०९६ सुग्रीवेण विरूपाक्षवधः

वाचनम्
ಭಾಗಸೂಚನಾ

ಸುಗ್ರೀವನಿಂದ ರಾಕ್ಷಸ ಸೈನ್ಯದ ಸಂಹಾರ, ವಿರೂಪಾಕ್ಷನ ವಧೆ

ಮೂಲಮ್ - 1

ತಥಾ ತೈಃ ಕೃತ್ತಗಾತ್ರೈಸ್ತು ದಶಗ್ರೀವೇಣ ಮಾರ್ಗಣೈಃ ।
ಬಭೂವ ವಸುಧಾ ತತ್ರ ಪ್ರಕೀರ್ಣಾ ಹರಿಭಿಸ್ತದಾ ॥

ಅನುವಾದ

ದಶಗ್ರೀವನು ತನ್ನ ತೀಕ್ಷ್ಣ ಬಾಣಗಳಿಂದ ವಾನರರ ಅಂಗ-ಭಂಗ ಮಾಡಿದಾಗ ಧರಾಶಾಯಿಯಾದ ವಾನರ ರಿಂದ ಅಲ್ಲಿಯ ರಣಭೂಮಿ ತುಂಬಿಹೋಯಿತು.॥1॥

ಮೂಲಮ್ - 2

ರಾವಣಸ್ಯಾಪ್ರಸಹ್ಯಂ ತಂ ಶರಸಂಪಾತಮೇಕತಃ ।
ನ ಶೇಕುಃ ಸಹಿತುಂ ದೀಪ್ತಂ ಪತಂಗಾಜ್ವಲನಂ ಯಥಾ ॥

ಅನುವಾದ

ರಾವಣನ ಆ ಅಸಂಖ್ಯಾತ ಬಾಣಪ್ರಹಾರವನ್ನು ಉರಿಯುವ ಬೆಂಕಿಯನ್ನು ಪತಂಗಗಳು ಕ್ಷಣಮಾತ್ರವೂ ಸಹಿಸದಂತೆ ಆ ವಾನರರು ಒಂದು ಘಳಿಗೆಯೂ ಸಹಿಸದಾದರು.॥2॥

ಮೂಲಮ್ - 3

ತೇಽರ್ದಿತಾ ನಿಶಿತೈರ್ಬಾಣೈಃ ಕ್ರೋಶಂತೋ ವಿಪ್ರದುದ್ರುವಃ ।
ಪಾವಕಾರ್ಚಿಃ ಸಮಾವಿಷ್ಟಾ ದಹ್ಯಮಾನಾ ಯಥಾ ಗಜಾಃ ॥

ಅನುವಾದ

ರಾವಣನ ಹರಿತ ಬಾಣಗಳಿಂದ ಪೀಡಿತರಾದ ವಾನರರು ಕಾಡ್ಗಿಚ್ಚಿನಿಂದ ಸುತ್ತುವರೆದ ಆನೆಗಳು ಘೀಳಿಡುತ್ತಾ ಓಡುತ್ತಿರು ವಂತೆಯೇ, ಚೀರುತ್ತಾ ಓಡಿಹೋಗುತ್ತಿದ್ದರು.॥3॥

ಮೂಲಮ್ - 4

ಪ್ಲವಂಗಾನಾಮನೀಕಾನಿ ಮಹಾಭ್ರಾಣೀವ ಮಾರುತಃ ।
ಸಂಯಯೌ ಸಮರೇ ತಸ್ಮಿನ್ವಿಧಮನ್ ರಾವಣಃ ಶರೈಃ ॥

ಅನುವಾದ

ಪ್ರಚಂಡ ವಾಯುವು ಮೋಡಗಳನ್ನು ಚದುರಿಸಿಬಿಡುವಂತೆಯೇ ರಾವಣನು ತನ್ನ ಬಾಣಗಳಿಂದ ವಾನರ ಸೈನ್ಯವನ್ನು ಸಂಹರಿಸುತ್ತಾ ಸಮರಾಂಗಣದಲ್ಲಿ ವಿಚರಿಸುತ್ತಿದ್ದನು.॥4॥

