०८८ लक्ष्मण-इन्द्रजिद्युद्धम्

वाचनम्
ಭಾಗಸೂಚನಾ

ಲಕ್ಷ್ಮಣ ಮತ್ತು ಇಂದ್ರಜಿತು ಸಂವಾದ, ಘೋರವಾದ ಯುದ್ಧ

ಮೂಲಮ್ - 1

ವಿಭೀಷಣ ವಚಃ ಶ್ರುತ್ವಾ ರಾವಣಿಃ ಕ್ರೋಧಮೂರ್ಛಿತಃ ।
ಅಬ್ರವೀತ್ಪರುಷಂ ವಾಕ್ಯಂ ವೇಗೇನಾಭ್ಯುತ್ಪಪಾತ ಚ ॥

ಅನುವಾದ

ವಿಭೀಷಣನ ಮಾತನ್ನು ಕೇಳಿ ರಾವಣಿಯು ಅತಿ ಕ್ರುದ್ಧನಾದನು. ವಿಭೀಷಣನೊಡನೆ ಕಠೋರವಾಗಿ ಮಾತನಾಡುತ್ತಾ ಮುನ್ನುಗ್ಗಿ ಬಂದನು.॥1॥

ಮೂಲಮ್ - 2

ಉದ್ಯತಾಯುಧನಿಸ್ತ್ರಿಂಶೋ ರಥೇ ಸುಸಮಲಂಕೃತೇ ।
ಕಾಲಾಶ್ವಯುಕ್ತೇ ಮಹತಿ ಸ್ಥಿತಃ ಕಾಲಾಂತ ಕೋಪಮಃ ॥

ಅನುವಾದ

ಕಪ್ಪಾದ ಕುದುರೆಗಳನ್ನು ಹೂಡಿದ್ದೆ, ಅಲಂಕೃತರಥದಲ್ಲಿ ಕುಳಿತಿರುವ ಇಂದ್ರಜಿತನು ಖಡ್ಗವೇ ಮುಂತಾದ ಇತರ ಆಯುಧಗಳನ್ನು ಧರಿಸಿ ವಿನಾಶಕಾರಿ ಕಾಲನಂತೆ ಕಂಡು ಬರುತ್ತಿದ್ದನು.॥2॥

ಮೂಲಮ್ - 3

ಮಹಾಪ್ರಮಾಣಮುದ್ಯಮ್ಯ ವಿಪುಲಂ ವೇಗವದ್ ದೃಢಮ್ ।
ಧನುರ್ಭೀಮಬಲೋ ಭೀಮಂ ಶರಾಂಶ್ಚಾಮಿತ್ರಶಾಶನಾನ್ ॥

ಅನುವಾದ

ಆ ಭಯಂಕರ ಬಲಶಾಲೀ ನಿಶಾಚರನು ದೊಡ್ಡ ಆಕಾರದ ಉದ್ದವಾದ, ಗಟ್ಟಿಮುಟ್ಟಾದ, ಭಯಾನಕ ಧನುಸ್ಸನ್ನು ಹಾಗೂ ಶತ್ರುಗಳನ್ನು ನಾಶಗೊಳಿಸುವ ಸಮರ್ಥ ಬಾಣಗಳನ್ನೆತ್ತಿಕೊಂಡು ಯುದ್ಧಕ್ಕೆ ತೊಡಗಿದ್ದನು.॥3॥

ಮೂಲಮ್ - 4½

ತಂ ದದರ್ಶ ಮಹೇಷ್ವಾಸೋ ರಥಸ್ಥಃ ಸಮಲಂಕೃತಃ ।
ಅಲಂಕೃತಮಮಿತ್ರಘ್ನೋ ರಾಘವಸ್ಯಾತ್ಮಜೋ ಬಲೀ ॥
ಹನೂಮತ್ ಪೃಷ್ಠಮಾರೂಢಮುದಯಸ್ಥರವಿಪ್ರಭಮ್ ।

ಅನುವಾದ

ವಸ್ತ್ರಾಭೂಷಣಗಳಿಂದ ಅಲಂಕೃತನಾಗಿ ರಥದಲ್ಲಿ ಕುಳಿತಿರುವ ಮಹಾಧನುರ್ಧರ ಶತ್ರುನಾಶಕ ಬಲವಂತ ರಾವಣಕುಮಾರನು ಹನುಮಂತನ ಹೆಗಲೇರಿ ಕುಳಿತು ಉದಯಾ ಚಲದಲ್ಲಿ ವಿರಾಜಿಸುವ ಸೂರ್ಯನಂತೆ ಪ್ರಕಾಶಿತನಾಗುತ್ತಾ, ತನ್ನ ತೇಜದಿಂದ ವಿಭೂಷಿತನಾದ ಲಕ್ಷ್ಮಣನನ್ನು ನೋಡಿದನು.॥4॥

ಮೂಲಮ್ - 5

ಉವಾಚೈನಂ ಸುಸಂರಬ್ಧಃ ಸೌಮಿತ್ರಿಂ ಸವಿಭೀಷಣಮ್ ॥

ಮೂಲಮ್ - 6½

ತಾಂಶ್ಚ ವಾನರ ಶಾರ್ದೂಲಾನ್ಪಶ್ಯಧ್ವಂ ಮೇ ಪರಾಕ್ರಮಮ್ ।
ಅದ್ಯ ಮತ್ಕಾರ್ಮುಕೋತ್ಸೃಷ್ಟಂ ಶರವರ್ಷಂ ದುರಾಸದಮ್ ॥
ಮುಕ್ತಂ ವರ್ಷಮಿವಾಕಾಶೇ ವಾರಯಿಷ್ಯಥ ಸಂಯುಗೇ ।

ಅನುವಾದ

ನೋಡುತ್ತಲೇ ಅವನು ಅತ್ಯಂತ ರೋಷಗೊಂಡು ವಿಭೀಷಣ ಸಹಿತ ಲಕ್ಷ್ಮಣನಲ್ಲಿ ಹಾಗೂ ವಾನರಶಾರ್ದೂಲರಲ್ಲಿ ಹೇಳಿದನು- ಶತ್ರುಗಳೇ! ಇಂದು ನನ್ನ ಪರಾಕ್ರಮ ನೋಡಿ, ಯುದ್ಧದಲ್ಲಿ ನೀವೆಲ್ಲರೂ ನನ್ನ ಬಾಣಗಳ ದಃಸಹ ಮಳೆಯನ್ನು ಆಕಾಶದಿಂದ ಸುರಿಯುವ ಮುಸಲಧಾರೆಯನ್ನು ಭೂಮಿಯ ಪ್ರಾಣಿಗಳು ತಮ್ಮ ಮೇಲೆ ಧರಿಸುವಂತೆ ನೀವು ತಮ್ಮ ಶರೀರಗಳಲ್ಲಿ ಧರಿಸುವಿರಿ.॥5-6॥

ಮೂಲಮ್ - 7

ಅದ್ಯ ವೋ ಮಾಮಕಾ ಬಾಣಾ ಮಹಾಕಾರ್ಮುಕನಿಃಸೃತಾಃ ।
ವಿಧಮಿಷ್ಯಂತಿ ಗಾತ್ರಾಣಿ ತೂಲರಾಶಿಮಿವಾನಲಃ ॥

ಅನುವಾದ

ಹತ್ತಿಯ ರಾಶಿಯನ್ನು ಬೆಂಕಿಯು ಸುಟ್ಟುಹಾಕುವಂತೆ, ಈ ವಿಶಾಲಧನುಸ್ಸಿನಿಂದ ಚಿಮ್ಮಿದ ನನ್ನ ಬಾಣಗಳು ಇಂದು ನಿಮ್ಮ ಶರೀರಗಳನ್ನು ಛಿನ್ನಭಿನ್ನವಾಗಿಸುವುವು.॥7॥

ಮೂಲಮ್ - 8

ತೀಕ್ಷ್ಣಸಾಯಕನಿರ್ಭಿನ್ನಾನ್ ಶೂಲಶಕ್ಯಷ್ಟಿ ತೋಮರೈಃ ।
ಅದ್ಯ ವೋ ಗಮಯಿಷ್ಯಾಮಿ ಸರ್ವಾನೇವ ಯಮಕ್ಷಯಮ್ ॥

ಅನುವಾದ

ಇಂದು ನನ್ನ ಶೂಲ, ಶಕ್ತಿ, ಋಷ್ಟಿ, ತೋಮರಗಳಿಂದ ಮತ್ತು ಸಾಯಕಗಳಿಂದ ಛಿನ್ನಭಿನ್ನಗೊಳಿಸಿ ನಿಮ್ಮೆಲ್ಲರನ್ನು ಯಮಲೋಕಕ್ಕೆ ಕಳಿಸುವೆನು.॥8॥

ಮೂಲಮ್ - 9

ಸೃಜತಃ ಶರವರ್ಷಾಣಿ ಕ್ಷಿಪ್ರಹಸ್ತಸ್ಯ ಸಂಯುಗೇ ।
ಜೀಮೂತಸ್ಯೇವ ನದತಃ ಕಃ ಸ್ಥಾಸ್ಯತಿ ಮಮಾಗ್ರತಃ ॥

ಅನುವಾದ

ಯುದ್ಧದಲ್ಲಿ ಮೇಘದಂತೆ ಗರ್ಜಿಸುತ್ತಾ ಕೈಚಳಕದಿಂದ ಬಾಣಗಳ ಮಳೆಯನ್ನು ಸುರಿಸಲು ಪ್ರಾರಂಭಮಾಡಿದಾಗ ಯಾರು ನನ್ನ ಎದುರಿಗೆ ನಿಲ್ಲಬಲ್ಲಿರೀ.॥9॥

ಮೂಲಮ್ - 10

ರಾತ್ರಿಯುದ್ಧೇ ತದಾ ಪೂರ್ವಂ ವಜ್ರಾಶನಿಸಮೈಃ ಶರೈಃ ।
ಶಾಯಿತೌ ತೌ ಮಯಾ ಭೂಯೋ ವಿಸಂಜ್ಞೌ ಸಪುರಃ ಸರೌ ॥

