वाचनम्
ಭಾಗಸೂಚನಾ
ಇಂದ್ರಜಿತುವಿನಿಂದ ಮಾಯಾಸೀತೆಯ ವಧೆ
ಮೂಲಮ್ - 1
ವಿಜ್ಞಾಯ ತು ಮನಸ್ತಸ್ಯ ರಾಘವಸ್ಯ ಮಹಾತ್ಮನಃ ।
ಸಂನಿವೃತ್ಯಾಹವಾತ್ತಸ್ಮಾತ್ಪ್ರಂವಿವೇಶ ಪುರಂ ತತಃ ॥
ಅನುವಾದ
ಮಹಾತ್ಮಾ ರಘುನಾಥನ ಮನೋಭಾವವನ್ನು ತಿಳಿದು ಇಂದ್ರಜಿತು ಯುದ್ಧದಿಂದ ನಿವೃತ್ತನಾಗಿ ಲಂಕೆಗೆ ಹೊರಟು ಹೋದನು.॥1॥
ಮೂಲಮ್ - 2
ಸೋಽನುಸ್ಮೃತ್ಯ ವಧಂ ತೇಷಾಂ ರಾಕ್ಷಸಾನಾಂ ತರಸ್ವಿನಾಮ್ ।
ಕ್ರೋಧತಾಮ್ರೇಕ್ಷಣಃ ಶೂರೋ ನಿರ್ಜಗಾಮಾಥ ರಾವಣಿಃ ॥
ಅನುವಾದ
ಅಲ್ಲಿಗೆ ಹೋದ ಮೇಲೆ ಬಲಿಷ್ಠ ರಾಕ್ಷಸರ ವಧೆಯ ಸ್ಮರಣೆಯಾಗತ್ತಲೇ ವೀರ ರಾವಣನ ಕುಮಾರನ ಕಣ್ಣು ಕೆಂಪಾಗಿ, ಅವನು ಪುನಃ ಯುದ್ಧಕ್ಕಾಗಿ ಹೊರಟನು.॥2॥
ಮೂಲಮ್ - 3
ಸ ಪಶ್ಚಿಮೇನ ದ್ವಾರೇಣ ನಿರ್ಯಯೌ ರಾಕ್ಷಸೈರ್ವೃತಃ ।
ಇಂದ್ರಜಿತ್ ಸು ಮಹಾವೀರ್ಯಃ ಪೌಲಸ್ತ್ಯೋ ದೇವಕಂಟಕಃ ॥
ಅನುವಾದ
ಪುಲಸ್ತ್ಯಕುಲದಲ್ಲಿ ಹುಟ್ಟಿದ ಮಹಾಪರಾಕ್ರಮಿ ಇಂದ್ರಜಿತನು ದೇವತೆಗಳಿಗೆ ಕಂಟಕಪ್ರಾಯನಾಗಿದ್ದ. ಅವನು ರಾಕ್ಷಸರ ದೊಡ್ಡ ಸೈನ್ಯದೊಂದಿಗೆ ನಗರದ ಪಶ್ಚಿಮ ದ್ವಾರದಿಂದ ಪುನಃ ಹೊರಬಿದ್ದನು.॥3॥
ಮೂಲಮ್ - 4
ಇಂದ್ರಜಿತ್ತು ತತೋ ದೃಷ್ಟ್ವಾ ಭ್ರಾತರೌ ರಾಮಲಕ್ಷ್ಮಣೌ ।
ರಣಾಯಾಭ್ಯುದ್ಯತೌ ವೀರೌ ಮಾಯಾಂ ಪ್ರಾದುಷ್ಕರೋತ್ತದಾ ॥
ಅನುವಾದ
ಇಬ್ಬರೂ ಸಹೋದರರು ಶ್ರೀರಾಮ-ಲಕ್ಷ್ಮಣರು ಯುದ್ಧಕ್ಕೆ ಉದ್ಯುಕ್ತರಾದುದನ್ನು ನೋಡಿ ಇಂದ್ರಜಿತನು ಆಗ ಮಾಯೆಯನ್ನು ಪ್ರಕಟಿಸಿದನು.॥4॥
ಮೂಲಮ್ - 5
ಇಂದ್ರಜಿತ್ತು ರಥೇ ಸ್ಥಾಪ್ಯ ಸೀತಾಂ ಮಾಯಾಮಯೀಂ ತದಾ ।
ಬಲೇನ ಮಹತಾವೃತ್ಯ ತಸ್ಯಾ ವಧಮರೋಚಯತ್ ॥
ಅನುವಾದ
