०९५ कपिभिः सह रावणयुद्धम्

वाचनम्
ಭಾಗಸೂಚನಾ

ರಾವಣನು ಮಂತ್ರಿಗಳನ್ನು ಕರೆಯಿಸಿ ಶತ್ರುವಧೆಯಲ್ಲಿ ಉತ್ಸಾಹವನ್ನು ಪ್ರಕಟಿಸಿದುದು, ಸಮಸ್ತ ರಾಕ್ಷಸರೊಡನೆ ರಣಭೂಮಿಗೆ ಬಂದು ಪರಾಕ್ರಮ ತೋರಿದುದು

ಮೂಲಮ್ - 1

ಆರ್ತಾನಾಂ ರಾಕ್ಷಸೀನಾಂ ತು ಲಂಕಾಯಾಂ ವೈ ಕುಲೇ ಕುಲೇ ।
ರಾವಣಃ ಕರುಣಂ ಶಬ್ದಂ ಶುಶ್ರಾವ ಪರಿದೇವಿತಮ್ ॥

ಅನುವಾದ

ರಾವಣನು ಲಂಕೆಯ ಪ್ರತಿಯೊಂದು ಮನೆಯಲ್ಲಿಯೂ ರಾಕ್ಷಸಿಯರ ಕರುಣ ಕ್ರಂದನವನ್ನು ಕೇಳಿದನು.॥1॥

ಮೂಲಮ್ - 2

ಸ ತು ದೀರ್ಘಂ ವಿನಿಃಶ್ವಸ್ಯ ಮುಹೂರ್ತಂ ಧ್ಯಾನಮಾಸ್ಥಿತಃ ।
ಬಭೂವ ಪರಮಕ್ರುದ್ಧೋ ರಾವಣೋ ಭೀಮದರ್ಶನಃ ॥

ಅನುವಾದ

ಅವನು ದೀರ್ಘವಾಗಿ ನಿಟ್ಟುಸಿರು ಬಿಡುತ್ತಾ ಎರಡು ಘಳಿಗೆ ಧ್ಯಾನಮಗ್ನನಾಗಿ ಏನನ್ನೋ ಯೋಚಿಸಿದ ಬಳಿಕ, ರಾವಣನು ಅತ್ಯಂತ ಕುಪಿತನಾಗಿ ಭಯಂಕರವಾಗಿ ಕಾಣತೊಡಗಿದನು.॥2॥

ಮೂಲಮ್ - 3

ಸಂದಶ್ಯ ದಶನೈರೋಷ್ಠಂ ಕ್ರೋಧಸಂರಕ್ತ ಲೋಚನಃ ।
ರಾಕ್ಷಸೈರಪಿ ದುರ್ಧರ್ಷಃ ಕಾಲಾಗ್ನಿರಿವ ಮೂರ್ತಿಮಾನ್ ॥

ಅನುವಾದ

ರೋಷದಿಂದ ಹಲ್ಲು ಕಡಿಯುತ್ತಾ, ಕಣ್ಣು ಕೆಂಪಾಗಿ ಅವನು ಸಾಕ್ಷಾತ್ ಪ್ರಳಯಾಗ್ನಿಯಂತೆ ಕಾಣುತ್ತಿದ್ದನು. ರಾಕ್ಷಸರೂ ಕೂಡ ಅವನನ್ನು ಕಣ್ಣೆತ್ತಿ ನೋಡುವುದು ದುಸ್ತರವಾಯಿತು.॥3॥

ಮೂಲಮ್ - 4

ಉವಾಚ ಚ ಸಮೀಪಸ್ಥಾನ್ ರಾಕ್ಷಸಾನ್ರಾಕ್ಷಸೇಶ್ವರಃ ।
ಕ್ರೋಧಾವ್ಯಕ್ತಕಥಸ್ತತ್ರ ನಿರ್ದಹನ್ನಿವ ಚಕ್ಷುಷಾ ॥

ಅನುವಾದ

ಆ ರಾಕ್ಷಸನು ಬಳಿಯಲ್ಲಿ ನಿಂತಿದ್ದ ರಾಕ್ಷಸರೊಂದಿಗೆ ಅಸ್ಪಷ್ಟ ಶಬ್ದಗಳಿಂದ ಮಾತನಾಡುತ್ತಾ, ಅವರನ್ನು ತನ್ನ ಕಣ್ಣು ಗಳಿಂದಲೇ ಸುಟ್ಟುಬಿಡುವನೋ ಎಂಬಂತೆ ನೋಡುತ್ತಿದ್ದನು.॥4॥

ಮೂಲಮ್ - 5

ಮಹೋದರ ಮಹಾಪಾಶ್ವಂ ವಿರೂಪಾಕ್ಷಂ ಚ ರಾಕ್ಷಸಮ್ ।
ಶೀಘ್ರಂ ವದತ ಸೈನ್ಯಾನಿ ನಿರ್ಯಾತೇತಿ ಮಮಾಜ್ಞಯಾ ॥

ಅನುವಾದ

ರಾವಣನೆಂದ - ನಿಶಾಚರರೇ! ಮಹೋದರ, ಮಹಾಪಾರ್ಶ್ವ, ವಿರೂಪಾಕ್ಷ ಎಂಬ ರಾಕ್ಷಸರಲ್ಲಿಗೆ ಬೇಗನೆ ಹೋಗಿ ‘ನೀವು ನನ್ನ ಆಜ್ಞೆಯಂತೆ ಶೀಘ್ರವಾಗಿ ಸೈನ್ಯಕ್ಕೆ ಹೊರಡುವಂತೆ ಆದೇಶಿಸಿರಿ’ ಎಂದು ಹೇಳಿರಿ.॥5॥

ಮೂಲಮ್ - 6

ತಸ್ಯ ತದ್ವಚನಂ ಶ್ರುತ್ವಾ ರಾಕ್ಷಸಾಸ್ತೇ ಭಯಾರ್ದಿತಾಃ ।
ಚೋದಯಾಮಾಸುರವ್ಯಗ್ರಾನ್ ರಾಕ್ಷಸಾಂಸ್ತಾನ್ ನೃಪಾಜ್ಞಯಾ ॥

ಅನುವಾದ

ರಾವಣನ ಮಾತನ್ನು ಕೇಳಿ ಭಯಗೊಂಡ ಆ ರಾಕ್ಷಸರು ರಾಜನ ಆಜ್ಞೆಗನುಸಾರ ಆ ನಿರ್ಭಯರಾದ ನಿಶಾಚರರಲ್ಲಿ ಯುದ್ಧಕ್ಕಾಗಿ ಹೊರಡುವಂತೆ ಪ್ರೇರೇಪಿಸಿದರು.॥6॥

