वाचनम्
ಭಾಗಸೂಚನಾ
ಅಗಸ್ತ್ಯ ಮುನಿಗಳು ಶ್ರೀರಾಮನಿಗೆ ವಿಜಯಕ್ಕಾಗಿ ‘ಆದಿತ್ಯ ಹೃದಯ’ ಸ್ತೋತ್ರದ ಉಪದೇಶ ಮಾಡಿದುದು.
ಮೂಲಮ್ - 1
ತತೋ ಯುದ್ಧಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಮ್ ।
ರಾವಣಂ ಚಾಗ್ರತೋ ದೃಷ್ಟ್ವಾಯುದ್ಧಾಯ ಸಮುಪಸ್ಥಿತಮ್ ॥
ಮೂಲಮ್ - 2
ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ ।
ಉಪಾಗಮ್ಯಾಬ್ರವೀದ್ ರಾಮಮಗಸ್ತ್ಯೋ ಭಗವಾಂ ಸ್ತದಾ ॥
ಅನುವಾದ
ಅತ್ತ ಶ್ರೀರಾಮಚಂದ್ರನು ಯುದ್ಧದಿಂದ ಬಳಲಿ ಚಿಂತಿತನಾಗಿ ರಣಭೂಮಿಯಲ್ಲಿ ನಿಂತಿದ್ದನು. ಅಷ್ಟರಲ್ಲಿ ರಾವಣನೂ ಯುದ್ಧಕ್ಕಾಗಿ ಅವನ ಎದುರಿಗೆ ಬಂದು ನಿಂತನು. ಇದನ್ನು ನೋಡಿದ ಯುದ್ಧ ನೋಡಲು ದೇವತೆಗಳೊಂದಿಗೆ ಆಗಮಿಸಿದ್ದ ಪೂಜ್ಯರಾದ ಅಗಸ್ತ್ಯಮುನಿಗಳು ಶ್ರೀರಾಮನ ಬಳಿಗೆ ಬಂದು ಹೇಳಿದರು .॥1-2॥
ಮೂಲಮ್ - 3
ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್ ।
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸೇ ॥
ಅನುವಾದ
ಎಲ್ಲರ ಹೃದಯದಲ್ಲಿ ರಮಿಸುವ ಮಹಾಬಾಹೋ ರಾಮಾ! ಈ ಸನಾತನ ಗೋಪನಿಯ ಸ್ತೋತ್ರವನ್ನು ಕೇಳು; ವತ್ಸ! ಇದರ ಜಪದಿಂದ ನೀನು ಯುದ್ಧದಲ್ಲಿ ತನ್ನೆಲ್ಲ ಶತ್ರುಗಳನ್ನು ಜಯಿಸುವೆ.॥3॥
ಮೂಲಮ್ - 4
ಆದಿತ್ಯಹೃದಯಂ ಪುಣ್ಯಂ ಸರ್ವಶತ್ರುವಿನಾಶನಮ್ ।
ಜಯಾವಹಂ ಜಪಂನಿತ್ಯಮಕ್ಷಯ್ಯಂ ಪರಮಂ ಶಿವಮ್ ॥
ಮೂಲಮ್ - 5
ಸರ್ವಮಂಗಲಮಾಂಗಲ್ಯಂ ಸರ್ವಪಾಪ ಪ್ರಣಾಶನಮ್ ।
ಚಿಂತಾಶೋಕ ಪ್ರಶಮನಮಾಯುರ್ವರ್ಧನಮುತ್ತಮಮ್ ॥
ಅನುವಾದ
