०८७ इन्द्रजिता विभीषणभर्त्सनम्

वाचनम्
ಭಾಗಸೂಚನಾ

ಇಂದ್ರಜಿತು ಮತ್ತು ವಿಭೀಷಣರ ರೋಷಪೂರ್ಣ ಸಂಭಾಷಣೆ

ಮೂಲಮ್ - 1

ಏವಮುಕ್ತ್ವಾ ತು ಸೌಮಿತ್ರಿಂ ಜಾತಹರ್ಷೋ ವಿಭೀಷಣಃ ।
ಧನುಷ್ಪಾಣಿಂ ತಮಾದಾಯ ತ್ವರಮಾಣೋ ಜಗಾಮ ಸಃ ॥

ಅನುವಾದ

ಹೀಗೆ ಹೇಳಿ ಹರ್ಷಗೊಂಡ ವಿಭೀಷಣನು ಧನುರ್ಧರ ಸೌಮಿತ್ರಿಯನ್ನು ಜೊತೆಗೂಡಿ ಅತ್ಯಂತ ವೇಗವಾಗಿ ಇಂದ್ರಜಿತುವಿದ್ದೆಡೆ ಹೋದನು.॥1॥

ಮೂಲಮ್ - 2

ಅವಿದೂರಂ ತತೋ ಗತ್ವಾ ಪ್ರವಿಶ್ಯ ತು ಮಹದ್ವನಮ್ ।
ಅದರ್ಶಯತ ತತ್ಕರ್ಮ ಲಕ್ಷ್ಮಣಾಯ ವಿಭೀಷಣಃ ॥

ಅನುವಾದ

ಸ್ವಲ್ಪ ದೂರ ಹೋಗಿ ವಿಭೀಷಣನು ಒಂದು ಮಹಾವನವನ್ನು ಪ್ರವೇಶಿಸಿ ಇಂದ್ರಜಿತುವಿನ ಕರ್ಮಾನುಷ್ಠಾನದ ಸ್ಥಾನವನ್ನು ಲಕ್ಷ್ಮಣನಿಗೆ ತೋರಿಸಿದನು.॥2॥

ಮೂಲಮ್ - 3

ನೀಲಜೀಮೂತ ಸಂಕಾಶಂ ನ್ಯಗ್ರೋಧಂ ಭೀಮದರ್ಶನಮ್ ।
ತೇಜಸ್ವೀ ರಾವಣಭ್ರಾತಾ ಲಕ್ಷ್ಮಣಾಯ ನ್ಯವೇದಯತ್ ॥

ಅನುವಾದ

ಅಲ್ಲೊಂದು ದೊಡ್ಡ ಆಲದ ಮರವು ಕಪ್ಪು ಮೋಡದಂತೆ ದಟ್ಟವಾಗಿ ಭಯಂಕರವಾಗಿ ಕಾಣುತ್ತಿತ್ತು. ತೇಜಸ್ವೀ ರಾವಣಾನುಜ ವಿಭೀಷಣನು ಲಕ್ಷ್ಮಣನಿಗೆ ಅಲ್ಲಿಯ ಎಲ್ಲ ವಸ್ತುಗಳನ್ನು ತೋರಿಸಿ ಹೇಳಿದನು.॥3॥

ಮೂಲಮ್ - 4

ಇಹೋಪಹಾರಂ ಭೂತಾನಾಂ ಬಲವಾನ್ರಾವಣಾತ್ಮಜಃ ।
ಉಪಹೃತ್ಯ ತತಃ ಪಶ್ಚಾತ್ ಸಂಗ್ರಾಮಮಭಿವರ್ತತೇ ॥

ಅನುವಾದ

ಸುಮಿತ್ರಾನಂದನ! ಈ ಬಲವಂತ ರಾವಣಕುಮಾರನು ಪ್ರತಿಸಲ ಇಲ್ಲಿಗೆ ಬಂದು ಭೂತಗಳಿಗೆ ಬಲಿಯನ್ನು ಕೊಟ್ಟು ಯುದ್ಧಭೂಮಿಗೆ ಬರುತ್ತಾನೆ.॥4॥

