वाचनम्
ಭಾಗಸೂಚನಾ
ಸೀತೆಯು ಮೃತಳಾದಳೆಂಬ ಮಾತನ್ನು ಕೇಳಿ ಶ್ರೀರಾಮನ ಮೂರ್ಛೆ, ಲಕ್ಷ್ಮಣನ ಸಮಾಧಾನ
ಮೂಲಮ್ - 1
ರಾಘವಶ್ಚಾಪಿ ವಿಪುಲಂ ತಂ ರಾಕ್ಷಸ ವನೌಕಸಾಮ್ ।
ಶ್ರುತ್ವಾ ಸಂಗ್ರಾಮನಿರ್ಘೋಷಂ ಜಾಂಬವಂತ ಮುವಾಚ ಹ ॥
ಅನುವಾದ
ಶ್ರೀರಾಮನು ವಾನರ-ರಾಕ್ಷಸರ ಯುದ್ಧದ ಕೋಲಾಹಲವನ್ನು ಕೇಳಿ ಜಾಂಬವಂತನಲ್ಲಿ ಹೇಳಿದನು.॥1॥
ಮೂಲಮ್ - 2
ಸೌಮ್ಯ ನೂನಂ ಹನುಮತಾ ಕೃತಂ ಕರ್ಮ ಸುದುಷ್ಕರಮ್ ।
ಶ್ರೂಯತೇ ಹಿ ಯಥಾ ಭೀಮಃ ಸುಮಹಾನಾಯುಧಸ್ವನಃ ॥
ಅನುವಾದ
ಸೌಮ್ಯನೇ! ನಿಶ್ಚಯವಾಗಿ ಹನುಮಂತನು ಅತ್ಯಂತ ದುಷ್ಕರ ಕಾರ್ಯವನ್ನು ಪ್ರಾರಂಭಿಸಿರುವನು. ಅವನ ಆಯುಧಗಳ ಮಹಾ ಭಯಂಕರ ಶಬ್ದ ಸ್ಪಷ್ಟವಾಗಿ ಕೇಳಿಸುತ್ತಿದೆ.॥2॥
ಮೂಲಮ್ - 3
ತದ್ಗಚ್ಛ ಕುರು ಸಾಹಾಯ್ಯಂ ಸ್ವಬಲೇನಾಭಿಸಂವೃತಃ ।
ಕ್ಷಿಪ್ರಮೃಕ್ಷಪತೇ ತಸ್ಯ ಕಪಿಶ್ರೇಷ್ಠಸ್ಯ ಯುಧ್ಯತಃ ॥
ಅನುವಾದ
ಋಕ್ಷರಾಜನೇ! ನೀನು ತನ್ನ ಸೈನ್ಯದೊಂದಿಗೆ ಬೇಗನೇ ಹೋಗಿ ಕಾದಾಡು ತ್ತಿರುವ ಕಪಿಶ್ರೇಷ್ಠ ಹನುಮಂತನಿಗೆ ಸಹಾಯಮಾಡು.॥3॥
ಮೂಲಮ್ - 4
ಋಕ್ಷರಾಜಸ್ತಥೇತ್ಯುಕ್ತ್ವಾ ಸ್ವೇನಾನೀಕೇನ ಸಂವೃತಃ ।
ಆಗಚ್ಛತ್ಪಶ್ಚಿಮಂ ದ್ವಾರಂ ಹನುಮಾನ್ ಯತ್ರ ವಾನರಃ ॥
ಅನುವಾದ
‘ಹಾಗೆಯೇ ಆಗಲಿ’ ಎಂದು ಹೇಳಿ ತನ್ನ ಸೈನ್ಯವನ್ನುವೆರಿಸಿಕೊಂಡು ಋಕ್ಷರಾಜ ಜಾಂಬವಂತನು ವಾನರವೀರನು, ಹನುಮಂತ ನಿದ್ದ ಲಂಕೆಯ ಪಶ್ಚಿಮ ಬಾಗಿಲಿಗೆ ಹೋದನು.॥4॥
ಮೂಲಮ್ - 5
ಅಥಾಯಾಂತಂ ಹನೂಮನ್ತಂ ದದರ್ಶರ್ಕ್ಷಪತಿಸ್ತದಾ ।
ವಾನರೈಃ ಕೃತಸಂಗ್ರಾಮೈಃ ಶ್ವಸದ್ಭಿರಭಿಸಂವೃತಮ್ ॥
ಅನುವಾದ
ಯುದ್ಧ ಮಾಡಿ ನಿಟ್ಟುಸಿರು ಬಿಡುತ್ತಾ, ವಾನರರೊಂದಿಗೆ ಹನುಮಂತನು ಮರಳಿ ಬರುವುದನ್ನು ಜಾಂಬವನು ನೋಡಿದನು.॥5॥
ಮೂಲಮ್ - 6
ದೃಷ್ಟ್ವಾಪಥಿ ಹನೂಮಾಂಶ್ಚ ತದೃಕ್ಷಬಲಮುದ್ಯತಮ್ ।
ನೀಲಮೇಘನಿಭಂ ಭೀಮಂ ಸಂನಿವಾರ್ಯ ನ್ಯವರ್ತತ ॥
ಅನುವಾದ
ಹನುಮಂತನೂ ದಾರಿಯಲ್ಲೇ ನೀಲಮೇಘದಂತೆ ಭಯಂಕರ ಋಕ್ಷ ಸೈನ್ಯವು ಯುದ್ಧಕ್ಕಾಗಿ ಹೊರಟಿರುವುದನ್ನು ನೋಡಿ, ಅದನ್ನು ತಡೆದು ಎಲ್ಲರೊಂದಿಗೆ ಮರಳಿಬಂದನು.॥6॥
ಮೂಲಮ್ - 7
ಸ ತೇನ ಸಹಸೈನ್ಯೇನ ಸಂನಿಕರ್ಷಂ ಮಹಾಯಶಾಃ ।
ಶ್ರೀಘ್ರಮಾಗಮ್ಯ ರಾಮಾಯ ದುಃಖಿತೋ ವಾಕ್ಯಮಬ್ರವೀತ್ ॥
ಅನುವಾದ
ಮಹಾಯಶಸ್ವೀ ಹನುಮಂತನು ಆ ಸೈನ್ಯದೊಂದಿಗೆ ಶೀಘ್ರವಾಗಿ ಶ್ರೀರಾಮನ ಬಳಿಗೆ ಬಂದು, ದುಃಖಿತನಾಗಿ ಹೇಳಿದನು .॥7॥
ಮೂಲಮ್ - 8
ಸಮರೇ ಯುದ್ಧ್ಯಮಾನಾನಾಮಸ್ಮಾಕಂ ಪ್ರೇಕ್ಷತಾಂ ಚ ಸಃ ।
ಜಘಾನ ರುದತೀಂ ಸೀತಾಮಿಂದ್ರಜಿದ್ರಾವಣಾತ್ಮಜಃ ॥
ಅನುವಾದ
