०९० इन्द्रजिदश्वमरणम्

वाचनम्
ಭಾಗಸೂಚನಾ

ಇಂದ್ರಜಿತು ಮತ್ತು ಲಕ್ಷ್ಮಣರ ಭಯಂಕರ ಯುದ್ಧ, ಇಂದ್ರಜಿತುವಿನ ವಧೆ

ಮೂಲಮ್ - 1

ಸ ಹತಾಶ್ವೋ ಮಹಾತೇಜಾ ಭೂಮೌ ತಿಷ್ಠನ್ನಿಶಾಚರಃ ।
ಇಂದ್ರಜಿತ್ ಪರಮಕ್ರುದ್ಧಃ ಸಂಪ್ರಜಜ್ವಾಲ ತೇಜಸಾ ॥

ಅನುವಾದ

ಮಹಾತೇಜಸ್ವೀಯಾದ ನಿಶಾಚರ ಇಂದ್ರಜಿತು ಕುದುರೆಗಳನ್ನು ಕಳೆದುಕೊಂಡು ಭೂಮಿಯ ಮೇಲೆ ನಿಂತು ಪರಮಕ್ರುದ್ಧನಾಗಿ ತೇಜಸ್ಸಿನಿಂದ ಉರಿಯುತ್ತಿದ್ದನು.॥1॥

ಮೂಲಮ್ - 2

ತೌ ಧನ್ವಿನೌ ಜಿಘಾಂ ಸಂತಾವನ್ಯೋನ್ಯಮಿಷುಭಿರ್ಭೃಶಮ್ ।
ವಿಜಯೇನಾಭಿನಿಷ್ಕ್ರಾಂತೌ ವನೇ ಗಜವೃಷಾವಿವ ॥

ಅನುವಾದ

ಧನುಷ್ಪಾಣಿಗಳಿಗೆ ವಿಜಯಕ್ಕಾಗಿ ಪರಸ್ಪರ ಯುದ್ಧದಲ್ಲಿ ತೊಡಗಿದ್ದ ನರ ರಾಕ್ಷಸ ಶ್ರೇಷ್ಠರು ಅರಣ್ಯದಲ್ಲಿ ಸೆಣಸಾಡುತ್ತಿರುವ ಎರಡು ಸಲಗಗಳಂತೆ ನಿಶಿತವಾದ ಬಾಣಗಳಿಂದ ಒಬ್ಬರು ಮತ್ತೊಬ್ಬರನ್ನು ಗಾಯಗೊಳಿ ಸುತ್ತಿದ್ದರು.॥2॥

ಮೂಲಮ್ - 3

ನಿಬರ್ಹಯಂತಶ್ಚಾನ್ಯೋನ್ಯಂ ತೇ ರಾಕ್ಷಸವನೌಕಸಃ ।
ಭರ್ತಾರಂ ನ ಜಹುರ್ಯುದ್ಧೇ ಸಂಪತಂತಸ್ತತಸ್ತತಃ ॥

ಅನುವಾದ

ವಾನರರು ಮತ್ತು ರಾಕ್ಷಸರೂ ಪರಸ್ಪರ ಸಂಹಾರ ಮಾಡುತ್ತಾ ಅತ್ತ ಇತ್ತ ಓಡಾಡುತ್ತಿದ್ದರೂ; ತಮ್ಮ ತಮ್ಮ ನಾಯಕರನ್ನು ಬಿಟ್ಟು ದೂರ ಹೋಗುತ್ತಿರಲಿಲ್ಲ.॥3॥

ಮೂಲಮ್ - 4

ತತಸ್ತಾನ್ ರಾಕ್ಷಸಾನ್ಸರ್ವಾನ್ ಹರ್ಷಯನ್ ರಾವಣಾತ್ಮಜಃ ।
ಸ್ತುನ್ವಾನೋ ಹರ್ಷಮಾಣಶ್ಚ ಇದಂ ವಚನಮಬ್ರವೀತ್ ॥

ಅನುವಾದ

ಅನಂತರ ರಾವಣಿಯು ತನ್ನ ಅನುಯಾಯಿಗಳನ್ನು ಶ್ಲಾಘಿಸುತ್ತಾ ಅವರ ಹರ್ಷವನ್ನು ಹೆಚ್ಚಿಸುತ್ತಾ ಹೇಳಿದನು-॥4॥

ಮೂಲಮ್ - 5

ತಮಸಾ ಬಹುಲೇನೇಮಾಃ ಸಂಸಕ್ತಾಃ ಸರ್ವತೋ ದಿಶಃ ।
ನೇಹ ವಿಜ್ಞಾಯತೇ ಸ್ವೋ ವಾ ಪರೋ ವಾ ರಾಕ್ಷಸೋತ್ತಮಾಃ ॥

ಅನುವಾದ

ಶ್ರೇಷ್ಠ ನಿಶಾಚರರೇ! ಸುತ್ತಲೂ ಕತ್ತಲೆ ಕವಿದಿದೆ. ಆದ್ದರಿಂದ ಇಲ್ಲಿ ನಮ್ಮವರಾರು? ಶತ್ರುಗಳಾರು? ತಿಳಿಯುವುದೇ ಇಲ್ಲ.॥5॥

ಮೂಲಮ್ - 6

ಧೃಷ್ಟಂ ಭವಂತೋ ಯುಧ್ಯಂತು ಹರೀಣಾಂ ಮೋಹನಾಯ ವೈ।
ಅಹಂ ತು ರಥಮಾಸ್ಥಾಯ ಆಗಮಿಷ್ಯಾಮಿ ಸಂಯುಗೆ ॥

ಮೂಲಮ್ - 7

ತಥಾ ಭವಂತಃ ಕುರ್ವಂತು ಯಥೇಮೇ ಹಿ ವನೌಕಸಃ ।
ನ ಯುದ್ಧ್ಯೇಯುರ್ಮಹಾತ್ಮಾನಃ ಪ್ರವಿಷ್ಟೇ ನಗರಂ ಮಯಿ ॥

ಅನುವಾದ

ನಾನೀಗ ಲಂಕೆಗೆ ಹೋಗಿ, ಬೇರೊಂದು ರಥದಲ್ಲಿ ಕುಳಿತು ಯುದ್ಧಕ್ಕೆ ಬರುವೆನು. ಅಲ್ಲಿಯವರೆಗೆ ನೀವು ವಾನರರನ್ನು ವಿಮೋಹಗೊಳಿಸಿ ನಿರ್ಭಯವಾಗಿ ಯುದ್ಧಮಾಡುತ್ತಾ ಇರಿ. ಅದರಿಂದ ಅವರು ನನ್ನನ್ನು ಅಡ್ಡಗಟ್ಟಲಾರರು.॥6-7॥

ಮೂಲಮ್ - 8

ಇತ್ಯುಕ್ತ್ವಾ ರಾವಣಸುತೋ ವಂಚಯಿತ್ವಾ ವನೌಕಸಃ ।
ಪ್ರವಿವೇಶ ಪುರೀಂ ಲಂಕಾಂ ರಥಹೇತೋರಮಿತ್ರಹಾ ॥

ಅನುವಾದ

ಹೀಗೆ ಹೇಳಿ ಶತ್ರುಹಂತಾ ರಾವಣಕುಮಾರನು ವಾನರರನ್ನು ವಂಚಿಸಿ ರಥಕ್ಕಾಗಿ ಲಂಕೆಗೆ ನಡೆದನು.॥8॥

ಮೂಲಮ್ - 9

ಸ ರಥಂ ಭೂಷಯಿತ್ವಾಥ ರುಚಿರಂ ಹೇಮಭೂಷಿತಮ್ ।
ಪ್ರಾಸಾಸಿಶರಸಂಯುಕ್ತಂ ಯುಕ್ತಂ ಪರಮವಾಜಿಭಿಃ ॥

ಮೂಲಮ್ - 10

ಅಧಿಷ್ಠಿತಂ ಹಯಜ್ಞೇನ ಸೂತೇನಾಪ್ತೋಪದೇಶಿನಾ ।
ಆರುರೋಹ ಮಹಾತೇಜಾ ರಾವಣಿಃ ಸಮಿತಿಂಜಯಃ ॥

ಅನುವಾದ

ಅವನು ಒಂದು ಸುವರ್ಣಭೂಷಿತ ರಥವನ್ನು ಸಿದ್ಧಗೊಳಿಸಿ, ಅದರಲ್ಲಿ ಪ್ರಾಸ, ಖಡ್ಗ, ಬಾಣ ಮುಂತಾದ ಆವಶ್ಯಕ ಸಾಮಗ್ರಿಗಳನ್ನು ತುಂಬಿ, ಉತ್ತಮ ಕುದುರೆಗಳನ್ನು ಹೂಡಿ, ಅಶ್ವವಿದ್ಯೆಯನ್ನು ಬಲ್ಲ, ಹಿರಿಯರಿಂದ ಉಪದೇಶ ಪಡೆದಿದ್ದ ಸಾರಥಿಯನ್ನು ಒಡಗೂಡಿ, ಮಹಾತೇಜಸ್ವೀ ಸಮರ ವಿಜಯಿ ಇಂದ್ರಜಿತು ರಥಾರೂಢನಾದನು.॥9-10॥

ಮೂಲಮ್ - 11

ಸ ರಾಕ್ಷಸಗಣೈರ್ಮುಖ್ಯೈರ್ವೃತೋ ಮಂದೋದರೀ ಸುತಃ ।
ನಿರ್ಯಯೌ ನಗರಾದ್ ವೀರಃ ಕೃತಾಂತ ಬಲಚೋದಿತಃ ॥

ಅನುವಾದ

ಮತ್ತೆ ಪ್ರಮುಖ ರಾಕ್ಷಸರನ್ನು ಜೊತೆ ಸೇರಿಸಿಕೊಂಡು ಮಂದೋದರಿ ಕುಮಾರನು ಕಾಲಶಕ್ತಿಯಿಂದ ಪ್ರೇರಿತನಾಗಿ ನಗರದಿಂದ ಹೊರಟನು.॥11॥

ಮೂಲಮ್ - 12

ಸೋಽಭಿನಿಷ್ಕ್ರಮ್ಯ ನಗರಾದಿಂದ್ರಜಿತ್ ಪರಮೌಜಸಾ ।
ಅಭ್ಯಯಾಜ್ಜವನೈರಶ್ವೈರ್ಲಕ್ಷ್ಮಣಂ ಸವಿಭೀಷಣಮ್ ॥

ಅನುವಾದ

ನಗರದಿಂದ ಹೊರಟ ಇಂದ್ರಜಿತು ವೇಗಶಾಲಿ ಕುದುರೆಗಳ ಮೂಲಕ ಬಂದು ವಿಭೀಷಣಸಹಿತ ಲಕ್ಷ್ಮಣನ ಮೇಲೆ ಆಕ್ರಮಣ ಮಾಡಿದನು.॥12॥

ಮೂಲಮ್ - 13½

ತತೋ ರಥಸ್ಥ ಮಾಲೋಕ್ಯ ಸೌಮಿತ್ರೀ ರಾವಣಾತ್ಮಜಮ್ ।
ವಾನರಾಶ್ಚ ಮಹಾವೀರ್ಯಾ ರಾಕ್ಷಸಶ್ಚ ವಿಭೀಷಣಃ ॥
ವಿಸ್ಮಯಂ ಪರಮಂ ಜಗ್ಮುರ್ಲಾಘವಾತ್ತಸ್ಯ ಧೀಮತಃ ।

