वाचनम्
ಭಾಗಸೂಚನಾ
ವಿಭೀಷಣನು ಇಂದ್ರಜಿತುವಿನ ಮಾಯಾರಹಸ್ಯವನ್ನು ತಿಳಿಸಿ ಸೀತೆಯು ಜೀವಿಸಿರುವಳೆಂಬ ವಿಶ್ವಾಸ ಹುಟ್ಟಿಸಿದುದು, ಲಕ್ಷ್ಮಣನನ್ನು ಕಪಿಸೇನೆಯೊಡನೆ ನಿಕುಂಭಿಳಾಮಂದಿರಕ್ಕೆ ಕಳುಹಿಸುವಂತೆ ಪ್ರಾರ್ಥಿಸಿದುದು
ಮೂಲಮ್ - 1
ರಾಮಮಾಶ್ವಾಸಮಾನೇ ತು ಲಕ್ಷ್ಮಣೇ ಭ್ರಾತೃವತ್ಸಲೇ ।
ನಿಕ್ಷಿಪ್ಯ ಗುಲ್ಮಾನ್ ಸ್ವಸ್ಥಾನೇ ತತ್ರಾಗಚ್ಛದ್ವಿಭೀಷಣಃ ॥
ಅನುವಾದ
ಭ್ರಾತೃವತ್ಸಲ ಲಕ್ಷ್ಮಣನು ಶ್ರೀರಾಮನಿಗೆ ಹೀಗೆ ಆಶ್ವಾಸನೆ ಕೊಡುತ್ತಿರುವಾಗಲೇ ವಿಭೀಷಣನು ವಾನರ ಸೈನ್ಯವನ್ನು ಯಥಾ ಯಥಾ ಸ್ಥಾನಗಳಲ್ಲಿ ಸ್ಥಾಪಿಸಿ, ರಾಮನಿದ್ದಲ್ಲಿಗೆ ಬಂದನು.॥1॥
ಮೂಲಮ್ - 2
ನಾನಾಪ್ರಹರಣೈರ್ವೀರೈಶ್ಚತುರ್ಭಿರಭಿ ಸಂವೃತಃ ।
ನೀಲಾಂಜನಚಯಾಕಾರೈರ್ಮಾತಂಗರಿವ ಯೂಥಪೈಃ ॥
ಅನುವಾದ
ನಾನಾ ವಿಧವಾದ ಆಯುಧಗಳನ್ನು ಧರಿಸಿದ, ಕಾಡಿಗೆಯ ರಾಶಿಯಂತೆ ಕಪ್ಪಾದ, ಮದಿಸಿದ ಸಲಗಗಳಂತೆ ಕಾಣುತ್ತಿದ್ದ ನಾಲ್ವರು ರಾಕ್ಷಸಶ್ರೇಷ್ಠರಿಂದ ವಿಭೀಷಣನು ಪರಿವೃತನಾಗಿದ್ದನು.॥2॥
ಮೂಲಮ್ - 3
ಸೋಽಭಿಗಮ್ಯ ಮಹಾತ್ಮಾನಂ ರಾಘವಂ ಶೋಕಲಾಲಸಮ್ ।
ವಾನರಾಂಶ್ಚಾಪಿ ದದೃಶೇ ಭಾಷ್ಪಪರ್ಯಾಕುಲೇಕ್ಷಣಾನ್ ॥
ಅನುವಾದ
ಅಲ್ಲಿಗೆ ಬಂದು ನೋಡುತ್ತಾನೆ - ಮಹಾತ್ಮಾ ಲಕ್ಷ್ಮಣನು ಶೋಕಮಗ್ನನಾಗಿದ್ದನು. ಎಲ್ಲ ವಾನರರ ಕಣ್ಣೀರು ತುಂಬಿಕೊಂಡಿದ್ದರು.॥3॥
ಮೂಲಮ್ - 4
ರಾಘವಂ ಚ ಮಹಾತ್ಮಾನಮಿಕ್ಷ್ವಾಕುಕುಲನಂದನಮ್ ।
