०८९ विभीषणेन रक्षोहननम्

वाचनम्
ಭಾಗಸೂಚನಾ

ರಾಕ್ಷಸರೊಡನೆ ವಿಭೀಷಣನ ಯುದ್ಧ, ವಿಭೀಷಣನಿಗೆ ವಾನರ ಯೂಥಪತಿಗಳಿಂದ ಪ್ರೋತ್ಸಾಹ, ಲಕ್ಷ್ಮಣನಿಂದ ಇಂದ್ರಜಿತುವಿನ ಸಾರಥಿಯ ಸಂಹಾರ, ವಾನರರಿಂದ ಅವನ ಕುದುರೆಗಳ ಸಂಹಾರ

ಮೂಲಮ್ - 1

ಯುಧ್ಯಮಾನೌ ತತೋ ದೃಷ್ಟ್ವಾಪ್ರಸಕ್ತೌ ನರರಾಕ್ಷಸೌ ।
ಪ್ರಭಿನ್ನಾವಿವ ಮಾತಂಗೋ ಪರಸ್ಪರ ಜಯೈಷಿಣೌ ॥

ಮೂಲಮ್ - 2

ತಯೋರ್ಯುದ್ಧಂ ದ್ರಷ್ಟುಕಾಮೋ ವರಚಾಪಧರೋ ಬಲೀ ।
ಶೂರಃ ಸ ರಾವಣಭ್ರಾತಾ ತಸ್ಥೌ ಸಂಗ್ರಾಮಮೂರ್ಧನಿ ॥

ಅನುವಾದ

ನರ-ರಾಕ್ಷಸ ಶ್ರೇಷ್ಠರು ಮದಿಸಿದ ಆನೆಗಳಂತೆ ಒಬ್ಬರನ್ನೊಬ್ಬರು ಜಯಿಸುವ ಇಚ್ಛೆಯಿಂದ ಘೋರವಾದ ಯುದ್ಧ ದಲ್ಲಿ ತೊಡಗಿದ್ದಾಗ ಅವರಿಬ್ಬರನ್ನು ನೋಡುವ ಅಪೇಕ್ಷೆಯಿಂದ ಶ್ರೇಷ್ಠವಾದ ಧನುಸ್ಸನ್ನು ಹಿಡಿದಿದ್ದ ಶೂರನಾದ ರಾವಣಾನುಜ ವಿಭೀಷಣನು ರಣರಂಗದಲ್ಲಿ ಬಂದು ನಿಂತುಕೊಂಡನು.॥1-2॥

ಮೂಲಮ್ - 3

ತತೋ ವಿಸ್ಫಾರಯಾಮಾಸ ಮಹದ್ ಧನುರವಸ್ಥಿತಃ ।
ಉತ್ಸಸರ್ಜ ಚ ತೀಕ್ಷ್ಣಾಗ್ರಾನ್ ರಾಕ್ಷಸೇಷು ಮಹಾಶರಾನ್ ॥

ಅನುವಾದ

ಅಲ್ಲಿ ನಿಂತುಕೊಂಡು ಅವನು ತನ್ನ ದೊಡ್ಡದಾದ ಧನುಷ್ಯವನ್ನು ಟೆಂಕರಿಸಿ, ರಾಕ್ಷಸರ ಮೇಲೆ ಹರಿತವಾದ ಮಹಾಶರಗಳನ್ನು ಪ್ರಯೋಗಿಸಿದನು.॥3॥

ಮೂಲಮ್ - 4

ತೇ ಶರಾಃ ಶಿಖಿಸಂಸ್ಪರ್ಶಾ ನಿಪತಂತಃ ಸಮಾಹಿತಾಃ ।
ರಾಕ್ಷಸಾನ್ ದ್ರಾವಯಾಮಾಸುರ್ವಜ್ರಾಣೀವ ಮಹಾಗಿರೀನ್ ॥

ಅನುವಾದ

ವಜ್ರಾಯುಧವು ದೊಡ್ಡ ದೊಡ್ಡ ಪರ್ವತಗಳನ್ನು ಪುಡಿ ಮಾಡುವಂತೆಯೇ ವಿಭೀಷಣನು ಪ್ರಯೋಗಿಸಿದ ಬಾಣಗಳ ಸ್ಪರ್ಶವು ಬೆಂಕಿಯಂತೆ ಉರಿಯುತ್ತಿದ್ದು, ರಾಕ್ಷಸರನ್ನು ಸೀಳಿ ಬಿಡುತ್ತಿದ್ದವು.॥4॥

ಮೂಲಮ್ - 5

ವಿಭೀಷಣಸ್ಯಾನುಚರಾಸ್ತೇಽಪಿ ಶೂಲಾಸಿಪಟ್ಟಿಶೈಃ ।
ಚಿಚ್ಛಿದುಃ ಸಮರೇ ವೀರಾನ್ ರಾಕ್ಷಸಾನ್ ರಾಕ್ಷಸೋತ್ತಮಾಃ ॥

ಅನುವಾದ

ವಿಭೀಷಣನ ಅನುಚರರೂ ಶ್ರೇಷ್ಠ ರಾಕ್ಷಸವೀರರಾಗಿದ್ದರು. ಅವರೂ ಕೂಡ ಸಮರಾಂಗಣದಲ್ಲಿ ಶೂಲ, ಖಡ್ಗ, ಪಟ್ಟಿಶಗಳಿಂದ ವೀರ ರಾಕ್ಷಸರನ್ನು ಸಂಹರಿಸತೊಡಗಿದರು.॥5॥

ಮೂಲಮ್ - 6

ರಾಕ್ಷಸೈಸ್ತೈಃ ಪರಿವೃತಃ ಸ ತದಾ ತು ವಿಭೀಷಣಃ ।
ಬಭೌ ಮಧ್ಯೇ ಪ್ರಹೃಷ್ಟಾನಾಂ ಕಲಭಾನಾಮಿವ ದ್ವಿಪಃ ॥

ಅನುವಾದ

ಆ ನಾಲ್ವರು ರಾಕ್ಷಸರಿಂದ ಪರಿವೃತನಾದ ವಿಭೀಷಣನು ಆನೆಯ ಮರಿಗಳ ನಡುವೆ ಇರುವ ಸಲಗದಂತೆ ಕಾಣುತ್ತಿದ್ದನು.॥6॥

