०९२ रावणेन पुत्रमरणशोकः

वाचनम्
ಭಾಗಸೂಚನಾ

ರಾವಣನ ಶೋಕ, ಸೀತೆಯನ್ನು ಸಂಹರಿಸಲು ಹೋದುದು, ಸುಪಾರ್ಶ್ವನಿಂದ ಆಶ್ವಾಸನೆ

ಮೂಲಮ್ - 1

ತತಃ ಪೌಲಸ್ತ್ಯಸಚಿವಾಃ ಶ್ರುತ್ವಾಚೇಂದ್ರಜಿತೋ ವಧಮ್ ।
ಆಚಚಕ್ಷುರಭಿಜ್ಞಾಯ ದಶಗ್ರೀವಾಯ ಸತ್ವರಾಃ ॥

ಅನುವಾದ

ರಾವಣನ ಮಂತ್ರಿಗಳು ಇಂದ್ರಜಿತುವಿನ ವಧೆಯ ಸಮಾಚಾರವನ್ನು ಕೇಳಿ, ಸ್ವತಃ ಪ್ರತ್ಯಕ್ಷ ನೋಡಿ ನಿಶ್ಚಯಿಸಿಕೊಂಡು, ದಶಮುಖ ರಾವಣನ ಬಳಿಗೆ ಹೋಗಿ ಎಲ್ಲ ವೃತ್ತಾಂತವನ್ನು ತಿಳಿಸಿದರು.॥1॥

ಮೂಲಮ್ - 2

ಯುದ್ಧೇ ಹತೋ ಮಹಾರಾಜ ಲಕ್ಷ್ಮಣೇನ ತವಾತ್ಮಜಃ ।
ವಿಭೀಷಣ ಸಹಾಯೇನ ಮಿಷತಾಂ ನೋ ಮಹಾದ್ಯುತಿಃ ॥

ಅನುವಾದ

ಮಹಾರಾಜರೇ! ಯುದ್ಧದಲ್ಲಿ ವಿಭೀಷಣನ ಸಹಾಯ ಪಡೆದು ಲಕ್ಷ್ಮಣನು ನಿಮ್ಮ ಮಹಾತೇಜಸ್ವೀ ಪುತ್ರನನ್ನು ನಮ್ಮ ಸೈನಿಕರು ನೋಡು ನೋಡುತ್ತಿರುವಂತೆ ಕೊಂದು ಹಾಕಿದನು.॥2॥

ಮೂಲಮ್ - 3½

ಶೂರಃ ಶೂರೇಣ ಸಂಗಮ್ಯ ಸಂಯುಗೇಷ್ವ ಪರಾಜಿತಃ ।
ಲಕ್ಷ್ಮಣೇನ ಹತಃ ಶೂರಃ ಪುತ್ರಸ್ತೇ ವಿಬುಧೇಂದ್ರಜಿತ್ ॥
ಗತಃ ಸ ಪರಮಾಂಲ್ಲೋಕಾನ್ಶರೈಃ ಸಂತರ್ಷ್ಯ ಲಕ್ಷ್ಮಣಮ್ ।

ಅನುವಾದ

ದೇವೇಂದ್ರನನ್ನು ಸೋಲಿಸಿದ, ಮೊದಲು ಯುದ್ಧದಲ್ಲಿ ಎಂದೂ ಪರಾಜಯವಾಗದ, ಆ ಶೂರ ನಿಮ್ಮ ಪುತ್ರ ಇಂದ್ರಜಿತನು ಶೌರ್ಯಸಂಪನ್ನ ಲಕ್ಷ್ಮಣನೊಂದಿಗೆ ಕಾದಾಡಿ ಅವನಿಂದ ಹತನಾದನು. ಅವನು ತನ್ನ ಉತ್ತಮ ಬಾಣಗಳಿಂದ ಲಕ್ಷ್ಮಣನನ್ನು ಪೂರ್ಣತೃಪ್ತಗೊಳಿಸಿ ಉತ್ತಮಲೋಕಕ್ಕೆ ತೆರಳಿದನು.॥3½॥

ಮೂಲಮ್ - 4½

ಸ ತಂ ಪ್ರತಿಭಯಂ ಶ್ರುತ್ವಾ ವಧಂ ಪುತ್ರಸ್ಯ ದಾರುಣಮ್ ॥
ಘೋರಮಿಂದ್ರಜಿತಃ ಸಂಖ್ಯೇ ಕಶ್ಮಲಂ ಪ್ರಾವಿಶನ್ಮಹತ್ ।

ಅನುವಾದ

ಯುದ್ಧದಲ್ಲಿ ತನ್ನ ಪುತ್ರ ಇಂದ್ರಜಿತನ ಭಯಾನಕ ವಧೆಯ ಘೋರ ಮತ್ತು ದಾರುಣವಾದ ಸಮಾಚಾರ ಕೇಳಿ ರಾವಣನಿಗೆ ಮೂರ್ಛೆ ಉಂಟಾಯಿತು.॥4½॥

ಮೂಲಮ್ - 5½

ಉಪಲಭ್ಯಚಿರಾತ್ ಸಂಜ್ಞಾಂ ರಾಜಾ ರಾಕ್ಷಸಪುಂಗವಃ ॥
ಪುತ್ರಶೋಕಾಕುಲೋ ದೀನೋ ವಿಲಲಾಪಾಕುಲೇಂದ್ರಿಯಃ ।

ಅನುವಾದ

ಎಷ್ಟೋ ಹೊತ್ತಿನಲ್ಲಿ ಎಚ್ಚರಗೊಂಡ ರಾಕ್ಷಸ ಶ್ರೇಷ್ಠ ರಾವಣನು ಪುತ್ರಶೋಕದಿಂದ ವ್ಯಾಕುಲನಾಗಿ ಎಲ್ಲ ಇಂದ್ರಿಯಗಳು ಶಿಥಿಲವಾಗಿ, ದೀನತೆಯಿಂದ ವಿಲಾಪಿಸತೊಡಗಿದನು.॥5½॥

ಮೂಲಮ್ - 6½

ಹಾ ರಾಕ್ಷಸ ಚಮೂಮುಖ್ಯಮಮ ವತ್ಸ ಮಹಾಬಲ ॥
ಜಿತ್ವೇಂದ್ರಂ ಕಥಮದ್ಯ ತ್ವಂ ಲಕ್ಷ್ಮಣಸ್ಯ ವಶಂ ಗತಃ ।

ಅನುವಾದ

ರಾಕ್ಷಸಸೇನಾ ಪ್ರಮುಖನೇ! ಮಹಾಬಲನೇ! ಅಯ್ಯೋ ಮಗನೇ! ನೀನಾದರೋ ಮೊದಲು ಇಂದ್ರನನ್ನು ಜಯಿಸಿದ್ದೆ. ಹಾಗಿರುವಾಗ ನೀನು ಇಂದು ಹುಲುಮಾನವ ಲಕ್ಷ್ಮಣನಿಗೆ ಹೇಗೆ ವಶನಾದೆ.॥6½॥

ಮೂಲಮ್ - 7½

ನನು ತ್ವಮಿಷುಭಿಃ ಕ್ರುದ್ಧೋ ಭಿಂದ್ಯಾಃ ಕಾಲಾಂತಕಾವಪಿ ॥
ಮಂದರಸ್ಯಾಪಿ ಶೃಂಗಾಣಿ ಕಿಂ ಪುನರ್ಲಕ್ಷ್ಮಣಂ ಯುಧಿ ।

ಅನುವಾದ

ಮಗನೇ! ನೀನು ಕುಪಿತನಾದಾಗ ಬಾಣಗಳಿಂದ ಕಾಲ ಮತ್ತು ಅಂತಕನನ್ನು ಸೀಳಿ ಹಾಕುತ್ತಿದ್ದೆ. ಮಂದರಾಚಲದ ಶಿಖರಗಳನ್ನು ಪುಡಿ ಮಾಡಿಬಿಡುತ್ತಿದ್ದೆ; ಹಾಗಿರುವಾಗ ಯುದ್ಧದಲ್ಲಿ ಲಕ್ಷ್ಮಣನನ್ನು ಸಂಹರಿಸುವುದು ನಿನಗೆ ಯಾವ ದೊಡ್ಡ ವಿಷಯವಾಗಿತ್ತು.॥7½॥

