वाचनम्
ಭಾಗಸೂಚನಾ
ಶ್ರೀರಾಮನಿಂದ ರಾವಣನ ವಧೆ
ಮೂಲಮ್ - 1
ಅಥ ಸಂಸ್ಮಾರಯಾಮಾಸ ಮಾತಲೀ ರಾಘವಂ ತದಾ ।
ಅಜಾನನ್ನಿವ ಕಿಂ ವೀರ ತ್ವಮೇನಮನುವರ್ತಸೇ ॥
ಅನುವಾದ
ಮಾತಲಿಯು ಶ್ರೀರಾಮನಿಗೆ ಹಿಂದಿನದನ್ನು ಜ್ಞಾಪಿಸುತ್ತಾ ಹೇಳಿದನು - ವೀರವರನೇ! ಏನು ತಿಳಿಯದವನಂತೆ ನೀನು ಈ ರಾಕ್ಷಸನನ್ನು ಏಕೆ ಅನುಸರಿಸುತ್ತರುವೆ? (ಅಸ್ತ್ರಕ್ಕೆ ಪ್ರತಿಅಸ್ತ್ರವನ್ನು ಮಾತ್ರ ಬಿಡುತ್ತಿರುವೆಯಲ್ಲ.॥1॥
ಮೂಲಮ್ - 2
ವಿಸೃಜಾಸ್ಮೈ ವಧಾಯ ತ್ವಮಸ್ತ್ರಂ ಪೈತಾಮಹಂ ಪ್ರಭೋ ।
ವಿನಾಶಕಾಲಃ ಕಥಿತೋ ಯಃ ಸುರೈಃ ಸೋಽದ್ಯವರ್ತತೇ ॥
ಅನುವಾದ
ಪ್ರಭೋ! ನೀನು ಇವನನ್ನು ವಧಿಸಲು ಬ್ರಹ್ಮದೇವರ ಅಸ್ತ್ರವನ್ನು ಪ್ರಯೋಗಿಸು. ದೇವತೆಗಳು ನಿರ್ಧರಿಸಿದ ಇವನ ವಿನಾಶದ ಸಮಯವು ಈಗ ಸನ್ನಿಹಿತವಾಗಿದೆ.॥2॥
ಮೂಲಮ್ - 3
ತತಃ ಸಂಸ್ಮಾರಿತೋ ರಾಮಸ್ತೇನ ವಾಕ್ಯೇನ ಮಾತಲೇಃ ।
ಜಗ್ರಾಹ ಸ ಶರಂ ದೀಪ್ತಂ ನಿಃಶ್ವಸಂತಮಿವೋರಗಮ್ ॥
ಅನುವಾದ
ಮಾತಲಿಯ ಈ ವಾಕ್ಯದಿಂದ ಶ್ರೀರಾಮಚಂದ್ರಗೆ ಆ ಅಸ್ತ್ರವು ಸ್ಮರಣೆಗೆ ಬಂತು. ಮತ್ತೆ ಅವನು ಬುಸುಗುಟ್ಟುವ ಸರ್ಪದಂತಹ ಒಂದು ತೇಜಸ್ವೀ ಬಾಣವನ್ನು ಕೈಗೆತ್ತಿಕೊಂಡನು.॥3॥
ಮೂಲಮ್ - 4
ಯಂತಸ್ಮೈ ಪ್ರಥಮಂ ಪ್ರಾದಾದಗಸ್ತ್ಯೋ ಭಗವಾನೃಷಿಃ ।
ಬ್ರಹ್ಮದತ್ತಂ ಮಹದ್ಬಾಣಮಮೋಘಂ ಯುಧಿ ವೀರ್ಯವಾನ್ ॥
ಅನುವಾದ
ಪೂಜ್ಯ ಅಗಸ್ತ್ಯರು ಶ್ರೀರಘುನಾಥನಿಗೆ ಮೊದಲು ಕೊಟ್ಟ ಶಕ್ತಿಶಾಲಿ ಬಾಣವೇ ಅದಾಗಿತ್ತು. ಆ ವಿಶಾಲ ಬಾಣವು ಬ್ರಹ್ಮ ದೇವರು ಕೊಟ್ಟಿದ್ದು, ಯುದ್ಧದಲ್ಲಿ ಅಮೋಘವಾಗಿತ್ತು.॥4॥