ರಹಸ್ಯವಾದ ಈ ಸ್ತೋತ್ರದ ಹೆಸರು ‘ಆದಿತ್ಯ ಹೃದಯ’ ಎಂದಾಗಿದೆ. ಇದು ಪರಮಪವಿತ್ರ ಮತ್ತು ಸಮಸ್ತ ಶತ್ರುಗಳನ್ನು ನಾಶಮಾಡುವಂತಹುದು. ಇದರ ಜಪದಿಂದ ಸದಾ ವಿಜಯ ಪ್ರಾಪ್ತಿಯಾಗುತ್ತದೆ. ಇದು ನಿತ್ಯ ಅಕ್ಷಯ ಹಾಗೂ ಪರಮ ಕಲ್ಯಾಣಮಯ ಸ್ತೋತ್ರವಾಗಿದೆ. ಸಮಸ್ತ ಮಂಗಳಗಳಿಗೂ ಮಂಗಳವಾಗಿದೆ. ಇದರಿಂದ ಎಲ್ಲ ಪಾಪಗಳು ನಾಶವಾಗುತ್ತವೆ. ಇದು ಚಿಂತೆ, ಶೋಕ ಇಲ್ಲವಾಗಿಸಿ ದೀರ್ಘಾಯುಸ್ಸನ್ನು ಕೊಡುವ ಉತ್ತಮ ಸಾಧನವಾಗಿದೆ.॥4-.॥
ಮೂಲಮ್ - 6
ರಶ್ಮಿಮಂತಂ ಸಮುದ್ಯಂತಂ ದೇವಾಸುರ ನಮಸ್ಕೃತಮ್ ।
ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಮ್ ॥
ಅನುವಾದ
ಭಗವಾನ್ ಸೂರ್ಯನು ತನ್ನ ಅನಂತ ಕಿರಣಗಳಿಂದ (ರಶ್ಮಿಮಾನ್) ಸುಶೋಭಿತನಾಗಿದ್ದಾನೆ. ಇವನು ನಿತ್ಯ ಉದಯಿಸುವವನು (ಸುಮುದ್ಯನ್) ದೇವಾಸುರರಿಂದ ನಮಸ್ಕೃತ, ವಿವಸ್ವಾನ್ ಎಂದು ಪ್ರಸಿದ್ಧ, ಪ್ರಭೆಯನ್ನು ವಿಸ್ತರಿಸುವವನು (ಭಾಸ್ಕರ), ಜಗತ್ತಿನ ಸ್ವಾಮಿ (ಭುವನೇಶ್ವರ)ಯಾಗಿರುವೆ. ನೀನು (ರಶ್ಮಿಮತೇ ನಮಃ, ಸಮುದ್ಯತೇ ನಮಃ, ದೇವಾಸುರ ನಮಸ್ಕೃತಾಯ ನಮಃ, ವಿವಸ್ವತೇ ನಮಃ, ಭಾಸ್ಕರಾಯ ನಮಃ, ಭುವನೇಶ್ವ ರಾಯ ನಮಃ) ಈ ನಾಮ ಮಂತ್ರಗಳಿಂದ ಪೂಜಿಸು.॥6॥
ಮೂಲಮ್ - 7
ಸರ್ವ ದೇವಾತ್ಮ ಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ ।
ಏಷ ದೇವಾಸುರಗಣಾನ್ ಲ್ಲೋಕಾನ್ಪಾತಿ ಗಭಸ್ತಿಭಿಃ ॥
ಅನುವಾದ
ಸಮಸ್ತ ದೇವತೆಗಳೂ ಇವನ ಸ್ವರೂಪರೇ ಆಗಿದ್ದಾರೆ. ತೇಜದ ರಾಶಿಯಾಗಿದ್ದು ಇವನು ತನ್ನ ಕಿರಣಗಳಿಂದ ಜಗತ್ತಿಗೆ ಸತ್ತೆ ಹಾಗೂ ಸ್ಫೂರ್ತಿ ನೀಡುವವನಾಗಿದ್ದಾನೆ. ಇವನೇ ತನ್ನ ರಶ್ಮಿಗಳನ್ನು ಪಸರಿಸಿ ದೇವತೆಗಳನ್ನು, ಅಸುರರ ಸಹಿತ ಸಂಪೂರ್ಣ ಲೋಕಗಳನ್ನು ಪಾಲಿಸುವನು.॥7॥
ಮೂಲಮ್ - 8
ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂದಃ ಪ್ರಜಾಪತಿಃ ।
ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂ ಪತಿಃ ॥
ಮೂಲಮ್ - 9
