वाचनम्
ಭಾಗಸೂಚನಾ
ಇಂದ್ರಜಿತುವು ಬ್ರಹ್ಮಾಸ್ತ್ರದಿಂದ ವಾನರ ಸೈನ್ಯ ಸಹಿತ ರಾಮ-ಲಕ್ಷ್ಮಣರನ್ನು ಮೂರ್ಛಿತಗೊಳಿಸಿದುದು
ಮೂಲಮ್ - 1
ತತೋ ಹತಾನ್ರಾಕ್ಷಸಪುಂಗವಾಂಸ್ತಾನ್
ದೇವಾಂತಕಾದಿತ್ರಿಶಿರೋಽತಿಕಾಯಾನ್ ।
ರಕ್ಷೋಗಣಾಸ್ತತ್ರ ಹತಾವಶಿಷ್ಟಾ
ಸ್ತೇ ರಾವಣಾಯ ತ್ವರಿತಾಃ ಶಶಂಸುಃ ॥
ಅನುವಾದ
ರಣಾಂಗಣದಲ್ಲಿ ಅಳಿದುಳಿದ ರಾಕ್ಷಸರು ರಾವಣನ ಬಳಿಗೆ ಬಂದು ದೇವಾಂತಕ, ತ್ರಿಶಿರಾ, ಅತಿಕಾಯ ಮೊದಲಾದ ರಾಕ್ಷಸ ಶ್ರೇಷ್ಠರು ಹತರಾದರೆಂಬ ವಾರ್ತೆಯನ್ನು ರಾಜನಿಗೆ ತಿಳಿಸಿದರು.॥.॥
ಮೂಲಮ್
(ಶ್ಲೋಕ - 2)
ತತೋ ಹತಾಂಸ್ತಾನ್ಸ ಹಸಾ ನಿಶಮ್ಯ
ರಾಜಾ ಮಹಾಭಾಷ್ಪಪರಿಪ್ಲುತಾಕ್ಷಃ ।
ಪುತ್ರಕ್ಷಯಂ ಭ್ರಾತೃವಧಂ ಚ ಘೋರಂ
ವಿಚಿಂತ್ಯ ರಾಜಾ ವಿಪುಲಂ ಪ್ರದಧ್ಯೌ ॥
ಅನುವಾದ
ಅವರ ವಧೆಯ ಮಾತನ್ನು ಕೇಳಿ ರಾಜಾ ರಾವಣನ ಕಣ್ಣುಗಳಿಂದ ಕಣ್ಣೀರಿನ ಕೋಡಿಯೇ ಹರಿಯಿತು. ತಮ್ಮಂದಿರ, ಮಕ್ಕಳ ಭಯಾನಕ ವಧೆಯ ಮಾತನ್ನು ಯೋಚಿಸಿ ಹೆಚ್ಚಿನ ಚಿಂತೆ ಉಂಟಾಯಿತು.॥.॥
ಮೂಲಮ್ - 3
ತತಸ್ತು ರಾಜಾನಮುದೀಕ್ಷ್ಯ ದೀನಂ
ಶೋಕಾರ್ಣವೇ ಸಂಪರಿಪುಪ್ಲು ವಾನಮ್ ।
ರಥರ್ಷಭೋ ರಾಕ್ಷಸರಾಜಸೂನು-
ಸ್ತಮಿಂದ್ರಜಿದ್ವಾಕ್ಯಮಿದಂ ಬಭಾಷೇ ॥
ಅನುವಾದ
ಶೋಕ ಸಮುದ್ರದಲ್ಲಿ ಮುಳುಗಿ ದೀನನಾದ ರಾವಣನನ್ನು ನೋಡಿ ರಥಿಗಳಲ್ಲಿ ಶ್ರೇಷ್ಠನಾದ ರಾಕ್ಷಸ ರಾಜಕುಮಾರ ಇಂದ್ರಜಿತನು ಹೀಗೆ ಹೇಳಿದನು.॥.॥
ಮೂಲಮ್ - 4
ನ ತಾತ ಮೋಹಂ ಪ್ರತಿಗಂತು ಮರ್ಹಸೇ
ಯತ್ರೇಂದ್ರ ಜಿಜ್ಜೀವತಿ ನೈರ್ಋತೇಶ ।
ನೇಂದ್ರಾರಿಬಾಣಾಭಿಹತೋ ಹಿ ಕಶ್ಚಿತ್
ಪ್ರಾಣಾನ್ಸಮರ್ಥಃ ಸಮರೇಽಭಿಪಾತುಮ್ ॥
ಅನುವಾದ
ತಂದೆಯೇ! ಇಂದ್ರಜಿತನು ಬದುಕಿರುವವರೆಗೆ ನೀವು ಚಿಂತೆ, ಶೋಕ ಮಾಡಬೇಡಿ. ಈ ಇಂದ್ರಶತ್ರುವಿನ ಬಾಣಗಳಿಂದ ಗಾಯಗೊಂಡು ಯಾರೂ ಸಮರಾಂಗಣದಲ್ಲಿ ಬದುಕಿರಲಾರನು.॥4॥
ಮೂಲಮ್ - 5
