०८० रावणेन इन्द्रजित्प्रेषणम्

वाचनम्
ಭಾಗಸೂಚನಾ

ರಾವಣನ ಆಜ್ಞೆಯಂತೆ ಇಂದ್ರಜಿತುವಿನ ಘೋರಯುದ್ಧ, ಅವನ ವಧೆಯ ವಿಷಯದಲ್ಲಿ ರಾಮ-ಲಕ್ಷ್ಮಣರ ಸಮಾಲೋಚನೆ

ಮೂಲಮ್ - 1

ಮಕರಾಕ್ಷಂ ಹತಂ ಶ್ರುತ್ವಾ ರಾವಣಃ ಸಮಿತಿಂಜಯಃ ।
ರೋಷೇಣ ಮಹತಾವಿಷ್ಟೋ ದಂತಾನ್ಕಟಕಟಾಯ್ಯ ಚ ॥

ಅನುವಾದ

ಮಕರಾಕ್ಷನು ಹತನಾದನೆಂದು ಕೇಳಿ ಸಮರ ವಿಜಯಿ ರಾವಣನು ಮಹಾ ಕೋಪಗೊಂಡು ಕಟಕಟನೆ ಹಲ್ಲು ಕಡಿಯ ತೊಡಗಿದನು.॥1॥

ಮೂಲಮ್ - 2

ಕುಪಿತಶ್ಚ ತದಾ ತತ್ರ ಕಿಂ ಕಾರ್ಯಮಿತಿ ಚಿಂತಯನ್ ।
ಆದಿದೇಶಾಥ ಸಂಕ್ರುದ್ಧೋ ರಣಾಯೇಂದ್ರಜಿತಂ ಸುತಮ್ ॥

ಅನುವಾದ

ಕುಪಿತನಾದ ನಿಶಾಚರನು ಈಗೇನು ಮಾಡಬೇಕು ಎಂಬ ಚಿಂತೆಗೊಳಗಾದನು. ಅವನು ಅತ್ಯಂತ ಕ್ರೋಧಗೊಂಡು ತನ್ನ ಪುತ್ರ ಇಂದ್ರಜಿತನನ್ನು ಯುದ್ಧಕ್ಕೆ ಹೋಗಲು ಆಜ್ಞಾಪಿಸಿದನು.॥2॥

ಮೂಲಮ್ - 3

ಜಹಿ ವೀರ ಮಹಾವೀರ್ಯೌ ಭ್ರಾತರೌ ರಾಮಲಕ್ಷ್ಮಣೌ ।
ಅದೃಶ್ಯೋ ದೃಶ್ಯಮಾನೋ ವಾ ಸರ್ವಥಾ ತ್ವಂ ಬಲಾಧಿಕಃ ॥

ಅನುವಾದ

ವೀರನೇ! ನೀನು ಮಹಾಪರಾಕ್ರಮಿ ರಾಮ-ಲಕ್ಷ್ಮಣರನ್ನು ಅಡಗಿಕೊಂಡು ಅಥವಾ ಪ್ರತ್ಯಕ್ಷವಾಗಿ ಕೊಂದುಹಾಕು; ಏಕೆಂದರೆ ನೀನು ಹೆಚ್ಚು ಬಲಶಾಲಿಯಾಗಿರುವೆ.॥3॥

ಮೂಲಮ್ - 4

ತ್ವಮಪ್ರತಿಮಕರ್ಮಾಣಮಿಂದ್ರಂ ಜಯಸಿ ಸಂಯುಗೇ ।
ಕಿಂ ಪುನರ್ಮಾನುಷೌ ದೃಷ್ಟ್ವಾ ನ ವಧಿಷ್ಯಸಿ ಸಂಯುಗೇ ॥

ಅನುವಾದ

ಅಪ್ರತಿಮ ಪರಾಕ್ರಮಿಯಾದ ಇಂದ್ರನನ್ನೇ ನೀನು ಜಯಿಸಿರುವೆ; ಹಾಗಿರುವಾಗ ಆ ಇಬ್ಬರು ಸಾಮಾನ್ಯ ಮನುಷ್ಯರನ್ನು ಯುದ್ಧದಲ್ಲಿ ವಧಿಸಲಾರೆಯಾ.॥4॥

ಮೂಲಮ್ - 5

ತಥೋಕ್ತೋ ರಾಕ್ಷಸೇಂದ್ರೇಣ ಪ್ರತಿಗೃಹ್ಯ ಪಿತುರ್ವಚಃ ।
ಯಜ್ಞಭೂಮೌ ಸ ವಿಧಿವತ್ಪಾವಕಂ ಜುಹುವೇಂದ್ರಜಿತ್ ॥

ಅನುವಾದ

ತಂದೆಯ ಆಜ್ಞೆಯನ್ನು ಶಿರಸಾವಹಿಸಿ, ಯಜ್ಞಶಾಲೆಗೆ ಹೋಗಿ ಅಗ್ನಿಯನ್ನು ಸ್ಥಾಪಿಸಿ ವಿಧಿವತ್ತಾಗಿ ಹೋಮಮಾಡಿದನು.॥5॥

ಮೂಲಮ್ - 6

ಜುಹ್ವತಶ್ಚಾಪಿ ತತ್ರಾಗ್ನಿಂ ರಕ್ತೋಷ್ಣೀಷಧರಾಃ ಸ್ತ್ರಿಯಃ ।
ಆಜಗ್ಮುಸ್ತತ್ರ ಸಂಭ್ರಾಂತಾರಾಕ್ಷಸ್ಯೋ ಯತ್ರ ರಾವಣಿಃ ॥

