०९७ सुग्रीवेण महोदरवधः

वाचनम्
ಭಾಗಸೂಚನಾ

ಸುಗ್ರೀವನೊಂದಿಗೆ ಮಹೋದರನ ಯುದ್ಧ ಮತ್ತು ವಧೆ

ಮೂಲಮ್ - 1

ಹನ್ಯಮಾನೇ ಬಲೇ ತೂರ್ಣಮನ್ಯೋನ್ಯಂ ತೇ ಮಹಾಮೃಧೇ ।
ಸರಸೀವ ಮಹಾಘರ್ಮೇ ಸೂಪಕ್ಷೀಣೇ ಬಭೂವತುಃ ॥

ಅನುವಾದ

ಆ ಮಹಾಸಂಗ್ರಾಮದಲ್ಲಿ ಎರಡೂ ಕಡೆಯ ಸೈನ್ಯಗಳು ಪರಸ್ಪರ ಹೊಡೆದಾಟದಿಂದ ಪ್ರಚಂಡ ಗ್ರೀಷ್ಮ ಋತುವಿನಲ್ಲಿ ಒಣಗುತ್ತಿರುವ ಸರೋವರದಂತೆ ಕ್ಷೀಣವಾಗುತ್ತಾ ಹೋಯಿತು.॥1॥

ಮೂಲಮ್ - 2

ಸ್ವಬಲಸ್ಯ ತು ಘಾತೇನ ವಿರೂಪಾಕ್ಷ ವಧೇನ ಚ ।
ಬಭೂವ ದ್ವಿಗುಣಂ ಕ್ರುದ್ಧೋ ರಾವಣೋ ರಾಕ್ಷಸಾಧಿಪಃ ॥

ಅನುವಾದ

ತನ್ನ ಸೈನ್ಯದ ವಿನಾಶ ಮತ್ತು ವಿರೂಪಾಕ್ಷನ ವಧೆ ಯಿಂದ ರಾಕ್ಷಸಾಧಿಪ ರಾವಣನ ಕ್ರೋಧ ಇಮ್ಮಡಿಸಿತು.॥2॥

ಮೂಲಮ್ - 3

ಪ್ರಕ್ಷೀಣಂ ಸ್ವಬಲಂ ದೃಷ್ಟ್ವಾ ವಧ್ಯಮಾನಂ ವಲೀಮುಖೈಃ ।
ಬಭೂವಾಸ್ಯ ವ್ಯಥಾ ಯುದ್ಧೇ ದೃಷ್ಟ್ವಾ ದೈವವಿಪರ್ಯಯಮ್ ॥

ಅನುವಾದ

ವಾನರರಿಂದ ತನ್ನ ಸೈನ್ಯವು ಕ್ಷೀಣಿಸುತ್ತಿರುವುದನ್ನು ನೋಡಿ ದೈವದ ವೈಪರೀತ್ಯದಿಂದ ಯುದ್ಧದಲ್ಲಿ ತುಂಬಾ ವ್ಯಥೆಯಾಯಿತು.॥3॥

ಮೂಲಮ್ - 4

ಉವಾಚ ಚ ಸಮೀಪಸ್ಥಂ ಮಹೋದರಮನಂತರಮ್ ।
ಅಸ್ಮಿನ್ಕಾಲೇ ಮಹಾಬಾಹೋಜಯಾಶಾ ತ್ವಯಿ ಮೇ ಸ್ಥಿತಾ ॥

ಅನುವಾದ

ಬಳಿಯಲ್ಲೇ ನಿಂತಿದ್ದ ಮಹೋದರನಲ್ಲಿ ಹೇಳಿದನು-ಮಹಾಬಾಹೋ! ಈಗ ನನ್ನ ವಿಜಯವು ನಿನ್ನ ಮೇಲೆಯೇ ಅವಲಂಬಿಸಿದೆ.॥4॥

ಮೂಲಮ್ - 5

ಜಹಿ ಶತ್ರುಚಮೂಂ ವೀರ ದರ್ಶಯಾದ್ಯಪರಾಕ್ರಮಮ್
ಭರ್ತೃಪಿಂಡಸ್ಯ ಕಾಲೋಽಯಂ ನಿರ್ದೇಷ್ಟುಂ ಸಾಧು ಯುಧ್ಯತಾಮ್ ॥

ಅನುವಾದ

ವೀರನೇ! ಇಂದು ನಿನ್ನ ಪರಾಕ್ರಮ ತೋರಿ ಶತ್ರುಸೈನ್ಯವನ್ನು ವಧಿಸು. ಒಡೆಯನ ಅನ್ನದ ಋಣ ತೀರಿಸುವ ಇದೇ ಸುಸಮಯವಾಗಿದೆ. ಆದ್ದರಿಂದ ಚೆನ್ನಾಗಿ ಯುದ್ಧ ಮಾಡು.॥5॥

