०९१ सुषेणेन लक्ष्मणादिसेवा

वाचनम्
ಭಾಗಸೂಚನಾ

ಲಕ್ಷ್ಮಣ ಮತ್ತು ವಿಭೀಷಣಾದಿಗಳು ಶ್ರೀರಾಮಚಂದ್ರನ ಬಳಿಗೆ ಬಂದು ಇಂದ್ರಜಿತನ ವಧೆಯ ಸಮಾಚಾರ ತಿಳಿಸಿದುದು, ಪ್ರಸನ್ನನಾದ ಶ್ರೀರಾಮನು ಲಕ್ಷ್ಮಣನನ್ನು ಅಪ್ಪಿಕೊಂಡು ಅವನನ್ನು ಪ್ರಶಂಸಿದುದು, ಸುಷೇಣನಿಂದ ಲಕ್ಷಣಾದಿಗಳ ಚಿಕಿತ್ಸೆ

ಮೂಲಮ್ - 1

ರುಧಿರಕ್ಲಿನ್ನಗಾತ್ರಸ್ತು ಲಕ್ಷ್ಮಣಃ ಶುಭಲಕ್ಷಣಃ ।
ಬಭೂವ ಹೃಷ್ಟಸ್ತಂ ಹತ್ವಾ ಶಕ್ರಜೇತಾರಮಾಹವೇ ॥

ಅನುವಾದ

ಸಂಗ್ರಾಮ ಭೂಮಿಯಲ್ಲಿ ಶತ್ರುವಿಜಯೀ ಇಂದ್ರಜಿತುವಿನ ವಧೆ ಮಾಡಿ ರಕ್ತದಿಂದ ತೊಯ್ದು ಹೋದ ಶರೀರವುಳ್ಳ ಶುಭಲಕ್ಷಣ ಲಕ್ಷ್ಮಣನು ಬಹಳ ಪ್ರಸನ್ನನಾದನು.॥1॥

ಮೂಲಮ್ - 2

ತತಃ ಸ ಜಾಂಬವಂತಂ ಚ ಹನೂಮಂತಂ ಚ ವೀರ್ಯವಾನ್ ।
ಸಂನಿಪತ್ಯ ಮಹಾತೇಜಾಸ್ತಾಂಶ್ಚ ಸರ್ವಾನ್ ವನೌಕಸಃ ॥

ಮೂಲಮ್ - 3

ಆಜಗಾಮ ತತಃ ಶೀಘ್ರಂ ಯತ್ರ ಸುಗ್ರೀವರಾಘವೌ ।
ವಿಭೀಷಣಮವಷ್ಟಭ್ಯ ಹನೂಮಂತಂ ಚ ಲಕ್ಷ್ಮಣಃ ॥

ಅನುವಾದ

ಬಲ-ವಿಕ್ರಮಸಂಪನ್ನ ಆ ಮಹಾತೇಜಸ್ವೀ ಸುಮಿತ್ರಾ ಕುಮಾರನು ಓಡಿಹೋಗಿ ಜಾಂಬವಂತ ಮತ್ತು ಹನುಮಂತ ನನ್ನು ಸಂಧಿಸಿ, ಆ ಎಲ್ಲ ವಾನರರನ್ನು ಜೊತೆ ಸೇರಿ ಶೀಘ್ರವಾಗಿ ವಾನರರಾಜ ಸುಗ್ರೀವ ಮತ್ತು ಭಗವಾನ್ ಶ್ರೀರಾಮನು ಇದ್ದಲ್ಲಿಗೆ ಬಂದನು. ಆಗ ಲಕ್ಷ್ಮಣನು ವಿಭೀಷಣ-ಹನುಮಂತನ ಆಸರೆ ಪಡೆದು ನಡೆಯುತ್ತಿದ್ದನು.॥2-3॥

ಮೂಲಮ್ - 4

ತತೋ ರಾಮಮಭಿಕ್ರಮ್ಯ ಸೌಮಿತ್ರಿರಭಿವಾದ್ಯ ಚ ।
ತಸ್ಥೌ ಭ್ರಾತೃ ಸಮೀಪಸ್ಥಃ ಶಕ್ರಸ್ಯೇಂದ್ರಾನುಜೋ ಯಥಾ ॥

