०७७ निकुम्भेन युद्धभूमिप्रवेशः

वाचनम्
ಭಾಗಸೂಚನಾ

ಹನುಮಂತನಿಂದ ನಿಕುಂಭನ ವಧೆ

ಮೂಲಮ್ - 1

ನಿಕುಂಭೋ ಭ್ರಾತರಂ ದೃಷ್ಟ್ವಾ ಸುಗ್ರೀವೇಣ ನಿಪಾತಿತಮ್ ।
ಪ್ರದಹನ್ನಿವ ಕೋಪೇನ ವಾನರೇಂದ್ರಮುದೈಕ್ಷತ ॥

ಅನುವಾದ

ಸುಗ್ರೀವನಿಂದ ತನ್ನ ಅಣ್ಣನು ಹತನಾದುದನ್ನು ನೋಡಿ ನಿಕುಂಭನು ವಾನರರಾಜನನ್ನು ತನ್ನ ಕ್ರೋಧದಿಂದಲೇ ಸುಟ್ಟುಬಿಡುವನೋ ಎಂಬಂತೆ ನೋಡಿದನು.॥1॥

ಮೂಲಮ್ - 2

ತತಃ ಸ್ರಗ್ದಾಮಸಂನದ್ಧಂ ದತ್ತಪಂಚಾಗುಲಂ ಶುಭಮ್ ।
ಆದದೇ ಪರಿಘಂ ವೀರೋ ಮಹೇಂದ್ರಶಿಖರೋಪಮಮ್ ॥

ಅನುವಾದ

ಆ ಧೀರ-ವೀರನು ಮಹೇಂದ್ರಪರ್ವತ ಶಿಖರದಂತಹ ಸುಂದರ ಹಾಗೂ ವಿಶಾಲವಾದ ಒಂದು ಪರಿಘವನ್ನು ಕೈಗೆತ್ತಿಕೊಂಡನು. ಅದು ಹೂವಿನ ಮಾಲೆಗಳಿಂದ ಅಲಂಕೃತವಾಗಿ, ಅದರಲ್ಲಿ ಐದೈದು ಅಂಗುಲಗಳಿಗೆ ಕಬ್ಬಿಣದ ಬಳೆಗಳನ್ನು ಜೋಡಿಸಿದ್ದರು.॥2॥

ಮೂಲಮ್ - 3

ಹೇಮಪಟ್ಟಪರಿಕ್ಷಿಪ್ತಂ ವಜ್ರವಿದ್ರುಮಭೂಷಿತಮ್ ।
ಯಮದಂಡೋಪಮಂ ಭೀಮಂ ರಕ್ಷಸಾಂ ಭಯನಾಶನಮ್ ॥

ಅನುವಾದ

ಆ ಪರಿಘದಲ್ಲಿ ಬಂಗಾರದ ಹಾಳೆಗಳನ್ನು ಮುಚ್ಚಿದ್ದರು. ವಜ್ರ ಹವಳಗಳಿಂದ ಅಲಂಕರಿಸಿದ್ದರು. ಆ ಪರಿಘವು ಯಮದಂಡದಂತೆ ಭಯಂಕರವಾಗಿದ್ದು, ರಾಕ್ಷಸರ ಭಯವನ್ನು ನಾಶಮಾಡು ವಂತಹುದಾಗಿತ್ತು.॥3॥

ಮೂಲಮ್ - 4

ತಮಾವಿಧ್ಯ ಮಹಾತೇಜಾಃ ಶಕ್ರಧ್ವಜಸಮೌಜಸಮ್ ।
ನಿನನಾದ ವಿವೃತ್ತಾಸ್ಯೋ ನಿಕುಂಭೋ ಭೀಮವಿಕ್ರಮಃ ॥

ಅನುವಾದ

ಇಂದ್ರಧ್ವಜದಂತೆ ತೇಜಸ್ವೀಯಾದ ಪರಿಘವನ್ನು ತಿರುಗಿಸುತ್ತಾ ಆ ಮಹಾ ತೇಜಸ್ವೀ ಭಯಾನಕ ಪರಾಕ್ರಮಿ ರಾಕ್ಷಸ ನಿಕುಂಭನು ಬಾಯಿಯನ್ನು ಅಗಲಿಸಿ ಜೋರಾಗಿ ಗರ್ಜಿಸತೊಡಗಿದನು.॥4॥

