०७९ राम-मकराक्षयुद्धम्

वाचनम्
ಭಾಗಸೂಚನಾ

ಶ್ರೀರಾಮನಿಂದ ಮಕರಾಕ್ಷನ ವಧೆ

ಮೂಲಮ್ - 1

ನಿರ್ಗತಂ ಮಕರಾಕ್ಷಂ ತೇ ದೃಷ್ಟ್ವಾ ವಾನರ ಪುಂಗವಾಃ ।
ಆಪ್ಲುತ್ಯ ಸಹಸಾ ಸರ್ವೇ ಯೋದ್ಧುಕಾಮಾ ವ್ಯವಸ್ಥಿತಾಃ ॥

ಅನುವಾದ

ಮಕರಾಕ್ಷನು ನಗರದಿಂದ ಹೊರಟು ಬಂದಿರುವುದನ್ನು ನೋಡಿ ಮುಖ್ಯ ಮುಖ್ಯ ವಾನರರೆಲ್ಲರೂ ಛಂಗನೆ ನೆಗೆಯುತ್ತಾ ಯುದ್ಧಕ್ಕಾಗಿ ಸಿದ್ಧರಾಗಿ ನಿಂತರು.॥1॥

ಮೂಲಮ್ - 2

ತತಃ ಪ್ರವೃತ್ತಂ ಸುಮಹತ್ತದ್ ಯುದ್ಧಂ ಲೋಮಹರ್ಷಣಮ್ ।
ನಿಶಾಚರೈಃ ಪ್ಲವಂಗಾನಾಂ ದೇವಾನಾಂ ದಾನವೈರಿವ ॥

ಅನುವಾದ

ಮತ್ತೆ ದೇವ ದಾನವರ ರೋಮಾಂಚಕರ ಸಂಗ್ರಾಮದಂತೆ ವಾನರರಿಗೂ, ನಿಶಾಚರರಿಗೂ ಭಾರೀ ಯುದ್ಧವು ಪ್ರಾರಂಭವಾಯಿತು.॥2॥

ಮೂಲಮ್ - 3

ವೃಕ್ಷಶೂಲನಿಪಾತೈಶ್ಚ ಗದಾಪರಿಘಪಾತನೈಃ ।
ಅನ್ಯೋನ್ಯಂ ಮರ್ದಯಂತಿ ಸ್ಮ ತದಾ ಕಪಿನಿಶಾಚರಾಃ ॥

ಅನುವಾದ

ವಾನರರು ಮತ್ತು ನಿಶಾಚರರು ವೃಕ್ಷ, ಶೂಲ, ಗದೆ, ಪರಿಘಗಳಿಂದ ಒಬ್ಬರನ್ನೊಬ್ಬರು ಮರ್ದಿಸುತ್ತಿದ್ದರು.॥3॥

ಮೂಲಮ್ - 4

ಶಕ್ತಿಖಡ್ಗ ಗದಾಕುಂತೈ ಸ್ತೋಮರೈಶ್ಚ ನಿಶಾಚರಾಃ ।
ಪಟ್ಟಿಶೈರ್ಭಿಂದಿ ಪಾಲೈಶ್ಚ ಬಾಣಪಾತೈಃ ಸಮಂತತಃ ॥

ಮೂಲಮ್ - 5

ಪಾಶಮುದ್ಗರದಂಡೈಶ್ಚ ನಿರ್ಘಾತೈಶ್ಚಾಪರೈಸ್ತಥಾ ।
ಕದನಂ ಕಪಿಸಿಂಹಾನಾಂ ಚಕ್ರುಸ್ತೇ ರಜನೀಚರಾಃ ॥

ಅನುವಾದ

ನಿಶಾಚರರು ಶಕ್ತಿ, ಖಡ್ಗ, ಭಲ್ಲೆ, ತೋಮರ, ಪಟ್ಟಿಶ, ಭಿಂದಿಪಾಲ, ಬಾಣಪ್ರಹಾರ, ಪಾಶ, ಮುದ್ಗರ, ದಂಡ ಹಾಗೂ ಇತರ ಶಸ್ತ್ರಗಳಿಂದ ವಾನರರನ್ನು ಸಂಹರಿಸತೊಡಗಿದರು.॥4-5॥

ಮೂಲಮ್ - 6

ಬಾಣೌಘೈ ರರ್ದಿತಾಶ್ಚಾಪಿ ಖರಪುತ್ರೇಣ ವಾನರಾಃ ।
ಸಂಭ್ರಾಂತ ಮನಸಃ ಸರ್ವೇ ದುದ್ರುವುರ್ಭಯಪೀಡಿತಾಃ ॥

ಅನುವಾದ

ಖರಪುತ್ರ ಮಕರಾಕ್ಷನು ತನ್ನ ಬಾಣಗಳಿಂದ ವಾನರರನ್ನು ಅತ್ಯಂತ ಗಾಯಗೊಳಿಸಿದನು. ಅವರು ಗಾಬರಿಗೊಂಡು, ಎಲ್ಲರೂ ಭಯದಿಂದ ಪೀಡಿತರಾಗಿ ಕಂಡ ಕಂಡ ಕಡೆಗೆ ಓಡತೊಡಗಿದರು.॥6॥