ಅನುವಾದ

ಶ್ರೀರಾಮನ ಮುಂದೆ ಬಂದು ಅವನ ಚರಣಗಳಲ್ಲಿ ವಂದಿಸಿಕೊಂಡು ಸೌಮಿತ್ರಿಯು ಇಂದ್ರನ ಬಳಿಯಲ್ಲಿ ಉಪೇಂದ್ರನು (ವಾಮನರೂಪೀ ಶ್ರೀಹರಿ) ನಿಂತಂತೆ ಅಣ್ಣನ ಬಳಿಯಲ್ಲಿ ನಿಂತುಕೊಂಡನು.॥4॥

ಮೂಲಮ್ - 5

ನಿಷ್ಠನನ್ನಿವ ಚಾಗತ್ಯ ರಾಘವಾಯ ಮಹಾತ್ಮನೇ ।
ಆಚಚಕ್ಷೇ ತದಾ ವೀರೋ ಘೋರಮಿಂದ್ರಜಿತೋ ವಧಮ್ ॥

ಅನುವಾದ

ಆಗ ವೀರ ವಿಭೀಷಣನು ಮರಳಿದ್ದರಿಂದಲೇ ಶತ್ರುವು ಸತ್ತುಹೋದುದು ಸೂಚಿತವಾಗಿತ್ತು. ಅವನು ಮಹಾತ್ಮಾ ರಘುನಾಥನಲ್ಲಿ ಪ್ರಭೋ! ಇಂದ್ರಜಿತನ ವಧೆಯ ಭಯಂಕರ ಕಾರ್ಯ ನೆರವೇರಿತು ಎಂದು ಹೇಳಿದನು.॥5॥

ಮೂಲಮ್ - 6

ರಾವಣೇಸ್ತು ಶಿರಶ್ಛಿನ್ನಂ ಲಕ್ಷ್ಮಣೇನ ಮಹಾತ್ಮನಾ ।
ನ್ಯವೇದಯತ ರಾಮಾಯ ತದಾಹೃಷ್ಟೋ ವಿಭೀಷಣಃ ॥

ಅನುವಾದ

ವಿಭೀಷಣನು ಹರ್ಷದಿಂದ ಮಹಾತ್ಮಾ ಲಕ್ಷ್ಮಣನೇ ರಾವಣಕುಮಾರ ಇಂದ್ರಜಿತುವಿನ ಮಸ್ತಕವನ್ನು ಕಡಿದು ಉರುಳಿಸಿದನು ಎಂಬ ಸಮಾಚಾರ ಶ್ರೀರಾಮನಲ್ಲಿ ನಿವೇದಿಸಿಕೊಂಡನು.॥6॥

ಮೂಲಮ್ - 7

ಶ್ರುತ್ವೈವತು ಮಹಾವೀರ್ಯೋ ಲಕ್ಷ್ಮಣೇನೇಂದ್ರ್ರಜಿದ್ವಧಮ್ ।
ಪ್ರಹರ್ಷಮತುಲಂ ಲೇಭೇ ವಾಕ್ಯಂ ಚೇದಮುವಾಚ ಹ ॥

ಅನುವಾದ

ಲಕ್ಷ್ಮಣನು ಇಂದ್ರಜಿತುವನ್ನು ವಧಿಸಿದನೆಂಬ ಸಮಾಚಾರ ಕೇಳುತ್ತಲೇ ಮಹಾಪರಾಕ್ರಮಿ ಶ್ರೀರಾಮಚಂದ್ರನು ಅನುಪಮ ಹರ್ಷಿತನಾಗಿ ಇಂತೆಂದನು.॥7॥

ಮೂಲಮ್ - 8

ಸಾಧು ಲಕ್ಷ್ಮಣ ತುಷ್ಟೋಽಸ್ಮಿ ಕರ್ಮ ಚಾಸುಕರಂ ಕೃತಮ್ ।
ರಾವಣೇರ್ಹಿ ವಿನಾಶೇನ ಜಿತಮಿತ್ಯುಪಧಾರಯ ॥

ಅನುವಾದ

ಭಲೇ ಲಕ್ಷ್ಮಣ! ನಾನು ನಿನ್ನ ಮೇಲೆ ಬಹಳ ಪ್ರಸನ್ನನಾಗಿದ್ದೇನೆ. ಇಂದು ನೀನು ದೊಡ್ಡ ದುಷ್ಕರವಾದ ಪರಾಕ್ರಮ ತೋರಿದೆ. ರಾವಣಪುತ್ರ ಹತನಾದ್ದರಿಂದ ಯುದ್ಧದಲ್ಲಿ ನಾವು ಗೆದ್ದು ಬಿಟ್ಟಿದ್ದೇವೆ ಎಂದೆ ನಿಶ್ಚಿತವಾಗಿ ತಿಳಿ.॥8॥