ಪ್ರಭೋ! ನಾವು ಯುದ್ಧದಲ್ಲಿ ತೊಡಗಿದ್ದಾಗ ಸಮರಾಂಗಣದಲ್ಲಿ ರಾವಣಪುತ್ರ ಇಂದ್ರಜಿತನು ನಾವು ನೋಡುನೋಡುತ್ತಿರುವಾಗಲೇ ಅಳುತ್ತಿರುವ ಸೀತೆಯನ್ನು ಕೊಂದುಹಾಕಿದನು.॥8॥
ಮೂಲಮ್ - 9
ಉದ್ಭ್ರಾಂತಚಿತ್ತಸ್ತಾಂ ದೃಷ್ಟ್ವಾ ವಿಷಣ್ಣೋಽಹಮರಿಂದಮ ।
ತದಹಂ ಭವತೋ ವೃತ್ತಂ ವಿಜ್ಞಾಪಯಿತುಮಾಗತಃ ॥
ಅನುವಾದ
ಶತ್ರುದಮನನೇ! ಸೀತೆಯನ್ನು ಆ ಸ್ಥಿತಿಯಲ್ಲಿ ನೋಡಿ ನನ್ನ ಚಿತ್ತ ಭ್ರಾಂತವಾಯಿತು. ವಿಷಾದದಲ್ಲಿ ಮುಳುಗಿಹೋದೆ. ಅದಕ್ಕಾಗಿ ನಿಮಗೆ ಈ ಸಮಾಚಾರ ತಿಳಿಸಲು ನಾನು ಬಂದಿರುವೆನು.॥9॥
ಮೂಲಮ್ - 10
ತಸ್ಯ ತದ್ವಚನಂ ಶ್ರುತ್ವಾ ರಾಘವಃ ಶೋಕಮೂರ್ಛಿತಃ ।
ನಿಪಪಾತ ತದಾ ಭೂಮೌ ಛಿನ್ನಮೂಲ ಇವ ದ್ರುಮಃ ॥
ಅನುವಾದ
ಹನುಮಂತನ ಈ ಮಾತನ್ನು ಕೇಳುತ್ತಲೇ ಶ್ರೀರಾಮನು ಬೇರು ಕಡಿದ ಮರದದಂತೆ ತತ್ಕ್ಷಣ ಮೂರ್ಛಿತನಾಗಿ ನೆಲಕ್ಕೆ ಬಿದ್ದುಬಿಟ್ಟನು.॥10॥
ಮೂಲಮ್ - 11
ತಂ ಭೂಮೌ ದೇವಸಂಕಾಶಂ ಪತಿತಂ ದೃಶ್ಯ ರಾಘವಮ್ ।
ಅಭಿಪೇತುಃ ಸಮುತ್ಪತ್ಯ ಸರ್ವತಃ ಕಪಿಸತ್ತಮಾಃ ॥
ಅನುವಾದ
ದೇವತುಲ್ಯ ತೇಜಸ್ವೀ ಶ್ರೀರಘುನಾಥನು ಭೂಮಿಯಲ್ಲಿ ಬಿದ್ದಿರುವುದನ್ನು ನೋಡಿ ಸಮಸ್ತ ಶ್ರೇಷ್ಠ ವಾನರರು ಎಲ್ಲ ಕಡೆಗಳಿಂದ ನೆಗೆದು ಅಲ್ಲಿಗೆ ಬಂದರು.॥11॥
ಮೂಲಮ್ - 12
ಆಸಿಂಚನ್ ಸಲಿಲೈಶ್ಚೈನಂ ಪದ್ಮೋತ್ಪಲ ಸುಗಂಧಿಭಿಃ ।
ಪ್ರದಹಂತಮಸಂಹಾರ್ಯಂ ಸಹಸಾಗ್ನಿಮಿವೋತ್ಥಿತಮ್ ॥
ಅನುವಾದ
ಅವರು ಕಮಲ ಮತ್ತು ಉತ್ಪಲದ ಸುಗಂಧಿತ ನೀರನ್ನು ತಂದು ಅವನ ಮೇಲೆ ಪ್ರೋಕ್ಷಿಸಿದರು. ಆಗ ಅವನು ಉರಿದೆದ್ದ ಬೆಂಕಿಯು ಸುಡುತ್ತಿರುವ, ಆರಿಸಲು ಅಸಾಧ್ಯವಾದ ಅಗ್ನಿಯಂತೆ ಕಂಡುಬರುತ್ತಿದ್ದನು.॥12॥
ಮೂಲಮ್ - 13
ತಂ ಲಕ್ಷ್ಮಣೋಽಥ ಬಾಹುಭ್ಯಾಂ ಪರಿಷ್ವಜ್ಯ ಸುದುಃಖಿತಃ ।
ಉವಾಚ ರಾಮಮಸ್ವಸ್ಥಂ ವಾಕ್ಯಂ ಹೇತ್ವರ್ಥ ಸಂಯುತಮ್ ॥
ಅನುವಾದ
ಅಣ್ಣನ ಸ್ಥಿತಿಯನ್ನು ನೋಡಿ ಲಕ್ಷ್ಮಣನಿಗೆ ಭಾರೀ ದುಃಖವಾಯಿತು. ತನ್ನೆರಡು ಬಾಹುಗಳಿಂದ ಶ್ರೀರಾಮನನ್ನು ತಬ್ಬಿಕೊಂಡು ಅಸ್ವಸ್ಥನಾದ ಶ್ರೀರಾಮನಲ್ಲಿ ಯುಕ್ತಿಯುಕ್ತ ಮತ್ತು ಪ್ರಯೋಜನಕಾರೀ ಮಾತನ್ನಾಡತೊಡಗಿದನು.॥13॥
ಮೂಲಮ್ - 14
ಶುಭೇ ವರ್ತ್ಮನಿ ತಿಷ್ಠಂತಂ ತ್ವಾಮಾರ್ಯ ವಿಜಿತೇಂದ್ರಿಯಮ್ ।
ಅನರ್ಥೇಭ್ಯೋ ನ ಶಕ್ನೋತಿ ತ್ರಾತುಂ ಧರ್ಮೋ ನಿರರ್ಥಕಃ ॥
ಅನುವಾದ
ಆರ್ಯನೇ! ನೀನು ಸದಾ ಶುಭಮಾರ್ಗದಲ್ಲಿ ಸ್ಥಿರನಾಗಿರುವವನೂ, ಜೀತೇಂದ್ರಿಯನೂ ಆಗಿರುವೆ. ಹೀಗಿದ್ದರೂ ಧರ್ಮವು ನಿನ್ನನ್ನು ಅನರ್ಥಗಳಿಂದ ರಕ್ಷಿಸಲಿಲ್ಲ. ಆದ್ದರಿಂದ ಅದು ನಿರರ್ಥವೆಂದೇ ತೋರುತ್ತದೆ.॥14॥
ಮೂಲಮ್ - 15
ಭೂತಾನಾಂ ಸ್ಥಾವರಾಣಾಂ ಚ ಜಂಗಮಾನಾಂ ಚ ದರ್ಶನಮ್ ।
ಯಥಾಸ್ತಿ ನ ತಥಾ ಧರ್ಮಸ್ತೇನ ನಾಸ್ತೀತಿ ಮೇ ಮತಿಃ ॥