ಅನುವಾದ

ರಾವಣ ಪುತ್ರ ಹವನ ಮಾಡುವಲ್ಲಿಗೆ ಕೆಂಪು ಬಟ್ಟೆಗಳನ್ನು ಧರಿಸಿದ ಅನೇಕ ಸ್ತ್ರೀಯರು ಗಾಬರಿಗೊಂಡು ಅಲ್ಲಿಗೆ ಬಂದರು.॥6॥

ಮೂಲಮ್ - 7

ಶಸ್ತ್ರಾಣಿ ಶರಪತ್ರಾಣಿ ಸಮಿಧೋಽಥ ವಿಭೀತಕಾಃ ।
ಲೋಹಿತಾನಿ ಚ ವಾಸಾಂಸಿ ಸ್ರುವಂ ಕಾರ್ಷ್ಣಾಯಸಂ ತಥಾ ॥

ಅನುವಾದ

ಇಂದ್ರಜಿತು ಹೋಮಮಾಡುವಾಗ ಶಸಗಳನ್ನೇ ಪರಿಸ್ತರಣಗಳಾಗಿಸಿದ್ದನು, ತಾರೆಯ ಗಿಡದ ಕಡ್ಡಿಗಳ ಸಮಿಧೆಗಳಾಗಿದ್ದು, ಕೆಂಪು ವಸ್ತ್ರವನ್ನುಟ್ಟು ಕಬ್ಬಿಣದ ಸ್ರುಕ್-ಸ್ರುವೆಗಳನ್ನು ಬಳಸಿದ್ದನು.॥7॥

ಮೂಲಮ್ - 8

ಸರ್ವತೋಽಗ್ನಿಂ ಸಮಾಸ್ತೀರ್ಯ ಶರಪತ್ರೈಃ ಸತೋಮರೈಃ ।
ಛಾಗಸ್ಯಸರ್ವ ಕೃಷ್ಣಸ್ಯ ಗಲಂ ಜಗ್ರಾಹ ಜೀವತಃ ॥

ಅನುವಾದ

ಅವನು ತೋಮರ ಸಹಿತ ಶಸ್ತ್ರರೂಪೀ ದರ್ಭೆಗಳನ್ನು ಅಗ್ನಿಯ ಸುತ್ತಲೂ ಹರಡಿದನು. ಬಳಿಕ ಕಪ್ಪು ಬಣ್ಣದ ಮೆಕೆಯ ಕತ್ತನ್ನು ಹಿಡಿದು ಅದನ್ನು ಅಗ್ನಿಯಲ್ಲಿ ಹೋಮಿಸಿದನು.॥8॥

ಮೂಲಮ್ - 9

ಸಕೃದ್ಧೋಮಸಮಿದ್ಧಸ್ಯ ವಿಧೂಮಸ್ಯ ಮಹಾರ್ಚಿಷಃ ।
ಬಭೂವುಸ್ತಾನಿ ಲಿಂಗಾನಿ ವಿಜಯಂ ದರ್ಶಯಂತಿ ಚ ॥

ಅನುವಾದ

ಒಂದೇ ಆಹುತಿಯಿಂದಲೇ ಹೋಮದಿಂದ ಹೊಗೆಯಿಲ್ಲದ ಅಗ್ನಿಯ ದೊಡ್ಡ ದೊಡ್ಡ ಜ್ವಾಲೆಗಳು ಎದ್ದವು. ಆ ಅಗ್ನಿಯಲ್ಲಿ ವಿಜಯಸೂಚಕ ಚಿಹ್ನೆಗಳು ಪ್ರಕಟಗೊಂಡವು.॥9॥

ಮೂಲಮ್ - 10

ಪ್ರದಕ್ಷಿಣಾವರ್ತಶಿಖಸ್ತಪ್ತಹಾಟಕದಸಂನಿಭಃ ।
ಹವಿಸ್ತತ್ ಪ್ರತಿಜಗ್ರಾಹ ಪಾವಕಃ ಸ್ವಯಮುತ್ಥಿತಃ ॥

ಅನುವಾದ

ಆಗ ಕಾದಸ್ವರ್ಣದಂತೆ ಕಾಂತಿಯುಳ್ಳ ಯಜ್ಞೇಶ್ವರನು ಪ್ರಕಟನಾಗಿ ಸ್ವತಃ ಹವಿಸ್ಸನ್ನು ಸ್ವೀಕರಿಸಿದನು. ಅಗ್ನಿಯ ಜ್ವಾಲೆಗಳು ದಕ್ಷಿಣಾವರ್ತವಾಗಿ ಉರಿಯುತ್ತಿದ್ದವು.॥10॥

ಮೂಲಮ್ - 11

ಹುತ್ವಾಗ್ನಿಂ ತರ್ಪಯಿತ್ವಾಥ ದೇವದಾನವ ರಾಕ್ಷಸಾನ್ ।
ಆರುರೋಹ ರಥಶ್ರೇಷ್ಠ ಮಂತರ್ಧಾನಗತಂ ಶುಭಮ್ ॥

ಅನುವಾದ

ಅಗ್ನಿಯಲ್ಲಿ ಆಹುತಿಕೊಟ್ಟು ಅಭಿಚಾರಿಕ ಯಜ್ಞಸಂಬಂಧಿ ದೇವತಾ, ದಾನವ, ರಾಕ್ಷಸರನ್ನು ತೃಪ್ತಿಪಡಿಸಿ, ಇಂದ್ರಜಿತು ಅಂತರ್ಧಾನನಾಗುವ ಶಕ್ತಿಯನ್ನು ಹೊಂದಿ ಸುಂದರವಾದ ರಥದಲ್ಲಿ ಆರೂಢನಾದನು.॥11॥