ಮೂಲಮ್ - 7

ತತಃ ಸಂಚೋದಮಾನೋ ವೈ ಹರೀನ್ರಕ್ಷೋವಧ ಪ್ರಿಯಾನ್ ।
ಉವಾಚ ವಚನಂ ಕಾಲೇ ಕಾಲಜ್ಞೋ ರಕ್ಷಸಾಂ ವರಃ ॥

ಅನುವಾದ

ಸಮಯೋಚಿತ ಕರ್ತವ್ಯವನ್ನು ತಿಳಿದಿದ್ದ ಶ್ರೇಷ್ಠ ವಿಭೀಷಣನು ರಾಕ್ಷಸರ ವಧೆಯಲ್ಲಿ ಆಸಕ್ತರಾದ ವಾನರರನ್ನು ಯುದ್ಧಕ್ಕಾಗಿ ಪ್ರೇರೇಪಿಸುತ್ತಾ ಸಮಯಾನುಸಾರ ಇಂತೆಂದನು.॥7॥

ಮೂಲಮ್ - 8

ಏಕೋಽಯಂ ರಾಕ್ಷಸೇಂದ್ರಸ್ಯ ಪರಾಯಣಮವಸ್ಥಿತಃ ।
ಏತಚ್ಛೇಷಂ ಬಲಂ ತಸ್ಯ ಕಿಂ ತಿಷ್ಠತ ಹರೀಶ್ವರಾಃ ॥

ಅನುವಾದ

ವಾನರೇಶ್ವರರೇ! ಹೀಗೆ ನಿಂತು ನೋಡುತ್ತಿರುವಿರಲ್ಲ? ನಿಮ್ಮ ಮುಂದೆ ನಿಂತಿರುವವನೇ ರಾವಣನ ಏಕಮಾತ್ರ ಆಸರೆಯಾಗಿದೆ. ರಾವಣನ ಇಷ್ಟೇ ಸೈನ್ಯ ಈಗ ಉಳಿದುಕೊಂಡಿದೆ.॥8॥

ಮೂಲಮ್ - 9

ಅಸ್ಮಿಂಶ್ಚ ನಿಹತೇ ಪಾಪೇ ರಾಕ್ಷಸೇ ರಣಮೂರ್ಧನಿ ।
ರಾವಣಂ ವರ್ಜಯಿತ್ವಾ ತು ಶೇಷಮಸ್ಯ ಬಲಂ ಹತಮ್ ॥

ಅನುವಾದ

ಈ ಯುದ್ಧದಲ್ಲಿ ಈ ಪಾಪೀ ರಾಕ್ಷಸ ಇಂದ್ರಜಿತನು ಹತನಾದಾಗ ರಾವಣನನ್ನು ಬಿಟ್ಟು ಅವನ ಎಲ್ಲ ಸೈನ್ಯವು ಸತ್ತುಹೋಯಿತೆಂದೇ ತಿಳಿಯಿರಿ.॥9॥

ಮೂಲಮ್ - 10

ಪ್ರಹಸ್ತೋ ನಿಹತೋ ವೀರೋ ನಿಕುಂಭಶ್ಚ ಮಹಾಬಲಃ ।
ಕುಂಭಕರ್ಣಶ್ಚ ಕುಂಭಶ್ಚ ಧೂಮ್ರಾಕ್ಷಶ್ಚ ನಿಶಾಚರಃ ॥

ಅನುವಾದ

ವೀರ ಪ್ರಹಸ್ತ ಹತನಾದನು, ಮಹಾಬಲಿ ನಿಕುಂಭ, ಕುಂಭಕರ್ಣ, ಕುಂಭ ಹಾಗೂ ನಿಶಾಚರ ಧೂಮ್ರಾಕ್ಷನೂ ಕಾಲಕ್ಕೆ ತುತ್ತಾಗಿದ್ದಾರೆ.॥10॥

ಮೂಲಮ್ - 11

ಜಂಬುಮಾಲೀ ಮಹಾಮಾಲೀ ತೀಕ್ಷ್ಣ ವೇಗೋಽಶನಿಪ್ರಭಃ ।
ಸುಪ್ತಘ್ನೋ ಯಜ್ಞಕೋಪಶ್ಚ ವಜ್ರದಂಷ್ಟ್ರಶ್ಚ ರಾಕ್ಷಸಃ ॥

ಮೂಲಮ್ - 12

ಸಂಹ್ರಾದೀ ವಿಕಟೋಽರಿಘ್ನಸ್ತಪನೋ ಮಂದ ಏವ ಚ ।
ಪ್ರಘಾಸಃ ಪ್ರಘಸಶ್ಚೈವ ಪ್ರಜಂಘೋ ಜಂಘ ಏವ ಚ ॥

ಮೂಲಮ್ - 13

ಅಗ್ನಿಕೇತುಶ್ಚ ದುರ್ಧರ್ಘೋ ರಶ್ಮಿಕೇತುಶ್ಚ ವೀರ್ಯವಾನ್ ।
ವಿದ್ಯುಜ್ಜಿಹ್ವೋ ದ್ವಿಜಿಹ್ವಶ್ಚ ಸೂರ್ಯಶತ್ರುಶ್ಚ ರಾಕ್ಷಸಃ ॥

ಮೂಲಮ್ - 14

ಅಕಂಪನಃ ಸುಪಾರ್ಶ್ವಶ್ಚ ಚಕ್ರಮಾಲೀ ಚ ರಾಕ್ಷಸಃ ।
ಕಂಪನಃ ಸತ್ತ್ವವಂತೌ ತೌ ದೇವಾಂತಕ ನರಾಂತಕೌ ॥

ಅನುವಾದ

ಜಂಬುಮಾಲೀ, ಮಹಾಮಾಲೀ, ತೀಕ್ಷ್ಣವೇಗ, ಅಶನಿಪ್ರಭ, ಸುಪ್ತಘ್ನ, ಯಜ್ಞಕೋಪ, ವಜ್ರದಂಷ್ಟ್ರ, ಸಂಹ್ರಾದೀ, ವಿಕಟ, ಅರಿಘ್ನ, ತಪನ, ಮಂದ, ಪ್ರಘಾಸ, ಪ್ರಘಸ, ಪ್ರಜಂಘ, ಜಂಘ, ದುರ್ಜಯ ಅಗ್ನಿಕೇತು, ರಶ್ಮಿಕೇತು, ವಿದ್ಯುಜ್ಜಿಹ್ವ, ದ್ವಿಜಿಹ್ವ, ಸೂರ್ಯಶತ್ರು, ಅಕಂಪನ, ಸುಪಾರ್ಶ್ವ, ಚಕ್ರಮಾಲೀ, ಕಂಪನ ಹಾಗೂ ಶಕ್ತಿಶಾಲೀ ವೀರ ದೇವಾಂತಕ-ನರಾಂತಕ ಇವರೆಲ್ಲರೂ ಸತ್ತುಹೋಗಿರುವರು.॥11-14॥

