०८५ इन्द्रजिद्धननाय लक्ष्मणप्रेषणम्

वाचनम्
ಭಾಗಸೂಚನಾ

ವಿಭೀಷಣನ ಪ್ರಾರ್ಥನೆಯಂತೆ ಶ್ರೀರಾಮನು ಇಂದ್ರಜಿತುವಿನ ವಧೆಗಾಗಿ ಲಕ್ಷ್ಮಣನಿಗೆ ಅನುಮತಿ ಕೊಟ್ಟಿದ್ದು, ಸೈನ್ಯಸಹಿತ ಲಕ್ಷ್ಮಣನು ನಿಕುಂಭಿಳಾ ಮಂದಿರಕ್ಕೆ ಹೋದುದು

ಮೂಲಮ್ - 1

ತಸ್ಯ ತದ್ವಚನಂ ಶ್ರುತ್ವಾ ರಾಘವಃ ಶೋಕಕರ್ಶಿತಃ ।
ನೋಪಧಾರಯತೇ ವ್ಯಕ್ತಂ ಯದುಕ್ತಂ ತೇನ ರಕ್ಷಸಾ ॥

ಅನುವಾದ

ಅತ್ಯಂತ ಶೋಕಮಗ್ನನಾದ ಶ್ರೀರಾಮನು ವಿಭೀಷಣನ ಮಾತುಗಳನ್ನು ಸರಿಯಾಗಿ ಗ್ರಹಿಸದಾದನು.॥1॥

ಮೂಲಮ್ - 2

ತತೋ ಧೈರ್ಯಮವಷ್ಟಭ್ಯ ರಾಮಃ ಪರಪುರಂಜಯಃ ।
ವಿಭೀಷಣಮುಪಾಸೀನಮುವಾಚ ಕಪಿಸಂನಿಧೌ ॥

ಅನುವಾದ

ಅನಂತರ ಪರಪುರಂಜಯನಾದ ಶ್ರೀರಾಮನು ಧೈರ್ಯವಹಿಸಿ ಹನುಮಂತನ ಬಳಿ ಕುಳಿತಿರುವ ವಿಭೀಷಣನಲ್ಲಿ ಹೇಳಿದನು.॥2॥

ಮೂಲಮ್ - 3

ನೈರ್ಋತಾಧಿಪತೇ ವಾಕ್ಯಂ ಯದುಕ್ತಂ ತೇ ವಿಭೀಷಣ ।
ಭೂಯಸ್ತಚ್ಛ್ರೋತುಮಿಚ್ಛಾಮಿ ಬ್ರೂಹಿ ಯತ್ತೇ ವಿವಕ್ಷಿತಮ್ ॥

ಅನುವಾದ

ರಾಕ್ಷಸರಾಜ ವಿಭೀಷಣನೇ! ನೀನು ಇದುವರೆಗೆ ಹೇಳಿದ ಮಾತುಗಳನ್ನು ನಾನು ಪುನಃ ಕೇಳಬೇಕೆಂದಿದ್ದೇನೆ. ಹೇಳು, ನೀನು ಏನನ್ನು ಹೇಳಲು ಬಯಸುವೆ.॥3॥

ಮೂಲಮ್ - 4

ರಾಘವಸ್ಯ ವಚಃ ಶ್ರುತ್ವಾ ವಾಕ್ಯಂ ವಾಕ್ಯವಿಶಾರದಃ ।
ಯತ್ ತತ್ಪುನರಿದಂ ವಾಕ್ಯಂ ಬಭಾಷೇಽಥ ವಿಭೀಷಣಃ ॥

ಅನುವಾದ

ಶ್ರೀರಘುನಾಥನ ಮಾತನ್ನುಕೇಳಿ ವಾಕ್ಯವಿಶಾರದನಾದ ವಿಭೀಷಣನು ಹಿಂದೆ ಹೇಳಿದ ಮಾತುಗಳನ್ನೇ ಪುನಃ ಹೇಳಲು ಉಪಕ್ರಮಿಸಿದನು.॥4॥

ಮೂಲಮ್ - 5

ಯಥಾಽಽಜ್ಞಪ್ತಂ ಮಹಾಬಾಹೋ ತ್ವಯಾ ಗುಲ್ಮನಿವೇಶನಮ್ ।
ತತ್ತಥಾನುಷ್ಠಿತಂ ವೀರ ತ್ವದ್ವಾಕ್ಯಸಮನಂತರಮ್ ॥