ಮೂಲಮ್ - 9

ಸ ತಂ ಶಿರಸ್ಯುಪಾಘ್ರಾಯ ಲಕ್ಷ್ಮಣಂ ಕೀರ್ತಿವರ್ಧನಮ್ ।
ಲಜ್ಜಮಾನಂ ಬಲಾತ್ ಸ್ನೇಹಾದಂಕಮಾರೋಪ್ಯ ವೀರ್ಯವಾನ್ ॥

ಮೂಲಮ್ - 10

ಉಪವೇಶ್ಯ ತಮುತ್ಸಂಗೇ ಪರಿಷ್ವಜ್ಯಾವಪೀಡಿತಮ್ ।
ಭ್ರಾತರಂ ಲಕ್ಷ್ಮಣಂ ಸ್ನಿಗ್ಧಂ ಪುನಃ ಪುನರುದೈಕ್ಷತ ॥

ಅನುವಾದ

ಯಶವನ್ನು ವೃದ್ಧಿಗೊಳಿಸುವ ಲಕ್ಷ್ಮಣನು ತನ್ನ ಪ್ರಶಂಸೆ ಕೇಳಿ ಆಗ ಲಜ್ಜಿತನಾಗಿದ್ದನು. ಆದರೆ ಪರಾಕ್ರಮಿ ಶ್ರೀರಾಮನು ಅವನನ್ನು ಬಲವಾಗಿ ಸೆಳೆದು ತೊಡೆಯಲ್ಲಿ ಕುಳ್ಳಿರಿಸಿಕೊಂಡು ಪ್ರೇಮದಿಂದ ಮಸ್ತಕವನ್ನು ಆಘ್ರಾಣಿಸಿದನು. ಶಸ್ತ್ರಗಳ ಆಘಾತದಿಂದ ಪೀಡಿತನಾದ ಪ್ರಿಯ ತಮ್ಮ ಲಕ್ಷ್ಮಣನನ್ನು ಅಪ್ಪಿಕೊಂಡು ತುಂಬುಪ್ರೇಮದಿಂದ ಪದೇ ಪದೇ ಅವನನ್ನೇ ನೋಡುತ್ತಿದ್ದನು.॥9-10॥

ಮೂಲಮ್ - 11

ಶಲ್ಯಸಂಪೀಡಿತಂ ಶಸ್ತಂ ನಿಃಶ್ವಸಂತಂ ತು ಲಕ್ಷ್ಮಣಮ್ ।
ರಾಮಸ್ತು ದುಃಖಸಂತಪ್ತಂ ತಂ ತು ನಿಃಶ್ವಾಸ ಪೀಡಿತಮ್ ॥

ಮೂಲಮ್ - 12

ಮೂರ್ಧ್ನಿ ಚೈನಮುಪಾಘ್ರಾಯ ಭೂಯಃ ಸಂಸ್ಪೃಶ್ಯ ಚ ತ್ವರನ್ ।
ಉವಾಚ ಲಕ್ಷ್ಮಣಂ ವಾಕ್ಯಮಾಶ್ವಾಸ್ಯ ಪುರುಷರ್ಷಭಃ ॥

ಅನುವಾದ

ಶರೀರಕ್ಕೆ ನಾಟಿದ ಬಾಣಗಳಿಂದ ಅತ್ಯಂತ ಪೀಡಿತನಾಗಿ ಪದೇ ಪದೇ ನಿಟ್ಟುಸಿರು ಬಿಡುತ್ತಿದ್ದ, ನೋವಿನಿಂದ ದುಃಖಿಸುತ್ತಿದ್ದ, ಉಸಿರಾಡುವುದಕ್ಕೂ ಕಷ್ಟ ಪಡುತ್ತಿದ್ದ ಲಕ್ಷ್ಮಣನ ನೆತ್ತಿಯನ್ನು ಬಾರಿ ಬಾರಿಗೂ ಆಘ್ರಾಣಿಸುತ್ತಾ ಗಾಯಗೊಂಡಿದ್ದ ಶರೀರವನ್ನು ಮೃದುವಾಗಿ ಸ್ಪರ್ಶಿಸಿ ಪುರುಷೋತ್ತಮ ಶ್ರೀರಾಮನು ಸಮಾಧಾನಕರವಾದ ಮಾತುಗಳನ್ನು ಹೇಳಿದನು.॥11-12॥