ದದರ್ಶ ಮೋಹಮಾಪನ್ನಂ ಲಕ್ಷ್ಮಣ ಸ್ಯಾಂಕಮಾಶ್ರಿತಮ್ ॥
ಅನುವಾದ
ಜೊತೆಗೆ ಇಕ್ಷ್ವಾಕು ಕುಲನಂದನ ಮಹಾತ್ಮಾ ಶ್ರೀರಘುನಾಥನ ಕಡೆಗೆ ನೋಡಿದರೆ ಅವನು ಮೂರ್ಛಿತನಾಗಿ ಲಕ್ಷ್ಮಣನ ತೊಡೆಯಲ್ಲಿ ಮಲಗಿದ್ದನು.॥4॥
ಮೂಲಮ್ - 5
ವ್ರೀಡಿತಂ ಶೋಕಸಂತಪ್ತಂ ದೃಷ್ಟ್ವಾ ರಾಮಂ ವಿಭೀಷಣಃ ।
ಅಂತರ್ದುಃಖೇನ ದೀನಾತ್ಮಾ ಕಿಮೇತದಿತಿ ಸೋಽಬ್ರವೀತ್ ॥
ಅನುವಾದ
ಶ್ರೀರಾಮನು ಲಜ್ಜಿತನಾಗಿ ಶೋಕ ಸಂತಪ್ತನಾಗಿ ರುವುದನ್ನು ನೋಡಿ, ದುಃಖದಿಂದ ದೀನ ಹೃದಯನಾದ ವಿಭೀಷಣನು ‘ಇದೇನಿದು?’ ಎಂದು ಪ್ರಶ್ನಿಸಿದನು.॥5॥
ಮೂಲಮ್ - 6
ವಿಭೀಷಣಮುಖಂ ದೃಷ್ಟ್ವಾ ಸುಗ್ರೀವಂ ತಾಂಶ್ಚವಾನರಾನ್ ।
ಲಕ್ಷ್ಮಣೋವಾಚ ಮಂದಾರ್ಥಮಿದಂ ಭಾಷ್ಪಪರಿಪ್ಲುತಃ ॥
ಅನುವಾದ
ಆಗ ಲಕ್ಷ್ಮಣನು ವಿಭೀಷಣನನ್ನು ಸುಗ್ರೀವ ಹಾಗೂ ಇತರ ವಾನರರ ಕಡೆಗೆ ದೃಷ್ಟಿಹರಿಸಿ ಕಣ್ಣೀರು ಸುರಿಸುತ್ತಾ ಮೆಲ್ಲಗೆ ವಿಭೀಷಣನಲ್ಲಿ ಹೇಳಿದನು.॥6॥
ಮೂಲಮ್ - 7
ಹತಾ ಇಂದ್ರಜಿತಾ ಸೀತಾ ಇತಿ ಶ್ರುತ್ವೈವ ರಾಘವಃ ।
ಹನೂಮದ್ವಚನಾತ್ಸೌಮ್ಯ ತತೋ ಮೋಹಮುಪಾಶ್ರಿತಃ ॥
ಅನುವಾದ
ಸೌಮ್ಯನೇ! ‘ಇಂದ್ರಜಿತನು ಸೀತೆಯನ್ನು ಕೊಂದುಹಾಕಿದನು’ ಎಂದು ಹನುಮಂತನು ಹೇಳಿದಾಗ, ಅದನ್ನು ಕೇಳಿ ಶ್ರೀರಾಮನು ಮೂರ್ಛಿತನಾಗಿರುವನು.॥7॥
ಮೂಲಮ್ - 8
ಕಥಯಂತಂ ತು ಸೌಮಿತ್ರಿಂ ಸಂನಿವಾರ್ಯ ವಿಭೀಷಣಃ ।
ಪುಷ್ಕಲಾರ್ಥಮಿದಂ ವಾಕ್ಯಂ ವಿಸಂಜ್ಞಂ ರಾಮಮಬ್ರವೀತ್ ॥
ಮೂಲಮ್ - 9
