वाचनम्
ಭಾಗಸೂಚನಾ
ಜಾಂಬವಂತನ ನಿರ್ದೇಶನದಂತೆ ಹನುಮಂತನು ಹಿಮವತ್ ಪರ್ವತಕ್ಕೆ ಹೋಗಿ ಔಷಧಿ ಲತೆಗಳಿದ್ದ ಪರ್ವತವನ್ನೇ ತಂದುದು, ಔಷಧಿ ಲತೆಗಳ ವಾಸನೆಯಿಂದಲೇ ಶ್ರೀರಾಮ-ಲಕ್ಷ್ಮಣರೂ ವಾನರರೂ ಎಚ್ಚರಗೊಂಡುದು
ಮೂಲಮ್ - 1
ತಯೋಸ್ತದಾಸಾದಿತಯೋ ರಣಾಗ್ರೇ
ಮುಮೋಹ ಸೈನ್ಯಂಹರಿಯೂಥಪಾನಾಮ್ ।
ಸುಗ್ರೀವನೀಲಾಂಗದ ಜಾಂಬವಂತೋ
ನ ಚಾಪಿ ಕಿಂಚಿತ್ಪ್ರತಿಪೇದಿರೇ ತೇ ॥
ಅನುವಾದ
ಯುದ್ಧಭೂಮಿಯಲ್ಲಿ ರಾಮ-ಲಕ್ಷ್ಮಣರಿಬ್ಬರೂ ನಿಶ್ಚೇಷ್ಟಿರಾಗಿ ಬಿದ್ದಾಗ ವಾನರ ಸೇನಾಪತಿಗಳ ಸೈನ್ಯವು ಕಿಂಕರ್ತವ್ಯ ಮೂಢವಾಯಿತು. ಸುಗ್ರೀವ, ನೀಲ, ಅಂಗದ ಮತ್ತು ಜಾಂಬವಂತರಿಗೂ ಆಗ ಏನೂ ತೋಚಲಿಲ್ಲ.॥.॥
ಮೂಲಮ್ - 2
ತತೋ ವಿಷಣ್ಣಂ ಸಮವೇಕ್ಷ್ಯ ಸರ್ವಂ
ವಿಭೀಷಣೋ ಬುದ್ಧಿಮತಾಂ ವರಿಷ್ಠಃ ।
ಉವಾಚ ಶಾಖಾಮೃಗರಾಜವೀರಾ
ನಾಶ್ವಾಸಯನ್ನಪ್ರತಿಮೈರ್ವಚೋಭಿಃ ॥
ಅನುವಾದ
ಆಗ ಎಲ್ಲರೂ ವಿಷಾದದಲ್ಲಿ ಮುಳುಗಿರುವುದನ್ನು ನೋಡಿ ಬುದ್ಧಿವಂತರಲ್ಲಿ ಶ್ರೇಷ್ಠವಿಭೀಷಣನು ವಾನರರಾಜನು ಆ ವೀರ ಸೈನಿಕರಿಗೆ ಆಶ್ವಾಸನೆಯನ್ನು ಕೊಡುತ್ತಾ ಅನುಪಮ ವಾಣಿಯಿಂದ ನುಡಿದನು.॥.॥
ಮೂಲಮ್ - 3
ಮಾ ಭೈಷ್ಟ ನಾಸ್ತ್ಯತ್ರ ವಿಷಾದಕಾಲೋ
ಯದಾರ್ಯಪುತ್ರೌ ಹ್ಯವಶೌ ವಿಷಣ್ಣೌ ।
ಸ್ವಯಂಭುವೋ ವಾಕ್ಯಮಥೋದ್ವಹಂತೌ
ಯತ್ಸಾದಿತಾವಿಂದ್ರಜಿತಾಸ್ತ್ರ ಜಾಲೈಃ ॥
ಅನುವಾದ
ವಾನರವೀರರೇ ! ನೀವು ಭಯ ಪಡಬೇಡಿರಿ. ಇದು ವಿಷಾದಿಸುವ ಸಮಯವಲ್ಲ; ಏಕೆಂದರೆ ಇವರಿಬ್ಬರೂ ಆರ್ಯಪುತ್ರರು ಬ್ರಹ್ಮದೇವರ ಮಾತನ್ನು ಆದರಿಸಿ, ಪಾಲಿಸಲು ಸ್ವತಃ ಆಯುಧವನ್ನು ಎತ್ತಲಿಲ್ಲ. ಇದರಿಂದ ಇಂದ್ರಜಿತನು ಇವರಿಬ್ಬರನ್ನು ತನ್ನ ಅಸ್ತ್ರಸಮೂಹದಿಂದ ಆಚ್ಛಾದಿತಗೊಳಿಸಿದ್ದನು. ಆದ್ದರಿಂದ ಇವರಿಬ್ಬರು ಕೇವಲ ಮೂರ್ಛಿತರಾಗಿದ್ದಾರೆ. (ಇವರಿಗೆ ಯಾವುದೇ ಪ್ರಾಣಸಂಕಟವಿಲ್ಲ..॥3॥
ಮೂಲಮ್ - 4
ತಸ್ಮೈ ತು ದತ್ತಂ ಪರಮಾಸ್ತ್ರಮೇತತ್
ಸ್ವಯಂಭುವಾ ಬ್ರಾಹ್ಮಮಮೋಘವೀರ್ಯಮ್ ।
ತನ್ಮಾನಯಂತೌ ಯುಧಿ ರಾಜಪುತ್ರೌ
ನಿಪಾತಿತೌ ಕೋಽತ್ರ ವಿಷಾದಕಾಲಃ ॥
ಅನುವಾದ
ಸ್ವಯಂಭೂ ಬ್ರಹ್ಮದೇವರು ಈ ಉತ್ತಮ ಅಸ್ತ್ರವನ್ನು ಇಂದ್ರಜಿತುವಿಗೆ ಕೊಟ್ಟಿದ್ದರು. ಇದು ಬ್ರಹ್ಮಾಸ್ತ್ರವೆಂದು ಪ್ರಸಿದ್ಧವಾಗಿದೆ. ಇದರ ಬಲ ಅಮೋಘವಾಗಿದೆ. ಸಂಗ್ರಾಮದಲ್ಲಿ ಇದರ ಆದರ ಮರ್ಯಾದೆಯನ್ನು ರಕ್ಷಿಸುತ್ತಾ ಇವರಿಬ್ಬರೂ ರಾಜಕುಮಾರರು ಮಲಗಿರುವರು; ಆದ್ದರಿಂದ ಇದರಲ್ಲಿ ಯಾವುದೇ ಖೇದದ ಮಾತಿಲ್ಲ.॥4॥
ಮೂಲಮ್ - 5
ಬ್ರಾಹ್ಮಮಸ್ತ್ರಂ ತತೋ ಧೀಮಾನ್ಮಾನಯಿತ್ವಾ ತು ಮಾರುತಿಃ ।
ವಿಭೀಷಣ ವಚಃ ಶ್ರುತ್ವಾ ಹನೂಮಾನಿದಮಬ್ರವೀತ್ ॥
ಅನುವಾದ
ವಿಭೀಷಣನ ಮಾತನ್ನು ಕೇಳಿ ಬುದ್ಧಿವಂತ ಮಾರುತಿಯು ಬ್ರಹ್ಮಾಸ್ತ್ರವನ್ನು ಸಮ್ಮಾನಿಸುತ್ತಾ ಅವನಲ್ಲಿ ಹೀಗೆ ಹೇಳಿದನು -॥.॥
ಮೂಲಮ್ - 6
ಅಸ್ಮಿನ್ನಸ್ತ್ರೇಹತೇ ಸೈನ್ಯೇ ವಾನರಾಣಾಂ ತರಸ್ವಿನಾಮ್ ।
ಯೋ ಯೋ ಧಾರಯತೇ ಪ್ರಾಣಾಂಸ್ತಂ ತಮಾಶ್ವಾಸಯಾವಹೇ ॥
ಅನುವಾದ
ರಾಕ್ಷಸ ರಾಜನೇ! ಈ ಅಸ್ತ್ರದಿಂದ ಗಾಯಗೊಂಡು ಬದುಕಿರುವ ವೇಗಶಾಲಿ ವಾನರ ಸೈನಿಕರಿಗೆ ನಾವು ಹೋಗಿ ಆಶ್ವಾಸನೆ ಯನ್ನು ನೀಡಬೇಕು.॥6॥
ಮೂಲಮ್ - 7
ತಾವುಭೌ ಯುಗಪದ್ವೀರೌ ಹನೂಮದ್ರಾಕ್ಷಸೋತ್ತಮೌ ।
ಉಲ್ಕಾಹಸ್ತೌ ತದಾ ರಾತ್ರೌ ರಣಶೀರ್ಷೇ ವಿಚೇರತುಃ ॥
ಅನುವಾದ
ಆಗ ರಾತ್ರೆಯಾಗಿತ್ತು, ಅದರಿಂದ ಹನುಮಂತ ಮತ್ತು ರಾಕ್ಷಸಪ್ರವರ ವಿಭೀಷಣರಿಬ್ಬರೂ ವೀರರು ತಮ್ಮ ಕೈಯಲ್ಲಿ ಪಂಜನ್ನು ಹಿಡಿದುಕೊಂಡು ಒಟ್ಟಿಗೆ ರಣಭೂಮಿಯಲ್ಲಿ ವಿಚರಿಸುತ್ತಿದ್ದರು..॥7॥
ಮೂಲಮ್ - 8
ಭಿನ್ನಲಾಂಗೂಲಹಸ್ತೋರುಪಾದಾಂಗುಲಿ ಶಿರೋಧರೈಃ ।
ಸ್ರವದ್ಭಿಃ ಕ್ಷತಜಂ ಗಾತ್ರೈಃ ಪ್ರಸ್ರವದ್ಭಿಃ ಸಮಂತತಃ ॥
ಮೂಲಮ್ - 9
ಪತಿತೈಃ ಪರ್ವತಾಕಾರೈರ್ವಾನರೈರಭಿ ಸಂವೃತಾಮ್ ।
ಶಸ್ತ್ರೈಶ್ಚ ಪತಿತೈರ್ದಿಪ್ತೈರ್ದದೃಶಾತೇ ವಸುಂಧರಾಮ್ ॥
ಅನುವಾದ