ಅನುವಾದ
ಸ್ಥಾವರಗಳಿಗೂ ಹಾಗೂ ಪಶುಗಳೇ ಆದಿ ಜಂಗಮ ಪ್ರಾಣಿಗಳಿಗೂ ಸುಖದ ಪ್ರತ್ಯಕ್ಷ ಅನುಭವವಾಗುತ್ತದೆ, ಆದರೆ ಅವರ ಸುಖದಲ್ಲಿ ಧರ್ಮಕಾರಣವಾಗಿಲ್ಲ. (ಏಕೆಂದರೆ ಅವುಗಳಲ್ಲಿ ಧರ್ಮಾ ಚರಣದ ಶಕ್ತಿಯಾಗಲೀ, ಧರ್ಮದಲ್ಲಿ ಅಧಿಕಾರವೂ ಇರುವುದಿಲ್ಲ.) ಆದ್ದರಿಂದ ಧರ್ಮವು ಸುಖದ ಸಾಧನವಲ್ಲ ವೆಂಬುದೇ ನನ್ನ ವಿಚಾರವಾಗಿದೆ.॥15॥
ಮೂಲಮ್ - 16
ಯಥೈವ ಸ್ಥಾವರಂ ವ್ಯಕ್ತಂ ಜಂಗಮಂ ಚ ತಥಾವಿಧಮ್ ।
ನಾಯಮರ್ಥಸ್ತಥಾ ಯುಕ್ತಸ್ತ್ವ ದ್ವಿಧೋ ನ ವಿಪದ್ಯತೇ ॥
ಅನುವಾದ
ಸ್ಥಾವರಗಳು ಧರ್ಮಾಧಿಕಾರಿಗಳಲ್ಲದಿದ್ದರೂ ಸುಖಿಯಾಗಿ ಇರುತ್ತವೋ ಹಾಗೆಯೇ ಜಂಗಮಪ್ರಾಣಿಗಳೂ (ಪಶು ಆದಿ) ಕೂಡ ಸುಖಿಯಾಗಿವೆ, ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ. ‘ಧರ್ಮವಿರುವಲ್ಲಿ ಸುಖವು ಅವಶ್ಯವಾಗಿದೆ’ ಎಂದೂ ಹೇಳಲಾಗುವುದಿಲ್ಲ; ಏಕೆಂದರೆ ಆ ಸ್ಥಿತಿಯಲ್ಲಿ ನಿಮ್ಮಂಥ ಧರ್ಮಾತ್ಮರು ವಿಪತ್ತಿನಲ್ಲಿ ಬೀಳಬಾರದಾಗಿತ್ತು.॥16॥
ಮೂಲಮ್ - 17
ಯದ್ಯಧರ್ಮೋ ಭವೇದ್ಭೂತೋ ರಾವಣೋ ನರಕಂ ವ್ರಜೇತ್ ।
ಭವಾಂಶ್ಚ ಧರ್ಮ ಸಂಯುಕ್ತೋ ನೈವಂ ವ್ಯಸನಮಾಪ್ನುಯಾತ್ ॥
ಅನುವಾದ
ಅಧರ್ಮದ ಸತ್ತೆ ಇದ್ದರೆ ಅರ್ಥಾತ್ ಅಧರ್ಮವು ಅವಶ್ಯವಾಗಿ ದುಃಖದ ಸಾಧನವಾಗಿದ್ದರೆ ರಾವಣನು ನರಕದಲ್ಲೇ ಬಿದ್ದಿರಬೇಕಾಗಿತ್ತು ಮತ್ತು ನಿಮ್ಮಂತಹ ಧರ್ಮಾತ್ಮರ ಮೇಲೆ ಸಂಕಟ ಬರಬಾರದಾಗಿತ್ತು.॥17॥
ಮೂಲಮ್ - 18
ತಸ್ಯ ಚ ವ್ಯಸನಾಭಾವಾದ್ ವ್ಯಸನಂ ಚಾಗತೇ ತ್ವಯಿ ।
ಧರ್ಮೋ ಭವತ್ಯಧರ್ಮಶ್ಚ ಪರಸ್ಪರ ವಿರೋಧಿನೌ ॥
ಅನುವಾದ
ರಾವಣನ ಮೇಲೆ ಯಾವುದೇ ಸಂಕಟವಿಲ್ಲ ಹಾಗೂ ನೀನು ಸಂಕಟದಲ್ಲಿ ಬಿದ್ದಿರುವೆ; ಆದ್ದರಿಂದ ಧರ್ಮ ಮತ್ತು ಅಧರ್ಮ ಎರಡೂ ಪರಸ್ಪರ ವಿರೋಧಿಗಳಾದವು. ಧರ್ಮಾತ್ಮನಿಗೆ ದುಃಖ ಮತ್ತು ಪಾಪಾತ್ಮನಿಗೆ ಸುಖ ಸಿಗಲು ತೊಡಗಿತು.॥18॥
ಮೂಲಮ್ - 19
ಧರ್ಮೇಣೋಪಲಭೇದ್ ಧರ್ಮಮಧರ್ಮಂ ಚಾಪ್ಯಧರ್ಮತಃ ।
ಯದ್ಯಧರ್ಮೇಣ ಯುಜ್ಯೇಯುರ್ಯೇಷ್ವಧರ್ಮಃ ಪ್ರತಿಷ್ಠಿತಃ ॥
ಮೂಲಮ್ - 20
ನ ಧರ್ಮೇಣ ವಿಯುಜ್ಯೇರನ್ನಾಧರ್ಮರುಚಯೋ ಜನಾಃ ।
ಧರ್ಮೇಣಾಚರತಾಂ ತೇಷಾಂ ತಥಾ ಧರ್ಮಫಲಂ ಭವೇತ್ ॥
ಅನುವಾದ
ಧರ್ಮದಿಂದ ಧರ್ಮದ ಫಲ (ಸುಖ) ಹಾಗೂ ಅಧರ್ಮದಿಂದ ಅಧರ್ಮದ ಫಲ (ದುಃಖ)ವೇ ಸಿಗುವ ನಿಯಮವಿದ್ದರೆ, ರಾವಣಾದಿಗಳಲ್ಲಿ ಅಧರ್ಮವೇ ಪ್ರತಿಷ್ಠಿತವಾಗಿದೆ, ಅವರು ಅಧರ್ಮದ ಫಲಭೂತ ದುಃಖದಿಂದ ಕೂಡಿರುತ್ತಿದ್ದರು ಮತ್ತು ಅಧರ್ಮದಲ್ಲಿ ರುಚಿಯಿಲ್ಲದವರು ಧರ್ಮದ ಫಲ ರೂಪಿ ಸುಖದಿಂದಲೂ ಎಂದೂ ವಂಚಿತರಾಗುತ್ತಿರಲಿಲ್ಲ. ಧರ್ಮ ಮಾರ್ಗದಿಂದ ನಡೆಯುವ ಧರ್ಮಾತ್ಮಾ ಪುರುಷರಿಗೆ ಕೇವಲ ಧರ್ಮದ ಫಲ-ಸುಖವೇ ಸಿಗುತ್ತದೆ.॥19-20॥
