१०१ हनुमता सञ्जीविनीपर्वतानयनम्

वाचनम्
ಭಾಗಸೂಚನಾ

ಶ್ರೀರಾಮನ ವಿಲಾಪ, ಹನುಮಂತನು ತಂದ ಔಷಧಿಗಳಿಂದ ಸುಷೇಣನು ಲಕ್ಷ್ಮಣನ ಚಿಕಿತ್ಸೆ, ಲಕ್ಷ್ಮಣ ಎಚ್ಚರಗೊಂಡುದು

ಮೂಲಮ್ - 1

ಶಕ್ತ್ಯಾ ನಿಪಾತಿತಂದೃಷ್ಟ್ವಾ ರಾವಣೇನ ಬಲೀಯಸಾ ।
ಲಕ್ಷ್ಮಣಂ ಸಮರೇ ಶೂರಂ ಶೋಣಿತೌಘ ಪರಿಪ್ಲುತಮ್ ॥

ಮೂಲಮ್ - 2

ಸ ದತ್ತ್ವಾ ತುಮುಲಂ ಯುದ್ಧಂ ರಾವಣಸ್ಯ ದುರಾತ್ಮನಃ ।
ವಿಸೃಜನ್ನೇವ ಬಾಣೌಘಾನ್ ಸುಷೇಣಮಿದಮಬ್ರವೀತ್ ॥

ಅನುವಾದ

ಮಹಾಬಲೀ ರಾವಣನು ಶಕ್ತ್ಯಾಯುಧದಿಂದ ಕೆಡವಲ್ಪಟ್ಟು, ರಕ್ತದಿಂದ ತೊಯ್ದುಹೋಗಿದ್ದ ಶೂರನಾದ ಲಕ್ಷ್ಮಣನನ್ನು ಶ್ರೀರಾಮನು ನೋಡಿ, ದುರಾತ್ಮ ರಾವಣನೊಂದಿಗೆ ಘೋರ ಯುದ್ಧ ಮಾಡುತ್ತಾ ಬಾಣಗಳ ಸಮೂಹಗಳನ್ನು ಪುಂಖಾನುಪುಂಖವಾಗಿ ಸುರಿಸುತ್ತಿರುವಾಗ ಶ್ರೀರಾಮನು ಸುಷೇಣನಲ್ಲಿ ಇಂತೆಂದನು-॥1-2॥

ಮೂಲಮ್ - 3

ಏಷ ರಾವಣ ವೀರ್ಯೇಣ ಲಕ್ಷ್ಮಣಃ ಪತಿತೋ ಭುವಿ ।
ಸರ್ಪವಚ್ಚೇಷ್ಟತೇ ವೀರೋ ಮಮ ಶೋಕಮುದೀರಯನ್ ॥

ಅನುವಾದ

ಈ ವೀರ ಲಕ್ಷ್ಮಣನು ರಾವಣನ ಪರಾಕ್ರಮದಿಂದ ಗಾಯಗೊಂಡು ಪೃಥಿವಿಯಲ್ಲಿ ಬಿದ್ದಿರುವವನು ಹಾಗೂ ಏಟು ತಿಂದ ಸರ್ಪದಂತೆ ಒದ್ದಾಡುತ್ತಿರುವನು. ಈ ಸ್ಥಿತಿಯಲ್ಲಿ ಇವನನ್ನು ನೋಡಿ ನನ್ನ ಶೋಕ ಹೆಚ್ಚುತ್ತಾ ಇದೆ.॥3॥

ಮೂಲಮ್ - 4

ಶೋಣಿತಾರ್ದ್ರಮಿಮಂ ವೀರಂ ಪ್ರಾಣೈಃ ಪ್ರಿಯತರಂ ಮಮ ।
ಪಶ್ಯತೋ ಮಮ ಕಾ ಶಕ್ತಿರ್ಯೋದ್ಧುಂ ಪರ್ಯಾಕುಲಾತ್ಮನಃ ॥

ಅನುವಾದ

ಈ ವೀರ ಸುಮಿತ್ರಾಕುಮಾರನು ನನಗೆ ಪ್ರಾಣಕ್ಕಿಂತಲೂ ಹೆಚ್ಚು ಪ್ರಿಯನಾಗಿದ್ದಾನೆ. ರಕ್ತಸಿಕ್ತನಾದ ಇವನನ್ನು ನೋಡಿ ನನ್ನ ಮನಸ್ಸು ವ್ಯಾಕುಲವಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ಯುದ್ಧಮಾಡುವ ಶಕ್ತಿಯೂ ನನ್ನಲ್ಲಿ ಇಲ್ಲವಾಗಿದೆ.॥4॥

ಮೂಲಮ್ - 5

ಅಯಂ ಸ ಸಮರಶ್ಲಾಘೀ ಭ್ರಾತಾ ಮೇ ಶುಭಲಕ್ಷಣಃ ।
ಯದಿ ಪಂಚತ್ವಮಾಪನ್ನಃ ಪ್ರಾಣೈರ್ಮೇ ಕಿಂ ಸುಖೇನ ವಾ ॥

ಅನುವಾದ

ಶುಭ ಲಕ್ಷ್ಮಣ ನನ್ನ ತಮ್ಮನು ಸದಾ ಕಾಲ ಯುದ್ಧೋತ್ಸಾಹದಿಂದ ಇರುತ್ತಿದ್ದನು. ಇವನು ಸತ್ತು ಹೋದರೆ ನನಗೆ ಈ ಪ್ರಾಣಗಳನ್ನು ಇರಿಸಿಕೊಂಡು, ಸುಖ ಅನುಭವಿಸುವ ಪ್ರಯೋಜನವೇನಿದೆ.॥5॥

ಮೂಲಮ್ - 6

ಲಜ್ಜತೀವ ಹಿ ಮೇ ವೀರ್ಯಂ ಭ್ರಶ್ಯತೀವ ಕರಾದ್ಧನುಃ ।
ಸಾಯಕಾ ವ್ಯವಸೀದಂತಿ ದೃಷ್ಟಿರ್ಭಾಷ್ಪವಶಂ ಗತಾ ॥

ಅನುವಾದ

ಈಗ ನನ್ನ ಪರಾಕ್ರಮ ನಾಚಿಕೊಂಡಂತಿದೆ, ಕೈಯ ಧನುಸ್ಸು ಜಾರುತ್ತಿದೆ, ನನ್ನ ಸಾಯಕಗಳು ಶಿಥಿಲವಾಗಿವೆ, ಕಣ್ಣುಗಳಲ್ಲಿ ನೀರು ತುಂಬಿ ಬಂದಿವೆ.॥6॥

ಮೂಲಮ್ - 7

ಅವಸೀದಂತಿ ಗಾತ್ರಾಣಿ ಸ್ವಪ್ನಯಾನೇ ನೃಣಾಮಿವ ।
ಚಿಂತಾ ಮೇ ವರ್ಧತೇ ತೀವ್ರಾಮುಮೂರ್ಷಾಪಿ ಚ ಜಾಯತೇ ॥