ಮೂಲಮ್ - 8½

ಅದ್ಯ ವೈವಸ್ವತೋ ರಾಜಾ ಭೂಯೋ ಬಹುಮತೋ ಮಮ ॥
ಯೇನಾದ್ಯ ತ್ವಂ ಮಹಾಬಾಹೋ ಸಂಯುಕ್ತಃ ಕಾಲಧರ್ಮಣಾ ।

ಅನುವಾದ

ಮಹಾಬಾಹೋ! ಸೂರ್ಯಪುತ್ರ ಯಮನೇ ನನಗಿಂತ ಹೆಚ್ಚು ಪ್ರಭಾವಶಾಲಿ ಎಂದು ನಾನು ಭಾವಿಸುತ್ತೇನೆ. ಅವನು ನಿನ್ನನ್ನು ಕೂಡ ಕಾಲ ಧರ್ಮದೊಡನೆ ಸಂಯುಕ್ತಗೊಳಿಸಿದನಲ್ಲ.॥8½॥

ಮೂಲಮ್ - 9

ಏಷ ಪಂಥಾಃ ಸುಯೋಧಾನಾಂ ಸರ್ವಾಮರಗಣೇಷ್ವಪಿ ।
ಯಃ ಕೃತೇ ಹನ್ಯತೇ ಭರ್ತುಃ ಸ ಪುಮಾನ್ ಸ್ವರ್ಗಮೃಚ್ಛತಿ ॥

ಅನುವಾದ

ತನ್ನ ಸ್ವಾಮಿಗಾಗಿ ಯುದ್ಧದಲ್ಲಿ ಮಡಿಯುವವನು ಸ್ವರ್ಗಲೋಕಕ್ಕೆ ಹೋಗುತ್ತಾನೆ. ಮಾನವ- ರಾಕ್ಷಸ-ದೇವತೆಗಳಿಗೂ ಇದೇ ರಾಜಮಾರ್ಗವಾಗಿದೆ.॥9॥

ಮೂಲಮ್ - 10

ಅದ್ಯ ದೇವಗಣಾಃ ಸರ್ವೇ ಲೋಕಪಾಲಾ ಮಹರ್ಷಯಃ ।
ಹತಮಿಂದ್ರಜಿತಂ ಶ್ರುತ್ವಾ ಸುಖಂ ಸ್ವಪ್ಸ್ಯಂತಿ ನಿರ್ಭಯಾಃ ॥

ಅನುವಾದ

ಸಮಸ್ತ ದೇವತೆಗಳು ಲೋಕಪಾಲಕರು ಹಾಗೂ ಮಹರ್ಷಿಗಳು ಇಂದು ಇಂದ್ರಜಿತು ಹತನಾದುದನ್ನು ಕೇಳಿ ನಿರ್ಭಯವಾಗಿ ನಿದ್ದೆ ಮಾಡುವರು.॥10॥

ಮೂಲಮ್ - 11

ಅದ್ಯ ಲೋಕಾಸ್ತ್ರಯಃ ಕೃತ್ಸ್ನಾ ಪೃಥಿವೀ ಚ ಸಕಾನನಾ ।
ಏಕೇನೇಂದ್ರಜಿತಾ ಹೀನಾ ಶೂನ್ಯೇವ ಪ್ರತಿಭಾತಿ ಮೇ ॥

ಅನುವಾದ

ಒಬ್ಬ ಇಂದ್ರಜಿತನು ಇಲ್ಲದಿರುವುದರಿಂದ ಇಂದು ನನಗೆ ಮೂರು ಲೋಕಗಳು, ಕಾನನಗಳ ಸಹಿತ ಇಡೀ ಪೃಥಿವಿಯೂ ಬರಿದಾಗಿ ಕಾಣುತ್ತದೆ.॥11॥

ಮೂಲಮ್ - 12

ಅದ್ಯ ನೈರ್ಋತಕನ್ಯಾನಾಂ ಶ್ರೋಷ್ಯಾಮ್ಯಂತಃಪುರೇ ರವಮ್ ।
ಕರೇಣುಸಂಘಸ್ಯ ಯಥಾ ನಿನಾದಂ ಗಿರಿಗಹ್ವರೇ ॥

ಅನುವಾದ

ಗಜರಾಜನು ಸತ್ತುಹೋದಾಗ ಹೆಣ್ಣಾನೆಗಳ ಆರ್ತನಾದ ಪರ್ವತದ ಕಂದರಗಳಲ್ಲಿ ಕೇಳಿ ಬರುವಂತೆಯೇ ಇಂದು ಅಂತಃಪುರದಲ್ಲಿನ ರಾಕ್ಷಸ ಕನ್ಯೆಯರ ಕರುಣಾಕ್ರಂದನ ನನಗೆ ಕೇಳಿ ಬಂದಿತು.॥12॥

ಮೂಲಮ್ - 13

ಯೌವರಾಜ್ಯಂ ಚ ಲಂಕಾಂ ಚ ರಕ್ಷಾಂಸಿ ಚ ಪರಂತಪ ।
ಮಾತರಂ ಮಾಂ ಚ ಭಾರ್ಯಾಶ್ಚ ಚ ಕ್ವ ಗತೋಽಸಿ ವಿಹಾಯ ನಃ ॥

ಅನುವಾದ

ಪರಂತಪ ಪುತ್ರನೇ! ಇಂದು ತನ್ನ ಯುವರಾಜಪದವನ್ನು, ಲಂಕೆಯನ್ನು, ಸಮಸ್ತ ರಾಕ್ಷಸ ರನ್ನು ತನ್ನ ತಾಯಿಯನ್ನು, ನನ್ನನ್ನು ಮತ್ತು ತನ್ನ ಪತ್ನಿಯನ್ನು ಬಿಟ್ಟಿ ನೀನು ಎಲ್ಲಿಗೆ ಹೋದೆ.॥1.॥

ಮೂಲಮ್ - 14

ಮಮ ನಾಮ ತ್ವಯಾ ವೀರ ಗತಸ್ಯ ಯಮಸಾದನಮ್ ।
ಪ್ರೇತಕಾರ್ಯಾಣಿ ಕಾರ್ಯಾಣಿ ವಿಪರೀತೇ ಹಿ ವರ್ತಸೇ ॥

ಅನುವಾದ

ವೀರನೇ! ನಾನು ಮೊದಲು ಯಮಲೋಕಕ್ಕೆ ಹೋಗಿ ನೀನು ಇಲ್ಲಿದ್ದು ಪ್ರೇತ ಕಾರ್ಯಮಾಡಬೇಕಾಗಿತ್ತು. ಆದರೆ ನೀನೇ ನನಗಿಂತ ಮೊದಲು ಹೊರಟು ಹೋಗಿ ನಾನು ನಿನ್ನ ಔರ್ಧದೇಹಿಕ ಕಾರ್ಯಮಾಡಬೇಕಾಯಿತಲ್ಲ.॥14॥

ಮೂಲಮ್ - 15

ಸ ತ್ವಂ ಜೀವತಿಸುಗ್ರೀವೇ ಲಕ್ಷ್ಮಣೇ ಚ ಸ ರಾಘವೇ ।
ಮಮ ಶಲ್ಯಮನುದ್ಧೃತ್ಯ ಕ್ವಗತೋಸಿ ವಿಹಾಯ ನಃ ॥

ಅನುವಾದ

ಅಯ್ಯೋ! ರಾಮ-ಲಕ್ಷ್ಮಣ ಮತ್ತು ಸುಗ್ರೀವ ಇನ್ನೂ ಬದುಕಿದ್ದಾರಲ್ಲ! ಇಂತಹ ಸ್ಥಿತಿಯಲ್ಲಿ ನನ್ನ ಹೃದಯದ ಮುಳ್ಳನ್ನು ನೀನು ಕೀಳದೆಯೇ ಎಲ್ಲಿಗೆ ಹೊರಟುಹೋದೆ.॥15॥

ಮೂಲಮ್ - 16

ಏವಮಾದಿವಿಲಾಪಾರ್ತಂ ರಾವಣಂ ರಾಕ್ಷಸಾಧಿಪಮ್ ।
ಆವಿವೇಶ ಮಹಾನ್ಕೋಪಃ ಪುತ್ರವ್ಯಸನ ಸಂಭವಃ ॥

ಅನುವಾದ

ಹೀಗೆ ಆರ್ತನಾಗಿ ವಿಲಾಪಿಸುತ್ತಿರುವ ರಾಕ್ಷಸರಾಜ ರಾವಣನ ಹೃದಯದಲ್ಲಿ ಪುತ್ರವಧೆಯ ಸ್ಮರಣೆಯಾಗಿ ಮಹಾಕ್ರೋಧದ ಆವೇಶ ಉಂಟಾಯಿತು.॥16॥