ಪಶ್ಯಾದ್ಯ ರಾಮಂ ಸಹ ಲಕ್ಷ್ಮಣೇನ
ಮದ್ಬಾಣನಿರ್ಭಿನ್ನ ವಿಕೀರ್ಣದೇಹಮ್ ।
ಗತಾಯುಷಂ ಭೂಮಿತಲೇ ಶಯಾನಂ
ಶಿತೈಃ ಶರೈರಾಚಿತ ಸರ್ವಗಾತ್ರಮ್ ॥
ಅನುವಾದ
ಇಂದು ನಾನು ರಾಮ-ಲಕ್ಷ್ಮಣರ ಶರೀರಗಳನ್ನು ಬಾಣಗಳಿಂದ ಛಿನ್ನಭಿನ್ನಗೊಳಿಸಿ ಅವರ ಸರ್ವಾಂಗವನ್ನು ಸಾಯಕಗಳಿಂದ ತುಂಬಿಬಿಡುವೆನು. ಮತ್ತೆ ಆ ಇಬ್ಬರೂ ಸಹೋದರರು ಅಸುನೀಗುವುದನ್ನು ನೀನು ನೋಡು.॥5॥
ಮೂಲಮ್ - 6
ಇಮಾಂ ಪ್ರತಿಜ್ಞಾಂ ಶೃಣು ಶಕ್ರಶತ್ರೋಃ
ಸುನಿಶ್ಚಿತಾಂ ಪೌರುಷ ದೈವಯುಕ್ತಾಮ್ ।
ಅದ್ಯ್ವೆವ ರಾಮಂ ಸಹ ಲಕ್ಷ್ಮಣೇನ
ಸಂತರ್ಪಯಿಷ್ಯಾಮಿ ಶರೈರಮೋಘೈಃ ॥
ಅನುವಾದ
ನನ್ನ ಪುರುಷಾರ್ಥದಿಂದ ಮತ್ತು ಬ್ರಹ್ಮದೇವರ ಕೃಪೆಯಿಂದ ಸಿದ್ಧ ವಾಗುವ ಇಂದ್ರಶತ್ರುವಾದ ನನ್ನ ಸುನಿಶ್ಚಿತ ಪ್ರತಿಜ್ಞೆಯನ್ನು ಕೇಳಿರಿ-‘‘ನಾನು ಇಂದೇ ಲಕ್ಷ್ಮಣ ಸಹಿತ ರಾಮನನ್ನ ನನ್ನ ಅಮೋಘ ಬಾಣಗಳಿಂದ ಪೂರ್ಣವಾಗಿ ತೃಪ್ತಿಪಡಿಸುವೆನು. ಅವನ ಯುದ್ಧ ಪಿಪಾಸೆಯನ್ನು ತೀರಿಸುವೆನು.॥6॥
ಮೂಲಮ್ - 7
ಅದ್ಯೇಂದ್ರವೈವಸ್ವತವಿಷ್ಣುರುದ್ರ -
ಸಾಧ್ಯಾಶ್ಚ ವೈಶ್ವಾನರ ಚಂದ್ರಸೂರ್ಯಾಃ ।
ದ್ರಕ್ಷ್ಯಂತಿ ಮೇ ವಿಕ್ರಮಮಪ್ರಮೇಯಂ
ವಿಷ್ಣೋರಿವೋಗ್ರಂ ಬಲಿಯಜ್ಞ ವಾಟೇ ॥
ಅನುವಾದ
ಬಲಿಚಕ್ರವರ್ತಿಯ ಯಜ್ಞಮಂಟಪದಲ್ಲಿ ತ್ರಿವಿಕ್ರಮರೂಪೀ ಮಹಾವಿಷುವಿನ ಉಗ್ರವಾದ ಪರಾಕ್ರಮವನ್ನು ನೋಡಿದಂತೆ ಇಂದು ನನ್ನ ಅತುಲವಾದ ಪರಾಕ್ರಮವನ್ನು ಇಂದ್ರ, ಯಮ, ವಿಷ್ಣು, ರುದ್ರ, ಸಾಧ್ಯ, ಅಗ್ನಿ, ಸೂರ್ಯ ಮತ್ತು ಚಂದ್ರ ಇವರೆಲ್ಲರೂ ನೋಡುವರು’’.॥7॥
ಮೂಲಮ್ - 8
ಸ ಏವಮುಕ್ತ್ವಾ ತ್ರಿದಶೇಂದ್ರಶತ್ರು -
ರಾಪೃಚ್ಛ್ಯ ರಾಜಾನಮದೀನಸತ್ತ್ವಃ ।
ಸಮಾರುರೋಹಾನಿಲತುಲ್ಯವೇಗಂ
ರಥಂ ಖರಶ್ರೇಷ್ಠ ಸಮಾಧಿಯುಕ್ತಮ್ ॥
ಅನುವಾದ
ಹೀಗೆ ಹೇಳಿ ಉದಾರಚೇತಾ ಇಂದ್ರ ಶತ್ರು ಇಂದ್ರಜಿತನು ರಾವಣನಿಂದ ಆಜ್ಞೆ ಪಡೆದು ಒಳ್ಳೆಯ ಕತ್ತೆಗಳನ್ನು ಹೂಡಿದ ಯುದ್ಧ ಸಾಮಗ್ರಿಗಳಿಂದ ಸುಸಜ್ಜಿತವಾದ, ವಾಯುವೇಗದಂತೆ ವೇಗಶಾಲೀ ರಥದಲ್ಲಿ ಆರೂಢನಾದನು.॥.॥