ಮೂಲಮ್ - 11

ಸ್ಮೃತಿರ್ನ ತೇಽಸ್ತಿ ವಾ ಮನ್ಯೇ ವ್ಯಕ್ತಂ ವಾ ಯಮಕ್ಷಯಮ್ ।
ಆಶೀವಿಷಸಮಂ ಕ್ರುದ್ಧಂ ಯನ್ಮಾಂ ಯೋದ್ಧುಮುಪಸ್ಥಿತಃ ॥

ಅನುವಾದ

ಲಕ್ಷ್ಮಣ! ಅಂದು ರಾತ್ರಿ ಯುದ್ಧದಲ್ಲಿ ನಾನು ವಜ್ರ ಮತ್ತು ಸಿಡಿಲಿನಂತಿದ್ದ ಬಾಣಗಳಿಂದ ನಿಮ್ಮಿಬ್ಬರನ್ನು ಮಲಗಿಸಿಬಿಟ್ಟಿದ್ದೆ. ನೀವು ಪ್ರಧಾನ ಸೈನಿಕರ ಸಹಿತ ಮೂರ್ಛಿತರಾಗಿ ಬಿದ್ದಿರುವುದು ಈಗ ನಿನಗೆ ನೆನಪಿಲ್ಲ ಎಂದು ನಾನು ತಿಳಿಯುತ್ತೇನೆ. ವಿಷಧರ ಸರ್ಪದಂತೆ ರೋಷಗೊಂಡಿರುವ ಇಂದ್ರಜಿತುವಾದ ನನ್ನೊಡನೆ ಯುದ್ಧ ಮಾಡಲು ಉಪಸ್ಥಿತನಾಗಿರುವುದರಿಂದ ಯಮಲೋಕಕ್ಕೆ ಹೋಗಲು ಸಿದ್ಧನಾಗಿರುವೆ ಎಂಬುದು ಸ್ಪಷ್ಟವಾಗಿ ಅನಿಸುತ್ತದೆ.॥10-11॥

ಮೂಲಮ್ - 12

ತಚ್ಛ್ರುತ್ವಾ ರಾಕ್ಷಸೇಂದ್ರಸ್ಯ ಗರ್ಜಿತಂ ರಾಘವಸ್ತದಾ ।
ಅಭೀತವದನಃ ಕ್ರುದ್ಧೋ ರಾವಣಿಂ ವಾಕ್ಯಮಬ್ರವೀತ್ ॥

ಅನುವಾದ

ರಾಕ್ಷಸರಾಜನ ಮಗನ ಆ ಗರ್ಜನೆ ಕೇಳಿ ರಘುಕುಲನಂದನ ಲಕ್ಷ್ಮಣನು ಕುಪಿತಗೊಂಡನು. ಅವನ ಮುಖದಲ್ಲಿ ಭಯದ ಯಾವುದೇ ಛಾಯೆ ಇರದೆ, ಅವನು ಇಂದ್ರಜಿತುವಿನಲ್ಲಿ ಹೇಳಿದನು.॥12॥

ಮೂಲಮ್ - 13

ಉಕ್ತಶ್ಚ ದುರ್ಗಮಃ ಪಾರಃ ಕಾರ್ಯಾಣಾಂ ರಾಕ್ಷಸ ತ್ವಯಾ ।
ಕಾರ್ಯಾಣಾಂ ಕರ್ಮಣಾ ಪಾರಂ ಯೋ ಗಚ್ಛತಿ ಸ ಬುದ್ಧಿಮಾನ್ ॥

ಅನುವಾದ

ನಿಶಾಚರನೇ! ನೀನು ಕೇವಲ ಮಾತಿನಿಂದ ತನ್ನ ಶತ್ರುವಧೆ ಮುಂತಾದ ಕಾರ್ಯಗಳ ಪೂರ್ಣತೆಯ ಘೋಷಣೆ ಮಾಡಿರುವೆ; ಆದರೆ ಆ ಕಾರ್ಯವನ್ನು ಪೂರ್ಣಗೊಳಿಸುವುದು ನಿನಗೆ ಅತ್ಯಂತ ಕಠಿಣವಾಗಿದೆ. ಕ್ರಿಯೆಯ ಮೂಲಕ ಕರ್ತವ್ಯ ಕರ್ಮಗಳನ್ನು ನೆರವೇರಿಸುವವನು ಅರ್ಥಾತ್ ಹೇಳದೆ ಕಾರ್ಯಪೂರ್ಣ ಮಾಡಿ ತೋರಿಸುವವನೇ ಬುದ್ಧಿವಂತ ಪುರುಷನು.॥13॥

ಮೂಲಮ್ - 14

ಸ ತ್ವಮರ್ಥಸ್ಯ ಹೀನಾರ್ಥೋ ದುರವಾಪಸ್ಯ ಕೇನಚಿತ್ ।
ವಚೋ ವ್ಯಾಹೃತ್ಯ ಜಾನೀಷೇ ಕೃತಾರ್ಥೋಽಸ್ಮೀತಿ ದುರ್ಮತೇ ॥

ಅನುವಾದ

ದುರ್ಮತಿಯೇ! ನೀನು ನಿನ್ನ ಅಭೀಷ್ಟ ಕಾರ್ಯವನ್ನು ಸಿದ್ಧಗೊಳಿಸಲು ಅಸಮರ್ಥನಾಗಿರುವೆ. ಯಾವ ಕಾರ್ಯ ಯಾರಿಂದಲೂ ಸಿದ್ಧವಾಗುವುದು ಕಠಿಣವಾಗಿದೆಯೋ, ಅದನ್ನು ಕೇವಲ ಮಾತಿನಿಂದ ಹೇಳಿ ನೀನು ತನ್ನನ್ನು ಕೃತಾರ್ಥನೆಂದು ತಿಳಿಯುತ್ತಿರುವೆ.॥14॥

ಮೂಲಮ್ - 15

ಅಂತರ್ಧಾನಗತೇನಾಜೌ ಯತ್ತ್ವಯಾ ಚರಿತಸ್ತದಾ ।
ತಸ್ಕರಾಚರಿತೋ ಮಾರ್ಗೋ ನೈಷ ವೀರನಿಷೇವಿತಃ ॥

ಅನುವಾದ

ಅಂದು ಸಂಗ್ರಾಮದಲ್ಲಿ ತಾನು ಅಡಗಿಕೊಂಡು ನೀನು ಆಶ್ರಯಿಸಿದುದು ಕಳ್ಳರ ದಾರಿಯಾಗಿದೆ. ವೀರ ಪುರುಷರು ಅದನ್ನು ಸೇವಿಸುವುದಿಲ್ಲ.॥15॥

ಮೂಲಮ್ - 16

ಯಥಾ ಬಾಣಪಥಂ ಪ್ರಾಪ್ಯ ಸ್ಥಿತೋಽಸ್ಮಿ ತವರಾಕ್ಷಸ ।
ದರ್ಶಯಸ್ವಾದ್ಯ ತತ್ತೇಜೋ ವಾಚಾತ್ವಂ ಕಿಂ ವಿಕತ್ಥಸೇ ॥

ಅನುವಾದ

ರಾಕ್ಷಸನೇ! ಈಗ ನಾನು ನಿನ್ನ ಬಾಣಗಳ ಮಾರ್ಗದಲ್ಲಿ ಬಂದು ನಿಂತರುವೆನು. ಇಂದು ನಿನ್ನ ಆ ತೇಜವನ್ನು ತೋರಿಸು. ಕೇವಲ ಬಡಾಯಿ ಏಕೆ ಕೊಚ್ಚಿಕೊಳ್ಳುತ್ತಿರುವೆ.॥16॥

ಮೂಲಮ್ - 17

ಏವಮುಕ್ತೋ ಧನುರ್ಭೀಮಂ ಪರಾಮೃಶ್ಯ ಮಹಾಬಲಃ ।
ಸಸರ್ಜ ನಿಶಿತಾನ್ಬಾಣಾನಿಂದ್ರಜಿತ್ ಸಮಿತಿಂಜಯಃ ॥

ಅನುವಾದ

ಲಕ್ಷ್ಮಣನು ಹೀಗೆ ಹೇಳಿದಾಗ ಸಂಗ್ರಾಮ ವಿಜಯಿ, ಮಹಾಬಲಿ, ಇಂದ್ರಜಿತು ತನ್ನ ಭಯಂಕರ ಧನುಸ್ಸನ್ನು ಬಿಗಿಯಾಗಿ ಹಿಡಿದುಕೊಂಡು ಹರಿತವಾದ ಬಾಣಗಳ ಮಳೆಯನ್ನೇ ಪ್ರಾರಂಭಿಸಿದನು.॥17॥

ಮೂಲಮ್ - 18

ತೇನ ಸೃಷ್ಟಾ ಮಹಾವೇಗಾಃ ಶರಾಃ ಸರ್ಪವಿಷೋಪಮಾಃ ।
ಸಂಪ್ರಾಪ್ಯ ಲಕ್ಷ್ಮಣಂ ಪೇತುಃ ಶ್ವಸಂತ ಇವ ಪನ್ನಗಾಃ ॥

ಅನುವಾದ

ಅವನು ಬಿಟ್ಟಿರುವ ಮಹಾವೇಗಶಾಲೀ ಬಾಣಗಳು ಸರ್ಪದ ವಿಷದಂತೆ ವಿಷಕಾರಿಯಾಗಿದ್ದವು. ಅವು ಬುಸುಗುಟ್ಟುತ್ತಾ ಸರ್ಪಗಳಂತೆ ಲಕ್ಷ್ಮಣನ ಶರೀರದ ಮೇಲೆ ಬೀಳತೊಡಗಿದವು.॥18॥

