१०४ रावणस्य पुनरागमनम्

वाचनम्
ಭಾಗಸೂಚನಾ

ರಾವಣನು ಸಾರಥಿಯನ್ನು ನಿಂದಿಸಿದುದು, ಸಾರಥಿಯು ರಾವಣನನ್ನು ಸಮಾಧಾನಗೊಳಿಸಿ ರಥವನ್ನು ಪುನಃ ರಣಭೂಮಿಗೆ ಒಯ್ದುದು

ಮೂಲಮ್ - 1

ಸ ತು ಮೋಹಾತ್ ಸುಸಂಕ್ರುದ್ಧಃ ಕೃತಾಂತ ಬಲಚೋದಿತಃ ।
ಕ್ರೋಧ ಸಂರಕ್ತನಯನೋ ರಾವಣಃ ಸೂತಮಬ್ರವೀತ್ ॥

ಅನುವಾದ

ಕಾಲಶಕ್ತಿಯಿಂದ ಪ್ರೇರಿತನಾದ ರಾವಣನು ಮೋಹವಶನಾಗಿ ಅತ್ಯಂತ ಕ್ರೋಧಗೊಂಡು ಕಣ್ಣು ಕೆಂಪಗಾಗಿಸಿ ತನ್ನ ಸಾರಥಿಯಲ್ಲಿ ಹೇಳಿದನು .॥1॥

ಮೂಲಮ್ - 2

ಹೀನವೀರ್ಯಮಿವಾಶಕ್ತಂ ಪೌರುಷೇಣ ವಿವರ್ಜಿತಮ್ ।
ಭೀರುಂ ಲಘುಮಿವಾಸತ್ತ್ವಂ ವಿಹೀನಮಿವ ತೇಜಸಾ ॥

ಮೂಲಮ್ - 3

ವಿಮುಕ್ತಮಿವ ಮಾಯಾಭಿರಸ್ತ್ರೈರಿವ ಬಹಿಷ್ಕೃತಮ್ ।
ಮಾಮವಜ್ಞಾಯ ದುರ್ಬುದ್ಧೇ ಸ್ವಯಾ ಬುದ್ಧ್ಯಾವಿಚೇಷ್ಟಸೇ ॥

ಅನುವಾದ

ದುರ್ಬುದ್ಧೇ! ನೀನು ನನ್ನನ್ನು ಪರಾಕ್ರಮ ಶೂನ್ಯ, ಅಸಮರ್ಥ, ಪುರುಷಾರ್ಥ ಶೂನ್ಯ, ಹೇಡಿ, ಅಲ್ಪ, ಧೈರ್ಯಹೀನ, ನಿಸ್ತೇಜ, ಮಾಯಾರಹಿತ, ಅಸ್ತ್ರಜ್ಞಾನದಿಂದ ವಂಚಿತನೆಂದು ತಿಳಿದಿರುವೆಯಾ? ನನ್ನ ಅವಹೇಳನ ಮಾಡಿ ನೀನು ಮನಬಂದಂತೆ ಕೆಲಸ ಮಾಡುತ್ತಿರುವೆ. (ನೀನು ನನ್ನಲ್ಲಿ ಏಕೆ ಕೇಳಲಿಲ್ಲ.॥2-.॥

ಮೂಲಮ್ - 4

ಕಿಮರ್ಥಂ ಮಾಮವಜ್ಞಾಯ ಮಚ್ಛಂದಮನವೇಕ್ಷ್ಯ ಚ ।
ತ್ವಯಾ ಶತ್ರುಸಮಕ್ಷಂ ಮೇ ರಥೋಽಯಮಪವಾಹಿತಃ ॥

ಅನುವಾದ

ನನ್ನ ಅಭಿಪ್ರಾಯವನ್ನು ತಿಳಿಯದೆಯೇ ನನ್ನ ಅಪಮಾನ ಮಾಡಿ, ನೀನು ಶತ್ರುವಿನ ಮುಂದಿನಿಂದ ನನ್ನ ರಥವನ್ನು ಏಕೆ ಹಿಂದಿರುಗಿಸಿದೆ.॥4॥