ಅನುವಾದ

ಮಹಾಬಾಹೋ! ನಿನ್ನ ಆದೇಶದಂತೆ ಸೈನ್ಯವನ್ನು ಯಥಾಸ್ಥಾನಗಳಲ್ಲಿ ನಿಲ್ಲಿಸಿ ಬಂದಿರುವೆನು. ವೀರನೇ ಆ ಕಾರ್ಯವನ್ನು ನಿನ್ನ ಆಜ್ಞೆಯಾಗುತ್ತಲೇ ಪೂರ್ಣಗೊಳಿಸಿರುವೆನು.॥5॥

ಮೂಲಮ್ - 6

ತಾನ್ಯನೀಕಾನಿ ಸರ್ವಾಣಿ ವಿಭಕ್ತಾನಿ ಸಮಂತತಃ ।
ವಿನ್ಯಸ್ತಾ ಯೂಥಪಾಶ್ಚೈವ ಯಥಾನ್ಯಾಯಂ ವಿಭಾಗಶಃ ॥

ಅನುವಾದ

ಎಲ್ಲ ಸೈನ್ಯವನ್ನು ಹಂಚಿ ಎಲ್ಲ ಕಡೆಯ ಬಾಗಿಲುಗಳಲ್ಲಿ ಸ್ಥಾಪಿಸಿದ್ದೇನೆ. ಯಥೋಚಿತ ರೀತಿಯಿಂದ ಅಲ್ಲಿ ಬೇರೆ ಬೇರೆ ಯೂಥಪತಿಗಳನ್ನು ನಿಯುಕ್ತ ಗೊಳಿಸಿದ್ದೇನೆ.॥6॥

ಮೂಲಮ್ - 7

ಭೂಯಸ್ತು ಮಮ ವಿಜ್ಞಾಪ್ಯಂ ತಚ್ಛೃಣುಷ್ವ ಮಹಾಪ್ರಭೋ ।
ತ್ವಯ್ಯಕಾರಣ ಸಂತಪ್ತೇ ಸಂತಪ್ತಹೃದಯಾ ವಯಮ್ ॥

ಅನುವಾದ

ಮಹಾರಾಜನೇ! ಇದಲ್ಲದೆ ನಿಮ್ಮಲ್ಲಿ ವಿಜ್ಞಾಪಿಸಿಕೊಳ್ಳುವ ಮತ್ತೊಂದು ವಿಷಯವನ್ನು ಕೇಳಿರಿ. ಕಾರಣವಿಲ್ಲದೆ ನೀವು ಸಂತಪ್ತರಾದ್ದರಿಂದ ನಮ್ಮ ಮನಸ್ಸಿಗೆ ಬಹಳ ಸಂತಾಪವಾಗುತ್ತಿದೆ.॥7॥

ಮೂಲಮ್ - 8

ತ್ಯಜ ರಾಜನ್ನಿಮಂ ಶೋಕಂ ಮಿಥ್ಯಾ ಸಂತಾಪಮಾಗತಮ್ ।
ಯದಿಯಂ ತ್ಯಜ್ಯತಾಂ ಚಿಂತಾ ಶತ್ರುಹರ್ಷವಿವರ್ಧಿನೀ ॥

ಅನುವಾದ

ರಾಜನೇ! ಮಿಥ್ಯಾಪ್ರಾಪ್ತವಾದ ಶೋಕ- ಸಂತಾಪವನ್ನು ತ್ಯಜಿಸಿರಿ. ಜೊತೆಗೆ ಈ ಚಿಂತೆಯನ್ನು ಮನಸ್ಸಿನಿಂದ ದೂರವಿಡಿ; ಏಕೆಂದರೆ ಇದು ಶತ್ರುಗಳ ಹರ್ಷವನ್ನು ಹೆಚ್ಚಿಸುವುದಾಗಿದೆ.॥8॥

ಮೂಲಮ್ - 9

ಉದ್ಯಮಃ ಕ್ರಿಯತಾಂ ವೀರ ಹರ್ಷಃ ಸಮುಪ ಸೇವ್ಯತಾಮ್ ।
ಪ್ರಾಪ್ತವ್ಯಾ ಯದಿ ತೇ ಸೀತಾ ಹಂತವ್ಯಾಶ್ಚ ನಿಶಾಚರಾಃ ॥

ಅನುವಾದ

ವೀರನೇ! ನೀವು ಸೀತೆಯನ್ನು ಪಡೆಯಲು ಮತ್ತು ರಾಕ್ಷಸರನ್ನು ವಧಿಸಬೇಕೆಂದಿದ್ದರೆ ಕಾರ್ಯಪ್ರವೃತ್ತರಾಗಿರಿ. ಹರ್ಷ-ಉತ್ಸಾಹವನ್ನು ಆಶ್ರಯಿಸಿರಿ.॥9॥

