಪಗೃಹ್ಯ ಕಿಂ ಶೇಷೇ ಸಮರಮೇದಿನೀಮ್ ॥
ಅಪ್ರಿಯಾಮಿವ ಕಸ್ಮಾಚ್ಚ ಮಾಂ ನೇಚ್ಛಸ್ಯಭಿಭಾಷಿತುಮ್ ।
ಅನುವಾದ
ಪ್ರಾಣನಾಥಾ! ನೀವು ನಿಮ್ಮ ಪ್ರಿಯಪತ್ನಿಯನ್ನು ಆಲಿಂಗಿಸಿಕೊಂಡಂತೆ ರಣಭೂಮಿಯನ್ನು ಅಪ್ಪಿಕೊಂಡು ಏಕೆ ಮಲಗಿರುವಿರಿ? ನನ್ನನ್ನು ಅಪ್ರಿಯಳೆಂದು ತಿಳಿದು ಮಾತು ಕೂಡ ಆಡುವುದಿಲ್ಲ, ಇದರ ಕಾರಣವೇನು.॥84½॥
ಮೂಲಮ್ - 85½
ಧಿಗಸ್ತು ಹೃದಯಂ ಯಸ್ಯಾ ಮಮೇದಂ ನ ಸಹಸ್ರಧಾ ॥
ತ್ವಯಿ ಪಂಚತ್ವಮಾಪನ್ನೇ ಫಲತೇ ಶೋಕಪೀಡಿತಮ್ ।
ಅನುವಾದ
ನಿಮ್ಮ ಮೃತ್ಯುವಾದರೂ ಶೋಕಪೀಡಿತವಾದ ನನ್ನ ಎದೆ ಸಾವಿರ ಹೋಳಾಗಿ ಹೋಗುವುದಿಲ್ಲವಲ್ಲ! ನನ್ನಂತಹ ಪಾಷಾಣ ಹೃದಯೀ ನಾರಿಗೆ ಕ್ಕಾರವಿರಲಿ.॥85½॥
ಮೂಲಮ್ - 86
ಇತ್ಯೇವಂ ವಿಲಪಂತೀ ಸಾ ಭಾಷ್ಪಪಯಾಕುಲೇಕ್ಷಣಾ ॥
ಮೂಲಮ್ - 87½
ಸ್ನೇಹೋಪಸ್ಕನ್ನಹೃದಯಾ ತದಾ ಮೋಹಮುಪಾಗಮತ್ ।
ಕಶ್ಮಲಾಭಿಹತಾ ಸನ್ನಾ ಬಭೌ ಸಾ ರಾವಣೋರಸಿ ॥
ಸಂಧ್ಯಾನುರಕ್ತೇ ಜಲದೇ ದೀಪ್ತಾ ವಿದ್ಯುದಿವೋಜ್ಜ್ವಲಾ ।
ಅನುವಾದ
ಹೀಗೆ ವಿಲಪಿಸುತ್ತಿರುವ ಮಂದೋದರಿಯ ಕಣ್ಣುಗಳಲ್ಲಿ ನೀರು ತುಂಬಿ ಬಂತು. ಹೃದಯ ಸ್ನೇಹದಿಂದ ದ್ರವೀಭೂತವಾಗಿತ್ತು. ಅವಳು ಅಳುತ್ತಳುತ್ತಾ ಮೂರ್ಛೆ ಹೋಗಿ ರಾವಣನ ಎದೆಯ ಮೇಲೆ ಮಂದೋದರಿಯು ಶೋಭಿಸುತ್ತಿದ್ದಳು.॥86-87½॥
ಮೂಲಮ್ - 88½
ತಥಾಗತಾಂ ಸಮುತ್ಥಾಪ್ಯ ಸಪತ್ನ್ಯಸ್ತಾಂ ಭೃಶಾತುರಾಃ ॥
ಪರ್ಯವಸ್ಥಾಪಯಾಮಾಸೂ ರುದತ್ಯೋ ರುದತೀಂ ಭೃಶಮ್ ।
ಅನುವಾದ
ಆಕೆಯ ಸವತಿಯರೂ ಕೂಡ ಅತ್ಯಂತ ಶೋಕಾತುರರಾಗಿದ್ದ ಅವರು ಆಕೆಯನ್ನು ಆ ಸ್ಥಿತಿಯಲ್ಲಿ ನೋಡಿ ಎಬ್ಬಿಸಿ, ತಾವೂ ಜೋರಾಗಿ ಅಳುತ್ತಾ ಮಂದೋದರಿಯನ್ನು ಸಮಾಧಾನಪಡಿಸಿದರು.॥88½॥
ಮೂಲಮ್ - 89½
ಕಿಂ ತೇ ನ ವಿದಿತಾ ದೇವಿ ಲೋಕಾನಾಂ ಸ್ಥಿತಿರಧ್ರುವಾ ॥
ದಶಾವಿಭಾಗಪರ್ಯಾಯೇ ರಾಜ್ಞಾಂ ವೈ ಚಂಚಲಾಃ ಶ್ರಿಯಃ ।
ಅನುವಾದ