ಅನುವಾದ

ರಾವಣಕುಮಾರನು ರಥದಲ್ಲಿ ಕುಳಿತು ಬಂದಿರುವುದನ್ನು ನೋಡಿ, ಸುಮಿತ್ರಾ ನಂದನ ಲಕ್ಷ್ಮಣ, ಮಹಾ ಪರಾಕ್ರಮಿ ವಾನರರು ಹಾಗೂ ರಾಕ್ಷಸರಾಜ ವಿಭೀಷಣ ಎಲ್ಲರಿಗೂ ಬಹಳ ವಿಸ್ಮಯವಾಯಿತು. ಆ ಬುದ್ಧಿವಂತ ನಿಶಾಚರನ ಚಮತ್ಕಾರವನ್ನು ನೋಡಿ ಎಲ್ಲರೂ ದಂಗಾದರು.॥13॥

ಮೂಲಮ್ - 14½

ರಾವಣಿಶ್ಚಾಪಿ ಸಂಕ್ರುದ್ಧೋ ರಣೇ ವಾನರಯೂಥಪಾನ್ ॥
ಪಾತಯಾಮಾಸ ಬಾಣೌಘೈಃ ಶತಶೋಽಥ ಸಹಸ್ರಶಃ ।

ಅನುವಾದ

ಅನಂತರ ಕ್ರೋಧಗೊಂಡಿರುವ ರಾವಣ ಪುತ್ರನು ತನ್ನ ಬಾಣ ಸಮೂಹಗಳಿಂದ ರಣರಂಗದಲ್ಲಿ ಸಾವಿರಾರು ವಾನರ ಯೂಥಪತಿಗಳನ್ನು ಸಂಹರಿಸಲು ಪ್ರಾರಂಭಿಸಿದನು.॥14॥

ಮೂಲಮ್ - 15½

ಸ ಮಂಡಲೀಕೃತಧನೂ ರಾವಣಿಃ ಸಮಿತಿಂಜಯಃ ॥
ಹರೀನಭ್ಯಹನತ್ ಕ್ರುದ್ಧಃ ಪರಂ ಲಾಘವಮಾಸ್ಥಿತಃ ।

ಅನುವಾದ

ಯುದ್ಧವಿಜಯೀ ರಾವಣಕುಮಾರನು ಕುಪಿತನಾಗಿ ಶೀಘ್ರವಾಗಿ ಮಂಡಲಾಕಾರ ಧನುಸ್ಸಿನಿಂದ ವಾನರರ ಸಂಹಾರ ಮಾಡತೊಡಗಿದನು.॥15॥

ಮೂಲಮ್ - 16½

ತೇ ವಧ್ಯಮಾನಾ ಹರಯೋ ನಾರಾಚೈರ್ಭೀಮವಿಕ್ರಮಾಃ ॥
ಸೌಮಿತ್ರಿಂ ಶರಣಂ ಪ್ರಾಪ್ತಾಃ ಪ್ರಜಾಪತಿಮಿವ ಪ್ರಜಾಃ ।

ಅನುವಾದ

ಅವನ ನಾರಾಚಗಳ ಪೆಟ್ಟು ತಿಂದು ಭಯಾನಕ ಪರಾಕ್ರಮಿ ವಾನರು ಸುಮಿತ್ರಾಕುಮಾರ ಲಕ್ಷ್ಮಣನಲ್ಲಿ ಪ್ರಜೆಯು ಪ್ರಜಾಪತಿಗೆ ಶರಣಾಗುವಂತೆ ಶರಣಾದರು.॥16॥

ಮೂಲಮ್ - 17

ತತಃ ಸಮರಕೋಪೇನ ಜ್ವಲಿತೋ ರಘುನಂದನಃ ।
ಚಿಚ್ಛೇದ ಕಾರ್ಮುಕಂ ತಸ್ಯ ದರ್ಶಯನ್ಪಾಣಿ ಲಾಘವಮ್ ॥

ಅನುವಾದ

ಆಗ ಶತ್ರುವಿನ ಯುದ್ಧದಿಂದ ರಘುಕುಲನಂದನ ಲಕ್ಷ್ಮಣನ ಕ್ರೋಧ ಉರಿದೆದ್ದಿತು. ಅವನು ತನ್ನ ಕೈಚಳಕವನ್ನು ತೋರುತ್ತಾ ರಾಕ್ಷಸನ ಧನುಸ್ಸನ್ನು ತುಂಡರಿಸಿದನು.॥17॥

ಮೂಲಮ್ - 18

ಸೋಽನ್ಯತ್ಕಾರ್ಮುಕಮಾದಾಯ ಸಜ್ಯಂ ಚಕ್ರೇ ತ್ವರನ್ನಿವ ।
ತದಪ್ಯಸ್ಯ ತ್ರಿಭಿರ್ಬಾಣೈರ್ಲಕ್ಷ್ಮಣೋ ನಿರಕೃಂತತ ॥

ಅನುವಾದ

ಇದನ್ನು ನೋಡಿ ಆ ನಿಶಾಚರನು ಕೂಡಲೇ ಇನ್ನೊಂದು ಧನುಸ್ಸಿಗೆ ನೇಣನ್ನರಿಸಿದನು, ಆದರೆ ಲಕ್ಷ್ಮಣನು ಮೂರು ಬಾಣಗಳನ್ನು ಪ್ರಯೋಗಿಸಿ ಆ ಧನುಸ್ಸನ್ನು ಕತ್ತರಿಸಿಬಿಟ್ಟನು.॥18॥

ಮೂಲಮ್ - 19

ಅಥೈನಂ ಛಿನ್ನಧನ್ವಾನಮಾಶೀವಿಷವಿಷೋಪಮೈಃ ।
ವಿವ್ಯಾಧೋರಸಿ ಸೌಮಿತ್ರೀ ರಾವಣಿಂ ಪಂಚಭಿಃ ಶರೈಃ ॥

ಅನುವಾದ

ಧನುಸ್ಸನ್ನು ತುಂಡರಿಸಿ ಲಕ್ಷ್ಮಣನು ವಿಷಧರ ಸರ್ಪದಂತೆ ಐದು ಭಯಂಕರ ಬಾಣಗಳಿಂದ ರಾವಣಪುತ್ರನ ವಕ್ಷಃಸ್ಥಳವನ್ನು ಭೇದಿಸಿದನು.॥19॥

ಮೂಲಮ್ - 20

ತೇ ತಸ್ಯ ಕಾಯಂ ನಿರ್ಭಿದ್ಯ ಮಹಾಕಾರ್ಮುಕನಿಃಸೃತಾಃ ।
ನಿಪೇತುರ್ಧರಣೀಂ ಬಾಣಾ ರಕ್ತಾ ಇವ ಮಹೋರಗಾಃ ॥

ಅನುವಾದ

ಅವನ ವಿಶಾಲ ಧನುಸ್ಸಿನಿಂದ ಚಿಮ್ಮಿದ ಆ ಬಾಣಗಳು ಇಂದ್ರಜಿತುವಿನ ಶರೀರವನ್ನು ಛೇದಿಸಿ ಕೆಂಪುಬಣ್ಣದ ದೊಡ್ಡ ದೊಡ್ಡ ಸರ್ಪಗಳಂತೆ ನೆಲಕ್ಕೆ ಬಿದ್ದು ಹೋದವು.॥20॥

ಮೂಲಮ್ - 21

ಸ ಚ್ಛಿನ್ನಧನ್ವಾ ರುಧಿರಂ ವಮನ್ ವಕ್ತ್ರೇಣ ರಾವಣಿಃ ।
ಜಗ್ರಾಹ ಕಾರ್ಮುಕ ಶ್ರೇಷ್ಠಂ ದೃಢಜ್ಯಂ ಬಲವತ್ತರಮ್ ॥

ಅನುವಾದ

ಧನುಸ್ಸು ತುಂಡಾದಾಗ ಆ ಬಾಣಗಳ ಏಟುತಿಂದು ಬಾಯಿಯಿಂದ ರಕ್ತವನ್ನು ಕಾರುತ್ತಾ ರಾವಣಪುತ್ರನು ಪುನಃ ದೃಢವಾದ ಪ್ರತ್ಯಂಚೆಯಿಂದ ಕೂಡಿದ ಒಂದು ಗಟ್ಟಿಮುಟ್ಟಾದ ಧನುಸ್ಸನ್ನು ಎತ್ತಿಕೊಂಡನು.॥21॥

ಮೂಲಮ್ - 22

ಸ ಲಕ್ಷ್ಮಣಂ ಸಮುದ್ದಿಶ್ಯ ಪರಂ ಲಾಘವಮಾಸ್ಥಿತಃ ।
ವವರ್ಷ ಶರವರ್ಷಾಣಿ ವರ್ಷಾಣೀವ ಪುರಂದರಃ ॥

ಅನುವಾದ

ಮತ್ತೆ ಅವನು ಲಕ್ಷ್ಮಣನನ್ನು ಗುರಿಯಾಗಿಸಿ ಅತಿಲಾಘವದಿಂದ ದೇವೇಂದ್ರನು ಮಳೆ ಸುರಿಸುವಂತೆ ಬಾಣಗಳ ವರ್ಷವನ್ನು ಪ್ರಾರಂಭಿಸಿದನು.॥22॥

ಮೂಲಮ್ - 23

ಮುಕ್ತಮಿಂದ್ರಜಿತಾ ತತ್ತು ಶರವರ್ಷಮರಿಂದಮಃ ।
ಆವಾರಯದ ಸಂಭ್ರಾಂತೋ ಲಕ್ಷ್ಮಣಃ ಸುದುರಾಸದಮ್ ॥

ಅನುವಾದ

ಇಂದ್ರಜಿತು ಸರಿಸಿದ ಬಾಣವರ್ಷವನ್ನು ತಡೆಯು ವುದು ಕಷ್ಟಕರವಾಗಿದ್ದರೂ ಶತ್ರುಸೂದನ ಲಕ್ಷ್ಮಣನು ಯಾವುದೇ ಅಳುಕಿಲ್ಲದೆ ತಡೆದುಬಿಟ್ಟನು.॥23॥

ಮೂಲಮ್ - 24

ಸಂದರ್ಶಯಾಮಾಸ ತದಾ ರಾವಣಿಂ ರಘುನಂದನಃ ।
ಅಸಂಭ್ರಾಂತೋ ಮಹಾತೇಜಾಸ್ತದದ್ಭುತಮಿವಾಭವತ್ ॥

ಅನುವಾದ

ರಘುಕುಲನಂದನ ಮಹಾತೇಜಸ್ವೀ ಲಕ್ಷ್ಮಣನಿಗೆ ಕೊಂಚವೂ ಗಾಬರಿಯಾಗಲಿಲ್ಲ. ಅವನು ಆ ರಾವಣಕುಮಾರನಿಗೆ ತನ್ನ ಅದ್ಭುತ ಪರಾಕ್ರಮವನ್ನು ತೋರಿದನು.॥24॥

ಮೂಲಮ್ - 25

ತತಸ್ತಾನ್ರಾಕ್ಷಸಾನ್ ಸರ್ವಾಂಸ್ತ್ರಿಭಿರೇಕೈ ಕಮಾಹವೇ ।
ಅವಿಧ್ಯತ್ಪರಮಕ್ರುದ್ಧಃ ಶೀಘ್ರಾಸ್ತ್ರಂ ಸಂಪ್ರದರ್ಶಯನ್ ।
ರಾಕ್ಷಸೇಂದ್ರ ಸುತಂ ಚಾಪಿ ಬಾಣೌಘೈಃ ಸಮತಾಡಯತ್ ॥