ಮೂಲಮ್ - 5

ತ್ವಯಾದ್ಯ ಹಿ ಮಮಾನಾರ್ಯ ಚಿರಕಾಲ ಸಮಾರ್ಜಿತಮ್ ।
ಯಶೋ ವೀರ್ಯಂ ಚ ತೇಜಶ್ಚ ಪ್ರತ್ಯಯಶ್ಚ ವಿನಾಶಿತಃ ॥

ಅನುವಾದ

ಅನಾರ್ಯನೇ! ಇಂದು ನೀನು ನಾನು ಚಿರಕಾಲದಿಂದ ಗಳಿಸಿದ ಯಶ, ಪರಾಕ್ರಮ, ತೇಜ ಮತ್ತು ವಿಶ್ವಾಸದ ಮೇಲೆ, ನೀರೆದೆಯಲ್ಲ.॥5॥

ಮೂಲಮ್ - 6

ಶತ್ರೋಃ ಪ್ರಖ್ಯಾತವೀರ್ಯಸ್ಯ ರಂಜನೀಯಸ್ಯ ವಿಕ್ರಮೈಃ ।
ಪಶ್ಯತೋ ಯುದ್ಧಲುಬ್ಧೋಽಹಂ ಕೃತಃ ಕಾಪುರುಷಸ್ತ್ವಯಾ ॥

ಅನುವಾದ

ನನ್ನ ಶತ್ರುವಿನ ಬಲ-ಪರಾಕ್ರಮ ವಿಖ್ಯಾತನಾಗಿದೆ. ಅವನನ್ನು ತನ್ನ ಬಲ ವಿಕ್ರಮದಿಂದ ಸಂತುಷ್ಟಗೊಳಿಸುವುದು ನನಗೆ ಉಚಿತವಾಗಿದೆ. ನಾನು ಯುದ್ಧಲೋಭಿಯಾಗಿದ್ದೇನೆ. ಹೀಗಿದ್ದರೂ ನೀನು ರಥವನ್ನು ಹಿಂದಿರುಗಿಸಿ ಶತ್ರುವಿನ ದೃಷ್ಟಿಯಲ್ಲಿ ನನ್ನನ್ನು ಹೇಡಿಯನ್ನಾಗಿಸಿದೆ.॥6॥

ಮೂಲಮ್ - 7

ಯತ್ತ್ವಂ ರಥಮಿಮಂ ಮೋಹಾನ್ನ ಚೇದ್ವಹಸಿ ದುರ್ಮತೇ ।
ಸತ್ಯೋಽಯಂ ಪ್ರತಿತರ್ಕೋ ಮೇ ಪರೇಣ ತ್ವಮುಪಸ್ಕೃತಃ ॥

ಅನುವಾದ

ದುರ್ಮತಿಯೇ! ಈ ರಥವನ್ನು ಹೇಗಾದರೂ ನೀನು ಶತ್ರುವಿನ ಎದುರಿಗೆ ಕೊಂಡುಹೋಗದಿದ್ದರೆ, ಶತ್ರುವಿನಿಂದ ನೀನು ಲಂಚ ಪಡೆದು ಮೋಹವಶನಾಗಿ ಈ ಕಾರ್ಯಮಾಡಿರುವೆ ಎಂಬ ನನ್ನ ಊಹೆ ಸತ್ಯವಾದುದು.॥7॥

ಮೂಲಮ್ - 8

ನ ಹಿ ತದ್ವಿದ್ಯತೇ ಕರ್ಮ ಸುಹೃದೋಹಿತಕಾಂಕ್ಷಿಣಃ ।
ರಿಪೂಣಾಂ ಸದೃಶಂ ತ್ವೇತದ್ ಯತ್ ತ್ವಯೈತದನುಷ್ಠಿತಮ್ ॥