ಮೂಲಮ್ - 5
ಬ್ರಹ್ಮಣಾ ನಿರ್ಮಿತಂ ಪೂರ್ವಮಿಂದ್ರಾರ್ಥಮಮಿತೌಜಸಾ ।
ದತ್ತಂ ಸುರಪತೇಃ ಪೂರ್ವಂ ತ್ರಿಲೋಕ ಜಯಕಾಂಕ್ಷಿಣಃ ॥
ಅನುವಾದ
ಅಮಿತ ತೇಜಸ್ವೀ ಬ್ರಹ್ಮದೇವರು ಮೊದಲು ಇಂದ್ರನಿಗಾಗಿ ಆ ಬಾಣವನ್ನು ನಿರ್ಮಿಸಿದ್ದರು ಹಾಗೂ ಮೂರು ಲೋಕಗಳ ಮೇಲೆ ವಿಜಯಪಡೆಯುವ ಇಚ್ಛೆಯುಳ್ಳ ದೇವೇಂದ್ರನಿಗೆ ಹಿಂದೆ ಅರ್ಪಿಸಿದ್ದರು.॥5॥
ಮೂಲಮ್ - 6
ಯಸ್ಯ ವಾಜೇಷು ಪವನಃ ಫಲೇ ಪಾವಕ ಭಾಸ್ಕರೌ ।
ಶರೀರಮಾಕಾಶಮಯಂ ಗೌರವೇ ಮೇರುಮಂದರೌ ॥
ಅನುವಾದ
ಆ ಬಾಣದ ವೇಗದಲ್ಲಿ ವಾಯುವನ್ನು, ಅಲಗಿನಲ್ಲಿ ಸೂರ್ಯಾಗ್ನಿಗಳನ್ನು, ಶರೀರದಲ್ಲಿ ಆಕಾಶವನ್ನು, ಭಾರದಲ್ಲಿ ಮೇರು-ಮಂದರಾಚಲಗಳನ್ನು ಪ್ರತಿಷ್ಠಾಪಿಸಿದ್ದರು.॥6॥
ಮೂಲಮ್ - 7
ಜಾಜ್ವಲ್ಯಮಾನಂ ವಪುಷಾ ಸುಪುಂಖಂ ಹೇಮಭೂಷಿತಮ್ ।
ತೇಜಸಾ ಸರ್ವಭೂತಾನಾಂ ಕೃತಂ ಭಾಸ್ಕರವರ್ಚಸಮ್ ॥
ಮೂಲಮ್ - 8
ಸಧೂಮಮಿವ ಕಾಲಾಗ್ನಿಂ ದೀಪ್ತಮಾಶೀವಿಷೋಪಮಮ್ ।
ನರನಾಗಾಶ್ವವೃಂದಾನಾಂ ಭೇದನಂ ಕ್ಷಿಪ್ರಕಾರಿಣಮ್ ॥
ಅನುವಾದ
ಅದನ್ನು ಭೂತಮಾತ್ರರ ತೇಜದಿಂದ ನಿರ್ಮಿಸಿತ್ತು. ಅದರಿಂದ ಸೂರ್ಯನಂತಹ ಜ್ಯೋತಿ ಹೊರಡುತ್ತಿತ್ತು. ಅದು ಸ್ವರ್ಣಭೂಷಿತ, ಸುಂದರ ರೆಕ್ಕೆಗಳಿಂದ ಕೂಡಿ, ಸ್ವರೂಪತಃ ಜಾಜ್ವಲ್ಯಮಾನ, ಪ್ರಳಯಕಾಲದ ಧೂಮಯುಕ್ತ ಅಗ್ನಿಯಂತೆ ಭಯಂಕರ, ದೀಪ್ತಿವಂತ, ವಿಷಧರ ಸರ್ಪದಂತೆ ವಿಷಯುಕ್ತ, ಮನುಷ್ಯ, ಆನೆ, ಕುದುರೆಗಳನ್ನು ವಿವೀರ್ಣಗೊಳಿಸಿ, ಶೀಘ್ರವಾಗಿ ಗುರಿಯನ್ನು ಭೇದಿಸುವಂತಹುದಾಗಿತ್ತು.॥7-8॥
ಮೂಲಮ್ - 9
ದ್ವಾರಾಣಾಂ ಪರಿಘಾಣಾಂ ಚ ಗಿರೀಣಾಂಚಾಪಿ ಭೇದನಮ್ ।
