०९४ राक्षसीभिः प्रलापः

वाचनम्
ಭಾಗಸೂಚನಾ

ರಾಕ್ಷಸಿಯರ ಪ್ರಲಾಪ

ಮೂಲಮ್ - 1

ತಾನಿ ನಾಗ ಸಹಸ್ರಾಣಿ ಸಾರೋಹಾಣಿ ಚ ವಾಜಿನಾಮ್ ।
ರಥಾನಾಂ ತ್ವಗ್ನಿವರ್ಣಾನಾಂ ಸಧ್ವಜಾನಾಂ ಸಹಸ್ರಶಃ ॥

ಮೂಲಮ್ - 2

ರಾಕ್ಷಸಾನಾಂ ಸಹಸ್ರಾಣಿ ಗದಾಪರಿಘಯೋಧಿನಾಮ್ ।
ಕಾಂಚನಧ್ವಜ ಚಿತ್ರಾಣಾಂ ಶೂರಾಣಾಂ ಕಾಮರೂಪಿಣಾಮ್ ॥

ಮೂಲಮ್ - 3

ನಿಹತಾನಿ ಶರೈರ್ದೀಪ್ತೈ ಸ್ತಪ್ತಕಾಂಚನಭೂಷಣೈಃ ।
ರಾವಣೇನ ಪ್ರಯುಕ್ತಾನಿ ರಾಮೇಣಾಕ್ಷಿಷ್ಟ ಕರ್ಮಣಾ ॥

ಮೂಲಮ್ - 4

ದೃಷ್ಟ್ವಾಶ್ರುತ್ವಾಚ ಸಂಭ್ರಾಂತಾಹತಶೇಷಾನಿಶಾಚರಾಃ ।
ರಾಕ್ಷಸ್ಯಶ್ಚ ಸಮಾಗಮ್ಯ ದೀನಾಶ್ಚಿಂತಾಪರಿಪ್ಲುತಾಃ ॥

ಅನುವಾದ

ಅನಾಯಾಸವಾಗಿ ಮಹಾ ಪರಾಕ್ರಮ ತೋರುವ ಶ್ರೀರಾಮನು ಕಾದಚಿನ್ನದಿಂದ ವಿಭೂಷಿತವಾದ ಬಾಣಗಳಿಂದ ರಾವಣನು ಕಳಿಸಿದ ಸಾವಿರಾರು ಆನೆಗಳನ್ನು, ಸಾವಿರಾರು ಅಶ್ವದಳವನ್ನು, ಅಗ್ನಿಯಂತೆ ಹೊಳೆಯುವ ಧ್ವಜಗಳಿಂದ ಸುಶೋಭಿತವಾದ ಸಾವಿರಾರು ರಥಗಳನ್ನು, ಕಾಮರೂಪಿಗಳಾದ ಸುವರ್ಣಧ್ವಜಗಳಿಂದ ಸುಶೋಭಿತರಾದ, ಗದೆ, ಪರಿಘಗಳಿಂದ ಯುದ್ಧಮಾಡುವ ಸಾವಿರಾರು ಶೂರ ರಾಕ್ಷಸರನ್ನು ಸಂಹರಿಸಿದುದನ್ನು ನೋಡಿ-ಕೇಳಿ ಬದುಕುಳಿದ ನಿಶಾಚರರು ಗಾಬರಿಗೊಂಡು, ಲಂಕೆಗೆ ಹೋಗಿ ರಾಕ್ಷಸಿಯರನ್ನು ಕಂಡು ದುಃಖಿತರಾಗಿ ಚಿಂತಾಮಗ್ನರಾದರು.॥1-4॥

ಮೂಲಮ್ - 5

ವಿಧವಾ ಹತಪುತ್ರಾಶ್ಚ ಕ್ರೋಶಂತ್ಯೋ ಹತಬಾಂಧವಾಃ ।
ರಾಕ್ಷಸ್ಯಃ ಸಹ ಸಂಗಮ್ಯ ದುಃಖಾರ್ತಾಃ ಪರ್ಯದೇವಯನ್ ॥

ಅನುವಾದ

ತಮ್ಮ ಪತಿಗಳು, ಪುತ್ರರು, ಸಹೋದರರು ಮಡಿದು ಹೋದವರ ಅನಾಥ ರಾಕ್ಷಸಿಯರು ಗುಂಪುಗುಂಪಾಗಿ ಒಂದೆಡೆ ಸೇರಿ ದುಃಖದಿಂದ ಪೀಡಿತರಾಗಿ ವಿಲಾಪಿಸತೊಡಗಿದರು.॥5॥

