वाचनम्
ಭಾಗಸೂಚನಾ
ಲಂಕಾದಹನ, ರಾಕ್ಷಸರ ಮತ್ತು ವಾನರರ ಭಯಂಕರ ಯುದ್ಧ
ಮೂಲಮ್ - 1
ತತೋಽಬ್ರವೀನ್ಮಹಾತೇಜಾಃ ಸುಗ್ರೀವೋ ವಾನರಾರೇಶ್ವರಃ ।
ಅರ್ಥ್ಯಂ ವಿಜ್ಞಾಪಯಂಶ್ಚಾಪಿ ಹನೂಮಂತಮಿದಂ ವಚಃ ॥
ಅನುವಾದ
ಬಳಿಕ ಮಹಾತೇಜಸ್ವೀ ವಾನರರಾಜ ಸುಗ್ರೀವನು ಹನುಮಂತನಲ್ಲಿ ಮುಂದಿನ ಕರ್ತವ್ಯವನ್ನು ಸೂಚಿಸಲು ತಿಳಿಸಿದನು.॥1॥
ಮೂಲಮ್ - 2
ಯತೋ ಹತಃ ಕುಂಭಕರ್ಣಃ ಕುಮಾರಾಶ್ಚ ನಿಷೂದಿತಾಃ ।
ನೇದಾನೀಮುಪನಿರ್ಹಾರಂ ರಾವಣೋ ದಾತುಮರ್ಹತಿ ॥
ಅನುವಾದ
ಕುಂಭಕರ್ಣನು ಸತ್ತುಹೋದನು, ರಾಕ್ಷಸರಾಜನ ಪುತ್ರರ ಸಂಹಾರವೂ ಆಯಿತು. ಆದ್ದರಿಂದ ಈಗ ರಾವಣನು ಲಂಕೆಯನ್ನು ರಕ್ಷಿಸಲು ಯಾವುದೇ ವ್ಯವಸ್ಥೆ ಮಾಡಲು ಅಸಮರ್ಥನಾಗಿದ್ದಾನೆ.॥2॥
ಮೂಲಮ್ - 3
ಯೇ ಯೇ ಮಹಾಬಲಾಃ ಸಂತಿ ಲಘವಶ್ಚ ಪ್ಲವಂಗಮಾಃ ।
ಲಂಕಾಮಭಾಪತಂತ್ವಾಶು ಗೃಹ್ಯೋಲ್ಕಾಃ ಪ್ಲ ವಗರ್ಷಭಾಃ ॥
ಅನುವಾದ
ಆದುದರಿಂದ ನಮ್ಮ ಸೈನ್ಯದಲ್ಲಿರುವ ಮಹಾಬಲಶಾಲಿಗಳಾದ, ಶೀಘ್ರಗಾಮಿಗಳಾದ ವಾನರರೆಲ್ಲರೂ ಪಂಜುಗಳನ್ನು ಹಿಡಿದುಕೊಂಡು ಶೀಘ್ರವಾಗಿ ಲಂಕೆಯನ್ನು ಆಕ್ರಮಿಸಲಿ.॥3॥
ಮೂಲಮ್ - 4
ತತೋಽಸ್ತಂ ಗತ ಆದಿತ್ಯೇ ರೌದ್ರೇ ತಸ್ಮಿನ್ನಿಶಾಮುಖೇ ।
ಲಂಕಾಮಭಿಮುಖಾಃ ಸೋಲ್ಕಾ ಜಗ್ಮುಸ್ತೇ ಪ್ಲವಗರ್ಷಭಾಃ ॥
ಅನುವಾದ
ಸುಗ್ರೀವನ ಆಜ್ಞೆಗನುಸಾರ ಸೂರ್ಯಾಸ್ತವಾದಾಕ್ಷಣ ಭಯಂಕರ ಪ್ರದೋಷಕಾಲದಲ್ಲಿ ಆ ಶ್ರೇಷ್ಠ ವಾನರರೆಲ್ಲರೂ ಪಂಜುಗಳನ್ನು ಹಿಡಿದುಕೊಂಡು ಲಂಕೆಯ ಕಡೆಗೆ ಹೊರಟರು.॥4॥
ಮೂಲಮ್ - 5
ಉಲ್ಕಾಹಸ್ತೈರ್ಹರಿಗಣೈಃ ಸರ್ವತಃ ಸಮಭಿದ್ರುತಾಃ ।
ಆರಕ್ಷಸ್ಥಾ ವಿರೂಪಾಕ್ಷಾಃ ಸಹಸಾ ವಿಪ್ರದುದ್ರುವುಃ ॥
ಅನುವಾದ
ಪಂಜುಗಳಿಂದ ಸಮಸ್ತ ವಾನರರು ಸುತ್ತಲಿಂದ ಆಕ್ರಮಣ ಮಾಡಿದಾಗ ದ್ವಾರರಕ್ಷಕರಾದ ವಿರೂಪ ಕಣ್ಣುಗಳುಳ್ಳ ರಾಕ್ಷಸರೆಲ್ಲರೂ ಪಲಾಯನ ಮಾಡಿದರು.॥5॥
ಮೂಲಮ್ - 6
ಗೋಪುರಾಟ್ಟಪ್ರತೋಲೀಷು ಚರ್ಯಾಸು ವಿವಿಧಾಸು ಚ ।
ಪ್ರಾಸಾದೇಷು ಚ ಸಂಹೃಷ್ಟಾಃ ಸಸೃಜುಸ್ತೇ ಹುತಾಶನಮ್ ॥
ಅನುವಾದ
ಒಳಗೆ ನುಗ್ಗಿದ ವಾನರರು ಮಹಾದ್ವಾರಗಳಲ್ಲಿ, ಮಹಡಿ ಮನೆಗಳಿಗೆ, ರಾಜಬೀದಿಗಳಲ್ಲಿ, ಓಣಿಗಳಲ್ಲಿ ಭವನಗಳಲ್ಲಿ ಬೆಂಕಿಯಿಟ್ಟರು.॥6॥
ಮೂಲಮ್ - 7
ತೇಷಾಂ ಗೃಹಸಹಸ್ರಾಣಿ ದದಾಹ ಹುತಭುಕ್ತದಾ ।
ಪ್ರಾಸಾದಾಃ ಪರ್ವತಾಕಾರಾಃ ಪತಂತಿ ಧರಣೀತಲೇ ॥
ಅನುವಾದ
ವಾನರರು ಹಚ್ಚಿದ ಬೆಂಕಿಯು ಸಾವಿರಾರು ಮನೆಗಳನ್ನು ಸುಟ್ಟುಹಾಕಿತು, ಪರ್ವತಾಕಾರ ಪ್ರಾಸಾದಗಳು ಧರಾಶಾಯಿಯಾದವು.॥7॥
ಮೂಲಮ್ - 8
ಅಗುರುರ್ದಹ್ಯತೇ ತತ್ರ ಪರಂ ಚೈವ ಸುಚಂದನಮ್ ।
ವೌಕ್ತಿಕಾ ಮಣಯಃ ಸ್ನಿಗ್ಧಾ ವಜ್ರಂ ಚಾಪಿ ಪ್ರವಾಲಕಮ್ ॥
ಅನುವಾದ
ಕೆಲವೆಡೆ ಅಗರುಗಳೂ, ಉತ್ತಮ ಚಂದನಗಳೂ, ಮುತ್ತುಗಳೂ, ಸುಂದರಮಣಿ, ವಜ್ರ, ಹವಳ ಹೀಗೆ ಸುಟ್ಟುಭಸ್ಮವಾಗಿ ಹೋದುವು.॥8॥
ಮೂಲಮ್ - 9
ಕ್ಷೌಮಂ ಚ ದಹ್ಯತೇ ತತ್ರ ಕೌಶೇಯಂ ಚಾಪಿ ಶೋಭನಮ್ ।
ಆವಿಕಂ ವಿವಿಧಂ ಚೌರ್ಣಂ ಕಾಂಚನಂ ಭಾಂಡಮಾಯುಧಮ್ ॥
ಅನುವಾದ
ಮಹಾಸೌಧಗಳಲ್ಲಿದ್ದ ಪೀತಾಂಬರಗಳೂ, ರೇಶ್ಮೆವಸ್ತ್ರಗಳೂ, ಕಂಬಳಿಗಳೂ, ಉಣ್ಣೆಯ ಬಟ್ಟೆಗಳೂ, ಸುವರ್ಣದ ಆಭರಣಗಳೂ, ಅಸ್ತ್ರ-ಶಸ್ತ್ರಗಳೂ ಸುಟ್ಟುಹೋದುವು.॥9॥
ಮೂಲಮ್ - 10
ನಾನಾ ವಿಕೃತ ಸಂಸ್ಥಾನಂ ವಾಜಿಭಾಂಡ ಪರಿಚ್ಛದಮ್ ।