ಮೂಲಮ್ - 7

ತೇ ತು ಸರ್ವೇ ತಥೇತ್ಯುಕ್ತ್ವಾರಾಕ್ಷಸಾ ಭೀಮದರ್ಶನಾಃ ।
ಕೃತಸ್ವಸ್ತ್ಯಯನಾಃ ಸರ್ವೇ ತೇ ರಣಾಭಿಮುಖಾ ಯುಯುಃ ॥

ಅನುವಾದ

‘ಹಾಗೆಯೇ ಆಗಲಿ’ ಎಂದು ಹೇಳಿ ಭಯಾನಕರಾದ ಆ ರಾಕ್ಷಸರೆಲ್ಲರೂ ಸ್ವಸ್ತಿವಾಚನ ಮಾಡಿಸಿ ಯುದ್ಧಕ್ಕಾಗಿ ಹೊರಟರು.॥7॥

ಮೂಲಮ್ - 8

ಪ್ರತಿಪೂಜ್ಯ ಯಥಾನ್ಯಾಯಂ ರಾವಣಂ ತೇ ಮಹಾರಥಾಃ ।
ತಸ್ಥುಃ ಪ್ರಾಂಜಲಯಃ ಸರ್ವೇ ಭರ್ತುರ್ವಿಜಯಕಾಂಕ್ಷಿಣಃ ॥

ಅನುವಾದ

ಒಡೆಯನ ವಿಜಯ ಬಯಸುವ ಆ ಎಲ್ಲ ಮಹಾರಥೀ ವೀರರು ಯಥೋಚಿತವಾಗಿ ರಾವಣನನ್ನು ಆದರಿಸಿ, ಸಮ್ಮಾನಿಸಿ, ಅವನ ಎದುರಿಗೆ ಕೈಜೋಡಿಸಿ ನಿಂತುಕೊಂಡರು.॥8॥

ಮೂಲಮ್ - 9

ತತೋವಾಚ ಪ್ರಹಸ್ಯೈತಾನ್ ರಾವಣಃ ಕ್ರೋಧಮೂರ್ಛಿತಃ ।
ಮಹೋದರ ಮಹಾಪಾರ್ಶ್ವೌ ವಿರೂಪಾಕ್ಷಂ ಚ ರಾಕ್ಷಸಮ್ ॥

ಅನುವಾದ

ಅನಂತರ ರಾವಣನು ಕ್ರೋಧ ಮೂರ್ಛಿತನಂತಾಗಿ ಜೋರಾಗಿ ಅಟ್ಟಹಾಸದಿಂದ ನಗುತ್ತಾ, ಮಹೋದರ, ಮಹಾಪಾರ್ಶ್ವ ಹಾಗೂ ವಿರೂಪಾಕ್ಷರಲ್ಲಿ ಹೇಳಿದನು .॥9॥

ಮೂಲಮ್ - 10

ಅದ್ಯ ಬಾಣೈರ್ಧನುರ್ಮುಕ್ತೈರ್ಯುಗಾಂತಾದಿತ್ಯಸಂನಿಭೈಃ ।
ರಾಘವಂ ಲಕ್ಷ್ಮಣಂ ಚೈವ ನೇಷ್ಯಾಮಿ ಯಮಸಾದನಮ್ ॥

ಅನುವಾದ

ಇಂದು ನನ್ನ ಧನುಸ್ಸಿನಿಂದ ಬಿಡುವ ಪ್ರಳಯಕಾಲದ ಸೂರ್ಯನಂತಿರುವ ಬಾಣಗಳಿಂದ ನಾನು ರಾಮ ಮತ್ತು ಲಕ್ಷ್ಮಣರನ್ನು ಯಮಲೋಕಕ್ಕೆ ಕಳಿಸಿ ಬಿಡುವೆನು.॥10॥

ಮೂಲಮ್ - 11

ಖರಸ್ಯ ಕುಂಭಕರ್ಣಸ್ಯ ಪ್ರಹಸ್ತೇಂದ್ರ್ರಜಿತೋಸ್ತಥಾ ।
ಕರಿಷ್ಯಾಮಿ ಪ್ರತೀಕಾರಮದ್ಯ ಶತ್ರುವಧಾದಹಮ್ ॥

ಅನುವಾದ

ಇಂದು ಶತ್ರುವನ್ನು ವಧಿಸಿ, ಖರ-ಕುಂಭಕರ್ಣ-ಪ್ರಹಸ್ತ ಹಾಗೂ ಇಂದ್ರಜಿತು ಇವರನ್ನು ಕೊಂದ ಪ್ರತೀಕಾರವನ್ನು ಮಾಡುವೆನು.॥11॥

ಮೂಲಮ್ - 12

ನೈವಾಂತರಿಕ್ಷಂ ನ ದಿಶೋ ನ ಚ ದ್ಯೌರ್ನಾಪಿ ಸಾಗರಾಃ ।
ಪ್ರಕಾಶತ್ವಂ ಗಮಿಷ್ಯಂತಿ ಮದ್ಬಾಣ ಜಲದಾವೃತಾಃ ॥

ಅನುವಾದ

ನನ್ನ ಬಾಣಗಳು ಮೇಘಗಳಂತೆ ಎಲ್ಲೆಡೆ ಆವರಿಸಿದಾಗ ಅಂತರಿಕ್ಷ, ಆಕಾಶ, ದಿಕ್ಕುಗಳು, ಸಮುದ್ರ ಹೀಗೆ ಏನೂ ಕಾಣಲಾರದು.॥12॥

ಮೂಲಮ್ - 13

ಅದ್ಯ ವಾನರಮುಖ್ಯಾನಾಂ ತಾನಿ ಯೂಥಾನಿ ಭಾಗಶಃ ।
ಧನುಷಾ ಶರಜಾಲೇನ ವಿಧಮಿಷ್ಯಾಮಿ ಪತತ್ರಿಣಾ ॥

ಅನುವಾದ

ಇಂದು ನನ್ನ ಧನುಸ್ಸಿನಿಂದ ಹೊರಟ ರೆಕ್ಕೆಗಳುಳ್ಳ ಬಾಣಗಳಿಂದ ಬಲೆಯನ್ನು ಹಾಸಿ ವಾನರರ ಮುಖ್ಯ ಮುಖ್ಯ ದಳಪತಿಗಳನ್ನು ಬೇರೆ ಬೇರೆಯಾಗಿ ವಧಿಸುವೆನು.॥13॥