ಮೂಲಮ್ - 7

ತಾನ್ದೃಷ್ಟ್ವಾ ರಾಕ್ಷಸಾಃ ಸರ್ವೇ ದ್ರವಮಾಣಾನ್ವನೌಕಸಃ ।
ನೇದುಸ್ತೇ ಸಿಂಹವದ್ದೃಪ್ತಾ ರಾಕ್ಷಸಾ ಜಿತಕಾಶಿನಃ ॥

ಅನುವಾದ

ವಾನರರೆಲ್ಲರೂ ಓಡುತ್ತಿರುವುದನ್ನು ಕಂಡು ವಿಜಯೋಲ್ಲಾಸದಿಂದ ಸುಶೋಭಿತ ಸಮಸ್ತ ರಾಕ್ಷಸರು ದರ್ಪದಿಂದ ಸಿಂಹದಂತೆ ಗರ್ಜಿಸತೊಡಗಿದರು.॥7॥

ಮೂಲಮ್ - 8

ವಿದ್ರವತ್ಸು ತದಾ ತೇಷು ವಾನರೇಷು ಸಮಂತತಃ ।
ರಾಮಸ್ತಾನ್ವಾರಯಾಮಾಸ ಶರವರ್ಷೇಣ ರಾಕ್ಷಸಾನ್ ॥

ಅನುವಾದ

ಎಲ್ಲ ವಾನರರು ಎಲ್ಲೆಡೆ ಓಡಿಹೋಗಲು ತೊಡಗಿದಾಗ ಶ್ರೀರಾಮಚಂದ್ರನು ಬಾಣಗಳ ಮಳೆ ಸುರಿಸಿ ರಾಕ್ಷಸರನ್ನು ತಡೆದು ನಿಲ್ಲಿಸಿದನು.॥8॥

ಮೂಲಮ್ - 9

ವಾರಿತಾನ್ರಾಕ್ಷಸಾನ್ ದೃಷ್ಟ್ವಾ ಮಕರಾಕ್ಷೋ ನಿಶಾಚರಃ ।
ಕ್ರೋಪಾನಲ ಸಮಾವಿಷ್ಟೋ ವಚನಂ ಚೇದಮಬ್ರವೀತ್ ॥

ಅನುವಾದ

ರಾಕ್ಷಸರನ್ನು ತಡೆದುದನ್ನು ನೋಡಿದ ನಿಶಾಚರ ಮಕರಾಕ್ಷನು ಕ್ರೋಧಾಗ್ನಿಯಿಂದ ಉರಿದೆದ್ದು ಹೇಳಿದನು.॥9॥

ಮೂಲಮ್ - 10

ತಿಷ್ಠ ರಾಮ ಮಯಾ ಸಾರ್ಧಂ ದ್ವಂದ್ವಯುದ್ಧಂ ಭವಿಷ್ಯತಿ ।
ತ್ಯಾಜಯಿಷ್ಯಾಮಿ ತೇ ಪ್ರಾಣಾನ್ ಧನುರ್ಮುಕ್ತೈಃ ಶಿತೈಃ ಶರೈಃ ॥

ಅನುವಾದ

ರಾಮ ನಿಲ್ಲು, ನನ್ನೊಡನೆ ನಿನ್ನ ದ್ವಂದ್ವಯುದ್ಧ ನಡೆಯಲಿ. ಇಂದು ನಾನು ಹರಿತವಾದ ಬಾಣಗಳಿಂದ ನಿನ್ನ ಪ್ರಾಣಗಳನ್ನು ಅಪಹರಿಸುವೆನು.॥10॥

ಮೂಲಮ್ - 11

ಯತ್ತದಾ ದಂಡಕಾರಣ್ಯೇ ಪಿತರಂ ಹತವಾನ್ಮಮ ।
ಮದಗ್ರತಃ ಸ್ವಕರ್ಮಸ್ಥಂ ಸ್ಮೃತ್ವ್ವಾರೋಷೋಽಭಿವರ್ಧತೇ ॥

ಅನುವಾದ

ಹಿಂದೆ ದಂಡಕಾರಣ್ಯದಲ್ಲಿ ನೀನು ನನ್ನ ತಂದೆಯನ್ನ ವಧಿಸಿದ್ದೆ, ಅಂದಿನಿಂದ ಇಂದಿನವರೆಗೆ ನೀನು ರಾಕ್ಷಸರನ್ನು ವಧಿಸುವ ಕಾರ್ಯದಲ್ಲೇ ತೊಡಗಿರುವೆ. ಹಾಗೆ ನಿನ್ನ ಸ್ಮರಣೆಯಿಂದ ನನ್ನರೋಷ ಹೆಚ್ಚುತ್ತಾ ಇದೆ.॥11॥

