वाचनम्
ಭಾಗಸೂಚನಾ
ಅಂಗದನಿಂದ ಕಂಪನ ಮತ್ತು ಪ್ರಜಂಘನ ಸಂಹಾರ, ದ್ವಿವಿದನಿಂದ ಶೋಣಿತಾಕ್ಷನ, ಮೈಂದನಿಂದ ಯೂಪಾಕ್ಷನ ಮತ್ತು ಸುಗ್ರೀವನಿಂದ ಕುಂಭನ ಸಂಹಾರ
ಮೂಲಮ್ - 1
ಪ್ರವೃತ್ತೇ ಸಂಕುಲೇ ತಸ್ಮಿನ್ ಘೋರೇ ವೀರಜನಕ್ಷಯೇ ।
ಅಂಗದಃ ಕಂಪನಂ ವೀರಮಾಸಸಾದ ರಣೋತ್ಸುಕಃ ॥
ಅನುವಾದ
ವೀರಜನರ ವಿನಾಶಕವಾದ ಆ ಘೋರ ಸಂಗ್ರಾಮ ನಡೆಯುತ್ತಿರುವಾಗ ರಣೋತ್ಸಾಹಿಯಾದ ಅಂಗದನು ವೀರ ಕಂಪನನ್ನು ಎದುರಿಸಲು ಬಂದನು.॥1॥
ಮೂಲಮ್ - 2
ಆಹೂಯ ಸೋಂಽಗದಂ ಕೋಪಾತ್ತಾಡಯಾಮಾಸ ವೇಗಿತಃ ।
ಗದಯಾ ಕಂಪನಃ ಪೂರ್ವಂ ಸ ಚಚಾಲ ಭೃಶಾಹತಃ ॥
ಅನುವಾದ
ಕಂಪನನು ಕ್ರೋಧದಿಂದ ಅಂಗದನನ್ನು ಯುದ್ಧಕ್ಕಾಗಿ ಆಹ್ವಾನಿಸಿ ಅತ್ಯಂತ ವೇಗವಾಗಿ ಅವನ ಮೇಲೆ ಗದೆಯಿಂದ ಪ್ರಹರಿಸಿದನು. ಇದರಿಂದ ಅವನಿಗೆ ಭಾರೀ ಏಟು ಬಿದ್ದು, ತತ್ತರಿಸುತ್ತಾ ಮೂರ್ಛಿತನಾದನು.॥2॥
ಮೂಲಮ್ - 3
ಸ ಸಂಜ್ಞಾಂ ಪ್ರಾಪ್ಯ ತೇಜಸ್ವೀ ಚಿಕ್ಷೇಪ ಶಿಖರಂ ಗಿರೇಃ ।
ಅರ್ದಿತಶ್ಚ ಪ್ರಹಾರೇಣ ಕಂಪನಃ ಪತಿತೋ ಭುವಿ ॥
ಅನುವಾದ
ಮತ್ತೆ ಎಚ್ಚರಗೊಂಡ ತೇಜಸ್ವೀ ವೀರ ಅಂಗದನು ಒಂದು ಪರ್ವತ ಶಿಖರವನ್ನೆತ್ತಿ ರಾಕ್ಷನನ್ನು ಪ್ರಹರಿಸಿದನು. ಆ ಪ್ರಹಾರದಿಂದ ಪೀಡಿತನಾದ ಕಂಪನನು ಅಸುನೀಗಿ ಕೆಳಕ್ಕೆ ಬಿದ್ದನು.॥3॥
ಮೂಲಮ್ - 4
ತತಸ್ತು ಕಂಪನಂ ದೃಷ್ಟ್ವಾಶೋಣಿತಾಕ್ಷೋ ಹತಂ ರಣೇ ।
ರಥೇನಾಭ್ಯಪತತತ್ಕ್ಷಿಪ್ರಂ ತತ್ರಾಂಗದಮಭೀತವತ್ ॥
ಅನುವಾದ
ಕಂಪನನು ಯುದ್ಧದಲ್ಲಿ ಹತನಾದುದನ್ನು ನೋಡಿ ಶೋಣಿತಾಕ್ಷನು ರಥಾರೂಢನಾಗಿ ಬಂದು ನಿರ್ಭಯನಾಗಿದ್ದ ಅಂಗದನನ್ನು ಆಕ್ರಮಿಸಿದನು.॥4॥
ಮೂಲಮ್ - 5
ಸೋಂಽಗದಂ ನಿಶಿತೈರ್ಬಾಣೈಸ್ತದಾ ವಿವ್ಯಾಧ ವೇಗಿತಃ ।
ಶರೀರದಾರಣೈಸ್ತೀಕ್ಷ್ಣೈಃ ಕಾಲಾಗ್ನಿಸಮವಿಗ್ರಹೈಃ ॥
ಅನುವಾದ
ಅವನು ಶರೀರವನ್ನು ವಿದೀರ್ಣಗೊಳಿಸುವ, ಕಾಲಾಗ್ನಿಯಂತೆ ಆಕಾರವುಳ್ಳ ತೀಕ್ಷ್ಣ ಬಾಣಗಳಿಂದ ವೇಗವಾಗಿ ಅಂಗದನನ್ನು ಗಾಯಗೊಳಿಸಿದನು.॥5॥
ಮೂಲಮ್ - 6
ಕ್ಷುರಕ್ಷುರಪ್ರನಾರಾಚೈರ್ವತ್ಸದಂತೈಃ ಶಿಲೀಮುಖೈಃ ।
ಕರ್ಣಿಶಲ್ಯವಿಪಾಠೈಶ್ಚ ಬಹುಭಿರ್ನಿಶಿತೈಃ ಶರೈಃ ॥
ಮೂಲಮ್ - 7
ಅಂಗದಃ ಪ್ರತಿವಿದ್ಧಾಂಗೋ ವಾಲಿಪುತ್ರಃ ಪ್ರತಾಪವಾನ್ ।
ಧನುರುಗ್ರಂ ರಥಂ ಬಾಣಾನ್ಮಮರ್ದ ತರಸಾ ಬಲೀ ॥
ಅನುವಾದ
ಕ್ಷುರ, ಕ್ಷುರಪ್ರ, ನಾರಾಚ, ವತ್ಸದಂತ, ಶಿಲೀಮುಖ, ಕರ್ಣಿ, ಶಲ್ಯ, ವಿಪಾಠ ಮುಂತಾದ ನಾನಾ ಪ್ರಕಾರದ ಬಾಣವಿಶೇಷಗಳಿಂದ ಶೋಣಿತಾಕ್ಷನು ಪ್ರತಾಪೀ ವಾಲಿಪುತ್ರ ಅಂಗದನನ್ನು ಪ್ರಹರಿಸಿ ಗಾಯಗೊಳಿಸಿದನು. ಆಗ ಆ ಬಲವಂತ ವೀರನು ವೇಗದಿಂದ ಆ ರಾಕ್ಷಸನ ಭಯಂಕರ ಧನುಸ್ಸು, ರಥ, ಬಾಣಗಳನ್ನು ಧ್ವಂಸಗೊಳಿಸಿದನು.॥6-7॥
ಮೂಲಮ್ - 8
ಶೋಣಿತಾಕ್ಷಸ್ತತಃ ಕ್ಷಿಪ್ರಮಸಿಚರ್ಮ ಸಮಾದದೇ ।
ಉತ್ಪಪಾತ ದಿವಂ ಕ್ರುದ್ಧೋ ವೇಗವಾನ ವಿಚಾರಯನ್ ॥
ಅನುವಾದ
ಅನಂತರ ವೇಗಶಾಲಿ ನಿಶಾಚರ ಶೋಣಿತಾಕ್ಷನು ಕುಪಿತನಾಗಿ ಕತ್ತಿ-ಗುರಾಣಿ ಹಿಡಿದುಕೊಂಡು ಏನನ್ನೂ ಯೋಚಿಸದೆ ರಥದಿಂದ ಭೂಮಿಗೆ ಹಾರಿದನು.॥8॥
ಮೂಲಮ್ - 9
ತಂ ಕ್ಷಿಪ್ರತರಮಾಪ್ಲುತ್ಯ ಪರಾಮೃಶ್ಯಾಂಗದೋ ಬಲೀ ।
ಕರೇಣ ತಸ್ಯ ತಂ ಖಡ್ಗಂ ಸಮಾಚ್ಛಿದ್ಯ ನನಾದ ಚ ॥
ಅನುವಾದ
ಅಷ್ಟರಲ್ಲಿ ಬಲವಂತ ಅಂಗದನು ಶೀಘ್ರವಾಗಿ ನೆಗೆದು ಅವನನ್ನು ಹಿಡಿದುಕೊಂಡು ಅವನ ಕೈಯಿಂದ ಖಡ್ಗವನ್ನು ಕಿತ್ತುಕೊಂಡು ಜೋರಾಗಿ ಸಿಂಹನಾದ ಮಾಡಿದನು.॥9॥
ಮೂಲಮ್ - 10
ತಸ್ಯಾಂ ಸಫಲಕೇ ಖಡ್ಗಂ ನಿಜಘಾನ ತತೋಂಽಗದಃ ।
ಯಜ್ಞೋಪವೀತವಚ್ಚೈನಂ ಚಿಚ್ಛೇದ ಕಪಿಕುಂಜರಃ ॥
ಅನುವಾದ
ಮತ್ತೆ ಕಪಿಕುಂಜರ ಅಂಗದನು ಅವನ ಹೆಗಲಿನಿಂದ ಹಿಡಿದು ಯಜ್ಯೋಪವೀತ ಹಾಕಿದಂತೆ ಶರೀರವನ್ನು ಸೀಳಿಸಿದನು.॥10॥
ಮೂಲಮ್ - 11
ತಂ ಪ್ರಗೃಹ್ಯಮಹಾಖಡ್ಗಂ ವಿನದ್ಯ ಚ ಪುನಃ ಪುನಃ ।
ವಾಲಿಪುತ್ರೋಽಭಿದುದ್ರಾವ ರಣಶೀರ್ಷೇ ಪರಾನರೀನ್ ॥
ಅನುವಾದ
ಬಳಿಕ ವಾಲಿಪುತ್ರನು ಆ ವಿಶಾಲ ಖಡ್ಗವನ್ನೆತ್ತಿಕೊಂಡು ಪದೇ ಪದೇ ಗರ್ಜಿಸುತ್ತಾ ಯುದ್ಧಕ್ಕಾಗಿ ಇತರ ಶತ್ರುಗಳನ್ನು ಆಕ್ರಮಿಸಿದನು.॥11॥
ಮೂಲಮ್ - 12
ಪ್ರಜಂಘಸಹಿತೋ ವೀರೋ ಯೂಪಾಕ್ಷಸ್ತು ತತೋ ಬಲೀ ।
ರಥೇನಾಭಿಯಯೌ ಕ್ರುದ್ಧೋ ವಾಲಿಪುತ್ರಂ ಮಹಾಬಲಮ್ ॥
ಅನುವಾದ
ಅಷ್ಟರಲ್ಲಿ ಪ್ರಜಂಘನನ್ನು ಜೊತೆಗಿರಿಸಿಕೊಂಡು ವೀರ ಯೂಪಾಕ್ಷನು ಕುಪಿತನಾಗಿ ರಥದಿಂದ ಮಹಾಬಲಿ ವಾಲಿಪುತ್ರನನ್ನು ಆಕ್ರಮಿಸಿದನು.॥12॥