ನಾನಾರುಧಿರದಿಗ್ಧಾಂಗಂ ಮೇದೋದಿಗ್ಧಂ ಸುದಾರುಣಮ್ ॥
ಮೂಲಮ್ - 10
ವಜ್ರಸಾರಂ ಮಹಾನಾದಂ ನಾನಾ ಸಮಿತಿ ದಾರುಣಮ್ ।
ಸರ್ವವಿತ್ರಾಸನಂ ಭೀಮಂ ಶ್ವಸಂತಮಿವ ಪನ್ನಗಮ್ ॥
ಮೂಲಮ್ - 11
ಕಂಕಗೃಧ್ರಬಕಾನಾಂ ಚ ಗೋಮಾಯು ಗಣ ರಕ್ಷಸಾಮ್
ನಿತ್ಯಂ ಭಕ್ಷಪ್ರದಂ ಯುದ್ಧೇ ಯಮರೂಪಂ ಭಯಾವಹಮ್ ॥
ಅನುವಾದ
ದೊಡ್ಡ ದೊಡ್ಡ ದ್ವಾರಗಳನ್ನು, ಪರಿಘ, ಪರ್ವತಗಳನ್ನೂ ಕೂಡ ಒಡೆದು ಹಾಕುವ ಶಕ್ತಿ ಅದರಲ್ಲಿ ಇತ್ತು. ಅದರ ಶರೀರ ನಾನಾ ರೀತಿಯ ರಕ್ತಗಳಿಂದಲೂ ಮೆದಸ್ಸಿನಿಂದಲೂ ಪರಿಪುಷ್ಟವಾಗಿತ್ತು. ನೋಡಲೂ ಅದು ಭಯಂಕರವಾಗಿತ್ತು. ವಜ್ರದಂತೆ ಕಠೋರ, ಮಹಾಶಬ್ದದಿಂದ ಕೂಡಿದ್ದು, ಅನೇಕಾನೇಕ ಯುದ್ಧಗಳಲ್ಲಿ ಶತ್ರುಸೈನ್ಯವನ್ನು ವಿವೀರ್ಣಗೊಳಿಸುವ, ಎಲ್ಲರಿಗೆ ನೋವು ಕೊಡುವ ಹಾಗೂ ಬುಸುಗುಟ್ಟುತ್ತಿರುವ ಸರ್ಪದಂತೆ ಭಯಂಕರ ವಾಗಿತ್ತು. ಯುದ್ಧದಲ್ಲಿ ಅದು ಯಮನ ಭಯಾವಹ ರೂಪ ಧರಿಸುತ್ತಿತ್ತು. ರಣರಂಗದಲ್ಲಿ ಕಾಗೆಗಳು, ಹದ್ದು, ಕೊಕ್ಕರೆ, ಗಿಡುಗ ಹಾಗೂ ಪಿಶಾಚಿಗಳಿಗೆ ಅದು ಸದಾಕಾಲ ಆಹಾರ ಒದಗಿಸುತ್ತಿತ್ತು.॥9-11॥
ಮೂಲಮ್ - 12
ನಂದನಂ ವಾನರೇಂದ್ರಾಣಾಂ ರಕ್ಷಸಾಮವಸಾದನಮ್ ।
ವಾಜಿತಂ ವಿವಿಧೈರ್ವಾಜೈಶ್ಚಾರುಚಿತ್ರೈರ್ಗರುತ್ಮತಃ ॥
ಅನುವಾದ
ಆ ಬಾಣವು ವಾನರ ದಳಪತಿ ಗಳಿಗೆ ಆನಂದ ಕೊಡುವಂತಹ ಹಾಗೂ ರಾಕ್ಷಸರಿಗೆ ದುಃಖದಲ್ಲಿ ಕೆಡಹುವಂತಹದಾಗಿತ್ತು; ಗರುಡನ ಸುಂದರ ವಿಚಿತ್ರ ಮತ್ತು ನಾನಾ ಪ್ರಕಾರದ ರೆಕ್ಕೆಗಳಿಂದ ನಿರ್ಮಿಸಲಾಗಿತ್ತು.॥12॥
ಮೂಲಮ್ - 13
ತಮುತ್ತಮೇಷುಂ ಲೋಕಾನಾಮಿಕ್ಷ್ವಾಕುಭಯನಾಶನಮ್।