ಮೂಲಮ್ - 21
ಯಸ್ಮಾದರ್ಥಾ ವಿವರ್ಧಂತೇ ಯೇಷ್ವಧರ್ಮಃ ಪ್ರತಿಷ್ಠಿತಃ ।
ಕ್ಲಿಶ್ಯಂತೇ ಧರ್ಮಶೀಲಾಶ್ಚ ತಸ್ಮಾದೇತೌ ನಿರರ್ಥಕೌ ॥
ಅನುವಾದ
ಆದರೆ ಯಾರಲ್ಲಿ ಅಧರ್ಮವೇ ಇದೆಯೋ ಅವನ ಧನ ಹೆಚ್ಚಾಗುತ್ತಾ ಇದೆ ಹಾಗೂ ಸ್ವಭಾವದಿಂದಲೇ ಧರ್ಮಾಚರಣ ಮಾಡುವವರು ಕ್ಲೇಶದಲ್ಲಿ ಬಿದ್ದಿರುವರು. ಆದ್ದರಿಂದ ಈ ಧರ್ಮ ಮತ್ತು ಅಧರ್ಮ ಎರಡು ನಿರರ್ಥಕವಾಗಿವೆ.॥21॥
ಮೂಲಮ್ - 22
ವಧ್ಯಂತೇ ಪಾಪಕರ್ಮಾಣೋ ಯದ್ಯಧರ್ಮೇಣ ರಾಘವ ।
ವಧಕರ್ಮಹತೋಽಧರ್ಮಃ ಸ ಹತಃ ಕಂ ವಧಿಷ್ಯತಿ ॥
ಅನುವಾದ
ರಘುನಂದನ! ಪಾಪಕರ್ಮಿಗಳನ್ನು ಅಧರ್ಮ ಮಾರ್ಗಿಗಳನ್ನು ಅಧರ್ಮದಿಂದಲೇ ಕೊಂದುದಾದರೆ ಈ ಹತ್ಯೆಯಿಂದ ನಿರಸನವಾಗಿ ಹೋದ ಅಧರ್ಮವು ಮುಂದೆ ಯಾರನ್ನು ತಾನೇ ಕೊಲ್ಲಬಲ್ಲುದು.॥22॥
ಮೂಲಮ್ - 23
ಅಥವಾ ವಿಹಿತೇನಾಯಂ ಹನ್ಯತೇ ಹಂತಿ ಚಾಪರಮ್ ।
ವಿಧಿಃಸ ಲಿಪ್ಯತೇ ತೇನ ನ ಸ ಪಾಪೇನ ಕರ್ಮಣಾ ॥
ಅನುವಾದ
ಅಧರ್ಮ ಮಾರ್ಗವನ್ನು ಅವಲಂಭಿಸಿದುದರಿಂದ ಒಬ್ಬನು ಕೊಲ್ಲಲ್ಪಡುತ್ತಾನೆ. ಅಥವಾ ಅಧರ್ಮ ಮಾರ್ಗದಲ್ಲಿರುವವನ್ನು ಒಬ್ಬನು ಕೊಲ್ಲುತ್ತಾನೆ. ಈ ಎರಡು ಕಾರ್ಯಗಳಿಂದೂ ಕರ್ತೃವು ಪಾಪಲಿಪ್ತನಾಗುವುದಿಲ್ಲ. ದೈವವೇ ಆ ಪಾಪದಲೇಪ ಹೊಂದುತ್ತದೆ. ಆದ್ದರಿಂದ ಅಧರ್ಮಮಾರ್ಗದಲ್ಲಿ ಇರುವವನನ್ನು ಕೊಲ್ಲುವುದರಿಂದ ಕರ್ತೃವಿಗೆ ಯಾವ ವಿಧವಾದ ತಾಪವೂ ಇಲ್ಲ.॥23॥
ಮೂಲಮ್ - 24
ಅದೃಷ್ಟ ಪ್ರತಿಕಾರೇಣ ಅವ್ಯಕ್ತೇನಾಸತಾ ಸತಾ ।
ಕಥಂ ಶಕ್ಯಂ ಪರಂ ಪ್ರಾಪ್ತುಂ ಧರ್ಮೇಣಾರಿವಿಕರ್ಷಣ ॥
ಅನುವಾದ
ಶತ್ರುಸೂದನ! ಯಾವುದು ಚೇತನವಲ್ಲದ್ದರಿಂದ ಪ್ರತೀಕಾರ ಜ್ಞಾನದಿಂದ ಶೂನ್ಯವಾಗಿದೆಯೋ ಅವ್ಯಕ್ತವಾಗಿದೆಯೋ ಮತ್ತು ಆಸತ್ತಿನಂತೆ ಇರುವ ಧರ್ಮದ ಮೂಲಕ ಬೇರೆ (ಪಾಪಾತ್ಮಾ) ಯವನನ್ನು ವಧ್ಯರೂಪದಿಂದ ಹೇಗೆ ಪಡೆಯುವುದು.॥24॥
ಮೂಲಮ್ - 25
ಯದಿ ಸತ್ಸ್ಯಾತ್ಸತಾಂ ಮುಖ್ಯ ನಾಸತ್ಸ್ಯಾತ್ತವ ಕಿಂಚನ ।
ತ್ವಯಾ ಯದೀದೃಶಂ ಪ್ರಾಪ್ತಂ ತಸ್ಮಾತ್ತನ್ನೋಪಪದ್ಯತೇ ॥
ಅನುವಾದ
ಸತ್ಪುರುಷರಲ್ಲಿ ಶ್ರೇಷ್ಠ ರಘುವೀರನೇ! ಸತ್ಕರ್ಮಜನಿತ ಅದೃಷ್ಟ ಅಥವಾ ಶುಭವೇ ಆಗುವುದಾದರೆ, ನಿಮಗೆ ಯಾವುದೇ ಅಶುಭ ಅಥವಾ ದುಃಖ ಪ್ರಾಪ್ತವಾಗಬಾರದು. ನಿಮಗೆ ಇಂತಹ ದುಃಖ ಪ್ರಾಪ್ತವಾಗುವುದಾದರೆ ಸತ್ಕರ್ಮಜನಿತ ಅದೃಷ್ಟ ಸತ್ತೇ ಆಗಿರಬೇಕು. ಈ ಮಾತಿನ ಹೊಂದಾಣಿಕೆ ಆಗುವುದಿಲ್ಲ.*॥25॥
ಟಿಪ್ಪನೀ
