१०२ रामास्त्राहतो रावणः

वाचनम्
ಭಾಗಸೂಚನಾ

ಇಂದ್ರನು ಕಳಿಸಿದ ರಥದಲ್ಲಿ ಕುಳಿತು ರಾಮನು ರಾವಣನೊಡನೆ ಯುದ್ಧ ಮಾಡಿದುದು

ಮೂಲಮ್ - 1

ಲಕ್ಷ್ಮಣೇನತು ತದ್ವಾಕ್ಯಮುಕ್ತಂ ಶ್ರುತ್ವಾ ಸ ರಾಘವಃ ।
ಸಂದಧೇ ಪರವೀರಘ್ನೋ ಧನುರಾದಾಯ ವೀರ್ಯವಾನ್ ॥

ಅನುವಾದ

ಲಕ್ಷ್ಮಣನು ಹೇಳಿದ ಮಾತನ್ನು ಕೇಳಿ ಶತ್ರುವೀರರನ್ನು ಸಂಹರಿಸುವ ಪರಾಕ್ರಮಿ ಶ್ರೀರಾಮನು ಧನುಸ್ಸನ್ನೆತ್ತಿ ಅದಕ್ಕೆ ಬಾಣಗಳನ್ನು ಅನುಸಂಧಾನ ಮಾಡಿದನು.॥1॥

ಮೂಲಮ್ - 2½

ರಾವಣಾಯ ಶರಾನ್ಘೋರಾನ್ವಿಸಸರ್ಜ ಚಮೂಮುಖೇ ।
ಅಥಾನ್ಯ ರಥಮಾಸ್ಥಾಯ ರಾವಣೋ ರಾಕ್ಷಸಾಧಿಪಃ ॥
ಅಭ್ಯಧಾವತ ಕಾಕುತ್ಸ್ಥಂ ಸ್ವರ್ಭಾನುರಿವ ಭಾಸ್ಕರಮ್ ।

ಅನುವಾದ

ರಣರಂಗದಲ್ಲಿ ರಾಮನು ಘೋರವಾದ ಬಾಣಗಳನ್ನು ರಾವಣನಿಗೆ ಗುರಿಯಿಟ್ಟು ಪ್ರಯೋಗಿಸತೊಡಗಿದನು. ಅಷ್ಟರಲ್ಲಿ ರಾವಣನೂ ಕೂಡ ಇನ್ನೊಂದು ರಥದಲ್ಲಿ ಕುಳಿತು ರಾಹು ಸೂರ್ಯನನ್ನು ಆಕ್ರಮಿಸುವಂತೆ ಶ್ರೀರಾಮನನ್ನು ಆಕ್ರಮಣ ಮಾಡಿದನು.॥2½॥

ಮೂಲಮ್ - 3

ದಶಗ್ರೀವೋ ರಥಸ್ಥಸ್ತು ರಾಮಂ ವಜ್ರೋಪಮೈಃ ಶರೈಃ ।
ಆಜಘಾನ ಮಹಾಶೈಲಂ ಧಾರಾಭಿರಿವ ತೋಯದಃ ॥

ಅನುವಾದ

ದಶಮುಖ ರಾವಣನು ರಥದಲ್ಲಿ ಕುಳಿತು ತನ್ನ ವಜ್ರದಂತಹ ಬಾಣಗಳಿಂದ ಮೇಘಗಳು ಪರ್ವತ ಮೇಲೆ ಮಳೆ ಸುರಿಸುವಂತೆ ಶ್ರೀರಾಮನ ಮೇಲೆ ಮಳೆ ಸುರಿಸಿದನು.॥3॥

ಮೂಲಮ್ - 4

ದೀಪ್ತಪಾವಕಸಂಕಾಶೈಃ ಶರೈಃ ಕಾಂಚನಭೂಷಣೈಃ ।
ಅಭ್ಯವರ್ಷದ್ ರಣೇ ರಾಮೋ ದಶಗ್ರೀವಂ ಸಮಾಹಿತಃ ॥

ಅನುವಾದ

ಶ್ರೀರಾಮಚಂದ್ರನೂ ಏಕಾಗ್ರಚಿತ್ತದಿಂದ ಯುದ್ಧದಲ್ಲಿ ದಶಮುಖ ರಾವಣನ ಮೇಲೆ ಪ್ರಜ್ವಲಿತ ಅಗ್ನಿಯಂತಹ ತೇಜಸ್ವೀ ಸ್ವರ್ಣಭೂಷಿತ ಬಾಣಗಳ ವರ್ಷವನ್ನೇ ಸುರಿಸತೊಡಗಿದನು.॥4॥

ಮೂಲಮ್ - 5

ಭೂಮೌ ಸ್ಥಿತಸ್ಯ ರಾಮಸ್ಯ ರಥಸ್ಥಸ್ಯ ಸ ರಕ್ಷಸಃ ।
ನ ಸಮಂ ಯುದ್ಧಮಿತ್ಯಾಹುರ್ದೇವಗಂಧರ್ವಕಿನ್ನರಾಃ ॥

ಅನುವಾದ

ಶ್ರೀರಘುನಾಥನು ನೆಲದ ಮೇಲೆ ನಿಂತಿದ್ದನು, ಆ ರಾಕ್ಷಸನು ರಥದಲ್ಲಿ ಕುಳಿತಿದ್ದನು. ಇಂತಹ ಸ್ಥಿತಿಯಲ್ಲಿ ಇವರಿಬ್ಬರ ಯುದ್ಧ ಸರಿಯಲ್ಲ ಎಂದು ಆಕಾಶದಲ್ಲಿ ನೆರೆದಿದ್ದ ದೇವ, ಗಂಧರ್ವ, ಕಿನ್ನರರು ಮಾತನಾಡಿಕೊಳ್ಳುತ್ತಿದ್ದರು.॥5॥

ಮೂಲಮ್ - 6

ತತೋ ದೇವವರಃ ಶ್ರೀಮಾನ್ಶ್ರುತ್ವಾ ತೇಷಾಂ ವಚೋಽಮೃತಮ್ ।
ಅಹೂಯ ಮಾತಲಿಂ ಶಕ್ರೋ ವಚನಂ ಚೇದಮಬ್ರವೀತ್ ॥

ಅನುವಾದ

ಅವರ ಅಮೃತೋಪಮ ಮಧುರ ಮಾತುಗಳನ್ನು ಕೇಳಿ ತೇಜಸ್ವೀ, ದೇವೇಂದ್ರನು ಮಾತಲಿಯನ್ನು ಕರೆದು ಹೇಳಿದನು.॥6॥

ಮೂಲಮ್ - 7

ರಥೇನ ಮಮ ಭೂಮಿಷ್ಠಂ ಶೀಘ್ರಂ ಯಾಹಿ ರಘೂತ್ತಮಮ್ ।
ಅಹೂಯ ಭೂತಲಂ ಯಾತಃ ಕುರು ದೇವಹಿತಂ ಮಹತ್ ॥

ಅನುವಾದ

ಸಾರಥಿಯೇ! ರಘುಕುಲತಿಲಕ ಶ್ರೀರಾಮನು ಭೂಮಿಯ ಮೇಲೆ ನಿಂತಿರುವನು. ನನ್ನ ರಥವನ್ನು ಬೇಗನೇ ಕೊಂಡು ಹೋಗಿ ಶ್ರೀರಾಮನಲ್ಲಿ - ಈ ರಥದಲ್ಲಿ ದೇವೇಂದ್ರನು ನಿಮ್ಮ ಸೇವೆಯಲ್ಲಿ ಕಳಿಸಿರುವನು, ಹೀಗೆ ಹೇಳಿ, ಅವನನ್ನು ರಥದಲ್ಲಿ ಕುಳ್ಳಿರಿಸಿ ದೇವತೆಗಳ ಹಿತದ ಕಾರ್ಯಸಿದ್ಧಗೊಳಿಸು.॥7॥

ಮೂಲಮ್ - 8

ಇತ್ಯುಕ್ತೋ ದೇವರಾಜೇನ ಮಾತಲಿರ್ದೇವ ಸಾರಥಿಃ ।
ಪ್ರಣಮ್ಯ ಶಿರಸಾ ದೇವಂ ತತೋ ವಚನಮಬ್ರವೀತ್ ॥

ಅನುವಾದ

ದೇವೇಂದ್ರನು ಹೀಗೆ ಹೇಳಿದಾಗ ದೇವ-ಸಾರಥಿ ಮಾತಲಿಯು ತಲೆಬಾಗಿ ವಂದಿಸಿ, ಇಂತೆದನು.॥8॥

ಮೂಲಮ್ - 9

ಶೀಘ್ರಂ ಯಾಸ್ಯಾಮಿ ದೇವೇಂದ್ರ ಸಾರಥ್ಯಂ ಚ ಕರೋಮ್ಯಹಮ್ ।
ತತೋ ಹಯೈಶ್ಚ ಸಂಯೋಜ್ಯ ಹರಿತೈಃ ಸ್ಯಂದನೋತ್ತಮಮ್ ॥

