१०० रावणस्य युद्धपलायनम्

वाचनम्
ಭಾಗಸೂಚನಾ

ರಾಮ-ರಾವಣರ ಯುದ್ಧ, ರಾವಣನ ಶಕ್ತಿಯಿಂದ ಲಕ್ಷ್ಮಣನ ಮೂರ್ಛೆ, ಯುದ್ಧದಿಂದ ರಾವಣನ ಪಲಾಯನ

ಮೂಲಮ್ - 1

ತಸ್ಮಿನ್ ಪ್ರತಿಹತೇಽಸ್ತ್ರೇ ತು ರಾವಣೋ ರಾಕ್ಷಸಾಧಿಪಃ ।
ಕ್ರೋಧಂ ಚ ದ್ವಿಗುಣಂ ಚಕ್ರೇ ಕ್ರೋಧಾಚ್ಚಾಸ್ತ್ರಮನಂತರಮ್ ॥

ಮೂಲಮ್ - 2

ಮಯೇನ ವಿಹಿತಂ ರೌದ್ರಮನ್ಯದಸ್ತ್ರಂ ಮಹಾದ್ಯುತಿಃ ।
ಉತ್ಸ್ರಷ್ಟುಂ ರಾವಣೋ ಭೀಮಂ ರಾಘವಾಯ ಪ್ರಚಕ್ರಮೇ ॥

ಅನುವಾದ

ತನ್ನ ಅಸ್ತ್ರವು ನಾಶವಾದಾಗ ರಾಕ್ಷಸರಾಜ ರಾವಣನು ಇಮ್ಮಡಿಯಾಗಿ ಕ್ರೋಧಗೊಂಡು ಶ್ರೀರಾಮನ ಮೇಲೆ ಮಯಾಸುರನು ನಿರ್ಮಿಸಿದ ಇನ್ನೊಂದು ಭಯಂಕರ ಅಸ್ತ್ರವನ್ನು ಬಿಡಲು ಯೋಜಿಸಿದನು.॥1-2॥

ಮೂಲಮ್ - 3

ತತಃ ಶೂಲಾನಿ ನಿಶ್ಚೇರುರ್ಗದಾಶ್ಚ ಮುಸಲಾನಿ ಚ ।
ಕಾರ್ಮುಕಾದ್ದೀಪ್ಯಮಾನಾನಿ ವಜ್ರಸಾರಾಣಿ ಸರ್ವಶಃ ॥

ಮೂಲಮ್ - 4

ಮುದ್ಗರಾಃ ಕೂಟಪಾಶಾಶ್ಚ ದೀಪ್ತಾಶ್ಚಾಶನಯಸ್ತಥಾ ।
ನಿಷ್ಪೇತುರ್ವಿವಿಧಾಸ್ತೀಕ್ಷ್ಣಾ ವಾತಾ ಇವ ಯುಗಕ್ಷಯೇ ॥

ಅನುವಾದ

ಆಗ ರಾವಣನ ಧನುಸ್ಸಿನಿಂದ ವಜ್ರದಂತೆ ದೃಢವಾದ, ಹೊಳೆಯುತ್ತಿರುವ ಶೂಲ, ಗದೆ, ಮುಸಲ, ಮುದ್ಗರ, ಕೂಟಪಾಶ ಹಾಗೂ ಸೆಳೆವ ಮಿಂಚು ಮುಂತಾದ ಬಗೆ ಬಗೆಯ ಹರಿತವಾದ ಅಸ್ತ್ರಗಳು ಪ್ರಳಯಕಾಲದಲ್ಲಿ ವಾಯುವಿನ ವಿವಿಧ ರೂಪಗಳು ಪ್ರಕಟವಾದಂತೆ ಹೊರಹೊಮ್ಮಿದವು.॥3-4॥

ಮೂಲಮ್ - 5

ತದಸ್ತ್ರಂ ರಾಘವಃ ಶ್ರೀಮಾನುತ್ತಮಾಸ್ತ್ರವಿದಾಂ ವರಃ ।
ಜಘಾನ ಪರಮಾಸ್ತ್ರೇಣ ಗಾಂಧರ್ವೇಣ ಮಹಾದ್ಯುತಿಃ ॥

ಅನುವಾದ

ಆಗ ಉತ್ತಮ ಅಸ್ತ್ರವೇತ್ತನಾದ ಮಹಾತೇಜಸ್ವೀ ಶ್ರೀಮತ್ ರಘುನಾಥನು ಗಾಂಧರ್ವ ಎಂಬ ಶ್ರೇಷ್ಠ ಅಸ್ತ್ರದಿಂದ ರಾವಣನ ಆ ಅಸ್ತ್ರವನ್ನು ಶಾಂತಗೊಳಿಸಿದನು.॥5॥

ಮೂಲಮ್ - 6

ತಸ್ಮಿನ್ ಪ್ರತಿಹತೇಽಸ್ತ್ರೇ ತು ರಾಘವೇಣ ಮಹಾತ್ಮನಾ ।
ರಾವಣಃ ಕ್ರೋಧ ತಾಮ್ರಾಕ್ಷಃ ಸೌರಮಸ್ತ್ರ ಮುದೀರಯತ್ ॥

ಅನುವಾದ

ಮಹಾತ್ಮಾ ರಘುನಾಥನಿಂದ ಆ ಅಸ್ತ್ರವು ಪ್ರತಿಹತವಾದಾಗ ರಾವಣನ ಕಣ್ಣುಗಳು ಕೆಂಪಗಾಗಿ, ಅವನು ಸೂರ್ಯಸ್ತ್ರವನ್ನು ಪ್ರಯೋಗಿಸಿದನು.॥6॥

ಮೂಲಮ್ - 7

ತತಶ್ಚಕ್ರಾಣಿ ನಿಷ್ಪೇತುರ್ಭಾಸ್ವರಾಣಿ ಮಹಾಂತಿ ಚ ।
ಕಾರ್ಮುಕಾದ್ ಭೀಮವೇಗಸ್ಯ ದಶಗ್ರೀವಸ್ಯ ಧೀಮತಃ ॥

ಅನುವಾದ

ಆಗ ಭಯಾನಕ ವೇಗಶಾಲಿ ಬುದ್ಧಿವಂತ ರಾಕ್ಷಸ ದಶಗ್ರೀವನ ಧನುಸ್ಸಿನಿಂದ ದೊಡ್ಡ ದೊಡ್ಡ ತೇಜಸ್ವೀ ಚಕ್ರಗಳು ಪ್ರಕಟವಾಗತೊಡಗಿದವು.॥7॥

ಮೂಲಮ್ - 8

ತೈರಾಸೀದ್ಗಗನಂ ದೀಪ್ತಂ ಸಂಪತದ್ಭಿಃ ಸಮಂತತಃ ।
ಪತದ್ಭಿಶ್ಚ ದಿಶೋ ದೀಪ್ತಾಶ್ಚಂದ್ರ ಸೂರ್ಯಗ್ರಹೈರಿವ ॥

ಅನುವಾದ

ಸೂರ್ಯ-ಚಂದ್ರಾದಿ ಗ್ರಹರಂತೆ ಆಕಾರವುಳ್ಳ ಆ ಪ್ರಕಾಶಮಾನ ಅಸ್ತ್ರ-ಶಸ್ತ್ರಗಳು ಪ್ರಕಟವಾಗಿ ಎಲ್ಲೆಡೆ ಬೀಳುತ್ತಿದ್ದವು. ಅದರಿಂದ ಆಕಾಶದಲ್ಲಿ ಪ್ರಕಾಶ ಪ್ರಸರಿತು ಹಾಗೂ ಎಲ್ಲ ದಿಕ್ಕುಗಳೂ ಬೆಳಗಿದವು.॥8॥