ಗಜಗ್ರೈವೇಯಕಕ್ಷ್ಯಾಶ್ಚ ರಥಭಾಂಡಾಶ್ಚ ಸಂಸ್ಕೃತಾನ್ ॥
ಅನುವಾದ
ಹಲವಾರು ಆಕಾರಗಳಲ್ಲಿದ್ದ ಕುದುರೆಗಳ ಜೀನು, ಕಡಿವಾಣ ಮುಂತಾದ ಉಪಕರಣಗಳು, ಆನೆಗಳ ಕಂಠಾಭರಣ, ಅವುಗಳನ್ನು ಕಟ್ಟುವ ಹಗ್ಗಗಳು, ಸುಂದರವಾದ ರಥದ ಉಪಕರಣಗಳು ಇವೆಲ್ಲವೂ ಭಸ್ಮವಾದುವು.॥10॥
ಮೂಲಮ್ - 11
ತನುತ್ರಾಣಿ ಚ ಯೋಧಾನಾಂ ಹಸ್ತ್ಯಶ್ವಾನಾಂ ಚ ವರ್ಮ ಚ ।
ಖಡ್ಗಾ ಧನೂಂಷಿ ಜ್ಯಾಬಾಣಾಸ್ತೋಮರಾಂಕುಶ ಶಕ್ತಯಃ ॥
ಮೂಲಮ್ - 12½
ರೋಮಜಂ ವಾಲಜಂ ಚರ್ಮ ವ್ಯಾಘ್ರಜಂ ಚಾಂಡಜಂ ಬಹು ।
ಮುಕ್ತಾಮಣಿವಿಚಿತ್ರಾಂಶ್ಚ ಪ್ರಾಸಾದಾಂಶ್ಚ ಸಮಂತತಃ ॥
ವಿವಿಧಾನಸಸಂಘಾತಾನಗ್ನಿರ್ದಹತಿ ತತ್ರ ವೈ ।
ಅನುವಾದ
ಯೋಧರ ಮತ್ತು ಆನೆ-ಕುದುರೆಗಳ ಕವಚಗಳು, ಖಡ್ಗ, ಧನುಸ್ಸು, ನಾಣಿಗಳು, ಬಾಣಗಳು, ತೋಮರ, ಅಂಕುಶ, ಶಕ್ತ್ಯಾಯುಧ, ಕಂಬಳಿಗಳು, ಚಾಮರಗಳು, ಆಸನೋಪಯೋಗೀ ವ್ಯಾಘ್ರಾಜಿನ, ಕಸ್ತೂರಿಯೇ ಮೊದಲಾದ ಸುಗಂಧ ದ್ರವ್ಯಗಳು, ಮುತ್ತು-ಮಣಿಗಳಿಂದ ನಿರ್ಮಿತ ಪ್ರಾಸಾದಗಳು, ವಿಧವಿಧವಾದ ಅಸ್ತ್ರ ಸಮೂಹಗಳು ಇವೆಲ್ಲವನ್ನು ಹರಡಿಕೊಂಡಿರುವ ಬೆಂಕಿಯು ಸುಟ್ಟುಹಾಕಿತು.॥11-12॥
ಮೂಲಮ್ - 13
ನಾನಾವಿಧಾನ್ ಗೃಹಾಂಶ್ಚಿತ್ರಾನ್ ದದಾಹ ಹುತಭುಕ್ತದಾ ॥
ಮೂಲಮ್ - 14
ಆವಾಸಾನ್ರಾಕ್ಷಸಾನಾಂ ಚ ಸರ್ವೇಷಾಂ ಗೃಹಗೃಧ್ನುನಾಮ್ ।
ಹೇಮಚಿತ್ರತನುತ್ರಾಣಾಂ ಸ್ರಗ್ಭಾಂಡಾಂಬರಧಾರಿಣಾಮ್ ॥
ಅನುವಾದ
ಆಗ ಅಗ್ನಿಯು ನಾನಾ ವಿಧವಾದ ವಿಚಿತ್ರ ಮನೆಗಳನ್ನು ಸುಡಲು ಪ್ರಾರಂಭಿಸಿತು. ಮನೆಯಲ್ಲೇ ಆಸಕ್ತರಾಗಿದ್ದ ಸುವರ್ಣಮಯ ಕವಚಗಳನ್ನು ತೊಟ್ಟಿದ್ದ, ವಸ್ತ್ರಾಭರಣಗಳಿಂದ ಅಲಂಕೃತರಾಗಿದ್ದ ರಾಕ್ಷಸರನ್ನು ಅವರ ಮನೆಗಳನ್ನು ಅಗ್ನಿಯು ದಹಿಸಿಬಿಟ್ಟಿತು.॥13-14॥
ಮೂಲಮ್ - 15
ಸೀಧುಪಾನಚಲಾಕ್ಷಾಣಾಂ ಮದವಿಹ್ವಲಗಾಮಿನಾಮ್ ।
ಕಾಂತಾಲಂಬಿತವಸ್ತ್ರಾಣಾಂ ಶತ್ರುಸಂಜಾತಮನ್ಯುನಾಮ್ ॥
ಮೂಲಮ್ - 16
ಗದಾಶೂಲಾಸಿಹಸ್ತಾನಾಂ ಖಾದತಾಂ ಪಿಬತಾಮಪಿ ।
ಶಯನೇಷು ಮಹಾರ್ಹೇಷು ಪ್ರಸುಪ್ತಾನಾಂ ಪ್ರಿಯೈಃ ಸಹ ॥
ಮೂಲಮ್ - 17½
ತ್ರಸ್ತಾನಾಂ ಗಚ್ಛತಾಂ ತೂರ್ಣಂ ಪುತ್ರಾನಾದಾಯ ಸರ್ವತಃ ।
ತೇಷಾಂ ಶತಸಹಸ್ರಾಣಿ ತದಾ ಲಂಕಾನಿವಾಸಿನಾಮ್ ॥
ಅದಹತ್ ಪಾವಕಸ್ತತ್ರ ಜಜ್ವಾಲ ಚ ಪುನಃ ಪುನಃ ।
ಅನುವಾದ
ಮದ್ಯಪಾನ ದಿಂದ ಕಣ್ಣುಗಳು ಚಂಚಲರಾಗಿದ್ದ, ಅಮಲಿನಲ್ಲಿ ವಿಹ್ವಲರಾಗಿ ತೂರಾಡುತ್ತಿದ್ದ, ಯಾರ ವಸಗಳನ್ನು ಅವನ ಪ್ರೇಯಸಿ ಹಿಡಿದೆಳೆಯುತ್ತಿದ್ದಳೋ, ಶತ್ರುಗಳ ಮೇಲೆ ಕುಪಿತರಾಗಿದ್ದ, ಯಾರ ಕೈಗಳಲ್ಲಿ ಗದೆ, ಖಡ್ಗ, ಶೂಲಗಳು ಶೋಭಿಸುತ್ತಿದ್ದವೋ, ಯಾರು ಭಕ್ಷ-ಭೋಜ್ಯಾದಿಗಳಲ್ಲಿ ತೊಡಗಿದ್ದರೋ, ಯಾರು ಅಮೂಲ್ಯ ಶಯ್ಯೆಗಳಲ್ಲಿ ತಮ್ಮ ಪ್ರಾಣವಲ್ಲಭೆಯರ ಸಂಗದಲ್ಲಿ ಇದ್ದರೋ, ಅಗ್ನಿಯ ಭಯದಿಂದ ಮಕ್ಕಳನ್ನು ಎತ್ತಿಕೊಂಡು ಓಡುತ್ತಿದ್ದರೋ, ಇಂತಹ ಲಕ್ಷಾಂತರ ಲಂಕಾ ನಿವಾಸಿಗಳನ್ನು ಬೆಂಕಿಯು ಸುಟ್ಟು ಭಸ್ಮವಾಗಿಸುತ್ತಾ, ಪುನಃ ಪುನಃ ಪ್ರಜ್ವಲಿಸುತ್ತಲೇ ಇತ್ತು.॥15-17½॥
ಮೂಲಮ್
(ಶ್ಲೋಕ - 18)
ಸಾರವಂತಿ ಮಹಾರ್ಹಾಣಿ ಗಂಭೀರಗುಣವಂತಿ ಚ ॥
ಮೂಲಮ್ - 19
ಹೇಮಚಂದ್ರಾರ್ಧ ಚಂದ್ರಾಣಿ ಚಂದ್ರಶಾಲೋನ್ನತಾನಿ ಚ ।
ತತ್ರ ಚಿತ್ರಗವಾಕ್ಷಾಣಿ ಸಾಧಿಷ್ಠಾನಾನಿ ಸರ್ವಶಃ ॥
ಮೂಲಮ್ - 20½
ಮಣಿವಿದ್ರುಮಚಿತ್ರಾಣಿ ಸ್ಪೃಶಂತೀವ ದಿವಾಕರಮ್ ।