ಅನುವಾದ

ದೇವೇಂದ್ರನೇ! ನಾನು ಬೇಗನೇ ನಿಮ್ಮ ಉತ್ತಮ ರಥಕ್ಕೆ ಹಸಿರು ಬಣ್ಣದ ಕುದುರೆಗಳನ್ನು ಹೂಡಿ, ಜೊತೆಗೆ ಕೊಂಡು ಹೋಗವೆನು ಹಾಗೂ ಶ್ರೀರಘುನಾಥನ ಸಾರಥಿಯ ಕಾರ್ಯಮಾಡುವೆನು.॥9॥

ಮೂಲಮ್ - 10

ತತಃ ಕಾಂಚನ ಚಿತ್ರಾಂಗಃ ಕಿಂಕಿಣೀ ಶತಭೂಷಿತಃ ।
ತರುಣಾದಿತ್ಯ ಸಂಕಾಶೋ ವೈಢೂರ್ಯಮಯಕೂಬರಃ ।
ಸದಶ್ವೈಃ ಕಾಂಚನಾಪೀಡೈರ್ಯುಕ್ತಃ ಶ್ವೇತಪ್ರಕೀರ್ಣಕೈಃ ॥

ಮೂಲಮ್ - 11

ಹರಿಭಿಃ ಸೂರ್ಯಸಂಕಾಶೈರ್ಹೇಮಜಾಲ ವಿಭೂಷಿತೈಃ ।
ರುಕ್ಮವೇಣುಧ್ವಜಃ ಶ್ರೀಮಾನ್ ದೇವರಾಜ ರಥೋ ವರಃ ॥

ಮೂಲಮ್ - 12

ದೇವರಾಜೇನ ಸಂದಿಷ್ಟೋ ರಥಮಾರುಹ್ಯ ಮಾತಲಿಃ ।
ಅಭ್ಯವರ್ತತ ಕಾಕುತ್ಸ್ಥಮವತೀರ್ಯ ತ್ರಿವಿಷ್ಟಪಾತ್ ॥

ಅನುವಾದ

ದೇವೇಂದ್ರನ ಶೋಭಾಶಾಲಿ ಶ್ರೇಷ್ಠ ರಥದ ಅವಯವಗಳೆಲ್ಲ ಸುವರ್ಣನಾಗಿದ್ದು ವಿಚಿತ್ರವಾಗಿ ಶೋಭಿಸುತ್ತಿತ್ತು. ಅದನ್ನು ನೂರಾರು ಗೆಜ್ಜೆಗಳಿಂದ ಅಲಂಕರಿಸಿದ್ದು, ಪ್ರಾತಃಕಾಲದ ಸೂರ್ಯನಂತೆ ಅರುಣಕಾಂತಿಯುಕ್ತವಾಗಿತ್ತು. ಅದರ ಮೂಕಿಯು ವೈಡೂರ್ಯಮಯವಾಗಿತ್ತು. ಆ ರಥವು ಸೂರ್ಯಸದೃಶ ತೇಜಸ್ವೀ ಸುವರ್ಣ ಜಾಲರಿಗಳಿಂದ ಅಲಂಕೃತವಾಗಿತ್ತು. ಸ್ವರ್ಣಾಭರಣಗಳಿಂದ ಶ್ವೇತ ಚಾಮರಗಳಿಂದ ಭೂಷಿತವಾದ ಹಸಿರು ಬಣ್ಣದ ಕುದುರೆಗಳನ್ನು ಹೂಡಿದ್ದವು. ಸ್ವರ್ಣದ ಧ್ವಜದಂಡವಿದ್ದ ರಥದಲ್ಲಿ ಮಾತಲಿಯು ಆರೂಢನಾಗಿ ದೇವರಾಜನ ಸಂದೇಶದೊಂದಿಗೆ ಭೂತಳಕ್ಕಿಳಿದು ಶ್ರೀರಾಮನ ಮುಂದೆ ಬಂದು ನಿಂತುಕೊಂಡನು.॥10-12॥

ಮೂಲಮ್ - 13

ಅಬ್ರವೀಚ್ಚ ತದಾ ರಾಮಂ ಸಪ್ರತೋದೋ ರಥೇ ಸ್ಥಿತಃ ।
ಪ್ರಾಂಜಲಿರ್ಮಾತಲಿರ್ವಾಕ್ಯಂ ಸಹಸ್ರಾಕ್ಷಸ್ಯ ಸಾರಥಿಃ ॥

ಅನುವಾದ

ಸಹಸ್ರಾಕ್ಷ ಇಂದ್ರನ ಸಾರಥಿ ಮಾತಲಿಯು ಚಮ್ಮಟಿಗೆಯನ್ನು ಹಿಡಿದು ರಥದಲ್ಲಿ ಕುಳಿತು, ಕರಮುಗಿದು ಶ್ರೀರಾಮಚಂದ್ರನಲ್ಲಿ ಹೇಳಿದನು.॥13॥

ಮೂಲಮ್ - 14

ಸಹಸ್ರಾಕ್ಷೇಣ ಕಾಕುತ್ಸ್ಥ ರಥೋಽಯಂ ವಿಜಯಾಯ ತೇ ।
ದತ್ತಸ್ತವ ಮಹಾಸತ್ತ್ವ ಶ್ರೀಮಾನ್ಶತ್ರುನಿಬರ್ಹಣ ॥

ಅನುವಾದ

ಮಹಾಬಲಿ ಶತ್ರುಸೂದನ ಶ್ರೀಮಾನ್ ರಘುವೀರನೇ! ಸಹಸ್ರನೇತ್ರಧಾರೀ ದೇವೇಂದ್ರನು ನಿನ್ನ ವಿಜಯಕ್ಕಾಗಿ ಈ ರಥವನ್ನು ಸಮರ್ಪಿಸಿರುವನು.॥14॥

ಮೂಲಮ್ - 15

ಇದಮೈಂದ್ರ ಮಹಚ್ಚಾಪಂ ಕವಚಂ ಚಾಗ್ನಿಸಂನಿಭಮ್ ।
ಶರಾಶ್ಚಾದಿತ್ಯಸಂಕಾಶಾಃ ಶಕ್ತಿಶ್ಚ ವಿಮಲಾ ಶಿತಾ ॥

ಅನುವಾದ

ಇದರಲ್ಲಿ ಇಂದ್ರನ ವಿಶಾಲ ಧನುಸ್ಸು ಇದೆ. ಅಗ್ನಿಗೆ ಸಮಾನವಾದ ತೇಜಸ್ವಿ ಕವಚವಿದೆ. ಈ ಸೂರ್ಯಸದೃಶ ಪ್ರಕಾಶಮಾನ ಬಾಣಗಳಿವೆ ಹಾಗೂ ಕಲ್ಯಾಣಮಯಿ ನಿರ್ಮಲಶಕ್ತಿ ಇದೆ.॥15॥

ಮೂಲಮ್ - 16

ಆರುಹ್ಯೇಮಂ ರಥಂ ವೀರ ರಾಕ್ಷಸಂ ಜಹಿ ರಾವಣಮ್ ।
ಮಯಾ ಸಾರಥಿನಾ ದೇವ ಮಹೇಂದ್ರ ಇವ ದಾನವಾನ್ ॥

ಅನುವಾದ

ವೀರಶ್ರೇಷ್ಠನೇ! ನೀವು ಈ ರಥದ ಮೇಲೆ ಆರೂಢವಾಗಿ ಸಾರಥಿಯಾದ ನನ್ನ ಸಹಾಯದಿಂದ ರಾಕ್ಷಸರಾಜ ರಾವಣನನ್ನು ಮಹೇಂದ್ರನು ದಾನವರನ್ನು ಸಂಹರಿಸಿದಂತೆ ಸಂಹಾರ ಮಾಡು.॥16॥

ಮೂಲಮ್ - 17

ಇತ್ಯುಕ್ತಃ ಸಂಪರಿಕ್ರಮ್ಯ ರಥಂ ಸಮಭಿವಾದ್ಯ ಚ ।
ಆರುರೋಹ ತದಾ ರಾಮೋ ಲೋಕಾನ್ಲ್ಲಕ್ಷ್ಮ್ಯಾವಿರಾಜಯನ್ ॥