ಮೂಲಮ್ - 9
ಸಮಾಸ್ಥಾಯ ಮಹಾತೇಜಾರಥಂ ಹರಿರಥೋಪಮಮ್ ।
ಜಗಾಮ ಸಹಸಾ ತತ್ರ ಯತ್ರ ಯುದ್ಧಮರಿಂದಮಃ ॥
ಅನುವಾದ
ಅವನ ರಥವು ಇಂದ್ರನ ರಥದಂತೆ ಅನಿಸುತ್ತಿತ್ತು. ಅದರಲ್ಲಿ ಹತ್ತಿದ ಆ ಮಹಾತೇಜಸ್ವೀ ನಿಶಾಚರನು ಯುದ್ಧ ನಡೆವಲ್ಲಿಗೆ ತಲುಪಿದನು.॥9॥
ಮೂಲಮ್ - 10
ತಂ ಪ್ರಸ್ಥಿತಂ ಮಹಾತ್ಮಾನಮನುಜಗ್ಮುರ್ಮಹಾಬಲಾಃ ।
ಸಂಹರ್ಷಮಾಣಾ ಬಹವೋ ಧನುಃ ಪ್ರವರಪಾಣಯಃ ॥
ಅನುವಾದ
ಆ ಮಹಾಮನಸ್ವೀ ವೀರನು ಪ್ರಸ್ಥಾನ ಮಾಡುವುದನ್ನು ನೋಡಿ ಅನೇಕ ಮಹಾಬಲಿ ರಾಕ್ಷಸರು ಕೈಗಳಲ್ಲಿ ಧನುಸ್ಸುಗಳನ್ನು ಹಿಡಿದುಕೊಂಡು ಹರ್ಷೋತ್ಸಾಹದಿಂದ ಅವನ ಹಿಂದೆ ಹಿಂದೆ ನಡೆದರು.॥10॥
ಮೂಲಮ್ - 11
ಗಜಸ್ಕಂಧಗತಾಃ ಕೇಚಿತ್ಕೇಚಿತ್ ಪರಮವಾಜಿಭಿಃ ।
ವ್ಯಾಘ್ರವೃಶ್ಚಿಕಮಾರ್ಜಾರೈಃ ಖರೋಷ್ಟ್ರೈಶ್ಚ ಭುಜಂಗಮೈಃ ॥
ಮೂಲಮ್ - 12
ವರಾಹೈಃಶ್ವಾಪದೈಃಸಿಂಹೈರ್ಜಂಬುಕೈಃ ಪರ್ವತೋಪಮೈಃ ।
ಕಾಕಹಂಸ ಮಯೂರೈಶ್ಚ ರಾಕ್ಷಸಾ ಭೀಮವಿಕ್ರಮಾಃ ॥
ಅನುವಾದ
ಕೆಲವರು ಆನೆಯನ್ನೇರಿದರೆ, ಕೆಲವರು ಕುದುರೆ ಹತ್ತಿದರು. ಕೆಲವರು ಹುಲಿ, ಚೇಳು, ಬೆಕ್ಕು, ಕತ್ತೆ, ಒಂಟೆ, ಹಾವು, ಹಂದಿ ಹಾಗೂ ಇತರ ಹಿಂಸಕ ಸಿಂಹ ಪರ್ವತಾಕಾರ ಗುಳ್ಳೆನರಿ, ಕಾಗೆ, ಹಂಸ, ನವಿಲು ಮೊದಲಾದುವನ್ನು ವಾಹನವಾಗಿಸಿಕೊಂಡು ಭಯಾನಕ ಪರಾಕ್ರಮಿ ರಾಕ್ಷಸರು ಯುದ್ಧಕ್ಕಾಗಿ ಬಂದಿದ್ದರು.॥11-12॥
ಮೂಲಮ್ - 13
ಪ್ರಾಸಪಟ್ಟಿಶನಿಸ್ತ್ರಿಂಶಪರಶ್ವಧಗದಾಧರಾಃ ।
ಭುಶುಂಡೀಮುದ್ಗರಾಯಷ್ಟಿಶತಘ್ನೀ ಪರಿಘಾಯುಧಾಃ ॥
ಅನುವಾದ
ಅವರೆಲ್ಲರೂ ಪ್ರಾಸ, ಪಟ್ಟಿಶ, ಖಡ್ಗ, ಕೊಡಲಿ, ಗದೆ, ಭುಶುಂಡೀ, ಮುದ್ಗರ, ದಂಡ, ಶತಘ್ನಿ ಮತ್ತು ಪರಿಘ ಮೊದಲಾದ ಆಯುಧಗಳನ್ನು ಧರಿಸಿದ್ದರು.॥13॥
ಮೂಲಮ್ - 14