ಮೂಲಮ್ - 5

ಕದನಂ ತರಸಾ ಕೃತ್ವಾ ರಾಕ್ಷಸೇಂದ್ರೋ ವನೌಕಸಾಮ್ ।
ಆಸಸಾದ ತತೋ ಯುದ್ಧೇ ತ್ವರಿತಂ ರಾಘವಂ ರಣೇ ॥

ಅನುವಾದ

ವೇಗವಾಗಿ ವಾನರರನ್ನು ಸಂಹರಿಸುತ್ತಾ ರಾಕ್ಷಸೇಂದ್ರನು ರಣರಂಗದಲ್ಲಿ ಕಾದಾಡಲು ಕೂಡಲೇ ಶ್ರೀರಾಮಚಂದ್ರನ ಬಳಿಗೆ ಬಂದನು.॥5॥

ಮೂಲಮ್ - 6

ಸುಗ್ರೀವಸ್ತಾನ್ ಕಪೀನ್ದೃಷ್ಟ್ವಾ ಭಗ್ನಾನ್ ವಿದ್ರಾವಿತಾನ್ ರಣೇ ।
ಗುಲ್ಮೇ ಸುಷೇಣಂ ನಿಕ್ಷಿಪ್ಯ ಚಕ್ರೇ ಯುದ್ಧೇ ದ್ರುತಂ ಮನಃ ॥

ಅನುವಾದ

ವಾನರ ಸೈನಿಕರು ರಾವಣನಿಂದ ತಡೆಯಲ್ಪಟ್ಟು ಓಡಿಹೋಗುತ್ತಿರುವುದನ್ನು ನೋಡಿದ ಸುಗ್ರೀವನು ಸೈನ್ಯದ ಹೊಣೆಯನ್ನು ಸುಷೇಣನಿಗೆ ಒಪ್ಪಿಸಿ, ಶೀಘ್ರವಾಗಿ ಯುದ್ಧ ಮಾಡಲು ಯೋಚಿಸಿದನು.॥6॥

ಮೂಲಮ್ - 7

ಆತ್ಮನಃ ಸದೃಶಂ ವೀರಂ ಸ ತಂ ನಿಕ್ಷಿಪ್ಯ ವಾನರಮ್ ।
ಸುಗ್ರೀವೋಽಭಿಮುಖಂ ಶತ್ರುಂ ಪ್ರತಸ್ಥೇ ಪಾದಪಾಯುಧಃ ॥

ಅನುವಾದ

ಸುಷೇಣನು ತನ್ನಂತೆಯೇ ಪರಾಕ್ರಮಿ ವೀರನೆಂದು ತಿಳಿದು ಸುಗ್ರೀವನು ಸೈನ್ಯದ ರಕ್ಷಣೆಯ ಭಾರವನ್ನು ಅವನಿಗೊಪ್ಪಿಸಿ, ಸ್ವತಃ ವೃಕ್ಷವನ್ನೆತ್ತಿ ಕೊಂಡು ಶತ್ರುವಿನ ಎದುರಿಗೆ ಬಂದನು.॥7॥

ಮೂಲಮ್ - 8

ಪಾರ್ಶ್ವತಃ ಪೃಷ್ಠತಶ್ಚಾಸ್ಯ ಸರ್ವೇ ವಾನರಯೂಥಪಾಃ ।
ಅನುಜಗ್ಮುರ್ಮಹಾಶೈಲಾನ್ ವಿವಿಧಾಂಶ್ಚ ವನಸ್ಪತೀನ್ ॥

ಅನುವಾದ

ಅವನ ಅಕ್ಕಪಕ್ಕದಲ್ಲಿ ಮತ್ತು ಹಿಂದೆ ಸಮಸ್ತ ವಾನರ ದಳಪತಿಗಳು ದೊಡ್ಡ ದೊಡ್ಡ ಬಂಡೆಗಳನ್ನು ಹಾಗೂ ವೃಕ್ಷಗಳನ್ನೆತ್ತಿಕೊಂಡು ನಿಂತಿದ್ದರು.॥8॥

ಮೂಲಮ್ - 9

ನನರ್ದ ಯುಧಿ ಸುಗ್ರೀವಃ ಸ್ವರೇಣ ಮಹತಾ ಮಹಾನ್ ।
ಪೋಥಯನ್ ವಿವಿಧಾಂಶ್ಚಾನ್ಯಾನ್ಮಮಂಥೋತ್ತಮ ರಾಕ್ಷಸಾನ್ ॥

