वाचनम्
ಭಾಗಸೂಚನಾ
ಶ್ರೀರಾಮನಿಂದ ರಾಕ್ಷಸ ಸೈನ್ಯದ ಸಂಹಾರ
ಮೂಲಮ್ - 1
ಸ ಪ್ರವಿಶ್ಯ ಸಭಾಂ ರಾಜಾ ದೀನಃ ಪರಮದುಃಖಿತಃ ।
ನಿಷಸಾದಾಸನೇ ಮುಖ್ಯೇ ಸಿಂಹಃ ಕ್ರುದ್ಧ ಇವ ಶ್ವಸನ್ ॥
ಅನುವಾದ
ಸಭೆಗೆ ಹೋಗಿ ರಾಕ್ಷಸರಾಜ ರಾವಣನು ಅತ್ಯಂತ ದುಃಖಿತ ಹಾಗೂ ದೀನನಾಗಿ ಶ್ರೇಷ್ಠ ಸಿಂಹಾಸನದಲ್ಲಿ ಕುಳಿತು ಕುಪಿತವಾಗಿ ಸಿಂಹದಂತೆ ನಿಟ್ಟುಸಿರು ಬಿಡತೊಡಗಿದನು.॥1॥
ಮೂಲಮ್ - 2
ಅಬ್ರವೀಚ್ಚ ಸ ತಾನ್ಸರ್ವಾನ್ ಬಲಮುಖ್ಯಾನ್ಮಹಾಬಲಃ ।
ರಾವಣಃ ಪ್ರಾಂಜಲಿರ್ವಾಕ್ಯಂ ಪುತ್ರವ್ಯಸನಕರ್ಶಿತಃ ॥
ಅನುವಾದ
ಪುತ್ರಶೋಕದಿಂದ ಪೀಡಿತನಾದ ಮಹಾಬಲಿ ರಾವಣನು ತನ್ನ ಸೈನ್ಯದ ಮುಖ್ಯ ಮುಖ್ಯ ಯೋಧರಲ್ಲಿ ಕೈಮುಗಿದು ಹೇಳಿದನು .॥2॥
ಮೂಲಮ್ - 3
ಸರ್ವೇ ಭವಂತಃ ಸರ್ವೇಣ ಹಸ್ತ್ಯಶ್ವೇನ ಸಮಾವೃತಾಃ ।
ನಿರ್ಯಾಂತು ರಥಸಂಘೈಶ್ಚ ಪಾದಾತೈಶ್ಚೋಪಶೋಭಿತಾಃ ॥
ಮೂಲಮ್ - 4
ಏಕಂ ರಾಮಂ ಪರಿಕ್ಷಿಪ್ಯ ಸಮರೇ ಹಂತುಮರ್ಹಥ ।
ವರ್ಷಂತಃ ಶರವರ್ಷಾಣಿ ಪ್ರಾವೃಟ್ಕಾಲ ಇವಾಂಬುದಾಃ ॥
ಅನುವಾದ
ವೀರರೇ! ನೀವೆಲ್ಲರೂ ಆನೆ, ಕುದುರೆ, ರಥಗಳು ಹಾಗೂ ಪದಾತಿ ಸೈನಿಕರಿಂದ ಪರಿವೃತರಾಗಿ ನಗರದಿಂದ ಹೊರಡಿರಿ. ಸಮರಾಂಗಣದಲ್ಲಿ ಏಕಮಾತ್ರ ರಾಮನನ್ನು ಆಕ್ರಮಿಸಿ ವರ್ಷಾಕಾಲದಲ್ಲಿ ಮೋಡಗಳು ಮಳೆಗರೆಯುವಂತೆ ನೀವು ಬಾಣಗಳ ಮಳೆ ಸುರಿಸಿ ರಾಮನನ್ನು ಸಂಹರಿಸಿ ಬಿಡಿ.॥3-4॥
ಮೂಲಮ್ - 5
ಅಥವಾಹಂ ಶರೈಸ್ತೀಕ್ಷ್ಣೈರ್ಭಿನ್ನಗಾತ್ರಂ ಮಹಾಹವೇ ।
ಭವದ್ಭಿಃಶ್ವೋ ನಿಹಂತಾಸ್ಮಿ ರಾಮಂ ಲೋಕಸ್ಯ ಪಶ್ಯತಃ ॥
ಅನುವಾದ
ಅಥವಾ ನಾಳೆ ನಾಲ್ಕನೆ ಮಹಾಸಮರದಲ್ಲಿ ನಿಮ್ಮೊಂದಿಗೆ ಸೇರಿ ನನ್ನ ಹರಿತವಾದ ಬಾಣಗಳಿಂದ ರಾಮನ ಶರೀರವನ್ನು ಛಿನ್ನ ಭಿನ್ನಗೊಳಿಸಿ ಎಲ್ಲರೂ ನೋಡುತ್ತಿರುವಂತೆಯೇ ಅವನನ್ನು ಕೊಂದುಹಾಕುವೆನು.॥5॥
ಮೂಲಮ್ - 6