ಕ್ರೌಂಚಬರ್ಹಿಣವೀಣಾನಾಂ ಭೂಷಣಾನಾಂ ಚ ನಿಃಸ್ವನೈಃ ॥
ನಾದಿತಾನ್ಯಚಲಾಭಾನಿ ವೇಶ್ಮಾನ್ಯಗ್ನಿರ್ದದಾಹ ಸಃ ।
ಅನುವಾದ
ಬಹಳ ಭದ್ರವಾಗಿದ್ದ ಬಹುಮೂಲ್ಯದ, ಗಾಂಭೀರ್ಯದಿಂದ ಸಂಪನ್ನರಾಗಿದ್ದ, ಅನೇಕ ಕೊಠಡಿಗಳಿಂದ ಕೂಡಿದ್ದು ಅತ್ಯಂತ ಗಹನವಾಗಿದ್ದ, ಸುಂದರ ಸುವರ್ಣಮಯವಾಗಿದ್ದ, ಅರ್ಧಚಂದ್ರಾ ಕಾರದಲ್ಲಿಯೂ, ಪೂರ್ಣಚಂದ್ರಾಕಾರದಲ್ಲಿಯೂ ಇದ್ದ, ಶಿರೋಗೃಹಗಳಿಂದ ಎತ್ತರವಾಗಿ ಕಾಣುತ್ತಿದ್ದ, ಹಾಸಿಗೆ ಪೀಠೋಪಕರಣ ಮುಂತಾದ ಗೃಹೋಪಯೋಗಿ ವಸ್ತುಗಳಿಂದ ಸಂಪನ್ನವಾಗಿದ್ದ, ಮಣಿಗಳಿಂದಲೂ, ಹವಳಗಳಿಂದಲೂ ಚಿತ್ರಿತವಾಗಿದ್ದ, ಸೂರ್ಯನನ್ನು ಸ್ಪರ್ಶಿಸುವವೋ ಎಂಬಂತೆ ಕಾಣುತ್ತಿದ್ದ, ಕ್ರೌಂಚ-ನವಿಲುಗಳಿಂದಲೂ, ವೀಣೆಯ ಸುಮಧುರ ಧ್ವನಿಯಿಂದಲೂ, ಒಡವೆಗಳ ಝಣಝಣ ಶಬ್ದದಿಂದಲೂ ತುಂಬಿದ್ದ, ಪರ್ವತೋಪಮ ಮಹಾಸೌಧಗಳನ್ನು ಪ್ರಜ್ವಲಿತ ಅಗ್ನಿಯು ಸುಟ್ಟುಹಾಕಿತು.॥18-20½॥
ಮೂಲಮ್ - 21½
ಜ್ವಲನೇನ ಪರೀತಾನಿ ತೋರಣಾನಿ ಚಕಾಶಿರೇ ॥
ವಿದ್ಯುದ್ಭಿರಿವ ನದ್ಧಾನಿ ಮೇಘಜಾಲಾನಿ ಧರ್ಮಗೇ ।
ಅನುವಾದ
ಜ್ವಾಲೆಗಳಿಂದ ಸುತ್ತುವರೆದ ಲಂಕೆಯ ಮಹಾದ್ವಾರಗಳು ಗ್ರೀಷ್ಮಋತುವಿನ ಮಿಂಚಿನಿಂದ ಕೂಡಿದ ಮೇಘಸಮೂಹಗಳಂತೆ ಪ್ರಕಾಶಿಸುತ್ತಿದ್ದವು.॥21½॥
ಮೂಲಮ್ - 22½
ಜ್ವಲನೇನ ಪರೀತಾನಿ ಗೃಹಾಣಿ ಪ್ರಚಕಾಶಿರೇ ॥
ದಾವಾಗ್ನಿದೀಪ್ತಾನಿ ಯಥಾ ಶಿಖರಾಣಿ ಮಹಾಗಿರೇಃ ।
ಅನುವಾದ
ಮಹಾಪರ್ವತದ ಶಿಖರಗಳು ಕಾಡ್ಗಿಚ್ಚಿನಿಂದ ಪ್ರಜ್ವಲಿಸುವಂತೆ ಅಗ್ನಿಯ ಜ್ವಾಲೆಯಿಂದ ಸುತ್ತುವರಿದ ಲಂಕೆಯ ಮನೆಗಳು ಪ್ರಕಾಶಿಸುತ್ತಿದ್ದವು.॥22½॥
ಮೂಲಮ್ - 23½
ವಿಮಾನೇಷು ಪ್ರಸುಪ್ತಾಶ್ಚ ದಹ್ಯಮಾನಾ ವರಾಂಗನಾಃ ॥
ತ್ಯಕ್ತಾ ಭರಣಸಂಯೋಗಾ ಹಾಹೇತ್ಯುಚ್ಛೈರ್ವಿಚುಕ್ರುಶುಃ ।
ಅನುವಾದ
ಏಳು ಅಂತಸ್ತಿನ ಭವನಗಳಲ್ಲಿ ಮಲಗಿದ್ದ ಸುಂದರಿಯರು ಬೆಂಕಿಯಿಂದ ದಹಿಸಲ್ಪಡುತ್ತಿರುವಾಗ ಮೈಮೇಲಿನ ಆಭೂಷಣಗಳನ್ನು ಕಿತ್ತೆಸೆದು ಅಯ್ಯೋ! ಶಿವನೇ! ಎಂದು ಗಟ್ಟಿಯಾಗಿ ಬೊಬ್ಬಿಟ್ಟರು.॥23½॥
ಮೂಲಮ್ - 24½
ತತ್ರ ಚಾಗ್ನಿಪರೀತಾನಿ ನಿಪೇತುರ್ಭವನಾನ್ಯಪಿ ॥
ವಜ್ರಿವಜ್ರಹತಾನೀವ ಶಿಖರಾಣಿ ಮಹಾಗಿರೇಃ ।
ಅನುವಾದ
ಇಂದ್ರನ ವಜ್ರಾಯುಧದಿಂದ ಕತ್ತರಿಸಲ್ಪಟ್ಟ ಪರ್ವತ ಶಿಖರಗಳು ಕೆಳಕ್ಕೆ ಬೀಳುತ್ತಿರುವಂತೆ, ಅಗ್ನಿಯಿಂದ ಸುತ್ತುವರಿದ ಅನೇಕ ಭವನಗಳು ಕುಸಿದುಬಿದ್ದವು.॥24½॥
ಮೂಲಮ್ - 25½
ತಾನಿ ನಿರ್ದಹ್ಯಮಾನಾನಿ ದೂರತಃ ಪ್ರಚಕಾಶಿರೇ ॥
ಹಿಮವಚ್ಛಿಕರಾಣೀವ ದಹ್ಯಮಾನಾನಿ ಸರ್ವಶಃ ।
ಅನುವಾದ
ಧಗಧಗನೆ ಉರಿಯುತ್ತಿದ್ದ ಗಗನಚುಂಬಿ ಭವನಗಳು ದೂರದಿಂದ ನೋಡಿದವರಿಗೆ ಹಿಮಾಲಯದ ಶಿಖರವೇ ಎಲ್ಲೆಡೆಗಳಿಂದ ಉರಿಯುತ್ತಿದೆಯೋ ಎಂದು ಅನಿಸುತ್ತಿತ್ತು.॥25½॥
ಮೂಲಮ್ - 26½
ಹರ್ಮ್ಯಾಗ್ರೈರ್ದಹ್ಯಮಾನೈಶ್ಚ ಜ್ವಾಲಾಪ್ರಜ್ವಲಿತೈರಪಿ ॥
ರಾತ್ರೌ ಸಾ ದೃಶ್ಯತೇ ಲಂಕಾ ಪುಷ್ಪಿತೈರಿವ ಕಿಂಶುಕೈಃ ।
ಅನುವಾದ
ಜ್ವಾಲೆಗಳಿಂದ ಪ್ರಜ್ವಲಿಸುತ್ತಿದ್ದ, ಉರಿಯುತ್ತಿರುವ ಭವನಗಳ ಮೇಲ್ಭಾಗದಿಂದ ಕೂಡಿದ್ದ ಲಂಕೆಯು ರಾತ್ರಿಯಲ್ಲಿ ಅರಳಿ ನಿಂತ ಮುತ್ತುಗದ ಪುಷ್ಪಗಳಂತೆ ಕಂಡುಬರುತ್ತಿತ್ತು.॥26½॥
ಮೂಲಮ್ - 27
ಹಸ್ತ್ಯಧ್ಯಕ್ಷೈರ್ಗಜೈರ್ಮುಕ್ತೈರ್ಮುಕ್ತೈಶ್ಚ ತುರಗೈರಪಿ ।