ಅನುವಾದ

ಮಾತಲಿಯು ಹೀಗೆ ಹೇಳಿದಾಗ ಶ್ರೀರಾಮನು ಆ ರಥಕ್ಕೆ ಪ್ರದಕ್ಷಿಣೆ ಬಂದು, ಅದಕ್ಕೆ ಪ್ರಣಾಮಗೈದು ಅದನ್ನು ಏರಿದನು. ಆಗ ತನ್ನ ಶೋಭೆಯಿಂದ ಮೂರು ಲೋಕಗಳನ್ನು ಬೆಳಗಿದನು.॥17॥

ಮೂಲಮ್ - 18

ತದ್ಬಭೌಚಾದ್ಭುತಂ ಯುದ್ಧಂ ದ್ವೇರಥಂ ರೋಮಹರ್ಷಣಮ್ ।
ರಾಮಸ್ಯ ಚ ಮಹಾಬಾಹೋ ರಾವಣಸ್ಯ ಚ ರಕ್ಷಸಃ ॥

ಅನುವಾದ

ಅನಂತರ ಮಹಾಬಾಹು ಶ್ರೀರಾಮ ಮತ್ತು ರಾವಣರ ಅದ್ಭುತ, ರೋಮಾಂಚಕರ ದ್ವಂದ್ವಯುದ್ಧ ಪ್ರಾರಂಭವಾಯಿತು.॥18॥

ಮೂಲಮ್ - 19

ಸ ಗಾಂಧರ್ವೇಣ ಗಾಂಧರ್ವಂ ದೈವಂ ದೈವೇನ ರಾಘವಃ ।
ಅಸ್ತ್ರಂ ರಾಕ್ಷಸರಾಜಸ್ಯ ಜಘಾನ ಪರಮಾಸ್ತ್ರವಿತ್ ॥

ಅನುವಾದ

ಉತ್ತಮ ಅಸ್ತ್ರವೇತ್ತನಾದ ಶ್ರೀರಾಮಚಂದ್ರನು ರಾವಣನು ಪ್ರಯೋಗಿಸಿದ ಗಾಂಧರ್ವಾಸ್ತ್ರವನ್ನು ಗಾಂಧರ್ವ ಅಸ್ತ್ರದಿಂದಲೂ ಮತ್ತು ದೈವಾಸ್ತ್ರವನ್ನು ದೈವಾಸ್ತ್ರದಿಂದಲೂ ನಾಶಮಾಡಿದನು.॥19॥

ಮೂಲಮ್ - 20

ಅಸ್ತ್ರಂ ತು ಪರಮಂ ಘೋರಂ ರಾಕ್ಷಸಂ ರಾಕ್ಷಸಾಧಿಪಃ ।
ಸಸರ್ಜ ಪರಮಕ್ರುದ್ಧಃ ಪುನರೇವ ನಿಶಾಚರಃ ॥

ಅನುವಾದ

ಆಗ ರಾಕ್ಷಸರಾಜಾ ನಿಶಾಚರ ರಾವಣನು ಅತ್ಯಂತ ಕುಪಿತನಾಗಿ ಪುನಃ ಪರಮಭಯಾನಕ ರಾಕ್ಷಸಾಸ್ತ್ರವನ್ನು ಪ್ರಯೋಗಿಸಿದನು.॥20॥

ಮೂಲಮ್ - 21

ತೇ ರಾವಣಧನುರ್ಮುಕ್ತಾಃ ಶರಾಃ ಕಾಂಚನಭೂಷಣಾಃ ।
ಅಭ್ಯವರ್ತಂತ ಕಾಕುತ್ಸ್ಥಂ ಸರ್ಪಾಭೂತ್ವಾ ಮಹಾವಿಷಾಃ ॥

ಅನುವಾದ

ರಾವಣನ ಧನುಸ್ಸಿನಿಂದ ಬಿಟ್ಟಿರುವ ಸುವರ್ಣ ಭೂಷಿತ ಬಾಣಗಳು ಮಹಾವಿಷ ಸರ್ಪಗಳಂತೆ ಶ್ರೀರಾಮಚಂದ್ರನ ಬಳಿಗೆ ಬರುತ್ತಿದ್ದವು.॥21॥

ಮೂಲಮ್ - 22

ತೇ ದೀಪ್ತವದನಾ ದೀಪ್ತಂ ವಮಂತೋ ಜ್ವಲನಂ ಮುಖೈಃ ।
ರಾಮಮೇವಾಭ್ಯವರ್ತಂತ ವ್ಯಾದಿತಾಸ್ಯಾ ಭಯಾನಕಾಃ ॥

ಅನುವಾದ

ಆ ಸರ್ಪಗಳು ಬಾಯಿಂದ ಬೆಂಕಿಯನ್ನು ಉಗುಳುತ್ತಾ, ಬಾಯಿತೆರೆದು ಭಯಂಕರವಾಗಿ ಕಾಣುತ್ತಿದ್ದವು. ಅವೆಲ್ಲವೂ ಶ್ರೀರಾಮನ ಮುಂದೆ ಬರತೊಡಗಿದವು.॥22॥

ಮೂಲಮ್ - 23

ತೈರ್ವಾಸುಕಿಸಮಸ್ಪರ್ಶೈರ್ದೀಪ್ತಭೋಗೈರ್ಮಹಾವಿಷೈಃ ।
ದಿಶಶ್ಚ ಸಂತತಾಃ ಸರ್ವಾ ವಿದಿಶಶ್ಚ ಸಮಾವೃತಾಃ ॥

ಅನುವಾದ

ವಾಸುಕಿಯಂತೆ ಅವುಗಳ ಸ್ಪರ್ಶ ಅಸಹ್ಯವಾಗಿದ್ದು, ಹೆಡೆಗಳು ಪ್ರಜ್ವಲಿತವಾಗಿ ಮಹಾವಿಷದಿಂದ ತುಂಬಿದ್ದವು. ಆ ಸರ್ಪಾಕಾರ ಬಾಣಗಳಿಂದ ವ್ಯಾಪ್ತವಾಗಿ ದಶದಿಕ್ಕುಗಳು ಆಚ್ಛಾದಿತವಾಗಿದ್ದವು.॥23॥

ಮೂಲಮ್ - 24

ತಾನ್ ದೃಷ್ಟ್ವಾ ಪನ್ನಗಾನ್ರಾಮಃ ಸಮಾಪತತ ಆಹವೇ ।
ಅಸ್ತ್ರಂ ಗಾರುತ್ಮಕಂ ಘೋರಂ ಪ್ರಾದುಶ್ಚಕ್ರೇ ಭಯಾವಹಮ್ ॥

ಅನುವಾದ

ಯುದ್ಧರಂಗದಲ್ಲಿ ಸರ್ಪಗಳು ಬರುತ್ತಿರುವುದನ್ನು ನೋಡಿ ಶ್ರೀರಾಮನು ಅತ್ಯಂತ ಭಯಂಕರ ಗರುಡಾಸ್ತ್ರವನ್ನು ಪ್ರಯೋಗಿಸಿದನು.॥24॥

ಮೂಲಮ್ - 25

ತೇ ರಾಘವಧನುರ್ಮೂಕ್ತಾ ರುಕ್ಮಪುಂಖಾಃ ಶಿಖಿಪ್ರಭಾಃ ।
ಸುಪರ್ಣಾಃ ಕಾಂಚನಾ ಭೂತ್ವಾ ವಿಚೇರುಃ ಸರ್ಪಶತ್ರವಃ ॥

ಅನುವಾದ

ಮತ್ತೆ ರಘುನಾಥನ ಧನುಸ್ಸಿನಿಂದ ಬಿಟ್ಟ ಸ್ವರ್ಣರೆಕ್ಕೆಗಳುಳ್ಳ ಅಗ್ನಿತುಲ್ಯ ತೇಜಸ್ವೀ ಬಾಣವು ಸರ್ಪಗಳ ಶತ್ರುವಾದ ಗರುಡನಾಗಿ ಎಲ್ಲೆಡೆ ಸಂಚರಿಸತೊಡಗಿತು.॥25॥

ಮೂಲಮ್ - 26

ತೇ ತಾನ್ಸರ್ವಾನ್ಶರಾನ್ಜಘ್ನುಃ ಸರ್ಪರೂಪಾನ್ ಮಹಾಜವಾನ್ ।
ಸುಪರ್ಣರೂಪಾ ರಾಮಸ್ಯ ವಿಶಿಖಾಃ ಕಾಮರೂಪಿಣಃ ॥