ಮೂಲಮ್ - 5

ಉರೋಗತೇನ ನಿಷ್ಕೇಣ ಭುಜಸ್ಥೈರಂಗದೈರಪಿ ।
ಕುಂಡಲಾಭ್ಯಾಂ ಚ ಚಿತ್ರಾಭ್ಯಾಂ ಮಾಲಯಾ ಚ ವಿಚಿತ್ರಯಾ ॥

ಮೂಲಮ್ - 6

ನಿಕುಂಭೋ ಭೂಷಣೈರ್ಭಾತಿ ತೇನ ಸ್ಮ ಪರಿಘೇಣ ಚ ।
ಯಥೇಂದ್ರಧನುಷಾ ಮೇಘಃ ಸವಿದ್ಯುತ್ಸ್ತನಯಿತ್ನುಮಾನ್ ॥

ಅನುವಾದ

ಅವನ ವಕ್ಷಃಸ್ಥಳದಲ್ಲಿ ಸ್ವರ್ಣಪದಕವಿತ್ತು. ಬಾಹುಗಳಲ್ಲಿ ತೋಳ್ಬಂದಿಗಳು ಶೋಭಿ ಸುತ್ತಿದ್ದವು. ಕಿವಿಗಳಲ್ಲಿ ವಿಚಿತ್ರ ಕುಂಡಲಗಳು ಓಲಾಡುತ್ತಿದ್ದವು. ಕೊರಳಲ್ಲಿ ಚಿತ್ರಿತ ಮಾಲೆ ಹೊಳೆಯುತ್ತಿತ್ತು. ಇವೆಲ್ಲ ಆಭೂಷಣಗಳಿಂದ ಹಾಗೂ ಪರಿಘದಿಂದ ವಿದ್ಯುತ್ ಮತ್ತು ಗರ್ಜನೆಯಿಂದ ಕೂಡಿದ ಕಾಮನ ಬಿಲ್ಲಿನಂತೆ ನಿಕುಂಭನು ಶೋಭಿಸುತ್ತಿದ್ದನು.॥5-6॥

ಮೂಲಮ್ - 7

ಪರಿಘಾಗ್ರೇಣ ಪುಸ್ಫೋಟ ವಾತಗ್ರಂಥಿರ್ಮಹಾತ್ಮನಃ ।
ಪ್ರಜಜ್ವಾಲ ಸಘೋಷಶ್ಚ ವಿಧೂಮ ಇವ ಪಾವಕಃ ॥

ಅನುವಾದ

ಆ ಮಹಾಕಾಯ ರಾಕ್ಷಸನ ಪರಿಘದ ತುದಿಯು ತಗುಲಿ ವಾತಗ್ರಂಥಿಯು (ಪ್ರವಹ- ಆವಹ ಮೊದಲಾದ ಎಳು ವಾಯುಗಳ ಸಂಧಿ ಬಂಧವು) ಒಡೆದುಹೋಗಿ, ಹೊಗೆಯಿಲ್ಲದೆ ಅಗ್ನಿಯಂತೆ ಪರಿಘಾಯುಧವು ಮಹಾಶಬ್ದದೊಡನೆ ಪ್ರಜ್ವಲಿಸುತ್ತಿತ್ತು.॥7॥

ಮೂಲಮ್ - 8

ನಗರ್ಯಾ ವಿಟಪಾವತ್ಯಾ ಗಂಧರ್ವಭವನೋತ್ತಮೈಃ ।
ಸತಾರಗ್ರಹನಕ್ಷತ್ರಂ ಸಚಂದ್ರಸಮಹಾಗ್ರಹಮ್ ।
ನಿಕುಂಭಪರಿಘಾಘೂರ್ಣಂ ಭ್ರಮತೀವ ನಭಃಸ್ಥಲಮ್ ॥

