१०७ राम-रावणयोर्भीषणयुद्धम्

वाचनम्
ಭಾಗಸೂಚನಾ

ಶ್ರೀರಾಮ ರಾವಣರ ಘೋರ ಯುದ್ಧ

ಮೂಲಮ್ - 1

ತತಃ ಪ್ರವೃತ್ತಂ ಸುಕ್ರೂರಂ ರಾಮರಾವಣಯೋ ಸ್ತದಾ ।
ಸುಮಹದ್ದ್ವೈರಥಂ ಯುದ್ಧಂ ಸರ್ವಲೋಕ ಭಯಾವಹಮ್ ॥

ಅನುವಾದ

ಬಳಿಕ ಶ್ರೀರಾಮ ಮತ್ತು ರಾವಣರಲ್ಲಿ ಸಮಸ್ತ ಲೋಕಗಳಿಗೂ ಭಯಂಕರವಾದ ಅತ್ಯಂತ ಕ್ರೂರವಾದ ದ್ವೈರಥ ಯುದ್ಧ ಪ್ರಾರಂಭವಾಯಿತು.॥1॥

ಮೂಲಮ್ - 2

ತತೋ ರಾಕ್ಷಸಸೈನ್ಯಂ ಚ ಹರೀಣಾಂ ಚ ಮಹದ್ಭಲಮ್ ।
ಪ್ರಗೃಹೀತ ಪ್ರಹರಣಂ ನಿಶ್ಚೇಷ್ಟಂ ಸಮವರ್ತತ ॥

ಅನುವಾದ

ಆಗ ರಾಕ್ಷಸರ ಮತ್ತು ವಾನರರ ವಿಶಾಲ ಸೈನ್ಯಗಳು ಆಯುಧಗಳನ್ನು ಧರಿಸಿದರೂ ನಿಶ್ಚೇಷ್ಟಿವಾಗಿ ನಿಂತಿದ್ದವು. ಯಾರೂ ಯಾರನ್ನು ಪ್ರಹರಿಸುತ್ತಿರಲಿಲ್ಲ.॥2॥

ಮೂಲಮ್ - 3

ಸಂಪ್ರಯುದ್ಧೌ ತು ತೌ ದೃಷ್ಟ್ವಾ ಬಲವನ್ನರರಾಕ್ಷಸೌ ।
ವ್ಯಾಕ್ಷಿಪ್ತ ಹೃದಯಾಃ ಸರ್ವೇ ಪರಂ ವಿಸ್ಮಯಮಾಗತಾಃ ॥

ಅನುವಾದ

ಮಹಾಬಲಿಷ್ಠರಾದ ನರ-ರಾಕ್ಷಸ ವೀರರಿಬ್ಬರು ಯುದ್ಧಮಾಡುವುದನ್ನು ನೋಡಿ ಎಲ್ಲರ ಮನಸ್ಸು ಅವರ ಕಡೆಗೆ ಸೆಳೆಯಲ್ಪಟ್ಟ, ಆಶ್ಚರ್ಯಚಕಿತರಾದರು.॥3॥

ಮೂಲಮ್ - 4

ನಾನಾ ಪ್ರಹರಣೈರ್ವ್ಯಗ್ರೈರ್ಭುಜೈರ್ವಿಸ್ಮಿತಬುದ್ಧಯಃ ।
ತಸ್ಥುಃ ಪ್ರೇಕ್ಷ್ಯ ಚ ಸಂಗ್ರಾಮಂ ನಾಭಿ ಜಗ್ಮುಃ ಪರಸ್ಪರಮ್ ॥

ಅನುವಾದ

ಎರಡೂ ಕಡೆಯ ಸೈನಿಕರ ಕೈಗಳಲ್ಲಿ ನಾನಾ ವಿಧದ ಅಸ್ತ್ರ-ಶಸ್ತ್ರಗಳಿದ್ದರೂ, ಕೈಗಳು ಯುದ್ಧಕ್ಕಾಗಿ ವ್ಯಗ್ರವಾಗಿದ್ದರೂ, ಆ ಅದ್ಭುತ ಸಂಗ್ರಾಮನೋಡಿ ಅವರ ಬುದ್ಧಿ ಆಶ್ಚರ್ಯಚಕಿತನಾಗಿ ಸುಮ್ಮನೇ ನಿಂತಿದ್ದರು.॥4॥

ಮೂಲಮ್ - 5

ರಕ್ಷಸಾಂ ರಾವಣಂ ಚಾಪಿ ವಾನರಾಣಾಂ ಚ ರಾಘವಮ್ ।
ಪಶ್ಯತಾಂ ವಿಸ್ಮಿತಾಕ್ಷಾಣಾಂ ಸೈನ್ಯಂ ಚಿತ್ರಮಿವಾಬಭೌ ॥

ಅನುವಾದ

ರಾಕ್ಷಸರು ರಾವಣನ ಕಡೆಗೆ ನೋಡುತ್ತಿದ್ದರೆ, ವಾನರರು ಶ್ರೀರಾಮನ ಕಡೆಗೆ ನೋಡುತ್ತಿದ್ದರು. ಅವರೆಲ್ಲರ ಕಣ್ಣುಗಳು ವಿಸ್ಮಿತವಾದ್ದರಿಂದ ನಿಸ್ತಬ್ದರಾಗಿ ನಿಂತಿದ್ದರಿಂದ ಎರಡೂ ಸೈನ್ಯಗಳು ಚಿತ್ರದಂತೆ ಕಂಡುಬರುತ್ತಿದ್ದವು.॥5॥

ಮೂಲಮ್ - 6

ತೌ ತು ತತ್ರ ನಿಮಿತ್ತಾನಿ ದೃಷ್ಟ್ವಾ ರಾವಣರಾಘವೌ ।
ಕೃತಬುದ್ಧೀ ಸ್ಥಿರಾಮರ್ಷೌ ಯುಯುಧಾತೇ ಹ್ಯಭೀತವತ್ ॥

ಅನುವಾದ

ಶ್ರೀರಾಮ-ರಾವಣರು ಅಲ್ಲಿ ಪ್ರಕಟಗೊಂಡ ಶಕುನಗಳನ್ನು ನೋಡಿ, ಅವುಗಳ ಭಾವೀ ಲವನ್ನು ಯೋಚಿಸಿ ಯುದ್ಧ ವಿಷಯದ ವಿಚಾರ ಸ್ಥಿರಗೊಳಿಸಿಕೊಂಡರು. ಅವರಿಬ್ಬರೂ ಒಬ್ಬರು ಇನ್ನೊಬ್ಬರ ಕುರಿತು ಅಸಹನೆಯ ಭಾವ ದೃಢವಾದ್ದರಿಂದ ನಿರ್ಭಯವಾಗಿ ಯುದ್ಧಮಾಡುತ್ತಿದ್ದರು.॥6॥

ಮೂಲಮ್ - 7

ಜೇತವ್ಯಮಿತಿ ಕಾಕುತ್ಸ್ಥೋ ಮರ್ತವ್ಯಮಿತಿ ರಾವಣಃ ।
ಧೃತೌ ಸ್ವವೀರ್ಯ ಸರ್ವಸ್ವಂ ಯುದ್ಧೇಽದರ್ಶಯತಾಂ ತದಾ ॥

ಅನುವಾದ

ನಾನೇ ಗೆಲ್ಲುವೆ ಎಂಬ ವಿಶ್ವಾಸ ಶ್ರೀರಾಮನಲ್ಲಿ ಇದ್ದರೆ, ರಾವಣನು ನಾನು ಖಂಡಿತವಾಗಿ ಸಾಯುವೆನು ಎಂದು ನಿಶ್ಚಯಿಸಿದ್ದ. ಆದ್ದರಿಂದ ಅವರಿಬ್ಬರು ಯುದ್ಧದಲ್ಲಿ ತಮ್ಮ ತಮ್ಮ ಪೂರ್ಣಪರಾಕ್ರಮ ಪ್ರಕಟಿಸುತ್ತಿದ್ದರು.॥7॥