ಅನುವಾದ

ಅವನು ಅತ್ಯಂತ ಕುಪಿತನಾಗಿ ಶೀಘ್ರ ಅಸ್ತ್ರ ಸಂಚಲನೆಯ ತನ್ನ ಕಲೆಯನ್ನು ಪ್ರದರ್ಶಿಸುತ್ತಾ ಪ್ರತಿಯೊಬ್ಬ ರಾಕ್ಷಸರ ಶರೀರದಲ್ಲಿ ಮೂರು ಮೂರು ಬಾಣಗಳನ್ನು ಎಸೆದು ಗಾಯಗೊಳಿಸಿದನು ಹಾಗೂ ರಾಕ್ಷಸ ಪುತ್ರ ಇಂದ್ರಜಿತುವಿಗೂ ಬಾಣಸಮೂಹಗಳಿಂದ ಪ್ರಹರಿಸಿದನು.॥25॥

ಮೂಲಮ್ - 26

ಸೋಽತಿವಿದ್ಧೋ ಬಲವತಾ ಶತ್ರುಣಾ ಶತ್ರುಘಾತಿನಾ ।
ಅಸಕ್ತಂ ಪ್ರೇಷಯಾಮಾಸ ಲಕ್ಷ್ಮಣಾಯ ಬಹೂನ್ಶರಾನ್ ॥

ಅನುವಾದ

ಶತ್ರುಹಂತಾ ಪ್ರಬಲ ಶತ್ರುವಿನ ಬಾಣಗಳಿಂದ ಅತ್ಯಂತ ಗಾಯಗೊಂಡ ಇಂದ್ರಜಿತನು ಲಕ್ಷ್ಮಣನ ಮೇಲೆ ಒಂದೇ ಸಮನೆ ಅನೇಕ ಬಾಣಗಳನ್ನು ಪ್ರಯೋಗಿಸಿದನು.॥26॥

ಮೂಲಮ್ - 27½

ತಾನಪ್ರಾಪ್ತಾನ್ ಶಿತೈರ್ಬಾಣೈಶ್ಚಿಚ್ಛೇದ ಪರವೀರಹಾ ।
ಸಾರಥೇರಸ್ಯ ಚ ರಣೇ ರಥಿನೋ ರಥಸತ್ತಮಃ ॥
ಶಿರೋ ಜಹಾರ ಧರ್ಮಾತ್ಮಾ ಭಲ್ಲೇನಾನತಪರ್ವಣಾ ।

ಅನುವಾದ

ಆದರೆ ಶತ್ರುವೀರರ ಸಂಹಾರ ಮಾಡುವ, ಶ್ರೇಷ್ಠ ರಥಿಯಾದ ಧರ್ಮಾತ್ಮಾ ಲಕ್ಷ್ಮಣನು ಬಾಣಗಳು ತನ್ನ ಬಳಿಗೆ ಬರುವ ಮೊದಲೇ ತುಂಡರಿಸಿ, ರಣಭೂಮಿಯಲ್ಲಿ ರಥೀ ಇಂದ್ರಜಿತುವಿನ ಸಾರಥಿಯ ಮಸ್ತಕವನ್ನು ಹಾರಿಸಿ ಬಿಟ್ಟನು.॥27॥

ಮೂಲಮ್ - 28½

ಅಸೂತಾಸ್ತೇ ಹಯಾಸ್ತತ್ರ ರಥಮೂಹುರವಿಕ್ಲವಾಃ ॥
ಮಂಡಲಾನ್ಯಭಿಧಾವಂತಿ ಸ್ತದದ್ಭುತಮಿವಾಭವತ್ ।

ಅನುವಾದ

ಸಾರಧಿಯು ಇಲ್ಲದಿದ್ದರೂ ಅವನ ಕುದುರೆಗಳು ವ್ಯಾಕುಲವಾಗಿಲ್ಲ. ಹಿಂದಿನಂತೆ ರಥವನ್ನು ಎಳೆದುಕೊಂಡು ಹೋಗುತ್ತಾ ವಿಚಿತ್ರ ಪದಹತಿಯಿಂದ ಮಂಡಲಾಕಾರ ಗತಿಯಿಂದ ಓಡುತ್ತಿದ್ದವು. ಇದೊಂದು ಅದ್ಭುತವಾದ ಮಾತಾಗಿತ್ತು.॥28॥

ಮೂಲಮ್ - 29½

ಅಮರ್ಷವಶಮಾಪನ್ನಃ ಸೌಮಿತ್ರಿರ್ದೃಢವಿಕ್ರಮಃ ॥
ಪ್ರತ್ಯವಿಧ್ಯದ್ಧಯಾಂಸ್ತಸ್ಯ ಶರೈರ್ವಿತ್ರಾಸಯನ್ ರಣೇ ।

ಅನುವಾದ

ಸುದೃಢ ಪರಾಕ್ರಮಿ ಸುಮಿತ್ರಾಕುಮಾರ ಲಕ್ಷ್ಮಣನು ಸಹನೆಯನ್ನು ಕಳಕೊಂಡು ರಾವಣಿಯ ಕುದುರೆಗಳನ್ನು ಭಯಗೊಳಿಸುತ್ತಾ ಅವುಗಳಿಗೆ ಬಾಣಗಳನ್ನು ಪ್ರಯೋಗಿಸತೊಡಗಿದನು.॥29॥

ಮೂಲಮ್ - 30½

ಅಮೃರ್ಷ್ಯಮಾಣಸ್ತತ್ಕರ್ಮ ರಾವಣಸ್ಯ ಸುತೋ ರಣೆ ॥
ವಿವ್ಯಾಧ ದಶಭಿರ್ಬಾಣೈಃ ಸೌಮಿತ್ರಿಂ ತಮಮರ್ಷಣಮ್ ।

ಅನುವಾದ

ರಾವಣ ಕುಮಾರ ಇಂದ್ರಜಿತು ಯುದ್ಧದಲ್ಲಿ ಲಕ್ಷ್ಮಣನ ಪರಾಕ್ರಮವನ್ನು ಸಹಿಸಲಾರದೆ ಅವನು ಹತ್ತು ಬಾಣಗಳಿಂದ ಅಸಹನಶೀಲನಾದ ಲಕ್ಷ್ಮಣನನ್ನು ಪ್ರಹರಿಸಿದನು.॥30॥

ಮೂಲಮ್ - 31

ತೇ ತಸ್ಯ ವಜ್ರಪ್ರತಿಮಾಃ ಶರಾಃ ಸರ್ಪವಿಷೋಪಮಾಃ ।
ವಿಲಯಂ ಜಗ್ಮುರಾಗತ್ಯ ಕವಚಂ ಕಾಂಚನಪ್ರಭಮ್ ॥

ಅನುವಾದ

ಅವನ ಆ ವಜ್ರದಂತಹ ಬಾಣಗಳು ವಿಷದಂತೆ ಪ್ರಾಣಘಾತಿಯಾಗಿದ್ದವು. ಆದರೂ ಲಕ್ಷ್ಮಣನ ಬಂಗಾರದ ಕಾಂತಿಯುಳ್ಳ ಕವಚಕ್ಕೆ ತಗುಲಿ ಅಲ್ಲೇ ನಾಶವಾದುವು.॥31॥

ಮೂಲಮ್ - 32

ಅಭೇದ್ಯಕವಚಂ ಮತ್ವಾ ಲಕ್ಷ್ಮಣಂ ರಾವಣಾತ್ಮಜಃ ।
ಲಲಾಟೇ ಲಕ್ಷ್ಮಣಂ ಬಾಣೈಃ ಸುಪುಂಖೈಸ್ತ್ರಿಭಿರಿಂದ್ರಜಿತ್ ॥

ಮೂಲಮ್ - 33½

ಅವಿಧ್ಯತ್ಪರಮಕ್ರುದ್ಧಃ ಶೀಘ್ರಮಸ್ತ್ರಂ ಪ್ರದರ್ಶಯನ್ ।
ತೈಃ ಪೃಷತ್ಕೈರ್ಲಲಾಟಸ್ಥೈಃ ಶುಶುಭೇ ರಘುನಂದನಃ ॥
ರಣಾಗ್ರೇ ಸಮರಶ್ಲಾಘೀ ತ್ರಿಶೃಂಗ ಇವ ಪರ್ವತಃ ।

ಅನುವಾದ

ಲಕ್ಷ್ಮಣನ ಕವಚವು ಅಭೇದ್ಯವಾಗಿದೆ ಎಂದು ತಿಳಿದು ಇಂದ್ರಜಿತನು ಅವನ ಹಣೆಗೆ ಸುಂದರ ರೆಕ್ಕೆಗಳುಳ್ಳ ಮೂರು ಬಾಣಗಳನ್ನು ಹೊಡೆದನು. ಅವನು ತನ್ನ ಅಸ್ತ್ರಚಲನೆಯ ಕೌಶಲ್ಯವನ್ನು ತೋರಿಸುತ್ತಾ ಅತ್ಯಂತ ಕ್ರೋಧದಿಂದ ಅವನನ್ನು ಗಾಯಗೊಳಿಸಿದನು. ಹಣೆಯಲ್ಲಿ ನೆಟ್ಟ ಬಾಣಗಳಿಂದ ರಣಶ್ಲಾಘಿ ಲಕ್ಷ್ಮಣನು ಮೂರು ಶಿಖರಗಳುಳ್ಳ ಪರ್ವತದಂತೆ ಶೋಭಿಸಿದನು.॥32-33॥

ಮೂಲಮ್ - 34

ಸ ತಥಾಪ್ಯರ್ದಿತೋ ಬಾಣೈ ರಾಕ್ಷಸೇನ ತದಾಮೃಧೇ ॥

ಮೂಲಮ್ - 35

ತಮಾಶು ಪ್ರತಿವಿವ್ಯಾಧ ಲಕ್ಷ್ಮಣಃ ಪಂಚಭಿಃ ಶರೈಃ ।
ವಿಕೃಷ್ಯೇಂದ್ರಜಿತೋ ಯುದ್ಧೇ ವದನೇ ಶುಭಕುಂಡಲೇ ॥

ಅನುವಾದ

ರಾಕ್ಷಸನಿಂದ ಹೀಗೆ ಪೀಡಿತನಾಗಿದ್ದರೂ ಲಕ್ಷ್ಮಣನು ಆಗ ಕೂಡಲೇ ಐದು ಬಾಣಗಳನ್ನು ಅನುಸಂಧಾನ ಮಾಡಿ, ಧನುಸ್ಸನ್ನು ಆಕರ್ಣಾಂತ ಸೆಳೆದು ಪ್ರಯೋಗಿಸಿದ ಬಾಣಗಳಿಂದ ಸುಂದರ ಕುಂಡಲಗಳಿಂದ ಸುಶೋಭಿತ ಇಂದ್ರ ಜಿತುವಿನ ಮುಖಮಂಡಲವು ಕ್ಷತ-ವಿಕ್ಷತವಾಯಿತು.॥34-35॥

ಮೂಲಮ್ - 36

ಲಕ್ಷ್ಮಣೇಂದ್ರಜಿತೌ ವೀರೌ ಮಹಾಬಲ ಶರಾಸನೌ ।
ಅನ್ಯೋನ್ಯಂ ಜಘ್ನತುರ್ವೀರೌ ವಿಶಿಖೈರ್ಭೀಮವಿಕ್ರಮೌ ॥

ಅನುವಾದ

ಲಕ್ಷ್ಮಣ ಹಾಗೂ ಇಂದ್ರಜಿತು ಇಬ್ಬರೂ ಬಲಿಷ್ಠ ವೀರರಾಗಿದ್ದು, ಅವರ ಧನುಸ್ಸುಗಳೂ ವಿಶಾಲವಾಗಿದ್ದವು. ಭಯಂಕರ ಪರಾಕ್ರಮ ತೋರುವ ಆ ಯೋಧರಿಬ್ಬರೂ ಪರಸ್ಪರ ಬಾಣಗಳಿಂದ ಗಾಯಗೊಳಿಸುತ್ತಿದ್ದರು.॥36॥