ಮೂಲಮ್ - 17

ಪ್ರಕೃತ್ಯಾ ಕೋಪನಂ ಹ್ಯೇನಂ ಪುತ್ರಸ್ಯ ಪುನರಾಧಯಃ ।
ದೀಪ್ತಂ ಸಂದೀಪಯಾಮಾಸುರ್ಘಮೇಽರ್ಕಮಿವ ರಶ್ಮಯಃ ॥

ಅನುವಾದ

ಒಂದು ಅವನು ಸ್ವಭಾವದಿಂದಲೇ ಕ್ರೋಧಿಯಾಗಿದ್ದನು, ಇನ್ನೊಂದು ಪುತ್ರನ ಚಿಂತೆಯಿಂದ ಉತ್ತೇತವಾಗಿದ್ದನು. ಗ್ರೀಷ್ಮಋತುವಿನಲ್ಲಿ ಸೂರ್ಯ ಕಿರಣಗಳನ್ನು ಇನ್ನೂ ಪ್ರಚಂಡವಾಗಿಸುವಂತೆ ಉರಿಯುತ್ತಿರುವವನ್ನು ಇನ್ನೂ ಸುಡತೊಡಗಿತು.॥17॥

ಮೂಲಮ್ - 18

ಲಲಾಟೇ ಭ್ರುಕುಟೀಭಿಶ್ಚ ಸಂಗತಾಭಿರ್ವ್ಯರೋಚತ ।
ಯುಗಾಂತೇ ಸಹ ನಕ್ರೈಸ್ತು ಮಹೋರ್ಮಿಭಿರಿವೋದಧಿಃ ॥

ಅನುವಾದ

ಹುಬ್ಬೇರಿಸಿದ ಅವನು ಪ್ರಳಯಕಾಲದಲ್ಲಿ ಮೊಸಳೆ ಮತ್ತು ದೊಡ್ಡ ದೊಡ್ಡ ಅಲೆಗಳಿಂದ ಶೋಭಿಸುವ ಮಹಾಸಾಗರದಂತೆ ಸುಶೋಭಿತನಾಗಿದ್ದನು.॥18॥

ಮೂಲಮ್ - 19

ಕೋಪಾದ್ವಿಜೃಂಭಮಾಣಸ್ಯ ವಕ್ತ್ರಾದ್ ವ್ಯಕ್ತಮಿವಜ್ವಲನ್ ।
ಉತ್ಪಪಾತ ಸ ಧೂಮಾಗ್ನಿರ್ವೃತ್ರಸ್ಯ ವದನಾದಿವ ॥

ಅನುವಾದ

ವೃತ್ರಾಸುರನ ಬಾಯಿಯಿಂದ ಹೊಗೆಯಿಂದ ಕೂಡಿದ ಅಗ್ನಿಯು ಹೊರ ಹೊಮ್ಮುವಂತೆ, ಕೋಪದಿಂದ ಆಕಳಿಸುತ್ತಿದ್ದ ರಾವಣನ ಬಾಯಿಂದ ಹೊಗೆಯುಕ್ತ ಅಗ್ನಿಯು ಹೊರಹೊಮ್ಮ ತೊಡಗಿತು.॥19॥

ಮೂಲಮ್ - 20

ಸ ಪುತ್ರವಧಸಂತಪ್ತಃ ಶೂರಃ ಕ್ರೋಧವಶಂ ಗತಃ ।
ಸಮೀಕ್ಷ್ಯ ರಾವಣೋ ಬುದ್ಧ್ಯಾ ವೈದೇಹ್ಯಾ ರೋಚಯದ್ವಧಮ್ ॥

ಅನುವಾದ

ಮಗನ ವಧೆಯಿಂದ ಪರಿತಪಿಸುತ್ತಿದ್ದ ಶೂರ ರಾವಣನು ಕ್ರೋಧಕ್ಕೆ ವಶೀಭೂತನಾಗಿ ಯೋಚಿಸುತ್ತಾ, ವೈದೇಹಿಯನ್ನು ವಧಿಸುವುದೇ ಯುಕ್ತವೆಂದು ನಿಶ್ಚಯಿಸಿದನು.॥20॥

ಮೂಲಮ್ - 21

ತಸ್ಯ ಪ್ರಕೃತ್ಯಾ ರಕ್ತೇಚ ರಕ್ತೇ ಕ್ರೋಧಾಗ್ನಿನಾಪಿ ಚ ।
ರಾವಣಸ್ಯ ಮಹಾಘೋರೇ ದೀಪ್ತೇ ನೇತ್ರೇ ಬಭೂವತುಃ ॥

ಅನುವಾದ

ರಾವಣನ ಕಣ್ಣುಗಳು ಮೊದಲೇ ಕೆಂಪಾಗಿದ್ದವು. ಈಗ ಕ್ರೋಧಾಗ್ನಿಯಿಂದ ಇನ್ನೂ ಕೆಂಪಾಗಿ, ಅವನ ಆ ಉರಿಯುತ್ತಿರುವ ನೇತ್ರಗಳು ಮಹಾ ಘೋರವಾಗಿ ಕಾಣುತ್ತಿದ್ದವು.॥21॥

ಮೂಲಮ್ - 22

ಘೋರಂ ಪ್ರಕೃತ್ಯಾರೂಪಂ ತತ್ತಸ್ಯ ಕ್ರೋಧಾಗ್ನಿ ಮೂರ್ಛಿತಮ್ ।
ಬಭೂವ ರೂಪಂ ಕ್ರುದ್ಧಸ್ಯ ರುದ್ರಸ್ಯೇವ ದುರಾಸದಮ್ ॥

ಅನುವಾದ

ರಾವಣನ ರೂಪ ಸ್ವಾಭಾವಿಕವಾಗಿಯೇ ಭಯಂಕರವಾಗಿತ್ತು. ಈಗ ಕ್ರೋಧಾಗ್ನಿಯ ಪ್ರಭಾವದಿಂದ ಇನ್ನು ಭಯಾನಕವಾಗಿತ್ತು. ಕುಪಿತನಾದ ರುದ್ರನಂತೆ ದುರ್ಜಯನಾಗಿ ಕಂಡು ಬರತೊಡಗಿದನು.॥22॥

ಮೂಲಮ್ - 23

ತಸ್ಯ ಕ್ರುದ್ಧಸ್ಯ ನೇತ್ರಾಭ್ಯಾಂ ಪ್ರಾಪತನ್ನಶ್ರುಬಿಂದವಃ ।
ದೀಪ್ತಾಭ್ಯಾಮಿವ ದೀಪಾಭ್ಯಾಂ ಸಾರ್ಚಿಷಃ ಸ್ನೇಹಬಿಂದವಃ ॥

ಅನುವಾದ

ಉರಿಯುವ ದೀಪದಿಂದ ಎಣ್ಣೆಯ ತೊಟ್ಟುಗಳು ಬೀಳುವಂತೆ ಕ್ರೋಧಗೊಂಡ ಆ ನಿಶಾಚರನ ಕಣ್ಣುಗಳಿಂದ ಕಣ್ಣೀರಿನ ಬಿಂದುಗಳು ಉದುರುತ್ತಿದ್ದವು.॥23॥

ಮೂಲಮ್ - 24

ದಂತಾನ್ ವಿದಶತಸ್ತಸ್ಯ ಶ್ರೂಯತೇ ದಶನಸ್ವನಃ ।
ಯಂತ್ರಸ್ಯಾಕೃಷ್ಯಮಾಣಸ್ಯ ಮಥ್ನತೋ ದಾನವೈರಿವ ॥

ಅನುವಾದ

ಆಗ ಅವನು ಹಲ್ಲು ಕಡಿಯುವಾಗ ಅದರ ಕಟಕಟ ಶಬ್ದ ಕೇಳಿ ಬರುತ್ತಿತ್ತು. ಅದು ಸಮುದ್ರಮಂಥನದ ಸಮಯ ದಾನವರಿಂದ ಎಳೆಯಲ್ಪಟ್ಟ ಕಡೆಗೋಲಾದ ಮಂದರಾಚಲದ ಧ್ವನಿಯಂತೆ ಅನಿಸುತ್ತಿತ್ತು.॥24॥

ಮೂಲಮ್ - 25

ಕಾಲಾಗ್ನಿ ರಿವ ಸಂಕ್ರುದ್ಧೋ ಯಾಂ ಯಾಂ ದಿಶಮವೈಕ್ಷತ ।
ತಸ್ಯಾಂ ತಸ್ಯಾಂ ಭಯತ್ರಸ್ತಾ ರಾಕ್ಷಸಾಃ ಸಂವಿಲಿಲ್ಯಿರೇ ॥