ಸ ಶಂಖನಿನದೈಃ ಪೂರ್ಣೈರ್ಭೇರೀಣಾಂ ಚಾಪಿ ನಿಃಸ್ವನೈಃ ।
ಜಗಾಮ ತ್ರಿದಶೇಂದ್ರಾ ರಿರಾಜಿಂ ವೇಗೇನ ವೀರ್ಯವಾನ್ ॥
ಅನುವಾದ
ಶಂಖ ಧ್ವನಿಗಳೊಂದಿಗೆ ಭೇರಿಗಳ ಶಬ್ದಗಳೂ ಸೇರಿ ಎಲ್ಲೆಡೆ ಪ್ರತಿಧ್ವನಿಸಿತು. ಆ ತುಮುಲನಾದದೊಂದಿಗೆ ಇಂದ್ರದ್ರೋಹಿ ಪರಾಕ್ರಮಿ ಇಂದ್ರಜಿತು ವೇಗವಾಗಿ ಯುದ್ಧಭೂಮಿಗೆ ಪ್ರಸ್ಥಾನ ಮಾಡಿದನು.॥14॥
ಮೂಲಮ್ - 15
ಸ ಶಂಖ ಶಶಿವರ್ಣೇನ ಛತ್ರೇಣ ರಿಪುಸೂದನಃ ।
ರರಾಜ ಪ್ರತಿಪೂರ್ಣೇನ ನಭಶ್ಚಂದ್ರಮಸಾ ಯಥಾ ॥
ಅನುವಾದ
ಪೂರ್ಣಚಂದ್ರನಿಂದ ಆಕಾಶವು ಶೋಭಿಸುವಂತೆ, ಶಂಖ ಮತ್ತು ಚಂದ್ರನಂತೆ ವರ್ಣವುಳ್ಳ ಶ್ವೇತಚ್ಛತ್ರ ಅವನ ಮೇಲ್ಭಾಗದಲ್ಲಿದ್ದು ಶತ್ರುಸೂದನ ಇಂದ್ರಜಿತು ಸುಶೋಭಿತನಾಗಿದ್ದನು.॥15॥
ಮೂಲಮ್ - 16
ವೀಜ್ಯಮಾನಸ್ತತೋ ವೀರೋ ಹೈಮೈರ್ಹೇಮವಿಭೂಷಣಃ ।
ಚಾರುಚಾಮರಮುಖ್ಯೈಶ್ಚ ಮುಖ್ಯಃ ಸರ್ವಧನುಷ್ಮತಾಮ್ ॥
ಅನುವಾದ
ಸ್ವರ್ಣ ಆಭೂಷಣಗಳಿಂದ ಅಲಂಕೃತ, ಸಮಸ್ತ ಧನುರ್ಧರರಲ್ಲಿ ಶ್ರೇಷ್ಠನಾದ ವೀರ ನಿಶಾಚರನ ಇಕ್ಕೆಡೆಗಳಲ್ಲಿ ಸುವರ್ಣ ನಿರ್ಮಿತ ಉತ್ತಮ, ಮನೋಹರ ಚಾಮರಗಳನ್ನು ಬೀಸುತ್ತಿದ್ದರು.॥16॥
ಮೂಲಮ್ - 17
ಸ ತು ದೃಷ್ಟ್ವಾವಿನಿರ್ಯಾಂತಂ ಬಲೇನ ಮಹತಾ ವೃತಮ್ ।
ರಾಕ್ಷಸಾಧಿಪತಿಃ ಶ್ರೀಮಾನ್ ರಾವಣಃ ಪುತ್ರಮಬ್ರವೀತ್ ॥
ಅನುವಾದ
ವಿಶಾಲ ಸೈನ್ಯದಿಂದ ಪರಿವೃತನಾದ ತನ್ನ ಪುತ್ರ ಇಂದ್ರಜಿತು ಪ್ರಸ್ಥಾನ ಮಾಡುವುದನ್ನು ನೋಡಿ ರಾಕ್ಷಸ ರಾಜಾ ಶ್ರೀಮಾನ್ ರಾವಣನು ಅವನಲ್ಲಿ ಹೇಳಿದನು.॥17॥
ಮೂಲಮ್ - 18
ತ್ವಮಪ್ರತಿರಥಃ ಪುತ್ರ ತ್ವಯಾ ವೈ ವಾಸವೋ ಜಿತಃ ।
ಕಂ ಪುನರ್ಮಾನುಷಂ ಧೃಷ್ಯಂ ನಿಹನಿಷ್ಯಸಿ ರಾಘವಮ್ ॥
ಅನುವಾದ
ಮಗು! ನಿನ್ನನ್ನು ಎದುರಿಸುವ ಪ್ರತಿದ್ವಂದ್ವಿ ರಥಿಕ ಯಾರೂ ಇಲ್ಲ. ನೀನು ಇಂದ್ರನನ್ನು ಗೆದ್ದಿರುವೆ. ಮತ್ತೆ ಸುಲಭವಾಗಿ ಮನುಷ್ಯರನ್ನು ಗೆಲ್ಲುವುದು ನಿನಗೆ ದೊಡ್ಡ ಮಾತಲ್ಲ. ನೀನು ಅವಶ್ಯವಾಗಿ ರಾಮನನ್ನು ಗೆಲ್ಲುವೆ.॥18॥