ಮೂಲಮ್ - 9

ತಾನಿ ಚಿಚ್ಛೇದಬಾಣೌಘೈಶ್ಚಕ್ರಾಣಿ ತು ಸ ರಾಘವಃ ।
ಆಯುಧಾನಿ ಚ ಚಿತ್ರಾಣಿ ರಾವಣಸ್ಯ ಚಮೂಮುಖೇ ॥

ಅನುವಾದ

ಆದರೆ ಶ್ರೀರಾಮಚಂದ್ರನು ತನ್ನ ಬಾಣಸಮೂಹಗಳಿಂದ ಯುದ್ಧದಲ್ಲಿ ರಾವಣನ ಆ ಚಕ್ರಗಳನ್ನು ಮತ್ತು ವಿಚಿತ್ರ ಆಯುಧಗಳನ್ನು ಕತ್ತರಿಸಿಹಾಕಿದನು.॥9॥

ಮೂಲಮ್ - 10

ತದಸಂ ತು ಹತಂ ದೃಷ್ಟ್ವಾರಾವಣೋ ರಾಕ್ಷಸಾಧಿಪಃ ।
ವಿವ್ಯಾಧ ದಶಭಿರ್ಬಾಣೈ ರಾಮಂ ಸರ್ವೇಷು ಮರ್ಮಸು ॥

ಅನುವಾದ

ತನ್ನ ಅಸ್ತ್ರವು ನಾಶವಾದುದನ್ನು ನೋಡಿ ರಾವಣನು ಹತ್ತು ಬಾಣಗಳಿಂದ ಶ್ರೀರಾಮನ ಎಲ್ಲ ಮರ್ಮಸ್ಥಾನಗಳಲ್ಲಿ ಆಳವಾಗಿ ನೋಯಿಸಿದನು.॥10॥

ಮೂಲಮ್ - 11

ಸ ವಿದ್ಧೋದಶಭಿರ್ಬಾಣೈರ್ಮಹಾ ಕಾರ್ಮುಕ ನಿಃಸೃತೈಃ ।
ರಾವಣೇನ ಮಹಾತೇಜಾ ನ ಪ್ರಾಕಂಪತ ರಾಘವಃ ॥

ಅನುವಾದ

ರಾವಣನ ವಿಶಾಲ ಧನುಸ್ಸಿನಿಂದ ಬಿಟ್ಟ ಹತ್ತು ಬಾಣಗಳಿಂದ ಗಾಯಗೊಂಡರೂ ಮಹಾ ತೇಜಸ್ವೀ ಶ್ರೀರಘುನಾಥನು ವಿಚಲಿತನಾಗಲಿಲ್ಲ.॥11॥

ಮೂಲಮ್ - 12

ತತೋ ವಿವ್ಯಾಧ ಗಾತ್ರೇಷು ಸರ್ವೇಷು ಸಮಿತಿಂಜಯಃ ।
ರಾಘವಸ್ತು ಸುಸಂಕ್ರುದ್ಧೋ ರಾವಣಂ ಬಹುಭಿಃ ಶರೈಃ ॥

ಅನುವಾದ

ಅನಂತರ ಸಮರವಿಜಯೀ ಶ್ರೀರಾಮನು ಅತ್ಯಂತ ಕುಪಿತ ನಾಗಿ ಅನೇಕ ಬಾಣಗಳನ್ನು ಹೊಡೆದು ರಾವಣನ ಸರ್ವಾಂಗವನ್ನು ಗಾಯಗೊಳಿಸಿದನು.॥12॥

ಮೂಲಮ್ - 13

ಏತಸ್ಮಿನ್ನಂತರೇ ಕ್ರುದ್ಧೋ ರಾಘವಸ್ಯಾನುಜೋ ಬಲೀ ।
ಲಕ್ಷ್ಮಣಃ ಸಾಯಕಾನ್ಸಪ್ತ ಜಗ್ರಾಹ ಪರವೀರಹಾ ॥

ಅನುವಾದ

ಆಗ ಶತ್ರುವೀರರನ್ನು ಸಂಹರಿಸುವ ಮಹಾಬಲಿ ರಾಮಾನುಜ ಲಕ್ಷ್ಮಣನು ಕುಪಿತನಾಗಿ ಏಳು ಸಾಯಕಗಳನ್ನು ಕೈಗೆತ್ತಿಕೊಂಡನು.॥13॥

ಮೂಲಮ್ - 14

ತೈಃ ಸಾಯಕೈರ್ಮಹಾವೇಗೈ ರಾವಣಸ್ಯ ಮಹಾದ್ಯುತಿಃ ।
ಧ್ವಜಂ ಮನುಷ್ಯಶೀರ್ಷಂ ತು ತಸ್ಯ ಚಿಚ್ಛೇದ ನೈಕಧಾ ॥

ಅನುವಾದ

ಆ ಮಹಾವೇಗಶಾಲಿ ಬಾಣಗಳಿಂದ ಮಹಾತೇಜಸ್ವೀ ಸೌಮಿತ್ರಿಯು ಮನುಷ್ಯನ ತಲೆಬುರುಡೆಯ ಚಿಹ್ನೆ ಇದ್ದ ರಾವಣನ ಧ್ವಜ ವನ್ನು ತುಂಡಾಗಿಸಿದನು.॥14॥

ಮೂಲಮ್ - 15

ಸಾರಥೇಶ್ಚಾಪಿ ಬಾಣೇನ ಶಿರೋ ಜ್ವಲಿತಕುಂಡಲಮ್ ।
ಜಹಾರ ಲಕ್ಷ್ಮಣಃ ಶ್ರೀಮಾನ್ನೈರ್ಋತಸ್ಯ ಮಹಾಬಲಃ ॥

ಅನುವಾದ

ಬಳಿಕ ಮಹಾಬಲಿ ಶ್ರೀಮಾನ್ ಲಕ್ಷ್ಮಣನು ಒಂದು ಬಾಣದಿಂದ ರಾವಣನ ಸಾರಥಿಯ ಕರ್ಣಕುಂಡಲ ಮಂಡಿತ ಮಸ್ತಕವನ್ನು ಕಡಿದುರುಳಿಸಿದನು.॥15॥

ಮೂಲಮ್ - 16

ತಸ್ಯ ಬಾಣೈಶ್ಚ ಚಿಚ್ಛೇದ ಧನುರ್ಗಜಕರೋಪಮಮ್ ।
ಲಕ್ಷ್ಮಣೋ ರಾಕ್ಷಸೇಂದ್ರಸ್ಯ ಪಂಚಭಿರ್ನಿಶಿತೈಸ್ತದಾ ॥

ಅನುವಾದ

ಇಷ್ಟೇ ಅಲ್ಲದೇ ಲಕ್ಷ್ಮಣನು ಹರಿತವಾದ ಐದು ಬಾಣಗಳಿಂದ ರಾಕ್ಷಸರಾಜನ ಆನೆಯ ಸೊಂಡಿಲಿನಂತೆ ಇದ್ದ ಧನುಸ್ಸನ್ನು ತುಂಡರಿಸಿದನು.॥16॥

ಮೂಲಮ್ - 17

ನೀಲಮೇಘ ನಿಭಾಂಶ್ಚಾಸ್ಯ ಸದಶ್ವಾನ್ ಪರ್ವತೋಪಮಾನ್ ।
ಜಘಾನಾಪ್ಲುತ್ಯ ಗದಯಾ ರಾವಣಸ್ಯ ವಿಭೀಷಣಃ ॥

ಅನುವಾದ

ಅನಂತರ ವಿಭೀಷಣನು ನೆಗೆದು ತನ್ನ ಗದೆಯಿಂದ ರಾವಣನ ನೀಲಮೇಘದಂತೆ ಕಾಂತಿಯುಳ್ಳ ಸುಂದರ ಪರ್ವತಾಕಾರ ಕುದುರೆಗಳನ್ನು ಕೊಂದು ಹಾಕಿದನು.॥17॥