ಮೂಲಮ್ - 13

ಕೃತಂ ಪರಮಕಲ್ಯಾಣಂ ಕರ್ಮ ದುಷ್ಕರಕರ್ಮಣಾ ।
ಅದ್ಯಮನ್ಯೇ ಹತೇ ಪುತ್ರೇ ರಾವಣಂ ನಿಹತಂ ಯುಧಿ ॥

ಮೂಲಮ್ - 14½

ಅದ್ಯಾಹಂ ವಿಜಯೀ ಶತ್ರೌ ಹತೇ ತಸ್ಮಿನ್ ದುರಾತ್ಮನಿ ।
ರಾವಣಸ್ಯ ನೃಶಂಸಸ್ಯ ದಿಷ್ಟ್ಯಾವೀರ ತ್ವಯಾ ರಣೇ ॥
ಛಿನ್ನೋ ಹಿ ದಕ್ಷಿಣೋ ಬಾಹುಃ ಸ ಹಿ ತಸ್ಯ ವ್ಯಪಾಶ್ರಯಃ ॥

ಅನುವಾದ

ವೀರನೇ! ನೀನು ತನ್ನ ದುಷ್ಕರ ಪರಾಕ್ರಮದಿಂದ ಪರಮಕಲ್ಯಾಣಕರ ಕಾರ್ಯ ನೆರವೇರಿಸಿರುವೆ. ಇಂದು ಮಗನು ಸತ್ತುಹೋದಾಗ ಯುದ್ಧದಲ್ಲಿ ರಾವಣನೂ ಸತ್ತನೆಂದೇ ತಿಳಿಯುವೆನು. ಆ ದುರಾತ್ಮಾ ಶತ್ರುವಿನ ವಧೆಯಾದ್ದರಿಂದ ಇಂದು ನಾನು ನಿಜವಾಗಿ ವಿಜಯಿಯಾಗಿದ್ದೇನೆ. ನೀನು ರಣರಂಗಲ್ಲಿ ಇಂದ್ರಜಿತುವನ್ನು ಸಂಹರಿಸಿ ನಿರ್ದಯೀ ನಿಶಾಚರನ ರಾವಣನ ಬಲ ಭುಜವನ್ನು ಕತ್ತರಿಸಿ ಬಿಟ್ಟಿರುವುದು ಸೌಭಾಗ್ಯದ ಮಾತಾಗಿದೆ; ಏಕೆಂದರೆ ಅವನೇ ರಾವಣನಿಗೆ ಎಲ್ಲಕ್ಕಿಂತ ದೊಡ್ಡ ಆಸರೆಯಾಗಿದ್ದನು.॥13-14॥

ಮೂಲಮ್ - 15

ವಿಭೀಷಣ ಹನೂಮದ್ಭ್ಯಾಂ ಕೃತಂ ಕರ್ಮ ಮಹದ್ರಣೇ ॥

ಮೂಲಮ್ - 16

ಅಹೋರಾತ್ರೈಸ್ತ್ರಿಭಿರ್ವೀರಃ ಕಥಂಚಿದ್ ವಿನಿಪಾತಿತಃ ॥
ನಿರಮಿತ್ರಃ ಕೃತೋಽಸ್ಮ್ಯದ್ಯ ನಿರ್ಯಾಸ್ಯತಿ ಹಿ ರಾವಣಃ ॥

ಅನುವಾದ

ವಿಭೀಷಣ ಹನುಮಂತರೂ ಯುದ್ಧದಲ್ಲಿ ಮಹಾಪರಾಕ್ರಮ ತೋರಿರುವರು. ನೀವೆಲ್ಲರೂ ಸೇರಿ ಮೂರು ಹಗಲು ಮೂರು ರಾತ್ರೆಗಳಲ್ಲಿ ಹೇಗೋ ಆ ವೀರ ರಾಕ್ಷಸನನ್ನು ಕೊಂದುಹಾಕಿ ನನ್ನನ್ನು ಶತ್ರುಹೀನರಾಗಿಸಿದಿರಿ. ಇನ್ನು ರಾವಣನೇ ಯುದ್ಧಕ್ಕಾಗಿ ಹೊರಡುವನು.॥15-1.॥