ಮೂಲಮ್ - 8

ತತಃ ಕ್ರೋಧಾದ್ದ ಶಗ್ರೀವಃ ಶರಾನ್ ಸಂಧಾಯ ವೀರ್ಯವಾನ್ ।
ಮುಮೋಚ ಧ್ವಜಮುದ್ದಿಶ್ಯ ರಾಘವಸ್ಯ ರಥೇ ಸ್ಥಿತಮ್ ॥

ಅನುವಾದ

ಆಗ ಪರಾಕ್ರಮಿ ದಶಾನನನು ಕ್ರೋಧದಿಂದ ಬಾಣಾನುಸಂಧಾನಮಾಡಿ ಶ್ರೀರಾಮನ ರಥದಲ್ಲಿ ಹಾರಾಡುತ್ತಿದ್ದ ಧ್ವಜವನ್ನು ಗುರಿಯಿಟ್ಟು ಹೊಡೆದನು.॥8॥

ಮೂಲಮ್ - 9

ತೇ ಶರಾಸ್ತಮನಾಸಾದ್ಯ ಪುರಂದರ ರಥಧ್ವಜಮ್ ।
ರಥಶಕ್ತಿಂ ಪರಾಮೃಶ್ಯ ನಿಪೇತುರ್ಧರಣೀತಲೇ ॥

ಅನುವಾದ

ಆದರೆ ಅವನು ಬಿಟ್ಟ ಬಾಣವು ಇಂದ್ರನ ರಥದ ಧ್ವಜದವರೆಗೆ ತಲುಪುವ ಮೊದಲೇ ಕೇವಲ ರಥಶಕ್ತಿಯನ್ನು ಸ್ಪರ್ಶಿಸುತ್ತಲೇ ನೆಲಕ್ಕೆ ಬಿದ್ದು ಹೋಯಿತು.॥9॥

ಮೂಲಮ್ - 10

ತತೋ ರಾಮೋಽಪಿ ಸಂಕ್ರುದ್ಧಶ್ಚಾಪಮಾಕೃಷ್ಯ ವೀರ್ಯವಾನ್ ।
ಕೃತಪ್ರತಿಕೃತಂ ಕರ್ತುಂ ಮನಸಾ ಸಂಪ್ರಚಕ್ರಮೇ ॥

ಅನುವಾದ

ಆಗ ಶ್ರೀರಾಮಚಂದ್ರನು ಕುಪಿತನಾಗಿ ಧನುಸ್ಸನ್ನು ಸೆಳೆದು, ರಾವಣನ ಕಾರ್ಯದ ಪ್ರತಿಕಾರಕ್ಕಾಗಿ ಅವನ ಧ್ವಜವನ್ನು ತುಂಡರಿಸಲು ವಿಚಾರ ಮಾಡಿದನು.॥10॥

ಮೂಲಮ್ - 11

ರಾವಣಧ್ವಜಮುದ್ದಿಶ್ಯ ಮುಮೋಚ ನಿಶಿತಂ ಶರಮ್ ।
ಮಹಾಸರ್ಪಮಿವಾಸಹ್ಯಂ ಜ್ವಲಂತಂ ಸ್ವೇನ ತೇಜಸಾ ॥

ಅನುವಾದ

ರಾವಣನ ಧ್ವಜವನ್ನು ಗುರಿಯಿಟ್ಟು ಅವನು ದೊಡ್ಡ ಸರ್ಪದಂತಹ ಅಸಹ್ಯವಾದ, ತನ್ನ ತೇಜದಿಂದ ಪ್ರಜ್ವಲಿತ ತೀಕ್ಷ್ಣವಾದ ಬಾಣವನ್ನು ಪ್ರಯೋಗಿಸಿದನು.॥11॥

ಮೂಲಮ್ - 12

ರಾಮಶ್ಚಿಕ್ಷೇಪ ತೇಜಸ್ವೀ ಕೇತುಮುದ್ದಿಶ್ಯ ಸಾಯಕಮ್ ।
ಜಗಾಮ ಸ ಮಹೀಂ ಛಿತ್ವಾ ದಶಗ್ರೀವಧ್ವಜಂ ಶರಃ ॥

ಅನುವಾದ

ತೇಜಸ್ವೀ ಶ್ರೀರಾಮನು ಆ ಧ್ವಜದ ಕಡೆಗೆ ಗುರಿಯಿಟ್ಟು ತನ್ನ ಸಾಯಕವನ್ನು ಪ್ರಯೋಗಿಸಿದಾಗ ರಾವಣನ ರಥದ ಧ್ವಜವು ತುಂಡಾಗಿ ಭೂಮಿಗೆ ಬಿದ್ದುಹೋಯಿತು.॥12॥

ಮೂಲಮ್ - 13

ಸ ನಿಕೃತ್ತೋಽಪತದ್ಭೂಮೌ ರಾವಣಸ್ಯಂದನ ಧ್ವಜಃ ।
ಧ್ವಜಸ್ಯೋನ್ಮಥನಂ ದೃಷ್ಟ್ವಾರಾವಣಃ ಸ ಮಹಾಬಲಃ ॥

ಮೂಲಮ್ - 14

ಸಂಪ್ರದೀಪ್ತೋಽಭವತ್ಕ್ರೋಧಾದಮರ್ಷಾತ್ ಪ್ರದಹನ್ನಿವ ।
ಸ ರೋಷವಶಮಾಪನ್ನಃ ಶರವರ್ಷಂ ವವರ್ಷ ಹ ॥

ಅನುವಾದ

ತನ್ನ ರಥದ ಧ್ವಜ ಕಡಿದು ಬಿದ್ದಿರುವುದನ್ನು ನೋಡಿದ ಮಹಾಬಲಿ ರಾವಣನು ಕ್ರೋಧದಿಂದ ಉರಿದೆದ್ದು ಅಸಹನೆಯಿಂದ ಉರಿಯುತ್ತಿರು ವಂತೆ ಕಂಡುಬಂದನು. ಅವನು ರೋಷಗೊಂಡು ಬಾಣಗಳ ಮಳೆ ಸುರಿಸತೊಡಗಿದನು.॥13-14॥

ಮೂಲಮ್ - 15½

ರಾಮಸ್ಯ ತುರಗಾನ್ದೀಪ್ತೈಃ ಶರೈರ್ವಿವ್ಯಾಧ ರಾವಣಃ ।
ತೇ ದಿವ್ಯಾ ಹರಯಸ್ತತ್ರ ನಾಸ್ಖಲನ್ನಾಪಿ ಬಭ್ರಮುಃ ॥
ಬಭೂವುಃ ಸ್ವಸ್ಥಹೃದಯಾಃ ಪದ್ಮನಾಲೈರಿವಾಹತಾಃ ।

ಅನುವಾದ

ರಾವಣನು ತನ್ನ ತೇಜಸ್ವೀ ಬಾಣಗಳಿಂದ ಶ್ರೀರಾಮನ ಕುದುರೆಗಳನ್ನು ಗಾಯಗೊಳಿಸಲು ಪ್ರಾರಂಭಿಸಿದನು. ಆದರೆ ದಿವ್ಯವಾಗಿದ್ದ ಆ ಕುದುರೆಗಳು ಎಡವದೆ, ಅಲುಗಾಡಲಿಲ್ಲ. ಕಮಲದ ನಾಳದಿಂದ ಹೊಡೆದಂತೆ ಹಿಂದಿನಂತೆ ಸ್ವಸ್ಥಚಿತ್ತರಾಗಿದ್ದವು.॥15॥

ಮೂಲಮ್ - 16

ತೇಷಾಮಸಂಭ್ರಮಂ ದೃಷ್ಟ್ವಾವಾಜಿನಾಂ ರಾವಣಸ್ತದಾ ॥

ಮೂಲಮ್ - 17

ಭೂಯ ಏವ ಸುಸಂಕ್ರುದ್ಧಃ ಶರವರ್ಷಂ ಮುಮೋಚ ಹ ।
ಗದಾಶ್ಚ ಪರಿಘಾಂಶ್ಚೈವ ಚಕ್ರಾಣಿ ಮುಸಲಾನಿ ಚ ॥

ಮೂಲಮ್ - 18

ಗಿರಿಶೃಂಗಾಣಿ ವೃಕ್ಷಾಂಶ್ಚ ತಥಾ ಶೂಲಪರಶ್ವಧಾನ್ ।
ಮಾಯಾವಿಹಿತಮೇತತ್ತು ಶಸ್ತ್ರವರ್ಷಮಪಾತಯತ್ ।
ಸಹಸ್ರಶಸ್ತದಾ ಬಾಣಾನಶ್ರಾಂತಹೃದಯೋದ್ಯಮಃ ॥