ಮೂಲಮ್ - 12

ಸ ವಾಜಿಭಿಶ್ಚತುರ್ಭಿಶ್ಚ ಬಾಣೈಸ್ತು ನಿಶಿತೈರ್ಯುತಃ ।
ಆರೋಪಿತ ಮಹಾಚಾಪಃ ಶುಶುಭೇ ಸ್ಯಂದನೋತ್ತಮಃ ॥

ಅನುವಾದ

ನಾಲ್ಕು ಕುದುರೆಗಳಿಂದ, ಹರಿತವಾದ ಬಾಣಗಳಿಂದ ತುಂಬಿದ ವಿಶಾಲ ಧನುಸ್ಸುಗಳಿಂದ ಕೂಡಿದ ಆ ಉತ್ತಮ ರಥವು ಬಹಳ ಶೋಭಿಸುತ್ತಿತ್ತು.॥12॥

ಮೂಲಮ್ - 13

ಜಾಜ್ವಲ್ಯಮಾನೋ ವಪುಷಾ ತಪನೀಯ ಪರಿಚ್ಛದಃ ।
ಮೃಗೈಶ್ಚಂದ್ರಾರ್ಧಚಂದ್ರೈಶ್ಚ ಸ ರಥಃ ಸಮಲಂಕೃತಃ ॥

ಅನುವಾದ

ಎಲ್ಲ ವಸ್ತುಗಳೂ ಚಿನ್ನದಿಂದ ತಯಾರಿಸಿದ್ದರಿಂದ ಆ ರಥವು ತನ್ನ ಕಾಂತಿಯಿಂದ ಪ್ರಜ್ವಲಿಸುವಂತೆ ಅನಿಸುತ್ತಿತ್ತು. ಅದರಲ್ಲಿ ಮೃಗ, ಅರ್ಧಚಂದ್ರ, ಪೂರ್ಣಚಂದ್ರ ಅಂಕಿತವಾಗಿತ್ತು. ಅದರಿಂದ ಅದು ಆಕರ್ಷಕವಾಗಿ ಕಂಡುಬರುತ್ತಿತ್ತು.॥13॥

ಮೂಲಮ್ - 14

ಜಾಂಬೂನದ ಮಹಾಕಂಬುರ್ದೀಪ್ತಪಾವಕ ಸಂನಿಭಃ ।
ಬಭೂವೇಂದ್ರಜಿತಃ ಕೇತುರ್ವೈಢೂರ್ಯ ಸಮಲಂಕೃತಃ ॥

ಅನುವಾದ

ಇಂದ್ರಜಿತುವಿನ ಧ್ವಜವು ಪ್ರಜ್ವಲಿತ ಅಗ್ನಿಯಂತೆ ದೀಪ್ತಿಮಂತವಾಗಿತ್ತು. ಅದರಲ್ಲಿ ಚಿನ್ನದ ಬಳೆಗಳಿದ್ದು, ಅವನ್ನು ನವರತ್ನಗಳಿಂದ ಅಲಂಕರಿಸಿದ್ದರು.॥14॥

ಮೂಲಮ್ - 15

ತೇನ ಚಾದಿತ್ಯಕಲ್ಪೇನ ಬ್ರಹ್ಮಾಸ್ತ್ರೇಣ ಚ ಪಾಲಿತಃ ।
ಸ ಬಭೂವ ದುರಾಧರ್ಷೋ ರಾವಣಿಃ ಸುಮಹಾಬಲಃ ॥

ಅನುವಾದ

ಸೂಯತುಲ್ಯ ತೇಜಸ್ವಿ ರಥ ಮತ್ತು ಬ್ರಹ್ಮಾಸ್ತ್ರದಿಂದ ಸುರಕ್ಷಿತನಾದ ಆ ಮಹಾಬಲಿ ರಾವಣಪುತ್ರ ಇಂದ್ರಜಿತು ಇತರರಿಗೆ ದುರ್ಜಯನಾಗಿದ್ದನು.॥15॥

ಮೂಲಮ್ - 16

ಸೋಽಭಿನಿರ್ಯಾಯ ನಗರಾದಿಂದ್ರಜಿತ್ ಸಮಿತಿಂಜಯಃ ।
ಹುತ್ವಾಗ್ನಿಂ ರಾಕ್ಷಸೈರ್ಮಂತ್ರೈರಂತರ್ಧಾನಗತೋಽಬ್ರವೀತ್ ॥

ಅನುವಾದ

ಸಮರವಿಜಯಿ ಇಂದ್ರಜಿತು ನಗರದಿಂದ ಹೊರಟು ನಿಋತಿ ದೇವತಾ ಸಂಬಂಧೀ ಮಂತ್ರಗಳಿಂದ ಅಗ್ನಿಯಲ್ಲಿ, ಆಹುತಿ ಕೊಟ್ಟು ಅಂತರ್ಧಾನದ ಶಕ್ತಿಯಿಂದ ಸಂಪನ್ನನಾಗಿ ಹೀಗೆ ಹೇಳಿದನು .॥16॥

ಮೂಲಮ್ - 17

ಅದ್ಯ ಹತ್ವಾರಣೇ ಯೌ ತೌ ಮಿಥ್ಯಾಪ್ರವ್ರಜಿತೌ ವನೇ ।
ಜಯಂ ಪಿತ್ರೇ ಪ್ರದಾಸ್ಯಾಮಿ ರಾವಣಾಯ ರಣೇಽಧಿಕಮ್ ॥