ಮಹಾರಾಣೀ! ಜಗತ್ತು ಅಸ್ತಿರವಾಗಿದೆ ಎಂಬುದನ್ನು ನೀವು ತಿಳಿಯುತ್ತಿಲ್ಲವೇ? ದೆಸೆ ಬದಲಾದಾಗ ರಾಜರ ಲಕ್ಷ್ಮೀ ಸ್ಥಿರವಾಗಿ ಇರುವುದಿಲ್ಲ.॥89½॥
ಮೂಲಮ್ - 90½
ಇತ್ಯೇವಮುಚ್ಚಮಾನಾ ಸಾ ಸಶಬ್ದಂ ಪ್ರರುರೋದ ಹ ॥
ಸ್ನಾಪಯಂತೀ ತದಾಸ್ರೇಣ ಸ್ತನೌ ವಕ್ತ್ರಂ ಸುನಿರ್ಮಲಮ್ ।
ಅನುವಾದ
ಅವರು ಹೀಗೆ ಹೇಳಿದಾಗ ಮಂದೋದರಿಯು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಆಗ ಆಕೆಯ ಉಜ್ವಲ ಸ್ತನ ಮತ್ತು ಮುಖ ಕಣ್ಣೀರಿನಿಂದ ನೆನೆದುಹೋಯಿತು.॥90½॥
ಮೂಲಮ್ - 91½
ಏತಸ್ಮಿನ್ನಂತರೇ ರಾಮೋ ವಿಭೀಷಣಮುವಾಚ ಹ ॥
ಸಂಸ್ಕಾರಃ ಕ್ರಿಯತಾಂ ಭ್ರಾತುಃ ಸ್ತ್ರೀಗಣಃ ಪರಿಸಾಂತ್ವ್ಯತಾಮ್ ।
ಅನುವಾದ
ಆಗಲೇ ಶ್ರೀರಾಮಚಂದ್ರನು ವಿಭೀಷಣನಲ್ಲಿ ಹೇಳಿದನು- ‘ಈ ಸ್ತ್ರೀಯರಿಗೆ ಧೈರ್ಯ ಹೇಳಿ, ನಿನ್ನ ಅಣ್ಣನ ದಹನ ಸಂಸ್ಕಾರ ಮಾಡು.॥91½॥
ಮೂಲಮ್ - 92½
ತಮುವಾಚ ತತೋ ಧೀಮಾನ್ವಿಭೀಷಣ ಇದಂ ವಚಃ ॥
ವಿಮೃಶ್ಯ ಬುದ್ಧ್ಯಾ ಪ್ರಶ್ರಿತಂ ಧರ್ಮಾರ್ಥಸಹಿತಂ ಹಿತಮ್ ।
ಅನುವಾದ
ಇದನ್ನು ಕೇಳಿ ಬುದ್ಧಿವಂತ ವಿಭೀಷಣನು ರಾಮನ ಅಭಿಪ್ರಾಯ ತಿಳಿದು ಅವನಲ್ಲಿ ಧರ್ಮ ಮತ್ತು ಅರ್ಥಯುಕ್ತ ಹಿತಕರ ಮಾತನ್ನು ಹೇಳಿದನು.॥92½॥
ಮೂಲಮ್ - 93½
ತ್ಯಕ್ತಧರ್ಮವ್ರತಂ ಕ್ರೂರಂ ನೃಶಂಸಮನೃತಂ ತಥಾ ॥
ನಾಹಮರ್ಹಾಮಿ ಸಂಸ್ಕರ್ತುಂ ಪರದಾರಾಭಿಮರ್ಶನಮ್ ।
ಅನುವಾದ
ಭಗವಂತಾ! ಧರ್ಮ ಮತ್ತು ಸದಾಚಾರವನ್ನು ತ್ಯಜಿಸಿದ, ಕ್ರೂರ, ನಿರ್ದಯೀ, ಅಸತ್ಯವಾದೀ ಹಾಗೂ ಪರಸ್ತ್ರೀಯರನ್ನು ಸ್ಪರ್ಶಿಸಿದ ದೇಹ ಸಂಸ್ಕಾರ ಮಾಡುವುದು ನಾನು ಉಚಿತವೆಂದು ತಿಳಿಯುವುದಿಲ್ಲ.॥93½॥
ಮೂಲಮ್ - 94½
ಭ್ರಾತೃರೂಪೋ ಹಿ ಮೇ ಶತ್ರುರೇಷ ಸರ್ವಾಹಿತೇ ರತಃ ॥
ರಾವಣೋ ನಾರ್ಹತೇ ಪೂಜಾಂ ಪೂಜ್ಯೋಽಪಿ ಗುರುಗೌರವಾತ್ ।
ಅನುವಾದ
ಎಲ್ಲ ಅಹಿತದಲ್ಲೆ ತೊಡಗಿದ್ದ ಈ ರಾವಣನು ಅಣ್ಣನ ರೂಪದಲ್ಲಿ ಶತ್ರುವೇ ಆಗಿದ್ದಾನೆ. ಜೇಷ್ಠನಾದ್ದರಿಂದ ಗುರುವಿನಂತೆ ಗೌರವಕ್ಕೆ ಪಾತ್ರನಾಗಿದ್ದರೂ ಅವನು ನನ್ನಿಂದ ಸತ್ಕಾರ ಪಡೆಯಲು ಯೋಗ್ಯನಲ್ಲ.॥94½॥