ಇತ್ಯೇತದ್ ವಾಕ್ಯಮಾದಾಯ ರಾಕ್ಷಸೇಂದ್ರಸ್ಯ ರಾಕ್ಷಸಾಃ ।
ನಿರ್ಯಯುಸ್ತೇ ರಥೈಃ ಶೀಘ್ರೈರ್ನಾನಾನೀಕೈಶ್ಚ ಸಂಯುತಾಃ ॥
ಅನುವಾದ
ರಾಕ್ಷಸರಾಜನ ಈ ಆಜ್ಞೆಯನ್ನು ಶಿರಸಾವಹಿಸಿ ಆ ನಿಶಾಚರರು ಶೀಘ್ರಗಾಮಿ ರಥಗಳಿಂದ ಮತ್ತು ಸೈನ್ಯದಿಂದ ಯುಕ್ತರಾಗಿ ಲಂಕೆಯಿಂದ ಹೊರಟರು.॥6॥
ಮೂಲಮ್ - 7½
ಪರಿಘಾನ್ ಪಟ್ಟಿಶಾಂಶ್ಚೈವ ಶರಖಡ್ಗಪರಶ್ವಧಾನ್ ।
ಶರೀರಾಂತಕರಾನ್ಸರ್ವೇ ಚಿಕ್ಷಿಪುರ್ವಾನರಾನ್ ಪ್ರತಿ ॥
ವಾನರಾಶ್ಚ ದ್ರುಮಾನ್ಶೈಲಾನ್ ರಾಕ್ಷಸಾನ್ಪ್ರತಿ ಚಿಕ್ಷಿಪುಃ ।
ಅನುವಾದ
ಎಲ್ಲ ರಾಕ್ಷಸರು ವಾನರರ ಮೇಲೆ ಪರಿಘ, ಪಟ್ಟಿಶ, ಬಾಣ, ಖಡ್ಗ, ಕೊಡಲಿ ಮುಂತಾದ ಶರೀರನಾಶಕ ಅಸ್ತ್ರ-ಶಸ್ತ್ರಗಳನ್ನು ಪ್ರಹರಿಸತೊಡಗಿದರು. ಹೀಗೆಯೇ ವಾನರರೂ ಕೂಡ ರಾಕ್ಷಸರ ಮೇಲೆ ಮರಗಳನ್ನು ಶಿಲೆಗಳನ್ನು ಮಳೆ ಸುರಿಸಿದರು.॥7॥
ಮೂಲಮ್ - 8½
ಸ ಸಂಗ್ರಾಮೋ ಮಹಾಭೀಮಃ ಸೂರ್ಯಸ್ಯೋದಯನಂ ಪ್ರತಿ ॥
ರಕ್ಷಸಾಂ ವಾನರಾಣಾಂ ಚ ತುಮುಲಃ ಸಮಪದ್ಯತ ।
ಅನುವಾದ
ಸೂರ್ಯೋದಯ ಸಮಯ ರಾಕ್ಷಸರ ಮತ್ತು ವಾನರರ ಆ ತುಮುಲ ಯುದ್ಧವು ಮಹಾಭಯಂಕರ ರೂಪ ತಾಳಿತು.॥8॥
ಮೂಲಮ್ - 9½
ತೇ ಗದಾಭಿಶ್ಚ ಚಿತ್ರಾಭಿಃ ಪ್ರಾಸೈಃ ಖಡ್ಗೈಃ ಪರಶ್ವಧೈಃ ॥
ಅನ್ಯೋನ್ಯಂ ಸಮರೇ ಜಘ್ನುಸ್ತದಾ ವಾನರರಾಕ್ಷಸಾಃ ।
ಅನುವಾದ
ವಾನರರು ಮತ್ತು ರಾಕ್ಷಸರು ಆ ಯುದ್ಧದಲ್ಲಿ ವಿಚಿತ್ರಗದೆಗಳಿಂದ, ಭಲ್ಲೆಗಳಿಂದ, ಖಡ್ಗಗಳಿಂದ ಹಾಗೂ ಗಂಡುಕೊಡಲಿಗಳಿಂದ ಒಬ್ಬರು ಮತ್ತೊಬ್ಬರು ಪ್ರಹರಿಸತೊಡಗಿದರು.॥9॥
ಮೂಲಮ್ - 10½
ಏವಂ ಪ್ರವೃತ್ತೇ ಸಂಗ್ರಾಮೇ ಹ್ಯದ್ಭುತಂ ಸುಮಹದ್ರಜಃ ॥
ರಕ್ಷಸಾಂ ವಾನರಾಣಾಂ ಚ ಶಾಂತಂ ಶೋಣಿತವಿಸ್ರವೈಃ ।
ಅನುವಾದ
ಹೀಗೆ ಯುದ್ಧ ನಡೆಯುವಾಗ ಎದ್ದಿರುವ ಧೂಳು ರಾಕ್ಷಸರ ಮತ್ತು ವಾನರರ ರಕ್ತಪ್ರವಾಹದಿಂದ ಶಾಂತವಾಯಿತು. ಇದೊಂದು ಅದ್ಭುತವಾದ ವಿಷಯವಾಗಿತ್ತು.॥10॥
ಮೂಲಮ್ - 11½