ಮೂಲಮ್ - 12

ದಹ್ಯಂತೇ ಭೃಶಮಂಗಾನಿ ದುರಾತ್ಮನ್ ಮಮ ರಾಘವ ।
ಯನ್ಮಯಾಸಿ ನ ದೃಷ್ಟಸ್ತ್ವಂ ತಸ್ಮಿನ್ಕಾಲೇ ಮಹಾವನೇ ॥

ಅನುವಾದ

ದುರಾತ್ಮ ರಾಘವನೇ! ಆಗ ವಿಶಾಲ ದಂಡಕಾರಣ್ಯದಲ್ಲಿ ನೀನು ನನ್ನ ಕಣ್ಣಿಗೆ ಬಿದ್ದಿಲ್ಲ. ಇದರಿಂದ ನನ್ನ ಶರೀರ ರೋಷದಿಂದ ಉರಿಯುತ್ತಿದ್ದೆ.॥12॥

ಮೂಲಮ್ - 13

ದಿಷ್ಟ್ಯಾಸಿ ದರ್ಶನಂ ರಾಮ ಮಮ ತ್ವಂ ಪ್ರಾಪ್ತವಾನಿಹ ।
ಕಾಂಕ್ಷಿತೋಽಸಿ ಕ್ಷುಧಾರ್ತಸ್ಯ ಸಿಂಹಸ್ಯೇವೇತರೋ ಮೃಗಃ ॥

ಅನುವಾದ

ಆದರೆ ರಾಮ! ಇಂದು ನೀನು ಇಲ್ಲಿ ನನ್ನ ಕಣ್ಣೆದುರಿಗೆ ಬಂದುದು ಸೌಭಾಗ್ಯದ ಮಾತಾಗಿದೆ. ಹಸಿದಿರುವ ಸಿಂಹವು ಬೇರೆ ವನ್ಯಜಂತುಗಳ ಅಭಿಲಾಷೆ ಇರಿಸುವಂತೆ ನಾನೂ ನಿನ್ನನ್ನು ಪಡೆಯುವೆ ಇಚ್ಛಿಸುತ್ತಿದ್ದೇನೆ.॥13॥

ಮೂಲಮ್ - 14

ಅದ್ಯ ಮದ್ಪಾಣವೇಗೇನ ಪ್ರೇತರಾಡ್ವಿಷಯಂ ಗತಃ ।
ಯೇ ತ್ವಯಾ ನಿಹತಾಃ ಶೂರಾಃ ಸಹ ತೈಶ್ಚ ವಸಿಷ್ಯಸಿ ॥

ಅನುವಾದ

ಇಂದು ನನ್ನ ಬಾಣಗಳ ವೇಗದಿಂದ ಯಮನಾಲಯಕ್ಕೆ ಹೋಗಿ, ನಿನ್ನಿಂದ ಹತರಾದ ನಿಶಾಚರರೊಂದಿಗೆ ನೀನು ವಾಸಿಸಬೇಕಾಗುವುದು.॥14॥

ಮೂಲಮ್ - 15

ಬಹುನಾತ್ರ ಕಿಮುಕ್ತೇನ ಶೃಣು ರಾಮ ವಚೋ ಮಮ ।
ಪಶ್ಯಂತು ಸಫಲಾ ಲೋಕಾಸ್ತ್ವಾಂ ಮಾಂ ಚೈವ ರಣಾಜಿರೇ ॥

ಅನುವಾದ

ರಾಮ! ಹೆಚ್ಚು ಹೇಳುವುದರಿಂದ ಏನು ಲಾಭ? ನನ್ನ ಮಾತನ್ನು ಕೇಳು. ಎಲ್ಲ ಜನರು ಈ ರಣಾಂಗಣದಲ್ಲಿ ನಿಂತು ಕೇವಲ ನಿನ್ನನ್ನು ಮತ್ತು ನನ್ನನ್ನು ನೋಡಲಿ. ನಿನ್ನ ಮತ್ತು ನನ್ನ ಯುದ್ಧವನ್ನು ಅವಲೋಕಿಸಲಿ.॥15॥

ಮೂಲಮ್ - 16

ಅಸ್ತ್ರೈರ್ವಾ ಗದಯಾ ವಾಪಿ ಬಾಹುಭ್ಯಾಂ ವಾ ರಣಾಜಿರೇ ।
ಅಭ್ಯಸ್ತಂ ಯೇನ ವಾ ರಾಮ ವರ್ತತಾಂ ತೇನ ವಾ ಮೃಧಮ್ ॥

ಅನುವಾದ

ರಾಮ! ನಿನಗೆ ಯುದ್ಧದಲ್ಲಿ ಅಸ್ತ್ರಗಳಿಂದ, ಗದೆಯಿಂದ ಅಥವಾ ಬಾಹುಗಳಿಂದ ಯಾವ ಅಭ್ಯಾಸವಿದೆಯೋ ಅದರಿಂದ ಇಂದು ನಿನ್ನೊಡನೆ ಯುದ್ಧ ನಡೆಯಲಿ.॥16॥