ಪಿತರೋ ವಸವಃ ಸಾಧ್ಯಾ ಅಶ್ವಿನೌ ಮರುತೋಮನುಃ ।
ವಾಯುರ್ವಹ್ನಿಃ ಪ್ರಜಾಃ ಪ್ರಾಣ ಋತುಕರ್ತಾ ಪ್ರಭಾಕರಃ ॥
ಅನುವಾದ
ಇವನೇ ಬ್ರಹ್ಮಾ, ವಿಷ್ಣು, ಶಿವ, ಸ್ಕಂದ, ಪ್ರಜಾಪತಿ, ಇಂದ್ರ, ಕುಬೇರ, ಕಾಲ, ಯಮ, ಚಂದ್ರ, ವರುಣ, ಪಿತೃಗಳು, ವಸು, ಸಾಧ್ಯ, ಅಶ್ವಿನೀ ಕುಮಾರರು, ಮರುದ್ಗಣ, ಮನು, ವಾಯು, ಅಗ್ನಿ, ಪ್ರಜಾ, ಪ್ರಾಣ, ಋತುಗಳನ್ನು ಪ್ರಕಟಿಸುವವನೂ ಹಾಗೂ ಪ್ರಭಾ ಪುಂಜನಾಗಿದ್ದಾನೆ.॥8-.॥
ಮೂಲಮ್ - 10
ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್ ।
ಸುವರ್ಣ ಸದೃಶೋ ಭಾನುಃರ್ಹಿರಣ್ಯರೇತಾ ದಿವಾಕರಃ ॥
ಮೂಲಮ್ - 11
ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿರ್ಮರೀಚಿಮಾನ್ ।
ತಿಮಿರೋನ್ಮಥನಃ ಶಂಭುಸ್ತ್ವಷ್ಟಾ ಮಾರ್ತಾಂಡ ಕೋಽಶುಮಾನ್ ॥
ಮೂಲಮ್ - 12
ಹಿರಣ್ಯಗರ್ಭಃ ಶಿಶಿರಸ್ತಪನೋಽಹಸ್ಕರೋ ರವಿಃ ।
ಅಗ್ನಿಗರ್ಭೋಽದಿತೇಃ ಪುತ್ರಃ ಶಂಖಃ ಶಿಶಿರನಾಶನಃ ॥
ಮೂಲಮ್ - 13
ವ್ಯೋಮನಾಥಸ್ತಮೋ ಭೇದೀ ಋಗ್ಯಜುಃ ಸಾಮಪಾರಗಃ ।
ಘನವೃಷ್ಟಿರಪಾಂ ಮಿತ್ರೋ ವಿಂಧ್ಯವೀಥೀ ಪ್ಲವಂಗಮಃ ॥
ಮೂಲಮ್ - 14
ಆತಪೀ ಮಂಡಲೀ ಮೃತ್ಯುಃ ಪಿಂಗಲಃ ಸರ್ವತಾಪನಃ
ಕವಿರ್ವಿಶ್ವೋ ಮಹಾತೇಜಾ ರಕ್ತಃ ಸರ್ವಭವೋದ್ಭವಃ ॥
ಮೂಲಮ್ - 15
ನಕ್ಷತ್ರಗ್ರಹ ತಾರಾಣಾಮಧಿಪೋ ವಿಶ್ವಭಾವನಃ ।
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್ನಮೋಽಸ್ತು ತೇ ॥
ಅನುವಾದ
ಆದಿತ್ಯ (ಆದಿತಿ ಪುತ್ರ), ಸವಿತಾ (ಜಗತ್ತನ್ನು ಸೃಷ್ಟಿಸುವವನು), ಸೂರ್ಯ (ಸರ್ವವ್ಯಾಪಕ), ಖಗ (ಆಕಾಶ ಸಂಚಾರಿ), ಪೂಷಾ (ಪೋಷಿಸುವವನು), ಗಭಸ್ತಿಮಾನ್ (ಪ್ರಕಾಶವಂತೆ) ಸುವರ್ಣಸದೃಶ, ಭಾನು (ಪ್ರಕಾಶಕ), ಹಿರಣ್ಯರೇತಾ (ಬ್ರಹ್ಮಾಂಡದ ಉತ್ಪತ್ತಿಯ ಬೀಜ), ದಿವಾಕರ (ಹಗಲಿನಲ್ಲಿ ಪ್ರಕಾಶ ಹರಡುವವನು), ಹರಿದಶ್ವ (ದಿಕ್ಕುಗಳಲ್ಲಿ ವ್ಯಾಪಕ ಹಾಗೂ ಹಸಿರು ಬಣ್ಣದ ಕುದುರೆಯುಳ್ಳವನು), ಸಹಸ್ರಾರ್ಚಿ (ಸಾವಿರಾರು ಕಿರಣಗಳಿಂದ ಶೋಭಿತ), ಸಪ್ತಸಪ್ತಿ (ಏಳು ಕುದುರೆವುಳ್ಳವನು), ಮರೀಚಿಮಾನ್ (ಕಿರಣಗಳಿಂದ ಸುಶೋಭಿತ), ತಿಮ್ಮಿರೋನ್ಮಥನ (ಅಂಧಕಾರವನ್ನು ನಾಶ ಮಾಡುವವನು), ಶಂಭು (ಕಲ್ಯಾಣದ ಉಗಮಸ್ಥಾನ), ತ್ವಷ್ಟಾ (ಭಕ್ತರ ದುಃಖವನ್ನು ದೂರಗೊಳಿಸಿ ಅಥವಾ ಜಗತ್ತಿನ ಸಂಹಾರ ಮಾಡುವವನು), ಮಾರ್ತಾಂಡಕ (ಬ್ರಹ್ಮಾಂಡಕ್ಕೆ ಜೀವ ತುಂಬುವವನು), ಅಂಶುಮಾನ್ (ಕಿರಣಗಳನ್ನು ಧರಿಸುವವನು), ಹಿರಣ್ಯಗರ್ಭ (ಬ್ರಹ್ಮಾ), ಶಿಶಿರ (ಸ್ವಾಭಾವಿಕ ಸುಖಕೋಡುವವನು), ತಪನ (ಸೆಕೆ ಉಂಟು ಮಾಡುವವನು), ಅಹಸ್ಕರ (ದಿನಕರ), ರವಿ (ಎಲ್ಲರ ಸ್ತುತಿಪಾತ್ರ), ಅಗ್ನಿಗರ್ಭ (ಅಗ್ನಿಯನ್ನು ಗರ್ಭದಲ್ಲಿ ಧರಿಸಿದವನು), ಅದಿತಿ ಪುತ್ರ, ಶಂಖ (ಆನಂದ ಸ್ವರೂಪ ಹಾಗೂ ವ್ಯಾಪಕ), ಶಿಶಿರನಾಶನ (ಶೀತವನ್ನು ನಾಶಮಾಡುವವನು), ವ್ಯೋಮನಾಥ (ಆಕಾಶದ ಸ್ವಾಮಿ), ತಮೋಭೇದಿ (ಅಂಧಕಾರವನ್ನು ನಾಶ ಮಾಡುವವನು), ಋಕ್, ಯಜುಃ, ಸಾಮವೇದಗಳಲ್ಲಿ ಪಾರಂಗತ, ಘನವೃಷ್ಟಿ (ಭಾರೀ ಮಳೆಗರೆಯು ವವನು), ಅಪಾಂಮಿತ್ರ (ನೀರನ್ನು ಉತ್ಪನ್ನ ಮಾಡುವವನು), ವಿಂದ್ಯವೀಥೀಪ್ಲವಂಗಮ (ಆಕಾಶದಲ್ಲಿ ತೀವ್ರವಾಗಿ ನಡೆಯುವವನು), ಆತಪೀ (ಬೆವರನ್ನು ಉಂಟುಮಾಡುವವನು), ಮಂಡಲೀ (ಕಿರಣಗಳನ್ನು ಧರಿಸುವವನು), ಮೃತ್ಯು (ಮೃತ್ಯುವಿನ ಕಾರಣ), ಪಿಂಗಳ (ಪಿಂಗಳ ವರ್ಣದವನು), ಸರ್ವತಾಪನ (ಎಲ್ಲರಿಗೂ ತಾಪದಾಯಕನು), ಕವಿ (ತ್ರಿಕಾಲದರ್ಶಿ), ವಿಶ್ವ (ಸರ್ವ ಸ್ವರೂಪ), ಮಹಾತೇಜಸ್ವೀ, ರಕ್ತ (ಕೆಂಪು ಬಣ್ಣವುಳ್ಳವನು), ಸರ್ವಭವೋದ್ಭವ (ಎಲ್ಲರ ಉತ್ಪತ್ತಿಗೆ ಕಾರಣನು), ನಕ್ಷತ್ರ, ಗ್ರಹ, ತಾರೆಗಳ ಒಡೆಯನು, ವಿಶ್ವಭಾವನ (ಜಗತ್ತನ್ನು ರಕ್ಷಿಸುವವನು), ತೇಜಸ್ವಿಗಳಲ್ಲಿಯೂ ಅತಿ ತೇಜಸ್ವೀ ಹಾಗೂ ದ್ವಾದಶಾತ್ಮಾ (ಹನ್ನೆರಡು ಸ್ವರೂಪಗಳಲ್ಲಿ ಅಭಿವ್ಯಕ್ತನೂ) ಇವೆಲ್ಲವೂ ಅವನ ಹೆಸರುಗಳೇ ಆಗಿವೆ.॥10-15॥
