०८२ हनुमता युद्धे कपिसैन्यनिर्वहणम्

वाचनम्
ಭಾಗಸೂಚನಾ

ಹನುಮಂತನ ಮುಂದಾಳುತನದಿಂದ ವಾನರ-ರಾಕ್ಷಸರ ಯುದ್ಧ, ಹನುಮಂತನು ಶ್ರೀರಾಮನ ಬಳಿಗೆ ಹೋದುದು, ಇಂದ್ರಜಿತು ನಿಕುಂಭಿಲಾ ಮಂದಿರಕ್ಕೆ ಹೋಗಿ ಹೋಮ ಮಾಡಿದುದು

ಮೂಲಮ್ - 1

ಶ್ರುತ್ವಾ ತು ಭೀಮನಿರ್ಹ್ರಾದಂ ಶಕ್ರಾಶನಿಸಮಸ್ವನಮ್ ।
ವೀಕ್ಷ್ಯಮಾಣಾ ದಿಶಃ ಸರ್ವಾ ದುದ್ರುವುರ್ವಾನರಾ ಭೃಶಮ್ ॥

ಅನುವಾದ

ಇಂದ್ರನ ವಜ್ರಾಯುಧದ ಶಬ್ದದಂತೆ ಅತ್ಯಂತ ಭಯಂಕರ ಸಿಂಹನಾದವನ್ನು ಕೇಳಿ ವಾನರ ಶ್ರೇಷ್ಠರು ಸುತ್ತಲೂ ನೋಡುತ್ತಾ ಪಲಾಯನ ಮಾಡತೊಡಗಿದರು.॥1॥

ಮೂಲಮ್ - 2

ತಾನುವಾಚ ತತಃ ಸರ್ವಾನ್ ಹನೂಮಾನ್ಮಾರುತಾತ್ಮಜಃ ।
ವಿಷಣ್ಣವದನಾನ್ ದೀನಾಂಸ್ತ್ರಸ್ತಾನ್ ವಿದ್ರವತಃ ಪೃಥಕ್ ॥

ಅನುವಾದ

ದೀನ, ವಿಷಾದ ಗ್ರಸ್ತರಾಗಿ ಭಯದಿಂದ ಓಡುತ್ತಿರುವ ವಾನರರೆಲ್ಲರನ್ನು ನೋಡಿ ಹನುಮಂತನು ಹೇಳಿದನು.॥2॥

ಮೂಲಮ್ - 3

ಕಸ್ಮಾದ್ವಿಷಣ್ಣ ವದನಾ ವಿದ್ರವಧ್ವಂ ಪ್ಲವಂಗಮಾಃ ।
ತ್ಯಕ್ತ ಯುದ್ಧ ಸಮುತ್ಸಾಹಾಃ ಶೂರತ್ವಂ ಕ್ವ ನು ವೋ ಗತಮ್ ॥

ಅನುವಾದ

ವಾನರರೇ! ನೀವು ವಿಷಾದಪಟ್ಟು ಯುದ್ಧೋತ್ಸಾಹ ಬಿಟ್ಟು ಏಕೆ ಓಡಿಹೋಗು ತ್ತಿರುವಿರಿ? ನಿಮ್ಮಲ್ಲಿರುವ ಶೌರ್ಯವು ಎಲ್ಲಿಗೆ ಹೋಯಿತು.॥3॥

ಮೂಲಮ್ - 4

ಪೃಷ್ಠತೋಽನುವ್ರಜಧ್ವಂ ಮಾಮಗ್ರತೋ ಯಾಂತಮಾಹವೇ ।
ಶೂರೈರಭಿಜನೋಪೇತೈರಯುಕ್ತಂ ಹಿ ನಿವರ್ತಿತುಮ್ ॥

ಅನುವಾದ

ರಣರಂಗದಲ್ಲಿ ನಾನು ಮುಂದೆ ಹೋಗುತ್ತೇನೆ. ನೀವೆಲ್ಲ ನನ್ನ ಹಿಂದೆ ಬನ್ನಿರಿ. ಉತ್ತಮ ಕುಲೋತ್ಪನ್ನ ಶೂರವೀರರಿಗೆ ಯುದ್ಧದಲ್ಲಿ ಬೆನ್ನು ತೋರುವುದು ಅನುಚಿತವಾಗಿದೆ.॥4॥