ಮಾತಂಗ ರಥಕೂಲಾಶ್ಚ ಶರಮತ್ಸ್ಯಾಧ್ವಜದ್ರುಮಾಃ ॥
ಶರೀರಸಂಘಾಟವಹಾಃ ಪ್ರಸಸ್ರುಃ ಶೋಣಿತಾಪಗಾಃ ।
ಅನುವಾದ
ರಣರಂಗದಲ್ಲಿ ಎಷ್ಟೋ ಹರಿಯುತ್ತಿದ್ದ ರಕ್ತದ ನದಿಯಲ್ಲಿ ಕಟ್ಟಿಗೆಗಳು ತೇಲಿಹೋಗುವಂತೆ ವಾನರರ ರಾಕ್ಷಸರ ಶರೀರಗಳು ತೇಲಿಹೋಗುತ್ತಿದ್ದವು. ಸತ್ತುಬಿದ್ದಿದ್ದ ಆನೆಗಳು, ಮುರಿದುಬಿದ್ದಿದ್ದ ರಥಗಳು ಆ ನದಿಯ ದಡಗಳಂತೆ ಕಾಣುತ್ತಿತ್ತು. ಬಾಣಗಳು ಮೀನಿನಂತೆ ಕಂಡುಬಂದರೆ, ಎತ್ತರವಾದ ಧ್ವಜಗಳೇ ತೀರದ ಮರಗಳಂತೆ ಇದ್ದವು.॥11॥
ಮೂಲಮ್ - 12
ತತಸ್ತೇ ವಾನರಾಃ ಸರ್ವೇ ಶೋಣಿತೌಘ ಪರಿಪ್ಲುತಾಃ ॥
ಮೂಲಮ್ - 13
ಧ್ವಜವರ್ಮರಥಾನಶ್ವಾನ್ನಾನಾ ಪ್ರಹರಣಾನಿ ಚ ।
ಆಪ್ಲುತ್ಯಾಪ್ಲುತ್ಯ ಸಮರೇ ರಾಕ್ಷಸಾನಾಂ ಬಭಂಜಿರೇ ॥
ಅನುವಾದ
ಸಮಸ್ತ ವಾನರರು ರಕ್ತದಿಂದ ತೊಯ್ದು ಹೋಗಿದ್ದರು. ಅವರು ರಣರಂಗದಲ್ಲಿ ಹಾರಿ ನೆಗೆಯುತ್ತಾ ರಾಕ್ಷಸರ ಧ್ವಜ,ಕವಚ, ರಥ, ಕುದುರೆ ಮತ್ತು ನಾನಾ ವಿಧದ ಅಸ್ತ್ರ-ಶಸ್ತ್ರಗಳನ್ನು ನಾಶಮಾಡುತ್ತಿದ್ದರು.॥12-13॥
ಮೂಲಮ್ - 14
ಕೇಶಾನ್ ಕರ್ಣ ಲಲಾಟಂ ಚ ನಾಸಿಕಾಶ್ಚ ಪ್ಲವಂಗಮಾಃ ।
ರಕ್ಷಸಾಂ ದಶನೈಸ್ತೀಕ್ಷ್ಣೈರ್ನಖೈಶ್ಚಾಪಿ ವ್ಯಕರ್ತಯನ್ ॥
ಅನುವಾದ
ವಾನರರು ತಮ್ಮ ಚೂಪಾದ ಹಲ್ಲು-ಉಗುರುಗಳಿಂದ ನಿಶಾಚರರ ಕೂದಲು, ಕಿವಿ, ಹಣೆ, ಮೂಗು, ಪರಚಿ ಹಾಕುತ್ತಿದ್ದರು.॥14॥
ಮೂಲಮ್ - 15
ಏಕೈಕಂ ರಾಕ್ಷಸಂ ಸಂಖ್ಯೇ ಶತಂ ವಾನರಪುಂಗವಾಃ ।
ಅಭ್ಯಧಾವಂತ ಫಲಿನಂ ವೃಕ್ಷಂ ಶಕುನಯೋ ಯಥಾ ॥
ಅನುವಾದ
ಹಣ್ಣುಗಳಿರುವ ಮರಗಳ ಕಡೆಗೆ ನೂರಾರು ಪಕ್ಷಿಗಳು ಮುಗಿಬೀಳುವಂತೆ ಒಬ್ಬೊಬ್ಬ ರಾಕ್ಷಸರ ಮೇಲೆ ನೂರು ನೂರು ವಾನರರು ಮುಗಿಬೀಳುತ್ತಿದ್ದರು.॥15॥
ಮೂಲಮ್ - 16
ತಥಾ ಗದಾಭಿರ್ಗುರ್ವೀಭಿಃ ಪ್ರಾಸೈಃ ಖಡ್ಗೈಃ ಪರಶ್ವಧೈಃ ।
ನಿಜಘ್ನುರ್ವಾನರಾನ್ ಘೋರಾನ್ರಾಕ್ಷಸಾಃ ಪರ್ವತೋಪಮಾಃ ॥