ಮನುಜೇಂದ್ರಾರ್ತರೂಪೇಣ ಯದುಕ್ತಸ್ತ್ವಂ ಹನೂಮತಾ ।
ತದಯುಕ್ತಮಹಂ ಮನ್ಯೇ ಸಾಗರಸ್ಯೇವ ಶೋಷಣಮ್ ॥
ಅನುವಾದ
ಹೀಗೆ ಹೇಳುತ್ತಿರುವ ಲಕ್ಷ್ಮಣನನ್ನು ತಡೆದು ವಿಭೀಷಣನು ನಿಶ್ಚೇಷ್ಟಿತನಾಗಿ ಬಿದ್ದಿದ್ದ ಶ್ರೀರಾಮಚಂದ್ರನಲ್ಲಿ ಶ್ರೇಷ್ಟವಾದ ಈ ಮಾತನ್ನು ಹೇಳಿದನು.॥8-9॥
ಮೂಲಮ್ - 10
ಅಭಿಪ್ರಾಯಂ ತು ಜಾನಾಮಿ ರಾವಣಸ್ಯ ದುರಾತ್ಮನಃ ।
ಸೀತಾಂ ಪ್ರತಿ ಮಹಾಬಾಹೋ ನ ಚ ಘಾತಂ ಕರಿಷ್ಯತಿ ॥
ಅನುವಾದ
ಮಹಾರಾಜಾ! ದುರಾತ್ಮಾ ರಾವಣನಿಗೆ ಸೀತೆಯ ಕುರಿತು ಇರುವ ಭಾವವನ್ನು ನಾನು ಚೆನ್ನಾಗಿ ತಿಳಿದಿದ್ದೇನೆ. ಅವನು ಆಕೆಯ ವಧೆಯನ್ನು ಮಾಡಲು ಎಂದೂ ಬಿಡಲಾರನು.॥10॥
ಮೂಲಮ್ - 11
ಯಾಚ್ಯಮಾನಃ ಸುಬಹುಶೋ ಮಯಾ ಹಿತಚಿಕೀರ್ಷುಣಾ ।
ವೈದೇಹೀಮುತ್ಸೃಜಸ್ವೇತಿ ನ ಚ ತತ್ಕೃತವಾನ್ ವಚಃ ॥
ಅನುವಾದ
ನಾನು ಅವನ ಹಿತವನ್ನು ಮಾಡುವ ಇಚ್ಛೆಯಿಂದ ‘ವಿದೇಹಕುಮಾರಿಯನ್ನು ಬಿಟ್ಟುಬಿಡು’ ಎಂದು ಪದೇ ಪದೇ ಹೇಳಿದ್ದೆ; ಆದರೆ ಅವನು ನನ್ನ ಮಾತನ್ನು ಕೇಳಲಿಲ್ಲ.॥11॥
ಮೂಲಮ್ - 12
ನೈವ ಸಾಮ್ನಾ ನ ದಾನೇನ ನ ಭೇದೇನ ಕುತೋ ಯುಧಾ ।
ಸಾ ದ್ರಷ್ಟುಮಪಿ ಶಕ್ಯೇತ ನೈವ ಚಾನ್ಯೇನ ಕೇನಚಿತ್ ॥
ಅನುವಾದ
ಸೀತೆಯನ್ನು ಸಾಮ, ದಾನ, ಭೇದನೀತಿಯಿಂದಲೂ ಬೇರೆ ಯಾರೂ ನೋಡಲಾರನು. ಮತ್ತೆ ಯುದ್ಧದ ಮೂಲಕ ಹೇಗೆ ನೋಡಬಲ್ಲನು.॥12॥
ಮೂಲಮ್ - 13
ವಾನರಾನ್ಮೋಹಯಿತ್ವಾ ತು ಪ್ರತಿಯಾತಃ ಸ ರಾಕ್ಷಸಃ ।
ಮಾಯಾಮಯೀಂ ಮಹಾಬಾಹೋತಾಂ ವಿದ್ಧಿ ಜನಕಾತ್ಮಜಾಮ್ ॥
ಅನುವಾದ
ಮಹಾಬಾಹೋ! ರಾಕ್ಷಸ ಇಂದ್ರಜಿತನು ವಾನರರನ್ನು ಮೋಹಗೊಳಿಸಿ ಹೊರಟುಹೋಗಿರುವನು. ಅವನು ವಧಿಸಿದುದು ಮಾಯಾಮಯ ಜಾನಕಿಯಾಗಿದ್ದಳು ಎಂಬುದನ್ನು ನಿಶ್ಚಿತವಾಗಿ ತಿಳಿಯಿರಿ.॥13॥
ಮೂಲಮ್ - 14½
ಚೈತ್ಯಂ ನಿಕುಂಭಿಲಾ ಮದ್ಯ ಪ್ರಾಶ್ಯಹೋಮಂ ಕರಿಷ್ಯತಿ ।
ಹುತವಾನುಪಯಾತೋ ಹಿ ದೇವೈರಪಿ ಸವಾಸವೈಃ ॥
ದುರಾಧರ್ಷೋ ಭವತ್ಯೇಷ ಸಂಗ್ರಾಮೇ ರಾವಣಾತ್ಮಜಃ ।
ಅನುವಾದ
ಅವನು ಈಗ ನಿಕುಂಭಿಲಾ ಮಂದಿರದಲ್ಲಿ ಹೋಗಿ ಹೋಮ ಮಾಡುತ್ತಿರಬಹುದು. ಹೋಮ ಮಾಡಿ ಮರಳಿದಾಗ ಆ ರಾವಣ ಕುಮಾರನನ್ನು ಸಂಗ್ರಾಮದಲ್ಲಿ ಸೋಲಿಸುವುದು ಇಂದ್ರನ ಸಹಿತ ಸಮಸ್ತ ದೇವತೆಗಳಿಗೂ ಕಷ್ಟವಾಗಬಹುದು.॥14½॥
ಮೂಲಮ್ - 15½
ತೇನ ಮೋಹಯತಾ ನೂನಮೇಷಾ ಮಾಯಾ ಪ್ರಯೋಜಿತಾ ॥
ವಿಘ್ನಮನ್ವಿಚ್ಛತಾ ತತ್ರ ವಾನರಾಣಾಂ ಪರಾಕ್ರಮೇ ।
ಅನುವಾದ
ಅವನು ನಮ್ಮನ್ನು ಮಾಯೆಯಲ್ಲಿ ಕೆಡಹಲೆಂದೇ ಖಂಡಿತವಾಗಿ ಈ ಮಾಯೆಯ ಪ್ರಯೋಗ ಮಾಡಿರುವನು. ವಾನರ ಪರಾಕ್ರಮ ಮುಂದರಿದರೆ ನನ್ನ ಈ ಕಾರ್ಯವನ್ನು ವಿಘ್ನ ಉಂಟಾದೀತೆಂದು ಯೋಚಿಸಿ ಹೀಗೆ ಮಾಡಿರುವನು.॥15½॥
ಮೂಲಮ್ - 16½
ಸಸೈನ್ಯಾಸ್ತತ್ರ ಗಚ್ಛಾಮೋ ಯಾವತ್ತನ್ನ ಸಮಾಪ್ಯತೇ ॥
ತ್ಯಜೈನಂ ನರಶಾರ್ದೂಲ ಮಿಥ್ಯಾ ಸಂತಾಪಮಾಗತಮ್ ।
ಅನುವಾದ
ಅವನ ಹೋಮ ಕಾರ್ಯ ಸಮಾಪ್ತವಾಗುವ ಮೊದಲೇ ನಾವು ಸೈನ್ಯದೊಂದಿಗೆ ನಿಕುಂಭಿಳಾ ಮಂದಿರಕ್ಕೆ ಹೋಗೋಣ. ನರಶ್ರೇಷ್ಠನೇ! ಸುಳ್ಳಾದ ಈ ವಾರ್ತೆಯಿಂದ ಉಂಟಾದ ಸಂತಾಪವನ್ನು ತ್ಯಜಿಸಿಬಿಡು.॥16½॥
ಮೂಲಮ್ - 17
ಸೀದತೇ ಹಿ ಬಲಂ ಸರ್ವಂ ದೃಷ್ಟ್ವಾತ್ವಾಂ ಶೋಕಕರ್ಶಿತಮ್ ॥
ಮೂಲಮ್ - 18
ಇಹ ತ್ವಂ ಸ್ವಸ್ಥಹೃದಯಸ್ತಿಷ್ಠ ಸತ್ತ್ವಸಮುಚ್ಛ್ರಿತಃ ।
ಲಕ್ಷ್ಮಣಂ ಪ್ರೇಷಯಾಸ್ಮಾಭಿಃ ಸಹ ಸೈನ್ಯಾನುಕರ್ಷಿಭಿಃ ॥
ಅನುವಾದ
ಪ್ರಭೋ! ನೀವು ಶೋಕದಿಂದ ಸಂತಪ್ತನಾಗಿರುವುದನ್ನು ನೋಡಿ ಸೈನ್ಯವೆಲ್ಲ ದುಃಖಿತವಾಗಿದೆ. ನೀವು ಧೈರ್ಯದಲ್ಲಿ ಶ್ರೇಷ್ಠನಾಗಿರುವಿರಿ; ಆದ್ದರಿಂದ ಸ್ವಸ್ಥಚಿತ್ತರಾಗಿ ಇಲ್ಲೇ ಇರಿ. ಸೈನ್ಯದ ಜೊತೆಗೆ ಲಕ್ಷ್ಮಣನನ್ನು ನಮ್ಮೊಂದಿಗೆ ಕಳಿಸಿಕೊಡಿ.॥17-18॥
ಮೂಲಮ್ - 19
ಏಷ ತಂ ನರಶಾರ್ದೂಲೋ ರಾವಣಿಂ ನಿಶಿತೈಃ ಶರೈಃ ।
ತ್ಯಾಜಯಿಷ್ಯತಿ ತತ್ಕರ್ಮತತೋ ವಧ್ಯೋ ಭವಿಷ್ಯತಿ ॥
ಅನುವಾದ
ಈ ನರಶ್ರೇಷ್ಠ ಲಕ್ಷ್ಮಣನು ತನ್ನ ಹರಿತವಾದ ಬಾಣಗಳಿಂದ ರಾವಣಕುಮಾರನನ್ನು ಹೋಮ ತ್ಯಜಿಸಲು ವಿವಶಮಾಡುವನು. ಇದರಿಂದ ಅವನು ಸತ್ತುಹೋದಾನು.॥19॥
ಮೂಲಮ್ - 20
ತಸ್ಯೈತೇ ನಿಶಿತಾಸ್ತೀಕ್ಷ್ಣಾಃ ಪ್ರತಿಪತ್ರಾಂಗ ವಾಜಿನಃ ।
ಪತತ್ರಿಣ ಇವಾಸೌಮ್ಯಾಃ ಶರಾಃ ಪಾಸ್ಯಂತಿ ಶೋಣಿತಮ್ ॥
ಅನುವಾದ
ಲಕ್ಷ್ಮಣನ ನಿಶ್ಚಿತವಾದ ತೀಕ್ಷ್ಣವಾದ, ಪಕ್ಷಿಗಳ ರೆಕ್ಕೆಗಳನ್ನು ಹೊಂದಿರುವ ಕ್ರೂರವಾದ ಬಾಣಗಳು ಗೃಧ್ರಗಳಂತೆ ಇಂದ್ರಜಿತುವಿನ ರಕ್ತಪಾನ ಮಾಡುವವು.॥20॥
ಮೂಲಮ್ - 21
ತತ್ ಸಂದಿಶ ಮಹಾಬಾಹೋ ಲಕ್ಷ್ಮಣಂ ಶುಭಲಕ್ಷ್ಮಣಮ್ ।