ಮೂಲಮ್ - 5

ಅದೃಶ್ಯಃ ಸರ್ವಭೂತಾನಾಂ ತತೋ ಭವತಿ ರಾಕ್ಷಸಃ ।
ನಿಹಂತಿ ಸಮರೇ ಶತ್ರೂನ್ ಬಧ್ನಾತಿ ಚ ಶರೋತ್ತಮೈಃ ॥

ಅನುವಾದ

ಇದರಿಂದ ರಣರಂಗದಲ್ಲಿ ಈ ರಾಕ್ಷಸನು ಸಮಸ್ತ ಪ್ರಾಣಿಗಳಿಗೆ ಅದೃಶನಾಗಿ, ಉತ್ತಮ ಬಾಣಗಳಿಂದ ಶತ್ರುವನ್ನು ಬಂಧಿಸಿ ಸಂಹರಿಸಿಬಿಡುತ್ತಾನೆ.॥5॥

ಮೂಲಮ್ - 6

ತಮಪ್ರವಿಷ್ಟಂ ನ್ಯಗ್ರೋಧಂ ಬಲಿನಂ ರಾವಣಾತ್ಮಜಮ್ ।
ವಿಧ್ವಂಸಯ ಶರೈದೀಪ್ತೈಃ ಸರಥಂ ಸಾಶ್ವಸಾರಥಿಮ್ ॥

ಅನುವಾದ

ಆದ್ದರಿಂದ ಇಂದ್ರಜಿತು ಈ ವಟವೃಕ್ಷದ ಬಳಿಗೆ ಬರುವುದರೊಳಗೆ ನೀನು ತೇಜಸ್ವೀ ಬಾಣಗಳಿಂದ ಅವನ ರಥಾಶ್ವ ಸಾರಥಿಯೊಂದಿಗೆ ನಾಶ ಮಾಡು.॥6॥

ಮೂಲಮ್ - 7

ತಥೇತ್ಯುಕ್ತ್ವಾಮಹಾತೇಜಾಃ ಸೌಮಿತ್ರಿರ್ಮಿತ್ರನಂದನಃ ।
ಬಭೂವಾವಸ್ಥಿತಸ್ತತ್ರ ಚಿತ್ರಂ ವಿಸ್ಫಾರಯನ್ಧನುಃ ॥

ಅನುವಾದ

‘ಹಾಗೆಯೇ ಆಗಲಿ’ ಎಂದು ಹೇಳಿ ಮಿತ್ರರಿಗೆ ಆನಂದವನ್ನುಂಟುಮಾಡುವ ಮಹಾತೇಜಸ್ವೀ ಸೌಮಿತ್ರಿಯು ತನ್ನ ಚಿತ್ರಿತವಾದ ಧನುಸ್ಸನ್ನು ಟೆಂಕರಿಸಿ ಅಲ್ಲಿ ನಿಂತುಕೊಂಡನು.॥7॥

ಮೂಲಮ್ - 8

ಸ ರಥೇನಾಗ್ನಿವರ್ಣೇನ ಬಲವಾನ್ ರಾವಣಾತ್ಮಜಃ ।
ಇಂದ್ರಜಿತ್ ಕವಚೀ ಧನ್ವೀ ಸಧ್ವಜಃ ಪ್ರತ್ಯದೃಶ್ಯತ ॥

ಅನುವಾದ

ಅಷ್ಟರಲ್ಲಿ ಬಲವಂತ ಇಂದ್ರಜಿತನು ಅಗ್ನಿಯಂತೆ ತೇಜಸ್ವೀ ರಥದಲ್ಲಿ ಕುಳಿತ, ಕವಚ-ಖಡ್ಗ ಮತ್ತು ಧ್ವಜದೊಂದಿಗೆ ಕಾಣಿಸಿಕೊಂಡನು.॥8॥