- ಈ ಅಧ್ಯಾಯದ 14 ರಿಂದ 25ನೆಯ ಶ್ಲೋಕದವರೆಗೆ ಲಕ್ಷ್ಮಣನು ಯಾವ ಧರ್ಮ ಮತ್ತು ಅಧರ್ಮದ ಖಂಡನೆ ಮಾಡಿರುವನೋ, ಅದು ಶ್ರೀರಾಮನನ್ನು ದುಃಖಿತನಾಗಿ ನೋಡಿ ಸ್ವತಃ ಅವನೂ ಹೆಚ್ಚು ದುಃಖಿಯಾಗಿ ಮಾಡಿರುವನು. ಹೇಗೆ ಪರಾತ್ಪರ ಶ್ರೀರಾಮನಿಗೆ ತನ್ನ ಪ್ರಿಯೆಯಮಾಯಾ ಮೂರ್ತಿಯ ವಧೆಯನ್ನು ನೋಡಿ ಶೋಕಪಡುವುದು ಕೇವಲ ಪ್ರೇಮದ ಲೀಲೆ ಮಾತ್ರವಾಗಿದೆ. ಹಾಗೆಯೇ ಪ್ರಿಯತಮ ಪ್ರಭುವಿನ ದುಃಖವನ್ನು ನೋಡಿ ದುಃಖಾವೇಶದ ಲೀಲೆಯಿಂದ ಈರೀತಿಯ ಅಸಂಗತವಾಗಿ ತೋರುವ ಮಾತು ಹೇಳುವುದೂ ಕೂಡ ಪ್ರೇಮಜನಿತ ಕಾತರತೆಯ ಪರಿಚಯವೇ ಆಗಿದೆ. ಮುಂದೆ ದುಃಖದ ಆವೇಶ ಕಡಿಮೆಯಾದಾಗ ಸ್ವತಃ ಲಕ್ಷ್ಮಣನು 44ನೆಯ ಶ್ಲೋಕದಲ್ಲಿ ಶ್ರೀರಾಮನ ಶೋಕಾಪನೋದನ ಮಾಡಿ ಅವನನ್ನು ಯುದ್ಧಕ್ಕಾಗಿ ಪ್ರವೃತ್ತಗೊಳಿಸಲೆಂದೇ ಅವನು ಈ ಮಾತುಗಳನ್ನು ಹೇಳಿದನೆಂಬುದು ಸ್ಪಷ್ಟವಾಗಿದೆ.
ಮೂಲಮ್ - 26
ಅಥವಾ ದುರ್ಬಲಃ ಕ್ಲೀಬೋ ಬಲಂಧರ್ಮೋಽನುವರ್ತತೇ ।
ದುರ್ಬಲೋ ಹೃತಮರ್ಯಾದೋ ನ ಸೇವ್ಯ ಇತಿ ಮೇ ಮತಿಃ ॥
ಅನುವಾದ
ದುರ್ಬಲ ಮತ್ತು ಹೇಡಿ (ಸ್ವತಃ ಕಾರ್ಯ ಸಾಧನೆಯಲ್ಲಿ ಅಸಮರ್ಥ)ಯಾದ್ದರಿಂದ ಧರ್ಮ ಪುರುಷಾರ್ಥದ ಅನುಸರಣ ಮಾಡಿದರೆ, ಆಗ ದುರ್ಬಲ ಮತ್ತು ಫಲದಾನದ ಮೇರೆರಹಿತ ಧರ್ಮದ ಸೇವನವೇ ಮಾಡಬಾರದು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯವಾಗಿದೆ.॥26॥
ಮೂಲಮ್ - 27
ಬಲಸ್ಯ ಯದಿ ಚೇದ್ಧರ್ಮೋ ಗುಣಭೂತಃ ಪರಾಕ್ರಮೈಃ ।
ಧರ್ಮಮುತ್ಸೃಜ್ಯ ವರ್ತಸ್ವ ಯಥಾ ಧರ್ಮೇ ತಥಾ ಬಲೇ ॥
ಅನುವಾದ
ಧರ್ಮವು ಬಲ ಅಥವಾ ಪುರುಷಾರ್ಥದ ಅಂಗ ಇಲ್ಲವೇ ಉಪಕರಣ ಮಾತ್ರವಾಗಿದ್ದರೆ ಧರ್ಮವನ್ನು ಬಿಟ್ಟು ಪರಾಕ್ರಮಪೂರ್ಣ ವರ್ತಿಸಿರಿ. ನೀವು ಧರ್ಮವನ್ನು ಪ್ರಧಾನವೆಂದು ತಿಳಿದು ಧರ್ಮದಲ್ಲೆ ತೊಡಗಿರುವಂತೆಯೇ ಬಲವನ್ನು ಪ್ರಧಾನವೆಂದು ತಿಳಿದು ಬಲದಲ್ಲೇ ಅಥವಾ ಪುರುಷಾರ್ಥದಲ್ಲೇ ಪ್ರವೃತ್ತರಾಗಿರಿ.॥27॥
ಮೂಲಮ್ - 28
ಅಥ ಚೇತ್ಸತ್ಯವಚನಂ ಧರ್ಮಃ ಕಿಲ ಪರಂತಪ ।
ಅನೃತಂತ್ವ್ವಯ್ಯಕರುಣೇ ಕಿಂ ನ ಬದ್ಧಸ್ತ್ವಯಾ ವಿನಾ ॥
ಅನುವಾದ
ಪರಂತಪ! ನೀವು ಸತ್ಯಭಾಷಣರೂಪ ಧರ್ಮವನ್ನು ಪಾಲಿಸುತ್ತಿದ್ದರೆ ಅರ್ಥಾತ್-ಪಿತನ ಆಜ್ಞೆಯನ್ನು ಸ್ವೀಕರಿಸಿ ಅವರ ಸತ್ಯದ ರಕ್ಷಣರೂಪ ಧರ್ಮವನ್ನು ಅನುಷ್ಠಾನ ಮಾಡುತ್ತಿದ್ದರೆ, ಜೇಷ್ಠ ಪುತ್ರನಾದ ನಿನ್ನಲ್ಲಿ ಯುವರಾಜಪದಲ್ಲಿ ಪಟ್ಟಾಭಿಷಿಕ್ತವಾಗಿಸುವ ಮಾತನ್ನು ಹೇಳಿದ ಆ ತಂದೆಯ ಸತ್ಯದ ಪಾಲನೆ ಮಾಡದಿದ್ದಾಗ ತಂದೆಗೆ ಯಾವ ಅಸತ್ಯರೂಪೀ ಅಧರ್ಮ ಪ್ರಾಪ್ತವಾಯಿತೋ, ಅದರ ಕಾರಣದಿಂದ ಅವರು ನಿನ್ನಿಂದ ವಿಯುಕ್ತರಾಗಿ ಸತ್ತುಹೋದರು. ಇಂತಹ ಸ್ಥಿತಿಯಲ್ಲಿ ರಾಜನು ಮೊದಲು ಹೇಳಿದ ಅಭಿಷೇಕ ಸಂಬಂಧೀ ಸತ್ಯವಚನದಿಂದ ನೀನು ಬಂಧಿತನಾಗಿರಲಿಲ್ಲವೇ? ಆ ಸತ್ಯವನ್ನು ಪಾಲಿಸಲು ಬಾಧ್ಯನಾಗಿರಲಿಲ್ಲವೇ? (ತಂದೆಯು ಮೊದಲು ಹೇಳಿದ ವಚನವನ್ನೇ ನೀನು ಪಾಲಿಸಿ ಯುವರಾಜನಾಗಿ ಅಭಿಷಿಕ್ತನಾಗಿದ್ದರೆ, ತಂದೆಯ ಮೃತ್ಯು ಆಗುತ್ತಿರಲಿಲ್ಲ. ಸೀತಾಪಹಾರವೂ ಆಗುತ್ತಿರಲಿಲ್ಲ. ಇದೆಲ್ಲ ಘಟಸಿಯೇ ಇರುತ್ತಿರಲಿಲ್ಲ..॥28॥