ಮೂಲಮ್ - 13
ಆಯಸೀಂ ತು ಗದಾಂಗೃಹ್ಯ ಸ ವೀರಃ ಕನಕಾಂಗದಃ ।
ಶೋಣಿತಾಕ್ಷಃ ಸಮಾವಿಧ್ಯ ತಮೇವಾನುಪಪಾತ ಹ ॥
ಅನುವಾದ
ಆಗಲೇ ಸ್ವರ್ಣ ಭುಜಕೀರ್ತಿ ತೊಟ್ಟಿರುವ ವೀರ ಶೋಣಿತಾಕ್ಷನು ಸಾವರಿಸಿಕೊಂಡು ಉಕ್ಕಿನ ಗದೆಯನ್ನೆತ್ತಿ ಕೊಂಡು ಅಂಗದನನ್ನು ಹಿಂಬಾಲಿಸಿದನು.॥13॥
ಮೂಲಮ್ - 14
ಪ್ರಜಂಘಸ್ತು ಮಹಾವೀರೋ ಯೂಪಾಕ್ಷಸಹಿತೋ ಬಲೀ ।
ಗದಯಾಭಿಯಯೌ ಕ್ರುದ್ಧೋ ವಾಲಿಪುತ್ರಂ ಮಹಾಬಲಮ್ ॥
ಅನುವಾದ
ಮತ್ತೆ ಯೂಪಾಕ್ಷನ ಸಹಿತ ಬಲವಂತ ಮಹಾವೀರ ಪ್ರಜಂಘನು ಕುಪಿತನಾಗಿ ಮಹಾಬಲಿ ವಾಲಿಪುತ್ರನ ಮೇಲೆ ಗದೆಯನ್ನೆತ್ತಿಕೊಂಡು ಏರಿ ಬಂದನು.॥14॥
ಮೂಲಮ್ - 15
ತಯೋರ್ಮಧ್ಯೇ ಕಪಿಶ್ರೇಷ್ಠಃ ಶೋಣಿತಾಕ್ಷ ಪ್ರಜಂಘಯೋಃ ।
ವಿಶಾಖಯೋರ್ಮಧ್ಯಗತಃ ಪೂರ್ಣಚಂದ್ರ ಇವಾಬಭೌ ॥
ಅನುವಾದ
ಶೋಣಿತಾಕ್ಷ ಮತ್ತು ಪ್ರಜಂಘ ಇಬ್ಬರೂ ರಾಕ್ಷಸರ ನಡುವೆ ಕಪಿಶ್ರೇಷ್ಠ ಅಂಗದನು ಎರಡು ವಿಶಾಖಾ ನಕ್ಷತ್ರಗಳ ನಡುವೆ ಪೂರ್ಣಚಂದ್ರನಿರುವಂತೆ ಶೋಭಿಸಿದನು.॥15॥
ಮೂಲಮ್ - 16
ಅಂಗದಂ ಪರಿರಕ್ಷಂತೌ ಮೈಂದೋ ದ್ವಿವಿದ ಏವ ಚ ।
ತಸ್ಯ ತಸ್ಥತುರಭ್ಯಾಶೇ ಪರಸ್ಪರದಿದೃಕ್ಷಯಾ ॥
ಅನುವಾದ
ಆಗ ಮೈಂದ ಮತ್ತು ದ್ವಿವಿದರು ಅಂಗದನ ರಕ್ಷಣೆಗಾಗಿ ಅವನ ಬಳಿ ಬಂದು ನಿಂತರು. ಅವರಿಬ್ಬರೂ ತಮಗೆ ಯೋಗ್ಯನಾದ ಯೋಧನನ್ನು ಹುಡುಕುತ್ತಿದ್ದರು.॥16॥
ಮೂಲಮ್ - 17
ಅಭಿಪೇತುರ್ಮಹಾಕಾಯಾಃ ಪ್ರತಿಯತ್ತಾ ಮಹಾಬಲಾಃ ।
ರಾಕ್ಷಸಾ ವಾನರಾನ್ ರೋಷಾದಸಿಬಾಣಗದಾಧರಾಃ ॥
ಅನುವಾದ
ಅಷ್ಟರಲ್ಲಿ ಖಡ್ಗ, ಬಾಣ, ಗದೆ ಧರಿಸಿಕೊಂಡು ಅನೇಕ ಮಹಾಬಲಿ ವಿಶಾಲಕಾಯ ರಾಕ್ಷಸರು ರೋಷದಿಂದ ವಾನರರ ಮೇಲೆ ಎರಗಿದರು.॥17॥
ಮೂಲಮ್ - 18
ತ್ರಯಾಣಾಂ ವಾನರೇಂದ್ರಾಣಾಂ ತ್ರಿಭೀ ರಾಕ್ಷಸಪುಂಗವೈಃ ।
ಸಂಸಕ್ತಾನಾಂ ಮಹದ್ಯುದ್ಧಮಭವದ್ ರೋಮಹರ್ಷಣಮ್ ॥
ಅನುವಾದ
ಅಂಗದ, ಮೈಂದ, ದ್ವಿವಿದ ಈ ಮೂವರೂ ಪ್ರಮುಖ ರಾಕ್ಷಸರಾದ ಶೋಣಿತಾಕ್ಷ, ಯೂಪಾಕ್ಷ, ಪ್ರಜಂಘ ಈ ಮೂವರೊಂದಿಗೆ ರೋಮಾಂಚಕರವಾದ ಭಯಂಕರ ಯುದ್ಧ ಪ್ರಾರಂಭವಾಯಿತು.॥18॥
ಮೂಲಮ್ - 19
ತೇ ತು ವೃಕ್ಷಾನ್ ಸಮಾದಾಯ ಸಂಪ್ರಚಿಕ್ಷಿಪುರಾಹವೇ ।
ಖಡ್ಗೇನ ಪ್ರತಿಚಿಕ್ಷೇಪ ತಾನ್ ಪ್ರಜಂಘೋ ಮಹಾಬಲಃ ॥
ಅನುವಾದ
ಈ ಮೂವರೂ ವಾನರರು ರಣರಂಗದಲ್ಲಿ ವೃಕ್ಷಗಳನ್ನೆತ್ತಿ ನಿಶಾಚರರ ಮೇಲೆ ಎಸೆಯುತ್ತಿದ್ದರು, ಆದರೆ ಮಹಾಬಲಿ ಪ್ರಜಂಘನು ತನ್ನ ಖಡ್ಗದಿಂದ ಎಲ್ಲ ವೃಕ್ಷಗಳನ್ನು ಕತ್ತರಿಸಿಬಿಟ್ಟನು.॥19॥
ಮೂಲಮ್ - 20
ರಥಾನಶ್ವಾನ್ ದ್ರುಮಾನ್ಶೈಲಾನ್ ಪ್ರತಿಕ್ಷಿಪುರಾಹವೇ ।
ಶರೌಘೈಃ ಪ್ರತಿಚಿಚ್ಛೇದ ತಾನ್ಯೂಪಾಕ್ಷೋ ಮಹಾಬಲಃ ॥
ಅನುವಾದ
ಅನಂತರ ಅವರು ಯುದ್ಧದಲ್ಲಿ ರಾಕ್ಷಸರ ರಥ, ಕುದುರೆಗಳ ಮೇಲೆ ಪರ್ವತ ಶಿಖರಗಳನ್ನು ಎಸೆದರು. ಆದರೆ ಮಹಾ ಬಲಿ ಯೂಪಾಕ್ಷನು ತನ್ನ ಬಾಣಗಳಿಂದ ಅವನ್ನು ಪುಡಿಪುಡಿ ಮಾಡಿದನು.॥20॥
ಮೂಲಮ್ - 21
ಸೃಷ್ಟಾನ್ ದ್ವಿವಿದಮೈಂದಾಭ್ಯಾಂ ದ್ರುಮಾನುತ್ಪಾಟ್ಯ ವೀರ್ಯವಾನ್ ।
ಬಭಂಜ ಗದಯಾ ಮಧ್ಯೇ ಶೋಣಿತಾಕ್ಷಃ ಪ್ರತಾಪವಾನ್ ॥
ಅನುವಾದ
ಮೈಂದ, ದ್ವಿವಿದರು ವೃಕ್ಷಗಳನ್ನು ಕಿತ್ತು ರಾಕ್ಷಸರ ಮೇಲೆ ಪ್ರಯೋಗಿಸಿದುದನ್ನು ಬಲ ವಿಕ್ರಮಶಾಲಿ, ಪ್ರತಾಪಿ ಶೋಣಿತಾಕ್ಷನು ತನ್ನ ಗದೆಯಿಂದ ನಡುವೆಯೇ ಹೊಡೆದು ಉರುಳಿಸಿದನು.॥21॥
ಮೂಲಮ್ - 22
ಉದ್ಯಮ್ಯ ವಿಪುಲಂ ಖಡ್ಗಂ ಪರಮರ್ಮ ವಿದಾರಣಮ್ ।
ಪ್ರಜಂಘೋ ವಾಲಿಪುತ್ರಾಯ ಅಭಿದುದ್ರಾವ ವೇಗಿತಃ ॥
ಅನುವಾದ
ಅನಂತರ ಪ್ರಜಂಘನು ಶತ್ರುಗಳ ಮರ್ಮಭೇದೀ ಒಂದು ದೊಡ್ಡ ಖಡ್ಗವನ್ನೆತ್ತಿಕೊಂಡು ವಾಲಿಪುತ್ರ ಅಂಗದನ ಮೇಲೆ ಆಕ್ರಮಣ ಮಾಡಿದನು.॥22॥
ಮೂಲಮ್ - 23
ತಮಭ್ಯಾಶಗತಂ ದೃಷ್ಟ್ವಾ ವಾನರೇಂದ್ರೋ ಮಹಾಬಲಃ ।
ಆಜಘಾನಾಶ್ವಕರ್ಣೇನ ದ್ರುಮೇಣಾತಿಬಲಸ್ತದಾ ॥
ಮೂಲಮ್ - 24
ಬಾಹುಂ ಚಾಸ್ಯ ಸನಿಸ್ತ್ರಿಂಶಮಾಜಘಾನ ಸ ಮುಷ್ಟಿನಾ ।
ವಾಲಿಪುತ್ರಸ್ಯ ಘಾತೇನ ಸ ಪಪಾತ ಕ್ಷಿತಾವಸಿಃ ॥
ಅನುವಾದ
ಅವನು ಹತ್ತಿರ ಬರುವುದನ್ನು ನೋಡಿ ಅತಿಶಯ ಶಕ್ತಿಶಾಲಿ ಮಹಾಬಲಿ ವಾನರರಾಜ ಅಂಗದನು ಅಶ್ವಕರ್ಣ ಎಂಬ ವೃಕ್ಷದಿಂದ ಹೊಡೆದು, ಖಡ್ಗವನ್ನು ಧರಿಸಿದ ಬಾಹುವಿಗೆ ಒಂದು ಗದ್ದುಹೊಡೆದನು. ವಾಲಿಪುತ್ರನ ಆ ಆಘಾತದಿಂದ ಖಡ್ಗವು ಭೂಮಿಗೆ ಬಿದ್ದುಹೋಯಿತು.॥23-24॥
ಮೂಲಮ್ - 25
ತಂ ದೃಷ್ಟ್ವಾ ಪತಿತಂ ಭೂಮೌ ಖಡ್ಗಂ ಮುಸಲಸಂನಿಭಮ್ ।