ಅನುವಾದ

ಕಾಮರೂಪಿಯಾದ ಗರುಡಾಕಾರ ಶ್ರೀರಾಮನ ಬಾಣವು ರಾವಣನ ಮಹಾ ವೇಗಶಾಲೀ ಸರ್ಪಾಕಾರ ಸಾಯಕಗಳೆಲ್ಲವನ್ನೂ ಸಂಹಾರ ಮಾಡಿಬಿಟ್ಟಿತು.॥26॥

ಮೂಲಮ್ - 27

ಅಸ್ತ್ರೇ ಪ್ರತಿಹತೇ ಕ್ರುದ್ಧೋ ರಾವಣೋ ರಾಕ್ಷಸಾಧಿಪಃ ।
ಅಭ್ಯವರ್ಷತ್ತದಾ ರಾಮಂ ಘೋರಾಭಿಃ ಶರವೃಷ್ಟಿಭಿಃ ॥

ಅನುವಾದ

ಹೀಗೆ ತನ್ನ ಅಸ್ತ್ರವು ನಾಶವಾದಾಗ ರಾವಣನು ಕ್ರೋಧದಿಂದ ಉರಿದೆದ್ದನು ಹಾಗೂ ಆಗ ಶ್ರೀರಘುನಾಥನ ಮೇಲೆ ಭಯಂಕರ ಬಾಣಗಳ ಮಳೆಗರೆದನು.॥27॥

ಮೂಲಮ್ - 28

ತತಃ ಶರಸಹಸ್ರೇಣ ರಾಮಮಕ್ಲಿಷ್ಟಕಾರಿಣಮ್ ।
ಅರ್ದಯಿತ್ವಾ ಶರೌಘೇಣ ಮಾತಲಿಂ ಪ್ರತ್ಯವಿಧ್ಯತ ॥

ಅನುವಾದ

ಅನಾಯಾಸವಾಗಿ ಮಹತ್ಕರ್ಮ ಮಾಡುವ ಶ್ರೀರಾಮನನ್ನು ಸಾವಿರಾರು ಬಾಣಗಳಿಂದ ಪೀಡಿಸಿ ರಾವಣನು ಮಾತಲಿಯನ್ನು ಬಾಣಸಮೂಹಗಳಿಂದ ಗಾಯಗೊಳಿಸಿದನು.॥28॥

ಮೂಲಮ್ - 29½

ಚಿಚ್ಛೇದ ಕೇತುಮುದ್ದಿಶ್ಯ ಶರೇಣೈಕೇನ ರಾವಣಃ ।
ಪಾತಯಿತ್ವಾ ರಥೋಪಸ್ಥೇ ರಥಾತ್ಕೇತುಂ ಚ ಕಾಂಚನಮ್ ॥
ಐಂದ್ರಾನಪಿ ಜಘಾನಾಶ್ಚಾನ್ ಶರಜಾಲೇನ ರಾವಣಃ ।

ಅನುವಾದ

ಅನಂತರ ರಾವಣನು ಇಂದ್ರನ ರಥದ ಧ್ವಜವನ್ನು ಗುರಿಯಿಟ್ಟು ತುಂಡರಿಸಿದನು. ತುಂಡಾದ ಸುವರ್ಣಮಯ ಧ್ವಜವು ಮೇಲಿನಿಂದ ಕೆಳಕ್ಕೆ ಬಿದ್ದಾಗ ಬಾಣಜಾಲದಿಂದ ಇಂದ್ರನ ಕುದುರೆಗಳನ್ನು ಕ್ಷತ-ವಿಕ್ಷತಗೊಳಿಸಿದನು.॥29॥

ಮೂಲಮ್ - 30

ವಿಷೇದುರ್ದೇವಗಂಧರ್ವಚರಣಾ ದಾನವೈಃ ಸಹ ॥

ಮೂಲಮ್ - 31

ರಾಮಮಾರ್ತಂ ತದಾ ದೃಷ್ಟ್ವಾಸಿದ್ಧಾಶ್ಚ ಪರಮರ್ಷಯಃ ।
ವ್ಯಥಿತಾ ವಾನರೇಂದಾಶ್ಚ ಬಭೂವುಃ ಸವಿಭೀಷಣಾಃ ॥

ಅನುವಾದ

ಇದನ್ನು ನೋಡಿದ ದೇವತೆಗಳು, ಗಂಧರ್ವರು, ಚಾರಣರು, ದಾನವರು ವಿಷಾದಹೊಂದಿದರು. ಪೀಡಿತನಾದ ಶ್ರೀರಾಮನನ್ನು ನೋಡಿದ ಸಿದ್ಧರ, ಮಹರ್ಷಿಗಳ ಮನಸ್ಸಿಗೂ ವ್ಯಥೆ ಉಂಟಾಯಿತು. ವಿಭೀಷಣ ಸಹಿತ ವಾನರ ಯೂಥಪತಿಗಳೆಲ್ಲರೂ ಬಹಳ ದುಃಖಿತರಾದರು.॥30-31॥

ಮೂಲಮ್ - 32½

ರಾಮಚಂದ್ರಮಸಂ ದೃಷ್ಟ್ವಾ ಗ್ರಸ್ತಂ ರಾವಣರಾಹುಣಾ ।
ಪ್ರಾಜಾಪತ್ಯಂ ಚ ನಕ್ಷತ್ರಂ ರೋಹಿಣೀಂ ಶಶಿನಃ ಪ್ರಿಯಾಮ್ ॥
ಸಮಾಕ್ರಮ್ಯ ಬುಧಸ್ತಸ್ಥೌ ಪ್ರಜಾನಾಮಹಿತಾವಹಃ ।

ಅನುವಾದ

ಶ್ರೀರಾಮರೂಪೀ ಚಂದ್ರನು ರಾವಣರೂಪೀ ರಾಹುವಿನಿಂದ ಗ್ರಸ್ತನಾದುದನ್ನು ನೋಡಿ, ಪ್ರಜಾಪತಿ ದೈವತ್ಯನಾದ ಬುಧಗ್ರಹವು ಚಂದ್ರಪ್ರಿಯಾ ರೋಹಿಣಿ ನಕ್ಷತ್ರವನ್ನು ಆಕ್ರಮಿಸಿ ಪ್ರಜಾವರ್ಗಕ್ಕೆ ಅನಿಷ್ಟಕಾರಕನಾದನು.॥32½॥

ಮೂಲಮ್ - 33½

ಸಧೂಮಪರಿವೃತ್ತೋರ್ಮಿಃ ಪ್ರಜ್ವಲನ್ನಿವ ಸಾಗರಃ ॥
ಉತ್ಪಪಾತ ತದಾ ಕ್ರುದ್ಧಃ ಸ್ಪೃಶನ್ನಿವ ದಿವಾಕರಮ್ ।

ಅನುವಾದ

ಸಮುದ್ರವು ಪ್ರಜ್ವಲಿತವಾಯಿತು, ಅದರ ಅಲೆಗಳಿಂದ ಹೊಗೆ ಏಳತೊಡಗಿತು. ವಾಯುಕುಪಿತವಾಗಿ ಸೂರ್ಯನನ್ನೇ ಸ್ಪರ್ಶಿಸುವುದೋ ಎಂಬಂತೆ ಮೇಲಕ್ಕೆದ್ದಿತು.॥33½॥

ಮೂಲಮ್ - 34½

ಶಸ್ತ್ರವರ್ಣಃ ಸುಪರುಷೋ ಮಂದರಶ್ಮಿರ್ದಿವಾಕರಃ ॥
ಅದೃಶ್ಯತ ಕಬಂಧಾಂಕಃ ಸಂಸಕ್ತೋ ಧೂಮಕೇತುನಾ ।

ಅನುವಾದ

ಸೂರ್ಯಕಿರಣಗಳು ಮಂದವಾದುವು, ಅವುಗಳ ಕಾಂತಿಯು ಖಡ್ಗದಂತೆ ಕಪ್ಪಾಯಿತು. ಅವು ಅತ್ಯಂತ ಪ್ರಖರ ಕಬಂಧ ಚಿಹ್ನೆಯಿಂದ ಕೂಡಿ ಧೂಮಕೇತು ಎಂಬ ಉತ್ಪಾತ ಗ್ರಹದೊಂದಿಗೆ ಸೇರಿದಂತೆ ಗೋಚರಿಸಿತು.॥34½॥

ಮೂಲಮ್ - 35½

ಕೋಸಲಾನಾಂ ಚ ನಕ್ಷತ್ರಂ ವ್ಯಕ್ತಮಿಂದ್ರಾಗ್ನಿ ದೈವತಮ್ ॥
ಆಹತ್ಯಾಂಗಾರಕಸ್ತಸ್ಥೌ ವಿಶಾಖಾಮಪಿ ಚಾಂಬರೇ ।