ಮೂಲಮ್ - 6

ಏವಮುಕ್ತಸ್ತಥೇತ್ಯುಕ್ತ್ವಾ ರಾಕ್ಷಸೇಂದ್ರೋ ಮಹೋದರಃ ।
ಪ್ರವಿವೇಶಾರಿಸೇನಾಂ ಸ ಪತಂಗ ಇವ ಪಾವಕಮ್ ॥

ಅನುವಾದ

ರಾವಣನು ಹೀಗೆ ಹೇಳಿದಾಗ ರಾಕ್ಷಸೇಂದ್ರ ಮಹೋದನು ‘ಹಾಗೆಯೇ ಆಗಲಿ’ ಎಂದು ಆಜ್ಞೆಯನ್ನು ಶಿರಸಾವಹಿಸಿ, ಪಂತಗವು ಬೆಂಕಿಯಲ್ಲಿ ಹಾರಿಬೀಳುವಂತೆ ಅವನು ಶತ್ರು ಸೈನ್ಯವನ್ನು ಪ್ರವೇಶಿಸಿದನು.॥6॥

ಮೂಲಮ್ - 7

ತತಃ ಸ ಕದನಂ ಚಕ್ರೇ ವಾನರಾಣಾಂ ಮಹಾಬಲಃ ।
ಭರ್ತೃವಾಕ್ಯೇನ ತೇಜಸ್ವೀ ಸ್ವೇನ ವೀರ್ಯೇಣ ಚೋದಿತಃ ॥

ಅನುವಾದ

ವಾನರ ಸೈನ್ಯವನ್ನು ಪ್ರವೇಶಿಸಿ ತೇಜಸ್ವೀ, ಮಹಾಬಲಿ ಮಹೋದರನು ಒಡೆಯನ ಅಪ್ಪಣೆಯಂತೆ ತನ್ನ ಪರಾಕ್ರಮದಿಂದ ವಾನರರನ್ನು ಸಂಹರಿಸತೊಡಗಿದನು.॥7॥

ಮೂಲಮ್ - 8

ವಾನರಾಶ್ಚ ಮಹಾಸತ್ತ್ವಾಃ ಪ್ರಗೃಹ್ಯ ವಿಪುಲಾಃ ಶಿಲಾಃ ।
ಪ್ರವಿಶ್ಯಾರಿಬಲಂ ಭೀಮಂ ಜಘ್ನುಸ್ತೇ ಸರ್ವರಾಕ್ಷಸಾನ್ ॥

ಅನುವಾದ

ಶಕ್ತಿಶಾಲಿಯಾದ ವಾನರರೂ ಕೂಡ ದೊಡ್ಡ ದೊಡ್ಡ ಶಿಲೆಗಳನ್ನು ಎತ್ತಿಕೊಂಡು ಶತ್ರುವಿನ ಭಯಂಕರ ಸೈನ್ಯದಲ್ಲಿ ನುಗ್ಗಿ ಸಮಸ್ತ ರಾಕ್ಷಸರನ್ನು ಸಂಹರಿಸತೊಡಗಿದನು.॥8॥

ಮೂಲಮ್ - 9

ಮಹೋದರಃ ಸುಸಂಕ್ರುದ್ಧಃ ಶರೈಃ ಕಾಂಚನಭೂಷಣೈಃ ।
ಚಚ್ಛೇದ ಪಾಣಿಪಾದೋರು ವಾನರಾಣಾಂ ಮಹಾಹವೇ ॥

ಅನುವಾದ

ಮಹೋದರನು ಅತ್ಯಂತ ಕುಪಿತನಾಗಿ ತನ್ನ ಸ್ವರ್ಣಭೂಷಿತ ಬಾಣಗಳಿಂದ ಯುದ್ಧದಲ್ಲಿ ವಾನರರ ಕೈ-ಕಾಲು ತೊಡೆಗಳನ್ನು ತುಂಡರಿಸಿ ಹಾಕಿದನು.॥9॥

ಮೂಲಮ್ - 10

ತತಸ್ತೇ ವಾನರಾಃ ಸರ್ವೇ ರಾಕ್ಷಸೈರರ್ದಿತಾ ಭೃಶಮ್ ।
ದಿಶೋ ದಶ ದ್ರುತಾಃ ಕೇಚಿತ್ಕೇಚಿತ್ಸುಗ್ರೀವಮಾಶ್ರಿತಾಃ ॥