ಅನುವಾದ

ನಿಕುಂಭನು ಪರಿಘವನ್ನು ತಿರುಗಿಸುತ್ತಿರುವಾಗ ಕುಬೇರನ ಅಲಕಾವತಿ, ಗಂಧರ್ವರ ಶ್ರೇಷ್ಠ ಭವನಗಳು, ದೊಡ್ಡ ದೊಡ್ಡ ಗ್ರಹ-ನಕ್ಷತ್ರಗಳೊಂದಿಗೆ ಚಂದ್ರನ ಸಹಿತ ಸಮಸ್ತ ಆಕಾಶ ಮಂಡಲವೇ ನಡುಗುತ್ತಿರುವಂತಾಯಿತು.॥8॥

ಮೂಲಮ್ - 9

ದುರಾಸದಶ್ಚ ಸಂಜಜ್ಞೇ ಪರಿಘಾಭರಣಪ್ರಭಃ ।
ಕ್ರೋಧೇಂಧನೋ ನಿಕುಂಭಾಗ್ನಿರ್ಯುಗಾಂತಾಗ್ನಿರಿವೋತ್ಥಿತಃ ॥

ಅನುವಾದ

ಪರಿಘ ಮತ್ತು ಆ ಭೂಷಣಗಳೇ ಪ್ರಭೆಯಿದ್ದ, ಕ್ರೋಧವೆ ಉರುವಲಾದ ಆ ನಿಕುಂಭನೆಂಬ ಅಗ್ನಿಯು ಪ್ರಳಯಕಾಲದ ಬೆಂಕಿಯಂತೆ ಎದ್ದು, ಅತ್ಯಂತ ದುರ್ಜಯವಾಯಿತು.॥9॥

ಮೂಲಮ್ - 10

ರಾಕ್ಷಸಾ ವಾನರಾಶ್ಚಾಪಿ ನ ಶೇಕುಃ ಸ್ಪಂದಿತುಂ ಭಯಾತ್ ।
ಹನುಮಾಂಸ್ತು ವಿವೃತ್ಯೋರಸ್ತಸ್ಥೌ ಪ್ರಮುಖತೋ ಬಲೀ ॥

ಅನುವಾದ

ಆಗ ರಾಕ್ಷಸ ಮತ್ತು ವಾನರರು ಭಯದಿಂದ ಸ್ತಬ್ಧರಾದರು. ಕೇವಲ ಮಹಾಬಲಿ ಹನುಮಂತನೇ ತನ್ನ ಎದೆಯನ್ನು ಮುಂದೆ ಮಾಡಿ ರಾಕ್ಷಸನ ಎದುರು ನಿಂತುಕೊಂಡನು.॥10॥

ಮೂಲಮ್ - 11

ಪರಿಘೋಪಮಬಾಹುಸ್ತು ಪರಿಘಂ ಭಾಸ್ಕರಪ್ರಭಮ್ ।
ಬಲೀ ಬಲವತಸ್ತಸ್ಯ ಪಾತಯಾಮಾಸ ವಕ್ಷಸಿ ॥

ಅನುವಾದ

ನಿಕುಂಭನ ಭುಜಗಳು ಪರಿಘದಂತೆ ಇದ್ದವು. ಆ ಮಹಾಬಲಿ ರಾಕ್ಷಸನು ಸೂರ್ಯತುಲ್ಯವಾದ ತೇಜಸ್ವೀ ಪರಿಘವನ್ನು ಬಲವಂತ ವೀರ ಮಾರುತಿಯ ಎದೆಗೆ ಹೊಡೆದನು.॥11॥

ಮೂಲಮ್ - 12

ಸ್ಥಿರೇ ತಸ್ಯೋರಸಿ ವ್ಯೂಢೇ ಪರಿಘಃ ಶತಧಾ ಕೃತಃ ।
ವಿಕೀರ್ಯಮಾಣಃ ಸಹಸಾ ಉಲ್ಕಾಶತಮಿವಾಂಬರೇ ॥

ಅನುವಾದ

ಹನುಮಂತನು ಎದೆ ಭಾರೀ ಸುದೃಢವಾಗಿದ್ದು ವಿಶಾಲವಾಗಿತ್ತು. ಅದಕ್ಕೆ ತಗಲುತ್ತಲೇ ಆ ಪರಿಘವು ನೂರಾರು ತುಂಡುಗಳಾಗಿ ಆಕಾಶದಿಂದ ನೂರಾರು ಉಲ್ಕೆಗಳು ಒಮ್ಮೆಲೇ ಬೀಳುವಂತೆ ಚೆಲ್ಲಿಹೋದುವು.॥12॥