ಮೂಲಮ್ - 8

ಭ್ರಾತರಂನಿಹತಂ ದೃಷ್ಟ್ವಾರಾವಣೇನ ದುರಾತ್ಮನಾ ।
ವಿಷ್ಠನಂತಂ ತು ದುಃಖಾರ್ತಂ ಮರ್ಮಣ್ಯಭಿಹತಂ ಭೃಶಮ್ ॥

ಅನುವಾದ

ಸ್ವಪ್ನದಲ್ಲಿ ಮನುಷ್ಯನ ಶರೀರ ಶಿಥಿಲವಾಗುವಂತೆ ನನ್ನ ಸ್ಥಿತಿಯೂ ಆಗಿದೆ. ನನ್ನ ತೀವ್ರ ಚಿಂತೆ ಹೆಚ್ಚುತ್ತಾ ಇದೆ. ದುರಾತ್ಮಾ ರಾವಣನಿಂದ ಗಾಯಗೊಂಡು, ಮಾರ್ಮಿಕ ಆಘಾತದಿಂದ ಅತ್ಯಂತ ಪೀಡಿತನಾಗಿ, ದುಃಖಾತುರನಾದ ಲಕ್ಷ್ಮಣನು ನರಳುವುದನ್ನು ನೋಡಿ ನನಗೆ ಸಾಯುವ ಇಚ್ಛೆ ಉಂಟಾಗುತ್ತಿದೆ.॥7-8॥

ಮೂಲಮ್ - 9

ರಾಘವೋ ಭ್ರಾತರಂ ದೃಷ್ಟ್ವಾ ಪ್ರಿಯಂ ಪ್ರಾಣಂ ಬಹಿಶ್ಚರಮ್ ।
ದುಃಖೇನ ಮಹತಾ ವಿಷ್ಣೋ ಧ್ಯಾನಶೋಕ ಪರಾಯಣಃ ॥

ಅನುವಾದ

ಶ್ರೀರಾಮನು ಬಹಿಃಪ್ರಾಣ ದಂತೆ ಇದ್ದ ಪ್ರಿಯ ತಮ್ಮ ಲಕ್ಷ್ಮಣನನ್ನು ಈ ಸ್ಥಿತಿಯಲ್ಲಿ ನೋಡಿ ಮಹಾದುಃಖದಿಂದ ವ್ಯಾಕುಲನಾಗಿ ಚಿಂತಾ ಶೋಕದಲ್ಲಿ ಮುಳುಗಿದನು.॥9॥

ಮೂಲಮ್ - 10

ಪರಂ ವಿಷಾದಮಾಪನ್ನೋ ವಿಲಲಾಪಾಕುಲೇಂದ್ರಿಯಃ ।
ಭ್ರಾತರಂ ನಿಹತಂ ದೃಷ್ಟ್ವಾ ಲಕ್ಷ್ಮಣಂ ರಣಪಾಂಸುಷು ॥

ಅನುವಾದ

ಮನಸ್ಸಿನಲ್ಲಿ ವಿಷಾದ ಆವರಿಸಿತು, ಇಂದ್ರಿಯಗಳೆಲ್ಲ ವ್ಯಾಕುಲವಾದವು, ರಣಭೂಮಿಯ ಧೂಳಿನಲ್ಲಿ ಗಾಯಗೊಂಡು ಬಿದ್ದಿರುವ ಲಕ್ಷ್ಮಣನನ್ನು ನೋಡಿ ಶ್ರೀರಾಮನು ವಿಲಾಪಿಸತೊಡಗಿದನು.॥10॥

ಮೂಲಮ್ - 11

ವಿಜಯೋಽಪಿ ಹಿ ಮೇ ಶೂರ ನ ಪ್ರಿಯಾಯೋಪಕಲ್ಪತೇ ।
ಅಚಕ್ಷುರ್ವಿಷಯಶ್ಚಂದ್ರಃ ಕಾಂ ಪ್ರೀತಿಂ ಜನಯಿಷ್ಯತಿ ॥

ಅನುವಾದ

ಶೂರ ವೀರನೇ! ಇನ್ನು ಸಂಗ್ರಾಮದಲ್ಲಿ ವಿಜಯದೊರೆತರೂ ನನಗೆ ಸಂತೋಷವಾಗಲಾರದು. ಕುರುಡನ ಮುಂದೆ ಬೆಳದಿಂಗಳು ಇದ್ದರೂ ಅವನ ಮನಸ್ಸಿನಲ್ಲಿ ಹೇಗೆ ಆಹ್ಲಾದ ಉಂಟು ಮಾಡೀತು.॥11॥

ಮೂಲಮ್ - 12

ಕಿಂ ಮೇ ರಾಜ್ಯೇನ ಕಿಂ ಪ್ರಾಣೈರ್ಯುದ್ಧೇ ಕಾರ್ಯಂ ನ ವಿದ್ಯತೇ ।
ಯತ್ರಾಯಂ ನಿಹತಃ ಶೇತೇ ರಣಮೂರ್ಧನಿ ಲಕ್ಷ್ಮಣಃ ॥

ಅನುವಾದ

ಈಗ ಈ ಯುದ್ಧದಿಂದ, ಬದುಕಿ ಇರುವುದರಿಂದ ಪ್ರಯೋಜನವೇನಿದೆ? ಇನ್ನು ಕಾದಾಡುವ ಆವಶ್ಯಕತೆ ಇಲ್ಲ. ಸಂಗ್ರಾಮದಲ್ಲಿ ಲಕ್ಷ್ಮಣನು ಸತ್ತು ಮಲಗಿರುವಾಗ ಯುದ್ಧವನ್ನು ಗೆಲ್ಲುವುದರಿಂದ ಏನು ಲಾಭವಿದೆ.॥12॥

ಮೂಲಮ್ - 13

ಯಥೈವ ಮಾಂ ವನಂ ಯಾಂತಮನುಯಾತಿ ಮಹಾದ್ಯುತಿಃ ।
ಅಹಮಪ್ಯನುಯಾಸ್ಯಾಮಿ ತಥೈವೈನಂ ಯಮಕ್ಷಯಮ್ ॥

ಅನುವಾದ

ಕಾಡಿಗೆ ಬರುವಾಗ ಮಹಾತೇಜಸ್ವಿ ಲಕ್ಷ್ಮಣನು ನನ್ನ ಹಿಂದೆಯೇ ಬಂದಂತೆ, ಅವನು ಯಮಲೋಕಕ್ಕೆ ಹೋಗುವಾಗ ನಾನು ಇವನ ಹಿಂದೆಯೇ ಹೋಗುವೆನು.॥13॥