ಮೂಲಮ್ - 6

ಕಥಂ ಶೂರ್ಪಣಖಾ ವೃದ್ಧಾ ಕರಾಲಾ ನಿರ್ಣತೋದರೀ ।
ಆಸಸಾದ ವನೇ ರಾಮಂ ಕಂದರ್ಪಮಿವರೂಪಿಣಮ್ ॥

ಅನುವಾದ

ಅಯ್ಯೋ! ಜೋತುಬಿದ್ದಿರುವ ಹೊಟ್ಟೆಯಿಂದ ಕೂಡಿದ್ದ, ಕರಾಳರೂಪಿಯಾಗಿದ್ದ, ವೃದ್ದೆಯಾದ ಈ ಶೂರ್ಪಣಖಿಯು ಅರಣ್ಯದಲ್ಲಿ ಮನ್ಮಥನಂತೆ ರೂಪವುಳ್ಳ ಶ್ರೀರಾಮನ ಬಳಿಗೆ ಕಾಮಭಾವದಿಂದ ಹೇಗೆ ತಾನೇ ಹೋದಳು? ಅಲ್ಲಿಗೆ ಹೋಗುವ ಸಾಹಸ ಏಕೆ ಮಾಡಿದಳು.॥6॥

ಮೂಲಮ್ - 7

ಸುಕುಮಾರಂ ಮಹಾಸತ್ತ್ವಂ ಸರ್ವಭೂತಹಿತೇ ರತಮ್ ।
ತಂ ದೃಷ್ಟ್ವಾಲೋಕವಧ್ಯಾ ಸಾ ಹೀನರೂಪಾ ಪ್ರಕಾಮಿತಾ ॥

ಅನುವಾದ

ಶ್ರೀರಾಮನಾದರೋ ಸುಕುಮಾರನೂ, ಮಹಾಬಲಶಾಲಿಯೂ, ಸಮಸ್ತ ಪ್ರಾಣಿಗಳ ಹಿತದಲ್ಲಿ ಸಂಲಗ್ನನೂ ಆಗಿದ್ದಾನೆ. ಅವನನ್ನು ನೋಡಿ ಕುರೂಪಿ ರಾಕ್ಷಸಿ ಅವನ ಕುರಿತು ಕಾಮಭಾವದಿಂದ ಯುಕ್ತಳಾದುದು ಎಂತಹ ದುಃಸಾಹಸವಾಗಿದೆ? ಈ ದುಷ್ಟಳು ಎಲ್ಲರಿಂದ ಕೊಲ್ಲಲು ಯೋಗ್ಯವಾಗಿದ್ದಾಳೆ.॥7॥

ಮೂಲಮ್ - 8

ಕಥಂ ಸರ್ವಗುಣೈರ್ಹೀನಾ ಗುಣವಂತಂ ಮಹೌಜಸಮ್ ।
ಸುಮುಖಂ ದುರ್ಮುಖೀ ರಾಮಂ ಕಾಮಯಾಮಾಸ ರಾಕ್ಷಸೀ ॥

ಅನುವಾದ

ಸರ್ವಗುಣ ಸಂಪನ್ನ, ಮಹಾ ಬಲಶಾಲಿ, ಸುಂದರ ಮುಖವುಳ್ಳ ಶ್ರೀರಾಮನೆಲ್ಲಿ? ಎಲ್ಲ ಗುಣಗಳಿಂದ ಹೀನಳೂ, ದುರ್ಮುಖಿಯೂ ಆದ ಈ ರಾಕ್ಷಸಿ ಎಲ್ಲಿ? ರಾಮನಲ್ಲಿ ಈಕೆ ಹೇಗೆ ಕಾಮಭಾವ ತಳೆದಳು.॥8॥

ಮೂಲಮ್ - 9

ಜನಸ್ಯಾಸ್ಯಾಲ್ಪಭಾಗ್ಯತಾದ್ ವಲಿನೀ ಶ್ವೇತಮೂರ್ಧಜಾ ।
ಅಕಾರ್ಯಮಪಹಾಸ್ಯಂ ಚ ಸರ್ವಲೋಕವಿಗರ್ಹಿತಮ್ ॥

ಮೂಲಮ್ - 10

ರಾಕ್ಷಸಾನಾಂ ವಿನಾಶಾಯ ದೂಷಣಸ್ಯ ಖರಸ್ಯ ಚ ।
ಚಕಾರಾಪ್ರತಿರೂಪಾ ಸಾ ರಾಘವಸ್ಯ ಪ್ರಧರ್ಷಣಮ್ ॥

ಅನುವಾದ

ಸರ್ವಾಂಗದಲ್ಲಿ ನೆರಿಗೆ ಬಿದ್ದಿರುವ, ತಲೆಯ ಕೂದಲು ಬೆಳ್ಳಗಾದ ಈಕೆ ಯಾವ ದೃಷ್ಯಿಯಿಂದಲೂ ಶ್ರೀರಾಮನಿಗೆ ಯೋಗ್ಯಳಲ್ಲ. ಆ ದುಷ್ಟೆಯು ಲಂಕಾವಾಸಿಗಳಾದ ನಮ್ಮ ದುರ್ಭಾಗ್ಯದಿಂದಲೇ ಖರ-ದೂಷಣ ಹಾಗೂ ಇತರ ರಾಕ್ಷಸರ ವಿನಾಶಕ್ಕಾಗಿ ಶ್ರೀರಾಮನನ್ನು ಸ್ಪರ್ಶಿಸಿ ದೂಷಿತಗೊಳಿಸುವ ಪ್ರಯತ್ನ ಮಾಡಿದ್ದಳು.॥9-10॥