ಅನುವಾದ

ಆಕಾಶದಲ್ಲಿ ಇಂದ್ರಾಗ್ನಿ ದೈವತ್ಯನಾದ ಇಕ್ಷಾಕು ವಂಶಿಯರ ನಕ್ಷತ್ರವಾದ ವಿಶಾಖಾ ನಕ್ಷತ್ರದ ಮೇಲೆ ಮಂಗಳನು ಆಕ್ರಮಣ ಮಾಡಿ ಕುಳಿತುಕೊಂಡನು.॥35॥

ಮೂಲಮ್ - 36½

ದಶಾಸ್ಯೋ ವಿಂಶತಿಭುಜಃ ಪ್ರಗೃಹೀತಶರಾಸನಃ ॥
ಅದೃಶ್ಯತಃ ದಶಗ್ರೀವೋ ಮೈನಾಕ ಇವ ಪರ್ವತಃ ।

ಅನುವಾದ

ಆಗ ಹತ್ತು ತಲೆ ಮತ್ತು ಇಪ್ಪತ್ತು ತೋಳುಗಳಿಂದ ಕೂಡಿದ ದಶಗ್ರೀವ ರಾವಣನು ಕೈಯಲ್ಲಿ ಧನುಸ್ಸು ಹಿಡಿದ ಮೈನಾಕ ಪರ್ವತದಂತೆ ಕಂಡುಬರುತ್ತಿದ್ದನು.॥36½॥

ಮೂಲಮ್ - 37½

ನಿರಸ್ಯಮಾನೋ ರಾಮಸ್ತು ದಶಗ್ರೀವೇಣ ರಕ್ಷಸಾ ॥
ನಾಶಕ್ನೋದಭಿಸಂಧಾತುಂ ಸಾಯಕಾನ್ರಣಮೂರ್ಧನಿ ।

ಅನುವಾದ

ರಾವಣನ ಬಾಣಗಳಿಂದ ಆಹತನಾದ್ದರಿಂದ ಭಗವಾನ್ ಶ್ರೀರಾಮನು ಯುದ್ಧರಂಗದಲ್ಲಿ ಬಾಣಾನುಸಂಧಾನ ಮಾಡದಾದನು.॥37½॥

ಮೂಲಮ್ - 38½

ಸ ಕೃತ್ವಾ ಭ್ರುಕುಟಿ ಕ್ರುದ್ಧಃ ಕಿಂಚಿತ್ಸಂ ರಕ್ತಲೋಚನಃ ॥
ಜಗಾಮ ಸುಮಹಾಕ್ರೋಧಂ ನಿರ್ದಹನ್ನಿವ ರಾಕ್ಷಸಾನ್ ।

ಅನುವಾದ

ಅನಂತರ ಶ್ರೀರಾಮನು ಕ್ರೋಧಭಾವವನ್ನು ಪ್ರಕಟಿಸಿದನು. ಹುಬ್ಬುಗಳು ಗಂಟಿಕ್ಕಿ, ಕಣ್ಣುಗಳು ಕೆಂಪಾದವು. ಅವನು ಸಮಸ್ತರಾಕ್ಷಸ ರನ್ನು ಭಸ್ಮಮಾಡುವನೋ ಎಂಬಂತೆ ಮಹಾಕ್ರೋಧ ಕಂಡುಬರುತ್ತಿತ್ತು.॥38½॥

ಮೂಲಮ್ - 39

ತಸ್ಯ ಕ್ರುದ್ಧಸ್ಯ ವದನಂ ದೃಷ್ಟ್ವಾ ರಾಮಸ್ಯ ಧೀಮತಃ ।
ಸರ್ವಭೂತಾನಿ ವಿತ್ರೇಸುಃ ಪ್ರಾಕಂಪತ ಚ ಮೇದಿನೀ ॥

ಅನುವಾದ

ಆಗ ಕುಪಿತನಾದ ಬುದ್ಧಿವಂತ ಶ್ರೀರಾಮನ ಮುಖವನ್ನು ನೋಡಿ ಸಮಸ್ತ ಪ್ರಾಣಿಗಳು ಭಯದಿಂದ ನಡುಗಿಹೋದುವು, ಭೂಮಿಯಪ ಕಂಪಿಸತೊಡಗಿತು.॥39॥

ಮೂಲಮ್ - 40

ಸಿಂಹಶಾರ್ದೂಲವಾನ್ಶೈಲಃ ಸಂಚಚಾಲ ಚಲದ್ರುಮಃ ।
ಬಭೂವ ಚಾಪಿ ಕ್ಷುಭಿತಃ ಸಮುದ್ರಃ ಸರಿತಾಂ ಪತಿಃ ॥

ಅನುವಾದ

ಸಿಂಹವ್ಯಾಘ್ರಗಳಿಂದ ತುಂಬಿದ ಪರ್ವತಗಳು ನಡುಗಿತು, ಅದರ ಮೇಲಿನ ವೃಕ್ಷಗಳು ತೂರಾಡಿದವು. ಸರಿತೆಗಳ ಸ್ವಾಮಿ ಸಮುದ್ರವು ಉಕ್ಕತೊಡಗಿತು.॥40॥

ಮೂಲಮ್ - 41

ಖರಾಶ್ಚ ಖರನಿರ್ಘೋಷಾ ಗಗನೇ ಪರುಷಾ ಘನಾಃ ।
ಔತ್ಪಾತಿಕಾಶ್ಚ ನರ್ದಂತಃ ಸಮಂತಾತ್ಪರಿಚಕ್ರಮುಃ ॥

ಅನುವಾದ

ಆಕಾಶದಲ್ಲಿ ಎಲ್ಲೆಡೆ ಉತ್ಪಾತಸೂಚಕ ಕತ್ತೆಗಳಂತೆ ಗರ್ಜಿಸುವ ಪ್ರಚಂಡ ಒಣ ಮೇಘಗಳು ಗುಡುಗುತ್ತಾ ಸುತ್ತತೊಡಗಿದವು.॥41॥

ಮೂಲಮ್ - 42

ರಾಮಂ ದೃಷ್ಟ್ವಾ ಸುಸಂಕ್ರುದ್ಧಮುತ್ಪಾತಾಂಶ್ಚೈವ ದಾರುಣಾನ್ ।
ವಿತ್ರೇಸುಃ ಸರ್ವಭೂತಾನಿ ರಾವಣಸ್ಯಾಭವದ್ಭಯಮ್ ॥

ಅನುವಾದ

ಶ್ರೀರಾಮನು ಅತ್ಯಂತ ಕುಪಿತನಾದುದನ್ನು, ದಾರಣ ಉತ್ಪಾತಗಳ ಪ್ರಾಕಟ್ಯ ನೋಡಿ ಸಮಸ್ತ ಪ್ರಾಣಿಗಳು ಭಯಭೀತರಾದವು. ರಾವಣನೊಳಗೂ ಭಯ ತುಂಬಿಹೋಯಿತು.॥42॥

ಮೂಲಮ್ - 43

ವಿಮಾನಸ್ಥಾಸ್ತದಾ ದೇವಾ ಗಂಧರ್ವಾಶ್ಚ ಮಹೋರಗಾಃ ।
ಋಷಿದಾನವದೈತ್ಯಾಶ್ಚ ಗರುತ್ಮಂತಶ್ಚ ಖೇಚರಾಃ ॥

ಮೂಲಮ್ - 44

ದದೃಶುಸ್ತೇ ತದಾಯುದ್ಧಂ ಲೋಕ ಸಂವರ್ತ ಸಂಸ್ಥಿತಮ್ ।
ನಾನಾ ಪ್ರಹರಣೈರ್ಭಿಮೈಃ ಶೂರಯೋಃ ಸಂಪ್ರಯುಧ್ಯತೋಃ ॥

ಅನುವಾದ

ಆಗ ವಿಮಾನಗಳಲ್ಲಿ ಕುಳಿತಿರುವ ದೇವತಾ, ಗಂಧರ್ವ, ಮಹಾನಾಗ, ಋಷಿ, ದೈತ್ಯ, ದಾನವ ಹಾಗೂ ಗರುಡ ಇವರೆಲ್ಲರೂ ಆಕಾಶದಲ್ಲಿ ಸ್ಥಿತರಾಗಿ ಸಮಸ್ತ ಲೋಕಗಳ ಪ್ರಳಯದಂತಿರುವ ಯುದ್ಧಪರಾಯಣ ಶೂರನಾದ ಶ್ರೀರಾಮ ಮತ್ತು ರಾವಣರ ನಾನಾ ಪ್ರಕಾರದ ಭಯಾನಕ ಪ್ರಹಾರಗಳಿಂದ ಕೂಡಿದ ಆ ಯುದ್ಧವನ್ನು ನೋಡತೊಡಗಿದರು.॥43-44॥