ಮೂಲಮ್ - 14

ಇಷ್ಟಬಂಧುಜನೋ ನಿತ್ಯಂ ಮಾಂ ಸ ನಿತ್ಯಮನುವ್ರತಃ ।
ಇಮಾಮವಸ್ಥಾಂ ಗಮಿತೋ ರಾಕ್ಷಸೈಃ ಕೂಟಯೋಧಿಭಿಃ ॥

ಅನುವಾದ

ಅಯ್ಯೋ! ಸದಾ ನನ್ನಲ್ಲಿ ಅನುರಾಗವುಳ್ಳ ನನ್ನ ಪ್ರಿಯ ಬಂಧುವನ್ನು ಕಪಟ ಯುದ್ಧ ಮಾಡುವ ನಿಶಾಚರರು ಇಂದು ಈ ಸ್ಥಿತಿಗೆ ತಂದರು.॥14॥

ಮೂಲಮ್ - 15

ದೇಶೇ ದೇಶೇ ಕಲತ್ರಾಣಿ ದೇಶೇ ದೇಶೇ ಚ ಬಾಂಧವಾಃ ।
ತಂ ತು ದೇಶಂ ನ ಪಶ್ಯಾಮಿ ಯತ್ರ ಭ್ರಾತಾ ಸಹೋದರಃ ॥

ಅನುವಾದ

ಎಲ್ಲ ದೇಶಗಳಲ್ಲಿ ಪತ್ನಿಯರು ಸಿಗಬಹುದು, ಬಂಧುಜನರು ಸಿಗಬಹುದು, ಆದರೆ ಸಹೋದರರು ಸಿಗುವ ಯಾವುದೇ ದೇಶ ನನಗೆ ಕಾಣುವುದಿಲ್ಲ.॥15॥

ಮೂಲಮ್ - 16

ಕಿಂ ನು ರಾಜ್ಯೇನ ದುರ್ಧರ್ಷ ಲಕ್ಷ್ಮಣೇನ ವಿನಾ ಮಮ ।
ಕಥಂ ವಕ್ಷ್ಯಾಮ್ಯಹಂ ತ್ವಂಬಾ ಸುಮಿತ್ರಾಂ ಪುತ್ರವತ್ಸಲಾಮ್ ॥

ಅನುವಾದ

ದುರ್ಧರ್ಷ ವೀರ ಲಕ್ಷ್ಮಣನಿಲ್ಲದೆ ನಾನು ರಾಜ್ಯ ಪಡೆದು ಏನು ಮಾಡಲಿ? ಪುತ್ರ ವತ್ಸಲಾ ತಾಯಿ ಸಮಿತ್ರಾದೇವಿಗೆ ಏನು ಹೇಳಲಿ? ಹೇಗೆ ಹೇಳಲೀ.॥16॥

ಮೂಲಮ್ - 17

ಉಪಾಲಂಭಂ ನ ಶಕ್ಷ್ಯಾಮಿ ಸೋಢುಂ ದತ್ತಂ ಸುಮಿತ್ರಯಾ ।
ಕಿಂ ನು ವಕ್ಷ್ಯಾಮಿ ಕೌಸಲ್ಯಾಂ ಮಾತರಂ ಕಿಂ ನು ಕೈಕಯೀಮ್ ॥

ಅನುವಾದ

ತಾಯಿ ಸುಮಿತ್ರಾದೇವಿಯ ನಿಂದನೆಯನ್ನು ಹೇಗೆ ಸಹಿಸಬಲ್ಲೆ? ತಾಯಿ ಕೌಸಲ್ಯೆ ಮತ್ತು ಕೈಕೇಯಿಯರಿಗೆ ಏನೆಂದು ಹೇಳಲಿ.॥17॥

ಮೂಲಮ್ - 18

ಭರತಂ ಕಿಂ ನು ವಕ್ಷ್ಯಾಮಿ ಶತ್ರುಘ್ನಂ ಚ ಮಹಾಬಲಮ್ ।
ಸಹ ತೇನ ವನಂ ಯಾತೋ ವಿನಾ ತೇನಾಗತಃ ಕಥಮ್ ॥

ಅನುವಾದ

ನೀನು ಲಕ್ಷ್ಮಣನೊಂದಿಗೆ ಕಾಡಿಗೆ ಹೋಗಿ, ಅವನಿಲ್ಲದೆ ಮರಳಿದೆಯಲ್ಲ ಎಂದ ಭರತ-ಶತ್ರುಘ್ನರು ಕೇಳಿದರೆ ಅವರಿಗೆ ಏನೆಂದು ಉತ್ತರಿಸಲಿ.॥18॥

ಮೂಲಮ್ - 19½

ಇಹೈವ ಮರಣಂ ಶ್ರೇಯೋ ನ ತು ಬಂಧುವಿಗರ್ಹಣಮ್ ।
ಕಿಂ ಮಯಾ ದುಷ್ಕೃತಂ ಕರ್ಮ ಕೃತಮನ್ಯತ್ರ ಜನ್ಮನಿ ॥
ಯೇನ ಮೇ ಧಾರ್ಮಿಕೋ ಭ್ರಾತಾ ನಿಹತಶ್ಚಾಗ್ರತಃ ಸ್ಥಿತಃ ।

ಅನುವಾದ

ಆದ್ದರಿಂದ ನಾನು ಇಲ್ಲೇ ಸಾಯುವುದೇ ಲೇಸು. ಬಂಧುಗಳ ಬಳಿಗೆ ಹೋಗಿ ಸುಳ್ಳು ಸುದ್ದಿ ಹೇಳುವುದು ಸರಿಯಲ್ಲ. ನಾನು ಹಿಂದಿನ ಜನ್ಮದಲ್ಲಿ ಯಾವ ಅಪರಾಧ ಮಾಡಿದ್ದೆನೋ, ಅದರಿಂದ ನನ್ನ ಮುಂದೆ ನನ್ನ ಧರ್ಮಾತ್ಮಾ ಸಹೋದರನು ಸತ್ತುಹೋದನಲ್ಲ.॥19½॥

ಮೂಲಮ್ - 20½

ಹಾ ಭ್ರಾತರ್ಮನುಜಶ್ರೇಷ್ಠ ಶೂರಾಣಾಂ ಪ್ರವರ ಪ್ರಭೋ ॥
ಏಕಾಕೀ ಕಿಂ ನು ಮಾಂ ತ್ಯಕ್ತ್ವಾ ಪರಲೋಕಾಯ ಗಚ್ಛಸಿ ।

ಅನುವಾದ

ಅಯ್ಯೋ! ವರಶ್ರೇಷ್ಠ ಸಹೋದರ ಲಕ್ಷ್ಮಣ! ಪ್ರಭಾವಶಾಲಿ ಶೂರಶ್ರೇಷ್ಠನೇ! ನೀನು ನನ್ನನ್ನು ಬಿಟ್ಟು ಒಬ್ಬನೇ ಏಕೆ ಪರಲೋಕಕ್ಕೆ ಹೋಗುತ್ತಿರುವೆ.॥20½॥

ಮೂಲಮ್ - 21½

ವಿಲಪಂತಂ ಚ ಮಾಂ ಭ್ರಾತಃ ಕಿಮರ್ಥಂ ನಾವಭಾಷಸೇ ॥
ಉತ್ತಿಷ್ಠ ಪಶ್ಯ ಕಿಂ ಶೇಷೇ ದೀನಂ ಮಾಂ ಪಶ್ಯ ಚಕ್ಷುಷಾ ।

