वाचनम्
ಭಾಗಸೂಚನಾ
ಶ್ರೀರಾಮನು ಮಾತಲಿಗೆ ಎಚ್ಚರವಾಗಿರುವಂತೆ ಹೇಳಿದುದು, ರಾವಣನಿಗೆ ಪರಾಜಯ ಸೂಚಕ ಮತ್ತು ಶ್ರೀರಾಮನಿಗೆ ವಿಜಯಸೂಚಕ ಶಕುನಗಳ ವರ್ಣನೆ
ಮೂಲಮ್ - 1
ಸಾರಥಿಃ ಸ ರಥಂ ಹೃಷ್ಟಃ ಪರಸೈನ್ಯ ಪ್ರಧರ್ಷಣಮ್ ।
ಗಂಧರ್ವ ನಗರಾಕಾರಂ ಸಮುಚ್ಛ್ರಿತ ಪತಾಕಿನಮ್ ॥
ಮೂಲಮ್ - 2
ಯುಕ್ತಂ ಪರಮಸಂಪನ್ನೈರ್ವಾಜಿಭಿರ್ಹೇಮಮಾಲಿಭಿಃ ।
ಯುದ್ಧೋಪಕರಣೈಃ ಪೂರ್ಣಂ ಪತಾಕಾ ಧ್ವಜಮಾಲಿನಮ್ ॥
ಮೂಲಮ್ - 3½
ಗ್ರಸಂತಮಿವ ಚಾಕಾಶಂ ನಾದಯಂತಂ ವಸುಂಧರಾಮ್ ।
ಪ್ರಣಾಶಂ ಪರಸೈನ್ಯಾನಾಂ ಸ್ವಸೈನ್ಯಸ್ಯ ಪ್ರಹರ್ಷಣಮ್ ॥
ರಾವಣಸ್ಯ ರಥಂ ಕ್ಷಿಪ್ರಂ ಚೋದಯಾಮಾಸ ಸಾರಥಿಃ ।
ಅನುವಾದ
ರಾವಣನ ಸಾರಥಿಯು ಹರ್ಷೋತ್ಸಾಹದಿಂದ ಅವನ ರಥವನ್ನು ಶೀಘ್ರವಾಗಿ ಓಡಿಸಿದನು. ಆ ರಥವು ಶತ್ರುಸೈನ್ಯ ವನ್ನು ಅತಿಕ್ರಮಿಸಲು ಸಮರ್ಥವಾಗದ್ದು, ಗಂಧರ್ವನಗರದಂತೆ ಆಶ್ಚರ್ಯಜನಕವಾಗಿ ಕಂಡುಬರುತ್ತಿತ್ತು. ಅದರಲ್ಲಿ ಎತ್ತರವಾದ ಧ್ವಜಹಾರಾಡುತ್ತಿತ್ತು. ಆ ರಥಕ್ಕೆ ಉತ್ತಮ ಗುಣಸಂಪನ್ನ, ಬಂಗಾರದ ಹಾರಗಳಿಂದ ಅಂಕರಿಸಿದ ಕುದುರೆ ಹೂಡಿದ್ದವು. ರಥದೊಳಗೆ ಯುದ್ಧಸಾಮಗ್ರಿ ತುಂಬಿತ್ತು. ಆ ರಥಕ್ಕೆ ಧ್ವಜ ಪತಾಕೆಗಳ ಮಾಲೆಯನ್ನು ತೊಡಿಸಿದ್ದರು. ಆಕಾಶವನ್ನೇ ನುಂಗಿ ಬಿಡುವಂತೆ ಅನಿಸುತ್ತಿತ್ತು. ಗರಗರ ಶಬ್ದದಿಂದ ಭೂಮಿಯನ್ನೇ ತುಂಬಿಬಿಟ್ಟಿತು. ಅದು ಶತ್ರು ಸೈನ್ಯದ ನಾಶಕ ಮತ್ತು ತನ್ನ ಸೈನ್ಯದ ಹರ್ಷವನ್ನು ಹೆಚ್ಚಿಸುವಂತಿತ್ತು.॥1-3½॥
ಮೂಲಮ್ - 4½
ತಮಾಪತಂತಂ ಸಹಸಾ ಸ್ವನವಂತಂ ಮಹಾಧ್ವಜಮ್ ॥
ರಥಂ ರಾಕ್ಷಸರಾಜಸ್ಯ ನರರಾಜೋ ದದರ್ಶಹ ।
ಅನುವಾದ