ದ್ವಿಷತಾಂ ಕೀರ್ತಿಹರಣಂ ಪ್ರಕರ್ಷಕರಮಾತ್ಮನಃ ॥
ಮೂಲಮ್ - 14
ಅಭಿಮಂತ್ರ್ಯ ತತೋ ರಾಮಸ್ತಂ ಮಹೇಷುಂ ಮಹಾಬಲಃ ।
ವೇದಪ್ರೋಕ್ತೇನ ವಿಧಿನಾ ಸಂದಧೇ ಕಾರ್ಮುಕೇ ಬಲೀ ॥
ಅನುವಾದ
ಆ ಉತ್ತಮ ಬಾಣವು ಸಮಸ್ತಲೋಕಗಳ ಹಾಗೂ ಇಕ್ಷ್ವಾಕುವಂಶಿಯರ ಭಯನಾಶಕವಾಗಿತ್ತು. ಶತ್ರುಗಳ ಕೀರ್ತಿಯನ್ನು ಅಪಹರಿಸುವ ಹಾಗೂ ತನ್ನವರ ಹರ್ಷವನ್ನು ವೃದ್ಧಿ ಮಾಡುವುದಾಗಿತ್ತು. ಆ ಮಹಾಸಾಯಕವನ್ನು ವೇದೋಕ್ತ ವಿಧಿಯಿಂದ ಅಭಿಮಂತ್ರಿಸಿ ಮಹಾಬಲಿ ಶ್ರೀರಾಮನು ತನ್ನ ಧನುಸ್ಸಿಗೆ ಹೂಡಿದನು.॥13-14॥
ಮೂಲಮ್ - 15
ತಸ್ಮಿನ್ ಸಂಧೀಯಮಾನೇ ತು ರಾಘವೇಣ ಶರೋತ್ತಮೇ ।
ಸರ್ವಭೂತಾನಿ ಸಂತ್ರೇಸುಶ್ಚಚಾಲ ಚ ವಸುಂಧರಾ ॥
ಅನುವಾದ
ಶ್ರೀರಘುನಾಥನು ಆ ಉತ್ತಮ ಬಾಣವನ್ನು ಅನುಸಂಧಾನ ಮಾಡಿದಾಗ ಸಮಸ್ತ ಪ್ರಾಣಿಗಳು ನಡುಗಿಹೋದುವು ಮತ್ತು ಧರಣಿ ಕಂಪಿಸಿತು.॥15॥
ಮೂಲಮ್ - 16
ಸ ರಾವಣಾಯ ಸಂಕ್ರುದ್ಧೋ ಭೃಶಮಾಯಮ್ಯ ಕಾರ್ಮುಕಮ್ ।
ಚಿಕ್ಷೇಪ ಪರಮಾಯತ್ತಃ ಶರಂ ಮರ್ಮವಿದಾರಣಮ್ ॥
ಅನುವಾದ
ಶ್ರೀರಾಮನು ಅತ್ಯಂತ ಕುಪಿತನಾಗಿ ಪರಮ ಯತ್ನದಿಂದ ಧನುಷ್ಯವನ್ನು ಸೆಳೆದು ಮರ್ಮಭೇದೀ ಆ ಬಾಣವನ್ನು ರಾವಣನ ಮೇಲೆ ಪ್ರಯೋಗಿಸಿದನು.॥16॥
ಮೂಲಮ್ - 17
ಸ ವಜ್ರ ಇವ ದುರ್ಧರ್ಷೋ ವಜ್ರಿಬಾಹು ವಿಸರ್ಜಿತಃ ।
ಕೃತಾಂತ ಇವ ಚಾವಾರ್ಯೋ ನ್ಯಪತದ್ರಾವಣೋರಸಿ ॥
ಅನುವಾದ
ವಜ್ರಧಾರೀ ಇಂದ್ರನು ಕೈಯಿಂದ ಬಿಟ್ಟಿರುವ ವಜ್ರದಂತೆ ದುರ್ಧರ್ಷ ಮತ್ತು ಕಾಲದಂತೆ ಅನಿವಾರ್ಯವಾದ ಆ ಬಾಣವು ರಾವಣನ ವಕ್ಷಃಸ್ಥಳದಲ್ಲಿ ನೆಟ್ಟಿತು.॥17॥