ಅನುವಾದ

ತಮ್ಮ! ನಾನು ನೀನಿಲ್ಲದೆ ಅಳುತ್ತಿರುತ್ತಿರುವೆನು. ನೀನು ನನ್ನೊಡನೆ ಏಕೆ ಮಾತನಾಡುತ್ತಿಲ್ಲ? ಪ್ರಿಯ ಬಂಧುವೇ! ಏಳು, ಕಣ್ಣುಬಿಟ್ಟು ನೋಡು. ಏಕೆ ಹೀಗೆ ಮಲಗಿರುವೆ? ನಾನು ಬಹಳ ದುಃಖಿಯಾಗಿದ್ದೇನೆ. ನನ್ನ ಕಡೆಗೆ ಒಮ್ಮೆ ನೋಡು.॥21½॥

ಮೂಲಮ್ - 22½

ಶೋಕಾರ್ತಸ್ಯ ಪ್ರಮತ್ತಸ್ಯ ಪರ್ವತೇಷು ವನೇಷು ಚ ॥
ವಿಷಣ್ಣಸ್ಯ ಮಹಾಬಾಹೋ ಸಮಾಶ್ವಾಸಯಿತಾ ಮಮ ।

ಅನುವಾದ

ಮಹಾಬಾಹೋ! ಪರ್ವತಗಳಲ್ಲಿ, ವನಗಳಲ್ಲಿ ನಾನು ಶೋಕದಿಂದ ಪೀಡಿತನಾಗಿ, ಉನ್ಮತ್ತನಂತೆ ವಿಷಾದಗ್ರಸ್ಥನಾದಾಗ ನೀನೇ ನನಗೆ ಧೈರ್ಯ ಕೊಡುತ್ತಿದ್ದೆ. (ಹಾಗಿರುವಾಗ ಈಗ ನೀನು ನನ್ನನ್ನು ಏಕೆ ಸಾಂತ್ವನಪಡಿಸುವುದಿಲ್ಲ?॥22½॥

ಮೂಲಮ್ - 23½

ರಾಮಮೇವಂ ಬ್ರುವಾಣಂ ತು ಶೋಕವ್ಯಾಕುಲಿತೇಂದ್ರಿಯಮ್ ॥
ಆಶ್ವಾಸಯನ್ನುವಾಚೇದಂ ಸುಷೇಣಃ ಪರಮಂ ವಚಃ ।

ಅನುವಾದ

ಹೀಗೆ ವಿಲಾಪಮಾಡುತ್ತಾ ಶ್ರೀರಾಮನ ಇಂದ್ರಿಯವೆಲ್ಲ ಶೋಕದಿಂದ ವ್ಯಾಕುಲವಾದುವು. ಆಗ ಸುಷೇಣನು ಅವನಿಗೆ ಆಶ್ವಾಸನೆ ಕೊಡುತ್ತಾ ಹೀಗೆಂದನು-॥23½॥

ಮೂಲಮ್ - 24½

ತ್ಯಜೇಮಾಂ ನರಶಾರ್ದೂಲ ಬುದ್ಧಿಂ ವೈಕ್ಲವ್ಯಕಾರಿಣೀಮ್ ॥
ಶೋಕ ಸಂಜನನೀಂ ಚಿಂತಾಂ ತುಲ್ಯಾಂ ಬಾಣೈಶ್ಚಮೂಮುಖೇ ।

ಅನುವಾದ

ಪುರುಷಸಿಂಹನೇ! ವ್ಯಾಕುಲತೆಯನ್ನು ಉಂಟುಮಾಡುವ ಈ ಚಿಂತಾಯುಕ್ತ ಬುದ್ಧಿಯನ್ನು ತ್ಯಜಿಸು; ಏಕೆಂದರೆ ಯುದ್ಧರಂಗದಲ್ಲಿ ಮಾಡಿದ ಚಿಂತೆಯು ಬಾಣಗಳಂತೆ ಇರುತ್ತದೆ. ಕೋಮಲ ಶೋಕವನ್ನೇ ಹುಟ್ಟುಹಾಕುತ್ತದೆ.॥24½॥

ಮೂಲಮ್ - 25

ನೈವ ಪಂಚತ್ವಮಾಪನ್ನೋ ಲಕ್ಷ್ಮಣೋ ಲಕ್ಷ್ಮಿವರ್ಧನಃ ॥

ಮೂಲಮ್ - 26

ನಹ್ಯಸ್ಯ ವಿಕೃತಂ ವಕ್ತ್ರಂ ನ ಚ ಶ್ಯಾಮತ್ವಮಾಗತಮ್ ।
ಸುಪ್ರಭಂ ಚ ಪ್ರಸನ್ನಂ ಚ ಮುಖಮಸ್ಯ ನಿರೀಕ್ಷ್ಯತಾಮ್ ॥

ಅನುವಾದ

ನಿಮ್ಮ ಅನುಜ ಶೋಭಾವರ್ಧಕ ಲಕ್ಷ್ಮಣನು ಸತ್ತಿಲ್ಲ. ನೋಡು, ಇವನು ಮುಖಾಕೃತಿಯು ಇನ್ನೂ ಕೆಟ್ಟಿಲ್ಲ. ಇವನ ಮುಖದಲ್ಲಿ ಕರಿಛಾಯೆ ಇಲ್ಲ. ಇವನ ಮುಖವು ಪ್ರಸನ್ನ ಹಾಗೂ ಕಾಂತಿಯುಕ್ತವಾಗಿ ಕಂಡುಬರುತ್ತದೆ.॥25-26॥

ಮೂಲಮ್ - 27

ಪದ್ಮಪತ್ರತಲೌ ಹಸ್ತೌ ಸುಪ್ರಸನ್ನೇ ಚ ಲೋಚನೇ ।
ನೇದೃಶಂ ದೃಶ್ಯತೇ ರೂಪಂ ಗತಾಸೂನಾಂ ವಿಶಾಂ ಪತೇ ॥

ಅನುವಾದ

ಇವನ ಅಂಗೈಗಳು ಕಮಲದಂತೆ ಕೋಮಲವಾಗಿದೆ, ಕಣ್ಣುಗಳೂ ಸ್ವಚ್ಛವಾಗಿವೆ. ಪ್ರಜಾನಾಥಾ! ಸತ್ತಿರುವ ಪ್ರಾಣಿಯ ರೂಪ ಹೀಗೆ ಕಾಣುವುದಿಲ್ಲ.॥27॥

ಮೂಲಮ್ - 28½

ವಿಷಾದಂ ಮಾಂ ಕೃಥಾ ವೀರ ಸಪ್ರಾಣೋಽಯಮರಿಂದಮ ।
ಆಖ್ಯಾತಿ ತು ಪ್ರಸುಪ್ತಸ್ಯ ಸ್ರಸ್ತಗಾತ್ರಸ್ಯ ಭೂತಲೇ ॥
ಸೋಚ್ಛ್ವಾಸಂ ಹೃದಯಂ ವೀರ ಕಂಪಮಾನಂ ಮುಹುರ್ಮುಹುಃ ।