ಮೂಲಮ್ - 15

ಏತಾನ್ನಿಹತ್ಯಾತಿಬಲಾನ್ ಬಹೂನ್ ರಾಕ್ಷಸಸತ್ತಮಾನ್ ।
ಬಾಹುಭ್ಯಾಂ ಸಾಗರಂ ತೀರ್ತ್ವಾ ಲಂಘ್ಯತಾಂ ಗೋಷ್ಪದಂ ಲಘು ॥

ಅನುವಾದ

ಅತ್ಯಂತ ಬಲಶಾಲೀ ಅಸಂಖ್ಯ ಶ್ರೇಷ್ಠ ರಾಕ್ಷಸರನ್ನು ವಧಿಸಿ ನೀವು ಬಾಹುಬಲದಿಂದ ಅಪಾರ ಸಮರ ಸಮುದ್ರವನ್ನು ದಾಟಿರುವಿರಿ. ಈಗ ಹಸುವಿನ ಗೊರಸಿನಷ್ಟು ಸಣ್ಣದಾದ ಈ ರಾಕ್ಷಸನು ಉಳಿದಿರುವನು. ಆದ್ದರಿಂದ ಇವನನ್ನು ಮುಗಿಸಿಬಿಡಿ.॥15॥

ಮೂಲಮ್ - 16

ಏತಾವದೇವ ಶೇಷಂ ವೋ ಜೇತವ್ಯಮಿತಿ ವಾನರಾಃ ।
ಹತಾಃ ಸರ್ವೇ ಸಮಾಗಮ್ಯ ರಾಕ್ಷಸಾ ಬಲದರ್ಪಿತಾಃ ॥

ಅನುವಾದ

ವಾನರರೇ! ನಿಮಗೆ ಗೆಲ್ಲಲು ಇಷ್ಟೇ ರಾಕ್ಷಸ ಸೈನ್ಯ ಉಳಿದಿದೆ. ಬಲದರ್ಪಿತರಾದ ರಾಕ್ಷಸರು ಬಂದು ನಿಮ್ಮೊಡನೆ ಕಾದಾಡಿ ಅಸುನೀಗಿದರು.॥16॥

ಮೂಲಮ್ - 17

ಅಯುಕ್ತಂ ನಿಧನಂ ಕರ್ತುಂ ಪುತ್ರಸ್ಯ ಜನಿತುರ್ಮಮ ।
ಘೃಣಾಮಪಾಸ್ಯ ರಾಮಾರ್ಥೇ ನಿಹನ್ಯಾಂ ಭ್ರಾತುರಾತ್ಮಜಮ್ ॥

ಅನುವಾದ

ನಾನು ಇವನ ತಂದೆಯ ತಮ್ಮನಾಗಿದ್ದು, ಇವನು ನನಗೆ ಪುತ್ರನಾಗಿದ್ದಾನೆ. ಆದ್ದರಿಂದ ನಾನು ಇವನನ್ನು ವಧಿಸುವುದು ಉಚಿತವಾಗಿಲ್ಲ. ಆದರೂ ಶ್ರೀರಾಮನಿಗಾಗಿ ದಯೆಯನ್ನು ತಿಲಾಂಜಲಿ ಕೊಟ್ಟು, ಇವನನ್ನು ಕೊಲ್ಲಲು ಮುಂದಾಗಿದ್ದೇನೆ.॥17॥

ಮೂಲಮ್ - 18

ಹಂತುಕಾಮಸ್ಯ ಮೇ ಭಾಷ್ಪಂ ಚಕ್ಷುಶ್ಚೈವ ನಿರುಧ್ಯತಿ ।
ತಮೇವೈಷ ಮಹಾಬಾಹುರ್ಲಕ್ಷ್ಮಣಃ ಶಮಯಿಷ್ಯತಿ ॥

ಅನುವಾದ

ಸ್ವತಃ ನಾನು ಇವನನ್ನು ಕೊಲ್ಲಲು ಆಯುಧವನ್ನೆತ್ತಿಕೊಂಡಾಗ, ಕಣ್ಣೀರು ನನ್ನ ದೃಷ್ಟಿ ಮಂಕಾಗಿಸುತ್ತದೆ. ಆದ್ದರಿಂದ ಈ ಮಹಾಬಾಹು ಲಕ್ಷ್ಮಣನೇ ಇವನ ವಿನಾಶಮಾಡಲಿ.॥18॥

ಮೂಲಮ್ - 19½

ವಾನರಾ ಘ್ನತ ಸಂಭೂಯ ಭೃತ್ಯಾನಸ್ಯ ಸಮೀಪಗಾನ್ ।
ಇತಿ ತೇನಾತಿಯಶಸಾ ರಾಕ್ಷಸೇನಾಭಿಚೋದಿತಾಃ ॥
ವಾನರೇಂದ್ರಾ ಜಹೃಷಿರೇ ಲಾಂಗೂಲಾನಿ ಚ ವಿವ್ಯಧುಃ ।

ಅನುವಾದ

ವಾನರರೇ! ನೀವು ಗುಂಪು ಕಟ್ಟಿಕೊಂಡು ಇವನ ಹತ್ತಿರದ ಸೇವಕರನ್ನು ಆಕ್ರಮಿಸಿ ಕೊಂದುಹಾಕಿರಿ. ಹೀಗೆ ಅತ್ಯಂತ ಯಶಸ್ವೀ ರಾಕ್ಷಸ ವಿಭೀಷಣನಿಂದ ಪ್ರೇರಿತರಾದ ವಾನರ ಯೂಥಪತಿಗಳು ಹರ್ಷಗೊಂಡು ಉತ್ಸಾಹಗೊಂಡು, ತಮ್ಮ ಬಾಲಗಳನ್ನು ಅಪ್ಪಳಿಸತೊಡಗಿದರು.॥19½॥

ಮೂಲಮ್ - 20

ತತಸ್ತು ಕಪಿಶಾರ್ದೂಲಾಃ ಕ್ಷ್ವೇಡಂತಶ್ಚ ಪುನಃ ಪುನಃ ।
ಮುಮುಚುರ್ವಿವಿಧಾನ್ನಾದಾನ್ ಮೇಘಾನ್ ದೃಷ್ಟ್ವೇವ ಬರ್ಹಿಣಃ ॥