ಅನುವಾದ

ವ್ಯರ್ಥವಾಗಿ ಅರಣ್ಯಕ್ಕೆ ದೂಡಲ್ಪಟ್ಟ ಆ ರಾಮ-ಲಕ್ಷ್ಮಣರಿಬ್ಬರನ್ನು ನಾನಿಂದು ಸಂಹರಿಸಿ ತಂದೆ ರಾವಣನಿಗೆ ಉತ್ತಮವಾದ ಜಯವನ್ನು ಸಮರ್ಪಿಸುವೆನು.॥17॥

ಮೂಲಮ್ - 18

ಅದ್ಯ ನಿರ್ವಾನರಾಮುರ್ವೀಂ ಹತ್ವಾ ರಾಮಂ ಚ ಲಕ್ಷ್ಮಣಮ್ ।
ಕರಿಷ್ಯೇ ಪರಮಾಂ ಪ್ರೀತಿಮಿತ್ಯುಕ್ತ್ವಾಂತರಧೀಯತ ॥

ಅನುವಾದ

ಇಂದು ರಾಮ-ಲಕ್ಷ್ಮಣರನ್ನು ಕೊಂದು ಪೃಥಿಯನ್ನು ವಾನರ ರಹಿತವನ್ನಾಗಿ ಮಾಡಿ ನಾನು ತಂದೆಗೆ ಪರಮ ಸಂತೋಷಪಡಿಸುವೆನು; ಎಂದು ಹೇಳಿ ಅವನು ಅದೃಶ್ಯನಾದನು.॥18॥

ಮೂಲಮ್ - 19

ಅಪಪಾತಾಥ ಸಂಕ್ರುದ್ಧೋ ದಶಗ್ರೀವೇಣ ಚೋದಿತಃ ।
ತೀಕ್ಷ್ಣ ಕಾರ್ಮುಕ ನಾರಾಚೈಸ್ತೀಕ್ಷ್ಣೈಸ್ತ್ವಿಂದ್ರರಿಪೂ ರಣೇ ॥

ಅನುವಾದ

ಬಳಿಕ ದಶಕಂಠನಿಂದ ಪ್ರೇರಿತನಾಗಿ ಇಂದ್ರಶತ್ರು ಇಂದ್ರಜಿತು ಕುಪಿತನಾಗಿ ಕೈಯಲ್ಲಿ ಧನುರ್ಬಾಣಗಳನ್ನು ಧರಿಸಿ ರಣರಂಗಕ್ಕೆ ಬಂದನು.॥19॥

ಮೂಲಮ್ - 20

ಸ ದದರ್ಶ ಮಹಾವೀರ್ಯೌ ನಾಗೌ ತ್ರಿಶಿರಸಾವಿವ ।
ಸೃಜಂತಾವಿಷುಜಾಲಾನಿ ವೀರೌ ವಾನರಮಧ್ಯಗೌ ॥

ಅನುವಾದ

ಯುದ್ಧಸ್ಥಳಕ್ಕೆ ಬಂದು ಆ ನಿಶಾಚರನು ವಾನರರ ನಡುವೆ ನಿಂತು, ಬಾಣ ಸಮೂಹಗಳನ್ನು ಮಳೆಗರೆಯುತ್ತಿದ್ದ, ಎತ್ತರವಾದ ಭುಜಗಳಿದ್ದುದರಿಂದ ಮೂರು ತಲೆಯ ನಾಗಗಳಂತೆ ಮಹಾಪರಾಕ್ರಮಿ ಶ್ರೀರಾಮ-ಲಕ್ಷ್ಮಣರನ್ನು ನೋಡಿದನು.॥20॥

ಮೂಲಮ್ - 21

ಇವೌ ತಾವಿತಿ ಸಂಚಿಂತ್ಯ ಸಜ್ಯಂ ಕೃತ್ವಾ ಚ ಕಾರ್ಮುಕಮ್ ।
ಸಂತತಾನೇಷುಧಾರಾಭಿಃ ಪರ್ಜನ್ಯಇವ ವೃಷ್ಟಿಮಾನ್ ॥

ಅನುವಾದ

ಇವರೇ ಆ ರಾಮ-ಲಕ್ಷ್ಮಣರು ಎಂದು ಇಂದ್ರಜಿತು ಯೋಚಿಸಿ ತನ್ನ ಧನುಸ್ಸಿಗೆ ನಾಣನ್ನೇರಿಸಿ, ನೀರನ್ನು ಸುರಿಯುವ ಮೋಡಗಳಂತೆ ಬಾಣಗಳ ಧಾರಾವರ್ಷದಿಂದ ಎಲ್ಲ ದಿಕ್ಕುಗಳನ್ನು ತುಂಬಿಬಿಟ್ಟನು.॥21॥

ಮೂಲಮ್ - 22

ಸ ತು ವೈಹಾಯಸ ರಥೋ ಯುಧಿ ತೌ ರಾಮಲಕ್ಷ್ಮಣೌ ।
ಅಚಕ್ಷುರ್ವಿಷಯೇ ತಿಷ್ಠನ್ ವಿವ್ಯಾಧ ನಿಶಿತೈಃ ಶರೈಃ ॥