ಮೂಲಮ್ - 18

ಹತಾಶ್ವಾತ್ ತು ವೇಗಾದವಪ್ಲುತ್ಯ ಮಹಾರಥಾತ್ ।
ಕ್ರೋಧಮಾಹಾರಯತ್ತೀವ್ರಂ ಭ್ರಾತರಂ ಪ್ರತಿ ರಾವಣಃ ॥

ಅನುವಾದ

ಕುದುರೆಗಳು ಸತ್ತುಹೋದಾಗ ರಾವಣನು ತನ್ನ ವಿಶಾಲ ರಥದಿಂದ ವೇಗವಾಗಿ ಹಾರಿದನು ಮತ್ತು ತನ್ನ ತಮ್ಮನ ಮೇಲೆ ಭಾರೀ ಸಿಟ್ಟುಗೊಂಡನು.॥18॥

ಮೂಲಮ್ - 19

ತತಃ ಶಕ್ತಿಂ ಮಹಾಶಕ್ತಿಃ ಪ್ರದೀಪ್ತಾಶನೀಮಿವ ।
ವಿಭೀಷಣಾಯ ಚಿಕ್ಷೇಪ ರಾಕ್ಷಸೇಂದ್ರಃ ಪ್ರತಾಪವಾನ್ ॥

ಅನುವಾದ

ಆಗ ಮಹಾಶಕ್ತಿಶಾಲಿ ಪ್ರತಾಪಿ ರಾಕ್ಷಸೇಂದ್ರನು ವಿಭೀಷಣನನ್ನು ಕೊಲ್ಲಲು ಒಂದು ವಜ್ರಾಯುಧದಂತಹ ಪ್ರಜ್ವಲಿತ ಶಕ್ತಿಯನ್ನು ಪ್ರಯೋಗಿಸಿದನು.॥19॥

ಮೂಲಮ್ - 20

ಅಪ್ರಾಪ್ತಾಮೇವ ತಾಂ ಬಾಣೈಸ್ತ್ರಿಭಿಶ್ಚಿಚ್ಛೇದ ಲಕ್ಷ್ಮಣಃ ।
ಅಥೋದತಿಷ್ಠತ್ ಸಂನಾದೋ ವಾನರಾಣಾಂ ಮಹಾ ರಣೇ ॥

ಅನುವಾದ

ಆ ಶಕ್ತಿಯು ವಿಭೀಷಣನಿಗೆ ತಾಗುವ ಮೊದಲೇ ಲಕ್ಷ್ಮಣನು ಮೂರು ಬಾಣಗಳಿಂದ ಅದನ್ನು ತುಂಡರಿಸಿದನು. ಇದನ್ನು ನೋಡಿ ಆ ಮಹಾಸಮರದಲ್ಲಿ ವಾನರರು ಮಾಡಿದ ಮಹಾ ಹರ್ಷನಾದವು ಪ್ರತಿಧ್ವನಿಸಿತು.॥20॥

ಮೂಲಮ್ - 21

ಸಂಪಪಾತ ತ್ರಿಧಾ ಚ್ಛಿನ್ನಾಶಕ್ತಿಃ ಕಾಂಚನಮಾಲಿನೀ ।
ಸವಿಸ್ಫುಲಿಂಗಾ ಜ್ವಲಿತಾ ಮಹೋಲ್ಕೇವ ದಿವಶ್ಚ್ಯುತಾ ॥

ಅನುವಾದ

ಆಕಾಶದಿಂದ ಕಿಡಿಗಳ ಸಹಿತ ಭಾರೀ ಉಲ್ಕೆಯು ಬೀಳುವಂತೆ, ಸ್ವರ್ಣಾಲಂಕೃತನಾದ ಆ ಶಕ್ತಿಯು ಮೂರು ತುಂಡುಗಳಾಗಿ ಭೂಮಿಗೆ ಬಿದ್ದು ಹೋಯಿತು.॥21॥

ಮೂಲಮ್ - 22

ತತಃ ಸಂಭಾವಿತತರಾಂ ಕಾಲೇನಾಪಿ ದುರಾಸದಾಮ್ ।
ಜಗ್ರಾಹ ವಿಪುಲಾಂ ಶಕ್ತಿಂ ದೀಪ್ಯಮಾನಾಂ ಸ್ವತೇಜಸಾ ॥

ಅನುವಾದ

ಅನಂತರ ರಾವಣನು ವಿಭೀಷಣನನ್ನು ಕೊಲ್ಲಲು-ಆಮೋಘವಾದ ವಿಖ್ಯಾತವಾದ, ಕಾಲನೂ ಅದರ ವೇಗವನ್ನು ಸಹಿಸದ, ತನ್ನ ತೇಜದಿಂದ ಉದ್ದೀಪ್ತವಾದ ವಿಶಾಲ ಶಕ್ತಿಯೊಂದನ್ನು ಕೈಲೆತ್ತಿಕೊಂಡನು.॥22॥

ಮೂಲಮ್ - 23

ಸಾ ವೇಗಿತಾ ಬಲವತಾ ರಾವಣೇನ ದುರಾತ್ಮನಾ ।
ಜಜ್ವಾಲ ಸುಮಹಾತೇಜಾ ದೀಪ್ತಾಶನಿ ಸಮಪ್ರಭಾ ॥

ಅನುವಾದ

ದುರಾತ್ಮಾ ಬಲವಂತ ರಾವಣನು ಕೈಗೆತ್ತಿಕೊಂಡ ವೇಗಶಾಲೀ, ಮಹಾತೇಜಸ್ವೀ, ವಜ್ರದಂತೆ ಹೊಳೆಯುತ್ತಿದ್ದದ ಆ ಶಕ್ತಿಯು ತನ್ನ ತೇಜದಿಂದ ಪ್ರಜ್ವಲಿಸಿತು.॥23॥

ಮೂಲಮ್ - 24

ಏತಸ್ಮಿನ್ನಂತರೇ ವೀರೋ ಲಕ್ಷ್ಮಣಸ್ತಂ ವಿಭೀಷಣಮ್ ।
ಪ್ರಾಣ ಸಂಶಯಮಾಪನ್ನಂ ತೂರ್ಣಮಭ್ಯವಪದ್ಯತ ॥

ಅನುವಾದ

ಅಷ್ಟರಲ್ಲಿ ವಿಭೀಷಣನು ಪ್ರಾಣಸಂಕಟದಲ್ಲಿ ಬಿದ್ದಿರುವುದನ್ನು ನೋಡಿ ವೀರಲಕ್ಷ್ಮಣನು ಕೂಡಲೇ ಅವನನ್ನು ರಕ್ಷಿಸಲು ಆತನನ್ನು ಹಿಂದಕ್ಕೆ ತಳ್ಳಿ ಸ್ವತಃ ಆ ಶಕ್ತಿಯ ಮುಂದೆ ನಿಂತನು.॥24॥

ಮೂಲಮ್ - 25

ತಂ ವಿಮೋಕ್ಷಯಿತುಂ ವೀರಶ್ಚಾಪಮಾಯಮ್ಯ ಲಕ್ಷ್ಮಣಃ ।
ರಾವಣಂ ಶಕ್ತಿಹಸ್ತಂ ವೈ ಶರವರ್ಷೈರವಾಕಿರತ್ ॥

ಅನುವಾದ

ವಿಭೀಷಣನನ್ನು ರಕ್ಷಿಸಲು ವೀರ ಲಕ್ಷ್ಮಣನು ತನ್ನ ಧನುಸ್ಸನ್ನು ಸೆಳೆದು ಕೈಯಲ್ಲಿ ಶಕ್ತಿಯನ್ನು ಹಿಡಿದುಕೊಂಡು ನಿಂತಿದ್ದ ರಾವಣನ ಮೇಲೆ ಬಾಣಗಳ ಮಳೆ ಸುರಿಸಿದನು.॥25॥