ಅವನು ಮಾಯಾಮಯ ಸೀತೆಯನ್ನು ನಿರ್ಮಿಸಿ ಆಕೆಯನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು, ವಿಶಾಲ ಸೈನ್ಯದ ನಡುವೆ ಇರಿಸಿ ಅವಳನ್ನು ವಧಿಸಲು ವಿಚಾರಮಾಡಿದನು.॥5॥
ಮೂಲಮ್ - 6
ಮೋಹನಾರ್ಥಂ ತು ಸರ್ವೇಷಾಂ ಬುದ್ಧಿಂ ಕೃತ್ವಾ ಸುದುರ್ಮತಿಃ ।
ಹಂತುಂ ಸೀತಾಂ ವ್ಯವಸಿತೋ ವಾನರಾಭಿಮುಖೋ ಯಯೌ ॥
ಅನುವಾದ
ದುರ್ಬುದ್ಧಿಯಾದ ಅವನು ಎಲ್ಲರನ್ನು ಮಾಯೆಯಲ್ಲಿ ಕೆಡಹಲು ಯೋಚಿಸಿ ಮಾಯಾಸೀತೆಯನ್ನು ಕೊಲ್ಲಲು ನಿಶ್ಚಯಿಸಿ, ಇದೇ ಅಭಿಪ್ರಾಯದಿಂದ ಅವನು ವಾನರರ ಎದುರಿಗೆ ಬಂದನು.॥6॥
ಮೂಲಮ್ - 7
ತಂ ದೃಷ್ಟ್ವಾ ತ್ವಭಿನಿರ್ಯಾಂತಂ ಸರ್ವೇ ತೇ ಕಾನನೌಕಸಃ ।
ಉತ್ಪೇತುರಭಿ ಸಂಕ್ರುದ್ಧಾಃ ಶಿಲಾಹಸ್ತಾ ಯುಯುತ್ಸವಃ ॥
ಅನುವಾದ
ಯುದ್ಧಕ್ಕಾಗಿ ಬಂದಿರುವ ಅವನನ್ನು ನೋಡಿ ವಾನರರೆಲ್ಲ ಕ್ರೋಧಗೊಂಡು ಕೈಗಳಲ್ಲಿ ಶಿಲೆಗಳನ್ನು ಎತ್ತಿಕೊಂಡು ಅವನ ಮೇಲೆ ಆಕ್ರಮಿಸಿದರು.॥7॥
ಮೂಲಮ್ - 8
ಹನೂಮಾನ್ ಪುರತಸ್ತೇಷಾಂ ಜಗಾಮ ಕಪಿಕುಂಜರಃ ।
ಪ್ರಗೃಹ್ಯ ಸುಮಹಚ್ಛೃಂಗಂ ಪರ್ವತಸ್ಯ ದುರಾಸದಮ್ ॥
ಅನುವಾದ
ಕಪಿಕುಂಜರ ಹನುಮಂತನು ಎಲ್ಲರಿಗೆ ಮುಂದೆ ನಡೆದನು. ಬೇರೆಯವರಿಂದ ಎತ್ತಲು ಅಸಾಧ್ಯವಾಗಿದ್ದ ದೊಡ್ಡ ಪರ್ವತವೊಂದನ್ನು ಎತ್ತಿಕೊಂಡಿದ್ದನು.॥8॥
ಮೂಲಮ್ - 9
ಸ ದದರ್ಶ ಹತಾನಂದಾಂ ಸೀತಾಮಿಂದ್ರಜಿತೋ ರಥೇ ।
ಏಕವೇಣೀಧರಾಂ ದೀನಾಮುಪವಾಸ ಕೃಶಾನನಾಮ್ ॥
ಅನುವಾದ
ಅವನು ಇಂದ್ರಜಿತುವಿನ ರಥದಲ್ಲಿ ಸೀತೆಯನ್ನು ನೋಡಿದನು. ಅವನ ಉತ್ಸಾಹ ಇಳಿದುಹೋಯಿತು. ಅವಳು ಏಕವೇಣಿ ಧರೆಯಾಗಿ ಬಹಳ ದುಃಖಿತೆಯಾಗಿದ್ದು, ಉಪವಾಸದಿಂದಾಗಿ ಮುಖ ಬಾಡಿಹೋಗಿತ್ತು.॥9॥
ಮೂಲಮ್ - 10