ಅನುವಾದ

ಅವನ ರಥವು ಆಕಾಶದಲ್ಲಿ ಇತ್ತು ಹಾಗೂ ರಾಮ-ಲಕ್ಷ್ಮಣರು ಭೂಮಿಯ ಮೇಲೆ ನಿಂತಿದ್ದರು. ಅವರಿಬ್ಬರ ದೃಷ್ಟಿಗೆ ಗೋಚರವಾಗದೆ ಆ ರಾಕ್ಷಸನು ಹರಿತ ಬಾಣಗಳಿಂದ ನೋಯಿಸತೊಡಗಿದನು.॥22॥

ಮೂಲಮ್ - 23

ತೌ ತಸ್ಯ ಶರವೇಗೇನ ಪರೀತೌ ರಾಮಲಕ್ಷ್ಮಣೌ ।
ಧನುಷೀ ಸಶರೇ ಕೃತ್ವಾ ದಿವ್ಯಮಸ್ತ್ರಂ ಪ್ರಚಕ್ರತುಃ ॥

ಅನುವಾದ

ಅವನ ಬಾಣಗಳಿಂದ ವ್ಯಾಪ್ತರಾದ ಶ್ರೀರಾಮ-ಲಕ್ಷ್ಮಣರೂ ಕೂಡ ತಮ್ಮ ತಮ್ಮ ಧನುಸ್ಸಿಗೆ ಬಾಣಗಳನ್ನು ಅನುಸಂಧಾನ ಮಾಡಿ ದಿವ್ಯಾಸ್ತ್ರಗಳನ್ನು ಪ್ರಕಟಿಸಿದರು.॥23॥

ಮೂಲಮ್ - 24

ಪ್ರಚ್ಛಾದಯಂತೌ ಗಗನಂ ಶರಜಾಲೈರ್ಮಹಾಬಲೌ ।
ತಮಸ್ತ್ರೈಃ ಸೂರ್ಯಸಂಕಾಶೈರ್ನೈವ ಪಸ್ಪರ್ಶತುಃ ಶರೈಃ ॥

ಅನುವಾದ

ಆ ಮಹಾಬಲಿ ಸಹೋದರರು ಸೂರ್ಯತುಲ್ಯ ಬಾಣಸಮೂಹಗಳಿಂದ ಆಕಾಶವನ್ನು ಆಚ್ಛಾದಿಸಿದರೂ ತಮ್ಮ ಬಾಣಗಳಿಂದ ಇಂದ್ರಜಿತುವನ್ನು ಸ್ಪರ್ಶಿಸದಾದರು.॥24॥

ಮೂಲಮ್ - 25

ಸ ಹಿ ಧೂಮಾಂಧಕಾರಂ ಚ ಚಕ್ರೇ ಪ್ರಚ್ಛಾದಯನ್ನಭಃ ।
ದಿಶಶ್ಚಾಂತರ್ದಧೇ ಶ್ರೀಮಾನ್ ನೀಹಾರತಮಸಾ ವೃತಾಃ ॥

ಅನುವಾದ

ತೇಜಸ್ವೀ ರಾಕ್ಷಸನು ಮಾಯೆಯಿಂದ ಹೊಗೆಯಿಂದ ಕೂಡಿದ ಕತ್ತಲೆಯನ್ನು ಸೃಷ್ಟಿಸಿ, ಆಕಾಶವನ್ನು ಮುಚ್ಚಿಬಿಟ್ಟನು. ಜೊತೆಗೆ ಹಿಮದಿಂದಲೂ ಅಂಧಕಾರವನ್ನು ಹರಡಿ ದಿಕ್ಕುಗಳನ್ನು ಆವರಿಸಿಬಿಟ್ಟನು.॥25॥

ಮೂಲಮ್ - 26

ನೈವ ಜ್ಯಾತಲನಿರ್ಘೋಷೋ ನ ಚ ನೇಮಿಖುರಸ್ವನಃ ।
ಶುಶ್ರುವೇ ಚರತಸ್ತಸ್ಯ ನ ಚ ರೂಪಂ ಪ್ರಕಾಶತೇ ॥

ಅನುವಾದ

ಅವನ ಧನುಷ್ಟಂಕಾರವಾಗಲೀ, ರಥದ ಗಡಗಡ ಶಬ್ದ ಕುದುರೆಗಳ ಕಾಲಿನ ಸದ್ದು ಯಾವುದೂ ಕೇಳಿ ಬರುತ್ತಿರಲಿಲ್ಲ. ಎಲ್ಲ ಕಡೆ ಸಂಚರಿಸುವ ಆ ರಾಕ್ಷಸನ ರೂಪವೂ ಕಂಡು ಬರುತ್ತಿರಲಿಲ್ಲ.॥26॥

ಮೂಲಮ್ - 27

ಘನಾಂಧಕಾರೇ ತಿಮಿರೇ ಶಿಲಾವರ್ಷ ಮಿವಾದ್ಭುತಮ್ ।
ಸ ವವರ್ಷ ಮಹಾಬಾಹುರ್ನಾರಾಚ ಶರವೃಷ್ಟಿಭಿಃ ॥

ಅನುವಾದ

ದಟ್ಟವಾದ ಕವಿದಿದ್ದ ಕತ್ತಲಿನಲ್ಲಿ ಮಹಾಬಾಹು ಇಂದ್ರಜಿತು ಕಲ್ಲುಗಳ ಅದ್ಭುತ ಮಳೆಯಂತೆ ನಾರಾಚ ಎಂಬ ಬಾಣಗಳ ವರ್ಷಾ ಮಾಡತೊಡಗಿದನು.॥27॥