ಅನುವಾದ

ಆ ಕುದುರೆಗಳು ಗಾಬರಿಗೊಳ್ಳದಿದ್ದಾಗ ರಾವಣನ ಕ್ರೋಧ ಇಮ್ಮಡಿಸಿತು. ಅವನು ಪುನಃ ಬಾಣಗಳ ವರ್ಷೆಯನ್ನು ಗರೆಯುತ್ತಾ, ಗದೆ, ಚಕ್ರ, ಪರಿಘ, ಓನಕೆ, ಪರ್ವತ ಶಿಖರ, ವೃಕ್ಷ, ಶೂಲ, ಕೊಡಲಿ ಹಾಗೂ ಮಯನಿರ್ಮಿತ ಇತರ ಅಸ್ತ್ರಗಳ ಮಳೆಗರೆದನು. ಅವನು ಮನಸ್ಸಿನಲ್ಲಿ ಅಳುಕದೆ ಸಾವಿರಾರು ಬಾಣಗಳನ್ನು ಪ್ರಯೋಗಿಸಿದನು.॥16-18॥

ಮೂಲಮ್ - 19

ತುಮುಲಂ ತ್ರಾಸ ಜನನಂ ಭೀಮಂ ಭೀಮಪ್ರತಿಸ್ವನಮ್ ।
ತದ್ವರ್ಷಮಭವದ್ಯುದ್ಧೇ ನೈಕಶಸ್ತ್ರಮಯಂ ಮಹತ್ ॥

ಅನುವಾದ

ಯುದ್ಧರಂಗದಲ್ಲಿ ಅನೇಕ ಶಸ್ತ್ರಗಳ ಆ ದೊಡ್ಡ ವರ್ಷಾ ಭಯಾನಕ, ತುಮುಲ, ಕಷ್ಟದಾಯಕ ಮತ್ತು ಭಯಂಕರ ಕೋಲಾಹಲದಿಂದ ತುಂಬಿತ್ತು.॥19॥

ಮೂಲಮ್ - 20½

ವಿಮುಚ್ಯ ರಾಘವರಥಂ ಸಮಂತಾದ್ವಾನರೇ ಬಲೇ ।
ಸಾಯಕೈರಂತರಿಕ್ಷಂ ಚ ಚಕಾರ ಸುನಿರಂತರಮ್ ॥
ಮುಮೋಚ ಚ ದಶಗ್ರೀವೋ ನಿಃಸಂಗೇನಾಂತರಾತ್ಮನಾ ।

ಅನುವಾದ

ಆ ಶರವರ್ಷಾ ಶ್ರೀರಾಮಚಂದ್ರನ ರಥವನ್ನು ಬಿಟ್ಟು ಇತರ ಎಲ್ಲೆಡೆ ವಾನರ ಸೈನ್ಯದ ಮೇಲೆ ಬೀಳತೊಡಗಿತು. ದಶಗ್ರೀವನು ಪ್ರಾಣಗಳ ಹಂಗನ್ನು ಬಿಟ್ಟು ಬಾಣಗಳನ್ನು ಪ್ರಯೋಗಿಸುತ್ತಿದ್ದನು ಹಾಗೂ ತನ್ನ ಸಾಯಕಗಳಿಂದ ಆಕಾಶವನ್ನು ದಟ್ಟವಾಗಿ ತುಂಬಿಬಿಟ್ಟನು.॥20॥

ಮೂಲಮ್ - 21

ವ್ಯಾಯಚ್ಛಮಾನಂ ತಂ ದೃಷ್ಟ್ವಾತತ್ಪರಂ ರಾವಣಂ ರಣೇ ॥

ಮೂಲಮ್ - 22

ಪ್ರಹಸನ್ನಿವ ಕಾಕುತ್ಸ್ಥಃ ಸಂದಧೇ ನಿಶಿತಾನ್ ಶರಾನ್ ।
ಸ ಮುಮೋಚ ತತೋ ಬಾಣಾನ್ ಶಥಶೋಽಥ ಸಹಸ್ರಶಃ ॥

ಅನುವಾದ

ಅನಂತರ ಯುದ್ಧದಲ್ಲಿ ಹೆಚ್ಚು ಪರಿಶ್ರಮದಿಂದ ರಾವಣನು ಬಾಣಗಳನ್ನು ಬಿಡುವುದನ್ನು ನೋಡಿ ಶ್ರೀರಾಮನು ನಗುತ್ತಾ ತೀಕ್ಷ್ಣಬಾಣಗಳನ್ನು ಅನುಸಂಧಾನ ಮಾಡಿ, ನೂರಾರು ಸಾವಿರ ಸಂಖ್ಯೆಯಲ್ಲಿ ಬಿಟ್ಟನು.॥21-22॥

ಮೂಲಮ್ - 23½

ತಾನ್ ದೃಷ್ಟ್ವಾ ರಾವಣಶ್ಚಕ್ರೇ ಸ್ವಶರೈಃ ಖಂ ನಿರಂತರಮ್ ।
ತಾಭ್ಯಾಂ ನಿಯುಕ್ತೇನ ತದಾ ಶರವರ್ಷೇಣ ಭಾಸ್ವತಾ ॥
ಶರಬದ್ಧಮಿವಾಭಾತಿ ದ್ವಿತೀಯಂ ಭಾಸ್ವದಂಬರಮ್ ।

ಅನುವಾದ

ಆ ಬಾಣಗಳನ್ನು ನೋಡಿ ರಾವಣನು ಪುನಃ ಬಾಣಗಳನ್ನು ಸುರಿಸಿ ಆಕಾಶವನ್ನು ಎಳ್ಳುಹಾಕಲೂ ಜಾಗವಿಲ್ಲದಷ್ಟು ತುಂಬಿಬಿಟ್ಟನು. ಇಬ್ಬರೂ ಬಿಟ್ಟ ಹೊಳೆಯುವ ಬಾಣಗಳ ಮಳೆಯಿಂದ ಪ್ರಕಾಶಮಾನ ಆಕಾಶವು ತುಂಬಿ ಹೋಗಿ ಯಾವುದೋ ಇನ್ನೊಂದು ಆಕಾಶದಂತೆ ಕಂಡು ಬರುತ್ತಿತ್ತು.॥23॥

ಮೂಲಮ್ - 24

ನಾನಿಮಿತ್ತೋಽಭವದ್ಬಾಣೋ ನಾತಿಭೇತ್ತಾ ನ ನಿಷ್ಫಲಃ ॥

ಮೂಲಮ್ - 25

ಅನ್ಯೋನ್ಯಮಭಿಸಂಹತ್ಯನಿಪೇತುರ್ಧರಣೀತಲೇ ।
ತಥಾ ವಿಸೃಜತೋರ್ಬಾಣಾನ್ ರಾಮರಾವಣಯೋರ್ಮೃಧೇ ॥

ಅನುವಾದ

ಅವರು ಬಿಟ್ಟ ಯಾವುದೇ ಬಾಣವು ಗುರಿಮುಟ್ಟದೆ ಇರುತ್ತಿರಲಿಲ್ಲ. ಗುರಿಯನ್ನು ಭೇದಿಸದೆ ನಿಲ್ಲುತ್ತಿರಲಿಲ್ಲ ಹಾಗೂ ನಿಷ್ಪಲವಾಗುತ್ತಿರಲಿಲ್ಲ. ಹೀಗೆ ಯುದ್ಧದಲ್ಲಿ ಶರವರ್ಷಾಗೈಯುತ್ತಾ ಶ್ರೀರಾಮ ಮತ್ತು ರಾವಣರ ಬಾಣಗಳು ಪರಸ್ಪರ ಢಿಕ್ಕಿಹೊಡೆದಾಗ ನಾಶವಾಗಿ ಭೂಮಿಯಲ್ಲಿ ಬೀಳುತ್ತಿದ್ದವು.॥24-25॥