ಅನುವಾದ
ಆಗ ಪರ್ವತಾಕಾರ ರಾಕ್ಷಸರೂ ಕೂಡ ಭಾರೀ ಗದೆ, ಭಲ್ಲೇ, ಖಡ್ಗ, ಕೊಡಲಿ ಇವುಗಳಿಂದ ಭಯಂಕರ ವಾನರರನ್ನು ಕೊಲ್ಲತೊಡಗಿದರು.॥16॥
ಮೂಲಮ್ - 17
ರಾಕ್ಷಸೈರ್ವಧ್ಯಮಾನಾನಾಂ ವಾನರಾಣಾಂ ಮಹಾಚಮೂಃ ।
ಶರಣ್ಯಂ ಶರಣಂ ಯಾತಾ ರಾಮಂ ದಶರಥಾತ್ಮಜಮ್ ॥
ಅನುವಾದ
ರಾಕ್ಷಸರಿಂದ ಹೊಡೆತ ತಿಂದ ವಾನರರ ವಿಶಾಲಸೈನ್ಯವು ಶರಣಾಗತ ವತ್ಸಲ ದಶರಥನಂದನ ಭಗವಾನ್ ಶ್ರೀರಾಮನಲ್ಲಿ ಶರಣಾದರು.॥17॥
ಮೂಲಮ್ - 18
ತತೋ ರಾಮೋ ಮಹಾತೇಜಾ ಧನುರಾದಾಯ ವೀರ್ಯವಾನ್ ।
ಪ್ರವಿಶ್ಯ ರಾಕ್ಷಸಂ ಸೈನ್ಯಂ ಶರವರ್ಷಂ ವವರ್ಷ ಚ ॥
ಅನುವಾದ
ಆಗ ಬಲ-ವಿಕ್ರಮಶಾಲಿ ಮಹಾತೇಜಸ್ವೀ ಶ್ರೀರಾಮನು ಧನುಸ್ಸನ್ನೆತ್ತಿಕೊಂಡು ರಾಕ್ಷಸರ ಸೈನ್ಯವನ್ನು ಪ್ರವೇಶಿಸಿ ಬಾಣಗಳ ಮಳೆ ಸುರಿಸಲು ಪ್ರಾರಂಭಿಸಿದನು.॥18॥
ಮೂಲಮ್ - 19
ಪ್ರವಿಷ್ಟಂ ತು ತದಾ ರಾಮಂ ಮೇಘಾಃ ಸೂರ್ಯಮಿವಾಂಬರೇ ।
ನಾಧಿಜಗ್ಮುರ್ಮಹಾಘೋರಾ ನಿರ್ದಹಂತಂ ಶರಾಗ್ನಿನಾ ॥
ಅನುವಾದ
ಆಕಾಶದಲ್ಲಿ ಬೆಳಗುತ್ತಿರುವ ಸೂರ್ಯನನ್ನು ಮೋಡಗಳು ಆಕ್ರಮಿಸಲು ಸಾಧ್ಯವಾಗದಂತೆ, ಸೈನ್ಯದಲ್ಲಿ ಪ್ರವೇಶಿಸಿ ತನ್ನ ಬಾಣರೂಪೀ ಅಗ್ನಿಯಿಂದ ರಾಕ್ಷಸ ಸೈನ್ಯವನ್ನ ಸುಟ್ಟು ಭಸ್ಮ ಮಾಡುತ್ತಿದ್ದ ಶ್ರೀರಾಮನನ್ನು ಆ ಮಹಾಕ್ರೂರ ನಿಶಾಚರರು ಆಕ್ರಮಿಸದಾದರು.॥19॥
ಮೂಲಮ್ - 20
ಕೃತಾನ್ಯೇವ ಸುಘೋರಾಣಿ ರಾಮೇಣ ರಜನೀಚರಾಃ ।
ರಣೇ ರಾಮಸ್ಯ ದದೃಶುಃ ಕಾರ್ಯಾಣ್ಯಸುಕರಾಣಿ ತೇ ॥
ಅನುವಾದ
ನಿಶಾಚರರು ರಣಭೂಮಿ ಯಲ್ಲಿ ಶ್ರೀರಾಮನ ಅತ್ಯಂತ ದುಷ್ಕರವಾದ, ಘೋರವಾದ ಕರ್ಮಗಳನ್ನು ಮಾತ್ರ ನೋಡುತ್ತಿದ್ದರೇ ವಿನಹ ಅವನ ಸ್ವರೂಪವನ್ನು ನೋಡುತ್ತಿರಲಿಲ್ಲ.॥20॥
ಮೂಲಮ್ - 21
ಚಾಲಯಂತಂ ಮಹಾಸೈನಂ ವಿಧಮಂತಂ ಮಹಾರಥಾನ್ ।
ದದೃಶುಸ್ತೇ ನ ವೈ ರಾಮಂ ವಾತಂ ವನಗತಂ ಯಥಾ ॥
ಅನುವಾದ