ಮೂಲಮ್ - 14

ಅದ್ಯ ವಾನರಸೈನ್ಯಾನಿ ರಥೇನ ಪವನೌಜಸಾ ।
ಧನುಃ ಸಮುದ್ರಾದುದ್ಭೂತೈರ್ಮಥಿಷ್ಯಾಮಿ ಶರೋರ್ಮಿಭಿಃ ॥

ಅನುವಾದ

ವಾಯುವಿನಂತೆ ವೇಗಶಾಲೀ ರಥದಲ್ಲಿ ಆರೂಢನಾಗಿ ನಾನು ನನ್ನ ಧನುಸ್ಸುರೂಪೀ ಸಮುದ್ರದಿಂದ ಎದ್ದಿರುವ ತರಂಗಗಳಿಂದ ವಾನರ ಸೈನ್ಯವನ್ನು ನಾಶಮಾಡಿ ಬಿಡುವೆನು.॥14॥

ಮೂಲಮ್ - 15

ವ್ಯಾಕೋಶ ಪದ್ಮವಕ್ತ್ರಾಣಿ ಪದ್ಮಕೇಸರ ವರ್ಚಸಾಮ್ ।
ಅದ್ಯ ಯೂಥತಟಾಕಾನಿ ಗಜವತ್ ಪ್ರಮಥಾಮ್ಯಹಮ್ ॥

ಅನುವಾದ

ಕಮಲ ಕೇಸರದಂತೆ ಕಾಂತಿಯುಳ್ಳ ವಾನರರ ಯೂಥಗಳು ಸರೋವರದಂತಿವೆ. ಅವರ ಮುಖಗಳೇ ಆ ಸರೋವರದಲ್ಲಿ ಅರಳಿದ ಕಮಲಗಳಂತೆ ಸುಶೋಭಿತವಾಗಿವೆ. ಇಂದು ನಾನು ಆನೆಯಂತೆ ಅದರಲ್ಲಿ ಪ್ರವೇಶಿಸಿ ಆ ವಾನರ ಯೂಥರೂಪೀ ಸರೋವರವನ್ನು ನಾಶಮಾಡಿ ಬಿಡುವೆನು.॥15॥

ಮೂಲಮ್ - 16

ಸಶರೈರದ್ಯ ವದನೈಃ ಸಂಖ್ಯೇ ವಾನರಯೂಥಪಾಃ ।
ಮಂಡಯಿಷ್ಯಂತಿ ವಸುಧಾಂ ಸನಾಲೈರಿವ ಪಂಕಜೈಃ ॥

ಅನುವಾದ

ಯುದ್ಧರಂಗದಲ್ಲಿ ಬಿದ್ದಿರುವ ವಾನರದಳ ಪತಿಗಳ ಮುಖಗಳು ನನ್ನ ಬಾಣಗಳಿಂದ ವಿದ್ಧವಾಗಿ ತೊಟ್ಟು ಕಳಚಿದ ಕಮಲಗಳಂತೆ ಭ್ರಮೆಯನ್ನುಂಟುಮಾಡುತ್ತಾ ರಣ ಭೂಮಿಯ ಶೋಭೆ ಹೆಚ್ಚಿಸೀತು.॥16॥

ಮೂಲಮ್ - 17

ಅದ್ಯ ಯೂಥಪ್ರಚಂಡಾನಾಂ ಹರೀಣಾಂ ದ್ರುಮಯೋಧಿನಾಮ್ ।
ಮುಕ್ತೇನೈಕೇಷುಣಾ ಯುದ್ಧೇ ಭೇತ್ಸ್ಯಾಮಿ ಚ ಶತಂ ಶತಮ್ ॥

ಅನುವಾದ

ಇಂದು ಯುದ್ಧದಲ್ಲಿ ನನ್ನ ಬಾಣಗಳಿಂದ ವೃಕ್ಷಗಳಿಂದ ಯುದ್ಧಮಾಡುವ ನೂರು ನೂರು ಪ್ರಚಂಡ ವಾನರರನ್ನು ನಾನು ಕೊಂದುಹಾಕುವೆನು.॥17॥

ಮೂಲಮ್ - 18

ಹತೋ ಭ್ರಾತಾ ಚ ಯೇಷಾಂ ವೈಯೇಷಾಂ ಚ ತನಯೋ ಹತಃ ।
ವಧೇನಾದ್ಯ ರಿಪೋಸ್ತೇಷಾಂ ಕರೋಮ್ಯಾಶ್ರು ಪ್ರಮಾರ್ಜನಮ್ ॥

ಅನುವಾದ

ಇಂದು ಶತ್ರುಗಳ ವಧೆಮಾಡಿ ನಾನು-ಅಣ್ಣ-ತಮ್ಮಂದಿರನ್ನು ಕಳೆದುಕೊಂಡು ಗೋಳಾಡುತ್ತಿರುವ ನಿಶಾಚರರ ಕಣ್ಣೀರನ್ನು ಒರೆಸಿಬಿಡುತ್ತೇನೆ.॥18॥

ಮೂಲಮ್ - 19

ಅದ್ಯ ಮದ್ಬಾಣನಿರ್ಭಿನ್ನೈಃ ಪ್ರಸ್ತೀರ್ಣೈರ್ಗತ ಚೇತನೈಃ ।
ಕರೋಮಿ ವಾನರೈರ್ಯುದ್ಧೇ ಯತ್ನಾವೇಕ್ಷ್ಯತಲಾಂ ಮಹೀಮ್ ॥

ಅನುವಾದ

ಯುದ್ಧದಲ್ಲಿ ನನ್ನ ಬಾಣಗಳಿಂದ ಸತ್ತುಹೋದ ವಾನರನು ಅಲ್ಲಿಯ ಭೂಮಿ ಕಷ್ಟದಿಂದ ನೋಡಲು ಸಾಧ್ಯವಾಗುವಂತೆ ಹಾಸಿಬಿಡುವೆನು.॥1.॥

ಮೂಲಮ್ - 20

ಅದ್ಯ ಕಾಕಾಶ್ಚ ಗೃಧ್ರಾಶ್ಚ ಯೇ ಚ ಮಾಂಸಾಶಿನೋಽಪರೇ ।
ಸರ್ವಾಂಸ್ತಾಂ ಸ್ತರ್ಪಯಿಷ್ಯಾಮಿ ಶತ್ರುಮಾಂಸೈಃ ಶರಾಹತೈಃ ॥

ಅನುವಾದ

ಇಂದು ನನ್ನ ಬಾಣಗಳಿಂದ ಕೊಂದಿರುವ ಶತ್ರುಗಳ ಮಾಂಸದಿಂದ ಕಾಗೆಗಳು, ಹದ್ದುಗಳು ಹಾಗೂ ಇತರ ಮಾಂಸಭಕ್ಷೀ ಎಲ್ಲ ಪ್ರಾಣಿಗಳನ್ನು ನಾನು ತೃಪ್ತಿಪಡಿಸುವೆನು.॥20॥