ಮೂಲಮ್ - 19

ಶರೈರತಿ ಮಹಾವೇಗೈರ್ವೇಗವಾನ್ ರಾವಣಾತ್ಮಜಃ ।
ಸೌಮಿತ್ರಿಮಿಂದ್ರಜಿದ್ಯುದ್ಧೇ ವಿವ್ಯಾಧ ಶುಭಲಕ್ಷಣಮ್ ॥

ಅನುವಾದ

ವೇಗವಂತ ಇಂದ್ರಜಿತು ಆ ಅತ್ಯಂತ ವೇಗಶಾಲೀ ಬಾಣಗಳಿಂದ ಯುದ್ಧದಲ್ಲಿ ಶುಭ ಲಕ್ಷ್ಮಣನನ್ನು ಗಾಯಗೊಳಿಸಿದನು.॥19॥

ಮೂಲಮ್ - 20

ಸಶರೈರತಿವಿದ್ಧಾಂಗೋ ರುಧಿರೇಣ ಸಮುಕ್ಷಿತಃ
ಶುಶುಭೇ ಲಕ್ಷ್ಮಣಃ ಶ್ರೀಮಾನ್ವಿಧೂಮ ಇವ ಪಾವಕಃ ॥

ಅನುವಾದ

ಬಾಣಗಳಿಂದ ಅವನ ಶರೀರ ಕ್ಷತ-ವಿಕ್ಷತವಾಯಿತು. ರಕ್ತದಿಂದ ತೊಯ್ದುಹೋದನು. ಆ ಸ್ಥಿತಿಯಲ್ಲಿ ಶ್ರೀಮಾನ್ ಲಕ್ಷ್ಮಣನು ಧೂಮರಹಿತ ಪ್ರಜ್ವಲಿತ ಅಗ್ನಿಯಂತೆ ಶೋಭಿಸುತ್ತಿದ್ದನು.॥2.॥

ಮೂಲಮ್ - 21

ಇಂದ್ರಜಿತ್ತ್ವಾತ್ಮನಃ ಕರ್ಮ ಪ್ರಸಮೀಕ್ಷ್ಯಾಭಿಗಮ್ಯ ಚ ।
ವಿನದ್ಯ ಸುಮಹಾನಾದಮಿದಂ ವಚನಮಬ್ರವೀತ್ ॥

ಅನುವಾದ

ಇಂದ್ರಜಿತನು ತನ್ನ ಪರಾಕ್ರಮ ತೋರಿ ಲಕ್ಷ್ಮಣನ ಬಳಿಗೆ ಹೋಗಿ ಜೋರಾಗಿ ಗರ್ಜಿಸಿ ಇಂತೆಂದನು.॥21॥

ಮೂಲಮ್ - 22

ಪತ್ರಿಣಃ ಶಿತಧಾರಾಸ್ತೇ ಶರಾ ಮತ್ಕಾರ್ಮುಕಚ್ಯುತಾಃ ।
ಆದಾಸ್ಯಂತೇಽದ್ಯ ಸೌಮಿತ್ರೇ ಜೀವಿತಂ ಜೀವಿತಾಂತಕಾಃ ॥

ಮೂಲಮ್ - 23

ಅದ್ಯ ಗೋಮಾಯುಸಂಘಾಶ್ಚ ಶ್ಯೇನಸಂಘಾಶ್ಚ ಲಕ್ಷ್ಮಣ ।
ಗೃಧ್ರಾಶ್ಚ ನಿಪತಂತು ತ್ವಾಂ ಗತಾಸುಂ ನಿಹತಂ ಮಯಾ ॥

ಅನುವಾದ

ಸುಮಿತ್ರಾಕುಮಾರ! ನನ್ನ ಧನುಸ್ಸಿನಿಂದ ಜಿಗಿದ ಹರಿತವಾದ ಪಂಖಧಾರೀ ಬಾಣಗಳಿಂದ ನಿನ್ನ ಪ್ರಾಣಗಳು ಹೊರಟು ಹೋಗಿ, ಹೆಣದ ಮೇಲೆ ಹಿಂಡು ಹಿಂಡು ಗುಳ್ಳೆನರಿಗಳೂ ಹದ್ದುಗಳೂ, ಗಿಡಗ ಗಳೂ ಬಂದು ತಮ್ಮ ಹಸಿವನ್ನು ಇಂಗಿಸಿಕೊಳ್ಳುವುವು.॥22-23॥

ಮೂಲಮ್ - 24

ಕ್ಷತ್ರಬಂಧುಃ ಸದಾನಾರ್ಯಂ ರಾಮಃ ಪರಮ ದುರ್ಮತಿಃ ।
ಭಕ್ತಂ ಭ್ರಾತರಮದ್ಯೈವ ತ್ವಾಂ ದ್ರಕ್ಷ್ಯತಿಹತಂ ಮಯಾ ॥

ಅನುವಾದ

ರಾಮನು - ನಿನ್ನಂತಹ ದುರ್ಮತಿಯಾದ, ಅನಾರ್ಯನೂ, ಕ್ಷತ್ರಿಯಧಮನೂ, ಭಕ್ತನಾದ ತಮ್ಮನೂ ಆದ ನೀನು ನನ್ನಿಂದ ಹತನಾಗಿರುವುದನ್ನು ನೋಡುವನು.॥24॥

ಮೂಲಮ್ - 25

ವಿಸ್ರಸ್ತಕವಚಂ ಭೂಮೌ ವ್ಯಪವಿದ್ಧಶರಾಸನಮ್ ।
ಹೃತೋತ್ತಮಾಂಗಂ ಸೌಮಿತ್ರೇ ತ್ವಾಮದ್ಯ ನಿಹತಂ ಮಯಾ ॥

ಅನುವಾದ

ಸುಮಿತ್ರಾ ಕುಮಾರ! ನಿನ್ನ ಕವಚ ಜಾರಿ ನೆಲಕ್ಕೆ ಬೀಳುವುದು, ಧನುಸ್ಸು ದೂರ ಹೋಗಿ ಬೀಳಬಹುದು. ನಿನ್ನ ಮಸ್ತಕವೂ ತುಂಡರಿಸಲಾಗುವುದು. ಈ ಸ್ಥಿತಿಯಲ್ಲಿ ಇಂದು ನನ್ನ ಕೈಯಲ್ಲಿ ಹತನಾದ ನಿನ್ನನ್ನು ರಾಮನು ನೋಡುವನು.॥25॥

ಮೂಲಮ್ - 26

ಇತಿ ಬ್ರುವಾಣಂ ಸಂಕ್ರುದ್ಧಃ ಪರುಷಂ ರಾವಣಾತ್ಮಜಮ್ ।
ಹೇತುಮದ್ವಾಕ್ಯಮರ್ಥಜ್ಞೋ ಲಕ್ಷ್ಮಣಃ ಪ್ರತ್ಯುವಾಚ ಹ ॥

ಅನುವಾದ

ಹೀಗೆ ಕಠೋರವಾಗಿ ಮಾತನಾಡುತ್ತಿರುವ ಇಂದ್ರಜಿತುವಿನಲ್ಲಿ ತನ್ನ ಪ್ರಯೋಜನವನ್ನು ಬಲ್ಲ ಲಕ್ಷ್ಮಣನು ಕುಪಿತನಾಗಿ ಯುಕ್ತಿಯುಕ್ತವಾಗಿ ಹೀಗೆ ಉತ್ತರಿಸಿದನು .॥26॥

ಮೂಲಮ್ - 27

ವಾಗ್ಬಲಂ ತ್ಯಜ ದುರ್ಬುದ್ಧೇ ಕ್ರೂರಕರ್ಮನ್ ಹಿ ರಾಕ್ಷಸ ।
ಅಥ ಕಸ್ಮಾದ್ವದಸ್ಯೇತತ್ ಸಂಪಾದಯ ಸುಕರ್ಮಣಾ ॥

ಅನುವಾದ

ಕ್ರೂರಕರ್ಮಿ ದುರ್ಬುದ್ಧಿ ರಾಕ್ಷಸನೇ! ಬಡಾಯಿ ಕೊಚ್ಚಿಕೊಳ್ಳುವುದನ್ನು ಬಿಟ್ಟು ಬಿಡು. ನೀನು ಇವೆಲ್ಲ ಏಕೆ ಹೇಳುತ್ತಿರುವೆ? ಮಾಡಿತೋರು.॥27॥

ಮೂಲಮ್ - 28

ಅಕೃತ್ವಾ ಕತ್ಥಸೇ ಕರ್ಮ ಕಿಮರ್ಥಮಿಹ ರಾಕ್ಷಸ ।
ಕುರು ತತ್ಕರ್ಮ ಯೇನಾಹಂ ಶ್ರದ್ಧೇಯಂ ತವ ಕತ್ಥನಮ್ ॥

ಅನುವಾದ

ನಿಶಾಚರನೇ! ಇಷ್ಟರವರೆಗೆ ಮಾಡದಿರುವ ಕೆಲಸದ ಕುರಿತು ಇಲ್ಲಿ ವ್ಯರ್ಥಾಲಾಪ ಏಕೆ ಮಾಡುತ್ತಿರುವೆ? ನೀನು ಹೇಳಿದುದನ್ನು ಪೂರ್ಣಮಾಡು. ಅದರಿಂದ ನಿನ್ನ ಈ ಆತ್ಮಶ್ಲಾಘನೆಯನ್ನು ನಂಬುವೆನು.॥28॥

ಮೂಲಮ್ - 29

ಅನುಕ್ತ್ವಾಪರುಷಂ ವಾಕ್ಯಂ ಕಿಂಚಿದಪ್ಯನವಕ್ಷಿಪನ್ ।
ಅವಿಕತ್ಥನ್ ವಧಿಷ್ಯಾಮಿ ತ್ವಾಂ ಪಶ್ಯ ಪುರುಷಾದನ ॥

ಅನುವಾದ

ಪುರುಷಾಧಮನೇ! ನಾನು ಯಾವುದೇ ಕಠೋರ ಮಾತುಗಳನ್ನು ಹೇಳದೆ, ನಿನ್ನ ಕುರಿತು ಯಾವುದೇ ಆಕ್ಷೇಪವೆತ್ತದೆ, ಆತ್ಮಪ್ರಶಂಸೆ ಮಾಡದೆಯೇ ನಿನ್ನನ್ನು ವಧಿಸುವೆನು.॥29॥