ಬಾಲ, ಕೈ-ಕಾಲು, ತೊಡೆ, ಬೆರಳು, ಕತ್ತು ಮುಂತಾದ ಅವಯವಗಳು ತುಂಡಾಗಿ, ಶರೀರದಿಂದ ರಕ್ತ ಹರಿಸುತ್ತಾ ಪರ್ವತಾಕಾರದ ವಾನರರು ಬಿದ್ದು ಅಲ್ಲಿಯ ಭೂಮಿಯೆಲ್ಲ ತುಂಬಿಹೋಗಿತ್ತು ಹಾಗೂ ಹೊಳೆಯುವ ಅಸ್ತ್ರ-ಶಸ್ತ್ರಗಳಿಂದ ಅಲ್ಲಿ ಮುಚ್ಚಿಹೋಗಿತ್ತು. ಈ ಸ್ಥಿತಿಯಲ್ಲಿದ್ದ ರಣಭೂಮಿಯನ್ನು ಹನುಮಂತ ಮತ್ತು ವಿಭೀಷಣರು ನೋಡಿದರು.॥8-9॥
ಮೂಲಮ್ - 10
ಸುಗ್ರೀವಮಂಗದಂ ನೀಲಂ ಶರಭಂ ಗಂಧಮಾದನಮ್ ।
ಜಾಂಬವಂತಂ ಸುಷೇಣಂ ಚ ವೇಗದರ್ಶಿನಮೇವ ಚ ॥
ಮೂಲಮ್ - 11
ಮೈಂದಂ ನಲಂ ಜ್ಯೋತಿಮುಖಂ ದ್ವಿವಿದಂ ಚಾಪಿ ವಾನರಮ್ ।
ವಿಭೀಷಣೋ ಹನೂಮಾಂಶ್ಚ ದದೃಶಾತೇ ಹತಾನ್ರಣೇ ॥
ಅನುವಾದ
ಸುಗ್ರೀವ, ಅಂಗದ, ನೀಲ, ಶರಭ, ಗಂಧಮಾಧನ, ಜಾಂಬವಂತ, ಸುಷೇಣ, ವೇಗದರ್ಶಿ, ಮೈಂದ, ನಲ, ಜ್ಯೋತಿರ್ಮುಖ ಮತ್ತು ದ್ವಿವಿದ ಇವರೆಲ್ಲ ವಾನರರು ಯುದ್ಧದಲ್ಲಿ ಗಾಯಗೊಂಡು ಬಿದ್ದಿರುವುದನ್ನು ಹನುಮಂತ, ವಿಭೀಷಣರು ನೋಡಿದರು.॥10-11॥
ಮೂಲಮ್ - 12
ಸಪ್ತಷಷ್ಟಿರ್ಹತಾಃ ಕೋಟ್ಯೋ ವಾನರಾಣಾಂ ತರಸ್ವಿನಾಮ್ ।
ಅಹ್ನಃ ಪಂಚಮಶೇಷೇಣ ವಲ್ಲಭೇನ ಸ್ವಯಂಭುವಃ ॥
ಅನುವಾದ
ಬ್ರಹ್ಮದೇವರ ಪ್ರಿಯ ಅಸ್ತ್ರ-ಬ್ರಹ್ಮಾಸ್ತ್ರವು ಹಗಲಿನ ನಾಲ್ಕು ಭಾಗ ಕಳೆಯುವಷ್ಟರಲ್ಲಿ ಅರವತ್ತೇಳು ಕೋಟಿ ವಾನರರನ್ನು ಸಂಹರಿಸಿತ್ತು. ಕೇವಲ ಐದನೆಯಭಾಗ ಸಾಯಾಹ್ಣಕಾಲ ಉಳಿದಿರುವಾಗ ಬ್ರಹ್ಮಾಸ್ತ್ರದ ಪ್ರಯೋಗ ನಿಂತುಹೋಗಿತ್ತು.॥12॥
ಮೂಲಮ್ - 13
ಸಾಗರೌಘನಿಭಂ ಭೀಮಂ ದೃಷ್ಟ್ವಾ ಬಾಣಾರ್ದಿತಂ ಬಲಮ್ ।
ಮಾರ್ಗತೇ ಜಾಂಬವಂತಂ ಚ ಹನುಮಾನ್ಸ ವಿಭೀಷಣಃ ॥
ಅನುವಾದ
ಸಮುದ್ರದಂತಿರುವ ವಿಶಾಲ ಹಾಗೂ ಭಯಂಕರ ವಾನರ ಸೈನಿಕರು ಬಾಣಗಳಿಂದ ಪೀಡಿತರಾಗಿರುವುದನ್ನು ವಿಭೀಷಣ ಸಹಿತ ಹನುಮಂತನು ನೋಡಿ ಜಾಂಬವಂತನನ್ನು ಹುಡುಕತೊಡಗಿದನು.॥13॥
ಮೂಲಮ್ - 14
ಸ್ವಭಾವಜರಯಾ ಯುಕ್ತಂ ವೃದ್ಧಂ ಶರಶತೈಶ್ಚಿತಮ್ ।
ಪ್ರಜಾಪತಿಸುತಂ ವೀರಂ ಶಾಮ್ಯಂತಮಿವ ಪಾವಕಮ್ ॥
ಮೂಲಮ್ - 15
ದೃಷ್ಟ್ವಾ ಸಮಭಿಸಂಕ್ರಮ್ಯ ಪೌಲಸ್ತ್ಯೋ ವಾಕ್ಯಮಬ್ರವೀತ್ ।
ಕಚ್ಚಿದಾರ್ಯ ಶರೈಸ್ತೀಕ್ಷ್ಣೈರ್ನ ಪ್ರಾಣಾ ಧ್ವಂಸಿತಾಸ್ತವ ॥
ಅನುವಾದ
ಬ್ರಹ್ಮದೇವರ ಪುತ್ರ ವೀರ ಜಾಂಭವಂತನು ಸ್ವಾಭಾವಿಕ ಮುದುಕನಾಗಿದ್ದನು, ಅವನ ಶರೀರದಲ್ಲಿ ನೂರಾರು ಬಾಣಗಳು ಚುಚ್ಚಿದ್ದವು; ಆದ್ದರಿಂದ ಅವನು ಉಪಶಮನಗೊಂಡ ಅಗ್ನಿ ಯಂತೆ ಕಂಡುಬರುತ್ತಿದ್ದನು. ಅವನನ್ನು ನೋಡಿ ವಿಭೀಷಣನು ಅವನ ಬಳಿಗೆ ಹೋಗಿ ಹೇಳಿದನು - ಆರ್ಯನೇ! ಈ ಹರಿತವಾದ ಬಾಣಗಳ ಪ್ರಹಾರದಿಂದ ನಿನ್ನ ಪ್ರಾಣಗಳು ವಿನಾಶಹೊಂದಿಲ್ಲವಲ್ಲ.॥14-15॥
ಮೂಲಮ್ - 16
ವಿಭೀಷಣವಚಃ ಶ್ರುತ್ವಾ ಜಾಂಬವಾನೃಕ್ಷಪುಂಗವಃ ।
ಕೃಚ್ಛ್ರಾದಭ್ಯುದ್ಗಿರನ್ ವಾಕ್ಯಮಿದಂ ವಚನಮಬ್ರವೀತ್ ॥
ಅನುವಾದ
ವಿಭೀಷಣನ ಮಾತನ್ನು ಕೇಳಿ ಋಕ್ಷರಾಜಾ ಜಾಂಬವಂತನು ಬಹಳ ಕಷ್ಟದಿಂದ ತಡವರಿಸುತ್ತಾ ಈ ಪ್ರಕಾರ ಹೇಳಿದನು.॥16॥
ಮೂಲಮ್ - 17
ನೈರ್ಋತೇಂದ್ರ ಮಹಾವೀರ್ಯ ಸ್ವರೇಣ ತ್ವಾಭಿಲಕ್ಷಯೇ ।
ವಿದ್ಧಗಾತ್ರಃ ಶಿತೈರ್ಬಾಣೈರ್ನ ತ್ವಾಂ ಪಶ್ಯಾಮಿ ಚಕ್ಷುಷಾ ॥
ಅನುವಾದ
ಮಹಾಪರಾಕ್ರಮಿ ರಾಕ್ಷಸರಾಜನೇ! ನಾನು ಕೇವಲ ನಿನ್ನ ಸ್ವರದಿಂದ ಗುರುತಿಸಿದೆ. ನನ್ನ ಸರ್ವಾಂಗಕ್ಕೆ ಚೂಪಾದ ಬಾಣಗಳು ನೆಟ್ಟಿವೆ; ಆದ್ದರಿಂದ ನಾನು ಕಣ್ಣುಬಿಟ್ಟು ನಿನ್ನನ್ನು ನೋಡಲಾರೆ..॥17॥
ಮೂಲಮ್ - 18
ಅಂದನಾ ಸುಪ್ರಜಾ ಯೇನ ಮಾತರಿಶ್ವಾ ಚ ಸುವೃತ ।
ಹನುಮಾನ್ವಾನರ ಶ್ರೇಷ್ಠಃ ಪ್ರಾಣಾನ್ ಧಾರಯತೇ ಕ್ವಚಿತ್ ॥
ಅನುವಾದ
ಸುವ್ರತನೇ! ವಿಭೀಷಣನೇ! ಅಂಜನಾದೇವಿಯ ಉತ್ತಮ ಪುತ್ರ ಹಾಗೂ ವಾಯುದೇವರ ಶ್ರೇಷ್ಠ ಪುತ್ರ ವಾನರಶ್ರೇಷ್ಠ ಹನುಮಂತನು ಜೀವಿಸಿರುವನಲ್ಲ.॥18॥
ಮೂಲಮ್ - 19
ಶ್ರುತ್ವಾ ಜಾಂಬವತೋ ವಾಕ್ಯಮುವಾಚೇದಂ ವಿಭೀಷಣಃ ।
ಆರ್ಯಪುತ್ರಾವತಿಕ್ರಮ್ಯ ಕಸ್ಮಾತ್ಪೃಚ್ಛಸಿ ಮಾರುತಿಮ್ ॥
ಅನುವಾದ
ಜಾಂಬವಂತನ ಈ ಪ್ರಶ್ನೆಯನ್ನು ಕೇಳಿ ವಿಭೀಷಣನು ಕೇಳಿದನು - ಯಕ್ಷರಾಜನೇ! ಮಹಾರಾಜಕುಮಾರರಿಬ್ಬರನ್ನು ಬಿಟ್ಟು ನೀನು ಕೇವಲ ಹನುಮಂತನನ್ನೇ ಏಕೆ ಕೇಳುತ್ತಿರುವೆ.॥19॥