ಮೂಲಮ್ - 17

ಮಕರಾಕ್ಷ ವಚಃ ಶ್ರುತ್ವಾ ರಾಮೋ ದಶರಥಾತ್ಮಜಃ ।
ಅಬ್ರವೀತ್ಪ್ರಹಸನ್ ವಾಕ್ಯಮುತ್ತರೋತ್ತರವಾದಿನಮ್ ॥

ಅನುವಾದ

ಮಕರಾಕ್ಷನ ಮಾತನ್ನು ಕೇಳಿ ದಶರಥನಂದನ ಶ್ರೀರಾಮನು ಜೋರಾಗಿ ನಗುತ್ತಾ ಉತ್ತರೋತ್ತರ ಮಾತುಗಳನ್ನಾಡುತ್ತಿರುವ ಆ ರಾಕ್ಷಸನಲ್ಲಿ ನುಡಿದನು.॥17॥

ಮೂಲಮ್ - 18

ಕತ್ಥಸೇ ಕಿಂ ವೃಥಾ ರಕ್ಷೋ ಬಹೂನ್ಯಸದೃಶಾನಿ ತೇ ।
ನ ರಣೇ ಶಕ್ಯತೇ ಜೇತುಂ ವಿನಾ ಯುದ್ಧೇನ ವಾಗ್ಭಲಾತ್ ॥

ಅನುವಾದ

ನಿಶಾಚರನೇ! ಏಕೆ ವ್ಯರ್ಥ ಬಡಾಯಿಕೊಚ್ಚಿಕೊಳ್ಳುವೆ? ನೀನು ಬಹಳ ಮಾತನಾಡಿದೆ, ಅದು ವೀರಪುರುಷರಿಗೆ ಯೋಗ್ಯವಸಲ್ಲ. ಸಂಗ್ರಾಮದಲ್ಲಿ ಯುದ್ಧ ಮಾಡದೆ ಒಣ ಮಾತುಗಳಿಂದ ವಿಜಯಪ್ರಾಪ್ತವಾಗುವುದಿಲ್ಲ.॥18॥

ಮೂಲಮ್ - 19

ಚತುರ್ದಶ ಸಹಸ್ರಾಣಿ ರಕ್ಷಸಾಂ ತ್ವತ್ಪಿತಾ ಚ ಯಃ ।
ತ್ರಿಶಿರಾ ದೂಷಣಶ್ಚಾಪಿ ದಂಡಕೇ ನಿಹತೋ ಮಯಾ ॥

ಮೂಲಮ್ - 20

ಸ್ವಾಶಿತಾಶ್ಚಾಪಿ ಮಾಂಸೇನ ಗೃಧ್ರಗೋಮಾಯು ವಾಯಸಾಃ ।
ಭವಿಷ್ಯಂತ್ಯದ್ಯ ವೈ ಪಾಪ ತೀಕ್ಷ್ಣತುಂಡನಖಾಂಕುಶಾಃ ॥

ಅನುವಾದ

ಪಾಪೀ ರಾಕ್ಷಸನೇ! ದಂಡಕಾರಣ್ಯದಲ್ಲಿ ಹದಿನಾಲ್ಕು ಸಾವಿರ ರಾಕ್ಷಸರ ಜೊತೆಗೆ ನಿನ್ನ ತಂದೆ ಖರ, ತ್ರಿಶಿರ, ದೂಷಣರನ್ನು ನಾನು ವಧಿಸಿದ್ದೆ. ಆಗ ಚೂಪಾದ ಕೊಕ್ಕುಗಳುಳ್ಳ, ಅಂಕುಶದಂತಹ ರೆಕ್ಕೆಗಳುಳ್ಳ ಅನೇಕ ಹದ್ದುಗಳು, ಗುಳ್ಳೆನರಿಗಳು, ಕಾಗೆಗಳು ಅವರ ಮಾಂಸದಿಂದ ಚೆನ್ನಾಗಿ ತೃಪ್ತಿಪಡಿಸಿದ್ದೆ. ಇಂದು ಈಗ ನಿನ್ನ ಮಾಂಸದಿಂದ ಹೊಟ್ಟೆ ತುಂಬಿಸಿಕೊಳ್ಳುವವು.॥19-20॥

ಮೂಲಮ್ - 21

ರಾಘವೇಣೈವಮುಕ್ತಸ್ತು ಮಕರಾಕ್ಷೋ ಮಹಾಬಲಃ ।
ಬಾಣೌಘಾನಮುಚತ್ ತಸ್ಮೈ ರಾಘವಾಯ ರಣಾಜಿರೇ ॥

ಅನುವಾದ

ಶ್ರೀರಾಮನು ಹೀಗೆ ಹೇಳಿದಾಗ ಮಹಾಬಲಿ ಮಕರಾಕ್ಷನು ರಣರಂಗದಲ್ಲಿ ರಾಮನ ಮೇಲೆ ಬಾಣಗಳ ಮಳೆ ಸುರಿಸಲು ಪ್ರಾರಂಭಿಸಿದನು.॥21॥