ಮೂಲಮ್ - 30

ಇತ್ಯುಕ್ತ್ವಾಪಂಚ ನಾರಾಚಾನಾಕರ್ಣಾಪೂರಿತಾನ್ ಶರಾನ್ ।
ವಿಜಘಾನ ಮಹಾವೇಗಾಲ್ಲಕ್ಷ್ಮಣೋ ರಾಕ್ಷಸೋರಸಿ ॥

ಅನುವಾದ

ಹೀಗೆ ಹೇಳಿ ಲಕ್ಷ್ಮಣನು ಧನುಸ್ಸನ್ನು ಆಕರ್ಣಾಂತ ಸೆಳೆದು ರಾಕ್ಷಸನ ಎದೆಗೆ ಐದು ಬಾಣಗಳನ್ನು ವೇಗವಾಗಿ ಪ್ರಯೋಗಿಸಿದನು.॥30॥

ಮೂಲಮ್ - 31

ಸುಪತ್ರವಾಜಿತಾ ಬಾಣಾ ಜ್ವಲಿತಾ ಇವ ಪನ್ನಗಾಃ ।
ನೈರ್ಋತೋರಸ್ಯಭಾಸಂತ ಸವಿತೂ ರಶ್ಮಯೋ ಯಥಾ ॥

ಅನುವಾದ

ಸುಂದರ ರೆಕ್ಕೆಗಳುಳ್ಳ, ವೇಗವಾಗಿ ಹೋಗುವ, ಪ್ರಜ್ವಲಿತ ಸರ್ಪಗಳಂತೆ ಕಾಣುವ ಆ ಬಾಣಗಳು ರಾಕ್ಷಸನ ಎದೆಯಲ್ಲಿ ಸೂರ್ಯಕಿರಣಗಳಂತೆ ಪ್ರಕಾಶಿಸಿದವು.॥31॥

ಮೂಲಮ್ - 32

ಸ ಶರೈರಾಹತಸ್ತೇನ ಸರೋಷೋ ರಾವಣಾತ್ಮಜಃ ।
ಸುಪ್ರಯುಕ್ತೈಸ್ತ್ರಿಭಿರ್ಬಾಣೈಃ ಪ್ರತಿವಿವ್ಯಾಧ ಲಕ್ಷ್ಮಣಮ್ ॥

ಅನುವಾದ

ಲಕ್ಷ್ಮಣನ ಬಾಣಗಳಿಂದ ಆಹತನಾದ ರಾವಣಕುಮಾರ ಕೋಪದಿಂದ ಕೆಂಡಾಮಂಡಲನಾದನು. ಅವನು ಚೆನ್ನಾಗಿ ಪ್ರಯೋಗಿಸಿದ ಮೂರು ಬಾಣಗಳಿಂದ ಲಕ್ಷ್ಮಣನನ್ನು ಗಾಯಗೊಳಿಸಿ ಪ್ರತೀಕಾರ ಮಾಡಿದನು.॥32॥

ಮೂಲಮ್ - 33

ಸ ಬಭೂವ ಮಹಾಭೀಮೋ ನರರಾಕ್ಷಸ ಸಿಂಹಯೋಃ ।
ವಿಮರ್ದಸ್ತುಮುಲೋ ಯುದ್ಧೇ ಪರಸ್ಪರ ಜಯೈಷಿಣೋಃ ॥

ಅನುವಾದ

ಒಂದುಕಡೆ ಪುರುಷಸಿಂಹ ಲಕ್ಷ್ಮಣನಿದ್ದರೆ, ಇನ್ನೊಂದೆಡೆ ರಾಕ್ಷಸಸಿಂಹ ಇಂದ್ರಜಿತು ಇದ್ದನು. ಇಬ್ಬರೂ ಯುದ್ಧದಲ್ಲಿ ಪರಸ್ಪರ ವಿಜಯವನ್ನು ಬಯಸುತ್ತಿದ್ದರು. ಅವರಿಬ್ಬರ ಆ ತುಮುಲ ಸಂಗ್ರಾಮ ಭಯಂಕರವಾಗಿತ್ತು.॥33॥

ಮೂಲಮ್ - 34

ವಿಕ್ರಾಂತೌ ಬಲಸಂಪನ್ನಾವುಭೌ ವಿಕ್ರಮಶಾಲಿನೌ ।
ಉಭೌ ಪರಮದುರ್ಜೇಯಾವತುಲ್ಯ ಬಲತೇಜಸೌ ॥

ಅನುವಾದ

ಆ ಇಬ್ಬರೂ ವೀರರು ಪರಾಕ್ರಮಿಗಳೂ, ಬಲಸಂಪನ್ನರೂ, ವಿಕ್ರಮಶಾಲಿಗಳೂ, ಪರಮ ದುರ್ಜಯರೂ, ಅನುಪಮ ಬಲ-ತೇಜದಿಂದ ಕೂಡಿದ್ದರಿಂದ ಅತ್ಯಂತ ದುರ್ಜಯರಾಗಿದ್ದರು.॥34॥

ಮೂಲಮ್ - 35

ಯುಯುಧಾತೇ ತದಾ ವೀರೌಗ್ರಹಾವಿವ ನಭೋಗತೌ ।
ಬಲವೃತ್ರಾವಿವ ಹಿ ತೌ ಯುಧಿ ವೈ ದುಷ್ಟ್ರಧರ್ಷಣೌ ॥

ಅನುವಾದ

ಆಕಾಶದಲ್ಲಿ ಎರಡು ಗ್ರಹರು ಢಿಕ್ಕಿ ಹೊಡೆದಂತೆ ಆ ವೀರರಿಬ್ಬರು ಕಾದಾಡುತ್ತಿದ್ದರು. ಆ ರಣರಂಗದಲ್ಲಿ ಅವರು ಇಂದ್ರ-ವೃತ್ರಾಸುರರಂತೆ ದುರ್ಧಷಕರಾಗಿ ಕಂಡು ಬರುತ್ತಿದ್ದರು.॥35॥

ಮೂಲಮ್ - 36

ಯುಯುಧಾತೇ ಮಹಾತ್ಮಾನೌ ತದಾ ಕೇಸರಿಣಾವಿವ ।
ಬಹೂನವಸೃಜಂತೌ ಹಿ ಮಾರ್ಗಣೌಘಾನವಸ್ಥಿತೌ ।
ನರರಾಕ್ಷಸಮುಖ್ಯೌ ತೌ ಪ್ರಹೃಷ್ಟಾವಭ್ಯಯುಧ್ಯತಾಮ್ ॥

ಅನುವಾದ

ಆ ಮಹಾಮನಸ್ವೀ ನರಶ್ರೇಷ್ಠ ಹಾಗೂ ರಾಕ್ಷಸ ಪ್ರವರ ವೀರರೂ ಎರಡು ಸಿಂಹಗಳು ಕಾದಾಡುತ್ತಿರುವಂತೆ ಯುದ್ಧ ಮಾಡುತ್ತಿದ್ದರು. ಅಸಂಖ್ಯ ಬಾಣಗಳ ಮಳೆಗರೆದು ಯುದ್ಧಭೂಮಿಯಲ್ಲಿ ಸ್ಥಿರವಾಗಿ ನಿಂತಿದ್ದರು. ಇಬ್ಬರೂ ಬಹಳ ಹರ್ಷೋತ್ಸಾಹದಿಂದ ಒಬ್ಬರು ಮತ್ತೊಬ್ಬರನ್ನು ಎದುರಿಸುತ್ತಿದ್ದರು.॥36॥

ಮೂಲಮ್ - 37

ತತಃ ಶರಾನ್ ದಾಶರಥಿಃ ಸಂಧಾಯಾಮಿತ್ರಕರ್ಶಣಃ ।
ಸಸರ್ಜ ರಾಕ್ಷಸೇಂದ್ರಾಯ ಕ್ರುದ್ಧಃ ಸರ್ಪ ಇವ ಶ್ವಸನ್ ॥

ಅನುವಾದ

ಅನಂತರ ದಶರಥನಂದನ ಶತ್ರುಸೂದನ ಲಕ್ಷ್ಮಣನು ಕುಪಿತನಾಗಿ ಸರ್ಪದಂತೆ ಬುಸುಗುಟ್ಟುತ್ತಾ ಅನೇಕ ಬಾಣಗಳನ್ನು ಇಂದ್ರಜಿತುವಿನ ಮೇಲೆ ಪ್ರಯೋಗಿಸಿದನು.॥37॥

ಮೂಲಮ್ - 38

ತಸ್ಯ ಜ್ಯಾತಲನಿರ್ಘೋಷಂ ಸ ಶ್ರುತ್ವಾ ರಾಕ್ಷಸಾಧಿಪಃ ।
ವಿವರ್ಣವದನೋ ಭೂತ್ವಾ ಲಕ್ಷ್ಮಣಂ ಸಮುದೈಕ್ಷತ ॥

ಅನುವಾದ

ಲಕ್ಷ್ಮಣನ ಧನುಷ್ಟಂಕಾರ ಕೇಳಿ ರಾಕ್ಷಸರಾಜ ಇಂದ್ರಜಿತುವಿನ ಮುಖ ಬಾಡಿತು ಹಾಗೂ ಸುಮ್ಮನೇ ಲಕ್ಷ್ಮಣನ ಕಡೆಗೆ ನೋಡುತ್ತಲೇ ಇದ್ದನು.॥38॥

ಮೂಲಮ್ - 39

ವಿವರ್ಣವದನಂ ದೃಷ್ಟ್ವಾ ರಾಕ್ಷಸಂ ರಾವಣಾತ್ಮಜಮ್ ।
ಸೌಮಿತ್ರಿಂ ಯುದ್ಧ ಸಂಯುಕ್ತಂ ಪ್ರತ್ಯುವಾಚ ವಿಭೀಷಣಃ ॥