ಮೂಲಮ್ - 26

ಪ್ರಾಯುಧ್ಯೇತಾಮವಿಚ್ಛಿನ್ನಮಸ್ಯಂತೌ ಸವ್ಯದಕ್ಷಿಣಮ್ ।
ಚಕ್ರತುಶ್ಚ ಶರೈಘೋರೈರ್ನಿರುಚ್ಛ್ವಾಸಮಿವಾಂಬರಮ್ ॥

ಅನುವಾದ

ಅವರಿಬ್ಬರೂ ಯೋಧರು ಎಡ-ಬಲಕ್ಕೆ ಪ್ರಹರಿಸುತ್ತಾ ನಿರಂತರ ಯುದ್ಧ ದಲ್ಲಿ ತೊಡಗಿದ್ದರು. ಅವರು ತಮ್ಮ ಭಯಂಕರ ಬಾಣಗಳಿಂದ ಉಸಿರುಬಿಡುವಷ್ಟು ಜಾಗವಿಲ್ಲದಷ್ಟು ಆಕಾಶವನ್ನು ತುಂಬಿಬಿಟ್ಟರು.॥26॥

ಮೂಲಮ್ - 27

ರಾವಣಸ್ಯ ಹಯಾನ್ರಾಮೋ ಹಯಾನ್ರಾಮಸ್ಯ ರಾವಣಃ ।
ಜಘ್ನತುಸ್ತೌ ತಥಾನ್ಯೋನ್ಯಂ ಕೃತಾನುಕೃತಕಾರಿಣೌ ॥

ಅನುವಾದ

ಶ್ರೀರಾಮನು ರಾವಣನ ಕುದುರೆಗಳನ್ನು ಹಾಗೂ ರಾವಣನು ರಾಮನ ಅಶ್ವಗಳನ್ನು ಗಾಯಗೊಳಿಸಿದರು. ಅವರಿಬ್ಬರೂ ಒಬ್ಬರು ಮತ್ತೆ ಮತ್ತೊಬ್ಬರನ್ನು ಪ್ರಹಾರಮಾಡುತ್ತಾ ಪ್ರತಿಕಾರ ಮಾಡುತ್ತಾ ಪರಸ್ಪರ ಆಘಾತ ಮಾಡುತ್ತಿದ್ದರು.॥27॥

ಮೂಲಮ್ - 28

ಏವಂ ತು ತೌಸುಸಂಕ್ರುದ್ಧೌ ಚಕ್ರತುರ್ಯುದ್ಧಮುತ್ತಮಮ್ ।
ಮುಹೂರ್ತಮಭವದ್ಯುದ್ಧಂ ತುಮುಲಂ ರೋಮಹರ್ಷಣಮ್ ॥

ಅನುವಾದ

ಹೀಗೆ ಅವರಿಬ್ಬರೂ ಅತ್ಯಂತ ಕ್ರೋಧಗೊಂಡು ಉತ್ತಮ ರೀತಿಯಿಂದ ಯುದ್ಧ ಮಾಡ ತೊಡಗಿದರು. ಎರಡುಗಳಿಗೆ ಅವರಿಬ್ಬರಲ್ಲಿ ರೋಮಾಂಚಕರ ಸಂಗ್ರಾಮ ನಡೆಯಿತು.॥28॥

ಮೂಲಮ್ - 29

ತೌ ತಥಾ ಯುಧ್ಯಮಾನೌ ತು ಸಮರೇ ರಾಮರಾವಣೌ ।
ದದೃಶುಃ ಸರ್ವಭೂತಾನಿ ವಿಸ್ಮಿತೇನಾಂತರಾತ್ಮನಾ ॥

ಅನುವಾದ

ಈ ಪ್ರಕಾರ ಯುದ್ಧದಲ್ಲಿ ತೊಡಗಿದ್ದ ಶ್ರೀರಾಮ-ರಾವಣರನ್ನು ಸಮಸ್ತ ಪ್ರಾಣಿಗಳು ಚಕಿತಚಿತ್ತರಾಗಿ ಹೊಗಳತೊಡಗಿದರು.॥29॥

ಮೂಲಮ್ - 30

ಅರ್ದಯಂತೌ ತು ಸಮರೇ ತಯೋಸ್ತೌ ಸ್ಯಂದನೋತ್ತಮೌ ।
ಪರಸ್ಪರಮಭಿಕ್ರುದ್ಧೌ ಪರಸ್ಪರಮಭಿದ್ರುತೌ ॥

ಅನುವಾದ

ಆ ಇಬ್ಬರೂ ಶ್ರೇಷ್ಠರಾದ ಮಹಾರಥಿಗಳು ಸಮರದಲ್ಲಿ ಅತ್ಯಂತ ಕ್ರೋಧದಿಂದ ಒಬ್ಬರು ಮತ್ತೊಬ್ಬರನ್ನು ನೋಯಿಸುತ್ತಾ ಆಕ್ರಮಣಮಾಡುತ್ತಿದ್ದರು.॥30॥

ಮೂಲಮ್ - 31½

ಪರಸ್ಪರವಧೇ ಯುಕ್ತೌ ಘೋರರೂಪೌ ಬಭೂವತುಃ ।
ಮಂಡಲಾನಿ ಚ ವೀಥೀಶ್ಚ ಗತಪ್ರತ್ಯಾಗತಾನಿ ಚ ॥
ದರ್ಶಯಂತೌ ಬಹುವಿಧಾಂ ಸೂತೌಸಾರಥ್ಯಜಾಂ ಗತಿಮ್ ।

ಅನುವಾದ

ಒಬ್ಬರು ಮತ್ತೊಬ್ಬರ ವಧೆಯ ಪ್ರಯತ್ನದಲ್ಲಿ ತೊಡಗಿದ ಆ ವೀರರಿಬ್ಬರೂ ಭಾರೀ ಭಯಾನಕವಾಗಿ ಕಾಣುತ್ತಿದ್ದರು. ಅವರಿಬ್ಬರ ಸಾರಥಿಗಳು ಕೆಲವೊಮ್ಮೆ ರಥವನ್ನು ಸುತ್ತಾಡುತ್ತಾ, ಕೆಲವೊಮ್ಮೆ ನೇರವಾಗಿ, ಹಿಂದೆ ಮುಂದೆ ಓಡಿಸುತ್ತಿದ್ದರು. ಹೀಗೆ ಅವರಿಬ್ಬರೂ ತಮ್ಮ ರಥ ಚಾಲನೆಯ ಚತುರತೆಯನ್ನು ಪರಿಚಯಿಸಿದರು.॥31½॥

ಮೂಲಮ್ - 32½

ಅರ್ದಯನ್ ರಾವಣಂ ರಾಮೋ ರಾಘವಂ ಚಾಪಿ ರಾವಣಃ ॥
ಗತಿವೇಗಂ ಸಮಾಪನ್ನೌ ಪ್ರವರ್ತನ ನಿವರ್ತನೇ ।

ಅನುವಾದ

ಶ್ರೀರಾಮನು ರಾವಣನನ್ನು ಪೀಡಿತಗೊಳಿಸಿದರೆ, ರಾವಣನು ರಾಮನನ್ನು ನೋಯಿಸಿದನು. ಹೀಗೆ ಯುದ್ಧದಲ್ಲಿ ಪ್ರವೃತ್ತಿ-ನಿವೃತ್ತಿ ಗನುಸಾರವಾಗಿ ವೇಗವನ್ನು ಆಶ್ರಯಿಸಿದ್ದರು.॥32½॥