ಮುಷ್ಟಿಂ ಸಂವರ್ತಯಾಮಾಸ ವಜ್ರಕಲ್ಪಂ ಮಹಾಬಲಃ ॥
ಅನುವಾದ
ಒನಕೆಯಂತಿದ್ದ ಆ ಖಡ್ಗವು ಬಿದ್ದುಹೋದಾಗ ಮಹಾಬಲಿ ಪ್ರಜಂಘನು ತನ್ನ ವಜ್ರದಂತಹ ಭಯಂಕರ ಮುಷ್ಟಿಯನ್ನು ತಿರುಗಿಸಲು ಪ್ರಾರಂಭಿಸಿದನು.॥25॥
ಮೂಲಮ್ - 26
ಸ ಲಲಾಟೇ ಮಹಾವೀರ್ಯಮಂಗದಂ ವಾನರರ್ಷಭಮ್ ।
ಆಜಘಾನ ಮಹಾತೇಜಾಃ ಸ ಮುಹೂರ್ತಂ ಚಚಾಲ ಹ ॥
ಅನುವಾದ
ಆ ಮಹಾತೇಜಸ್ವೀ ನಿಶಾಚರನು ಮಹಾಪರಾಕ್ರಮಿ ವಾನರ ಶಿರೋಮಣಿ ಅಂಗದನ ಹಣೆಗೆ ಜೋರಾಗಿ ಗುದ್ದಿದನು; ಇದರಿಂದ ಅಂಗದನಿಗೆ ಎರಡು ಘಳಿಗೆ ತಲೆ ಸುತ್ತತೊಡಗಿತು.॥26॥
ಮೂಲಮ್ - 27
ಸ ಸಂಜ್ಞಾಂ ಪ್ರಾಪ್ಯ ತೇಜಸ್ವೀ ವಾಲಿಪುತ್ರಃ ಪ್ರತಾಪವಾನ್ ।
ಪ್ರಜಂಘಸ್ಯ ಶಿರಃ ಕಾಯಾತ್ಪಾತಯಾಮಾಸ ಮುಷ್ಟಿನಾ ॥
ಅನುವಾದ
ಅನಂತರ ಸುಧಾರಿಸಿಕೊಂಡ ತೇಜಸ್ವೀ, ಪ್ರತಾಪಿ, ವಾಲಿಕುಮಾರನು ಪ್ರಜಂಘನಿಗೆ ಬಲವಾಗಿ ಮುಷ್ಟಿಪ್ರಹಾರ ಮಾಡಿ ರುಂಡ-ಮುಂಡ ಬೇರ್ಪಡಿಸಿದನು.॥27॥
ಮೂಲಮ್ - 28
ಸ ಯೂಪಾಕ್ಷೋಽಶ್ರುಪೂರ್ಣಾಕ್ಷಃ ಪಿತೃವ್ಯೇ ನಿಹತೇ ರಣೇ ।
ಅವರುಹ್ಯ ರಥಾತ್ಕ್ಷಿಪ್ರಂ ಕ್ಷೀಣೇಷುಃ ಖಡ್ಗಮಾದದೇ ॥
ಅನುವಾದ
ರಣಭೂಮಿಯಲ್ಲಿ ತನ್ನ ಚಿಕ್ಕಪ್ಪ ಪ್ರಜಂಘನು ಹತನಾದಾಗ ಯೂಪಾಕ್ಷನು ಕಣ್ಣುಗಳಲ್ಲಿ ನೀರೂರಿತು. ಅವನ ಬಾಣಗಳು ನಾಶವಾಗಿದ್ದವು. ಅದಕ್ಕಾಗಿ ಕೂಡಲೇ ರಥದಿಂದ ಕೆಳಗಿಳಿದು ಖಡ್ಗವನ್ನೆತ್ತಿಕೊಂಡನು.॥28॥
ಮೂಲಮ್ - 29
ತಮಾಪತಂತಂ ಸಂಪ್ರೇಕ್ಷ್ಯ ಯೂಪಾಕ್ಷಂ ದ್ವಿವಿದಸ್ತ್ವರನ್ ।
ಆಜಘಾನೋರಸಿ ಕ್ರುದ್ಧೋ ಜಗ್ರಾಹ ಚ ಬಲಾದ್ಬಲೀ ॥
ಅನುವಾದ
ಯೂಪಾಕ್ಷನು ಆಕ್ರಮಿಸಿದುದನ್ನು ಬಲವಂತ ವೀರ ದ್ವಿವಿದನು ಕುಪಿತನಾಗಿ ವೇಗವಾಗಿ ಅವನ ಎದೆಗೆ ಹೊಡೆದು, ಬಲವಂತವಾಗಿ ಅವನನ್ನು ಹಿಡಿದುಕೊಂಡನು.॥29॥
ಮೂಲಮ್ - 30
ಗೃಹೀತಂ ಭ್ರಾತರಂ ದೃಷ್ಟ್ವಾ ಶೋಣಿತಾಕ್ಷೋ ಮಹಾಬಲಃ ।
ಆಜಘಾನ ಮಹಾತೇಜಾ ವಕ್ಷಸಿ ದ್ವಿವಿದಂ ತತಃ ॥
ಅನುವಾದ
ತಮ್ಮನನ್ನು ಹಿಡಿದುಕೊಂಡಿದ್ದ ದ್ವಿವಿದನ ಎದೆಗೆ ಮಹಾ ತೇಜಸ್ವೀ ಬಲಿಷ್ಠ ಶೋಣಿತಾಕ್ಷನು ಗದೆಯಿಂದ ಪ್ರಹರಿಸಿದನು.॥30॥
ಮೂಲಮ್ - 31
ಸ ತತೋಽಭಿಹತಸ್ತೇನ ಚಚಾಲ ಚ ಮಹಾಬಲಃ ।
ಉದ್ಯತಾಂ ಚ ಪುನಸ್ತಸ್ಯ ಜಹಾರ ದ್ವಿವಿದೋ ಗದಾಮ್ ॥
ಅನುವಾದ
ಶೋಣಿತಾಕ್ಷನ ಏಟಿನಿಂದ ಮಹಾಬಲಿ ದ್ವಿವಿದನು ವಿಚಲಿತನಾದನು. ಬಳಿಕ ಅವನು ಪುನಃ ಗದೆಯನ್ನೆತ್ತಿದಾಗ ದ್ವಿವಿದನು ಅದನ್ನು ಸಟ್ಟನೆ ಕಿತ್ತುಕೊಂಡನು.॥31॥
ಮೂಲಮ್ - 32
ಏತಸ್ಮಿನ್ನಂತರೇ ಮೈಂದೋ ದ್ವಿವಿದಾಭ್ಯಾಶಮಾಗಮತ್ ।
ಯೂಪಾಕ್ಷಂ ತಾಡಯಾಮಾಸ ತಲೇನೋರಸಿ ವೀರ್ಯವಾನ್ ॥
ಅನುವಾದ
ಅಷ್ಟರಲ್ಲಿ ಪರಾಕ್ರಮಿ ಮೈಂದನೂ ದ್ವಿವಿದನ ಬಳಿಗೆ ಬಂದು ಯೂಪಾಕ್ಷನ ಎದೆಗೆ ಅಂಗೈಯಿಂದ ಜೋರಾಗಿ ಥಳಿಸಿದನು.॥32॥
ಮೂಲಮ್ - 33
ತೌ ಶೋಣಿತಾಕ್ಷ ಯೂಪಾಕ್ಷೌ ಪ್ಲವಂಗಾಭ್ಯಾಂ ತರಸ್ವಿನೌ ।
ಚಕ್ರತುಃ ಸಮರೇ ತೀವ್ರಮಾಕರ್ಷೋತ್ಪಾಟನಂ ಭೃಶಮ್ ॥
ಅನುವಾದ
ವೇಗವಂತರಾದ ವೀರ ಶೋಣಿತಾಕ್ಷನ ಮತ್ತು ಯೂಪಾಕ್ಷರಿಬ್ಬರೂ ವಾರನ ಮೈಂದ-ದ್ವಿವಿದರೊಡನೆ ಪರಸ್ಪರ ಎಳೆದಾಡುತ್ತಾ ಸೆಣಸಾಡತೊಡಗಿದರು.॥33॥
ಮೂಲಮ್ - 34
ದ್ವಿವಿದಃ ಶೋಣಿತಾಕ್ಷಂ ತು ವಿದದಾರ ನಖೈರ್ಮುಖೇ ।
ನಿಷ್ಪಿಪೇಷ ಚ ವೀರ್ಯೇಣ ಕ್ಷಿತಾವಾವಿಧ್ಯ ವೀರ್ಯವಾನ್ ॥
ಅನುವಾದ
ಪರಾಕ್ರಮಿ ದ್ವಿವಿದನು ತನ್ನ ಉಗುರುಗಳಿಂದ ಶೋಣಿತಾಕ್ಷನ ಮುಖವನ್ನು ಪರಚಿ, ಅವನನ್ನು ಬಲಪೂರ್ವಕ ನೆಲಕ್ಕೆ ಅಪ್ಪಳಿಸಿ ಜಜ್ಜಿಹಾಕಿದನು.॥34॥
ಮೂಲಮ್ - 35
ಯೂಪಾಕ್ಷಮಭಿಸಂಕ್ರುದ್ಧೋ ಮೈಂದೋ ವಾನರಪುಂಗವಃ ।
ಪೀಡಯಾಮಾಸ ಬಾಹುಭ್ಯಾಂ ಪಪಾತ ಸ ಹತಃ ಕ್ಷಿತೌ ॥
ಅನುವಾದ
ಪರಮಕ್ರುದ್ಧನಾದ ವಾನರಶ್ರೇಷ್ಠ ಮೈಂದನು ಯೂಪಾಕ್ಷನನ್ನು ತನ್ನ ಎರಡು ತೋಳುಗಳಿಂದ ಬಲವಾಗಿ ಅಮುಕಿದಾಗ ಅವನು ಪ್ರಾಣಹೀನನಾಗಿ ನೆಲಕ್ಕುರುಳಿದನು.॥35॥
ಮೂಲಮ್ - 36
ಹತಪ್ರವೀರಾ ವ್ಯಥಿತಾ ರಾಕ್ಷಸೇಂದ್ರ ಚಮೂಸ್ತಥಾ ।
ಜಗಾಮಾಭಿಮುಖೀ ಸಾ ತು ಕುಂಭಕರ್ಣಾತ್ಮಜೋ ಯತಃ ॥
ಅನುವಾದ
ಈ ಪ್ರಮುಖ ವೀರರು ಹತರಾದಾಗ ರಾಕ್ಷಸ ರಾಜನ ಸೈನ್ಯವು ವ್ಯಥಿತವಾಗಿ ಕುಂಭಕರ್ಣನ ಪುತ್ರನು ಯುದ್ಧ ಮಾಡುವಲ್ಲಿಗೆ ಓಡಿಹೋಯಿತು.॥36॥
ಮೂಲಮ್ - 37
ಆಪತಂತೀಂ ಚ ವೇಗೇನ ಕುಂಭಸ್ತಾಂ ಸಾಂತ್ವಯಚ್ಚಮೂಮ್ ।
ಅಥೋತ್ಕೃಷ್ಟಂ ಮಹಾವೀರ್ಯೈರ್ಲಬ್ಧ ಲಕ್ಷೈಃ ಪ್ಲವಂಗಮೈಃ ॥
ಅನುವಾದ