ಮಹಾರಣ್ಯದಲ್ಲಿ ದೊಡ್ಡ ದೊಡ್ಡ ವೃಕ್ಷಗಳನ್ನೆ ಉರುಳಿಸುತ್ತಿದ್ದ ಬಿರುಗಾಳಿಯನ್ನು ನೋಡಲಾಗದಂತೆ ರಾಕ್ಷಸರ ಮಹಾಸೈನ್ಯವನ್ನು ಅಲ್ಲೋಲಕಲ್ಲೋಲಗೊಳಿಸುತ್ತಿದ್ದ. ಮಹಾರಥಿಗಳನ್ನು ಧ್ವಂಸಮಾಡುತ್ತಿದ್ದರೂ ಶ್ರೀರಾಮನು ಯಾರಿಗೂ ಕಾಣುತ್ತಿರಲಿಲ್ಲ.॥21॥
ಮೂಲಮ್ - 22
ಛಿನ್ನಂ ಭಿನ್ನಂ ಶರೈರ್ದಗ್ಧಂ ಪ್ರಭಗ್ನಂ ಶಸ್ತ್ರಪೀಡಿತಮ್ ।
ಬಲಂ ರಾಮೇಣ ದದೃಶುರ್ನ ರಾಮಂ ಶೀಘ್ರಕಾರಿಣಮ್ ॥
ಅನುವಾದ
ತಮ್ಮ ಸೈನ್ಯವು ಶ್ರೀರಾಮನ ಬಾಣಗಳಿಂದ ಛಿನ್ನ ಭಿನ್ನ, ದಗ್ಧ-ಭಗ್ನವಾಗುತ್ತಿರುವುದನ್ನು ನೋಡುತ್ತಿದ್ದರು, ಆದರೆ ಶೀಘ್ರವಾಗಿ ಯುದ್ಧಮಾಡುತ್ತಿದ್ದ ರಾಮನು ಅವರ ಕಣ್ಣಿಗೆ ಬೀಳುತ್ತಿರಲಿಲ್ಲ.॥22॥
ಮೂಲಮ್ - 23
ಪ್ರಹರಂತಂ ಶರೀರೇಷು ನ ತೇ ಪಶ್ಯಂತಿ ರಾಘವಮ್ ।
ಇಂದ್ರಿಯಾರ್ಥೇಷು ತಿಷ್ಠಂತಂ ಭೂತಾತ್ಮಾನಮಿವ ಪ್ರಜಾಃ ॥
ಅನುವಾದ
ಶಬ್ದಾದಿ ವಿಷಯಗಳ ಭೋಕ್ತಾ ರೂಪದಿಂದ ಸ್ಥಿತ ಜೀವಾತ್ಮನನ್ನು ಜನರು ನೋಡುವುದಿಲ್ಲವೋ ಹಾಗೆಯೇ ತಮ್ಮ ಶರೀರಗಳಲ್ಲಿ ಪ್ರಹರಿಸುತ್ತಿರುವ ಶ್ರೀರಾಮನನ್ನು ರಾಕ್ಷಸರು ನೋಡುತ್ತಿರಲಿಲ್ಲ.॥23॥
ಮೂಲಮ್ - 24
ಏಷ ಹಂತಿ ಗಜಾನೀಕಮೇಷ ಹಂತಿ ಮಹಾರಥಾನ್ ।
ಏಷ ಹಂತಿ ಶರೈಸ್ತೀಕ್ಷ್ಣೈಃ ಪದಾತೀನ್ವಾಜಿಭಿಃ ಸಹ ॥
ಮೂಲಮ್ - 25
ಇತಿ ತೇ ರಾಕ್ಷಸಾಃ ಸರ್ವೇ ರಾಮಸ್ಯ ಸದೃಶಾನ್ರಣೇ ।
ಅನ್ಯೋನ್ಯಂ ಕುಪಿತಾ ಜಘ್ನುಃ ಸಾದೃಶ್ಯಾದ್ರಾಘವಸ್ಯ ತು ॥
ಅನುವಾದ
ಅದೋ ಗಜಸೈನ್ಯವನ್ನು ಸಂಹರಿಸುತ್ತಿದ್ದಾನೆ ಅವನೇ ರಾಮನು; ಮಹಾಮಹಾ ರಥಿಕರನ್ನು ಸಂಹರಿಸುವವನೇ ರಾಮನು; ಇಲ್ಲ, ಇಲ್ಲ! ಅಶ್ವಸೈನಿಕರನ್ನು ಪದಾತಿಗಳನ್ನು ವಧಿಸುವವನೇ ರಾಮನು, ಹೀಗೆ ರಾಕ್ಷಸರು ಎಲ್ಲ ಕಡೆಗಳಲ್ಲಿ ರಾಮನನ್ನೇ ನೋಡುತ್ತಿದ್ದರು. ಕೊನೆಗೆ ಈ ಭ್ರಮೆಯಿಂದ ಕ್ರೋಧಗೊಂಡು ರಾಕ್ಷಸರೇ ಪರಸ್ಪರ ಕೊಲ್ಲತೊಡಗಿದರು.॥24-25॥