ಮೂಲಮ್ - 33½

ಕ್ಷಿಪತೋಃ ಶರಜಾಲಾನಿ ತಯೋಸ್ತೌ ಸ್ಯಂದನೋತ್ತಮೌ ॥
ಚೇರತುಃ ಸಂಯುಗಮಹೀಂ ಸಾಸಾರೌ ಜಲದಾವಿವ ।

ಅನುವಾದ

ಇಬ್ಬರೂ ವೀರರು ಬಾಣಗಳ ಮಳೆ ಸುರಿಸುತ್ತಿರುವಾಗ ಆ ಶ್ರೇಷ್ಠ ರಥಗಳು ನೀರನ್ನು ಸುರಿಸುವ ಎರಡು ಮೇಘಗಳಂತೆ ಯುದ್ಧಭೂಮಿಯಲ್ಲಿ ಸಂಚರಿಸುತ್ತಿದ್ದವು.॥33½॥

ಮೂಲಮ್ - 34½

ದರ್ಶಯಿತ್ವಾ ತಥಾ ತೌ ತು ಗತಿಂ ಬಹುವಿಧಾಂ ರಣೇ ॥
ಪರಸ್ಪರಸ್ಯಾಭಿಮುಖೌ ಪುನರೇವ ಚ ತಸ್ಥತುಃ ।

ಅನುವಾದ

ರಣರಂಗದಲ್ಲಿ ಆ ಎರಡೂ ರಥಗಳು ಬಗೆ ಬಗೆಯ ಗತಿಗಳನ್ನು ಪ್ರದರ್ಶಿಸಿ ಪುನಃ ಎದುರುಬದುರಾಗಿ ಬಂದು ನಿಂತವು.॥34½॥

ಮೂಲಮ್ - 35½

ಧುರಂ ಧುರೇಣ ರಥಯೋರ್ವಕ್ತ್ರಂ ವಕ್ತ್ರೇಣ ವಾಜಿನಾಮ್ ॥
ಪತಾಕಾಶ್ಚ ಪತಾಕಾಭಿಃ ಸಮೇಯುಃ ಸ್ಥಿತಯೋಸ್ತದಾ ।

ಅನುವಾದ

ಆಗ ಅಲ್ಲಿ ನಿಂತಿರುವ ಆ ಎರಡೂ ರಥಗಳ ಮೂಕಿಗಳು, ಕುದುರೆಗಳ ಮುಖಗಳು, ಪತಾಕೆಗಳು ಪರಸ್ಪರ ಸೇರಿಕೊಂಡವು.॥35½॥

ಮೂಲಮ್ - 36½

ರಾವಣಸ್ಯ ತತೋ ರಾಮೋ ಧನುರ್ಮುಕ್ತೈಃ ಶಿತೈಃ ಶರೈಃ ॥
ಚತುರ್ಭಿಶ್ಚತುರೋ ದೀಪ್ತಾನ್ ಹಯಾನ್ ಪ್ರತ್ಯಪಸರ್ಪಯತ್ ।

ಅನುವಾದ

ಅನಂತರ ಶ್ರೀರಾಮನು ತನ್ನ ಧನುಸ್ಸಿನಿಂದ ಹರಿತವಾದ ನಾಲ್ಕು ಬಾಣಗಳನ್ನು ಬಿಟ್ಟು ರಾವಣನ ನಾಲ್ಕು ತೇಜಸ್ವೀ ಕುದುರೆಗಳು ಹಿಂದೆ ಸರಿಯು ವಂತೆ ವಿವಶಗೊಳಿಸಿದನು.॥36½॥

ಮೂಲಮ್ - 37½

ಸ ಕ್ರೋಧವಶಮಾಪನ್ನೋ ಹಯಾನಾಮಪಸರ್ಪಣೇ ॥
ಮುಮೋಚ ನಿಶಿತಾನ್ಬಾಣಾನ್ ರಾಘವಾಯ ದಶಾನನಃ ।

ಅನುವಾದ

ಕುದುರೆಗಳು ಹಿಮ್ಮೆಟ್ಟಿದಾಗ ದಶಮುಖನು ಕ್ರೋಧವಶನಾಗಿ ಶ್ರೀರಾಮನ ಮೇಲೆ ತೀಕ್ಷ್ಣವಾದ ಬಾಣಗಳ ಮಳೆಗರೆಯತೊಡಗಿದನು.॥37½॥

ಮೂಲಮ್ - 38½

ಸೋಽತಿವಿದ್ಧೋ ಬಲವತಾ ದಶಗ್ರೀವೇಣ ರಾಘವಃ ॥
ಜಗಾಮ ನ ವಿಕಾರಂ ಚ ನ ಚಾಪಿ ವ್ಯಥಿತೋಽಭವತ್ ।

ಅನುವಾದ

ಬಲಿಷ್ಠ ದಶಾನನನು ರಾಮನನ್ನು ಅತ್ಯಂತ ಗಾಯಗೊಳಿಸಿ ದರೂ ಅವನ ಮುಖವು ವಿಕಾರಗೊಳ್ಳಲಿಲ್ಲ. ಮನಸ್ಸಿನಲ್ಲಿ ವ್ಯಥೆಯೂ ಉಂಟಾಗಲಲ್ಲ.॥38½॥

ಮೂಲಮ್ - 39½

ಚಿಕ್ಷೇಪ ಚ ಪುನರ್ಬಾಣಾನ್ ವಜ್ರಸಾರಸಮಸ್ವನಾನ್ ॥
ಸಾರಥಿಂ ವಜ್ರಹಸ್ತಸ್ಯ ಸಮುದ್ದಿಶ್ಯ ದಶಾನನಃ ।

ಅನುವಾದ

ಅನಂತರ ರಾವಣನು ಇಂದ್ರನ ಸಾರಥಿ ಮಾತಲಿಗೆ ಗುರಿಯಿಟ್ಟು ವಜ್ರಾಯುಧದಂತೆ ಶಬ್ದಮಾಡುವ ಬಾಣಗಳನ್ನು ಪ್ರಯೋಗಿಸಿದನು.॥39½॥

ಮೂಲಮ್ - 40½

ಮಾತಲೇಸ್ತು ಮಹಾವೇಗಾಃ ಶರೀರೇ ಪಾತಿತಾಃ ಶರಾಃ ॥
ನ ಸೂಕ್ಷ್ಮಮಪಿ ಸಂಮೋಹಂ ವ್ಯಥಾಂ ವಾ ಪ್ರದದುರ್ಯುಧಿ ।

ಅನುವಾದ

ಆ ಮಹಾವೇಗಶಾಲಿ ಬಾಣಗಳು ಮಾತಲಿಯ ಶರೀರಕ್ಕೆ ತಗುಲಿದರೂ ಅವನಿಗೆ ಕೊಂಚವೂ ಮೋಹ, ವ್ಯಥೆ ಆಗಲಿಲ್ಲ.॥40½॥

ಮೂಲಮ್ - 41½

ತಯಾ ಧರ್ಷಣಯಾ ಕ್ರುದ್ಧೋ ಮಾತಲೇರ್ನ ತಥಾಽಽತ್ಮನಃ ॥
ಚಕಾರ ಶರಜಾಲೇನ ರಾಘವೋ ವಿಮುಖಂ ರಿಪುಮ್ ।

ಅನುವಾದ

ರಾವಣನು ಮಾತಲಿಯ ಮೇಲೆ ಮಾಡಿದ ಆಕ್ರಮಮದಿಂದ ಶ್ರೀರಾಮನಿಗೆ ತನ್ನನ್ನು ಆಕ್ರಮಿಸಿದಾಗಲೂ ಬಾರದಿದ್ದ ಕ್ರೋಧವು ಉಂಟಾಗಿತ್ತು. ಅವನು ತನ್ನ ಶರಜಾಲದಿಂದ ಶತ್ರುವನ್ನು ಯುದ್ಧದಿಂದ ವಿಮುಖನಾಗಿಸಿದನು.॥41½॥