ಮೂಲಮ್ - 13

ಸ ತು ತೇನ ಪ್ರಹಾರೇಣ ನ ಚಚಾಲ ಮಹಾಕಪಿಃ ।
ಪರಿಘೇಣ ಸಮಾಧೂತೋ ಯಥಾ ಭೂಮಿಚಲೇಽಚಲಃ ॥

ಅನುವಾದ

ಮಹಾಕಪಿ ಹನುಮಂತನು ಪರಿಘದಿಂದ ಅಹತನಾದರೂ ಕೂಡ ವಿಚಲಿತನಾಗದೆ ಭೂಕಂಪವಾದಾಗಲೂ ಪರ್ವತವು ಬೀಳದಂತೆ ಸ್ಥಿರವಾಗಿ ನಿಂತಿದ್ದನು.॥13॥

ಮೂಲಮ್ - 14

ಸ ತಥಾಭಿಹತಸ್ತೇನ ಹನುಮಾನ್ ಪ್ಲವಗೋತ್ತಮಃ ।
ಮುಷ್ಟಿಂ ಸಂವರ್ತಯಾಮಾಸ ಬಲೇನಾತಿ ಮಹಾಬಲಃ ॥

ಅನುವಾದ

ಅತ್ಯಂತ ಮಹಾಬಲಶಾಲಿ ಶ್ರೇಷ್ಠವಾನರ ಹನುಮಂತನು ಹೀಗೆ ಪರಿಘದ ಏಟು ತಿಂದು ಬಲವಾಗಿ ತನ್ನ ಮುಷ್ಟಿಯನ್ನು ಬಿಗಿದನು.॥14॥

ಮೂಲಮ್ - 15

ತಮುದ್ಯಮ್ಯ ಮಹಾತೇಜಾ ನಿಕುಂಭೋರಸಿ ವೀರ್ಯವಾನ್ ।
ಅಭಿಚಿಕ್ಷೇಪ ವೇಗೇನ ವೇಗವಾನ್ ವಾಯುವಿಕ್ರಮಃ ॥

ಅನುವಾದ

ಮಹಾತೇಜಸ್ವೀ, ಪರಾಕ್ರಮಿ, ವೇಗವಂತ, ವಾಯುವಿನಂತೆ ಬಲ-ವಿಕ್ರಮ ಸಂಪನ್ನನಾದ ಹನುಮಂತನು ಮುಷ್ಟಿಯನ್ನು ಬೀಸಿ ವೇಗವಾಗಿ ನಿಕುಂಭನ ಎದೆಗೆ ಹೊಡೆದನು.॥15॥

ಮೂಲಮ್ - 16

ತತಃ ಪುಸ್ಫೋಟ ವರ್ಮಾಸ್ಯ ಪ್ರಸುಸ್ರಾವ ಚ ಶೋಣಿತಮ್ ।
ಮುಷ್ಟಿನಾ ತೇನ ಸಂಜಜ್ಞೇ ಮೇಘೇ ವಿದ್ಯುದಿವೋತ್ಥಿತಾ ॥

ಅನುವಾದ

ಆ ಮುಷ್ಟಿಯ ಏಟಿನಿಂದ ಅವನ ಕವಚ ಒಡೆದುಹೋಗಿ, ವಕ್ಷಃಸ್ಥಳದಿಂದ ಮೋಡದಲ್ಲಿ ಮಿಂಚು ಹೊಳೆದಂತೆ ರಕ್ತ ಹರಿಯತೊಡಗಿತು.॥16॥