ಮೂಲಮ್ - 95½
ನೃಶಂಸ ಇತಿ ಮಾಂ ರಾಮ ವಕ್ಷ್ಯಂತಿ ಮನುಜಾ ಭುವಿ ॥
ಶ್ರುತ್ವಾ ತಸ್ಯಾಗುಣಾನ್ಸರ್ವೇ ವಕ್ಷ್ಯಂತಿ ಸುಕೃತಂ ಪುನಃ ।
ಅನುವಾದ
ಶ್ರೀರಾಮ! ನನ್ನ ಈ ಮಾತನ್ನು ಕೇಳಿ ಜಗತ್ತಿನ ಜನರು ನನ್ನನ್ನು ಕ್ರೂರೀ ಎಂದು ಹೇಳಬಹುದು. ಆದರೆ ರಾವಣನ ದುರ್ಗುಣಗಳನ್ನು ಕೇಳಿದಾಗ ಎಲ್ಲರೂ ನನ್ನ ವಿಚಾರ ಉಚಿತವೆಂದೇ ಹೇಳುವರು.॥95½॥
ಮೂಲಮ್ - 96½
ತಚ್ಛ್ರುತ್ವಾ ಪರಮಪ್ರೀತೋ ರಾಮೋ ಧರ್ಮ ಭೃತಾಂವರಃ ॥
ವಿಭೀಷಣಮುವಾಚೇದಂ ವಾಕ್ಯಜ್ಞಂ ವಾಕ್ಯಕೋವಿದಃ ।
ಅನುವಾದ
ಇದನ್ನು ಕೇಳಿ ಧರ್ಮಾತ್ಮರಲ್ಲಿ ಶ್ರೇಷ್ಠ ಶ್ರೀರಾಮಚಂದ್ರನು ಬಹಳ ಸಂತೋಷಗೊಂಡನು. ಮಾತುಕತೆಯಲ್ಲಿ ಪ್ರವೀಣ ನಾದ ಅವನು ಮಾತಿನ ಮರ್ಮತಿಳಿದುಕೊಳ್ಳುವ ವಿಭೀಷಣನಲ್ಲಿ ಹೀಗೆ ಹೇಳಿದನು.॥96½॥
ಮೂಲಮ್ - 97½
ತವಾಪಿ ಮೇ ಪ್ರಿಯಂ ಕಾರ್ಯಂ ತ್ವತ್ಪ್ರಭಾವಾನ್ಮಯಾ ಜಿತಮ್ ॥
ಅವಶ್ಯಂ ತು ಕ್ಷಮಂ ವಾಚ್ಯೋ ಮಯಾತ್ವಂ ರಾಕ್ಷಸೇಶ್ವರ ।
ಅನುವಾದ
ರಾಕ್ಷಸರಾಜನೇ! ನಿನಗೆ ಪ್ರಿಯವಾಗುವಂತಹ ಕಾರ್ಯವನ್ನೇ ನಾನು ಮಾಡಬೇಕು, ಏಕೆಂದರೆ ನಿನ್ನ ಪ್ರಭಾವದಿಂದಲೇ ನನ್ನ ಜಯವಾಗಿದೆ. ಅವಶ್ಯವಾಗಿ ಉಚಿತವಾದುದನ್ನು ಹೇಳುವನು, ಕೇಳು.॥97½॥
ಮೂಲಮ್ - 98½
ಅಧರ್ಮಾನೃತ ಸಂಯುಕ್ತಃ ಕಾಮಂ ತ್ವೇಷ ನಿಶಾಚರಃ ॥
ತೇಜಸ್ವೀ ಬಲವಾನ್ ಶೂರಃ ಸಂಗ್ರಾಮೇಷು ಚ ನಿತ್ಯಶಃ ।
ಅನುವಾದ
ಈ ನಿಶಾಚರನು ಅಧರ್ಮಿ, ಅಸತ್ಯವಾದಿಯಾಗಿದ್ದರೂ ಸಂಗ್ರಾಮದಲ್ಲಿ ಸದಾ ತೇಜಸ್ವೀ, ಬಲಿಷ್ಠ ಹಾಗೂ ಶೂರ ವೀರನಾಗಿದ್ದನು.॥98½॥
ಮೂಲಮ್ - 99½
ಶತಕ್ರತುಮುಖೈರ್ದೇವೈಃ ಶ್ರೂಯತೇ ನ ಪರಾಜಿತಃ ॥
ಮಹಾತ್ಮಾ ಬಲಸಂಪನ್ನೋ ರಾವಣೋ ಲೋಕರಾವಣಃ ।
ಅನುವಾದ
ಇಂದ್ರಾದಿ ದೇವತೆಗಳೂ ಇವನನ್ನು ಸೋಲಿಸಲಾಗಲಿಲ್ಲ ಎಂದು ಕೇಳಿದ್ದೆ. ಸಮಸ್ತ ಲೋಕಗಳನ್ನು ಆಳುವಂತೆ ಮಾಡಿದ ರಾವಣನು ಬಲ-ಪರಾಕ್ರಮದಿಂದ ಸಂಪನ್ನ ಹಾಗೂ ಮಹಾತ್ಮನಾಗಿದ್ದನು.॥99½॥
ಮೂಲಮ್ - 100½
ಮರಣಾಂತಾನಿ ವೈರಾಣಿ ನಿರ್ವೃತ್ತಂ ನಃ ಪ್ರಯೋಜನಮ್ ॥
ಕ್ರಿಯತಾಮಸ್ಯ ಸಂಸ್ಕಾರೋ ಮಮಾಪ್ಯೇಷ ಯಥಾ ತವ ।
ಅನುವಾದ
ವೈರ ಮರಣದವರೇಗೆ ಇರುತ್ತದೆ. ಸತ್ತುಹೋದಾಗ ಅದರ ಅಂತ್ಯವಾಗುತ್ತದೆ. ಈಗ ನಮ್ಮ ಪ್ರಯೋಜನವೂ ಸಿದ್ಧವಾಗಿದೆ, ಆದ್ದರಿಂದ ಈಗ ನಿನಗೆ ಅಣ್ಣನಾಗಿರುವಂತೆ ನನಗೂ ಆಗಿದ್ದಾನೆ. ಇದರಿಂದ ದಹನ ಸಂಸ್ಕಾರ ಮಾಡು.॥100½॥
ಮೂಲಮ್ - 101½
ತ್ವತ್ಸಕಾಶಾನ್ಮಹಾಬಾಹೋ ಸಂಸ್ಕಾರಂ ವಿಧಿಪೂರ್ವಕಮ್ ॥
ಕ್ಷಿಪ್ರಮರ್ಹತಿಧರ್ಮೇಣ ತ್ವಂ ಯಶೋಭಾಗ್ಭವಿಷ್ಯಸಿ ।
ಅನುವಾದ
ಮಹಾಬಾಹೋ! ಧರ್ಮಕ್ಕನುಸಾರ ರಾವಣನು ನಿನ್ನಿಂದ ಶೀಘ್ರವಾಗಿ ವಿಧಿವತ್ತಾಗಿ ದಾಹಸಂಸ್ಕಾರ ಪಡೆಯಲು ಯೋಗ್ಯನಾಗಿದ್ದಾನೆ. ಹೀಗೆ ಮಾಡುವುದರಿಂದ ನೀನು ಯಶಕ್ಕೆ ಭಾಗಿಯಾಗುವೆ.॥101½॥
ಮೂಲಮ್ - 102½
ರಾಘವಸ್ಯ ವಚಃ ಶ್ರುತ್ವಾ ತ್ವರಮಾಣೋ ವಿಭೀಷಣಃ ॥
ಸಂಸ್ಕಾರಯಿತುಮಾರೇಭೇ ಭ್ರಾತರಂ ರಾವಣಂ ಹವಮ್ ।
ಅನುವಾದ
ಶ್ರೀರಾಮನ ಮಾತನ್ನು ಕೇಳಿ ವಿಭೀಷಣನು ಯುದ್ಧದಲ್ಲಿ ಹತನಾದ ತನ್ನಣ್ಣ ರಾವಣನ ದಹನ ಸಂಸ್ಕಾರಕ್ಕೆ ಬೇಗನೇ ಸಿದ್ಧತೆ ಮಾಡಿದನು.॥102½॥
ಮೂಲಮ್ - 103½
ಸ ಪ್ರವಿಶ್ಯ ಪುರೀಂ ಲಂಕಾಂ ರಾಕ್ಷಸೇಂದ್ರೋ ವಿಭೀಷಣಃ ॥
ರಾವಣಸ್ಯಾಗ್ನಿಹೋತ್ರಂ ತು ನಿರ್ಯಾಪಯತಿ ಸತ್ವರಮ್ ।
ಅನುವಾದ
ರಾಕ್ಷಸೇಂದ್ರ ವಿಭೀಷಣನು ಲಂಕಾಪುರಿಯನ್ನು ಪ್ರವೇಶಿಸಿ ರಾವಣನ ಅಗ್ನಿಹೋತ್ರವನ್ನು ಶೀಘ್ರವಾಗಿ ವಿಧಿವತ್ತಾಗಿ ಮುಗಿಸಿದನು.॥103½॥
ಮೂಲಮ್ - 104
ಶಕಟಾನ್ ದಾರುರೂಪಾಣಿ ಅಗ್ನೀನ್ವೈ ಯಾಜಕಾಂ ಸ್ತಥಾ ॥
ಮೂಲಮ್ - 105½
ತಥಾ ಚಂದನಕಾಷ್ಠಾನಿ ಕಾಷ್ಠಾನಿ ವಿವಿಧಾನಿ ಚ ।
ಅಗರೂಣಿ ಸುಗಂಧೀನಿ ಗಂಧಾಶ್ಚ ಸುರಭೀಂ ಸ್ತಥಾ ॥
ಮಣಿಮುಕ್ತಾಪ್ರವಾಲಾನಿ ನಿರ್ಯಾಪಯತಿ ರಾಕ್ಷಸಃ ।
ಅನುವಾದ
ಬಳಿಕ ಮರದ ಶಿಬಿಕೆ, ಅಗ್ನಿಹೋತ್ರದ ಸಾಮಗ್ರಿಗಳು, ಯಜ್ಞಮಾಡಿಸುವ ಪುರೋಹಿತರು, ಚಂದನಕಾಷ್ಟ, ಇತರ ವಿವಿಧ ರೀತಿಯ ಕಟ್ಟಿಗೆಗಳು, ಸುಂದರ ಸುಗಂಧಿತ ಪದಾರ್ಥ, ಮಣಿ, ಮುತ್ತು, ಹವಳ-ಹೀಗೆ ಎಲ್ಲ ವಸ್ತುಗಳನ್ನು ಅವನು ಒಟ್ಟುಗೂಡಿಸಿದನು.॥104-105½॥
ಮೂಲಮ್ - 106½
ಆಜಗಾಮ ಮುಹೂರ್ತೇನ ರಾಕ್ಷಸೈಃ ಪರಿವಾರಿತಃ ॥
ತತೋ ಮಾಲ್ಯವತಾ ಸಾರ್ಧಂ ಕ್ರಿಯಾಮೇವ ಚಕಾರ ಸಃ ।
ಅನುವಾದ
ಎರಡೇ ಗಳಿಗೆಯಲ್ಲಿ ರಾಕ್ಷಸರಿಂದ ಪರಿವೃತನಾಗ ಅವನು ಅಲ್ಲಿಂದ ಹೊರಟನು. ಬಳಿಕ ಮಾಲ್ಯವಂತನೊಂದಿಗೆ ಸೇರಿ ವಿಭೀಷಣನು ದಹನ ಸಂಸ್ಕಾರದ ಸಿದ್ಧತೆಯ ಎಲ್ಲ ಕಾರ್ಯವನ್ನು ಪೂರ್ಣಗೊಳಿಸಿದನು.॥106½॥
ಮೂಲಮ್ - 107
ಸೌವರ್ಣೀಂ ಶಿಬಿಕಾಂ ದಿವ್ಯಾಮಾರೋಪ್ಯ ಕ್ಷೌಮವಾಸಸಮ್ ॥
ಮೂಲಮ್ - 108
ರಾವಣಂ ರಾಕ್ಷಸಾಧೀಶಮಶ್ರುಪೂರ್ಣಮುಖಾ ದ್ವಿಜಾಃ ।
ತೂರ್ಯಘೋಷೈಶ್ಚ ವಿವಿಧೈಃ ಸ್ತುವದ್ಭಿಶ್ಚಾಭಿನಂದಿತಮ್ ॥
ಅನುವಾದ
ಬಗೆ-ಬಗೆಯ ವಾದ್ಯ ಘೋಷಗಳಿಂದ, ಮಾಗಧರು ಯಾರನ್ನು ಅಭಿನಂದಿಸುತ್ತಿದ್ದರೋ, ಆ ರಾಕ್ಷಸ ರಾಜಾ ರಾವಣನ ಶವಕ್ಕೆ ರೇಶ್ಮೆ ವಸ್ತ್ರವನ್ನು ಹೊದಿಸಿ, ಅದನ್ನು ಚಿನ್ನದ ದಿವ್ಯವಿಮಾನದಲ್ಲಿ ಇರಿಸಿದ ಬಳಿಕ ರಾಕ್ಷಸ ಜಾತಿಯ ಬ್ರಾಹ್ಮಣರು ಕಣ್ಣೀರು ಸುರಿಸುತ್ತಾ ಅಲ್ಲಿ ನಿಂತುಕೊಂಡರು.॥107-108॥
ಮೂಲಮ್ - 109½
ಪತಾಕಾಭಿಶ್ಚಚಿತ್ರಾಭಿಃ ಸುಮನೋಭಿಶ್ಚ ಚಿತ್ರಿತಾಮ್ ।
ಉತ್ಕ್ಷಿಪ್ಯ ಶಿಬಿಕಾಂ ತಾಂ ತು ವಿಭೀಷಣ ಪುರೋಗಮಾಃ ॥
ದಕ್ಷಿಣಾಭಿಮುಖಾಃ ಸರ್ವೇ ಗೃಹ್ಯಕಾಷ್ಠಾನಿ ಭೇಜಿರೇ ।
ಅನುವಾದ
ಆ ಶಿಬಿಕೆಯನ್ನು ವಿಚಿತ್ರ ಪತಾಕೆಗಳಿಂದ, ಹೂವುಗಳಿಂದ ಅಲಂಕರಿಸಲಾಯಿತು. ವಿಚಿತ್ರವಾಗಿ ಶೋಭಿಸುವ ಅದನ್ನು ವಿಭೀಷಣಾದಿ ರಾಕ್ಷಸರು ಹೆಗಲಲ್ಲಿ ಹೊತ್ತುಕೊಂಡು, ಇತರೆಲ್ಲರೂ ಒಣಗಿದ ಕಟ್ಟಿಗೆಗಳನ್ನೆತ್ತಿಕೊಂಡು ದಕ್ಷಿಣದಿಕ್ಕಿನಲ್ಲಿರುವ ಸ್ಮಶಾನದ ಕಡೆಗೆ ಹೊರಟರು.॥109½॥
ಮೂಲಮ್ - 110½
ಅಗ್ನಯೋ ದೀಪ್ಯಮಾನಾಸ್ತೇ ತದಾಧ್ವರ್ಯುಸಮೀರಿತಾಃ ॥
ಶರಣಾಭಿಗತಾಃ ಸರ್ವೇ ಪುರಸ್ತಾತ್ತಸ್ಯ ತೇ ಯಯುಃ ।
ಅನುವಾದ
ಯಜುರ್ವೇದಿಯ ಯಾಜ್ಞಿಕರು ಹೊತ್ತು ಕೊಂಡಿದ್ದ ತ್ರಿವಿಧ ಅಗ್ನಿಗಳು ಪ್ರಜ್ವಲಿತಗೊಂಡವು. ಅವೆಲ್ಲವನ್ನು ಕುಂಡಗಳಲ್ಲಿ ಇರಿಸಿ ಪುರೋಹಿತರು ಅದನ್ನು ಎತ್ತಿಕೊಂಡು ಶವದ ಮುಂದೆ ಮುಂದೆ ನಡೆಯುತ್ತಿದ್ದರು.॥110½॥
ಮೂಲಮ್ - 111½
ಅಂತಃಪುರಾಣಿ ಸರ್ವಾಣಿ ರುದಮಾನಾನಿ ಸತ್ವರಮ್ ॥
ಪೃಷ್ಠತೋಽನುಯಯುಸ್ತಾನಿ ಪ್ಲವಮಾನಾನಿ ಸರ್ವತಃ ।
ಅನುವಾದ
ಅಂತಃಪುರದ ಎಲ್ಲ ಸ್ತ್ರೀಯರು ಅಳುತ್ತಾ ಶವದ ಹಿಂದೆ ಹಿಂದೆ ಹೊರಟರು. ಅವರೆಲ್ಲರೂ ಎಡವುತ್ತಾ ನಡೆಯುತ್ತಿದ್ದರು.॥111½॥
ಮೂಲಮ್ - 112
ರಾವಣಂ ಪ್ರಯತೇ ದೇಶೇ ಸ್ಥಾಪ್ಯ ತೇ ಭೃಶದುಃಖಿತಾಃ ॥
ಮೂಲಮ್ - 113
ಚಿತಾಂ ಚಂದನಕಾಷ್ಠೈಶ್ಚ ಪದ್ಮಕೋಶೀರಚಂದನೈಃ ।
ಬ್ರಾಹ್ಮಯಾ ಸಂವರ್ತಯಾಮಾಸೂ ರಾಂಕವಾಸ್ತರಣಾವೃತಾಮ್ ॥
ಅನುವಾದ
ಮುಂದೆ ಹೋಗಿ ರಾವಣನ ವಿಮಾನವನ್ನು ಒಂದು ಪವಿತ್ರ ಸ್ಥಾನದಲ್ಲಿ ಇರಿಸಿ, ಅತ್ಯಂತ ದುಃಖಿಯಾದ ವಿಭೀಷಣಾದಿ ರಾಕ್ಷಸರು ಮಲಯ ಚಂದನಕಾಷ್ಟ, ಪದ್ಮಕ, ಲಾವಂಚ- ಹಾಗೂ ಬೇರೆ ರೀತಿಯ ಚಂದನಗಳಿಂದ ವೇದೋಕ್ತ ವಿಧಿಯಿಂದ ಚಿತೆ ರಚಿಸಿ, ಅದರ ಮೇಲೆ ರಂಕ ಎಂಬ ಮೃಗದ ಚರ್ಮ ಹಾಸಿದರು.॥112-113॥
ಮೂಲಮ್ - 114
ಪ್ರಚಕ್ರೂ ರಾಕ್ಷಸೇಂದ್ರಸ್ಯ ಪಿತೃಮೇಧಮನುತ್ತಮಮ್ ।
ವೇದಿಂ ಚ ದಕ್ಷಿಣ ಪ್ರಾಚೀ ಯಥಾಸ್ಥಾನಂ ಚ ಪಾವಕಮ್ ॥
ಮೂಲಮ್ - 115
ಪೃಷದಾಜ್ಯೇನ ಸಂಪೂರ್ಣಂ ಸ್ರುವಂ ಸ್ಕಂಧೇ ಪ್ರಚಿಕ್ಷಿಪುಃ ।
ಪಾದಯೋಃ ಶಕಟಂ ಪ್ರಾಪುರೂರ್ವೋಶ್ಚೋಲೂಖಲಂ ತದಾ ॥
ಅನುವಾದ
ಅದರ ಮೇಲೆ ರಾಕ್ಷಸರಾಜನ ಶವವನ್ನು ಮಲಗಿಸಿ ಅವರು ಉತ್ತಮ ವಿಧಿಯಿಂದ ಪಿತೃಮೇಧ (ದಹನ ಸಂಸ್ಕಾರ) ಮಾಡಿದರು. ಅವರು ಚಿತೆಯ ದಕ್ಷಿಣ-ಪೂರ್ಮದಲ್ಲಿ ವೇದಿಯನ್ನು ರಚಿಸಿ ಅದರ ಮೇಲೆ ಯಥಾಸ್ಥಾನ ಅಗ್ನಿಯನ್ನು ಸ್ಥಾಪಿಸಿದರು. ಮತ್ತೆ ದಧಿಮಿಶ್ರಿತ ತುಪ್ಪದಿಂದ ತುಂಬಿದ ಸ್ರುವೆ ರಾವಣನ ಹೆಗಲ ಮೇಲೆ ಇರಿಸಿದರು. ಬಳಿಕ ಕಾಲುಗಳ ಮೇಲೆ ಶಕಟ ಮತ್ತು ತೊಡೆಗಳಲ್ಲಿ ಉಲೂಖಲವಿರಿಸಿದರು.॥114-115॥
ಮೂಲಮ್ - 116
ದಾರುಪಾತ್ರಾಣಿ ಸರ್ವಾಣಿ ಅರಣಿಂ ಚೋತ್ತರಾರಣಿಮ್ ।
ದತ್ತ್ವಾ ತು ಮುಸಲಂ ಚಾನ್ಯಂಯಥಾಸ್ಥಾನಂ ವಿಚಕ್ರಮುಃ ॥
ಅನುವಾದ
ಇತರ ಮರದ ಪಾತ್ರೆಗಳಾದ ಅರಣಿ, ಉತ್ತರಾರಣಿ, ಮುಸಲ ಮುಂತಾದುವನ್ನು ಯಥಾಸ್ಥಾನದಲ್ಲಿ ಇರಿಸಿದರು.॥116॥
ಮೂಲಮ್ - 117
ಶಾಸ್ತ್ರದೃಷ್ಟೇನ ವಿಧಿನಾ ಮಹರ್ಷಿ ವಿಹಿತೇನ ಚ ।
ತತ್ರ ಮೇಧ್ಯಂ ಪಶುಂ ಹತ್ವಾ ರಾಕ್ಷಸೇಂದ್ರಸ್ಯ ರಾಕ್ಷಸಾಃ ॥
ಮೂಲಮ್ - 118
ಪರಿಸ್ತರಣಿಕಾಂ ರಾಜ್ಞೋ ಘೃತಾಕ್ತಾಂ ಸಮವೇಶಯನ್ ।
ಗಂಧೈರ್ಮಾಲ್ಯೈರಲಂಕೃತ್ಯ ರಾವಣಂ ದೀನಮಾನಸಾಃ ॥
ಅನುವಾದ
ವೇದೋಕ್ತವಿಧಿ ಹಾಗೂ ಮಹರ್ಷಿಯರಿಂದ ರಚಿತ ಕಲ್ಪಸೂತ್ರಗಳಲ್ಲಿ ಹೇಳಿದ ವಿಧಿಯಿಂದ ಎಲ್ಲ ಕಾರ್ಯಗಳು ನಡೆದವು. ರಾಕ್ಷಸರ ವಿಧಿಗನುಸಾರ ವೇಧ್ಯ ಪಶುವಿನ ಹವನ ಮಾಡಿ ರಾವಣನ ಚಿತೆಯಲ್ಲಿ ಹಾಸಿದ ಮೃಗ ಚರ್ಮವನ್ನ ತುಪ್ಪದಿಂದ ನೆನೆಸಲಾಯಿತು. ಮತ್ತೆ ರಾವಣನ ಶವವನ್ನು ಚಂದನ ಮತ್ತು ಹೂವುಗಳಿಂದ ಅಲಂಕರಿಸಿ ಆ ರಾಕ್ಷಸರು ಮನಸ್ಸಿನಲ್ಲೇ ದುಃಖವನ್ನು ಅನುಭವಿಸಿದರು.॥117-118॥
ಮೂಲಮ್ - 119
ವಿಭೀಷಣ ಸಹಾಯಾಸ್ತೇ ವಸ್ತ್ರೈಶ್ಚ ವಿವಿಧೈರಪಿ ।
ಲಾಜೈಶ್ಚಾವಕಿರಂತಿ ಸ್ಮಭಾಷ್ಪಪೂರ್ಣಮುಖಾಸ್ತದಾ ॥
ಅನುವಾದ
ಬಳಿಕ ವಿಭೀಷಣನೊಂದಿಗೆ ಇತರ ರಾಕ್ಷಸರೂ ಕೂಡ ಚಿತೆಯ ಮೇಲೆ ನಾನಾ ಪ್ರಕಾರದ ವಸ್ತ್ರ, ಅರಳು ಚೆಲ್ಲಿದರು. ಆಗ ಅವರು ಕಣ್ಣುಗಳಿಂದ ಕಣ್ಣೀರದಾರೆ ಹರಿಯುತ್ತಿತ್ತು.॥119॥
ಮೂಲಮ್ - 120
ದದೌ ಸ ಪಾವಕಂ ತಸ್ಯ ವಿಧಿಯುಕ್ತಂ ವಿಭೀಷಣಃ ।
ಸ್ನಾತ್ವಾ ಚೈವಾರ್ದ್ರವಸ್ತ್ರೇಣ ತಿಲಾನ್ದರ್ಭವಿಮಿಶ್ರಿತಾನ್ ॥
ಮೂಲಮ್ - 121
ಉದಕೇನ ಚ ಸಂಮಿಶ್ರಾನ್ ಪ್ರದಾಯ ವಿಧಿಪೂರ್ವಕಮ್ ।
ತಾಃ ಸ್ತ್ರಿಯೋಽನುನಯಾಮಾಸ ಸಾಂತ್ವಯಿತ್ವಾ ಪುನಃ ಪುನಃ ॥
ಅನುವಾದ
ಅನಂತರ ವಿಭೀಷಣನು ವಿಧಿವತ್ತಾಗಿ ಚಿತೆಗೆ ಅಗ್ನಿಸ್ಪರ್ಶ ಮಾಡಿದನು. ಬಳಿಕ ಸ್ನಾನಮಾಡಿ ಒದ್ದೆ ಬಟ್ಟೆ ಉಟ್ಟುಕೊಂಡು ಎಳ್ಳು, ದರ್ಭೆ, ನೀರಿನಿಂದ ವಿಧಿವತ್ತಾಗಿ ರಾವಣನಿಗೆ ಜಲಾಂಜಲಿಯನ್ನು ಕೊಟ್ಟನು. ಮತ್ತೆ ರಾವಣನ ಪತ್ನಿಯರಿಗೆ ಪದೇ ಪದೇ ಸಮಾಧಾನಗೊಳಿಸುತ್ತಾ ಅವರಲ್ಲಿ ಮನೆಗೆ ಹೋಗುವಂತೆ ವಿನಯದಿಂದ ಪ್ರಾರ್ಥಿಸಿದನು.॥120-121॥
ಮೂಲಮ್ - 122
ಗಮ್ಯತಾಮಿತಿ ತಾಃ ಸರ್ವಾ ವಿವಿಶುರ್ನಗರಂ ತತಃ ।
ಪ್ರವಿಷ್ಟಾಸು ಪುರೀಂ ಸ್ತ್ರೀಷು ರಾಕ್ಷಸೇಂದ್ರೋ ವಿಭೀಷಣಃ ।
ರಾಮಪಾರ್ಶ್ವಮುಪಾಗಮ್ಯ ಸಮತಿಷ್ಠದ್ ವಿನೀತವತ್ ॥
ಅನುವಾದ
‘ಅರಮನೆಗೆ ಹೋಗಿರಿ’ ಎಂಬ ವಿಭೀಷಣನ ಆದೇಶ ಕೇಳಿ ಆ ಎಲ್ಲ ಸ್ತ್ರೀಯರು ನಗರಕ್ಕೆ ಹೊರಟು ಹೋದರು. ಸ್ತ್ರೀಯರು ಪುರಿಯನ್ನು ಪ್ರವೇಶಿಸಿದ ಬಳಿಕ ವಿಭೀಷಣನು ಶ್ರೀರಾಮನ ಬಳಿಗೆ ಬಂದು ವಿನೀತನಾಗಿ ನಿಂತುಕೊಂಡನು.॥122॥
ಮೂಲಮ್ - 123
ರಾಮೋಽಪಿ ಸಹ ಸೈನ್ಯೇನ ಸಸುಗ್ರೀವಃ ಸಲಕ್ಷ್ಮಣಃ ।
ಹರ್ಷಂ ಲೇಭೇ ರಿಪುಂ ಹತ್ವಾ ವೃತ್ರಂ ವಜ್ರಧರೋ ಯಥಾ ॥
ಅನುವಾದ
ಶ್ರೀರಾಮ-ಲಕ್ಷ್ಮಣ, ಸುಗ್ರೀವ ಹಾಗೂ ಸಮಸ್ತ ಸೈನ್ಯದೊಂದಿಗೆ ಶತ್ರುವನ್ನು ವಧಿಸಿ, ವಜ್ರಧಾರೀ ಇಂದ್ರನು ಮೃತಾಸುರನನ್ನು ಕೊಂದು ಪ್ರಸನ್ನತೆಯನ್ನು ಅನುಭವಿಸಿದಂತೆ ಸಂತೋಷವನ್ನು ಅನುಭವಿಸುತ್ತಿದ್ದರು.॥123॥
ಮೂಲಮ್ - 124
ತತೋ ವಿಮುಕ್ತ್ವಾ ಸಶರಂ ಶರಾಸನಂ
ಮಹೇಂದ್ರ ದತ್ತಂ ಕವಚಂ ಸ ತನ್ಮಹತ್ ।
ವಿಮುಚ್ಯ ರೋಷಂ ರಿಪುನಿಗ್ರಹಾತ್ತತೋ
ರಾಮಃ ಸಸೌಮ್ಯತ್ವ ಮುಪಾಗತೋಽರಿಹಾ ॥
ಅನುವಾದ
ಅನಂತರ ಇಂದ್ರನು ಕೊಟ್ಟಿರುವ ಧನುಸ್ಸು, ಬಾಣ, ವಿಶಾಲಕವಚಗಳನ್ನು ತ್ಯಜಿಸಿ, ಶತ್ರುವನ್ನು ದಮನ ಮಾಡಿದ್ದರಿಂದ ರೋಷವನ್ನು ಬಿಟ್ಟು ಶತ್ರುಸೂದನ ಶ್ರೀರಾಮನು ಶಾಂತಭಾವವನ್ನು ಹೊಂದಿದನು.॥12.॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರ ಹನ್ನೊಂದನೆಯ ಸರ್ಗ ಪೂರ್ಣವಾಯಿತು.॥111॥