ಬಭೂವ ಲಂಕಾ ಲೋಕಾಂತೇ ಭ್ರಾಂತಗ್ರಾಹ ಇವಾರ್ಣವಃ ॥
ಅನುವಾದ
ಗಜದಳದ ಮುಖ್ಯಸ್ಥರು ಆನೆಗಳನ್ನು, ಅಶ್ವದಳದ ಮುಖ್ಯಸ್ಥರು ಕುದುರೆಗಳನ್ನು ಬಿಚ್ಚಿಬಿಟ್ಟರು. ಅವು ಭಯದಿಂದ ದಿಕ್ಕಾಪಾಲಾಗಿ ಓಡುತ್ತಿದ್ದವು. ಇದರಿಂದ ಲಂಕೆಯು ಪ್ರಳಯಕಾಲದಲ್ಲಿ ಭ್ರಾಂತರಾದ ಮೊಸಳೆಗಳು ಅಲೆಯುತ್ತಿದ್ದ ಸಮುದ್ರದಂತೆ ಕಾಣುತ್ತಿತ್ತು.॥27॥
ಮೂಲಮ್ - 28
ಅಶ್ವಂ ಮುಕ್ತಂ ಗಜೋ ದೃಷ್ಟ್ವಾಕ್ವಚಿದ್ಭೀತೋಽಪಸರ್ಪತಿ ।
ಭೀತೋ ಭೀತಂ ಗಜಂ ದೃಷ್ಟ್ವಾ ಕ್ವಚಿದಶ್ವೋನಿವರ್ತತೇ ॥
ಅನುವಾದ
ಕೆಲವೆಡೆ ಬಿಚ್ಚಿ ಓಡುತ್ತಿದ್ದ ಕುದುರೆ ಯನ್ನು ನೋಡಿ ಆನೆಗಳು, ಕೆಲವೆಡೆ ಆನೆಯನ್ನು ನೋಡು ಕುದುರೆಗಳು ಹೆದರಿ ಓಡತೊಡಗಿದವು.॥28॥
ಮೂಲಮ್ - 29
ಲಂಕಾಯಾಂ ದಹ್ಯಮಾನಾಯಾಂ ಶುಶುಭೇ ಚ ಮಹೋದಧಿಃ ।
ಛಾಯಾಸಂಸಕ್ತಸಲಿಲೋ ಲೋಹಿತೋದ ಇವಾರ್ಣವಃ ॥
ಅನುವಾದ
ಲಂಕೆಯು ಹತ್ತಿ ಉರಿಯುವಾಗ ಸಮುದ್ರದಲ್ಲಿ ಬೆಂಕಿಯ ಜ್ವಾಲೆಗಳ ಪ್ರತಿಬಿಂಬ ಬಿದ್ದಿತ್ತು. ಅದರಿಂದ ಆ ಮಹಾಸಾಗರವು ಕೆಂಪು ನೀರಿನಿಂದ ತುಂಬಿದ ಕೆಂಪುಸಮುದ್ರದಂತೆ ಶೋಭಿಸುತ್ತಿತ್ತು.॥29॥
ಮೂಲಮ್ - 30
ಸಾ ಬಭೂವ ಮುಹೂರ್ತೇನ ಹರಿಭಿರ್ದೀಪಿತಾ ಪುರೀ ।
ಲೋಕಸ್ಯಾಸ್ಯ ಕ್ಷಯೇ ಘೋರೇ ಪ್ರದೀಪ್ತೇವ ವಸುಂಧರಾ ॥
ಅನುವಾದ
ವಾನರರು ಹಚ್ಚಿದ ಬೆಂಕಿಯಿಂದ ಲಂಕೆಯು ಎರಡೇ ಗಳಿಗೆಯಲ್ಲಿ ಜಗತ್ತಿನ ಘೋರ ಸಂಹಾರದ ಸಮಯ ದಗ್ಧವಾದ ಪೃಥಿವಿಯಂತೆ ಕಂಡುಬರುತ್ತಿತ್ತು.॥30॥
ಮೂಲಮ್ - 31
ನಾರೀಜನಸ್ಯ ಧೂಮೇನ ವ್ಯಾಪ್ತಸ್ಯೋಚ್ಛೈರ್ವಿನೇದುಷಃ ।
ಸ್ವನೋ ಜ್ವಲನತಪ್ತಸ್ಯ ಶುಶ್ರುವೇ ದಶಯೋಜನಮ್ ॥
ಅನುವಾದ
ಹೊಗೆಯಿಂದ ಮುಚ್ಚಿದ ಮತ್ತು ಬೆಂಕಿಯಿಂದ ಸಂತಪ್ತರಾಗಿ ಗಟ್ಟಿಯಾಗಿ ಆರ್ತನಾದ ಮಾಡುವ ಲಂಕೆಯ ನಾರಿಯರ ಕರುಣಕ್ರಂದನ ನೂರು ಯೋಜನದವರೆಗೆ ಕೇಳಿಸುತ್ತಿತ್ತು.॥31॥
ಮೂಲಮ್ - 32
ಪ್ರದಗ್ಧಕಾಯಾನಪರಾನ್ ರಾಕ್ಷಸಾನ್ನಿರ್ಗತಾನ್ಬಹಿಃ ।
ಸಹಸಾಭ್ಯುತ್ಪತಂತಿ ಸ್ಮ ಹರಯೋಽಥ ಯುಯುತ್ಸವಃ ॥
ಅನುವಾದ
ಸುಟ್ಟುಹೋದ ಶರೀರಗಳಿಂದ ನಗರದಿಂದ ಹೊರ ಬರುತ್ತಿದ್ದ ರಾಕ್ಷಸರ ಮೇಲೆ ಯುದ್ಧದ ಇಚ್ಛೆಯುಳ್ಳ ವಾನರರು ಧಾಳಿ ಮಾಡುತ್ತಿದ್ದರು.॥32॥
ಮೂಲಮ್ - 33
ಉದ್ಘುಷ್ಟಂ ವಾನರಾಣಾಂ ಚರಾಕ್ಷಸಾನಾಂ ಚ ನಿಃಸ್ವನಮ್ ।
ದಿಶೋ ದಶ ಸಮುದ್ರಂ ಚ ಪೃಥಿವೀಂ ಚ ವ್ಯನಾದಯತ್ ॥
ಅನುವಾದ
ವಾನರರ ಗರ್ಜನೆ ಮತ್ತು ರಾಕ್ಷಸರ ಆರ್ತನಾದದಿಂದ ದಶದಿಕ್ಕುಗಳು, ಸಮುದ್ರ, ಪೃಥಿವಿ ಪ್ರತಿಧ್ವನಿಸಿತು.॥33॥
ಮೂಲಮ್ - 34
ವಿಶಲ್ಯೌ ಚ ಮಹಾತ್ಮಾನೌ ತಾವುಭೌ ರಾಮಲಕ್ಷ್ಮಣೌ ।
ಅಸಂಭ್ರಾಂತೌ ಜಗೃಹತುಸ್ತೇ ಉಭೇ ಧನುಷೀ ವರೇ ॥
ಅನುವಾದ
ಇತ್ತ ಬಾಣಗಳು ಬಿದ್ದುಹೋಗಿ ಸ್ವಸ್ಥರಾದ ಮಹಾತ್ಮರಾದ ಶ್ರೀರಾಮ-ಲಕ್ಷ್ಮಣನು ಯಾವುದೇ ಗಾಬರಿ ಪಡದೆ ತಮ್ಮ ಶ್ರೇಷ್ಠ ಧನುಸ್ಸುಗಳನ್ನು ಕೈಗೊಂಡರು.॥34॥
ಮೂಲಮ್ - 35
ತತೋ ವಿಸ್ಘಾರಯಾಮಾಸ ರಾಮಶ್ಚ ಧನುರುತ್ತಮಮ್ ।
ಬಭೂವ ತುಮುಲಃ ಶಬ್ದೋ ರಾಕ್ಷಸಾನಾಂ ಭಯಾವಹಃ ॥
ಅನುವಾದ
ಆಗ ಶ್ರೀರಾಮನು ತನ್ನ ಧನುಷ್ಯವನ್ನು ಸೆಳೆದಾಗ ಭಯಂಕರ ಟಂಕಾರ ಧ್ವನಿ ಉಂಟಾಯಿತು. ಅದರಿಂದ ರಾಕ್ಷಸರು ಭಯಗೊಂಡರು.॥35॥
ಮೂಲಮ್ - 36
ಅಶೋಭತ ತದಾ ರಾಮೋ ಧನುರ್ವಿಸ್ಫಾರಯನ್ಮಹತ್ ।
ಭಗವಾನಿವ ಸಂಕ್ರುದ್ಧೋ ಭವೋ ವೇದಮಯಂ ಧನುಃ ॥