ಮೂಲಮ್ - 10

ಮಮರ್ದ ಚ ಮಹಾಕಾಯೋ ರಾಕ್ಷಸಾನ್ ವಾನರೇಶ್ವರಃ ।
ಯುಗಾಂತ ಸಮಯೇ ವಾಯುಃ ಪ್ರವೃದ್ಧಾನಗಮಾನಿವ ॥

ಅನುವಾದ

ಆಗ ಸುಗ್ರೀವನು ಯುದ್ಧದಲ್ಲಿ ಗಟ್ಟಿಯಾಗಿ ಗರ್ಜಿಸಿ, ಪ್ರಳಯ ಕಾಲದಲ್ಲಿ ದೊಡ್ಡ ದೊಡ್ಡ ವೃಕ್ಷಗಳನ್ನು ಉರುಳಿಸಿ ಬಿಡುವ ಬಿರುಗಾಳಿಯಂತೆ, ಆ ವಿಶಾಲಕಾಯ ವಾನರರಾಜನು ವಿಭಿನ್ನ ಆಕ್ರತಿಯ ದೊಡ್ಡ ದೊಡ್ಡ ರಾಕ್ಷಸರನ್ನು ಬೀಳಿಸಿ ಜಜ್ಜಿಹಾಕಿದನು.॥9-10॥

ಮೂಲಮ್ - 11

ರಾಕ್ಷಸಾನಾಮನೀಕೇಷು ಶೈಲವರ್ಷಂ ವವರ್ಷ ಹ ।
ಅಶ್ಮವರ್ಷಂ ಯಥಾ ಮೇಘಃ ಪಕ್ಷಿಸಂಘೇಷು ಕಾನನೇ ॥

ಅನುವಾದ

ಮೋಡಗಳು ಕಾಡಿನಲ್ಲಿ ಪಕ್ಷಿಗಳ ಮೇಲೆ ಆಲಿಕಲ್ಲು ಸುರಿಸುವಂತೆಯೇ ಸುಗ್ರೀವನು ರಾಕ್ಷಸರ ಸೈನ್ಯದ ಮೇಲೆ ದೊಡ್ಡ ದೊಡ್ಡ ಬಂಡೆಗಳ ಮಳೆಗರೆಯತೊಡಗಿದನು.॥11॥

ಮೂಲಮ್ - 12

ಕಪಿರಾಜವಿಮುಕ್ತೈಸ್ತೈಃ ಶೈಲವರ್ಷೈಸ್ತು ರಾಕ್ಷಸಾಃ ।
ವಿಕೀರ್ಣ ಶಿರಸಃ ಪೇತುರ್ವಿಕೀರ್ಣಾ ಇವ ಪರ್ವತಾಃ ॥

ಅನುವಾದ

ವಾನರರಾಜನು ಪ್ರಯೋಗಿಸಿದ ಪರ್ವತಗಳ ಮಳೆಯಿಂದ ರಾಕ್ಷಸರ ತಲೆಗಳು ಪುಡಿಯಾಗಿ, ಕುಸಿಯುತ್ತಿರುವ ಪರ್ವತದಂತೆ ಧರಾಶಾಯಿಗಳಾಗುತ್ತಿದ್ದರು.॥12॥

ಮೂಲಮ್ - 13

ಅಥ ಸಂಕ್ಷೀಯಮಾಣೇಷು ರಾಕ್ಷಸೇಷು ಸಮಂತತಃ ।
ಸುಗ್ರೀವೇಣ ಪ್ರಭಗ್ನೇಷು ನದತ್ಸುಚ ಪತತ್ಸು ಚ ॥

ಮೂಲಮ್ - 14

ವಿರೂಪಾಕ್ಷಃ ಸ್ವಕಂ ನಾಮ ಧನ್ವೀ ವಿಶ್ರಾವ್ಯ ರಾಕ್ಷಸಃ ।
ರಥಾದಾಪ್ಲುತ್ಯ ದುರ್ಧರ್ಷೋ ಗಜಸ್ಕಂಧಮುಪಾರುಹತ್ ॥