ವಿಶಾಲ ಧ್ವಜದಿಂದ ಅಲಂಕೃತವಾದ ಗರಗರ ಶಬ್ದದೊಂದಿಗೆ ಬರುತ್ತಿರುವ ರಾವಣನ ರಥವನ್ನು ನರರಾಜ ಶ್ರೀರಾಮಚಂದ್ರನು ನೋಡಿದನು.॥4½॥
ಮೂಲಮ್ - 5½
ಕೃಷ್ಣವಾಜಿಸಮಾಯುಕ್ತಂ ಯುಕ್ತಂ ರೌದ್ರೇಣ ವರ್ಚಸಾ ॥
ದೀಪ್ಯಮಾನಮಿವಾಕಾಶೇ ವಿಮಾನಂ ಸೂರ್ಯವರ್ಚಸಮ್ ।
ಅನುವಾದ
ಅದಕ್ಕೆ ಕಪ್ಪಾದ ಕುದುರೆ ಹೂಡಿದ್ದರು, ಅದರ ಕಾಂತಿ ಭಯಂಕರವಾಗಿತ್ತು. ಅದು ಆಕಾಶದಲ್ಲಿ ಪ್ರಕಾಶಿಸುವ ಸೂರ್ಯತುಲ್ಯ ತೇಜಸ್ವೀ ವಿಮಾನದಂತೆ ಕಂಡುಬರುತ್ತಿತ್ತು.॥5½॥
ಮೂಲಮ್ - 6½
ತಡಿತ್ಪತಾಕಾಗಹನಂ ದರ್ಶಿತೇಂದ್ರಾಯುಧಪ್ರಭಮ್ ॥
ಶತಧಾರಾ ವಿಮುಂಚಂತಂ ಧಾರಾಧರಮಿವಾಂಬುದಮ್ ।
ಅನುವಾದ
ಅದರಲ್ಲಿ ಹಾರಾಡುತ್ತಿದ್ದ ಪತಾಕೆಗಳು ಮಿಂಚಿನಂತೆ ಅನಿಸುತ್ತಿತ್ತು. ಅದರಲ್ಲಿ ಇದ್ದ ರಾವಣನ ಧನುಸ್ಸಿನಿಂದಾಗಿ ಇಂದ್ರಧನುಸ್ಸಿನ ಪ್ರಭೆ ಬೀರುತ್ತಿತ್ತು. ಬಾಣಗಳ ಧಾರಾಕಾರ ವೃಷ್ಟಿ ಆಗುತ್ತಿರುವುದರಿಂದ ಅದು ಜಲತುಂಬಿದ ಮೇಘದಂತೆ ಕಂಡುಬರುತ್ತಿತ್ತು.॥6½॥
ಮೂಲಮ್ - 7
ಸ ದೃಷ್ಟ್ವಾಮೇಘಸಂಕಾಶಮಾಪತಂತಂ ರಥಂ ರಿಪೋಃ ॥
ಮೂಲಮ್ - 8½
ಗಿರೇರ್ವಜ್ರಾಭಿಮೃಷ್ಟಸ್ಯ ದೀರ್ಯತಃ ಸದೃಶಸ್ವನಮ್ ।
ವಿಸ್ಫಾರಯನ್ ವೈ ವೇಗೇನ ಬಾಲಚಂದ್ರಾನತಂ ಧನುಃ ॥
ಉವಾಚ ಮಾತಲಿಂ ರಾಮಃ ಸಹಸ್ರಾಕ್ಷಸ್ಯ ಸಾರಥಿಮ್ ।
ಅನುವಾದ
ವಜ್ರಾಯುಧದ ಆಘಾತದಿಂದ ಪರ್ವತವು ಪುಡಿ ಯಾಗುವಂತ ಶಬ್ದ ಅದರ ಧ್ವನಿಯು ಕೇಳುತ್ತಿತ್ತು. ಮೇಘದಂತೆ ಕಂಡುಬರುವ ಶತ್ರುವಿನ ಆ ರಥವು ಬರುತ್ತಿರು ವುದನ್ನು ನೋಡಿ ಶ್ರೀರಾಮನು ವೇಗವಾಗಿ ತನ್ನ ಧನುಷ್ಟಂಕಾರ ಮಾಡಿದನು. ಆಗ ಅವನ ಧನುಸ್ಸು ಬಿದಿಗೆಯ ಚಂದ್ರನಂತೆ ಕಂಡುಬರುತ್ತಿತ್ತು. ಶ್ರೀರಾಮನು ಇಂದ್ರಸಾರಥಿ ಮಾತಲಿಯಲ್ಲಿ ಹೇಳಿದನು.॥7-8½॥