ಪರಿಕ್ಲಿಷ್ಟೈಕವಸನಾಮಮೃಜಾಂ ರಾಘವಪ್ರಿಯಾಮ್ ।
ರಜೋಮಲಾಭ್ಯಾಮಾಲಿಪ್ತೈಃ ಸರ್ವಗಾತ್ರೈರ್ವರಸ್ತ್ರಿಯಮ್ ॥
ಅನುವಾದ
ಆಕೆಯ ಶರೀರದಲ್ಲಿ ಒಂದೇ ಮಲಿನ ಸೀರೆ ಇತ್ತು. ರಾಘವನ ಪ್ರಿಯೆ ಸೀತೆಯು ಅಂಗರಾಗವನ್ನು ಹಚ್ಚಿರಲಿಲ್ಲ. ಮೈಯೆಲ್ಲ ಧೂಳಿ ಧೂಸರಿತವಾಗಿದ್ದರೂ ಅವಳು ಶ್ರೇಷ್ಠ ಮತ್ತು ಸುಂದರಳಾಗಿ ಕಾಣುತ್ತಿದ್ದಳು.॥10॥
ಮೂಲಮ್ - 11
ತಾಂ ನಿರೀಕ್ಷ್ಯ ಮುಹೂರ್ತಂ ತು ಮೈಥಿಲೀಮಧ್ಯವಸ್ಯ ಚ ।
ಬಭೂವಾಚಿರದೃಷ್ಟಾ ಹಿ ತೇನ ಸಾ ಜನಕಾತ್ಮಜಾ ॥
ಅನುವಾದ
ಹನುಮಂತನು ಸ್ವಲ್ಪ ಹೊತ್ತು ಆಕೆಯನ್ನೇ ನೋಡು ತ್ತಿದ್ದನು. ಕೊನೆಗೆ ಇವಳು ನಿಶ್ಚಯವಾಗಿ ಮಿಥಿಲೇಶ ಕುಮಾರಿಯೇ ಆಗಿದ್ದಾಳೆ ಎಂದು ನಿಶ್ಚಯಿಸಿದನು. ಅವನು ಕೆಲವೇ ದಿನಗಳ ಹಿಂದೆ ನೋಡಿದ್ದನು, ಆದ್ದರಿಂದ ಬೇಗನೆ ಗುರುತಿಸಿದನು.॥11॥
ಮೂಲಮ್ - 12
ಅಬ್ರವೀತ್ತಾಂ ತು ಶೋಕಾರ್ತಾಂ ನಿರಾನಂದಾಂ ತಪಸ್ವಿನೀಮ್ ।
ದೃಷ್ಟ್ವಾ ರಥಸ್ಥಿತಾಂ ದೀನಾಂ ರಾಕ್ಷಸೇಂದ್ರಸುತಶ್ರಿತಾಮ್ ॥
ಅನುವಾದ
ರಾಕ್ಷಸೇಂದ್ರನ ಪುತ್ರ ಇಂದ್ರಜಿತು ವಿನ ಬಳಿ ರಥದಲ್ಲಿ ಕುಳಿತಿರುವ ತಪಸ್ವಿನೀ ಸೀತೆಯು ಶೋಕದಿಂದ ಪೀಡಿತಳಾಗಿ ದೀನ ಹಾಗೂ ಆನಂದಶೂನ್ಯಳಾಗಿದ್ದಳು.॥12॥
ಮೂಲಮ್ - 13
ಕಿಂ ಸಮರ್ಥಿತಮಸ್ಯೇತಿ ಚಿಂತಯನ್ ಸ ಮಹಾಕಪಿಃ ।
ಸಹ ತೈರ್ವಾನರಶ್ರೇಷ್ಠೈರಭ್ಯಧಾವತ ರಾವಣಿಮ್ ॥
ಅನುವಾದ
ಸೀತೆಯನ್ನು ಅಲ್ಲಿ ನೋಡಿ, ಕೊನೆಗೆ ರಾಕ್ಷಸ ಅಭಿಪ್ರಾಯವೇನು ಎಂದು ಮಹಾಕಪಿ ಹನುಮಂತನು ಯೋಚಿಸಿದನು. ಮತ್ತೆ ಅವನು ಮುಖ್ಯ ವಾನರರೊಂದಿಗೆ ರಾವಣಿಯ ಕಡೆಗೆ ಧಾವಿಸಿದನು.॥13॥
ಮೂಲಮ್ - 14
ತದ್ವಾನರಬಲಂ ದೃಷ್ಟ್ವಾ ರಾವಣಿಃ ಕ್ರೋಧಮೂರ್ಛಿತಃ ।