ಮೂಲಮ್ - 28

ಸಾ ರಾಮಂ ಸೂರ್ಯಸಂಕಾಶೈಃ ಶರೈರ್ದತ್ತವರೈರ್ಭೃಶಮ್ ।
ವಿವ್ಯಾಧ ಸಮರೇ ಕ್ರುದ್ಧಃ ಸರ್ವಗಾತ್ರೇಷು ರಾವಣಿಃ ॥

ಅನುವಾದ

ಸಮರಾಂಗಣದಲ್ಲಿ ಕುಪಿತನಾದ ರಾವಣಿಯು ವರದಾನದಿಂದ ಪ್ರಾಪ್ತವಾದ ಸೂರ್ಯತುಲ್ಯ ತೇಜಸ್ವೀ ಬಾಣಗಳಿಂದ ಶ್ರೀರಾಮಚಂದ್ರನ ಸರ್ಮಾಂಗವನ್ನು ಗಾಯಗೊಳಿಸಿದನು.॥2.॥

ಮೂಲಮ್ - 29

ತೌ ಹನ್ಯಮಾನೌ ನಾರಾಚೈರ್ಧಾರಾಭಿರಿವ ಪರ್ವತೌ ।
ಹೇಮಪುಂಖಾನ್ ನರವ್ಯಾಘ್ರೌ ತಿಗ್ಮಾನ್ಮುಮುಚತುಃ ಶರಾನ್ ॥

ಅನುವಾದ

ಎರಡು ಪರ್ವತಗಳ ಮೇಲೆ ಸುರಿಯುತ್ತಿದ್ದ ಜಲಧಾರೆಯಂತೆ ಆ ಇಬ್ಬರು ನರಶ್ರೇಷ್ಠ ವೀರರ ಮೇಲೆ ನಾರಾಚಗಳ ಏಟು ಬೀಳುತ್ತಿತ್ತು. ಅದೇ ಸ್ಥಿತಿಯಲ್ಲಿ ಇಬ್ಬರು ವೀರರು ಸ್ವರ್ಣಪಂಖದಿಂದ ಸುಶೋಭಿತ ಹರಿತವಾದ ಬಾಣಗಳನ್ನು ಬಿಡತೊಡಗಿದರು.॥29॥

ಮೂಲಮ್ - 30

ಅಂತರಿಕ್ಷೇ ಸಮಾಸಾದ್ಯ ರಾವಣಿಂ ಕಂಕಪತ್ರಿಣಃ ।
ನಿಕೃತ್ಯ ಪತಗಾ ಭೂಮೌ ಪೇತುಸ್ತೇ ಶೋಣಿತಾಪ್ಲುತಾಃ ॥

ಅನುವಾದ

ಆ ರಣಹದ್ದಿನ ಗರಿಗಳಿಂದ ಕೂಡಿದ ಬಾಣಗಳು ಆಕಾಶಕ್ಕೆ ಹೋಗಿ ರಾವಣಿಯನ್ನು ಗಾಯಗೊಳಿಸಿ ರಕ್ತದಿಂದ ತೊಯ್ದು ಭೂಮಿಗೆ ಬೀಳುತ್ತಿದ್ದವು.॥30॥

ಮೂಲಮ್ - 31

ಅತಿಮಾತ್ರಂ ಶರೌಘೇಣ ಪೀಡ್ಯಮಾನೌ ನರೋತ್ತಮೌ ।
ತಾನಿಷೂನ್ ಪತತೋ ಭಲ್ಲೈರನೇಕೈರ್ವಿಚಕರ್ತತುಃ ॥

ಅನುವಾದ

ಬಾಣಸಮೂಹಗಳಿಂದ ಅತ್ಯಂತ ದೇದೀಪ್ಯ ಮಾನವಾದ ಆ ಇಬ್ಬರೂ ನರಶ್ರೇಷ್ಠ ವೀರರು ತಮ್ಮ ಮೇಲೆ ಬೀಳುತ್ತಿರುವ ಸಾಯಕಗಳನ್ನು ಭಲ್ಲ ಎಂಬ ಬಾಣಗಳಿಂದ ಕತ್ತರಿಸಿ ಹಾಕುತ್ತಿದ್ದರು.॥31॥

ಮೂಲಮ್ - 32

ಯತೋ ಹಿ ದದೃಶಾತೇ ತೌ ಶರಾನ್ನಿಪತಿತಾನ್ಛ್ರಿತಾನ್ ।
ತತಸ್ತು ತೌ ದಾಶರಥೀ ಸಸೃಜಾತೇಽಸ್ತ್ರ ಮುತ್ತಮಮ್ ॥

ಅನುವಾದ

ಯಾವ ದಿಕ್ಕಿನಿಂದ ಬಾಣಗಳು ಬರುತ್ತಿದ್ದವೋ ಅದೇ ದಿಕ್ಕಿಗೆ ಶ್ರೀರಾಮ-ಲಕ್ಷ್ಮಣರು ತಮ್ಮ ಉತ್ತಮ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದರು.॥32॥

ಮೂಲಮ್ - 33

ರಾವಣಿಸ್ತು ದಿಶಃ ಸರ್ವಾ ರಥೇನಾತಿರಥೋಽಪತತ್ ।
ವಿವ್ಯಾಧ ತೌ ದಾಶರಥೀ ಲಘ್ವಸ್ತ್ರೋ ನಿಶಿತೈಃ ಶರೈಃ ॥