ವೇಗವಾಗಿ ಬರುತ್ತಿದ್ದ ಆ ಸೈನ್ಯಕ್ಕೆ ಸಾಂತ್ವನ ನೀಡಿದನು. ಇನ್ನೊಂದೆಡೆ ಮಹಾಪರಾಕ್ರಮಿ ವಾನರರು ಯುದ್ಧದಲ್ಲಿ ಸಫಲರಾದ್ದರಿಂದ ಜೋರಾಗಿ ಗರ್ಜಿಸುತ್ತಿದ್ದರು.॥37॥
ಮೂಲಮ್ - 38
ನಿಪಾತಿತ ಮಹಾವೀರಾಂ ದೃಷ್ಟ್ವಾ ರಕ್ಷಶ್ಚಮೂಂ ತದಾ ।
ಕುಂಭಃ ಪ್ರಚಕ್ರೇ ತೇಜಸ್ವೀ ರಣೇ ಕರ್ಮ ಸುದುಷ್ಕರಮ್ ॥
ಅನುವಾದ
ರಾಕ್ಷಸ ಸೈನ್ಯದ ದೊಡ್ಡ ದೊಡ್ಡ ವೀರರು ಸತ್ತುಹೋಗಿರುವುದನ್ನು ನೋಡಿ, ತೇಜಸ್ವೀ ಕುಂಭನು ರಣರಂಗದಲ್ಲಿ ಅತ್ಯಂತ ದುಷ್ಕರ ಕರ್ಮ ಮಾಡಲು ಪ್ರಾರಂಭಿಸಿದನು.॥38॥
ಮೂಲಮ್ - 39
ಸ ಧನುರ್ಧನ್ವಿನಾಂ ಶ್ರೇಷ್ಠಃ ಪ್ರಗೃಹ್ಯ ಸುಸಮಾಹಿತಃ ।
ಮುಮೋಚಾಶೀವಿಷಪ್ರಖ್ಯಾನ್ಶರಾನ್ ದೇಹ ವಿದಾರಣಾನ್ ॥
ಅನುವಾದ
ಧನುರ್ಧರರಲ್ಲಿ ಶ್ರೇಷ್ಠನಾದ ಅವನು ಯುದ್ಧದಲ್ಲಿ ಅತ್ಯಂತ ಏಕಾಗ್ರಚಿತ್ತನಾಗಿದ್ದನು. ಅವನು ಧನುಸ್ಸನ್ನೆತ್ತಿ ದೇಹವನ್ನು ವಿದೀರ್ಣಗೊಳಿಸುವಂತಹ ಸರ್ಪದಂತೆ ವಿಷದ ಬಾಣಗಳನ್ನು ಮಳೆಗರೆಯತೊಡಗಿದನು.॥39॥
ಮೂಲಮ್ - 40
ತಸ್ಯ ತಚ್ಛುಶುಭೇ, ಭೂಯಃ ಸಶರಂ ಧನುರುತ್ತಮಮ್ ।
ವಿದ್ಯುದೈರಾವತಾರ್ಚಿಷ್ಮದ್ ದ್ವಿತೀಯೇಂದ್ರ ಧನುರ್ಯಥಾ ॥
ಅನುವಾದ
ಅವನ ಆ ಬಾಣಸಹಿತ ಉತ್ತಮ ಧನುಸ್ಸು ಮಿಂಚಿ ನಂತೆ ಮತ್ತು ಐರಾವತದ ಪ್ರಭೆಯಿಂದ ಕೂಡಿ ಇನ್ನೊಂದು ಇಂದ್ರನ ಧನುಸ್ಸಿನಂತೆ ಶೋಭಿಸುತ್ತಿತ್ತು.॥40॥
ಮೂಲಮ್ - 41
ಆಕರ್ಣಕೃಷ್ಟಮುಕ್ತೇನ ಜಘಾನ ದ್ವಿವಿದಂ ತದಾ ।
ತೇನ ಹಾಟಕಪುಂಖೇನ ಪತ್ರಿಣಾ ಪತ್ರವಾಸಸಾ ॥
ಅನುವಾದ
ಅವನು ಸ್ವರ್ಣರೆಕ್ಕೆಗಳುಳ್ಳ ಬಾಣವನ್ನು ಆಕರ್ಣಾಂತ ಸೆಳೆದು ಪ್ರಯೋಗಿಸಿ ದ್ವಿವಿದನನ್ನು ಗಾಯಗೊಳಿಸಿದನು.॥41॥
ಮೂಲಮ್ - 42
ಸಹಸಾಭಿಹತಸ್ತೇನ ವಿಪ್ರಮುಕ್ತಪದಃ ಸ್ಫುರನ್ ।
ನಿಪಪಾತ ತ್ರಿಕೂಟಾಭೋ ವಿಹ್ವಲನ್ ಪ್ಲವಗೋತ್ತಮಃ ॥
ಅನುವಾದ
ಅವನ ಬಾಣದಿಂದ ತ್ರಿಕೂಟ ಪರ್ವತದಂತೆ ವಿಶಾಲಕಾಯ ವಾನರಶ್ರೇಷ್ಠ ದ್ವಿವಿದನು ತತ್ತರಿಸುತ್ತಾ ಕೆಕ-ಕಾಲು ಚೆಲ್ಲಿ ಭೂಮಿಯಲ್ಲಿ ಬಿದ್ದುಬಿಟ್ಟನು.॥42॥
ಮೂಲಮ್ - 43
ಮೈಂದಸ್ತು ಭ್ರಾತರಂ ತತ್ರ ಭಗ್ನಂದೃಷ್ಟ್ವಾಮಹಾಹವೇ ।
ಅಭಿದುದ್ರಾವ ವೇಗೇನ ಪ್ರಗೃಹ್ಯ ವಿಪುಲಾಂ ಶಿಲಾಮ್ ॥
ಅನುವಾದ
ಆ ಮಹಾಸಂಗ್ರಾಮದಲ್ಲಿ ತನ್ನ ತಮ್ಮನು ಗಾಯಗೊಂಡು ಬಿದ್ದಿರುವುದನ್ನು ನೋಡಿ ಮೈಂದನು ದೊಡ್ಡದಾದ ಶಿಲಾಖಂಡ ವನ್ನೆತ್ತಿಕೊಂಡು ವೇಗವಾಗಿ ಓಡಿ ಬಂದನು.॥43॥
ಮೂಲಮ್ - 44
ತಾಂ ಶಿಲಾಂ ತು ಪ್ರಚಿಕ್ಷೇಪ ರಾಕ್ಷಸಾಯ ಮಹಾಬಲಃ ।
ಬಿಭೇದ ತಾಂ ಶಿಲಾಂ ಕುಂಭಃ ಪ್ರಸನ್ನೈಃ ಪಂಚಭಿಃ ಶರೈಃ ॥
ಅನುವಾದ
ಮಹಾಬಲಿ ವಾನರವೀರನು ಆ ಶಿಲೆಯನ್ನು ರಾಕ್ಷಸನ ಮೇಲೆ ಎಸೆದನು, ಆದರೆ ಕುಂಭನು ಐದು ಹೊಳೆಯುತ್ತಿರುವ ಬಾಣಗಳಿಂದ ಆ ಶಿಲೆಯನ್ನು ಪುಡಿ ಪುಡಿ ಮಾಡಿದನು.॥44॥
ಮೂಲಮ್ - 45
ಸಂಧಾಯ ಚಾನ್ಯಂ ಸುಮುಖಂ ಶರಮಾಶೀವಿಷೋಪಮಮ್ ।
ಆಜಘಾನ ಮಹಾತೇಜಾ ವಕ್ಷಸಿ ದ್ವಿವಿದಾಗ್ರಜಮ್ ॥
ಅನುವಾದ
ಮತ್ತೆ ವಿಷಧರ ಸರ್ಪದಂತಹ ಭಯಂಕರ ಮತ್ತು ಸುಂದರವಾದ ತುದಿಯುಳ್ಳ ಇನ್ನೊಂದು ಬಾಣವನ್ನು ಧನುಸ್ಸಿಗೆ ಹೂಡಿ, ಅದರಿಂದ ಮಹಾತೇಜಸ್ವೀ ವೀರ ಮೈಂದನ ಎದೆಯಲ್ಲಿ ಆಳವಾಗಿ ಗಾಯಗೊಳಿಸಿದನು.॥45॥
ಮೂಲಮ್ - 46
ಸ ತು ತೇನ ಪ್ರಹಾರೇಣ ಮೈಂದೋ ವಾನರಯೂಥಪಃ ।
ಮರ್ಮಣ್ಯಭಿಹತಸ್ತೇನ ಪಪಾತ ಭುವಿ ಮೂರ್ಛಿತಃ ॥
ಅನುವಾದ
ಅವನ ಆ ಪ್ರಹಾರದಿಂದ ವಾನರ ದಳಪತಿ ಮೈಂದನ ಮರ್ಮಸ್ಥಾನದಲ್ಲಿ ಭಾರೀ ಆಘಾತವುಂಟಾಗಿ ಅವನು ಮೂರ್ಛಿತನಾಗಿ ಭೂಮಿಗೆ ಬಿದ್ದನು.॥46॥
ಮೂಲಮ್ - 47
ಅಂಗದೋ ಮಾತುಲೌ ದೃಷ್ಟ್ವಾಮಥಿತೌ ತು ಮಹಾಬಲೌ ।
ಅಭಿದುದ್ರಾವ ವೇಗೇನ ಕುಂಭಮುದ್ಯತ ಕಾರ್ಮುಕಮ್ ॥
ಅನುವಾದ
ಮೈಂದ-ದ್ವಿವಿದರು ಅಂಗದನ ಮಾವರಾಗಿದ್ದರು. ಮಹಾಬಲಿಗಳಾದ ಅವರಿಬ್ಬರೂ ವೀರರು ಗಾಯಗೊಂಡಿರುವುದನ್ನು ನೋಡಿ ಅಂಗದನು ಧನುಸ್ಸನ್ನೆತ್ತಿಕೊಂಡು ಎದುರಿಗೆ ನಿಂತಿದ್ದ ಕುಂಭನ ಮೇಲೆ ವೇಗವಾಗಿ ಆಕ್ರಮಣ ಮಾಡಿದನು.॥47॥
ಮೂಲಮ್ - 48
ತಮಾಪತಂತಂ ವಿವ್ಯಾಧ ಕುಂಭಃ ಪಂಚಭಿರಾಯಸೈಃ ।
ತ್ರಿಭಿಶ್ಚಾನ್ಯೈಃ ಶಿತೈರ್ಬಾಣೈರ್ಮಾತಂಗಮಿವ ತೋಮರೈಃ ।
ಸೋಂಽಗದಂ ಬಹುಭಿರ್ಬಾಣೈಃ ಕುಂಭೋ ವಿವ್ಯಾಧ ವೀರ್ಯವಾನ್ ॥
ಅನುವಾದ
ಅಂಗದನು ಬರುತ್ತಿರುವುದನ್ನು ನೋಡಿ ಕುಂಭನು ಐದು ಬಾಣಗಳಿಂದ ಅವನನ್ನು ಘಾಸಿಗೊಳಿಸಿ ಪುನಃ ಮೂರು ಬಾಣಗಳನ್ನು ಹೊಡೆದನು. ಮಾವುತನ ಅಂಕುಶದಿಂದ ಮತ್ತಗಜವನ್ನು ಚುಚ್ಚುವಂತೆ ಪರಾಕ್ರಮಿ ಕುಂಭನು ಅನೇಕ ಬಾಣಗಳಿಂದ ಅಂಗದನನ್ನು ಗಾಯಗೊಳಿಸಿದನು.॥48॥