ಮೂಲಮ್ - 22

ತಾನ್ಶರಾನ್ ಶರವರ್ಷೇಣ ರಾಮಶ್ಚಿಚ್ಛೇದ ನೈಕಧಾ ।
ನಿಪೇತುರ್ಭುವಿ ವಿಚ್ಛಿನ್ನಾ ರುಕ್ಮಪುಂಖಾಃ ಸಹಸ್ರಶಃ ॥

ಅನುವಾದ

ಆದರೆ ಶ್ರೀರಾಮನು ಬಾಣಗಳನ್ನು ಸುರಿಸಿ ಆ ರಾಕ್ಷಸನ ಬಾಣಗಳನ್ನು ಕತ್ತರಿಸಿ ಹಾಕಿದನು. ಆ ತುಂಡಾದ ಸ್ವರ್ಣರೆಕ್ಕೆಗಳುಳ್ಳ ಸಾವಿರಾರು ಬಾಣಗಳು ನೆಲಕ್ಕೆ ಬಿದ್ದು ಹೋದುವು.॥22॥

ಮೂಲಮ್ - 23

ತದ್ಯುದ್ಧ ಮಭವತ್ತತ್ರ ಸಮೇತ್ಯಾನ್ಯೋನ್ಯ ಮೋಜಸಾ ।
ಖರ ರಕ್ಷಸ ಪುತ್ರಸ್ಯ ಸೂನೋರ್ದಶರಥಸ್ಯ ಚ ॥

ಅನುವಾದ

ದಶರಥನಂದನ ಶ್ರೀರಾಮ ಮತ್ತು ರಾಕ್ಷಸ ಖರಪುತ್ರ ಮಕರಾಕ್ಷ ಇಬ್ಬರೂ ಹತ್ತಿರ ಬಂದು ಬಲಪೂರ್ವಕ ಯುದ್ಧನಡೆಯಿತು.॥23॥

ಮೂಲಮ್ - 24

ಜೀಮೂತಯೋರಿವಾಕಾಶೇ ಶಬ್ದೋ ಜ್ಯಾತಲಯೋರಿವ ।
ಧನುರ್ಮುಕ್ತಃ ಸ್ವನೋನ್ಯೋಽನ್ಯಂ ಶ್ರೂಯತೇ ಚ ರಣಾಜಿರೇ ॥

ಅನುವಾದ

ಅವರಿಬ್ಬರ ಕೈಚಳಕದ, ಧನುಷ್ಠಂಕಾರದ ಶಬ್ದ ಪರಸ್ಪರ ಒಂದಾಗಿ, ಆಕಾಶದಲ್ಲಿ ಎರಡು ಮೇಘಗಳು ಗರ್ಜಿಸುತ್ತಿರುವಂತೆ ಕೇಳಿ ಬರುತ್ತಿತ್ತು.॥24॥

ಮೂಲಮ್ - 25

ದೇವದಾನವ ಗಂಧರ್ವಾಃ ಕಿನ್ನರಾಶ್ಚ ಮಹೋರಗಾಃ ।
ಅಂತರಿಕ್ಷಗತಾಃ ಸರ್ವೇ ದ್ರಷ್ಟುಕಾಮಾಸ್ತದದ್ಭುತಮ್ ॥

ಅನುವಾದ

ದೇವತೆಗಳು, ದಾನವರು, ಗಂಧರ್ವ, ಕಿನ್ನರ, ದೊಡ್ಡ ನಾಗಗಳು ಹೀಗೆ ಎಲ್ಲರೂ ಆ ಅದ್ಭುತ ಯುದ್ಧವನ್ನು ನೋಡಲು ಅಂತರಿಕ್ಷದಲ್ಲಿ ಬಂದು ನೆರೆದರು.॥25॥

ಮೂಲಮ್ - 26

ವಿದ್ಧಮನ್ಯೋನ್ಯಗಾತ್ರೇಷು ದ್ವಿಗುಣಂ ವರ್ಧತೇ ಬಲಮ್ ।
ಕೃತಪ್ರತಿಕೃತಾನ್ಯೋನ್ಯಂ ಕುರುತಾಂ ತೌ ರಣಾಜಿರೇ ॥

ಅನುವಾದ

ಇಬ್ಬರ ಶರೀರಗಳೂ ಬಾಣಗಳಿಂದ ಗಾಯಗೊಂಡು ಅವರ ಬಲ ಇಮ್ಮಡಿಸಿತ್ತು. ಅವರಿಬ್ಬರೂ ಸಂಗ್ರಾಮ ಭೂಮಿಯಲ್ಲಿ ಒಬ್ಬರು ಇನ್ನೊಬ್ಬರ ಅಸ್ತ್ರಗಳನ್ನು ಖಂಡಿಸುತ್ತಾ ಕಾದಾಡುತ್ತಿದ್ದರು.॥26॥