ಮೂಲಮ್ - 45

ಊಚುಃ ಸುರಾಸುರಾಃ ಸರ್ವೇ ತದಾ ವಿಗ್ರಹಮಾಗತಾಃ ।
ಪ್ರೇಕ್ಷಮಾಣಾ ಮಹದ್ಯುದ್ಧಂ ವಾಕ್ಯಂ ಭಕ್ತ್ಯಾ ಪ್ರಹೃಷ್ಟವತ್ ॥

ಅನುವಾದ

ಆ ಸಂದರ್ಭದಲ್ಲಿ ಯುದ್ಧನೋಡಲು ಬಂದಿರುವ ಸಮಸ್ತ ಸುರಾಸುರರು ಆ ಮಹಾಸಮರವನ್ನು ನೋಡಿ ಭಕ್ತಿಭಾವದಿಂದ ಹರ್ಷಪೂರ್ವಕ ಮಾತನಾಡಿಕೊಳ್ಳತೊಡಗಿದರು.॥45॥

ಮೂಲಮ್ - 46

ದಶಗ್ರೀವಂ ಜಯೇತ್ಯಾಹುರಸುರಾಃ ಮವಸ್ಥಿತಾಃ ।
ದೇವಾ ರಾಮಮಥೋಚುಸ್ತೇ ತ್ವಂ ಜಯೇತಿ ಪುನಃ ಪುನಃ ॥

ಅನುವಾದ

ಅಲ್ಲಿ ನಿಂತಿರುವ ಅಸುರರು ದಶಗ್ರೀವನನ್ನು ಸಂಭೋದಿಸುತ್ತಾ ನುಡಿದರು-ರಾವಣನೇ! ನಿನಗೆ ಜಯವಾಗಲಿ. ಅತ್ತ ದೇವತೆಗಳು ಶ್ರೀರಾಮನನ್ನು ಕರೆ ಕರೆದು ‘ನಿನಗೆ ಜಯವಾಗಲಿ’ ಎಂದು ಪದೇ ಪದೇ ಹೇಳತೊಡಗಿದರು.॥46॥

ಮೂಲಮ್ - 47

ಏತಸ್ಮಿನ್ನಂತರೇ ಕ್ರೋಧಾದ್ ರಾಘವಸ್ಯ ಸ ರಾವಣಃ ।
ಪ್ರಹರ್ತುಕಾಮೋ ದುಷ್ಟಾತ್ಮಾ ಸ್ಪೃಶನ್ ಪ್ರಹರಣಂ ಮಹತ್ ॥

ಅನುವಾದ

ಆಗಲೇ ದುಷ್ಟಾತ್ಮಾ ರಾವಣನು ಕ್ರೋಧಗೊಂಡು ಶ್ರೀರಾಮಚಂದ್ರನ ಮೇಲೆ ಪ್ರಹರಿಸುವ ಇಚ್ಛೆಯಂತೆ ಒಂದು ದೊಡ್ಡ ಆಯುಧವನ್ನು ಎತ್ತಿಕೊಂಡನು.॥47॥

ಮೂಲಮ್ - 48

ವಜ್ರಸಾರಂ ಮಹಾನಾದಂ ಸರ್ವಶತ್ರುನಿಬರ್ಹಣಮ್ ।
ಶೈಲಶೃಂಗಾನಿಭೈಃ ಕೂಟೈಶ್ಚಿತ್ತದೃಷ್ಟಿ ಭಯಾವಹಮ್ ॥

ಮೂಲಮ್ - 49

ಸಧೂಮಮಿವ ತೀಕ್ಷ್ಣಾಗ್ರಂ ಯುಗಾಂತಾಗ್ನಿಚಯೋಪಮಮ್ ।
ಅತಿರೌದ್ರಮನಾಸಾದ್ಯಂ ಕಾಲೇನಾಪಿ ದುರಾಸದಮ್ ॥

ಅನುವಾದ

ಅದು ವಜ್ರಾಯುಧದಂತೆ ಶಕ್ತಿಶಾಲಿಯಾಗಿದ್ದು, ಮಹಾಶಬ್ದವನ್ನು ಮಾಡುವ, ಸಮಸ್ತ ಶತ್ರುಗಳ ಸಂಹಾರಕವಾಗಿತ್ತು. ಅದು ಮನಸ್ಸು, ಕಣ್ಣುಗಳನ್ನು ಭಯಗೊಳಿಸುವಂತಿತ್ತು. ಅದರ ತುದಿ ಬಹಳ ತೀಕ್ಷ್ಣವಾಗಿದ್ದು, ಪ್ರಳಯಕಾಲದ ಧೂಮಯುಕ್ತ ಅಗ್ನಿಶಿಖೆಯಂತೆ ಅತ್ಯಂತ ಭಯಂಕರವಾಗಿ ಕಾಣುತ್ತಿತ್ತು. ಅದನ್ನು ಪಡೆಯುವುದೂ ಅಥವಾ ನಾಶಗೊಳಿಸುವುದು ಕಾಲನಿಗೂ ಅಸಂಭವಾಗಿತ್ತು.॥48-49॥

ಮೂಲಮ್ - 50

ತ್ರಾಸನಂ ಸರ್ವಭೂತಾನಾಂ ದಾರಣಂ ಭೇದನಂ ತಥಾ ।
ಪ್ರದೀಪ್ತ ಇವ ರೋಷೇಣ ಶೂಲಂ ಜಗ್ರಾಹ ರಾವಣಃ ॥

ಅನುವಾದ

ಶೂಲ ಎಂಬ ಹೆಸರಿನ ಅದು ಸಮಸ್ತ ಪ್ರಾಣಿಗಳನ್ನು ಛಿನ್ನ ಭಿನ್ನ ಮಾಡಿ, ಭಯಭೀತಗೊಳಿಸುವಂತಿತ್ತು. ರೋಷದಿಂದ ಉರಿದೆದ್ದ ರಾವಣನು ಆ ಶೂಲವನ್ನು ಕೈಗೆತ್ತಿಕೊಂಡನು.॥50॥

ಮೂಲಮ್ - 51

ತಚ್ಛೂಲಂ ಪರಮಕ್ರುದ್ಧೋ ಜಗ್ರಾಹ ಯುಧಿವೀರ್ಯವಾನ್ ।
ಅನೀಕೈಃ ಸಮರೇ ಶೂರೈ ರಾಕ್ಷಸಃ ಪರಿವಾರಿತಃ ॥

ಅನುವಾದ

ಅನೇಕ ಸೈನ್ಯಗಳಲ್ಲಿ ವಿಭಕ್ತರಾದ ಶೂರವೀರ ರಾಕ್ಷಸರಿಂದ ಸುತ್ತು ವರಿದ ಪರಾಕ್ರಮಿ ನಿಶಾಚರನು ಭಾರೀ ಕ್ರೋಧದೊಂದಿಗೆ ಆ ಶೂಲವನ್ನು ಗ್ರಹಿಸಿದ್ದನು.॥51॥

ಮೂಲಮ್ - 52

ಸಮುದ್ಯಮ್ಯ ಮಹಾಕಾಯೋ ನನಾದ ಯುಧಿ ಭೈರವಮ್ ।
ಸಂರಕ್ತನಯನೋ ರೋಷಾತ್ ಸ್ವಸೈನ್ಯಮಭಿಹರ್ಷಯನ್ ॥

ಅನುವಾದ

ಅದನ್ನು ಮೇಲಕ್ಕೆತ್ತಿ ಆ ವಿಶಾಲಕಾಯ ರಾಕ್ಷಸನು ಯುದ್ಧದಲ್ಲಿ ಭಯಂಕರವಾಗಿ ಗರ್ಜಿಸಿದನು. ಆಗ ಅವನ ಕಣ್ಣುಗಳು ಕೋಪದಿಂದ ಕೆಂಪಾಗಿದ್ದವು ಹಾಗೂ ತನ್ನ ಸೈನ್ಯದ ಹರ್ಷವನ್ನು ಹೆಚ್ಚಿಸುತ್ತಿದ್ದನು.॥52॥

ಮೂಲಮ್ - 53

ಪೃಥಿವೀಂ ಚಾಂತರಿಕ್ಷಂ ಚ ದಿಶಶ್ಚ ಪ್ರದಿಶಸ್ತಥಾ ।
ಪ್ರಾಕಂಪಯತ್ ತದಾ ಶಬ್ದೋ ರಾಕ್ಷಸೇಂದ್ರಸ್ಯ ದಾರುಣಃ ॥