ಅನುವಾದ

ಅತಿರಥಿ ವೀರ ಇಂದ್ರಜಿತು ತನ್ನ ರಥದ ಮೂಲಕ ಎಲ್ಲ ದಿಕ್ಕುಗಳಿಗೆ ಓಡುತ್ತಾ ಬಹಳ ಚಾಕಚಕ್ಯತೆಯಿಂದ ಅಸ್ತ್ರಗಳನ್ನು ಪ್ರಯೋಗಿಸಿ, ತನ್ನ ನಿಶಿತ ಶರಗಳಿಂದ ರಾಮ-ಲಕ್ಷ್ಮಣರನ್ನು ಗಾಯಗೊಳಿಸಿದನು.॥33॥

ಮೂಲಮ್ - 34

ತೇನಾತಿವಿದ್ಧೌ ತೌ ವೀರೌ ರುಕ್ಮಪುಂಖೈಃ ಸುಸಂಹತೈಃ ।
ಬಭೂವತುರ್ದಾಶರಥೀ ಪುಷ್ಪಿತಾವಿವ ಕಿಂಶುಕೌ ॥

ಅನುವಾದ

ಅವನ ಸ್ವರ್ಣಪಂಖಗಳಿದ್ದ ಸುದೃಢವಾದ ಸಾಯಕಗಳಿಂದ ಗಾಯಗೊಂಡ ರಾಮ-ಲಕ್ಷ್ಮಣರು ಹೂ ಅರಳಿದ ಮುತ್ತುಗದ ಮರಗಳಂತೆ ಕಾಣುತ್ತಿದ್ದರು.॥34॥

ಮೂಲಮ್ - 35

ನಾಸ್ಯ ವೇಗಗತಿಂ ಕಶ್ಚಿನ್ನ ಚ ರೂಪಂ ಧನುಃ ಶರಾನ್ ।
ನ ಚಾಸ್ಯವಿದಿತಂ ಕಿಂಚಿತ್ಸೂರ್ಯಸ್ಯೇವಾಭ್ರಸಂಪ್ಲವೇ ॥

ಅನುವಾದ

ಇಂದ್ರಜಿತುವಿನ ವೇಗದ ಗತಿ, ರೂಪ, ಧನುಸ್ಸು ಮತ್ತು ಬಾಣಗಳನ್ನು ಯಾರೂ ನೋಡುತ್ತಿರಲಿಲ್ಲ. ಮೋಡಗಳಲ್ಲಿ ಅಡಗಿದ್ದ ಸೂರ್ಯನಂತೆ ಅವನ ಸುಳಿವು ಯಾರಿಗೂ ತಿಳಿಯುತ್ತಿರಲಿಲ್ಲ.॥35॥

ಮೂಲಮ್ - 36

ತೇನ ವಿದ್ಧಾಶ್ಚ ಹರಯೋ ನಿಹತಾಶ್ಚ ಗತಾಸವಃ ।
ಬಭೂವುಃ ಶತಶಸ್ತತ್ರ ಪತಿತಾ ಧರಣೀತಲೇ ॥

ಅನುವಾದ

ಅವನಿಂದ ಗಾಯಗೊಂಡು ಎಷ್ಟೋ ವಾನರರು ಪ್ರಾಣಕಳೆದುಕೊಂಡರು ಹಾಗೂ ನೂರಾರು ಯೋಧರು ಸತ್ತು ನೆಲದಲ್ಲಿ ಬಿದ್ದುಹೋದರು.॥36॥

ಮೂಲಮ್ - 37

ಲಕ್ಷ್ಮಣಸ್ತು ತತಃಕ್ರುದ್ಧೋ ಭ್ರಾತರಂ ವಾಕ್ಯಮಬ್ರವೀತ್ ।
ಬ್ರಾಹ್ಮಮಸ್ತ್ರಂ ಪ್ರಯೋಕ್ಷ್ಯಾಮಿ ವಧಾರ್ಥಂ ಸರ್ವರಕ್ಷಸಾಮ್ ॥

ಅನುವಾದ

ಆಗ ಲಕ್ಷ್ಮಣನಿಗೆ ಭಾರೀ ಕ್ರೋಧವುಂಟಾಯಿತು ಮತ್ತು ಅವನು ಅಣ್ಣನ ಬಳಿಗೆ ಹೋದನು - ಆರ್ಯನೇ! ಈಗ ನಾನು ಸಮಸ್ತ ರಾಕ್ಷಸರ ಸಂಹಾರಕ್ಕಾಗಿ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುವೆನು.॥37॥

ಮೂಲಮ್ - 38

ತಮುವಾಚ ತತೋ ರಾಮೋ ಲಕ್ಷ್ಮಣಂ ಶುಭಲಕ್ಷಣಮ್ ।
ನೈಕಸ್ಯ ಹೇತೋ ರಕ್ಷಾಂಸಿ ಪೃಥಿವ್ಯಾಂ ಹಂತುಮರ್ಹಸಿ ॥

ಅನುವಾದ

ಅವನ ಮಾತನ್ನು ಕೇಳಿ ಶ್ರೀರಾಮನು ಶುಭಲಕ್ಷಣ ಸಂಪನ್ನ ಲಕ್ಷ್ಮಣನಲ್ಲಿ ಹೇಳಿದನು - ತಮ್ಮ! ಒಬ್ಬನಿಂದಾಗಿ ಭೂಮಂಡಲದ ಸಮಸ್ತ ರಾಕ್ಷಸರನ್ನು ವಧಿಸುವುದು ನಿನಗೆ ಉಚಿತವಲ್ಲ.॥38॥

ಮೂಲಮ್ - 39

ಅಯುಧ್ಯಮಾನಂ ಪ್ರಚ್ಛನ್ನಂ ಪ್ರಾಂಜಲಿಂ ಶರಣಾಗತಮ್ ।
ಪಲಾಯಮಾನಂ ಮತ್ತಂ ವಾ ನ ಹಂತುಂ ತ್ವಮಿಹಾರ್ಹಸಿ ॥