ಅನುವಾದ

ಈ ಪ್ರಕಾರ ಸುಗ್ರೀವನ ಏಟುಗಳಿಂದ ರಾಕ್ಷಸ ವಿನಾಶವಾಯಿತು. ಅವರು ಓಡುತ್ತಾ, ಆರ್ತನಾದ ಮಾಡುತ್ತಾ ನೆಲಕ್ಕೆ ಬೀಳತೊಡಗಿದಾಗ ವಿರೂಪಾಕ್ಷ ಎಂಬ ದುರ್ಜಯ ರಾಕ್ಷಸನು ಕೈಯಲ್ಲಿ ಧನುಸ್ಸನ್ನೆತ್ತಿಕೊಂಡು ತನ್ನ ನಾಮಧೇಯ ವನ್ನು ಘೋಷಿಸುತ್ತಾ ರಥದಿಂದ ನೆಗೆದು ಆನೆಯ ಮೇಲೆ ಹತ್ತಿ ಕುಳಿತನು.॥13-14॥

ಮೂಲಮ್ - 15

ಸ ತಂ ದ್ವಿಪಮಥಾರುಹ್ಯ ವಿರೂಪಾಕ್ಷೋ ಮಹಾಬಲಃ ।
ವಿನರ್ದ ಭೀಮನಿರ್ಹ್ರಾದಂ ವಾನರಾನಭ್ಯಧಾವತ ॥

ಅನುವಾದ

ಆನೆಯ ಮೇಲೆ ಹತ್ತಿ ಮಹಾಬಲಿ ವಿರೂಪಾಕ್ಷನು ಗಟ್ಟಿಯಾಗಿ ಭಯಾನಕವಾಗಿ ಗರ್ಜಿಸಿದನು ಹಾಗೂ ವಾನರರನ್ನು ವೇಗವಾಗಿ ಆಕ್ರಮಣ ಮಾಡಿದನು.॥15॥

ಮೂಲಮ್ - 16

ಸುಗ್ರೀವೇ ಸ ಶರಾನ್ ಘೋರಾನ್ ವಿಸಸರ್ಜ ಚಮೂಮುಖೇ ।
ಸ್ಥಾಪಯಾಮಾಸ ಚೋದ್ವಿಗ್ನಾನ್ರಾಕ್ಷಸಾನ್ ಸಂಪ್ರಹರ್ಷಯನ್ ॥

ಅನುವಾದ

ಉದ್ವಿಗ್ನರಾಗಿದ್ದ ರಾಕ್ಷಸರನ್ನು ತನ್ನ ಸಿಂಹಗರ್ಜನೆಯಿಂದ ಹರ್ಷಗೊಳಿಸುತ್ತಾ ವಿರೂಪಾಕ್ಷನು ಸುಗ್ರೀವನ ಮೇಲೆ ಘೋರವಾದ ಬಾಣಗಳನ್ನು ಪ್ರಯೋಗಿಸಿದನು.॥16॥

ಮೂಲಮ್ - 17

ಸೋಽತಿವಿದ್ಧಃ ಶಿತೈರ್ಬಾಣೈಃ ಕಪೀಂದ್ರಸ್ತೇನ ರಕ್ಷಸಾ ।
ಚುಕ್ರೋಶ ಚ ಮಹಾಕ್ರೋಧೋ ವಧೇ ಚಾಸ್ಯ ಮನೋ ದಧೇ ॥

ಅನುವಾದ

ರಾಕ್ಷಸನ ಹರಿತವಾದ ಬಾಣಗಳಿಂದ ಅತ್ಯಂತ ಗಾಯಗೊಂಡ ವಾನರರಾಜ ಸುಗ್ರೀವನು ಕ್ರೋಧಗೊಂಡು ಭೀಷಣವಾಗಿ ಗರ್ಜಿಸಿ, ವಿರೂಪಾಕ್ಷನನ್ನು ಕೊಂದುಹಾಕಲು ಯೋಚಿಸಿದನು.॥17॥

ಮೂಲಮ್ - 18

ತತಃ ಪಾದಪಮುದ್ಧೃತ್ಯ ಶೂರಃ ಸಂಪ್ರಧನೋ ಹರಿಃ ।
ಅಭಿಪತ್ಯ ಜಘಾನಾಸ್ಯ ಪ್ರಮುಖೇ ತಂ ಮಹಾಗಜಮ್ ॥

ಅನುವಾದ

ಅವನು ಶೂರ ವೀರನಾಗಿದ್ದು, ಯುದ್ದಕಲೆಯನ್ನು ಚೆನ್ನಾಗಿ ತಿಳಿದಿದ್ದ ಸುಗ್ರೀವನು ಒಂದು ವೃಕ್ಷವನ್ನು ಕಿತ್ತುಕೊಂಡು, ತನ್ನ ಎದುರಿಗೆ ನಿಂತಿದ್ದ ವಿಶಾಲ ಆನೆಯನ್ನು ಆ ವೃಕ್ಷದಿಂದ ಪ್ರಹಾರ ಮಾಡಿದನು.॥18॥