ಅನುವಾದ

ರಾಕ್ಷಸನಿಂದ ಪೀಡಿತರಾದ ವಾನರರೆಲ್ಲ ದಿಕ್ಕೆಟ್ಟು ಓಡತೊಡಗಿದರು. ಕೆಲವರು ಸುಗ್ರೀವನಲ್ಲಿ ಶರಣಾದರು.॥10॥

ಮೂಲಮ್ - 11

ಪ್ರಭಗ್ನಂ ಸಮರೇ ದೃಷ್ಟ್ವಾವಾನರಾಣಾಂ ಮಹಾಬಲಮ್ ।
ಅಭಿದುದ್ರಾವ ಸುಗ್ರೀವೋ ಮಹೋದರಮನಂತರಮ್ ॥

ಅನುವಾದ

ವಾನರರ ವಿಶಾಲ ಸೈನ್ಯವು ರಣರಂಗದಿಂದ ಓಡು ತ್ತಿರುವುದನ್ನು ನೋಡಿ ಸುಗ್ರೀವನು ಬಳಿಯಲ್ಲೇ ನಿಂತಿದ್ದ ಮಹೋದರನನ್ನು ಆಕ್ರಮಿಸಿದನು.॥11॥

ಮೂಲಮ್ - 12

ಪ್ರಗೃಹ್ಯ ವಿಪುಲಾಂ ಘೋರಾಂ ಮಹೀಧರ ಸಮಾಂ ಶಿಲಾಮ್ ।
ಚಿಕ್ಷೇಪ ಚ ಮಹಾತೇಜಾಸ್ತದ್ವಧಾಯ ಹರೀಶ್ವರಃ ॥

ಅನುವಾದ

ತೇಜಸ್ವೀಯಾದ ವಾನರರಾಜನು ಪರ್ವತದಂತಹ ವಿಶಾಲವಾದ ಭಯಂಕರ ಶಿಲೆಯನ್ನೆತ್ತಿಕೊಂಡು ಮಹೋದರನ ವಧೆಗಾಗಿ ಅವನ ಮೇಲೆ ಎಸೆದನು.॥12॥

ಮೂಲಮ್ - 13

ತಾಮಾಪತಂತೀಂ ಸಹಸಾ ಶಿಲಾಂ ದೃಷ್ಟ್ವಾಮಹೋದರಃ ।
ಅಸಂಭ್ರಾಂತಸ್ತತೋ ಬಾಣೈರ್ನಿರ್ಬಿಭೇದ ದುರಾಸದಾಮ್ ॥

ಅನುವಾದ

ಆ ದುರ್ಜಯ ಶಿಲೆಯು ನನ್ನ ಮೇಲೆ ಬೀಳುತ್ತಿರುವುದನ್ನು ನೋಡಿಯೂ ಮಹೋದರನು ಮನಸ್ಸಿನಲ್ಲಿ ಗಾಬರಿಗೊಳ್ಳದೆ ಬಾಣಗಳಿಂದ ಅದನ್ನು ಪುಡಿಪುಡಿಯಾಗಿಸಿದನು.॥13॥

ಮೂಲಮ್ - 14

ರಕ್ಷಸಾ ತೇನ ಬಾಣೌಘೈರ್ನಿಕೃತ್ತಾ ಸಾ ಸಹಸ್ರಧಾ ।
ನಿಪಪಾತ ತದಾ ಭೂಮೌ ಗೃಧ್ರಚಕ್ರಮಿವಾಕುಲಮ್ ॥

ಅನುವಾದ

ರಾಕ್ಷಸನ ಬಾಣಸಮೂಹದಿಂದ ಆ ಶಿಲೆಯು ಪುಡಿಯಾಗಿ ಸಾವಿರ ಚೂರುಗಳಾಗಿ ವ್ಯಾಕುಲಗೊಂಡು ಬಿದ್ದಿರುವ ರಣಹದ್ದು ಗಳಂತೆ ನೆಲಕ್ಕೆ ಬಿದ್ದು ಹೋಯಿತು.॥14॥

ಮೂಲಮ್ - 15

ತಾಂ ತು ಭಿನ್ನಾಂ ಶಿಲಾಂ ದೃಷ್ಟ್ವಾ ಸುಗ್ರೀವಃ ಕ್ರೋಧಮೂರ್ಛಿತಃ ।
ಸಾಲಮುತ್ಪಾಟ್ಯ ಚಿಕ್ಷೇಪ ತಂ ಸ ಚಿಚ್ಛೇದ ನೈಕಧಾ ॥