ಮೂಲಮ್ - 18
ಸ ವಿಸೃಷ್ಟೋ ಮಹಾವೇಗಃ ಶರೀರಾಂತಕರಃ ಪರಃ ।
ಬಿಭೇದ ಹೃದಯಂ ತಸ್ಯ ರಾವಣಸ್ಯ ದುರಾತ್ಮನಃ ॥
ಅನುವಾದ
ಶರೀರವನ್ನು ಅಂತ್ಯಗೊಳಿಸುವ ಆ ಮಹಾವೇಗಶಾಲೀ ಶ್ರೇಷ್ಠ ಬಾಣವು ದುರಾತ್ಮ ರಾವಣನ ಹೃದಯವನ್ನು ವಿವೀರ್ಣಗೊಳಿಸಿತು. ॥18॥
ಮೂಲಮ್ - 19
ರುಧಿರಾಕ್ತಃ ಸ ವೇಗೇನ ಶರೀರಾಂತಕರಃ ಪರಃ ।
ರಾವಣಸ್ಯ ಹರನ್ಪ್ರಾಣಾನ್ವಿವೇಶ ಧರಣೀತಲಮ್ ॥
ಅನುವಾದ
ಶರೀರದ ಅಂತ್ಯಗೊಳಿಸಿ ರಾವಣನ ಪ್ರಾಣಗಳನ್ನು ಹರಿಸುವ ಆ ಬಾಣವು ಅವನ ರಕ್ತದಿಂದ ತೊಯ್ದು ವೇಗವಾಗಿ ಭೂಮಿಗೆ ಬಿದ್ದಿತು.॥19॥
ಮೂಲಮ್ - 20
ಸ ಶರೋ ರಾವಣಂ ಹತ್ವಾ ರುಧಿರಾರ್ದ್ರೀಕೃತಚ್ಛವಿಃ ।
ಕೃತಕರ್ಮಾ ನಿಭೃತವತ್ ಸ ತೂಣೀಂ ಪುನರಾವಿಶತ್ ॥
ಅನುವಾದ
ಈ ಪ್ರಕಾರ ರಾವಣನನ್ನು ವಧಿಸಿ ರಕ್ತದಿಂದ ತೊಯ್ದ ಆ ಶೋಭಾಶಾಲೀ ಬಾಣವು ತನ್ನ ಕಾರ್ಯವನ್ನು ಪೂರೈಸಿ ಮತ್ತೆ ವಿನೀತ ಸೇವಕನಂತೆ ಶ್ರೀರಾಮಚಂದ್ರನ ಬತ್ತಳಿಕೆಯನ್ನು ಸೇರಿತು.॥20॥
ಮೂಲಮ್ - 21
ತಸ್ಯ ಹಸ್ತಾದ್ಧತಸ್ಯಾಶು ಕಾರ್ಮುಕಂ ತತ್ಸಸಾಯಕಮ್ ।
ನಿಪಪಾತ ಸಹ ಪ್ರಾಣೈರ್ಭ್ರಶ್ಯಮಾನಸ್ಯ ಜೀವಿತಾತ್ ॥
ಅನುವಾದ
ಶ್ರೀರಾಮನ ಬಾಣಹತಿಯಿಂದ ರಾವಣನು ಸತ್ತು ಹೋದನು. ಅವನ ಪ್ರಾಣಗಳು ಹೊರಡುತ್ತಲೇ ಕೈಯಿಂದ ಬಾಣ ಸಹಿತ ಧನುಸ್ಸು ಜಾರಿ ಕೆಳಕ್ಕೆ ಬಿತ್ತು.॥21॥
ಮೂಲಮ್ - 22
ಗತಾಸುರ್ಭೀಮವೇಗಸ್ತು ನೈರ್ಋತೇಂದ್ರೋ ಮಹಾದ್ಯುತಿಃ ।
ಪಪಾತ ಸ್ಯಂದನಾದ್ಭೂಮೌ ವೃತ್ರೋ ವಜ್ರಹತೋ ಯಥಾ ॥
ಅನುವಾದ