ಮೂಲಮ್ - 16
ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ ।
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ ॥
ಅನುವಾದ
ಪೂರ್ವಗಿರಿ-ಉದಯಾಚಲ ಹಾಗೂ ಪಶ್ಚಿಮಗಿರಿ-ಅಸ್ತಾಚಲ ರೂಪದಲ್ಲಿರುವವನಿಗೆ ನಮಸ್ಕಾರ. ಜೋತಿರ್ಗಣಗಳ (ಗ್ರಹ-ನಕ್ಷತ್ರ) ಸ್ವಾಮಿ ಹಾಗೂ ಹಗಲಿನ ಅಧಿಪತಿಯಾದದ ನಿನಗೆ ನಮಸ್ಕಾರವು.॥16॥
ಮೂಲಮ್ - 17
ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ ।
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ ॥
ಅನುವಾದ
ನೀನು ಜಯಸ್ವರೂಪನೂ, ವಿಜಯ ಮತ್ತು ಕಲ್ಯಾಣ ದಾತನೂ ಆಗಿರುವೆ, ನಿನ್ನ ರಥಕ್ಕೆ ಹಸಿರು ಕುದುರೆಗಳನ್ನು ಹೂಡಿದ್ದಿದೆ, ನಿನಗೆ ಪದೇ ಪದೇ ನಮಸ್ಕಾರಗಳು. ಸಹಸ್ರ ಕಿರಣಗಳಿಂದ ಸುಶೋಭಿತ ಭಗವಾನ್ ಸೂರ್ಯನೇ! ನೀನು ಅದಿತಿಯ ಪುತ್ರನಾದ್ದರಿಂದ ಆದಿತ್ಯನೆಂದು ಪ್ರಸಿದ್ಧನಾಗಿರುವೆ, ನಿನಗೆ ಪುನಃ ಪುನಃ ನಮಸ್ಕಾರಗಳು.॥17॥
ಮೂಲಮ್ - 18
ನಮ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ ।
ನಮಃ ಪದ್ಮ ಪ್ರಬೋಧಾಯ ಪ್ರಚಂಡಾಯ ನಮೋಽಸ್ತು ತೇ ॥
ಅನುವಾದ
ಉಗ್ರ (ಅಭಕ್ತರಿಗೆ ಭಯಂಕರ), ವೀರ (ಶಕ್ತಿಸಂಪನ್ನ) ಮತ್ತು ಸಾರಂಗ (ಶೀಘ್ರಗಾಮಿ) ಸೂರ್ಯದೇವನಿಗೆ ನಮಸ್ಕಾರಗಳು. ಕಮಲಗಳನ್ನು ಅರಳಿಸುವ ಪ್ರಚಂಡ ತೇಜಧಾರೀ ಮಾರ್ತಾಂಡನಿಗೆ ನಮಸ್ಕಾರ.॥18॥
ಮೂಲಮ್ - 19
ಬ್ರಹ್ಮೇಶಾನಾಚ್ಯುತೇಶಾಯ ಸೂರಾಯಾದಿತ್ಯವರ್ಚಸೇ ।
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ ॥