ಅನುವಾದ

ನೀನು ಮಾಡಿದ ಕಾರ್ಯವು ಹಿತವನ್ನು ಬಯಸುವ ಮಿತ್ರನ ಕಾರ್ಯವಲ್ಲ. ಶತ್ರುಗಳು ಮಾಡಲು ಯೋಗವಾಗಿದೆ.॥8॥

ಮೂಲಮ್ - 9

ನಿವರ್ತಯ ರಥಂ ಶೀಘ್ರಂ ಯಾವನ್ನಾಪೈತಿ ಮೇ ರಿಪುಃ ।
ಯದಿ ವಾಧ್ಯುಷಿತೋಽಸಿತ್ವಂ ಸ್ಮರ್ಯಂತೇ ಯದಿ ಮೆ ಗುಣಾಃ ॥

ಅನುವಾದ

ನೀನು ನನ್ನೊಡನೆ ಬಹಳ ದಿನಗಳಿಂದ ಇರುವುದರಿಂದ, ನನ್ನ ಗುಣಗಳು ನಿನಗೆ ನೆನಪಿದ್ದರೆ ನನ್ನ ಈ ರಥವನ್ನು ಬೇಗನೇ ಯುದ್ಧಕ್ಕಾಗಿ ಹಿಂದಿರುಗಿಸು. ಹೀಗಾಗದಿದ್ದರೆ ನನ್ನ ಶತ್ರು ಎಲ್ಲಾದರೂ ಓಡಿ ಹೋಗದಿರಲಿ.॥9॥

ಮೂಲಮ್ - 10

ಏವಂ ಪರುಷಮುಕ್ತಸ್ತು ಹಿತಬುದ್ಧಿರಬುದ್ಧಿನಾ ।
ಅಬ್ರವೀದ್ರಾವಣಂ ಸೂತೋ ಹಿತಂ ಸಾನುನಯಂ ವಚಃ ॥

ಅನುವಾದ

ಸಾರಥಿಯ ಬುದ್ಧಿಯಲ್ಲಿ ರಾವಣನ ಹಿತದ ಭಾವನೆಯೇ ಇದ್ದರೂ, ಆ ಮೂರ್ಖನು ಅವನಿಗೆ ಇಂತಹ ಕಠೋರ ಮಾತನ್ನು ಹೇಳಿದಾಗ ಸಾರಥಿಯು ಬಹಳ ವಿನಯದಿಂದ ಹೀಗೆ ಹಿತವಚನ ಹೇಳಿದನು.॥10॥

ಮೂಲಮ್ - 11

ನ ಭೀತೋಽಸ್ಮಿ ನ ಮೂಢೋಽಸ್ಮಿ ನೋಪಜಪ್ತೋಽಸ್ಮಿ ಶತ್ರುಭಿಃ ।
ನ ಪ್ರಮತ್ತೋ ನ ನಿಃಸ್ನೇಹೋ ವಿಸ್ಮೃತಾ ನ ಚ ಸತ್ಕ್ರಿಯಾ ॥

ಅನುವಾದ

ಮಹಾರಾಜರೇ! ನಾನು ಹೆದರಿಲ್ಲ, ನನ್ನ ವಿವೇಕವೂ ನಾಶವಾಗಲಿಲ್ಲ. ನನಗೆ ಶತ್ರುವೂ ಪ್ರಲೋಭನೆ ತೋರಿಲ್ಲ. ನಾನು ಎಚ್ಚರ ತಪ್ಪಿಲ್ಲ. ನಿಮ್ಮ ಕುರಿತು ನನ್ನ ಸ್ನೇಹವೂ ಕಡಿಮೆಯಾಗಲಿಲ್ಲ. ನೀವು ಗೈದ ಸತ್ಕಾರವನ್ನು ನಾನು ಮರೆತಿಲ್ಲ.॥11॥