ಅನುವಾದ

ಮತ್ತೆ ಅವರ ಸಿಂಹದಂತೆ ಪರಾಕ್ರಮೀ ವಾನರರು ಪದೇ ಪದೇ ಗರ್ಜಿಸುತ್ತಾ, ಮೋಡಗಳನ್ನು ನೋಡಿ ನವಿಲುಗಳು ಕೂಗುವಂತೆ ನಾನಾ ರೀತಿಯ ಶಬ್ದ ಮಾಡತೊಡಗಿದರು.॥20॥

ಮೂಲಮ್ - 21

ಜಾಂಬವಾನಪಿ ತೈಃ ಸರ್ವೈಃ ಸ್ವಯೂಥೈರಭಿಸಂವೃತಃ ।
ತೇಽಶ್ಮಭಿಸ್ತಾಡಯಾಮಾಸುರ್ನಖೈರ್ದತೈಶ್ಚ ರಾಕ್ಷಸಾನ್ ॥

ಅನುವಾದ

ತನ್ನ ಸಮಸ್ತ ಕರಡಿ ಸೇನಾಪತಿಗಳಿಂದ ಸುತ್ತುವರಿದ ಜಾಂಬವಂತ ಹಾಗೂ ವಾನರರು ಬಂಡೆಗಳಿಂದ, ಉಗುರು-ಹಲ್ಲುಗಳಿಂದ ಅಲ್ಲಿ ರಾಕ್ಷಸರನ್ನು ಬಡಿಯತೊಡಗಿದರು.॥21॥

ಮೂಲಮ್ - 22

ನಿಘ್ನಂತಮೃಕ್ಷಾಧಿಪತಿಂ ರಾಕ್ಷಸಾಸ್ತೇ ಮಹಾಬಲಾಃ ।
ಪರಿವವ್ರರ್ಭಯಂ ತ್ಯಕ್ತ್ವಾತಮನೇಕವಿಧಾಯುಧಾಃ ॥

ಅನುವಾದ

ತಮ್ಮ ಮೇಲೆ ಪ್ರಹರಿಸುತ್ತಿರುವ ಋಕ್ಷರಾಜ ಜಾಂಬವಂತನನ್ನು ಮಹಾಬಲಿ ರಾಕ್ಷಸರು ಭಯ ತೊರೆದು ಅನೇಕ ಪ್ರಕಾರಗಳ ಅಸ್ತ್ರ-ಶಸ್ತ್ರ ಧರಿಸಿ ನಾಲ್ಕೂ ಕಡೆಗಳಿಂದ ಆಕ್ರಮಿಸಿದರು.॥22॥

ಮೂಲಮ್ - 23

ಶರೈಃ ಪರಶುಭಿಸ್ತೀಕ್ಷ್ಣೈಃ ಪಟ್ಟಿಶೈರ್ಯಷ್ಟಿ ತೋಮರೈಃ ।
ಜಾಂಬವಂತಂ ಮೃಧೇ ಜಘ್ನುರ್ನಿಘ್ನಂತಂ ರಾಕ್ಷಸೀಂ ಚಮೂಮ್ ॥

ಅನುವಾದ

ಆ ರಾಕ್ಷಸರು ಸೈನ್ಯವನ್ನು ಸಂಹರಿಸುತ್ತಿರುವ ಜಾಂಬವಂತನ ಮೇಲೆ ಬಾಣಗಳಿಂದ, ಹರಿತವಾದ ಕೊಡಲಿಗಳಿಂದ, ಪಟ್ಟಿಶ, ದಂಡಗಳಿಂದ, ತೋಮರಗಳಿಂದ ಪ್ರಹರಿಸತೊಡಗಿದರು.॥23॥

ಮೂಲಮ್ - 24

ಸ ಸಂಪ್ರಹಾರಸ್ತುಮುಲಃ ಸಂಜಜ್ಞೇ ಕಪಿರಕ್ಷಸಾಮ್ ।
ದೇವಾಸುರಾಣಾಂ ಕ್ರುದ್ಧಾನಾಂ ಯಥಾ ಭೀಮೋ ಮಹಾಸ್ವನಃ ॥

ಅನುವಾದ

ವಾನರರ ಮತ್ತು ರಾಕ್ಷಸರ ಆ ಮಹಾಯುದ್ಧವು ಕ್ರೋಧಗೊಂಡ ದೇವಾಸುರರ ಸಂಗ್ರಾಮದಂತೆ ಭಯಂಕರವಾಗಿ ನಡೆಯಿತು. ಅದರಲ್ಲಿ ಜೋರಾಗಿ ಕೋಲಾಹಲವಾಗ ತೊಡಗಿತು.॥24॥

ಮೂಲಮ್ - 25½

ಹನೂಮಾನಪಿ ಸಂಕ್ರುದ್ಧಃ ಸಾಲಮುತ್ಪಾಟ್ಯ ಪರ್ವತಾತ್ ।
ಸ ಲಕ್ಷ್ಮಣಂ ಸ್ವಯಂ ಪೃಷ್ಟಾದವರೋಪ್ಯ ಮಹಾಮನಾಃ ॥
ರಕ್ಷಸಾಂ ಕದನಂ ಚಕ್ರೇ ಸಮಾಸಾದಃ ಸಹಸ್ರಶಃ ।

ಅನುವಾದ

ಆಗ ಮಹಾತ್ಮಾ ಹನುಮಂತನು ಲಕ್ಷ್ಮಣನನ್ನು ಹೆಗಲಿನಿಂದ ಇಳಿಸಿ, ಸ್ವತಃ ಅತ್ಯಂತ ಕುಪಿತನಾಗಿ ಒಂದು ತಾಲವೃಕ್ಷವನ್ನು ಕಿತ್ತುಕೊಂಡು ಸಾವಿರಾರು ರಾಕ್ಷಸರನ್ನು ಸಂಹರಿಸತೊಡಗಿದನು. ಅವನನ್ನು ಸೋಲಿಸುವುದು ಶತ್ರುಗಳಿಗೆ ಅತ್ಯಂತ ಕಠಿಣವಾಯಿತು.॥25॥

ಮೂಲಮ್ - 26½

ಸ ದತ್ತ್ವಾ ತುಮುಲಂ ಯುದ್ಧಂ ಪಿತೃವ್ಯಸ್ಯೇಂದ್ರಜಿದ್ಬಲಿ ॥
ಲಕ್ಷ್ಮಣಂ ಪರವೀರಘ್ನಃ ಪುನರೇವಾಭ್ಯಧಾವತ ।