ಭಯಾನಕ ವೇಗಶಾಲೀ ಮಹಾತೇಜಸ್ವೀ ರಾಕ್ಷಸೇಂದ್ರನು ಪ್ರಾಣಹೀನನಾಗಿ ವಜ್ರಾಯುಧದಿಂದ ಹತನಾದ ವೃತ್ರಾಸುರನಂತೆ ರಥದಿಂದ ನೆಲಕ್ಕೆ ಕೆಡಹಿಬಿದ್ದನು.॥22॥
ಮೂಲಮ್ - 23
ತಂ ದೃಷ್ಟ್ವಾಪತಿತಂ ಭೂಮೌ ಹತಶೇಷಾ ನಿಶಾಚರಾಃ ।
ಹತನಾಥಾ ಭಯತ್ರಸ್ತಾಃ ಸರ್ವತಃ ಸಂಪ್ರದುದ್ರುವುಃ ॥
ಅನುವಾದ
ರಾವಣನು ಭೂಮಿಯ ಮೇಲೆ ಬಿದ್ದಿರುವುದನ್ನು ನೋಡಿ ಬದುಕಿ ಉಳಿದ ಸಮಸ್ತ ರಾಕ್ಷಸರು, ಒಡೆಯನು ಸತ್ತದ್ದರಿಂದ ಭಯದಿಂದ ಓಡಿ ಹೋದರು.॥23॥
ಮೂಲಮ್ - 24
ನರ್ದಂತಶ್ಚಾಭಿಪೇತುಸ್ತಾನ್ ವಾನರಾ ದ್ರುಮಯೋಧಿನಃ ।
ದಶಗ್ರೀವವಧಂ ದೃಷ್ಟ್ವಾ ವಾನರ ಜಿತಕಾಶಿನಃ ॥
ಅನುವಾದ
ದಶಾವನನ ವಧೆಯಾದುದನ್ನು ನೋಡಿ ವೃಕ್ಷಗಳಿಂದ ಯುದ್ಧ ಮಾಡುವ ವಾನರರು ವಿಜಯದಿಂದ ಸುಶೋಭಿತರಾಗಿ ಗರ್ಜಿಸುತ್ತಾ ಆ ರಾಕ್ಷಸರನ್ನು ಆಕ್ರಮಿಸಿದರು.॥24॥
ಮೂಲಮ್ - 25
ಅರ್ದಿತಾ ವಾನರೈರ್ಹೃಷ್ಟೈರ್ಲಂಕಾಮಭ್ಯಪತನ್ ಭಯಾತ್ ।
ಹತಾಶ್ರಯತ್ವಾತ್ ಕರುಣೈರ್ಬಾಷ್ಪಪ್ರಸ್ರವಣೈರ್ಮುಖೈಃ ॥
ಅನುವಾದ
ಹರ್ಷೋಲ್ಲಸಿತ ವಾನರರಿಂದ ಪೀಡಿತರಾದ ಆ ರಾಕ್ಷಸರು ಭಯದಿಂದ ಲಂಕೆಗೆ ಓಡಿಹೋದರು; ಏಕೆಂದರೆ ಅವರ ಆಶ್ರಯ ನಾಶವಾಗಿ ಹೋಗಿತ್ತು. ಅವರ ಮುಖಗಳಲ್ಲಿ ಕರುಣಾಯುಕ್ತ ಕಣ್ಣೀರಧಾರೆ ಹರಿಯುತ್ತಿತ್ತು.॥25॥
ಮೂಲಮ್ - 26
ತತೋ ವಿನೇದುಃ ಸಂಹೃಷ್ಟಾ ವಾನರಾ ಜಿತಕಾಶಿನಃ ।
ವದಂತೋ ರಾಘವ ಜಯಂ ರಾವಣಸ್ಯ ಚ ತದ್ವಧಮ್ ॥
ಅನುವಾದ
ಆಗ ವಾನರರು ವಿಜಯಲಕ್ಷ್ಮಿಯಿಂದ ಸುಶೋಭಿತರಾಗಿ ಅತ್ಯಂತ ಹರ್ಷೋತ್ಸಾಹದಿಂದ ಶ್ರೀರಾಮನ ವಿಜಯವನ್ನು ಮತ್ತು ರಾವಣನ ವಧೆಯನ್ನು ಘೋಷಿಸುತ್ತಾ ಜೋರು ಜೋರಾಗಿ ಗರ್ಜಿಸತೊಡಗಿದರು.॥26॥