ಮೂಲಮ್ - 10½

ರಘುನಂದನ ವಕ್ಷ್ಯಾಮಿ ಶ್ರೂಯತಾಂ ಮೇ ಹಿತಂ ವಚಃ ।
ಸಾಧ್ವಯಂ ಯಾತು ಸೌಮಿತ್ರಿರ್ಬಲೇನ ಮಹತಾ ವೃತಃ ॥
ನಿಕುಂಭಿಲಾಯಾಂ ಸಂಪ್ರಾಪ್ತಂ ಹಂತುಂ ರಾವಣಿಮಾಹವೇ ।

ಅನುವಾದ

ರಘುನಂದನ! ನಾನೊಂದು ಆವಶ್ಯಕ ಮಾತನ್ನು ಹೇಳುತ್ತೇನೆ. ನನ್ನ ಹಿತಕರ ಮಾತನ್ನು ಕೇಳಿರಿ. ರಾವಣಿಯು ನಿಕುಂಭಿಳಾ ಮಂದಿರಕ್ಕೆ ಹೋಗಿದ್ದಾನೆ. ಆದ್ದರಿಂದ ಈ ಸುಮಿತ್ರಾಕುಮಾರ ಲಕ್ಷ್ಮಣನು ವಿಶಾಲ ಸೈನ್ಯದೊಂದಿಗೆ ಅವನ ಮೇಲೆ ಆಕ್ರಮಣ ಮಾಡಲಿ. ಆ ರಾವಣಪುತ್ರನನ್ನು ಆಕ್ರಮಿಸುವುದೇ ಒಳ್ಳೆಯದು.॥10॥

ಮೂಲಮ್ - 11½

ಧನುರ್ಮಂಡಲ ನಿರ್ಮುಕ್ತೈರಾಶೀವಿಷವಿಷೋಪಮೈಃ ॥
ಶರೈರ್ಹಂತುಂ ಮಹೇಷ್ವಾಸೋ ರಾವಣಿಂ ಸಮಿತಿಂಜಯಃ ।

ಅನುವಾದ

ಯುದ್ಧವಿಜಯಿ ಮಹಾಧನುರ್ಧರ ಲಕ್ಷ್ಮಣನು ಮಂಡಲಾಕಾರ ಧನುಸ್ಸಿನಿಂದ ಬಿಟ್ಟ ವಿಷಧರ ಸರ್ಪದಂತಹ ಭಯಾನಕ ಬಾಣಗಳು ರಾವಣಿಯನ್ನು ವಧಿಸಲು ಸಮರ್ಥವಾಗಿವೆ.॥11॥

ಮೂಲಮ್ - 12

ತೇನ ವೀರೇಣ ತಪಸಾ ವರದಾನಾತ್ ಸ್ವಯಂಭುವಃ ।
ಅಸ್ತ್ರಂ ಬ್ರಹ್ಮಶಿರಃ ಪ್ರಾಪ್ತಂ ಕಾಮಗಾಶ್ಚ ತುರಂಗಮಾಃ ॥

ಅನುವಾದ

ಇಂದ್ರಜಿತು ತಪಸ್ಸು ಮಾಡಿ ಬ್ರಹ್ಮದೇವರಿಂದ ವರಪಡೆದು ಬ್ರಹ್ಮಶಿರ ಎಂಬ ಅಸ್ತ್ರವನ್ನು ಹಾಗೂ ಮನೋವೇಗದಿಂದ ಓಡುವ ಕುದುರೆಗಳನ್ನು ಪಡೆದಿರುವನು.॥12॥

ಮೂಲಮ್ - 13

ಸ ಏಷ ಕಿಲ ಸೈನ್ಯೇನ ಪ್ರಾಪ್ತಃ ಕಿಲ ನಿಕುಂಭಿಲಾಮ್ ।
ಯದ್ಯುತ್ತಿಷ್ಠೇತ್ಕೃತಂ ಕರ್ಮ ಹತಾನ್ಸರ್ವಾಂಶ್ಚ ವಿದ್ಧಿ ನಃ ॥

ಅನುವಾದ

ಈಗ ನಿಶ್ಚಯವಾಗಿ ಅವನ ಸೈನ್ಯಸಹಿತ ನಿಕುಂಭಿಳಿಗೆ ಹೋಗಿರುವನು. ಅಲ್ಲಿ ತನ್ನ ಹವನವನ್ನು ಪೂರ್ಣಗೊಳಿಸಿ ಎದ್ದರೆ ನಾವೆಲ್ಲರೂ ಅವನ ಕೈಯಿಂದ ಸತ್ತಂತೆಯೇ ತಿಳಿಯಿರಿ.॥13॥