ಮೂಲಮ್ - 37

ತತಃ ಶೋಣಿತದಿಗ್ಧಾಂಗೌ ಲಕ್ಷ್ಮಣೇಂದ್ರಜಿತಾವುಭೌ ।
ರಣೇ ತೌ ರೇಜತುರ್ವೀರೌ ಪುಷ್ಪಿತಾವಿವ ಕಿಂಶುಕೌ ॥

ಅನುವಾದ

ಇದರಿಂದ ಅವರಿಬ್ಬರ ಶರೀರಗಳು ರಕ್ತಸಿಕ್ತವಾದವು. ರಣರಂಗದಲ್ಲಿ ಇಬ್ಬರೂ ವೀರರು ಹೂವರಳಿದ ಮುತ್ತುಗದ ಮರಗಳಂತೆ ಕಂಗೊಳಿಸಿದರು.॥37॥

ಮೂಲಮ್ - 38

ತೌ ಪರಸ್ಪರಮಭ್ಯೇತ್ಯ ಸರ್ವಗಾತ್ರೇಷು ಧನ್ವಿನೌ ।
ಘೋರೈರ್ವಿವ್ಯಧತುರ್ಬಾಣೈಃ ಕೃತಭಾವಾವುಭೌ ಜಯೇ ॥

ಅನುವಾದ

ಇಬ್ಬರೂ ಧನುರ್ಧರ ವೀರರ ಮನಸ್ಸಿನಲ್ಲಿ ವಿಜಯ ಪಡೆಯಲು ದೃಢಸಂಕಲ್ಪವಿತ್ತು; ಅದರಿಂದ ಅವರು ಪರಸ್ಪರ ಕಾದಾಡುತ್ತಾ ಒಬ್ಬರು ಮತ್ತೊಬ್ಬರನ್ನು ಗುರಿಯಾಗಿಸಿ ಭಯಂಕರ ಬಾಣಗಳನ್ನು ಪ್ರಹರಿಸುತ್ತಿದ್ದರು.॥38॥

ಮೂಲಮ್ - 39

ತತಃ ಸಮರಕೋಪೇನ ಸಂಯುತೋ ರಾವಣಾತ್ಮಜಃ ।
ವಿಭೀಷಣಂ ತ್ರಿಭಿರ್ಬಾಣೈರ್ವಿವ್ಯಾಧ ವದನೇ ಶುಭೇ ॥

ಅನುವಾದ

ಇದರ ನಡುವೆ ಸಮರೋಚಿತ ಕ್ರೋಧಗೊಂಡ ರಾವಣಕುಮಾರನು ವಿಭೀಷಣನ ಸುಂದರ ಮುಖಕ್ಕೆ ಮೂರು ಬಾಣಗಳನ್ನು ಪ್ರಹರಿಸಿದನು.॥39॥

ಮೂಲಮ್ - 40

ಅಯೋಮುಖೈಸ್ತ್ರಿಭಿರ್ವಿದ್ಧ್ವಾ ರಾಕ್ಷಸೇಂದ್ರ ವಿಭೀಷಣಮ್ ।
ಏಕೈಕೇನಾಭಿವಿವ್ಯಾಧ ತಾನ್ಸರ್ವಾನ್ ಹರಿಯೂಥಪಾನ್ ॥

ಅನುವಾದ

ಕಬ್ಬಿಣದ ತುದಿಯಿರುವ ಮೂರು ಬಾಣಗಳಿಂದ ರಾಕ್ಷಸರಾಜ ವಿಭೀಷಣನನ್ನು ಗಾಯಗೊಳಿಸಿ ಇಂದ್ರಜಿತನು ಎಲ್ಲ ವಾನರ ಯೂಥಪತಿಗಳ ಮೇಲೆ ಒಂದೊಂದು ಬಾಣವನ್ನು ಪ್ರಹರಿಸಿದನು.॥40॥

ಮೂಲಮ್ - 41

ತಸ್ಮೈ ದೃಢತರಂ ಕ್ರುದ್ಧೋ ಜಘಾನ ಗದಯಾ ಹಯಾನ್ ।
ವಿಭೀಷಣೋ ಮಹಾತೇಜಾ ರಾವಣೇಃ ಸ ದುರಾತ್ಮನಃ ॥

ಅನುವಾದ

ಇದರಿಂದ ಮಹಾ ತೇಜಸ್ವೀ ವಿಭೀಷಣನಿಗೆ ಭಾರೀ ಕೋಪ ಬಂದು, ಅವನು ತನ್ನ ಗದೆಯಿಂದ ಆ ದುರಾತ್ಮ ರಾವಣಕುಮಾರನ ನಾಲ್ಕು ಕುದುರೆಗಳನ್ನು ಕೊಂದುಹಾಕಿದನು.॥41॥

ಮೂಲಮ್ - 42

ಸ ಹತಾಶ್ವಾದವಪ್ಲುತ್ಯ ರಥಾನ್ನಿಹತಸಾರಥೇಃ ।
ಅಥ ಶಕ್ತಿಂ ಮಹಾತೇಜಾಃ ಪಿತೃವ್ಯಾಯ ಮುಮೋಚ ಹ ॥

ಅನುವಾದ

ಸಾರಥಿಯು ಮೊದಲೇ ಮಡಿದಿದ್ದ, ಈಗ ಕುದುರೆಗಳು ಸತ್ತುಹೋದುವು. ಆಗ ಮಹಾತೇಜಸ್ವೀ ಇಂದ್ರಜಿತು ರಥದಿಂದ ಹಾರಿ ತನ್ನ ಚಿಕ್ಕಪ್ಪನ ಮೇಲೆ ಶಕ್ತಿಯಿಂದ ಪ್ರಹರಿಸಿದನು.॥42॥

ಮೂಲಮ್ - 43

ತಾಮಾಪತಂತೀಂ ಸಂಪ್ರೇಕ್ಷ್ಯ ಸುಮಿತ್ರಾನಂದವರ್ಧನಃ ।
ಚಿಚ್ಛೇದ ನಿಶಿತೈರ್ಬಾಣೈರ್ದಶಧಾಪಾತಯದ್ ಭುವಿ ॥

ಅನುವಾದ

ಆ ಶಕ್ತಿಯು ಬರುತ್ತಿರುವುದನ್ನು ನೋಡಿ ಸುಮಿತ್ರೆಯ ಆನಂದವರ್ಧನನಾದ ಲಕ್ಷ್ಮಣನು ಹರಿತವಾದ ಬಾಣಗಳಿಂದ ಕತ್ತರಿಸಿ ಎರಡು ತುಂಡುಗಳಾಗಿಸಿ ನೆಲಕ್ಕೆ ಬೀಳಿಸಿದನು.॥43॥

ಮೂಲಮ್ - 44

ತಸ್ಮೈ ದೃಢಧನುಃ ಕ್ರುದ್ಧೋ ಹತಾಶ್ವಾಯ ವಿಭೀಷಣಃ ।
ವಜ್ರಸ್ಪರ್ಶಸಮಾನ್ಪಂಚ ಸಸರ್ಜೋರಸಿ ಮಾರ್ಗಣಾನ್ ॥

ಅನುವಾದ

ಅನಂತರ ಸುದೃಢ ಧನುಸ್ಸನ್ನು ಧರಿಸಿದ ವಿಭೀಷಣನು, ಕುದುರೆಗಳು ಮೊದಲೇ ಸತ್ತುಹೋದ ಇಂದ್ರಜಿತುವಿನ ಮೇಲೆ ಕುಪಿತನಾಗಿ ಅವನ ಎದೆಗೆ ವಜ್ರದಂತೆ ದುಃಸಹವಾದ ಐದು ಬಾಣಗಳನ್ನು ಹೊಡೆದನು.॥44॥

ಮೂಲಮ್ - 45

ತೇ ತಸ್ಯಕಾಯಂ ಭಿಕ್ತ್ವಾತು ರುಕ್ಮಪುಂಖಾ ನಿಮಿತ್ತಗಾಃ ।
ಬಭೂವುರ್ಲೋಹಿತಾದಿಗ್ಧಾ ರಕ್ತಾ ಇವ ಮಹೋರಗಾಃ ॥

ಅನುವಾದ

ಬಂಗಾರದ ರೆಕ್ಕೆಗಳಿಂದ ಸುಶೋಭಿತ, ಗುರಿಯನ್ನು ತಲುಪುವ ಆ ಬಾಣಗಳು ಇಂದ್ರಜಿತನ ಶರೀರವನ್ನು ಸೀಳಿ ಅವನ ರಕ್ತದಿಂದ ತೊಯ್ದು, ಕೆಂಬಣ್ಣದ ದೊಡ್ಡ ದೊಡ್ಡ ಸರ್ಪಗಳಂತೆ ಕಂಡುಬರುತ್ತಿದ್ದವು.॥45॥

ಮೂಲಮ್ - 46

ಸ ಪಿತೃವ್ಯಸ್ಯ ಸಂಕ್ರುದ್ಧ ಇಂದ್ರಜಿಚ್ಛರಮಾದದೇ ।
ಉತ್ತಮಂ ರಕ್ಷಸಾಂ ಮಧ್ಯೇ ಯಮದತ್ತಂ ಮಹಾಬಲಃ ॥

ಅನುವಾದ

ಆಗ ಮಹಾಬಲಿ ಇಂದ್ರಜಿತನ ಮನಸ್ಸಿನಲ್ಲಿ ಚಿಕ್ಕಪ್ಪನ ಕುರಿತು ಭಾರೀ ಕ್ರೋಧವುಂಟಾಯಿತು. ಅವನು ರಾಕ್ಷಸರ ನಡುವೆ ಯಮರಾಜನು ಕೊಟ್ಟಿದ್ದ ಉತ್ತಮ ಬಾಣವನ್ನು ಕೈಗೆತ್ತಿಕೊಂಡನು.॥46॥

ಮೂಲಮ್ - 47

ತಂ ಸಮೀಕ್ಷ್ಯ ಮಹಾತೇಜಾ ಮಹೇಷುಂ ತೇನ ಸಂಹಿತಮ್ ।
ಲಕ್ಷ್ಮಣೋಽಪ್ಯಾದದೇ ಬಾಣಮನ್ಯದ್ ಭೀಮಪರಾಕ್ರಮಃ ॥

ಅನುವಾದ

ಆ ಮಹಾಬಾಣವನ್ನು ಇಂದ್ರಜಿತು ಧನುಸ್ಸಿಗೆ ಹೂಡಿದಾಗ ಭಯಾನಕ ಪರಾಕ್ರಮ ತೋರುವ ಮಹಾತೇಜಸ್ವೀ ಲಕ್ಷ್ಮಣನೂ ಕೂಡ ಒಂದು ಬಾಣವನ್ನು ಎತ್ತಿಕೊಂಡನು.॥47॥

ಮೂಲಮ್ - 48

ಕುಬೇರೇಣ ಸ್ವಯಂ ಸ್ವಪ್ನೇ ಯದ್ ದತ್ತಮಮಿತಾತ್ಮನಾ ।
ದುರ್ಜಯಂ ದುರ್ವಿಷಹ್ಯಂ ಚ ಸೇಂದ್ರೈರಪಿ ಸುರಾಸುರೈಃ ॥

ಅನುವಾದ

ಆ ಬಾಣದ ಉಪದೇಶ ಮಹಾತ್ಮಾ ಕುಬೇರನು ಸ್ವಪ್ನದಲ್ಲಿ ಕೊಟ್ಟಿದ್ದನು. ಆ ಬಾಣ ಇಂದ್ರಾದಿ ದೇವತೆಗಳಿಗೆ ಹಾಗೂ ಅಸುರರಿಗೂ ಅಸಹ್ಯ ಹಾಗೂ ದುರ್ಜಯವಾಗಿತ್ತು.॥48॥