ಮೂಲಮ್ - 49
ಅಕುಂಠಧಾರೈರ್ನಿಶಿತೈಸ್ತೀಕ್ಷ್ಣೈಃ ಕನಕಭೂಷಣೈಃ ।
ಅಂಗದಃ ಪ್ರತಿವಿದ್ಧಾಂಗೋ ವಾಲಿಪುತ್ರೋ ನ ಕಂಪತೇ ॥
ಅನುವಾದ
ಮೊಂಡಾಗದ, ಸ್ವರ್ಣಭೂಷಿತ ತೀಕ್ಷ್ಣ ಬಾಣಗಳಿಂದ ವಾಲಿಪುತ್ರ ಅಂಗದನ ಇಡೀ ಶರೀರ ಭಿನ್ನ ಭಿನ್ನವಾಗಿದ್ದರೂ ಅವನು ಕಂಪಿಸಲಿಲ್ಲ.॥49॥
ಮೂಲಮ್ - 50½
ಶಿಲಾಪಾದಪವರ್ಷಾಣಿ ತಸ್ಯ ಮೂರ್ಧ್ನಿ ವವರ್ಷ ಹ ।
ಸ ಪ್ರಚಿಚ್ಛೇದ ತಾನ್ಸರ್ವಾನ್ ಬಿಭೇದ ಚ ಪುನಃ ಶಿಲಾಃ ॥
ಕುಂಭಕರ್ಣಾತ್ಮಜಃ ಶ್ರೀಮಾನ್ ವಾಲಿಪುತ್ರಸಮೀರಿತಾನ್ ।
ಅನುವಾದ
ಅವನು ಆ ರಾಕ್ಷಸನ ಮಸ್ತಕದ ಮೇಲೆ ಶಿಲೆಗಳ ಮತ್ತು ವೃಕ್ಷಗಳ ಮಳೆಯನ್ನೇ ಗರೆದನು. ಆದರೆ ಕುಂಭಕರ್ಣ ಪುತ್ರ ಕುಂಭನು ವಾಲಿಪುತ್ರನು ಎಸೆದಿರುವ ಎಲ್ಲ ವೃಕ್ಷಗಳನ್ನು ಕತ್ತರಿಸಿ, ಶಿಲೆಗಳನ್ನು ಒಡೆದು ಹಾಕಿದನು.॥50॥
ಮೂಲಮ್ - 51½
ಆಪತಂತಂ ಚ ಸಂಪ್ರೇಕ್ಷ್ಯ ಕುಂಭೋ ವಾನರಯೂಥಪಮ್ ॥
ಭ್ರುವೌವಿವ್ಯಾಧ ಬಾಣಾಭ್ಯಾಮುಲ್ಕಾಭ್ಯಾಮಿವ ಕುಂಜರಮ್ ।
ಅನುವಾದ
ಅನಂತರ ವಾನರ ಯೂಥಪತಿ ಅಂಗದನು ತನ್ನತ್ತ ಬರುತ್ತಿರುವುದನ್ನು ನೋಡಿ, ಎರಡು ಉಲ್ಕೆಗಳಿಂದ ಆನೆಯನ್ನು ಹೊಡೆದಂತೆ, ಎರಡು ಬಾಣಗಳಿಂದ ಅವನ ಹುಬ್ಬುಗಳಿಗೆ ಪ್ರಹರಿಸಿದನು.॥51॥
ಮೂಲಮ್ - 52
ತಸ್ಯ ಸುಸ್ರಾವ ರುಧಿರಂ ಪಿಹಿತೇ ಚಾಸ್ಯಲೋಚನೇ ॥
ಅಂಗದಃ ಪಾಣಿನಾ ನೇತ್ರೇ ಪಿಧಾಯ ರುಧಿರೋಕ್ಷಿತೇ ।
ಮೂಲಮ್ - 53
ಸಾಲಮಾಸನ್ನಮೇಕೇನ ಪರಿಜಗ್ರಾಹ ಪಾಣಿನಾ ॥
ಮೂಲಮ್ - 54
ಸಂಪೀಡ್ಯಚೋರಸಿ ಸಸ್ಕಂಧಂ ಕರೇಣಾಭಿನಿವೇಶ್ಯ ಚ ।
ಕಿಂಚಿದಭ್ಯವನಮ್ಯೈನಮುನ್ಮಮಾಥ ಮಹಾರಣೇ ॥
ಅನುವಾದ
ಅಂಗದನ ಹುಬ್ಬುಗಳಿಂದ ರಕ್ತಹರಿದು ಕಣ್ಣುಕಾಣದಾಯಿತು. ಆಗ ಅವನು ಒಂದು ಕೈಯಿಂದ ರಕ್ತದಿಂದ ತೊಯ್ದ ತನ್ನ ಕಣ್ಣುಗಳನ್ನು ಮುಚ್ಚಿಕೊಂಡು, ಇನ್ನೊಂದು ಕೈಯಿಂದ ಪಕ್ಕದಲ್ಲೆ ಇದ್ದ ತಾಲವೃಕ್ಷವನ್ನು ಹಿಡಿದು, ಎದೆಯಿಂದ ಒತ್ತಿ ಆ ವೃಕ್ಷವನ್ನು ಬಗ್ಗಿಸಿ ಆ ಸಮರದಲ್ಲಿ ಒಂದೇ ಕೈಯಿಂದ ಕಿತ್ತುಕೊಂಡನು.॥52-54॥
ಮೂಲಮ್ - 55
ತಮಿಂದ್ರ ಕೇತುಪ್ರತಿಮಂ ವೃಕ್ಷಂ ಮಂದರ ಸಂನಿಭಮ್ ।
ಸಮುತ್ಸೃಜತ ವೇಗೇನ ಮಿಷತಾಂ ಸರ್ವರಕ್ಷಸಾಮ್ ॥
ಅನುವಾದ
ಆ ವೃಕ್ಷವು ಇಂದ್ರಧ್ವಜ ಹಾಗೂ ಮಂದರಾಚಲದಂತೆ ಎತ್ತರವಾಗಿತ್ತು. ಅದರಿಂದ ಅಂಗದನು ಎಲ್ಲ ರಾಕ್ಷಸರು ನೋಡುನೋಡುತ್ತಿರುವಂತೆ ವೇಗವಾಗಿ ಕುಂಭನ ಮೇಲೆ ಹೊಡೆದನು.॥55॥
ಮೂಲಮ್ - 56
ಸ ಚಿಚ್ಛೇದ ಶಿತೈರ್ಬಾಣೈಃ ಸಪ್ತಭಿಃ ಕಾಯಭೇದನೈಃ ।
ಅಂಗದೋ ವಿವ್ಯಥೇಽಭೀಕ್ಷ್ಣಂ ಸ ಪಪಾತ ಮುಮೋಹ ಚ ॥
ಅನುವಾದ
ಆದರೆ ಶರೀರವನ್ನು ವಿವೀರ್ಣಗೊಳಿಸುವಂತಹ ಏಳು ಹರಿತವಾದ ಬಾಣಗಳನ್ನು ಹೊಡೆದು ಕುಂಭನು ಆ ತಾಲವೃಕ್ಷವನ್ನು ತುಂಡುತುಂಡಾಸಿದನು. ಇದರಿಂದ ಅಂಗದನಿಗೆ ಬಹಳ ವ್ಯಥೆಯಾಯಿತು. ಅವನು ಮೊದಲೇ ಗಾಯಗೊಂಡಿದ್ದನು. ಆಗ ಮೂರ್ಛಿತನಾದನು.॥56॥
ಮೂಲಮ್ - 57
ಅಂಗದಂ ಪತಿತಂ ದೃಷ್ಟ್ವಾಸೀದಂತಮಿವ ಸಾಗರೇ ।
ದುರಾಸದಂ ಹರಿಶ್ರೇಷ್ಠಾ ರಾಘವಾಯ ನ್ಯವೇದಯನ್ ॥
ಅನುವಾದ
ದುರ್ಜಯ ವೀರ ಅಂಗದನು ಸಮುದ್ರದಲ್ಲಿ ಬೀಳುವಂತೆ ಭೂಮಿಯಲ್ಲಿ ಬಿದ್ದಿರುವುದನ್ನು ನೋಡಿ ಶ್ರೇಷ್ಠ ವಾನರರು ಶ್ರೀರಘುನಾಥನಿಗೆ ಇದನ್ನು ಸೂಚಿಸಿದರು.॥57॥
ಮೂಲಮ್ - 58
ರಾಮಸ್ತು ವ್ಯಥಿತಂ ಶ್ರುತ್ವಾ ವಾಲಿಪುತ್ರಂ ಮಹಾಹವೇ ।
ವ್ಯಾದಿದೇಶ ಹರಿಶ್ರೇಷ್ಠಾನ್ ಜಾಂಬವತ್ ಪ್ರಮುಖಾಂಸ್ತತಃ ॥
ಅನುವಾದ
ವಾಲಿಪುತ್ರ ಅಂಗದನು ಮಹಾಸಮರದಲ್ಲಿ ಮೂರ್ಛಿತನಾಗಿ ಬಿದ್ದಿರುವನೆಂದು ಕೇಳಿದಾಗ ಶ್ರೀರಾಮನು ಜಾಂಬವಂತ ಮೊದಲಾದ ಪ್ರಮುಖ ವಾನರವೀರರಿಗೆ ಯುದ್ಧಕ್ಕೆಹೋಗಲು ಆಜ್ಞಾಪಿಸಿದನು.॥58॥
ಮೂಲಮ್ - 59
ತೇ ತು ವಾನರ ಶಾರ್ದೂಲಾಃ ಶ್ರುತ್ವಾ ರಾಮಸ್ಯ ಶಾಸನಮ್ ।
ಅಭಿಪೇತುಃ ಸುಸಂಕ್ರುದ್ಧಾಃ ಕುಂಭಮುದ್ಯತ ಕಾರ್ಮುಕಮ್ ॥
ಅನುವಾದ
ಶ್ರೀರಾಮಚಂದ್ರನ ಆದೇಶವನ್ನು ಕೇಳಿ ಶ್ರೇಷ್ಠ ವಾನರವೀರರು ಅತ್ಯಂತ ಕುಪಿತರಾಗಿ ಧನುಸ್ಸನ್ನೆತ್ತಿಕೊಂಡು ಕುಂಭನ ಮೇಲೆ ಸುತ್ತಲಿಂದಲೂ ಆಕ್ರಮಿಸಿದರು.॥59॥
ಮೂಲಮ್ - 60
ತತೋ ದ್ರುಮಶಿಲಾಹಸ್ತಾಃ ಕೋಪ ಸಂರಕ್ತಲೋಚನಾಃ ।
ರಿರಕ್ಷಿಷಂತೋಽಭ್ಯಪತನ್ನಂಗದಂ ವಾನರರ್ಷಭಾಃ ॥
ಅನುವಾದ