ಅನುವಾದ
ಶ್ರೀರಾಮಚಂದ್ರನು ತನ್ನ ವಿಶಾಲ ಧನುಸ್ಸನ್ನು ಸೆಳೆಯುವಾಗ, ತ್ರಿಪುರಾಸುರನ ಮೇಲೆ ಕುಪಿತನಾದ ಶಂಕರನು ತನ್ನ ವೇದಮಯ ಧನುಸ್ಸಿನ ಟಂಕಾರ ಮಾಡಿದಾಗ ಶೋಭಿಸುವಂತೆ ಶೋಭಿಸಿದನು.॥36॥
ಮೂಲಮ್ - 37
ಉದ್ಘುಷ್ಟಂ ವಾನರಾಣಾಂ ಚ ರಾಕ್ಷಸಾನಾಂ ಚ ನಿಃಸ್ವನಮ್ ।
ಜ್ಯಾಶಬ್ದಸ್ತಾವುಭೌ ಶಬ್ದಾವತಿ ರಾಮಸ್ಯ ಶುಶ್ರುವೇ ॥
ಅನುವಾದ
ವಾನರರ ಗರ್ಜನೆ, ರಾಕ್ಷಸರ ಕೋಲಾಹಲ ಇವೆರಡೂ ಶಬ್ದಗಳನ್ನು ಮೀರಿ ಶ್ರೀರಾಮನ ಧನುಷ್ಟಂಕಾರ ಕೇಳಿಸಿತು.॥37॥
ಮೂಲಮ್ - 38
ವಾನರೋದ್ಘುಷ್ಟಘೋಷಶ್ಚ ರಾಕ್ಷಸಾನಾಂ ಚ ನಿಃಸ್ವನಃ ।
ಜ್ಯಾಶಬ್ದಶ್ಚಾಪಿ ರಾಮಸ್ಯತ್ರಯಂ ವ್ಯಾಪ್ತ ದಿಶೋ ದಶ ॥
ಅನುವಾದ
ವಾನರರ ಗರ್ಜನೆ, ರಾಕ್ಷಸರ ಬೊಬ್ಬೆ ಮತ್ತು ಶ್ರೀರಾಮನ ಧನುಷ್ಟಂಕಾರ ಈ ಮೂರು ಪ್ರಕಾರದ ಶಬ್ದಗಳು ದಶದಿಕ್ಕುಗಳಲ್ಲಿ ವ್ಯಾಪ್ತವಾದವು.॥38॥
ಮೂಲಮ್ - 39
ತಸ್ಯ ಕಾರ್ಮುಕನಿಮುಕ್ತೈಃ ಶರೈಸ್ತತ್ಪುರ ಗೋಪುರಮ್ ।
ಕೈಲಾಸಶೃಂಗ ಪ್ರತಿಮಂ ವಿಕೀರ್ಣಮಪತದ್ಭುವಿ ॥
ಅನುವಾದ
ಶ್ರೀರಾಮನ ಧನುಸ್ಸಿನಿಂದ ಚಿಮ್ಮಿದ ಬಾಣಗಳಿಂದ ಕೈಲಾಸ ಶಿಖರದಂತೆ ಎತ್ತರವಾಗಿದ್ದ ಲಂಕಾನಗರಿಯ ಮಹಾದ್ವಾರಗಳು ಭಿನ್ನಭಿನ್ನವಾಗಿ ನೆಲದಲ್ಲಿ ಬಿದ್ದುಹೋದುವು.॥39॥
ಮೂಲಮ್ - 40
ತತೋ ರಾಮಶರಾನ್ದೃಷ್ಟ್ವಾ ವಿಮಾನೇಷು ಗೃಹೇಷು ಚ ।
ಸಂನಾಹೋ ರಾಕ್ಷಸೇಂದ್ರಾಣಾಂ ತುಮುಲಃ ಸಮಪದ್ಯತ ॥
ಅನುವಾದ
ಏಳು ಅಂತಸ್ತಿನ ಮನೆಗಳ ಮೇಲೆ ಹಾಗೂ ಇತರ ಮನೆಗಳ ಮೇಲೆ ಬೀಳುತ್ತಿರುವ ಶ್ರೀರಾಮನ ಬಾಣಗಳನ್ನು ನೋಡಿ ರಾಕ್ಷಸರು ಯುದ್ಧಕ್ಕಾಗಿ ಭಯಂಕರ ಸಿದ್ಧತೆ ಮಾಡಿದರು.॥40॥
ಮೂಲಮ್ - 41
ತೇಷಾಂ ಸಂನಹ್ಯಮಾನಾನಾಂ ಸಿಂಹನಾದಂ ಚ ಕುರ್ವತಾಮ್ ।
ಶರ್ವರೀ ರಾಕ್ಷಸೇಂದ್ರಾಣಾಂ ರೌದ್ರೀವ ಸಮಪದ್ಯತ ॥
ಅನುವಾದ
ನಡುಬಿಗಿದು, ಕವಚಾದಿಗಳನ್ನು ತೊಟ್ಟು ಯುದ್ಧಕ್ಕೆ ಸಿದ್ಧರಾಗಿ ಸಿಂಹನಾದ ಮಾಡುತ್ತಿದ್ದ ರಾಕ್ಷಸರಿಗೆ ಆ ರಾತ್ರಿಯು ಕಾಲರಾತ್ರಿಯಂತೆ ಬಂದೊದಗಿತು.॥41॥
ಮೂಲಮ್ - 42
ಆದಿಷ್ಟಾ ವಾನರೇಂದಾಸ್ತು ಸುಗ್ರೀವೇಣ ಮಹಾತ್ಮನಾ ।
ಆಸನ್ನಂ ದ್ವಾರಮಾಸಾದ್ಯ ಯುಧ್ಯಧ್ವಂ ಚ ಪ್ಲವಂಗಮಾಃ ॥
ಅನುವಾದ
ಆಗ ಮಹಾತ್ಮಾ ಸುಗ್ರೀವನು ಮುಖ್ಯ ಮುಖ್ಯ ವಾನರರಿಗೆ ವಾನರವೀರರೇ! ನೀವೆಲ್ಲರೂ ತಮ್ಮ ತಮ್ಮ ಸಮೀಪದ್ಲಲಿರುವ ದ್ವಾರಗಳಿಗೆ ಹೋಗಿ ಯುದ್ಧಮಾಡಿರಿ, ಎಂದು ಆಜ್ಞಾಪಿಸಿದನು.॥42॥
ಮೂಲಮ್ - 43
ಯಶ್ಚ ವೋ ವಿತಥಂ ಕುರ್ಯಾ ತ್ತತ್ರ ತತ್ರಾಪ್ಯುಪಸ್ಥಿತಃ ।
ಸ ಹಂತವ್ಯೋಽಭಿಸಂಪ್ಲುತ್ಯ ರಾಜಶಾಸನದೂಷಕಃ ॥
ಅನುವಾದ
ನಿಮ್ಮಲ್ಲಿ ಯಾರಾದರೂ ಯುದ್ಧಭೂಮಿಯಲ್ಲಿ ಉಪಸ್ಥಿತನಾಗಿ, ಯುದ್ಧದಿಂದ ಹಿಮ್ಮೆಟ್ಟಿ ಓಡಿಹೋದರೆ ಅವನನ್ನು ನೀವು ಹಿಡಿದು ಕೊಂದುಹಾಕಿರಿ; ಏಕೆಂದರೆ ಅವನು ರಾಜಾಜ್ಞೆ ಯನ್ನು ಉಲ್ಲಂಘಿಸಿರುವವನು.॥43॥
ಮೂಲಮ್ - 44
ತೇಷು ವಾನರಮುಖ್ಯೇಷು ದೀಪ್ತೋಲ್ಕೋಜ್ಜ್ವಲಪಾಣಿಷು ।
ಸ್ಥಿತೇಷು ದ್ವಾರಮಾಶ್ರಿತ್ಯ ರಾವಣಂ ಕ್ರೋಧ ಆವಿಶತ್ ॥
ಅನುವಾದ
ಈ ಸುಗ್ರೀವಾಜ್ಞೆಗನುಸಾರ ಮುಖ್ಯಮುಖ್ಯರಾದ ವಾನರರುಗಳು ಉರಿಯುವ ಪಂಜನ್ನು ಹಿಡಿದು ನಗರದ್ವಾರಗಳಲ್ಲಿ ನಿಂತುಕೊಂಡಾಗ, ರಾವಣನಿಗೆ ಭಾರೀ ಕೋಪಬಂತು.॥44॥
ಮೂಲಮ್ - 45
ತಸ್ಯ ಜೃಂಭಿತವಿಕ್ಷೇಪಾದ್ ವ್ಯಾಮಿಶ್ರಾ ವೈ ದಿಶೋ ದಶ ।