ಅನುವಾದ

ರಾವಣಕುಮಾರ ಇಂದ್ರಜಿತುವಿನ ಉದಾಸವಾದ ಮುಖವನ್ನು ನೋಡಿ ವಿಭೀಷಣನು ಯುದ್ಧದಲ್ಲಿ ತೊಡಗಿದ್ದ ಸೌಮಿತ್ರಿಯಲ್ಲಿ ಹೇಳಿದನು.॥39॥

ಮೂಲಮ್ - 40

ನಿಮಿತ್ತಾನ್ಯುಪ ಪಶ್ಯಾಮಿ ಯಾನ್ಯಸ್ಮಿನ್ರಾವಣಾತ್ಮಜೇ ।
ತ್ವರ ತೇನ ಮಹಾಬಾಹೋ ಭಗ್ನ ಏಷ ನ ಸಂಶಯಃ ॥

ಅನುವಾದ

ಮಹಾಬಾಹೋ! ಈಗ ರಾವಣಪುತ್ರ ಇಂದ್ರಜಿತುವಿನಲ್ಲಿ ಕಂಡುಬರುವ ಲಕ್ಷಣಗಳಿಂದ ಖಂಡಿತವಾಗಿ ಅವನ ಉತ್ಸಾಹ ಭಂಗವಾದಂತೆ ತೋರುತ್ತದೆ. ಆದ್ದರಿಂದ ನೀನು ಬೇಗನೇ ಇವನ ವಧೆ ಮಾಡು.॥40॥

ಮೂಲಮ್ - 41

ತತಃ ಸಂಧಾಯ ಸೌಮಿತ್ರಿಃ ಶರಾನಾಶೀವಿಷೋಪಮಾನ್ ।
ಮುಮೋಚ ವಿಶಿಖಾಃಸ್ತಸ್ಮಿನ್ ಸರ್ಪಾನಿವ ವಿಷೋಲ್ಬಣಾನ್ ॥

ಅನುವಾದ

ಆಗ ಸುಮಿತ್ರಾಕುಮಾರನು ಮಹಾವಿಷದಿಂದ ಕೂಡಿದ ಸರ್ಪಗಳಂತಿದ್ದ ಭಯಂಕರ ಬಾಣಗಳನ್ನು ಇಂದ್ರಜಿತುವಿಗೆ ಗುರಿಯಿಟ್ಟು ಹೊಡೆದನು.॥41॥

ಮೂಲಮ್ - 42

ಶಕ್ರಾಶನಿಸಮಸ್ಪರ್ಶೈರ್ಲಕ್ಷ್ಮಣೇನಾಹತಃ ಶರೈಃ ।
ಮುಹೂರ್ತಮಭವನ್ಮೂಢಃ ಸರ್ವಸಂಕ್ಷುಭಿತೇಂದ್ರಿಯಃ ॥

ಅನುವಾದ

ಆ ಬಾಣಗಳ ಸ್ಪರ್ಶ ಇಂದ್ರನ ವಜ್ರಾಯುಧದಂತೆ ದುಃಸಹವಾಗಿತ್ತು. ಲಕ್ಷ್ಮಣನು ಪ್ರಯೋಗಿಸಿದ ಆ ಬಾಣಗಳ ಏಟಿನಿಂದ ಇಂದ್ರಜಿತು ಎರಡು ಘಳಿಗೆ ಮೂರ್ಛಿತನಾದನು. ಅವನ ಇಂದ್ರಿಯವೆಲ್ಲ ಕ್ಷುಬ್ಧಗೊಂಡವು.॥42॥

ಮೂಲಮ್ - 43

ಉಪಲಭ್ಯ ಮುಹೂರ್ತೇನ ಸಂಜ್ಞಾಂ ಪ್ರತ್ಯಾಗತೇಂದ್ರಿಯಃ ।
ದದರ್ಶಾವಸ್ಥಿತಂ ವೀರಮಾಜೌ ದಶರಥಾತ್ಮಜಮ್ ।
ಸೋಽಭಿಚಕ್ರಾಮ ಸೌಮಿತ್ರಿಂ ರೋಷಾತ್ ಸಂರಕ್ತಲೋಚನಃ ॥

ಅನುವಾದ

ಸ್ವಲ್ಪಹೊತ್ತಿನಲ್ಲಿ ಇಂದ್ರಿಯಗಳು ಸ್ವಸ್ಥವಾಗಿ ಎಚ್ಚರಗೊಂಡಾಗ ಅವನು ರಣರಂಗದಲ್ಲಿ ನಿಂತಿರುವ ಲಕ್ಷ್ಮಣನನ್ನು ನೋಡಿದನು. ನೋಡುತ್ತಲೆ ರೋಷದಿಂದ ಕಣ್ಣು ಕೆಂಪಾಗಿ ಸೌಮಿತ್ರಿಯ ಎದುರಿಗೆ ಬಂದನು.॥43॥

ಮೂಲಮ್ - 44

ಅಬ್ರವೀಚ್ಛೈನಮಾಸಾದ್ಯ ಪುನಃ ಸ ಪರುಷಂ ವಚಃ ।
ಕಿಂ ನ ಸ್ಮರಸಿ ತದ್ಯುದ್ಧೇ ಪ್ರಥಮೇ ಮತ್ಪರಾಕ್ರಮಮ್ ।
ನಿಬದ್ಧಸ್ತ್ವಂ ಸಹ ಭ್ರಾತ್ರಾ ಯದಾ ಯುಧಿ ವಿಚೇಷ್ಟಸೇ ॥

ಅನುವಾದ

ಅವನು ಕಠೋರವಾಣಿಯಿಂದ ನುಡಿಯುತ್ತಾ- ಸುಮಿತ್ರಾ ಕುಮಾರನೇ! ಮೊದಲು ನಾನು ಯುದ್ಧದಲ್ಲಿ ತೋರಿದ ಪರಾಕ್ರಮ ಮರೆತುಬಿಟ್ಟೆಯಾ? ಅಂದು ನಿಮ್ಮಿಬ್ಬರನ್ನೂ ನಾನು ಬಂಧಿಸಿದ್ದೆ. ಆಗ ನೀನು ಯುದ್ಧಭೂಮಿಯಲ್ಲಿ ಚಡಪಡಿಸುತ್ತಿದ್ದೆ.॥44॥

ಮೂಲಮ್ - 45

ಯುವಾಂ ಖಲು ಮಹಾಯುದ್ಧೇ ವಜ್ರಾಶನಿಸಮೈಃ ಶರೈಃ ।
ಶಾಯಿತೌ ಪ್ರಥಮಂ ಭೂಮೌ ವಿಸಂಜ್ಞೌ ಸಪುರಃ ಸರೌ ॥

ಅನುವಾದ

ಆ ಮಹಾಯುದ್ಧದಲ್ಲಿ ವಜ್ರಾಯುಧ ಮತ್ತು ಸಿಡಿಲಿನಂತಹ ತೇಜಸ್ವೀ ಬಾಣಗಳಿಂದ ನಾನು ನಿಮ್ಮಿಬ್ಬರನ್ನು ನೆಲದ ಮೇಲೆ ಮಲಗಿಸಿಬಿಟ್ಟಿದ್ದೆ. ನೀವಿಬ್ಬರೂ ಪ್ರಧಾನ ಸೈನಿಕರೊಂದಿಗೆ ಮೂರ್ಛೆ ಹೋಗಿದ್ದೀರಿ.॥45॥

ಮೂಲಮ್ - 46

ಸ್ಮೃತಿರ್ವಾ ನಾಸ್ತಿ ತೇ ಮನ್ಯೇ ವ್ಯಕ್ತಂ ವಾ ಯಮಸಾದನಮ್ ।
ಗಂತುಮಿಚ್ಛಸಿ ಯನ್ಮಾಂ ತ್ವಮಾಧರ್ಷಯಿತುಮಿಚ್ಛಸಿ ॥

ಅನುವಾದ

ಇಲ್ಲವೇ ಅವೆಲ್ಲ ಮಾತುಗಳು ನಿನಗೆ ನೆನಪಿಲ್ಲ ಎಂದೇ ತೋರುತ್ತದೆ. ನೀನು ಯಮಲೋಕಕ್ಕೆ ಹೋಗಬೇಕೆಂದು ಬಯಸುತ್ತಿರುವೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಅದರಿಂದ ನನ್ನನ್ನು ಸೋಲಿಸಲು ಇಚ್ಛಿಸುತ್ತಿರುವೆ.॥46॥

ಮೂಲಮ್ - 47

ಯದಿ ತೇ ಪ್ರಥಮೇ ಯುದ್ಧೇ ನದೃಷ್ಟೋ ಮತ್ಪರಾಕ್ರಮಃ ।
ಅದ್ಯ ತ್ವಾಂ ದರ್ಶಯಿಷ್ಯಾಮಿ ತಿಷ್ಠೇದಾನೀಂ ವ್ಯವಸ್ಥಿತಃ ॥

ಅನುವಾದ

ಮೊದಲು ಯುದ್ಧದಲ್ಲಿ ನನ್ನ ಪರಾಕ್ರಮ ನೋಡದಿದ್ದರೆ ಇಂದು ತೋರಿಸಿಕೊಡುವೆನು. ಈಗ ಸ್ಥಿರವಾಗಿ ನಿಂತುಕೊ.॥47॥

ಮೂಲಮ್ - 48

ಇತ್ಯುಕ್ತ್ವಾ ಸಪ್ತಭಿರ್ಬಾಣೈರಭಿವಿವ್ಯಾಧ ಲಕ್ಷ್ಮಣಮ್ ।
ದಶಭಿಸ್ತು ಹನೂಮಂತಂ ತೀಕ್ಷ್ಣಧಾರೈಃ ಶರೋತ್ತಮೈಃ ॥