ಮೂಲಮ್ - 19½
ತಥೋಕ್ತೋ ರಾಕ್ಷಸೇಂದ್ರೇಣ ಪ್ರತ್ಯಗೃಹ್ಣಾನ್ಮಹಾಶಿಷಃ ।
ತತಸ್ತ್ವಿಂದ್ರಜಿತಾ ಲಂಕಾ ಸೂರ್ಯಪ್ರತಿಮತೇಜಸಾ ॥
ರರಾಜಾಪ್ರತಿವಿರ್ಯೇಣ ದ್ಯೌರಿವಾರ್ಕೇಣ ಭಾಸ್ವತಾ ।
ಅನುವಾದ
ರಾವಣನು ಹೀಗೆ ಹೇಳಿದಾಗ ಇಂದ್ರಜಿತು ತಲೆಬಾಗಿ ಆ ಮಹಾ ಆಶೀರ್ವಾದವನ್ನು ಸ್ವೀಕರಿಸಿದನು. ಅನುಪಮ ತೇಜಸ್ವೀ ಸೂರ್ಯನಿಂದ ಆಕಾಶ ಶೋಭಿಸುವಂತೆ ಸೂರ್ಯತುಲ್ಯ ತೇಜಸ್ವೀ ಇಂದ್ರಜಿತನಿಂದ ಲಂಕೆಯು ಶೋಭಿಸತೊಡಗಿತು.॥19॥
ಮೂಲಮ್ - 20½
ಸ ಸಂಪ್ರಾಪ್ಯ ಮಹಾತೇಜಾ ಯುದ್ಧಭೂಮಿಮರಿಂದಮಃ ॥
ಸ್ಥಾಪಯಾಮಾಸ ರಕ್ಷಾಂಸಿ ರಥಂ ಪ್ರತಿ ಸಮಂತತಃ ।
ಅನುವಾದ
ಮಹಾತೇಜಸ್ವೀ ಶತ್ರುದಮನ ಇಂದ್ರಜಿತು ರಣರಂಗಕ್ಕೆ ಬಂದು, ತನ್ನ ರಥದ ಸುತ್ತಲೂ ರಾಕ್ಷಸರನ್ನು ನಿಲ್ಲಿಸಿದನು.॥20॥
ಮೂಲಮ್ - 21
ತತಸ್ತು ಹುತಭೋಕ್ತಾರಂ ಹುತಭುಕ್ ಸದೃಶಪ್ರಭಃ ॥
ಮೂಲಮ್ - 22½
ಜುಹುವೇ ರಾಕ್ಷಸ ಶ್ರೇಷ್ಠೋ ವಿಧಿವನ್ಮಂತ್ರಸತ್ತಮೈಃ ।
ಸ ಹವಿರ್ಲಾಜ ಸಂಸ್ಕಾರೈಃ ಮಾಲ್ಯಗಂಧ ಪುರಸೃತೈಃ ॥
ಜುಹುವೇ ಪಾವಕಂ ತತ್ರರಾಕ್ಷಸೇಂದ್ರಃ ಪ್ರತಾಪವಾನ್ ।
ಅನುವಾದ
ಮತ್ತೆ ರಥದಿಂದ ಇಳಿದು ನೆಲದಲ್ಲಿ ಅಗ್ನಿಯನ್ನು ಸ್ಥಾಪಿಸಿ, ಅಗ್ನಿತುಲ್ಯ ತೇಜಸ್ವೀ ಆ ರಾಕ್ಷಸವೀರನು ಚಂದನ, ಪುಷ್ಪ, ಅರಳು ಇತ್ಯಾದಿಗಳಿಂದ ಅಗ್ನಿಯನ್ನು ಪೂಜಿಸಿದನು. ಮತ್ತೆ ಆ ಪ್ರತಾಪಿ ರಾಕ್ಷಸನು ವಿಧಿವತ್ತಾಗಿ ಶ್ರೇಷ್ಠ ಮಂತ್ರಗಳನ್ನು ಉಚ್ಚರಿಸುತ್ತಾ ಅಗ್ನಿಯಲ್ಲಿ ಆಹುತಿಗಳನ್ನು ಅರ್ಪಿಸಿದನು.॥21-22॥
ಮೂಲಮ್ - 23½
ಶಸ್ತ್ರಾಣಿ ಶರಪತ್ರಾಣಿ ಸಮಿಧೋಽಥ ಬಿಭೀತಕಾಃ ॥
ಲೋಹಿತಾನಿ ಚ ವಾಸಾಂಸಿ ಸ್ರುವಂ ಕಾರ್ಷ್ಣಾಯಸಂ ತಥಾ ।
ಅನುವಾದ