ಕೃತ್ವಾ ವಿಕೋಶಂ ನಿಸ್ತ್ರಿಂಶಂ ಮೂರ್ಧ್ನಿ ಸೀತಾಮಕರ್ಷಯತ್ ॥
ಅನುವಾದ
ವಾನರರು ತನ್ನ ಕಡೆಗೆ ಬರುತ್ತಿರುವುದನ್ನು ನೋಡಿ ಇಂದ್ರಜಿತುವಿಗೆ ಅಸೀಮ ಕ್ರೋಧವುಂಟಾಯಿತು. ಅವನು ಖಡ್ಗವನ್ನು ಒರೆಯಿಂದ ತೆಗೆದು ಸೀತೆಯ ಕೂದಲನ್ನು ಹಿಡಿದು ಆಕೆಯನ್ನು ಎಳೆದಾಡಿದನು.॥1.॥
ಮೂಲಮ್ - 15
ತಾಂ ಸ್ತ್ರಿಯಂ ಪಶ್ಯತಾಂ ತೇಷಾಂ ತಾಡಯಾಮಾಸ ರಾಕ್ಷಸಃ ।
ಕ್ರೋಶತೀಂ ರಾಮ ರಾಮೇತಿ ಮಾಯಯಾ ಯೋಜಿತಾಂ ರಥೇ ॥
ಅನುವಾದ
ಮಾಯೆಯಿಂದ ರಥದಲ್ಲಿ ಕುಳಿತ ಆ ಸ್ತ್ರೀ ಹಾ ರಾಮ! ಹಾ ರಾಮ! ಎಂದು ಕೂಗುತ್ತಿದ್ದಳು. ಹಾಗೂ ಆ ರಾಕ್ಷಸನು ಎಲ್ಲರೂ ನೋಡುತ್ತಿರುವಾಗಲೇ ಆ ಸ್ತ್ರೀಯನ್ನು ಹೊಡೆಯುತ್ತಿದ್ದನು.॥15॥
ಮೂಲಮ್ - 16
ಗೃಹೀತ ಮೂರ್ಧಜಾಂ ದೃಷ್ಟ್ವಾ ಹನೂಮಾನ್ ದೈನ್ಯಮಾಗತಃ ।
ದುಃಖಜಂ ವಾರಿ ನೇತ್ರಾಭ್ಯಾಮುತ್ಸೃಜನ್ ಮಾರುತಾತ್ಮಜಃ ॥
ಅನುವಾದ
ಸೀತೆಯ ಕೂದಲುಗಳನ್ನು ಹಿಡಿದಿರುವುದನ್ನು ನೋಡಿ ಹನುಮಂತನಿಗೆ ಬಹಳ ದುಃಖವಾಯಿತು. ಮಾರುತಿಯ ಕಣ್ಣುಗಳಿಂದ ನೀರು ಹರಿಯತೊಡಗಿತು.॥16॥
ಮೂಲಮ್ - 17
ತಾಂ ದೃಷ್ಟ್ವಾ ಚಾರುಸರ್ವಾಂಗೀಂ ರಾಮಸ್ಯ ಮಹಿಷೀಂ ಪ್ರಿಯಾಮ್ ।
ಅಬ್ರವೀತ್ಪರುಷಂ ವಾಕ್ಯಂ ಕ್ರೋಧಾದ್ರಕ್ಷೋಧಿಪಾತ್ಮಜಮ್ ॥
ಅನುವಾದ
ಶ್ರೀರಾಮಚಂದ್ರನ ಪಟ್ಟದರಸಿ ಸರ್ವಾಂಗಸುಂದರೀ ಸೀತೆಯನ್ನು ಆ ಸ್ಥಿತಿಯಲ್ಲಿ ನೋಡಿ ಹನುಮಂತನು ಕುಪಿತನಾಗಿ ಆ ರಾಕ್ಷಸಕುಮಾರ ಇಂದ್ರಜಿತುವಿನಲ್ಲಿ ಕಠೋರವಾಗಿ ನುಡಿದನು.॥17॥
ಮೂಲಮ್ - 18
ದುರಾತ್ಮನ್ನಾತ್ಮನಾಶಾಯ ಕೇಶಪಕ್ಷೇ ಪರಾಮೃಶಃ ।
ಬ್ರಹ್ಮರ್ಷೀಣಾಂ ಕುಲೇ ಜಾತೋ ರಾಕ್ಷಸೀಂ ಯೋನಿಮಾಶ್ರಿತಃ ॥
ಅನುವಾದ