ರೂಪವಾನಿವ ರುದ್ರಸ್ಯ ಮನ್ಯುರ್ಗಾತ್ರೇಷ್ವದೃಶ್ಯತ ॥
ಅನುವಾದ
ಅವನು ಆಕಳಿಸುತ್ತಾ ಮೈಮುರಿದಾಗ ದಶದಿಕ್ಕುಗಳು ವ್ಯಾಕುಲಗೊಂಡವು. ಅವನು ಕಾಲರುದ್ರನಲ್ಲಿ ಪ್ರಕಟವಾದ ಮೂರ್ತಿಮಂತ ಕ್ರೋಧದಂತೆ ಕಂಡುಬರುತ್ತಿದ್ದನು.॥45॥
ಮೂಲಮ್ - 46
ಸ ಕುಂಭಂ ಚ ನಿಕುಂಭಂ ಚ ಕುಂಭಕರ್ಣಾತ್ಮಜಾವುಭೌ ।
ಪ್ರೇಷಯಾಮಾಸ ಸಂಕ್ರುದ್ಧೋ ರಾಕ್ಷಸೈರ್ಬಹುಭಿಃ ಸಹ ॥
ಅನುವಾದ
ಕ್ರೋಧಗೊಂಡ ರಾವಣನು ಕುಂಭಕರ್ಣನ ಮಕ್ಕಳಾದ ಕುಂಭ ಮತ್ತು ನಿಕುಂಭರನ್ನು ಅನೇಕ ರಾಕ್ಷಸರೊಂದಿಗೆ ಯುದ್ಧಕ್ಕೆ ಕಳಿಸಿದನು.॥46॥
ಮೂಲಮ್ - 47
ಯೂಪಾಕ್ಷಃ ಶೋಣಿತಾಕ್ಷಶ್ಚ ಪ್ರಜಂಘಕಂಪನಸ್ತಥಾ ।
ನಿರ್ಯಯುಃ ಕೌಂಭಕರ್ಣಿಭ್ಯಾಂ ಸಹ ರಾವಣಶಾಸನಾತ್ ॥
ಅನುವಾದ
ರಾವಣನ ಆಜ್ಞೆಯಂತೆ ಯೂಪಾಕ್ಷ, ಶೋಣಿತಾಕ್ಷ, ಪ್ರಜಂಘ ಮತ್ತು ಕಂಪನ ಇವರೂ ಕೂಡ ಕುಂಭಕರ್ಣನ ಇಬ್ಬರು ಪುತ್ರರೊಂದಿಗೆ ಯುದ್ಧಕ್ಕಾಗಿ ಹೊರಟರು.॥47॥
ಮೂಲಮ್ - 48
ಶಶಾಸ ಚೈವ ತಾನ್ಸರ್ವಾನ್ ರಾಕ್ಷಸಾನ್ಸುಮಹಾಬಲಾನ್ ।
ರಾಕ್ಷಸಾ ಗಚ್ಛ ತಾದ್ಯೈವ ಸಿಂಹನಾದಂ ಚ ನಾದಯನ್ ॥
ಅನುವಾದ
ಆಗ ಸಿಂಹದಂತೆ ಗರ್ಜಿಸುತ್ತಾ- ‘ವೀರನಿಶಾಚರರೇ! ಇದೇ ರಾತ್ರೆ ನೀವು ಯುದ್ಧಕ್ಕಾಗಿ ಹೋಗಿರಿ’ ಎಂದು ಸಮಸ್ತ ಮಹಾಬಲಿ ರಾಕ್ಷಸರಿಗೆ ಆದೇಶ ಕೊಟ್ಟನು.॥48॥
ಮೂಲಮ್ - 49
ತತಸ್ತು ಚೋದಿತಾಸ್ತೇನ ರಾಕ್ಷಸಾ ಜ್ವಲಿತಾಯುಧಾಃ ।
ಲಂಕಾಯಾ ನಿರ್ಯಯುರ್ವೀರಾಃ ಪ್ರಣದಂತಃ ಪುನಃ ಪುನಃ ॥
ಅನುವಾದ
ರಾವಣನ ಆಜ್ಞೆ ಪಡೆದು ಆ ವೀರ ರಾಕ್ಷಸರು ಕೈಗಳಲ್ಲಿ ಹೊಳೆಯುವ ಅಸ್ತ್ರ-ಶಸ್ತ್ರಗಳನ್ನು ಧರಿಸಿ ಪದೇಪದೇ ಗರ್ಜಿಸುತ್ತಾ ಲಂಕೆ ಯಿಂದ ಹೊರಟರು.॥49॥
ಮೂಲಮ್ - 50
ರಕ್ಷಸಾಂ ಭೂಷಣಸ್ಥಾಭಿರ್ಭಾಭಿಃ ಸ್ವಾಭಿಶ್ಚ ಸರ್ವಶಃ ।
ಚಕ್ರುಸ್ತೇ ಸಪ್ರಭಂ ವ್ಯೋಮ ಹರಯಶ್ಚಾಗ್ನಿಭಿಃ ಸಹ ॥
ಅನುವಾದ
ರಾಕ್ಷಸರು ತಮ್ಮ ಆಭೂಷಣಗಳಿಂದ ಮತ್ತು ತಮ್ಮ ಪ್ರಭೆಯಿಂದ, ವಾನರರ ಪಂಜಿನ ಬೆಳಕಿನಿಂದ ಅಲ್ಲಿಯ ಆಕಾಶವನ್ನು ಪ್ರಕಾಶಮಯವಾಗಿಸಿದರು.॥50॥
ಮೂಲಮ್ - 51
ತತ್ರ ತಾರಾಧಿಪಸ್ಯಾಭಾ ತಾರಾಣಾಂ ಚ ತಥೈವ ಚ ।
ತಯೋರಾಭರಣಾಭಾ ಚ ಜ್ವಲಿತಾ ದ್ಯಾಮಭಾಸಯತ್ ॥
ಅನುವಾದ
ಚಂದ್ರನ, ನಕ್ಷತ್ರಗಳ ಮತ್ತು ಎರಡೂ ಸೈನ್ಯಗಳ ಆಭೂಷಣಗಳ ಪ್ರಜ್ವಲಿತ ಪ್ರಭೆಯಿಂದ ಆಕಾಶವನ್ನು ಪ್ರಕಾಶಿತಗೊಳಿಸಿತು.॥51॥
ಮೂಲಮ್ - 52
ಚಂದ್ರಾಭಾ ಭೂಷಣಾಭಾ ಚ ಗೃಹಾಣಾಂ ಜ್ವಲತಾಂ ಚ ಭಾ ।
ಹರಿರಾಕ್ಷಸಸೈನ್ಯಾನಿ ಭ್ರಾಜಯಾಮಾಸ ಸರ್ವತಃ ॥
ಅನುವಾದ
ಚಂದ್ರನ ಬೆಳದಿಂಗಳು, ಆಭರಣಗಳ ಪ್ರಭೆ, ಪ್ರಕಾಶಮಾನ ಗ್ರಹಗಳ ದೀಪ್ತಿಯಿಂದ ಎಲ್ಲ ಕಡೆಗಳಿಂದ ರಾಕ್ಷಸ ಮತ್ತು ವಾನರರ ಸೈನ್ಯಗಳನ್ನು ಬೆಳಗುತ್ತಿದ್ದವು.॥52॥
ಮೂಲಮ್ - 53
ತತ್ರ ಚಾರ್ಧ್ವಪ್ರದೀಪ್ತಾನಾಂ ಗೃಹಾಣಾಂ ಸಾಗರಃ ಪುನಃ ।
ಭಾಭಿಃ ಸಂಸಕ್ತಸಲಿಲಶ್ಚಲೋರ್ಮಿಃ ಶುಶುಭೇಽಧಿಕಮ್ ॥
ಅನುವಾದ
ಲಂಕೆಯಲ್ಲಿ ಅರ್ಧಸುಟ್ಟ ಗೃಹಗಳ ಪ್ರಭೆಯು ಜಲದಲ್ಲಿ ಪ್ರತಿಬಿಂಬಿತವಾಗಿ ಚಂಚಲವಾದ ಸಮುದ್ರವು ಹೆಚ್ಚು ಶೋಭಿಸತೊಡಗಿತು.॥53॥
ಮೂಲಮ್ - 54
ಪತಾಕಾಧ್ವಜ ಸಂಯುಕ್ತಮುತ್ತಮಾಸಿಪರಶ್ಚಧಮ್
ಭೀಮಾಶ್ವರಥಮಾತಂಗಂ ನಾನಾಪತ್ತಿಸಮಾಕುಲಮ್ ॥
ಮೂಲಮ್ - 55
ದೀಪ್ತಶೂಲಗದಾಖಡ್ಗಪ್ರಾಸತೋಮರ ಕಾರ್ಮುಕಮ್ ।