ಆಗ ಅಗ್ನಿಯ ಸುತ್ತಲು ದರ್ಭೆಗಳ ಬದಲು ಶಸ್ತ್ರಗಳನ್ನೇ ಇರಿಸಿದ್ದನು. ತಾರೆ ಗಿಡದ ಕಡ್ಡಿಗಳೇ ಸಮಿತ್ತುಗಳಿದ್ದವು. ಕೆಂಪು ಬಟ್ಟೆಯನ್ನು ಉಪಯೋಗಿಸಿ, ಆ ಅಭಿಚಾರಿಕ ಹೋಮದಲ್ಲಿ ಕಬ್ಬಿಣದ ಸ್ರುವೆಗಳಿದ್ದವು.॥23॥
ಮೂಲಮ್ - 24½
ಸ ತತ್ರಾಗ್ನಿಂ ಸಮಾಸ್ತೀರ್ಯ ಶರಪತ್ರೈಃ ಸತೋಮರೈಃ ॥
ಛಾಗಸ್ಯ ಕೃಷ್ಣವರ್ಣಸ್ಯ ಗಲಂ ಜಗ್ರಾಹ ಜೀವತಃ ।
ಅನುವಾದ
ಅವನು ಅಲ್ಲಿ ತೋಮರ ಸಹಿತ ಶಸಗಳನ್ನೇ ಪರಿಸ್ತರಣವಾಗಿ ಹಾಸಿ, ಹೋಮಕ್ಕಾಗಿ ಕಪ್ಪು ಬಣ್ಣದ ಜೀವಂತವಾದ ಮೇಕೆಯ ತಲೆಯನ್ನು ಹಿಡಿದನು.॥24॥
ಮೂಲಮ್ - 25½
ಸಕೃದೇವ ಸಮಿದ್ಧಸ್ಯ ವಿಧೂಮಸ್ಯ ಮಹಾರ್ಚಿಷಃ ॥
ಬಭೂವುಸ್ತಾನಿ ಲಿಂಗಾನಿ ವಿಜಯಂ ಯಾನ್ಯದರ್ಶಯನ್ ।
ಅನುವಾದ
ಮೇಕೆಯ ತಲೆಯನ್ನು ಒಂದೇ ಬಾರಿಗೆ ಅಗ್ನಿಯಲ್ಲಿ ಹೋಮಿಸಿದಾಕ್ಷಣ ಅಗ್ನಿಯು ಪ್ರಜ್ವಲಿತವಾಯಿತು. ಹೊಗೆ ಇಲ್ಲದೆ ಮಹಾಜ್ವಾಲೆಗಳು ಹೊರಡುತ್ತಿದ್ದವು. ಹಿಂದೆ ದೇವತೆಗಳೊಡನೆ ಯುದ್ಧಕ್ಕೆ ಹೊರಟಾಗಲೂ ಇದೇ ವಿಧವಾದ ವಿಜಯಸೂಚಕ ಚಿಹ್ನೆಗಳು ಅಗ್ನಿದೇವನಲ್ಲಿ ಕಂಡು ಬಂದಿದ್ದವು.॥25॥
ಮೂಲಮ್ - 26½
ಪ್ರದಕ್ಷಿಣಾವರ್ತಶಿಖಸ್ತಪ್ತಕಾಂಚನ ಸಂನಿಭಃ ॥
ಹವಿಸ್ತತ್ಪ್ರತಿಜಗ್ರಾಹ ಪಾವಕಃ ಸ್ವಯಮುತ್ಥಿತಃ ।
ಅನುವಾದ
ಅಗ್ನಿದೇವನ ಜ್ವಾಲೆಗಳು ದಕ್ಷಿಣಾವರ್ತಕವಾಗಿ ಸುತ್ತುತ್ತಿದ್ದವು. ಪುಟಕ್ಕಿಟ್ಟ ಚಿನ್ನದಂತೆ ಅವನ ಬಣ್ಣವಾಗಿತ್ತು. ಈ ರೂಪದಲ್ಲಿ ಅಗ್ನಿಯು ಸ್ವತಃ ಪ್ರಕಟನಾಗಿ ಕೊಟ್ಟಿರುವ ಹವಿಸ್ಸನ್ನು ಸ್ವೀಕರಿಸುತ್ತಿದ್ದನು.॥26॥
ಮೂಲಮ್ - 27½
ಸೋಽಸ್ತ್ರ ಮಾಹಾರಯಾಮಾಸ ಬ್ರಾಹ್ಮಮಸ್ತ್ರವಿಶಾರದಃ ॥
ಧನುಶ್ಚಾತ್ಮ ರಥಂ ಚೈವ ಸರ್ವಂ ತತ್ರಾಭ್ಯಮಂತ್ರಯತ್ ।
ಅನುವಾದ
ಅನಂತರ ಅಸ್ತ್ರ ವಿದ್ಯಾವಿಶಾರದ ಇಂದ್ರಜಿತನು ಬ್ರಹ್ಮಾಸ್ತ್ರವನ್ನು ಆವಾಹನೆ ಮಾಡಿ, ತನ್ನ ಧನುಸ್ಸು, ರಥ ಇತ್ಯಾದಿ ಎಲ್ಲ ವಸ್ತುಗಳನ್ನು ಸಿದ್ಧಬ್ರಹ್ಮಾಸ್ತ್ರದಿಂದ ಅಭಿಮಂತಿಸಿದನು.॥27॥
ಮೂಲಮ್ - 28