ಅನುವಾದ
ಬ್ರಹ್ಮಾ, ಈಶಾನ, ಅಚ್ಯುತ ಈ ತ್ರಿಮೂರ್ತಿಗಳಿಗೂ ಸ್ವಾಮಿ ಯಾಗಿ ನೀನಿರುವೆ. ಸೂರ ನಿನ್ನ ಸಂಜ್ಞೆಯಾಗಿದೆ, ಈ ಸೂರ್ಯಮಂಡಲ ನಿನ್ನನ್ನೇ ತೇಜವಾಗಿದೆ. ಸರ್ವ ಭಕ್ಷಕನಾದ ಅಗ್ನಿ ಸ್ವರೂಪನಾಗಿರುವ ನಿನಗೆ ನಮಸ್ಕಾರ. ರೌದ್ರ ರೂಪವನ್ನು ಧರಿಸುವ ನಿನಗೆ ನಮಸ್ಕಾರ.॥19॥
ಮೂಲಮ್ - 20
ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾಮಿತಾತ್ಮನೇ ।
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ ॥
ಅನುವಾದ
ನೀನು ಅಜ್ಞಾನ ಮತ್ತು ಅಂಧಕಾರದ ನಾಶಕನಾಗಿರುವೆ, ಜಡತೆ ಹಾಗೂ ಶೀತನಿವಾರಕ, ಶತ್ರುವನ್ನು ನಾಶಗೊಳಿಸುವವನೇ, ಅಪ್ರಮೇಯ ಸ್ವರೂಪ ನಿನ್ನದು. ಕೃತಘ್ನರನ್ನು ನಾಶಗೊಳಿಸುವ, ಸಮಸ್ತ ಜ್ಯೋತಿಗಳ ಸ್ವಾಮಿ ಮತ್ತು ದೇವಸ್ವರೂಪನಾದ ನಿನಗೆ ನಮಸ್ಕಾರಗಳು.॥20॥
ಮೂಲಮ್ - 21
ತಪ್ತಚಾಮೀಕರಾಭಾಯ ಹರಯೇ ವಿಶ್ವಕರ್ಮಣೇ ।
ನಮಸ್ತಮೋಽಭಿನಿಘ್ನಾಯ ರುಚಯೇ ಲೋಕಸಾಕ್ಷಿಣೇ ॥
ಅನುವಾದ
ಕಾಯಿಸಿದ ಸ್ವರ್ಣದಂತೆ ನಿನ್ನ ಪ್ರಭೆಯಾಗಿದೆ, ನೀನೇ ಹರಿ (ಅಜ್ಞಾನವನ್ನು ಹರಿಸುವ) ಮತ್ತು ವಿಶ್ವಕರ್ಮ (ಜಗತ್ತನ್ನು ಸೃಷ್ಟಿಸುವವನು) ಆಗಿರುವೆ. ತಮದ ನಾಶಕನೂ, ಪ್ರಕಾಶ ಸ್ವರೂಪನೂ, ಜಗತ್ತಿನ ಸಾಕ್ಷಿಯೂ ಆಗಿರುವ ನಿನಗೆ ನಮಸ್ಕಾರಗಳು.॥21॥
ಮೂಲಮ್ - 22
ನಾಶಯತ್ಯೇಷ ವೈ ಭೂತಂ ತಮೇವ ಸೃಜತಿ ಪ್ರಭುಃ ।
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ ॥
ಅನುವಾದ
ರಘುನಂದನ! ಭಗವಾನ್ ಸೂರ್ಯನೇ ಸಮಸ್ತ ಪ್ರಾಣಿಗಳ ಸಂಹಾರ, ಸೃಷ್ಟಿ, ಪಾಲನೆ ಮಾಡುತ್ತಾನೆ. ಇವನೇ ತನ್ನ ಕಿರಣಗಳಿಂದ ತಾನು ಮತ್ತು ವರ್ಷಾಗರೆಯುತ್ತಾನೆ.॥22॥
ಮೂಲಮ್ - 23
ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ ।