ಮೂಲಮ್ - 20
ನೈವ ರಾಜನಿ ಸುಗ್ರೀವೇ ನಾಂಗದೇ ನಾಪಿ ರಾಘವೇ ।
ಆರ್ಯ ಸಂದರ್ಶಿತಃ ಸ್ನೇಹೋ ಯಥಾ ವಾಯುಸುತೇ ಪರಃ ॥
ಅನುವಾದ
ಆರ್ಯನೇ! ನೀನು ಪವನಪುತ್ರ ಹನುಮಂತನ ಮೇಲೆ ಇರುವ ಪ್ರಗಾಧ ಪ್ರೇಮದಷ್ಟು, ಸುಗ್ರೀವನ ಮೇಲೆ, ಅಂಗದನ ಮೇಲೆ ಹಾಗೂ ಶ್ರೀರಾಮನ ಮೇಲೆಯೂ ಸ್ನೇಹ ಕಾಣುವುದಿಲ್ಲ.॥20॥
ಮೂಲಮ್ - 21
ವಿಭೀಷಣವಚಃ ಶ್ರುತ್ವಾ ಜಾಂಬವಾನ್ ವಾಕ್ಯಮಬ್ರವೀತ್ ।
ಶೃಣು ನೈರ್ಋತಶಾರ್ದೂಲ ಯಸ್ಮಾತ್ಪೃಚ್ಛಾಮಿ ಮಾರುತಿಮ್ ॥
ಅನುವಾದ
ವಿಭೀಷಣನ ಮಾತನ್ನು ಕೇಳಿ ಜಾಂಬವಂತ ಹೇಳಿದನು- ರಾಕ್ಷಸರಾಜನೇ! ನಾನು ಪವನಕುಮಾರ ಹನುಮಂತನನ್ನು ಏಕೆ ಕೇಳುತ್ತಿದ್ದೇನೆ ಎಂಬುದನ್ನು ಹೇಳುತ್ತೇನೆ, ಕೇಳು.॥21॥
ಮೂಲಮ್ - 22
ಅಸ್ಮಿನ್ಜೀವತಿ ವೀರೇ ತು ಹತಮಪ್ಯಹತಂ ಬಲಮ್ ।
ಹನೂಮತ್ಯುಜ್ಝಿತ ಪ್ರಾಣೇ ಜೀವಂತೋಽಪಿ ಮೃತಾ ವಯಮ್ ॥
ಅನುವಾದ
ಈ ವೀರವರ ಹನುಮಂತನು ಬದುಕಿದ್ದರೆ ಈ ಸತ್ತಿರುವ ಸೈನ್ಯವೂ ಜೀವಿತವೇ ಆಗಿದೆ ಎಂದು ತಿಳಿ. ಅವನ ಪ್ರಾಣಗಳು ಹೊರಟುಹೋದರೆ ನಾವು ಬದುಕಿದ್ದರೂ ಸತ್ತಂತೆಯೇ ಸರಿ.॥22॥
ಮೂಲಮ್ - 23
ಧರತೇ ಮಾರುತಿಸ್ತಾತ ಮಾರುತ ಪ್ರತಿಮೋ ಯದಿ ।
ವೈಶ್ವಾನರಸಮೋ ವೀರ್ಯೇ ಜೀವಿಶಾತಾ ತತೋ ಭವೇತ್ ॥
ಅನುವಾದ
ಅಯ್ಯಾ! ವಾಯುವಿನಂತಹ ವೇಗಶಾಲಿ, ಅಗ್ನಿಯಂತೆ ಪರಾಕ್ರಮಿ ಪವನಕುಮಾರ ಹನುಮಂತನು ಜೀವಿಸಿದ್ದರೆ, ನಾವೆಲ್ಲರೂ ಬದುಕುಳಿಯಲು ಆಶಿಸಬಹುದು.॥23॥
ಮೂಲಮ್ - 24
ತತೋ ವೃದ್ಧಮುಪಾಗಮ್ಯ ನಿಯಮೇನಾಭ್ಯವಾದಯತ್ ।
ಗೃಹ್ಯ ಜಾಂಬವತಃ ಪಾದೌ ಹನೂಮಾನ್ಮಾರುತಾತ್ಮಜಃ ॥
ಅನುವಾದ
ವೃದ್ಧ ಜಾಂಬವಂತನು ಹೀಗೆ ಹೇಳುತ್ತಲೇ ಪವನನಂದನ ಹನುಮಂತನು ಅವನ ಬಳಿಗೆ ಬಂದನು ಮತ್ತು ವಿನೀತನಾಗಿ ಕಾಲಿಗೆ ಬಿದ್ದು ಪ್ರಣಾಮ ಮಾಡಿದನು.॥24॥
ಮೂಲಮ್ - 25
ಶ್ರುತ್ವಾ ಹನೂಮತೋ ವಾಕ್ಯಂ ತದಾ ವಿವ್ಯಥಿತೇಂದ್ರಿಯಃ ।
ಪುನರ್ಜಾತಮಿವಾತ್ಮಾನಂ ಮನ್ಯತೇ ಸ್ಮರ್ಕ್ಷಪುಂಗವಃ ॥
ಅನುವಾದ
ಹನುಮಂತನು ಧ್ವನಿ ಕೇಳುತ್ತಲೇ ಜಾಂಬವಂತನಿಗೆ ಎಲ್ಲ ಇಂದ್ರಿಯಗಳ ಬಾಣಗಳ ಪ್ರಹಾರದಿಂದ ಪೀಡಿತವಾಗಿದ್ದರೂ, ತನ್ನ ಪುನರ್ಜನ್ಮವಾದಂತೆ ಅನಿಸಿತು.॥25॥
ಮೂಲಮ್ - 26
ತತೋಽಬ್ರವೀನ್ಮಹಾತೇಜಾ ಹನುಮಂತಂ ಸ ಜಾಂಬವಾನ್ ।
ಆಗಚ್ಛ ಹರಿಶಾರ್ದೂಲ ವಾನರಾಂಸ್ತ್ರಾತುಮರ್ಹಸಿ ॥
ಅನುವಾದ
ಮತ್ತೆ ಆ ಮಹಾತೇಜಸ್ವೀ ಜಾಂಬವಂತನು ಹನುಮಂತನಲ್ಲಿ ಹೇಳಿದನು- ವಾನರಸಿಂಹನೇ! ಬಾ! ಸಮಸ್ತ ವಾನರರನ್ನು ರಕ್ಷಿಸು.॥26॥
ಮೂಲಮ್ - 27
ನಾನ್ಯೋ ವಿಕ್ರಮಪರ್ಯಾಪ್ತಸ್ತ್ವಮೇಷಾಂ ಪರಮಃ ಸಖಾ ।
ತ್ವತ್ಪರಾಕ್ರಮಕಾಲೋಽಯಂ ನಾನ್ಯಂ ಪಶ್ಯಾಮಿ ಕಂಚನ ॥
ಅನುವಾದ
ನೀನಲ್ಲದೆ ಬೇರೆ ಯಾರೂ ಪೂರ್ಣ ಪರಾಕ್ರಮದಿಂದ ಕೂಡಿಲ್ಲ. ನೀನೇ ಇವರೆಲ್ಲರ ಸಹಾಯಕನಾಗು. ಈಗ ನಿನ್ನ ಪರಾಕ್ರಮದ ಸಮಯವಾಗಿದೆ. ಬೇರೆ ಯಾರನ್ನೂ ಇದಕ್ಕೆ ಯೋಗ್ಯವಾಗಿ ನಾನು ನೋಡುವುದಿಲ್ಲ.॥27॥
ಮೂಲಮ್ - 28
ಋಕ್ಷವಾನರ ವೀರಾಣಾಮನೀಕಾನಿ ಪ್ರಹರ್ಷಯ ।
ವಿಶಲ್ಯೌ ಕುರು ಚಾಪ್ಯೇತೌ ಸಾದಿತೌ ರಾಮಲಕ್ಷ್ಮಣೌ ॥
ಅನುವಾದ
ನೀನು ಕರಡಿ ಮತ್ತು ವಾನರವೀರರ ಸೈನ್ಯಕ್ಕೆ ಹರ್ಷ ತಂದು ಕೊಟ್ಟು, ಬಾಣಗಳಿಂದ ಪೀಡಿತರಾದ ರಾಮ-ಲಕ್ಷ್ಮಣರ ಶರೀರದಿಂದ ಬಾಣಗಳನ್ನು ಕಿತ್ತು ಸ್ವಸ್ಥಗೊಳಿಸು.॥28॥
ಮೂಲಮ್ - 29
ಗತ್ವಾ ಪರಮಮಧ್ವಾನಮುಪರ್ಯುಪರಿ ಸಾಗರಮ್ ।
ಹಿಮವಂತಂ ನಗಶ್ರೇಷ್ಠಂ ಹನೂಮನ್ ಗಂತುಮರ್ಹಸಿ ॥
ಅನುವಾದ
ಹನುಮಂತ! ಸಮುದ್ರದ ಮೇಲಿನಿಂದ ಹಾರಿ ಬಹಳ ದೂರದ ದಾರಿ ಕ್ರಮಿಸಿ ನೀನು ಪರ್ವತಶ್ರೇಷ್ಠ ಹಿಮಾಲಯಕ್ಕೆ ಹೋಗಬೇಕು.॥29॥
ಮೂಲಮ್ - 30
ತತಃ ಕಾಂಚನ ಮತ್ಯುಚ್ಚಮೃಷಭಂ ಪರ್ವತೋತ್ತಮಮ್ ।
ಕೈಲಾಸಶಿಖರಂ ಚಾತ್ರ ದ್ರಕ್ಷ್ಯಸ್ಯರಿನಿಷೂದನ ॥
ಅನುವಾದ
ಶತ್ರುಸೂದನ! ಅಲ್ಲಿಗೆ ಹೋದಾಗ ನಿನಗೆ ಬಹಳ ಎತ್ತರ ಸುವರ್ಣಮಯ ಉತ್ತಮ ಋಷಭಪರ್ವತ ಹಾಗೂ ಕೈಲಾಸ ಶಿಖರದ ದರ್ಶನವಾಗುವುದು.॥30॥