ಮೂಲಮ್ - 11

ತನ್ನಿಮಿತ್ತಮಿದಂ ವೈರಂ ರಾವಣೇನ ಕೃತಂ ಮಹತ್ ।
ವಧಾಯ ಸೀತಾ ಸಾಽಽನೀತಾ ದಶಗ್ರೀವೇಣ ರಕ್ಷಸಾ ॥

ಅನುವಾದ

ಆಕೆಯ ಕಾರಣದಿಂದಲೇ ದಶಮುಖ ರಾವಣನು ಈ ಮಹಾ ವೈರವನ್ನು ಕಟ್ಟಿಕೊಂಡನು ಹಾಗೂ ರಾಕ್ಷಸ ಕುಲದ ವಧೆಗಾಗಿ ಅವನು ಸೀತೆಯನ್ನು ಕದ್ದುತಂದನು.॥11॥

ಮೂಲಮ್ - 12

ನ ಚ ಸೀತಾಂ ದಶಗ್ರೀವಃ ಪ್ರಾಪ್ನೋತಿ ಜನಕಾತ್ಮಜಾಮ್ ।
ಬದ್ಧಂ ಬಲವತಾ ವೈರಮಕ್ಷಯ್ಯ ರಾಘವೇಣ ಚ ॥

ಅನುವಾದ

ದಶಮುಖ ರಾವಣನು ಜನಕನಂದಿನೀ ಸೀತೆಯನ್ನು ಎಂದಿಗೂ ಪಡೆಯಲಾರನು; ಆದರೆ ಅವನು ಬಲವಂತ ರಘುನಾಥನೊಂದಿಗೆ ತೀರದಿರುವ ವೈರ ಕಟ್ಟಿಕೊಂಡನು.॥12॥

ಮೂಲಮ್ - 13

ವೈದೇಹೀಂ ಪ್ರಾರ್ಥಯಾನಂ ತಂ ವಿರಾಧಂ ಪ್ರೇಕ್ಷ್ಯರಾಕ್ಷಸಮ್ ।
ಹತಮೇಕೇನ ರಾಮೇಣ ಪರ್ಯಾಪ್ತಂ ತನ್ನಿದರ್ಶನಮ್ ॥

ಅನುವಾದ

ರಾಕ್ಷಸ ವಿರಾಧನು ವೈದೇಹಿಯನ್ನು ಪಡೆಯಲು ಬಯಸಿದ್ದನು; ಇದನ್ನು ನೋಡಿದ ಶ್ರೀರಾಮನು ಒಂದೇ ಬಾಣದಿಂದ ಅವನನ್ನು ವಧಿಸಿದನು. ಇದೊಂದೇ ದೃಷ್ಟಾಂತ ಅವನ ಅಜೆಯ ಶಕ್ತಿಯನ್ನು ಅರಿಯಲು ಸಾಕಾಗಿತ್ತು.॥13॥

ಮೂಲಮ್ - 14

ಚತುರ್ದಶ ಸಹಸ್ರಾಣಿ ರಕ್ಷಸಾಂ ಭೀಮಕರ್ಮಣಾಮ್ ।
ನಿಹತಾನಿ ಜನಸ್ಥಾನೇ ಶರೈರಗ್ನಿಶಿಖೋಪಮೈಃ ॥

ಮೂಲಮ್ - 15

ಖರಶ್ಚ ನಿಹತಃ ಸಂಖ್ಯೇ ದೂಷಣಸ್ತ್ರಿಶಿರಾಸ್ತಥಾ ।
ಶರೈರಾದಿತ್ಯಸಂಕಾಶೈಃ ಪರ್ಯಾಪ್ತಂ ತನ್ನಿದರ್ಶನಮ್ ॥

ಅನುವಾದ

ಜನಸ್ಥಾನದಲ್ಲಿ ಭಯಾನಕ ಕರ್ಮ ಮಾಡುವ ಹದಿನಾಲ್ಕು ಸಾವಿರ ರಾಕ್ಷಸರನ್ನು ಶ್ರೀರಾಮನು ಅಗ್ನಿಶಿಖೆಯಂತಿರುವ ತೇಜಸ್ವೀ ಬಾಣಗಳಿಂದ ಕಾಲವಶರಾಗಿಸಿದನು ಮತ್ತು ಸೂರ್ಯಸದೃಶ ಪ್ರಕಾಶಮಾನ ಸಾಯಕಗಳಿಂದ ಸಮರಾಂಗಣದಲ್ಲಿ ಖರ-ದೂಷಣ-ತ್ರಿಶಿರರನ್ನು ಸಂಹಾರ ಮಾಡಿದನು. ಇದು ಅವನ ಅಜೇಯತೆಯನ್ನು ತಿಳಿಯಲು ಸಾಕಾಗಿತ್ತು.॥14-15॥

ಮೂಲಮ್ - 16

ಹತೋ ಯೋಜನಬಾಹುಶ್ಚ ಕಬಂಧೋ ರುಧಿರಾಶನಃ ।
ಕ್ರೋಧಾನ್ನಾದಂ ನದನ್ ಸೋಽಥ ಪರ್ಯಾಪ್ತಂ ತನ್ನಿದರ್ಶನಮ್ ॥