ಮೂಲಮ್ - 42½

ವಿಂಶತಿಂ ತ್ರಿಂಶತಂ ಷಷ್ಟಿಂ ಶತಶೋಽಥ ಸಹಸ್ರಶಃ ॥
ಮುಮೋಚ ರಾಘವೋ ವೀರಃ ಸಾಯಕಾನ್ಸ್ಯಂದನೇ ರಿಪೋಃ ।

ಅನುವಾದ

ವೀರ ರಘುನಾಥನು ಶತ್ರುವಿನ ರಥದ ಮೇಲೆ ಇಪ್ಪತ್ತು, ಮೂವತ್ತು, ಅರವತ್ತು, ನೂರು, ಸಾವಿರ, ಸಾವಿರ ಬಾಣಗಳ ಮಳೆಗರೆದನು.॥42½॥

ಮೂಲಮ್ - 43½

ರಾವಣೋಽಪಿ ತತಃ ಕ್ರುದ್ಧೋ ರಥಸ್ಥೋ ರಾಕ್ಷಸೇಶ್ವರಃ ॥
ಗದಾಮುಸಲವರ್ಷೇಣ ರಾಮಂ ಪ್ರತ್ಯರ್ದಯದ್ರಣೇ ।

ಅನುವಾದ

ಆಗ ರಥದಲ್ಲಿ ಕುಳಿತ ರಾಕ್ಷಸೇಶ್ವರನೂ ಕುಪಿತನಾಗಿ ಗದೆ ಮತ್ತು ಒನಕೆಗಳ ಮಳೆಯಿಂದ ಯುದ್ಧದಲ್ಲಿ ಶ್ರೀರಾಮನನ್ನು ಪೀಡಿಸತೊಡಗಿದನು.॥43½॥

ಮೂಲಮ್ - 44

ತತ್ಪ್ರವೃತ್ತಂ ಪುನರ್ಯುದ್ಧಂ ತುಮುಲಂ ರೋಮಹರ್ಷಣಮ್ ॥

ಮೂಲಮ್ - 45

ಗದಾನಾಂ ಮುಸಲಾನಾಂ ಚ ಪರಿಘಾಣಾಂ ಚ ನಿಸ್ವನೈಃ ।
ಶರಾಣಾಂ ಪುಂಖವಾತೈಶ್ಚ ಕ್ಷುಭಿತಾಃ ಸಪ್ತಸಾಗರಾಃ ॥

ಅನುವಾದ

ಹೀಗೆ ಅವರಿಬ್ಬರಲ್ಲಿ ಪುನಃ ಭಯಂಕರ, ರೋಮಾಂಚಕಾರಿ ಯುದ್ಧನಡೆಯಿತು. ಗದೆಗಳ, ಒನಕೆಗಳ, ಪರಿಘಗಳ ಶಬ್ದದಿಂದ ಹಾಗೂ ಬಾಣಗಳ ರೆಕ್ಕೆಗಳಿಂದ ಉಂಟಾದ ಗಾಳಿಯಿಂದ ಏಳು ಸಮುದ್ರಗಳೂ ವಿಕ್ಷುಬ್ಧವಾದುವು.॥44-45॥

ಮೂಲಮ್ - 46

ಕ್ಷುಬ್ಧಾನಾಂ ಸಾಗರಾಣಾಂ ಚ ಪಾತಾಲ ತಲವಾಸಿನಃ ।
ವ್ಯಥಿತಾಃ ದಾನವಾಃ ಸರ್ವೇ ಪನ್ನಗಾಶ್ಚ ಸಹಸ್ರಶಃ ॥

ಅನುವಾದ

ಆ ವಿಕ್ಷುಬ್ಧವಾದ ಸಮುದ್ರಗಳ ಪಾತಾಳದಲ್ಲಿ ವಾಸಿಸುವ ಸಮಸ್ತ ದಾನವ ಮತ್ತು ಸಾವಿರಾರು ನಾಗಗಳೂ ವ್ಯಥಿತವಾದವು.॥46॥

ಮೂಲಮ್ - 47

ಚಕಂಪೇ ಮೇದಿನೀ ಕೃತ್ಸ್ನಾಸಶೈಲವನಕಾನನಾ ।
ಭಾಸ್ಕರೋ ನಿಷ್ಪ್ರಭಶ್ಚಾಸೀನ್ನ ವವೌ ಚಾಪಿ ಮಾರುತಃ ॥

ಅನುವಾದ

ಪರ್ವತಗಳು, ವನಗಳು, ಕಾನನಗಳ ಸಹಿತ ಇಡೀ ಪೃಥಿವಿ ಕಂಪಿಸಿತು, ಸೂರ್ಯನ ಪ್ರಭೆಯು ಲುಪ್ತವಾಯಿತು, ಗಾಳಿಯ ಗತಿ ನಿಂತುಹೋಯಿತು.॥47॥

ಮೂಲಮ್ - 48

ತತೋ ದೇವಾಃ ಸಗಂಧರ್ವಾಃ ಸಿದ್ಧಾಶ್ಚ ಪರಮರ್ಷಯಃ ।
ಚಿಂತಾಮಾಪೇದಿರೇ ಸರ್ವೇ ಸಕಿನ್ನರ ಮಹೋರಗಾಃ ॥

ಅನುವಾದ

‘ಗೋ ಬ್ರಾಹ್ಮಣರ ಕಲ್ಯಾಣವಾಗಲೀ, ಪ್ರವಾಹರೂಪದಿಂದ ನಡೆದು ಬರುತ್ತಿರುವ ಲೋಕಗಳ ರಕ್ಷಣೆಯಾಗಲೀ, ಶ್ರೀರಘುನಾಥನು ಯುದ್ಧದಲ್ಲಿ ರಾವಣನ ಮೇಲೆ ವಿಜಯಪಡೆಯಲಿ’ ಎಂದು ಎಲ್ಲರೂ ಹಾರೈಸುತ್ತಿದ್ದರು.॥49॥

ಮೂಲಮ್ - 49

ಸ್ವಸ್ತಿ ಗೋಬ್ರಾಹ್ಮಣೇಭ್ಯಸ್ತು ಲೋಕಾಸ್ತಿಷ್ಠಂತು ಶಾಶ್ವತಾಃ ।
ಜಯತಾಂ ರಾಘವಃ ಸಂಖ್ಯೇ ರಾವಣಂ ರಾಕ್ಷಸೇಶ್ವರಮ್ ॥

ಅನುವಾದ

ಹೀಗೆ ಹೇಳುತ್ತಿರುವ ಋಷಿಗಳ ಸಹಿತ ಆ ದೇವತೆಗಳು ಶ್ರೀರಾಮ ಮತ್ತು ರಾವಣರ ಅತ್ಯಂತ ಭಯಂಕರ, ರೋಮಾಂಚಕರ ಯುದ್ಧವನ್ನು ನೋಡತೊಡಗಿದರು.॥50॥

ಮೂಲಮ್ - 50

ಏವಂ ಜಪಂತೋಽಪಶ್ಯಂಸ್ತೇ ದೇವಾಃ ಸರ್ಷಿಗಣಾಸ್ತದಾ ।
ರಾಮರಾವಣಯೋರ್ಯುದ್ಧಂ ಸುಘೋರಂ ರೋಮಹರ್ಷಣಮ್ ॥

ಮೂಲಮ್ - 51

ಗಂಧರ್ವಾಪ್ಸರಸಾಂ ಸಂಘಾ ದೃಷ್ಟ್ವಾಯುದ್ಧಮನೂಪಮಮ್ ।
ಗಗನಂ ಗಗನಾಕಾರಂ ಸಾಗರಃ ಸಾಗರೋಪಮಃ ॥

ಮೂಲಮ್ - 52

ರಾಮರಾವಣಯೋರ್ಯುದ್ಧಂ ರಾಮರಾವಣಯೋರಿವ ।
ಏವಂ ಬ್ರುವಂತೋ ದದೃಶುಸ್ತದ್ಯುದ್ಧಂ ರಾಮರಾವಣಮ್ ॥

ಅನುವಾದ

ಗಂಧರ್ವಾಪ್ಸರೆಯರ ಸಮುದಾಯ ಆ ಅನುಪಮ ಯುದ್ಧವನ್ನು ನೋಡಿ ಹೇಳತೊಡಗಿದರು. ಆಕಾಶದಂತೆಯೇ ಆಕಾಶ, ಸಮುದ್ರದಂತೆಯೇ ಸಮುದ್ರವಿರುವಂತೆ ರಾಮ ಮತ್ತು ರಾವಣರ ಯುದ್ಧವು ರಾಮ-ರಾವಣರ ಯುದ್ಧದಂತೆ ಇತ್ತು.* ಹೀಗೆ ಹೇಳುತ್ತಾ ಅವರೆಲ್ಲರೂ ರಾಮ-ರಾವಣರ ಯುದ್ಧ ನೋಡತೊಡಗಿದರು.॥51-52॥