ತದ್ರಾಕ್ಷಸಬಲಂ ಭೀಮಂ ಘೋರವಿಕ್ರಮ ಪೌರುಷಮ್ ॥
ಅನುವಾದ
ರಾಕ್ಷಸರ ಆ ಭಯಂಕರ ಸೈನ್ಯವು ಧ್ವಜ-ಪತಾಕೆಗಳಿಂದ ಶೋಭಿಸುತ್ತಿತ್ತು. ಸೈನಿಕರ ಕೈಗಳಲ್ಲಿ ಉತ್ತಮ ಖಡ್ಗ, ಕೊಡಲಿಗಳು ಹೊಳೆಯುತ್ತಿದ್ದವು. ಭಯಾನಕ ಕುದುರೆ, ಆನೆ ಹಾಗೂ ನಾನಾ ರೀತಿಯ ಪದಾತಿಗಳಿಂದ ಅದು ಸಂಪನ್ನವಾಗಿತ್ತು. ಹೊಳೆಯುವ ಶೂಲ, ಗದೆ, ಕತ್ತಿ, ಗುರಾಣಿ, ತೋಮರ, ಧನುಸ್ಸು ಮುಂತಾದವು ಗಳಿಂದ ಕೂಡಿದ ಆ ಸೈನ್ಯವು ಭಯಾನಕ ವಿಕ್ರಮ ಮತ್ತು ಪುರುಷಾರ್ಥ ಪ್ರಕಟಿಸುವಂತಹುದಾಗಿತ್ತು.॥54-55॥
ಮೂಲಮ್ - 56
ದದೃಶೇ ಜ್ವಲಿತಪ್ರಾಸಂ ಕಿಂಕಿಣೀಶತನಾದಿತಮ್ ।
ಹೇಮಜಾಲಾಚಿತಭುಜಂ ವ್ಯಾವೇಷ್ಟಿತಪರಶ್ವಧಮ್ ॥
ಮೂಲಮ್ - 57½
ವ್ಯಾಘೂರ್ಣಿತ ಮಹಾಶಸ್ತ್ರಂ ಬಾಣಸಂಸಕ್ತಕಾರ್ಮುಕಮ್ ।
ಗಂಧಮಾಲ್ಯಮಧೂತ್ಸೇಕಸಮ್ಮೋದಿತಮಹಾನಿಲಮ್ ॥
ಘೋರಂ ಶೂರಜನಾಕೀರ್ಣಂ ಮಹಾಂಬುಧರ ನಿಃಸ್ವನಮ್ ।
ಅನುವಾದ
ಆ ಸೈನ್ಯದಲ್ಲಿ ಭಲ್ಲೆಗಳು ಹೊಳೆಯುತ್ತಿದ್ದವು. ಸಾವಿರಾರು ಗೆಜ್ಜೆಗಳ ಝೇಂಕಾರ ಕೇಳಿ ಬರುತ್ತಿತ್ತು. ಸೈನಿಕರು ಭುಜಗಳಲ್ಲಿ ಸ್ವರ್ಣ ಆಭೂಷಣಗಳು ಧರಿಸಿದ್ದರು. ಕೊಡಲಿಗಳನ್ನು ಬೀಸುತ್ತಾ, ದೊಡ್ಡ ದೊಡ್ಡ ಶಸ್ತ್ರಗಳನ್ನು ತಿರುಗಿಸುತ್ತಿದ್ದರು. ಚಂದನ, ಪುಷ್ಪಮಾಲೆ ಮತ್ತು ಮಧುವಿನಿಂದಾಗಿ ಅಲ್ಲಿಯ ವಾತಾವರಣದಲ್ಲಿ ಅನುಪಮ ಪರಿಮಳವು ಪಸರಿಸಿತ್ತು. ಆ ಸೈನ್ಯವು ಶೂರವೀರರಿಂದ ವ್ಯಾಪ್ತ ಹಾಗೂ ಮೇಘಗರ್ಜನೆಯಂತಹ ಸಿಂಹನಾದದಿಂದ ಭಯಂಕರವಾಗಿ ಕಂಡು ಬರುತ್ತಿತ್ತು.॥56-57½॥
ಮೂಲಮ್ - 58½
ತದ್ದೃಷ್ಟ್ವಾ ಬಲಮಾಯಾಂತಂ ರಾಕ್ಷಸಾನಾಂ ದುರಾಸದಮ್ ॥
ಸಂಚಚಾಲ ಪ್ಲವಂಗಾನಾಂ ಬಲಮುಚ್ಚೈರ್ನನಾದ ಚ ।
ಅನುವಾದ
ರಾಕ್ಷಸರ ಆ ದುರ್ಜಯ ಸೈನ್ಯವು ಬಂದಿರುವುದನ್ನು ನೋಡಿ ವಾನರ ಸೈನ್ಯವು ಮುಂದುವರಿದು ಗಟ್ಟಿಯಾಗಿ ಗರ್ಜಿಸತೊಡಗಿತು.॥58½॥
ಮೂಲಮ್ - 59
ಜವೇನಾಪ್ಲುತ್ಯ ಚ ಪುನಸ್ತದ್ಬಲಂ ರಕ್ಷಸಾಂ ಮಹತ್ ।
ಅಭ್ಯಯಾತ್ಪ್ರ ತ್ಯರಿಬಲಂ ಪತಂಗಾ ಇವ ಪಾವಕಮ್ ॥
ಅನುವಾದ
ರಾಕ್ಷಸರ ವಿಶಾಲ ಸೈನ್ಯವೂ ವೇಗವಾಗಿ ನಗೆಯುತ್ತಾ ಪತಂಗವು ಬೆಂಕಿಯ ಮೇಲೆ ಮುಗಿಬೀಳುವಂತೆ ಶತ್ರುಸೈನ್ಯದ ಕಡೆಗೆ ಮುಂದಡಿ ಇಟ್ಟಿತು.॥59॥
ಮೂಲಮ್ - 60½
ತೇಷಾಂ ಭುಜಪರಾಮರ್ಶವ್ಯಾಮೃಷ್ಟಪರಿಘಾಶನಿ ॥
ರಾಕ್ಷಸಾನಾಂ ಬಲಂ ಶ್ರೇಷ್ಠಂ ಭೂಯಃ ಪರಮಶೋಭತ ।
ಅನುವಾದ
ಭುಜಗಳ ಕಂಪನದಿಂದಾಗಿ ಪರಸ್ಪರ ಸಂಘರ್ಷಿಸುತ್ತಿದ್ದ ಪರಿಘ, ವಜ್ರಾಯುಧಗಳಿಂದ ಕೂಡಿದ್ದ ಆ ರಾಕ್ಷಸರ ಶ್ರೇಷ್ಠವಾದ ಸೈನ್ಯವು ಅತ್ಯಂತ ಶೋಭಿಸುತ್ತಿತ್ತು.॥60½॥
ಮೂಲಮ್ - 61½
ತತ್ರೋನ್ಮತ್ತಾ ಇವೋತ್ಪೇತುರ್ಹರಯೋಽಥ ಯುಯುತ್ಸವಃ ॥
ತರುಶೈಲೈರಭಿಘ್ನಂತೋ ಮುಷ್ಟಿಭಿಶ್ಚ ನಿಶಾಚರಾನ್ ।
ಅನುವಾದ
ಯುದ್ಧದ ಇಚ್ಛೆಯುಳ್ಳ ವಾನರರು ಉನ್ಮತ್ತರಂತಾಗಿ ವೃಕ್ಷಗಳಿಂದ, ಬಂಡೆಗಳಿಂದ, ಮುಷ್ಠಿಗಳಿಂದ ನಿಶಾಚರರನ್ನು ಪ್ರಹರಿಸುತ್ತಾ ಅವರನ್ನು ಆಕ್ರಮಿಸಿದರು.॥61½॥
ಮೂಲಮ್ - 62½
ತಥೈವಾಪತತಾಂ ತೇಷಾಂ ಹರೀಣಾಂ ನಿಶಿತೈಃ ಶರೈಃ ॥
ಶಿರಾಂಸಿ ಸಹಸಾ ಜಹ್ರೂ ರಾಕ್ಷಸಾ ಭೀಮವಿಕ್ರಮಾಃ ।
ಅನುವಾದ
ಹೀಗೆಯೇ ಭಯಾನಕ ಪರಾಕ್ರಮಿ ನಿಶಾಚರರೂ ಕೂಡ ತಮ್ಮ ತೀಕ್ಷ್ಣ ಬಾಣಗಳಿಂದ ಮುಂದೆ ಬಂದ ವಾನರರ ಮಸ್ತಕಗಳನ್ನು ಕಡಿದು ಬೀಳಿಸುತ್ತಿದ್ದರು.॥62½॥
ಮೂಲಮ್ - 63