ಅನುವಾದ

ಶತ್ರುವೀರರನ್ನು ಸಂಹರಿಸುವ ಬಲಿಷ್ಠ ಇಂದ್ರಜಿತು ತನ್ನ ಚಿಕ್ಕಪ್ಪನಿಗೂ ಘೋರ ಯುದ್ಧದ ಅವಕಾಶ ಕೊಟ್ಟು ಪುನಃ ಲಕ್ಷ್ಮಣನನ್ನು ಆಕ್ರಮಿಸಿದನು.॥26॥

ಮೂಲಮ್ - 27½

ತೌ ಪ್ರಯುದ್ಧೌ ತದಾ ವೀರೌ ಮೃಧೇ ಲಕ್ಷ್ಮಣರಾಕ್ಷಸೌ ॥
ಶರೌಘಾನಭಿವರ್ಷಂತೌ ಜಘ್ನತುಸ್ತೌ ಪರಸ್ಪರಮ್ ।

ಅನುವಾದ

ಲಕ್ಷ್ಮಣ ಮತ್ತು ಇಂದ್ರಜಿತು ವೀರರಿಬ್ಬರು ಆಗ ರಣರಂಗದಲ್ಲಿ ವೇಗವಾಗಿ ಕಾದಾಡತೊಡಗಿದರು. ಬಾಣಗಳ ಮಳಯನ್ನು ಸುರಿಸಿ ಇಬ್ಬರೂ ಪರಸ್ಪರ ಪ್ರಹಾರ ಮಾಡುತ್ತಿದ್ದರು.॥27॥

ಮೂಲಮ್ - 28½

ಅಭೀಕ್ಷ್ಣ ಮಂತರ್ದಧತುಃ ಶರಜಾಲೈರ್ಮಹಾಬಲೌ ॥
ಚಂದ್ರಾದಿತ್ಯಾವಿವೋಷ್ಣಾಂತೇ ಯಥಾ ಮೇಘೈಸ್ತರಸ್ವಿನೌ ।

ಅನುವಾದ

ವರ್ಷಾಕಾಲದಲ್ಲಿ ಸೂರ್ಯ-ಚಂದ್ರರು ಮೋಡಗಳಲ್ಲಿ ಮರೆಯಾಗುವಂತೆ ಆ ಮಹಾಬಲಿ ವೀರರು ಬಾಣಗಳ ಬಲೆಯನ್ನು ರಚಿಸಿ ಇನ್ನೊಬ್ಬನ್ನು ಮುಚ್ಚಿಬಿಡುತ್ತಿದ್ದರು.॥28॥

ಮೂಲಮ್ - 29

ನಹ್ಯಾದಾನಂ ನ ಸಂಧಾನಂ ಧನುಷೋ ವಾ ಪರಿಗ್ರಹಃ ॥

ಮೂಲಮ್ - 30½

ನ ವಿಪ್ರಮೋಕ್ಷೋ ಬಾಣಾನಾಂ ನ ವಿಕರ್ಷೋ ನ ವಿಗ್ರಹಃ ।
ನಮುಷ್ಟಿ ಪ್ರತಿಸಂಧಾನಂ ನ ಲಕ್ಷ್ಯಪ್ರತಿಪಾದನಮ್ ॥
ಅದೃಶ್ಯತ ತಯೋಸ್ತತ್ರ ಯುಧ್ಯತೋಃ ಪಾಣಿ ಲಾಘವಾತ್ ।

ಅನುವಾದ

ಯುದ್ಧದಲ್ಲಿ ತೊಡಗಿದ ವೀರರಿಬ್ಬರ ಕೈಚಳಕದಿದ ಬತ್ತಳಿಕೆ ಬಾಣವನ್ನು ತೆಗೆಯುವುದು, ಧನುಸ್ಸಿಗೆ ಹೂಡುವುದು, ದೃಢವಾಗಿ ಹಿಡಿದು ಆಕಣಾಂತ ಸೆಳೆಯುವುದು, ಬಾಣಗಳನ್ನು ವಿಭಾಗಿಸುವುದು, ಗುರಿಯಿಟ್ಟು ಬಿಡುವುದು ಇದ್ಯಾವುದೂ ಕಂಡುಬರುತ್ತಿರಲಿಲ್ಲ.॥29-30½॥

ಮೂಲಮ್ - 31½

ಚಾಪವೇಗಪ್ರಯುಕ್ತೈಶ್ಚ ಬಾಣಜಾಲೈಃ ಸಮಂತತಃ ॥
ಅಂತರಿಕ್ಷೇಽಭಿಸಂಪನ್ನೇ ನ ರೂಪಾಣಿ ಚಕಾಶಿರೇ ।

ಅನುವಾದ

ಧನುಸ್ಸಿನಿಂದ ವೇಗವಾಗಿ ಬಿಟ್ಟ ಬಾಣಗಳಿಂದ ಎಲ್ಲೆಡೆ ಆಕಾಶ ವೆಲ್ಲ ಮುಚ್ಚಿಹೋಯಿತು. ಆದ್ದರಿಂದ ಅದರಲ್ಲಿ ಸಾಕಾರ ವಸ್ತುಗಳು ಕಾಣದಾದವು.॥31½॥

ಮೂಲಮ್ - 32½

ಲಕ್ಷ್ಮಣೋ ರಾವಣಿಂ ಪ್ರಾಪ್ಯ ರಾವಣಿಶ್ಚಾಪಿ ಲಕ್ಷ್ಮಣಮ್ ॥
ಅವ್ಯವಸ್ಥಾ ಭವತ್ಯುಗ್ರಾ ತಾಭ್ಯಾಮನ್ಯೋನ್ಯವಿಗ್ರಹೇ ।

ಅನುವಾದ

ಲಕ್ಷ್ಮಣ ಮತ್ತು ರಾವಣಿಯ ಪರಸ್ಪರ ಹತ್ತಿರ ಬಂದು ಕಾದಾಡತೊಡಗಿದರು. ಹೀಗೆ ಯುದ್ಧ ಮಾಡುವಾಗ ಒಬ್ಬರು ಮತ್ತೊಬ್ಬರನ್ನು ಪ್ರಹರಿಸುತ್ತಿರುವಾಗ ಭಯಂಕರ ಅವ್ಯವಸ್ಥೆ ಉಂಟಾಗುತ್ತಿತ್ತು. ಇಂತಹವರ ಜಯವಾಗಬಹುದು ಎಂದು ನಿಶ್ಚಯಿಸುವುದು ಕ್ಷಣ ಕ್ಷಣಕ್ಕೂ ಕಠಿಣವಾಗುತ್ತಿತ್ತು.॥32½॥