ಮೂಲಮ್ - 5

ಏವಮುಕ್ತಾಃ ಸುಸಂಕ್ರುದ್ಧಾ ವಾಯುಪುತ್ರೇಣ ಧೀನುತಾ ।
ಶೈಲಶೃಂಗಾನ್ ದ್ರುಮಾಂಶ್ಚೈವ ಜಗೃಹುರ್ಹೃಷ್ಟಮಾನಸಾಃ ॥

ಅನುವಾದ

ಬುದ್ಧಿವಂತ ವಾಯುಪುತ್ರನು ಹೀಗೆ ಹೇಳಿದಾಗ ವಾನರರು ಸಂತೋಷಗೊಂಡು ರಾಕ್ಷಸರ ಕುರಿತು ಅತ್ಯಂತ ಕುಪಿತರಾಗಿ ಕೈಗಳಲ್ಲಿ ಪರ್ವತಶಿಖರ, ವೃಕ್ಷಗಳನ್ನು ಎತ್ತಿಕೊಂಡರು.॥5॥

ಮೂಲಮ್ - 6

ಅಭಿಪೇತುಶ್ಚ ಗರ್ಜಂತೋ ರಾಕ್ಷಸಾನ್ವಾನರರ್ಷಭಾಃ ।
ಪರಿವಾರ್ಯ ಹನೂಮಂತಮನ್ವಯುಶ್ಚ ಮಹಾಹವೇ ॥

ಅನುವಾದ

ಆ ಶ್ರೇಷ್ಠ ವಾನರ ವೀರರು ಮಹಾಸಮರದಲ್ಲಿ ಹನುಮಂತನ ಸುತ್ತಲೂ ನೆರೆದು ಅವನ ಹಿಂದೆ ಹಿಂದೆಯೇ ನಡೆದರು. ಹಾಗೂ ಜೋರಾಗಿ ಗರ್ಜಿಸುತ್ತಾ ಅವರು ರಾಕ್ಷಸರ ಮೇಲೆ ಆಕ್ರಮಣ ಮಾಡಿದರು.॥6॥

ಮೂಲಮ್ - 7

ಸ ತೈರ್ವಾನರಮುಖ್ಯೈಸ್ತು ಹನೂಮಾನ್ಸರ್ವತೋ ವೃತಃ ।
ಹುತಾಶನ ಇವಾರ್ಚಿಷ್ಮಾನದ ಹಚ್ಛತ್ರುವಾಹಿನೀಮ್ ॥

ಅನುವಾದ

ಶ್ರೇಷ್ಠ ವಾನರರಿಂದ ಸುತ್ತುವರಿಯಲ್ಪಟ್ಟ ಮಹಾಕಪಿ ಹನುಮಂತನು ಜ್ವಾಲಾ ಮಾಲೆಗಳಿಂದ ಕೂಡಿದ ಪ್ರಜ್ವಲಿತ ಅಗ್ನಿಯಂತೆ ಶತ್ರು ಸೈನ್ಯವನ್ನು ಸುಡತೊಡಗಿದನು.॥7॥

ಮೂಲಮ್ - 8

ಸ ರಾಕ್ಷಸಾನಾಂ ಕದನಂ ಚಕಾರ ಸುಮಹಾಕಪಿಃ ।
ವೃತೋ ವಾನರಸೈನ್ಯೇನ ಕಾಲಾಂತಕ ಯಮೋಪಮಃ ॥

ಅನುವಾದ

ವಾನರ ಸೈನಿಕರಿಂದ ಪರಿವೃತನಾದ ಮಹಾಕಪಿ ಹನುಮಂತನು ಪ್ರಳಯಕಾಲದ ಸಂಹಾರಕಾರೀ ಯಮರಾಜನಂತೆ ರಾಕ್ಷಸರನ್ನು ಸಂಹಾರ ಮಾಡತೊಡಗಿದನು.॥8॥