ಮೂಲಮ್ - 27
ಅಥಾಂತರಿಕ್ಷೇ ವ್ಯನದತ್ ಸೌಮ್ಯಸ್ತ್ರಿದಶದುಂದುಭಿಃ ।
ದಿವ್ಯಗಂಧವಹಸ್ತತ್ರ ಮಾರುತಃ ಸುಸುಖೋ ವವೌ ॥
ಅನುವಾದ
ಆಗಲೇ ಆಕಾಶದಲ್ಲಿ ದೇವದುಂದುಭಿಗಳು ಮಧುರವಾಗಿ ಮೊಳಗಿದವು. ವಾಯುವು ದಿವ್ಯ ಸುಗಂಧವನ್ನು ಹರಡುತ್ತಾ ಮಂದ ಮಂದವಾಗ ಬೀಸತೊಡಗಿತು.॥27॥
ಮೂಲಮ್ - 28
ನಿಪಪಾತಾಂತರಿಕ್ಷಾಚ್ಚ ಪುಷ್ಪವೃಷ್ಟಿಸ್ತದಾ ಭುವಿ ।
ಕಿರಂತೀ ರಾಘವರಥಂ ದುರವಾಪಾ ಮನೋಹರಾ ॥
ಅನುವಾದ
ಅಂತರಿಕ್ಷದಿಂದ ಶ್ರೀರಘುವೀರನ ರಥದ ಮೇಲೆ ದುರ್ಲಭವಾದ ಮನೋಹರ ಹೂಮಳೆ ಸುರಿಯಿತು.॥28॥
ಮೂಲಮ್ - 29
ರಾಘವಸ್ತವ ಸಂಯುಕ್ತಾ ಗಗನೇ ಚ ವಿಶುಶ್ರುವೇ ।
ಸಾಧುಸಾಧ್ವಿತಿ ವಾಗಗ್ರ್ಯಾ ದೇವತಾನಾಂ ಮಹಾತ್ಮನಾಮ್ ॥
ಅನುವಾದ
ಶ್ರೀರಾಮನ ಸ್ತುತಿಯುಕ್ತವಾದ ಸಾಧು! ರಾಘವ! ಸಾಧು! ಎಂಬ ಮಹಾತ್ಮರಾದ ದೇವತೆಗಳ ಶ್ರೇಷ್ಠವಾದ ಮಾತುಗಳು ಅಂತರಿಕ್ಷದಿಂದ ಕೇಳಿಬಂದವು.॥29॥
ಮೂಲಮ್ - 30
ಆವಿವೇಶ ಮಹಾನ್ಹರ್ಷೋ ದೇವಾನಾಂ ಚಾರಣೈಃ ಸಹ ।
ರಾವಣೇ ನಿಹತೇ ರೌದ್ರೇ ಸರ್ವಲೋಕ ಭಯಂಕರೇ ॥
ಅನುವಾದ
ಸಮಸ್ತ ಲೋಕಗಳಿಗೆ ಭಯಪಡಿಸಿದ್ದ ರೌದ್ರ ರಾಕ್ಷಸ ರಾವಣನು ಹತನಾದಾಗ ದೇವತೆಗಳಿಗೆ, ಚಾರಣರಿಗೆ ಮಹಾ ಹರ್ಷವುಂಟಾಯಿತು.॥30॥
ಮೂಲಮ್ - 31
ತತಃ ಸಕಾಮಂ ಸುಗ್ರೀವಮಂಗದಂ ಚ ವಿಭೀಷಣಮ್ ।
ಚಕಾರ ರಾಘವಃ ಪ್ರೀತೋ ಹತ್ವಾ ರಾಕ್ಷಸಪುಂಗವಮ್ ॥
ಅನುವಾದ
ಶ್ರೀರಘುನಾಥನು ರಾವಣನನ್ನು ಕೊಂದು ಸುಗ್ರೀವ, ಅಂಗದ, ವಿಭೀಷಣಗಳಿಗೆ ಸಲ ಮನೋರಥಗೈದು ಅವನಿಗೂ ಬಹಳ ಸಂತೋಷವಾಯಿತು.॥31॥
ಮೂಲಮ್ - 32