ಮೂಲಮ್ - 9
ಮಾತಲೇ ಪಶ್ಯ ಸಂರಬ್ಧಮಾಪತಂತಂ ರಥಂ ರಿಪೋಃ ॥
ಮೂಲಮ್ - 10
ಯಥಾಪಸವ್ಯಂ ಪತಶಾ ವೇಗೇನ ಮಹತಾ ಪುನಃ ।
ಸಮರೇ ಹಂತುಮಾತ್ಮಾನಂ ತಥಾನೇನ ಕೃತಾ ಮತಿಃ ॥
ಅನುವಾದ
ಮಾತಲಿಯೇ! ನೋಡು, ನನ್ನ ಶತ್ರು ರಾವಣನ ರಥ ವೇಗವಾಗಿ ಬರುತ್ತಿದೆ. ರಾವಣನು ಬಹಳ ವೇಗವಾಗಿ ಬಲಪಾರ್ಶ್ವದಿಂದ ನನ್ನನ್ನು ಆಕ್ರಮಿಸಲು ಬರುವುದನ್ನು ನೋಡಿದರೆ ಈ ಯುದ್ಧದಲ್ಲಿ ತಾನು ಸಾಯುವ ನಿಶ್ಚಯ ಮಾಡಿಯೇ ಬರುವಂತಿದೆ.॥9-10॥
ಮೂಲಮ್ - 11
ತದಪ್ರಮಾದಮಾತಿಷ್ಠ ಪ್ರತ್ಯುದ್ಗಚ್ಛ ರಥಂ ರಿಪೋಃ ।
ವಿಧ್ವಂಸಯಿತುಮಿಚ್ಛಾಮಿ ವಾಯುರ್ಮೇಘಮಿವೋತ್ಥಿತಮ್ ॥
ಅನುವಾದ
ಆದ್ದರಿಂದ ನೀನು ಎಚ್ಚರಿಕೆಯಿಂದ ಶತ್ರುವಿನ ರಥದ ಕಡೆಗೆ ಮುಂದರಿ. ದಟ್ಟವಾಗಿರುವ ಮೋಡಗಳನ್ನು ಗಾಳಿಯು ಚದುರಿಸಿಬಿಡುವಂತೆ ಇಂದು ನಾನು ರಥ ಸಹಿತ ಶತ್ರುವನ್ನು ಧ್ವಂಸ ಮಾಡಲು ಬಯಸ್ತಿದ್ದೇನೆ.॥11॥
ಮೂಲಮ್ - 12
ಅವಿಕ್ಲವಮ ಸಂಭ್ರಾಂತಮವ್ಯಗ್ರಹೃದಯೇಕ್ಷಣಮ್ ।
ರಶ್ಮಿಸಂಚಾರನಿಯತಂ ಪ್ರಚೋದಯ ರಥಂ ದ್ರುತಮ್ ॥
ಅನುವಾದ
ಭಯವನ್ನು, ಭ್ರಾಂತಿಯನ್ನು ಬಿಟ್ಟು, ಮನಸ್ಸು, ದೃಷ್ಟಿಯನ್ನು ಸ್ಥಿರವಾಗಿರಿಸಿ, ಕುದುರೆಗಳ ಕಡಿವಾಣವನ್ನು ನಿಯಂತ್ರಣ ದಲ್ಲಿಟ್ಟುಕೊಂಡು ರಥವನ್ನು ವೇಗವಾಗಿ ನಡೆಸು.॥12॥
ಮೂಲಮ್ - 13
ಕಾಮಂ ನ ತ್ವಂ ಸಮಾಧೇಯಃ ಪುರಂದರ ರಥೋಚಿತಃ ।
ಯುಯುತ್ಸುರಹಮೇಕಾಗ್ರಃ ಸ್ಮಾರಯೇ ತ್ವಾಂ ನ ಶಿಕ್ಷಯೇ ॥
ಅನುವಾದ
ನಿನಗೆ ದೇವೇಂದ್ರನ ರಥ ನಡೆಸುವ ಅಭ್ಯಾಸವಿದೆ, ಆದ್ದರಿದ ನಿನಗೆ ಕಲಿಸುವ ಆವಶ್ಯಕತೆ ಇಲ್ಲ. ನಾನು ಏಕಾಗ್ರಚಿತ್ತನಾಗಿ ಯುದ್ಧಮಾಡಲು ಬಯಸುತ್ತಿರುವೆನು. ನಿನಗೆ ಕಲಿಸಲು ಅಲ್ಲ, ಕೇವಲ ಜ್ಞಾಪಿಸಿದೆ ಅಷ್ಟೇ.॥13॥