ಮೂಲಮ್ - 19

ಸ ತು ಪ್ರಹಾರಾಭಿಹತಃ ಸುಗ್ರೀವೇಣ ಮಹಾಗಜಃ ।
ಅಪಾಸರ್ಪದ್ಧನುರ್ಮಾತ್ರಂ ನಿಷಸಾದ ನನಾದ ಚ ॥

ಅನುವಾದ

ಸುಗ್ರೀವನ ಪ್ರಹಾರದಿಂದ ಗಾಯಗೊಂಡ ಆ ಮಹಾಗಜವು ಬಿಲ್ಲಂತರಕ್ಕೆ ಹಿಂದೆ ಸರಿದು ಕುಳಿತು ಬಿಟ್ಟಿತು ಹಾಗೂ ನೋವಿನಿಂದ ಆರ್ತನಾದ ಮಾಡತೊಡಗಿತು.॥19॥

ಮೂಲಮ್ - 20

ಗಜಾತ್ತು ಮಥಿತಾತ್ತೂರ್ಣಮಪಕ್ರಮ್ಯ ಸ ವೀರ್ಯವಾನ್ ।
ರಾಕ್ಷಸೋಽಭಿಮುಖಃ ಶತ್ರುಂ ಪ್ರತ್ಯುದ್ಗಮ್ಯ ತತಃ ಕಪಿಮ್ ॥

ಮೂಲಮ್ - 21

ಆರ್ಷಭಂ ಚರ್ಮ ಖಡ್ಗಂ ಚ ಪ್ರಗೃಹ್ಯ ಲಘುವಿಕ್ರಮಃ ।
ಭರ್ತ್ಸಯನ್ನಿವ ಸುಗ್ರೀವಮಾಸಸಾದ ವ್ಯವಸ್ಥಿತಮ್ ॥

ಅನುವಾದ

ಪರಾಕ್ರಮಿ ವಿರೂಪಾಕ್ಷ ರಾಕ್ಷಸನು ಆ ಗಾಯಗೊಂಡ ಆನೆಯ ಬೆನ್ನಿನಿಂದ ತತ್ಕ್ಷಣ ಹಾರಿ, ಕತ್ತಿ ಗುರಾಣಿ ಹಿಡಿದುಕೊಂಡು ವೇಗವಾಗಿ ಸುಗ್ರೀವನ ಕಡೆಗೆ ಮುನ್ನುಗ್ಗಿದನು. ಒಂದೇ ಕಡೆ ಸ್ಥಿರವಾಗಿ ನಿಂತಿದ್ದ ಸುಗ್ರೀವನನ್ನು ನಿಂದಿಸುತ್ತಾ ಅವನ ಬಳಿಗೆ ಹೋದನು.॥20-21॥

ಮೂಲಮ್ - 22

ಸ ಹಿ ತಸ್ಯಾಭಿಸಂಕ್ರುದ್ಧಃ ಪ್ರಗೃಹ್ಯ ವಿಪುಲಾಂ ಶಿಲಾಮ್ ।
ವಿರೂಪಾಕ್ಷಸ್ಯ ಚಿಕ್ಷೇಪ ಸುಗ್ರೀವೋ ಜಲದೋಪಮಾಮ್ ॥

ಅನುವಾದ

ಇದನ್ನು ನೋಡಿದ ಸುಗ್ರೀವನು ಮೇಘದಂತೆ ಕಪ್ಪಾದ ಭಾರೀ ದೊಡ್ಡ ಶಿಲೆಯೊಂದನ್ನು ಎತ್ತಿಕೊಂಡು ವಿರೂಪಾಕ್ಷನ ಶರೀರದ ಮೇಲೆ ಕ್ರೋಧದಿಂದ ಪ್ರಹರಿಸಿದನು.॥22॥