ಅನುವಾದ

ಹೀಗೆ ಹೇಳಿ ಹರಿತವಾದ ಏಳು ಬಾಣಗಳಿಂದ ಲಕ್ಷ್ಮಣನನ್ನು ಘಾಸಿಪಡಿಸಿ, ಹತ್ತು ಉತ್ತಮ ಸಾಯಕ ಗಳಿಂದ ಹನುಮಂತನ ಮೇಲೆ ಪ್ರಹರಿಸಿದನು.॥48॥

ಮೂಲಮ್ - 49

ತತಃ ಶರಶತೇನೈವ ಸುಪ್ರಯುಕ್ತೇನ ವೀರ್ಯವಾನ್ ।
ಕ್ರೋಧಾದ್ವಗುಣಸಂರಬ್ಧೋ ನಿರ್ಬಿಭೇದ ವಿಭೀಷಣಮ್ ॥

ಅನುವಾದ

ಅನಂತರ ಇಮ್ಮಡಿ ರೋಷಗೊಂಡು ಆ ಪರಾಕ್ರಮೀ ನಿಶಾಚರನು ಚೆನ್ನಾಗಿರುವ ನೂರು ಬಾಣಗಳಿಂದ ವಿಭೀಷಣನನ್ನು ಕ್ರೋಧದಿಂದ ಕ್ಷತ-ವಿಕ್ಷತಗೊಳಿಸಿದನು.॥49॥

ಮೂಲಮ್ - 50

ತದ್ದೃಷ್ಟ್ವೇಂದ್ರಜಿತಾ ಕರ್ಮ ಕೃತಂ ರಾಮಾನುಜಸ್ತದಾ ।
ಅಚಿಂತಯಿತ್ವಾ ಪ್ರಹಸನ್ನೈತತ್ ಕಿಂಚಿದಿತಿ ಬ್ರುವನ್ ॥

ಅನುವಾದ

ಇಂದ್ರಜಿತನು ತೋರಿದ ಈ ಪರಾಕ್ರಮವನ್ನು ನೋಡಿ ರಾಮಾನುಜ ಲಕ್ಷ್ಮಣನು ಅದನ್ನು ಗಣನೆಗೆ ತಾರದೆ, ನಗು ನಗುತ್ತಾ ಹೇಳಿದನು - ಇದು ಏನೂ ಇಲ್ಲ.॥50॥

ಮೂಲಮ್ - 51

ಮುಮೋಚ ಸ ಶರಾನ್ ಘೋರಾನ್ಸಂಗೃಹ್ಯ ನರಪುಂಗವಃ
ಅಭೀತವದನಃ ಕ್ರುದ್ಧೋ ರಾವಣಿಂ ಲಕ್ಷ್ಮಣೋ ಯುಧಿ ॥

ಅನುವಾದ

ಜೊತೆಗೇ ಆ ನರಶ್ರೇಷ್ಠ ಲಕ್ಷ್ಮಣನ ಮುಖದಲ್ಲಿ ಭಯದ ಛಾಯೆಯೂ ಇರಲಿಲ್ಲ. ಅವನು ಯುದ್ಧದಲ್ಲಿ ಕುಪಿತನಾಗಿ ಭಯಂಕರ ಬಾಣವನ್ನು ಕೈಗೆತ್ತಿಕೊಂಡು ರಾವಣಕುಮಾರ ನಿಗೆ ಗುರಿಯಿಟ್ಟು ಪ್ರಯೋಗಿಸಿದನು.॥51॥

ಮೂಲಮ್ - 52

ನೈವಂ ರಣಗತಾಃ ಶೂರಾಃ ಪ್ರಹರಂತಿ ನಿಶಾಚರ ।
ಲಘವಶ್ಚಾಲ್ಪವೀರ್ಯಾಶ್ಚ ಶರಾಹೀಮೇ ಸುಖಾಸ್ತವ ॥

ಅನುವಾದ

ಮತ್ತೆ ಹೇಳಿದ- ನಿಶಾಚರನೇ! ರಣರಂಗಕ್ಕೆ ಬಂದ ಯೋಧರು ಇಂತಹ ದುರ್ಬಲವಾದ, ಅಲ್ಪನಾದ ಬಾಣಗಳಿಂದ ಪ್ರಹಾರ ಮಾಡುವುದಿಲ್ಲ. ಇವುಗಳಿಂದ ಕಷ್ಟವಾಗದೆ ಸುಖವೇ ಆಗುತ್ತದೆ.॥52॥

ಮೂಲಮ್ - 53

ನೈವಂ ಶೂರಾಸ್ತು ಯುಧ್ಯಂತೇ ಸಮರೇ ಜಯಕಾಂಕ್ಷಿಣಃ ।
ಇತ್ಯೇವಂ ತಂ ಬ್ರುವನ್ ಧ್ವನೀ ಶರೈರಭಿವವರ್ಷ ಹ ॥

ಅನುವಾದ

ಯುದ್ಧದ ಇಚ್ಛೆಯುಳ್ಳ ವೀರರು ಯುದ್ಧದಲ್ಲಿ ಈ ರೀತಿ ಮಾಡುವುದಿಲ್ಲ. ಎಂದು ಹೇಳುತ್ತಾ ಧನುರ್ಧರ ವೀರ ಲಕ್ಷ್ಮಣನು ಆ ರಾಕ್ಷಸನ ಮೇಲೆ ಬಾಣಗಳ ಮಳೆಗರೆದನು.॥53॥

ಮೂಲಮ್ - 54

ತಸ್ಯ ಬಾಣೈಃ ಸುವಿಧ್ವಸ್ತಂ ಕವಚಂ ಕಾಂಚನಂ ಮಹತ್ ।
ವ್ಯಶೀರ್ಯತ ರಥೋಪಸ್ಥೇ ತಾರಾಜಾಲಮಿವಾಂಬರಾತ್ ॥

ಅನುವಾದ

ಲಕ್ಷ್ಮಣನ ಬಾಣಗಳಿಂದ ಆಕಾಶದಿಂದ ನಕ್ಷತ್ರಗಳ ಗುಂಪೇ ಧರೆಗೆ ಬೀಳುತ್ತಿವೆಯೋ ಎಂಬಂತೆ ಇಂದ್ರಜಿತನ ಸ್ವರ್ಣ ಕವಚವು ತುಂಡಾಗಿ ರಥದಲ್ಲಿ ಬಿದ್ದು ಚೆಲ್ಲಿಹೋಯಿತು.॥54॥

ಮೂಲಮ್ - 55

ವಿಧೂತವರ್ಮಾ ನಾರಾಚೈರ್ಬಭೂವ ಸ ಕೃತವ್ರಣಃ ।
ಇಂದ್ರಜಿತ್ಸಮರೇ ವೀರಃ ಪ್ರತ್ಯೂಷೇ ಭಾನುಮಾನಿವ ॥

ಅನುವಾದ

ಕವಚ ಪುಡಿಯಾದಾಗ ನಾರಾಚಗಳ ಪ್ರಹಾರ ದಿಂದ ಇಂದ್ರಜಿತುವಿನ ಸರ್ವಾಂಗವೂ ಗಾಯಗೊಂಡಿತು. ಅವನು ರಣರಂಗದಲ್ಲಿ ರಕ್ತರಂಜಿತನಾಗಿ ಪ್ರಾತಃಕಾಲದ ಸೂರ್ಯನಂತೆ ಕಂಗೊಳಿಸತೊಡಗಿದನು.॥55॥

ಮೂಲಮ್ - 56

ತತಃ ಶರಸಹಸ್ರೇಣ ಸಂಕ್ರುದ್ಧೋ ರಾವಣಾತ್ಮಜಃ ।
ಬಿಭೇದ ಸಮರೇ ವೀರೋ ಲಕ್ಷ್ಮಣಂ ಭೀಮವಿಕ್ರಮಃ ॥

ಅನುವಾದ

ಆಗ ಭಯಾನಕ ಪರಾಕ್ರಮೀ ವೀರ ರಾವಣಕುಮಾರನು ಅತ್ಯಂತ ಕುಪಿತನಾಗಿ ಸಮರಾಂಗಣದಲ್ಲಿ ಲಕ್ಷ್ಮಣನನ್ನು ಸಾವಿರಾರು ಬಾಣಗಳಿಂದ ಗಾಯಗೊಳಿಸಿದನು.॥56॥

ಮೂಲಮ್ - 57

ವ್ಯಶೀರ್ಯತ ಮಹದ್ದಿವ್ಯಂ ಕವಚಂ ಲಕ್ಷ್ಮಣಸ್ಯ ತು ।
ಕೃತಪ್ರತಿಕೃತಾನ್ಯೋನ್ಯಂ ಬಭೂವತುರರಿಂದಮೌ ॥

ಅನುವಾದ

ಇದರಿಂದ ಲಕ್ಷ್ಮಣನ ದಿವ್ಯ ವಿಶಾಲ ಕವಚವೂ ಛಿನ್ನಭಿನ್ನವಾಯಿತು. ಅವರಿಬ್ಬರೂ ಶತ್ರುದಮನ ವೀರರು ಒಬ್ಬರು ಮತ್ತೊಬ್ಬರ ಪ್ರಹಾರದ ಉತ್ತರ ಕೊಡುತ್ತಿದ್ದರು.॥57॥

ಮೂಲಮ್ - 58

ಅಭೀಕ್ಷ್ಣಂ ನಿಃಶ್ವಸಂತೌ ತೌ ಯುಧ್ಯೇತಾಂ ತುಮುಲಂ ಯುಧಿ ।
ಶರಸಂಕೃತ್ತ ಸರ್ವಾಂಗೌ ಸರ್ವತೋ ರುಧಿರೋಕ್ಷಿತೌ ॥

ಅನುವಾದ

ಅವರು ಪದೇ ಪದೇ ನಿಟ್ಟುಸಿರುಬಿಡುತ್ತಾ ಭಯಾನಕ ಯುದ್ಧ ಮಾಡತೊಡಗಿದರು. ಯುದ್ಧದಲ್ಲಿ ಬಾಣಾಘಾತಗಳಿಂದ ಇಬ್ಬರ ಶರೀರಗಳು ಕ್ಷತ-ವಿಕ್ಷತವಾಗಿದ್ದವು. ಇದರಿಂದ ಇಬ್ಬರೂ ರಕ್ಷಸಿಕ್ತರಾಗಿದ್ದರು.॥58॥