ಏಷ ಚೈವಾಗ್ನಿಹೋತ್ರಂ ಚ ಫಲಂ ಚೈವಾಗ್ನಿಹೋತ್ರಿಣಾಮ್ ॥
ಅನುವಾದ
ಇವನು ಎಲ್ಲ ಪ್ರಾಣಿಗಳಲ್ಲಿ ಅಂತರ್ಯಾಮಿ ರೂಪದಿಂದ ಸ್ಥಿತನಾಗಿ ಅವನು ಮಲಗಿದ್ದವರನ್ನು. ಎಬ್ಬಿಸುತ್ತಾನೆ. ಇವನೇ ಅಗ್ನಿಹೋತ್ರ ಹಾಗೂ ಅಗ್ನಿಹೋತ್ರೀ ಪುರುಷರಿಗೆ ಸಿಗುವ ಫಲವಾಗಿದ್ದಾನೆ.॥23॥
ಮೂಲಮ್ - 24
ದೇವಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ ।
ಯಾನಿ ಕೃತ್ಯಾನಿ ಲೋಕೇಷುರ್ವೇಷು ಪರಮಪ್ರಭುಃ ॥
ಅನುವಾದ
(ಯಜ್ಞದಲ್ಲಿ ಭಾಗ ಸ್ವೀಕರಿಸುವ) ದೇವತೆ, ಯಜ್ಞ ಮತ್ತು ಯಜ್ಞಗಳ ಫಲವೂ ಇವನೇ ಆಗಿದ್ದಾನೆ. ಸಮಸ್ತ ಲೋಕಗಳಲ್ಲಿ ನಡೆಯುವ ಎಲ್ಲ ಕ್ರಿಯೆಗಳ ಫಲ ಕೊಡಲು ಇವನೇ ಸಮರ್ಥನಾಗಿದ್ದಾನೆ.॥24॥
ಮೂಲಮ್ - 25
ಏನಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ ।
ಕೀರ್ತಯನ್ ಪುರುಷಃ ಕಶ್ಚಿನ್ನಾವಸೀದತಿ ರಾಘವ ॥
ಅನುವಾದ
ರಾಘವನೇ! ವಿಪತ್ತಿನಲ್ಲಿ, ಕಷ್ಟದಲ್ಲಿ, ದುರ್ಗಮ ಮಾರ್ಗದಲ್ಲಿ, ಯಾವುದೇ ಭಯದ ಸಂದರ್ಭದಲ್ಲಿ ಯಾರೇ ಮನುಷ್ಯನು ಈ ಸೂರ್ಯದೇವನ ಕೀರ್ತನ ಮಾಡುವನೋ, ಅವನು ದುಃಖ ಅನುಭವಿಸಲಾರನು.॥25॥
ಮೂಲಮ್ - 26
ಪೂಜಯಸ್ವೈನಮೇಕಾಗ್ರೋ ದೇವದೇವಂ ಜಗತ್ಪತಿಮ್ ।
ಏತತಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ ॥
ಅನುವಾದ
ಅದಕ್ಕಾಗಿ ನೀನು ಏಕಾಗ್ರಚಿತ್ತನಾಗಿ ಈ ದೇವಾಧಿದೇವ ಜಗದೀಶ್ವರನನ್ನು ಪೂಜಿಸು. ಈ ಆದಿತ್ಯ ಹೃದಯವನ್ನು ಈ ಮೂರು ಬಾರಿ ಜಪ ಮಾಡುವುದರಿಂದ ನೀನು ಯುದ್ಧದಲ್ಲಿ ವಿಜಯ ಪಡೆಯುವೆ.॥26॥
ಮೂಲಮ್ - 27
ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ಜಹಿಷ್ಯಸಿ ।
ಏವಮುಕ್ತ್ವಾ ತತೋಽಗಸ್ತ್ಯೋ ಜಗಾಮ ಸ ಯಥಾಗತಮ್ ॥
ಅನುವಾದ