ಅವರೆಲ್ಲ ಪ್ರಮುಖ ವೀರರು ಅಂಗದನನ್ನು ರಕ್ಷಿಸಲು ಬಯಸುತ್ತಿದ್ದರು. ಆದ್ದರಿಂದ ಕ್ರೋಧದಿಂದ ಕಣ್ಣು ಕೆಂಪಾಗಿಸಿ, ಕೈಗಳಲ್ಲಿ ವೃಕ್ಷ, ಶಿಲೆಗಳನ್ನು ಹಿಡಿದುಕೊಂಡು ರಾಕ್ಷಸನ ಕಡೆಗೆ ಓಡಿದನು.॥60॥
ಮೂಲಮ್ - 61
ಜಾಂಬವಾಂಶ್ಚ ಸುಷೇಣಶ್ಚ ವೇಗದರ್ಶೀ ಚ ವಾನರಃ ।
ಕುಂಭಕರ್ಣಾತ್ಮಜಂ ವೀರಂ ಕ್ರುದ್ಧಾಃ ಸಮಭಿದುದ್ರುವುಃ ॥
ಅನುವಾದ
ಜಾಂಬವಂತರು, ಸುಷೇಣ ಮತ್ತು ವೇಗದರ್ಶಿ ಕುಪಿತರಾಗಿ ವೀರ ಕುಂಭಕರ್ಣನ ಪುತ್ರನ ಮೇಲೆ ಆಕ್ರಮಿಸಿದರು.॥61॥
ಮೂಲಮ್ - 62
ಸಮೀಕ್ಷ್ಯಾಪತತಸ್ತಾಂಸ್ತು ವಾನರೇಂದ್ರಾನ್ಮಹಾಬಲಾನ್ ।
ಆವವಾರ ಶರೌಘೇಣ ನಗೇನೇವ ಜಲಾಶಯಮ್ ॥
ಅನುವಾದ
ಆ ಮಹಾಬಲಿ ವಾನರ ಯೂಥಪತಿಗಳ ಆಕ್ರಮಣ ಮಾಡುವುದನ್ನು ನೋಡಿ ಕುಂಭನು ತನ್ನ ಬಾಣಗಳಿಂದ ಅವರೆಲ್ಲರನ್ನು ಹರಿದುಬರುವ ಜಲಪ್ರವಾಹವನ್ನು ಪರ್ವತವು ತಡೆಯುವಂತೆ, ತಡೆಹಿಡಿದನು.॥62॥
ಮೂಲಮ್ - 63
ತಸ್ಯ ಬಾಣಪಥಂ ಪ್ರಾಪ್ಯ ನ ಶೇಕುರಪಿ ವೀಕ್ಷಿತುಮ್ ।
ವಾನರೇಂದ್ರಾ ಮಹಾತ್ಮಾನೋ ವೇಲಾಮಿವ ಮಹೋದಧಿಃ ॥
ಅನುವಾದ
ಅವನ ಬಾಣಗಳು ಬರುತ್ತಿರುವಾಗ ಆ ಮಹಾಮನಸ್ವೀ ವಾನರ ಸೇನಾಪತಿಗಳು ಮುಂದೆ ಹೋಗುವುದಿರಲಿ, ಅವನ ಕಡೆಗೆ ಕಣ್ಣೆತ್ತಿಯೂ ನೋಡಲಾಗಲಿಲ್ಲ. ಮಹಾಸಾಗರವು ತನ್ನ ಎಲ್ಲೆಯನ್ನೂ ಮೀರಿ ಮುಂದೆ ಹೋಗದಂತೆ ಅವರೆಲ್ಲರೂ ಅಲ್ಲೇ ನಿಂತುಬಿಟ್ಟರು.॥63॥
ಮೂಲಮ್ - 64
ತಾಂಸ್ತು ದೃಷ್ಟ್ವಾ ಹರಿಗಣಾನ್ ಶರವೃಷ್ಟಿಭಿರರ್ದಿತಾನ್ ।
ಅಂಗದಂ ಪೃಷ್ಠತಃ ಕೃತ್ವಾ ಭ್ರಾತೃಜಂ ಪ್ಲವಗೇಶ್ವರಃ ॥
ಮೂಲಮ್ - 65
ಅಭಿದುದ್ರಾವ ಸುಗ್ರೀವಃ ಕುಂಭಕರ್ಣಾತ್ಮಜಂ ರಣೇ ।
ಶೈಲಸಾನುಚರಂ ನಾಗಂ ವೇಗವಾನಿವ ಕೇಸರೀ ॥
ಅನುವಾದ
ಆ ವಾನರರೆಲ್ಲರೂ ಕುಂಭನ ಬಾಣದಿಂದ ಪೀಡಿತರಾಗಿರುವುದನ್ನು ನೋಡಿ ವಾನರರಾಜ ಸುಗ್ರೀವನು ತನ್ನ ಅಣ್ಣನ ಮಗನಾದ ಅಂಗದನನ್ನು ಹಿಂದಕ್ಕಿಟ್ಟು ಸ್ವತಃ ಯುದ್ಧದಲ್ಲಿ ಕುಂಭ ಕರ್ಣನ ಮಗನ ಮೇಲೆ ಪರ್ವತ ಶಿಖರದಲ್ಲಿ ವಿಚರಿಸುವ ಆನೆಯ ಮೇಲೆ ಸಿಂಹವೂ ವೇಗವಾಗಿ ಆಕ್ರಮಣ ಮಾಡು ವಂತೆ ಆಕ್ರಮಿಸಿದನು.॥64-65॥
ಮೂಲಮ್ - 66
ಉತ್ಪಾಟ್ಯ ಚ ಮಹಾವೃಕ್ಷಾನಶ್ವಕರ್ಣಾದಿಕಾನ್ ಬಹೂನ್ ।
ಅನ್ಯಾಂಶ್ಚ ವಿವಿಧಾನ್ ವೃಕ್ಷಾಂ ಶ್ಚಿಕ್ಷೇಪ ಸ ಮಹಾಕಪಿಃ ॥
ಅನುವಾದ
ಮಹಾಕಪಿ ಸುಗ್ರೀವನು ಅಶ್ವಕರ್ಣವೇ ಆದಿ ದೊಡ್ಡ ದೊಡ್ಡ ವೃಕ್ಷಗಳನ್ನು ಹಾಗೂ ಇತರ ನಾನಾ ಪ್ರಕಾರದ ವೃಕ್ಷಗಳನ್ನು ಕಿತ್ತು ಆ ರಾಕ್ಷಸನ ಮೇಲೆ ಎಸೆಯತೊಡಗಿದನು.॥66॥
ಮೂಲಮ್ - 67
ತಾಂ ಛಾದಯಂತೀಮಾಕಾಶಂ ವೃಕ್ಷವೃಷ್ಟಿಂ ದುರಾಸದಾಮ್ ।
ಕುಂಭಕರ್ಣಾತ್ಮಜಃ ಶ್ರೀಮಾಂಶ್ಚಿಚ್ಛೇದ ಸ್ವಶರೈಃ ಶಿತೈಃ ॥
ಅನುವಾದ
ನಿವಾರಿಸಲು ಅತ್ಯಂತ ಕಷ್ಟಕರವಾದ ಆ ವೃಕ್ಷಗಳ ವರ್ಷವನ್ನು ಶ್ರೀಮಾನ್ ಕುಂಭನು ತನ್ನ ಹರಿತವಾದ ಬಾಣಗಳಿಂದ ಎಲ್ಲ ಮರಗಳನ್ನು ಕತ್ತರಿಸಿ ಹಾಕಿದನು.॥67॥
ಮೂಲಮ್ - 68½
ಅಭಿಲಕ್ಷ್ಯೇಣ ತ್ರಿವೇಣ ಕುಂಭೇನ ನಿಶಿತೈಃ ಶರೈಃ ।
ಆಚಿತಾಸ್ತೇ ದ್ರುಮಾ ರೇಜುರ್ಯಥಾ ಘೋರಾಃ ಶತಘ್ನಯಃ ।
ದ್ರುಮವರ್ಷಂ ತು ತದ್ಭಿನ್ನಂ ದೃಷ್ಟ್ವಾ ಕುಂಭೇನ ವೀರ್ಯವಾನ್ ।
ವಾನರಾಧಿಪತಿಃ ಶ್ರೀಮಾನ್ಮಹಾಸತ್ತ್ವೋ ನ ವಿವ್ಯಥೇ ॥
ಅನುವಾದ
ಗುರಿಯಲ್ಲಿ ನಿಷ್ಣಾತನಾದ, ತೀವ್ರವೇಗಶಾಲಿ ಕುಂಭನು ತೀಕ್ಷ್ಣಬಾಣಗಳಿಂದ ವ್ಯಾಪ್ತವಾದ ಆ ವೃಕ್ಷಗಳು ಭಯಾನಕ ಶತಘ್ನಿಗಳಂತೆ ಸುಶೋಭಿತವಾಗಿದ್ದವು. ಆ ವೃಕ್ಷವೃಷ್ಟಿಯು ಕುಂಭನಿಂದ ಖಂಡಿತವಾದುದನ್ನು ನೋಡಿ ಮಹಾಶಕ್ತಿಶಾಲಿ ಪರಾಕ್ರಮಿ ವಾನರರಾಜ ಸುಗ್ರೀವನು ವ್ಯಥಿತನಾಗಲಿಲ್ಲ.॥68॥
ಮೂಲಮ್ - 69
ಸವಿಧ್ಯಮಾನಃ ಸಹಸಾ ಸಹಮಾನಸ್ತುತಾನ್ ಶರಾನ್ ॥
ಮೂಲಮ್ - 70½
ಕುಂಭಸ್ಯ ಧನುರಾಕ್ಷಿಪ್ಯ ಬಭಂಜೇಂದ್ರಧನುಃ ಪ್ರಭಮ್ ।
ಅವಪ್ಲುತ್ಯ ತತಃ ಶೀಘ್ರಂ ಕೃತ್ವಾ ಕರ್ಮ ಸುದುಷ್ಕರಮ್ ॥
ಅಬ್ರವೀತ್ಕುಪಿತಃ ಕುಂಭಂ ಭಗ್ನಶೃಂಗಮಿವ ದ್ವಿಪಮ್ ।
ಅನುವಾದ
ಅವನು ಅಸುರನ ಬಾಣಗಳ ಏಟನ್ನು ಸಹಿಸುತ್ತಾ ತತ್ಕ್ಷಣ ನೆಗೆದು ಅವನ ರಥವನ್ನಡರಿ, ಇಂದ್ರಧನುಸ್ಸಿಗೆ ಸಮಾನವಾದ ಕುಂಭನ ಧನುಷ್ಯವನ್ನು ಕಿತ್ತುಕೊಂಡು ಮುರಿದು ಹಾಕಿದನು. ಅನಂತರ ಅವನು ಅಲ್ಲಿಂದ ಕೆಳಗೆ ಹಾರಿದನು. ಈ ದುಷ್ಕರ ಕರ್ಮಮಾಡಿದ ಬಳಿಕ ದಂತಮುರಿದ ಆನೆಯಂತೆ ಕುಪಿತನಾಗಿ ಕುಂಭನಲ್ಲಿ ಇಂತೆಂದನು.॥69-70॥
ಮೂಲಮ್ - 71
ನಿಕುಂಭಾಗ್ರಜ ವೀರ್ಯಂ ತೇ ಬಾಣವೇಗಂತದದ್ಭುತಮ್ ॥
ಮೂಲಮ್ - 72
ಸಂನತಿಶ್ಚ ಪ್ರಭಾವಶ್ಚ ತವ ವಾ ರಾವಣಸ್ಯ ವಾ ।