ಟಿಪ್ಪನೀ
  • ‘ಗಗನಂ ಗಗನಾಕಾರಂದಿಂದ ರಾಮರಾವಣಯೋರಿವ’ ವರೆಗಿನ ಶ್ಲೋಕದಲ್ಲಿ ಅನ್ವಯಾಲಂಕಾರವಿದೆ. ಒಂದೇ ವಸ್ತು ಉಪಮಾನ ಮತ್ತು ಉಪಮೇಯ ರೂಪದಿಂದ ಹೇಳಲಾಗುತ್ತದೋ, ಬೇರೆ ಯಾವುದೇ ಉಪಮೆ ಸಿಗದಿದ್ದರೆ ಅಲ್ಲಿ ‘ಅನ್ವಯಾಲಂಕಾರ’ ಆಗುತ್ತದೆ.
ಮೂಲಮ್ - 53

ತತಃ ಕ್ರೋಧಾನ್ ಮಹಾಬಾಹೂ ರಘೂಣಾಂ ಕೀರ್ತಿವರ್ಧನಃ ।
ಸಂಧಾಯ ಧನುಷಾ ರಾಮಃ ಕ್ಷುರಮಾಶೀವಿಷೋಪಮಮ್ ॥

ಮೂಲಮ್ - 54

ರಾವಣಸ್ಯ ಶಿರೋಽಚ್ಛಿಂದಚ್ಛ್ರೀಮಜ್ಜ್ವಲಿತಕುಂಡಲಮ್ ।
ತಚ್ಛಿರಃ ಪತಿತಂ ಭೂಮೌ ದೃಷ್ಟಂ ಲೋಕೈಸ್ತ್ರಿಭಿಸ್ತದಾ ॥

ಅನುವಾದ

ಅನಂತರ ರಘುಕುಲದ ಕೀರ್ತಿ ಹೆಚ್ಚಿಸುವ ಮಹಾಬಾಹು ಶ್ರೀರಾಮಚಂದ್ರನು ಕುಪಿತನಾಗಿ ತನ್ನ ಧನುಸ್ಸಿಗೆ ಒಂದು ವಿಷಧರ ಸರ್ಪದಂತಹ ಬಾಣವನ್ನು ಅನುಸಂಧಾನ ಮಾಡಿ ಅದರಿಂದ ಹೊಳೆಯುವ ಕುಂಡಲಗಳಿಂದ ಯುಕ್ತವಾದ ರಾವಣನ ಒಂದು ಸುಂದರ ಮಸ್ತಕ ವನ್ನು ಕತ್ತರಿಸಿದನು. ಅವನ ಆ ತುಂಡಾದ ತಲೆ ಪೃಥಿವಿಯಲ್ಲಿ ಬಿದ್ದುಹೋಯಿತು ಎಂಬುದನ್ನು ಮೂರುಲೋಕಗಳ ಪ್ರಾಣಿಗಳು ನೋಡಿದವು.॥53-54॥

ಮೂಲಮ್ - 55½

ತಸ್ಯೈವ ಸದೃಶಂ ಚಾನ್ಯದ್ರಾವಣಸ್ಯೋತ್ಥಿತಂ ಶಿರಃ ।
ತತ್ಕ್ಷಿಪ್ತಂ ಕ್ಷಿಪ್ರಹಸ್ತೇನ ರಾಮೇಣ ಕ್ಷಿಪ್ರಕಾರಿಣಾ ॥
ದ್ವಿತೀಯಂ ರಾವಣ ಶಿರಶ್ಛಿನ್ನಂ ಸಂಯತಿ ಸಾಯಕೈಃ ।

ಅನುವಾದ

ಅದೇ ಜಾಗದಲ್ಲಿ ರಾವಣನ ಅಂತಹುದೇ ಹೊಸ ಶಿರಸ್ಸು ಉತ್ಪನ್ನವಾಯಿತು. ಶೀಘ್ರಹರಿ ಶ್ರೀರಾಮನು ತನ್ನ ಕೈಚಳಕದಿಂದ ತನ್ನ ಬಾಣಗಳಿಂದ ರಾವಣನ ಆ ಇನ್ನೊಂದು ತಲೆಯನ್ನು ಕಡಿದು ಹಾಕಿದನು.॥55॥

ಮೂಲಮ್ - 56½

ಛಿನ್ನಮಾತ್ರಂ ಚ ತಚ್ಛೀರ್ಷಂ ಪುನರೇವ ಪ್ರದೃಶ್ಯತೇ ॥
ತದಪ್ಯಶನಿಸಂಕಾಶೈಶ್ಚಿನ್ನಂ ರಾಮಸ್ಯ ಸಾಯಕೈಃ ।

ಅನುವಾದ

ಅದು ತುಂಡಾಗುತ್ತಲೇ ಹೊಸ ತಲೆ ಉತ್ಪನ್ನವಾಯಿತು; ಆದರೆ ಅದನ್ನು ಶ್ರೀರಾಮನು ವಜ್ರತುಲ್ಯ ಬಾಣಗಳಿಂದ ಕತ್ತರಿಸಿಬಿಟ್ಟನು.॥56॥

ಮೂಲಮ್ - 57½

ಏವಮೇವ ಶತಂ ಛಿನ್ನಂ ಶಿರಸಾಂ ತುಲ್ಯವರ್ಚಸಾಮ್ ॥
ನ ಚೈವ ರಾವಣಸ್ಯಾಂತೋ ದೃಶ್ಯತೇ ಜೀವಿತಕ್ಷಯೇ ।

ಅನುವಾದ

ಹೀಗೆ ಒಂದರಿಂದ ಒಂದು ತೇಜಸ್ಸುಳ್ಳ ನೂರು ಶಿರಗಳನ್ನು ಕತ್ತರಿಸಲಾಯಿತು. ಆದರೆ ಅದರಿಂದ ರಾವಣನ ಆಯುಸ್ಸು ಮುಗಿಯಲಿಲ್ಲ. ಅವು ಒಂದಾದ ಮೇಲೊಂದು ಚಿಗುರುತ್ತಲೇ ಇದ್ದವು.॥57॥

ಮೂಲಮ್ - 58½

ತತಃ ಸರ್ವಾಸವಿದ್ವೀರಃ ಕೌಸಲ್ಯಾನಂದವರ್ಧನಃ ॥
ಮಾರ್ಗಣೈರ್ಬಹುಭಿರ್ಯುಕ್ತಶ್ಚಿಂತಯಾಮಾಸ ರಾಘವಃ ।

ಅನುವಾದ

ಕೌಸಲ್ಯಾನಂದ ವರ್ಧನನಾದ, ಸಮಸ್ತ ಅಸ್ತ್ರಗಳನ್ನು ಬಲ್ಲ ಶ್ರೀರಾಮನು ಅನೇಕ ಪ್ರಕಾರದ ಬಾಣಗಳಿಂದ ಕೂಡಿದ್ದರೂ ಹೀಗೆ ಚಿಂತಿಸಿದನು.॥58॥

ಮೂಲಮ್ - 59

ಮಾರೀಚೋ ನಿಹತೋ ಯೈಸ್ತು ಖರೋ ಯೈಸ್ತು ಸದೂಷಣಃ ॥

ಮೂಲಮ್ - 60

ಕ್ರೌಂಚಾವಟೇ ವಿರಾಧಸ್ತು ಕಬಂಧೋ ದಂಡಕಾವನೇ ।
ಯೈಃ ಸಾಲಾ ಗಿರಯೋ ಭಗ್ನಾ ವಾಲೀ ಚ ಕ್ಷುಭಿತೋಂಽಬಧಿಃ ॥