ಮೂಲಮ್ - 9

ತಮುವಾಚ ಮಹಾತೇಜಾಃ ಪೌಲಸ್ತ್ಯಮಪರಾಜಿತಮ್ ।
ಸಮಾಹ್ವಯೇ ತ್ವಾಂ ಸಮರೇ ಸಮ್ಯಗ್ಯುದ್ಧಂ ಪ್ರಯಚ್ಛಮೇ ॥

ಅನುವಾದ

ಆಗ ಮಹಾತೇಜಸ್ವೀ ಲಕ್ಷ್ಮಣನು ಅಪರಾಜಿತ ಪುಲಸ್ತ್ಯನಂದನ ಇಂದ್ರಜಿತನಲ್ಲಿ ಹೇಳಿದನು - ರಾಕ್ಷಸಕುಮಾರ! ನಾನು ನಿನ್ನನ್ನು ಯುದ್ಧಕ್ಕಾಗಿ ಆಹ್ವಾನಿಸುತ್ತಿದ್ದೇನೆ. ನೀನು ನನ್ನೊಡನೆ ನ್ಯಾಯೋಚಿತ ಯುದ್ಧಮಾಡು.॥9॥

ಮೂಲಮ್ - 10

ಏವಮುಕ್ತೋ ಮಹಾತೇಜಾ ಮನಸ್ವೀ ರಾವಣತ್ಮಜಃ ।
ಅಬ್ರವೀತ್ಪರುಷಂ ವಾಕ್ಯಂ ತತ್ರ ದೃಷ್ಟ್ವಾ ವಿಭೀಷಣಮ್ ॥

ಅನುವಾದ

ಲಕ್ಷ್ಮಣನು ಹೀಗೆ ಹೇಳಿದಾಗ ಮಹಾತೇಜಸ್ವೀ, ಮನಸ್ವೀ ರಾವಣಕುಮಾರನು ಅಲ್ಲಿ ವಿಭೀಷಣನು ಉಪಸ್ಥಿತನಾಗಿರುವುದನ್ನು ನೋಡಿ ಕಠೋರವಾದ ಮಾತುಗಳನ್ನು ಹೇಳಿದನು.॥10॥

ಮೂಲಮ್ - 11

ಇಹ ತ್ವಂ ಜಾತಸಂವೃದ್ಧಃ ಸಾಕ್ಷಾತ್ ಭ್ರಾತಾ ಪಿತುರ್ಮಮ ।
ಕಥಂ ದ್ರುಹ್ಯಸಿ ಪುತ್ರಸ್ಯ ಪಿತೃವ್ಯೋ ಮಮ ರಾಕ್ಷಸ ॥

ಅನುವಾದ

ರಾಕ್ಷಸನೇ! ಈ ಲಂಕೆಯಲ್ಲೇ ನೀನು ಹುಟ್ಟಿ ಬೆಳೆದೆ. ನೀನು ನನ್ನ ತಂದೆಯ ತಮ್ಮನು ಮತ್ತು ನನಗೆ ಚಿಕ್ಕಪ್ಪನಾಗಿರುವೆ. ಹಾಗಿರುವಾಗ ನೀನು ನಿನ್ನ ಮಗನಾದ ನನಗೆ ಹೇಗೆ ದ್ರೋಹ ಮಾಡುವೆ.॥11॥

ಮೂಲಮ್ - 12

ನ ಜ್ಞಾತಿತ್ವಂ ನ ಸೌಹಾರ್ದಂ ನ ಜಾತಿಸ್ತವ ದುರ್ಮತೇ ।
ಪ್ರಮಾಣಂ ನ ಚ ಸೌಂದರ್ಯಂ ನ ಧರ್ಮೋ ಧರ್ಮದೂಷಣ ॥

ಅನುವಾದ

ದುರ್ಮತಿಯೇ! ನಿನ್ನಲ್ಲಿ ಕುಟುಂಬದವರ ಕುರಿತು ಆತ್ಮೀಯತೆಯಾಗಲಿ, ಆತ್ಮೀಯ ಜನರಲ್ಲಿ ಸ್ನೇಹವಾಗಲೀ, ತನ್ನ ಜಾತಿಯ ಅಭಿಮಾನವಾಗಲೀ ಇಲ್ಲ. ನಿನ್ನಲ್ಲಿ ಕರ್ತವ್ಯ-ಅಕರ್ತವ್ಯದ ವಿವೇಚನೆ, ಭ್ರಾತೃಪ್ರೇಮ, ಧರ್ಮ ಏನೂ ಇಲ್ಲ. ನೀನು ರಾಕ್ಷಸ ಧರ್ಮವನ್ನು ಕಲಂಕಿತಗೊಳಿಸುವವನಾಗಿದ್ದೀಯ.॥12॥