ಅನುವಾದ

ಕಾಲಾಗ್ನಿಯಂತೆ ಅತ್ಯಂತ ಕುಪಿತನಾಗಿ ಅವನು ದೃಷ್ಟಿಹರಿಸಿದ ದಿಕ್ಕಿನಲ್ಲಿ ನಿಂತಿರುವ ರಾಕ್ಷಸರು ಭಯಗೊಂಡು ಕಂಬಗಳ ಹಿಂದೆ ಅವಿತುಕೊಳ್ಳುತ್ತಿದ್ದರು.॥25॥

ಮೂಲಮ್ - 26

ತಮಂತಕಮಿವ ಕ್ರುದ್ಧಂ ಚರಾಚರಚಿಖಾದಿಷುಮ್ ।
ವೀಕ್ಷಮಾಣಂ ದಿಶಃ ಸರ್ವಾ ರಾಕ್ಷಸಾ ನೋಪಚಕ್ರಮುಃ ॥

ಅನುವಾದ

ಚರಾಚರ ಪ್ರಾಣಿಗಳನ್ನು ನುಂಗಲು ಇಚ್ಛಿಸುವ ಕಾಲನಂತೆ ಎಲ್ಲ ದಿಕ್ಕುಗಳನ್ನು ನೋಡುತ್ತಾ ಇರುವ ರಾಮನ ಬಳಿಯಲ್ಲಿ ರಾಕ್ಷಸರು ಸುಳಿಯುತ್ತಿರಲಿಲ್ಲ.॥26॥

ಮೂಲಮ್ - 27

ತತಃ ಪರಮಸಂಕ್ರುದ್ಧೋ ರಾವಣೋ ರಾಕ್ಷಸಾಧಿಪಃ ।
ಅಬ್ರವೀದ್ರಕ್ಷಸಾಂ ಮಧ್ಯೇ ಸಂಸ್ತಂಭಯಿಷುರಾಹವೇ ॥

ಅನುವಾದ

ಆಗ ಅತ್ಯಂತ ಕುಪಿತನಾದ ರಾವಣೇಶ್ವರನು ಯುದ್ಧದಲ್ಲಿ ರಾಕ್ಷಸನನ್ನು ನೇಮಿಸಲು ಅವರ ನಡುವೆ ನಿಂತು ಹೇಳಿದನು.॥27॥

ಮೂಲಮ್ - 28

ಮಯಾ ವರ್ಷಸಹಸ್ರಾಣಿ ಚರಿತ್ವಾ ಪರಮಂ ತಪಃ ।
ತೇಷು ತೇಷ್ವ ವಕಾಶೇಷು ಸ್ವಯಂಭೂಃ ಪರಿತೋಷಿತಃ ॥

ಅನುವಾದ

ನಿಶಾಚರರೇ! ನಾನು ಸಾವಿರಾರು ವರ್ಷ ತಪಸ್ಸು ಮಾಡಿ ಸ್ವಯಂಭೂ ಬ್ರಹ್ಮದೇವರನ್ನು ಒಲಿಸಿಕೊಂಡಿದ್ದೆ.॥28॥

ಮೂಲಮ್ - 29

ತಸ್ಯೈವ ತಪಸೋ ವ್ಯಷ್ಟ್ಯಾ ಪ್ರಸಾದಾಚ್ಚ ಸ್ವಯಂಭುವಃ ।
ನಾಸುರೇಭ್ಯೋ ನ ದೇವೇಭ್ಯೋ ಭಯಂ ಮಮ ಕದಾಚನ ॥

ಅನುವಾದ

ಆ ತಪಸ್ಸಿನ ಫಲದಿಂದ ಬ್ರಹ್ಮದೇವರ ಕೃಪೆಯಿಂದ ನನಗೆ ದೇವತೆಗಳಿಂದ ಅಸುರರಿಂದ ಯಾವ ಭಯವಿಲ್ಲ.॥29॥

ಮೂಲಮ್ - 30

ಕವಚಂ ಬ್ರಹ್ಮದತ್ತಂ ಮೇ ಯದಾದಿತ್ಯಸಮಪ್ರಭಮ್ ।
ದೇವಾಸುರವಿಮರ್ದೇಷು ನ ಭಿನ್ನಂ ವಜ್ರಮುಷ್ಟಿಭಿಃ ॥

ಅನುವಾದ

ಬ್ರಹ್ಮದೇವರು ಕೊಟ್ಟಿರುವ ಸೂರ್ಯನಂತೆ ಹೊಳೆಯುವ ಕವಚ ನನ್ನ ಬಳಿ ಇದೆ. ದೇವಾಸುರರೊಡನೆ ನಡೆದ ಸಂಗ್ರಾಮದಲ್ಲಿ ಅದು ವಜ್ರಾಯುಧದಿಂದಲೂ ಪುಡಿಯಾಗಲಿಲ್ಲ.॥30॥

ಮೂಲಮ್ - 31

ತೇನ ಮಾಮದ್ಯ ಸಂಯುಕ್ತಂ ರಥಸ್ಥಮಿಹ ಸಂಯುಗೇ ।
ಪ್ರತೀಯಾತ್ಕೋಽದ್ಯ ಮಾಮಾಜೌ ಸಾಕ್ಷಾದಪಿ ಪುರಂದರಃ ॥

ಅನುವಾದ

ಇಂದು ನಾನು ಯುದ್ಧಕ್ಕೆ ಸಿದ್ಧನಾಗಿ ರಥಾರೂಢನಾಗಿ ರಣರಂಗದಲ್ಲಿ ನಿಂತುಕೊಂಡರೆ, ಯಾರು ತಾನೇ ನನ್ನ ಎದುರಿಗೆ ನಿಲ್ಲಬಲ್ಲನು? ಸಾಕ್ಷಾತ್ ಇಂದ್ರನೂ ಕೂಡ ನನ್ನೊಡನೆ ಯುದ್ಧ ಮಾಡಲು ಸಾಹಸ ಮಾಡಲಾರನು.॥31॥

ಮೂಲಮ್ - 32

ಯತ್ತದಾಭಿಪ್ರಸನ್ನೇನ ಸಶರಂ ಕಾರ್ಮುಕಂ ಮಹತ್ ।
ದೇವಾಸುರವಿಮರ್ದೇಷು ಮಮ ದತ್ತಂ ಸ್ವಯಂಭುವಾ ॥

ಮೂಲಮ್ - 33

ಅದ್ಯ ತೂರ್ಯಶತೈರ್ಭೀಮಂ ಧನುರುತ್ಥಾಪ್ಯತಾಂ ಮಮ ।
ರಾಮಲಕ್ಷ್ಮಣಯೋರೇವ ವಧಾಯ ಪರಮಾಹವೇ ॥

ಅನುವಾದ

ಅಂದು ದೇವಾಸುರರ ಸಂಗ್ರಾಮದಲ್ಲಿ ಪ್ರಸನ್ನರಾದ ಬ್ರಹ್ಮದೇವರು ಕರುಣಿಸಿದ ಬಾಣಸಹಿತ ವಿಶಾಲವಾದ ಭಯಾನಕ ಧನುಸ್ಸನ್ನು ನೂರಾರು ಮಂಗಲವಾದ್ಯಗಳೊಂದಿಗೆ ಮಹಾ ಸಮರದಲ್ಲಿ ರಾಮ-ಲಕ್ಷ್ಮಣರ ವಧೆಯನ್ನು ಮಾಡಲಿಕ್ಕಾಗಿಯೇ ಉಪಯೋಗಿಸಲಾಗುವುದು.॥32-33॥

ಮೂಲಮ್ - 34

ಸ ಪುತ್ರ ವಧಸಂತಪ್ತಃ ಕ್ರೂರಃ ಕ್ರೋಧವಶಂ ಗತಃ ।
ಸಮೀಕ್ಷ್ಯ ರಾವಣೋ ಬುದ್ಧ್ಯಾ ಸೀತಾಂ ಹಂತುಂ ವ್ಯವಸ್ಯತ ॥

ಅನುವಾದ

ಪುತ್ರವಧೆಯಿಂದ ಸಂತಪ್ತನಾಗಿ ಕ್ರೋಧಕ್ಕೆ ವಶನಾದ ಕ್ರೂರ ರಾವಣನು ತುಂಬಾ ಯೋಚಿಸಿ, ಸೀತೆಯನ್ನು ಕೊಂದುಹಾಕುವುದೆಂದೇ ನಿಶ್ಚಯಿಸಿದನು.॥34॥

ಮೂಲಮ್ - 35

ಪ್ರತ್ಯವೇಕ್ಷ್ಯತು ತಾಮ್ರಾಕ್ಷಃ ಸುಘೋರೋ ಘೋರದರ್ಶನಃ ।
ದೀನೋ ದೀನಸ್ವರಾನ್ ಸರ್ವಾಂಸ್ತಾನುವಾಚ ನಿಶಾಚರಾನ್ ॥