ಮೂಲಮ್ - 12

ಮಯಾ ತು ಹಿತಕಾಮೇನ ಯಶಶ್ಚ ಪರಿರಕ್ಷತಾ ।
ಸ್ನೇಹಪ್ರಸನ್ನಮನಸಾ ಪ್ರಿಯಮಿತ್ಯಪ್ರಿಯಂ ಕೃತಮ್ ॥

ಅನುವಾದ

ನಾನು ಸದಾ ನಿಮ್ಮ ಹಿತವನ್ನು ಬಯಸುವೆನು. ನಿಮ್ಮ ಯಶಸ್ಸಿನ ರಕ್ಷಣೆ ಗಾಗಿಯೇ ಪ್ರಯತ್ನಿಸುತ್ತಾ ಇರುವೆನು. ನನ್ನ ಹೃದಯ ನಿಮ್ಮ ಕುರಿತಾದ ಸ್ನೇಹದಿಂದ ಆರ್ದ್ರವಾಗುತ್ತದೆ. ನಿಮಗೆ ಅಪ್ರಿಯವಾದರೂ ಇದರಿಂದ ನಿಮ್ಮ ಹಿತವಾಗಬಹುದೆಂದು ಯೋಚಿಸಿ ನಾನು ಇದನ್ನು ಮಾಡಿದುದು.॥12॥

ಮೂಲಮ್ - 13

ನಾಸ್ಮಿನ್ನರ್ಥೇ ಮಹಾರಾಜ ತ್ವಂ ಮಾಂ ಪ್ರಿಯಹಿತೇ ರತಮ್ ।
ಕಶ್ಚಿಲ್ಲಘುರಿವಾನಾರ್ಯೋ ದೋಷತೋ ಗಂತುಮರ್ಹಸಿ ॥

ಅನುವಾದ

ಮಹಾರಾಜರೇ! ನಾನು ನಿಮ್ಮ ಹಿತದಲ್ಲಿ ತತ್ಪರನಾಗಿರು ವವನು, ಆದ್ದರಿಂದ ಈ ಕಾರ್ಯಕ್ಕಾಗಿ ನೀವು ಯಾವುದೇ ಅಲ್ಪ ಮತ್ತು ಅನಾರ್ಯ ಪುರುಷನಂತೆ ನನ್ನ ಮೇಲೆ ದೋಷಾರೋಪಣೆ ಮಾಡಬಾರದು.॥13॥

ಮೂಲಮ್ - 14

ಶ್ರೂಯತಾಂ ಪ್ರತಿದಾಸ್ಯಾಮಿ ಯನ್ನಿಮಿತ್ತಂ ಮಯಾ ರಥಃ ।
ನದೀವೇಗ ಇವಾಂಭೋಭಿಃ ಸಂಯುಗೇ ವಿನಿವರ್ತಿತಃ ॥

ಅನುವಾದ

ಚಂದ್ರೋದಯವಾದಾಗ ಸಮುದ್ರದ ನೀರು ನದಿಗಳ ವೇಗವನ್ನು ಹಿಮ್ಮೆಟ್ಟಿಸುವಂತೆಯೇ ನಾನು ಯಾವ ಕಾರಣದಿಂದ ರಥವನ್ನು ಹಿಮ್ಮೆಟ್ಟಿಸಿದೆ, ಅದನ್ನು ಹೇಳುವೆನು ಕೇಳಿ.॥14॥

ಮೂಲಮ್ - 15

ಶ್ರಮಂ ತವಾವಗಚ್ಛಾಮಿ ಮಹತಾ ರಣಕರ್ಮಣಾ ।
ನಹಿ ತೇ ವೀರಸೌಮುಖ್ಯಂ ಪ್ರಕರ್ಷಂ ವೋಪಧಾರಯೇ ॥

ಅನುವಾದ

ಆಗ ನೀವು ಮಹಾ ಯುದ್ಧದಿಂದಾಗಿ ಬಳಲಿದ್ದಿರಿ, ಶತ್ರುವಿಗಿಂತ ಹೆಚ್ಚು ಪ್ರಬಲತೆ ನಿಮ್ಮಲ್ಲಿ ನಾನು ಕಂಡಿಲ್ಲ, ಹೆಚ್ಚು ಪರಾಕ್ರಮವನ್ನು ಕಾಣಲಿಲ್ಲ ಎಂದು ನಾನು ತಿಳಿದೆ.॥15॥