ಮೂಲಮ್ - 13

ಶೋಚ್ಯಸ್ತ್ವಮಸಿ ದುರ್ಬುದ್ಧೇ ನಿಂದನೀಯಶ್ಚ ಸಾಧುಭಿಃ ।
ಯಸ್ತ್ವಂ ಸ್ವಜನಮುತ್ಸೃಜ್ಯ ಪರಭೃತ್ಯತ್ವಮಾಗತಃ ॥

ಅನುವಾದ

ದುರ್ಬುದ್ಧೇ! ನೀನು ಸ್ವಜನರನ್ನು ಪರಿತ್ಯಜಿಸಿ, ಇನ್ನೊಬ್ಬರ ದಾಸ್ಯವನ್ನು ಸ್ವೀಕರಿಸಿರುವೆ. ಆದ್ದರಿಂದ ನೀನು ಸತ್ಪುರುಷರ ನಿಂದೆ ಮತ್ತು ಶೋಕಕ್ಕೆ ಯೋಗ್ಯ ನಾಗಿದ್ದೀಯೆ.॥13॥

ಮೂಲಮ್ - 14

ನೈತಚ್ಛಿಥಿಲಯಾ ಬುದ್ಧ್ಯಾ ತ್ವಂ ವೇತ್ಸಿ ಮಹದಂತರಮ್ ।
ಕ್ವ ಚ ಸ್ವಜನಸಂವಾಸಃ ಕ್ವ ಚ ನೀಚ ಪರಾಶ್ರಯಃ ॥

ಅನುವಾದ

ನೀಚನಿಶಾಚರನೇ! ಸ್ವಜನರೊಡನೆ ಬಾಳಿ ಬದುಕುವುದೆಲ್ಲಿ? ನೀಚರಾದ ಇತರರನ್ನು ಆಶ್ರಯಿಸುವುದೆಲ್ಲಿ? ಒಂದಕ್ಕೊಂದು ಸಂಬಂಧವೇ ಇಲ್ಲ. ನಿನ್ನ ಶಿಥಿಲಬುದ್ಧಿಯಿಂದಾಗಿ ಇದರ ತಾರತಮ್ಯವನ್ನು ನೀನು ತಿಳಿದಿಲ್ಲ.॥14॥

ಮೂಲಮ್ - 15

ಗುಣವಾನ್ವಾ ಪರಜನಃ ಸ್ವಜನೋ ನಿರ್ಗುಣೋಽಪಿ ವಾ ।
ನಿರ್ಗುಣಃ ಸ್ವಜನಃ ಶ್ರೇಯಾನ್ ಯಃ ಪರಃ ಪರ ಏವ ಸಃ ॥

ಅನುವಾದ

ಇತರರು ಎಷ್ಟೇ ಗುಣವಂತನಿರಲೇನು? ಸ್ವಜನರು ಗುಣಹೀನರಾಗಿದ್ದರೂ ಗುಣದಿಂದ ಸ್ವಜನನೇ ಇತರರಿಂದ ಶ್ರೇಷ್ಠನು. ಏಕೆಂದರೆ ಇತರರು ಬೇರೆಯೇ ಆಗಿರುತ್ತಾರೆ, ಅವರು ಎಂದೂ ನಮ್ಮವರಾಗುವುದಿಲ್ಲ.॥15॥

ಮೂಲಮ್ - 16

ಯಃ ಸ್ವಪಕ್ಷಂ ಪರಿತ್ಯಜ್ಯ ಪರಪಕ್ಷಂ ನಿಷೇವತೇ ।
ಸ ಸ್ವಪಕ್ಷೇ ಕ್ಷಯಂ ಯಾತೇ ಪಶ್ಚಾತ್ ತೈ ರೇವ ಹನ್ಯತೇ ॥

