वाचनम्
ಭಾಗಸೂಚನಾ
ಶ್ರೀರಾಮನು ರಾವಣನನ್ನು ನಿಂದಿಸಿದುದು, ಗಾಯಗೊಂಡಿದ್ದ ರಾವಣನನ್ನು ಸಾರಥಿಯು ರಣಭೂಮಿಯಿಂದ ಹೊರಗೆ ಒಯ್ದುದು
ಮೂಲಮ್ - 1
ಸ ತು ತೇನ ತದಾ ಕ್ರೋಧಾತ್ ಕಾಕುತ್ಸ್ಥೇನಾರ್ದಿತೋ ಭೃಶಮ್ ।
ರಾವಣಃ ಸಮರಶ್ಲಾಘೀ ಮಹಾಕ್ರೋಧಮುಪಾಗಮತ್ ॥
ಅನುವಾದ
ಕ್ರೋಧಾಭಿಭೂತನಾಗಿದ್ದ ಶ್ರೀರಾಮನಿಂದ ಅತ್ಯಂತ ಪೀಡಿತನಾದ, ರಣಶ್ಲಾಘಿ ರಾವಣನು ಅತ್ಯಂತ ಕ್ರೋಧಗೊಂಡನು.॥1॥
ಮೂಲಮ್ - 2
ಸ ದೀಪ್ತನಯನೋಽಮರ್ಷಾಚ್ಚಾಪಮುದ್ಯಮ್ಯ ವೀರ್ಯವಾನ್ ।
ಅಭ್ಯರ್ದಯತ್ಸು ಸಂಕ್ರುದ್ಧೋ ರಾಘವಂ ಪರಮಾಹವೇ ॥
ಅನುವಾದ
ಅವನ ಕಣ್ಣುಗಳು ಬೆಂಕಿಯಂತೆ ಉರಿದೆದ್ದವು. ಆ ಪರಾಕ್ರಮಿ ವೀರನು ಅಸಹನೆಯಿಂದ ಧನುಸ್ಸನ್ನೆತ್ತಿ, ಅತ್ಯಂತ ಕುಪಿತನಾಗಿ ಆ ಮಹಾಸಂಗ್ರಾಮದಲ್ಲಿ ಶ್ರೀರಾಮನನ್ನು ನೋಯಿಸತೊಡಗಿದನು.॥2॥
ಮೂಲಮ್ - 3
ಬಾಣಧಾರಾ ಸಹಸ್ರೈಸ್ತೈಃ ಸ ತೋಯದ ಇವಾಂಬರಾತ್ ।
ರಾಘವಂ ರಾವಣೋ ಬಾಣೈಸ್ತಟಾಕಮಿವ ಪೂರಯನ್ ॥
ಅನುವಾದ
ಆಕಾಶದಿಂದ ಮೋಡಗಳು ನೀರು ಸುರಿಸಿ ಕೆರೆಗಳನ್ನು ತುಂಬುವಂತೆ ರಾವಣನು ಸಾವಿರಾರು ಬಾಣಗಳ ವೃಷ್ಟಿಗೈದು ಶ್ರೀರಾಮಚಂದ್ರನನ್ನು ಮುಚ್ಚಿಬಿಟ್ಟನು.॥3॥
ಮೂಲಮ್ - 4
ಪೂರಿತಃ ಶರಜಾಲೇನ ಧನುರ್ಮುಕ್ತೇನ ಸಂಯುಗೇ ।
ಮಹಾಗಿರಿರಿವಾಕಂಪ್ಯಃ ಕಾಕುತ್ಸ್ಥೋ ನ ಪ್ರಕಂಪತೇ ॥
ಅನುವಾದ
ರಣರಂಗದಲ್ಲಿ ರಾವಣನು ಬಿಟ್ಟಿರುವ ಬಾಣಸಮೂಹಗಳಿಂದ ವ್ಯಾಪ್ತನಾಗಿದ್ದನು. ಶ್ರೀರಘುನಾಥನು ಕೊಂಚವೂ ವಿಚಲಿತನಾಗಲಿಲ್ಲ; ಏಕೆಂದರೆ ಅವನು ಮಹಾಪರ್ವತದಂತೆ ಅಚಲನಾಗಿದ್ದನು.॥4॥
ಮೂಲಮ್ - 5
ಸ ಶರೈಃ ಶರಜಾಲಾನಿ ವಾರನ್ಸಮರೇ ಸ್ಥಿತಃ ।