ರಾಕ್ಷಸಸ್ಯ ವಿನಾಶಾಯ ವಜ್ರಂ ವಜ್ರಧರೋ ಯಥಾ ॥
ಅನುವಾದ
ವಜ್ರಧಾರೀ ಇಂದ್ರನು ದೈತ್ಯರ ವಧೆಗಾಗಿ ವಜ್ರಾಯುಧವನ್ನು ಪ್ರಯೋಗಿಸುವಂತೆ, ನೀವು ಆ ರಾಕ್ಷಸನ ವಿನಾಶಕ್ಕಾಗಿ ಶುಭಲಕ್ಷಣ ಸಂಪನ್ನ ಲಕ್ಷ್ಮಣನಿಗೆ ಆದೇಶವನ್ನು ನೀಡಿರಿ.॥21॥
ಮೂಲಮ್ - 22
ಮನುಜವರ ನ ಕಾಲವಿಪ್ರಕರ್ಷೋ
ರಿಪುನಿಧನಂ ಪ್ರತಿ ಯತ್ಕ್ಷಮೋಽದ್ಯ ಕರ್ತುಮ್ ।
ತ್ವಮತಿಸೃಜ ರಿಪೋರ್ವಧಾಯ ವಜ್ರಂ
ದಿವಿಜರಿಪೋರ್ಮಥನೇ ಯಥಾ ಮಹೇಂದ್ರಃ ॥
ಅನುವಾದ
ನರೇಶ್ವರನೇ! ಶತ್ರುವಿನ ವಿನಾಶಕ್ಕಾಗಿ ಈಗ ಸಮಯ ಕಳೆಯುವುದು ಉಚಿತವಾಗಿಲ್ಲ. ಅದಕ್ಕಾಗಿ ನೀವು ಶತ್ರುವಧೆಗಾಗಿ ದೇವದ್ರೋಹಿ ದೈತ್ಯರ ವಿನಾಶಕ್ಕಾಗಿ ದೇವೇಂದ್ರನು ವಜ್ರವನ್ನು ಪ್ರಯೋಗಿಸುವಂತೆ ಲಕ್ಷ್ಮಣನನ್ನು ಕಳಿಸಿರಿ.॥22॥
ಮೂಲಮ್ - 23
ಸಮಾಪ್ತಕರ್ಮಾ ಹಿ ಸ ರಾಕ್ಷಸರ್ಷಭೋ
ಭವತ್ಯದೃಶ್ಯಃ ಸಮರೇ ಸುರಾಸುರೈಃ ।
ಯುಯುತ್ಸತಾ ತೇನ ಸಮಾಪ್ತಕರ್ಮಣಾ
ಭವೇತ್ಸುರಾಣಾಮಪಿ ಸಂಶಯೋ ಮಹಾನ್ ॥
ಅನುವಾದ
ಆ ರಾಕ್ಷಸಶ್ರೇಷ್ಠ ಇಂದ್ರಜಿತನು ತನ್ನ ಅನುಷ್ಠಾನ ಪೂರ್ಣಗೊಳಿಸಿದರೆ ಸಮರಾಂಗಣದಲ್ಲಿ ದೇವಾಸುರರೂ ಅವನನ್ನು ನೋಡಲಾರರು. ತನ್ನ ಎಲ್ಲ ಕರ್ಮವನ್ನು ನೆರವೇರಿಸಿ ಯುದ್ಧಕ್ಕಾಗಿ ರಣರಂಗದಲ್ಲಿ ನಿಂತಾಗ ದೇವತೆಗಳಿಗೂ ತಮ್ಮ ರಕ್ಷಣೆಯ ವಿಷಯದಲ್ಲಿ ಸಂದೇಹ ಉಂಟಾದೀತು.॥23॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಎಂಭತ್ತನಾಲ್ಕನೆಯ ಸರ್ಗ ಪೂರ್ಣವಾಯಿತು.॥84॥