ಮೂಲಮ್ - 23

ಸ ತಾಂ ಶಿಲಾಮಾಪತಂತೀಂ ದೃಷ್ಟ್ವಾರಾಕ್ಷಸಪುಂಗವಃ ।
ಅಪಕ್ರಮ್ಯ ಸುವಿಕ್ರಾಂತಃ ಖಡ್ಗೇನ ಪ್ರಾಹರತ್ತದಾ ॥

ಅನುವಾದ

ಆ ಶಿಲೆಯು ತನ್ನ ಮೇಲೆ ಬೀಳು ವುದನ್ನು ನೋಡಿದ ಪರಮಪರಾಕ್ರಮಿ ರಾಕ್ಷಸ ವಿರೂಪಾಕ್ಷನು ಹಿಂದೆ ಸರಿದು ತನ್ನನ್ನು ರಕ್ಷಿಸಿಕೊಂಡು ಸುಗ್ರೀವನ ಮೇಲೆ ಖಡ್ಗದಿಂದ ಹೊಡೆದನು.॥23॥

ಮೂಲಮ್ - 24

ತೇನ ಖಡ್ಗಪ್ರಹಾರೇಣ ರಕ್ಷಸಾ ಬಲಿನಾ ಹತಃ ।
ಮುಹೂರ್ತಮಭವದ್ ಭೂಮೌ ವಿಸಂಜ್ಞ ಇವ ವಾನರಃ ॥

ಅನುವಾದ

ಆ ಬಲವಂತ ನಿಶಾಚರನ ಖಡ್ಗದಿಂದ ಗಾಯಗೊಂಡ ವಾನರರಾಜ ಸುಗ್ರೀವನು ಮೂರ್ಛಿತನಾಗಿ ಸ್ವಲ್ಪ ಹೊತ್ತು ನೆಲದಲ್ಲಿ ಬಿದ್ದಿದ್ದನು.॥24॥

ಮೂಲಮ್ - 25

ಸಹಸಾ ಸ ತದೋತ್ಪತ್ಯ ರಾಕ್ಷಸಸ್ಯ ಮಹಾಹವೇ ।
ಮುಷ್ಟಿಂ ಸಂವರ್ತ್ಯ ವೇಗೇನ ಪಾತಯಾಮಾಸ ವಕ್ಷಸಿ ॥

ಅನುವಾದ

ಮತ್ತೆ ಕೂಡಲೇ ನೆಗೆದು ಅವನು ಆ ಮಹಾಸಮರದಲ್ಲಿ ಮುಷ್ಟಿಬಿಗಿದು ವಿರೂಪಾಕ್ಷನ ಎದೆಗೆ ವೇಗವಾಗಿ ಪ್ರಹರಿಸಿದನು.॥25॥

ಮೂಲಮ್ - 26½

ಮುಷ್ಟಿ ಪ್ರಹಾರಾಭಿಹತೋ ವಿರೂಪಾಕ್ಷೋ ನಿಶಾಚರಃ ।
ತೇನ ಖಡ್ಗೇನ ಸಂಕ್ರುದ್ಧಃ ಸುಗ್ರೀವಸ್ಯ ಚಮೂಮುಖೇ ॥
ಕವಚಂ ಪಾತಯಾಮಾಸ ಪದ್ಭ್ಯಾಮಭಿಹತೋಽಪತತ್ ।

ಅನುವಾದ

ಸುಗ್ರೀವನ ಮುಷ್ಟಿಯ ಆಘಾತದಿಂದ ವಿರೂಪಾಕ್ಷನ ಕ್ರೋಧ ಉರಿದೆದ್ದು ಅವನು ಅದೇ ಖಡ್ಗದಿಂದ ಸುಗ್ರೀವನ ಕವಚವನ್ನು ತುಂಡರಿಸಿ, ಕಾಲಿನಿಂದ ಒದ್ದು ಅವನನ್ನು ನೆಲಕ್ಕೆ ಬೀಳಿಸಿದನು.॥26½॥

ಮೂಲಮ್ - 27½

ಸ ಸಮುತ್ಥಾಯ ಪತಿತಃ ಕಪಿಸ್ತಸ್ಯ ವ್ಯಸರ್ಜಯತ್ ॥
ತಲಪ್ರಹಾರಮಶನೇಃ ಸಮಾನಂ ಭೀಮನಿಃಸ್ವನಮ್ ।

ಅನುವಾದ

ಬಿದ್ದಿರುವ ಸುಗ್ರೀವನು ಪುನಃ ಎದ್ದು ನಿಂತು ರಾಕ್ಷಸನಿಗೆ ವಜ್ರಾಯುಧದಂತಹ ಅಂಗೈಯಿಂದ ಒಂದು ಏಟನ್ನು ಬಿಗಿದನು.॥27½॥