ಮೂಲಮ್ - 26

ಕೀರ್ಯಮಾಣಃ ಶರೌಘೇಣ ವಿಸೃಷ್ಟೇನ ಮಹಾತ್ಮನಾ ।
ನ ಪ್ರಹರ್ತುಂ ಮನಶ್ಚಕ್ರೇ ವಿಮುಖೀಕೃತವಿಕ್ರಮಃ ॥

ಅನುವಾದ

ಮಹಾತ್ಮಾ ಲಕ್ಷ್ಮಣನು ಬಿಟ್ಟ ಬಾಣ ಸಮೂಹಗಳಿಗೆ ಗುರಿಯಾಗಿ ರಾವಣನು ತಮ್ಮನನ್ನು ಕೊಲ್ಲುವ ಪರಾಕ್ರಮದಿಂದ ವಿಮುಖನಾದನು. ಈಗ ಅವನ ಮನಸ್ಸಿನಲ್ಲಿ ಪ್ರಹರಿಸುವ ಇಚ್ಛೆ ಉಳಿಯಲಿಲ್ಲ.॥26॥

ಮೂಲಮ್ - 27

ಮೋಕ್ಷಿತಂ ಭ್ರಾತರಂ ದೃಷ್ಟ್ವಾ ಲಕ್ಷ್ಮಣೇನ ಸ ರಾವಣಃ ।
ಲಕ್ಷ್ಮಣಾಭಿಮುಖಸ್ತಿಷ್ಠನ್ನಿದಂ ವಚನಮಬ್ರವೀತ್ ॥

ಅನುವಾದ

ಲಕ್ಷ್ಮಣನು ನನ್ನ ತಮ್ಮನನ್ನು ಉಳಿಸಿದುದನ್ನು ನೋಡಿದ ರಾವಣನು ಅವನ ಕಡೆಗೆ ಮುಖ ಮಾಡಿ ನಿಂತು ಈ ಪ್ರಕಾರ ಹೇಳಿದನು.॥27॥

ಮೂಲಮ್ - 28

ಮೋಕ್ಷಿತಸ್ತೇ ಬಲಶ್ಲಾಘಿನ್ ಯಸ್ಮಾದೇವಂ ವಿಭೀಷಣಃ ।
ವಿಮುಚ್ಯರಾಕ್ಷಸಂ ಶಕ್ತಿಸ್ತ್ವದೀಯಂ ವಿನಿಪಾತ್ಯತೇ ॥

ಅನುವಾದ

ಬಲಗರ್ವಿತನಾದ ಲಕ್ಷ್ಮಣನೇ! ನೀನು ಹೀಗೆ ಪ್ರಯತ್ನಮಾಡಿ ವಿಭೀಷಣನನ್ನು ಕಾಪಾಡಿದೆ, ಅದಕ್ಕಾಗಿ ಈಗ ಅವನನ್ನು ಬಿಟ್ಟು ನಾನು ಈ ಶಕ್ತಿಯನ್ನು ನಿನ್ನ ಮೇಲೆ ಪ್ರಯೋಗಿಸುವೆನು.॥28॥

ಮೂಲಮ್ - 29

ಏಷಾ ತೇ ಹೃದಯಂ ಭಿತ್ತ್ವಾ ಶಕ್ತಿರ್ಲೋಹಿತ ಲಕ್ಷಣಾ ।
ಮದ್ಬಾಹುಪರಿಘೋತ್ಸೃಷ್ಟಾ ಪ್ರಾಣಾನಾದಾಯ ಯಾಸ್ಯತಿ ॥

ಅನುವಾದ

ಈ ಶಕ್ತಿಯು ಸ್ವಾಭಾವಿಕವಾಗಿಯೇ ಶತ್ರುಗಳ ರಕ್ತದಿಂದ ಮೀಯತಕ್ಕಂತಹುದು. ಇನ್ನು ನಾನು ಬಿಡುತ್ತಲೇ ನಿನ್ನ ಹೃದಯ ಸೀಳಿ ಪ್ರಾಣಗಳನ್ನು ಜೊತೆಗೆ ಕೊಂಡು ಬರುವುದು.॥29॥

ಮೂಲಮ್ - 30

ಇತ್ಯೇವಮುಕ್ತ್ವಾ ತಾಂ ಶಕ್ತಿಮಷ್ಟಘಂಟಾಂ ಮಹಾಸ್ವನಾಮ್ ।
ಮಯೇನ ಮಾಯಾ ವಿಹಿತಾಮಮೋಘಾಂ ಶತ್ರುಘಾತಿನೀಮ್ ॥

ಮೂಲಮ್ - 31

ಲಕ್ಷ್ಮಣಾಯ ಸಮುದ್ದಿಶ್ಯ ಜ್ವಲಂತೀಮಿವ ತೇಜಸಾ ।
ರಾವಣಃ ಪರಮಕ್ರುದ್ಧಶ್ಚಿಕ್ಷೇಪ ಚ ನನಾದ ಚ ॥

ಅನುವಾದ

ಹೀಗೆ ಹೇಳಿ ಅತ್ಯಂತ ಕುಪಿತನಾದ ರಾವಣನು ಮಯಾಸುರನು ಮಾಯೆಯಿಂದ ನಿರ್ಮಿಸಿದ, ಎಂಟು ಗಂಟೆಗಳಿಂದ ಭೂಷಿತ, ಮಹಾಭಯಂಕರ ಶಬ್ದಮಾಡುವ ಆ ಅಮೋಘ ಶತ್ರುಘಾತಿನಿ ಶಕ್ತಿಯು ತನ್ನ ತೇಜದಿಂದ ಪ್ರಜ್ವಲಿತವಾಗಿದ್ದ ಅದನ್ನು ಲಕ್ಷ್ಮಣನಿಗೆ ಗುರಿ ಇಟ್ಟು ಪ್ರಯೋಗಿಸಿ ಜೋರಾಗಿ ಗರ್ಜಿಸಿದನು.॥30-31॥

ಮೂಲಮ್ - 32

ಸಾ ಕ್ಷಿಪ್ತಾ ಭೀಮವೇಗೇನ ವಜ್ರಾಶನಿಸಮಸ್ವನಾ ।
ಶಕ್ತಿರಭ್ಯಪ ತದ್ವೇಗಾಲ್ಲಕ್ಷ್ಮಣಂ ರಣಮೂರ್ಧನಿ ॥

ಅನುವಾದ

ವಜ್ರಾಯುಧ, ಸಿಡಿಲಿನಂತೆ ಶಬ್ದಮಾಡುವ ಆ ಶಕ್ತಿಯು ಯುದ್ಧರಂಗದಲ್ಲಿ ಭಯಾನಕ ವೇಗದಿಂದ ಪ್ರಯೋಗಿಸಿದುದು ಲಕ್ಷ್ಮಣನಿಗೆ ವೇಗವಾಗಿ ಅಪ್ಪಳಿಸಿತು.॥32॥

ಮೂಲಮ್ - 33

ತಾಮನುವ್ಯಾಹರಚ್ಛಕ್ತಿಮಾಪತಂತೀಂ ಸ ರಾಘವಃ ।
ಸ್ವಸ್ತ್ಯಸ್ತು ಲಕ್ಷ್ಮಣಾಯೇತಿ ಮೋಘಾ ಭವ ಹತೋದ್ಯಮಾ ॥