ಮೂಲಮ್ - 59

ಸುದೀರ್ಘಕಾಲಂ ತೌ ವೀರಾವನ್ಯೋನ್ಯಂ ನಿಶಿತೈಃ ಶರೈಃ ।
ತತಕ್ಷತುರ್ಮಹಾತ್ಮಾನೌ ರಣಕರ್ಮವಿಶಾರದೌ ।
ಬಭೂವತುಶ್ಚಾತ್ಮಜಯೇ ಯತ್ತೌ ಭೀಮಪರಾಕ್ರಮೌ ॥

ಅನುವಾದ

ಇಬ್ಬರೂ ಬಹಳ ಹೊತ್ತು ಒಬ್ಬರು ಮತ್ತೊಬ್ಬರ ಮೇಲೆ ತೀಕ್ಷ್ಣವಾದ ಬಾಣಗಳನ್ನು ಪ್ರಯೋಗಿಸುತ್ತಿದ್ದರು. ಮಹಾತ್ಮರಿಬ್ಬರೂ ಯುದ್ಧ ಕಲೆಯಲ್ಲಿ ನಿಪುಣರಾಗಿದ್ದರು. ಇಬ್ಬರೂ ಭಯಂಕರ ಪರಾಕ್ರಮ ಪ್ರಕಟಿಸುತ್ತಾ ತಮ್ಮ ತಮ್ಮ ವಿಜಯಕ್ಕಾಗಿ ಪ್ರಯತ್ನಶೀಲರಾಗಿದ್ದರು.॥59॥

ಮೂಲಮ್ - 60

ತೌ ಶರೌಘೈಸ್ತಥಾಕೀರ್ಣೌ ನಿಕೃತ್ತಕವಚಧ್ವಜೌ ।
ಸ್ರವಂತೌ ರುಧಿರಂ ಚೋಷ್ಣಂ ಜಲಂ ಪ್ರಸ್ರವಣಾವಿವ ॥

ಅನುವಾದ

ಇಬ್ಬರ ಶರೀರಗಳು ಬಾಣಗಳಿಂದ ವ್ಯಾಪ್ತವಾಗಿದ್ದವು. ಇಬ್ಬರ ಕವಚ ಮತ್ತು ಧ್ವಜಗಳು ತುಂಡಾಗಿದ್ದವು. ಎರಡು ತೊರೆಗಳು ಹರಿಯುವಂತೆ ಇಬ್ಬರ ಶರೀರಗಳಿಂದ ಬಿಸಿಬಿಸಿ ರಕ್ತ ಹರಿಯುತ್ತಿತ್ತು.॥60॥

ಮೂಲಮ್ - 61

ಶರವರ್ಷಂ ತತೋ ಘೋರಂ ಮುಂಚಿತೋರ್ಭೀಮನಿಃಸ್ವನಮ್ ।
ಸಾಸಾರಯೋರಿವಾಕಾಶೇ ನೀಲಯೋಃ ಕಾಲಮೇಘಯೋಃ ॥

ಅನುವಾದ

ಇಬ್ಬರೂ ಭಯಂಕರ ಗರ್ಜನೆಯೊಂದಿಗೆ ಬಾಣಗಳ ಮಳೆ ಸುರಿಸುತ್ತಿದ್ದರು. ಪ್ರಳಯಕಾಲದ ಎರಡು ಕಪ್ಪಾದ ಮೋಡಗಳು ನೀರು ಸುರಿಸುವಂತೆ ಅನಿಸುತ್ತಿತ್ತು.॥61॥

ಮೂಲಮ್ - 62

ತಯೋರಥ ಮಹಾನ್ಕಾಲೋ ವ್ಯತೀಯಾದ್ ಯುಧ್ಯಮಾನಯೋಃ ।
ನ ಚ ತೌ ಯುದ್ಧವೈಮುಖ್ಯಂ ಕ್ಲ್ರಮಂ ಚಾಪ್ಯುಪಜಗ್ಮತುಃ ॥

ಅನುವಾದ

ಕಾದಾಡುತ್ತಾ ಬಹಳ ಸಮಯ ಕಳೆದರೂ ಇಬ್ಬರೂ ವೀರರೂ ಯುದ್ಧದಿಂದ ವಿಮುಖರಾಗಲಿಲ್ಲ. ಮತ್ತು ಬಳಲಿಕೆಯು ಕಂಡುಬರಲಿಲ್ಲ.॥62॥

ಮೂಲಮ್ - 63

ಅಸ್ತ್ರಾಣ್ಯಸ್ತ್ರ ವಿದಾಂ ಶ್ರೇಷ್ಠೌ ದರ್ಶಯಂತೌ ಪುನಃ ಪುನಃ ।
ಶರಾನುಚ್ಚಾವಚಾಕಾರಾನಂತರಿಕ್ಷೇ ಬಬಂಧತುಃ ॥

ಅನುವಾದ

ಶ್ರೇಷ್ಠ ಅಸ್ತ್ರವೇತ್ತರಾದ ಇಬ್ಬರೂ ಪದೇ ಪದೇ ಅಸ್ತ್ರಗಳನ್ನು ಪ್ರದರ್ಶಿಸುತ್ತಿದ್ದರು. ಅವರು ಆಕಾಶದಲ್ಲಿ ಬಾಣಗಳಿಂದಲೇ ಬಲೆಯನ್ನು ನೆಯ್ದಿದ್ದರು.॥63॥

ಮೂಲಮ್ - 64

ವ್ಯಪೇತದೋಷಮಸ್ಯಂತೌ ಲಘುಚಿತ್ರಂ ಚ ಸುಷ್ಠು ಚ ।
ಉಭೌ ತೌ ತುಮುಲಂ ಘೋರಂ ಚಕ್ರತುರ್ನರರಾಕ್ಷಸೌ ॥

ಅನುವಾದ

ಆದಾನ-ಸಂಧಾನ-ಪ್ರಯೋಗಗಳಲ್ಲಿ ಯಾವುದೇ ದೋಷವಿಲ್ಲದೆ, ಚಿತ್ರವಿಚಿತ್ರವಾಗಿ ಚೆನ್ನಾಗಿ ಬಾಣಗಳನ್ನು ಬಿಡುತ್ತಾ ಲಕ್ಷ್ಮಣ-ಇಂದ್ರಜಿತರು ಭಯಂಕರವಾಗಿ ಯುದ್ಧ ಮಾಡುತ್ತಿದ್ದರು.॥64॥

ಮೂಲಮ್ - 65

ತಯೋಃ ಪೃಥಕ್ ಪೃಥಗ್ ಭೀಮಃ ಶುಶ್ರುವೇ ತಲನಿಸ್ವನಃ ।
ಸ ಕಂಪಂ ಜನಯಾಮಾಸನಿರ್ಘಾತ ಇವ ದಾರುಣಃ ॥

ಅನುವಾದ

ಬಾಣಗಳನ್ನು ಬಿಡುತ್ತಾ ಇಬ್ಬರ ಅಂಗೈಶಬ್ದವು, ಪ್ರತ್ಯಂಚೆಯ ಭಯಂಕರ ತುಮುಲನಾದ ಬೇರೆ ಬೇರೆಯಾಗಿ ಕೇಳಿ ಬರುತ್ತಿತ್ತು. ಆ ಭಯಂಕರ ಶಬ್ದವು ಭಯಂಕರ ವಜ್ರಪಾತದಂತೆ ಶ್ರೋತೃಗಳ ಹೃದಯ ನಡುಗಿಸುತ್ತಿತ್ತು.॥65॥

ಮೂಲಮ್ - 66

ತಯೋಃ ಸ ರ್ಭ್ರಾಜತೇ ಶಬ್ದಸ್ತದಾ ಸಮರಮತ್ತಯೋಃ ।
ಸುಘೋರಯೋರ್ನಿಷ್ಟ ನತೋರ್ಗಗನೇ ಮೇಘಯೋರಿವ ॥

ಅನುವಾದ

ಅವರಿಬ್ಬರ ರಣೋನ್ಮತ್ತ ವೀರರ ಆ ಶಬ್ದವು ಆಕಾಶದಲ್ಲಿ ಪರಸ್ಪರ ಢಿಕ್ಕಿ ಹೊಡೆಯುವ ಭಯಂಕರ ಮೇಘಗಳಂತೆ ಸುಶೋಭಿತವಾಗಿತ್ತು.॥66॥

ಮೂಲಮ್ - 67

ಸುವರ್ಣಪುಂಖೈರ್ನಾರಾಚೈರ್ಬಲವಂತೌ ಕೃತವ್ರಣೌ ।
ಪ್ರಸುಸ್ರುವಾತೇ ರುಧಿರಂ ಕೀರ್ತಿಮಂತೌ ಜಯೇ ಧೃತೌ ॥

ಅನುವಾದ

ಆ ಇಬ್ಬರೂ ಬಲವಂತ ಯೋಧರು ಸ್ವರ್ಣಪಂಖವುಳ್ಳ ನಾರಾಚಗಳಿಂದ ಗಾಯಗೊಂಡು ಶರೀರಗಳಿಂದ ರಕ್ತ ಹರಿಯುತ್ತಿತ್ತು. ಯಶಸ್ವೀ ಅವರಿಬ್ಬರೂ ತಮ್ಮ ತಮ್ಮ ವಿಜಯಕ್ಕಾಗಿ ಪ್ರಯತ್ನಿಸುತ್ತಿದ್ದರು.॥67॥

ಮೂಲಮ್ - 68

ತೇ ಗಾತ್ರಯೋರ್ನಿಪತಿತಾ ರುಕ್ಮಪುಂಖಾಃ ಶರಾ ಯುಧಿ ।
ಅಸೃಗ್ದಿದ್ಧಾ ವಿನಿಷ್ಪೇತುರ್ವಿವಿಶುರ್ಧರಣೀತಲಮ್ ॥