ಅನುವಾದ

ರಾವಣನ ಆ ಮಹಾಸಿಂಹ ನಾದದಿಂದ ಆಗ ಪೃಥಿವಿ, ಆಕಾಶ, ದಶದಿಕ್ಕುಗಳು ಕಂಪಿಸಿದವು.॥53॥

ಮೂಲಮ್ - 54

ಅತಿಕಾಯಸ್ಯ ನಾದೇನ ತೇನ ತಸ್ಯ ದುರಾತ್ಮನಃ ।
ಸರ್ವಭೂತಾನಿ ವಿತ್ರೇಸುಃ ಸಾಗರಶ್ಚ ಪ್ರಚುಕ್ಷುಭೇ ॥

ಅನುವಾದ

ಆ ಮಹಾಕಾಯ ದುರಾತ್ಮಾ ನಿಶಾಚರನ ಭೈರವನಾದದಿಂದ ಸಮಸ್ತ ಪ್ರಾಣಿಗಳು ನಗುಡಿಹೋದುವು. ಸಾಗರವೂ ವಿಕ್ಷುಬ್ಧವಾಯಿತು.॥54॥

ಮೂಲಮ್ - 55

ಸ ಗೃಹೀತ್ವಾ ಮಹಾವೀರ್ಯಃ ಶೂಲಂ ತದ್ರಾವಣೋ ಮಹತ್ ।
ವಿನದ್ಯ ಸುಮಹಾನಾದಂ ರಾಮಂ ಪರುಷಮಬ್ರವೀತ್ ॥

ಅನುವಾದ

ವಿಶಾಲವಾದ ಆ ಶೂಲವನ್ನೆತ್ತಿಕೊಂಡು ಮಹಾಪರಾಕ್ರಮಿ ರಾವಣನು ಗಟ್ಟಿಯಾಗಿ ಗರ್ಜಿಸುತ್ತಾ ಶ್ರೀರಾಮನಲ್ಲಿ ಕಠೋರವಾಗಿ ಹೀಗೆ ನುಡಿದನು.॥55॥

ಮೂಲಮ್ - 56

ಶೂಲೋಽಯಂ ವಜ್ರಸಾರಸ್ತೇ ರಾಮ ರೋಷಾನ್ಮಯೋದ್ಯತಃ ।
ತವ ಭ್ರಾತೃಸಹಾಯಸ್ಯ ಸದ್ಯಃ ಪ್ರಾಣಾನ್ಹರಿಷ್ಯತಿ ॥

ಅನುವಾದ

ರಾಮಾ! ವಜ್ರಾಯುಧದಂತೆ ಇರುವ ಶಕ್ತಿಶಾಲಿ ಶೂಲವನ್ನು ನಾನು ರೋಷದಿಂದ ಕೈಗೆತ್ತಿಕೊಂಡಿರುವೆನು. ಇದು ಸಹೋದರ ಸಹಿತ ನಿನ್ನ ಪ್ರಾಣಗಳನ್ನು ತತ್ಕಾಲ ಅಪಹರಿಸುವುದು.॥56॥

ಮೂಲಮ್ - 57

ರಕ್ಷಸಾಮದ್ಯ ಶೂರಾಣಾಂ ನಿಹತಾನಾಂ ಚಮೂಮುಖೇ ।
ತ್ವಾಂ ನಿಹತ್ಯ ರಣಶ್ಲಾಘಿನ್ ಕರೋಮಿ ತರಸಾ ಸಮಮ್ ॥

ಅನುವಾದ

ರಣಶ್ಲಾಘೀ ರಾಘವನೇ! ಇಂದು ನಿನ್ನನ್ನು ವಧಿಸಿ ಯುದ್ಧದಲ್ಲಿ ಸತ್ತುಹೋದ ಶೂರ ವೀರ ರಾಕ್ಷಸರು ಹೋದರಲ್ಲಿಗೆ ಕಳಿಸಿಬಿಡುತ್ತೇನೆ.॥57॥

ಮೂಲಮ್ - 58

ತಿಷ್ಠೇದಾನೀಂ ನಿಹನ್ಮಿ ತ್ವಾಮೇಷ ಶೂಲೇನ ರಾಘವ ।
ಏವಮುಕ್ತ್ವಾ ಸ ಚಿಕ್ಷೇಪ ತಚ್ಛೂಲಂ ರಾಕ್ಷಸಾಧಿಪಃ ॥

ಅನುವಾದ

ರಾಘವ! ನಿಲ್ಲು, ಈಗಲೇ ಈ ಶೂಲದಿಂದ ನಿನ್ನನ್ನು ಮೃತ್ಯು ಮುಖವಾಗಿಸುವೆನು. ಎಂದು ಹೇಳಿ ರಾಕ್ಷಸಾಧಿಪನು ಶ್ರೀರಾಮನ ಮೇಲೆ ಆ ಶೂಲವನ್ನು ಪ್ರಯೋಗಿಸಿದನು.॥58॥

ಮೂಲಮ್ - 59

ತದ್ರಾವಣಕರಾನ್ಮುಕ್ತಂ ವಿದ್ಯುಜ್ವ್ವಾಲಾಸಮಾಕುಲಮ್ ।
ಅಷ್ಟಘಂಟ ಮಹಾನಾದಂ ವಿಯದ್ಗತಮಶೋಭತ ॥

ಅನುವಾದ

ರಾವಣನು ಕೈಯಿಂದ ಬಿಟ್ಟ ಆ ಶೂಲವು ಆಕಾಶದಲ್ಲಿ ಹೊಳೆಯತೊಡಗಿತು. ಮಿಂಚಿನಗೊಂಚಲಿನಂತೆ ಅದು ಕಂಡು ಬರುತ್ತಿತ್ತು. ಎಂಟು ಗಂಟೆಗಳಿದ್ದ ಕಾರಣ ಅದರಿಂದ ಗಂಭೀರ ಘೋಷ ಪ್ರಕಟವಾಗುತ್ತಿತ್ತು.॥59॥

ಮೂಲಮ್ - 60

ತಚ್ಛೂಲಂ ರಾಘವೋ ದೃಷ್ಟ್ವಾ ಜ್ವಲಂತಂ ಘೋರದರ್ಶನಮ್ ।
ಸಸರ್ಜ ವಿಶಿಖಾನ್ರಾಮಶ್ಚಾಪಮಾಯಮ್ಯ ವೀರ್ಯವಾನ್ ॥

ಅನುವಾದ

ಪರಮ ಪರಾಕ್ರಮಿ ರಘುಕುಲನಂದನ ಶ್ರೀರಾಮನು ಆ ಭಯಂಕರ ಪ್ರಜ್ವಲಿತ ಶೂಲವು ತನ್ನ ಕಡೆಗೆ ಬರುವುದನ್ನು ನೋಡಿ ಧನುಸ್ಸನ್ನೆಳೆದು ಬಾಣಗಳ ಮಳೆಗರೆದನು.॥60॥

ಮೂಲಮ್ - 61

ಆಪತಂತಂ ಶರೌಘೇಣ ವಾರಯಾಮಾಸ ರಾಘವಃ ।
ಉತ್ಪತಂತಂ ಯುಗಾಂತಾಗ್ನಿಂ ಜಲೌಘೈರಿವ ವಾಸವಃ ॥

ಅನುವಾದ

ತನ್ನ ಕಡೆಗೆ ಬರುತ್ತಿರುವ ಶೂಲವನ್ನು ದೇವೇಂದ್ರನು ಮೇಲಕ್ಕೆದ್ದ ಪ್ರಳಯಾಗ್ನಿಯನ್ನು ಸಂವರ್ತಕ ಮೇಘಗಳಿಂದ ಸುರಿವ ಜಲಧಾರೆಯಿಂದ ನಂದಿಸಲು ಪ್ರಯತ್ನಿಸಿದಂತೆ ಶ್ರೀರಾಮನು ತನ್ನ ಬಾಣಗಳಿಂದ ತಡೆದು ಶಾಂತಗೊಳಿಸಲು ಪ್ರಯತ್ನಿಸಿದನು.॥61॥

ಮೂಲಮ್ - 62

ನಿರ್ದದಾಹ ಸ ತಾನ್ಬಾಣಾನ್ ರಾಮಕಾರ್ಮುಕ ನಿಃಸೃತಾನ್ ।
ರಾವಣಸ್ಯ ಮಹಾನ್ಶೂಲಃ ಪತಂಗಾನಿವ ಪಾವಕಃ ॥

ಅನುವಾದ

ಆದರೆ ಬೆಂಕಿಯು ಪತಂಗಗಳನ್ನು ಸುಟ್ಟು ಹಾಕುವಂತೆ ರಾವಣನ ಆ ಮಹಾಶೂಲವು ಶ್ರೀರಾಮ ಧನುಸ್ಸಿನಿಂದ ಚಿಮ್ಮಿದ ಸಮಸ್ತ ಬಾಣಗಳನ್ನು ಸುಟ್ಟು ಬೂದಿಯಾಗಿಸಿತು.॥62॥