ಅನುವಾದ

ಲಕ್ಷ್ಮಣನ ಕಡೆಗೆ ಬರುತ್ತಿರುವ ಶಕ್ತಿಯನ್ನು ಉದ್ದೇಶಿಸಿ ಭಗವಾನ್ ಶ್ರೀರಾಮನು- ‘ಲಕ್ಷ್ಮಣನ ಕಲ್ಯಾಣವಾಗಲೀ, ನಿನ್ನ ಪ್ರಾಣನಾಶಕ ಶಕ್ತಿಯು ನಾಶವಾಗಿ ನೀನು ವ್ಯರ್ಥವಾಗಿ ಹೋಗು’ ಎಂದು ಹೇಳಿದನು.॥33॥

ಮೂಲಮ್ - 34

ರಾವಣೇನ ರಣೇ ಶಕ್ತಿಃ ಕ್ರುದ್ಧೇನಾಶೀವಿಷೋಪಮಾ ।
ಮುಕ್ತಾಶೂರಸ್ಯಭೀತಸ್ಯ ಲಕ್ಷ್ಮಣಸ್ಯ ಮಮಜ್ಜ ಸಾ ॥

ಅನುವಾದ

ರಣದಲ್ಲಿ ಕುಪಿತನಾದ ರಾವಣನು ಬಿಟ್ಟಿರುವ ಆ ಶಕ್ತಿಯು ವಿಷಧರ ಸರ್ಪದಂತೆ ಭಯಂಕರವಾಗಿ ನಿರ್ಭಯ ವೀರ ಲಕ್ಷ್ಮಣನ ಎದೆಯಲ್ಲಿ ಮುಳುಗಿ ಹೋಯಿತು.॥34॥

ಮೂಲಮ್ - 35

ನ್ಯಪತತ್ ಸಾ ಮಹಾವೇಗಾ ಲಕ್ಷ್ಮಣಸ್ಯ ಮಹೋರಸಿ ।
ಜಿಹ್ವೇವೋರಗರಾಜಸ್ಯ ದೀಪ್ಯಮಾನಾ ಮಹಾದ್ಯುತಿಃ ॥

ಮೂಲಮ್ - 36

ತತೋ ರಾವಣ ವೇಗೇನ ಸುದೂರಮವಗಾಢಯಾ ।
ಶಕ್ತ್ಯಾವಿಭಿನ್ನಹೃದಯಃ ಪಪಾತ ಭುವಿ ಲಕ್ಷ್ಮಣಃ ॥

ಅನುವಾದ

ನಾಗರಾಜ ವಾಸುಕಿಯ ಜಿಹ್ವೆಯಂತಿದ್ದ ಆ ಮಹಾತೇಜಸ್ವಿನೀ ಮತ್ತು ವೇಗವತೀ ಶಕ್ತಿಯು ಲಕ್ಷ್ಮಣನ ವಿಶಾಲವಾದ ಎದೆಗೆ ಬಡಿದಾಗ ರಾವಣನ ವೇಗದಿಂದ ಆಳವಾಗಿ ನೆಟ್ಟುಹೋಗಿ. ಆ ಶಕ್ತಿಯಿಂದ ಹೃದಯ ವಿದೀರ್ಣವಾಗಿ ಲಕ್ಷ್ಮಣನು ನೆಲಕ್ಕೆ ಬಿದ್ದುಬಿಟ್ಟನು.॥35-36॥

ಮೂಲಮ್ - 37

ತದವಸ್ಥಂ ಸಮೀಪಸ್ಥೋ ಲಕ್ಷ್ಮಣಂ ಪ್ರೇಕ್ಷ್ಯ ರಾಘವಃ ।
ಭ್ರಾತೃಸ್ನೇಹಾನ್ಮಹಾತೇಜಾ ವಿಷಣ್ಣಹೃದಯೋಽಭವತ್ ॥

ಅನುವಾದ

ಮಹಾತೇಜಸ್ವೀ ರಘುನಾಥನು ಬಳಿಯಲ್ಲೇ ನಿಂತಿದ್ದು, ಲಕ್ಷ್ಮಣನನ್ನು ಆ ಸ್ಥಿತಿಯಲ್ಲಿ ನೋಡಿ ಭ್ರಾತೃಸ್ನೇಹದ ಕಾರಣ ಮನಸ್ಸಿನಲ್ಲೇ ವಿಷಾದದಲ್ಲಿ ಮುಳುಗಿದನು.॥37॥

ಮೂಲಮ್ - 38

ಸ ಮುಹೂರ್ತಮಿವಧ್ಯಾತ್ವಾ ಭಾಷ್ಪ ಪರ್ಯಾಕುಲೇಕ್ಷಣಃ ।
ಬಭೂವ ಸಂರಬ್ಧತರೋ ಯುಗಾಂತ ಇವ ಪಾವಕಃ ॥

ಅನುವಾದ

ಎರಡುಗಳಿಗೆ ಚಿಂತೆಯಲ್ಲಿ ಮುಳುಗಿ, ಕಣ್ಣುಗಳಲ್ಲಿ ನೀರು ತುಂಬಿ ಪ್ರಳಯಕಾಲದಲ್ಲಿ ಪ್ರಜ್ವಲಿತವಾದ ಅಗ್ನಿಯಂತೆ ಅತ್ಯಂತ ರೋಷದಿಂದ ಉರಿದೆದ್ದನು.॥38॥

ಮೂಲಮ್ - 39

ನ ವಿಷಾದಸ್ಯ ಕಾಲೋಽಯಮಿತಿ ಸಂಚಿಂತ್ಯ ರಾಘವಃ ।
ಚಕ್ರೇ ಸುತುಮುಲಂ ಯುದ್ಧಂ ರಾವಣಸ್ಯ ವಧೇ ಧೃತಃ ।
ಸರ್ವಯತ್ನೇನ ಮಹತಾ ಲಕ್ಷ್ಮಣಂ ಪರಿವೀಕ್ಷ್ಯಚ ॥

ಅನುವಾದ

ಈಗ ವಿಷಾದದ ಸಮಯವಲ್ಲ’ ಹೀಗೆ ಯೋಚಿಸಿ ಶ್ರೀರಘುನಾಥನು ರಾವಣನನ್ನು ವಧಿಸುವ ವಿಚಾರಮಾಡಿ ಮಹಾ ಪ್ರಯತ್ನದಿಂದ ಎಲ್ಲ ಶಕ್ತಿತೊಡಗಿಸಿ, ಲಕ್ಷ್ಮಣನ ಕಡೆಗೆ ನೋಡಿ ಅತ್ಯಂತ ಭಯಂಕರ ಯುದ್ಧಕ್ಕೆ ತೊಡಗಿದನು.॥39॥

ಮೂಲಮ್ - 40

ಸ ದದರ್ಶ ತತೋ ರಾಮಃ ಶಕ್ತ್ಯಾ ಭಿನ್ನಂ ಮಹಾಹವೇ ।
ಲಕ್ಷ್ಮಣಂ ರುಧಿರಾದಿಗ್ಧಂ ಸಪನ್ನಗಮಿವಾಚಲಮ್ ॥

ಅನುವಾದ

ಅನಂತರ ಶ್ರೀರಾಮನು ಆ ಮಹಾಸಮರದಲ್ಲಿ ಶಕ್ತಿಯಿಂದ ವಿದೀರ್ಣವಾಗಿ ರಕ್ತಸಿಕ್ತನಾಗಿ ಸರ್ಪಯುಕ್ತ ಪರ್ವತದಂತೆ ಇದ್ದ ಲಕ್ಷ್ಮಣನನ್ನು ನೋಡಿದನು.॥40॥