ಅನುವಾದ

ಆ ಶಿಲೆಯು ಚೂರು ಚೂರಾದುದನ್ನು ನೋಡಿ ಸುಗ್ರೀವನ ಕ್ರೋಧ ಇಮ್ಮಡಿಯಾಗಿ, ಅವನು ಒಂದು ತಾಲವೃಕ್ಷವನ್ನು ಕಿತ್ತು ರಾಕ್ಷಸನ ಮೇಲೆ ಪ್ರಹರಿಸಿದನು. ಆದರೆ ರಾಕ್ಷಸನು ಅದನ್ನು ತುಂಡರಿಸಿದನು.॥15॥

ಮೂಲಮ್ - 16

ಶರೈಶ್ಚ ವಿದದಾರೈನಂ ಶೂರಃ ಪರಬಲಾರ್ದನಃ ।
ಸ ದದರ್ಶ ತತಃ ಕ್ರುದ್ಧಃ ಪರಿಘಂ ಪತಿತಂ ಭುವಿ ॥

ಅನುವಾದ

ಶತ್ರುಸೈನ್ಯವನ್ನು ದಮನಗೊಳಿಸುವ ಅವನು ಬಾಣಗಳಿಂದ ಸುಗ್ರೀವನನ್ನು ಗಾಯಗೊಳಿಸಿದನು. ಆಗ ಅಲ್ಲೇ ನೆಲದ ಮೇಲೆ ಬಿದ್ದಿರುವ ಒಂದು ಪರಿಘವ್ನ ಸುಗ್ರೀವನು ನೋಡಿದನು.॥16॥

ಮೂಲಮ್ - 17

ಆವಿಧ್ಯತು ಸ ತಂ ದೀಪ್ತಂ ಪರಿಘಂ ತಸ್ಯ ದರ್ಶಯನ್ ।
ಪರಿಘೇಣೋಗ್ರ ವೇಗೇನ ಜಘಾನಾಸ್ಯ ಹಯೋತ್ತಮಾನ್ ॥

ಅನುವಾದ

ಆ ತೇಜಸ್ವೀ ಪರಿಘವನ್ನು ಎತ್ತಿಕೊಂಡು ತಿರುಗಿಸುತ್ತಾ ಭಯಾನಕ ವೇಗಶಾಲಿ ಪರಿಘದಿಂದ ಆ ರಾಕ್ಷಸನ ಉತ್ತಮ ಕುದುರೆಗಳನ್ನು ಕೊಂದುಹಾಕಿದನು.॥17॥

ಮೂಲಮ್ - 18

ತಸ್ಮಾದ್ಧತಹಯಾದ್ವೀರಃ ಸೋಽವಪ್ಲುತ್ಯ ಮಹಾರಥಾತ್ ।
ಗದಾಂ ಜಗ್ರಾಹ ಸಂಕ್ರುದ್ಧೋ ರಾಕ್ಷಸೋಽಥ ಮಹೋದರಃ ॥

ಅನುವಾದ

ಕುದುರೆಗಳು ಮಡಿದಾಗ ವೀರ ಮಹೋದರನು ರಥದಿಂದ ನೆಲಕ್ಕೆ ಹಾರಿ, ಅತ್ಯಂತ ರೋಷಗೊಂಡು ಗದೆಯನ್ನು ಎತ್ತಿಕೊಂಡನು.॥18॥

ಮೂಲಮ್ - 19

ಗದಾಪರಿಘಹಸ್ತೌ ತೌ ಯುಧಿ ವೀರೌ ಸಮೀಯತುಃ ।
ನರ್ದಂತೌ ಗೋವೃಷಪ್ರಖ್ಯೌ ಘನಾವಿವ ಸವಿದ್ಯುತೌ ॥

ಅನುವಾದ

ಒಬ್ಬನ ಕೈಯಲ್ಲಿ ಗದೆ ಇದ್ದರೆ ಮತ್ತೊಬ್ಬನ ಕೈಯಲ್ಲಿ ಪರಿಘವಿತ್ತು. ಯುದ್ಧದಲ್ಲಿ ಆ ವೀರರಿಬ್ಬರೂ ಗೂಳಿಗಳಂತೆ ಸಿಡಿಲಿನಿಂದೊಡಗೂಡಿದ ಮೇಘಗಳಂತೆ ಪರಸ್ಪರ ಹೋರಾಡಿದರು.॥19॥

ಮೂಲಮ್ - 20

ತತಃ ಕ್ರುದ್ಧೋ ಗದಾಂ ತಸ್ಮೈ ಚಿಕ್ಷೇಪ ರಜನೀಚರಃ ।
ಜ್ವಲಂತೀಂ ಭಾಸ್ಕರಾಭಾಸಾಂ ಸುಗ್ರೀವಾಯ ಮಹೋದರಃ ॥