ಮೂಲಮ್ - 9

ಸ ತು ಶೋಕೇನ ಚಾವಿಷ್ಟಃ ಕೋಪೇನ ಮಹತಾಕಪಿಃ ।
ಹನೂಮಾನ್ರಾವಣಿರಥೇ ಮಹತೀಂ ಪಾತಯಚ್ಛಿಲಾಮ್ ॥

ಅನುವಾದ

ಸೀತೆಯ ವಧೆಯಿಂದ ಅವರ ಮನಸ್ಸಿನಲ್ಲಿ ಬಹಳ ಶೋಕವಾಗುತ್ತಿತ್ತು ಹಾಗೂ ಇಂದ್ರ ಜಿತುವಿನ ಅತ್ಯಾಚಾರದಿಂದ ಅವರ ಕ್ರೋಧ ನೆತ್ತಿಗೇರಿತ್ತು. ಅದರಿಂದ ಹನುಮಂತನು ರಾವಣಿಯ ರಥದ ಮೇಲೆ ದೊಡ್ಡ ಶಿಲೆಯನ್ನು ಎಸೆದನು.॥9॥

ಮೂಲಮ್ - 10

ತಾಮಾಪತನಿಂತೀಂ ದೃಷ್ಟ್ವೈವ ರಥಃ ಸಾರಥಿನಾ ತದಾ ।
ವಿಧೇಯಾಶ್ವಸಮಾಯುಕ್ತಃ ವಿದೂರಮಪವಾಹಿತಃ ॥

ಅನುವಾದ

ತನ್ನ ಮೇಲೆ ಬೀಳುತ್ತಿರುವ ಶಿಲೆಯನ್ನು ನೋಡಿ ಕೂಡಲೇ ಆಜ್ಞಾಕಾರಿ ಸಾರಥಿಯು ಕುದುರೆ ಹೂಡಿದ ರಥವನ್ನು ದೂರ ಕೊಂಡು ಹೋದನು.॥10॥

ಮೂಲಮ್ - 11

ತಮಿಂದ್ರಜಿತಮಪ್ರಾಪ್ಯ ರಥಸ್ಥಂ ಸಹಸಾರಥಿಮ್ ।
ವಿವೇಶ ಧರಣೀಂ ಭಿತ್ತ್ವಾ ಸಾ ಶಿಲಾ ವ್ಯರ್ಥಮುದ್ಯತಾ ॥

ಅನುವಾದ

ಆದ್ದರಿಂದ ಸಾರಥಿಸಹಿತ ಕುಳಿತಿರುವ ಇಂದ್ರಜಿತುವಿನವರೆಗೆ ತಲುಪದೆ ಆ ಶಿಲೆಯು ನೆಲಕ್ಕೆ ಬಿದ್ದು ಭೂಮಿಯೊಳಗೆ ಸೇರಿ ಹೋಯಿತು. ಹೀಗೆ ಅದು ವ್ಯರ್ಥವಾಗಿ ಹೋಯಿತು.॥11॥