ಮೂಲಮ್ - 28½

ತಲಪ್ರಹಾರಂ ತದ್ರಕ್ಷಃ ಸುಗ್ರೀವೇಣ ಸಮುದ್ಯತಮ್ ॥
ನೈಪುಣ್ಯಾನ್ಮೋಚಯಿತ್ವೈನಂ ಮುಷ್ಟಿ ನೋರಸಿ ತಾಡಯತ್ ।

ಅನುವಾದ

ಸುಗ್ರೀವನ ಏಟನ್ನು ಆ ರಾಕ್ಷಸನು ಯುದ್ಧಕೌಶಲ್ಯದಿಂದ ತಪ್ಪಿಸಿಕೊಂಡು ಸುಗ್ರೀವನ ಎದೆಗೆ ಗುದ್ದಿದನು.॥28½॥

ಮೂಲಮ್ - 29

ತತಸ್ತು ಸಂಕ್ರುದ್ಧತರಃ ಸುಗ್ರೀವೋ ವಾನರೇಶ್ವರಃ ॥

ಮೂಲಮ್ - 30

ಮೋಕ್ಷಿತಂ ಚಾತ್ಮನೋ ದೃಷ್ಟ್ವಾಪ್ರಹಾರಂ ತೇನ ರಕ್ಷಸಾ ।
ಸ ದದರ್ಶಾಂತರಂ ತಸ್ಯ ವಿರೂಪಾಕ್ಷಸ್ಯ ವಾನರಃ ॥

ಅನುವಾದ

ಆಗ ಸುಗ್ರೀವನಿಗೆ ಅಸೀಮ ಕ್ರೋಧವುಂಟಾಗಿ ರಾಕ್ಷಸನು ತನ್ನ ಏಟನ್ನು ವ್ಯರ್ಥಗೊಳಿಸಿ ತನ್ನನ್ನು ಸ್ಪರ್ಶಿಸಲು ಬಿಡದಿದ್ದಾಗ ಅವನು ವಿರೂಪಾಕ್ಷನನ್ನು ಪ್ರಹರಿಸಲು ಸಂದರ್ಭ ನೋಡುತ್ತಿದ್ದನು.॥29-30॥

ಮೂಲಮ್ - 31

ತತೋಽನ್ಯಪಾತಯತ್ ಕ್ರೋಧಾಚ್ಛಂಖದೇಶೇ ಮಹತಲಮ್ ।
ಮಹೇಂದ್ರಾ ಶನಿಕಲ್ಪೇನ ತಲೇನಾಭಿಹತಃ ಕ್ಷಿತೌ ॥

ಮೂಲಮ್ - 32

ಪಪಾತ ರುಧಿರಕ್ಲಿನ್ನಃ ಶೋಣಿತಂ ಹಿ ಸಮುದ್ಗಿರನ್ ।
ಸ್ರೋತೋಭ್ಯಸ್ತು ವಿರೂಪಾಕ್ಷೋ ಜಲಂ ಪ್ರಸ್ರವಣಾದಿವ ॥

ಅನುವಾದ

ಅನಂತರ ಸುಗ್ರೀವನು ವಿರೂಪಾಕ್ಷನ ಹಣೆಗೆ ಕ್ರೋಧದಿಂದ ಅಂಗೈಯಿಂದ ಹೊಡೆದನು, ಅದರ ಸ್ಪರ್ಶ ಇಂದ್ರನ ವಜ್ರಾಯುಧದಂತೆ ದುಃಸ್ಸಹವಾಗಿತ್ತು. ಅದರಿಂದ ಆಹತನಾಗಿ ವಿರೂಪಾಕ್ಷನು ನೆಲಕ್ಕೆ ಬಿದ್ದನು. ಅವನ ಶರೀರವಿಡೀ ರಕ್ತದಿಂದ ತೊಯ್ದುಹೋಯಿತು. ಪರ್ವತದಿಂದ ನೀರು ಹರಿದು ಬರುವಂತೆಯೇ ಅವನ ಎಲ್ಲ ಇಂದ್ರಿಯಗಳಿಂದ ರಕ್ತಹರಿಯತೊಡಗಿತು.॥31-32॥