ಮೂಲಮ್ - 21

ಕಲ್ಪ್ಯತಾಂ ಮೇ ರಥಃ ಶೀಘ್ರಂ ಕ್ಷಿಪ್ರಮಾನೀಯತಾಂ ಧನುಃ ।
ಅನುಪ್ರಯಾಂತು ಮಾಂ ಯುದ್ಧೇಯೇಽತ್ರಶಿಷ್ಟಾ ನಿಶಾಚರಾಃ ॥

ಅನುವಾದ

ಬೇಗನೇ ನನ್ನ ರಥವನ್ನು ಸಿದ್ಧಪಡಿಸಿರಿ. ಧನುಸ್ಸನ್ನು ತೆಗೆದುಕೊಂಡು ಬನ್ನಿ. ಸಾಯದೇ ಉಳಿದಿರುವ ನಿಶಾಚರರು ನನ್ನೊಂದಿಗೆ ಯುದ್ಧಕ್ಕೆ ಬರಲಿ.॥21॥

ಮೂಲಮ್ - 22

ತಸ್ಯ ತದ್ವಚನಂ ಶ್ರುತ್ವಾ ಮಹಾಪಾರ್ಶ್ವೋಽಬ್ರವೀದ್ವಚಃ ।
ಬಲಾಧ್ಯಕ್ಷಾನ್ಸ್ಥಿತಾಂಸ್ತತ್ರ ಬಲಂ ಸಂತ್ವರ್ಯತಾಮಿತಿ ॥

ಅನುವಾದ

ರಾವಣನ ಮಾತನ್ನು ಕೇಳಿ ಮಹಾಪಾರ್ಶ್ವನು ಅಲ್ಲೇ ನಿಂತಿರುವ ಸೇನಾಪತಿಗೆ ಸೈನ್ಯವು ಬೇಗನೇ ಹೊರಡುವಂತೆ ಆಜ್ಞಾಪಿಸು ಎಂದು ಹೇಳಿದನು.॥22॥

ಮೂಲಮ್ - 23

ಬಲಾಧ್ಯಕ್ಷಾಸ್ತು ಸಂಯುಕ್ತಾ ರಾಕ್ಷಸಾಂಸ್ತಾನ್ ಗೃಹೇಗೃಹೇ ।
ಚೋದಯಂತಃ ಪರಿಯಯುರ್ಲಂಕಾಂ ಲಘುಪರಾಕ್ರಮಾಃ ॥

ಅನುವಾದ

ಆಜ್ಞೆಯಾಗುತ್ತಲೇ ಆ ಶೀಘ್ರ ಪರಾಕ್ರಮಿ ಸೇನಾಧ್ಯಕ್ಷನು ಮನೆ ಮನೆಗೆ ಹೋಗಿ ರಾಕ್ಷಸರನ್ನು ಹೊರಡಲು ಆದೇಶವನ್ನು ಕೊಡುತ್ತಾ ಇಡೀ ಲಂಕೆಯಲ್ಲಿ ಸುತ್ತಾಡಿದರು.॥23॥

ಮೂಲಮ್ - 24

ತತೋ ಮುಹೂರ್ತಾನ್ನಿಷ್ಪೇತೂ ರಾಕ್ಷಸಾ ಭೀಮದರ್ಶನಾಃ ।
ನದಂತೋ ಭೀಮವದನಾ ನಾನಾ ಪ್ರಹರಣೈರ್ಭುಜೈಃ ॥

ಅನುವಾದ

ಸ್ವಲ್ಪ ಸಮಯದಲ್ಲೇ ಭಯಂಕರ ಮುಖ ಮತ್ತು ಆಕಾರವುಳ್ಳ ರಾಕ್ಷಸರು ಗರ್ಜಿಸುತ್ತಾ ನಾನಾ ರೀತಿಯ ಅಸ್ತ್ರ-ಶಸ್ತ್ರಗಳನ್ನು ಹಿಡಿದು ಅಲ್ಲಿಗೆ ಬಂದು ಸೇರಿದರು.॥24॥

ಮೂಲಮ್ - 25

ಅಸಿಭಿಃ ಪಟ್ಟಿಶೈಃ ಶೂಲೈರ್ಗದಾಭಿರ್ಮುಸಲೈರ್ಹಲೈಃ ।
ಶಕ್ತಿಭಿಸ್ತೀಕ್ಷ್ಣಧಾರಾಭಿರ್ಮಹದ್ಭಿಃ ಕೂಟಮುದ್ಗರೈಃ ॥

ಮೂಲಮ್ - 26

ಯಷ್ಟಿ ಭಿರ್ವಿವಿಧೈಶ್ಚಕ್ರೈರ್ನಿಶಿತೈಶ್ಚ ಪರಶ್ವಧೈಃ ।
ಭಿಂದಿಪಾಲೈಃ ಶತಘ್ನೀಭಿರನ್ಯೈಶ್ಚಾಪಿ ವರಾಯುಧೈಃ ॥

ಅನುವಾದ

ಖಡ್ಗ, ಪಟ್ಟಿಶ, ಶೂಲ, ಗದೆ, ಒನಕೆ, ನೇಗಿಲು, ಹರಿತವಾದ ಶಕ್ತಿ, ದೊಡ್ಡ ದೊಡ್ಡ ಮುದ್ಗರ, ದಂಡ, ಬಗೆ ಬಗೆಯ ಚಕ್ರಗಳು, ತೀಕ್ಷ್ಣಗಂಡು ಕೊಡಲಿ, ಭಿಂದಿಪಾಲ, ಶತಘ್ನಿ ಹಾಗೂ ಇತರ ಅನೇಕ ಪ್ರಕಾರದ ಉತ್ತಮೋತ್ತಮ ಅಸ್ತ್ರ-ಶಸ್ತ್ರಗಳನ್ನು ಅವರು ಧರಿಸಿದ್ದರು.॥25-26॥

ಮೂಲಮ್ - 27

ಅಥಾನಯನ್ ಬಲಾಧ್ಯಕ್ಷಾಶ್ಚತ್ವಾರೋ ರಾವಣಾಜ್ಞಯಾ ।
ರಥಾನಾಂ ನಿಯುತಂ ಸಾಗ್ರಂ ನಾಗಾನಾಂ ನಿಯುತ ತ್ರಯಮ್ ॥