ಮೂಲಮ್ - 27

ರಾಮಮುಕ್ತಾಂಸ್ತು ಬಾಣೌಘಾನ್ ರಾಕ್ಷಸಸ್ತ್ವಚ್ಛಿನದ್ರಣೇ ।
ರಕ್ಷೋಮುಕ್ತಾಂಸ್ತು ರಾಮೋ ವೈ ನೈಕಧಾ ಪ್ರಾಚ್ಛಿನಚ್ಛರೈಃ ॥

ಅನುವಾದ

ಶ್ರೀರಾಮನು ಪ್ರಯೋಗಿಸಿದ ಬಾಣಗಳನ್ನು ರಾಕ್ಷಸನು ತುಂಡರಿಸುತ್ತಿದ್ದರೆ, ರಾಕ್ಷಸನು ಬಿಟ್ಟ ಅಂಬುಗಳನ್ನು ಶ್ರೀರಾಮಚಂದ್ರನು ತನ್ನ ಬಾಣಗಳಿಂದ ಕತ್ತರಿಸುತ್ತಿದ್ದನು.॥27॥

ಮೂಲಮ್ - 28

ಬಾಣೌಘವಿತತಾಃ ಸರ್ವಾ ದಿಶಶ್ಚ ಪ್ರದಿಶಸ್ತಥಾ ।
ಸಂಛನ್ನಾ ವಸುಧಾ ಚೈವ ಸಮಂತಾನ್ನ ಪ್ರಕಾಶತೇ ॥

ಅನುವಾದ

ಬಾಣಗಳ ಸಮೂಹದಿಂದ ದಶದಿಕ್ಕುಗಳು ಮುಚ್ಚಿಹೋಗಿದ್ದವು, ಇಡೀ ಭೂಮಿ ಆಚ್ಛಾದಿತವಾಗಿ, ಸುತ್ತಲೂ ಏನೂ ಕಾಣುತ್ತಿರಲಿಲ್ಲ.॥28॥

ಮೂಲಮ್ - 29

ತತಃ ಕ್ರುದ್ಧೋ ಮಹಾಬಾಹುರ್ಧನುಶ್ಚಿಚ್ಛೇದ ಸಂಯುಗೇ ।
ಅಷ್ಟಾಭಿರಥ ನಾರಾಚೈಃ ಸೂತಂ ವಿವ್ಯಾಧ ರಾಘವಃ ॥

ಅನುವಾದ

ಅನಂತರ ಮಹಾಬಾಹು ಶ್ರೀರಾಮನು ಕ್ರೋಧಗೊಂಡು ಆ ರಾಕ್ಷಸನ ಧನುಸ್ಸನ್ನು ತುಂಡರಿಸಿ, ಎಂಟು ನಾರಾಚಗಳಿಂದ ಸಾರಥಿಯನ್ನೂ ಕೊಂದು ಹಾಕಿದನು.॥29॥

ಮೂಲಮ್ - 30

ಭಿತ್ತ್ವಾ ರಥಂಶರೈ ರಾಮೋ ಹತ್ವಾ ಅಶ್ವಾನ ಪಾತಯತ್ ।
ವಿರಥೋ ವಸುಧಾಸ್ಥಃ ಸ ಮಕರಾಕ್ಷೋ ನಿಶಾಚರಃ ॥

ಅನುವಾದ

ಮತ್ತೆ ಅನೇಕ ಶರಗಳಿಂದ ರಥವನ್ನು ನುಚ್ಚುನೂರಾಗಿಸಿ, ಶ್ರೀರಾಮನು ಕುದುರೆಗಳನ್ನು ಕೊಂದು ಹಾಕಿದನು. ರಥಹೀನನಾದ ನಿಶಾಚರ ಮಕರಾಕ್ಷನು ಭೂಮಿಯಲ್ಲಿ ನಿಂತುಕೊಂಡನು.॥30॥

ಮೂಲಮ್ - 31

ತತ್ತಿಷ್ಠದ್ ವಸುಧಾಂ ರಕ್ಷಃ ಶೂಲಂ ಜಗ್ರಾಹ ಪಾಣಿನಾ ।
ತ್ರಾಸನಂ ಸರ್ವಭೂತಾನಾಂ ಯುಗಾಂತಾಗ್ನಿ ಸಮಪ್ರಭಮ್ ॥

ಅನುವಾದ

ನೆಲದ ಮೇಲೆ ನಿಂತ ಆ ರಾಕ್ಷಸನು ಪ್ರಳಯಕಾಲದ ಅಗ್ನಿಯಂತೆ ಪ್ರಕಾಶಮಾನವಾದ, ಸಮಸ್ತ ಪ್ರಾಣಿಗಳನ್ನು ಭಯಗೊಳಿಸುವ ಒಂದು ಶೂಲವನ್ನೆತ್ತಿಕೊಂಡನು.॥31॥