ಮೂಲಮ್ - 26
ನ ತೇ ದದೃಶಿರೇ ರಾಮಂ ದಹಂತಮಪಿ ವಾಹಿನೀಮ್ ।
ಮೋಹಿತಾಃ ಪರಮಾಸ್ತ್ರೇಣ ಗಾಂಧರ್ವೇಣ ಮಹಾತ್ಮನಾ ॥
ಅನುವಾದ
ಆದರೆ ಶ್ರೀರಾಮನು ರಾಕ್ಷಸ ಸೈನ್ಯವನ್ನು ಸುಡುತ್ತಿದ್ದರೂ ರಾಕ್ಷಸರು ಅವನನ್ನು ನೋಡಲೇ ಇಲ್ಲ. ಬಳಿಕ ಮಹಾತ್ಮನಾದ ಶ್ರೀರಾಮನು ಗಾಂಧರ್ವಾಸ್ತ್ರವನ್ನು ಪ್ರಯೋಗಿಸಿ ಎಲ್ಲ ರಾಕ್ಷಸರನ್ನು ವಿಮೋಹಗೊಳಿಸಿದನು.॥26॥
ಮೂಲಮ್ - 27
ತೇ ತು ರಾಮಸಹಸ್ರಾಣಿ ರಣೇ ಪಶ್ಯಂತಿ ರಾಕ್ಷಸಾಃ ।
ಪುನಃ ಪಶ್ಯಂತಿ ಕಾಕುತ್ಸ್ಥಮೇಕಮೇವ ಮಹಾಹವೇ ॥
ಅನುವಾದ
ಆದ್ದರಿಂದ ಆ ರಾಕ್ಷಸರು ಯುದ್ಧಭೂಮಿಯಲ್ಲಿ ಕೆಲವೊಮ್ಮೆ ಸಾವಿರಾರು ರಾಮರನ್ನು ನೋಡಿದರೆ ಕೆಲವೊಮ್ಮೆ ಆ ಮಹಾಸಂಗ್ರಾಮದಲ್ಲಿ ಓರ್ವನೇ ರಾಮನ ದರ್ಶನ ಮಾಡುತ್ತಿದ್ದರು.॥27॥
ಮೂಲಮ್ - 28
ಭ್ರಮಂತೀಂ ಕಾಂಚನೀಂ ಕೋಟಿಂ ಕಾರ್ಮುಕಸ್ಯ ಮಹಾತ್ಮನಃ ।
ಅಲಾತ ಚಕ್ರಪ್ರತಿಮಾಂ ದದೃಶುಸ್ತೇ ನ ರಾಘವಮ್ ॥
ಅನುವಾದ
ಗರ ಗರನೇ ತಿರುಗುತ್ತಿರುವ ಕೊಳ್ಳಿಗಳ ಚಕ್ರದಂತೆ ಕಾಣುತ್ತಿದ್ದ ರಾಮನ ಸ್ವರ್ಣಮಯ ಧನುಸ್ಸಿನ ಅಗ್ರಭಾಗವನ್ನು ಮಾತ್ರ ರಾಕ್ಷಸರು ನೋಡುತ್ತಿದ್ದರು; ಆದರೆ ಸಾಕ್ಷಾತ್ ಶ್ರೀರಾಮನನ್ನು ಕಾಣುತ್ತಿರಲಿಲ್ಲ.॥28॥
ಮೂಲಮ್ - 29
ಶರೀರನಾಭಿಸತ್ತ್ವಾರ್ಚಿಃ ಶರಾರಂ ನೇಮಿಕಾರ್ಮುಕಮ್ ।
ಜ್ಯಾಘೋಷತಲನಿರ್ಘೋಷಂ ತೇಜೋಬುದ್ಧಿಗುಣಪ್ರಭಮ್ ॥
ಮೂಲಮ್ - 30
ದಿವ್ಯಾಸ್ತ್ರ ಗುಣಪರ್ಯಂತಂ ನಿಘ್ನಂತಂ ಯುಧಿ ರಾಕ್ಷಸಾನ್ ।
ದದೃಶೂ ರಾಮಚಕ್ರಂ ತತ್ ಕಾಲಚಕ್ರಮಿವ ಪ್ರಜಾಃ ॥
ಅನುವಾದ
ರಣರಂಗದಲ್ಲಿ ರಾಕ್ಷಸರನ್ನು ಎಡೆಬಿಡದೇ ಸಂಹರಿಸುತ್ತಿದ್ದ ಶ್ರೀರಾಮನು ಸಾಕ್ಷಾತ್ ಚಕ್ರದಂತೆ ಕಾಣುತ್ತಿದ್ದನು. ಶರೀರದ ನಾಭಿ ಪ್ರದೇಶವೇ ಚಕ್ರದ ನಾಭಿಯಾಗಿತ್ತು. ಅವನ ಬಲವೇ ಚಕ್ರದಿಂದ ಹೊರಹೊಮ್ಮುವ ಜ್ವಾಲೆಯಾಗಿತ್ತು, ಬಾಣಗಳೇ ಅದರ ಅರೆಗಳಿದ್ದವು, ಧನುಸ್ಸೇ ಚಕ್ರದ ಅಂಚು ಆಗಿತ್ತು, ಧನುಸ್ಸಿನ ಟಂಕಾರ, ಅಂಗೈಧ್ವನಿಯೇ ಚಕ್ರದ ಗರ್ಗರ ಶಬ್ದವಾಗಿತ್ತು. ತೇಜಸ್ಸು, ಬುದ್ಧಿ, ಶಾಂತಿ ಮೊದಲಾದ ಗುಣಗಳೇ ಚಕ್ರದ ಪ್ರಭೆಯಾಗಿತ್ತು, ದಿವ್ಯಾಸ್ತ್ರಗಳ ಗುಣ ಪ್ರಭಾವಗಳೇ ಅವರ ಅಲಗು ಆಗಿತ್ತು. ಪ್ರಜೆಗಳು ಪ್ರಳಯ ಕಾಲದಲ್ಲಿ ಕಾಲಚಕ್ರವನ್ನು ದರ್ಶಿಸುವಂತೆಯೇ ರಾಕ್ಷಸರು ಆಗ ಶ್ರೀರಾಮರೂಪೀ ಚಕ್ರವನ್ನು ನೋಡುತ್ತಿದ್ದರು.॥29-30॥
ಮೂಲಮ್ - 31
ಅನೀಕಂ ದಶಸಾಹಸ್ರಂ ರಥಾನಾಂ ವಾತರಂಹಸಾಮ್ ।
ಅಷ್ಟಾದಶ ಸಹಸ್ರಾಣಿ ಕುಂಜರಾಣಾಂ ತರಸ್ವಿನಾಮ್ ॥
ಮೂಲಮ್ - 32
ಚತುರ್ದಶ ಸಹಸ್ರಾಣಿ ಸಾರೋಹಾಣಾಂ ಚ ವಾಜಿನಾಮ್ ।
ಪೂರ್ಣೇ ಶತಸಹಸ್ರೇ ದ್ವೇ ರಾಕ್ಷಸಾನಾಂ ಪದಾತಿನಾಮ್ ॥
ಮೂಲಮ್ - 33
ದಿವಸಸ್ಯಾಷ್ಟಭಾಗೇನ ಶರೈರಗ್ನಿಶಿಖೋಪಮೈಃ ।
ಹತಾನ್ಯೇಕೇನ ರಾಮೇಣ ರಕ್ಷಸಾಂ ಕಾಮರೂಪಿಣಾಮ್ ॥
ಅನುವಾದ
ಶ್ರೀರಾಮನು ಒಬ್ಬಂಟಿಗನಾಗಿ ದಿನದ ಎಂಟನೆಯ ಒಂದು ಭಾಗದಲ್ಲಿ (ಒಂದೂವರೆ ಗಂಟೆಯಲ್ಲಿ) ಅಗ್ನಿಜ್ವಾಲೆಗಳಂತಿರುವ ತೇಜಸ್ವೀ ಬಾಣಗಳಿಂದ ಕಾಮರೂಪಿಗಳಾದ ರಾಕ್ಷಸರ ವಾಯುವೇಗದಂತಿದ್ದ ಹತ್ತು ಸಾವಿರ ರಥಗಳನ್ನು, ಹದಿನೆಂಟು ಸಾವಿರ ವೇಗಿಗಳಾದ ಆನೆಗಳನ್ನು, ಹದಿನಾಲ್ಕು ಸಾವಿರ ಅಶ್ವಸೈನ್ಯವನ್ನು ಹಾಗೂ ಎರಡು ಲಕ್ಷ ಪದಾತಿ ನಿಶಾಚರರ ಸೈನ್ಯವನ್ನು ಸಂಹಾರಮಾಡಿಬಿಟ್ಟನು.॥31-33॥
ಮೂಲಮ್ - 34
ತೇ ಹತಾಶ್ಚಾ ಹತರಥಾಃ ಶಾಂತಾ ವಿಮಥಿತ ಧ್ವಜಾಃ ।
ಅಭಿಪೇತುಃ ಪುರೀಂ ಲಂಕಾಂ ಹತಶೇಷಾ ನಿಶಾಚರಾಃ ॥
ಅನುವಾದ
ಕುದುರೆಗಳು, ರಥಗಳೂ ನಾಶವಾಗಿ, ಧ್ವಜಗಳು ಮುರಿದು ಹೋದಾಗ ಸಾಯದೇ ಬದುಕುಳಿದ ನಿಶಾಚರರು ಶಾಂತರಾಗಿ ಲಂಕಾಪಟ್ಟಣಕ್ಕೆ ಓಡಿಹೋದರು.॥34॥
ಮೂಲಮ್ - 35
ಹತೈರ್ಗಜಪದಾತ್ಯಶ್ವೈಸ್ತದ್ ಬಭೂವ ರಣಾಜಿರಮ್ ।
ಆಕ್ರೀಡಭೂಮಿಃ ಕ್ರುದ್ಧಸ್ಯ ರುದ್ರಸ್ಯೇವಮಹಾತ್ಮನಃ ॥