ತಸ್ಮಿನ್ನಾಹೂಯಮಾನೇಽಸ್ತ್ರೇ ಹೂಯಮಾನೇ ಚ ಪಾವಕೇ ।
ಸಾರ್ಕಗ್ರಹೇಂದುನಕ್ಷತ್ರಂ ವಿತತ್ರಾಸ ನಭಃಸ್ಥಲಮ್ ॥
ಅನುವಾದ
ಅಗ್ನಿಯಲ್ಲಿ ಆಹುತಿಕೊಟ್ಟು ಅವನು ಬ್ರಹ್ಮಾಸ್ತ್ರವನ್ನು ಆವಾಹಿಸಿದಾಗ ಸೂರ್ಯ, ಚಂದ್ರ, ಗ್ರಹ ಹಾಗೂ ನಕ್ಷತ್ರಗಳ ಸಹಿತ ಅಂತರಿಕ್ಷದ ಎಲ್ಲ ಪ್ರಾಣಿಗಳು ಭಯಭೀತರಾದರು.॥28॥
ಮೂಲಮ್ - 29
ಸ ಪಾವಕಂ ಪಾವಕದೀಪ್ತತೇಜಾ
ಹುತ್ವಾ ಮಹೇಂದ್ರ ಪ್ರತಿಮಪ್ರಭಾವಃ ।
ಸಚಾಪಬಾಣಾಸಿರಥಾಶ್ವಸೂತಃ
ಖೇಂಽತರ್ದಧೇಽತ್ಮಾನಮಚಿಂತ್ಯವೀರ್ಯಃ ॥
ಅನುವಾದ
ಯಾರ ತೇಜವು ಅಗ್ನಿಯಂತೆ ಉದೀಪ್ತವಾಗುತ್ತಿತ್ತೋ, ಯಾರು ದೇವೇಂದ್ರನಂತೆ ಅನುಪಮ ಪ್ರಭಾವದಿಂದ ಕೂಡಿದ್ದನೋ, ಆ ಅಚಿಂತ್ಯ ಪರಾಕ್ರಮಿ ಇಂದ್ರಜಿತನು ಅಗ್ನಿಯಲ್ಲಿ ಆಹುತಿಗಳನ್ನು ಕೊಟ್ಟು, ಧನುರ್ಬಾಣ, ರಥ, ಖಡ್ಗ, ಕುದುರೆ ಮತ್ತು ಸಾರಥಿಸಹಿತ ಅವನು ಅಂತರಿಕ್ಷದಲ್ಲಿ ಅಂತರ್ಧಾನನಾದನು.॥2.॥
ಮೂಲಮ್ - 30
ತತೋ ಹಯರಥಾಕೀರ್ಣಂ ಪತಾಕಾಧ್ವಜ ಶೋಭಿತಮ್ ।
ನಿರ್ಯಯೌ ರಾಕ್ಷಸಬಲಂ ನರ್ದಮಾನಂ ಯುಯುತ್ಸಯಾ ॥
ಅನುವಾದ
ಬಳಿಕ ಅವನು ಕುದುರೆ, ರಥಗಳಿಂದ ವ್ಯಾಪ್ತನಾದ, ಧ್ವಜ-ಪತಾಕೆಗಳಿಂದ ಸುಶೋಭಿತವಾದ, ಯುದ್ಧದ ಇಚ್ಛೆಯಿಂದ ಗರ್ಜಿಸುತ್ತಿರುವ ರಾಕ್ಷಸರ ಸೈನ್ಯ ವಿರುವಲ್ಲಿಗೆ ಹೋದನು.॥30॥
ಮೂಲಮ್ - 31
ತೇ ಶರೈರ್ಬಹುಭಿಶ್ಚಿತ್ರೈಸ್ತೀಕ್ಷ್ಣವೇಗೈರಲಂಕೃತೈಃ ।
ತೋಮರೈರಂಕುಶೈಶ್ಚಾಪಿ ವಾನರಾನ್ ಜಘ್ನುರಾಹವೇ ॥
ಅನುವಾದ
ಆ ರಾಕ್ಷಸರು ದುಃಸಹ ವೇಗವುಳ್ಳ, ಸ್ವರ್ಣಭೂಷಿತ, ವಿಚಿತ್ರ ಅಸಂಖ್ಯ ಬಾಣ, ತೋಮರ, ಅಂಕುಶಗಳಿಂದ ರಣರಂಗದಲ್ಲಿ ವಾನರರನ್ನು ಪ್ರಹರಿಸುತ್ತಿದ್ದರು.॥31॥
ಮೂಲಮ್ - 32
ರಾವಣಿಸ್ತು ಸುಸಂಕ್ರುದ್ಧಸ್ತಾನ್ನಿರೀಕ್ಷ್ಯ ನಿಶಾಚರಾನ್ ।
ಹೃಷ್ಟಾ ಭವಂತೋ ಯುಧ್ಯಂತು ವಾನರಾಣಾಂ ಜಿಘಾಂಸಯಾ ॥
ಅನುವಾದ