ಮೂಲಮ್ - 28

ಅಶ್ವಾನಾಂ ಷಷ್ಟಿಕೋಟ್ಯಸ್ತು ಖರೋಷ್ಟ್ರಾಣಾಂ ತಥೈವ ಚ ।
ಪದಾತಯಸ್ತ್ವಸಂಖ್ಯಾತಾ ಜಗ್ಮುಸ್ತೇ ರಾಜಶಾಸನಾತ್ ॥

ಅನುವಾದ

ರಾವಣನ ಆಜ್ಞೆಯಂತೆ ನಾಲ್ವರು ಸೇನಾಪತಿಗಳು ಒಂದು ಲಕ್ಷಕ್ಕೂ ಮಿಕ್ಕಿದ ರಥಗಳು, ಮೂರು ಲಕ್ಷ ಆನೆ, ಅರವತ್ತು ಕೋಟಿ ಕುದುರೆಗಳು, ಅಷ್ಟೇ ಕತ್ತೆಗಳು ಮತ್ತು ಒಂಟೆಗಳು, ಅಸಂಖ್ಯ ಪದಾತಿಗಳೊಂದಿಗೆ ಅಲ್ಲಿಗೆ ಬಂದು ಸೇರಿದರು. ಆ ಎಲ್ಲ ಸೈನಿಕರು ರಾಜನ ಆದೇಶದಂತೆ ಬಂದಿದ್ದರು.॥27-28॥

ಮೂಲಮ್ - 29

ಬಲಾಧ್ಯಕ್ಷಾಶ್ಚ ಸಂಸ್ಥಾಪ್ಯ ರಾಜ್ಞಃ ಸೇನಾಂ ಪುರಃ ಸ್ಥಿತಾಮ್ ।
ಏತಸ್ಮಿನ್ನಂತರೇ ಸೂತಃಸ್ಥಾಪಯಾಮಾಸ ತಂ ರಥಮ್ ॥

ಅನುವಾದ

ಈ ಪ್ರಕಾರ ವಿಶಾಲಸೈನ್ಯವನ್ನು ಸೇನಾಧ್ಯಕ್ಷರು ರಾವಣನ ಎದುರಿಗೆ ತಂದು ನಿಲ್ಲಿಸಿದರು. ಆಗಲೇ ಸಾರಥಿಯು ಒಂದು ರಥವನ್ನು ತಂದು ನಿಲ್ಲಿಸಿದನು.॥29॥

ಮೂಲಮ್ - 30

ದಿವ್ಯಸ್ತ್ರವರಸಂಪನ್ನಂ ನಾನಾಲಂಕಾರಭೂಷಿತಮ್ ।
ನಾನಾಯುಧ ಸಮಾಕೀರ್ಣಂ ಕಿಂಕಿಣೀ ಜಾಲಮಂಡಿತಮ್ ॥

ಅನುವಾದ

ಆ ರಥವನ್ನು ಅನೇಕ ಪ್ರಕಾರದಿಂದ ಅಲಂಕರಿಸಲಾಗಿತ್ತು. ಅದರಲ್ಲಿ ಬಗೆ ಬಗೆಯ ಆಯುಧಗಳನ್ನು, ದಿವ್ಯಾಸ್ತ್ರಗಳನ್ನು ಇರಿಸಲಾಗಿತ್ತು. ಅದು ಗೆಜ್ಜೆಗಳಿರುವ ಪರದೆಗಳಿಂದ ಸುಶೋಭಿತವಾಗಿತ್ತು.॥30॥

ಮೂಲಮ್ - 31

ನಾನಾರತ್ನಪರಿಕ್ಷಿಪ್ತಂ ರತ್ನಸ್ತಂಭೈರ್ವಿರಾಜಿತಮ್ ।
ಜಾಂಬೂನದಮಯೈಶ್ಚೈವ ಸಹಸ್ರಕಲಶೈರ್ವತಮ್ ॥

ಅನುವಾದ

ಅದರಲ್ಲಿ ನಾನಾ ವಿಧದ ರತ್ನಗಳನ್ನು ಜೋಡಿಸಿದ್ದರು. ಅದನ್ನು ರತ್ನಮಯ ಕಂಬಗಳಿಂದ, ಸ್ವರ್ಣ ನಿರ್ಮಿತ ಸಾವಿರಾರು ಕಲಶಗಳಿಂದ ಅಲಂಕೃತವಾಗಿತ್ತು.॥31॥

ಮೂಲಮ್ - 32

ತಂ ದೃಷ್ಟ್ವಾ ರಾಕ್ಷಸಾಃ ಸರ್ವೇ ವಿಸ್ಮಯಂ ಪರಮಂಗತಾಃ ।
ತಂ ದೃಷ್ಟ್ವಾ ಸಹಸೋತ್ಥಾಯ ರಾವಣೋ ರಾಕ್ಷಸೇಶ್ವರಃ ॥

ಮೂಲಮ್ - 33

ಕೋಟಿಸೂರ್ಯ ಪ್ರತೀಕಾಶಂ ಜ್ವಲಂತಮಿವ ಪಾವಕಮ್ ।
ದ್ರುತಂ ಸೂತಸಮಾಯುಕ್ತಂ ಯುಕ್ತಾಷ್ಟತುರಗಂ ರಥಮ್ ।
ಆರುರೋಹ ತದಾ ಭೀಮಂ ದೀಪ್ಯಮಾನಂ ಸ್ವತೇಜಸಾ ॥

ಅನುವಾದ

ಆ ರಥವನ್ನು ನೋಡಿ ರಾಕ್ಷಸರೆಲ್ಲ ಅತ್ಯಂತ ಆಶ್ಚರ್ಯಚಕಿತರಾದರು. ಅದನ್ನು ನೋಡುತ್ತಲೇ ರಾವಣನು ಎದ್ದು ನಿಂತನು. ಆ ರಥವು ಕೋಟಿ ಸೂರ್ಯರಂತೆ ತೇಜಸ್ವೀ ಹಾಗೂ ಪ್ರಜ್ವಲಿತ ಅಗ್ನಿಯಂತೆ ಹೊಳೆಯುತ್ತಿತ್ತು. ಅದಕ್ಕೆ ಎಂಟು ಕುದುರೆಗಳನ್ನು ಹೂಡಿದ್ದರು. ಆ ರಥವು ತನ್ನ ತೇಜದಿಂದ ಪ್ರಕಾಶಿತವಾಗಿತ್ತು. ಸಾರಥಿಯಿಂದೊಡಗೂಡಿದ ಆ ಭಯಂಕರ ರಥದಲ್ಲಿ ರಾವಣನು ಆರೂಢನಾದನು.॥32-33॥