ಮೂಲಮ್ - 31
ತಯೋಃ ಶಿಖರಯೋರ್ಮಧ್ಯೇ ಪ್ರದೀಪ್ತಮತುಲಪ್ರಭಮ್ ।
ಸರ್ವೌಷಧಿಯುತಂ ವೀರ ದ್ರಕ್ಷ್ಯಸ್ಯೋಷಧಿಪರ್ವತಮ್ ॥
ಅನುವಾದ
ವೀರನೇ! ಆ ಎರಡು ಪರ್ವತದ ನಡುವೆ ಒಂದು ಔಷಧಿಯ ಅತ್ಯಂತ ದೀಪ್ತಿಮಂತ ಪರ್ವತ ಕಂಡು ಬಂದೀತು. ಅದು ಎಣಿಸಲಾರದಷ್ಟು ಹೊಳೆಯುತ್ತಿದೆ. ಆ ಪರ್ವತವು ಎಲ್ಲ ಪ್ರಕಾರದ ಔಷಧಿಗಳಿಂದ ಯುಕ್ತವಾಗಿದೆ.॥31॥
ಮೂಲಮ್ - 32
ತಸ್ಯ ವಾನರಶಾರ್ದೂಲ ಚತಸ್ರೋ ಮೂರ್ಧ್ನಿ ಸಂಭವಾಃ ।
ದ್ರಕ್ಷ್ಯಸ್ಯೋಷಧಯೋ ದೀಪ್ತಾ ದೀಪಯಂತಿರ್ದಿಶೋ ದಶ ॥
ಅನುವಾದ
ವಾನರಸಿಂಹನೇ! ಅದರ ಶಿಖರದಲ್ಲಿ ಉತ್ಪನ್ನವಾದ ನಾಲ್ಕು ಔಷಧಿಗಳು ನಿನಗೆ ಕಂಡುಬಂದೀತು. ಅವು ತನ್ನ ಪ್ರಭೆಯಿಂದ ದಶದಿಕ್ಕುಗಳನ್ನು ಪ್ರಕಾಶಿತಗೊಳಿಸುತ್ತಿರುತ್ತವೆ.॥32॥
ಮೂಲಮ್ - 33
ಮೃತಸಂಜೀವಿನೀಂ ಚೈವ ವಿಶಲ್ಯಕರಣೀಮಪಿ ।
ಸುವರ್ಣ್ಯಕರಣೀಂ ಚೈವ ಸಂಧಾನೀಂ ಚ ಮಹೌಷಧೀಮ್ ॥
ಅನುವಾದ
ಅವುಗಳ ಹೆಸರು- ಮೃತಸಂಜೀವಿನೀ, ವಿಶಲ್ಯಕರಣೀ, ಸುವರ್ಣ ಕರಣೀ, ಸಂಧಾನಿ ಎಂದು ಇವೆ.॥33॥
ಮೂಲಮ್ - 34
ತಾಃ ಸರ್ವಾ ಹನುಮನ್ಗೃಹ್ಯ ಕ್ಷಿಪ್ರಮಾಗಂತುಮರ್ಹಸಿ ।
ಆಶ್ವಾಸಯ ಹರೀನ್ಪ್ರಾಣೈರ್ಯೋಜ್ಯ ಗಂಧವಹಾತ್ಮಜ ॥
ಅನುವಾದ
ಪವನಕುಮಾರ ಹನುಮಂತನೇ! ನೀನು ಆ ಎಲ್ಲ ಔಷಧಿಗಳನ್ನು ಬೇಗನೆ ತೆಗೆದುಕೊಂಡು ಬಾ ಹಾಗೂ ವಾನರರಿಗೆ ಪ್ರಾಣದಾನ ಕೊಟ್ಟು, ಆಶ್ವಾಸನೆ ಕೊಡು.॥34॥
ಮೂಲಮ್ - 35
ಶ್ರುತ್ವಾ ಜಾಂಬವತೋ ವಾಕ್ಯಂ ಹನೂಮಾನ್ ಮಾರುತಾತ್ಮಜಃ ।
ಆಪೂರ್ಯತ ಬಲೋದ್ಧರ್ಷೈರ್ವಾಯುವೇಗೈರಿವಾರ್ಣವಃ ॥
ಅನುವಾದ
ಜಾಂಬವಂತನ ಮಾತನ್ನು ಕೇಳಿ ವಾಯುನಂದನ ಹನುಮಂತನು ಮಹಾಸಾಗರವು ವಾಯುವೇಗದಿಂದ ವ್ಯಾಪ್ತ ವಾಗುವಂತೆ, ಆಸೀಮ ಬಲದಿಂದ ತುಂಬಿಕೊಂಡನು.॥35॥
ಮೂಲಮ್ - 36
ಸ ಪರ್ವತ ತಟಾಗ್ರಸ್ಥಃ ಪೀಡಯನ್ ಪರ್ವತೋತ್ತಮಮ್ ।
ಹನೂಮಾನ್ ದೃಶ್ಯತೇ ವೀರೋ ದ್ವಿತೀಯ ಇವ ಪರ್ವತಃ ॥
ಅನುವಾದ
ವೀರ ಮಾರುತಿಯು ಒಂದು ಪರ್ವತದ ಶಿಖರದಲ್ಲಿ ನಿಂತು, ಆ ಉತ್ತಮ ಪರ್ವತವನ್ನು ಕಾಲಿನಿಂದ ಒತ್ತುತ್ತಾ ಇನ್ನೊಂದು ಪರ್ವತದಂತೆ ಕಂಡುಬಂದನು.॥36॥
ಮೂಲಮ್ - 37
ಹರಿಪಾದವಿನಿರ್ಭಗ್ನೋ ನಿಷಸಾದ ಸ ಪರ್ವತಃ ।
ನ ಶಶಾಕ ತದಾತ್ಮಾನಂ ಸೋಢುಂ ಭೃಶನಿಪೀಡಿತಃ ॥
ಅನುವಾದ
ಹನುಮಂತನು ಚರಣಗಳ ಭಾರದಿಂದ ಆ ಪರ್ವತವು ಭೂಮಿಯೊಳಗೆ ಸೇರಿಹೋಯಿತು. ಹನುಮಂತನ ಹೆಚ್ಚಾದ ಪಾದಪೀಡನೆಯಿಂದ ಆ ಪರ್ವತವು ತನ್ನ ಇರುವಿಕೆಯನ್ನು ಉಳಿಸಿಕೊಳ್ಳಲಿಲ್ಲ.॥37॥
ಮೂಲಮ್ - 38
ತಸ್ಯ ಪೇತುರ್ನಗಾಭೂಮೌ ಹರಿವೇಗಾಚ್ಚ ಜಜ್ವಲುಃ ।
ಶೃಂಗಾಣಿ ಚ ವ್ಯಕೀರ್ಯಂತ ಪೀಡಿತಸ್ಯ ಹನೂಮತಾ ॥
ಅನುವಾದ
ಹನುಮಂತನ ಭಾರದಿಂದ ಪೀಡಿತವಾದ ಆ ಪರ್ವತದ ವೃಕ್ಷಗಳು ಅದರ ವೇಗದಿಂದ ತುಂಡಾಗಿ ಭೂಮಿಗೆ ಬಿದ್ದುಹೋದವು. ಎಷ್ಟೋ ಉರಿದು ಹೋಯಿತು. ಜೊತೆಗೆ ಆ ಪರ್ವತದ ಶಿಖರಗಳು ಕುಸಿದು ಹೋದುವು.॥38॥
ಮೂಲಮ್ - 39
ತಸ್ಮಿನ್ ಸಂಪೀಡ್ಯಮಾನೇ ತು ಭಗ್ನದ್ರುಮಶಿಲಾತಲೇ ।
ನ ಶೇಕುರ್ವಾನರಾಃ ಸ್ಥಾತುಂ ಘೂರ್ಣಮಾನೇ ನಗೋತ್ತಮೇ ॥
ಅನುವಾದ
ಹನುಮಂತನು ಒತ್ತಿದಾಗ ಆ ಶ್ರೇಷ್ಠ ಪರ್ವತ ನಡುಗತೊಡಗಿತು. ಅದರ ವೃಕ್ಷ ಮತ್ತು ಶಿಲೆಗಳು ಒಡೆದು ತುಂಡಾಗಿ ಬೀಳತೊಡಗಿತು. ಆದ್ದರಿಂದ ವಾನರರು ಅಲ್ಲಿ ನಿಲ್ಲಲಾರದಾದರು.॥39॥
ಮೂಲಮ್ - 40
ಸಾ ಘೂರ್ಣಿತ ಮಹಾದ್ವಾರಾ ಪ್ರಭಗ್ನ ಗೃಹಗೋಪುರಾ ।
ಲಂಕಾ ತ್ರಾಸಾಕುಲಾ ರಾತ್ರೌ ಪ್ರನೃತ್ತೇವಾಭವತ್ತದಾ ॥
ಅನುವಾದ
ಲಂಕೆಯ ವಿಶಾಲ ಎತ್ತರವಾದ ದ್ವಾರವೂ ನಡುಗಿಹೋಯಿತು. ಮನೆಗಳು ಕುಸಿದು ಹೋದುವು. ಇಡೀ ನಗರಿಯೇ ಭಯ ದಿಂದ ವ್ಯಾಕುಲವಾಗಿ ರಾತ್ರಿಯಲ್ಲಿ ಕುಣಿಯುತ್ತಿದೆಯೇ ಎಂದೆನಿಸುತ್ತಿತ್ತು.॥40॥
ಮೂಲಮ್ - 41
ಪೃಥಿವೀಧರ ಸಂಕಾಶೋ ನಿಪೀಡ್ಯ ಪೃಥಿವೀಧರಮ್ ।
ಪೃಥಿವೀಂ ಕ್ಷೋಭಯಾಮಾಸ ಸಾರ್ಣವಾಂ ಮಾರುತಾತ್ಮಜಃ ॥
ಅನುವಾದ
ಪರ್ವತಾಕಾರ ಮಾರುತಿಯು ಆ ಪರ್ವತವನ್ನು ಒತ್ತಿದಾಗ ಪೃಥವಿ ಮತ್ತು ಸಮುದ್ರಗಳೂ ಅಲ್ಲೋಲಕಲ್ಲೋಲವಾದುವು.॥41॥
ಮೂಲಮ್ - 42
ಆರುರೋಹ ತದಾ ತಸ್ಮಾದ್ಧರಿರ್ಮಲಯ ಪರ್ವತಮ್ ।
ಮೇರುಮಂದರ ಸಂಕಾಶಂ ನಾನಾ ಪ್ರಸ್ರವಣಾಕುಲಮ್ ॥
ಅನುವಾದ
ಅನಂತರ ಅಲ್ಲಿಂದ ಮುಂದರಿದು ಅವನು ಮೇರು ಮಂದರಾಚಲದಂತೆ ಎತ್ತರವಾದ ಅನೇಕ ಜಲಪಾತಗಳಿಂದ ಕೂಡಿದ್ದ ಮಲಯಾ ಚಲವನ್ನು ಹತ್ತಿದನು.॥42॥
ಮೂಲಮ್ - 43
ನಾನಾ ದ್ರುಮಲತಾಕೀರ್ಣಂ ವಿಕಾಸಿಕಮಲೋತ್ಪಲಮ್ ।
ಸೇವಿತಂ ದೇವಗಂಧರ್ವೈಃ ಷಷ್ಟಿಯೋಜನಮುಚ್ಛ್ರಿತಮ್ ॥
ಅನುವಾದ
ಅಲ್ಲಿ ಬಗೆ ಬಗೆಯ ವೃಕ್ಷಲತೆಗಳು ಹಬ್ಬಿದ್ದವು. ಕಮಲ ಕುಮುದಗಳು ಅರಳಿದ್ದವು. ಅರವತ್ತು ಯೋಜನ ಎತ್ತರವಾದ ಆ ಪರ್ವತವನ್ನು ದೇವತೆಗಳು ಗಂಧರ್ವರು ಸೇವಿಸುತ್ತಿದ್ದರು.॥43॥
ಮೂಲಮ್ - 44
ವಿದ್ಯಾಧರೈರ್ಮುನಿಗಣೈರಪ್ಸರೋಭಿರ್ನಿಷೇವಿತಮ್ ।
ನಾನಾಮೃಗ ಗಣಾಕೀರ್ಣಂ ಬಹುಕಂದರ ಶೋಭಿತಮ್ ॥
ಅನುವಾದ
ವಿದ್ಯಾಧರರು, ಋಷಿ-ಮುನಿ, ಅಪ್ಸರೆಯರು ಅಲ್ಲಿ ವಾಸಿಸುತ್ತಿದ್ದರು. ಅನೇಕ ರೀತಿಯ ಮೃಗಪಕ್ಷಿಗಳು ಎಲ್ಲೆಡೆ ವ್ಯಾಪಿಸಿಕೊಂಡಿದ್ದವು. ಅನೇಕ ಕಂದರಗಳಿಂದ ಆ ಪರ್ವತ ಶೋಭಿಸುತ್ತಿತ್ತು.॥44॥
ಮೂಲಮ್ - 45
ಸರ್ವಾನಾಕುಲಯಂ ಸ್ತತ್ರ ಯಕ್ಷಗಂಧರ್ವ ಕಿನ್ನರಾನ್ ।
ಹನೂಮಾನ್ಮೇಘ ಸಂಕಾಶೋ ವವೃಧೇ ಮಾರುತಾತ್ಮಜಃ ॥
ಅನುವಾದ
ಮಾರುತಾತ್ಮಜನು ಅಲ್ಲಿ ವಾಸಿಸುವ ಯಕ್ಷ, ಗಂಧರ್ವ, ಕಿನ್ನರ ಮುಂತಾದವರನ್ನು ವ್ಯಾಕುಲಗೊಳಿಸುತ್ತಾ ಮೇಘ ದಂತೆ ಬೆಳೆಯತೊಡಗಿದನು.॥45॥
ಮೂಲಮ್ - 46
ಪದ್ಬ್ಯಾಂ ತು ಶೈಲಮಾಪೀಡ್ಯ ಬಡವಾಮುಖವನ್ಮುಖಮ್ ।
ವಿವೃತ್ಯೋಗ್ರಂ ನನಾದೋಚ್ಛೈಸ್ತ್ರಾಸಯನ್ ರಜನೀಚರಾನ್ ॥
ಅನುವಾದ
ಅವನು ಎರಡೂ ಕಾಲುಗಳಿಂದ ಆ ಪರ್ವತವನ್ನು ಅದುಮಿ, ವಡವಾನಲದಂತೆ ತನ್ನ ಭಯಂಕರ ಬಾಯಿಯನ್ನು ಅಗಲಿಸಿ, ನಿಶಾಚರರನ್ನು ಹೆದರಿಸುತ್ತಾ ಜೋರಾಗಿ ಗರ್ಜಿಸತೊಡಗಿದನು.॥46॥
ಮೂಲಮ್ - 47
ತಸ್ಯ ನಾನದ್ಯಮಾನಸ್ಯ ಶ್ರುತ್ವಾ ನಿನದಮುತ್ತಮಮ್ ।
ಲಂಕಾಸ್ಥಾ ರಾಕ್ಷಸವ್ಯಾಘ್ರಾ ನ ಶೇಕುಃ ಸ್ಪಂದಿತುಂ ಕ್ವಚಿತ್ ॥
ಅನುವಾದ
ಗಟ್ಟಿಯಾಗಿ ಪದೇ ಪದೇ ಗರ್ಜಿಸುತ್ತಿರುವ ಹನುಮಂತನ ಆ ಮಹಾ ಸಿಂಹನಾದವನ್ನು ಕೇಳಿ ಲಂಕೆಯ ನಿವಾಸಿ ಶ್ರೇಷ್ಠ ರಾಕ್ಷಸರು ಭಯದಿಂದಾಗಿ ಸ್ತಬ್ಧರಾದರು.॥47॥
ಮೂಲಮ್ - 48
ನಮಸ್ಕೃತ್ವಾಥ ಸಮುದ್ರಾಯ ಮಾರುತಿರ್ಭೀಮವಿಕ್ರಮಃ ।
ರಾಘವಾರ್ಥೇ ಪರಂ ಕರ್ಮ ಸಮೀಹತ ಪರಂತಪಃ ॥
ಅನುವಾದ
ಭಯಾನಕ ಪರಾಕ್ರಮಿ ಪರಂತಪ ಪವನನಂದನ ಹನುಮಂತನು ಸಮುದ್ರಕ್ಕೆ ವಂದಿಸಿ ಶ್ರೀರಾಮನಿಗಾಗಿ ಮಹಾಪುರುಷಾರ್ಥವನ್ನು ಮಾಡಲು ನಿಶ್ಚಯಿಸಿದನು.॥48॥
ಮೂಲಮ್ - 49
ಸ ಪುಚ್ಛಮುದ್ಯಮ್ಯ ಭುಜಂಗಕಲ್ಪಂ
ವಿನಮ್ಯ ಪೃಷ್ಠಂ ಶ್ರವಣೇ ನಿಕುಚ್ಚ ।
ವಿವೃತ್ಯ ವಕ್ತ್ರಂ ವಡವಾಮುಖಾಭ-
ಮಾಪುಪ್ಲುವೆ ವ್ಯೋಮ್ನಿ ಸ ಚಂಡವೇಗಃ ॥
ಅನುವಾದ
ಅವನು ತನ್ನ ಸರ್ಪಾಕಾರ ಬಾಲವನ್ನು ಮೇಲಕ್ಕೆತ್ತಿ, ಬೆನ್ನುಬಗ್ಗಿಸಿ, ಎರಡೂ ಕಿವಿಗಳನ್ನು ಹಿಂದಕ್ಕೆ ಮಡಚಿ, ಮಡವಾಮುಖ ಅಗ್ನಿಯಂತೆ ಬಾಯ್ದೆರೆದು ಪ್ರಚಂಡ ವೇಗದಿಂದ ಆಕಾಶಕ್ಕೆ ನೆಗೆದನು.॥49॥
ಮೂಲಮ್ - 50
ಸ ವೃಕ್ಷಖಣ್ಡಾಂಸ್ತರಸಾ ಜಹಾರ
ಶೈಲಾನ್ಶಿಲಾಃ ಪ್ರಾಕೃತ ವಾನರಾಂಶ್ಚ ।
ಬಾಹೂರು ವೇಗೋದ್ಗತಸಂಪ್ರಣುನ್ನಾ-
ಸ್ತೇ ತೀಕ್ಷ್ಣವೇಗಾಃ ಸಲಿಲೇ ನಿಪೇತುಃ ॥
ಅನುವಾದ
ಹನುಮಂತನು ತನ್ನ ತೀವ್ರವೇಗದಿಂದ ಎಷ್ಟೋ ವೃಕ್ಷ, ಪರ್ವತ ಶಿಖರ, ಶಿಲೆಗಳನ್ನು ಹಾಗೂ ಅಲ್ಲಿ ಇದ್ದ ಸಾಧಾರಣ ವಾನರರನ್ನು ತನ್ನೊಂದಿಗೆ ಹಾರಿಸಿಕೊಂಡು ಹೋದನು. ಅವನ ಭುಜಗಳ, ತೊಡೆಗಳ ವೇಗದಿಂದ ದೂರಕ್ಕೆ ಎಸೆಯಲ್ಪಟ್ಟ ಕಾರಣ ಅವುಗಳ ವೇಗ ಶಾಂತವಾಗಿ ಸಮುದ್ರಕ್ಕೆ ಬಿದ್ದುಹೋದವು.॥50॥
ಮೂಲಮ್ - 51
ಸ ತೌ ಪ್ರಸಾರ್ಯೋರಗ ಭೋಗಕಲ್ಪೌ
ಭುಜೌ ಭುಜಂಗಾರಿನಿಕಾಶವೀರ್ಯಃ ।
ಜಗಾಮ ಶೈಲಂ ನಗರಾಜಮಗ್ರ್ಯಂ
ದಿಶಃ ಪ್ರಕರ್ಷನ್ನಿವ ವಾಯುಸೂನುಃ ॥
ಅನುವಾದ
ಮಹಾಸರ್ಪಗಳಂತೆ ಕಂಡುಬರುವ ಎರಡು ಭುಜಗಳನ್ನು ಚಾಚಿ, ಗರುಡನಂತಹ ಪರಾಕ್ರಮಿ ವಾಯುಸುತನು ಸಮಸ್ತ ದಿಕ್ಕುಗಳನ್ನೇ ಸೆಳೆಯುತ್ತಿರುವನೋ ಎಂಬಂತೆ ಹಿಮಾಲಯದ ಕಡೆಗೆ ಸಾಗಿದನು.॥51॥