ಮೂಲಮ್ - 17

ಬಲವ್ಯೂಹೇನ ಮಹತಾ ನಿರ್ಯಾಸ್ಯತಿ ಹಿ ರಾವಣಃ ।
ಬಲವ್ಯೂಹೇನ ಮಹತಾ ಶ್ರುತ್ವಾ ಪುತ್ರಂ ನಿಪಾತಿತಮ್ ॥

ಅನುವಾದ

ಮಹಾ ಸೈನ್ಯ ಸಮುದಾಯ ಸಹಿತ ಪುತ್ರನು ಹತನಾದನೆಂದು ಕೇಳಿ ರಾವಣನು ವಿಶಾಲ ಸೈನ್ಯದೊಂದಿಗೆ ಯುದ್ಧಕ್ಕೆ ಬರುವನು.॥17॥

ಮೂಲಮ್ - 18

ತಂ ಪುತ್ರವಧ ಸಂತಪ್ತಂ ನಿರ್ಯಾಂತಂ ರಾಕ್ಷಸಾಧಿಪಮ್ ।
ಬಲೇನಾವೃತ್ಯ ಮಹತಾ ನಿಹನಿಷ್ಯಾಮಿ ದುರ್ಜಯಮ್ ॥

ಅನುವಾದ

ಪುತ್ರವಧೆಯಿಂದ ಸಂತಪ್ತನಾಗಿ ಹೊರಟ ಆ ದುರ್ಜಯ ರಾಕ್ಷಸರಾಜ ರಾವಣನನ್ನು ನಾನು ಭಾರೀ ಸೈನ್ಯದಿಂದ ಆಕ್ರಮಿಸಿ ಕೊಂದು ಹಾಕುವೆನು.॥18॥

ಮೂಲಮ್ - 19

ತ್ವಯಾ ಲಕ್ಷ್ಮಣ ನಾಥೇನ ಸೀತಾ ಚ ಪೃಥಿವೀ ಚ ಮೇ ।
ನ ದುಷ್ಟ್ರಾಪಾ ಹತೇ ತಸ್ಮಿನ್ಶಕ್ರಜೇತರಿ ಚಾಹವೇ ॥

ಅನುವಾದ

ಲಕ್ಷ್ಮಣ! ಇಂದ್ರನನ್ನು ಗೆದ್ದಿರುವ ಇಂದ್ರಜಿತುವನ್ನೂ ಕೂಡ ನೀನು ಯುದ್ಧದಲ್ಲಿ ವಧಿಸಿದೆ; ಹಾಗಿರುವಾಗ ನಿನ್ನಂತಹ ರಕ್ಷಕ, ಸಹಾಯಕನಿರುವಾಗ ನನಗೆ ಸೀತೆ ಮತ್ತು ಭೂಮಂಡಲದ ರಾಜ್ಯ ಪಡೆಯಲು ಕಷ್ಟವೂ ಆಗಲಾರದು.॥19॥

ಮೂಲಮ್ - 20

ಸ ತಂ ಭ್ರಾತರಮಾಶ್ವಾಸ್ಯ ಪರಿಷ್ವಜ್ಯ ಚ ರಾಘವಃ ।
ರಾಮಃ ಸುಷೇಣಂ ಮುದಿತಃ ಸಮಾಭಾಷ್ಯೇದಮಬ್ರವೀತ್ ॥

ಅನುವಾದ

ಹೀಗೆ ತಮ್ಮನನ್ನು ಶ್ಲಾಘಿಸಿ ಶ್ರೀರಾಮನು ಅವನನ್ನು ಅಪ್ಪಿಕೊಂಡು ಸಂತೋಷದಿಂದ ವಾನರವೈದ್ಯ ಸುಷೇಣನನ್ನು ಕರೆದು ಹೇಳಿದನು.॥20॥

ಮೂಲಮ್ - 21

ಸಶಲ್ಯೋಽಯಂ ಮಹಾಪ್ರಾಜ್ಞ ಸೌಮಿತ್ರಿರ್ಮಿತ್ರವತ್ಸಲಃ ।
ಯಥಾ ಭವತಿ ಸುಸ್ವಸ್ಥ ಸ್ತಥಾ ತ್ವಂ ಸಮುಪಾಚರ ॥