ಅನುವಾದ

ತನ್ನ ಪಕ್ಷವನ್ನು ಬಿಟ್ಟು ಶತ್ರುಪಕ್ಷವನ್ನು ಸೇವಿಸುವವನು ತನ್ನ ಪಕ್ಷ ನಾಶವಾದ ಮೇಲೆ ಅವನಿಂದಲೇ ಹತನಾಗುತ್ತಾನೆ.॥16॥

ಮೂಲಮ್ - 17

ನಿರನುಕ್ರೋಶತಾ ಚೇಯಂ ಯಾದೃಶೀ ತೇ ನಿಶಾಚರ ।
ಸ್ವಜನೇನ ತ್ವಯಾ ಶಕ್ಯಂ ಪೌರುಷಂ ರಾವಣಾನುಜ ॥

ಅನುವಾದ

ರಾವಣಾನುಜನೇ! ನೀನು ಲಕ್ಷ್ಮಣನನ್ನು ಇಲ್ಲಿಗೆ ಕರೆತಂದು ನನ್ನ ವಧೆಗಾಗಿ ಪ್ರಯತ್ನಿಸಿದುದು ನಿರ್ದಯತೆಯೇ ಸರಿ. ಇಂತಹ ಕ್ರೂರ ಕಾರ್ಯಮಾಡಲು ಸ್ವಜನನಾದ ನಿನ್ನಂತಹವನಿಂದ ಮಾತ್ರ ಸಾಧ್ಯ.॥17॥

ಮೂಲಮ್ - 18

ಇತ್ಯುಕ್ತೋ ಭ್ರಾತೃಪುತ್ರೇಣ ಪ್ರತ್ಯುವಾಚ ವಿಭೀಷಣಃ ।
ಅಜಾನನ್ನಿವ ಮಚ್ಛೀಲಂ ಕಿಂ ರಾಕ್ಷಸ ವಿಕತ್ಥಸೇ ॥

ಅನುವಾದ

ಅಣ್ಣನ ಮಗನು ಹೇಳಿದ ಮಾತನ್ನು ಕೇಳಿ ವಿಭೀಷಣನು ಉತ್ತರಿಸಿದನು - ನೀನು ಇಂದು ಹೀಗೆ ಹರಟುತ್ತಿರುವೆ? ನಿನಗೆ ನನ್ನ ಸ್ವಭಾವ ತಿಳಿದಿಲ್ಲ ಎಂದೇ ಅನಿಸುತ್ತದೆ.॥18॥

ಮೂಲಮ್ - 19

ರಾಕ್ಷಸೇಂದ್ರ ಸುತಾಸಾಧೋ ಪಾರುಷ್ಯಂ ತ್ಯಜ ಗೌರವಾತ್ ।
ಕುಲೇ ಯದ್ಯಪ್ಯಹಂ ಜಾತೋ ರಕ್ಷಸಾಂ ಕ್ರೂರಕರ್ಮಣಾಮ್ ।
ಗುಣೋಯಃ ಪ್ರಥಮೋ ನೄಣಾಂ ತನ್ಮೇ ಶೀಲಮರಾಕ್ಷಸಮ್ ॥

ಅನುವಾದ

ಅಧಮನೇ! ರಾಜಕುಮಾರ! ಹಿರಿಯರಲ್ಲಿ ಗೌರವತೋರಿ ನೀನು ಈ ಕಠೋರತೆಯನ್ನು ತ್ಯಜಿಸು. ನನ್ನ ಜನ್ಮ ಕ್ರೂರಕರ್ಮಾ ರಾಕ್ಷಸ ಕುಲದಲ್ಲಿ ಆದರೂ ನನ್ನ ಶೀಲ ಸ್ವಭಾವ ರಾಕ್ಷಸರಂತೆ ಇಲ್ಲ. ಸತ್ಪುರುಷರ ಪ್ರಧಾನವಾದ ಸತ್ವಗುಣವನ್ನೇ ನಾನು ಆಶ್ರಯಿಸಿರುವೆನು.॥19॥

ಮೂಲಮ್ - 20

ನ ರಮೇ ದಾರುಣೇನಾಹಂ ನ ಚಾಧರ್ಮೇಣ ವೈ ರಮೇ ।
ಭ್ರಾತ್ರಾ ವಿಷಮಶೀಲೋಽಪಿ ಕಥಂ ಭ್ರಾತಾ ನಿರಸ್ಯತೇ ॥

ಅನುವಾದ

ಕ್ರೂರ ಕರ್ಮದಲ್ಲಿ ನನ್ನ ಮನಸ್ಸು ಹೋಗುವುದಿಲ್ಲ. ಅಧರ್ಮದಲ್ಲಿ ನನಗೆ ರುಚಿಯಿಲ್ಲ. ತನ್ನ ತಮ್ಮನ ಶೀಲಸ್ವಭಾವ ತನ್ನಿಂದ ವಿಪರೀತವಾಗಿದ್ದರೂ ಅಣ್ಣನಾದವನು ತಮ್ಮನನ್ನು ಹೇಗೆ ಮನೆಯಿಂದ ಹೊರ ಅಟ್ಟುವನು? (ಆದರೆ ನನ್ನನ್ನು ಮನೆಯಿಂದ ಹೊರಹಾಕಲಾಗಿದೆ, ಹಾಗಿರುವಾಗ ನಾನು ಬೇರೆ ಸತ್ಪುರುಷರನ್ನು ಏಕೆ ಆಶ್ರಯಿಸಬಾರದು.॥20॥

ಮೂಲಮ್ - 21

ಧರ್ಮಾತ್ ಪ್ರಚ್ಯುತಶೀಲಂ ಹಿ ಪುರುಷಂ ಪಾಪನಿಶ್ಚಯಮ್ ।
ತ್ಯಕ್ತ್ವಾ ಸುಖಮವಾಪ್ನೋತಿ ಹಸ್ತಾದಾಶೀವಿಷಂ ಯಥಾ ॥

ಅನುವಾದ

ಯಾರ ಶೀಲಸ್ವಭಾವಗಳು ಧರ್ಮದಿಂದ ಭ್ರಷ್ಟನಾಗಿ ಹೋಗಿದೆಯೋ, ಯಾರು ಪಾಪವನ್ನೇ ಮಾಡಲು ದೃಢನಿಶ್ಚಯ ಮಾಡಿರುವನೋ, ಇಂತಹ ಪುರುಷನನ್ನು ತ್ಯಜಿಸಿ ಪ್ರತಿಯೊಂದು ಪ್ರಾಣಿಯು ಕೈಯ್ಯಮೇಲೆ ಕುಳಿತಿರುವ ವಿಷಸರ್ಪವನ್ನು ತ್ಯಜಿಸಿದಂತೆ ಮನುಷ್ಯ ನಿರ್ಭಯನಾದಂತೆ ಸುಖಿಯಾಗುತ್ತಾನೆ.॥21॥

ಮೂಲಮ್ - 22

ಪರಸ್ವಹರಣೇ ಯುಕ್ತಂ ಪರದಾರಾಭಿಮರ್ಶನಮ್ ।
ತ್ಯಾಜ್ಯಮಾಹುರ್ದುರಾತ್ಮಾನಂ ವೇಶ್ಮ ಪ್ರಜ್ವಲಿತಂ ಯಥಾ ॥

ಅನುವಾದ

ಬೇರೆಯವರ ಧನವನ್ನು ಅಪಹರಿಸುವವನನ್ನು, ಪರಸ್ತ್ರೀಯ ಮೇಲೆ ಕೈಯಿಡುವವನ್ನು ಅಂತಹ ದುರಾತ್ಮನನ್ನು, ಉರಿಯುವ ಮನೆಯನ್ನು ತ್ಯಜಿಸಿದಂತೆ ಬಿಡುವುದೇ ಯೋಗ್ಯವಾಗಿದೆ.॥22॥