ಮೂಲಮ್ - 52
ಸ ಸಾಗರಂ ಘೂರ್ಣಿತವೀಚಿಮಾಲಂ
ತದಂಭಸಾ ಭ್ರಾಮಿತ ಸರ್ವಸತ್ತ್ವಮ್ ।
ಸಮೀಕ್ಷಮಾಣಃ ಸಹಸಾ ಜಗಾಮ
ಚಕ್ರಂ ಯಥಾವಿಷ್ಣು ಕರಾಗ್ರಮುಕ್ತಮ್ ॥
ಅನುವಾದ
ಸುತ್ತುತ್ತಿದ್ದ ಅಲೆಗಳಿಂದ ಕೂಡಿದ್ದ, ಅಲೆಗಳ ಹೊಡೆತಕ್ಕೆ ಅತ್ತ-ಇತ್ತ ದೂಡಲ್ಪಡುತ್ತಿದ್ದ ಜಲ ಜಂತುಗಳಿಂದ ಕೂಡಿದ ಸಮುದ್ರವನ್ನು ನೋಡುತ್ತಾ ಮಾರುತಿಯು ಮಹಾವಿಷ್ಣು ಪ್ರಯೋಗಿಸಿದ ಚಕ್ರದಂತೆ ಮುಂದರಿದನು.॥52॥
ಮೂಲಮ್ - 53
ಸ ಪರ್ವತಾನ್ ಪಕ್ಷಿಗಣಾನ್ಸರಾಂಸಿ
ನದೀಸ್ತಟಾಕಾನಿ ಪುರೋತ್ತಮಾನಿ ।
ಸ್ಫೀತಾಂಜನಾಂಸ್ತಾನಪಿ ಸಂಪ್ರವೀಕ್ಷ್ಯ
ಜಗಾಮ ವೇಗಾತ್ ಪಿತೃತುಲ್ಯವೇಗಃ ॥
ಅನುವಾದ
ಅವನ ವೇಗ ತಂದೆ ವಾಯುದೇವರಂತೆ ಇತ್ತು. ಅವನು ಅನೇಕಾನೇಕ ಪರ್ವತ, ಪಕ್ಷಿಗಳನ್ನು, ನದಿಗಳನ್ನು, ಸರೋವರ, ನಗರಗಳನ್ನು ಸಮೃದ್ಧಶಾಲಿ ಪಟ್ಟಣಗಳನ್ನು ನೋಡುತ್ತಾ ವೇಗವಾಗಿ ಮುಂದರಿಯುತ್ತಿದ್ದನು.॥53॥
ಮೂಲಮ್ - 54
ಆದಿತ್ಯಪಥಮಾಶ್ರಿತ್ಯ ಜಗಾಮ ಸ ಗತಶ್ರಮಃ ।
ಹನುಮಾಂಸ್ತ್ವರಿತೋ ವೀರಃ ಪಿತುಸ್ತುಲ್ಯಪರಾಕ್ರಮಃ ॥
ಅನುವಾದ
ವೀರ ಮಾರುತಿಯು ತಂದೆಯಂತೆ ಪರಾಕ್ರಮಿ ಹಾಗೂ ತೀವ್ರಗಾಮಿಯಾಗಿದ್ದನು. ಅವನು ಸೂರ್ಯಪಥವನ್ನು ಆಶ್ರಯಿಸಿ ಆಯಾಸ ಬಳಲಿಕೆ ಇಲ್ಲದೆ ಪ್ರಯಾಣ ಮಾಡುತ್ತಿದ್ದನು.॥54॥
ಮೂಲಮ್ - 55
ಜವೇನ ಮಹತಾ ಯುಕ್ತೋ ಮಾರುತಿರ್ವಾತರಂಹಸಾ ।
ಜಗಾಮ ಹರಿಶಾರ್ದೂಲೋ ದಿಶಃ ಶಬ್ದೇನ ನಾದಯನ್ ॥
ಅನುವಾದ
ವಾನರಸಿಂಹ ಮಾರುತಿಯು ಮಹಾವೇಗದಿಂದ ಕೂಡಿದ್ದು, ಎಲ್ಲ ದಿಕ್ಕುಗಳನ್ನು ಪ್ರತಿಧ್ವನಿಸುತ್ತಾ ವಾಯುವೇಗದಿಂದ ಹೋಗುತ್ತಿದ್ದನು.॥55॥
ಮೂಲಮ್ - 56
ಸ್ಮರನ್ ಜಾಂಬವತೋ ವಾಕ್ಯಂ ಮಾರುತಿರ್ಭೀಮವಿಕ್ರಮಃ ।
ದದರ್ಶ ಸಹಸಾ ಚಾಪಿ ಹಿಮವಂತಂ ಮಹಾಕಪಿಃ ॥
ಅನುವಾದ
ಭಯಂಕರ ಪರಾಕ್ರಮಿಯಾದ ಹನುಮಂತನು ಜಾಂಬವಂತನ ಮಾತನ್ನು ಸ್ಮರಿಸುತ್ತಾ ಸ್ವಲ್ಪ ಸಮಯದಲ್ಲೆ ಹಿಮವತ್ವರ್ವತವನ್ನು ದರ್ಶಿಸಿದನು.॥56॥
ಮೂಲಮ್ - 57
ನಾನಾ ಪ್ರಸ್ರವಣೋಪೇತಂ ಬಹುಕಂದರ ನಿರ್ಝರಮ್ ।
ಶ್ವೇತಾಭ್ರಚಯ ಸಂಕಾಶೈಃ ಶಿಖರೈಶ್ಚಾರುದರ್ಶನೈಃ ।
ಶೋಭಿತಂ ವಿವಿಧೈರ್ವೃಕ್ಷೈರಗಮತ್ ಪರ್ವತೋತ್ತಮಮ್ ॥
ಅನುವಾದ
ಆ ಪರ್ವತವು ನಾನಾ ಪ್ರಕಾರದ ಗಿರಿ ನದಿಗಳಿಂದಲೂ, ಚಿಲುಮೆಗಳಿಂದಲೂ, ಗುಹೆಗಳಿಂದಲೂ ಕೂಡಿದ್ದ ಬಿಳಿಯ ಮೋಡಗಳಂತಿದ್ದ ಸುಂದರವಾದ ಶಿಖರಗಳಿಂದ ಶೋಭಿಸುವ, ವಿಧ ವಿಧವಾದ ವೃಕ್ಷಗಳಿಂದಲೂ ಶೋಭಿಸುತ್ತಿರುವ ಹಿಮಾಲಯ ಪರ್ವತಕ್ಕೆ ಮಾರುತಿಯು ಹೋದನು.॥57॥
ಮೂಲಮ್ - 58
ಸ ತಂಸಮಾಸಾದ್ಯ ಮಹಾ ನಗೇಂದ್ರ-
ಮತಿಪ್ರವೃದ್ಧೋತ್ತಮ ಹೇಮಶೃಂಗಮ್ ।
ದದರ್ಶ ಪುಣ್ಯಾನಿ ಮಹಾಶ್ರಮಾಣಿ
ಸುರರ್ಷಿ ಸಂಘೋತ್ತಮ ಸೇವಿತಾನಿ ॥
ಅನುವಾದ
ಆ ಮಹಾಪರ್ವತರಾಜನ ಅತಿ ಎತ್ತರವಾದ ಸುವರ್ಣಮಯ ಶಿಖರವನ್ನು ನೋಡಿ, ಅಲ್ಲಿಗೆ ಹೋಗಿ ಹನುಮಂತನು ದೇವರ್ಷಿಗಳು ವಾಸಿಸುತ್ತಿದ್ದ ಪರಮ ಪವಿತ್ರ ದೊಡ್ಡ ದೊಡ್ಡ ಆಶ್ರಮಗಳನ್ನು ನೋಡಿದನು.॥58॥
ಮೂಲಮ್ - 59
ಸ ಬ್ರಹ್ಮಕೋಶಂ ರಜತಾಲಯಂ ಚ
ಶಕ್ರಾಲಯಂ ರುದ್ರಶರಪ್ರಮೋಕ್ಷಮ್ ।
ಹಯಾನನಂ ಬ್ರಹ್ಮಶಿರಶ್ಚ ದೀಪ್ತಂ
ದದರ್ಶ ವೈವಸ್ವತ ಕಿಂಕರಾಂಶ್ಚ ॥
ಅನುವಾದ
ಅಲ್ಲಿ ಮಾರುತಿಯು ಬ್ರಹ್ಮನ ನಿವಾಸ ಸ್ಥಾನವನ್ನೂ, ರಜತನಾಭಿಯ ಸ್ಥಾನವಾದ ಕೈಲಾಸ ಶಿಖರವನ್ನು, ಇಂದ್ರಾಲಯವನ್ನೂ, ರುದ್ರನು ತ್ರಿಪುರಾಸುರನ ಮೇಲೆ ಬಾಣಬಿಟ್ಟ ಸ್ಥಳವನ್ನೂ, ಹಯಗ್ರೀವನ ಸ್ಥಾನವನ್ನು, ಪ್ರಕಾಶಮಾನವಾದ ಬ್ರಹ್ಮಾಸ್ತ್ರ ದೇವತೆಯ ಸ್ಥಾನವನ್ನು ನೋಡಿದನು. ಜೊತೆಗೆ ಯಮಕಿಂಕರರ ಸ್ಥಾನವೂ ದೃಷ್ಟಿ ಗೋಚರವಾಯಿತು.॥59॥
ಮೂಲಮ್ - 60
ವಹ್ನ್ಯಾಲಯಂ ವೈಶ್ರವಣಾಲಯಂ ಚ
ಸೂರ್ಯಪ್ರಭಂ ಸೂರ್ಯ ನಿಬಂಧನಂ ಚ ।
ಬ್ರಹ್ಮಾಲಯಂ ಶಂಕರ ಕಾರ್ಮುಕಂ ಚ
ದದರ್ಶ ನಾಭಿಂ ಚ ವಸುಂಧರಾಯಾಃ ॥
ಅನುವಾದ