ಮೂಲಮ್ - 14
ಪರಿತುಷ್ಟಃ ಸ ರಾಮಸ್ಯ ತೇನ ವಾಕ್ಯೇನ ಮಾತಲಿಃ ।
ಪ್ರಚೋದಯಾಮಾಸ ರಥಂ ಸುರಸಾರಥಿರುತ್ತಮಃ ॥
ಮೂಲಮ್ - 15
ಅಪಸವ್ಯಂತತಃ ಕುರ್ವನ್ ರಾವಣಸ್ಯ ಮಹಾರಥಮ್ ।
ಚಕ್ರಸಂಭೂತ ರಜಸಾ ರಾವಣಂ ವ್ಯವಧೂನಯತ್ ॥
ಅನುವಾದ
ಶ್ರೀರಾಮನ ಮಾತಿನಿಂದ ದೇವಸಾರಥಿ ಮಾತಲಿಗೆ ಬಹಳ ಸಂತೋಷವಾಗಿ, ಅವನು ರಾವಣನ ವಿಶಾಲರಥ ವನ್ನು ಬಲಕ್ಕೆ ಬಿಟ್ಟು ರಥವನ್ನು ಮುಂದಕ್ಕೆ ನಡೆಸಿದನು. ಅದರ ಚಕ್ರಗಳಿಂದ ಎದ್ದಿರುವ ಧೂಳನ್ನು ನೋಡಿ ರಾವಣನು ನಡುಗಿ ಹೋದನು.॥14-15॥
ಮೂಲಮ್ - 16
ತತಃ ಕ್ರುದ್ಧೋ ದಶಗ್ರೀವಸ್ತಾಮ್ರವಿಸ್ಫಾರಿತೇಕ್ಷಣಃ ।
ರಥಪ್ರತಿಮುಖಂ ರಾಮಂ ಸಾಯಕೈರವಧೂನಯತ್ ॥
ಅನುವಾದ
ಇದರಿಂದ ದಶಮುಖ ರಾವಣನು ಭಾರೀ ಕ್ರೋಧಗೊಂಡು, ಕೆಂಪಾದ ಕಣ್ಣುಗಳನ್ನು ಬಿಟ್ಟು ನೋಡುತ್ತಾ ತನ್ನ ರಥದ ಎದುರಿಗಿರುವ ಶ್ರೀರಾಮನ ಮೇಲೆ ಬಾಣಗಳ ಮಳೆ ಸುರಿಸಿದನು.॥16॥
ಮೂಲಮ್ - 17
ಧರ್ಷಣಾಮರ್ಷಿತೋ ರಾಮೋ ಧೈರ್ಯಂ ರೋಷೇಣ ಲಂಭಯನ್ ।
ಜಗ್ರಾಹ ಸುಮಹಾವೇಗಮೈಂದ್ರಂ ಯುಧಿ ಶರಾಸನಮ್ ॥
ಅನುವಾದ
ಅವನ ಈ ಆಕ್ರಮಣದಿಂದ ಶ್ರೀರಾಮನಿಗೆ ಭಾರೀ ಕ್ರೋಧವುಂಟಾಗಿ, ರೋಷಗೊಂಡು ಧೈರ್ಯಧರಿಸಿ, ಯುದ್ಧರಂಗದಲ್ಲಿ ಅವನು ಬಹಳ ವೇಗಶಾಲಿಯಾದ ಇಂದ್ರನ ಧನುಸ್ಸನ್ನು ಕೈಗೆತ್ತಿಕೊಂಡನು.॥17॥
ಮೂಲಮ್ - 18
ಶರಾಂಶ್ಚ ಸುಮಹಾವೇಗಾತ್ ಸೂರ್ಯರಶ್ಮಿ ಸಮಪ್ರಭಾನ್ ।
ತದುಪೋಢಂ ಮಹದ್ಯುದ್ಧಮನ್ಯೋನ್ಯವಧಕಾಂಕ್ಷಿಣೋಃ ।
ಪರಸ್ಪರಾಭಿಮುಖಯೋರ್ದೃಪ್ತಯೋರಿವ ಸಿಂಹಯೋಃ ॥
ಅನುವಾದ