ಮೂಲಮ್ - 12

ಪತಿತಾಯಾಂ ಶಿಲಾಯಾಂ ತು ವ್ಯಥಿತಾ ರಕ್ಷಸಾಂ ಚಮೂಃ ।
ನಿಪತಂತ್ಯಾ ಚ ಶಿಲಯಾ ರಾಕ್ಷಸಾಮಥಿತಾಭೃಶಮ್ ॥

ಅನುವಾದ

ಆ ಶಿಲೆಯು ರಾಕ್ಷಸ ಸೈನಿಕರ ಮೇಲೆ ಬಿದ್ದು ಅನೇಕ ರಾಕ್ಷಸರನ್ನು ಜಜ್ಜಿಹಾಕಿತು.॥12॥

ಮೂಲಮ್ - 13

ತಮಭ್ಯಧಾವನ್ಶತಶೋ ನದಂತಃ ಕಾನನೌಕಸಃ ।
ತೇ ದ್ರುಮಾಂಶ್ಚ ಮಹಾಕಾಯಾ ಗಿರಿಶೃಂಗಾಣಿ ಚೋದ್ಯತಾಃ ॥

ಅನುವಾದ

ಅನಂತರ ನೂರಾರು ವಿಶಾಲಕಾಯ ವಾನರರು ಕೈಗಳಲ್ಲಿ ವೃಕ್ಷ ಮತ್ತು ಪರ್ವತ ಗಳನ್ನೆತ್ತಿಕೊಂಡು ಗರ್ಜಿಸುತ್ತಾ ಇಂದ್ರಜಿತನ ಮೇಲೆ ಆಕ್ರಮಣ ಮಾಡಿದರು.॥13॥

ಮೂಲಮ್ - 14½

ಕ್ಷಿಪಂತೀಂದ್ರಜಿತಂ ಸಂಖ್ಯೇ ವಾನರಾ ಭೀಮವಿಕ್ರಮಾಃ ।
ವೃಕ್ಷ ಶೈಲಮಹಾವರ್ಷಂ ವಿಸೃಜಂತಃ ಪ್ಲವಂಗಮಾಃ ॥
ಶತ್ರೂಣಾಂ ಕದನಂ ಚಕ್ರುರ್ನೇದುಶ್ಚ ವಿವಿಧೈಃ ಸ್ವನೈಃ ।

ಅನುವಾದ

ಆ ಭಯಾನಕ ಪರಾಕ್ರಮೀ ವಾನರ ವೀರ ಯುದ್ಧದಲ್ಲಿ ಇಂದ್ರಜಿತನ ಮೇಲೆ ಪರ್ವತ ಶಿಖರ ಹಾಗೂ ವೃಕ್ಷಗಳನ್ನು ಎಸೆಯತೊಡಗಿದರು. ವೃಕ್ಷ-ಪರ್ವತಗಳ ಭಾರೀ ವೃಷ್ಟಿ ಮಾಡುತ್ತಾ ಆ ವಾನರವೀರರು ಶತ್ರುಗಳನ್ನು ಸಂಹರಿಸುತ್ತಾ, ಬಗೆ ಬಗೆಯಾಗಿ ಗರ್ಜಿಸತೊಡಗಿದರು.॥14½॥

ಮೂಲಮ್ - 15½

ವಾನರೈಸ್ತೈರ್ಮಹಾಭೀಮೈರ್ಘೋರರೂಪಾ ನಿಶಾಚರಾಃ ॥
ವೀರ್ಯಾದಭಿಹತಾ ವೃಕ್ಷೈರ್ವ್ಯಚೇಷ್ಟಂತ ರಣಕ್ಷಿತೌ ।

ಅನುವಾದ

ಮಹಾಭಯಂಕರ ವಾನರರು ಘೋರರೂಪಧಾರೀ ನಿಶಾಚರರನ್ನು ಹೊಡೆದುರುಳಿಸಿದರು. ರಾಕ್ಷಸರು ರಣರಂಗ ದಲ್ಲಿ ಬಿದ್ದು ಚಡಪಡಿಸತೊಡಗಿದರು.॥15½॥

ಮೂಲಮ್ - 16½

ಸಸೈನ್ಯಮಭಿವೀಕ್ಷ್ಯಾಥ ವಾನರಾರ್ದಿತಮಿಂದ್ರಜಿತ್ ॥
ಪ್ರಗೃಹೀತಾಯುಧಃ ಕ್ರುದ್ಧಃ ಪರಾನಭಿಮುಖೋ ಯಯೌ ।

ಅನುವಾದ

ತನ್ನ ಸೈನ್ಯವು ವಾನರರಿಂದ ಹತನಾದುದನ್ನು ನೋಡಿ ಇಂದ್ರಜಿತು ಕ್ರೋಧ ದಿಂದ ಅಸ್ತ್ರ-ಶಸ್ತ್ರ ಧರಿಸಿ ಶತ್ರುಗಳ ಎದುರಿಗೆ ಬಂದನು.॥16½॥