ಮೂಲಮ್ - 49

ತಯೋಸ್ತು ಧನುಷೀ ಶ್ರೇಷ್ಠೇ ಬಾಹುಭಿಃ ಪರಿಘೋಪಮೈಃ ।
ವಿಕೃಷ್ಯಮಾಣೇ ಬಲವತ್ ಕ್ರೌಂಚಾವಿವ ಚುಕೂಜತುಃ ॥

ಅನುವಾದ

ಅವರಿಬ್ಬರ ಪರಿಘಗಳಂತೆ ಬಲಿಷ್ಠ, ದಪ್ಪವಾದ ಭುಜಗಳಿಂದ ಜೋರಾಗಿ ಧನುಸ್ಸನ್ನು ಸೆಳೆಯುವಾಗ ಉಂಟಾದ ಶಬ್ದವು ಕ್ರೌಂಚ ಪಕ್ಷಿಯ ಕೂಗಿನಂತಿತ್ತು.॥49॥

ಮೂಲಮ್ - 50

ತಾಭ್ಯಾಂ ತು ಧನುಷಿ ಶ್ರೇಷ್ಠೇ ಸಂಹಿತೌ ಸಾಯಕೋತ್ತಮೌ ।
ವಿಕೃಷ್ಯಮಾಣೌ ವೀರಾಭ್ಯಾಂ ಭೃಶಂ ಜಜ್ವಲತುಃ ಶ್ರಿಯಾ ॥

ಅನುವಾದ

ಆ ವೀರರು ತಮ್ಮ ತಮ್ಮ ಶ್ರೇಷ್ಠ ಧನುಸ್ಸಿಗೆ ಆ ಉತ್ತಮ ಸಾಯಕಗಳನ್ನು ಅನು ಸಂಧಾನ ಮಾಡಿ ಸೆಳೆದಾಗ ಅವು ಅತ್ಯಂತ ತೇಜದಿಂದ ಪ್ರಜ್ವಲಿಸತೊಡಗಿದವು.॥50॥

ಮೂಲಮ್ - 51

ತೌ ಭಾಸಯಂತಾವಾಕಾಶಂ ಧನುರ್ಭ್ಯಾಂ ವಿಶಿಖೌ ಚ್ಯುತೌ ।
ಮುಖೇನ ಮುಖಮಾಹತ್ಯ ಸಂನಿಪೇತತುರೋಜಸಾ ॥

ಅನುವಾದ

ಇಬ್ಬರ ಬಾಣಗಳು ಒಟ್ಟಿಗೆ ಹೊರಟು ತನ್ನ ತೇಜದಿಂದ ಆಕಾಶವನ್ನು ಪ್ರಕಾಶಿಸತೊಡಗಿದವು. ಎರಡೂ ಬಹಳ ವೇಗವಾಗಿ ಪರಸ್ಪರ ಢಿಕ್ಕಿಹೊಡೆದವು.॥51॥

ಮೂಲಮ್ - 52

ಸಂನಿಪಾತಸ್ತಯೋಶ್ವಾಸೀಚ್ಛರಯೋರ್ಘೋರರೂಪಯೋಃ ।
ಸಧೂಮವಿಸ್ಫುಲಿಂಗಶ್ಚ ತಜ್ಜೋಽಗ್ನಿರ್ದಾರುಣೋಽಭವತ್ ॥

ಅನುವಾದ

ಆ ಭಯಾನಕ ಬಾಣಗಳೆರಡೂ ಡಿಕ್ಕಿ ಹೊಡೆದಾಗ ಅವುಗಳಿಂದ ದಾರುಣ ಅಗ್ನಿ ಪ್ರಕಟವಾಯಿತು; ಅದರಿಂದ ಹೊಗೆ ಏಳುತ್ತಾ ಕಿಡಿಗಳು ಕಾರತೊಡಗಿದವು.॥52॥

ಮೂಲಮ್ - 53

ತೌ ಮಹಾಗ್ರಹಸಂಕಾಶಾವನ್ಯೋನ್ಯಂ ಸಂನಿಪತ್ಯ ಚ ।
ಸಂಗ್ರಾಮೇ ಶತಧಾ ಯಾತೌ ಮೇದಿನ್ಯಾಂಚೈವ ಪೇತತುಃ ॥

ಅನುವಾದ

ಅವೆರಡೂ ಬಾಣಗಳೂ ಎರಡು ಮಹಾಗ್ರಹದಂತೆ ಪರಸ್ಪರ ಢಿಕ್ಕಿ ಹೊಡೆದು ನೂರಾರು ಚೂರು ಚೂರುಗಳಾಗಿ ಸಂಗ್ರಾಮಭೂಮಿಗೆ ಬಿದ್ದು ಹೋದುವು.॥53॥

ಮೂಲಮ್ - 54

ಶರೌ ಪ್ರತಿಹತೌ ದೃಷ್ಟ್ವಾತಾವುಭೌ ರಣಮೂರ್ಧನಿ ।
ವ್ರೀಡಿತೌ ಜಾತರೋಷೌ ಚ ಲಕ್ಷ್ಮಣೇಂದ್ರ ಜಿತೌ ತದಾ ॥

ಅನುವಾದ

ಯುದ್ಧದಲ್ಲಿ ಅವೆರಡೂ ಬಾಣಗಳು ಒಂದಕ್ಕೊಂದು ತಗುಲಿ ಆಘಾತ-ಪ್ರತಿಘಾತದಿಂದ ವ್ಯರ್ಥವಾದುದನ್ನು ನೋಡಿ ಇಬ್ಬರೂ ನಾಚಿಕೊಂಡರು. ಮತ್ತೆ ಇಬ್ಬರೂ ಒಬ್ಬರು ಮತ್ತೊಬ್ಬರ ಕುರಿತು ಅತ್ಯಂತ ರೋಷಗೊಂಡರು.॥54॥

ಮೂಲಮ್ - 55

ಸುಸಂರಬ್ಧಸ್ತು ಸೌಮಿತ್ರಿರಸ್ತ್ರಂ ವಾರುಣಮಾದದೇ ।
ರೌದ್ರಂ ಮಹೇಂದ್ರಜಿದ್ಯುದ್ಧೇಽಪ್ಯಸೃಜದ್ಯುಧಿ ನಿಷ್ಠಿತಃ ॥

ಅನುವಾದ

ಸುಮಿತ್ರಾನಂದನನು ಕುಪಿತನಾಗಿ ವಾರುಣಾಸ್ತ್ರವನ್ನು ಎತ್ತಿಕೊಂಡನು. ಜೊತಗೆ ರಣಭೂಮಿಯಲ್ಲಿ ನಿಂತಿದ್ದ ಇಂದ್ರಜಿತು ರೌದ್ರಾಸವನ್ನು ಎತ್ತಿ, ಅದನ್ನು ವಾರುಣಾಸ್ತ್ರದ ಪ್ರತಿಕಾರಕ್ಕಾಗಿ ಪ್ರಯೋಗಿಸಿದನು.॥55॥

ಮೂಲಮ್ - 56

ತೇನ ತದ್ವಿಹಿತಂ ಶಸ್ತ್ರಂ ವಾರುಣಂ ಪರಮಾದ್ಭುತಮ್ ।
ತತಃ ಕ್ರುದ್ಧೋ ಮಹಾತೇಜಾ ಇಂದ್ರಜಿತ್ಸಮಿತಿಂಜಯಃ ।
ಆಗ್ನೇಯಂ ಸಂದಧೇ ದೀಪ್ತಂ ಸ ಲೋಕಂ ಸಂಕ್ಷಿಪನ್ನಿವ ॥

ಅನುವಾದ

ಆ ರೌದ್ರಾಸ್ತ್ರದಿಂದ ಆಹತವಾಗಿ ಲಕ್ಷ್ಮಣನ ಅತ್ಯಂತ ಅದ್ಭುತ ವಾರುಣಾಸ್ತ್ರವು ಶಾಂತವಾಯಿತು. ಅನಂತರ ಸಮರವಿಜಯಿ ಮಹಾತೇಜಸ್ವೀ ಇಂದ್ರಜಿತನು ಕುಪಿತನಾಗಿ ಆಗ್ನೇಯಾಸವನ್ನು ಸಂಧಾನ ಮಾಡಿದನು. ಅದು ಸಮಸ್ತ ಲೋಕಗಳ ಪ್ರಳಯವನ್ನೇ ಮಾಡಲು ಬಯಸುತ್ತಿರುವಂತಿತ್ತು.॥56॥

ಮೂಲಮ್ - 57

ಸೌರೇಣಾಸ್ತ್ರೇಣ ತದ್ವೀರೋ ಲಕ್ಷ್ಮಣಃ ಪ್ರತ್ಯವಾರಯತ್ ।
ಅಸ್ತ್ರಂ ನಿವಾರಿತಂ ದೃಷ್ಟ್ವಾ ರಾವಣಿಃ ಕ್ರೋಧಮೂರ್ಛಿತಃ ॥

ಅನುವಾದ

ಆದರೆ ವೀರ ಲಕ್ಷ್ಮಣನು ಸೂರ್ಯಾಸ್ತ್ರದ ಪ್ರಯೋಗದಿಂದ ಅದನ್ನು ಶಾಂತಗೊಳಿಸಿದನು. ತನ್ನ ಅಸ್ತ್ರವು ಪ್ರತಿಹತವಾದುದನ್ನು ನೋಡಿ ರಾವಣಕುಮಾರನು ನಿಶ್ಚೇಷ್ಟಿತನಂತೆ ಆದನು.॥57॥

ಮೂಲಮ್ - 58½

ಆದದೇ ನಿಶಿತಂ ಬಾಣಮಾಸುರಂ ಶತ್ರುದಾರುಣಮ್ ।
ತಸ್ಮಾಚ್ಚಾಪಾದ್ ವಿನಿಷ್ಪೇತುರ್ಭಾಸ್ವರಾಃ ಕೂಟಮುದ್ಗರಾಃ ॥
ಶೂಲಾನಿ ಚ ಭುಶುಂಡ್ಯಶ್ಚ ಗದಾಃ ಖಡ್ಗಾಃ ಪರಶ್ವಧಾಃ ।

ಅನುವಾದ

ಅವನು ಅಸುರ ಎಂಬ ಶತ್ರುನಾಶಕ ಹರಿತವಾದ ಬಾಣವನ್ನು ಪ್ರಯೋಗಿಸಿದನು. ಮತ್ತೆ ಅವನ ಧನುಸ್ಸಿನಿಂದ ಹೊಳೆಯುವ ಕೂಟ, ಮುದ್ಗರ, ಶೂಲ, ಭುಶುಂಡೀ, ಗದೆ, ಖಡ್ಗ, ಕೊಡಲಿಗಳು ಹೊರಟವು.॥58॥

ಮೂಲಮ್ - 59

ತದ್ದೃಷ್ಟ್ವಾ ಲಕ್ಷ್ಮಣಃ ಸಂಖ್ಯೇ ಘೋರಮಸ್ತ್ರಮಥಾಸುರಮ್ ॥

ಮೂಲಮ್ - 60

ಅವಾರ್ಯಂ ಸರ್ವಭೂತಾನಾಂ ಸರ್ವಶಸ್ತ್ರವಿದಾರಣಮ್ ।
ಮಾಹೇಶ್ವರೇಣ ದ್ಯುತಿಮಾಂಸ್ತದಸ್ತ್ರಂ ಪ್ರತ್ಯವಾರಯತ್ ॥