ಮೂಲಮ್ - 34

ತತಃ ಪ್ರಯಾತಃ ಸಹಸಾ ರಾಕ್ಷಸೈರ್ಬಹುಭಿರ್ವೃತಃ ।
ರಾವಣಃ ಸತ್ತ್ವ ಗಾಂಭೀರ್ಯಾದ್ದಾರಯನ್ನಿವ ಮೇದಿನೀಮ್ ॥

ಅನುವಾದ

ಅನಂತರ ಅನೇಕ ರಾಕ್ಷಸರಿಂದ ಸುತ್ತುವರಿದ ರಾವಣನು ಯುದ್ಧಕ್ಕಾಗಿ ಹೊರಟನು. ಹೆಚ್ಚಾದ ಬಲದಿಂದ ಅವನು ಪೃಥಿವಿಯನ್ನು ಸೀಳಿಬಿಡುವನೋ ಎಂಬಂತೆ ಹೋಗುತ್ತಿದ್ದನು.॥34॥

ಮೂಲಮ್ - 35

ತತಶ್ಚಾಸೀನ್ಮಹಾನಾದಸ್ತೂರ್ಯಾಣಾಂ ಚ ತತಸ್ತತಃ ।
ಮೃದಂಗೈಃ ಪಟಹೈಃ ಶಂಖೈಃ ಕಲಹೈಃ ಸಹ ರಕ್ಷಸಾಮ್ ॥

ಅನುವಾದ

ಮತ್ತೆ ಎಲ್ಲೆಡೆ ವಾದ್ಯಗಳು ಮೊಳಗಿದವು. ಮೃದಂಗ, ಭೇರಿ, ಶಂಖನಾದದೊಂದಿಗೆ ರಾಕ್ಷಸರ ಕೋಲಾಹಲದ ಧ್ವನಿಯು ಸೇರಿಕೊಂಡಿತು.॥35॥

ಮೂಲಮ್ - 36

ಆಗತೋ ರಕ್ಷಸಾಂ ರಾಜಾ ಛತ್ರಚಾಮರಸಂಯುತಃ ।
ಸೀತಾಪಹಾರೀ ದುರ್ವೃತ್ತೋ ಬ್ರಹ್ಮಘ್ನೋ ದೇವಕಂಟಕಃ ।
ಯೋದ್ಧುಂ ರಘುವರೇಣೇತಿ ಶುಶ್ರುವೇ ಕಲಹಧ್ವನಿಃ ॥

ಅನುವಾದ

ಸೀತಾಪಹಾರೀ, ದುರಾಚಾರೀ, ಬ್ರಹ್ಮಹತ್ಯೆ ಮಾಡಿರುವ, ದೇವತೆ ಗಳ ಕಂಟಕರೂಪೀ ರಾಕ್ಷಸರಾಜ ರಾವಣನು ಛತ್ರ-ಚಾಮರಗಳೊಡನೆ ಶ್ರೀರಾಮನೊಂದಿಗೆ ಯುದ್ಧಮಾಡಲು ಬರುತ್ತಿದ್ದಾನೆ ಎಂಬ ಜನರ ಮಾತು ಎಲ್ಲೆಡೆ ಕೇಳಿಬರುತ್ತಿತ್ತು.॥36॥

ಮೂಲಮ್ - 37

ತೇನ ನಾದೇನ ಮಹತಾ ಪೃಥಿವೀ ಸಮಕಂಪತ ।
ತಂ ಶಬ್ದಂ ಸಹಸಾ ಶ್ರುತ್ವಾ ವಾನರಾ ದುದ್ರುವುರ್ಭಯಾತ್ ॥

ಅನುವಾದ

ಆ ಮಹಾನಾದದಿಂದ ಭೂಮಿ ನಡುಗಿತು. ಆ ಭಯಾನಕ ಶಬ್ದಕೇಳಿ ವಾನರರೆಲ್ಲ ಭಯದಿಂದ ಓಡಿಹೋದರು.॥37॥

ಮೂಲಮ್ - 38

ರಾವಣಸ್ತು ಮಹಾಬಾಹುಃ ಸಚಿವೈಃ ಪರಿವಾರಿತಃ ।
ಆಜಗಾಮ ಮಹಾತೇಜಾ ಜಯಾಯ ವಿಜಯಂ ಪ್ರತಿ ॥

ಅನುವಾದ

ಮಂತ್ರಿಗಳಿಂದ ಪರಿವೃತನಾದ ಮಹಾತೇಜಸ್ವೀ, ಮಹಾಬಾಹು ರಾವಣನು ಯುದ್ಧದಲ್ಲಿ ವಿಜಯ ಪಡೆಯುವ ಉದ್ದೇಶದಿಂದ ರಣರಂಗಕ್ಕೆ ಬಂದನು.॥38॥

ಮೂಲಮ್ - 39

ರಾವಣೇನಾಭ್ಯನುಜ್ಞಾತೌ ಮಹಾಪಾರ್ಶ್ವ ಮಹೋದರೌ ।
ವಿರೂಪಾಕ್ಷಶ್ಚ ದುರ್ಧರ್ಷೋ ರಥಾನಾರುರುಹುಸ್ತದಾ ॥

ಅನುವಾದ

ರಾವಣನ ಆಜ್ಞೆಯನ್ನು ಪಡೆದು ಆಗ ಮಹಾಪಾರ್ಶ್ವ, ಮಹೋದರ, ದುರ್ಜಯ ವೀರ ವಿರೂಪಾಕ್ಷ - ಈ ಮೂವರೂ ರಥಗಳಲ್ಲಿ ಕುಳಿತುಕೊಂಡರು.॥39॥

ಮೂಲಮ್ - 40

ತೇ ತು ಹೃಷ್ಟಾ ವಿನರ್ದಂತೋ ಭಿಂದಂತ ಇವ ಮೇದಿನೀಮ್ ।
ನಾದಂ ಘೋರಂ ವಿಮುಂಚಂತೋ ನಿರ್ಯಯುರ್ಜಯಕಾಂಕ್ಷಿಣಃ ॥

ಅನುವಾದ

ಅವರು ಹರ್ಷದಿಂದ ಭೂಮಿಯನ್ನೇ ಸೀಳಿ ಹಾಕುವೆವು ಎಂದು ಜೋರುಜೋರಾಗಿ ಗರ್ಜಿಸುತ್ತಿದ್ದರು. ವಿಜಯದ ಇಚ್ಛೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಘೋರ ಸಿಂಹನಾದ ಮಾಡುತ್ತಾ ಲಂಕೆಯಿಂದ ಹೊರಟರು.॥40॥