ಅನುವಾದ

ಯೋಜನದಷ್ಟು ಉದ್ದವಾದ ತೋಳುಗಳುಳ್ಳ ರಕ್ತಪಾನ ಮಾಡುವ ಕಬಂಧನು ಉತ್ಯಂತ ಕ್ರುದ್ಧನಾಗಿ ಸಿಂಹನಾದ ಮಾಡುತ್ತಿದ್ದ ರಾಕ್ಷಸನನ್ನು ಶ್ರೀರಾಮನು ಸಂಹರಿಸಿದನು. ಶ್ರೀರಾಮಚಂದ್ರನ ದುರ್ಜಯ ಪರಾಕ್ರಮವನ್ನು ಅರಿಯಲು ಈ ದೃಷ್ಟಾಂತ ಸಾಕಾಗಿದೆ.॥16॥

ಮೂಲಮ್ - 17

ಜಘಾನ ಬಲಿನಂ ರಾಮಃ ಸಹಸ್ರನಯನಾತ್ಮಜಮ್ ।
ವಾಲಿನಂ ಮೇರುಸಂಕಾಶಂ ಪರ್ಯಾಪ್ತಂ ತನ್ನಿದರ್ಶನಮ್ ॥

ಅನುವಾದ

ಮೇರುಪರ್ವತದಂತೆ ಮಹಾಕಾಯ ಬಲವಂತ ಇಂದ್ರಕುಮಾರ ವಾಲಿಯನ್ನು ಶ್ರೀರಾಮನು ಒಂದೇ ಬಾಣದಿಂದ ಕೊಂದು ಹಾಕಿದನು. ಅವನ ಶಕ್ತಿಯನ್ನು ತಿಳಿಯಲು ಇದೊಂದೇ ಉದಾಹರಣೆ ಸಾಕು.॥17॥

ಮೂಲಮ್ - 18

ಋಷ್ಯಮೂಕೇ ವಸಂಶ್ಚೈವ ದೀನೋ ಭಗ್ನಮನೋರಥಃ ।
ಸುಗ್ರೀವಃ ಪ್ರಾಪಿತೋ ರಾಜ್ಯಂ ಪರ್ಯಾಪ್ತಂ ತನ್ನಿದರ್ಶನಮ್ ॥

ಅನುವಾದ

ಸುಗ್ರೀವನು ಬಹಳ ದುಃಖದಿಂದ ನಿರಾಶನಾಗಿ ಋಷ್ಯಮೂಕ ಪರ್ವತದಲ್ಲಿ ವಾಸಿಸುತ್ತಿದ್ದನು; ಆದರೆ ಶ್ರೀರಾಮನು ಅವನನ್ನು ಕಿಷ್ಕಿಂಧೆಯ ರಾಜನಾಗಿಸಿದನು. ಅವನ ಪ್ರಭಾವವನ್ನು ತಿಳಿಯಲು ಅದೊಂದೇ ದೃಷ್ಟಾಂತ ಸಾಕು.॥18॥

ಮೂಲಮ್ - 19

ಧರ್ಮಾರ್ಥಸಹಿತಂ ವಾಕ್ಯಂ ಸರ್ವೇಷಾಂ ರಕ್ಷಸಾಂ ಹಿತಮ್ ।
ಯುಕ್ತಂ ವಿಭೀಷಣೇನೋಕ್ತಂ ಮೋಹಾತ್ತಸ್ಯ ನ ರೋಚತೇ ॥

ಮೂಲಮ್ - 20

ವಿಭೀಷಣ ವಚಃ ಕುರ್ಯಾದ್ಯದಿ ಸ್ಮ ಧನದಾನುಜಃ ।
ಶ್ಮಶಾನಭೂತಾ ದುಃಖಾರ್ತಾ ನೇಯಂ ಲಂಕಾ ಭವಿಷ್ಯತಿ ॥

ಅನುವಾದ

ಧರ್ಮ-ಅರ್ಥದಿಂದ ಕೂಡಿದ ಯುಕ್ತಿ-ಯುಕ್ತವಾದ ಮಾತನ್ನು ವಿಭೀಷಣನು ರಾಕ್ಷಸರ ಹಿತಕ್ಕಾಗಿ ಹೇಳಿದ್ದನು; ಆದರೆ ಮೋಹವಶ ರಾವಣನಿಗೆ ಅದು ಸರಿ ಬೀಳಲಿಲ್ಲ. ಕುಬೇರನ ತಮ್ಮ ರಾವಣನು ವಿಭೀಷಣನ ಮಾತನ್ನು ಒಪ್ಪಿಕೊಂಡಿದ್ದರೆ ಲಂಕೆಯು ಹೀಗೆ ದುಃಖದಿಂದ ಪೀಡಿತವಾಗಿ, ಸ್ಮಶಾನ ಭೂಮಿ ಯಾಗುತ್ತಿರಲಿಲ್ಲ.॥19-20॥