ಅನುವಾದ

ಅವನ ಕಣ್ಣುಗಳು ಕ್ರೋಧದಿಂದ ಕೆಂಪಾದವು, ಆಕೃತಿ ಅತ್ಯಂತ ಭಯಾನಕವಾಗಿ ಕಾಣತೊಡಗಿತು. ಅವನು ಎಲ್ಲೆಡೆ ದೃಷ್ಟಿಹರಿಸಿ ಪುತ್ರನಿಗಾಗಿ ದುಃಖಿತನಾಗಿ ದೀನಸ್ವರದಿಂದ ಸಮಸ್ತ ನಿಶಾಚರರಲ್ಲಿ ಹೇಳಿದನು-॥35॥

ಮೂಲಮ್ - 36

ಮಾಯಯಾ ಮಮ ವತ್ಸೇನ ವಂಚನಾರ್ಥಂ ವನೌಕಸಾಮ್ ।
ಕಿಂಚಿದೇವ ಹತಂ ತತ್ರ ಸೀತೇಯಮಿತಿ ದರ್ಶಿತಮ್ ॥

ಅನುವಾದ

ನನ್ನ ಮಗನು ಮಾಯೆಯಿಂದ ಕೇವಲ ದಾನವರನ್ನು ವಂಚಿಸಲು ಒಂದು ಆಕೃತಿಯನ್ನು ‘ಇವಳು ಸೀತೆ’ ಎಂದು ಹೇಳಿ ತೋರಿಸಿ ಸುಳ್ಳುಸುಳ್ಳೇ ಅದರ ವಧೆಮಾಡಿದ್ದನು.॥36॥

ಮೂಲಮ್ - 37

ತದಿದಂ ತಥ್ಯಮೇವಾಹಂ ಕರಿಷ್ಯೇ ಪ್ರಿಯಮಾತ್ಮನಃ ।
ವೈದೇಹೀಂ ನಾಶಯಿಷ್ಯಾಮಿ ಕ್ಷತ್ರಬಂಧು ಮನುವ್ರತಾಮ್ ॥

ಅನುವಾದ

ಆದರೆ ಆ ಸುಳ್ಳನ್ನು ಇಂದು ನಾನು ನಿಜವಾಗಿಸುವೆನು ಮತ್ತು ಹೀಗೆ ಮಾಡಿ ನನಗೆ ಪ್ರಿಯವಾದುದನ್ನು ಮಾಡುವೆನು. ಆ ಕ್ಷತ್ರಿಯಾಧಮ ರಾಮನಲ್ಲಿ ಅನುರಾಗವಿಟ್ಟಿರುವ ಸೀತೆ ಯನ್ನು ಕೊಂದು ಹಾಕುವೆನು.॥37॥

ಮೂಲಮ್ - 38

ಇತ್ಯೇವಮುಕ್ತ್ವಾ ಸಚಿವಾನ್ ಖಡ್ಗಮಾಶು ಪರಾಮೃಶತ್ ।
ಉದ್ಧೃತ್ಯ ಗುಣಸಂಪನ್ನಂ ವಿಮಲಾಂಬರವರ್ಚಸಮ್ ॥

ಮೂಲಮ್ - 39

ನಿಷ್ಪಪಾತ ಸ ವೇಗೇನ ಸಭಾರ್ಯಃ ಸಚಿವೈರ್ವೃತಃ ।
ರಾವಣಃ ಪುತ್ರಶೋಕೇನ ಭೃಶಮಾಕುಲಚೇತನಃ ॥

ಅನುವಾದ

ಮಂತ್ರಿಗಳಲ್ಲಿ ಹೀಗೆ ಹೇಳಿ, ತತ್ಕ್ಷಣ ಉಚಿತವಾದ ಗುಣಗಳಿಂದ ಕೂಡಿದ ಆಕಾಶದಂತೆ ನಿರ್ಮಲ ಕಾಂತಿಯುಳ್ಳ ಖಡ್ಗವನ್ನು ಒರೆಯಿಂದ ತೆಗೆದು ಪತ್ನೀ ಮತ್ತು ಮಂತ್ರಿಗಳಿಂದ ಸುತ್ತುವರಿದ ರಾವಣನು ವೇಗದಿಂದ ಮುಂದುರಿದನು. ಪುತ್ರಶೋಕದಿಂದ ಅವನ ಚೈತನ್ಯ ಉಡುಗಿಹೋದಂತೆ ಆಗಿತ್ತು.॥38-39॥

ಮೂಲಮ್ - 40

ಸಂಕ್ರುದ್ಧಃ ಖಡ್ಗಮಾದಾಯ ಸಹಸಾ ಯತ್ರ ಮೈಥಿಲೀ ।
ವ್ಯಜಂತಂ ರಾಕ್ಷಸಂ ಪ್ರೇಕ್ಷ್ಯಸಿಂಹನಾದಂ ಪ್ರಚುಕ್ರುಶುಃ ॥

ಅನುವಾದ

ಅವನು ಅತ್ಯಂತ ಕುಪಿತನಾಗಿ ಖಡ್ಗವನ್ನೆತ್ತಿಕೊಂಡು ಮಿಥಿಲೇಶಕುಮಾರಿ ಸೀತೆಯಿರುವಲ್ಲಿಗೆ ಹೋದನು. ಆ ಕಡೆಗೆ ಹೋಗುತ್ತಿರುವ ರಾಕ್ಷಸನನ್ನು ನೋಡಿ ಅವನ ಮಂತ್ರಿಗಳು ಸಿಂಹನಾದ ಮಾಡತೊಡಗಿದರು.॥40॥

ಮೂಲಮ್ - 41

ಊಚುಶ್ಚಾನ್ಯೋನ್ಯಮಾಲಿಂಗ್ಯ ಸಂಕ್ರುದ್ಧಂ ಪ್ರೇಕ್ಷ್ಯ ರಾಕ್ಷಸಮ್ ।
ಅದ್ಯೈನಂ ತಾವುಭೌ ದೃಷ್ಟ್ವಾ ಭ್ರಾತರೌ ಪ್ರವ್ಯಥಿಷ್ಯತಃ ॥

ಅನುವಾದ

ರೋಷಗೊಂಡ ರಾವಣನನ್ನು ನೋಡಿ ಅವರು ಪರಸ್ಪರ ಆಲಿಗಿಂಸಿಕೊಂಡು ನುಡಿದರು. ಇಂದು ಇದನ್ನು ನೋಡಿ ರಾಮ-ಲಕ್ಷ್ಮಣರಿಬ್ಬರೂ ಸಹೋದರರು ವ್ಯಥಿತರಾಗುವರು.॥41॥

ಮೂಲಮ್ - 42

ಲೋಕಪಾಲಾ ಹಿ ಚತ್ವಾರಃ ಕ್ರುದ್ಧೇನಾನೇನ ನಿರ್ಜಿತಾಃ ।
ಬಹವಃ ಶತ್ರವಶ್ಚಾಸ್ಯೇ ಸಂಯುಗೇಷ್ವಭಿಪಾತಿತಾಃ ॥

ಅನುವಾದ

ಏಕೆಂದರೆ ಕುಪಿತನಾದಾಗ ಈ ರಾಕ್ಷಸನು ಇಂದ್ರಾದಿನಾಲ್ಕು ಲೋಕಪಾಲಕರನ್ನು ಗೆದ್ದುಕೊಂಡಿದ್ದನು ಹಾಗೂ ಇತರ ಅನೇಕ ಶತ್ರುಗಳನ್ನು ಯುದ್ಧದಲ್ಲಿ ಕೊಂದುಹಾಕಿದ್ದನು.॥42॥

ಮೂಲಮ್ - 43

ತ್ರಿಷು ಲೋಕೇಷು ರತ್ನಾನಿ ಭುಂಕ್ತೆ ಆಹೃತ್ಯ ರಾವಣಃ ।
ವಿಕ್ರಮೇ ಚ ಬಲೇ ಚೈವನಾಸ್ತ್ಯಸ್ಯ ಸದೃಶೋ ಭುವಿ ॥

ಅನುವಾದ

ಮೂರು ಲೋಕಗಳಲ್ಲಿ ಇರುವ ರತ್ನಭೂಷಿತ ಪದಾರ್ಥಗಳೆಲ್ಲವನ್ನು ತಂದು ರಾವಣನು ಭೋಗಿಸುತ್ತಿದ್ದಾನೆ. ಭೂಮಂಡಲದಲ್ಲಿ ಇವನಿಗೆ ಸಮಾನರಾದ ಪರಾಕ್ರಮಿ ಮತ್ತು ಬಲವಂತನು ಬೇರೆ ಯಾರೂ ಇಲ್ಲ.॥43॥