ರಾವಣಪುತ್ರ ಇಂದ್ರಜಿತನು ಶತ್ರುಗಳ ಕುರಿತು ಅತ್ಯಂತ ಕ್ರೋಧಗೊಂಡಿದ್ದನು. ಅವನು ನಿಶಾಚರರನ್ನು ನೋಡಿ ನೀವೆಲ್ಲರೂ ವಾನರರನ್ನು ಸಂಹರಿಸುವ ಇಚ್ಛೆಯಿಂದ ಉತ್ಸಾಹದಿಂದ ಯುದ್ಧಮಾಡಿರಿ ಎಂದು ಹೇಳಿದನು.॥32॥
ಮೂಲಮ್ - 33
ತತಸ್ತೇ ರಾಕ್ಷಸಾಃ ಸರ್ವೇ ಗರ್ಜಂತೋ ಜಯಕಾಂಕ್ಷಿಣಃ ।
ಅಭ್ಯವರ್ಷಂಸ್ತತೋ ಘೋರಂ ವಾನರಾನ್ ಶರವೃಷ್ಟಿಭಿಃ ॥
ಅನುವಾದ
ಅವನು ಹೀಗೆ ಪ್ರೇರೇಪಿಸಿದಾಗ ವಿಜಯದ ಇಚ್ಛೆಯುಳ್ಳ ಸಮಸ್ತ ರಾಕ್ಷಸರು ಜೋರಾಗಿ ಗರ್ಜಿಸುತ್ತಾ ವಾನರರ ಮೇಲೆ ಭಯಂಕರ ಬಾಣವರ್ಷ ಮಾಡತೊಡಗಿದರು.॥33॥
ಮೂಲಮ್ - 34
ಸ ತು ನಾಲೀಕನಾರಾಚೈರ್ಗದಾಭಿರ್ಮುಸಲೈರಪಿ ।
ರಕ್ಷೋಭಿಃ ಸಂವೃತಃ ಸಂಖ್ಯೇ ವಾನರಾನ್ವಿಚಕರ್ಷ ಹ ॥
ಅನುವಾದ
ಆ ಯುದ್ಧರಂಗದಲ್ಲಿ ರಾಕ್ಷಸರಿಂದ ಸುತ್ತುವರಿದ ಇಂದ್ರಜಿತನೂ ಕೂಡ ನಾಲೀಕ, ನಾರಾಚ, ಗದೆ, ಮುಸಲ ಮುಂತಾದ ಅಸ್ತ್ರ-ಶಸ್ತ್ರಗಳಿಂದ ವಾನರರ ಸಂಹಾರಮಾಡಲಾರಂಭಿಸಿದನು.॥3.॥
ಮೂಲಮ್ - 35
ತೇ ವಧ್ಯಮಾನಾಃ ಸಮರೇ ವಾನರಾಃ ಪಾದಪಾಯುಧಾಃ ।
ಅಭ್ಯವರ್ಷಂತ ಸಹಸಾ ರಾವಣಿಂ ಶೈಲಪಾದಪೈಃ ॥
ಅನುವಾದ
ಸಮರಾಂಗಣದಲ್ಲಿ ರಾಕ್ಷಸನ ಅಸ್ತ್ರ-ಶಸ್ತ್ರಗಳಿಂದ ಗಾಯಗೊಂಡ ವಾನರರೂ ವೃಕ್ಷಗಳನ್ನೇ ಆಯುಧಗಳಾಗಿಸಿಕೊಂಡು ಆ ರಾವಣಕುಮಾರನ ಮೇಲೆ ಶೈಲ-ಶಿಖರಗಳನ್ನು ಮಳೆಗರೆದರು.॥35॥
ಮೂಲಮ್ - 36
ಇಂದ್ರಜಿತ್ತು ತದಾ ಕ್ರುದ್ಧೋ ಮಹಾತೇಜಾ ಮಹಾಬಲಃ ।
ವಾನರಾಣಾಂ ಶರೀರಾಣಿ ವ್ಯಧಮದ್ರಾವಣಾತ್ಮಜಃ ॥
ಅನುವಾದ
ಆಗ ಕುಪಿತನಾದ ಮಹಾತೇಜಸ್ವೀ ಮಹಾಬಲಿ ರಾವಣಪುತ್ರ ಇಂದ್ರಜಿತನು ವಾನರರ ಶರೀರಗಳನ್ನು ಛಿನ್ನಭಿನ್ನಗೊಳಿಸಿದನು.॥36॥
ಮೂಲಮ್ - 37
ಶರೇಣೈಕೇನ ಚ ಹರೀನ್ನವ ಪಂಚ ಚ ಸಪ್ತ ಚ ।
ಬಿಭೇದ ಸಮರೇ ಕ್ರುದ್ಧೋ ರಾಕ್ಷಸಾನ್ಸಂಪ್ರಹರ್ಷಯನ್ ॥
ಅನುವಾದ
ರಣರಂಗದಲ್ಲಿ ರಾಕ್ಷಸರ ಹರ್ಷವನ್ನು ಹೆಚ್ಚಿಸುತ್ತಾ ಇಂದ್ರಜಿತನು ರೋಷಗೊಂಡು ಒಂದೊಂದೇ ಬಾಣದಿಂದ ಐದೈದು, ಏಳೇಳು, ