११० रावणसम्बधिभिः शोकः

वाचनम्
ಭಾಗಸೂಚನಾ

ರಾವಣನ ಪತ್ನಿಯರ ವಿಲಾಪ

ಮೂಲಮ್ - 1

ರಾವಣಂ ನಿಹತಂ ಶ್ರುತ್ವಾ ರಾಘವೇಣ ಮಹಾತ್ಮನಾ ।
ಅಂತಃ ಪುರಾದ್ವಿನಿಷ್ಪೇತೂ ರಾಕ್ಷಸ್ಯಃ ಶೋಕಕರ್ಷಿತಾಃ ॥

ಅನುವಾದ

ಮಹಾತ್ಮಾ ಶ್ರೀರಘುನಾಥನಿಂದ ರಾವಣನು ಹತನಾದನೆಂದು ಕೇಳಿ ಶೋಕಪೀಡಿತರಾದ ರಾಕ್ಷಸ ಸ್ತ್ರೀಯರು ಅಂತಃಪುರದಿಂದ ಹೊರಗೆ ಬಂದರು.॥1॥

ಮೂಲಮ್ - 2

ವಾರ್ಯಮಾಣಾ ಸುಬಹುಶೋ ವೇಷ್ಟಂತ್ಯಃ ಕ್ಷಿತಿಪಾಂಸುಷು ।
ವಿಮುಕ್ತಕೇಶ್ಯಃ ಶೋಕಾರ್ತಾಗಾವೋ ವತ್ಸಹತಾ ಇವ ॥

ಅನುವಾದ

ಸೇವಕಿಯರು ಪದೇ ಪದೇ ತಡೆಯುತ್ತಿದ್ದರೂ ಆ ಸ್ತ್ರೀಯರು ಧೂಳಿನಲ್ಲಿ ಹೊರಳಾಡತೊಡಗಿದರು. ತಲೆಕೆದರಿಕೊಂಡು ಅವರೆಲ್ಲರೂ ಕರುವನ್ನು ಕಳಕೊಂಡ ಗೋವುಗಳಂತೆ ಶೋಕಪೀಡಿತರಾಗಿದ್ದರು.॥2॥

ಮೂಲಮ್ - 3

ಉತ್ತರೇಣ ವಿನಿಷ್ಕ್ರಮ್ಯ ದ್ವಾರೇಣ ಸಹ ರಾಕ್ಷಸೈಃ ।
ಪ್ರವಿಶ್ಯಾಯೋಧನಂ ಘೋರಂ ವಿಚಿನ್ವಂತ್ಯೋ ಹತಂ ಪತಿಮ್ ॥

ಅನುವಾದ

ರಾಕ್ಷಸರೊಂದಿಗೆ ಲಂಕೆಯ ಉತ್ತರದ್ವಾರದಿಂದ ಹೊರಬಂದು ಭಯಂಕರ ಯುದ್ಧಭೂಮಿಯನ್ನು ಪ್ರವೇಶಿಸಿ ಮಡಿದ ತಮ್ಮ ಪತಿಯನ್ನು ಹುಡುಕ ತೊಡಗಿದರು.॥3॥

ಮೂಲಮ್ - 4

ಆರ್ಯಪುತ್ರೇತಿ ವಾದಿನ್ಯೋ ಹಾ ನಾಥೇತಿ ಚ ಸರ್ವಶಃ ।
ಪರಿಪೇತುಃ ಕಬಂಧಾಂಕಾಂ ಮಹೀಂ ಶೋಣಿತಕರ್ದಮಾಮ್ ॥

ಅನುವಾದ

ಹಾ ಆರ್ಯಪುತ್ರ! ಹಾ ನಾಥನೇ! ಎಂದು ಕೂಗುತ್ತಾ ಅವರೆಲ್ಲರೂ ಆ ರಣಭೂಮಿಯಲ್ಲಿ ಎಲ್ಲೆಡೆ ಶವಗಳೇ ತುಂಬಿದ್ದು, ರಕ್ತದ ಕೆಸರಿನಿಂದಾಗಿ ಏಳುತ್ತಾ-ಬೀಳುತ್ತಾ ಅಲೆಯತೊಡಗಿದರು.॥4॥

ಮೂಲಮ್ - 5

ತಾ ಭಾಷ್ಪ ಪರಿಪೂರ್ಣಾಕ್ಷ್ಯೋ ಭರ್ತೃಶೋಕ ಪರಾಜಿತಾಃ ।
ಕರಿಣ್ಯ ಇವ ನರ್ದಂತ್ಯಃ ಕರೇಣ್ವೋಹತಯೂಥಪಾಃ ॥

ಅನುವಾದ

ಅವರ ಕಣ್ಣುಗಳಿಂದ ಅಶ್ರುಧಾರೆಗಳು ಹರಿಯುತ್ತಿದ್ದವು. ಪತಿಯ ಶೋಕದಿಂದ ಮೈಮರೆದ ಅವರು ಗುಂಪಿನ ಮುಖ್ಯ ಆನೆ ಮಡಿದಾಗ ಹೆಣ್ಣಾನೆಗಳು ಗೋಳಾಡುವಂತೆ ಕರುಣಾಕ್ರಂದನ ಮಾಡುತ್ತಿದ್ದರು.॥5॥

ಮೂಲಮ್ - 6

ದದೃಶುಸ್ತಾಂ ಮಹಾಕಾಯಂ ಮಹಾವೀರ್ಯಂ ಮಹಾದ್ಯುತಿಮ್ ।
ರಾವಣಂ ನಿಹತಂ ಭೂಮೌ ನೀಲಾಂಜನ ಚಯೋಪಮಮ್ ॥

ಅನುವಾದ

ಕಪ್ಪಾದ ಇದ್ದಲು ರಾಶಿಯಂತೆ ನೆಲದಲ್ಲಿ ಸತ್ತುಬಿದ್ದ ಮಹಾಕಾಯ, ಮಹಾಪರಾಕ್ರಮಿ ಮತ್ತು ಮಹಾತೇಜಸ್ವೀ ರಾವಣನನ್ನು ಅವರು ನೋಡಿದರು.॥6॥

ಮೂಲಮ್ - 7

ತಾಃ ಪತಿಂ ಸಹಸಾ ದೃಷ್ಟ್ವಾಶಯಾನಂ ರಣಪಾಂಸುಷು ।
ನಿಪೇತುಸ್ತಸ್ಯ ಗಾತ್ರೇಷು ಚ್ಛಿನ್ನಾ ವನಲತಾ ಇವ ॥

ಅನುವಾದ

ರಣರಂಗದ ಧೂಳಿನಲ್ಲಿ ಬಿದ್ದಿರುವ ತಮ್ಮ ಮೃತಪತಿಯನ್ನು ನೋಡುತ್ತಲೇ ಅವರು ತುಂಡಾಗಿ ಬೀಳುವ ಕಾಡಿನ ಬಳ್ಳಿಯಂತೆ ಅವನ ಶರೀರದ ಮೇಲೆ ಮುಗಿಬಿದ್ದರು.॥7॥

ಮೂಲಮ್ - 8

ಬಹುಮಾನಾತ್ಪರಿಷ್ವಜ್ಯ ಕಾಚಿದೇನಂ ರುರೋದ ಹ ।
ಚರಣೌ ಕಾಚಿದಾಲಂಬ್ಯ ಕಾಚಿತ್ ಕಂಠೇಽವಲಂಬ್ಯ ಚ ॥

ಅನುವಾದ

ಅವರಲ್ಲಿ ಕೆಲವರು ಆದರದಿಂದ ಅವನನ್ನು ಆಲಿಂಗಿಸಿಕೊಂಡರೆ, ಕೆಲವರು ಕಾಲುಗಳನ್ನು ಹಿಡಿದು ಕೊಂಡು ಕುತ್ತಿಗೆಯನ್ನು ಬಿಗಿದುಕೊಂಡು ಅಳತೊಡಗಿದರು.॥8॥

ಮೂಲಮ್ - 9

ರ್ವಿಕ್ಷಿಪ್ಯಚಭುಜೌ ಕಾಚಿದ್ಭೂಮೌ ಸ್ಮ ಸುಪರಿವರ್ತತೇ ।
ಹತಸ್ಯ ವದನಂ ದೃಷ್ಟ್ವಾ ಕಾಚಿನ್ಮೋಹಮುಪಾಗಮತ್ ॥

ಅನುವಾದ

ಕೆಲವರು ಭುಜಗಳನ್ನೆತ್ತಿಕೊಂಡು ನೆಲಕ್ಕೆ ಬಿದ್ದು ಹೊರಳಾಡತೊಡಗಿದರೆ, ಕೆಲವರು ಮಡಿದ ಪತಿಯ ಸ್ವಾಮಿಯ ಮುಖನೋಡಿ ಮೂರ್ಛಿತರಾದರು.॥9॥

ಮೂಲಮ್ - 10

ಕಾಚಿದಂಕೇ ಶಿರಃ ಕೃತ್ವಾರುರೋದ ಮುಖಮೀಕ್ಷತೀ ।
ಸ್ನಾಪಯಂತೀ ಮುಖಂ ಭಾಷ್ಪೈಸ್ತುಷಾರೈರಿವ ಪಂಕಜಮ್ ॥

ಅನುವಾದ

ಕೆಲವರು ಪತಿಯ ತಲೆಯನ್ನು ತೊಡೆಯಲ್ಲಿಟ್ಟುಕೊಂಡು ಮುಖವನ್ನೇ ನೋಡುತ್ತಿದ್ದರೆ, ಮಂಜುಬಿದ್ದ ಕಮಲದಂತೆ ಅಶ್ರುಬಿಂದುಗಳಿಂದ ಪತಿಯ ಮುಖಾರ ವಿಂದವನ್ನು ತೊಳೆಯುತ್ತಾ ಅಳುತ್ತಿದ್ದರು.॥10॥

ಮೂಲಮ್ - 11

ಏವಮಾರ್ತಾಃ ಪತಿಂ ದೃಷ್ಟ್ವಾರಾವಣಂ ನಿಹತಂ ಭುವಿ ।
ಚುಕ್ರುಶುರ್ಬಹುಧಾ ಶೋಕಾದ್ಭೂಯಸ್ತಾಃ ಪರ್ಯದೇವಯನ್ ॥

ಅನುವಾದ

ಹೀಗೆ ತಮ್ಮ ಪತಿ ರಾವಣನು ನೆಲದಲ್ಲಿ ಸತ್ತು ಬಿದ್ದಿರುವುದನ್ನು ನೋಡಿ ಎಲ್ಲರೂ ಆರ್ತರಾಗಿ ಅವನನ್ನು ಕರೆಯತೊಡಗಿದರು ಹಾಗೂ ಶೋಕದಿಂದಾಗಿ ನಾನಾ ಪ್ರಕಾರದಿಂದ ವಿಲಾಪಿಸ ತೊಡಗಿದರು.॥11॥

ಮೂಲಮ್ - 12

ಯೇನ ವಿತ್ರಾಸಿತಃ ಶಕ್ರೋ ಯೇನ ವಿತ್ರಾಸಿತೋ ಯಮಃ ।
ಯೇನ ವೈಶ್ರವಣೋ ರಾಜಾ ಪುಷ್ಪಕೇಣ ವಿಯೋಜಿತಃ ॥

ಮೂಲಮ್ - 13

ಗಂಧರ್ವಾಣಾಮೃಷೀಣಾಂ ಚ ಸುರಾಣಾಂ ಚ ಮಹಾತ್ಮನಾಮ್ ।
ಭಯಂ ಯೇನ ರಣೇದತ್ತಂ ಸೋಽಯಂ ಶೇತೇ ರಣೇ ಹತಃ ॥

ಅನುವಾದ

ಅವರು ಹೇಳುತ್ತಾರೆ - ಅಯ್ಯೋ! ಯಾರು ಯಮ ಮತ್ತು ಇಂದ್ರನನ್ನು ಭಯಪಡಿಸಿದ್ದನೋ, ರಾಜರಾಜ ಕುಬೇರನ ಪುಷ್ಪಕವಿಮಾನವನ್ನು ಕಸಿದುಕೊಂಡಿದ್ದನೋ, ಗಂಧರ್ವ, ಋಷಿ ಮತ್ತು ದೇವತೆಗಳನ್ನು ರಣಭೂಮಿಯಲ್ಲಿ ಭಯಭೀತಗೊಳಿಸಿದ್ದನೋ, ಆ ನಮ್ಮ ಪ್ರಾಣನಾಥ ಇಂದು ಈ ಸಮರಾಂಗಣದಲ್ಲಿ ಮಡಿದು ಮಲಗಿರುವನು.॥12-13॥

ಮೂಲಮ್ - 14

ಅಸುರೇಭ್ಯಃ ಸುರೇಭ್ಯೋ ವಾ ಪನ್ನಗೇಭ್ಯೋಽಪಿ ವಾ ತಥಾ ।
ನ ಭಯಂ ಯೋ ವಿಜಾನಾತಿ ತಸ್ಯೇದಂ ಮಾನುಷಾದ್ಭಯಮ್ ॥

ಅನುವಾದ

ಅಯ್ಯೋ! ದೇವತೆಗಳಿಂದ, ನಾಗಗಳಿಂದಲೂ ಭಯಪಡದ ಅವನಿಗೆ ಇಂದು ಮನುಷ್ಯನಿಂದ ಭಯಪ್ರಾಪ್ತವಾಯಿತಲ್ಲ.॥14॥

ಮೂಲಮ್ - 15

ಅವಧ್ಯೋ ದೇವತಾನಾಂ ಯಸ್ತಥಾ ದಾನವ ರಕ್ಷಸಾಮ್ ।
ಹತಃ ಸೋಽಯಂ ರಣೇ ಶೇತೇ ಮಾನುಷೇಣ ಪದಾತಿನಾ ॥

ಅನುವಾದ

ಯಾರನ್ನು ದೇವತೆಗಳಿಂದ, ದಾನವರಿಂದ, ರಾಕ್ಷಸರಿಂದ ಕೊಲ್ಲಲಾಗುತ್ತಿರಲಿಲ್ಲವೋ ಅವನು ಇಂದು ಓರ್ವ ಮನುಷ್ಯನ ಕೈಯಿಂದ ಹತನಾಗಿ ರಣಭೂಮಿಯಲ್ಲಿ ಮಲಗಿರುವನು.॥15॥

ಮೂಲಮ್ - 16

ಯೋ ನ ಶಕ್ಯಃ ಸುರೈರ್ಹಂತುಂ ನ ಯಕ್ಷೈರ್ನಾಸುರೈ ಸ್ತಥಾ ।
ಸೋಽಯಂ ಕಶ್ಚಿದಿವಾಸತ್ತ್ವೋ ಮೃತ್ಯುಂ ಮರ್ತ್ಯೇನ ಲಂಭಿತಃ ॥

ಅನುವಾದ

ದೇವತೆಗಳಿಗೂ, ಅಸುರರಿಗೂ, ಯಕ್ಷರಿಗೂ ಅವಧ್ಯನಾದವನು ಯಾರೋ ನಿರ್ಬಲ ಪ್ರಾಣಿಯಂತಿರುವ ಒಬ್ಬ ಮನುಷ್ಯನ ಕೈಯಲ್ಲಿ ಮೃತ್ಯುವನ್ನು ಹೊಂದಿದನಲ್ಲ.॥16॥

ಮೂಲಮ್ - 17

ಏವಂ ವದಂತ್ಯೋ ರುರುದುಸ್ತಸ್ಯತಾ ದುಃಖಿತಾಃ ಸ್ತ್ರಿಯಃ ।
ಭೂಯ ಏವ ಚ ದುಃಖಾರ್ತಾ ವಿಲೇಪುಶ್ಚ ಪುನಃ ಪುನಃ ॥

ಅನುವಾದ

ಹೀಗೆ ಮಾತುಗಳನ್ನಾಡುತ್ತಿರುವ ರಾವಣನ ಆ ದುಃಖಿತೆಯರಾದ ಸ್ತ್ರೀಯರು ಬಿಕ್ಕಿ ಬಿಕ್ಕಿ ಅಳತೊಡಗಿದರು. ಪುನಃ ದುಃಖಾತುರರಾಗಿ ಪದೇ ಪದೇ ವಿಲಾಪಿಸತೊಡಗಿದರು.॥17॥

ಮೂಲಮ್ - 18

ಅಶೃಣ್ವತಾ ಚ ಸುಹೃದಾಂ ಸತತಂ ಹಿತವಾದಿನಾಮ್ ।
ಮರಣಾಯಾಹೃತಾ ಸೀತಾ ರಾಕ್ಷಸಾಶ್ಚ ನಿಪಾತಿತಾಃ ।
ಏತಾಃ ಸಮಮಿದಾನೀಂ ತೇ ವಯಮಾತ್ಮಾ ಚ ಪಾತಿತಃ ॥

ಅನುವಾದ

ಪ್ರಾಣನಾಥಾ! ಸದಾ ಹಿತವನ್ನೇ ಹೇಳುವ ಸುಹೃದರ ಮಾತನ್ನು ನೀವು ಅಲಕ್ಷ ಮಾಡಿದಿರಿ ಹಾಗೂ ಮೃತ್ಯುವಿಗಾಗಿ ಸೀತಾಪಹಾರ ಮಾಡಿದಿರಿ. ಇವರ ಫಳ ಈ ರಾಕ್ಷಸರು ಸತ್ತುಹೋದರು ಹಾಗೂ ಈಗ ನೀವೂ ರಣರಂಗದಲ್ಲಿ ಮಡಿದು ನಮ್ಮನ್ನು ಮಹಾ ದುಃಖಸಾಗರದಲ್ಲಿ ಕೆಡಹಿದಿರಿ.॥18॥

ಮೂಲಮ್ - 19

ಬ್ರುವಾಣೋಽಪಿ ಹಿತಂ ವಾಕ್ಯಮಿಷ್ಟೋ ಭ್ರಾತಾ ವಿಭೀಷಣಃ ।
ಧೃಷ್ಟಂ ಪರುಷಿತೋ ಮೋಹಾತ್ತ್ವಯಾಽಽತ್ಮವಧಕಾಂಕ್ಷಿಣಾ ॥

ಅನುವಾದ

ನಿಮ್ಮ ಪ್ರಿಯ ತಮ್ಮ ವಿಭೀಷಣನು ನಿಮಗೆ ಹಿತದ ಮಾತನ್ನು ಹೇಳುತ್ತಿದ್ದನು, ಆದರೂ ನೀವು ತಮ್ಮ ವಧೆಗಾಗಿಯೇ ಅವನನ್ನು ಕಟುವಚನಗಳನ್ನಾಡಿದಿರಿ. ಅವರದ್ದೇ ಫಲವು ಈಗ ಪ್ರತ್ಯಕ್ಷವಾಗಿ ಕಂಡುಬಂದಿದೆ.॥19॥

ಮೂಲಮ್ - 20

ಯದಿ ನಿರ್ಯಾತಿತಾ ತೇ ಸ್ಯಾತ್ಸೀತಾ ರಾಮಾಯ ಮೈಥಿಲೀ ।
ನ ನಃ ಸ್ಯಾದ್ವ್ಯಸನಂ ಘೋರಮಿದಂ ಮೂಲಹರಂ ಮಹತ್ ॥

ಅನುವಾದ

ನೀವು ಮಿಥಿಲೇಶ ಕುಮಾರಿ ಸೀತೆಯನ್ನು ಶ್ರೀರಾಮನ ಬಳಿಗೆ ಮರಳಿಸಿದ್ದರೆ, ಬೇರುಸಹಿತ ನಮ್ಮ ವಿನಾಶ ಮಾಡುವ ಈ ಮಹಾಘೋರ ಸಂಕಟ ನಮ್ಮ ಮೇಲೆ ಬೀಳುತ್ತಿರಲಿಲ್ಲ.॥20॥

ಮೂಲಮ್ - 21

ವೃತ್ತಕಾಮೋ ಭವೇದ್ಭ್ರಾತಾ ರಾಮೋ ಮಿತ್ರಕುಲಂ ಭವೇತ್ ।
ವಯಂ ಚಾವಿಧವಾಃ ಸರ್ವಾಃ ಸ ಕಾಮಾ ನ ಚ ಶತ್ರವಃ ॥

ಅನುವಾದ

ಸೀತೆಯನ್ನು ಮರಳಿಸಿದ್ದರೆ ನಿಮ್ಮ ತಮ್ಮ ವಿಭೀಷಣನ ಮನೋರಥ ಸಫಲವಾಗುತ್ತಿತ್ತು. ಶ್ರೀರಾಮನು ನಮ್ಮ ಮಿತ್ರಪಕ್ಷದಲ್ಲಿ ಬರುತ್ತಿದ್ದನು. ನಾವೆಲ್ಲರೂ ವಿಧವೆಯರಾಗುತ್ತಿರಲಿಲ್ಲ. ನಮ್ಮ ಶತ್ರುಗಳ ಕಾಮನೆ ಪೂರ್ಣವಾಗುತ್ತಿರಲಿಲ್ಲ.॥21॥

ಮೂಲಮ್ - 22

ತ್ವಯಾ ಪುನರ್ನೃಶಂಸೇನ ಸೀತಾಂ ಸಂರುಂಧತಾ ಬಲಾತ್ ।
ರಾಕ್ಷಸಾ ವಯಮಾತ್ಮಾ ಚ ತ್ರಯಂ ತುಲ್ಯಂ ನಿಪಾತಿತಮ್ ॥

ಅನುವಾದ

ಆದರೆ ಸೀತೆಯನ್ನು ಬಲವಂತವಾಗಿ ಬಂಧಿಸಿಟ್ಟು, ರಾಕ್ಷಸರನ್ನು, ಸ್ತ್ರೀಯರಾದ ನಮ್ಮನ್ನು ಹಾಗೂ ತನ್ನನ್ನು ಹೀಗೆ ಮೂವರನ್ನು ಒಟ್ಟಿಗೆ ವಿಪತ್ತಿನಲ್ಲಿ ಕೆಡುವಂತಹ ನಿಷ್ಠುರರಾದಿರಲ್ಲ.॥22॥

ಮೂಲಮ್ - 23

ನ ಕಾಮಕಾರಃ ಕಾಮಂ ವಾ ತವ ರಾಕ್ಷಸಪುಂಗವ ।
ದೈವಂ ಚೇಷ್ಟಯತೇ ಸರ್ವಂ ಹತಂ ದೈವೇನ ಹನ್ಯತೇ ॥

ಅನುವಾದ

ರಾಕ್ಷಸಶ್ರೇಷ್ಠನೇ! ನಿಮ್ಮ ಸ್ವೇಚ್ಛಾಚಾರವೇ ನಮ್ಮ ವಿನಾಶಕ್ಕೆ ಕಾರಣವಾಯಿತು ಎಂಬ ಮಾತಲ್ಲ. ವಿಧಿಯೇ ಎಲ್ಲವನ್ನು ಮಾಡುತ್ತದೆ. ದೈವದಿಂದಲೇ ಎಲ್ಲರೂ ಹತರಾಗುತ್ತಿತ್ತಾರೆ.॥23॥

ಮೂಲಮ್ - 24

ವಾನರಾಣಾಂ ವಿನಾಶೋಽಯಂ ರಾಕ್ಷಸಾನಾಂ ಚ ತೇ ರಣೇ ।
ತವ ಚೈವ ಮಹಾಬಾಹೋ ದೈವಯೋಗಾದುಪಾಗತಃ ॥

ಅನುವಾದ

ಮಹಾಬಾಹೋ! ಈ ಯುದ್ಧದಲ್ಲಿ ವಾನರರ, ರಾಕ್ಷಸರ ಮತ್ತು ನಿಮ್ಮ ವಿನಾಶವು ದೈವಯೋಗದಿಂದಲೇ ಆಗಿದೆ.॥24॥

ಮೂಲಮ್ - 25

ನೈವಾರ್ಥೇನ ಚ ಕಾಮೇನ ವಿಕ್ರಮೇಣನ ಚಾಜ್ಞಯಾ ।
ಶಕ್ಯಾ ದೈವಗತಿರ್ಲೋಕೇನಿವರ್ತಯಿತುಮುದ್ಯತಾ ॥

ಅನುವಾದ

ಜಗತ್ತಿನಲ್ಲಿ ಫಲ ಕೊಡಲು ಉದ್ಯುಕ್ತವಾದ ವಿಧಿಯ ವಿಧಾನವನ್ನು ಯಾರೂ ಧನದಿಂದ, ಕಾಮನೆಯಿಂದ, ಪರಾಕ್ರಮದಿಂದ ಅಥವಾ ಶಕ್ತಿಯಿಂದ ಬದಲಿಸಲಾರನು.॥25॥

ಮೂಲಮ್ - 26

ವಿಲೇಪುರೇವಂ ದೀನಾಸ್ತಾ ರಾಕ್ಷಸಾಧಿಪಯೋಷಿತಃ ।
ಕುರರ್ಯ ಇವ ದುಃಖಾರ್ತಾ ಭಾಷ್ಪ ಪರ್ಯಾಕುಲೇಕ್ಷಣಾಃ ॥

ಅನುವಾದ

ಹೀಗೆ ರಾಕ್ಷಸರಾಜನ ಎಲ್ಲ ಪತ್ನಿಯರು ದುಃಖದಿಂದ ಪೀಡಿತರಾಗಿ ಕಣ್ಣೀರು ತುಂಬಿ ದೀನಭಾವದಿಂದ ಹೆಣ್ಣು ಕುಕರಿಯಂತೆ ವಿಲಾಪಿಸತೊಡಗಿದರು.॥2.॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರಹತ್ತನೆಯ ಸರ್ಗ ಪೂರ್ಣವಾಯಿತು.॥110॥