ಮೂಲಮ್ - 44

ತೇಷಾಂ ಸಂಜಲ್ಪಮಾನಾನಾಮಶೋಕವನಿಕಾಂ ಗತಾಮ್ ।
ಅಭಿದುದ್ರಾವ ವೈದೇಹೀಂ ರಾವಣಃ ಕ್ರೋಧಮೂರ್ಛಿತಃ ॥

ಅನುವಾದ

ಅವರು ಹೀಗೆ ಮಾತನಾಡುತ್ತಿರುವಾಗ ಕ್ರೋಧದಿಂದ ಬುದ್ಧಿಗೆಟ್ಟಿದ್ದ ರಾವಣನು ಅಶೋಕವನದಲ್ಲಿ ಇದ್ದ ವೈದೇಹಿಯನ್ನು ವಧಿಸಲು ಧಾವಿಸಿದನು.॥44॥

ಮೂಲಮ್ - 45

ವಾರ್ಯಮಾಣಃ ಸುಸಂಕ್ರುದ್ಧಃ ಸುಹೃದ್ಧಿರ್ಹಿತ ಬುದ್ಧಿಭಿಃ ।
ಅಭ್ಯಧಾವತ ಸಂಕ್ರುದ್ಧಃ ಖೇ ಗ್ರಹೋ ರೋಹಿಣೀಮಿವ ॥

ಅನುವಾದ

ಅವನ ಹಿತವನ್ನು ಮಾಡುವ ಸುಹೃದರು ರೋಷಗೊಂಡ ರಾವಣನನ್ನು ತಡೆಯಲು ಪ್ರಯತ್ನಿಸುತ್ತಿದ್ದರೂ ಕೂಡ ಅವನು ಅತ್ಯಂತ ಕುಪಿತನಾಗಿ ಆಕಾಶದಲ್ಲಿ ರೋಹಿಣೀ ನಕ್ಷತ್ರವನ್ನು ಆಕ್ರಮಿಸುವ ಕ್ರೂರಗ್ರಹದಂತೆ ಸೀತೆಯ ಕಡೆಗೆ ಓಡಿದನು.॥45॥

ಮೂಲಮ್ - 46

ಮೈಥಿಲೀ ರಕ್ಷ್ಯಮಾಣಾ ತು ರಾಕ್ಷಸೀಭಿರನಿಂದಿತಾ
ದದರ್ಶ ರಾಕ್ಷಸಂ ಕ್ರುದ್ಧಂ ನಿಸ್ತ್ರಿಂಶವರಧಾರಿಣಮ್ ॥

ಮೂಲಮ್ - 47

ತಂ ನಿಶಮ್ಯ ಸುನಿಸ್ತ್ರಿಂಶಂ ವ್ಯಥಿತಾ ಜನಕಾತ್ಮಜಾ ।
ನಿವಾರ್ಯಮಾಣಂ ಬಹುಶಃ ಸುಹೃದ್ಭಿರನಿವರ್ತಿನಮ್ ॥

ಅನುವಾದ

ರಾಕ್ಷಸಿಯರಿಂದ ರಕ್ಷಿಸಲ್ಪಡುತ್ತಿದ್ದ ಅನಿಂದ್ಯಳಾದ ಜಾನಕಿಯು ಕ್ರುದ್ಧನಾದ ರಾವಣನು ಕತ್ತಿಯನ್ನೆತ್ತಿಕೊಂಡು ಬರುತ್ತಿರುವುದನ್ನು ನೋಡಿದಳು. ಹಿತೈಷಿಗಳು ತಡೆಯುತ್ತಿದ್ದರೂ ಮುನ್ನುಗ್ಗಿ ಬರುತ್ತಿರುವ ರಾವಣನನ್ನು ನೋಡಿ ಜನಕನಂದಿನಿಯ ಮನಸ್ಸಿನಲ್ಲಿ ಬಹಳ ವ್ಯಥೆ ಉಂಟಾಯಿತು.॥46-47॥

ಮೂಲಮ್ - 48½

ಸೀತಾ ದುಃಖಸಮಾವಿಷ್ಟಾ ವಿಲಪಂತೀದಮಬ್ರವೀತ್ ।
ಯಥಾಯಂ ಮಾಮಭಿಕ್ರುದ್ಧಃ ಸಮಭಿದ್ರವತಿ ಸ್ವಯಮ್ ॥
ವಧಿಷ್ಯತಿ ಸನಾಥಾಂ ಮಾಮನಾಥಾಮಿವ ದುರ್ಮತಿಃ ।

ಅನುವಾದ

ಸೀತೆಯು ದುಃಖದಲ್ಲಿ ಮುಳುಗಿ, ವಿಲಾಪಿಸುತ್ತಾ ಅಂದುಕೊಂಡಳು - ಈ ದುರ್ಬುದ್ಧಿ ರಾಕ್ಷಸನು ಕುಪಿತನಾಗಿ ನನ್ನಕಡೆಗೆ ಓಡಿಬರುತ್ತಿರುವುದನ್ನು ನೋಡಿದರೆ, ಇವನು ಸನಾಥೆಯಾದ ನನ್ನನ್ನು ಅನಾಥಳಂತೆ ನನ್ನನ್ನು ಕೊಂದು ಬಿಡುವನೋ ಎಂದು ಅನಿಸುತ್ತದೆ.॥48½॥

ಮೂಲಮ್ - 49½

ಬಹುಶಶ್ಚೋದಯಾಮಾಸ ಭರ್ತಾರಂ ಮಾಮನುವ್ರತಾಮ್ ॥
ಭಾರ್ಯಾ ಮಮ ಭವಸ್ವೇತಿ ಪ್ರತ್ಯಾಖ್ಯಾತೋ ಧ್ರುವಂ ಮಯಾ ।

ಅನುವಾದ

ಪತಿಪರಾಯಣೆಯಾದ ನನ್ನನ್ನು ಈ ದುಷ್ಟನು ಹಲವು ಬಾರಿ ‘ನನ್ನ ಪತ್ನಿಯಾಗೆಂದು’ ಪ್ರಚೋದಿಸಿದ್ದನು. ಆಗ ನಾನು ಸಾಧ್ಯವಿಲ್ಲ ಎಂದು ನಿರಾಕರಿಸಿಬಿಟ್ಟಿದ್ದೆ.॥49½॥

ಮೂಲಮ್ - 50½

ಸೋಽಯಂ ಮಾಮನುಪಸ್ಥಾನೇ ವ್ಯಕ್ತಂ ನೈರಾಶ್ಯಮಾಗತಃ ॥
ಕ್ರೋಧಮೋಹ ಸಮಾವಿಷ್ಣೋ ವ್ಯಕ್ತಂ ಮಾಂ ಹಂತುಮುದ್ಯತಃ ।

ಅನುವಾದ

ನಾನು ಈ ರೀತಿ ನಿರಾಕರಿಸಿದಾಗ ನಿಶ್ಚಯವಾಗಿ ನಿರಾಶನಾಗಿ ಇವನು ಕ್ರೋಧಗೊಂಡು ಮೋಹವಶನಾಗಿ ಖಂಡಿತವಾಗಿ ನನ್ನನ್ನು ಕೊಲ್ಲ ಲೆಂದೇ ಹೊರಟಿರುವನು.॥50½॥

ಮೂಲಮ್ - 51½

ಅಥವಾ ತೌ ನರವ್ಯಾಘ್ರೌ ಭ್ರಾತರೌ ರಾಮಲಕ್ಷ್ಮಣೌ ॥
ಮನ್ನಿಮಿತ್ತಮನಾರ್ಯೇಣ ಸಮರೇಽದ್ಯ ನಿಪಾತಿತೌ ।

ಅನುವಾದ

ಅಥವಾ ಈ ನೀಚನು ಇಂದು ಸಮರಾಂಗಣದಲ್ಲಿ ನನ್ನ ಕಾರಣದಿಂದಲೇ ಇಬ್ಬರು ಪುರುಷಸಿಂಹರಾದ ರಾಮ-ಲಕ್ಷ್ಮಣರನ್ನು ಕೊಂದುಹಾಕುವನೋ ಏನೋ.॥51½॥

ಮೂಲಮ್ - 52½

ಭೈರವೋ ಹಿ ಮಹಾನ್ನಾದೋ ರಾಕ್ಷಸಾನಾಂ ಶ್ರುತೋ ಮಯಾ ॥
ಬಹೂನಾಮಿವ ಹೃಷ್ಟಾನಾಂ ತಥಾ ವಿಕ್ರೋಶತಾಂ ಪ್ರಿಯಮ್ ।