ಗಭಸ್ತೀನಿವ ಸೂರ್ಯಸ್ಯ ಪ್ರತಿಜಗ್ರಾಹ ವೀರ್ಯವಾನ್ ॥
ಅನುವಾದ
ರಾಮನು ತನ್ನ ಬಾಣಗಳಿಂದ ರಾವಣನ ಬಾಣಗಳನ್ನು ನಿವಾರಿಸುತ್ತಾ ಸ್ಥಿರಭಾವದಿಂದ ನಿಂತಿದ್ದನು. ಆ ಪರಾಕ್ರಮಿ ರಘುವೀರನು ಸೂರ್ಯನ ಕಿರಣಗಳಂತೆ ಶತ್ರುವಿನ ಬಾಣಗಳನ್ನು ಸಹಿಸುತ್ತಿದ್ದನು.॥5॥
ಮೂಲಮ್ - 6
ತತಃ ಶರಸಹಸ್ರಾಣಿ ಕ್ಷಿಪ್ರಹಸ್ತೋ ನಿಶಾಚರಃ ।
ನಿಜಘಾನೋರಸಿ ಕ್ರುದ್ಧೋ ರಾಘವಸ್ಯ ಮಹಾತ್ಮನಃ ॥
ಅನುವಾದ
ಅನಂತರ ಶೀಘ್ರವಾಗಿ ಕೈಚಳಕದಿಂದ ರಾವಣನು ಕುಪಿತನಾಗಿ ಮಹಾಮನಾ ರಾಘವೇಂದ್ರನ ಎದೆಯಲ್ಲಿ ಸಾವಿರಾರು ಬಾಣಗಳನ್ನು ಪ್ರಯೋಗಿಸಿದನು.॥6॥
ಮೂಲಮ್ - 7
ಸ ಶೋಣಿತ ಸಮಾದಿಗ್ಧಃ ಸಮರೇ ಲಕ್ಷ್ಮಣಾಗ್ರಜಃ ।
ದೃಷ್ಟಃ ಫುಲ್ಲ ಇವಾರಣ್ಯೇ ಸುಮಹಾನ್ ಕಿಂಶುಕದ್ರುಮಃ ॥
ಅನುವಾದ
ರಣರಂಗದಲ್ಲಿ ಆ ಬಾಣಗಳಿಂದ ಗಾಯಗೊಂಡ ಲಕ್ಷ್ಮಣಾಗ್ರಜ ರಾಮನು ರಕ್ತದಿಂದ ತೊಯ್ದು ಹೋಗಿ ಕಾಡಿನಲ್ಲಿ ಅರಳಿನಿಂತ ಮುತ್ತುಗದ ಮಹಾವೃಕ್ಷದಂತೆ ಕಂಡುಬರುತ್ತಿದ್ದನು.॥7॥
ಮೂಲಮ್ - 8
ಶರಾಭಿಘಾತಸಂರಬ್ಧಃ ಸೋಭಿಜಗ್ರಾಹ ಸಾಯಕಾನ್ ।
ಕಾಕುತ್ಸ್ಥಃ ಸುಮಹಾತೇಜಾ ಯುಗಾಂತಾದಿತ್ಯ ತೇಜಸಃ ॥
ಅನುವಾದ
ಬಾಣಗಳ ಆಘಾತದಿಂದ ಕುಪಿತನಾದ ಮಹಾತೇಜಸ್ವೀ ಶ್ರೀರಾಮನು ಪ್ರಳಯಕಾಲದ ಸೂರ್ಯನಂತಹ ಸಾಯಕಗಳನ್ನು ಕೈಗೆತ್ತಿಕೊಂಡನು.॥8॥
ಮೂಲಮ್ - 9
ತತೋಽನ್ಯೋನ್ಯಂ ಸುಸಂರಬ್ಧೌತಾವುಭೌ ರಾಮರಾವಣೌ ।
ಶರಾಂಧಕಾರೇ ಸಮರೇ ನೋಪಲಕ್ಷಯತಾಂ ತದಾ ॥
ಅನುವಾದ
ಮತ್ತೆ ಅವರಿಬ್ಬರೂ ಪರಸ್ಪರ ರೋಷಾವೇಶದಿಂದ ಕೂಡಿ ಬಾಣ ಪ್ರಯೋಗಿಸತೊಡಗಿದರು. ಸಮಾರಾಂಗಣದಲ್ಲಿ ಬಾಣಗಳಿಂದ ಅಂಧಕಾರ ಆವರಿಸಿತು. ಆಗ ರಾಮ-ರಾವಣರಿಗೆ ಪರಸ್ಪರ ನೋಡಲಾಗುತ್ತಿರಲಿಲ್ಲ.॥9॥