ಮೂಲಮ್ - 29
ಯದಿ ಧರ್ಮೋ ಭವೇದ್ಭೂತ ಅಧರ್ಮೋ ವಾ ಪರಂತಪ ।
ನ ಸ್ಮ ಹತ್ವಾ ಮುನಿಂ ವಜ್ರೀ ಕುರ್ಯಾದಿಜ್ಯಾಂ ಶತಕ್ರತುಃ ॥
ಅನುವಾದ
ಶತ್ರುದಮನ ಮಹಾರಾಜಾ! ಕೇವಲ ಧರ್ಮ ಅಥವಾ ಅಧರ್ಮವೇ ಪ್ರಧಾನವಾಗಿ ಅನುಷ್ಠಾನಕ್ಕೆ ಯೋಗ್ಯವಾಗಿದ್ದರೆ ವಜ್ರಧರ ಇಂದ್ರನು ಪೌರುಷದಿಂದ ವಿಶ್ವರೂಪ ಮುನಿಯ ಹತ್ಯೆ (ಅಧರ್ಮ) ಮಾಡಿ ಮತ್ತೆ ಯಜ್ಞ (ಧರ್ಮ)ದ ಅನುಷ್ಠಾನ ಮಾಡುತ್ತಿರಲಿಲ್ಲ.॥29॥
ಮೂಲಮ್ - 30
ಅಧರ್ಮಸಂಶ್ರಿತೋ ಧರ್ಮೋ ವಿನಾಶಯತಿ ರಾಘವ ।
ಸರ್ವಮೇತದ್ಯಥಾಕಾಮಂ ಕಾಕುತ್ಸ್ಥ ಕುರುತೇ ನರಃ ॥
ಅನುವಾದ
ರಘುನಂದನ! ಧರ್ಮದಿಂದ ಭಿನ್ನವಾದ ಪುರುಷಾರ್ಥದಿಂದ ದೊರಕಿರುವ ಧರ್ಮವೇ ಶತ್ರುಗಳ ನಾಶಮಾಡುತ್ತದೆ. ಆದ್ದರಿಂದ ಕಾಕುತ್ಸನೇ! ಪ್ರತಿಯೊಬ್ಬ ಮನುಷ್ಯನು ಆವಶ್ಯಕತೆ ಹಾಗೂ ರುಚಿಗನುಸಾರ ಇವೆಲ್ಲದರ (ಧರ್ಮ ಹಾಗೂ ಪುರುಷಾರ್ಥ) ಅನುಷ್ಠಾನ ಮಾಡುತ್ತಾನೆ.॥30॥
ಮೂಲಮ್ - 31
ಮಮ ಚೇದಂ ಮತಂ ತಾತ ಧರ್ಮೋಽಯಮಿತಿ ರಾಘವ ।
ಧರ್ಮಮೂಲಂ ತ್ವಯಾ ಚ್ಛಿನ್ನಂ ರಾಜ್ಯಮುತ್ಸೃಜತಾ ತದಾ ॥
ಅನುವಾದ
ಅಯ್ಯಾ ರಾಘವ! ಹೀಗೆ ಸಮ ಯಾನುಸಾರ ಧರ್ಮ ಹಾಗೂ ಪುರುಷಾರ್ಥಗಳಲ್ಲಿ ಯಾವು ದಾದರೊಂದರ ಆಶ್ರಯಿಸುವುದೇ ಧರ್ಮವಾಗಿದೆ; ಎಂಬುದೇ ನನ್ನ ಮತ ವಾಗಿದೆ. ನೀವು ಅಂದು ರಾಜ್ಯವನ್ನು ತ್ಯಜಿಸಿ ಧರ್ಮದ ಮೂಲಭೂತ ಅರ್ಥವನ್ನೇ ಕಿತ್ತುಹಾಕಿದಿರಿ.॥31॥
ಮೂಲಮ್ - 32
ಅರ್ಥೇಭ್ಯೋಽಥ ಪ್ರವೃತ್ತೇಭ್ಯಃ ಸಂವೃತ್ತೇಭ್ಯಸ್ತತಸ್ತತಃ ।
ಕ್ರಿಯಾಃ ಸರ್ವಾಃ ಪ್ರವರ್ತಂತೇ ಪರ್ವತೇಭ್ಯ ಇವಾಪಗಾಃ ॥
ಅನುವಾದ
ಪರ್ವತಗಳಿಂದ ನದಿಗಳು ಹೊರಡುವಂತೆಯೇ, ಎಲ್ಲಿಲ್ಲಿಂದಲೋ ಸಂಗ್ರಹಿಸಿ ತಂದ ಮತ್ತು ಬೆಳೆದ ಅರ್ಥದಿಂದಲೇ ಎಲ್ಲ ಕ್ರಿಯೆಗಳು (ಬೇಕಾದರೆ ಯೋಗಪ್ರಧಾನವಿರಲೀ, ಭೋಗ ಪ್ರಧಾನವಿರಲಿ) ನೆರವೇರುತ್ತವೆ. (ನಿಷ್ಕಾಮ ಭಾವ ಉಂಟಾದಾಗ ಎಲ್ಲ ಕ್ರಿಯೆಗಳು ಯೋಗಪ್ರಧಾನವಾಗುತ್ತವೆ; ಸಕಾಮ ಭಾವ ಉಂಟಾದಾಗ ಭೋಗಪ್ರಧಾನವಾಗುತ್ತವೆ).॥32॥
ಮೂಲಮ್ - 33
ಅರ್ಥೇನ ಹಿ ವಿಮುಕ್ತಸ್ಯ ಪುರುಷಸ್ಯಾಲ್ಪಚೇತಸಃ ।
ವಿಚ್ಛಿದ್ಯಂತೇ ಕ್ರಿಯಾಃ ಸರ್ವಾ ಗ್ರೀಷ್ಮೇ ಕುಸರಿತೋ ಯಥಾ ॥
ಅನುವಾದ
ಅರ್ಥದಿಂದ ವಂಚಿತನಾದ ಮಂದಬುದ್ಧಿ ಮಾನವನ ಎಲ್ಲ ಕ್ರಿಯೆಗಳು ಗ್ರೀಷ್ಮ ಋತುವಿನಲ್ಲಿ ಸಣ್ಣ ಸಣ್ಣ ನದಿಗಳು ಒಣಗಿ ಹೋಗುವಂತೆ ಭಿನ್ನ ಭಿನ್ನವಾಗುತ್ತವೆ.॥33॥