ಪ್ರಹ್ಲಾದಬಲಿವೃತ್ರಘ್ನ ಕುಬೇರವರುಣೋಪಮ ॥
ಅನುವಾದ
ನಿಕುಂಭನ ಅಣ್ಣನಾದ ಕುಂಭನೇ! ನಿನ್ನ ಪರಾಕ್ರಮ ಮತ್ತು ಬಾಣಗಳ ವೇಗ ಅದ್ಭುತವಾಗಿದೆ. ವಿನಯ ಮತ್ತು ಪ್ರಭಾವಗಳು ರಾವಣನಲ್ಲಿರುವಂತೆಯೇ ನಿನ್ನಲ್ಲೂ ಇವೆ. ನೀನು ಪ್ರಹ್ಲಾದ- ಬಲಿ-ಇಂದ್ರ-ಕುಬೇರ-ವರುಣರಿಗೆ ಸಮಾನನಾಗಿರುವೆ.॥71-72॥
ಮೂಲಮ್ - 73
ಏಕಸ್ತ್ವಮನುಜಾತೋಽಸಿ ಪಿತರಂ ಬಲವತ್ತರಮ್ ।
ತ್ವಾಮೇವೈಕಂ ಮಹಾಬಾಹುಂ ಶೂಲಹಸ್ತ ಮರಿಂದಮಮ್ ॥
ಮೂಲಮ್ - 74
ತ್ರಿದಶಾ ನಾತಿವರ್ತಂತೇ ಜಿತೇಂದ್ರಿಯಮಿವಾಧಯಃ ।
ವಿಕ್ರಮಸ್ವ ಮಹಾಬುದ್ಧೇ ಕರ್ಮಾಣಿ ಮಮ ಪಶ್ಯ ಚ ॥
ಅನುವಾದ
ಅತ್ಯಂತ ಬಲಿಷ್ಠನಾಗಿದ್ದ ನಿನ್ನ ತಂದೆ ಕುಂಭ ಕರ್ಣನಿಗೆ ಅನುರೂಪನಾಗಿ ನೀನೊಬ್ಬನು ಮಾತ್ರ ಹುಟ್ಟಿರುವೆ. ಜಿತೇಂದ್ರಿಯನಾದವನನ್ನು ಮಾನಸಿಕವಾದ ಚಿಂತೆಗಳು ಬಾಧೆಪಡಿಸದಂತೆ-ಮಹಾಬಾಹುವಾದ, ಶೂಲಪಾಣಿಯಾದ, ಶತ್ರುದಮನನಾದ ನೀನೊಬ್ಬನನ್ನು ದೇವತೆಗಳೂ ಅತಿಕ್ರಮಿಸಲಾರರು. ಮಹಾಮತಿಯೇ! ನೀನು ನಿನ್ನ ಪರಾಕ್ರಮವನ್ನು ಪ್ರದರ್ಶಿಸು, ಹಾಗೆಯೇ ನನ್ನ ಸಾಹಸಕಾರ್ಯಗಳನ್ನು ನೋಡು.॥73-74॥
ಮೂಲಮ್ - 75
ವರದಾನಾತ್ ಪಿತೃವ್ಯಸ್ತೇ ಸಹತೇ ದೇವದಾನವಾನ್ ।
ಕುಂಭಕರ್ಣಸ್ತು ವೀರ್ಯೇಣ ಸಹತೇ ಚ ಸುರಾಸುರಾನ್ ॥
ಅನುವಾದ
ನಿನ್ನ ದೊಡ್ಡಪ್ಪನಾದ ರಾವಣನು ಕೇವಲ ವರದಾನದ ಪ್ರಭಾವದಿಂದ ದೇವತೆಗಳ ಮತ್ತು ದಾನವರ ವೇಗವನ್ನು ಸಹಿಸಿಕೊಳ್ಳುವನು. ನಿನ್ನ ತಂದೆ ಕುಂಭಕರ್ಣನು ತನ್ನ ಬಲ-ಪರಾಕ್ರಮದಿಂದ ದೇವತೆಗಳನ್ನು ಮತ್ತು ಅಸುರರನ್ನು ಎದುರಿಸುತ್ತಿದ್ದನು. (ಆದರೆ ನೀನು ವರದಾನ ಮತ್ತು ಪರಾಕ್ರಮ ಎರಡರಿಂದಲೂ ಸಂಪನ್ನನಾಗಿರುವೆ..॥75॥
ಮೂಲಮ್ - 76
ಧನುಷೀಂದ್ರಜಿತಸ್ತುಲ್ಯಃ ಪ್ರತಾಪೇ ರಾವಣಸ್ಯ ಚ ।
ತ್ವಮದ್ಯ ರಕ್ಷಸಾಂ ಲೋಕೇ ಶ್ರೇಷ್ಠೋಽಸಿ ಬಲವೀರ್ಯತಃ ॥
ಅನುವಾದ
ನೀನು ಧನುರ್ವಿದ್ಯೆಯಲ್ಲಿ ಇಂದ್ರಜಿತನಿಗೆ ಸಮನೂ, ಪ್ರತಾಪದಲ್ಲಿ ರಾವಣನಿಗೆ ಸಮನೂ ಆಗಿರುವೆ. ರಾಕ್ಷಸರ ಪ್ರಪಂಚದಲ್ಲಿ ಈಗ ಬಲ-ಪರಾಕ್ರಮದ ದೃಷ್ಟಿಯಿಂದ ಕೇವಲ ನೀನೇ ಶ್ರೇಷ್ಠನಾಗಿರುವೆ.॥76॥
ಮೂಲಮ್ - 77
ಮಹಾವಿಮರ್ದಂ ಸಮರೇ ಮಯಾ ಸಹ ತವಾದ್ಭುತಮ್ ।
ಅದ್ಯ ಭೂತಾನಿ ಪಶ್ಯಂತು ಶಕ್ರಶಂಬರಯೋರಿವ ॥
ಅನುವಾದ
ಇಂದು ಎಲ್ಲ ಪ್ರಾಣಿಗಳು ರಣರಂಗದಲ್ಲಿ ಇಂದ್ರ ಮತ್ತು ಶಂಬರಾಸುರರಂತೆ ನನ್ನ ಹಾಗೂ ನಿನ್ನ ಅದ್ಭುತ ಮಹಾಯುದ್ಧ ನೋಡಲಿ.॥77॥
ಮೂಲಮ್ - 78
ಕೃತಮಪ್ರತಿಮಂ ಕರ್ಮ ದರ್ಶಿತಂ ಚಾಸ್ತ್ರಕೌಶಲಮ್ ।
ಪಾತಿತಾ ಹರಿವೀರಾಶ್ಚ ತ್ವಯೈತೇ ಭೀಮವಿಕ್ರಮಾಃ ॥
ಅನುವಾದ
ನೀನು ಮಾಡಿದ ಪರಾಕ್ರಮಕ್ಕೆ ತುಲನೆಯೇ ಇಲ್ಲ. ನೀನು ತನ್ನ ಅಸ್ತ್ರಕೌಶಲ್ಯವನ್ನು ತೋರಿಸಿದೆ. ನಿನ್ನೊಡನೆ ಯುದ್ಧಮಾಡಿ ಈ ಭಯಂಕರ ಪರಾಕ್ರಮಿ ವಾನರವೀರರು ಧರಾಶಾಯಿಯಾದರು.॥78॥
ಮೂಲಮ್ - 79
ಉಪಾಲಂಭಭಯಾಚ್ಚೈವ ನಾಸಿ ವೀರ ಮಯಾ ಹತಃ ।
ಕೃತಕರ್ಮಪರಿಶ್ರಾಂತೋ ವಿಶ್ರಾಂತಃ ಪಶ್ಯ ಮೇ ಬಲಮ್ ॥
ಅನುವಾದ
ವೀರನೇ! ನಾನು ಅಪವಾದದ ಭಯದಿಂದ ಇದುವರೆಗೆ ನಿನ್ನನ್ನು ಕೊಲ್ಲಲಿಲ್ಲ. ‘ಕುಂಭನು ಯುದ್ಧಮಾಡಿ ಆಯಾಸಗೊಂಡಿದ್ದಾಗ ಮಹಾಪರಾಕ್ರಮಿಯೆನಿಸಿದ ಸುಗ್ರೀವನು ಅವನನ್ನು ಸಂಹರಿಸಿದನು’ ಎಂಬ ಅಪವಾದಕ್ಕೆ ನಾನು ಗುರಿಯಾಗಬಾರದು. ಆದ್ದರಿಂದ ಈಗ ನೀನು ಸ್ವಲ್ಪ ವಿಶ್ರಮಿಸಿ ಯುದ್ಧಕ್ಕೆ ಬಾ, ಮತ್ತೆ ನನ್ನ ಬಲವನ್ನು ನೋಡುವೆ.॥79॥
ಮೂಲಮ್ - 80
ತೇನ ಸುಗ್ರೀವವಾಕ್ಯೇನ ಸಾವಮಾನೇನ ಮಾನಿತಃ ।
ಅಗ್ನೇರಾಜ್ಯಹುತಸ್ಯೇವ ತೇಜಸ್ತಸ್ಯಾಭ್ಯವರ್ಧತ ॥
ಅನುವಾದ
ಹೀಗೆ ಸುಗ್ರೀವನ ಅಪಮಾನದ ಮಾತುಗಳಿಂದ ಸಮ್ಮಾನಿತನಾಗಿ ಕುಂಭನು ಆಜ್ಯಾಹುತಿ ಪಡೆದ ಅಗ್ನಿಯು ಪ್ರಜ್ವಲಿಸುವಂತೆ, ತೇಜಸ್ವಿನಿಂದ ಪ್ರಜ್ವಲಿಸಿದನು.॥80॥
ಮೂಲಮ್ - 81
ತತಃ ಕುಂಭಸ್ತು ಸುಗ್ರೀವಂ ಬಾಹುಭ್ಯಾಂ ಜಗೃಹೇ ತದಾ ।
ಗಜಾವಿವಾತೀತಮದೌ ನಿಃಶ್ವಸಂತೌ ಮುಹುರ್ಮುಹುಃ ॥
ಮೂಲಮ್ - 82
ಅನ್ಯೋನ್ಯಗಾತ್ರಗ್ರಥಿತೌ ಘರ್ಷಂತಾವಿತರೇತರಮ್ ।
ಸಧೂಮಾಂ ಮುಖತೋ ಜ್ವಾಲಾಂ ವಿಸೃಜಂತೌ ಪರಿಶ್ರಮಾತ್ ॥
ಅನುವಾದ
ಮರುಕ್ಷಣದಲ್ಲೇ ಕುಂಭನು ತನ್ನೆರಡು ಬಾಣಗಳಿಂದ ಸುಗ್ರೀವನನ್ನು ಹಿಡಿದುಕೊಂಡನು. ಬಳಿಕ ಆ ವೀರರಿಬ್ಬರೂ ಮತ್ತಗಜಗಳಂತೆ ಕಾಳಗವಾಡುತ್ತಾ ದೀರ್ಘವಾಗಿ ನಿಟ್ಟುಸಿರುಬಿಡುತ್ತಾ ಪರಸ್ಪರ ಮಲ್ಲಯುದ್ಧ ಮಾಡುತ್ತಾ ಗಾಯಗೊಳಿಸಿದರು. ಅವರಿಬ್ಬರೂ ಪರಿಶ್ರಮದಿಂದಾಗಿ ಹೊಗೆಯಿಂದ ಕೂಡಿದ ಬೆಂಕಿಯನ್ನು ಮುಖಗಳಿಂದ ಉಗುಳತೊಡಗಿದರು.॥81-82॥