ಮೂಲಮ್ - 10
ತತಃ ಕ್ರೋಧಸಮಾವಿಷ್ಟೋ ರಾಮೋ ದಶರಥಾತ್ಮಜಃ ।
ಉವಾಚ ರಾವಣಂ ವೀರಃ ಪ್ರಹಸ್ಯ ಪುರುಷಂ ವಚಃ ॥
ಅನುವಾದ
ಆಗ ಕ್ರೋಧಗೊಂಡ ವೀರ ದಾಶರಥಿರಾಮನು ನಗುತ್ತಾ ರಾವಣನಲ್ಲಿ ಕಠೋರವಾಗಿ ಇಂತೆಂದನು.॥10॥
ಮೂಲಮ್ - 11
ಮಮ ಭಾರ್ಯಾ ಜನಸ್ಥಾನಾದಜ್ಞಾನಾದ್ರಾಕ್ಷಸಾಧಮ ।
ಹೃತಾ ತೇ ವಿವಶಾ ಯಸ್ಮಾತ್ತಸ್ಮಾತ್ತ್ವಂ ನಾಸಿ ವೀರ್ಯವಾನ್ ॥
ಅನುವಾದ
ನೀಚ ರಾಕ್ಷಸನೇ! ನೀನು ನನಗೆ ತಿಳಿಯದೆ ನನ್ನ ಅಸಹಾಯ ಪತ್ನಿಯನ್ನು ಕದ್ದು ತಂದಿರುವೆ. ಅದರಿಂದ ನೀನು ಬಲವಂತ, ಪರಾಕ್ರಮಿಯಂತೂ ಎಂದಿಗೂ ಅಲ್ಲ.॥11॥
ಮೂಲಮ್ - 12
ಮಯಾ ವಿರಹಿತಾಂ ದೀನಾಂ ವರ್ತಮಾನಾಂ ಮಹಾವನೇ ।
ವೈದೇಹೀಂ ಪ್ರಸಭಂ ಹೃತ್ವಾ ಶೂರೋಽಹಮಿತಿ ಮನ್ಯಸೇ ॥
ಅನುವಾದ
ವಿಶಾಲವನದಲ್ಲಿ ನನ್ನಿಂದ ಅಗಲಿದ ದೀನಸ್ಥಿತಿಯಲ್ಲಿದ್ದ ವಿದೇಹಕುಮಾರಿಯನ್ನು ಬಲವಂತವಾಗಿ ಅಪಹರಿಸಿದ ನೀನು ತನ್ನನ್ನು ಶೂರನೆಂದು ತಿಳಿಯುತ್ತಿರುವೆಯಲ್ಲ.॥12॥
ಮೂಲಮ್ - 13
ಸ್ತ್ರೀಷು ಶೂರ ವಿನಾಥಾಸು ಪರದಾರಾಭಿಮರ್ಶನಮ್ ।
ಕೃತ್ವಾಕಾಪುರುಷಂ ಕರ್ಮ ಶೂರೋಽಹಮಿತಿ ಮನ್ಯಸೇ ॥
ಅನುವಾದ
ಅಸಹಾಯ ಅಬಲೆಯರ ಮೇಲೆ ವೀರತೆಯನ್ನು ತೋರಿಸುವ ನಿಶಾಚರನೇ! ಪರಸ್ತ್ರೀಯನ್ನು ಅಪಹರಣದಂತಹ ಹೇಡಿಗಳ ಕರ್ಮವನ್ನು ಮಾಡಿ ತನ್ನನ್ನು ಶೂರವೀರನೆಂದು ತಿಳಿಯುವೆಯಲ್ಲ.॥13॥
ಮೂಲಮ್ - 14
ಭಿನ್ನಮರ್ಯಾದ ನಿರ್ಲಜ್ಜ ಚಾರಿತ್ರೇಷ್ವನವಸ್ಥಿತ ।
ದರ್ಪಾನ್ ಮೃತ್ಯುಮುಪಾದಾಯಶೂರೋಽಹಮಿತಿ ಮನ್ಯಸೇ ॥
ಅನುವಾದ