ಮೂಲಮ್ - 14

ನಿಕುಂಭಿಲಾಮ ಸಂಪ್ರಾಪ್ತಮಕೃತಾಗ್ನಿಂ ಚ ಯೋ ರಿಪುಃ ।
ತ್ವಾಮಾತತಾಯಿನಂ ಹನ್ಯಾದಿಂದ್ರಿಶತ್ರೋಃ ಸ ತೇ ವಧಃ ॥

ಮೂಲಮ್ - 15

ವರೋ ದತ್ತೋ ಮಹಾಬಾಹೋ ಸರ್ವಲೋಕೇಶ್ವರೇಣ ವೈ ।
ಇತ್ಯೇವಂ ವಿಹಿತೋ ರಾಜನ್ ವಧಸ್ತಸ್ಯೈಷ ಧೀಮತಃ ॥

ಅನುವಾದ

ಮಹಾಬಾಹೋ! ಸರ್ವಲೋಕೇಶ್ವರ ಬ್ರಹ್ಮದೇವರು ವರವನ್ನು ಕೊಡುವಾಗ- ಇಂದ್ರಶತ್ರೋ! ನಿಕುಂಭಿಳಾ ಎಂಬ ವಟವೃಕ್ಷದ ಬಳಿಗೆ ಹೋಗಿ ಹವನ ಕಾರ್ಯ ಪೂರ್ಣಗೊಳಿಸುವ ಮೊದಲೇ ಶಸಪಾಣಿ ಶತ್ರುವು ನಿನ್ನಮೇಲೆ ಆಕ್ರಮಣ ಮಾಡಿದರೆ, ಅವನಿಂದಲೇ ನೀನು ಹತನಾಗುವೆ, ಎಂದು ಹೇಳಿರುವರು. ರಾಜನೇ! ಹೀಗೇ ಬುದ್ಧಿವಂತ ಇಂದ್ರಜಿತುವಿನ ಮೃತ್ಯುವಿನ ವಿಧಾನ ಮಾಡಲಾಗಿದೆ.॥14-15॥

ಮೂಲಮ್ - 16

ವಧಾಯೇಂದ್ರಜಿತೋ ರಾಮಸಂದಿಶಸ್ವ ಮಹಾಬಲಮ್ ।
ಹತೇ ತಸ್ಮಿನ್ ಹತಂ ವಿದ್ಧಿ ರಾವಣಂ ಸಸುಹೃದ್ಗಣಮ್ ॥

ಅನುವಾದ

ಶ್ರೀರಾಮಾ! ಆದ್ದರಿಂದ ಇಂದ್ರಜಿತುವನ್ನು ವಧಿಸಲು ಮಹಾಬಲಿ ಲಕ್ಷ್ಮಣನಿಗೆ ಆಜ್ಞಾಪಿಸಿರಿ. ಅವನ ವಧೆಯಾದರೆ ಸುಹೃದರೊಂದಿಗೆ ರಾವಣನು ಸತ್ತನೆಂದೇ ತಿಳಿಯಿರಿ.॥16॥

ಮೂಲಮ್ - 17

ವಿಭೀಷಣವಚಃ ಶ್ರುತ್ವಾ ರಾಮೋ ವಾಕ್ಯಮಥಾಬ್ರವೀತ್ ।
ಜಾನಾಮಿ ತಸ್ಯ ರೌದ್ರಸ್ಯ ಮಾಯಾಂ ಸತ್ಯಪರಾಕ್ರಮ ॥

ಅನುವಾದ

ವಿಭೀಷಣನ ಮಾತನ್ನು ಕೇಳಿ ಶ್ರೀರಾಮಚಂದ್ರನು ಶೋಕವನ್ನು ತ್ಯಜಿಸಿ ಇಂತೆಂದನು - ಸತ್ಯಪರಾಕ್ರಮಿ ವಿಭೀಷಣನೇ! ಆ ಭಯಂಕರ ರಾಕ್ಷಸನ ಮಾಯೆಯನ್ನು ನಾನು ಬಲ್ಲೆ.॥17॥

ಮೂಲಮ್ - 18

ಸ ಹಿ ಬ್ರಹ್ಮಾಸ್ತ್ರವಿತ್ ಪ್ರಾಜ್ಞೋ ಮಹಾಮಾಯೋ ಮಹಾಬಲಃ ।
ಕರೋತ್ಯ ಸಂಜ್ಞಾನ್ ಸಂಗ್ರಾಮೇ ದೇವಾನ್ಸವರುಣಾನಪಿ ॥