ಮೂಲಮ್ - 40

ತಸ್ಯೈವ ತು ವಧೇ ಯತ್ನಂ ಕರಿಷ್ಯಾಮೀ ಮಹಾಭುಜ ।
ಆದೇಕ್ಷ್ಯಾವೋ ಮಹಾವೇಗಾನಸ್ತ್ರಾನಾಶೀವಿಷೋಪಮಾನ್ ॥

ಅನುವಾದ

ಮಹಾಬಾಹೋ! ಯುದ್ಧ ಮಾಡ ದಿರುವ, ಅಡಗಿರುವ, ಕೈಮುಗಿದು ಶರಣು ಬಂದವ, ಯುದ್ಧದಲ್ಲಿ ಓಡುತ್ತಿರುವ, ಹುಚ್ಚನಾದ ಇಂತಹ ವ್ಯಕ್ತಿಗಳನ್ನು ಕೊಲ್ಲಬಾರದು. ಈಗ ನಾನು ಈ ಇಂದ್ರಜಿತುವಿನ ವಧೆಗಾಗಿ ಪ್ರಯತ್ನಿಸುವೆ. ಬಾ! ನಾವು ವಿಷಸರ್ಪಗಳಂತಹ ಅತಿ ಭಯಂಕರ ಹಾಗೂ ಅತ್ಯಂತ ವೇಗಶಾಲೀ ಅಸ್ತ್ರಗಳನ್ನು ಪ್ರಯೋಗಿಸುವಾ.॥39-40॥

ಮೂಲಮ್ - 41

ತಮೇನಂ ಮಾಯಿನಂ ಕ್ಷುದ್ರಮಂತರ್ಹಿತರಥಂ ಬಲಾತ್ ।
ರಾಕ್ಷಸಂ ನಿಹನಿಷ್ಯಂತಿ ದೃಷ್ಟ್ವಾ ವಾನರಯೂಥಪಾಃ ॥

ಅನುವಾದ

ಈ ಮಾಯಾವೀ ರಾಕ್ಷಸನು ಬಹಳ ನೀಚನಾಗಿದ್ದಾನೆ. ಇವನು ಅಂತರ್ಧಾನ ಶಕ್ತಿಯಿಂದ ತನ್ನ ರಥವನ್ನು ಅಡಗಿಸಿರುವನು. ಇವನು ಕಂಡುಬಂದರೆ ವಾನರ ದಳಪತಿಗಳು ಈ ರಾಕ್ಷಸನನ್ನು ಖಂಡಿತವಾಗಿ ಕೊಂದು ಹಾಕುವರು.॥41॥

ಮೂಲಮ್ - 42

ಯದ್ಯೇಷ ಭೂಮಿಂ ವಿಶತೇ ದಿವಂ ವಾ
ರಸಾತಲಂ ವಾಪಿ ನಭಃಸ್ಥಲಂ ವಾ ।
ಏವಂ ವಿಗೂಢೋಽಪಿ ಮಮಾಸ್ತ್ರದಗ್ಧಃ
ಪತಿಷ್ಯತೇ ಭೂಮಿತಲೇ ಗತಾಸುಃ ॥

ಅನುವಾದ

ಇವನು ಭೂಮಿಯೊಳಗೆ ಸೇರಿಕೊಂಡರೂ, ಸ್ವರ್ಗಕ್ಕೆ ಹೋದರೂ, ರಸಾತಳವನ್ನು ಪ್ರವೇಶಿಸಿದರೂ, ಅಥವಾ ಆಕಾಶದಲ್ಲೇ ಸ್ಥಿತನಾಗಿ ಹೀಗೇ ಅಡಗಿದ್ದರೂ ನನ್ನ ಅಸ್ತ್ರಗಳಿಂದ ದಗ್ಧನಾಗಿ ಪ್ರಾಣಶೂನ್ಯನಾಗಿ ಭೂಮಿಗೆ ಅವಶ್ಯವಾಗಿ ಬೀಳುವನು.॥42॥

ಮೂಲಮ್ - 42

ಇತ್ಯೇವಮುಕ್ತ್ವಾ ವಚನಂ ಮಹಾರ್ಥಂ
ರಘುಪ್ರವೀರಃ ಪ್ರವಗರ್ಷಭೈರ್ವೃತಃ ।
ವಧಾಯ ರೌದ್ರಸ್ಯ ನೃಶಂಸಕರ್ಮಣ-
ಸ್ತದಾ ಮಹಾತ್ಮಾ ತ್ವರಿತಂ ನಿರೀಕ್ಷತೇ ॥

ಅನುವಾದ

ಹೀಗೆ ಮಹಾರ್ಥಯುಕ್ತವಾದ ಮಾತುಗಳನ್ನು ಹೇಳಿ ವಾನರ ಶ್ರೇಷ್ಠರಿಂದ ಪರಿವೃತನಾದ ರಘುಕುಲದ ಪ್ರಮುಖ ವೀರ ಮಹಾತ್ಮಾ ಶ್ರೀರಾಮನು ಆ ಕ್ರೂರಕರ್ಮ ಭಯಾನಕ ರಾಕ್ಷಸನನ್ನು ವಧಿಸಲು ಅತ್ತ ಇತ್ತ ನೋಡತೊಡಗಿದನು.॥43॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಎಂಭತ್ತನೆಯ ಸರ್ಗ ಪೂರ್ಣವಾಯಿತು.॥80॥