ದುರಾತ್ಮನೇ! ನಿನ್ನ ವಿನಾಶಮಾಡಿಕೊಳ್ಳಲು ಹೊರಟಿರುವೆ, ಅದರಿಂದಲೇ ಸೀತೆಯ ಕೇಶಗಳನ್ನು ಸ್ಪರ್ಶಿಸಿರುವೆ. ನೀನು ಬ್ರಹ್ಮರ್ಷಿಗಳ ಕುಲದಲ್ಲಿ ಹುಟ್ಟಿದ್ದರೂ ರಾಕ್ಷಸ ಜಾತಿಯ ಸ್ವಭಾವವನ್ನೇ ಆಶ್ರಯಿಸಿರುವೆ.॥18॥
ಮೂಲಮ್ - 19
ಧಿಕ್ ತ್ವಾಂ ಪಾಪ ಸಮಾಚಾರಂ ಯಸ್ಯ ತೇ ಮತಿರೀದೃಶೀ ।
ನೃಶಂಸಾನಾರ್ಯ ದುರ್ವೃತ್ತ ಕ್ಷುದ್ರ ಪಾಪ ಪರಾಕ್ರಮ ।
ಅನಾರ್ಯಸ್ಯೇದೃಶಂ ಕರ್ಮ ಘೃಣಾ ತೇ ನಾಸ್ತಿ ನಿರ್ಘೃಣ ॥
ಅನುವಾದ
ಎಲವೋ! ನಿನ್ನ ಬುದ್ಧಿಕೆಟ್ಟು ಹೋಗಿದೆ. ಪಾಪಾಚಾರೀ, ನಿಂದನೀಯ, ಅನಾರ್ಯನಾದ ನಿನಗೆ ಧಿಕ್ಕಾರವಿರಲಿ. ದೂರಾಚಾರೀ, ಪಾಪಪರಾಕ್ರಮ ತೋರುವ ನೀಚನೇ! ನೀನು ಮಾಡುವ ಈ ಕಾರ್ಯವು ನೀಚರಿಗೂ ಯೋಗ್ಯವಲ್ಲ. ನಿರ್ದಯಿ! ನಿನ್ನ ಹೃದಯದಲ್ಲಿ ಕೊಂಚವೂ ದಯೆ ಇಲ್ಲವಲ್ಲ.॥19॥
ಮೂಲಮ್ - 20
ಚ್ಯುತಾ ಗೃಹಾಚ್ಚ ರಾಜ್ಯಾಚ್ಚ ರಾಮಹಸ್ತಾಚ್ಚ ಮೈಥಿಲೀ ।
ಕಿಂ ತವೈಷಾಪರಾದ್ಧಾ ಹಿ ಯದೇನಾಂ ಹಂಸಿ ನಿರ್ದಯ ॥
ಅನುವಾದ
ಬಡಪಾಯಿ ಮಿಥಿಲೇಶಕುಮಾರಿ ಮನೆಯಿಂದ, ರಾಜ್ಯದಿಂದ, ಶ್ರೀರಾಮನ ಕೈಯಿಂದಲೂ ಅಗಲಿರುವಳು. ನಿಷ್ಠುರನೇ! ನೀನು ಹೀಗೆ ನಿರ್ದಯನಾಗಿ ಹೊಡೆಯುತ್ತಿರುವೆಲ್ಲ? ಈಕೆ ನಿನಗೇನು ಅಪರಾಧ ಮಾಡಿದಳು.॥20॥
ಮೂಲಮ್ - 21
ಸೀತಾಂ ಹತ್ವಾ ತು ನ ಚಿರಂ ಜೀವಿಷ್ಯಸಿ ಕಥಂಚನ ।
ವಧಾರ್ಹ ಕರ್ಮಣಾತೇನ ಮಮ ಹಸ್ತಗತೋ ಹ್ಯಸಿ ॥
ಅನುವಾದ
ಸೀತೆಯನ್ನು ಹೊಡೆದು ನೀನು ಹೆಚ್ಚುಕಾಲ ಬದುಕಿರಲಾರೆ. ವಧಾರ್ಹನಾದ ನೀಚನೇ! ನೀನು ನಿನ್ನ ಪಾಪಕರ್ಮದಿಂದಾಗಿ ನನ್ನ ಕೈಗೆ ಸಿಕ್ಕಿರುವೆ; ಇನ್ನು ನೀನು ಜೀವಿಸಿ ಇರುವುದು ಕಷ್ಟವಾಗಿದೆ.॥21॥
ಮೂಲಮ್ - 22