ಧರ್ಮ ಮರ್ಯಾದೆಯನ್ನು ಮೀರುವ ಪಾಪಿಯೇ! ನಿರ್ಲಜ್ಜ, ಸದಾಚಾರಶೂನ್ಯ ನಿಶಾಚರನೇ! ನೀನು ಬಲಗರ್ವಿತನಾಗಿ ವೈದೇಹಿಯ ರೂಪದಲ್ಲಿ ನಿನ್ನ ಮೃತ್ಯುವನ್ನು ಆಮಂತ್ರಿಸಿರುವೆ. ಹೀಗಿದ್ದರೂ ತನ್ನನ್ನು ವೀರನೆಂದು ತಿಳಿಯುತ್ತಿಯಲ್ಲ.॥14॥
ಮೂಲಮ್ - 15
ಶೂರೇಣ ಧನದಭ್ರಾತ್ರಾ ಬಲೈಃ ಸಮುದಿತೇನ ಚ ।
ಶ್ಲಾಘನೀಯಂ ಮಹತ್ಕರ್ಮ ಯಶಸ್ಯಂ ಚ ಕೃತಂ ತ್ವಯಾ ॥
ಅನುವಾದ
ನೀನು ದೊಡ್ಡ ಶೂರ, ಬಲಸಂಪನ್ನ ಮತ್ತು ಸಾಕ್ಷಾತ್ ಕುಬೇರನ ತಮ್ಮನಾಗಿರುವೆ. ಇದರಿಂದ ನೀನು ಈ ಪರಮಪ್ರಶಂಸನೀಯ ಹಾಗೂ ಮಹಾಯಶೋವರ್ಧಕ ಕರ್ಮಮಾಡಿರುವೆ.॥15॥
ಮೂಲಮ್ - 16
ಉತ್ಸೇಕೇನಾಭಿಪನ್ನಸ್ಯ ಗರ್ಹಿತಸ್ಯಾಹಿತಸ್ಯ ಚ ।
ಕರ್ಮಣಃ ಪ್ರಾಪ್ನುಹೀದಾನೀಂ ತಸ್ಯಾದ್ಯ ಸುಮಹತ್ಫಲಮ್ ॥
ಅನುವಾದ
ದುರಭಿಮಾನದಿಂದ ಮಾಡಿದ ನಿಂದಿತ ಹಾಗೂ ಅಹಿತಕರ ಪಾಪಕರ್ಮದ ಫಲವನ್ನು ನೀನು ಇಂದೇ ಪಡೆಯುವೆ.॥16॥
ಮೂಲಮ್ - 17
ಶೂರೋಽಹಮಿತಿ ಚಾತ್ಮಾನಮವಗಚ್ಛಸಿ ದುರ್ಮತೇ ।
ನೈವ ಲಜ್ಜಾಸ್ತಿ ತೇ ಸೀತಾಂ ಚೋರವದ್ವ್ಯಪಕರ್ಷತಃ ॥
ಅನುವಾದ
ದುರ್ಮತಿಯೇ! ಶೌರ್ಯಸಂಪನ್ನನೆಂದು ತಿಳಿದಿರುವ ನಿನಗೆ ಸೀತೆಯನ್ನು ಕಳ್ಳನಂತೆ ಕದ್ದು ತರುವಾಗ ಕೊಂಚವೂ ನಾಚಿಕೆಯಾಗಲಿಲ್ಲವೇ.॥17॥
ಮೂಲಮ್ - 18
ಯದಿ ಮತ್ಸನ್ನಿಧೌ ಸೀತಾ ಧರ್ಷಿತಾ ಸ್ತಾತ್ತ್ವಯಾ ಬಲಾತ್ ।
ಭ್ರಾತರಂ ತು ಖರಂ ಪಶ್ಯೇಸ್ತದಾ ಮತ್ಸಾಯಕೈರ್ಹತಃ ॥
ಅನುವಾದ
ನಾನಿರುವಾಗ ನೀನು ಸೀತೆಯನ್ನು ಬಲವಂತವಾಗಿ ಅಪಹರಣ ಮಾಡಿದ್ದರೆ ಇಷ್ಟರೊಳಗೆ ನನ್ನ ಬಾಣಗಳಿಂದ ಸತ್ತು ನಿನ್ನ ತಮ್ಮ ಖರನ ದರ್ಶನ ಪಡೆಯುತ್ತಿದ್ದೆ.॥18॥
ಮೂಲಮ್ - 19