ತತಃ ಪ್ರಜಗ್ಮುಃ ಪ್ರಶಮಂ ಮರುದ್ಗಣಾ
ದಿಶಃ ಪ್ರಸೇದುರ್ವಿಮಲಂ ನಭೋಽಭವತ್ ।
ಮಹೀ ಚಕಂಪೇ ನ ಚ ಮಾರುತೋ ವವೌ
ಸ್ಥಿರಪ್ರಭಶ್ಚಾಪ್ಯಭವದ್ದಿವಾಕರಃ ॥
ಅನುವಾದ
ಬಳಿಕ ದೇವತೆಗಳಿಗೆ ಬಹಳ ಶಾಂತಿ ದೊರೆಯಿತು, ಎಲ್ಲ ದಿಕ್ಕುಗಳು ಪ್ರಸನ್ನವಾದುವು, ಎಲ್ಲೆಡೆ ಪ್ರಕಾಶ ಹರಡಿತು, ಆಕಾಶ ನಿರ್ಮಲವಾಯಿತು. ಪೃಥಿವಿಯು ಸ್ಥಿರವಾಯಿತು. ಗಾಳಿಯು ಸ್ವಾಭಾವಿಕ ಗತಿಯಿಂದ ಬೀಸತೊಡಗಿತು. ಹಾಗೂ ಸೂರ್ಯನ ಪ್ರಭೆ ಸ್ಥಿರವಾಯಿತು.॥32॥
ಮೂಲಮ್ - 33
ತತಸ್ತು ಸುಗ್ರೀವ ವಿಭೀಷಣಾಂಗದಾಃ
ಸುಹೃದ್ವಿಶಿಷ್ಟಾ ಸಹ ಲಕ್ಷ್ಮಣಸ್ತದಾ ।
ಸಮೇತ್ಯ ಹೃಷ್ಟಾ ವಿಜಯೇನ ರಾಘವಂ
ರಣೇಽಭಿರಾಮಂ ವಿಧಿನಾಭ್ಯಪೂಜಯನ್ ॥
ಅನುವಾದ
ಸುಗ್ರೀವ, ವಿಭೀಷಣ, ಅಂಗದ ಹಾಗೂ ಲಕ್ಷ್ಮಣನು ತಮ್ಮ ಸುಹೃದರೊಂದಿಗೆ ಶ್ರೀರಾಮನ ವಿಜಯದಿಂದ ಪರಮಪ್ರಸನ್ನರಾದರು. ಬಳಿಕ ಅವರೆಲ್ಲರೂ ಸೇರಿ ನಯನಾಭಿರಾಮ ಶ್ರೀರಾಮನನ್ನು ವಿಧಿವತ್ತಾಗಿ ಪೂಜಿಸಿದರು.॥33॥
ಮೂಲಮ್ - 34
ಸ ತು ನಿಹತರಿಪುಃ ಸ್ಥಿರಪ್ರತಿಜ್ಞಃ
ಸ್ವಜನಬಲಾಭಿವೃತೋರಣೇ ಬಭೂವ ।
ರಘುಕುಲನೃಪನಂದನೋ ಮಹೌಜಾ-
ಸ್ತ್ರಿದಶಗಣೈರಭಿಸಂವೃತೋ ಮಥೇಂದ್ರಃ ॥
ಅನುವಾದ
ಶತ್ರುವನ್ನು ವಧಿಸಿ ತನ್ನ ಪ್ರತಿಜ್ಞೆಯನ್ನು ಪೂರ್ಣಗೊಳಿಸಿದ ಬಳಿಕ ಸ್ವಜನರೊಂದಿಗೆ ಸೈನ್ಯದಿಂದ ಸುತ್ತುವರೆದ ರಘುಕುಲ ರಾಜಕುಮಾರ ಶ್ರೀರಾಮನು ರಣರಂಗದಲ್ಲಿ ದೇವತೆಗಳಿಂದ ಪರಿವೃತನಾದ ಇಂದ್ರನಂತೆ ಶೋಭಿಸಿದನು.॥34॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರ ಎಂಟನೆಯ ಸರ್ಗ ಪೂರ್ಣವಾಯಿತು. ॥108॥