ಅನುವಾದ

ರಣಭೂಮಿಯಲ್ಲಿ ಆ ಭಯಂಕರ ಅಸುರಾಸ್ತ್ರವು ಪ್ರಕಟವಾದುದನ್ನು ನೋಡಿ ತೇಜಸ್ವೀ ಲಕ್ಷ್ಮಣನು ಸಮಸ್ತ ಅಸ್ತ್ರ-ಶಸ್ತ್ರಗಳನ್ನು ವಿವೀರ್ಣಗೊಳಿಸುವ ಮಾಹೇಶ್ವರಾಸ್ತ್ರವನ್ನು ಪ್ರಯೋಗಿಸಿದನು. ಅದನ್ನು ಸಮಸ್ತ ಪ್ರಾಣಿಗಳು ಸೇರಿದರೂ ನಿವಾರಿಸಲಾರರು. ಆ ಮಾಹೇಶ್ವರಾಸ್ತ್ರದಿಂದ ಅವನು ಆ ಅಸುರಾಸ್ತ್ರವನ್ನು ನಾಶಮಾಡಿಬಿಟ್ಟನು.॥59-60॥

ಮೂಲಮ್ - 61

ತಯೋಃ ಸಮಭವದ್ಯುದ್ಧಮದ್ಭುತಂ ರೋಮಹರ್ಷಣಮ್ ।
ಗಗನಸ್ಥಾನಿ ಭೂತಾನಿ ಲಕ್ಷ್ಮಣಂ ಪರ್ಯವಾರಯನ್ ॥

ಅನುವಾದ

ಈ ಪ್ರಕಾರ ಅವರಿಬ್ಬರಲ್ಲಿ ಅತ್ಯಂತ ಅದ್ಭುತ, ರೋಮಾಂಚಕರ ಯುದ್ಧವು ನಡೆಯುತ್ತಿತ್ತು. ಆಕಾಶದಲ್ಲಿ ಇರುವ ಅಸಂಖ್ಯಪ್ರಾಣಿಗಳು ಲಕ್ಷ್ಮಣನನ್ನು ಸುತ್ತುವರೆದು ನಿಂತವು.॥61॥

ಮೂಲಮ್ - 62

ಭೈರವಾಭಿರುತೇ ಭೀಮೇ ಯುದ್ಧೇ ವಾನರರಕ್ಷಸಾಮ್ ।
ಭೂತೈರ್ಬಹುಭಿರಾಕಾಶಂ ವಿಸ್ಮಿತೈರಾವೃತಂ ಬಭೌ ॥

ಅನುವಾದ

ಭೈರವ ಗರ್ಜನೆಯನ್ನು ಪ್ರತಿಧ್ವನಿಸುತ್ತಾ ವಾನರರ ರಾಕ್ಷಸರ ಆ ಭಯಾನಕ ಯುದ್ಧವು ನಡೆಯುತ್ತಿದ್ದಾಗ ಆಶ್ಚರ್ಯಚಕಿತರಾದ ಅಸಂಖ್ಯಪ್ರಾಣಿಗಳು ಬಂದು ನಿಂತುಕೊಂಡರು. ಅವರಿಂದ ಆವರಿಸಿದ ಆಕಾಶವು ಅದ್ಭುತವಾಗಿ ಶೋಭಿಸುತ್ತಿತ್ತು.॥62॥

ಮೂಲಮ್ - 63

ಋಷಯಃ ಪಿತರೋ ದೇವಾ ಗಂಧರ್ವ ಗರುಡೋರಗಾಃ ।
ಶತಕ್ರತುಂ ಪುರಸ್ಕೃತ್ಯ ರರಕ್ಷುರ್ಲಕ್ಷ್ಮಣಂ ರಣೇ ॥

ಅನುವಾದ

ಋಷಿ, ಪಿತೃಗಳು, ದೇವತೆಗಳು, ಗಂಧರ್ವ, ಗರುಡ, ನಾಗ ಇವರೆಲ್ಲ ಇಂದ್ರನನ್ನು ಮುಂದಿರಿಸಿಕೊಂಡು ರಣರಂಗದಲ್ಲಿ ಸುಮಿತ್ರಾಕುಮಾರನನ್ನು ರಕ್ಷಿಸತೊಡಗಿದರು.॥63॥

ಮೂಲಮ್ - 64

ಅಥಾನ್ಯಂ ಮಾರ್ಗಣಶ್ರೇಷ್ಠಂ ಸಂದಧೇ ರಾಘವಾನುಜಃ ।
ಹುತಾಶನ ಸಮಸ್ಪರ್ಶಂ ರಾವಣಾತ್ಮಜದಾರಣಮ್ ॥

ಅನುವಾದ

ಅನಂತರ ಲಕ್ಷ್ಮಣನು ಬೆಂಕಿಯಂತೆ ಸುಡುವ, ರಾವಣಕುಮಾರರನ್ನು ವಿದೀರ್ಣಗೊಳಿಸುವ ಶಕ್ತಿಯಿರುವ ಒಂದು ಉತ್ತಮ ಬಾಣವನ್ನು ಧನುಸ್ಸಿಗೆ ಹೂಡಿದನು.॥64॥

ಮೂಲಮ್ - 65

ಸುಪತ್ರಮನುವೃತ್ತಾಂಗಂ ಸುಪರ್ವಾಣಂ ಸುಸಂಸ್ಥಿತಮ್ ।
ಸುವರ್ಣವಿಕೃತಂ ವೀರಃ ಶರೀರಾಂತಕರಂ ಶರಮ್ ॥

ಮೂಲಮ್ - 66

ದುರಾವಾರಂ ದುರ್ವಿಷಹಂ ರಾಕ್ಷಸಾನಾಂ ಭಯಾವಹಮ್
ಆಶೀವಿಷವಿಷಪ್ರಖ್ಯಂ ದೇವಸಂಘೈಃ ಸಮರ್ಚಿತಮ್ ॥

ಮೂಲಮ್ - 67

ಯೇನ ಶಕ್ರೋ ಮಹಾತೇಜಾ ದಾನವಾನಜಯತ್ಪ್ರಭುಃ ।
ಪುರಾ ದೈವಾಸುರೇ ಯುದ್ಧೇವೀರ್ಯವಾನ್ಹರಿವಾಹನಃ ॥

ಮೂಲಮ್ - 68

ಅಥೈಂದ್ರಮಸ್ತ್ರಂ ಸೌಮಿತ್ರಿಃ ಸಂಯುಗೇಷ್ವ ಪರಾಜಿತಮ್ ।
ಶರಶ್ರೇಷ್ಠಂ ಧನುಃ ಶ್ರೇಷ್ಠೇ ವಿಕರ್ಷನ್ನಿದಮಬ್ರವೀತ್ ॥

ಮೂಲಮ್ - 69

ಲಕ್ಷ್ಮೀವಾಂಲ್ಲಕ್ಷ್ಮಣೋ ವಾಕ್ಯಮರ್ಥಸಾಧಕಮಾತ್ಮನಃ ।
ಧರ್ಮಾತ್ಮಾ ಸತ್ಯಸಂಧಶ್ಚ ರಾಮೋ ದಾಶರಥಿರ್ಯದಿ ।
ಪೌರುಷೇಚಾಪ್ರತಿದ್ವಂದ್ವಸ್ತದೈನಂ ಜಹಿ ರಾವಣಿಮ್ ॥

ಅನುವಾದ

ಅದಕ್ಕೆ ಸುಂದರವಾದ ರೆಕ್ಕೆಗಳಿದ್ದು, ಸುಂದರವಾದ ಗಿಣ್ಣುಗಳಿದ್ದವು. ಅದರ ಗಾತ್ರವು ದುಂಡಾಗಿತ್ತು. ಅದು ಅತ್ಯಂತ ದೃಢವಾಗಿದ್ದು ಚಿನ್ನದಿಂದ ಚಿತ್ರಿತವಾಗಿತ್ತು. ಶತ್ರುವಿನ ಜೀವನವನ್ನು ಅಂತ್ಯಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದು, ನಿವಾರಿಸಲು ಅಥವಾ ಸಹಿಸಿಕೊಳ್ಳಲು ಅಸಾಧ್ಯವಾಗಿತ್ತು. ರಾಕ್ಷಸರಿಗೆ ಭಯದಾಯಕವಾದ ಅದು ಸರ್ಪದ ವಿಷಯದಂತೆ ಶತ್ರುಗಳ ಪ್ರಾಣವನ್ನು ಅಪಹರಿಸುವುದಾಗಿತ್ತು. ದೇವತೆಗಳಿಂದ ಪೂಜಿತವಾದ, ಹಿಂದೆ ದೇವಾಸುರರಿಗೆ ನಡೆದ ಯುದ್ಧದಲ್ಲಿ ಹಸುರು ಬಣ್ಣದ ಕುದುರೆಗಳಿಂದ ಕೂಡಿದ ರಥದಲ್ಲಿ ಕುಳಿತು ಪರಾಕ್ರಮಿ, ಶಕ್ತಿವಂತ ಮಹಾತೇಜಸ್ವೀ ಇಂದ್ರನು ಇದೇ ಬಾಣದಿಂದ ದಾನವರನ್ನು ಗೆದ್ದಿದ್ದನು. ಅದು ಯುದ್ಧದಲ್ಲಿ ಎಂದು ಪರಾಜಯವನ್ನು ಕಾಣದಿದ್ದ ಅಂತಹ ಪರಮಾದ್ಭುತವಾದ ಐಂದ್ರಾಸ್ತ್ರವೆಂಬ ಶ್ರೇಷ್ಠವಾದ ಅಸ್ತ್ರವನ್ನು ಲಕ್ಷ್ಮಣನು ತನ್ನ ಧನುಸ್ಸಿಗೆ ಹೂಡಿ ನಾಣನ್ನು ಸೆಳೆಯುತ್ತಾ ತನ್ನ ಅಭಿಪ್ರಾಯವನ್ನು ಸಿದ್ಧಗೊಳಿಸುವಂತಹ ಈ ಮಾತನ್ನು ಹೇಳಿದನು- ‘‘ದಶರಥನಂದನ ಶ್ರೀರಾಮನು ಧರ್ಮಾತ್ಮನೂ, ಸತ್ಯಸಂಧನೂ, ಪೌರುಷದಲ್ಲಿ ಅದ್ವಿತೀಯನೂ ಆಗಿದ್ದಾನೆ. ಅವನ ಮಹಿಮೆಯಿಂದ ಎಲೈ ಐಂದ್ರಾಸ್ತ್ರವೇ! ನೀನು ಈ ರಾವಣಪುತ್ರನನ್ನು ಸಂಹರಿಸು’’.॥65-69॥

ಮೂಲಮ್ - 70

ಇತ್ಯುಕ್ತ್ವಾ ಬಾಣಮಾಕರ್ಣಂ ವಿಕೃಷ್ಯ ತಮಜಿಹ್ಮಗಮ್ ।
ಲಕ್ಷ್ಮಣಃ ಸಮರೇ ವೀರಃ ಸಸರ್ಜೇಂದ್ರಜಿತಂ ಪ್ರತಿ ।
ಐಂದ್ರಾಸ್ತ್ರೇಣ ಸಮಾಯುಜ್ಯ ಲಕ್ಷ್ಮಣಃ ಪರವೀರಹಾ ॥