ದಿಷ್ಟ್ಯಾಸಿ ಮಮ ಮಂದಾತ್ಮಂಶ್ಚಕ್ಷುರ್ವಿಷಯಮಾಗತಃ ।
ಅದ್ಯ ತ್ವಾಂ ಸಾಯಕೈಸ್ತೀಕ್ಷ್ಣೈರ್ನಯಾಮಿ ಯಮಸಾದನಮ್ ॥
ಅನುವಾದ
ಮಂದಬುದ್ಧಿಯೇ! ಇಂದು ನೀನು ನನ್ನ ಕಣ್ಣಿಗೆ ಬಿದ್ದಿರುವುದು ಸೌಭಾಗ್ಯದ ಮಾತಾಗಿದೆ. ನಾನು ಈಗಲೇ ನಿನ್ನನ್ನು ಹರಿತವಾದ ಬಾಣಗಳಿಂದ ಯಮಲೋಕಕ್ಕೆ ಅಟ್ಟುವೆನು.॥19॥
ಮೂಲಮ್ - 20
ಅದ್ಯ ತೇ ಮಚ್ಛರೈಶ್ಛಿನ್ನಂ ಶಿರೋ ಜ್ವಲಿತಕುಂಡಲಮ್ ।
ಕ್ರವ್ಯಾದಾ ವ್ಯಪಕರ್ಷಂತು ವಿಕೀರ್ಣಂ ರಣಪಾಂಸುಷು ॥
ಅನುವಾದ
ಇಂದು ನನ್ನ ಬಾಣಗಳಿಂದ ರಣರಂಗದಲ್ಲಿ ಹೊಳೆಯುವ ಕುಂಡಲಗಳಿಂದ ಕೂಡಿದ ನಿನ್ನ ತಲೆಯು ತುಂಡಾಗಿ ಧೂಳಿನಲ್ಲಿ ಬಿದ್ದಾಗ ಮಾಂಸಭಕ್ಷಿ ಜೀವಜಂತುಗಳು ತಿನ್ನಲು ಎಳೆದಾಡುವವು.॥20॥
ಮೂಲಮ್ - 21
ನಿಪತ್ಯೋರಸಿ ಗೃಧ್ರಾಸ್ತೇ ಕ್ಷಿತೌ ಕ್ಷಿಪ್ತಸ್ಯ ರಾವಣ ।
ಪಿಬಂತು ರುಧಿರಂ ತರ್ಷಾದ್ ಬಾಣಶಲ್ಯಾಂತ ರೋತ್ಥಿತಮ್ ॥
ಅನುವಾದ
ರಾವಣನೇ! ನಿನ್ನ ಹೆಣ ನೆಲದಲ್ಲಿ ಬಿದ್ದಿರುವಾಗ ಅದರ ಎದೆಯ ಮೇಲೆ ಹದ್ದುಗಳು ಕುಳಿತು, ಬಾಣಗಳ ಛೇದಗಳಿಂದ ಹರಿಯುವ ನಿನ್ನ ರಕ್ತವನ್ನು ಬಹಳ ಬಾಯಾರಿ ಕುಡಿಯುವವು.॥21॥
ಮೂಲಮ್ - 22
ಅದ್ಯ ಮದ್ಬಾಣಭಿನ್ನಸ್ಯ ಗತಾಸೋಃ ಪತಿತಸ್ಯ ತೇ ।
ಕರ್ಷನ್ ತ್ವಂತ್ರಾಣಿ ಪತಗಾ ಗರುತ್ಮಂತ ಇವೋರಗಾನ್ ॥
ಅನುವಾದ
ಇಂದು ನನ್ನ ಬಾಣಗಳಿಂದ ವಿದೀರ್ಣವಾಗಿ, ಪ್ರಾಣ ಶೂನ್ಯವಾಗಿ ಬಿದ್ದಿರುವ ನಿನ್ನ ಶರೀರದ ಕರುಳುಬಳ್ಳಿಯನ್ನು ಪಕ್ಷಿಗಳು, ಗರುಡನು ಸರ್ಪಗಳನ್ನು ಎಳೆಯುವಂತೆ ಸೆಳೆದು ಹಾಕುವವು.॥22॥
ಮೂಲಮ್ - 23
ಇತ್ಯೇವಂ ಸವದನ್ವೀರೋ ರಾಮಃ ಶತ್ರುನಿಬರ್ಹಣಃ ।