ಜೊತೆಗೆ ಸೂರ್ಯಕಿರಣಗಳಂತೆ ಪ್ರಕಾಶಿಸುತ್ತಿದ್ದ ಮಹಾವೇಗಶಾಲಿ ಬಾಣಗಳನ್ನು ತೆಗೆದುಕೊಂಡನು. ಅನಂತರ ಒಬ್ಬರು ಮತ್ತೊಬ್ಬರ ವಧೆಯನ್ನು ಇಚ್ಛಿಸುತ್ತಾ ಶ್ರೀರಾಮ-ರಾವಣರಿಬ್ಬರಲ್ಲಿ ಭಾರೀ ಯುದ್ಧ ಪ್ರಾರಂಭವಾಯಿತು. ದರ್ಪಿತರಾದ ಎರಡು ಸಿಂಹಗಳಂತೆ ಇಬ್ಬರೂ ಎದುರುಬದುರಾಗಿ ಸಿದ್ಧರಾಗಿದ್ದರು.॥18॥
ಮೂಲಮ್ - 19
ತತೋ ದೇವಾಃ ಸಗಂಧರ್ವಾಃ ಸಿದ್ಧಾಶ್ಚ ಪರಮರ್ಷಯಃ ।
ಸಮೀಯುರ್ದ್ವೈರಥಂ ದ್ರಷ್ಟುಂ ರಾವಣಕ್ಷಯಕಾಂಕ್ಷಿಣಃ ॥
ಅನುವಾದ
ಆಗ ರಾವಣನ ವಿನಾಶವನ್ನು ಬಯಸುವ ದೇವತೆಗಳು, ಸಿದ್ಧರು, ಗಂಧರ್ವರು, ಮಹರ್ಷಿಗಳೆಲ್ಲರೂ ಅವರಿಬ್ಬರ ದ್ವೈರಥ ಯುದ್ಧವನ್ನು ನೋಡಲು ಅಲ್ಲಿ ನೆರೆದಿದ್ದರು.॥19॥
ಮೂಲಮ್ - 20
ಸಮುತ್ಪೇತುರಥೋತ್ಪಾತಾ ದಾರುಣಾ ರೋಮಹರ್ಷಣಾಃ ।
ರಾವಣಸ್ಯವಿನಾಶಾಯ ರಾಘವಸ್ಯೋದಯಾಯ ಚ ॥
ಅನುವಾದ
ಆ ಯುದ್ಧದ ಸಮಯ ರೋಮಾಂಚಕರವಾಗಿ ಕಾಣಿಸಿಕೊಂಡ ಭಯಂಕರ ಉತ್ಪಾತಗಳಿಂದ ರಾವಣನ ವಿನಾಶವು ಮತ್ತು ಶ್ರೀರಾಮಚಂದ್ರನ ಅಭ್ಯುದಯವು ಸೂಚಿತವಾಗುತ್ತಿತ್ತು.॥20॥
ಮೂಲಮ್ - 21
ವವರ್ಷ ರುಧಿರಂ ದೇವೋ ರಾವಣಸ್ಯ ರಥೋಪರಿ ।
ವಾತಾ ಮಂಡಲಿನಸ್ತೀವ್ರಾ ವ್ಯಪಸವ್ಯಂ ಪ್ರಚಕ್ರಮುಃ ॥
ಅನುವಾದ
ರಾವಣನ ರಥದ ಮೇಲೆ ಮೋಡಗಳು ರಕ್ತದ ಮಳೆ ಸುರಿಸಿದವು. ವೇಗವಾಗಿ ಸುತ್ತುತ್ತಿದ್ದ ಸುಂಟರಗಾಳಿಯು ಎಡಮುಖವಾಗಿ ಬೀಸತೊಡಗಿತು.॥21॥
ಮೂಲಮ್ - 22
ಮಹದ್ಗೃಧ್ರಕುಲಂ ಚಾಸ್ಯ ಭ್ರಮಮಾಣಂ ನಭಸ್ಥಲೇ ।
ಯೇನ ಯೇನ ರಥೋ ಯಾತಿ ತೇನ ತೇನ ಪ್ರಧಾವತಿ ॥
ಅನುವಾದ
ಆಕಾಶದಲ್ಲಿ ಹಾರಾಡುತ್ತಿದ್ದ ರಣಹದ್ದುಗಳು ರಾವಣನ ರಥವು ಹೋಗುತ್ತಿದ್ದ ಮಾರ್ಗವನ್ನೇ ಅನುಸರಿಸಿ ಹೋಗುತ್ತಿದ್ದವು.॥22॥