ಅನುವಾದ

ಅನಂತರ ಕುಪಿತನಾದ ರಾಕ್ಷಸ ಮಹೋದರನು ಸುಗ್ರೀವನ ಮೇಲೆ ಸೂರ್ಯನಂತೆ ಹೊಳೆಯುವ ಗದೆಯನ್ನು ಪ್ರಯೋಗಿಸಿದನು.॥20॥

ಮೂಲಮ್ - 21

ಗದಾಂ ತಾಂ ಸುಮಹಾಘೋರಾಮಾಪತಂತೀಂ ಮಹಾಬಲಃ ।
ಸುಗ್ರೀವೋ ರೋಷತಾಮ್ರಾಕ್ಷಃ ಸಮುದ್ಯಮ್ಯ ಮಹಾಹವೇ ॥

ಮೂಲಮ್ - 22

ಆಜಘಾನ ಗದಾಂ ತಸ್ಯ ಪರಿಘೇಣ ಹರೀಶ್ವರಃ ।
ಪಪಾತ ತರಸಾ ಭಿನ್ನಃ ಪರಿಘಸ್ತಸ್ಯ ಭೂತಲೇ ॥

ಅನುವಾದ

ಆ ಮಹಾ ಸಮರದಲ್ಲಿ ಭಯಂಕರವಾದ ಗದೆಯು ತನ್ನತ್ತ ಬರುತ್ತಿರುವುದನ್ನು ನೋಡಿ ಮಹಾಬಲಿ ಸುಗ್ರೀವನ ಕಣ್ಣುಗಳು ರೋಷದಿಂದ ಕೆಂಪಾಗಿ, ಪರಿಘವನ್ನೆತ್ತಿ ರಾಕ್ಷಸನ ಗದೆಯನ್ನು ಹೊಡೆಯುತ್ತಲೇ ಅದು ಪುಡಿಯಾಗಿ ಬಿತ್ತು. ಆದರೆ ಅದರ ವೇಗದಿಂದ ಸುಗ್ರೀವನ ಪರಿಘವೂ ಮುರಿದು ನೆಲಕ್ಕೆ ಬಿದ್ದು ಹೋಯಿತು.॥21-22॥

ಮೂಲಮ್ - 23

ತತೋ ಜಗ್ರಾಹ ತೇಜಸ್ವೀ ಸುಗ್ರೀವೋ ವಸುಧಾತಲಾತ್ ।
ಆಯಸಂ ಮುಸಲಂ ಘೋರಂ ಸರ್ವತೋ ಹೇಮಭೂಷಿತಮ್ ॥

ಅನುವಾದ

ಆಗ ತೇಜಸ್ವೀ ಸುಗ್ರೀವನು ನೆಲದಲ್ಲಿ ಬಿದ್ದಿದ್ದ ಸ್ವರ್ಣಭೂಷಿತವಾದ ಭಯಂಕರ ಕಬ್ಬಿಣದ ಮುಸಲವೊಂದನ್ನು ಎತ್ತಿಕೊಂಡನು.॥23॥

ಮೂಲಮ್ - 24

ಸ ತಮುದ್ಯಮ್ಯ ಚಿಕ್ಷೇಪ ಸೋಽಪ್ಯಸ್ಯ ಪ್ರಕ್ಷಿಪದ್ಗದಾಮ್ ।
ಭಿನ್ನಾವನ್ಯೋನ್ಯಮಾಸಾದ್ಯ ಪೇತತುಸ್ತೌ ಮಹೀತಲೇ ॥

ಅನುವಾದ

ಅದನ್ನು ಎತ್ತಿ ರಾಕ್ಷಸನಿಗೆ ಹೊಡೆಯಲು, ರಾಕ್ಷಸನು ಅದರ ಮೇಲೆ ಗದೆಯನ್ನು ಪ್ರಯೋಗಿಸಿದನು. ಗದೆ ಮತ್ತು ಮುಸಲವೆರಡೂ ಪರಸ್ಪರ ಡಿಕ್ಕಿ ಹೊಡೆದು ನೆಲಕ್ಕೆ ಬಿದ್ದುಹೋದುವು.॥24॥