ಮೂಲಮ್ - 16

ರಥೋದ್ವಹನಖಿನ್ನಾಶ್ಚ ಭಗ್ನಾಮೇ ರಥವಾಜಿನಃ ।
ದೀನಾ ಘರ್ಮಪರಿಶ್ರಾಂತಾ ಗಾವೋ ವರ್ಷಹತಾ ಇವ ॥

ಅನುವಾದ

ನಮ್ಮ ಕುದುರೆಗಳೂ ರಥವನ್ನೆಳೆದು ಎಳೆದು ದಣಿದಿದ್ದವು. ಅವುಗಳು ಎಡವುತ್ತಿದ್ದವು. ಬಿಸಿಲಿನಿಂದ ಪೀಡಿತವಾದ ಕುದುರೆಗಳು ಮಳೆಯ ರಭಸಕ್ಕೆ ಸಿಕ್ಕ ಹಸುವಿನಂತೆ ದುಃಖಿಗಳಾಗಿದ್ದವು.॥16॥

ಮೂಲಮ್ - 17

ನಿಮಿತ್ತಾನಿ ಚ ಭೂಯಿಷ್ಠಂ ಯಾನಿ ಪ್ರಾದುರ್ಭವಂತಿ ನಃ ।
ತೇಷು ತೇಷ್ವಭಿಪನ್ನೇಷು ಲಕ್ಷಯಾಮ್ಯಪ್ರದಕ್ಷಿಣಮ್ ॥

ಅನುವಾದ

ಜೊತೆಗೆ ಆಗ ನಮ್ಮ ಮುಂದೆ ಪ್ರಕಟವಾದ ಶಕುನಗಳು ಸಫಲವಾದಲ್ಲಿ ನಮಗೆ ಅದರಿಂದ ಅನಿಷ್ಟವೇ ಕಂಡು ಬರುತ್ತಿತ್ತು.॥17॥

ಮೂಲಮ್ - 18

ದೇಶಕಾಲೌ ಚ ವಿಜ್ಞೇಯೌ ಲಕ್ಷಣಾನೀಂಗಿತಾನಿ ಚ ।
ದೈನ್ಯಂ ಖೇದಶ್ಚ ಹರ್ಷಶ್ಚ ರಥಿನಶ್ಚ ಬಲಾಬಲಮ್ ॥

ಅನುವಾದ

ಸಾರಥಿಯು ದೇಶ-ಕಾಲವನ್ನು ಶುಭಾಶುಭ ಲಕ್ಷಣಗಳನ್ನು, ರಥಿಯ ಚೇಷ್ಟೆಗಳನ್ನು, ಉತ್ಸಾಹ, ಖೇದ-ಹರ್ಷಗಳನ್ನು, ಬಲಾ ಬಲಗಳನ್ನು ತಿಳಿದಿರಬೇಕು.॥18॥

ಮೂಲಮ್ - 19

ಸ್ಥಲನಿಮ್ನಾನಿ ಭೂಮೇಶ್ಚ ಸಮಾನಿ ವಿಷಮಾಣಿ ಚ ।
ಯುದ್ಧಕಾಲಶ್ಚ ವಿಜ್ಞೇಯಃ ಪರಸ್ಯಾಂತರ ದರ್ಶನಮ್ ॥

ಅನುವಾದ

ಭೂಮಿಯಲ್ಲಿರುವ ಹಳ್ಳ-ತಿಟ್ಟು, ಸಮ-ವಿಷಮ ಸ್ಥಾನಗಳ ಅರಿವು ಸಾರಥಿಗೆ ಇರಬೇಕು. ಯುದ್ಧ ಮಾಡಬೇಕಾದ ಕಾಲ, ಶತ್ರುವಿನ ದೌರ್ಬಲ್ಯ ಇವೆಲ್ಲವನ್ನೂ ಸಾರಥಿಯಾದವನು ಗಮನಿಸಬೇಕು.॥19॥

ಮೂಲಮ್ - 20

ಉಪಯಾನಾಪಯಾನೇ ಚ ಸ್ಥಾನಂ ಪ್ರತ್ಯಪಸರ್ಪಣಮ್ ।
ಸರ್ವಮೇತದ್ ರಥಸ್ಥೇನ ಜ್ಞೇಯಂ ರಥಕುಟುಂಬಿನಾ ॥

ಅನುವಾದ

ಶತ್ರುವಿನ ಬಳಿಗೆ ಹೋಗುವುದು, ದೂರ ಹೋಗುವುದು, ಸ್ಥಿರವಾಗಿ ನಿಲ್ಲುವುದು ಹಾಗೂ ಯುದ್ಧ ರಂಗದಿಂದ ಬೇರೆಯಾಗುವುದು, ಸರಿಯಾದ ಸಂದರ್ಭ ಯಾವಾಗ ಬರುತ್ತದೆ. ಇದೆಲ್ಲವನ್ನು ರಥ ನಿರ್ವಾಹಕನಿಗೆ ತಿಳಿದಿರಬೇಕು.॥20॥

ಮೂಲಮ್ - 21

ತವ ವಿಶ್ರಮಹೇತೋಸ್ತು ತಥೈಷಾಂ ರಥವಾಜಿನಾಮ್ ।
ರೌದ್ರಂ ವರ್ಜಯತಾ ಖೇದಂ ಕ್ಷಮಂ ಕೃತಮಿದಂ ಮಯಾ ॥

ಅನುವಾದ

ನಿಮಗೆ ಮತ್ತು ನಮ್ಮ ಕುದುರೆಗಳಿಗೆ ಸ್ವಲ್ಪ ಹೊತ್ತು ವಿಶ್ರಾಂತಿ ಕೊಡಲು ಮತ್ತು ಖೇದವನ್ನು ದೂರಗೊಳಿಸಲು ನಾನು ಮಾಡಿದ ಕಾರ್ಯವು ಉಚಿತವೇ ಆಗಿದೆ.॥21॥

ಮೂಲಮ್ - 22

ಸ್ವೇಚ್ಛಯಾ ನ ಮಯಾ ವೀರ ರಥೋಽಯಮಪವಾಹಿತಃ ।
ಭರ್ತುಃ ಸ್ನೇಹಪರೀತೇನ ಮಯೇದಂ ಯತ್ಕೃತಂ ಪ್ರಭೋ ॥

ಅನುವಾದ

ಪ್ರಭುವೇ! ನಾನು ಮನಬಂದಂತೆ ಈ ಕಾರ್ಯವನ್ನು ಮಾಡಲಿಲ್ಲ. ಒಡೆಯನ ಸ್ನೇಹವಶನಾಗಿ ಅವನ ರಕ್ಷಣೆಗಾಗಿ ಈ ರಥವನ್ನು ರಣರಂಗದಿಂದ ದೂರಕ್ಕೆ ಒಯ್ದಿರುವೆನು.॥22॥

ಮೂಲಮ್ - 23

ಆಜ್ಞಾಪಯ ಯಥಾತತ್ತ್ವಂ ವಕ್ಷ್ಯಸ್ಯರಿನಿಷೂದನ ।
ತತ್ಕರಿಷ್ಯಾಮ್ಯಹಂ ವೀರ ಗತಾನೃಣ್ಯೇನ ಚೇತಸಾ ॥

ಅನುವಾದ

ಶತ್ರುಹಂತಕನೇ! ಈಗ ನೀವು ಆಜ್ಞಾಪಿಸಿರಿ. ನೀವು ಸರಿಯೆಂದು ತಿಳಿದುಹೇಳಿದುದನ್ನು ನಾನು ಮಾಡಿ ದಣಿಯ ಋಣಿವನ್ನು ತೀರಿಸುವ ಭಾವನೆ ಇರಿಸಿ ಮಾಡುವೆನು.॥23॥

ಮೂಲಮ್ - 24

ಸಂತುಷ್ಟಸ್ತೇನ ವಾಕ್ಯೇನ ರಾವಣಸ್ತಸ್ಯ ಸಾರಥೇಃ ।
ಪ್ರಶಸ್ಯೈನಂ ಬಹುವಿಧಂ ಯುದ್ಧಲುಬ್ಧೋಽಬ್ರವೀದ್ವಚಃ ॥