ಯೇ ಚ ಸ್ತ್ರೀಘಾತಿನಾಂ ಲೋಕಾ ಲೋಕವಧ್ಯೈಶ್ಚ ಕುತ್ಸಿತಾಃ ।
ಇಹ ಜೀವಿತಮುತ್ಸೃಜ್ಯ ಪ್ರೇತ್ಯತಾನ್ ಪ್ರತಿಲತ್ಸ್ಯಸೇ ॥
ಅನುವಾದ
ನೀನೀಗ ಇಲ್ಲಿಯೇ ಈ ಕ್ಷಣದಲ್ಲೇ ಜೀವವನ್ನು ತೊರೆದು ಲೋಕವಧ್ಯರಾದ ಸ್ತ್ರೀಸಂಹಾರಕರಿಗೆ ಸಿಗುವ ಕುತ್ಸಿತವಾದ ಘೋರನರಕ ಲೋಕಗಳನ್ನು ಹೊಂದಲಿರುವೆ.॥22॥
ಮೂಲಮ್ - 23
ಇತಿ ಬ್ರುವಾಣೋ ಹನೂಮಾನ್ಸಾಯುಧೈರ್ಹರಿಭಿರ್ವೃತಃ ।
ಅಭ್ಯಧಾವತ್ ಸುಸಂಕ್ರುದ್ಧೋ ರಾಕ್ಷಸೇಂದ್ರ ಸುತಂ ಪ್ರತಿ ॥
ಅನುವಾದ
ಹೀಗೆ ಹೇಳುತ್ತಾ ಹನುಮಂತನು ಅತ್ಯಂತ ಕುಪಿತನಾಗಿ ಶಿಲೆಯೇ ಆದಿ ಆಯುಧಗಳನ್ನು ಧರಿಸಿದ ವಾನರವೀರರೊಂದಿಗೆ ರಾಕ್ಷಸ ರಾಜಕುಮಾರನ ಮೇಲೆ ಆಕ್ರಮಣ ಮಾಡಿದನು.॥23॥
ಮೂಲಮ್ - 24
ಆಪತಂತಂ ಮಹಾವೀರ್ಯಂ ತದನೀಕಂ ವನೌಕಸಾಮ್ ।
ರಕ್ಷಸಾಂ ಭೀಮಕೋಪಾನಾಮನೀಕೇನ ನ್ಯವಾರಯತ್ ॥
ಅನುವಾದ
ವಾನರರ ಆ ಮಹಾಪರಾಕ್ರಮಿ ಸೈನ್ಯ ಸಮುದಾಯವು ಆಕ್ರಮಿಸಿದುದನ್ನು ನೋಡಿ ಇಂದ್ರಜಿತನು ಭಯಾನಕ ಕ್ರೋಧವುಳ್ಳ ರಾಕ್ಷಸರಸೈನ್ಯದೊಂದಿಗೆ ಅವರನ್ನು ತಡೆಹಿಡಿದನು.॥24॥
ಮೂಲಮ್ - 25
ಸ ತಾಂ ಬಾಣಸಹಸ್ರೇಣ ವಿಕ್ಷೋಭ್ಯ ಹರಿವಾಹಿನೀಮ್ ।
ಹರಿಶ್ರೇಷ್ಠಂ ಹನೂಮಂತಮಿಂದ್ರಜಿತ್ ಪ್ರತ್ಯುವಾಚ ಹ ॥
ಅನುವಾದ
ಮತ್ತೆ ಸಾವಿರಾರು ಬಾಣಗಳಿಂದ ಆ ವಾನರ ಸೈನ್ಯದಲ್ಲಿ ಕೋಲಾಹಲ ಉಂಟುಮಾಡುತ್ತಾ ಇಂದ್ರಜಿತು ಹನುಮಂತನಲ್ಲಿ ಹೇಳಿದನು.॥25॥
ಮೂಲಮ್ - 26
ಸುಗ್ರೀವಸ್ತ್ವಂ ಚ ರಾಮಶ್ಚ ಯನ್ನಿಮಿತ್ತಮಿಹಾಗತಾಃ ।
ತಾಂ ವಧಿಷ್ಯಾಮಿ ವೈದೇಹೀಮದ್ಯೈವ ತವ ಪಶ್ಯತಃ ॥
ಮೂಲಮ್ - 27
ಇಮಾಂ ಹತ್ವಾ ತತೋ ರಾಮಂ ಲಕ್ಷ್ಮಣಂ ತ್ವಾಂ ಚ ವಾನರ ।
ಸುಗ್ರೀವಂ ಚ ವಧಿಷ್ಯಾಮಿ ತಂ ಚಾನಾರ್ಯಂ ವಿಭೀಷಣಮ್ ॥