ಮೂಲಮ್ - 23
ಸಂಧ್ಯಯಾ ಚಾವೃತಾ ಲಂಕಾ ಜಪಾಪುಷ್ಪನಿಕಾಶಯಾ ।
ದೃಶ್ಯತೇ ಸಂಪ್ರದೀಪ್ತೇವ ದಿವಸೇಽಪಿ ವಸುಂಧರಾ ॥
ಅನುವಾದ
ಅಸಮಯದಲ್ಲಿ ಕೆಂಪು ದಾಸವಾಳದಂತೆ ಕೆಂಪಾದ ಸಂದ್ಯೆಯು ಆವರಿಸಿ, ಲಂಕೆಯು ಹಗಲಿನಲ್ಲೇ ದೀಪಗಳಿಂದ ಬೆಳಗುತ್ತಿದೆಯೋ ಎಂಬಂತೆ ಕಾಣುತ್ತಿತ್ತು.॥23॥
ಮೂಲಮ್ - 24
ಸನಿರ್ಘಾತಾ ಮಹೋಲ್ಕಾಶ್ಚ ಸಂಪ್ರಚೇರುರ್ಮಹಾಸ್ವನಾಃ ।
ವಿಷಾದಯಂಸ್ತೇ ರಕ್ಷಾಂಸಿ ರಾವಣಸ್ಯ ತದಾಹಿತಾಃ ॥
ಅನುವಾದ
ರಾವಣನ ಇದಿರ್ಗಡೆ ಸಿಡಿಲಿನಂತಹ ಶಬ್ದದೊಂದಿಗೆ ದೊಡ್ಡ ದೊಡ್ಡ ಉಲ್ಕೆಗಳು ಬೀಳತೊಡಗಿದವು. ಅದು ರಾವಣನಿಗೆ ಅಹಿತಕವಾಗಿದ್ದು, ಆ ಉತ್ಪಾತಗಳಿಂದ ರಾಕ್ಷಸರು ವಿಷಾದಗೊಂಡವು.॥24॥
ಮೂಲಮ್ - 25
ರಾವಣಶ್ಚ ಯತಸ್ತತ್ರ ಪ್ರಚಚಾಲ ವಸುಂಧರಾ ।
ರಕ್ಷಸಾಂ ಚ ಪ್ರಹರತಾಂ ಗೃಹೀತಾ ಇವ ಬಾಹವಃ ॥
ಅನುವಾದ
ರಾವಣನು ಹೋದಲೆಲ್ಲ ಭೂಮಿಯು ಕಂಪಿಸುತ್ತಿತ್ತು. ಪ್ರಹರಿಸುವ ರಾಕ್ಷಸರ ಭುಜಗಳು ಯಾರೋ ಹಿಡಿದು ಕೊಂಡಿರುವಂತೆ ನಿರ್ಬಲವಾದುವು.॥25॥
ಮೂಲಮ್ - 26
ತಾಮ್ರಾಃ ಪೀತಾಃ ಸಿತಾಃ ಶ್ವೇತಾಃ ಪತಿತಾಃ ಸೂರ್ಯರಶ್ಮಯಃ ।
ದೃಶ್ಯಂತೇ ರಾವಣಸ್ಯಾಗ್ರೇ ಪರ್ವತಸ್ಯೇವ ಧಾತವಃ ॥
ಅನುವಾದ
ರಾವಣನ ಮುಂದೆ ಬಿದ್ದ ಸೂರ್ಯಕಿರಣಗಳು ಪರ್ವತದ ಧಾತುಗಳಂತೆ ಕೆಂಪು, ಹಳದಿ, ಬಿಳುವು ಮತ್ತು ಕಪ್ಪು ಬಣ್ಣಗಳಿಂದ ಕಂಡು ಬಂದವು.॥26॥
ಮೂಲಮ್ - 27
ಗೃಧ್ರೈ ರನುಗತಾಶ್ಚಾಸ್ಯ ವಮಂತ್ಯೋಜ್ವಲನಂ ಮುಖೈಃ ।
ಪ್ರಣೇದುರ್ಮುಖಮೀಕ್ಷಂತ್ಯಃ ಸಂರಬ್ಧಮಶಿವಂ ಶಿವಾಃ ॥
ಅನುವಾದ