ಮೂಲಮ್ - 33½

ತಾಭ್ಯಾಮುಭಾಭ್ಯಾಂ ತರಸಾವಿಸೃಷ್ಟೈರ್ವಿಶಿಖೈಃ ಶಿತೈಃ ॥
ನಿರಂತರಮಿವಾಕಾಶಂ ಬಭೂವ ತಮಸಾ ವೃತಮ್ ।

ಅನುವಾದ

ಆ ವೀರರಿಬ್ಬರೂ ವೇಗವಾಗಿ ಬಿಟ್ಟ ತೀಕ್ಷ್ಣ ಬಾಣಗಳಿಂದ ಆಕಾಶವು ದಟ್ಟವಾಗಿ ತುಂಬಿ ಹೋಗಿ ಅಲ್ಲಿ ಕತ್ತಲೆಯೇ ಆವರಿಸಿತು.॥33½॥

ಮೂಲಮ್ - 34½

ತೈಃ ಪತದ್ಭಿಶ್ಚ ಬಹುಭಿಸ್ತಯೋಃ ಶರಶತೈಃ ಶಿತೈಃ ॥
ದಿಶಶ್ಚ ಪ್ರದಿಶಶ್ಚೈವ ಬಭೂವುಃ ಶರಸಂಕುಲಾಃ ।

ಅನುವಾದ

ಅಲ್ಲಿ ಬೀಳುತ್ತಿರುವ ಅಸಂಖ್ಯ ಅಸ್ತ್ರಗಳಿಂದ, ನೂರಾರು ತೀಕ್ಷ್ಣ ಸಾಯಕಗಳಿಂದ ದಶ ದಿಕ್ಕುಗಳು, ವ್ಯಾಪ್ತವಾದುವು.॥34½॥

ಮೂಲಮ್ - 35

ತಮಸಾ ವಿಹಿತಂ ಸರ್ವಮಾಸೀತ್ ಪ್ರತಿಭಯಂ ಮಹತ್ ॥

ಮೂಲಮ್ - 36

ಅಸ್ತಂ ಗತೇ ಸಹಸ್ರಾಂಶೌ ಸಂವೃತೇ ತಮಸಾ ಚ ವೈ ।
ರುಧಿರೌಘಾಮಹಾನದ್ಯಃ ಪ್ರಾವರ್ತಂತ ಸಹಸ್ರಶಃ ॥

ಅನುವಾದ

ಎಲ್ಲವೂ ಅಂಧಕಾರ ಆವರಿಸಿ, ಭಾರೀ ಭಯಾನಕ ದೃಶ್ಯ ಕಂಡು ಬರತೊಡಗಿತು. ಸೂರ್ಯಾಸ್ತವಾಯಿತು. ಎಲ್ಲೆಡೆ ಕತ್ತಲೆ ತುಂಬಿಹೋಯಿತು. ಸಾವಿರಾರು ದೊಡ್ಡ ದೊಡ್ಡ ರಕ್ತದ ಹೊಳೆಗಳೇ ಹರಿದವು.॥35-36॥

ಮೂಲಮ್ - 37

ಕ್ರವ್ಯಾದಾ ದಾರುಣಾ ವಾಗ್ಭಿಶ್ಚಿ ಕ್ಷಿಪುರ್ಭೀಮನಿಃಸ್ವನಾನ್ ।
ನ ತದಾನೀಂ ವವೌ ವಾಯುರ್ನ ಚ ಜಜ್ವಾಲ ಪಾವಕಃ ॥

ಅನುವಾದ

ಮಾಂಸಾಹಾರೀ ಭಯಂಕರ ಪ್ರಾಣಿಗಳು ಭಯಾನಕ ಶಬ್ದ ಮಾಡುತ್ತಾ ಕೂಗುತ್ತಿದ್ದವು. ಆಗ ಗಾಳಿ ಬೀಸುತ್ತಿರಲಿಲ್ಲ, ಬೆಂಕಿ ಉರಿಯುತ್ತಿರಲಿಲ್ಲ.॥37॥

ಮೂಲಮ್ - 38

ಸ್ವಸ್ತ್ಯಸ್ತು ಲೋಕೇಭ್ಯ ಇತಿ ಜಜಲ್ಪುಸ್ತೇ ಮಹರ್ಷಯಃ ।
ಸಂಪೇತುಶ್ಚಾತ್ರ ಸಂತಪ್ತಾ ಗಂಧರ್ವಾಃ ಸಹಚಾರಣೈಃ ॥

ಅನುವಾದ

ಲೋಕ ಕಲ್ಯಾಣವಾಗಲೀ ಎಂದು ಮಹರ್ಷಿಗಳು ನುಡಿದರು. ಗಂಧರ್ವರಿಗೆ ಭಾರೀ ದುಃಖವಾಯಿತು. ಅವರು ಚಾರಣರೊಂದಿಗೆ ಅಲ್ಲಿಂದ ಓಡಿ ಹೋದರು.॥38॥

ಮೂಲಮ್ - 39

ಅಥ ರಾಕ್ಷಸಸಿಂಹಸ್ಯ ಕೃಷ್ಣಾನ್ ಕನಕಭೂಷಣಾನ್ ।
ಶರೈಶ್ಚತುರ್ಭಿಃ ಸೌಮಿತ್ರಿರ್ವಿವ್ಯಾಧ ಚತುರೋ ಹಯಾನ್ ॥

ಅನುವಾದ

ಅನಂತರ ಲಕ್ಷ್ಮಣನು ನಾಲ್ಕು ಬಾಣಗಳನ್ನು ಹೊಡೆದು ರಾಕ್ಷಸಸಿಂಹನ ಸ್ವರ್ಣಭೂಷಿತ ಕಪ್ಪಾದ ನಾಲ್ಕು ಕುದುರೆಗಳನ್ನು ಕೊಂದುಹಾಕಿದನು.॥39॥

ಮೂಲಮ್ - 40

ತತೋಽಪರೇಣ ಭಲ್ಲೇನ ಪೀತೇನ ನಿಶಿತೇನ ಚ ।
ಸಂಪೂರ್ಣಾಯತಮುಕ್ತೇನ ಸುಪತ್ರೇಣ ಸುವರ್ಚಸಾ ॥

ಮೂಲಮ್ - 41½

ಮಹೇಂದ್ರಾಶನಿಕಲ್ಪೇನ ಸೂತಸ್ಯ ವಿಚರಿಷ್ಯತಃ ।
ಸ ತೇನ ಬಾಣಾಶನಿನಾ ತಲಶಬ್ದಾನುನಾದಿನಾ ॥
ಲಾಘವಾದ್ ರಾಘವಃ ಶ್ರೀಮಾನ್ಶಿರಃ ಕಾಯಾದಪಾಹರತ್ ।

ಅನುವಾದ

ಬಳಿಕ ರಘುಕುಲನಂದನ ಶ್ರೀಮಾನ್ ಲಕ್ಷ್ಮಣನು ಸುಂದರವಾದ ರೆಕ್ಕೆಗಳುಳ್ಳ, ತೇಜಃ ಪುಂಜವಾದ, ಮಹೇಂದ್ರನ ವಜ್ರಾಯುಧದಂತಿದ್ದ, ಮತ್ತೊಂದು ನಿಶ್ಚಿತವಾದ ಬಾಣವನ್ನು ಧನುಸ್ಸಿಗೆ ಅನುಸಂಧಾನ ಮಾಡಿ, ಕಿವಿವರೆಗೆ ಸೆಳೆದು ಆ ವಜ್ರದಂತಹ ಬಾಣವನ್ನು ಚಪ್ಪಾಳೆಯ ಶಬ್ದದೊಡನೆ ಪ್ರಯೋಗಿಸಿ ಇಂದ್ರಜಿತನ ಸಾರಥಿಯ ಮಸ್ತಕವನ್ನು ಬೇರ್ಪಡಿಸಿದನು.॥40-41½॥

ಮೂಲಮ್ - 42

ಸ ಯಂತರಿ ಮಹಾತೇಜಾ ಹತೇ ಮಂದೋದರೀ ಸುತಃ ॥

ಮೂಲಮ್ - 43

ಸ್ವಯಂ ಸಾರಥ್ಯಮಕರೋತ್ ಪುನಶ್ಚ ಧನುರಸ್ಪೃಶತ್ ।
ತದದ್ಭುತಮಭೂತ್ತತ್ರ ಸಾರರ್ಥ್ಯಂ ಪಶ್ಯತಾಂ ಯುಧಿ ॥

ಅನುವಾದ

ಸಾರಥಿಯು ಹತನಾದಾಗ ಮಹಾತೇಜಸ್ವೀ ಮಂದೋದರಿ ಕುಮಾರ ಇಂದ್ರಜಿತು ಸ್ವತಃ ಸಾರಥಿಯ ಕಾರ್ಯವನ್ನು ನಡೆಸುತ್ತಾ, ಕುದುರೆಗಳನ್ನು ಹತೋಟಿಯಲ್ಲಿಟ್ಟುಕೊಂಡು ಬಾಣಗಳನ್ನು ಪ್ರಯೋಗಿಸುತ್ತಿದ್ದನು. ರಣರಂಗದಲ್ಲಿ ತೋರಿದ ಅವನ ಕಾರ್ಯವು ನೋಡುಗರಿಗೆ ಅದ್ಬುತವಾಗಿ ಕಂಡಿತು.॥42-43॥

ಮೂಲಮ್ - 44

ಹಯೇಷು ವ್ಯಗ್ರಹಸ್ತಂ ತಂ ವಿವ್ಯಾಧ ನಿಶಿತೈಃ ಶರೈಃ ।
ಧನುಷ್ಯಥ ಪುನರ್ವ್ಯಗ್ರಂ ಹಯೇಷು ಮುಮುಚೇ ಶರಾನ್ ॥

ಅನುವಾದ

ಇಂದ್ರಜಿತನು ಕುದುರೆಗಳನ್ನು ತಡೆಯಲು ಕೈಚಾಚಿದಾಗ ಲಕ್ಷ್ಮಣ ಅದನ್ನು ತೀಕ್ಷ್ಣ ಬಾಣದಿಂದ ಹೊಡೆಯುತ್ತಿದ್ದನು. ಯುದ್ಧಕ್ಕಾಗಿ ಧನುಸ್ಸು ಎತ್ತಿದಾಗ ಅವನ ಕುದುರೆಗಳನ್ನು ಪ್ರಹರಿಸುತ್ತಿದ್ದನು.॥44॥

ಮೂಲಮ್ - 45

ಛಿದ್ರೇಷು ತೇಷು ಬಾಣೌಘೈರ್ವಿಚರಂತಮಭೀತವತ್ ।
ಅರ್ದಯಾಮಾಸ ಸಮರೇ ಸೌಮಿತ್ರಿಃ ಶೀಘ್ರವಿಕ್ರಮಃ ॥

ಅನುವಾದ

ಅವನ ದೌರ್ಬಲ್ಯವನ್ನು ನೋಡಿ ಶೀಘ್ರವಾದ ಕೈಚಳಕದಿಂದ ಲಕ್ಷ್ಮಣನು ಸಮರಾಂಗಣದಲ್ಲಿ ನಿರ್ಭಯವಾಗಿ ಚರಿಸುವ ಇಂದ್ರಜಿತುವನ್ನು ತನ್ನ ಬಾಣಗಳಿಂದ ಅತ್ಯಂತ ಪೀಡಿತಗೊಳಿಸಿದನು.॥45॥

ಮೂಲಮ್ - 46

ನಿಹತಂ ಸಾರಥಿಂ ದೃಷ್ಟ್ವಾಸಮರೇ ರಾವಣಾತ್ಮಜಃ ।
ಪ್ರಜಹೌ ಸಮರೋದ್ಧರ್ಷಂ ವಿಷಣ್ಣಃ ಸ ಬಭೂವ ಹ ॥

ಅನುವಾದ

ಸಂಗ್ರಾಮದಲ್ಲಿ ಸಾರಥಿಯು ಹತನಾದುದನ್ನು ನೋಡಿ ರಾವಣಕುಮಾರನು ಯುದ್ಧೋ ತ್ಸಾಹವನ್ನು ತ್ಯಜಿಸಿ ವಿಷಾದದಲ್ಲಿ ಮುಳುಗಿದನು.॥4.॥

ಮೂಲಮ್ - 47

ವಿಷಣ್ಣ ವದನಂ ದೃಷ್ಟ್ವಾ ರಾಕ್ಷಸಂ ಹರಿಯೂಥಪಾಃ ।
ತತಃ ಪರಮ ಸಂಹೃಷ್ಟಾ ಲಕ್ಷ್ಮಣಂ ಚಾಭ್ಯಪೂಜಯನ್ ॥

ಅನುವಾದ

ಆ ರಾಕ್ಷಸನ ಮುಖದಲ್ಲಿ ವಿಷಾದ ಆವರಿಸಿದುದನ್ನು ನೋಡಿ ವಾನರ ಯೂಥಪತಿಗಳು ಬಹಳ ಪ್ರಸನ್ನ1ರಾಗಿ ಲಕ್ಷ್ಮಣನನ್ನು ಭೂರಿ ಭೂರಿ ಪ್ರಶಂಸಿಸಿದರು.॥47॥