ಮೂಲಮ್ - 41

ತಾಮಪಿ ಪ್ರಹಿತಾಂ ಶಕ್ತಿಂ ರಾವಣೇನ ಬಲೀಯಸಾ ।
ಯತ್ನತಸ್ತೇ ಹರಿಶ್ರೇಷ್ಠಾ ನ ಶೇಕುರವಮರ್ದಿತುಮ್ ॥

ಅನುವಾದ

ಅತ್ಯಂತ ಬಲವಂತ ರಾವಣನು ಪ್ರಯೋಗಸಿದ ಶಕ್ತಿಯನ್ನು ಲಕ್ಷ್ಮಣನ ಎದೆಯಿಂದ ಕೀಳಲು ಶ್ರೇಷ್ಠ ವಾನರರು ಬಹಳ ಪ್ರಯತ್ನ ಮಾಡಿದರೂ ಸಲರಾಗಲಿಲ್ಲ.॥41॥

ಮೂಲಮ್ - 42

ಅರ್ದಿತಾಶ್ಚೈವ ಬಾಣೌಘೈಸ್ತೇ ಪ್ರವೇಕೇಣ ರಕ್ಷಸಾಮ್ ।
ಸೌಮಿತ್ರೇಃ ಸಾ ವಿನಿರ್ಭಿದ್ಯ ಪ್ರವಿಷ್ಟಾ ಧರಣೀತಲಮ್ ॥

ಅನುವಾದ

ಏಕೆಂದರೆ ಆ ವಾನರರೂ ಕೂಡ ರಾಕ್ಷಸ ಶಿರೋಮಣಿ ರಾವಣನ ಬಾಣಗಳಿಂದ ತುಂಬಾ ಪೀಡಿತರಾಗಿದ್ದರು. ಆ ಶಕ್ತಿಯು ಸೌಮಿತ್ರಿಯ ಶರೀರವನ್ನು ಸೀಳಿ ಭೂಮಿಯಲ್ಲಿ ನೆಟ್ಟುಹೋಗಿತ್ತು.॥42॥

ಮೂಲಮ್ - 43

ತಾಂ ಕರಾಭ್ಯಾಂ ಪರಾಮೃಶ್ಯ ರಾಮಃ ಶಕ್ತಿಂ ಭಯಾವಹಾಮ್ ।
ಬಭಂಜ ಸಮರೇ ಕ್ರುದ್ಧೋ ಬಲವಾನ್ ವಿಚಕರ್ಷ ಚ ॥

ಅನುವಾದ

ಆಗ ಮಹಾಬಲಿ ರಘುನಾಥನು ಆ ಭಯಂಕರ ಶಕ್ತಿಯನ್ನು ಎರಡೂ ಕೈಗಳಿಂದ ಲಕ್ಷ್ಮಣನ ಶರೀರದಿಂದ ಕಿತ್ತುಹಾಕಿ, ಸಮರಾಂಗಣ ದಲ್ಲಿ ಕುಪಿತನಾಗಿ ಅದನ್ನು ಮುರಿದು ಹಾಕಿದನು.॥43॥

ಮೂಲಮ್ - 44

ತಸ್ಯ ನಿಷ್ಕರ್ಷತಃ ಶಕ್ತಿಂ ರಾವಣೇನ ಬಲೀಯಸಾ ।
ಶರಾಃ ಸರ್ವೇಷು ಗಾತ್ರೇಷು ಪಾತಿತಾ ಮರ್ಮಭೇದಿನಃ ॥

ಅನುವಾದ

ಶ್ರೀರಾಮನು ಲಕ್ಷ್ಮಣನ ಶರೀರದಿಂದ ಶಕ್ತಿಯನ್ನು ಕೀಳುತ್ತಿ ದ್ದಾಗ, ಮಹಾಬಲಿ ರಾವಣನು ಅವನ ಸರ್ವಾಂಗದಲ್ಲಿ ಮರ್ಮಭೇದಿ ಬಾಣಗಳ ಮಳೆ ಸುರಿಸುತ್ತಿದ್ದನು.॥44॥

ಮೂಲಮ್ - 45

ಅಚಿಂತಯಿತ್ವಾ ತಾನ್ಬಾಣಾನ್ ಸಮಾಶ್ಲಿಷ್ಯ ಚ ಲಕ್ಷ್ಮಣಮ್ ।
ಅಬ್ರವೀಚ್ಚ ಹನೂಮಂತಂ ಸುಗ್ರೀವಂ ಚ ಮಹಾಕಪಿಮ್ ॥

ಅನುವಾದ

ಆದರೆ ಆ ಬಾಣಗಳನ್ನು ಲೆಕ್ಕಿಸದೆ ಲಕ್ಷ್ಮಣನನ್ನು ಬಿಗಿದಪ್ಪಿ ಕೊಂಡು ಶ್ರೀರಾಮನು ಹನುಮಂತ ಮತ್ತು ಮಹಾಕಪಿ ಸುಗ್ರೀವನಲ್ಲಿ ಇಂತೆಂದನು.॥45॥

ಮೂಲಮ್ - 46

ಲಕ್ಷ್ಮಣಂ ಪರಿವಾರ್ಯೇವಂ ತಿಷ್ಠಧ್ವಂ ವಾನರೋತ್ತಮಾಃ ।
ಪರಾಕ್ರಮಸ್ಯ ಕಾಲೋಽಯಂ ಸಂಪ್ರಾಪ್ತೋ ಮೇ ಚಿರೇಪ್ಸಿತಃ ॥

ಅನುವಾದ

ಕಪಿಗಳಿರಾ! ನೀವು ಲಕ್ಷ್ಮಣನನ್ನು ಸುತ್ತುವರಿದು ನಿಂತುಕೊಳ್ಳಿ. ನನಗೆ ಬಹಳ ದಿನಗಳಿಂದ ಅಭೀಷ್ಟವಾದ ಪರಾಕ್ರಮ ತೋರುವ ಸಂದರ್ಭ ಬಂದೊದಗಿದೆ.॥46॥

ಮೂಲಮ್ - 47

ಪಾಪಾತ್ಮಾಯಂ ದಶಗ್ರೀವೋ ವಧ್ಯತಾಂ ಪಾಪನಿಶ್ಚಯಃ ।
ಕಾಂಕ್ಷಿತಂ ಚಾತಕಸ್ಯೇವ ಘರ್ಮಾಂತೇ ಮೇಘದರ್ಶನಮ್ ॥

ಅನುವಾದ

ಈ ಪಾಪಾತ್ಮಾ, ಪಾಪಪೂರ್ಣ ವಿಚಾರವುಳ್ಳ ದಶಮುಖ ರಾವಣನನ್ನು ಈಗ ಕೊಂದು ಹಾಕುವುದೇ ಉಚಿತವಾಗಿದೆ. ಗ್ರೀಷ್ಮ ಋತುವಿನ ಕೊನೆಗೆ ಚಾತಕವು ಮೇಘಗಳ ದರ್ಶನದ ಇಚ್ಛೆ ಇರಿಸುವಂತೆ ನಾನೂ ಕೂಡ ಇವನನ್ನು ವಧಿಸಲು ಬಹಳ ದಿನಗಳಿಂದ ಕಾಯುತ್ತಾ ಇದ್ದೆ.॥47॥

ಮೂಲಮ್ - 48

ಅಸ್ಮಿನ್ಮುಹೂರ್ತೇ ನಚಿರಾತ್ ಸತ್ಯಂ ಪ್ರತಿಶೃಣೋಮಿ ವಃ ।
ಅರಾವಣಮರಾಮಂ ವಾ ಜಗದ್ದ್ರಕ್ಷ್ಯಥ ವಾನರಾಃ ॥