ಅನುವಾದ

ಅವನು ಬ್ರಹ್ಮಾಸ್ತ್ರವನ್ನು ತಿಳಿದಿರುವನೂ, ಬುದ್ಧಿವಂತನೂ, ದೊಡ್ಡ ಮಾಯಾವಿಯೂ, ಮಹಾಬಲಿಷ್ಠನೂ ಆಗಿದ್ದಾನೆ. ವರುಣಸಹಿತ ಸಮಸ್ತ ದೇವತೆಗಳನ್ನೂ ಅವನು ಯುದ್ಧದಲ್ಲಿ ಮೂರ್ಛಿತಗೊಳಿಸಬಲ್ಲನು.॥18॥

ಮೂಲಮ್ - 19

ತಸ್ಯಾಂತರಿಕ್ಷೇ ಚರತಃ ರಥಸ್ಥಸ್ಯ ಮಹಾಯಶಃ ।
ನ ಗತಿರ್ಜ್ಞಾಯತೇ ವೀರ ಸೂರ್ಯಸ್ಯೇವಾಭ್ರಸಂಪ್ಲವೇ ॥

ಮೂಲಮ್ - 20

ರಾಘವಸ್ತು ರಿಪೋರ್ಜ್ಞಾತ್ವಾ ಮಾಯಾವೀರ್ಯ ದುರಾತ್ಮನಃ ।
ಲಕ್ಷ್ಮಣಂ ಕೀರ್ತಿಸಂಪನ್ನಮಿದಂ ವಚನಮಬ್ರವೀತ್ ॥

ಅನುವಾದ

ಮಹಾಯಶಸ್ವೀ ವೀರನೇ! ಇಂದ್ರಜಿತನು ರಥಸಹಿತ ಆಕಾಶದಲ್ಲಿ ಸಂಚರಿಸತೊಡಗಿದಾಗ ಮೋಡಗಳಲ್ಲಿ ಅಡಗಿದ ಸೂರ್ಯನಂತೆ ಅವನ ಗತಿಯನ್ನು ಯಾರೂ ತಿಳಿಯಲಾರರು. ವಿಭೀಷಣನಲ್ಲಿ ಹೀಗೆ ಹೇಳಿ ಶ್ರೀರಾಮನು ತನ್ನ ಶತ್ರು ದುರಾತ್ಮ ಇಂದ್ರಜಿತನ ಮಾಯಾಶಕ್ತಿಯನ್ನು ತಿಳಿದು, ಯಶಸ್ವೀ ವೀರ ಲಕ್ಷ್ಮಣನಲ್ಲಿ ಹೀಗೆ ಹೇಳಿದನು .॥19-20॥

ಮೂಲಮ್ - 21

ಯದ್ವಾ ನರೇಂದ್ರಸ್ಯ ಬಲಂ ತೇನ ಸರ್ವೇಣ ಸಂವೃತಃ ।
ಹನೂಮತ್ಪ್ರ ಮುಖೈಶ್ಚೈವ ಯೂಥಪೈಃ ಸಹ ಲಕ್ಷ್ಮಣ ॥

ಮೂಲಮ್ - 22

ಜಾಂಬವೇನರ್ಕ್ಷಪತಿನಾ ಸಹ ಸೈನ್ಯೇನ ಸಂವೃತಃ ।
ಜಹಿ ತಂ ರಾಕ್ಷಸಸುತಂ ಮಾಯಾಬಲಸಮನ್ವಿತಮ್ ॥

ಅನುವಾದ

ಲಕ್ಷ್ಮಣ! ವಾನರರಾಜ ಸುಗ್ರೀವನ ಸೈನ್ಯವೆಲ್ಲ ಜೊತೆಗೆ ತೆಗೆದು ಕೊಂಡು, ಹನುಮಂತನೇ ಮೊದಲಾದ ಸೇನಾನಾಯಕರನ್ನು, ಜಾಂಬವಂತ ಹಾಗೂ ಇತರ ಸೈನ್ಯದಿಂದ ಪರಿವೃತನಾಗಿ ಮಾಯಾಬಲ ಸಂಪನ್ನ ರಾಕ್ಷಸರಾಜಕುಮಾರ ಇಂದ್ರಜಿತುವಿನ ಸಂಹಾರಮಾಡು.॥21-22॥

ಮೂಲಮ್ - 23

ಅಯಂ ತ್ವಾಂ ಸಚಿವೈಃ ಸಾರ್ಧಂ ಮಹಾತ್ಮಾ ರಜನೀಚರಃ ।
ಅಭಿಜ್ಞಸ್ತಸ್ಯ ಮಾಯಾನಾಂ ಪೃಷ್ಠತೋಽನುಗಮಿಷ್ಯತಿ ॥