ಅನುವಾದ

ಏಕೆಂದರೆ ಈಗ ನಾನು ರಾಕ್ಷಸರ ಭಯಂಕರ ಸಿಂಹನಾದನವನ್ನು ಕೇಳಿದೆ. ಹರ್ಷಗೊಂಡ ಅನೇಕ ನಿಶಾಚರರು ತಮ್ಮ ಪ್ರಿಯಜನರನ್ನು ಕರೆಯುತ್ತಿದ್ದಾರೆ.॥52½॥

ಮೂಲಮ್ - 53

ಅಹೋ ಧಿಙ್ಮನ್ನಿಮಿತ್ತೋಽಯಂ ವಿನಾಶೋ ರಾಜಪುತ್ರಯೋಃ ॥

ಮೂಲಮ್ - 54

ಅಥವಾ ಪುತ್ರಶೋಕೇನ ಅಹತ್ವಾ ರಾಮಲಕ್ಷ್ಮಣೌ ।
ವಿಧಮಿಷ್ಯತಿ ಮಾಂ ರೌದ್ರೋ ರಾಕ್ಷಸಃ ಪಾಪನಿಶ್ಚಯಃ ॥

ಅನುವಾದ

ಅಯ್ಯೋ! ನನ್ನ ಕಾರಣದಿಂದ ಆ ರಾಜಕುಮಾರರ ವಿನಾಶವಾದರೆ ನನಗೆ ಧಿಕ್ಕಾರವಿರಲಿ.ಅಥವಾ ಪಾಪಪೂರ್ಣ ವಿಚಾರವುಳ್ಳ ಈ ಭಯಂಕರ ರಾಕ್ಷಸನು ಪುತ್ರಶೋಕದಿಂದ ಸಂತಪ್ತನಾಗಿ ಶ್ರೀರಾಮ-ಲಕ್ಷ್ಮಣರನ್ನು ಕೊಲ್ಲಲಾರದೆ ನನ್ನನ್ನು ಕೊಲ್ಲಲು ಬಂದಿರುವ ಸಾಧ್ಯತೆ ಇದೆ.॥53-54॥

ಮೂಲಮ್ - 55½

ಹನೂಮಂತಸ್ತು ತದ್ವಾಕ್ಯಂ ನ ಕೃತಂ ಕ್ಷುದ್ರಯಾ ಮಯಾ ।
ಯದ್ಯಹಂ ತಸ್ಯ ಪೃಷ್ಠೇನ ತದಾಯಾ ಸಮನಿರ್ಜಿತಾ ॥
ನಾದ್ಯೈವಮನುಶೋಚೇಯಂ ಭರ್ತುರಂಕಗತಾ ಸತೀ ।

ಅನುವಾದ

ಕ್ಷುದ್ರ ಬುದ್ಧಿಯವಳಾದ ನಾನು ಹನುಮಂತನು ಅಂದು ಹೇಳಿದ ಮಾತನ್ನು ಕೇಳಲಿಲ್ಲ. ಶ್ರೀರಾಮನು ರಾವಣನನ್ನು ಜಯಿಸಿ ನನ್ನನ್ನು ಕರೆದುಕೊಂಡು ಹೋಗದಿದ್ದರೂ ಚಿಂತಿಯಿಲ್ಲವೆಂದು ನಿರ್ಧರಿಸಿ ಹನುಮಂತನ ಬೆನ್ನಮೇಲೆ ಕುಳಿತು ಹೋಗಿದ್ದರೆ ಈಗ ಈ ಪರಿಯಲ್ಲಿ ಶೋಕಪಡಬೇಕಾಗಿಯೂ ಇರಲಿಲ್ಲ; ಈಗಾಗಲೇ ನಾನು ನನ್ನ ಪ್ರಿಯತಮನ ತೊಡೆಯನ್ನು ಸೇರಿಬಿಡುತ್ತಿದ್ದೆ.॥55½॥

ಮೂಲಮ್ - 56½

ಮನ್ಯೇತು ಹೃದಯಂ ತಸ್ಯಾಃ ಕೌಸಲ್ಯಾಯಾಃ ಫಲಿಷ್ಯತಿ ॥
ಏಕಪುತ್ರಾ ಯದಾ ಪುತ್ರಂ ವಿನಷ್ಟಂ ಶ್ರೋಷ್ಯತೇ ಯುಧಿ ।

ಅನುವಾದ

ಒಬ್ಬನೇ ಮಗನನ್ನು ಹೊಂದಿರುವ ಕೌಸಲ್ಯೆಯೇನಾದರೂ ಯುದ್ಧದಲ್ಲಿ ತನ್ನ ಪುತ್ರನ ವಿನಾಶವನ್ನು ಕೇಳಿದರೆ ಆಕೆಯ ಹೃದಯ ಒಡೆದುಹೋದೀತೆಂದು ನಾನು ತಿಳಿಯುತ್ತೇನೆ.॥56½॥

ಮೂಲಮ್ - 57½

ಸಾ ಹಿ ಜನ್ಮ ಚ ಬಾಲ್ಯಂ ಚ ಯೌವನಂ ಚ ಮಹಾತ್ಮನಃ ॥
ಧರ್ಮಕಾರ್ಯಾಣಿ ರೂಪಂ ಚ ರುದಂತೀ ಸಂಸ್ಮರಿಷ್ಯತಿ ।

ಅನುವಾದ

ಅವಳು ಅಳುತ್ತಾ ತನ್ನ ಮಹಾತ್ಮಾ ಪುತ್ರನ ಜನ್ಮ, ಬಾಲ್ಯಾವಸ್ಥೆ, ಯೌವನಾವಸ್ಥೆ, ಧರ್ಮ-ಕರ್ಮ ಹಾಗೂ ರೂಪವನ್ನು ಸ್ಮರಿಸುವಳು.॥57½॥

ಮೂಲಮ್ - 58½

ನಿರಾಶಾ ನಿಹತೇ ಪುತ್ರೇ ದತ್ತ್ವಾ ಶ್ರಾದ್ಧಮಚೇತನಾ ॥
ಅಗ್ನಿಮಾವೇಕ್ಷ್ಯತೇ ನೂನಮಪೋ ವಾಪಿ ಪ್ರವೇಕ್ಷ್ಯತಿ ।

ಅನುವಾದ

ತನ್ನ ಮಗನು ಮಡಿಯಲು ಜೀವನದಲ್ಲಿ ಜಿಗುಪ್ಸೆ ಹೊಂದಿ, ನಿಶ್ಚೇಷ್ಟಿತಳಂತಾಗಿ, ಅವನ ಶ್ರಾದ್ಧ ಮಾಡಿ ನಿಶ್ಚಯವಾಗಿ ಬೆಂಕಿಗೆ ಬೀಳುವಳು. ಅಥವಾ ಸರಯೂ ನದಿಯಲ್ಲಿ ಆತ್ಮ ವಿಸರ್ಜನೆ ಮಾಡುವಳು.॥58½॥

ಮೂಲಮ್ - 59½

ಧಿಗಸ್ತು ಕುಬ್ಜಾಮಸತೀಂ ಮಂಥರಾಂ ಪಾಪ ನಿಶ್ಚಯಾಮ್ ॥
ಯನ್ನಿಮಿತ್ತಮಿಮ ಶೋಕಂ ಕೌಸಲ್ಯಾ ಪ್ರತಿಪತ್ಸ್ಯತೇ ।

ಅನುವಾದ

ಯಾವಳ ಕಾರಣದಿಂದ ಕೌಸಲ್ಯಾದೇವಿಯು ಇಂತಹ ದಾರುಣವಾದ ಶೋಕವನ್ನು ಹೊಂದಿರುವಳೋ ಅಂತಹ ಕುಲಟೆಯಾದ ಪಾಪನಿಶ್ಚಯಳಾದ ಮಂಥರೆಗೆ ಧಿಕ್ಕಾರವಿರಲಿ.॥59½॥

ಮೂಲಮ್ - 60

ಇತ್ಯೇವಂ ಮೈಥಿಲೀಂ ದೃಷ್ಟ್ವಾ ವಿಲಪಂತೀಂ ತಪಸ್ವಿನೀಮ್ ॥

ಮೂಲಮ್ - 61

ರೋಹಿಣೀಮಿವ ಚಂದ್ರೇಣ ವಿನಾ ಗ್ರಹವಶಂ ಗತಾಮ್ ।
ಏತಸ್ಮಿನ್ನಂತರೇ ತಸ್ಯ ಅಮಾತ್ಯಃ ಶೀಲವಾನ್ ಫುತ್ಛುಚಿಃ ॥