ಅನುವಾದ

ಶತ್ರುದಮನ ವೀರನೇ! ನೀವು ವಿಷಾದ ಪಡಬೇಡಿ. ಇವನ ಶರೀರದಲ್ಲಿ ಪ್ರಾಣಗಳಿವೆ. ವೀರನೇ! ಇವನ ಶರೀರ ಶಿಥಿಲವಾಗಿ ನೆಲದಲ್ಲಿ ಮಲಗಿರುವನು. ಉಸಿರು ನಡೆಯುತ್ತಿದೆ, ಹೃದಯ ಬಡಿಯುತ್ತಿದೆ. ಇದು ಲಕ್ಷ್ಮಣನು ಜೀವಿಸಿರುವ ಸೂಚನೆ ಇದೆ.॥28½॥

ಮೂಲಮ್ - 29½

ಏವಮುಕ್ತ್ವಾಮಹಾಪ್ರಾಜ್ಞಃ ಸುಷೇಣೋ ರಾಘವಂ ವಚಃ ॥
ಸಮೀಪಸ್ಥಮುವಾಚೇದಂ ಹನೂಮಂತಂ ಮಹಾಕಪಿಮ್ ।

ಅನುವಾದ

ಶ್ರೀರಾಮಚಂದ್ರನಲ್ಲಿ ಹೀಗೆ ಹೇಳಿ ಪರಮ ಬುದ್ಧಿವಂತ ಸುಷೇಣನು ಬಳಿಯಲ್ಲಿ ನಿಂತಿರುವ ಮಹಾಕಪಿ ಹನುಮಂತನಲ್ಲಿ ಹೀಗೆ ಹೇಳಿದನು.॥29॥

ಮೂಲಮ್ - 30

ಸೌಮ್ಯ ಶೀಘ್ರಮಿತೋ ಗತ್ವಾ ಪರ್ವತಂ ಹಿ ಮಹೋದಯಮ್ ॥

ಮೂಲಮ್ - 31

ಪೂರ್ವಂ ತು ಕಥಿತೋ ಯೋಽಸೌ ವೀರ ಜಾಂಬವತಾ ತವ ।
ದಕ್ಷಿಣೇ ಶಿಖರೇ ಜಾತಾಂ ಮಹೌಷಧಿಮಿಹಾನಯ ॥

ಮೂಲಮ್ - 32½

ವಿಶಲ್ಯಕರಣೀಂ ನಾಮ್ನಾ ಸಾವರ್ಣ್ಯಕರಣೀಂ ತಥಾ ।
ಸಂಜೀವಕರಣೀಂ ವೀರ ಸಂಧಾನೀಂ ಚ ಮಹೌಷಧೀಮ್ ॥
ಸಂಜೀವನಾರ್ಥಂ ವೀರಸ್ಯ ಲಕ್ಷ್ಮಣಸ್ಯ ತ್ವಮಾನಯ ।

ಅನುವಾದ

ಸೌಮ್ಯ! ನೀನು ಶೀಘ್ರವಾಗಿ ಇಲ್ಲಿಂದ ಮಹೋದಯ ಪರ್ವತಕ್ಕೆ ಹೋಗು, ಅದರ ಪರಿಚಯ ಜಾಂಬವಂತರು ನಿನಗೆ ಮೊದಲೇ ತಿಳಿಸಿರುವನು. ಅದರ ದಕ್ಷಿಣ ಶಿಖರದಲ್ಲಿ ಇರುವ ವಿಶಲ್ಯಕರಣೀ,1 ಸಾವರ್ಣ್ಯಕರಣೀ,2 ಸಂಜೀವಕರಣಿ,3 ಸಂಧಾನಿ4 ಎಂಬ ಪ್ರಸಿದ್ಧ ಮಹೌಷಧಿಗಳನ್ನು ತೆಗೆದುಕೊಂಡು ಬಾ. ಅವುಗಳಿಂದ ವೀರವರ ಲಕ್ಷ್ಮಣನ ರಕ್ಷಣೆ ಆಗುವುದು.॥30-32॥

ಟಿಪ್ಪನೀ
  1. ಶರೀರದಲ್ಲಿ ಹೊಕ್ಕಬಾಣಗಳನ್ನು ತೆಗೆದು ಗಾಯ ವಾಸಿಯಾಗಿ, ನೋವುಗುಣಪಡಿಸುವುದು. 2 ಶರೀರಕ್ಕೆ ಹಿಂದಿನ ಬಣ್ಣವೇ ಬರುವಂತೆ ಮಾಡುವುದು. 3 ಮೂರ್ಛೆ ಹೋಗಲಾಡಿಸಿ, ಚೈತನ್ಯವನ್ನು ತುಂಬುವುದು. 4 ಮುರಿದು ಹೋದ ಮೂಳೆಗಳನ್ನು ಜೋಡಿಸುವುದು.
ಮೂಲಮ್ - 33

ಇತ್ಯೇವಮುಕ್ತೋ ಹನೂಮಾನ್ಗತ್ವಾ ಚೌಷಧಿಪರ್ವತಮ್ ।
ಚಿಂತಾಮಭ್ಯಗಮಚ್ಛ್ರೀಮಾನಜಾನಂಸ್ತಾ ಮಹೌಷಧೀಃ ॥

ಅನುವಾದ

ಸುಷೇಣನು ಹೀಗೆ ಹೇಳಿದಾಗ ಹನುಮಂತನು ಔಷಧಿಪರ್ವತ (ಮಹೋದಯಗಿರಿ)ಕ್ಕೆ ಹೋದನು. ಆದರೆ ಆ ಮಹೌಷಧಿಗಳನ್ನು ಗುರುತಿಸದೆ ಚಿಂತಿತನಾದನು.॥33॥

ಮೂಲಮ್ - 34

ತಸ್ಯ ಬುದ್ಧಿಃ ಸಮುತ್ಪನ್ನಾ ಮಾರುತೇರಮಿತೌಜಸಃ ।
ಇದಮೇವ ಗಮಿಷ್ಯಾಮಿ ಗೃಹೀತ್ವಾ ಶಿಖರಂ ಗಿರೇಃ ॥

ಅನುವಾದ

ಆಗಲೇ ಅಮಿತತೇಜಸ್ವೀ ಹನುಮಂತನ ಮನಸ್ಸಿನಲ್ಲಿ ‘ನಾನು ಪರ್ವತದ ಈ ಶಿಖರವನ್ನು ತೆಗೆದುಕೊಂಡು ಹೋಗುವೆನು’ ಎಂಬ ವಿಚಾರ ಉಂಟಾಯಿತು.॥34॥

ಮೂಲಮ್ - 35

ಅಸ್ಮಿಂಸ್ತು ಶಿಖರೇ ಜಾತಾಮೋಷಧೀಂ ತಾಂ ಸುಖಾವಹಾಮ್ ।
ಪ್ರತರ್ಕೇಣಾವಗಚ್ಛಾಮಿ ಸುಷೇಣೋಹ್ಯೇವಮಬ್ರವೀತ್ ॥