ಮೂಲಮ್ - 23

ಪರಸ್ವಾನಾಂಚ ಹರಣಂ ಪರದಾರಾಭಿಮರ್ಶನಮ್ ।
ಸುಹೃದಾಮತಿಶಂಕಾ ಚ ತ್ರಯೋದೋಷಾಃಕ್ಷಯಾವಹಾಃ ॥

ಅನುವಾದ

ಪರಧನ ಅಪಹರಣ, ಪರಸ್ತ್ರೀ ಸಂಸರ್ಗ, ತನ್ನ ಹಿತೈಷಿ ಸುಹೃದರ ಮೇಲೆ ಅವಿಶ್ವಾಸ ಈ ಮೂರು ದೋಷಗಳು ವಿನಾಶಕಾರಿಗಳಾಗಿವೆ.॥23॥

ಮೂಲಮ್ - 24

ಮಹರ್ಷೀಣಾಂ ವಧೋ ಘೋರಃ ಸರ್ವದೇವೈಶ್ಚ ವಿಗ್ರಹಃ ।
ಅಭಿಮಾನಶ್ಚ ಕೋಪಶ್ಚ ವೈರತ್ವಂ ಪ್ರತಿಕೂಲತಾ ॥

ಮೂಲಮ್ - 25

ಏತೇ ದೋಷಾ ಮಮ ಭ್ರಾತುರ್ಜೀವಿತೈಶ್ವರ್ಯನಾಶನಾಃ ।
ಗುಣಾನ್ಪ್ರಚ್ಛಾದಯಾಮಾಸುಃ ಪರ್ವತಾನಿವ ತೋಯದಾಃ ॥

ಅನುವಾದ

ಮಹರ್ಷಿಗಳ ಭಯಂಕರ ವಧೆ, ಸಮಸ್ತ ದೇವತೆಗಳಲ್ಲಿ ವಿರೋಧ, ಅಭಿಮಾನ, ರೋಷ, ವೈರ, ಧರ್ಮದ ಪ್ರತಿಕೂಲ ನಡೆಯುವುದು, ಈ ಪ್ರಾಣಗಳು ಮತ್ತು ಐಶ್ವರ್ಯಗಳನ್ನೂ ನಾಶ ಮಾಡುವಂತಹ ದೋಷಗಳು ನಮ್ಮ ಅಣ್ಣನಲ್ಲಿ ಇವೆ. ಮೋಡಗಳು ಪರ್ವತವನ್ನು ಆಚ್ಛಾದಿಸು ವಂತೆ ಈ ದೋಷಗಳು ಅಣ್ಣನ ಎಲ್ಲ ಗುಣಗಳನ್ನು ಮುಚ್ಚಿಹಾಕಿವೆ.॥24-25॥

ಮೂಲಮ್ - 26

ದೋಷೈರೇತೈಃ ಪರಿತ್ಯಕ್ತೋ ಮಯಾ ಭ್ರಾತಾ ಪಿತಾ ತವ ।
ನೇಯಮಸ್ತಿ ಪುರೀ ಲಂಕಾ ನ ಚ ತ್ವಂ ನ ಚ ತೇ ಪಿತಾ ॥

ಅನುವಾದ

ಈ ದೋಷಗಳಿಂದಾಗಿಯೇ ನಾನು ನನ್ನ ಅಣ್ಣನನ್ನು ತ್ಯಜಿಸಿದೆ. ಈಗಲಾದರೋ ಈ ಲಂಕೆಯಾಗಲೀ, ನೀನಾಗಲಿ, ನಿನ್ನ ತಂದೆಯಾಗಲೀ ಉಳಿಯಲಾರದು.॥26॥

ಮೂಲಮ್ - 27

ಅತಿಮಾನಶ್ಚ ಬಾಲಶ್ಚ ದುರ್ವಿನೀತಶ್ಚ ರಾಕ್ಷಸ ।
ಬದ್ಧಸ್ತ್ವಂ ಕಾಲಪಾಶೇನ ಬ್ರೂಹಿ ಮಾಂ ಯದಿಚ್ಛಸಿ ॥

ಅನುವಾದ

ರಾಕ್ಷಸನೇ! ನೀನು ಅತ್ಯಂತ ಅಭಿಮಾನಿ, ಉದ್ದಂಡ ಮತ್ತು ಮೂರ್ಖನಾಗಿರುವೆ, ಕಾಲಪಾಶದಿಂದ ಬಂಧಿಸಿರುವೆ; ಆದ್ದರಿಂದ ನೀನೇನು ಬಯಸುವೆಯೋ ಅದನ್ನು ನನಗೆ ಹೇಳು.॥27॥