ಮೂಲಮ್ - 62

ಸುಪಾರ್ಶ್ವೋ ನಾಮ ಮೇಧಾವೀರಾವಣಂ ರಕ್ಷಸಾಂ ವರಮ್ ।
ನಿವಾರ್ಯಮಾಣಃ ಸಚಿವೈರಿದಂ ವಚನಮಬ್ರವೀತ್ ॥

ಅನುವಾದ

ಚಂದ್ರನಿಂದ ಬೇರ್ಪಟ್ಟು ಬೇರೆ ಗ್ರಹಕ್ಕೆ ವಶವಾದ ರೋಹಿಣಿಯಂತೆ ಕಾಣುತ್ತಿದ್ದ ಸೀತಾದೇವಿಯು ಹೀಗೆ ಗೋಳಾಡುತ್ತಿರುವುದನ್ನು ನೋಡಿ ಶೀಲವಂತನಾದ, ಶುಚಿಯಾದ, ಮೇಧಾವಿಯಾದ ಸುಪಾರ್ಶ್ವನೆಂಬ ರಾವಣನ ಮಂತ್ರಿಯು ಇತರ ಮಂತ್ರಿಗಳು ತಡೆಯಲ್ಪಡುತ್ತಿದ್ದರೂ ಪರಿಗಣಿಸದೆ ರಾವಣನಲ್ಲಿ ಹೇಳಿದನು .॥60-62॥

ಮೂಲಮ್ - 63

ಕಥಂ ನಾಮ ದಶಗ್ರೀವ ಸಾಕ್ಷಾದ್ವೈಶ್ರವಣಾನುಜ ।
ಹಂತುಮಿಚ್ಛಸಿ ವೈದೇಹೀಂ ಕ್ರೋಧಾದ್ಧರ್ಮಮಪಾಸ್ಯ ಚ ॥

ಅನುವಾದ

ಮಹಾರಾಜ ದಶಗ್ರೀವನೇ! ನೀನು ಸಾಕ್ಷಾತ್ ಕುಬೇರನ ತಮ್ಮನಾಗಿರುವೆ; ಹಾಗಿರುವಾಗ ಕ್ರೋಧದಿಂದಾಗಿ ಧರ್ಮಕ್ಕೆ ತಿಲಾಂಜಲಿ ಕೊಟ್ಟು ವೈದೇಹಿಯನ್ನು ವಧಿಸಲು ಏಕೆ ಇಚ್ಛಿಸುತ್ತಿರುವೆ.॥63॥

ಮೂಲಮ್ - 64

ವೇದವಿದ್ಯಾವ್ರತಸ್ನಾತಃ ಸ್ವಕರ್ಮನಿರತಸ್ತಥಾ ।
ಸ್ತ್ರಿಯಃ ಕಸ್ಮಾದ್ವಧಂ ವೀರ ಮನ್ಯಸೇ ರಾಕ್ಷಸೇಶ್ವರ ॥

ಅನುವಾದ

ವೀರ ರಾಕ್ಷಸರಾಜನೇ! ನೀನು ವಿಧಿವತ್ತಾಗಿ ಬ್ರಹ್ಮಚರ್ಯವನ್ನು ಪಾಲಿಸುತ್ತಾ ಪೂರ್ಣ ವೇದಾಧ್ಯಯನ ಮಾಡಿ ಸ್ನಾತಕನಾಗಿ ಗುರುಕುಲದಿಂದ ಬಂದಿರುವೆ. ಅಂದಿನಿಂದ ಸದಾ ತನ್ನ ಕರ್ತವ್ಯ ಪಾಲನೆಯಲ್ಲಿ ತೊಡಗಿದ್ದರೂ ಇಂದು ಒಂದು ಸ್ತ್ರೀಯನ್ನು ವಧಿಸುವುದು ನೀನು ಹೇಗೆ ಸರಿಯೆಂದು ತಿಳಿಯುತ್ತಿರುವೆ.॥64॥

ಮೂಲಮ್ - 65

ಮೈಥಿಲೀಂ ರೂಪಸಂಪನ್ನಾಂ ಪ್ರತ್ಯವೇಕ್ಷಸ್ವ ಪಾರ್ಥಿವ ।
ತಸ್ಮಿನ್ನೇವ ಸಹಾಸ್ಮಾಭಿರಾಹವೇ ಕ್ರೋಧಮುತ್ಸೃಜ ॥

ಅನುವಾದ

ಪೃಥಿವೀಪತೇ! ಈ ಮಿಥಿಲೇಶಕುಮಾರಿಯ ದಿವ್ಯರೂಪವನ್ನು ನೋಡು, ನೋಡಿ ಈಕೆಯ ಮೇಲೆ ದಯೆತೋರು. ಯುದ್ಧದಲ್ಲಿ ನಮ್ಮೊಂದಿಗೆ ನಡೆದು ರಾಮನ ಮೇಲೆಯೇ ನಿನ್ನ ಕ್ರೋಧವನ್ನು ತೀರಿಸಿಕೋ.॥65॥

ಮೂಲಮ್ - 66

ಅಭ್ಯುತ್ಥಾನಂ ತ್ವಮದ್ಯೈವ ಕೃಷ್ಣಪಕ್ಷಚತುರ್ದಶೀ ।
ಕೃತ್ವಾ ನಿರ್ಯಾಹ್ಯಮಾವಾಸ್ಯಾಂ ವಿಜಯಾಯ ಬಲೈರ್ವೃತಃ ॥

ಅನುವಾದ

ಇಂದು ಕೃಷ್ಣಪಕ್ಷದ ಚತುರ್ದಶಿಯಾಗಿದೆ. ಆದ್ದರಿಂದ ಇಂದೇ ಯುದ್ಧದ ಸಿದ್ಧತೆ ಮಾಡಿ ನಾಳೆ ಅಮಾವಾಸ್ಯೆಯ ದಿನ ಸೈನ್ಯದೊಂದಿಗೆ ವಿಜಯಕ್ಕಾಗಿ ಪ್ರಸ್ಥಾನ ಮಾಡಿರಿ.॥66॥

ಮೂಲಮ್ - 67

ಶೂರೋ ಧೀಮಾನ್ರಥೀ ಖಡ್ಗೀ ರಥಪ್ರವರಮಾಸ್ಥಿತಃ ।
ಹತ್ವಾ ದಾಶರಥಿಂ ರಾಮಂ ಭವಾನ್ ಪ್ರಾಪ್ಸ್ಯತಿ ಮೈಥಿಲೀಮ್ ॥

ಅನುವಾದ

ನೀನು ಶೂರವೀರ, ಬುದ್ಧಿವಂತ ಮತ್ತು ವೀರ ರಥಿಯಾಗಿರುವೆ. ಒಂದು ಶ್ರೇಷ್ಠ ರಥಾರೂಢನಾಗಿ ಖಡ್ಗವನ್ನು ಎತ್ತಿಕೊಂಡು ಯುದ್ಧಮಾಡು. ದಶರಥನಂದನ ರಾಮನನ್ನು ವಧಿಸಿ ನೀನು ಸೀತೆಯನ್ನು ಪಡೆದುಕೊಳ್ಳುವೆ.॥67॥

ಮೂಲಮ್ - 68

ಸ ತದ್ದುರಾತ್ಮಾ ಸುಹೃದಾ ನಿವೇದಿತಂ
ವಚಃ ಸುಧರ್ಮ್ಯಂ ಪ್ರತಿಗೃಹ್ಯ ರಾವಣಃ ।
ಗೃಹಂ ಜಗಾಮಾಥ ತತಶ್ಚ ವೀರ್ಯವಾನ್
ಪುನಃ ಸಭಾಂ ಚ ಪ್ರಯಯೌ ಸುಹೃದ್ಧೃತಃ ॥

ಅನುವಾದ

ಮಿತ್ರನು ಹೇಳಿದ ಆ ಉತ್ತಮ ಧರ್ಮಾನುಕೂಲ ಮಾತನ್ನು ಸ್ವೀಕರಿಸಿ ಬಲವಂತ ದುರಾತ್ಮಾ ರಾವಣನು ಅರಮನೆಗೆ ಮರಳಿ, ಅಲ್ಲಿಂದ ತನ್ನ ಸುಹೃದಯರೊಂದಿಗೆ ರಾಜಸಭೆಯನ್ನು ಪ್ರವೇಶಿಸಿದನು.॥68॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ತೊಂಭತ್ತೆರಡನೆಯ ಸರ್ಗ ಪೂರ್ಣವಾಯಿತು.॥92॥