ಅನುವಾದ

ಸಮರಾಂಗಣದಲ್ಲಿ ಹೀಗೆ ಹೇಳಿ ಶತ್ರುಗಳನ್ನು ಸಂಹರಿಸುವ ವೀರ ಲಕ್ಷ್ಮಣನು ನೇರವಾಗಿ ಹೋಗುವ ಆ ಬಾಣವನ್ನು ಕಿವಿಯವರೆಗೆ ಸೆಳೆದು ಐಂದ್ರಾಸ್ತ್ರದಿಂದ ಸಂಯುಕ್ತಗೊಳಿಸಿ ಇಂದ್ರಜಿತನ ಕಡೆಗೆ ಎಸೆದನು.॥70॥

ಮೂಲಮ್ - 71

ತಚ್ಛಿರಃ ಸಶಿರಸ್ತ್ರಾಣಂ ಶ್ರೀಮಜ್ಜ್ವಲಿತಕುಂಡಲಮ್ ।
ಪ್ರಮಥ್ಯೇಂದ್ರಜಿತಃ ಕಾಯಾತ್ ಪಾತಯಾಮಾಸ ಭೂತಲೇ ॥

ಅನುವಾದ

ಧನುಸ್ಸಿನಿಂದ ಹೊರಟ ಐಂದ್ರಾಸ್ತ್ರವು ಹೊಳೆಯುತ್ತಿರುವ ಕುಂಡಲಗಳಿಂದ ಕೂಡಿದ ಇಂದ್ರಜಿತುವಿನ ಶಿರಸ್ತ್ರಾಣ ಸಹಿತ ದೀಪ್ತಿದಂತ ಮಸ್ತಕವನ್ನು ಕಡಿದು ಭೂಮಿಗೆ ಬೀಳಿಸಿತು.॥71॥

ಮೂಲಮ್ - 72

ತದ್ರಾಕ್ಷಸತನೂಜಸ್ಯ ಛಿನ್ನಸ್ಕಂಧ ಶಿರೋ ಮಹತ್ ।
ತಪನೀಯನಿಭಂ ಭೂಮೌ ದದೃಶೇ ರುಧಿರೋಕ್ಷಿತಮ್ ॥

ಅನುವಾದ

ರಾಕ್ಷಸಪುತ್ರ ಇಂದ್ರಜಿತುವಿನ ಆ ತುಂಡಾದ ವಿಶಾಲ ಶಿರವು ರಕ್ತದಿಂದ ತೊಯ್ದುಹೋಗಿತ್ತು. ಭೂಮಿಗೆ ಬಿದ್ದು ಸುವರ್ಣದಂತೆ ಕಂಡುಬರತೊಡಗಿತು.॥72॥

ಮೂಲಮ್ - 73

ಹತಃ ಸ ನಿಪಪಾತಾಥ ಧರಣ್ಯಾಂ ರಾವಣಾತ್ಮಜಃ ।
ಕವಚೀ ಸಶಿರಸ್ತ್ರಾಣೋ ವಿಪ್ರವಿದ್ಧಸಶರಾಸನಃ ॥

ಅನುವಾದ

ಹೀಗೆ ಸತ್ತು ಕವಚ, ತಲೆ ಮತ್ತು ಶಿರಸ್ತ್ರಾಣ ಸಹಿತ ರಾವಣಕುಮಾರನು ಧರಾಶಾಯಿಯಾದನು. ಅವನ ಧನುಸ್ಸು ದೂರಹೋಗಿ ಬಿದ್ದಿತ್ತು.॥73॥

ಮೂಲಮ್ - 74

ಚುಕ್ರುಶುಸ್ತೇ ತತಃ ಸರ್ವೇ ವಾನರಾಃ ಸವಿಭೀಷಣಾಃ ।
ಹೃಷ್ಯಂತೇ ನಿಹತೇ ತಸ್ಮಿನ್ದೇವಾ ವೃತ್ರವಧೇ ಯಥಾ ॥

ಅನುವಾದ

ವೃತ್ರಾಸುರನ ವಧೆಯಾದಾಗ ದೇವತೆಗಳು ಪ್ರಸನ್ನರಾದಂತೆ ಇಂದ್ರಜಿತು ಹತನಾದಾಗ ವಿಭೀಷಣ ಸಹಿತ ಸಮಸ್ತ ವಾನರರು ಹರ್ಷಗೊಂಡು ಜೋರಾಗಿ ಸಿಂಹನಾದ ಮಾಡತೊಡಗಿದರು.॥74॥

ಮೂಲಮ್ - 75

ಅಥಾಂತರಿಕ್ಷೇ ದೇವಾನಾಮೃಷೀಣಾಂ ಚ ಮಹಾತ್ಮನಾಮ್ ।
ಜಜ್ಞೇಽಥ ಜಯ ಸಂನಾದೋ ಗಂಧರ್ವಾಪ್ಸರಸಾಮಪಿ ॥

ಅನುವಾದ

ಆಕಾಶದಲ್ಲಿ ದೇವತೆಗಳು, ಮಹಾತ್ಮಾ ಋಷಿಗಳು, ಗಂಧರ್ವರು, ಅಪ್ಸರೆಯರೂ ಕೂಡ ಜಯ ಘೋಷ ಮಾಡಿದರು.॥75॥

ಮೂಲಮ್ - 76

ಪತಿತಂ ಸಮಭಿಜ್ಞಾಯ ರಾಕ್ಷಸೀ ಸಾ ಮಹಾಚಮೂಃ ।
ವಧ್ಯಮಾನಾ ದಿಶೋ ಭೇಜೇ ಹರಿಭಿರ್ಜಿತಕಾಶಿಭಿಃ ॥

ಅನುವಾದ

ಇಂದ್ರಜಿತನು ಧರಾಶಾಯಿಯಾಗಿರುವುದನ್ನು ನೋಡಿ ವಿಜಯೋತ್ಸಾಹದಿಂದ ವಾನರರ ಪೆಟ್ಟುತಿಂದು ರಾಕ್ಷಸರ ವಿಶಾಲ ಸೈನ್ಯವು ದಿಕ್ಕಾಪಾಲಾಗಿ ಓಡಿತು.॥76॥

ಮೂಲಮ್ - 77

ವಾನರೈರ್ವಧ್ಯಮಾನಾಸ್ತೇ ಶಸ್ತ್ರಾಣ್ಯುತ್ಸೃಜ್ಯ ರಾಕ್ಷಸಾಃ ।
ಲಂಕಾಮಭಿಮುಖಾಃ ಸಸ್ರುರ್ಭಷ್ಟ ಸಂಜ್ಞಾಃ ಪ್ರಧಾವಿತಾಃ ॥

ಅನುವಾದ

ವಾನರರಿಂದ ಏಟುತಿಂದು ರಾಕ್ಷಸರು ಎಚ್ಚರವಿಲ್ಲದೆ ಅಸ್ತ್ರ-ಶಸ್ತ್ರಗಳನ್ನು ಬಿಟ್ಟು ವೇಗವಾಗಿ ಓಡುತ್ತಾ ಲಂಕೆಯ ಕಡೆಗೆ ಹೊರಟುಹೋದರು.॥77॥

ಮೂಲಮ್ - 78

ದುದ್ರುವುರ್ಬಹುಧಾ ಭೀತಾ ರಾಕ್ಷಸಾಃ ಶತಶೋ ದಿಶಃ ।
ತ್ಯಕ್ತ್ವಾ ಪ್ರಹರಣಾನ್ ಸರ್ವೇ ಪಟ್ಟಿಶಾಸಿಪರಶ್ವಧಾನ್ ॥

ಅನುವಾದ

ಹೆದರಿಹೋಗಿದ್ದ ರಾಕ್ಷಸರೆಲ್ಲರೂ ಪಟ್ಟಿಶ, ಖಡ್ಗ, ಕೊಡಲಿ ಮುಂತಾದ ಶಸ್ತ್ರಗಳನ್ನು ತ್ಯಜಿಸಿ ಒಟ್ಟಿಗೆ ಕಂಡ ಕಂಡ ಕಡೆಗೆ ಓಡತೊಡಗಿದರು.॥78॥

ಮೂಲಮ್ - 79

ಕೇಚಿಲ್ಲಕಾಂ ಪರಿತ್ರಸ್ತಾಃ ಪ್ರವಿಷ್ಟಾ ವಾನರಾರ್ದಿತಾಃ ।
ಸಮುದ್ರೇ ಪತಿತಾಃ ಕೇಚಿತ್ಕೇಚಿತ್ ಪರ್ವತಮಾಶ್ರಿತಾಃ ॥

ಅನುವಾದ

ವಾನರರಿಂದ ಪೀಡಿತರಾಗಿ ಕೆಲವರು ಲಂಕೆಯನ್ನು ಹೊಕ್ಕರು, ಕೆಲವರು ಸಮುದ್ರಕ್ಕೆ ಹಾರಿದರು, ಕೆಲ ಕೆಲವರು ಪರ್ವತಗಳನ್ನು ಆಶ್ರಯಿಸಿದರು.॥79॥

ಮೂಲಮ್ - 80

ಹತಮಿಂದ್ರಜಿತಂ ದೃಷ್ಟ್ವಾ ಶಯಾನಂ ಚ ರಣಕ್ಷಿತೌ ।
ರಾಕ್ಷಸಾನಾಂ ಸಹಸ್ರೇಷು ನ ಕಶ್ಚಿತ್ ಪ್ರತ್ಯದೃಶ್ಯತ ॥

ಅನುವಾದ

ಇಂದ್ರಜಿತು ಸತ್ತು ರಣಭೂಮಿಯಲ್ಲಿ ಮಲಗಿರುವುದನ್ನು ನೋಡಿ ಸಾವಿರಾರು ರಾಕ್ಷಸರಲ್ಲಿ ಒಬ್ಬನೂ ಅಲ್ಲಿ ಕಂಡು ಬರಲಿಲ್ಲ.॥80॥

ಮೂಲಮ್ - 81

ಯಥಾಸ್ತಂ ಗತ ಆದಿತ್ಯೇ ನಾವತಿಷ್ಠಂತಿ ರಶ್ಮಯಃ ।
ತಥಾ ತಸ್ಮಿನ್ನಿಪತಿತೇ ರಾಕ್ಷಸಾಸ್ತೇ ಗತಾ ದಿಶಃ ॥

ಅನುವಾದ

ಸೂರ್ಯಾಸ್ತವಾದಾಗ ಅವನ ಕಿರಣಗಳು ಉಳಿದುಕೊಳ್ಳದಿರುವಂತೆ ಇಂದ್ರಜಿತು ಧರಾಶಾಯಿ ಯಾದಾಗ ಆ ರಾಕ್ಷಸರು ಅಲ್ಲಿ ನಿಲ್ಲದೆ ಎಲ್ಲ ದಿಕ್ಕುಗಳಿಗೆ ಓಡಿಹೋದರು.॥81॥

ಮೂಲಮ್ - 82

ಶಾಂತರಶ್ಮಿರಿವಾದಿತ್ಯೋ ನಿರ್ವಾಣ ಇವ ಪಾವಕಃ ।
ಸ ಬಭೂವ ಮಹಾಬಾಹುರ್ವ್ಯಪಾಸ್ತಗತಜೀವಿತಃ ॥

ಅನುವಾದ

ಮಹಾಬಾಹು ಇಂದ್ರಜಿತು ನಿಷ್ಪ್ರಾಣನಾದಾಗ ಕಿರಣಗಳು ಶಾಂತವಾದ ಸೂರ್ಯನಂತೆ ಅಥವಾ ಆರಿಹೋದ ಬೆಂಕಿಯಂತೆ ನಿಸ್ತೇಜವಾಗಿದ್ದನು.॥82॥

ಮೂಲಮ್ - 83

ಪ್ರಶಾಂತ ಪೀಡಾಬಹುಲೋ ವಿನಷ್ಟಾರಿಃ ಪ್ರಹರ್ಷವಾನ್ ।
ಬಭೂವ ಲೋಕಃ ಪತಿತೇ ರಾಕ್ಷಸೇಂದ್ರ ಸುತೇ ತದಾ ॥