ಮೂಲಮ್ - 63

ತಾನ್ ದೃಷ್ಟ್ವಾ ಭಸ್ಮಸಾದ್ಭೂತಾನ್ ಶೂಲ ಸಂಸ್ಪರ್ಶಚೂರ್ಣಿತಾನ್ ।
ಸಾಯಕಾನಂತರಿಕ್ಷಸ್ಥಾನ್ ರಾಘವಃ ಕ್ರೋಧಮಾಹರತ್ ॥

ಅನುವಾದ

ಶ್ರೀರಘುನಾಥನು ತನ್ನ ಸಾಯಕಗಳು ಅಂತರಿಕ್ಷದಲ್ಲೇ ಆ ಶೂಲದ ಸ್ಪರ್ಶಮಾತ್ರದಿಂದ ಚೂರು ಚೂರು ಆಗುವುದನ್ನು ನೋಡಿದಾಗ ಅವನಿಗೆ ಭಾರೀ ಕ್ರೋಧವುಂಟಾಯಿತು.॥63॥

ಮೂಲಮ್ - 64

ಸ ತಾಂ ಮಾತಲಿನಾ ನೀತಾಂ ಶಕ್ತಿಂ ವಾಸವ ನಿರ್ಮಿತಾಮ್ ।
ಜಗ್ರಾಹ ಪರಮಕ್ರುದ್ಧೋ ರಾಘವೋ ರಘುನಂದನಃ ॥

ಅನುವಾದ

ಅತ್ಯಂತ ಕ್ರೋಧಗೊಂಡ ರಘುಕುಲನಂದನ ರಘುವೀರನು ಮಾತಲಿಯು ತಂದಿರುವ ದೇವೇಂದ್ರನಿಂದ ಸಮ್ಮಾನಿತ ಶಕ್ತಿಯನ್ನು ಕೈಗೆತ್ತಿ ಕೊಂಡನು.॥64॥

ಮೂಲಮ್ - 65

ಸಾ ತೋಲಿತಾ ಬಲವತಾ ಶಕ್ತಿರ್ಘಂಟಾಕೃತಸ್ವನಾ ।
ನಭಃ ಪ್ರಜ್ವಾಲಯಾಮಾಸ ಯುಗಾಂತೋಲ್ಕೇವ ಸಪ್ರಭಾ ॥

ಅನುವಾದ

ಬಲವಂತ ಶ್ರೀರಾಮನು ಎತ್ತಿಕೊಂಡ ಆ ಶಕ್ತಿಯು ಪ್ರಳಯಕಾಲದಲ್ಲಿ ಪ್ರಜ್ವಲಿತವಾಗುವ ಉಲ್ಕೆಯಂತೆ ಪ್ರಕಾಶ ಮಾನವಾಗಿತ್ತು. ಅದು ಸಮಸ್ತ ಆಕಾಶವನ್ನು ಬೆಳಗಿಸುತ್ತಾ, ಅದರಿಂದ ಘಂಟಾನಾದ ಪ್ರಕಟವಾಯಿತು.॥65॥

ಮೂಲಮ್ - 66

ಸಾ ಕ್ಷಿಪ್ತಾ ರಾಕ್ಷಸೇಂದ್ರಸ್ಯ ತಸ್ಮಿನ್ ಶೂಲೇ ಪಪಾತ ಹ ।
ಭಿನ್ನಃ ಶಕ್ತ್ಯಾ ಮಹಾನ್ಶೂಲೋ ನಿಪಪಾತ ಗತದ್ಯುತಿಃ ॥

ಅನುವಾದ

ಶ್ರೀರಾಮನು ಅದನ್ನು ಪ್ರಯೋಗಸಿದಾಗ ಆ ಶಕ್ತಿಯು ರಾಕ್ಷಸರಾಜನ ಶೂಲವನ್ನು ಚೂರು ಚೂರುಗೊಳಿಸಿತು ಹಾಗೂ ನಿಸ್ತೇಜವಾಗಿ ನೆಲಕ್ಕೆ ಬಿದ್ದುಹೋಯಿತು.॥66॥

ಮೂಲಮ್ - 67

ನಿರ್ಬಿಭೇದ ತತೋ ಬಾಣೈರ್ಹಯಾನಸ್ಯ ಮಹಾಜವಾನ್ ।
ರಾಮಸ್ತೀಕ್ಷ್ಣೈರ್ಮಹಾವೇಗೈರ್ವಜ್ರಕಲ್ಪೈರಜಿಹ್ಮಗೈಃ ॥

ಅನುವಾದ

ಬಳಿಕ ಶ್ರೀರಾಮಚಂದ್ರನು ವೇಗವಂತವಾದ ವಜ್ರದಂತಹ ಹರಿತ ಬಾಣಗಳಿಂದ ರಾವಣನ ಅತ್ಯಂತ ವೇಗಶಾಲೀ ಕುದುರೆಗಳನ್ನು ಗಾಯಗೊಳಿಸಿದನು.॥67॥

ಮೂಲಮ್ - 68

ನಿರ್ಬಿಭೇದೋರಸಿ ತದಾ ರಾವಣಂ ನಿಶಿತೈಃ ಶರೈಃ ।
ರಾಘವಃ ಪರಮಾಯತ್ತೋ ಲಲಾಟೇ ಪತ್ರಿಭಿಸ್ತ್ರಿಭಿಃ ॥

ಅನುವಾದ

ಮತ್ತೆ ಅತ್ಯಂತ ಎಚ್ಚರಿಕೆಯಿಂದ ಅವನು ಮೂರು ತೀಕ್ಷ್ಣ ಅಂಬುಗಳಿಂದ ರಾವಣನ ಎದೆಯನ್ನು ಸೀಳಿಹಾಕಿದನು ಮತ್ತು ಮೂರು ಪಂಖಯುಕ್ತ ಬಾಣಗಳಿಂದ ಅವನ ಹಣೆಯನ್ನು ಒಡೆದನು.॥68॥

ಮೂಲಮ್ - 69

ಸ ಶರೈರ್ಭಿನ್ನ ಸರ್ವಾಂಗೋ ಗಾತ್ರಪ್ರಸ್ರುತ ಶೋಣಿತಃ ।
ರಾಕ್ಷಸೇಂದ್ರಃ ಸಮೂಹಸ್ಥಃ ಫುಲ್ಲಾಶೋಕ ಇವಾಬಭೌ ॥

ಅನುವಾದ

ಆ ಬಾಣಗಳ ಏಟಿನಿಂದ ರಾವಣನ ಸರ್ವಾಂಗವು ಕ್ಷತ-ವಿಕ್ಷವಾಗಿ, ಶರೀರದಿಂದ ರಕ್ತದ ಧಾರೆ ಹರಿಯತೊಡಗಿತು. ಆಗ ಸೈನ್ಯದ ನಡುವೆ ನಿಂತಿದ್ದ ರಾವಣನು ಹೂವುಗಳಿಂದ ಅಶೋಕವೃಕ್ಷದಂತೆ ಶೋಭಿಸಿದನು.॥69॥

ಮೂಲಮ್ - 70

ಸ ರಾಮಬಾಣೈ ರತಿವಿದ್ಧಗಾತ್ರೋ
ನಿಶಾಚರೇಂದ್ರಃ ಕ್ಷತಜಾರ್ದ್ರಗಾತ್ರಃ ।
ಜಗಾಮ ಖೇದಂ ಚ ಸಮಾಜಮಧ್ಯೇ
ಕ್ರೋಧಂ ಚ ಚಕ್ರೇ ಸುಭೃಶಂತದಾನೀಮ್ ॥

ಅನುವಾದ

ಶ್ರೀರಾಮನ ಬಾಣಗಳಿಂದ ಶರೀರವೆಲ್ಲ ಗಾಯಗೊಂಡು ರಕ್ತಸಿಕ್ತವಾದಾಗ ನಿಶಾಚರ ರಾವಣನಿಗೆ ಬಹಳ ಖೇದ ಉಂಟಾಯಿತು. ಜೊತೆಗೆ ಅವನು ಭಾರೀ ಕ್ರೋಧವನ್ನು ಪ್ರಕಟಿಸಿದನು.॥70॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರ ಎರಡನೆಯ ಸರ್ಗ ಪೂರ್ಣವಾಯಿತು.॥102॥