ಮೂಲಮ್ - 21

ಕುಂಭಕರ್ಣಂ ಹತಂ ಶ್ರುತ್ವಾ ರಾಘವೇಣ ಮಹಾಬಲಮ್ ।
ಅತಿಕಾಯಂ ಚ ದುರ್ಧರ್ಷಂ ಲಕ್ಷ್ಮಣೇನ ಹತಂ ತದಾ ।
ಪ್ರಿಯಂ ಚೇಂದ್ರಜಿತಂ ಪುತ್ರಂ ರಾವಣೋ ನಾವಬುಧ್ಯತೇ ॥

ಅನುವಾದ

ಮಹಾಬಲಿ ಕುಂಭಕರ್ಣನು ಶ್ರೀರಾಮನ ಕೈಯಿಂದ ಹತನಾದನು. ದುಃಸಹ ವೀರ ಅತಿಕಾಯನು, ರಾವಣನ ಪ್ರಿಯ ಪುತ್ರ ಇಂದ್ರಜಿತನನ್ನು ಲಕ್ಷ್ಮಣನ ಕೈಯಿಂದ ಸತ್ತು ಹೋದನು; ಆದರೂ ರಾವಣನು ಭಗವಾನ್ ಶ್ರೀರಾಮನ ಪ್ರಭಾವವನ್ನು ತಿಳಿಯದೇ ಹೋದನು.॥21॥

ಮೂಲಮ್ - 22

ಮಮ ಪುತ್ರೋ ಮಮ ಭ್ರಾತಾ ಮಮ ಭರ್ತಾ ರಣೇ ಹತಃ ।
ಇತ್ಯೇಷ ಶ್ರೂಯತೇ ಶಬ್ದೋ ರಾಕ್ಷಸೀನಾಂ ಕುಲೇಕುಲೇ ॥

ಅನುವಾದ

ಅಯ್ಯೋ! ನನ್ನ ಮಗನು ಸತ್ತುಹೋದನು. ನನ್ನ ತಮ್ಮನೂ ಪ್ರಾಣ ಹೀನನಾದನು. ರಣಭೂಮಿಯಲ್ಲಿ ನನ್ನ ಪತಿಯು ಮಡಿದನು. ಲಂಕೆಯ ಮನೆ-ಮನೆಯಿಂದ ರಾಕ್ಷಸಿಯರ ಹೀಗೆ ಆರ್ತನಾದ ಕೇಳಿ ಬರುತ್ತಿತ್ತು.॥22॥

ಮೂಲಮ್ - 23

ರಥಾಶ್ವ ನಾಗಾಶ್ಚ ಹತಾಸ್ತತ್ರ ತತ್ರ ಸಹಸ್ರಶಃ ।
ರಣೇ ರಾಮೇಣ ಶೂರೇಣ ಹತಾಶ್ಚಾಪಿ ಪದಾತಯಃ ॥

ಅನುವಾದ

ರಣರಂಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ರಥಾಶ್ವ-ಗಜ ಸೈನಿಕರು ಸತ್ತುಬಿದ್ದಿದ್ದರು. ಶ್ರೀರಾಮನು ಪದಾತಿ ಸೈನ್ಯವನ್ನು ಅಪಾರ ಸಂಖ್ಯೆಯಲ್ಲಿ ಸಂಹರಿಸಿದ್ದನು.॥23॥

ಮೂಲಮ್ - 24

ರುದ್ರೋ ವಾ ಯದಿ ವಾ ವಿಷ್ಣುರ್ಮಹೇಂದ್ರೋ ವಾ ಶತಕ್ರತುಃ ।
ಹಂತಅ ನೋ ರಾಮರೂಪೇಣ ಯದಿ ವಾ ಸ್ವಯಮಂತಕಃ ॥

ಅನುವಾದ

ಶ್ರೀರಾಮನ ರೂಪವನ್ನು ಧರಿಸಿದ ಸಾಕ್ಷಾತ್ ರುದ್ರನೋ; ಭಗವಾನ್ ವಿಷ್ಣುವೋ, ಶತಕ್ರತು ಇಂದ್ರನೋ, ಅಥವಾ ಸ್ವಯಂ ಯಮರಾಜನೇ ನಮ್ಮನ್ನು ಕೊಲ್ಲುತ್ತಿರುವನೆಂದು ಅನಿಸುತ್ತದೆ.॥24॥

ಮೂಲಮ್ - 25

ಹತಪ್ರವೀರಾ ರಾಮೇಣ ನಿರಾಶಾ ಜೀವಿತೇ ವಯಮ್ ।
ಅಪಶ್ಯಂತ್ಯೋ ಭಯಸ್ಯಾಂತಮನಾಥಾ ವಿಲಪಾಮಹೇ ॥

ಅನುವಾದ

ನಮ್ಮ ಪ್ರಮುಖ ವೀರರು ಶ್ರೀರಾಮನ ಕೈಯಲ್ಲಿ ಹತರಾದರು. ಈಗ ಜೀವನದಲ್ಲಿ ನಮಗೆ ನಿರಾಶೆಯೇ ತುಂಬಿದೆ. ಈ ಭಯದ ಅಂತ್ಯ ನಮಗೆ ಕಾಣುವುದಿಲ್ಲ; ಆದ್ದರಿಂದ ನಾವು ಅನಾಥೆಯರಂತೆ ವಿಲಾಪಿಸುತ್ತಿದ್ದೇವೆ.॥25॥