ಮೂಲಮ್ - 32

ದುರಾವಾಪಂ ಮಹಚ್ಛೂಲಂ ರುದ್ರದತ್ತಂ ಭಯಂಕರಮ್ ।
ಜಾಜ್ವಲ್ಯಮಾನಮಾಕಾಶೇ ಸಂಹಾರಾಸ್ತ್ರಮಿವಾಪರಮ್ ॥

ಅನುವಾದ

ಪರಮ ದುರ್ಲಭವಾದ, ಭಯಂಕರವಾದ ಆ ಮಹಾಶೂಲವನ್ನು, ಭಗವಾನ್ ಶಂಕರನು ಕೊಟ್ಟಿದ್ದನು. ಅದು ಬೇರೆ ಸಂಹಾಸದಂತೆ ಆಕಾಶದಲ್ಲಿ ಪ್ರಜ್ವಲಿಸಿತು.॥32॥

ಮೂಲಮ್ - 33½

ಯಂ ದೃಷ್ಟ್ವಾ ದೇವತಾಃ ಸರ್ವಾ ಭಯಾರ್ತಾ ವಿದ್ರುತಾ ದಿಶಃ ।
ವಿಭ್ರಾಮ್ಯ ತು ಮಹಚ್ಛೂಲಂ ಪ್ರಜ್ವಲಂತಂ ನಿಶಾಚರಃ ॥
ಸ ಕ್ರೋಧಾತ್ ಪ್ರಹಿಣೋತ್ತಸ್ಮೈ ರಾಘವಾಯ ಮಹಾಹವೇ ।

ಅನುವಾದ

ಅದನ್ನು ನೋಡಿದ ದೇವತೆಗಳೆಲ್ಲರೂ ಭಯದಿಂದ ದಿಕ್ಕಾಪಾಲಾಗಿ ಓಡದರು. ಆ ನಿಶಾಚರನು ಪ್ರಜ್ವಲಿತವಾದ ಆ ಮಹಾ ಶೂಲವನ್ನು ತಿರುಗಿಸುತ್ತಾ ಮಹಾತ್ಮಾ ಶ್ರೀರಾಮನ ಮೇಲೆ ಕ್ರೋಧದಿಂದ ಎಸೆದನು.॥33॥

ಮೂಲಮ್ - 34½

ತಮಾಪತಂತಂ ಜ್ವಲಿತಂ ಖರಪುತ್ರಕರಾಚ್ಚ್ಯುತಮ್ ॥
ಬಾಣೈಶ್ಚತುರ್ಭಿರಾಕಾಶೇ ಶೂಲಂ ಚಿಚ್ಛೇದ ರಾಘವಃ ।

ಅನುವಾದ

ಖರಪುತ್ರ ಮಕರಾಕ್ಷನು ಎಸೆದಿರುವ ಆ ಪ್ರಜ್ವಲಿತ ಶೂಲವು ತನ್ನ ಕಡೆಗೆ ಬರುತ್ತಿರುವುದನ್ನು ನೋಡಿ ಶ್ರೀರಾಮಚಂದ್ರನು ನಾಲ್ಕು ಬಾಣಗಳನ್ನು ಹೊಡೆದು ಆಕಾಶದಲ್ಲೇ ಅದನ್ನು ತುಂಡರಿಸಿದನು.॥34॥

ಮೂಲಮ್ - 35

ಸ ಚ್ಛಿನ್ನೋ ನೈಕಧಾ ಶೂಲೋ ದಿವ್ಯಹಾಟಕಮಂಡಿತಃ ।
ವ್ಯಶೀರ್ಯತ ಮಹೋಲ್ಕೇವ ರಾಮಬಾಣಾರ್ದಿತೋ ಭುವಿ ॥

ಅನುವಾದ

ದಿವ್ಯ ಸುವರ್ಣಭೂಷಿತ ಆ ಶೂಲವು ಶ್ರೀರಾಮನ ಬಾಣಗಳಿಂದ ಖಂಡಿತವಾಗಿ ಅನೇಕ ಚೂರುಗಳಾಗಿ ಉಲ್ಕಾಪಾತದಂತೆ ಭೂಮಿಯಲ್ಲಿ ಚೆಲ್ಲಿಹೋಯಿತು.॥35॥

ಮೂಲಮ್ - 36

ತಚ್ಛೂಲಂ ನಿಹತಂ ದೃಷ್ಟ್ವಾರಾಮೇಣಾಕ್ಲಿಷ್ಟ ಕರ್ಮಣಾ ।
ಸಾಧು ಸಾಧ್ವಿತಿ ಭೂತಾನಿ ವ್ಯಾಹರಂತಿ ನಭೋಗತಾಃ ॥

ಅನುವಾದ

ಅನಾಯಾಸವಾಗಿ ಮಹತ್ ಕರ್ಮಮಾಡುವ ಶ್ರೀರಾಮನು ಆ ಶೂಲವನ್ನು ತುಂಡರಿಸಿದುದನ್ನು ನೋಡಿ ಆಕಾಶದಲ್ಲಿ ಸ್ಥಿತರಾದವರೆಲ್ಲರೂ ಸಾಧು! ಸಾಧು! ರಾಘವ! ಎಂದು ಪ್ರಶಂಸಿಸಿದರು.॥36॥