ದಶನೈರ್ಹತ ಕರ್ಣಾಶ್ಚ ಮುಷ್ಟಿಭಿರ್ಭಿನ್ನಮಸ್ತಕಾಃ ।
ಶಿಲಾಪ್ರಹಾರಭಗ್ನಾಂಗಾ ವಿಚೇರುಸ್ತತ್ರ ರಾಕ್ಷಸಾಃ ॥
ಅನುವಾದ
ವಾನರರೂ ಕೂಡ ಹಲ್ಲುಗಳಿಂದ ನಿಶಾಚರರ ಕಿವಿಗಳನ್ನು ಕಚ್ಚಿ ಹರಿದುಬಿಟ್ಟರು. ಮುಷ್ಟಿಗಳಿಂದ ಹೊಡೆದು ತಲೆಯನ್ನು ಒಡೆದುಹಾಕಿದರು. ಶಿಲಾಪ್ರಹಾರದಿಂದ ಅಂಗಭಂಗಗೊಳಿಸಿದರು. ಈ ಸ್ಥಿತಿಯಲ್ಲಿ ರಾಕ್ಷಸರು ಅಲ್ಲಿ ಸಂಚರಿಸುತ್ತಿದ್ದರು.॥63॥
ಮೂಲಮ್ - 64
ತಥೈವಾಪ್ಯಪರೇ ತೇಷಾಂ ಕಪೀನಾಮಸಿಭಿಃ ಶಿತೈಃ ।
ಪ್ರವೀರಾನಭಿತೋ ಜಘ್ನುರ್ಘೋರರೂಪಾ ನಿಶಾಚರಾಃ ॥
ಅನುವಾದ
ಹಾಗೆಯೇ ಘೋರರೂಪಧಾರಿ ನಿಶಾಚರರೂ ಮುಖ್ಯ ಮುಖ್ಯ ವಾನರ ರನ್ನು ತಮ್ಮ ಹರಿತವಾದ ಖಡ್ಗಗಳಿಂದ ಗಾಯಗೊಳಿಸಿದರು.॥64॥
ಮೂಲಮ್ - 65
ಘ್ನಂತಮನ್ಯಂ ಜಘಾನಾನ್ಯಃ ಪಾತಯಂತಮಪಾತಯತ್ ।
ಗರ್ಹಮಾಣಂ ಜಗರ್ಹಾನ್ಯೋ ದಶಂತಮಪರೋಽದಶತ್ ॥
ಅನುವಾದ
ಒಬ್ಬ ವೀರನು ಶತ್ರುಪಕ್ಷದ ಯೋಧನನ್ನು ಕೊಲ್ಲ ತೊಡಗಿದಾಗ ಇನ್ನೊಬ್ಬನು ಬಂದು ಅವನನ್ನು ಹೊಡೆಯುತ್ತಿದ್ದನು. ಹೀಗೆ ಒಬ್ಬನು ಬೀಳಿಸುವುದನ್ನು ನೋಡಿ ಇನ್ನೊಬ್ಬನು ಬಂದು ಅವನನ್ನು ಧರಾಶಾಯಿಯಾಗಿಸುತ್ತಿದ್ದನು. ಒಬ್ಬನನ್ನು ನಿಂದಿಸುವವನನ್ನು ಇನ್ನೊಬ್ಬನು ನಿಂದಿಸುತ್ತಿದ್ದನು. ಒಬ್ಬನನ್ನು ಹಲ್ಲಿನಿಂದ ಕಡಿದಾಗ ಇನ್ನೊಬ್ಬನು ಬಂದು ಕಚ್ಚುತ್ತಿದ್ದನು.॥65॥
ಮೂಲಮ್ - 66
ದೇಹೀತ್ಯನ್ಯೋ ದದಾತ್ಯನ್ಯೋ ದದಾಮೀತ್ಯಪರಃ ಪುನಃ ।
ಕಿಂ ಕ್ಲೇಶಯಸಿ ತಿಷ್ಠೇತಿ ತತ್ರಾನ್ಯೋನ್ಯಂ ಬಭಾಷಿರೇ ॥
ಅನುವಾದ
ಒಬ್ಬನು ಬಂದು ‘ನನಗೆ ಯುದ್ಧ ಮಾಡಲು ಬಿಡು’ ಎಂದು ಹೇಳಿದಾಗ ಇನ್ನೊಬ್ಬನು ಯುದ್ಧದ ಅವಕಾಶ ಕೊಡುತ್ತಿದ್ದನು. ಮೂರನೆಯವನು ಬಂದು ‘ನೀನೇಕೆ ಕಷ್ಟಪಡುವೆ’ ನಾನು ಇವನೊಂದಿಗೆ ಯುದ್ಧ ಮಾಡುವೆನು, ಹೀಗೆ ಪರಸ್ಪರ ಮಾತುಗಳನ್ನಾಡುತ್ತಿದ್ದರು.॥66॥
ಮೂಲಮ್ - 67
ವಿಪ್ರಲಂಬಿತಶಸ್ತ್ರಂ ಚ ವಿಮುಕ್ತ ಕವಚಾಯುಧಮ್ ।
ಸಮುದ್ಯತ ಮಹಾಪ್ರಾಸಂ ಯಷ್ಟಿಶೂಲಾಸಿ ಕುಂತಲಮ್ ॥
ಮೂಲಮ್ - 68½
ಪ್ರಾವರ್ತತ ಮಹಾರೌದ್ರಂ ಯುದ್ಧಂ ವಾನರರಕ್ಷಸಾಮ್ ।
ವಾನರಾನ್ ದಶ ಸಪ್ತೇತಿ ರಾಕ್ಷಸಾ ಜಘ್ನುರಾಹವೇ ॥
ರಾಕ್ಷಸಾನ್ ದಶ ಸಪ್ತೇತಿ ವಾನರಾಶ್ವಾಭ್ಯಪಾತಯನ್ ॥
ಅನುವಾದ
ಆಗ ವಾನರರಿಗೂ, ರಾಕ್ಷಸರಿಗೂ ಭಯಂಕರ ಯುದ್ಧ ನಡೆಯಿತು. ಆಯುಧಗಳು ಬೀಳುತ್ತಿದ್ದವು. ಕವಚ ಅಸ್ತ್ರ-ಶಸ್ತ್ರಗಳು ಕಳಚಿ ಬೀಳುತ್ತಿದ್ದವು. ಎತ್ತಿ ಹಿಡಿದ ದೊಡ್ಡ ದೊಡ್ಡ ಭಲ್ಲೆಗಳು ಕಾಣುತ್ತಿದ್ದವು. ಮುಷ್ಟಿಗಳಿಂದ, ಶೂಲ, ಖಡ್ಗಗಳಿಂದ ಪ್ರಹಾರ ನಡೆಯುತ್ತಿತ್ತು. ಆ ಯುದ್ಧದಲ್ಲಿ ರಾಕ್ಷಸರು ಹತ್ತು ಹತ್ತು, ಏಳೇಳು ವಾನರರನ್ನು ಒಟ್ಟಿಗೆ ಕೊಲ್ಲುತ್ತಿದ್ದರು ಹಾಗೂ ವಾನರರೂ ಹತ್ತತ್ತು, ಏಳೇಳು ರಾಕ್ಷಸರನ್ನು ಒಟ್ಟಿಗೆ ನೆಲಸಮ ಮಾಡುತ್ತಿದ್ದರು.॥67-68॥
ಮೂಲಮ್ - 69
ವಿಪ್ರಲಂಭಿತವಸ್ತ್ರಂ ಚ ವಿಮುಕ್ತ ಕವಚಧ್ವಜಮ್ ।
ಬಲಂ ರಾಕ್ಷಸಮಾಲಂಬ್ಯ ವಾನರಾಃ ಪರ್ಯವಾರಯನ್ ॥
ಅನುವಾದ
ರಾಕ್ಷಸರ ವಸಗಳು ಕಳಚಿದ, ಕವಚ, ಧ್ವಜ ತುಂಡಾದ ಆ ರಾಕ್ಷಸ ಸೈನ್ಯವನ್ನು ತಡೆದು ವಾನರರು ಎಲ್ಲ ಕಡೆಗಳಿಂದ ಆಕ್ರಮಣ ಮಾಡಿದರು.॥69॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಎಪ್ಪತ್ತೈದನೆಯ ಸರ್ಗ ಪೂರ್ಣವಾಯಿತು.॥75॥