ಅನುವಾದ
ವಾನರನೇ! ಸುಗ್ರೀವ, ರಾಮ-ಲಕ್ಷ್ಮಣರು ಮತ್ತು ನೀವೆಲ್ಲರು ಯಾರಿಗಾಗಿ ಇಲ್ಲಿಗೆ ಬಂದಿರುವಿರೋ ಆ ವಿದೇಹಕುಮಾರಿ ಸೀತೆಯನ್ನು ನೀನು ನೋಡುತ್ತಿರುವಾಗಲೇ ಈಗ ನಾನು ಕೊಂದು ಹಾಕುವೆನು. ಈಕೆಯನ್ನು ಕೊಂದು ನಾನು ಕ್ರಮವಾಗಿ ರಾಮ-ಲಕ್ಷ್ಮಣರನ್ನು, ನಿನ್ನನ್ನು, ಸುಗ್ರೀವ ಹಾಗೂ ಅನಾರ್ಯನಾದ ವಿಭೀಷಣನನ್ನು ವಧಿಸಿಬಿಡುವೆನು.॥26-27॥
ಮೂಲಮ್ - 28
ನ ಹಂತವ್ಯಾಃ ಸ್ತ್ರಿಯಶ್ಚೇತಿ ಯದ್ಬ್ರವೀಷಿ ಪ್ಲವಂಗಮ ।
ಪೀಡಾಕರಮಮಿತ್ರಾಣಾಂ ಯಚ್ಚ ಕರ್ತವ್ಯಮೇವ ತತ್ ॥
ಅನುವಾದ
ಕಪಿಯೇ! ಸ್ತ್ರೀಯರನ್ನು ಕೊಲ್ಲಬಾರದೆಂದು ನೀನು ಹೇಳಿದುದಕ್ಕೆ ಉತ್ತರವಾಗಿ ಶತ್ರುಗಳಿಗೆ ಹೆಚ್ಚು ಕಷ್ಟಕೊಡವುದೇ ಕರ್ತವ್ಯವಾಗಿದೆ ಎಂದು ನಾನು ಹೇಳುತ್ತೇನೆ.॥28॥
ಮೂಲಮ್ - 29
ತಮೇವಮುಕ್ತ್ವಾ ರುದತೀಂ ಸೀತಾಂ ಮಾಯಾಮಯೀಂ ಚ ತಾಮ್ ।
ಶಿತಧಾರೇಣ ಖಡ್ಗೇನ ನಿಜಘಾನೇಂದ್ರ ಜಿತ್ಸ್ವ್ವಯಮ್ ॥
ಅನುವಾದ
ಹನುಮಂತನಲ್ಲಿ ಹೀಗೆ ಹೇಳಿ ಇಂದ್ರಜಿತನು ಹರಿತವಾದ ಖಡ್ಗದಿಂದ ಅಳುತ್ತಿರುವ ಮಾಯಾಮಯಿ ಸೀತೆಯ ಮೇಲೆ ಆಘಾತ ಮಾಡಿದನು.॥29॥
ಮೂಲಮ್ - 30
ಯಜ್ಞೋಪವೀತಮಾರ್ಗೇಣ ಛಿನ್ನಾ ತೇನ ತಪಸ್ವಿನೀ ।
ಸಾ ಪೃಥಿವ್ಯಾಂ ಪೃಥುಶ್ರೋಣೀ ಪಪಾತ ಪ್ರಿಯದರ್ಶನಾ ॥
ಅನುವಾದ
ಯಜ್ಞೋಪವೀತ ಧರಿಸುವಂತೆ ಖಡ್ಗದಿಂದ ಕತ್ತರಿಸಲ್ಪಟ್ಟ ಮಾಯಾಸೀತೆಯ ಎರಡು ಹೋಳುಗಳಾಗಿ, ಆ ಸ್ಥೂಲಕಟಿಯುಳ್ಳ ಪ್ರಿಯದರ್ಶಿನೀ ತಪಸ್ವಿಯು ನೆಲಕ್ಕುರುಳಿದಳು.॥30॥
ಮೂಲಮ್ - 31
ತಾಮಿಂದ್ರ ಜಿತ್ಸ್ತ್ರಿಯಂ ಹತ್ವಾ ಹನೂಮಂತ ಮುವಾಚ ಹ ।
ಮಯಾ ರಾಮಸ್ಯ ಪಶ್ಯೇಮಾಂ ಪ್ರಿಯಾಂ ಶಸ್ತ್ರ ನಿಷೂದಿತಾಮ್ ।