ಅನುವಾದ

ಪರಮ ಬುದ್ಧಿವಂತ ಸುಷೇಣನೇ! ನೀನು ಬೇಗನೇ ಈ ಮಿತ್ರವತ್ಸಲ ಸೌಮಿತ್ರಿಯು ಪೂರ್ಣ ಸ್ವಸ್ಥನಾಗುವಂತಹ ಚಿಕಿತ್ಸೆ ಮಾಡು. ಅವನ ಶರೀರದಲ್ಲಿನ ಬಾಣಗಳಿಂದಾದ ನೋವು ಎಲ್ಲ ದೂರವಾಗಲಿ.॥21॥

ಮೂಲಮ್ - 22

ವಿಶಲ್ಯಃ ಕ್ರಿಯತಾಂ ಕ್ಷಿಪ್ರಂ ಸೌಮಿತ್ರಿಃ ಸವಿಭೀಷಣಃ ।
ಋಕ್ಷವಾನರಸೈನ್ಯಾನಾಂ ಶೂರಾಣಾಂ ದ್ರುಮಯೋಧಿನಾಮ್ ॥

ಮೂಲಮ್ - 23

ತೇ ಚಾಪ್ಯನ್ಯೇಽತ್ರಯುಧ್ಯಂತಿ ಸಶಲ್ಯಾ ವ್ರಣಿನಸ್ತಥಾ ।
ತೇಪಿ ಸರ್ವೇ ಪ್ರಯತ್ನೇನ ಕ್ರಿಯಂತಾಂ ಸುಖಿನಸ್ತ್ವಯಾ ॥

ಅನುವಾದ

ಲಕ್ಷ್ಮಣ ಮತ್ತು ವಿಭೀಷಣರ ಶರೀರಗಳಿಂದ ನೀನು ಬೇಗನೆ ಬಾಣಗಳನ್ನು ಕಿತ್ತು, ಗಾಯ ತುಂಬುವಂತೆ ಮಾಡು. ವೃಕ್ಷಗಳಿಂದ ಯುದ್ಧ ಮಾಡುವ ಶೂರವೀರ ಕರಡಿಗಳ ಮತ್ತು ವಾನರರ ಸೈನಿಕರೂ ಶತ್ರುಗಳ ಬಾಣಗಳಿಂದ ಗಾಯಗೊಂಡು ಯುದ್ಧ ಮಾಡುತ್ತಿದ್ದ ಅವರೆಲ್ಲರನ್ನೂ ನೀನು ಪ್ರಯತ್ನಮಾಡಿ ಸ್ವಸ್ಥಗೊಳಿಸು.॥22-23॥

ಮೂಲಮ್ - 24

ಏವಮುಕ್ತಃ ಸರಾಮೇಣ ಮಹಾತ್ಮಾ ಹರಿಯೂಥಪಃ ।
ಲಕ್ಷ್ಮಣಾಯ ದದೌ ನಸ್ತಃ ಸುಷೇಣಃ ಪರಮೌಷಧಮ್ ॥

ಅನುವಾದ

ಮಹಾತ್ಮಾ ಶ್ರೀರಾಮನು ಹೀಗೆ ಹೇಳಿದಾಗ ವಾನರ ಯೂಥಪತಿ ಸುಷೇಣನು ಲಕ್ಷ್ಮಣನ ಮೂಗಿನಲ್ಲಿ ಒಂದು ಉತ್ತಮೋತ್ತಮ ಔಷಧಿಯನ್ನು ಹಚ್ಚಿದನು.॥24॥

ಮೂಲಮ್ - 25

ಸ ತಸ್ಯ ಗಂಧಮಾಘ್ರಾಯ ವಿಶಲ್ಯಃ ಸಮಪದ್ಯತ ।
ತಥಾ ನಿರ್ವೇದನಶ್ಚೈವ ಸಂರೂಢವ್ರಣ ಏವ ಚ ॥

ಅನುವಾದ

ಅದರ ವಾಸನೆ ಮೂಸಿದೊಡನೆ ಲಕ್ಷ್ಮಣನ ಶರೀರದಿಂದ ಬಾಣಗಳು ಕಳಚಿಬಿದ್ದು, ಅವನ ನೋವೆಲ್ಲ ಮಾಯವಾಯಿತು. ಅವನ ಶರೀರದಲ್ಲಿ ಆದ ಗಾಯಗಳೆಲ್ಲ ವಾಸಿಯಾದವು.॥25॥