ರಾಕ್ಷಸೇಂದ್ರಂ ಸಮೀಪಸ್ಥಂ ಶರವರ್ಷೈರವಾಕಿರತ್ ॥
ಅನುವಾದ
ಹೀಗೆ ಹೇಳುತ್ತಾ ಶತ್ರುಗಳನ್ನು ನಾಶಮಾಡುವ ವೀರ ಶ್ರೀರಾಮನು ಎದುರಿಗೆ ನಿಂತಿದ್ದ ರಾಕ್ಷಸರಾಜಾರಾವಣನ ಮೇಲೆ ಬಾಣಗಳ ಮಳೆಗರೆಯಲು ಪ್ರಾರಂಭಿಸಿದನು.॥23॥
ಮೂಲಮ್ - 24
ಬಭೂವ ದ್ವಿಗುಣಂ ವೀರ್ಯಂ ಬಲಂ ಹರ್ಷಶ್ಚ ಸಂಯುಗೇ ।
ರಾಮಸ್ಯಾಸ್ತ್ರ ಬಲಂ ಚೈವ ಶತ್ರೋರ್ನಿಧನಕಾಂಕ್ಷಿಣಃ ॥
ಅನುವಾದ
ಆಗ ಯುದ್ಧರಂಗದಲ್ಲಿ ಶತ್ರುವನ್ನು ವಧಿಸಲಿಚ್ಛಿಸುವ ಶ್ರೀರಾಮನ ಬಲ, ಪರಾಕ್ರಮ, ಉತ್ಸಾಹ ಮತ್ತು ಅಸ್ತ್ರಬಲವು ಇಮ್ಮಡಿಯಾಯಿತು.॥24॥
ಮೂಲಮ್ - 25
ಪ್ರಾದುರ್ಬಭೂವುರಸ್ತ್ರಾಣಿ ಸರ್ವಾಣಿ ವಿದಿತಾತ್ಮನಃ ।
ಪ್ರಹರ್ಷಾಚ್ಚ ಮಹಾತೇಜಾಃ ಶೀಘ್ರಹಸ್ತತರೋಽಭವತ್ ॥
ಅನುವಾದ
ಆತ್ಮಜ್ಞಾನಿ ರಘುನಾಥನ ಎದುರಿಗೆ ಎಲ್ಲ ಅಸ್ತ್ರಗಳು ತಾವಾಗಿಯೇ ಪ್ರಕಟವಾದುವು. ಹರ್ಷೋತ್ಸಾಹದಿಂದ ಮಹಾ ತೇಜಸ್ವೀ ಭಗವಾನ್ ಶ್ರೀರಾಮನ ಕೈವೇಗವಾಗಿ ಚಲಿಸತೊಡಗಿತು.॥25॥
ಮೂಲಮ್ - 26
ಶುಭಾನ್ಯೇತಾನಿ ಚಿಹ್ನಾನಿ ವಿಜ್ಞಾಯಾತ್ಮಗತಾನಿ ಸಃ ।
ಭೂಯ ಏವಾರ್ದಯದ್ರಾಮೋ ರಾವಣಂ ರಾಕ್ಷಸಾಂತಕೃತ್ ॥
ಅನುವಾದ
ತನ್ನಲ್ಲಿ ಈ ಶುಭಲಕ್ಷಣಗಳು ಪ್ರಕಟವಾದುದನ್ನು ತಿಳಿದ ರಾಕ್ಷಸಾಂತಕನಾದ ಭಗವಾನ್ ಶ್ರೀರಾಮನು ಪುನಃ ರಾವಣನನ್ನು ನೋಯಿಸತೊಡಗಿದನು.॥26॥
ಮೂಲಮ್ - 27
ಹರೀಣಾಂ ಚಾಶ್ಮನಿಕರೈಃ ಶರವರ್ಷೈಶ್ಚ ರಾಘವಾತ್ ।
ಹನ್ಯಮಾನೋ ದಶಗ್ರೀವೋ ವಿಘೂರ್ಣಹೃದಯೋಽಭವತ್ ॥
ಅನುವಾದ
ವಾನರರು ಎಸೆದಿರುವ ಬಂಡೆಗಳಿಂದ ಮತ್ತು ಶ್ರೀರಾಮಚಂದ್ರನ ಬಾಣವರ್ಷಗಳಿಂದ ಆಹತನಾಗಿ ರಾವಣನ ಹೃದಯವು ವ್ಯಾಕುಲ ಹಾಗೂ ವಿಭ್ರಾಂತವಾಯಿತು.॥27॥