ಮೂಲಮ್ - 25

ತತೋ ಭಿನ್ನಪ್ರಹರಣೌ ಮುಷ್ಟಿಭ್ಯಾಂ ತೌ ಸಮೀಯತುಃ ।
ತೇಜೋಬಲಸಮಾವಿಷ್ಟೌ ದೀಪ್ತಾವಿವ ಹುತಾಶನೌ ॥

ಅನುವಾದ

ತೇಜ, ವೀರ್ಯ ಬಲ ಸಂಪನ್ನರಾದ ಅವರಿಬ್ಬರೂ ಉರಿಯುವ ಬೆಂಕಿಯಂತೆ ಕಾಣುತ್ತಿದ್ದರು. ತಮ್ಮ ತಮ್ಮ ಆಯುಧಗಳು ಮುರಿದು ಹೋದಾಗ ಮುಷ್ಟಿಯುದ್ಧ ಪ್ರಾರಂಭಿಸಿದರು.॥25॥

ಮೂಲಮ್ - 26

ಜಘ್ನತುಸ್ತೌ ತದಾನ್ಯೋನ್ಯಂ ನೇದತುಶ್ಚ ಪುನಃ ಪುನಃ ।
ತಲೈ ಶ್ಚಾನ್ಯೋನ್ಯಮಾಸಾದ್ಯ ಪೇತತುಶ್ಚ ಮಹೀತಲೇ ॥

ಅನುವಾದ

ಇಬ್ಬರೂ ಗರ್ಜಿಸುತ್ತಾ ಪರಸ್ಪರ ಮುಷ್ಟಿಗಳಿಂದ ಹೊಡೆಯುತ್ತಿದ್ದರು. ಮತ್ತೆ ಅಂಗೈ ಏಟುಗಳಿಂದ ಇಬ್ಬರೂ ಹೊಡೆದಾಡಿ ನೆಲಕ್ಕೆ ಬಿದ್ದುಹೋದರು.॥26॥

ಮೂಲಮ್ - 27

ಉತ್ಪೇತತುಸ್ತದಾ ತೂರ್ಣಂ ಜಘ್ನತುಶ್ಚ ಪರಸ್ಪರಮ್ ।
ಭುಜೈಶ್ಚಿಕ್ಷಿಪತುರ್ವೀರಾವನ್ಯೋನ್ಯಮಪರಾಜಿತೌ ॥

ಅನುವಾದ

ಮತ್ತೆ ತತ್ಕಾಲ ನೆಗೆದು ಒಬ್ಬರು ಮತ್ತೊಬ್ಬರನ್ನು ಪ್ರಹರಿಸ ತೊಡಗಿದರು. ಇಬ್ಬರೂ ಸೋಲದೆ ಭುಜಗಳಿಂದ ಹೊಡೆದಾಡುತ್ತಿದ್ದರು.॥27॥

ಮೂಲಮ್ - 28

ಜಗ್ಮತುಸ್ತೌ ಶ್ರಮಂ ವೀರೌ ಬಾಹುಯುದ್ಧೇ ಪರಂತಪೌ ।
ಆಜಹಾರ ತದಾ ಖಡ್ಗಮದೂರ ಪರಿವರ್ತಿನಮ್ ॥

ಮೂಲಮ್ - 29

ರಾಕ್ಷಸಶ್ಚರ್ಮಣಾ ಸಾರ್ಧಂ ಮಹಾವೇಗೋ ಮಹೋದರಃ ।
ತಥೈವ ಚ ಮಹಾಖಡ್ಗಂ ಚರ್ಮಣಾ ಪತಿತಂ ಸಹ ।
ಜಗ್ರಾಹ ವಾನರಶ್ರೇಷ್ಠಃ ಸುಗ್ರೀವೋ ವೇಗವತ್ತರಃ ॥

ಅನುವಾದ

ಪರಂತಪರಾದ ಇಬ್ಬರೂ ಬಾಹು ಯುದ್ಧ ಮಾಡುತ್ತಾ ಮಾಡುತ್ತಾ ಬಳಲಿಹೋದರು. ಆಗ ಮಹಾವೇಗಶಾಲಿ ರಾಕ್ಷಸ ಮಹೋದರನು ಸ್ವಲ್ಪದೂರದಲ್ಲಿ ಬಿದ್ದಿದ್ದ ಗುರಾಣಿಸಹಿತ ಕತ್ತಿಯನ್ನು ಎತ್ತಿಕೊಂಡನು. ಹಾಗೆಯೇ ಅತ್ಯಂತ ವೇಗಶಾಲಿ ಕಪಿಶ್ರೇಷ್ಠ ಸುಗ್ರೀವನೂ ಕೂಡ ಅಲ್ಲಿ ಬಿದ್ದಿರುವ ದೊಡ್ಡದಾದ ಖಡ್ಗವನ್ನು ಗುರಾಣಿ ಸಹಿತ ಎತ್ತಿಕೊಂಡದನು.॥28-29॥