ಮೂಲಮ್ - 34
ಸೋಽಯಮರ್ಥಂ ಪರಿತ್ಯಜ್ಯ ಸುಖಕಾಮಃ ಸುಖೈಧಿತಃ ।
ಪಾಪಮಾಚರತೇ ಕರ್ತುಂ ತದಾ ದೋಷಃ ಪ್ರವರ್ತತೇ ॥
ಅನುವಾದ
ಸುಖದಲ್ಲಿ ಬೆಳೆದವನು ಪ್ರಾಪ್ತವಾದ ಅರ್ಥವನ್ನು ತ್ಯಜಿಸಿ ಸುಖವನ್ನು ಬಯಸಿದರೆ, ಆ ಅಭೀಷ್ಟ ಸುಖಕ್ಕಾಗಿ ಅನ್ಯಾಯಪೂರ್ವಕ ಅರ್ಥೋಪಾರ್ಜನ ಮಾಡುವುದರಲ್ಲಿ ಪ್ರವೃತ್ತನಾಗುತ್ತಾನೆ; ಅದಕ್ಕಾಗಿ ಅವನಿಗೆ ತಾಡನ, ಬಂಧನ, ಮೊದಲಾದ ದೋಷಗಳು ಪ್ರಾಪ್ತವಾಗುತ್ತವೆ.॥34॥
ಮೂಲಮ್ - 35
ಯಸ್ಯಾರ್ಥಾಸ್ತಸ್ಯ ಮಿತ್ರಾಣಿ ಯಸ್ಯಾರ್ಥಾಸ್ತಸ್ಯ ಬಾಂಧವಾಃ ।
ಯಸ್ಯಾರ್ಥಾಃ ಸ ಪುಮಾನ್ಲ್ಲೋಕೇ ಯಸ್ಯಾರ್ಥಾಃ ಸ ಚ ಪಂಡಿತಃ ॥
ಅನುವಾದ
ಧನವಿರುವವನಿಗೇ ಹೆಚ್ಚು ಮಿತ್ರರಿರುತ್ತಾರೆ. ಧನದ ಸಂಗ್ರಹವಿರುವವನಿಗೆ ಎಲ್ಲ ಜನರು ಬಂಧುಗಳಾಗುತ್ತಾರೆ. ಸಾಕಷ್ಟು ಧನ ಇರುವವನನ್ನೇ ಜಗತ್ತಿನಲ್ಲಿ ಪುರುಷನೆಂದೂ ವಿದ್ವಾಂಸನೆಂದೂ ತಿಳಿಯಲಾಗುತ್ತದೆ.॥35॥
ಮೂಲಮ್ - 36
ಯಸ್ಯಾರ್ಥಾಃ ಸ ಚ ವಿಕ್ರಾಂತೋ ಯಸ್ಯಾರ್ಥಾಃ ಸ ಚ ಬುದ್ಧಿಮಾನ್ ।
ಯಸ್ಯಾರ್ಥಾಃ ಸ ಮಹಾಭಾಗೋ ಯಸ್ಯಾರ್ಥಾಃ ಸ ಗುಣಾಧಿಕಃ ॥
ಅನುವಾದ
ಹೆಚ್ಚು ಧನವಿರುವವನೇ ಪರಾಕ್ರಮೀ, ಬುದ್ಧಿವಂತ ಎಂದು ತಿಳಿಯಲಾಗುತ್ತವೆ. ಅರ್ಥ ಸಂಗ್ರಹ ಇರುವವನೇ ಭಾಗ್ಯಶಾಲೀ, ಸದ್ಗುಣೀ ಎಂದು ತಿಳಿಯುತ್ತಾರೆ.॥36॥
ಮೂಲಮ್ - 37
ಅರ್ಥಸ್ಯೈತೇ ಪರಿತ್ಯಾಗೇ ದೋಷಾಃ ಪ್ರವ್ಯಾಹೃತಾ ಮಯಾ ।
ರಾಜ್ಯಮುತ್ಸೃಜತಾ ಧೀರ ಯೇನ ಬುದ್ಧಿಸ್ತ್ವಯಾ ಕೃತಾ ॥
ಅನುವಾದ
ಅರ್ಥವನ್ನು ತ್ಯಜಿಸಿದ್ದರಿಂದ ಮಿತ್ರರ ಅಭಾವ ಮುಂತಾದ ದೋಷಗಳು ಪ್ರಾಪ್ತವಾಗುತ್ತವೆ, ಅದನ್ನು ನಾನು ಸ್ಪಷ್ಟವಾಗಿ ವರ್ಣಿಸಿರುವೆನು. ನೀನು ರಾಜ್ಯವನ್ನು ಬಿಟ್ಟಾಗ ಯಾವ ಲಾಭವನ್ನು ಯೋಚಿಸಿ, ತನ್ನ ಬುದ್ಧಿಯಲ್ಲಿ ಅರ್ಥ ತ್ಯಾಗದ ಭಾವನೆಗೆ ಸ್ಥಾನ ಕೊಟ್ಟಿರುವೆಯೋ ನಾನು ತಿಳಿಯುವುದಿಲ್ಲ.॥37॥
ಮೂಲಮ್ - 38
ಯಸ್ಯಾರ್ಥಾ ಧರ್ಮಕಾಮಾರ್ಥಾಸ್ತಸ್ಯ ಸರ್ವಂ ಪ್ರದಕ್ಷಿಣಮ್ ।
ಅಧನೇನಾರ್ಥಕಾಮೇನ ನಾರ್ಥಃ ಶಕ್ಯೋ ವಿಚಿನ್ವಿತಾ ॥
ಅನುವಾದ
ಧನ ಇರುವವನ ಧರ್ಮ ಮತ್ತು ಕಾಮರೂಪ ಎಲ್ಲ ಪ್ರಯೋಜನ ಸಿದ್ಧವಾಗುತ್ತವೆ. ಅವನಿಗೆ ಎಲ್ಲವೂ ಅನುಕೂಲವಾಗುತ್ತದೆ. ನಿರ್ಧನನಾದವನು ಅರ್ಥದ ಇಚ್ಛೆನ್ನಿರಿಸಿ ಅದರ ಅನುಸಂಧಾನ ಮಾಡಿದರೂ ಪುರುಷಾರ್ಥವಿಲ್ಲದೆ ಅದನ್ನು ಪಡೆಯಲಾರನು.॥38॥
ಮೂಲಮ್ - 39
ಹರ್ಷಃ ಕಾಮಶ್ಚ ದರ್ಪಶ್ಚ ಧರ್ಮಃ ಕ್ರೋಧಃ ಶಮೋ ದಮಃ ।
ಅರ್ಥಾದೇತಾನಿ ಸರ್ವಾಣಿ ಪ್ರವರ್ತಂತೇ ನರಾಧಿಪ ॥
ಅನುವಾದ