ಮಹಾಬಾಹೋ! ನೀನು ಈಗಲೇ ರಾವಣನನ್ನು ವಧಿಸಬಲ್ಲೆ. ಹೀಗೆ ಹೇಳಿ ಅಗಸ್ತ್ಯರು ಬಂದಲ್ಲಿಗೆ ಹಿಂದಿರುಗಿದರು.॥27॥
ಮೂಲಮ್ - 28
ಏತಚ್ಛ್ರುತ್ವಾ ಮಹಾತೇಜಾ ನಷ್ಟ ಶೋಕೋಽಭವತ್ತದಾ ।
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್ ॥
ಮೂಲಮ್ - 29
ಆದಿತ್ಯಂ ಪ್ರೇಕ್ಷ್ಯ ಜಪ್ತ್ವೇದಂ ಪರಂ ಹರ್ಷಮವಾಪ್ತವಾನ್ ।
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ ॥
ಮೂಲಮ್ - 30
ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಜಯಾರ್ಥಂ ಸಮುಪಾಗಮತ್ ।
ಸರ್ವಯತ್ನೇನ ಮಹತಾ ವೃತ ತಸ್ಯ ವಧೇಽಭವತ್ ॥
ಅನುವಾದ
ಅವರ ಉಪದೇಶವನ್ನು ಕೇಳಿ ಶ್ರೀರಾಮಚಂದ್ರನ ಶೋಕ ಇಲ್ಲವಾಯಿತು. ಅವನು ಪ್ರಸನ್ನನಾಗಿ ಶುದ್ಧಚಿತ್ತದಿಂದ ಆದಿತ್ಯ ಹೃದಯವನ್ನು ಧರಿಸಿ, ಮೂರು ಬಾರಿ ಆಚಮನ ಮಾಡಿ ಜಪ ಮಾಡಿದನು. ಇದರಿಂದ ಅವನಿಗೆ ತುಂಬಾ ಹರ್ಷವಾಯಿತು. ಮತ್ತೆ ಪರಮಪರಾಕ್ರಮಿ ರಘುನಾಥನು ಧನುಸ್ಸನ್ನು ಎತ್ತಿಕೊಂಡು ರಾವಣನ ಕಡೆಗೆ ನೋಡಿದನು ಹಾಗೂ ಉತ್ಸಾಹದಿಂದ ವಿಜಯ ಪಡೆಯಲು ಮುಂದುವರಿದನು. ಸರ್ವಪ್ರಯತ್ನದಿಂದ ರಾವಣನನ್ನು ವಧಿಸಲು ನಿಶ್ಚಯಿಸಿದನು.॥28-30॥
ಮೂಲಮ್ - 31
ಅಥ ರವಿರವದನ್ನಿರೀಕ್ಷ್ಯ ರಾಮಂ
ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ ।
ನಿಶಿಚರಪತಿಸಂಕ್ಷಯಂ ವಿದಿತ್ವಾ
ಸುರಗಣಮಧ್ಯಗತೋ ವಚಸ್ತ್ವರೇತಿ ॥
ಅನುವಾದ
ಆಗ ದೇವತೆಗಳ ನಡುವೆ ನಿಂತಿದ್ದ ಭಗವಾನ್ ಸೂರ್ಯನು ಪ್ರಸನ್ನನಾಗಿ ಶ್ರೀರಾಮನ ಕಡೆಗೆ ನೋಡಿ, ನಿಶಾಚರ ರಾವಣನ ವಿನಾಶದ ಸಮಯ ಬಳಿ ಬಂದಿದೆ ಎಂದು ತಿಳಿದು ಹರ್ಷದಿಂದ-‘ರಘುನಂದನ! ಈಗ ತ್ವರೆಮಾಡು’ ಎಂದು ಹೇಳಿದನು.॥31॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರ ಐದನೆಯ ಸರ್ಗ ಪೂರ್ಣವಾಯಿತು.॥105॥