ಮೂಲಮ್ - 26

ರಾಮಹಸ್ತಾದ್ದಶಗ್ರೀವಃ ಶೂರೋ ದತ್ತಮಹಾವರಃ ।
ಇದಂ ಭಯಂ ಮಹಾಘೋರ ಸಮುತ್ಪನ್ನಂ ನ ಬುಧ್ಯತೇ ॥

ಅನುವಾದ

ದಶಮುಖ ರಾವಣನು ಶೂರನಿದ್ದಾನೆ. ಇವನಿಗೆ ಬ್ರಹ್ಮದೇವರು ವರಕೊಟ್ಟಿದ್ದಾರೆ. ಆ ಗರ್ವದಿಂದಾಗಿ ಈ ರಾಮನಿಂದ ನಮಗೆ ಪ್ರಾಪ್ತವಾದ ಈ ಮಹಾಘೋರ ಭಯವನ್ನು ತಿಳಿಯುತ್ತಿಲ್ಲ.॥26॥

ಮೂಲಮ್ - 27

ತಂ ನ ದೇವಾ ನ ಗಂಧರ್ವಾ ನ ಪಿಶಾಚಾ ನ ರಾಕ್ಷಸಾಃ ।
ಉಪಸೃಷ್ಟಂ ಪರಿತ್ರಾತುಂ ಶಕ್ತಾ ರಾಮೇಣ ಸಂಯುಗೇ ॥

ಅನುವಾದ

ಯುದ್ಧದಲ್ಲಿ ಶ್ರೀರಾಮನು ಯಾರನ್ನು ಕೊಲ್ಲಬೇಕೆಂದು ಎಣಿಸುವನೋ, ಅವನನ್ನು ಗಂಧರ್ವರು, ದೇವತೆಗಳು ಪಿಶಾಚ-ರಾಕ್ಷಸರು ಯಾರೂ ಕಾಪಾಡಲಾರರು.॥27॥

ಮೂಲಮ್ - 28

ಉತ್ಪಾತಾಶ್ಚಾಪಿ ದೃಶ್ಯಂತೇ ರಾವಣಸ್ಯ ರಣೇ ರಣೇ ।
ಕಥಯಂತಿ ಹಿ ರಾಮೇಣ ರಾವಣಸ್ಯ ನಿಬರ್ಹಣಮ್ ॥

ಅನುವಾದ

ರಾವಣನ ಪ್ರತಿಯೊಂದು ಯುದ್ಧದಲ್ಲಿ ಕಂಡು ಬರುವ ಉತ್ಪಾತಗಳು ರಾಮನಿಂದ ರಾವಣನ ವಿನಾಶವನ್ನು ಸೂಚಿಸುತ್ತವೆ.॥28॥

ಮೂಲಮ್ - 29

ಪಿತಾಮಹೇನ ಪ್ರೀತೇನ ದೇವದಾನವರಾಕ್ಷಸ್ಯೆಃ ।
ರಾವಣಸ್ಯಾಭಯಂ ದತ್ತಂ ಮಾನುಷೇಭ್ಯೋ ನ ಯಾಚಿತಮ್ ॥

ಅನುವಾದ

ಬ್ರಹ್ಮದೇವರು ಒಲಿದು ರಾವಣನಿಗೆ ದೇವತೆಗಳಿಂದ, ದಾನವ, ರಾಕ್ಷಸರಿಂದ ಅಭಯದಾನ ಕೊಟ್ಟಿದ್ದರು. ಮನುಷ್ಯರಿಂದ ಅಭಯ ಪ್ರಾಪ್ತವಾಗಲು ಇವನು ಬೇಡಲೇ ಇರಲಿಲ್ಲ.॥29॥

ಮೂಲಮ್ - 30

ತದಿದಂ ಮಾನುಷಂ ಮನ್ಯೇ ಪ್ರಾಪ್ತಂ ನಿಃಸಂಶಯಂ ಭಯಮ್ ।
ಜೀವಿತಾಂತಕರಂ ಘೋರಂ ರಕ್ಷಸಾಂ ರಾವಣಸ್ಯ ಚ ॥

ಅನುವಾದ

ಆದ್ದರಿಂದ ಈ ಘೋರ ಭಯವು ನಿಃಸಂದೇಹವಾಗಿ ಮನುಷ್ಯರಿಂದ ಪ್ರಾಪ್ತವಾಗಿದೆ. ಅದು ರಾಕ್ಷಸರ ಮತ್ತು ರಾವಣನ ಜೀವನ ಅಂತ್ಯಗೊಳಿಸು ವಂತಹುದು ಎಂದು ನಮಗೆ ಅನಿಸುತ್ತದೆ.॥30॥