ಮೂಲಮ್ - 83
ತ್ರಯೋಃ ಪಾದಾಭಿಘಾತಾಚ್ಚ ನಿಮಗ್ನಾ ಚಾಭವನ್ಮಹೀ ।
ವ್ಯಾಘೂರ್ಣಿತ ತರಂಗಶ್ಚ ಚುಕ್ಷುಭೇ ವರುಣಾಲಯಃ ॥
ಅನುವಾದ
ಅವರಿಬ್ಬರ ಪಾದಾಘಾತದಿಂದ ನೆಲ ಕುಸಿಯತೊಡಗಿತು. ಕಂಪಿಸುತ್ತಿತರುವ ಅಲೆಗಳಿಂದ ಕೂಡಿದ ಸಮುದ್ರವು ಅಲ್ಲೋಲಕಲ್ಲೋಲವಾಯಿತು.॥83॥
ಮೂಲಮ್ - 84
ತತಃ ಕುಂಭಂ ಸಮುತ್ಕ್ಷಿಪ್ಯ ಸುಗ್ರೀವೋ ಲವಣಾಂಭಸಿ ।
ಪಾತಯಾಮಾಸ ವೇಗೇನ ದರ್ಶಯನ್ನುದಧೇಸ್ತಲಮ್ ॥
ಅನುವಾದ
ಅಷ್ಟರಲ್ಲಿ ಸುಗ್ರೀವನು ಕುಂಭನನ್ನು ಮೇಲಕ್ಕೆತ್ತಿ ಸಮುದ್ರದ ತಳದಲ್ಲಿ ತೋರಿಸುವನೋ ಎಂಬಂತೆ ರಭಸದಿಂದ ಸಮುದ್ರಕ್ಕೆ ಎಸೆದನು.॥84॥
ಮೂಲಮ್ - 85
ತತಃ ಕುಂಭನಿಪಾತೇನ ಜಲರಾಶಿಃ ಸಮುತ್ಥಿತಃ ।
ವಿಂಧ್ಯಮಂದರ ಸಂಕಾಶೋ ವಿಸಸರ್ಪ ಸಮಂತತಃ ॥
ಅನುವಾದ
ಕುಂಭನು ಬಿದ್ದಾಗ ಸಮುದ್ರದ ನೀರು, ವಿಂಧ್ಯ ಮತ್ತು ಮದರಾಚಲದಂತೆ ಎತ್ತರಕ್ಕೆ ಚಿಮ್ಮಿತು ಹಾಗೂ ಎಲ್ಲೆಡೆ ಹರಡಿಹೋಯಿತು.॥85॥
ಮೂಲಮ್ - 86
ತತಃ ಕುಂಭಃ ಸಮುತ್ಪತ್ಯ ಸುಗ್ರೀವಮಭಿಪಾತ್ಯ ಚ ।
ಆಜಘಾನೋರಸಿ ಕ್ರುದ್ಧೋ ವಜ್ರಕಲ್ಪೇನ ಮುಷ್ಟಿನಾ ॥
ಅನುವಾದ
ಅನಂತರ ಕುಂಭನು ಪುನಃ ನೆಗೆದು ಮೇಲಕ್ಕೆ ಬಂದು ಕ್ರೋಧಪೂರ್ವಕ ಸುಗ್ರೀವನನ್ನು ತುಡುಕಿ ಅವನ ವಕ್ಷಃಸ್ಥಳಕ್ಕೆ ವಜ್ರದಂತೆ ಮುಷ್ಟಿಯಿಂದ ಪ್ರಹರಿಸಿದನು.॥86॥
ಮೂಲಮ್ - 87
ತಸ್ಯ ವರ್ಮ ಚ ಪುಸ್ಫೋಟ ಬಹು ಸುಸ್ರಾವ ಶೋಣಿತಮ್ ।
ಸ ಚ ಮುಷ್ಟಿರ್ಮಹಾವೇಗಃ ಪ್ರತಿಜಘ್ನೇಽಸ್ಥಿ ಮಂಡಲೇ ॥
ಅನುವಾದ
ಇದರಿಂದ ವಾನರನ ಕವಚ ಪುಡಿಪುಡಿಯಾಗಿ ಎದೆಯಿಂದ ರಕ್ತಹರಿಯತೊಡಗಿತು. ಅಸುರನ ಮಹಾವೇಗಶಾಲಿ ಗುದ್ದು ಸುಗ್ರೀವನ ಮೂಳೆಗಳು ಮುರಿದವು.॥87॥
ಮೂಲಮ್ - 88
ತಸ್ಯ ವೇಗೇನ ತತ್ರಾಸೀತ್ತೇಜಃ ಪ್ರಜ್ವಲಿತಂ ಮಹತ್ ।
ವಜ್ರನಿಷ್ಪೇಷಸಂಜಾತಾ ಜ್ವಾಲಾ ಮೇರೌರ್ಯಥಾ ಗಿರೇಃ ॥
ಅನುವಾದ
ಅದರ ವೇಗದಿಂದ ಮೇರುಪರ್ವತ ಶಿಖರದ ಮೇಲೆ ವಜ್ರಾಘಾತದಿಂದ ಏಳುವ ಅಗ್ನಿಯಂತೆ, ಆಮುಷ್ಟಿ ಪ್ರಹಾರದಿಂದ ಅಗ್ನಿಜ್ವಾಲೆಗಳು ಕಾಣಿಸಿಕೊಂಡವು.॥88॥
ಮೂಲಮ್ - 89
ಸ ತತ್ರಾಭಿಹತಸ್ತೇನ ಸುಗ್ರೀವೋ ವಾನರರ್ಷಭಃ ।
ಮುಷ್ಟಿಂ ಸಂವರ್ತಯಾಮಾಸ ವಜ್ರಕಲ್ಪಂ ಮಹಾಬಲಃ ॥
ಅನುವಾದ
ಕುಂಭನಿಂದ ಹೀಗೆ ಅಹತನಾದ ವಾನರರಾಜ ಮಹಾಬಲಿ, ಪರಮಪರಾಕ್ರಮಿ ಸುಗ್ರೀವನೂ ಕೂಡ ತನ್ನ ವಜ್ರಾಯುಧದಂತಹ ಮುಷ್ಟಿಯನ್ನು ಬಿಗಿದು ಸಾವಿರ ಕಿರಣಗಳಿಂದ ಪ್ರಕಾಶಿತವಾದ ಸೂರ್ಯಮಂಡಲದಂತೆ ಕಾಣುತ್ತಿದ್ದ ಆ ಮುಷ್ಟಿಯನ್ನು ಕುಂಭನ ಎದೆಗೆ ವೇಗವಾಗಿ ಪ್ರಹರಿಸಿದನು.॥89॥
ಮೂಲಮ್ - 90
ಅರ್ಚಿಃ ಸಹಸ್ರವಿಕಚರವಿಮಂಡಲವರ್ಚಸಮ್ ।
ಸ ಮುಷ್ಟಿಂ ಪಾತಯಾಮಾಸ ಕುಂಭಸ್ಯೋರಸಿ ವೀರ್ಯವಾನ್ ॥
ಮೂಲಮ್ - 91
ಸ ತು ತೇನ ಪ್ರಹಾರೇಣ ವಿಹ್ವಲೋ ಭೃಶಪೀಡಿತಃ ।
ನಿಪಪಾತ ತದಾ ಕುಂಭೋ ಗತಾರ್ಚಿರಿವ ಪಾವಕಃ ॥
ಅನುವಾದ
ಆ ಪ್ರಹಾರದಿಂದ ಬಹಳ ಪೀಡಿತನಾದ ಕುಂಭನು ವ್ಯಾಕುಲಗೊಂಡು ಆರಿ ಹೋದ ಬೆಂಕಿಯಂತೆ ನಿಸ್ತೇಜನಾಗಿ ನೆಲಕ್ಕುರುಳಿದನು.॥90-91॥
ಮೂಲಮ್ - 92
ಮುಷ್ಟಿನಾಭಿಹತಸ್ತೇನ ನಿಪಪಾತಾಶು ರಾಕ್ಷಸಃ ।
ಲೋಹಿತಾಂಗ ಇವಾಕಾಶಾದ್ದೀಪ್ತರಶ್ಮಿರ್ಯದೃಚ್ಛಯಾ ॥
ಅನುವಾದ
ಸುಗ್ರೀವನ ಮುಷ್ಟಿಪ್ರಹಾರದಿಂದ ಆ ರಾಕ್ಷಸನು ಅಕಸ್ಮಾತ್ತಾಗಿ ಆಕಾಶದಿಂದ ಬೀಳುವ ಮಂಗಳಗ್ರಹದಂತೆ ತತ್ಕಾಲ ಧರಾಶಾಯಿಯಾದನು.॥92॥
ಮೂಲಮ್ - 93
ಕುಂಭಸ್ಯ ಪತತೋ ರೂಪಂ ಭಗ್ನಸ್ಯೋರಸಿ ಮುಷ್ಟಿನಾ ।
ಬಭೌ ರುದ್ರಾಭಿಪನ್ನಸ್ಯ ಯಥಾ ರೂಪಂ ಗವಾಂ ಪತೇಃ ॥
ಅನುವಾದ
ಮುಷ್ಟಿಯ ಹೊಡೆತದಿಂದ ವಕ್ಷಃಸ್ಥಳವು ಭಗ್ನವಾದ ಕುಂಭನು ನೆಲಕ್ಕೆ ಬೀಳುವಾಗ ಅವನರೂಪ ರುದ್ರದೇವರಿಂದ ಪರಾಜಿತನಾದ ಸೂರ್ಯನಂತೆ ಕಂಡುಬಂತು.॥93॥
ಮೂಲಮ್ - 94
ತಸ್ಮಿನ್ಹತೇ ಭೀಮ ಪರಾಕ್ರಮೇಣ
ಪ್ಲವಂಗಮಾನಾಮೃಷಭೇಣ ಯುದ್ಧೇ ।
ಮಹೀ ಸಶೈಲಾ ಸವನಾ ಚಚಾಲ
ಭಯಂ ಚ ರಕ್ಷಾಂಸ್ಯಧಿಕಂ ವಿವೇಶ ॥
ಅನುವಾದ
ಭಯಂಕರ ಪರಾಕ್ರಮಿ ವಾನರರಾಜ ಸುಗ್ರೀವನಿಂದ ಯುದ್ಧದಲ್ಲಿ ಆ ನಿಶಾಚರನು ಹತನಾದಾಗ ಪರ್ವತ, ವನಗಳ ಸಹಿತ ಸಮಸ್ತ ಪೃಥಿವಿಯು ಕಂಪಿಸಿತು ಹಾಗೂ ರಾಕ್ಷಸರ ಮನಸಿನಲ್ಲಿ ಅತ್ಯಂತ ಭಯ ಆವರಿಸಿತು.॥94॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಎಪ್ಪತ್ತಾರನೆಯ ಸರ್ಗ ಪೂರ್ಣವಾಯಿತು.॥76॥