ಅನುವಾದ

ಸಾರಥಿಯ ಈ ಮಾತಿನಿಂದ ರಾವಣನು ಬಹಳ ಸಂತುಷ್ಟನಾಗಿ, ನಾನಾ ರೀತಿಯಿಂದ ಅವನನ್ನು ಹೊಗಳಿ, ಯುದ್ಧಲೋಲುಪನಾಗಿ ಹೇಳಿದನು.॥24॥

ಮೂಲಮ್ - 25

ರಥಂ ಶೀಘ್ರಮಿಮಂ ಸೂತ ರಾಘವಾಭಿಮುಖಂ ನಯ ।
ನಾಹತ್ವಾಸಮರೇ ಶತ್ರೂನ್ನಿವರ್ತಿಷ್ಯತಿ ರಾವಣಃ ॥

ಅನುವಾದ

ಸೂತನೇ! ಈಗ ನೀನು ರಥವನ್ನು ಬೇಗನೇ ರಾಮನ ಮುಂದಕ್ಕೆ ಕೊಂಡುಹೋಗು. ರಾವಣನು ಯುದ್ಧದಲ್ಲಿ ತನ್ನ ಶತ್ರುವನ್ನು ಕೊಲ್ಲದೆ ಎಂದೂ ಮನಗೆ ಮರಳಲಾರನು.॥25॥

ಮೂಲಮ್ - 26

ಏವಮುಕ್ತ್ವಾರಥಸ್ಥಸ್ಯ ರಾವಣೋ ರಾಕ್ಷಸೇಶ್ವರಃ ।
ದದೌತಸ್ಯ ಶುಭಂ ಹ್ಯೇಕಂ ಹಸ್ತಾಭರಣಮುತ್ತಮಮ್ ।
ಶ್ರುತ್ವಾ ರಾವಣವಾಕ್ಯಾನಿ ಸಾರಥಿಃ ಸಂನ್ಯವರ್ತತ ॥

ಅನುವಾದ

ಹೀಗೆ ಹೇಳಿ ರಾಕ್ಷಸೇಶ್ವರನು ಸಾರಥಿಗೆ ತನ್ನ ಕೈಯ್ಯ ಸುಂದರ ಕಡಗವನ್ನು ಉಡುಗೊರೆಯಾಗಿ ಕೊಟ್ಟನು. ರಾವಣನ ಆದೇಶದಂತೆ ಸಾರಥಿಯು ಪುನಃ ರಥವನ್ನು ಯುದ್ಧದ ಕಡೆಗೆ ತಿರುಗಿಸಿದನು.॥26॥

ಮೂಲಮ್ - 27

ತತೋ ದ್ರುತಂ ರಾವಣವಾಕ್ಯಚೋದಿತಃ
ಪ್ರಚೋದಯಾಮಾಸ ಹಯಾನ್ಸ ಸಾರಥಿಃ ।
ಸ ರಾಕ್ಷಸೇಂದ್ರಸ್ಯ ತತೋ ಮಹಾರಥಃ
ಕ್ಷಣೇನ ರಾಮಸ್ಯ ರಣಾಗ್ರತೋಽಭವತ್ ॥

ಅನುವಾದ

ರಾವಣನ ಆಜ್ಞೆಯಂತೆ ಸಾರಥಿಯು ಕೂಡಲೇ ಕುದುರೆಗಳನ್ನು ಓಡಿಸುತ್ತಾ ರಾಕ್ಷಸರಾಜನ ಆ ವಿಶಾಲ ರಥವನ್ನು ಕ್ಷಣಾರ್ಧದಲ್ಲಿ ರಣರಂಗದಲ್ಲಿ ಶ್ರೀರಾಮಚಂದ್ರನ ಸಮೀಪಕ್ಕೆ ಕೊಂಡು ಹೋದನು.॥27॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರನಾಲ್ಕನೆಯ ಸರ್ಗ ಪೂರ್ಣವಾಯಿತು.॥104॥