ಅನುವಾದ

ವಾನರರೇ! ನಾನು ಈ ಮುಹೂರ್ತದಲ್ಲಿ ನಿಮ್ಮೆಲ್ಲರ ಮುಂದೆ ಸತ್ಯಪ್ರತಿಜ್ಞೆ ಮಾಡುತ್ತೇನೆ. ಸ್ವಲ್ಪ ಸಮಯದಲ್ಲೇ ಈ ಜಗತ್ತು ರಾವಣನಿಂದ ರಹಿತವಾದೀತು, ಇಲ್ಲವೇ ರಾಮನಿಂದ.॥48॥

ಮೂಲಮ್ - 49

ರಾಜ್ಯನಾಶಂ ವನೇ ವಾಸಂ ದಂಡ ಕೇ ಪರಿಧಾವನಮ್ ।
ವೈದೇಹ್ಯಾಶ್ಚ ಪರಾಮರ್ಶೋ ರಕ್ಷೋಭಿಶ್ಚ ಸಮಾಗಮಮ್ ॥

ಮೂಲಮ್ - 50

ಪ್ರಾಪ್ತಂ ದುಃಖಂ ಮಹಘೋರಂ ಕ್ಲೇಶಶ್ಚ ನಿರಯೋಪಮಃ ।
ಅದ್ಯ ಸರ್ವಮಹಂ ತ್ಯಕ್ಷ್ಯೇ ನಿಹತ್ವಾ ರಾವಣಂ ರಣೇ ॥

ಅನುವಾದ

ರಾಜ್ಯನಾಶ, ವನವಾಸ, ದಂಡಕಾರಣ್ಯದಲ್ಲಿನ ಓಡಾಟ, ರಾಕ್ಷಸನಿಂದ ವೈದೇಹಿ ಸೀತೆಯ ಅಪಹರಣ, ರಾಕ್ಷಸರೊಂದಿಗೆ ಸಂಗ್ರಾಮ, ಇವೆಲ್ಲವುಗಳಿಂದ ನನಗೆ ಮಹಾಘೋರ ದುಃಖ ಸಹಿಸಬೇಕಾಯಿತು; ನರಕ ಯಾತನೆಯನ್ನು ಅನುಭವಿಸಬೇಕಾಯಿತು. ರಣರಂಗದಲ್ಲಿ ರಾವಣನನ್ನು ವಧಿಸಿ ಇಂದು ನಾನು ಎಲ್ಲ ದುಃಖಗಳಿಂದ ಬಿಡುಗಡೆ ಹೊಂದುವೆನು.॥49-50॥

ಮೂಲಮ್ - 51

ಯದರ್ಥಂ ವಾನರಂ ಸೈನ್ಯಂ ಸಮಾನೀತಮಿದಂ ಮಯಾ ।
ಸುಗ್ರೀವಶ್ಚ ಕೃತೋ ರಾಜ್ಯೇ ನಿಹತ್ವಾ ವಾಲಿನಂ ರಣೇ ।
ಯದರ್ಥಂ ಸಾಗರಃ ಕ್ರಾಂತಃ ಸೇತುರ್ಬದ್ಧಶ್ಚ ಸಾಗರೇ ॥

ಮೂಲಮ್ - 52

ಸೋಽಯಮದ್ಯ ರಣೇ ಪಾಪಶ್ಚಕ್ಷುರ್ವಿಷಯಮಾಗತಃ ।
ಚಕ್ಷುರ್ವಿಷಯಮಾಗತ್ಯ ನಾಯಂ ಜೀವಿತುಮರ್ಹತಿ ॥

ಅನುವಾದ

ಯಾರಿಗಾಗಿ ನಾನು ಈ ವಾನರರ ವಿಶಾಲ ಸೈನ್ಯವನ್ನು ಜೊತೆಗೂಡಿಸಿ ತಂದಿರುವೆನೋ, ಯಾವ ಕಾರಣಕ್ಕಾಗಿ ನಾನು ವಾಲಿಯನ್ನು ವಧಿಸಿ ಸುಗ್ರೀವನಿಗೆ ಪಟ್ಟಕಟ್ಟಿದೆನೋ, ಯಾವ ಉದ್ದೇಶದಿಂದ ಸಮುದ್ರಕ್ಕೆ ಸೇತುವೆ ಕಟ್ಟಿ ದಾಟಿದೆನೋ, ಆ ಪಾಪಿ ರಾವಣನು ಇಂದು ಯುದ್ಧದಲ್ಲಿ ನನ್ನ ಕಣ್ಣೆದುರಿಗೆ ನಿಂತಿರುವನು. ನನ್ನ ಕಣ್ಣಿಗೆ ಬಿದ್ದು ಈಗ ಇವನು ಬದುಕಿರಲು ಯೋಗ್ಯನಲ್ಲ.॥51-52॥

ಮೂಲಮ್ - 53

ದೃಷ್ಟಿಂ ದೃಷ್ಟಿವಿಷಸ್ಯೇವ ಸರ್ಪಸ್ಯ ಮಮ ರಾವಣಃ ।
ಯಥಾ ವಾ ವೈನತೇಯಸ್ಯ ದೃಷ್ಟಿಂ ಪ್ರಾಪ್ತೋ ಭುಜಂಗಮಃ ॥

ಅನುವಾದ

ದೃಷ್ಟಿಮಾತ್ರದಿಂದಲೇ ಸಂಹಾರಕಾರೀ ವಿಷವನ್ನು ಪಸರಿಸುವ ಸರ್ಪದ ಕಣ್ಣುಮುಂದಿನಿಂದ ಯಾವನೇ ಮನುಷ್ಯನು ಬದುಕಿರಲಾರನೋ ಅಥವಾ ವಿನತಾನಂದ ಗರುಡನ ದೃಷ್ಟಿಗೆ ಬಿದ್ದ ಯಾವುದೇ ಮಹಾಸರ್ಪವು ಜೀವಿಸಿಲಾರದೋ, ಹಾಗೆಯೇ ಇಂದು ರಾವಣನು ನನ್ನ ಕಣ್ಣುಮುಂದೆ ಬಂದು ಬದುಕಿ ಕ್ಷೇಮವಾಗಿ ಹಿಂದಿರುಗಲಾರನು.॥53॥

ಮೂಲಮ್ - 54

ಸುಖಂ ಪಶ್ಯತ ದುರ್ಧರ್ಷಾ ಯುದ್ಧಂ ವಾನರಪುಂಗವಾಃ ।
ಆಸೀನಾಃ ಪರ್ವತಾಗ್ರೇಷು ಮಮೇದಂ ರಾವಣಸ್ಯ ಚ ॥

ಅನುವಾದ

ದುರ್ಧರ್ಷ ವಾನರಶ್ರೇಷ್ಠರೇ! ಈಗ ನೀವು ಪರ್ವತ ಶಿಖರಗಳ ಮೇಲೆ ಕುಳಿತು ನನ್ನ ಮತ್ತು ರಾವಣನ ಈ ಯುದ್ಧವನ್ನು ಸುಖವಾಗಿ ನೋಡುತ್ತಿರಿ.॥54॥

ಮೂಲಮ್ - 55

ಅದ್ಯ ಪಶ್ಯಂತು ರಾಮಸ್ಯ ರಾಮತ್ವಂ ಮಮ ಸಂಯುಗೇ ।
ತ್ರಯೋ ಲೋಕಾಃ ಸಗಂಧರ್ವಾಃ ಸ ದೇವಾಃ ಸರ್ಷಿಚಾರಣಾಃ ॥

ಅನುವಾದ

ಇಂದು ಸಂಗ್ರಾಮದಲ್ಲಿ ದೇವತೆಗಳು, ಗಂಧರ್ವರು, ಸಿದ್ಧರು, ಋಷಿ-ಚಾರಣರ ಸಹಿತ ಮೂರು ಲೋಕಗಳ ಪ್ರಾಣಿಗಳು ರಾಮನ ರಾಮತ್ವ ನೋಡಲಿ.॥55॥