ಮೂಲಮ್ - 31

ಪೀಡ್ಯಮಾನಾಸ್ತು ಬಲಿನಾ ವರದಾನೇನ ರಕ್ಷಸಾ ।
ದೀಪ್ತೈಸ್ತಪೋಭಿರ್ವಿಬುಧಾಃ ಪಿತಾಮಹಮಪೂಜಯನ್ ॥

ಅನುವಾದ

ಬಲವಂತ ರಾಕ್ಷಸ ರಾವಣನು ಉದ್ದೀಪ್ತ ತಪಸ್ಸು ಹಾಗೂ ವರ ಬಲ ದಿಂದ ದೇವತೆಗಳನ್ನು ಪೀಡಿಸಿದಾಗ ಅವರು ಪಿತಾಮಹ ಬ್ರಹ್ಮದೇವರನ್ನು ಆರಾಧಿಸಿದರು.॥31॥

ಮೂಲಮ್ - 32

ದೇವತಾನಾಂ ಹಿತಾರ್ಥಾಯ ಮಹಾತ್ಮಾ ವೈ ಪಿತಾಮಹಃ ।
ಉವಾಚ ದೇವತಾಸ್ತುಷ್ಟ ಇದಂ ಸರ್ವಾ ಮಹದ್ವಚಃ ॥

ಅನುವಾದ

ಇದರಿಂದ ಮಹಾತ್ಮಾ ಬ್ರಹ್ಮದೇವರು ಸಂತುಷ್ಟರಾಗಿ, ದೇವತೆಗಳ ಹಿತಕ್ಕಾಗಿ ಅವರೆಲ್ಲರಲ್ಲಿ ಮಹತ್ವಪೂರ್ಣ ಮಾತನ್ನು ಹೇಳಿದರು.॥32॥

ಮೂಲಮ್ - 33

ಅದ್ಯಪ್ರಭೃತಿ ಲೋಕಾಂಸ್ತ್ರೀನ್ ಸರ್ವೇ ದಾನವರಾಕ್ಷಸಾಃ ।
ಭಯೇನ ಪ್ರಾವೃತಾ ನಿತ್ಯಂ ವಿಚರಿಷ್ಯಂತಿ ಶಾಶ್ವತಮ್ ॥

ಅನುವಾದ

ಇಂದಿನಿಂದ ಸಮಸ್ತ ದಾನವರು ಹಾಗೂ ರಾಕ್ಷಸರು ಭಯಗೊಂಡೇ ನಿತ್ಯ-ನಿರಂತರ ಮೂರು ಲೋಕಗಳಲ್ಲಿ ಸಂಚರಿಸುವರು.॥33॥

ಮೂಲಮ್ - 34

ದೈವತೈಸ್ತು ಸಮಾಗಮ್ಯ ಸರ್ವೈಶ್ಚೇಂದ್ರ ಪುರೋಗಮೈಃ ।
ವೃಷಧ್ವಜಸ್ತ್ರಿಪುರಹಾ ಮಹಾದೇವಃ ಪ್ರತೋಷಿತಃ ॥

ಅನುವಾದ

ಅನಂತರ ಇಂದ್ರಾದಿ ಸಮಸ್ತ ದೇವತೆಗಳು ಸೇರಿ ತ್ರಿಪುರನಾಶಕ ವೃಷಭಧ್ವಜ ಮಹಾದೇವ ನನ್ನು ಸಂತುಷ್ಟ ಪಡಿಸಿದರು.॥34॥

ಮೂಲಮ್ - 35

ಪ್ರಸನ್ನಸ್ತು ಮಹಾದೇವೋ ದೇವಾನೇತದ್ ವಚೋಽಬ್ರವೀತ್ ।
ಉತ್ಪತ್ಸ್ಯತಿ ಹಿತಾರ್ಥಂ ವೋ ನಾರೀ ರಕ್ಷಃ ಕ್ಷಯಾವಹಾ ॥

ಅನುವಾದ

ಸಂತುಷ್ಟನಾಗಿ ಮಹಾದೇವನು ದೇವತೆಗಳಲ್ಲಿ ಹೇಳಿದನು - ನಿಮ್ಮ ಹಿತಕ್ಕಾಗಿ ಓರ್ವದಿವ್ಯನಾರಿಯ ಆವಿರ್ಭಾವವಾಗುವುದು. ಅವಳು ಸಮಸ್ತ ರಾಕ್ಷಸರ ವಿನಾಶಕ್ಕೆ ಕಾರಣಳಾಗುವಳು.॥35॥

ಮೂಲಮ್ - 36

ಏಷಾ ದೇವೈಃ ಪ್ರಯುಕ್ತಾ ತು ಕ್ಷುದ್ಯಥಾ ದಾನವಾನ್ ಪುರಾ ।
ಭಕ್ಷಯಿಷ್ಯತಿ ನಃ ಸರ್ವಾನ್ ರಾಕ್ಷಸಘ್ನೀ ಸರಾವಣಾನ್ ॥

ಅನುವಾದ

ಹಿಂದಿನ ಕಲ್ಪದಲ್ಲಿ ದೇವತೆಗಳಿಂದ ನೇಮಿಸಲ್ಪಟ್ಟ ಕ್ಷುಧೆಯು ದಾನವರನ್ನು ಭಕ್ಷಿಸಿದಂತೆಯೇ ಈ ನಿಶಾಚರ ನಾಶಿನೀ ಸೀತೆಯು ರಾವಣನ ಸಹಿತ ನಮ್ಮೆಲ್ಲರನ್ನು ತಿಂದು ಬಿಡುವಳು.॥36॥