ಮೂಲಮ್ - 61

ತ ಇಮೇ ಸಾಯಕಾಃ ಸರ್ವೇ ಯುದ್ಧೇ ಪ್ರಾತ್ಯಯಿಕಾ ಮಮ ।
ಕಿಂ ನು ತತ್ಕಾರಣಂ ಯೇನರಾವಣೇ ಮಂದತೇಜಸಃ ॥

ಅನುವಾದ

ನನ್ನ ಬಾಣಗಳು ಮಾರೀಚ-ಖರ-ದೂಷಣರನ್ನು ಜನ್ಮಸ್ಥಾನದಲ್ಲಿ ಸಂಹರಿಸಿದವು. ಕ್ರೌಂಚ ವನದಲ್ಲಿ ವಿರಾಧನನ್ನು ಸಂಹರಿಸಿದವು. ದಂಡಕಾರಣ್ಯದಲ್ಲಿ ಕಂಬಂಧನನ್ನು ಕೊಂದಿದ್ದವು, ತಾಳವೃಕ್ಷಗಳನ್ನು, ಪರ್ವತಗಳನ್ನು ವಿವೀರ್ಣಗೊಳಿಸಿ, ವಾಲಿಯ ಪ್ರಾಣಕೊಂದವು, ಸಮುದ್ರವು ಇವುಗಳಿಂದ ಕ್ಷುಬ್ಧವಾಯಿತು, ಅನೇಕ ಬಾರಿ ಸಂಗ್ರಾಮದಲ್ಲಿ ಇವುಗಳ ಅಮೋಘತೆಯನ್ನು ಪರೀಕ್ಷಿಸಿ ವಿಶ್ವಾಸ ಉಂಟಾಗಿತ್ತು. ಆ ನನ್ನ ಎಲ್ಲ ಬಾಣಗಳೇ ಇಂದು ರಾವಣನ ಮೇಲೆ ನಿಸ್ತೇಜವಾದುವಲ್ಲ! ಕುಂಠಿತವಾಗಲು ಕಾರಣವಾದರೂ ಏನಿರಬಹುದು.॥59-61॥

ಮೂಲಮ್ - 62

ಇತಿ ಚಿಂತಾಪರಶ್ಚಾಸೀದಪ್ರಮತ್ತಶ್ಚ ಸಂಯುಗೇ ।
ವವರ್ಷ ಶರವರ್ಷಾಣಿ ರಾಘವೋ ರಾವಣೋರಸಿ ॥

ಅನುವಾದ

ಹೀಗೆ ಚಿಂತಿಸುತ್ತಲೇ ಶ್ರೀರಾಮನು ಅಪ್ರಮತ್ತನಾಗಿ ರಾವಣನ ವಕ್ಷಃಸ್ಥಳದಲ್ಲಿ ಬಾಣಗಳ ಮಳೆಯನ್ನೇ ಸುರಿಸಿದನು.॥62॥

ಮೂಲಮ್ - 63

ರಾವಣೋಽಪಿ ತತಃ ಕ್ರುದ್ಧೋ ರಥಸ್ಥೋ ರಾಕ್ಷಸೇಶ್ವರಃ ।
ಗದಾಮುಸಲವರ್ಷೇಣ ರಾಮಂ ಪ್ರತ್ಯರ್ದಯದ್ರಣೇ ॥

ಅನುವಾದ

ಆಗ ರಥದಲ್ಲಿ ಕುಳಿತ ರಾವಣನೂ ಕೂಡ ಕುಪಿತನಾಗಿ ರಣರಂಗದಲ್ಲಿ ಶ್ರೀರಾಮನನ್ನು ಗದೆ ಮತ್ತು ಮುಸಲಗಳ ಮಳೆಯನ್ನು ಸುರಿಸಿ ಪೀಡಿಸಿದನು.॥63॥

ಮೂಲಮ್ - 64

ತತ್ಪ್ರವೃತ್ತಂ ಮಹದ್ಯುದ್ಧಂ ತುಮುಲಂ ರೋಮಹರ್ಷಣಮ್ ।
ಅಂತರಿಕ್ಷೇ ಚ ಭೂಮೌ ಚ ಪುನಶ್ಚ ಗಿರಿಮೂರ್ಧನಿ ॥

ಅನುವಾದ

ಆ ಮಹಾಯುದ್ಧವು ಭಯಂಕರ ರೂಪ ತಾಳಿತು. ಅದನ್ನು ನೋಡುತ್ತಲೇ ರೋಮಾಂಚನವಾಗುತ್ತಿತ್ತು. ಆ ಯುದ್ಧವು ಕೆಲವೊಮ್ಮೆ ಆಕಾಶದಲ್ಲಿ ಕೆಲವೊಮ್ಮೆ ಭೂತಳದಲ್ಲಿ ಕೆಲವೊಮ್ಮೆ ಪರ್ವತ ಶಿಖರಗಳ ಮೇಲೂ ನಡೆಯತ್ತಿತ್ತು.॥64॥

ಮೂಲಮ್ - 65

ದೇವದಾನವ ಯಕ್ಷಾಣಾಂ ಪಿಶಾಚೋರಗರಕ್ಷಸಾಮ್ ।
ಪಶ್ಯತಾಂ ತನ್ಮಹದ್ಯುದ್ಧಂ ಸರ್ವರಾತ್ರಮವರ್ತತ ॥

ಅನುವಾದ

ದೇವತೆಗಳು, ದಾನವರು, ಯಕ್ಷ, ಪಿಶಾಚ, ನಾಗ, ರಾಕ್ಷಸರು ನೋಡು ನೋಡುತ್ತಾ ಆ ಮಹಾಸಂಗ್ರಾಮ ಇಡೀ ರಾತ್ರೆ ನಡೆಯುತ್ತಲೇ ಇತ್ತು.॥65॥

ಮೂಲಮ್ - 66

ನೈವ ರಾತ್ರಿಂ ನ ದಿವಸಂ ನ ಮುಹೂರ್ತಂ ನ ಚ ಕ್ಷಣಮ್ ।
ರಾಮರಾವಣಯೋರ್ಯುದ್ಧಂ ವಿರಾಮಮುಪಗಚ್ಛತಿ ॥

ಅನುವಾದ

ಶ್ರೀರಾಮ-ರಾವಣರ ಆ ಯುದ್ಧವು ಹಗಲು-ರಾತ್ರೆ ನಿಲ್ಲುತ್ತಿರಲಿಲ್ಲ. ಎರಡು ಗಳಿಗೆ ಅಥವಾ ಒಂದು ಕ್ಷಣವೂ ವಿರಾಮವಾಗಲಿಲ್ಲ.॥66॥

ಮೂಲಮ್ - 67

ದಶರಥಸುತರಾಕ್ಷಸೇಂದ್ರಸ್ತಯೋ-
ರ್ಜಯಮನವೇಕ್ಷ್ಯ ರಣೇ ಸ ರಾಘವಸ್ಯ ।
ಸುರವರರಥಸಾರಥಿರ್ಮಹಾತ್ಮಾ
ರಣರತರಾಮಮುವಾಚ ವಾಕ್ಯಮಾಶು ॥

ಅನುವಾದ

ಒಂದು ಕಡೆ ದಶರಥಕುಮಾರ ಶ್ರೀರಾಮನಿದ್ದನು, ಇನ್ನೊಂದೆಡೆ ರಾಕ್ಷಸ ರಾವಣನಿದ್ದನು. ಅವರಿಬ್ಬರಲ್ಲಿ ಶ್ರೀರಘುನಾಥನ ವಿಜಯವಾಗದಿರುವುದನ್ನು ನೋಡಿ ದೇವರಾಜ ಸಾರಥಿ ಮಹಾತ್ಮಾ ಮಾತಲಿಯು ಯುದ್ಧಪರಾಯಣ ಶ್ರೀರಾಮನಲ್ಲಿ ಶೀಘ್ರವಾಗಿ ಹೇಳಿದನು.॥6.॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರಏಳನೆಯ ಸರ್ಗ ಪೂರ್ಣವಾಯಿತು.॥107॥