ಮೂಲಮ್

(ಶ್ಲೋಕ - 48)
ತತಃ ಪ್ರಮಾಥೀ ರಭಸಃ ಶರಭೋ ಗಂಧಮಾದನಃ ।
ಅಮೃಷ್ಯಮಾಣಾಶ್ಚತ್ವಾರಶ್ಚಕ್ರುರ್ವೇಗಂ ಹರೀಶ್ವರಾಃ ॥

ಅನುವಾದ

ಅನಂತರ ಪ್ರಮಾಥೀ, ಶರಭ, ರಭಸ, ಗಂಧಮಾದನ ಈ ನಾಲ್ವರು ವಾನರೇಶ್ವರರು ರಾಕ್ಷಸನ ಪರಾಕ್ರಮ ಸಹಿಸದೆ ತಮ್ಮ ಮಹಾವೇಗವನ್ನು ಪ್ರಕಟಿಸಿದರು.॥48॥

ಮೂಲಮ್ - 49

ತೇ ಚಾಸ್ಯ ಹಯಮುಖ್ಯೇಷು ತೂರ್ಣಮಾಪ್ಲುತ್ಯ ವಾನರಾಃ ।
ಚತುರ್ಷು ಸುಮಹಾವೀರ್ಯಾ ನಿಪೇತುರ್ಭೀಮವಿಕ್ರಮಾಃ ॥

ಅನುವಾದ

ಆ ನಾಲ್ವರು ವಾನರರು ಮಹಾಬಲಶಾಲಿ ಹಾಗೂ ಭಯಂಕರ ಪರಾಕ್ರಮಿಗಳಾಗಿದ್ದರು. ಅವರು ತತ್ಕ್ಷಣ ನೆಗೆದು ಇಂದ್ರಜಿತುವಿನ ನಾಲ್ಕು ಕುದುರೆಗಳ ಮೇಲೆ ಹಾರಿದರು.॥49॥

ಮೂಲಮ್ - 50

ತೇಷಾಮಧಿಷ್ಠಿ ತಾನಾಂ ತೈರ್ವಾನರೈಃ ಪರ್ವತೋಪಮೈಃ ।
ಮುಖೇಭ್ಯೋ ರುಧಿರಂ ವ್ಯಕ್ತಂ ಹಯಾನಾಂ ಸಮವರ್ತತ ॥

ಅನುವಾದ

ಆ ಪರ್ವತಾಕಾರ ವಾನರರ ಭಾರದಿಂದ ಜಜ್ಜಿಹೋದ ಕುದುರೆಗಳು ಬಾಯಿಗಳಿಂದ ರಕ್ತಕಾರಿದವು.॥50॥

ಮೂಲಮ್ - 51

ತೇ ಹಯಾ ಮಥಿತಾ ಭಗ್ನಾ ವ್ಯಸವೋ ಧರಣೀಂ ಗತಾಃ ।
ತೇ ನಿಹತ್ಯ ಹಯಾಂಸ್ತಸ್ಯ ಪ್ರಮಥ್ಯ ಚ ಮಹಾರಥಮ್ ।
ಪುನರುತ್ಪತ್ಯ ವೇಗೇನ ತಸ್ಥುರ್ಲಕ್ಷ್ಮಣಪಾರ್ಶ್ವತಃ ॥

ಅನುವಾದ

ಕಪಿನಾಯಕರ ಭಾರದಿಂದ ಮಧಿಸಲ್ಪಟ್ಟ ಕುದುರೆಗಳು ಪ್ರಾಣಹೀನರಾಗಿ ನೆಲಕ್ಕೆ ಬಿದ್ದುಬಿಟ್ಟವು. ಹೀಗೆ ಕುದುರೆಗಳನ್ನು ಕೊಂದು ಇಂದ್ರಜಿತುವಿನ ವಿಶಾಲ ರಥವನ್ನು ಮುರಿದು ಹಾಕಿ ಆ ನಾಲ್ವರು ಪುನಃ ವೇಗವಾಗಿ ನೆಗೆದು ಲಕ್ಷ್ಮಣನ ಬಳಿಯಲ್ಲಿ ಬಂದು ನಿಂತರು.॥51॥

ಮೂಲಮ್ - 52

ಸ ಹತಾಶ್ವಾದವಪ್ಲುತ್ಯ ರಥಾನ್ಮಥಿತಸಾರಥಿಃ ।
ಶರವರ್ಷೇಣ ಸೌಮಿತ್ರಿಮಭ್ಯಧಾವತ ರಾವಣಿಃ ॥

ಅನುವಾದ

ಸಾರಥಿಯು ಮೊದಲೇ ಸತ್ತುಹೋಗಿದ್ದ, ಕುದುರೆಗಳೂ ಹತರಾದಾಗ ರಾವಣಕುಮಾರನು ರಥದಿಂದ ಹಾರಿ ಬಾಣಗಳನ್ನು ಮರಗರೆಯುತ್ತಾ ಸೌಮಿತ್ರಿಯ ಕಡೆಗೆ ಓಡಿದನು.॥52॥

ಮೂಲಮ್ - 53

ತತೋ ಮಹೇಂದ್ರಪ್ರತಿಮಃ ಸ ಲಕ್ಷ್ಮಣಃ
ಪದಾತಿನಂ ತಂ ನಿಹತೈರ್ಹಯೋತ್ತಮೈಃ ।
ಸೃಜಂತಮಾಜೌ ನಿಶಿತಾನ್ಶರೋತ್ತಮಾನ್
ಭೃಶಂ ತದಾ ಬಾಣಗಣೈರ್ವ್ಯದಾರಯತ್ ॥

ಅನುವಾದ

ಆಗ ಇಂದ್ರನಿಗೆ ಸಮನಾದ ಪರಾಕ್ರಮಿ ಲಕ್ಷ್ಮಣನು ಶ್ರೇಷ್ಠ ಕುದುರೆಗಳು ಸತ್ತುಹೋದುದರಿಂದ ಕಾಲ್ನಡಿಗೆಯಿಂದ ಯುದ್ಧದಲ್ಲಿ ಹರಿತವಾದ ಬಾಣಗಳನ್ನು ಸುರಿಸುತ್ತಿದ್ದ ಇಂದ್ರಜಿತುವನ್ನು ಬಾಣಗಳಿಂದ ಅತ್ಯಂತ ಗಾಯಗೊಳಿಸಿದನು.॥53॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಎಂಭತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥89॥