ರೋಷಾವೇಷಗೊಂಡ ರಾವಣನ ಮುಖ ವನ್ನೇ ನೋಡುತ್ತಾ ಹೆಣ್ಣುನರಿಗಳು ಬಾಯಿಂದ ಬೆಂಕಿಯನ್ನು ಉಗುಳುತ್ತಾ ಅಮಂಗಲ ಸೂಚಕವಾಗಿ ಕೂಗುತ್ತಿದ್ದವು. ಅವುಗಳ ಹಿಂದೆ ಹಿಂಡುಹಿಂಡಾಗಿ ರಣಹದ್ದುಗಳು ಓಡಾಡುತ್ತಿದ್ದವು.॥27॥
ಮೂಲಮ್ - 28
ಪ್ರತಿಕೂಲಂ ವವೌ ವಾಯೂ ರಣೇ ಪಾಂಸೂನ್ ಸಮುತ್ಕಿರನ್ ।
ತಸ್ಯ ರಾಕ್ಷಸರಾಜಸ್ಯ ಕುರ್ವನ್ದೃಷ್ಟಿ ವಿಲೋಪನಮ್ ॥
ಅನುವಾದ
ರಣರಂಗದಲ್ಲಿ ಬೀಸುತ್ತಿದ್ದ ಗಾಳಿಯು ಧೂಳನ್ನೆಬ್ಬಿಸಿ ರಾವಣನ ಕಣ್ಣುಗಳು ಕಾಣದಂತೆ ಮಾಡುತ್ತಾ, ಪ್ರತಿಕೂಲ ದಿಕ್ಕಿನಲ್ಲಿ ಬೀಸುತ್ತಿತ್ತು.॥28॥
ಮೂಲಮ್ - 29
ನಿಪೇತುರಿಂದ್ರಾಶನಯಃ ಸೈನ್ಯೇ ಚಾಸ್ಯ ಸಮಂತತಃ ।
ದುರ್ವಿಷಹ್ಯಸ್ವರಾ ಘೋರಾ ವಿನಾ ಜಲಧರೋದಯಮ್ ॥
ಅನುವಾದ
ರಾವಣನ ಸೈನ್ಯದ ಮೇಲೆ ಎಲ್ಲ ಕಡೆಗಳಿಂದ ಮೋಡಗಳಿಲ್ಲದೆಯೇ ದುಃಸಹ, ಕಠೋರ ಶಬ್ದದೊಂದಿಗೆ ಭಯಾನಕ ಸಿಡಿಲುಗಳು ಬೀಳತೊಡಗಿದವು.॥29॥
ಮೂಲಮ್ - 30
ದಿಶಶ್ಚ ಪ್ರದಿಶಃ ಸರ್ವಾ ಬಭೂವುಸ್ತಿಮಿರಾವೃತಾಃ ।
ಪಾಂಸುವರ್ಷೇಣ ಮಹತಾ ದುರ್ದರ್ಷಂ ಚ ನಭೋಽಭವತ್ ॥
ಅನುವಾದ
ಎಲ್ಲ ದಿಕ್ಕುಗಳಲ್ಲಿ ಅಂಧಕಾರ ಆವರಿಸಿತು. ಧೂಳು ತುಂಬಿ ಆಕಾಶವೂ ಕಾಣದಂತಾಯಿತು.॥30॥
ಮೂಲಮ್ - 31
ಕುರ್ವಂತ್ಯಃ ಕಲಹಂ ಘೋರಂ ಶಾರಿಕಾಸ್ತದ್ರಥಂ ಪ್ರತಿ ।
ನಿಪೇತುಃ ಶತಶಸ್ತತ್ರ ದಾರುಣಾ ದಾರುಣಾರುತಾಃ ॥
ಅನುವಾದ
ಭಯಾನಕವಾಗಿ ಶಬ್ದ ಮಾಡುತ್ತಾ ನೂರಾರು ದಾರುಣವಾದ ಸಾರಿಕಾಪಕ್ಷಗಳು ಆಕಾಶದಲ್ಲಿ ಪರಸ್ಪರ ಜಗಳವಾಡುತ್ತಾ ರಾವಣನ ರಥದ ಮೇಲೆ ಬೀಳುತ್ತಿದ್ದವು.॥31॥
ಮೂಲಮ್ - 32
ಜಘನೇಭ್ಯಃ ಸ್ಫುಲಿಂಗಾಶ್ಚ ನೇತ್ರೇಭ್ಯೋಽಶ್ರೂಣಿ ಸಂತತಮ್ ।
ಮುಮುಚುಸ್ತಸ್ಯ ತುರಗಾಸ್ತುಲ್ಯಮಗ್ನಿಂ ಚ ವಾರಿ ಚ ॥
ಅನುವಾದ