ನರೇಶ್ವರನೇ! ಹರ್ಷ, ಕಾಮ, ದರ್ಪ, ಧರ್ಮ, ಕ್ರೋಧ, ಶಮ, ದಮ - ಇವೆಲ್ಲವೂ ಧನದಿಂದಲೇ ಸಲವಾಗುತ್ತವೆ.॥39॥
ಮೂಲಮ್ - 40
ಯೇಷಾಂ ನಶ್ಯತ್ಯಯಂ ಲೋಕಶ್ಚರತಾಂ ಧರ್ಮಚಾರಿಣಾಮ್ ।
ತೇಽರ್ಥಾಸ್ತ್ವಯಿ ನ ದೃಶ್ಯಂತೇ ದುರ್ದಿನೇಷು ಯಥಾ ಗ್ರಹಾಃ ॥
ಅನುವಾದ
ಧರ್ಮಾಚರಣೆ ಮಾಡುವ ಹಾಗೂ ತಪಸ್ಸಿನಲ್ಲಿ ತೊಡಗಿರುವ ಪುರುಷರ ಈ ಲೋಕ (ಐಹಿಕ ಪುರುಷಾರ್ಥ) ಅರ್ಥಾಭಾವದಿಂದಾಗಿ ನಾಶವಾಗಿ ಹೋಗುವುದನ್ನು ಸ್ಪಷ್ಟವಾಗಿ ನೋಡಲಾಗುತ್ತದೆ. ಅದೇ ಅರ್ಥವು ಈ ದುರ್ದಿನಗಳಲ್ಲಿ ನಿಮ್ಮ ಬಳಿ ಆಕಾಶದಲ್ಲಿ ಮೋಡಗಳು ಕವಿದಾಗ ಗ್ರಹಣ ದರ್ಶನವಾಗದಂತೆಯೇ, ಕಂಡು ಬರುವುದಿಲ್ಲ.॥40॥
ಮೂಲಮ್ - 41
ತ್ವಯಿ ಪ್ರವ್ರಜಿತೇ ವೀರ ಗುರೋಶ್ಚ ವಚನೇ ಸ್ಥಿತೇ ।
ರಕ್ಷಸಾಪಹೃತಾ ಭಾರ್ಯಾ ಪ್ರಾಣೈಃ ಪ್ರಿಯತರಾ ತವ ॥
ಅನುವಾದ
ವೀರನೇ! ನೀನು ಪೂಜ್ಯ ಪಿತನ ಆಜ್ಞೆಯನ್ನು ಪಾಲಿಸಲು ರಾಜ್ಯವನ್ನು ಬಿಟ್ಟು ಕಾಡಿಗೆ ಬಂದೆ ಹಾಗೂ ಸತ್ಯದ ಪಾಲನೆಯಲ್ಲೇ ಸ್ಥಿರವಾಗಿ ನಿಂತೆ; ಆದರೆ ರಾಕ್ಷಸರು ನಿನಗೆ ಪ್ರಾಣಕ್ಕಿಂತ ಹೆಚ್ಚು ಪ್ರಿಯಳಾದ ನಿನ್ನ ಪತ್ನಿಯನ್ನು ಕದ್ದೊಯ್ದರು.॥41॥
ಮೂಲಮ್ - 42
ತದದ್ಯ ವಿಪುಲಂ ವೀರ ದುಃಖಮಿಂದ್ರಜಿತಾ ಕೃತಮ್ ।
ಕರ್ಮಣಾ ವ್ಯಪನೇಷ್ಯಾಮಿ ತಸ್ಮಾದುತ್ತಿಷ್ಠ ರಾಘವ ॥
ಅನುವಾದ
ವೀರರಘುನಂದನ! ಇಂದು ನಮಗೆ ಮಹಾದುಃಖವನ್ನು ಕೊಟ್ಟು ಇಂದ್ರಜಿತನನ್ನು ನಾನು ನನ್ನ ಪರಾಕ್ರಮದಿಂದ ಇಲ್ಲವಾಗಿಸುವೆನು. ಆದ್ದರಿಂದ ಚಿಂತೆಯನ್ನು ಬಿಟ್ಟು ಮೇಲೇಳು.॥42॥
ಮೂಲಮ್ - 43
ಉತ್ತಿಷ್ಠ ನರಶಾರ್ದೂಲ ದೀರ್ಘಬಾಹೋ ದೃಢವ್ರತ ।
ಕಿಮಾತ್ಮಾನಂ ಮಹಾತ್ಮಾನಮಾತ್ಮಾನಂ ನಾವಬುಧ್ಯಸೇ ॥
ಅನುವಾದ
ನರಶ್ರೇಷ್ಠನೇ! ಸುವ್ರತನೇ! ಮಹಾಬಾಹೋ! ಏಳು, ನೀನು ಬುದ್ಧಿವಂತ ಮತ್ತು ಪರಮಾತ್ಮನಾಗಿರುವೆ. ಹೀಗೆ ನೀನು ನಿನ್ನನ್ನು ಏಕೆ ತಿಳಿಯುವುದಿಲ್ಲ.॥43॥
ಮೂಲಮ್ - 44
ಅಯಮನಘ ತವೋದಿತಃ ಪ್ರಿಯಾರ್ಥಂ
ಜನಕಸುತಾ ನಿಧನಂ ನೀರಿಕ್ಷ್ಯರುಷ್ಟಃ ।
ಸರಥಗಜಹಯಾಂ ಸರಾಕ್ಷಸೇಂದ್ರಾಂ
ಭೃಶಮಿಷುಭಿರ್ವಿನಿಪಾತಯಾಮಿ ಲಂಕಾಮ್ ॥
ಅನುವಾದ
ಅನಘನೇ! ನಿನ್ನ ಪ್ರಿಯವನ್ನು ಮಾಡಲು, ನಿನ್ನ ಗಮನ ಶೋಕದಿಂದ ತೊಡೆದು ಪುರುಷಾರ್ಥದ ಕಡೆಗೆ ಅಕೃಷ್ಟ ಮಾಡಲೆಂದೇ ನಾನು ಇದೆಲ್ಲ ಹೇಳಿದುದು. ಈಗ ಜಾನಿಕಿಯ ಮೃತ್ಯುವಿನ ವೃತ್ತಾಂತ ತಿಳಿದು ನನ್ನ ರೋಷ ಹೆಚ್ಚಾಗಿದೆ; ಆದ್ದರಿಂದ ಇಂದು ನನ್ನ ಬಾಣಗಳಿಂದ ಆನೆ, ಕುದುರೆ, ರಥ, ರಾಕ್ಷಸರಾಜ ರಾವಣನ ಸಹಿತ ಇಡೀ ಲಂಕೆಯನ್ನು ಧೂಳಿ ಪಟವಾಗಿಸುವೆನು.॥44॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಎಂಭತ್ತಮೂರನೆಯ ಸರ್ಗ ಪೂರ್ಣವಾಯಿತು.॥83॥