ಅನುವಾದ

ಇದೇ ಶಿಖರದಲ್ಲಿ ಆ ಸುಖದಾಯಕ ಔಷಧಿಗಳು ಬೆಳೆಯುತ್ತವೆ ಎಂದು ನನಗೆ ಜ್ಞಾಪಕ ಬರುತ್ತಿದೆ. ಏಕೆಂದರೆ ಸುಷೇಣನು ಹೀಗೆಯೇ ಹೇಳಿದ್ದನು.॥35॥

ಮೂಲಮ್ - 36

ಅಗೃಹ್ಯ ಯದಿ ಗಚ್ಛಾಮಿ ವಿಶಲ್ಯಕರಣೀಮಹಮ್ ।
ಕಾಲಾತ್ಯಯೇನ ದೋಷಃ ಸ್ಯಾದ್ವೈಕ್ಲವ್ಯಂ ಚ ಮಹದ್ಭವೇತ್ ॥

ಅನುವಾದ

ವಿಶಲ್ಯಕರಣಿಯನ್ನು ತೆಗೆದುಕೊಂಡು ಹೋಗದಿದ್ದರೆ, ಹೆಚ್ಚು ಸಮಯ ಕಳೆದರೆ ದೋಷವುಂಟಾದೀತು ಹಾಗೂ ಅದರಿಂದ ಎಲ್ಲರೂ ಗಾಬರಿಗೊಳ್ಳುವರು.॥36॥

ಮೂಲಮ್ - 37

ಇತಿ ಸಂಚಿಂತ್ಯ ಹನುಮಾನ್ ಗತ್ವಾ ಕ್ಷಿಪ್ರಂ ಮಹಾಬಲಃ ।
ಆಸಾದ್ಯಪರ್ವತಶ್ರೇಷ್ಠಂ ತ್ರಿಃ ಪ್ರಕಂಪ್ಯ ಗಿರೆಃ ಶಿರಃ ॥

ಮೂಲಮ್ - 38

ಫುಲ್ಲನಾನಾತರುಗಣಂ ಸಮುತ್ಪಾಟ್ಯ ಮಹಾಬಲಃ ।
ಗೃಹೀತ್ವಾ ಹರಿಶಾರ್ದೂಲೋ ಹಸ್ತಾಭ್ಯಾಂ ಸಮತೋಲಯತ್ ॥

ಅನುವಾದ

ಹೀಗೆ ಯೋಚಿಸಿ ಮಹಾಬಲಿ ಹನುಮಂತನು ತತ್ಕ್ಷಣ ಆ ಶ್ರೇಷ್ಠ ಪರ್ವತದ ಹತ್ತಿರಕ್ಕೆ ಹೋಗಿ ಅದರ ಶಿಖರವನ್ನು ಮೂರು ಬಾರಿ ಅಲುಗಾಡಿಸಿ, ಕಿತ್ತುಕೊಂಡನು. ಅದರ ಮೇಲೆ ನಾನಾ ವಿಧದ ವೃಕ್ಷಗಳು ಇದ್ದವು. ವಾನರ ಶ್ರೇಷ್ಠ ಮಹಾಬಲಿ ಹನುಮಂತನು ತನ್ನೆರಡು ಕೈಗಳಿಂದ ಹಿಡಿದೆತ್ತಿದನು.॥37-38॥

ಮೂಲಮ್ - 39

ಸ ನೀಲಮಿವ ಜೀಮೂತಂ ತೋಯಪೂರ್ಣಂ ನಭಸ್ತಲಾತ್ ।
ಉತ್ಪಪಾತ ಗೃಹೀತ್ವಾ ತು ಹನೂಮಾನ್ ಶಿಖರಂ ಗಿರೇಃ ॥

ಅನುವಾದ

ನೀರು ತುಂಬಿದ ನೀಲಮೇಘದಂತೆ ಆ ಪರ್ವತ ಶಿಖರವನ್ನು ಎತ್ತಿಕೊಂಡು ಹನುಮಂತನು ಮೇಲಕ್ಕೆ ನೆಗೆದನು.॥39॥

ಮೂಲಮ್ - 40

ಸಮಾಗಮ್ಯ ಮಹಾವೇಗಃ ಸಂನ್ಯಸ್ಯ ಶಿಖರಂ ಗಿರೇಃ ।
ವಿಶ್ರಮ್ಯ ಕಿಂಚಿದ್ಧನುಮಾನ್ ಸುಷೇಣಮಿದಮಬ್ರವೀತ್ ॥

ಅನುವಾದ

ಮಹಾವೇಗದಿಂದ ಅವನು ಆ ಪರ್ವತಶಿಖರವನ್ನು ಸುಷೇಣನ ಬಳಿಗೊಯ್ದು ನೆಲದಲ್ಲಿರಿಸಿದನು. ಸ್ವಲ್ಪ ವಿಶ್ರಮಿಸಿ ಹನುಮಂತನು ಸುಷೇಣನಲ್ಲಿ ಇಂತೆಂದನು.॥40॥

ಮೂಲಮ್ - 41

ಓಷಧೀರ್ನಾವಗಚ್ಛಾಮಿ ತಾ ಅಹಂ ಹರಿಪುಂಗವ ।
ತದಿದಂ ಶಿಖರಂ ಕೃತ್ಸ್ನಂ ಗಿರೇಸ್ತಸ್ಯಾಹೃತಂ ಮಯಾ ॥

ಅನುವಾದ

ಕಪಿಶ್ರೇಷ್ಠನೇ! ನಾನು ಆ ಔಷಧಿಗಳನ್ನು ಗುರುತಿಸುವುದಿಲ್ಲ. ಅದಕ್ಕಾಗಿ ಆ ಪರ್ವತದ ಶಿಖರವನ್ನೇ ಎತ್ತಿಕೊಂಡು ಬಂದಿರುವೆನು.॥41॥

ಮೂಲಮ್ - 42

ಏವಂ ಕಥಯಮಾನಂ ತು ಪ್ರಶಸ್ಯ ಪವನಾತ್ಮಜಮ್ ।
ಸುಷೇಣೋ ವಾನರಶ್ರೇಷ್ಠೋ ಜಗ್ರಾಹೋತ್ಪಾಟ್ಯ ಚೌಷಧೀಃ ॥

ಅನುವಾದ

ಹೀಗೆ ಹೇಳುತ್ತಿರುವ ಹನುಮಂತನನ್ನು ಭೂರಿ ಭೂರಿ ಪ್ರಶಂಸಿಸಿ ವಾನರ ಶ್ರೇಷ್ಠ ಸುಷೇಣನು ಆ ಮಹೌಷಧಿಗಳನ್ನು ಕಿತ್ತು ತಂದನು.॥42॥