ಇಷ್ಟೇ ಅಲ್ಲದೆ ಅಗ್ನಿಯ, ಕುಬೇರನ ಮತ್ತು ಸೂರ್ಯತುಲ್ಯ ತೇಜಸ್ವೀ ದ್ವಾದಶ ಸೂರ್ಯರ ಸಮಾವೇಶ ಸ್ಥಾನವನ್ನು ನೋಡಿದನು. ಚತುರ್ಮುಖ ಬ್ರಹ್ಮನ ಆಸನವನ್ನು, ಶಂಕರನ ಪಿನಾಕ ಧನುಸ್ಸನ್ನು, ಭೂಮಿಯ ನಾಭಿ ಪ್ರದೇಶವನ್ನು ನೋಡಿದನು.॥6.॥
ಮೂಲಮ್ - 61
ಕೈಲಾಸಮಗ್ರ್ಯಂ ಹಿಮವಚ್ಛಿಲಾಂ ಚ
ತಂ ವೈ ವೃಷಂ ಕಾಂತನ ಶೈಲಮಗ್ರ್ಯಮ್ ।
ಪ್ರದೀಪ್ತ ಸರ್ವೌಷಧಿ ಸಂಪ್ರದೀಪ್ತಂ
ದದರ್ಶ ಸರ್ವೌಷಧಿ ಪರ್ವತೇಂದ್ರಮ್ ॥
ಅನುವಾದ
ಅನಂತರ ಶ್ರೇಷ್ಠ ಕೈಲಾಸ ಪರ್ವತ, ಹಿಮಾಲಯ ಶಿಲಾ, ಶಿವನ ವಾಹನನಾದ ವೃಷಭನನ್ನು, ಸುವರ್ಣಮಯ ಶ್ರೇಷ್ಠ ಋಷಭ ಪರ್ವತವನ್ನು ನೋಡಿದನು. ಬಳಿಕ ಎಲ್ಲ ಪ್ರಕಾರದ ದೀಪ್ತಿಮತಿ ಔಷಧಿಗಳಿಂದ ಹೊಳೆಯುವ ಔಷಧಿಗಳ ಉತ್ತಮ ಪರ್ವತವನ್ನು ನೋಡಿದನು.॥61॥
ಮೂಲಮ್ - 62
ಸ ತಂ ಸಮೀಕ್ಷ್ಯಾನಲರಾಶಿದೀಪ್ತಂ
ವಿಸಿಸ್ಮಿಯೇ ವಾಸವ ದೂತಸೂನುಃ ।
ಆಪ್ಲುತ್ಯ ತಂ ಚೌಷಧಿ ಪರ್ವತೇಂದ್ರಂ
ತತ್ರೌಷಧೀನಾಂ ವಿಚಯಂ ಚಕಾರ ॥
ಅನುವಾದ
ಅಗ್ನಿ ಯಂತೆ ಪ್ರಕಾಶಿತವಾಗುವ ಆ ಪರ್ವತವನ್ನು ನೋಡಿ ಪವನಕುಮಾರ ಹನುಮಂತನಿಗೆ ಬಹಳ ವಿಸ್ಮಯವಾಯಿತು. ಅವನು ಹಾರಿ ಔಷಧಿಗಳು ತುಂಬಿದ ಪರ್ವತವನ್ನು ಹತ್ತಿದನು. ಅಲ್ಲಿ ಆ ನಾಲ್ಕು ಔಷಧಿಗಳನ್ನು ಹುಡುಕತೊಡಗಿದನು.॥62॥
ಮೂಲಮ್ - 63
ಸ ಯೋಜನ ಸಹಸ್ರಾಣಿ ಸಮತೀತ್ಯ ಮಹಾಕಪಿಃ ।
ದಿವ್ಯೌಷಧಿಧರಂ ಶೈಲಂ ವ್ಯಚರನ್ಮಾರುತಾತ್ಮಜಃ ॥
ಅನುವಾದ
ಮಹಾಕಪಿ ಪವನಪುತ್ರ ಹನುಮಂತನು ಸಾವಿರಾರು ಯೋಜನಗಳನ್ನು ದಾಟಿ ಅಲ್ಲಿಗೆ ಬಂದಿದ್ದನು. ದಿವ್ಯ ಔಷಧಿಗಳನ್ನು ಧರಿಸಿದ ಆ ಶೈಲ-ಶಿಖರದಲ್ಲಿ ಸಂಚರಿಸುತ್ತಿದ್ದನು.॥63॥
ಮೂಲಮ್ - 64
ಮಹೌಷಧ್ಯಸ್ತತಃ ಸರ್ವಾಸ್ತಸ್ಮಿನ್ ಪರ್ವತಸತ್ತಮೇ ।
ವಿಜ್ಞಾಯಾರ್ಥಿನಮಾಯಾಂತಂ ತತೋ ಜಗ್ಮುರದರ್ಶನಮ್ ॥
ಅನುವಾದ
ಆ ಉತ್ತಮ ಪರ್ವತದ ಮೇಲೆ ಇರುವ ಔಷಧಿಗಳೆಲ್ಲ ಯಾರೋ ನಮ್ಮನ್ನು ಕೊಂಡು ಹೋಗಲು ಬಂದಿರುವನು ಎಂದು ತಿಳಿದು ತತ್ಕಾಲ ಅದೃಶ್ಯವಾದುವು.॥64॥
ಮೂಲಮ್ - 65
ಸ ತಾ ಮಹಾತ್ಮಾ ಹನುಮಾನಪಶ್ಯಂ-
ಶ್ಚುಕೋಪ ರೋಷಾಚ್ಛ ಭೃಶಂ ನನಾದ ।
ಅಮೃಷ್ಯಮಾಣೋಽಗ್ನಿ ಸಮಾನಚಕ್ಷು-
ರ್ಮಹೀಧರೇಂದ್ರಂ ತಮುವಾಚ ವಾಕ್ಯಮ್ ॥
ಅನುವಾದ
ಔಷಧಿಗಳು ಕಾಣಸಿಗದಿದ್ದಾಗ ಹನುಮಂತನು ಕುಪಿತನಾಗಿ ರೋಷದಿಂದ ಜೋರಾಗಿ ಗರ್ಜಿಸತೊಡಗಿದನು. ಔಷಧಿಗಳು ಅಡಗಿರುವುದು ಅವನಿಗೆ ಸಹನೆಯಾಗಲಿಲ್ಲ. ಅವನ ಕಣ್ಣುಗಳು ಕೆಂಪಾಗಿ ಆ ಪರ್ವತನ ಬಳಿ ಇಂತೆಂದನು.॥65॥
ಮೂಲಮ್ - 66
ಕಿಮೇತದೇವಂ ಸುವಿನಿಶ್ಚಿತಂ ತೇ
ಯದ್ರಾಘವೇ ನಾಸಿ ಕೃತಾನುಕಂಪಃ ।
ಪಶ್ಯಾದ್ಯ ಮದ್ಬಾಹುಬಲಾಭಿಭೂತೋ
ವಿಕೀರ್ಣಮಾತ್ಮಾನಮಥೋ ನಗೇಂದ್ರ ॥
ಅನುವಾದ
ನಗೇಂದ್ರನೇ! ರಘುನಾಥನ ಮೇಲೆ ಕೃಪೆ ಮಾಡಬಾರದೆಂದು ಯಾವ ಬಲದಿಂದ ನಿಶ್ಚಯಿಸಿದೆ? ಇಂದು ನನ್ನ ಬಾಹುಬಲದಿಂದ ಪರಾಜಿತನಾಗಿ ನೀನು ಎಲ್ಲೆಡೆ ಚೆಲ್ಲಿಹೋಗುವೆ.॥66॥
ಮೂಲಮ್ - 67
ಸ ತಸ್ಯ ಶೃಂಗಂ ಸನಗಂ ಸನಾಗಂ
ಸಕಾಂಚನಂ ಧಾತುಸಹಸ್ರಜುಷ್ಟಮ್ ।
ವಿಕೀರ್ಣ ಕೂಟಂ ಜ್ವಲಿತಾಗ್ರಸಾನುಂ
ಪ್ರಗೃಹ್ಯ ವೇಗಾತ್ ಸಹಸೋನ್ಮಮಾಥ ॥
ಅನುವಾದ
ಹೀಗೆ ಹೇಳಿ ಅವನು ವೃಕ್ಷಗಳಿಂದ, ಆನೆಗಳಿಂದ, ಸುವರ್ಣ ಹಾಗೂ ಇತರ ಸಾವಿರಾರು ಧಾತುಗಳಿಂದ ತುಂಬಿದ ಆ ಪರ್ವತ ಶಿಖರವನ್ನು ವೇಗವಾಗಿ ಹಿಡಿದು ಕಿತ್ತುಬಿಟ್ಟನು. ವೇಗದಿಂದ ಕಿತ್ತಿದ್ದರಿಂದ ಅದರ ಮೇಲ್ಭಾಗವು ಪ್ರಜ್ವಲಿತವಾಗಿದ್ದ ಅನೇಕ ಶಿಖರಗಳು ಚೆಲ್ಲಾಪಿಲ್ಲಿಯಾದುವು.॥67॥
ಮೂಲಮ್ - 68
ಸ ತಂ ಸಮುತ್ಪಾಟ್ಯ ಖಮುತ್ಪಪಾತ
ವಿತ್ರಾಸ್ಯಲೋಕಾನ್ ಸಸುರಾಸುರೇಂದ್ರಾನ್ ।
ಸಂಸ್ತೂಯಮಾನಃ ಖಚರೈರನೇಕೈ-
ರ್ಜಗಾಮ ವೇಗಾದ್ಗರುಡೋಗ್ರವೇಗಃ ॥
ಅನುವಾದ
ಅದನ್ನು ಕಿತ್ತು ಎತ್ತಿಕೊಂಡು ಹನುಮಂತನು ದೇವೇಶ್ವರರನ್ನು, ಅಸುರೇಶ್ವರನನ್ನು, ಸಮಸ್ತ ಲೋಕಗಳನ್ನು ಭಯಗೊಳಿಸಿ, ಗರುಡನಂತೆ ಭಯಂಕರ ವೇಗದಿಂದ ಆಕಾಶದಲ್ಲಿ ಹಾರುತ್ತಾ ಸಾಗಿದನು. ಆಗ ಅನೇಕ ಆಕಾಶಚರೀ ಪ್ರಾಣಿಗಳು ಅವನನ್ನು ಸುತ್ತಿಸತೊಡಗಿದರು.॥68॥
ಮೂಲಮ್ - 69
ಸ ಭಾಸ್ಕರಾಧ್ವಾನಮನುಪ್ರಪನ್ನ-