ಅನುವಾದ

ಈ ಮಹಾತ್ಮಾ ರಾಕ್ಷಸರಾಜ ವಿಭೀಷಣನು ಅವನ ಮಾಯೆಯನ್ನು ಚೆನ್ನಾಗಿ ತಿಳಿದಿರುವನು. ಆದ್ದರಿಂದ ಇವನೂ ತನ್ನ ಮಂತ್ರಿಗಳೊಂದಿಗೆ ನಿನ್ನ ಹಿಂದೆ ಹಿಂದೆ ಬರುವನು.॥23॥

ಮೂಲಮ್ - 24

ರಾಘವಸ್ಯ ವಚಃ ಶ್ರುತ್ವಾ ಲಕ್ಷ್ಮಣಃ ಸವಿಭೀಷಣಃ ।
ಜಗ್ರಾಹ ಕಾರ್ಮುಕ ಶ್ರೇಷ್ಠಮನ್ಯದ್ ಭೀಮಪರಾಕ್ರಮಃ ॥

ಅನುವಾದ

ಶ್ರೀರಘುನಾಥನ ಮಾತನ್ನು ಕೇಳಿ ವಿಭೀಷಣ ಸಹಿತ ಭಯಾನಕ ಪರಾಕ್ರಮಿ ಲಕ್ಷ್ಮಣನು ತನ್ನ ಶ್ರೇಷ್ಠ ಧನುಸ್ಸನ್ನು ಕೈಯ್ಯಲ್ಲೆತ್ತಿಕೊಂಡನು.॥24॥

ಮೂಲಮ್ - 25

ಸಂನದ್ಧಃ ಕವಚೀ ಖಡ್ಗೀ ಸಶರೀ ವಾಮಚಾಪಭೃತ್ ।
ರಾಮಪಾದಾವುಪಸ್ಪೃಶ್ಯ ಹೃಷ್ಟಃ ಸೌಮಿತ್ರಿರಬ್ರವೀತ್ ॥

ಅನುವಾದ

ಅವನ ಯುದ್ಧದ ಎಲ್ಲ ಸಾಮಗ್ರಿಗಳೊಂದಿಗೆ ಸಿದ್ಧನಾದನು. ಕವಚವನ್ನು ಧರಿಸಿ, ಖಡ್ಗವನ್ನು ಬಿಗಿದುಕೊಂಡನು. ಉತ್ತಮ ಬಾಣಗಳನ್ನು ಧನುಸ್ಸನ್ನು ಕೈಯಲ್ಲಿ ಹಿಡಿದು, ಶ್ರೀರಾಮನ ಚರಣಗಳನ್ನು ಸ್ಪರ್ಶಿಸಿ ಹರ್ಷದಿಂದ ಸೌಮಿತ್ರಿಯು ಹೇಳಿದನು.॥25॥

ಮೂಲಮ್ - 26

ಅದ್ಯ ಮತ್ಕಾರ್ಮುಕೋನ್ಮುಕ್ತಾಃ ಶರಾ ನಿರ್ಭಿದ್ಯ ರಾವಣಿಮ್ ।
ಲಂಕಾಮಭಿಪತಿಷ್ಯಂತಿ ಹಂಸಾಃ ಪುಷ್ಕರಿಣೀಮಿವ ॥

ಅನುವಾದ

ಆರ್ಯನೇ! ಇಂದು ನನ್ನ ಧನುಸ್ಸಿನಿಂದ ಸಿಡಿದ ಬಾಣಗಳು ರಾವಣಕುಮಾರನನ್ನು ವಿದೀರ್ಣಗೊಳಿಸಿ, ಕವಲಗಳಿಂದ ತುಂಬಿದ ಸರೋವರದಲ್ಲಿ ಹಂಸಗಳು ಇಳಿಯುವಂತೆ ಲಂಕೆಯಲ್ಲಿ ಹೋಗಿ ಬೀಳುವವು.॥26॥

ಮೂಲಮ್ - 27

ಅದ್ಯೈವ ತಸ್ಯ ರೌದ್ರಸ್ಯಶರೀರಂ ಮಾಮಕಾಃ ಶರಾಃ ।
ವಿಧಮಿಷ್ಯಂತಿ ಭಿತ್ತ್ವಾ ತಂ ಮಹಾಚಾಪ ಗುಣಚ್ಚ್ಯುತಾಃ ॥

ಅನುವಾದ

ಈ ವಿಶಾಲ ಧನುಸ್ಸಿಂದ ಹೊರಟ ಬಾಣಗಳು ಇಂದೇ ಆ ಭಯಂಕರ ರಾಕ್ಷಸನ ಶರೀರವನ್ನು ಸೀಳಿ ಅವನನ್ನು ಕಾಲಕ್ಕೆ ತುತ್ತಾಗಿಸುವವು.॥27॥