ಮೂಲಮ್ - 41

ತತೋ ಯುದ್ಧಾಯ ತೇಜಸ್ವೀ ರಕ್ಷೋಗಣಬಲೈರ್ವೃತಃ ।
ನಿರ್ಯಯಾವುದ್ಯತಧನುಃ ಕಾಲಾಂತ ಕಯಮೋಪಮಃ ॥

ಅನುವಾದ

ಅನಂತರ ಕಾಲ, ಮೃತ್ಯು, ಯಮನಂತೆ ಭಯಂಕರ ತೇಜಸ್ವೀ ರಾವಣನು ಧನುಸ್ಸನ್ನೆತ್ತಿಕೊಂಡು ರಾಕ್ಷಸ ಸೈನ್ಯದಿಂದ ಸುತ್ತುವರೆದು ಯುದ್ಧಕ್ಕಾಗಿ ಮುಂದರಿದನು.॥41॥

ಮೂಲಮ್ - 42

ತತಃ ಪ್ರಜವಿತಾಶ್ವೇನ ರಥೇನ ಸ ಮಹಾರಥಃ ।
ದ್ವಾರೇಣ ನಿರ್ಯಯೌ ತೇನ ಯತ್ರ ತೌ ರಾಮಲಕ್ಷ್ಮಣೌ ॥

ಅನುವಾದ

ಅತಿ ವೇಗವಾಗಿ ಓಡುವ ರಥದ ಕುದುರೆಗಳಿಂದ ಆ ಮಹಾರಥೀ ವೀರನು ಶ್ರೀರಾಮ-ಲಕ್ಷ್ಮಣರು ನಿಂತಿದ್ದಲ್ಲಿಗೆ ಲಂಕೆಯ ದ್ವಾರದಿಂದ ಹೊರಗೆ ಬಂದನು.॥42॥

ಮೂಲಮ್ - 43

ತತೋ ನಷ್ಟಪ್ರಭಃ ಸೂರ್ಯೋ ದಿಶಶ್ಚ ತಿಮಿರಾವೃತಾಃ ।
ದ್ವಿಜಾಶ್ಚ ನೇದುರ್ಘೋರಾಶ್ಚ ಸಂಚಚಾಲ ಚ ಮೇದಿನೀ ॥

ಅನುವಾದ

ಆಗ ಸೂರ್ಯನ ಪ್ರಭೆ, ಮಂಕಾಯಿತು. ಎಲ್ಲ ದಿಕ್ಕುಗಳಲ್ಲಿ ಅಂಧಕಾರ ಆವರಿಸಿತು. ಭಯಂಕರ ಪಕ್ಷಿಗಳು ಕೆಟ್ಟದಾಗಿ ಕೂಗತೊಡಗಿದವು. ಭೂಮಿ ನಡುಗತೊಡಗಿತು.॥43॥

ಮೂಲಮ್ - 44

ವವರ್ಷ ರುಧಿರಂ ದೇವಶ್ಚಸ್ಖಲುಶ್ಚ ತುರಂಗಮಾಃ ।
ಧ್ವಜಾಗ್ರೇ ನ್ಯಪತದ್ಗೃಧ್ರೋ ವಿನೇದುಶ್ಚಾಶಿವಂ ಶಿವಾಃ ॥

ಅನುವಾದ

ಮೋಡಗಳು ರಕ್ತದ ಮಳೆ ಸುರಿಸಿದವು. ಕುದುರೆಗಳು ಎಡವಿ ಬಿದ್ದವು. ಧ್ವಜಾಗ್ರದಲ್ಲಿ ಹದ್ದು ಬಂದು ಕುಳಿತುಕೊಂಡಿತು. ಗುಳ್ಳೆ ನರಿಗಳು ಅಮಂಗಳವಾಗಿ ಊಳಿಡ ತೊಡಗಿದವು.॥44॥

ಮೂಲಮ್ - 45

ನಯನಂ ಚಾಸ್ಫುರದ್ವಾಮಂ ವಾಮೋ ಬಾಹುರಕಂಪತ ।
ವಿವರ್ಣವದನಚಾಸೀತ್ ಕಿಂಚಿದಭ್ರಶ್ಯತ ಸ್ವನಃ ॥

ಅನುವಾದ

ರಾವಣನ ಎಡ ಕಣ್ಣು, ಎಡ ಭುಜ ಅದುರತೊಡಗಿತು. ಮುಖ ಮಂಕಾಯಿತು. ದನಿಯೂ ಬದಲಾಯಿಸಿತು.॥45॥

ಮೂಲಮ್ - 46

ತತೋ ನಿಷ್ಪತತೋ ಯುದ್ಧೇ ದಶಗ್ರೀವಸ್ಯ ರಕ್ಷಸಃ ।
ರಣೇ ನಿಧನ ಶಂಸೀನಿ ರೂಪಾಣ್ಯೇತಾನಿ ಜಜ್ಞಿರೇ ॥

ಅನುವಾದ

ರಾಕ್ಷಸ ದಶಗ್ರೀವನು ಯುದ್ಧಕ್ಕಾಗಿ ಹೊರಡುತ್ತಲೇ ರಣ ಭೂಮಿಯಲ್ಲಿ ಅವನ ಮೃತ್ಯು ಸೂಚಕ ಲಕ್ಷಣಗಳು ಪ್ರಕಟವಾದುವು.॥46॥

ಮೂಲಮ್ - 47

ಅಂತರಿಕ್ಷಾತ್ ಪಪಾತೋಲ್ಕಾ ನಿರ್ಘಾತಸಮನಿಃಸ್ವನಾ ।
ವಿನೇದುರಶಿವಾ ಗೃಧ್ರಾ ವಾಯಸೈರಭಿಮಿಶ್ರಿತಾಃ ॥

ಅನುವಾದ

ಆಕಾಶದಿಂದ ಉಲ್ಕಾಪಾತವಾಯಿತು. ಸಿಡಿಲು ಬಡಿದಂತೆ ಭಾರೀ ಶಬ್ದವಾಯಿತು. ಅಮಂಗಲ ಸೂಚಕ ಹದ್ದುಗಳು, ಕಾಗೆಗಳು ಸೇರಿ ವಿಕಾರ ಸ್ವರದಿಂದ ಕೂಗತೊಡಗಿದವು.॥47॥