ರಾವಣನ ಕುದುರೆಗಳು ಸೊಂಟದಭಾಗದಿಂದ ಬೆಂಕಿಯ ಕಿಡಿಗಳನ್ನು ಉದಿರಿಸುತ್ತಾ ಕಣ್ಣೀರಗರೆಯುತ್ತಿದ್ದವು. ಹೀಗೆ ಅವು ಒಟ್ಟಿಗೆ ಬೆಂಕಿ ಮತ್ತು ನೀರನ್ನು ಸುರಿಸುತ್ತಿದ್ದವು.॥32॥
ಮೂಲಮ್ - 33
ಏವಂ ಪ್ರಕಾರಾ ಬಹವಃ ಸಮುತ್ಪಾತಾ ಭಯಾವಹಾಃ ।
ರಾವಣಸ್ಯ ವಿನಾಶಾಯ ದಾರುಣಾಃ ಸಂಪ್ರಜಜ್ಞಿರೇ ॥
ಅನುವಾದ
ಹೀಗೆ ರಾವಣನ ವಿನಾಶ ಸೂಚಕವಾದ ದಾರುಣ ಹಾಗೂ ಭಯಂಕರ ಉತ್ಪಾತಗಳು ಪ್ರಕಟವಾದುವು.॥33॥
ಮೂಲಮ್ - 34
ರಾಮಸ್ಯಾಪಿ ನಿಮಿತ್ತಾನಿ ಸೌಮ್ಯಾನಿ ಚ ಶಿವಾನಿ ಚ ।
ಬಭೂವುರ್ಜಯಶಂಸೀನಿ ಪ್ರಾದುರ್ಭೂತಾನಿ ಸರ್ವಶಃ ॥
ಅನುವಾದ
ಶ್ರೀರಾಮನ ಮುಂದೆಯೂ ಎಲ್ಲ ರೀತಿಯಿಂದ ಶುಭ, ಮಂಗಲ, ವಿಜಯಸೂಚಕ ಅನೇಕ ಶಕುನಗಳು ಪ್ರಕಟಗೊಂಡವು.॥34॥
ಮೂಲಮ್ - 35
ನಿಮಿತ್ತಾನೀಹ ಸೌಮ್ಯಾನಿ ರಾಘವಃ ಸ್ವಜಯಾಯ ವೈ ।
ದೃಷ್ಟ್ವಾ ಪರಮಸಂಹೃಷ್ಟೋ ಹತಂ ಮೇನೇ ಚ ರಾವಣಮ್ ॥
ಅನುವಾದ
ತನ್ನ ವಿಜಯಸೂಚಕವಾದ ಈ ಶುಭಶಕುನಗಳನ್ನು ನೋಡಿ ಶ್ರೀರಘುನಾಥನು ಬಹಳ ಸಂತೋಷಗೊಂಡು ರಾವಣನು ಸತ್ತನೆಂದೇ ತಿಳಿದನು.॥35॥
ಮೂಲಮ್ - 36
ತತೋ ನಿರೀಕ್ಷ್ಯಾತ್ಮಗತಾನಿ ರಾಘವೋ
ರಣೇನಿಮಿತ್ತಾನಿ ನಿಮಿತ್ತ ಕೋವಿದಃ ।
ಜಗಾಮ ಹರ್ಷಂ ಚ ಪರಾಂ ಚ ನಿರ್ವೃತಿಂ
ಚಕಾರ ಯುದ್ಧೇ ಹ್ಯಧಿಕಂ ಚ ವಿಕ್ರಮಮ್ ॥
ಅನುವಾದ
ಶಕುನ ಕೋವಿದನಾದ ಶ್ರೀರಾಮನು ರಣಭೂಮಿಯಲ್ಲಿ ತನಗೆ ಪ್ರಾಪ್ತವಾದ ಶುಭಶಕುನಗಳನ್ನು ನೋಡಿ ಬಹಳ ಹರ್ಷಗೊಂಡು, ಪರಮ ಸಂತೋಷವನ್ನು ಅನುಭವಿಸುತ್ತಾ, ಯುದ್ಧದಲ್ಲಿ ಹೆಚ್ಚಿನ ಪರಾಕ್ರಮವನ್ನು ಪ್ರಕಟಿಸಿದನು.॥36॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರಆರನೆಯ ಸರ್ಗ ಪೂರ್ಣವಾಯಿತು.॥106॥