ಮೂಲಮ್ - 37

ರಾವಣಸ್ಯಾಪನೀತೇನ ದುರ್ವಿನೀತಸ್ಯ ದುರ್ಮತೇಃ ।
ಅಯಂ ನಿಷ್ಟಾನಕೋ ಘೋರಃ ಶೋಕೇನ ಸಮಭಿಪ್ಲುತಃ ॥

ಅನುವಾದ

ಉದ್ಧತ ಮತ್ತು ದುರ್ಬುದ್ಧಿಯವನಾದ ರಾವಣನ ಅನೀತಿಯಿಂದಾಗಿ ಈ ಶೋಕದಿಂದ ಕೂಡಿದ ಘೋರ ವಿನಾಶ ನಮ್ಮೆಲ್ಲರಿಗೆ ಸಂಭವಿಸಿದೆ.॥37॥

ಮೂಲಮ್ - 38

ತಂ ನ ಪಶ್ಯಾಮಹೇ ಲೋಕೇ ಯೋ ನಃ ಶರಣದೋ ಭವೇತ್ ।
ರಾಘವೇಣೋಪಸೃಷ್ಟಾನಾಂ ಕಾಲೇನೇವ ಯುಗಕ್ಷಯೇ ॥

ಅನುವಾದ

ಮಹಾಪ್ರಳಯ ಕಾಲದ ಮಹಾಕಾಲನಂತೆ ನಮ್ಮೆಲ್ಲರನ್ನು ನುಂಗಿಹಾಕಲು ಸಿದ್ಧನಾದ ರಾಘವನಿಂದ ನಮ್ಮನ್ನು ರಕ್ಷಿಸುವ ಯಾರನ್ನು ನಾವು ಕಾಣುತ್ತಿಲ್ಲ.॥38॥

ಮೂಲಮ್ - 39

ನಾಸ್ತಿ ನಃ ಶರಣಂ ಕಿಂಚಿದ್ ಭಯೇ ಮಹತಿ ತಿಷ್ಠತಾಮ್ ।
ದವಾಗ್ನಿವೇಷ್ಟಿತಾನಾಂ ಹಿ ಕರೇಣೂನಾಂ ಯಥಾವನೇ ॥

ಅನುವಾದ

ವನದಲ್ಲಿ ದಾವಾನಲದಿಂದ ಸುತ್ತುವರಿದ ಹೆಣ್ಣಾನೆಗಳ ಪ್ರಾಣ ಉಳಿಸಿಕೊಳ್ಳಲು ಜಾಗವೇ ಸಿಗದಂತೆ ಈ ಮಹಾಭಯದಿಂದ ಸಿಕ್ಕಿಹಾಕಿಕೊಂಡಿರುವ ನಮ್ಮನ್ನು ರಕ್ಷಿಸುವವರೂ ಯಾರೂ ಇಲ್ಲ.॥39॥

ಮೂಲಮ್ - 40

ಪ್ರಾಪ್ತಕಾಲಂ ಕೃತಂ ತೇನ ಪೌಲಸ್ತ್ಯೇನ ಮಹಾತ್ಮನಾ ।
ಯತ ಏವ ಭಯಂ ದೃಷ್ಟಂ ತಮೇವ ಶರಣಂ ಗತಃ ॥

ಅನುವಾದ

ಮಹಾತ್ಮಾ ಪುಲಸ್ತ್ಯನಂದನ ವಿಭೀಷಣನು ಸಮಯೋಚಿತ ಕಾರ್ಯವನ್ನೇ ಮಾಡಿದನು. ಯಾರಿಂದ ಭಯವು ಪ್ರಾಪ್ತವಾಗುವುದಿತ್ತೋ ಅವನನ್ನೆ ಶರಣು ಹೋದನು.॥40॥

ಮೂಲಮ್ - 41

ಇತೀವ ಸರ್ವಾ ರಜನೀಚರಸ್ತ್ರಿಯಃ
ಪರಸ್ಪರಂ ಸಂಪರಿರಭ್ಯ ಬಾಹುಭಿಃ ।
ವಿಷೇದುರಾರ್ತಾತಿ ಭಯಾಭಿಪೀಡಿತಾ
ವಿನೇದುರುಚ್ಚೈಶ್ಚ ತದಾ ಸುದಾರುಣಮ್ ॥

ಅನುವಾದ

ಹೀಗೆ ನಿಶಾಚರರ ಎಲ್ಲ ಸ್ತ್ರೀಯರು ಒಬ್ಬರು ಮತ್ತೊಬ್ಬರನ್ನು ತಬ್ಬಿಕೊಂಡು ದೀನರಾಗಿ ವಿಷಾದಿಸುತ್ತಿದ್ದರು. ಭಯಾನಕವಾಗಿ ಗಟ್ಟಿಯಾಗಿ ಅಳುತ್ತಿದ್ದರು.॥41॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ತೊಂಭತ್ತನಾಲ್ಕನೆಯ ಸರ್ಗ ಪೂರ್ಣವಾಯಿತು.॥94॥