ಮೂಲಮ್ - 17

ಸ ತು ತೇನ ಪ್ರಹಾರೇಣ ನಿಕುಂಭೋ ವಿಚಚಾಲ ಚ ।
ಸ್ವಸ್ಥಶ್ಚಾಪಿ ನಿಜಗ್ರಾಹ ಹನೂಮಂತಂ ಮಹಾಬಲಮ್ ॥

ಅನುವಾದ

ಆ ಪ್ರಹಾರದಿಂದ ನಿಕುಂಭನು ವಿಚಲಿತನಾದನು; ಮತ್ತೆ ಸ್ವಲ್ಪ ಹೊತ್ತಿನಲ್ಲಿ ಸಾವರಿಸಿಕೊಂಡು ಮಹಾಬಲಿ ಹನುಮಂತನನ್ನು ಹಿಡಿದುಕೊಂಡನು.॥17॥

ಮೂಲಮ್ - 18

ಚುಕ್ರುಶುಶ್ಚ ದಾ ಸಂಖ್ಯೇ ಭೀಮಂ ಲಂಕಾನಿವಾಸಿನಃ ।
ನಿಕುಂಭೇನೋದ್ಯತಂ ದೃಷ್ಟ್ವಾ ಹನೂಮಂತಂ ಮಹಾಬಲಮ್ ॥

ಅನುವಾದ

ಆಗ ಯುದ್ಧದಲ್ಲಿ ನಿಕುಂಭನು ಮಹಾಬಲಿ ಹನುಮಂತನನ್ನು ಅಪಹರಿಸಿದುದನ್ನು ನೋಡಿ ಲಂಕಾನಿವಾಸೀ ರಾಕ್ಷಸರು ಭಯಾನಕ ಸ್ವರದಲ್ಲಿ ವಿಜಯಸೂಚಕ ಗರ್ಜಿಸ ತೊಡಗಿದರು.॥18॥

ಮೂಲಮ್ - 19

ಸ ತಥಾ ಹ್ರಿಯಮಾಣೋಽಪಿ ಹನೂಮಾಂಸ್ತೇನ ರಕ್ಷಸಾ ।
ಅಜಘಾನಾನಿಲಸುತೋ ವಜ್ರಕಲ್ಪೇನ ಮುಷ್ಟಿನಾ ॥

ಅನುವಾದ

ಆ ರಾಕ್ಷಸನು ಹೀಗೆ ಹನುಮಂತನನ್ನು ಎತ್ತಿಕೊಂಡು ಹೋಗುವಾಗಲೂ ಅವನು ತನ್ನ ವಜ್ರದಂತಹ ಮುಷ್ಟಿಯಿಂದ ಪ್ರಹಾರ ಮಾಡಿದನು.॥19॥

ಮೂಲಮ್ - 20

ಆತ್ಮಾನಂ ಮೋಕ್ಷಯಿತ್ವಾಥ ಕ್ಷಿತಾವಭ್ಯವಪದ್ಯತ ।
ಹನೂಮಾನುನ್ಮಮಾಥಾಶು ನಿಕುಂಭಂ ಮಾರುತಾತ್ಮಜಃ ॥

ಅನುವಾದ

ಮತ್ತೆ ಅವನು ರಾಕ್ಷಸನಿಂದ ಬಿಡಿಸಿಕೊಂಡು ನಿಂತುಕೊಂಡು, ಹನುಮಂತನು ನಿಕುಂಭನನ್ನು ಎತ್ತಿ ನೆಲಕ್ಕೆ ಅಪ್ಪಳಿಸಿದನು.॥20॥

ಮೂಲಮ್ - 21

ನಿಕ್ಷಿಪ್ಯ ಪರಮಾಯತ್ತೋ ನಿಕುಂಭಂ ನಿಷ್ಪಿಪೇಷ ಚ ।
ಉತ್ಪತ್ಯ ಚಾಸ್ಯ ವೇಗೇನ ಪಪಾತೋರಸಿ ವೀರ್ಯವಾನ್ ॥