ಮೂಲಮ್ - 26

ವಿಭೀಷಣಮುಖಾನಾಂ ಚ ಸುಹೃದಾಂ ರಾಘವಾಜ್ಞಯಾ ।
ಸರ್ವವಾನರಮುಖ್ಯಾನಾಂ ಚಿಕಿತ್ಸಾಮಕರೋತ್ ತದಾ ॥

ಅನುವಾದ

ಶ್ರೀರಾಮಚಂದ್ರನ ಆಜ್ಞೆಯಂತೆ ಸುಷೇಣನು ವಿಭೀಷಣಾದಿ ಸುಹೃದರಿಗೆ, ಸಮಸ್ತ ಶ್ರೇಷ್ಠ ವಾನರರಿಗೆ ಕೂಡಲೇ ಚಿಕಿತ್ಸೆ ನೀಡಿದನು.॥26॥

ಮೂಲಮ್ - 27

ತತಃ ಪ್ರಕೃತಿಮಾಪನ್ನೋ ಹತಶಲ್ಯೋ ಗಜಕ್ಲಮಃ ।
ಸೌಮಿತ್ರಿರ್ಮುಮುದೇ ತತ್ರ ಕ್ಷಣೇನ ವಿಗತಜ್ವರಃ ॥

ಅನುವಾದ

ಮತ್ತೆ ಕ್ಷಣಾರ್ಧದಲ್ಲಿ ಬಾಣಗಳ ಗಾಯ ವಾಸಿಯಾಗಿ ನೋವು ಹೊರಟು ಹೋದಾಗ ಸಮಿತ್ರಾಕುಮಾರನು ಸ್ವಸ್ಥ ಹಾಗೂ ನಿರೋಗಿಯಾಗಿ ಹರ್ಷಗೊಂಡನು.॥27॥

ಮೂಲಮ್ - 28

ತಥೈವ ರಾಮಃ ಪ್ಲವಗಾಧಿಪಸ್ತಥಾ
ವಿಭೀಷಣಶ್ಚರ್ಕ್ಷಪತಿಶ್ಚ ವೀರ್ಯವಾನ್ ।
ಅವೇಕ್ಷ್ಯ ಸೌಮಿತ್ರಿಮರೋಗಮುತ್ಥಿತಂ
ಮುದಾ ಸಸೈನ್ಯಾಃ ಸುಚಿರಂ ಜಹರ್ಷಿರೇ ॥

ಅನುವಾದ

ಆಗ ಶ್ರೀರಾಮ ವಾನರರಾಜ ಸುಗ್ರೀವ, ವಿಭೀಷಣ, ಪರಾಕ್ರಮಿ ಜಾಂಬವಂತರೆ ಮೊದಲಾದವರು ಲಕ್ಷ್ಮಣನು ನಿರೋಗಿಯಾಗಿ ನಿಂತಿರುವುದನ್ನು ನೋಡಿ ಸೈನ್ಯ ಸಹಿತ ಸಂತೋಷಗೊಂಡರು.॥28॥

ಮೂಲಮ್ - 29

ಅಪೂಜಯತ್ಕರ್ಮ ಸ ಲಕ್ಷ್ಮಣಸ್ಯ
ಸುದುಷ್ಕರಂ ದಾಶರಥಿರ್ಮಹಾತ್ಮಾ ।
ಬಭೂವ ಹೃಷ್ಟೋ ಯುಧಿ ವಾನರೇಂದ್ರೋ
ನಿಶಮ್ಯ ತಂ ಶಕ್ರಜಿತಂ ನಿಪಾತಿತಮ್ ॥

ಅನುವಾದ

ಮಹಾತ್ಮಾ ದಾಶರಥಿ ಶ್ರೀರಾಮನು ಲಕ್ಷ್ಮಣನ ಆ ಅತ್ಯಂತ ದುಷ್ಕರ ಪರಾಕ್ರಮವನ್ನು ಪುನಃ ಪುನಃ ಭೂರಿ ಭೂರಿ ಪ್ರಶಂಸೆ ಮಾಡಿದನು. ಇಂದ್ರಜಿತನು ಯುದ್ಧದಲ್ಲಿ ಸತ್ತನೆಂದು ತಿಳಿದು ಸುಗ್ರೀವನಿಗೂ ಬಹಳ ಪ್ರಸನ್ನತೆ ಉಂಟಾಯಿತು.॥29॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ತೊಂಭತ್ತೊಂದನೆಯ ಸರ್ಗ ಪೂರ್ಣವಾಯಿತು. ॥91॥