ಏಷಾ ವಿಶಸ್ತಾ ವೈದೇಹೀ ನಿಷ್ಪಲೋ ವಃ ಪರಿಶ್ರಮಃ ॥
ಅನುವಾದ
ಆ ಸ್ತ್ರೀಯನ್ನು ವಧಿಸಿ ಇಂದ್ರಜಿತನು ಹನುಮಂತನಲ್ಲಿ ಹೇಳಿದನು - ನೋಡು, ನಾನು ರಾಮನ ಪ್ರಿಯ ಪತ್ನೀ ವೈದೇಹಿಯನ್ನು ಖಡ್ಗದಿಂದ ತುಂಡರಿಸಿಬಿಟ್ಟಿರುವೆನು. ಇನ್ನು ನಿಮ್ಮ ಯುದ್ಧದ ಪರಿಶ್ರಮ ವ್ಯರ್ಥವಾಗಿದೆ.॥31॥
ಮೂಲಮ್ - 32
ತತಃ ಖಡ್ಗೇನ ಮಹತಾ ಹತ್ವಾ ತಾಮಿಂದ್ರಜಿತ್ಸ್ವಯಮ್ ।
ಹೃಷ್ಟಃ ಸ ರಥಮಾಸ್ಥಾಯ ನನಾದ ಚ ಮಹಾಸ್ವನಮ್ ॥
ಅನುವಾದ
ಹೀಗೆ ಇಂದ್ರಜಿತು ವಿಶಾಲ ಖಡ್ಗದಿಂದ ಆ ಮಾಯಾಮಯ ಸೀತೆಯನ್ನು ವಧಿಸಿ ರಥದಲ್ಲಿ ಕುಳಿತುಕೊಂಡೇ ತುಂಬಾ ಹರ್ಷದಿಂದ ಜೋರಾಗಿ ಸಿಂಹನಾದ ಮಾಡತೊಡಗಿದನು.॥32॥
ಮೂಲಮ್ - 33
ವಾನರಾಃ ಶುಶ್ರುವುಃ ಶಬ್ದಮದೂರೇ ಪ್ರತ್ಯವಸ್ಥಿತಾಃ ।
ವ್ಯಾದಿತಾಸ್ಯಸ್ಯ ನದತಸ್ತದ್ದುರ್ಗಂ ಸಂಶ್ರಿತಸ್ಯ ತು ॥
ಅನುವಾದ
ಅಲ್ಲಿ ನಿಂತಿರುವ ವಾನರರು ಆ ಗರ್ಜನೆಯನ್ನು ಕೇಳಿದರು. ಅವನು ಆ ದುರ್ಗಮ ರಥದಲ್ಲಿ ಕುಳಿತು ಬಾಯಿಯನ್ನು ಅಗಲಿಸಿ ವಿಕಟವಾಗಿ ಗರ್ಜಿಸುತ್ತಿದ್ದನು.॥33॥
ಮೂಲಮ್ - 34
ತಥಾ ತು ಸೀತಾಂ ವಿನಿಹತ್ಯ ದುರ್ಮತಿಃ
ಪ್ರಹೃಷ್ಟ ಚೇತಾಃ ಸ ಬಭೂವ ರಾವಣಿಃ ।
ತಂ ಹೃಷ್ಟ ರೂಪಂ ಸಮುದೀಕ್ಷ್ಯ ವಾನರಾ
ವಿಷಣ್ಣ ರೂಪಾಃ ಸಮಭಿಪ್ರದುದ್ರುವುಃ ॥
ಅನುವಾದ
ದುರ್ಬುದ್ಧಿಯಾದ ರಾವಣಿಯು ಹೀಗೆ ಮಯಾಸೀತೆಯನ್ನು ವಧಿಸಿ ಮನಸ್ಸಿನಲ್ಲಿ ಬಹಳ ಸಂತೋಷಗೊಂಡನು. ಹರ್ಷಗೊಂಡಿರುವ ಅವನನ್ನು ನೋಡಿ ವಾನರರು ಅತಿ ದುಃಖಿತರಾಗಿ ಪಲಾಯನ ಮಾಡಿದರು.॥34॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಎಂಭತ್ತೊಂದನೆಯ ಸರ್ಗ ಪೂರ್ಣವಾಯಿತು.॥81॥