ಮೂಲಮ್ - 43

ವಿಸ್ಮಿತಾಸ್ತು ಬಭೂವುಸ್ತೇ ರಣೇ ವಾನರಪುಂಗವಾಃ ।
ದೃಷ್ಟ್ವಾ ತು ಹನುಮತ್ಕರ್ಮ ಸುರೈರಪಿ ಸುದುಷ್ಕರಮ್ ॥

ಅನುವಾದ

ಹನುಮಂತನ ಆ ಕರ್ಮವು ದೇವತೆಗಳಿಗೂ ಅತ್ಯಂತ ದುಷ್ಕರವಾಗಿತ್ತು. ಅದನ್ನು ನೋಡಿ ಸಮಸ್ತ ವಾನರ ಯೂಥಪತಿಗಳು ಭಾರೀ ವಿಸ್ಮಿತರಾದರು.॥43॥

ಮೂಲಮ್ - 44

ತತಃ ಸಂಕ್ಷೋದಯಿತ್ವಾ ತಾಮೋಷಧೀಂ ವಾನರೋತ್ತಮಃ ।
ಲಕ್ಷ್ಮಣಸ್ಯ ದದೌ ನಸ್ತಃ ಸುಷೇಣಃ ಸುಮಹಾದ್ಯುತಿಃ ॥

ಅನುವಾದ

ಮಹಾತೇಜಸ್ವೀ ಕಪಿಶ್ರೇಷ್ಠ ಸುಷೇಣನು ಆ ಔಷಧಿಗಳನ್ನು ಕುಟ್ಟಿ ಅರೆದು ಲಕ್ಷ್ಮಣನು ಮೂಗಿನಲ್ಲಿ ಹಚ್ಚಿದನು.॥44॥

ಮೂಲಮ್ - 45

ಸಶಲ್ಯಃ ಸ ಸಮಾಘ್ರಾಯ ಲಕ್ಷ್ಮಣಃ ಪರವೀರಹಾ ।
ವಿಶಲ್ಯೋ ವಿರುಜಃ ಶೀಘ್ರಮುದತಿಷ್ಠನ್ಮಹೀತಲಾತ್ ॥

ಅನುವಾದ

ಶತ್ರುಸಂಹಾರ ಮಾಡುವ ಲಕ್ಷ್ಮಣನ ಶರೀರದಲ್ಲಿ ನೆಟ್ಟಿದ್ದ ಬಾಣಗಳು ಔಷಧಿಯು ಮೂಸುತ್ತಲೇ ಎಲ್ಲವೂ ಬಿದ್ದುಹೋದುವು ಹಾಗೂ ಕೂಡಲೇ ನಿರೋಗಿಯಾಗಿ ಎದ್ದು ನಿಂತುಕೊಂಡನು.॥45॥

ಮೂಲಮ್ - 46

ತಮುತ್ಥಿತಂ ತು ಹರಯೋ ಭೂತಲಾತ್ಪ್ರೇಕ್ಷ್ಯಲಕ್ಷ್ಮಣಮ್ ।
ಸಾಧು ಸಾಧ್ವಿತಿ ಸುಪ್ರೀತಾ ಲಕ್ಷ್ಮಣಂ ಪ್ರತ್ಯಪೂಜಯನ್ ॥

ಅನುವಾದ

ಲಕ್ಷ್ಮಣನು ಎದ್ದು ನಿಂತಿರುವುದನ್ನು ನೋಡಿ ವಾನರರೆಲ್ಲ ಸಂತೋಷಗೊಂಡು ಭಲೇ, ಭಲೇ ಲಕ್ಷ್ಮಣ! ಎಂದು ಹೇಳುತ್ತಾ ಭೂರಿಭೂರಿ ಪ್ರಶಂಸೆ ಮಾಡಿದರು.॥46॥

ಮೂಲಮ್ - 47

ಏಹ್ಯೇಹೀತ್ಯಬ್ರವೀ ದ್ರಾಮೋ ಲಕ್ಷ್ಮಣಂ ಪರವೀರಹಾ ।
ಸಸ್ವಜೇ ಗಾಢಮಾಲಿಂಗ್ಯ ಭಾಷ್ಪಪರ್ಯಾಕುಲೇಕ್ಷಣಃ ॥

ಅನುವಾದ

ಆಗ ಶತ್ರುವೀರರ ಸಂಹಾರಮಾಡುವ ಭಗವಾನ್ ಶ್ರೀರಾಮನು ಲಕ್ಷ್ಮಣನಲ್ಲಿ ಬಾ, ಬಾ! ಎಂದು ಹೇಳಿ ಬರಸೆಳೆದು ಬಿಗಿದಪ್ಪಿಕೊಂಡನು. ಆಗ ಅವನ ಕಣ್ಣುಗಳಲ್ಲಿ ನೀರು ಹರಿಯಿತು.॥47॥

ಮೂಲಮ್ - 48

ಅಬ್ರವೀಚ್ಛ ಪರಿಷ್ವಜ್ಯ ಸೌಮಿತ್ರಿಂ ರಾಘವಸ್ತದಾ ।
ದಿಷ್ಟ್ಯಾ ತ್ವಾಂ ವೀರ ಪಶ್ಯಾಮಿ ಮರಣಾತ್ಪುನರಾಗತಮ್ ॥

ಅನುವಾದ

ಸೌಮಿತ್ರಿಯನ್ನು ಅಪ್ಪಿಕೊಂಡು ಶ್ರೀರಘುನಾಥನು ಹೇಳಿದನು-ವೀರನೇ! ನೀನು ಮೃತ್ಯುಮುಖದಿಂದ ಪುನಃ ಮರಳಿ ಬಂದುದು ನಮ್ಮ ಸೌಭಾಗ್ಯದ ಮಾತಾಗಿದೆ.॥48॥

ಮೂಲಮ್ - 49

ಜೀವಿತೇ ಮೇ ಜೀವಿತೇನಾರ್ಥಃ ಸೀತಯಾ ಚ ಜಯೇನ ವಾ ।
ಕೋ ಹಿ ಮೇ ಜೀವಿತೇನಾರ್ಥಸ್ತ್ವಯಿ ಪಂಚತ್ವಮಾಗತೇ ॥

ಅನುವಾದ

ನೀನಿಲ್ಲದೆ ನನಗೆ ಜೀವನದಿಂದ, ಸೀತೆಯಿಂದ, ವಿಜಯದಿಂದ ಯಾವುದೇ ಪ್ರಯೋಜನವಿಲ್ಲ. ನೀನು ಇಲ್ಲದಿರುವಾಗ ನಾನು ಬದುಕಿದ್ದರೂ ಏನು ಮಾಡಲಿ.॥49॥

ಮೂಲಮ್ - 50

ಇತ್ಯೇವಂ ಬ್ರುವತಸ್ತಸ್ಯ ರಾಘವಸ್ಯ ಮಹಾತ್ಮನಃ ।
ಖಿನ್ನಃ ಶಿಥಿಲಯಾ ವಾಚಾ ಲಕ್ಷ್ಮಣೋ ವಾಕ್ಯಮಬ್ರವೀತ್ ॥