ಅನುವಾದ
ಹತರಾಗಿ ಬಿದ್ದಿದ್ದ ಗಜಾಶ್ವ-ಪದಾತಿಗಳ ಹೆಣಗಳಿಂದ ತುಂಬಿಹೋದ ಆ ರಣಭೂಮಿಯು ಕುಪಿತನಾದ ರುದ್ರನ ಕ್ರೀಡಾಭೂಮಿಯಂತೆ ಕಂಡುಬರುತ್ತಿತ್ತು.॥35॥
ಮೂಲಮ್ - 36
ತತೋ ದೇವಾಃ ಸಗಂಧರ್ವಾಃ ಸಿದ್ಧಾಶ್ಚ ಪರಮರ್ಷಯಃ ।
ಸಾಧು ಸಾಧ್ವಿತಿ ರಾಮಸ್ಯ ತತ್ಕರ್ಮ ಸಮಪೂಜಯನ್ ॥
ಅನುವಾದ
ಬಳಿಕ ದೇವ-ಗಂಧರ್ವ- ಸಿದ್ಧ-ಮಹರ್ಷಿಗಳು ಭಗವಾನ್ ಶ್ರೀರಾಮನ ಈ ಪರಮಾದ್ಭುತ ಕಾರ್ಯವನ್ನು ನೋಡಿ ಸಾಧು! ಸಾಧು! ಎಂದು ಪ್ರಶಂಸಿಸಿದರು.॥36॥
ಮೂಲಮ್ - 37
ಅಬ್ರವೀಚ್ಚತದಾ ರಾಮಃ ಸುಗ್ರೀವಂ ಪ್ರತ್ಯನಂತರಮ್ ।
ವಿಭೀಷಣಂ ಚ ಧರ್ಮಾತ್ಮಾ ಹನೂಮಂತಂ ಚ ವಾನರಮ್ ॥
ಮೂಲಮ್ - 38
ಜಾಂಬವಂತಂ ಹರಿಶ್ರೇಷ್ಠಂ ಮೈದಂ ದ್ವಿವಿದಮೇವ ಚ ।
ಏತದಸ್ತ್ರಬಲಂ ದಿವ್ಯಂ ಮಮ ವಾ ತ್ರ್ಯಂಬಕಸ್ಯ ವಾ ॥
ಅನುವಾದ
ಆಗ ಧರ್ಮಾತ್ಮನಾದ ಶ್ರೀರಾಮನು ತನ್ನ ಸಮೀಪದಲ್ಲಿ ನಿಂತಿದ್ದ ಸುಗ್ರೀವ, ವಿಭೀಷಣ, ಕಪಿಶ್ರೇಷ್ಠ ಹನುಮಂತ, ಜಾಂಬವಂತ ಹಾಗೂ ಮೈಂದ, ದ್ವಿವಿದರಲ್ಲಿ ಹೇಳಿದನು- ಈ ದಿವ್ಯಾಸ್ತ್ರ ಬಲವು ನನ್ನಲ್ಲಿದೆ ಮತ್ತು ಭಗವಾನ್ ಶಿವನಲ್ಲಿ ಇದೆ; ಬೇರೆ ಯಾರಲ್ಲಿಯೂ ಇಲ್ಲ.॥37-38॥
ಮೂಲಮ್ - 39
ನಿಹತ್ಯ ತಾಂ ರಾಕ್ಷಸರಾಜವಾಹಿನೀಂ
ರಾಮಸ್ತದಾ ಶಕ್ರಸಮೋ ಮಹಾತ್ಮಾ ।
ಅಸ್ತ್ರೇಷು ಶಸ್ತ್ರೇಷು ಜಿತಕ್ಲಮಶ್ಚ
ಸಂಸ್ತೂಯತೇ ದೇವಗಣೈಃ ಪ್ರಹೃಷ್ಟೈಃ ॥
ಅನುವಾದ
ಇಂದ್ರನಂತೆ ಪರಾಕ್ರಮಿಯಾದ ಧರ್ಮಾತ್ಮಾ ಶ್ರೀರಾಮನು ಅಸ್ತ್ರ-ಶಸ್ತ್ರ ಪ್ರಯೋಗದಿಂದ ಸ್ವಲ್ಪವೂ ಆಯಾಸಗೊಂಡಿರಲಿಲ್ಲ. ಆ ರಾಕ್ಷಸರಾಜನ ಸೈನ್ಯವನ್ನು ಸಂಹರಿಸಿ ರಾಮನು, ಹರ್ಷಗೊಂಡ ದೇವತೆಗಳಿಂದ ಪೂಜಿತನಾಗಿ ಪ್ರಶಂಸೆಗೆ ಪಾತ್ರನಾದನು.॥3.॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ತೊಂಭತ್ತಮೂರನೆಯ ಸರ್ಗ ಪೂರ್ಣವಾಯಿತು.॥93॥