ಮೂಲಮ್ - 30

ತತೋ ರೋಷಪರೀತಾಂಗೌ ನರ್ದಂತಾವಭ್ಯಧಾವತಾಮ್ ।
ಉದ್ಯತಾಸೀ ರಣೇ ಹೃಷ್ಟೌ ಯುಧಿ ಶಸ್ತ್ರವಿಶಾರದೌ ॥

ಅನುವಾದ

ಶಸ್ತ್ರ ಪ್ರಯೋಗದಲ್ಲಿ ಚತುರರಾದ ಇಬ್ಬರ ಶರೀರಗಳು ರೋಷದಿಂದ ಪ್ರಭಾವಿತರಾಗಿದ್ದವು. ರಣರಂಗದಲ್ಲಿ ಹರ್ಷೋತ್ಸಾಹದಿಂದ ಕೂಡಿ ಗರ್ಜಿಸುತ್ತಾ ಖಡ್ಗಗಳನ್ನೆತ್ತಿಕೊಂಡು ಒಬ್ಬರು ಮತ್ತೊಬ್ಬರನ್ನು ಆಕ್ರಮಿಸಿದರು.॥30॥

ಮೂಲಮ್ - 31

ದಕ್ಷಿಣಂ ಮಂಡಲಂ ಚೋಭೌ ಸುತೂರ್ಣಂ ಸಂಪರೀಯತುಃ ।
ಅನ್ಯೋನ್ಯಮಭಿಸಂಕ್ರುದ್ಧೌ ಜಯೇ ಪ್ರಣಿಹಿತಾವುಭೌ ॥

ಅನುವಾದ

ತೇಜಸ್ವಿಗಳಾದ ಅವರಿಬ್ಬರೂ ಕ್ರೋಧಗೊಂಡು ಎಡ-ಬಲ ವರಸೆಗಳಿಂದ ವಿಜಯದ ಇಚ್ಛೆಯಿಂದ ಕಾದಾಡುತ್ತಿದ್ದರು.॥31॥

ಮೂಲಮ್ - 32

ಸ ತು ಶೂರೋ ಮಹಾವೇಗೋ ವೀರ್ಯಶ್ಲಾಘೀ ಮಹೋದರಃ ।
ಮಹಾವರ್ಮಣಿ ತಂ ಖಡ್ಗಂ ಪಾತಯಾಮಾಸ ದುರ್ಮತಿಃ ॥

ಅನುವಾದ

ಬಲಗರ್ವಿತನಾದ ಮಹಾವೇಗಶಾಲಿ ಮತ್ತು ಶೌರ್ಯಸಂಪನ್ನ ಮಹೋದರನು ಖಡ್ಗದಿಂದ ಸುಗ್ರೀವನ ವಿಶಾಲ ಕವಚವನ್ನು ಪ್ರಹರಿಸಿದನು.॥32॥

ಮೂಲಮ್ - 33

ಲಗ್ನ ಮುತ್ಕರ್ಷತಃ ಖಡ್ಗಂ ಖಡ್ಗೇನ ಕಪಿಕುಂಜರಃ ।
ಜಹಾರ ಸಶಿರಸ್ತ್ರಾಣಂ ಕುಂಡಲೋಪಗತಂ ಶಿರಃ ॥

ಅನುವಾದ

ಸುಗ್ರೀವನ ಕವಚದಲ್ಲಿ ತಗಲಿದ ಖಡ್ಗವನ್ನು ರಾಕ್ಷಸನು ಹಿಂದಕ್ಕೆ ಸೆಳೆದಾಗ ಕಪಿಕುಂಜರ ಸುಗ್ರೀವನು ಮಹೋದರನ ಮಸ್ತಕವನ್ನು ಕುಂಡಲ, ಶಿರಸ್ತ್ರಾಣ ಸಹಿತ ತನ್ನ ಖಡ್ಗದಿಂದ ತುಂಡರಿಸಿದನು.॥33॥

ಮೂಲಮ್ - 34

ನಿಕೃತ್ತಶಿರಸಸ್ತಸ್ಯ ಪತಿತಸ್ಯ ಮಹೀತಲೇ ।
ತದ್ಬಲಂ ರಾಕ್ಷಸೇಂದ್ರಸ್ಯ ದೃಷ್ಟ್ವಾತತ್ರ ನ ದೃಶ್ಯತೇ ॥

ಅನುವಾದ

ಮಸ್ತಕ ತುಂಡಾದಾಗ ರಾಕ್ಷಸ ಮಹೋದರನು ನೆಲಕ್ಕುರುಳಿದನು. ಇದನ್ನು ನೋಡಿದ ಅವನ ಸೈನ್ಯ ಪಲಾಯನ ಮಾಡಿತು.॥34॥