ಮೂಲಮ್ - 28
ಯದಾ ಚ ಶಸ್ತ್ರಂ ನಾರೇಭೇ ನ ಚಕರ್ಷಶರಾಸನಮ್ ।
ನಾಸ್ಯ ಪ್ರತ್ಯಕರೋದ್ವೀರ್ಯಂ ವಿಕ್ಲವೇನಾಂತರಾತ್ಮನಾ ॥
ಮೂಲಮ್ - 29
ಕ್ಷಿಪ್ತಾಶ್ಚಾಶು ಶರಾಸ್ತೇನ ಶಸ್ತ್ರಾಣಿ ವಿವಿಧಾನಿ ಚ ।
ಮರಣಾರ್ಥಾಯ ವರ್ತಂತೇ ಮೃತ್ಯುಕಾಲೋಽಭ್ಯವರ್ತತಃ ॥
ಮೂಲಮ್ - 30
ಸೂತಸ್ತು ರಥನೇತಾಸ್ಯ ತದವಸ್ಥಂ ನಿರೀಕ್ಷ್ಯತಮ್ ।
ಶನೈರ್ಯುದ್ಧಾದ ಸಂಭ್ರಾಂತೋ ರಥಂ ತಸ್ಯಾಪವಾಹಯತ್ ॥
ಅನುವಾದ
ಹೃದಯದ ವ್ಯಾಕುಲತೆಯಿಂದಾಗಿ ಅವನಲ್ಲಿ ಶಸ್ತ್ರವನ್ನೆತ್ತಲು, ಧನುಸ್ಸು ಎಳೆಯುವ ಮತ್ತು ಶ್ರೀರಾಮನ ಪರಾಕ್ರಮವನ್ನು ಎದುರಿಸುವ ಕ್ಷಮತೆ ಉಳಿಯದಿದ್ದಾಗ, ಶ್ರೀರಾಮನು ಶೀಘ್ರವಾಗಿ ಪ್ರಯೋಗಿಸಿದ ಬಾಣಗಳು ಮತ್ತು ಬಗೆ ಬಗೆಯ ಶಸ್ತ್ರಗಳು ಅವನ ಮೃತ್ಯುವಿನ ಸಾಧನವಾಗಿ, ಅವನ ಮೃತ್ಯು ಬಳಿಗೆ ಬಂದಾಗ, ಅವನ ಆ ಸ್ಥಿತಿಯನ್ನು ನೋಡಿ ರಥನಡೆಸುತ್ತಿದ್ದ ಸಾರಥಿಯು ಗಾಬರಿಪಡದೆ ರಥವನ್ನು ಯುದ್ಧಭೂಮಿಯಿಂದ ದೂರಕ್ಕೆ ಕೊಂಡು ಹೋದನು.॥28-30॥
ಮೂಲಮ್ - 31
ರಥಂ ಚ ತಸ್ಯಾಥ ಜವೇನ ಸಾರಥಿ-
ರ್ನಿವಾರ್ಯ ಭೀಮಂ ಜಲದಸ್ವನಂ ತದಾ ।
ಜಗಾಮ ಭೀತ್ಯಾ ಸಮರಾನ್ಮಹೀಪತಿಂ
ನಿರಸ್ತವೀರ್ಯಂ ಪತಿತಂ ಸಮೀಕ್ಷ್ಯ ॥
ಅನುವಾದ
ತನ್ನ ರಾಜನು ಶಕ್ತಿಹೀನನಾಗಿ ರಥದಲ್ಲಿ ಬಿದ್ದಿರುವುದನ್ನು ನೋಡಿದ ರಾವಣನ ಸಾರಥಿಯು ಮೇಘಗಂಭೀರ ಧ್ವನಿಗೈಯುವ ಅವನ ಭಯಾನಕ ರಥವನ್ನು ಹಿಂದಿರುಗಿಸಿ ಭಯದಿಂದಾಗಿ ಸಮರಭೂಮಿಯಿಂದ ಹೊರಗೆ ತೆಗೆದುಕೊಂಡು ಹೋದನು.॥31॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರಮೂರನೆಯ ಸರ್ಗ ಪೂರ್ಣವಾಯಿತು.॥103॥