ಮೂಲಮ್ - 48

ಏತಾನಚಿಂತಯನ್ ಘೋರಾನುತ್ಪಾತಾನ್ ಸಮವಸ್ಥಿತಾನ್ ।
ನಿರ್ಯಯೌ ರಾವಣೋ ಮೋಹಾಧಾರ್ಥಂ ಕಾಲಚೋದಿತಃ ॥

ಅನುವಾದ

ಇಂತಹ ಭಯಂಕರ ಉತ್ಪಾತಗಳು ಇದಿರಾದರೂ ರಾವಣನು ಅವನ್ನು ಪರಿಗಣಿಸಲಿಲ್ಲ. ಅವನು ಕಾಲಪ್ರೇರಿತನಾಗಿಯೇ ಮೋಹವಶ ತನ್ನ ಮೃತ್ಯುವಿಗಾಗಿಯೇ ಹೊರಟಿದ್ದನು.॥48॥

ಮೂಲಮ್ - 49

ತೇಷಾಂ ತು ರಥಘೋಷೇಣ ರಾಕ್ಷಸಾನಾಂ ಮಹಾತ್ಮನಾಮ್ ।
ವಾನರಾಣಾಮಪಿ ಚಮೂರ್ಯುದ್ಧಾಯೈವಾಭ್ಯವರ್ತತ ॥

ಅನುವಾದ

ಆ ಮಹಾಕಾಯ ರಾಕ್ಷಸರ ರಥಗಳ ಗಂಭೀರ ಘೋಷ ಕೇಳಿ ವಾನರ ಸೈನ್ಯ ಯುದ್ಧಕ್ಕಾಗಿ ಅವರ ಎದುರಿಗೆ ಬಂದು ಸಿದ್ಧನಾಗಿ ನಿಂತಿತು.॥49॥

ಮೂಲಮ್ - 50

ತೇಷಾಂ ತು ತುಮುಲಂ ಯುದ್ಧಂ ಬಭೂವ ಕಪಿರಕ್ಷಸಾಮ್ ।
ಅನ್ಯೋನ್ಯಮಾಹ್ವಯಾನಾನಾಂ ಕ್ರುದ್ಧಾನಾಂ ಜಯಮಿಚ್ಛತಾಮ್ ॥

ಅನುವಾದ

ಮತ್ತೆ ತಮ್ಮ ತಮ್ಮ ವಿಜಯವನ್ನು ಬಯಸುತ್ತಾ ರೋಷದಿಂದ ಒಬ್ಬರು ಮತ್ತೊಬ್ಬರನ್ನು ಯುದ್ಧಕ್ಕಾಗಿ ಆಹ್ವಾನಿಸುತ್ತಾ ವಾನರರಲ್ಲಿ ಮತ್ತು ರಾಕ್ಷಸರಲ್ಲಿ ತುಮುಲ ಯುದ್ಧ ಪ್ರಾರಂಭವಾಯತು.॥50॥

ಮೂಲಮ್ - 51

ತತಃ ಕ್ರುದ್ಧೋ ದಶಗ್ರೀವಃ ಶರೈಃ ಕಾಂಚನಭೂಷಣೈಃ ।
ವಾನರಾಣಾಮನೀಕೇಷು ಚಕಾರ ಕದನಂ ಮಹತ್ ॥

ಅನುವಾದ

ಆಗ ದಶಮುಖ ರಾವಣನು ತನ್ನ ಸ್ವರ್ಣಭೂಷಿತ ಬಾಣಗಳಿಂದ ವಾನರ ಸೈನ್ಯವನ್ನು ರೋಷದಿಂದ ಸಂಹಾರ ಕಾರ್ಯ ಮಾಡತೊಡಗಿದನು.॥51॥

ಮೂಲಮ್ - 52

ನಿಕೃತ್ತ ಶಿರಸಃ ಕೇಚಿದ್ರಾವಣೇನ ವಲೀಮುಖಾಃ ।
ಕೇಚಿದ್ವಿಚ್ಛಿನ್ನಹೃದಯಾಃ ಕೇಚಿಚ್ಛ್ರೋತ್ರ ವಿವರ್ಜಿತಾಃ ॥

ಅನುವಾದ

ರಾವಣನು ಎಷ್ಟೋ ವಾನರರ ತಲೆ ಕಡಿದು ಹಾಕಿದನು. ಅನೇಕ ವಾನರರ ಎದೆ ಸೀಳಿಹಾಕಿದನು. ಅನೇಕರ ಕಿವಿಗಳನ್ನು ಕತ್ತರಿಸಿಹಾಕಿದನು.॥52॥

ಮೂಲಮ್ - 53

ನಿರುಚ್ಛ್ವಾಸಾ ಹತಾಃ ಕೇಚಿತ್ಕೇಚಿತ್ಪಾರ್ಶ್ವೇಷು ದಾರಿತಾಃ ।
ಕೇಚಿದ್ ವಿಭಿನ್ನಶಿರಸಃ ಕೇಚಿಚ್ಚಕ್ಷುರ್ವಿನಾಕೃತಾಃ ॥

ಅನುವಾದ

ಎಷ್ಟೋ ವಾನರರು ಗಾಯಗೊಂಡು ಪ್ರಾಣತ್ಯಾಗ ಮಾಡಿದರು. ರಾವಣನು ಎಷ್ಟೋ ವಾನರ ಪಕ್ಕೆಗಳನ್ನು ಸೀಳಿದನು. ಎಷ್ಟೋ ವಾನರ ಮಸ್ತಕ ಉರುಳಿಸಿದನು. ಎಷ್ಟೋ ವಾನರರ ಕಣ್ಣು ಕಿತ್ತುಹಾಕಿದನು.॥53॥

ಮೂಲಮ್ - 54

ದಶಾನನಃ ಕ್ರೋಧನಿವೃತ್ತ ನೇತ್ರೋ
ಯತೋ ಯತೋಽಭ್ಯೇತಿ ರಥೇನ ಸಂಖ್ಯೇ ।
ತತಸ್ತತಸ್ತಸ್ಯ ಶರಪ್ರವೇಗಂ
ಸೋಢುಂ ನ ಶೇಕುರ್ಹರಿಯೂಥಪಾಸ್ತೇ ॥

ಅನುವಾದ

ದಶಮುಖ ರಾವಣನ ಕಣ್ಣುಗಳು ಕ್ರೋಧದಿಂದ ಗರಗರನೆ ತಿರುಗುತ್ತಿದ್ದವು. ಅವನು ಯುದ್ಧದಲ್ಲಿ ರಥದಿಂದ ಹೋಗುವಲ್ಲೆಲ್ಲ ವಾನರ ಯೂಥಪತಿಗಳು ಅವನ ವೇಗವನ್ನು ಸಹಿಸದಾದರು.॥5.॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ತೊಂಭತ್ತೈದನೆಯ ಸರ್ಗ ಪೂರ್ಣವಾಯಿತು.॥95॥