ಮೂಲಮ್ - 37

ತಂ ದೃಷ್ಟ್ವಾ ನಿಹತಂ ಶೂಲಂ ಮಕರಾಕ್ಷೋ ನಿಶಾಚರಃ ।
ಮುಷ್ಟಿಮುದ್ಯಮ್ಯ ಕಾಕುತ್ಸ್ಥಂ ತಿಷ್ಠ ತಿಷ್ಠೇತಿ ಜಾಬ್ರವೀತ್ ॥

ಅನುವಾದ

ಆ ಶೂಲವು ನುಚ್ಚುನೂರಾಗಿ ಹೋದುದನ್ನು ನೋಡಿ ಮಕರಾಕ್ಷನು ಮುಷ್ಟಿ ಬಿಗಿದು ಶ್ರೀರಾಮನಲ್ಲಿ ನಿಲ್ಲು! ನಿಲ್ಲು! ಎಂದು ಬೊಬ್ಬಿರಿದನು.॥37॥

ಮೂಲಮ್ - 38

ಸ ತಂ ದೃಷ್ಟ್ವಾಪತಂತಂ ತು ಪ್ರಹಸ್ಯ ರಘುನಂದನಃ ।
ಪಾವಕಾಸ್ತ್ರಂ ತತೋ ರಾಮಃ ಸಂದಧೇ ತು ಶರಾಸನೇ ॥

ಅನುವಾದ

ಅವನು ಆಕ್ರಮಿಸಿದುದನ್ನು ನೋಡಿ ಶ್ರೀರಾಮ ಚಂದ್ರನು ನಗುತ್ತಾ ಧನುಸ್ಸಿಗೆ ಆಗ್ನೇಯಾಸವನ್ನು ಹೂಡಿದನು.॥38॥

ಮೂಲಮ್ - 39

ತೇನಾಸ್ತ್ರೇಣ ಹತಂ ರಕ್ಷಃ ಕಾಕುತ್ಸ್ಥೇನ ತದಾ ರಣೇ ।
ಸಂಛಿನ್ನ ಹೃದಯಂ ತತ್ರ ಪಪಾತ ಚ ಮಮಾರ ಚ ॥

ಅನುವಾದ

ಆ ಅಸ್ತ್ರದಿಂದಾಗಿ ಅವನು ರಣಭೂಮಿಯಲ್ಲಿ ರಾಕ್ಷಸನ ಮೇಲೆ ಪ್ರಯೋಗಿಸಿದನು. ಬಾಣದ ಆಘಾತದಿಂದ ರಾಕ್ಷಸನ ಹೃದಯ ಒಡೆದುಹೋಗಿ, ನೆಲಕ್ಕೆ ಬಿದ್ದು ಸತ್ತುಹೋದನು.॥39॥

ಮೂಲಮ್ - 40

ದೃಷ್ಟ್ವಾ ತೇ ರಾಕ್ಷಸಾಃ ಸರ್ವೇ ಮಕರಾಕ್ಷಸ್ಯ ಪಾತನಮ್ ।
ಲಂಕಾ ಮೇವಾಭ್ಯಧಾವಂತ ರಾಮಬಾಣ ಭಯಾರ್ದಿತಾಃ ॥

ಅನುವಾದ

ಮಕರಾಕ್ಷನು ಧರಾಶಾಯಿಯಾದುದನ್ನು ನೋಡಿ ರಾಕ್ಷಸರೆಲ್ಲರೂ ಶ್ರೀರಾಮನ ಬಾಣಗಳ ಭಯದಿಂದ ವ್ಯಾಕುಲರಾಗಿ ಲಂಕೆಗೆ ಓಡಿಹೋದರು.॥40॥

ಮೂಲಮ್ - 41

ದಶರಥನೃಪಸೂನುಬಾಣವೇಗೈ
ರಜನೀಚರಂ ನಿಹತಂ ಖರಾತ್ಮಜಂ ತಮ್ ।
ಪ್ರದದೃಶುರಥ ದೇವತಾಃ ಪ್ರಹೃಷ್ಟಾ
ಗಿರಿಮಿವ ವಜ್ರಹತಂ ಯಥಾ ವಿಕೀರ್ಣಮ್ ॥

ಅನುವಾದ

ವಜ್ರಾಯುಧದ ಹೊಡೆತದಿಂದ ಪರ್ವತವು ಚೆಲ್ಲಿಹೋಗುವಂತೆ ಖರನ ಪುತ್ರ ಮಕರಾಕ್ಷನು ದಶರಥನಂದನ ಶ್ರೀರಾಮಚಂದ್ರನು ಬಾಣಗಳ ವೇಗದಿಂದ ಸಂಹರಿಸಿದುದನ್ನು ನೋಡಿದ ದೇವತೆಗಳು ಸಂತೋಷಗೊಂಡರು.॥41॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಎಪ್ಪತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥79॥