ಮೂಲಮ್ - 22

ಪರಿಗೃಹ್ಯ ಚ ಬಾಹುಭ್ಯಾಂ ಪರಿವೃತ್ಯ ಶಿರೋಧರಾಮ್ ।
ಉತ್ಪಾಟಯಾಮಾಸ ಶಿರೋ ಭೈರವಂ ನದತೋ ಮಹತ್ ॥

ಅನುವಾದ

ಬಳಿಕ ವೇಗಶಾಲಿಯಾದ ವಾನರವೀರನು ಕಷ್ಟದಿಂದ ನಿಕುಂಭನನ್ನು ನೆಲಕ್ಕೆ ಕೆಡವಿ ಹೊಸಕಿ ಹಾಕಿದನು. ಮತ್ತೆ ವೇಗವಾಗಿ ನೆಗೆದು ಅವನ ಎದೆಯ ಮೇಲೆ ಕುಳಿತು ಎರಡೂ ಕೈಗಳಿಂದ ಕತ್ತನ್ನು ಹಿಸುಕಿ ತಲೆಯನ್ನು ಕಿತ್ತುಬಿಟ್ಟನು. ಕತ್ತು ಹಿಸುಕುವಾಗ ಆ ರಾಕ್ಷಸನು ಭಯಂಕರ ಆರ್ತನಾದ ಮಾಡುತ್ತಿದ್ದನು.॥21-22॥

ಮೂಲಮ್ - 23

ಅಥ ನಿನದತಿ ಸಾದಿತೇ ನಿಕುಂಭೇ
ಪವನಸುತೇನ ರಣೇ ಬಭೂವ ಯುದ್ಧಮ್ ।
ದಶರಥಸುತರಾಕ್ಷಸೇಂದ್ರ ಸೂನ್ವೋ-
ರ್ಭೃಶತರಮಾಗತರೋಷಯೋಃ ಸುಭೀಮಮ್ ॥

ಅನುವಾದ

ರಣಭೂಮಿಯಲ್ಲಿ ವಾಯುಪುತ್ರ ಹನುಮಂತನು ಗರ್ಜಿಸುತ್ತಿದ್ದ ನಿಕುಂಭನನ್ನು ಕೊಂದುಹಾಕಿದಾಗ, ಅತ್ಯಂತ ಕುಪಿತರಾದ ಶ್ರೀರಾಮ ಮತ್ತು ಮಕರಾಕ್ಷ ಇವರಿಬ್ಬರ ಭಯಂಕರವಾದ ಯುದ್ಧ ನಡೆಯಿತು.॥23॥

ಮೂಲಮ್ - 24

ವ್ಯಪೇತೇ ತು ಜೀವೇ ನಿಕುಂಭಸ್ಯ ಹೃಷ್ಟಾ
ವಿನೇದುಃ ಪ್ಲವಂಗಾ ದಿಶಃ ಸಸ್ವನುಶ್ಚ ।
ಚಚಾಲೇವ ಚೋರ್ವೀ ಪಪಾಲೇವ ಸಾ ದ್ಯೌ-
ರ್ಬಲಂ ರಾಕ್ಷಸಾನಾಂ ಬಲಂ ಚಾವಿವೇಶ ॥

ಅನುವಾದ

ನಿಕುಂಭನು ಪ್ರಾಣತ್ಯಾಗ ಮಾಡಿದಾಗ ವಾನರರೆಲ್ಲರೂ ಬಹಳ ಹರ್ಷದಿಂದ ಗರ್ಜಿಸತೊಡಗಿದರು. ಎಲ್ಲ ದಿಕ್ಕುಗಳಲ್ಲಿ ಕೋಲಾಹಲ ತುಂಬಿ ಹೋಯಿತು. ಭೂಮಿ ನಡುಗಿದಂತಾಯಿತು. ಆಕಾಶವೇ ಹರಿದುಹೋಗುವುದೋ ಎಂದೆನಿಸಿತು. ರಾಕ್ಷಸರ ಸೈನ್ಯದಲ್ಲಿ ಭಯವು ಆವರಿಸಿತು.॥24॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಎಪ್ಪತ್ತೇಳನೆಯ ಸರ್ಗ ಪೂರ್ಣವಾಯಿತು.॥77॥