ಅನುವಾದ

ಆಗ ರಾಕ್ಷಸರಾಜಕುಮಾರ ಇಂದ್ರಜಿತು ಸಮರಭೂಮಿಯಲ್ಲಿ ಬಿದ್ದುಹೋದಾಗ ಜಗತ್ತಿನ ಅಧಿಕಾಂಶ ಪೀಡೆ ನಾಶವಾಯಿತು. ಎಲ್ಲರ ಶತ್ರು ಸತ್ತು, ಎಲ್ಲರೂ ಹರ್ಷಗೊಂಡರು.॥83॥

ಮೂಲಮ್ - 84

ಹರ್ಷಂ ಚ ಶಕ್ರೋ ಭಗವಾನ್ಸಹ ಸರ್ವೈರ್ಮಹರ್ಷಿಭಿಃ ।
ಜಗಾಮ ನಿಹತೇ ತಸ್ಮಿನ್ರಾಕ್ಷಸೇ ಪಾಪಕರ್ಮಣಿ ॥

ಅನುವಾದ

ಆ ಪಾಪಕರ್ಮಿ ರಾಕ್ಷಸನು ಹತನಾದಾಗ ಸಮಸ್ತ ಮಹರ್ಷಿಗಳೊಂದಿಗೆ ಭಗವಾನ್ ಇಂದ್ರನಿಗೆ ಬಹಳ ಸಂತೋಷವಾಯಿತು.॥84॥

ಮೂಲಮ್ - 85

ಆಕಾಶೇ ಚಾಪಿ ದೇವಾನಾಂ ಶುಶ್ರುವೇ ದುಂದುಭಿಸ್ವನಃ ।
ನೃತ್ಯದ್ಭಿರಪ್ಸರೋಭಿಶ್ಚ ಗಂಧರ್ವೈಶ್ಚ ಮಹಾತ್ಮಭಿಃ ॥

ಅನುವಾದ

ಆಕಾಶದಲ್ಲಿ ಅಪ್ಸರೆಯರ ನೃತ್ಯದ, ಹಾಡುತ್ತಿರುವ ಗಂಧರ್ವರ ಗಾಯನದ ಧ್ವನಿ, ಜೊತೆಗೆ ದೇವತೆಗಳ ದುಂದುಭಿಗಳ ಶಬ್ದಗಳು ಕೇಳಿ ಬರತೊಡಗಿತು.॥85॥

ಮೂಲಮ್ - 86

ವವರ್ಷುಃ ಪುಷ್ಪವರ್ಷಾಣಿ ತದದ್ಭುತಮಿವಾಭವತ್ ।
ಪ್ರಶಶಾಮ ಹತೇ ತಸ್ಮಿನ್ರಾಕ್ಷಸೇ ಕ್ರೂರಕರ್ಮಣಿ ॥

ಅನುವಾದ

ದೇವತೆಗಳು ಅಲ್ಲಿ ಹೂವಿನ ಮಳೆ ಸುರಿಸಿದರು. ಆ ದೃಶ್ಯ ಅದ್ಭುತವಾಗಿ ಕಂಡು ಬರುತ್ತಿತ್ತು. ಆ ಕ್ರೂರಕರ್ಮಿ ರಾಕ್ಷಸನು ಸತ್ತುಹೋದಾಗ ಅಲ್ಲಿ ಹಾರಾಡುತ್ತಿರುವ ಧೂಳು ಶಾಂತವಾಯಿತು.॥86॥

ಮೂಲಮ್ - 87

ಶುದ್ಧಾ ಆಪೋ ನಭಶ್ಚೈವ ಜಹೃಷುರ್ದೇವದಾನವಾಃ ।
ಆಜಗ್ಮುಃ ಪತಿತೇ ತಸ್ಮಿನ್ಸರ್ವಲೋಕಭಯಾವಹೇ ॥

ಮೂಲಮ್ - 88

ಊಚುಶ್ಚ ಸಹಿತಾಸ್ತುಷ್ಟಾ ದೇವಗಂಧರ್ವದಾನವಾಃ ।
ವಿಜ್ವರಾಃ ಶಾಂತಕಲುಷಾ ಬ್ರಾಹ್ಮಣಾ ವಿಚರಂತ್ವ್ವಿತಿ ॥

ಅನುವಾದ

ಸಮಸ್ತ ಜನರಿಗೆ ಭಯಕೊಡುವ ಇಂದ್ರಜಿತು ಧರಾಶಾಯಿಯಾದಾಗ ಜಲಸ್ವಚ್ಛವಾಯಿತು. ಆಕಾಶ ನಿರ್ಮಲವಾಯಿತು, ದೇವತೆಗಳು ದಾನವರು ಹರ್ಷಗೊಂಡರು. ದೇವತೆಗಳು, ಗಂಧರ್ವರು, ದಾನವರು ಅಲ್ಲಿಗೆ ಬಂದು ಎಲ್ಲರೂ ಒಟ್ಟಿಗೆ ಸಂತುಷ್ಟರಾಗಿ ಹೇಳಿದರು-ಇನ್ನು ಬ್ರಾಹ್ಮಣರು ನಿಶ್ಚಿತರಾಗಿ ಕ್ಲೇಶಶೂನ್ಯರಾಗಿ ಎಲ್ಲೆಡೆ ಸಂಚರಿಸುವರ.॥87-88॥

ಮೂಲಮ್ - 89

ತತೋಽಭ್ಯನಂದನ್ ಸಂಹೃಷ್ಟಾಃ ಸಮರೇ ಹರಿಯೂಥಪಾಃ ।
ತಮಪ್ರತಿಬಲಂ ದೃಷ್ಟ್ವಾ ಹತಂ ನೈರ್ಋತಪುಂಗವಮ್ ॥

ಅನುವಾದ

ಸಮರಾಂಗಣದಲ್ಲಿ ಅಪ್ರತಿಮ ಬಲಶಾಲಿ ನಿಶಾಚರ ಶ್ರೇಷ್ಠ ಇಂದ್ರಜಿತನು ಹತನಾದುದರಿಂದ ಹರ್ಷಗೊಂಡು ವಾನರ ಯೂಥಪತಿಗಳು ಲಕ್ಷ್ಮಣನನ್ನು ಅಭಿನಂದಿಸಿದರು.॥89॥

ಮೂಲಮ್ - 90

ವಿಭೀಷಣೋ ಹನೂಮಾಂಶ್ಚ ಜಾಂಬವಾಂಶ್ಚರ್ಕ್ಷಯೂಥಪಃ ।
ವಿಜಯೇನಾಭಿ ನಂದಂತಸ್ತುಷ್ಟುವುಶ್ಚಾಪಿ ಲಕ್ಷ್ಮಣಮ್ ॥

ಅನುವಾದ

ವಿಭೀಷಣ, ಹನುಮಂತ, ಕರಡಿಗಳ ದಳಪತಿ ಜಾಂಬವಂತ ಇವರು ವಿಜಯಕ್ಕಾಗಿ ಲಕ್ಷ್ಮಣನನ್ನು ಅಭಿನಂದಿಸುತ್ತಾ ಅವನನ್ನು ಭೂರಿ ಭೂರಿ ಪ್ರಶಂಸಿಸತೊಡಗಿದರು.॥90॥

ಮೂಲಮ್ - 91

ಕ್ಷ್ವೇಡಂತ ಪ್ಲವಂತಶ್ಚ ನದನ್ತಶ್ಚ ಗರ್ಜಂತಶ್ಚ ಪ್ಲವಂಗಮಾಃ ।
ಲಬ್ಧಲಕ್ಷಾ ರಘುಸುತಂ ಪರಿವಾರ್ಯೋಪತಸ್ಥಿರೇ ॥

ಅನುವಾದ

ಹರ್ಷ ಹಾಗೂ ರಕ್ಷಣೆಯ ಸಂದರ್ಭ ದೊರೆತು ವಾನರರು ಕಿಲ ಕಿಲನೆ ನಗುತ್ತಾ ನೆಗೆಯುತ್ತಾ, ಗರ್ಜಿಸುತ್ತಾ ರಘುಕುಲ ನಂದನ ಲಕ್ಷ್ಮಣನನ್ನು ಸುತ್ತುವರೆದು ನಿಂತುಕೊಂಡರು.॥91॥

ಮೂಲಮ್ - 92

ಲಾಂಗೂಲಾನಿ ಪ್ರವಿಧ್ಯಂತ್ತಃ ಸ್ಫೋಟಯಂತಶ್ಚ ವಾನರಾಃ ।
ಲಕ್ಷ್ಮಣೋ ಜಯತೀತ್ಯೇವಂ ವಾಕ್ಯಂ ವಿಶ್ರಾವಯಂ ಸ್ತದಾ ॥

ಅನುವಾದ

ಆಗ ತಮ್ಮ ಬಾಲವನ್ನು ಅಲ್ಲಾಡಿಸುತ್ತಾ, ಬಡಿಯುತ್ತಾ ವಾನರ ವೀರರು ‘ಲಕ್ಷ್ಮಣನಿಗೆ ಜಯವಾಗಲೀ’ ಎಂದು ಕೂಗತೊಡಗಿದರು.॥92॥

ಮೂಲಮ್ - 93

ಅನ್ಯೋನ್ಯಂ ಚ ಸಮಾಶ್ಲಿಷ್ಯ ಹರಯೋಹೃಷ್ಟ ಮಾನಸಾಃ
ಚಕ್ರುರುಚ್ಚಾವಚಗುಣಾ ರಾಘವಾಶ್ರಯ ಸತ್ಕಥಾಃ ॥

ಅನುವಾದ

ವಾನರರ ಚಿತ್ತ ಹರ್ಷದಿಂದ ತುಂಬಿಹೋಗಿತ್ತು. ಆ ತರತರದ ಗುಣಗಳುಳ್ಳ ವಾನರರು ಒಬ್ಬರು ಮತ್ತೊಬ್ಬರನ್ನು ಅಪ್ಪಿಕೊಂಡು ಶ್ರೀರಾಮಚಂದ್ರನಿಗೆ ಸಂಬಂಧಿಸಿದ ಕಥೆಗಳನ್ನು ಹೇಳತೊಡಗಿದರು.॥93॥

ಮೂಲಮ್ - 94

ತದಸುಕರಮಥಾಭಿವೀಕ್ಷ್ಯ ಹೃಷ್ಟಾಃ
ಪ್ರಿಯಸುಹೃದೋ ಯುಧಿ ಲಕ್ಷ್ಮಣಸ್ಯ ಕರ್ಮ ।
ಪರಮಮುಪಲಭನ್ಮನಃ ಪ್ರಹರ್ಷಂ
ವಿನಿಹತಮಿಂದ್ರರಿಪುಂ ನಿಶಮ್ಯ ದೇವಾಃ ॥

ಅನುವಾದ

ಯುದ್ಧದಲ್ಲಿ ಲಕ್ಷ್ಮಣನ ದುಷ್ಕರವಾದ, ಮಹಾಪರಾಕ್ರಮವನ್ನು ನೋಡಿ ಅವನ ಸುಹೃದ್ ವಾನರರು ಬಹಳ ಸಂತೋಷಗೊಂಡರು. ದೇವತೆಗಳೂ ಕೂಡ ಇಂದ್ರದ್ರೋಹಿ ರಾಕ್ಷಸನ ವಧೆಯನ್ನು ನೋಡಿ ಮನಸ್ಸಿನಲ್ಲಿ ಬಹಳ ಹರ್ಷಗೊಂಡರು.॥94॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥90॥