ಮೂಲಮ್ - 17

ಸ ಶರೌಘಾನವಸೃಜನ್ ಸ್ವ ಸೈನ್ಯೇನಾಭಿಸಂವೃತಃ ॥

ಮೂಲಮ್ - 18

ಜಘಾನ ಕಪಿಶಾರ್ದೂಲಾನ್ ಸುಬಹೂನ್ ಧೃಢವಿಕ್ರಮಃ ।
ಶೂಲೈರಶನಿಭಿಃ ಖಡ್ಗೈಃ ಪಟ್ಟಿಶೈಃ ಶೂಲಮುದ್ಗರೈಃ ॥

ಅನುವಾದ

ತನ್ನ ಸೈನ್ಯದಿಂದ ಪರಿವೃತನಾದ ಆ ಸುದೃಢಪರಾಕ್ರಮೀ ವೀರ ನಿಶಾಚರನು ಬಾಣಸಮೂಹಗಳನ್ನು ಮಳೆಗರೆಯುತ್ತಾ, ಶೂಲ, ವಜ್ರ,ಖಡ್ಗ, ಪಟ್ಟಿಶ ಹಾಗೂ ಮುದ್ಗರಗಳಿಂದ ಅನೇಕ ವಾನರವೀರರನ್ನು ಸಂಹರಿಸಿದನು.॥17-18½॥

ಮೂಲಮ್ - 19½

ತೇ ಚಾಪ್ಯನುಚರಾಸ್ತಸ್ಯ ವಾನರಾ ಜಘ್ನುರಾಹವೇ ।
ಸುಸ್ಕಂಧವಿಟಪೈಃ ಶೈಲೈಃ ಶಿಲಾಭಿಶ್ಚ ಮಹಾಬಲಃ ॥
ಹನೂಮಾನ್ಕದನಂ ಚಕ್ರೇ ರಕ್ಷಸಾಂ ಭೀಮಕರ್ಮಣಾಮ್ ।

ಅನುವಾದ

ವಾನರರೂ ಕೂಡ ಯುದ್ಧದಲ್ಲಿ ಇಂದ್ರಜಿತನ ಅನುಚರರನ್ನು ವಧಿಸಿದರು. ಮಹಾಬಲಿ ಹನುಮಂತನು ಸುಂದರ ರೆಂಬೆಗಳಿಂದ ಕೂಡಿದ ತಾಲವೃಕ್ಷ ಹಾಗೂ ಶಿಲೆಗಳಿಂದ ಭೀಮಕರ್ಮ ರಾಕ್ಷಸರನ್ನು ಸಂಹರಿಸತೊಡಗಿದನು.॥19½॥

ಮೂಲಮ್ - 20½

ಸಂನಿವಾರ್ಯ ಪರಾನೀಕಮಬ್ರವೀತ್ತಾನ್ ವನೌಕಸಃ ॥
ಹನೂಮಾನ್ ಸಂನ್ನಿವರ್ತಧ್ವಂ ನ ನಃ ಸಾಧ್ಯಮಿದಂ ಬಲಮ್ ।

ಅನುವಾದ

ಹೀಗೆ ಶತ್ರುಗಳ ಸೈನ್ಯದ ವೇಗವನ್ನು ತಡೆದು ವಾನರರಲ್ಲಿ ಹೇಳಿದನು - ಬಂಧುಗಳೇ! ಈಗ ನೀವು ಹಿಂದಿರುಗಿರಿ. ಇನ್ನು ಈ ಸೈನ್ಯವನ್ನು ಸಂಹರಿಸುವ ಆವಶ್ಯಕತೆ ಉಳಿಯಲಿಲ್ಲ.॥20½॥

ಮೂಲಮ್ - 21½

ತ್ಯಕ್ತ್ವಾ ಪ್ರಾಣಾನ್ವಿಚೇಷ್ಟಂತೋ ರಾಮಪ್ರಿಯ ಚಿಕೀರ್ಷವಃ ॥
ಯನ್ನಿಮಿತ್ತಂ ಹಿ ಯುಧ್ಯಾಮೋ ಹತಾ ಸಾ ಜನಕಾತ್ಮಜಾ ।

ಅನುವಾದ

ನಾವು ಯಾರಿಗಾಗಿ ಶ್ರೀರಾಮನ ಪ್ರಿಯ ಮಾಡುವ ಇಚ್ಛೆ ಇರಿಸಿ ಪ್ರಾಣದ ಹಂಗನ್ನು ಬಿಟ್ಟು, ಪೂರ್ಣಪ್ರಯತ್ನದಿಂದ ಯುದ್ಧ ಮಾಡುತ್ತಿದ್ದೆವೋ ಆ ಜನಕಾತ್ಮಜೆ ಸೀತೆಯು ಸತ್ತುಹೋದಳು.॥21½॥

ಮೂಲಮ್ - 22½

ಇಮಮರ್ಥಂ ಹಿ ವಿಜ್ಞಾಪ್ಯ ರಾಮಂ ಸುಗ್ರೀವಮೇವ ಚ ॥
ತೌ ಯತ್ಪ್ರತಿವಿಧಾಸ್ಯೇತೇ ತತ್ಕರಿಷ್ಯಾಮಹೇ ವಯಮ್ ।

ಅನುವಾದ

ಈಗ ಈ ಮಾತಿನ ಸೂಚನೆಯನ್ನು ಭಗವಾನ್ ಶ್ರೀರಾಮ ಮತ್ತು ಸುಗ್ರೀವರಿಗೆ ತಿಳಿಸಬೇಕು. ಮತ್ತೆ ಅವರಿಬ್ಬರೂ ಇದಕ್ಕಾಗಿ ಹೇಗೆ ಪ್ರತಿಕಾರ ಯೋಚಿಸುವರೋ ಅದನ್ನೇ ನಾವು ಮಾಡೋಣ.॥22½॥

ಮೂಲಮ್ - 23½

ಇತ್ಯುಕ್ತ್ವಾ ವಾನರಶ್ರೇಷ್ಠೋ ವಾರಯನ್ ಸರ್ವವಾನರಾನ್ ॥
ಶನೈಃ ಶನೈರಸಂತ್ರಸ್ತಃ ಸಬಲಃ ಸಂನ್ಯವರ್ತತ ।

ಅನುವಾದ

ಹೀಗೆ ಹೇಳಿ ವಾನರಶ್ರೇಷ್ಠ ಹನುಮಂತನು ಎಲ್ಲ ವಾನರರನ್ನು ಯುದ್ಧದಿಂದ ತಡೆದು, ನಿಧಾನವಾಗಿ ಎಲ್ಲ ಸೈನ್ಯದೊಂದಿಗೆ ನಿರ್ಭಯವಾಗಿ ಮರಳಿದನು.॥23½॥

ಮೂಲಮ್ - 24½

ತತಃ ಪ್ರೇಕ್ಷ್ಯ ಹನೂಮಂತಂ ವ್ರಜಂತಂ ಯತ್ರ ರಾಘವಃ ॥
ಸ ಹೋತುಕಾಮೋ ದುಷ್ಟಾತ್ಮಾ ಗತಶ್ಚೈತ್ಯಂ ನಿಕುಂಭಿಲಾಮ್ ।

ಅನುವಾದ

ಹನುಮಂತನು ಶ್ರೀರಾಮನ ಬಳಿಗೆ ಹೋಗುವುದನ್ನು ನೋಡಿ ದುರಾತ್ಮಾ ಇಂದ್ರಜಿತನು ಹೋಮ ಮಾಡುವ ಇಚ್ಛೆಯಿಂದ ನಿಕುಂಭಿಳಾದೇವಿಯ ಮಂದಿರಕ್ಕೆ ಹೋದನ.॥24½॥