ಮೂಲಮ್ - 28

ಅದ್ಯೇಹ ವ್ಯಸನಂ ಪ್ರಾಪ್ತಂ ಯನ್ಮಾಂ ಪರುಷಮುಕ್ತವಾನ್ ।
ಪ್ರವೇಷ್ಟುಂ ನ ತ್ವಯಾ ಶಕ್ಯಂ ನ್ಯಗ್ರೋಧಂ ರಾಕ್ಷಸಾಧಮ ॥

ಅನುವಾದ

ನೀಚ ರಾಕ್ಷಸನೇ! ನೀನು ನನಗೆ ಕಠೋರವಾದ ಮಾತುಗಳನ್ನು ಹೇಳಿದ ಫಲವೇ ಇಂದು ನಿನ್ನ ಮೇಲೆ ಘೋರ ಸಂಕಟ ಬಂದೊದಗಿದೆ. ಈಗ ನೀನು ವಟವೃಕ್ಷದವರೆಗೆ ಹೋಗಲಾರೆ.॥28॥

ಮೂಲಮ್ - 29

ಧರ್ಷಯಿತ್ವಾ ಚ ಕಾಕುತ್ಸ್ಥಂ ನ ಶಕ್ಯಂ ಜೀವಿತುಂ ತ್ವಯಾ ।
ಯುಧ್ಯಸ್ವ ನರದೇವೇನ ಲಕ್ಷ್ಮಣೇನ ರಣೇ ಸಹ ।
ಹತಸ್ತ್ವಂ ದೇವತಾಕಾರ್ಯಂ ಕರಿಷ್ಯಸಿ ಯಮಕ್ಷಯೇ ॥

ಅನುವಾದ

ಕಕುತ್ಸ್ಥ ಕುಲಭೂಷಣ ಲಕ್ಷ್ಮಣನನ್ನು ತಿರಸ್ಕರಿಸಿ ನೀನು ಬದುಕುಳಿಯಲಾರೆ; ಆದ್ದರಿಂದ ಈ ನರದೇವ ಲಕ್ಷ್ಮಣನೊಡನೆ ಯುದ್ಧಮಾಡು. ನೀನು ಇಲ್ಲಿ ಸತ್ತು ಯಮಲೋಕಕ್ಕೆ ಹೋಗಿ ದೇವತೆಗಳನ್ನು ಸಂತೋಷಪಡಿಸುವೆ.॥29॥

ಮೂಲಮ್ - 30

ನಿದರ್ಶಯ ಸ್ವಾತ್ಮಬಲಂ ಸಮುದ್ಯತಂ
ಕುರುಷ್ವ ಸರ್ವಾಯುಧ ಸಾಯಕವ್ಯಮ್ ।
ನ ಲಕ್ಷ್ಮಣಸ್ಯೈತ್ಯ ಹಿ ಬಾಣಗೋಚರಂ
ತ್ವಮದ್ಯ ಜೀವನ್ಸಬಲೋ ಗಮಿಷ್ಯಸಿ ॥

ಅನುವಾದ

ಈಗ ನಿನ್ನಲ್ಲಿರುವ ಹೆಚ್ಚಿನ ಬಲವನ್ನು ತೋರು. ಸಮಸ್ತ ಆಯುಧಗಳನ್ನು ಮತ್ತು ಸಾಯಕಗಳನ್ನು ವ್ಯಯಮಾಡು. ಆದರೆ ಲಕ್ಷ್ಮಣನ ಬಾಣಗಳಿಗೆ ಗುರಿಯಾಗಿ ನೀನು ಸೈನ್ಯ ಸಹಿತ ಬದುಕಿ ಹೋಗಲಾರೆ.॥30॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಎಂಭತ್ತೇಳನೆಯ ಸರ್ಗ ಪೂರ್ಣವಾಯಿತು.॥87॥