ಮೂಲಮ್ - 28

ಏವಮುಕ್ತ್ವಾ ತುವಚನಂ ದ್ಯುತಿಮಾನ್ ಭ್ರಾತುರಗ್ರತಃ ।
ಸ ರಾವಣಿವಧಾಕಾಂಕ್ಷೀ ಲಕ್ಷ್ಮಣಸ್ತ್ವರಿತಂ ಯಯೌ ॥

ಅನುವಾದ

ರಾವಣಿಯ ವಧೆಯ ಆಕಾಂಕ್ಷಿಯಾದ ತೇಜಸ್ವೀ ಲಕ್ಷ್ಮಣನು ತನ್ನಣ್ಣನ ಮುಂದೆ ಹೀಗೆ ಮಾತನ್ನು ಹೇಳಿ ಕೂಡಲೇ ಅಲ್ಲಿಂದ ಹೊರಟನು.॥28॥

ಮೂಲಮ್ - 29

ಸೋಽಭಿವಾದ್ಯ ಗುರೋಃ ಪಾದೌ ಕೃತ್ವಾ ಚಾಪಿ ಪ್ರದಕ್ಷಿಣಮ್ ।
ನಿಕುಂಭಿಲಾಮಭಿಯಯೌ ಚೈತ್ಯಂ ರಾವಣಿಪಾಲಿತಮ್ ॥

ಅನುವಾದ

ಮೊದಲಿಗೆ ಅಣ್ಣನ ಚರಣಗಳಲ್ಲಿ ವಂದಿಸಿಕೊಂಡು, ಅವನಿಗೆ ಪ್ರದಕ್ಷಿಣೆ ಬಂದು ರಾವಣ ಕುಮಾರನಿಂದ ಪಾಲಿತವಾದ ನಿಕುಂಭಿಳಾ ಮಂದಿರದ ಕಡೆಗೆ ಪ್ರಯಾಣ ಮಾಡಿದನು.॥29॥

ಮೂಲಮ್ - 30

ವಿಭೀಷಣೇನ ಸಹಿತೋ ರಾಜಪುತ್ರಃ ಪ್ರತಾಪವಾನ್ ।
ಕೃತಸ್ವಸ್ತ್ಯಯನೋ ಭ್ರಾತ್ರಾ ಲಕ್ಷ್ಮಣಸ್ತ್ವರಿತೋ ಯಯೌ ॥

ಅನುವಾದ

ಅಣ್ಣನಾದ ಶ್ರೀರಾಮನು ಸ್ವಸ್ತಿವಾಚನ ಮಾಡಿದ ಬಳಿಕ ವಿಭೀಷಣ ಸಹಿತ ಪ್ರತಾಪಿ ರಾಜಕುಮಾರ ಲಕ್ಷ್ಮಣನು ಬಹಳ ಉತ್ಸಾಹದಿಂದ ಮುಂದರಿದನು.॥30॥

ಮೂಲಮ್ - 31

ವಾನರಾಣಾಂ ಸಹಸ್ರೈಸ್ತು ಹನೂಮಾನ್ ಬಹುಭಿರ್ವೃತಃ ।
ವಿಭೀಷಣಶ್ಚ ಸಾಮಾತ್ಯೋ ಲಕ್ಷ್ಮಣಂ ತ್ವರಿತಂ ಯಯೌ ॥

ಅನುವಾದ

ಎಷ್ಟೋ ಸಾವಿರ ವಾನರವೀರರೊಂದಿಗೆ ಹನುಮಂತ ಮತ್ತು ಮಂತ್ರಿಗಳ ಸಹಿತ ವಿಭೀಷಣನೂ ಲಕ್ಷ್ಮಣನ ಹಿಂದೆ ತ್ವರಿತವಾಗಿ ಹೊರಟರು.॥31॥

ಮೂಲಮ್ - 32

ಮಹತಾ ಹರಿಸೈನ್ಯೇನ ಸ ವೇಗಮಭಿಸಂವೃತಃ ।
ಋಕ್ಷರಾಜಬಲಂ ಚೈವ ದದರ್ಶ ಪಥಿ ವಿಷ್ಠಿತಮ್ ॥

ಅನುವಾದ

ವಿಶಾಲವಾನರ ಸೈನ್ಯ ಸಹಿತ ಸುತ್ತುವರೆದ ಲಕ್ಷ್ಮಣನು ವೇಗವಾಗಿ ಮುಂದರಿದು ದಾರಿಯಲ್ಲಿ ನಿಂತಿದ್ದ ಋಕ್ಷರಾಜ ಜಾಂಬವಂತರ ಸೈನ್ಯವನ್ನು ನೋಡಿದನು.॥32॥

ಮೂಲಮ್ - 33

ಸ ಗತ್ವಾ ದೂರಮಧ್ವಾನಂ ಸೌಮಿತ್ರಿರ್ಮಿತ್ರನಂದನಃ ।
ರಾಕ್ಷಸೇಂದ್ರ ಬಲಂ ದೂರಾದಪಶ್ಯದ್ ವ್ಯೂಹಮಾಸ್ಥಿತಮ್ ॥

ಅನುವಾದ

ದೂರದ ವರೆಗೆ ದಾರಿ ಸಾಗಿದಾಗ ಮಿತ್ರರನ್ನು ಆನಂದಗೊಳಿಸುವ ಸೌಮಿತ್ರಿಯು ರಾಕ್ಷಸರಾಜ ರಾವಣನ ಸೈನ್ಯ ಯುದ್ಧಕ್ಕಾಗಿ ಸಿದ್ಧವಾಗಿ ನಿಂತಿರುವುದನ್ನು ನೋಡಿದನು.॥33॥

ಮೂಲಮ್ - 34

ಸ ಸಂ ಪ್ರಾಪ್ಯ ಧನುಷ್ಪಾಣಿರ್ಮಾಯಾಯೋಗಮರಿಂದಮಃ ।
ತಸ್ಥೌ ಬ್ರಹ್ಮವಿಧಾನೇನ ವಿಜೇತುಂ ರಘುನಂದನಃ ॥

ಅನುವಾದ

ಶತ್ರುದವನ ರಘುಕುಲನಂದನ ಲಕ್ಷ್ಮಣನು ಧನುಸ್ಸನ್ನು ಧರಿಸಿಕೊಂಡು, ಬ್ರಹ್ಮದೇವರು ನಿಶ್ಚಯಿಸಿದ ವಿಧಾನಕ್ಕನುಸಾರ ಆ ಮಾಯಾವೀ ರಾಕ್ಷಸನನ್ನು ಗೆಲ್ಲಲು ನಿಕುಂಭಿಳಾ ಎಂಬ ಜಾಗಕ್ಕೆ ಹೋಗಿ ನಿಂತುಕೊಂಡನು.॥34॥

ಮೂಲಮ್ - 35

ವಿಭೀಷಣೇನ ಸಹಿತೋ ರಾಜಪುತ್ರಃ ಪ್ರತಾಪವಾನ್ ।
ಅಂಗದೇನ ಚ ವೀರೇಣ ತಥಾನಿಲಸುತೇನ ಚ ॥

ಅನುವಾದ

ಆಗ ಪ್ರತಾಪಿ ರಾಜಕುಮಾರ ಲಕ್ಷ್ಮಣನೊಂದಿಗೆ ವಿಭೀಷಣ, ವೀರ ಅಂಗದ, ಪವನನಂದನ ಹನುಮಂತನೂ ಇದ್ದರು.॥35॥

ಮೂಲಮ್ - 36

ವಿವಿಧಮಮಲಶಸ್ತ್ರ ಭಾಸ್ವರಂ ತದ್
ಧ್ವಜಗಹನಂ ಗಹನಂ ಮಹಾರಥೈಶ್ಚ ।
ಪ್ರತಿಭಯತಮಮಪ್ರಮೇಯವೇಗಂ
ತಿಮಿರಮಿವ ದ್ವಿಷತಾಂ ಬಲಂ ವಿವೇಶ ॥

ಅನುವಾದ

ಹೊಳೆಯುತ್ತಿರುವ ಅಸ್ತ್ರ-ಶಸ್ತ್ರಗಳಿಂದ ಪ್ರಕಾಶಿಸುತ್ತಿರುವ, ಮಹಾರಥಿಗಳಿಂದ ಮತ್ತು ಧ್ವಜಗಳಿಂದ ಗಹನವಾಗಿ ಕಾಣುತ್ತಿದ್ದ, ವೇಗದ ಅಂದಾಜು ಯಾರೂ ಮಾಡದ, ಅನೇಕ ವೇಷಭೂಷಣಗಳಿಂದ ಕಾಣುತ್ತಿದ್ದ ಅಂಧಕಾರದಂತೆ ಇದ್ದ ಆ ಶತ್ರು ಸೈನ್ಯದೊಳಗೆ ವಿಭೀಷಣಾದಿಗಳೊಂದಿಗೆ ಲಕ್ಷ್ಮಣನು ಪ್ರವೇಶಿಸಿದನು.॥36॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಎಂಭತ್ತೈದನೆಯ ಸರ್ಗ ಪೂರ್ಣವಾಯಿತು.॥85॥