ಮೂಲಮ್ - 25

ನಿಕುಂಭಿಲಾಮಧಿಷ್ಠಾಯ ಪಾವಕಂ ಜುಹವೇಂದ್ರಜಿತ್ ॥

ಮೂಲಮ್ - 26

ಯಜ್ಞಭೂಮ್ಯಾಂ ತತೋ ಗತ್ವಾ ಪಾವಕಸ್ತೇನ ರಕ್ಷಸಾ ।
ಹೂಯಮಾನಃ ಪ್ರಜಜ್ವಾಲ ಹೋಮಶೋಣಿತಭುಕ್ತದಾ ॥

ಮೂಲಮ್ - 27

ಸಾರ್ಚಿಃಪಿನದ್ಧೋ ದದೃಶೇ ಹೋಮಶೋಣಿತ ತರ್ಪಿತಃ ।
ಸಂಧ್ಯಾಗತ ಇವಾದಿತ್ಯಃ ಸುತೀವ್ರೊಽಗ್ನಿಃ ಸಮತ್ಥಿತಃ ॥

ಅನುವಾದ

ನಿಕುಂಭಿಳಾ ಮಂದಿರಕ್ಕೆ ಹೋಗಿ ಆ ನಿಶಾಚರ ಇಂದ್ರಜಿತನು ಅಗ್ನಿಗೆ ಆಹುತಿ ನೀಡಿದನು. ಅನಂತರ ಯಜ್ಞಶಾಲೆಗೆ ಹೋಗಿ ಅವನು ಯಜ್ಞೇಶ್ವರನನ್ನು ಹೋಮ ದಿಂದ ತೃಪ್ತಗೊಳಿಸಿದನು. ಆ ಹೋಮಶೋಣಿತ ಭೋಜೀ ಅಭಿಚಾರಿಕ ಅಗ್ನಿದೇವತೆ ಆಹುತಿ ಪಡೆಯುತ್ತಲೇ ಹೋಮ ಮತ್ತು ಶೋಣಿತದಿಂದ ತೃಪ್ತನಾಗಿ ಪ್ರಜ್ವಲಿತನಾಗಿ, ಜ್ವಾಲೆಗಳಿಂದ ಆವೃತನಾಗಿ ಕಂಡು ಬಂತು. ಆ ತೀವ್ರ ತೇಜಸ್ಸುಳ್ಳ ಅಗ್ನಿದೇವತೆ ಸಂಧ್ಯಾಕಾಲದ ಸೂರ್ಯನಂತೆ ಪ್ರಕಟನಾಗಿದ್ದನು.॥25-27॥

ಮೂಲಮ್ - 28

ಅಥೇಂದ್ರಜಿದ್ರಾಕ್ಷಸಭೂತಯೇ ತು
ಜುಹಾವ ಹವ್ಯಂ ವಿಧಿನಾ ವಿಧಾನವಿತ್ ।
ದೃಷ್ಟ್ವಾ ವ್ಯತಿಷ್ಠಂತ ಚ ರಾಕ್ಷಸಾಸ್ತೇ
ಮಹಾಸಮೂಹೇಷು ನಯಾನ ಯಜ್ಞಾಃ ॥

ಅನುವಾದ

ಇಂದ್ರಜಿತು ಯಜ್ಞವಿಧಾನವನ್ನು ಬಲ್ಲವನಾಗಿದ್ದನು. ಅವನು ಸಮಸ್ತ ರಾಕ್ಷಸರ ಅಭ್ಯುದಯಕ್ಕಾಗಿ ವಿಧಿವತ್ತಾಗಿ ಹವನ ಪ್ರಾರಂಭಿಸಿದನು. ಆ ಹೋಮವನ್ನು ನೋಡಿ ಮಹಾಯುದ್ಧದ ಸಂದರ್ಭಗಳಲ್ಲಿ ನೀತಿ-ಅನೀತಿ, ಕರ್ತವ್ಯಾಕರ್ತವ್ಯವನ್ನು ತಿಳಿದ ರಾಕ್ಷಸರು ನಿಂತುಕೊಂಡರು.॥2.॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಎಂಭತ್ತೆರಡನೆಯ ಸರ್ಗ ಪೂರ್ಣವಾಯಿತು.॥82॥