ಮೂಲಮ್ - 35

ಹತ್ವಾ ತಂ ವಾನರೈಃ ಸಾರ್ಧಂ ನನಾದ ಮುದಿತೋ ಹರಿಃ ।
ಚುಕ್ರೋಧ ಚ ದಶಗ್ರೀವೋ ಬಭೌಹೃಷ್ಟಶ್ಚ ರಾಘವಃ ॥

ಅನುವಾದ

ಮಹೋದರನನ್ನು ಸಂಹರಿಸಿ ವಾನರರಾಜ ಸುಗ್ರೀವನ ಇತರ ವಾನರರೊಂದಿಗೆ ಗರ್ಜಿಸತೊಡಗಿದನು. ಆಗ ದಶಮುಖ ರಾವಣನಿಗೆ ಭಾರಿ ಸಿಟ್ಟುಬಂತು ಹಾಗೂ ಶ್ರೀರಾಮನು ಹರ್ಷಗೊಂಡನು.॥35॥

ಮೂಲಮ್ - 36

ವಿಷಣ್ಣವದನಾಃ ಸರ್ವೇ ರಾಕ್ಷಸಾ ದೀನಚೇತಸಃ ।
ವಿದ್ರವಂತಿ ತತಃ ಸರ್ವೇ ಭಯವಿತ್ರಸ್ತಚೇತಸಃ ॥

ಅನುವಾದ

ಆಗ ಸಮಸ್ತ ರಾಕ್ಷಸರ ಮನಸ್ಸು ದುಃಖಿತವಾಗಿ, ಎಲ್ಲರ ಮುಖಗಳಲ್ಲಿ ವಿಷಾದ ಆವರಿಸಿತು. ಅವರೆಲ್ಲರೂ ಭಯಭೀತರಾಗಿ ಅಲ್ಲಿಂದ ಓಡಿಹೋದರು.॥36॥

ಮೂಲಮ್ - 37

ಮಹೋದರಂ ತಂ ವಿನಿಪಾತ್ಯ ಭೂಮೌ
ಮಹಾಗಿರೇಃ ಕೀರ್ಣಮಿವೈಕದೇಶಮ್ ।
ಸೂರ್ಯಾತ್ಮಜಸ್ತತ್ರ ರರಾಜ ಲಕ್ಷ್ಮ್ಯಾ
ಸೂರ್ಯಃ ಸ್ವತೇಜೋಭಿರಿವಾಪ್ರಧೃಷ್ಯಃ ॥

ಅನುವಾದ

ಮಹೋದರನ ಶರೀರವು ಮಹಾಪರ್ವತದ ಕುಸಿದ ಶಿಖರದಂತೆ ಕಾಣುತ್ತಿದ್ದನು. ಅವನನ್ನು ನೆಲಕ್ಕೆ ಕೆಡಹಿ ಸೂರ್ಯಪುತ್ರನು ಅಘರ್ಷಣೀಯ ಸೂರ್ಯನು ತನ್ನ ತೇಜದಿಂದ ಪ್ರಕಾಶಿಸುವಂತೆ ವಿಜಯಲಕ್ಷ್ಮಿಯಿಂದ ಶೋಭಿಸತೊಡಗಿದನು.॥37॥

ಮೂಲಮ್ - 38

ಅಥ ವಿಜಯಮವಾಪ್ಯ ವಾನರೇಂದ್ರಃ
ಸಮರಮುಖೇ ಸುರಸಿದ್ಧ ಯಕ್ಷಸಂಘೈಃ ।
ಅವನಿತಲಗತೈಶ್ಚ ಭೂತಸಂಘೈ-
ರ್ಹರುಷಸಮಾಕುಲಿತೈ ನಿರೀಕ್ಷ್ಯಮಾಣಃ ॥

ಅನುವಾದ

ಹೀಗೆ ವಾನರರಾಜ ಸುಗ್ರೀವನು ಯುದ್ಧದಲ್ಲಿ ವಿಜಯಪಡೆದು ಶೋಭಿಸಿದನು. ಆಗ ದೇವತೆಗಳು, ಸಿದ್ಧರು, ಯಕ್ಷರು ಹಾಗೂ ಭೂತಲನಿವಾಸಿ ಪ್ರಾಣಿಗಳು ಭಾರೀ ಹರ್ಷದಿಂದ ಅವನನ್ನು ನೋಡುತ್ತಿದ್ದರು.॥38॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ತೊಂಭತ್ತೇಳನೆಯ ಸರ್ಗ ಪೂರ್ಣವಾಯಿತು.॥97॥