ಸ್ತಂ ಭಾಸ್ಕರಾಭಂ ಶಿಖರಂ ಪ್ರಗೃಹ್ಯ ।
ಬಭೌ ತದಾ ಭಾಸ್ಕರಸಂನಿಕಾಶೋ
ರವೇಃ ಸಮೀಪೇ ಪ್ರತಿಭಾಸ್ಕರಾಭಃ ॥
ಅನುವಾದ
ಸೂರ್ಯನ ಪಥವನ್ನು ಸೇರಿ ಸೂರ್ಯಪ್ರಕಾಶದಂತೆ ಪ್ರಕಾಶಮಾನವಾಗಿದ್ದ ಪರ್ವತಶಿಖರವನ್ನು ಎತ್ತಿಕೊಂಡು ಹೊರಟ ಭಾಸ್ಕರಸದೃಶನಾದ ಮಾರುತಿಯು ಸೂರ್ಯದೇವನ ಸನ್ನಿಧಿಯಲ್ಲಿ ಮತ್ತೊಬ್ಬ ಸೂರ್ಯನಂತೆ ಕಂಗೊಳಿಸುತ್ತಿದ್ದನು.॥69॥
ಮೂಲಮ್ - 70
ಸ ತೇನ ಶೈಲೇನ ಭೃಶಂ ರರಾಜ
ಶೈಲೋಪಮೋ ಗಂಧವಹಾತ್ಮಜಸ್ತು ।
ಸಹಸ್ರಧಾರೇಣ ಸಪಾವಕೇನ
ಚಕ್ರೇಣ ಖೇ ವಿಷ್ಣು ರಿವಾರ್ಪಿತೇನ ॥
ಅನುವಾದ
ಪರ್ವತೋಸಮನಾದ ವಾಯುಪುತ್ರನು ಆಗ ಸಾವಿರ ಅರೆಗಳುಳ್ಳ, ಅಗ್ನಿಜ್ವಾಲೆಗಳಿಂದ ಯುಕ್ತವಾದ ಸುದರ್ಶನ ಚಕ್ರವನ್ನು ಧರಿಸಿದ ಮಹಾವಿಷ್ಣುವಿನಂತೆ ರಾರಾಜಿಸುತ್ತಿದ್ದನು.॥70॥
ಮೂಲಮ್ - 71
ತಂ ವಾನರಾಃ ಪ್ರೇಕ್ಷ್ಯತದಾವಿನೇದುಃ
ಸ ತಾನಪಿ ಪ್ರೇಕ್ಷ್ಯಮುದಾ ನನಾದ ।
ತೇಷಾಂ ಸಮುತ್ಕೃಷ್ಟರವಂ ನಿಶಮ್ಯ
ಲಂಕಾಲಯಾ ಭೀಮತರಂ ವಿನೇದುಃ ॥
ಅನುವಾದ
ಪರ್ವತವನ್ನು ಹೊತ್ತುತಂದ ಹನುಮಂತನನ್ನು ನೋಡಿ ವಾನರರೆಲ್ಲರೂ ಜೋರಾಗಿ ಗರ್ಜಿಸತೊಡಗಿದರು. ಅವನೂ ಅವರೆಲ್ಲರನ್ನು ನೋಡಿ ಹರ್ಷದಿಂದ ಸಿಂಹನಾದ ಮಾಡಿದನು. ಇವರ ತುಮುಲ ನಾದವನ್ನು ಕೇಳಿ ಲಂಕಾನಿವಾಸಿಗಳಾದ ನಿಶಾಚರರು ಭಯದಿಂದ ಚೀತ್ಕಾರ ಮಾಡಿದರು.॥71॥
ಮೂಲಮ್ - 72
ತತೋ ಮಹಾತ್ಮಾ ನಿಪಪಾತ ತಸ್ಮಿನ್
ಶೈಲೋತ್ತಮೇ ವಾನರಸೈನ್ಯಮಧ್ಯೇ ।
ಹರ್ಯುತ್ತಮೇಭ್ಯಃ ಶಿರಸಾಭಿವಾದ್ಯ
ವಿಭೀಷಣಂ ತತ್ರ ಚ ಸಸ್ವಜೇ ಸಃ ॥
ಅನುವಾದ
ಅನಂತರ ಹನುಮಂತನು ಉತ್ತಮ ತ್ರಿಕೂಟ ಪರ್ವತದಲ್ಲಿ ಇಳಿದು, ವಾನರ ಸೈನ್ಯದೊಳಗೆ ಬಂದು ಎಲ್ಲ ಶ್ರೇಷ್ಠವಾನರರನ್ನು ವಂದಿಸಿ ವಿಭೀಷಣನನ್ನು ಬಿಗಿದಪ್ಪಿಕೊಂಡನು.॥72॥
ಮೂಲಮ್ - 73
ತವಾಪ್ಯುಭೌ ಮಾನುಷರಾಜಪುತ್ರೌ
ತಂ ಗಂಧಮಾಘ್ರಾಯ ಮಹೌಷಧೀನಾಮ್ ।
ಬಭೂವತುಸ್ತತ್ರ ತದಾ ವಿಶಲ್ಯಾ-
ವುತ್ತಸ್ಥುರನ್ಯೇ ಚ ಹರಿಪ್ರವೀರಾಃ ॥
ಮೂಲಮ್ - 74
ಸರ್ವೇ ವಿಶಲ್ಯಾ ವಿರುಜಾಃ ಕ್ಷಣೇನ
ಹರಿಪ್ರವೀರಾಶ್ಚ ಹತಾಶ್ಚ ಯೇ ಸ್ಯುಃ ।
ಗಂಧೇನ ತಾಸಾಂ ಪ್ರವರೌಷಧೀನಾಂ
ಸುಪ್ತಾ ನಿಶಾಂತೇಷ್ಟಿ ವ ಸಂಪ್ರಬುದ್ಧಾಃ ॥
ಅನುವಾದ
ಬಳಿಕ ಆ ರಾಜಕುಮಾರ ರಾಮ-ಲಕ್ಷ್ಮಣರು ಆ ಮಹೌಷಧಿಗಳನ್ನು ಆಘ್ರಾಣಿಸಿ ಸ್ವಸ್ಥರಾದರು. ಅವರ ಶರೀರಗಳಿಂದ ಬಾಣಗಳು ಬಿದ್ದು ಹೋಗಿ, ಗಾಯ ತುಂಬಿ ಬಂದವು. ಹೀಗೆಯೇ ಇತರ ಪ್ರಮುಖ ವಾನರ ವೀರರೆಲ್ಲರೂ ಔಷಧಿಗಳ ಸುಗಂಧದಿಂದ ರಾತ್ರಿಯ ಕೊನೆಯ ಜಾವದಲ್ಲಿ ಮಲಗಿ ಎದ್ದಂತೆ ಕ್ಷಣಾರ್ಧದಲ್ಲಿ ನಿರೋಗಿಗಳಾಗಿ ಎದ್ದುನಿಂತರು. ಅವರ ಶರೀರದಲ್ಲಿ ಹೊಕ್ಕಿದ್ದ ಬಾಣಗಳೆಲ್ಲ ಕಳಚಿಬಿದ್ದು, ಎಲ್ಲ ನೋವು ಮಾಯವಾಯಿತು.॥73-74॥
ಮೂಲಮ್ - 75
ಯದಾ ಪ್ರಭೃತಿ ಲಂಕಾಯಾಂ ಯುಧ್ಯಂತೇ ಹರಿರಾಕ್ಷಸಾಃ ।
ತದಾ ಪ್ರಭೃತಿ ಮಾನಾರ್ಥಮಾಜ್ಞಯಾ ರಾವಣಸ್ಯ ಚ ॥
ಮೂಲಮ್ - 76
ಯೇಹನ್ಯಂತೇ ರಣೇ ತತ್ರ ರಾಕ್ಷಸಾಃ ಕಪಿಕುಂಜರೈಃ ।
ಹತಾ ಹತಾಸ್ತು ಕ್ಷಿಪ್ಯಂತೇ ಸರ್ವ ಏವ ತು ಸಾಗರೇ ॥
ಅನುವಾದ
ಲಂಕೆಯಲ್ಲಿ ವಾನರರಿಗೂ, ರಾಕ್ಷಸರಿಗೂ ಯುದ್ಧ ಪ್ರಾರಂಭವಾದಾಗಿನಿಂದ ವಾನರರಿಂದ ಯುದ್ಧದಲ್ಲಿ ಸತ್ತಿರುವ ರಾಕ್ಷಸರನ್ನು ರಾವಣನ ಆಜ್ಞೆಯಂತೆ ಸಮುದ್ರಕ್ಕೆ ಎಸೆಯುತ್ತಿದ್ದರು. ಬಹಳಷ್ಟು ರಾಕ್ಷಸರು ಸತ್ತುಹೋದರೆಂದು ವಾನರರಿಗೆ ತಿಳಿಯ ಬಾರದೆಂದು ಹೀಗೆ ಮಾಡುತ್ತಿದ್ದರು.॥75-76॥
ಮೂಲಮ್ - 77
ತತೋ ಹರಿರ್ಗಂಧವಹಾತ್ಮಜಸ್ತು
ತಮೋಷಧೀ ಶೈಲಮುದಗ್ರವೇಗಃ ।
ನಿನಾಯ ವೇಗಾದ್ಧಿ ಮವಂತಮೇವ
ಪುನಶ್ಚ ರಾಮೇಣ ಸಮಾಜಗಾಮ ॥
ಅನುವಾದ
ಅನಂತರ ಪ್ರಚಂಡ ವೇಗಶಾಲಿ ಹನುಮಂತನು ಪುನಃ ಔಷಧಿಗಳ ಆ ಪರ್ವತವನ್ನು ವೇಗವಾಗಿ ಹಿಮಾಲಯಕ್ಕೆ ತಲುಪಿಸಿದನು ಮತ್ತು ಮರಳಿ ಬಂದು ಶ್ರೀರಾಮನೊಂದಿಗೆ ಸೇರಿಕೊಂಡನು.॥77॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಎಪ್ಪತ್ತನಾಲ್ಕನೆಯ ಸರ್ಗ ಪೂರ್ಣವಾಯಿತು.॥74॥