ಅನುವಾದ

ಮಹಾತ್ಮಾ ಶ್ರೀರಾಮನು ಹಾಗೆ ಹೇಳಿದಾಗ ಲಕ್ಷ್ಮಣನು ಖಿನ್ನನಾಗಿ ಗದ್ಗದಿತನಾಗಿ ನಿಧಾನವಾಗಿ ಹೀಗೆ ನುಡಿದನು.॥50॥

ಮೂಲಮ್ - 51

ತಾಂ ಪ್ರತಿಜ್ಞಾಂ ಪ್ರತಿಜ್ಞಾಯ ಪುರಾ ಸತ್ಯಪರಾಕ್ರಮ ।
ಲಘುಃ ಕಶ್ಚಿದಿವಾಸತ್ತ್ವೋ ನೈವಂ ತ್ವಂ ವಕ್ತುಮರ್ಹಸಿ ॥

ಅನುವಾದ

ಆರ್ಯನೇ! ನೀನು ಸತ್ಯಪರಾಕ್ರಮಿಯಾಗಿರುವೆ. ನೀನು ಮೊದಲು ರಾವಣನನ್ನು ವಧಿಸಿ ವಿಭೀಷಣನಿಗೆ ಲಂಕೆಯ ರಾಜ್ಯವನ್ನು ಕೊಡುವ ಪ್ರತಿಜ್ಞೆ ಮಾಡಿದ್ದೆ. ಅಂತಹ ಪ್ರತಿಜ್ಞೆ ಮಾಡಿ, ನಿರ್ಬಲ ಮನುಷ್ಯನಂತೆ ನೀನು ಹೀಗೆ ಮಾತನಾಡಬಾರದು.॥51॥

ಮೂಲಮ್ - 52

ನಹಿ ಪ್ರತಿಜ್ಞಾಂ ಕುರ್ವಂತಿ ವಿತಥಾಂ ಸತ್ಯವಾದಿನಃ ।
ಲಕ್ಷಣಂ ಹಿ ಮಹತ್ತ್ವಸ್ಯ ಪ್ರತಿಜ್ಞಾಪರಿಪಾಲನಮ್ ॥

ಮೂಲಮ್ - 53

ನೈರಾಶ್ಯ ಮುಪಗಂತುಂ ಚ ನಾಲಂತೇ ಮತ್ಕೃತೇಽನಘ ।
ವಧೇನ ರಾವಣಸ್ಯಾದ್ಯ ಪ್ರತಿಜ್ಞಾಮನುಪಾಲಯ ॥

ಅನುವಾದ

ಸತ್ಯವಾದೀ ಪುರುಷನು ಸುಳ್ಳು ಪ್ರತಿಜ್ಞೆ ಮಾಡುವುದಿಲ್ಲ. ಪ್ರತಿಜ್ಞೆಯ ಪಾಲನೆಯೇ ಹಿರಿತನದ ಲಕ್ಷಣವಾಗಿದೆ. ನಿಷ್ಪಾಪ ರಘುವೀರನೇ! ನನಗಾಗಿ ನೀನು ಇಷ್ಟು ನಿರಾಶನಾಗಬಾರದು. ಇಂದೇ ರಾವಣನನ್ನು ವಧಿಸಿ ನಿನ್ನ ಪ್ರತಿಜ್ಞೆ ಪೂರ್ಣಗೊಳಿಸು.॥52-53॥

ಮೂಲಮ್ - 54

ನ ಜೀವನ್ಯಾಸ್ಯತೇ ಶತ್ರುಸ್ತವ ಬಾಣಪಥಂ ಗತಃ ।
ನರ್ದತಸ್ತೀಕ್ಷ್ಣದಂಷ್ಟ್ರಸ್ಯ ಸಿಂಹಸ್ಯೇವ ಮಹಾಗಜಃ ॥

ಅನುವಾದ

ತೀಕ್ಷ್ಣವಾದ ಕೊರೆದಾಡೆಗಳುಳ್ಳ ಸಿಂಹದ ಎದುರಿನಿಂದ ಆನೆಯು ಜೀವಂತವಾಗಿ ಹೋಗಲಾರದೋ ಹಾಗೆಯೇ ನಿಮ್ಮ ಬಾಣದ ಗುರಿಗೆ ತುತ್ತಾದ ಶತ್ರು ಮರಳಿ ಹೋಗಲಾರನು.॥54॥

ಮೂಲಮ್ - 55

ಅಹಂ ತು ವಧಮಿಚ್ಛಾಮಿ ಶೀಘ್ರಮಸ್ಯ ದುರಾತ್ಮನಃ ।
ಯಾವದಸ್ತಂ ನ ಯಾತ್ಯೇಷ ಕೃತಕರ್ಮಾ ದಿವಾಕರಃ ॥

ಅನುವಾದ

ಸೂರ್ಯನು ಹಗಲಿನ ಭ್ರಮಣೆಯನ್ನು ಪೂರ್ಣಗೊಳಿಸಿ ಅಸ್ತಾಚಲಕ್ಕೆ ಹೋಗುವದೊಳಗೆ ಸಾಧ್ಯವಿದ್ದಷ್ಟು ಬೇಗ ಆ ದುರಾತ್ಮಾ ರಾವಣನ ವಧೆಯನ್ನು ನಾನು ನೋಡ ಬಯಸುವೆನು.॥55॥

ಮೂಲಮ್ - 56

ಯದಿ ವಧಮಿಚ್ಛಸಿ ರಾವಣಸ್ಯ ಸಂಖ್ಯೇ
ಯದಿ ಚ ಕೃತಾಂ ಹಿ ತವೇಚ್ಛಸಿ ಪ್ರತಿಜ್ಞಾಮ್ ।
ಯದಿ ತವ ರಾಜಸುತಾಭಿಲಾಷ ಆರ್ಯ
ಕುರು ಚ ವಚೋ ಮಮ ಶೀಘ್ರಮದ್ಯ ವೀರ ॥

ಅನುವಾದ

ಆರ್ಯನೇ! ವೀರವರನೇ! ನೀನು ಯುದ್ಧದಲ್ಲಿ ರಾವಣನನ್ನು ವಧಿಸಲು ಬಯಸುವೆಯಾದರೆ, ನಿನ್ನ ಮನಸ್ಸಿನಲ್ಲಿ ತನ್ನ ಪ್ರತಿಜ್ಞೆಯನ್ನು ಪೂರ್ಣಗೊಳಿಸುವ ಇಚ್ಛೆ ಇದ್ದರೆ, ರಾಜಕುಮಾರೀ ಸೀತೆಯನ್ನು ಪಡೆಯುವ ಅಭಿಲಾಷೆ ಇಟ್ಟುಕೊಂಡಿದ್ದರೆ, ಇಂದೇ ರಾವಣನನ್ನು ಕೊಂದು ನನ್ನ ಪ್ರಾರ್ಥನೆಯನ್ನ ಸಲಗೊಳಿಸಿರಿ.॥5.॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರಒಂದನೆಯ ಸರ್ಗ ಪೂರ್ಣವಾಯಿತು.॥101॥