ಮೂಲಮ್ - 33

ವಿವೃತ್ತನಯನಂ ಕ್ರೋಧಾತ್ಸೇನಂ ರುಧಿರಾಪ್ಲುತಮ್ ।
ದದೃಶುಸ್ತೇ ವಿರೂಪಾಕ್ಷಂ ವಿರೂಪಾಕ್ಷತರಂ ಕೃತಮ್ ॥

ಮೂಲಮ್ - 34

ಸ್ಫುರಂತಂ ಪರಿವರ್ತಂತಂ ಪಾರ್ಶ್ವೇನ ರುಧಿರೋಕ್ಷಿತಮ್ ।
ಕರುಣಂ ಚ ವಿನರ್ದಂತಂ ದದೃಶುಃ ಕಪಯೋ ರಿಪುಮ್ ॥

ಅನುವಾದ

ಆ ರಾಕ್ಷಸನ ಕಣ್ಣುಗಳು ಕ್ರೋಧ ದಿಂದ ತಿರುಗುತ್ತಿದ್ದವು. ಅವನು ನೊರೆ ತುಂಬಿದ ರಕ್ತದಲ್ಲಿ ಮುಳುಗಿದ್ದನು. ವಿರೂಪಾಕ್ಷನು ಅತ್ಯಂತ ಕುರೂಪಿಯಾಗಿದ್ದು, ರಕ್ತದಿಂದ ತೊಯ್ದು ಹೋಗಿ ಒದ್ದಾಡುತ್ತಾ, ಮಗ್ಗಲು ಬದಲಿಸುತ್ತಾ ಕರುಣಾಜನಕ ಆರ್ತನಾದ ಮಾಡುತ್ತಿದ್ದುದನ್ನು ವಾನರರು ನೋಡಿದರು.॥33-34॥

ಮೂಲಮ್ - 35

ತಥಾ ತು ತೌ ಸಂಯತಿ ಸಂಪ್ರಯುಕ್ತೌ
ತರಸ್ವಿನೌ ವಾನರ ರಾಕ್ಷಸಾನಾಮ್ ।
ಬಲಾರ್ಣವೌ ಸಸ್ವನತುಶ್ಚ ಭೀಮೌ
ಮಹಾರ್ಣವೌ ದ್ವಾವಿವ ಭಿನ್ನಸೇತೂ ॥

ಅನುವಾದ

ಹೀಗೆ ವೇಗಶಾಲಿ ವಾನರರ ಮತ್ತು ರಾಕ್ಷಸರ ಸೈನ್ಯಗಳು ಮೇರೆ ಮೀರಿದ ಎರಡು ಮಹಾಸಮುದ್ರದಂತೆ ರಣರಂಗದಲ್ಲಿ ಮಹಾ ಕೋಲಾಹಲ ಮಾಡತೊಡಗಿದರು.॥35॥

ಮೂಲಮ್ - 36

ವಿನಾಶಿತಂ ಪ್ರೇಕ್ಷ್ಯ ವಿರೂಪನೇತ್ರಂ
ಮಹಾಬಲಂ ತಂ ಹರಿಪಾರ್ಥಿವೇನ ।
ಬಲಂ ಸಮೇತಂ ಕಪಿರಾಕ್ಷಸಾನಾ-
ಮುದ್ವೃತ್ತ ಗಂಗಾಪ್ರತಿಮಂ ಬಭೂವ ॥

ಅನುವಾದ

ವಾನರರಾಜ ಸುಗ್ರೀವನಿಂದ ಮಹಾಬಲಿ ವಿರೂಪಾಕ್ಷನು ಹತನಾದುದನ್ನು ನೋಡಿ ವಾನರರ ಮತ್ತು ರಾಕ್ಷಸರ ಸೈನ್ಯಗಳು ಒಂದಾಗಿ ಗಂಗೆಯ ಮಹಾಪೂರದಂತೆ ಒಬ್ಬರು ಆನಂದದಿಂದ, ಮತ್ತೊಬ್ಬರು ಶೋಕದಿಂದ ಕೋಲಾಹ ಎಬ್ಬಿಸಿದರು.॥36॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ತೊಂಭತ್ತಾರನೆಯ ಸರ್ಗ ಪೂರ್ಣವಾಯಿತು.॥96॥