ಮೂಲಮ್ - 56

ಅದ್ಯ ಕರ್ಮ ಕರಿಷ್ಯಾಮಿ ಯಲ್ಲೋಕಾಃ ಸ ಚರಾಚರಾಃ ।
ಸದೇವಾಃ ಕಥಯಿಷ್ಯಂತಿ ಯಾವದ್ಭೂಮಿರ್ಧರಿಷ್ಯತಿ ।
ಸಮಾಗಮ್ಯ ಸದಾ ಲೋಕೇ ಯಥಾ ಯುದ್ಧಂ ಪ್ರವರ್ತಿತಮ್ ॥

ಅನುವಾದ

ಈ ಪೃಥಿವಿಯು ಇರುವವರೆಗೆ ಜಗತ್ತಿನ ಚರಾಚರ ಜೀವರು ಮತ್ತು ದೇವತೆಗಳು ಸದಾಕಾಲ ಲೋಕದಲ್ಲಿ ಒಟ್ಟಿಗೆ ಸೇರಿ, ಹೇಗೆ ಯುದ್ಧವಾಯಿತು, ಎಂಬುದನ್ನು ಪರಸ್ಪರ ಚರ್ಚಿಸುವಂತಹ ಪರಾಕ್ರಮವನ್ನು ಇಂದು ನಾನು ಪ್ರಕಟಿಸುವೆನು.॥56॥

ಮೂಲಮ್ - 57

ಏವಮುಕ್ತ್ವಾ ಶಿತೈರ್ಬಾಣೈಸ್ತಪ್ತಕಾಂಚನಭೂಷಣೈಃ ।
ಅಜಘಾನ ರಣೇ ರಾಮೋ ದಶಗ್ರೀವಂ ಸಮಾಹಿತಃ ॥

ಅನುವಾದ

ಹೀಗೆ ಹೇಳಿ ಭಗವಾನ್ ಶ್ರೀರಾಮನು ಏಕಾಗ್ರಚಿತ್ತನಾಗಿ ತನ್ನ ಸ್ವರ್ಣಭೂಷಿತ ಹರಿತವಾದ ಬಾಣಗಳಿಂದ ರಣ ಭೂಮಿಯಲ್ಲಿ ದಶಾನನ ರಾವಣನನ್ನು ಗಾಯಗೊಳಿಸತೊಡಗಿದನು.॥57॥

ಮೂಲಮ್ - 58

ತಥಾ ಪ್ರದೀಪ್ತೈರ್ನಾರಾಚೈರ್ಮುಸಲೈಶ್ಚಾಪಿ ರಾವಣಃ ।
ಅಭ್ಯವರ್ಷತ್ತದಾ ರಾಮಂ ಧಾರಾಭಿರಿವ ತೋಯದಃ ॥

ಅನುವಾದ

ಮೇಘಗಳು ನೀರನ್ನು ಸುರಿಸುವಂತೆ ರಾವಣನೂ ಕೂಡ ಶ್ರೀರಾಮನ ಮೇಲೆ ಹೊಳೆಯುವ ನಾರಾಚಗಳಿಂದ ಮುಸಲವರ್ಷಾ ಮಾಡತೊಡಗಿದನು.॥58॥

ಮೂಲಮ್ - 59

ರಾಮರಾವಣಮುಕ್ತಾನಾಮನ್ಯೋನ್ಯಮಭಿನಿಘ್ನತಾಮ್ ।
ಶರಾಣಾಂ ಚ ಶರಾಣಾಂ ಚ ಬಭೂವ ತುಮುಲಃ ಸ್ವನಃ ॥

ಅನುವಾದ

ಒಬ್ಬರು ಮತ್ತೊಬ್ಬರನ್ನು ನೋಯಿಸುತ್ತಾ ರಾಮ-ರಾವಣರು ಬಿಟ್ಟಿರುವ ಶ್ರೇಷ್ಠ ಬಾಣಗಳು ಪರಸ್ಪರ ಡಿಕ್ಕಿಹೊಡೆದು ಭಾರೀ ಭಯಂಕರ ಶಬ್ದ ಪ್ರಕಟವಾಗುತ್ತಿತ್ತು.॥59॥

ಮೂಲಮ್ - 60

ತೇ ಭಿನ್ನಾಶ್ಚ ವಿಕೀರ್ಣಾಶ್ಚ ರಾಮರಾವಣಯೋಃ ಶರಾಃ ।
ಅಂತರಿಕ್ಷಾತ್ ಪ್ರದೀಪ್ತಾಗ್ರಾ ನಿಷೇತುರ್ಧರಣೀತಲೇ ॥

ಅನುವಾದ

ಶ್ರೀರಾಮ ಮತ್ತು ರಾವಣರ ಬಾಣಗಳು ಪರಸ್ಪರ ಭಿನ್ನಭಿನ್ನವಾಗಿ ಆಕಾಶದಿಂದ ನೆಲಕ್ಕೆ ಬೀಳುತ್ತಿದ್ದವು. ಆಗ ಅವುಗಳ ತುದಿಗಳು ಉರಿಯುವಂತೆ ಕಾಣುತ್ತಿತ್ತು.॥60॥

ಮೂಲಮ್ - 61

ತಯೋರ್ಜ್ಯಾತಲನಿರ್ಘೋಷೋ ರಾಮರಾವಣಯೋರ್ಮಹಾನ್ ।
ತ್ರಾಸನಃ ಸರ್ವಭೂತಾನಾಂ ಸಂಬಭೂವಾದ್ಭುತೋಪಮಃ ॥

ಅನುವಾದ

ರಾಮ ಮತ್ತು ರಾವಣರ ಧನುಸ್ಸಿಗೆ ನೇಣಿನಿಂದ ಪ್ರಕಟವಾದ ಮಹಾ ಟಂಕಾರ ಶಬ್ದವು ಸಮಸ್ತ ಪ್ರಾಣಿಗಳ ಮನಸ್ಸಿನಲ್ಲಿ ಭಯ ವನ್ನುಂಟು ಮಾಡುತ್ತಾ ಪರಮಾದ್ಭುತವಾಗಿ ಕಂಡುಬರುತ್ತಿತ್ತು.॥61॥

ಮೂಲಮ್ - 62

ಸ ಕೀರ್ಯಮಾಣಃ ಶರಜಾಲವೃಷ್ಟಿಭಿ-
ರ್ಮಹಾತ್ಮನಾ ದೀಪ್ತಧನುಷ್ಮತಾರ್ದಿತಃ ।
ಭಯಾತ್ಪ್ರದುದ್ರಾವ ಸಮೇತ್ಯ ರಾವಣೋ
ಯಥಾನಿಲೇನಾಭಿಹತೋ ಬಲಾಹಕಃ ॥

ಅನುವಾದ

ವಾಯುವಿನ ಹೊಡೆತದಿಂದ ಮೇಘಗಳು ಭಿನ್ನ ಭಿನ್ನ ವಾಗುವಂತೆ ದೀಪ್ತಿಮಂತ ಧನುಸ್ಸನ್ನು ಧರಿಸಿದ ಮಹಾತ್ಮಾ ಶ್ರೀರಾಮನ ಬಾಣ ಸಮೂಹಗಳ ವರ್ಷಾದಿಂದ ಆಹತನಾಗಿ, ಪೀಡಿತನಾದ ರಾವಣನು ಭಯದಿಂದಾಗಿ ಅಲ್ಲಿಂದ ಓಡಿಹೋದನು.॥62॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರನೆಯ ಸರ್ಗ ಪೂರ್ಣವಾಯಿತು.॥100॥