ಅನುವಾದ

ಯುದ್ಧದಲ್ಲಿ ಪ್ರಯೋಗಿಸಿದ ಸುವರ್ಣ ಪಂಖಗಳುಳ್ಳ ಬಾಣಗಳು ಪರಸ್ಪರ ಶರೀರಗಳಲ್ಲಿ ನಾಟಿಕೊಂಡು ರಕ್ತದಿಂದ ತೊಯ್ದು ನೆಲಕ್ಕೆ ಬೀಳುತ್ತಿದ್ದವು.॥68॥

ಮೂಲಮ್ - 69

ಅನ್ಯೇ ಸುನಿಶಿತೈಃ ಶಸ್ತ್ರೈರಾಕಾಶೇ ಸಂಜಘಟ್ಟಿರೇ ।
ಬಭಂಜು ಶ್ಚಿಚ್ಛಿ ದುಚ್ಚೈವ ತಯೋರ್ಬಾಣಾಃ ಸಹಸ್ರಶಃ ॥

ಅನುವಾದ

ಅವರ ಸಾವಿರಾರು ಬಾಣಗಳು ಆಕಾಶದಲ್ಲಿ ತೀಕ್ಷ್ಮ ಶಸ್ತ್ರಗಳೊಂದಿಗೆ ಡಿಕ್ಕಿಹೊಡೆದು, ಅವನ್ನು ಕತ್ತರಿಸಿ ತುಂಡು ತುಂಡುಗಳಾಗಿ ಸುತ್ತಿದ್ದವು.॥69॥

ಮೂಲಮ್ - 70

ಸ ಬಭೂವ ರಣೋಘೋರಸ್ತಯೋರ್ಬಾಣಮಯಶ್ಚಯಃ ।
ಅಗ್ನಿಭ್ಯಾಮಿವ ದೀಪ್ತಾಭ್ಯಾಂ ಸತ್ರೇ ಕುಶಮಯಶ್ಚ ಯಃ ॥

ಅನುವಾದ

ಹೀಗೆ ಭಯಂಕರ ಯುದ್ಧ ನಡೆಯುತ್ತಿತ್ತು. ಅವರಿಬ್ಬರ ಬಾಣ ಸಮೂಹವು ಯಜ್ಞದಲ್ಲಿ ಗಾರ್ಹಪತ್ಯ ಮತ್ತು ಆಹವನೀಯ ಎಂಬ ಪ್ರಜ್ವಲಿತ ಎರಡು ಅಗ್ನಿಗಳೊಂದಿಗೆ ಹಾಸಿದ ದರ್ಭೆಗಳ ರಾಶಿಯಂತೆ ಅನಿಸುತ್ತಿತ್ತು.॥70॥

ಮೂಲಮ್ - 71

ತಯೋಃ ಕೃತವ್ರಣೌ ದೇಹೌ ಶುಶುಭಾತೇ ಮಹಾತ್ಮನೋಃ ।
ಸಪುಷ್ಪಾವಿವ ನಿಷ್ಪತ್ರೌ ವನೇ ಕಿಂಶುಕಶಾಲ್ಮಲೀ ॥

ಅನುವಾದ

ಮಹಾಮನಸ್ವೀ ಆ ವೀರರಿಬ್ಬರ ಶರೀರಗಳು ಕ್ಷತ-ವಿಕ್ಷತವಾಗಿ ಕಾಡಿನಲ್ಲಿನ ಎಲೆಗಳಿಲ್ಲದ ಕೆಂಪು ಹೂವು ಗಳಿಂದ ತುಂಬಿದ ಮುತ್ತುಗ ಮತ್ತು ಬೂರುಗದ ಮರಗಳಂತೆ ಸುಶೋಭಿತರಾಗಿದ್ದವು.॥71॥

ಮೂಲಮ್ - 72

ಚಕ್ರತುಸ್ತುಮುಲಂ ಘೋರಂ ಸಂನಿಪಾತಂ ಮುಹುರ್ಮುಹುಃ ।
ಇಂದ್ರಜಿಲ್ಲಕ್ಷ್ಮಣಶ್ಚೈವ ಪರಸ್ಪರ ಜಯೈಷಿಣೌ ॥

ಅನುವಾದ

ಒಬ್ಬರು - ಮತ್ತೊಬ್ಬರನ್ನು ಜಯಿಸಬೇಕೆಂಬ ಇಚ್ಛೆಯುಳ್ಳ ಇಂದ್ರಜಿತು ಮತ್ತು ಲಕ್ಷ್ಮಣ ಕ್ಷಣಕ್ಷಣಕ್ಕೂ ಭಯಂಕರ ಪ್ರಹರಿಸುತ್ತಾ ಘೋರವಾದ ಯುದ್ಧ ಮಾಡುತ್ತಿದ್ದರು.॥72॥

ಮೂಲಮ್ - 73

ಲಕ್ಷ್ಮಣೋ ರಾವಣಿಂ ಯುದ್ಧೇ ರಾವಣಿಶ್ಚಾಪಿ ಲಕ್ಷ್ಮಣಮ್ ।
ಅನ್ಯೋನ್ಯಂ ತಾವಭಿಘ್ನಂತೌ ನ ಶ್ರಮಂ ಪ್ರತಿಪದ್ಯತಾಮ್ ॥

ಅನುವಾದ

ಲಕ್ಷ್ಮಣನು ರಾವಣಿಯನ್ನು, ರಾವಣಿಯು ಲಕ್ಷ್ಮಣನನ್ನೂ ಪ್ರಹರಿಸು ತ್ತಿದ್ದರೂ ಯಾವ ವೀರನೂ ಆಯಾಸಗೊಳ್ಳಲಿಲ್ಲ.॥73॥

ಮೂಲಮ್ - 74

ಬಾಣಜಾಲೈಃ ಶರೀರಸ್ಥೈರವಗಾಢೈಸ್ತರಸ್ವಿನೌ ।
ಶುಶುಭಾತೇ ಮಹಾವೀರ್ಯೌ ಪ್ರರೂಢಾವಿವ ಪರ್ವತೌ ॥

ಅನುವಾದ

ವೇಗಶಾಲೀ ವೀರರಿಬ್ಬರ ಶರೀರಗಳಲ್ಲಿ ಬಾಣಗಳು ನೆಟ್ಟಿದ್ದವು. ಅದರಿಂದ ಆ ಪರಾಕ್ರಮಿ ಯೋಧರಿಬ್ಬರೂ ವೃಕ್ಷಗಳು ತುಂಬಿರುವ ಎರಡು ಪರ್ವತಗಳಂತೆ ಶೋಭಿಸುತ್ತಿದ್ದರು.॥74॥

ಮೂಲಮ್ - 75

ತಯೋ ರುಧಿರಸಿಕ್ತಾನಿ ಸಂವೃತಾನಿ ಶರೈರ್ಭೃಶಮ್ ।
ಬಭ್ರಾಜುಃ ಸರ್ವಗಾತ್ರಾಣಿ ಜ್ವಲಂತ ಇವ ಪಾವಕಾಃ ॥

ಅನುವಾದ

ಬಾಣಗಳಿಂದ ಮುಚ್ಚಿಹೋದ, ರಕ್ತದಿಂದ ತೊಯ್ದು ಹೋದ ಅವರಿಬ್ಬರ ಇಡೀ ಶರೀರಗಳು ಉರಿಯುವ ಬೆಂಕಿಯಂತೆ ಕಾಣುತ್ತಿದ್ದವು.॥75॥

ಮೂಲಮ್ - 76

ತಯೋರಥ ಮಹಾನ್ಕಾಲೋ ವ್ಯತೀಯಾದ್ಯುಧ್ಯಮಾನಯೋಃ ।
ನ ಚ ತೌ ಯುದ್ಧ ವೈಮುಖ್ಯಂ ಶ್ರಮಂ ಚಾಪ್ಯಭಿಜಗ್ಮತುಃ ॥

ಅನುವಾದ

ಹೀಗೆ ಯುದ್ಧ ಮಾಡುತ್ತಾ ಮಾಡುತ್ತಾ ಬಹಳ ಹೊತ್ತು ಕಳೆದುಹೋಯಿತು. ಆದರೆ ಅವರಿಬ್ಬರಲ್ಲಿ ಯಾರೂ ಯುದ್ಧದಿಂದ ವಿಮುಖರಾಗಲಿಲ್ಲ; ಆಯಾಸಗೊಳ್ಳಲೂ ಇಲ್ಲ.॥76॥

ಮೂಲಮ್ - 77

ಅಥ ಸಮರಪರಿಶ್ರಮಂ ನಿಹಂತುಂ
ಸಮರಮುಖೇಷ್ವಜಿತಸ್ಯ ಲಕ್ಷ್ಮಣಸ್ಯ ।
ಪ್ರಿಯಹಿತಮುಪಪಾದಯನ್ ಮಹಾತ್ಮಾ
ಸಮರಮುಪೇತ್ಯ ವಿಭೀಷಣೋಽವತಸ್ಥೇ ॥

ಅನುವಾದ

ಯುದ್ಧದಲ್ಲಿ ಪರಾಜಿತನಾಗದಿದ್ದ ಲಕ್ಷ್ಮಣನಿಗೆ ಯುದ್ಧದಿಂದಾದ ಶ್ರಮವನ್ನು ನಿವಾರಿಸಲು ಹಾಗೂ ಅವನ ಪ್ರಿಯವನ್ನೂ, ಹಿತವನ್ನೂ ಮಾಡಲಿಕ್ಕಾಗಿ ಮಹಾತ್ಮನಾದ ವಿಭೀಷಣನು ಲಕ್ಷ್ಮಣನ ಬಳಿಗೆ ಬಂದನು.॥77॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಎಂಭತ್ತೆಂಟನೆಯ ಸರ್ಗ ಪೂರ್ಣವಾಯಿತು.॥88॥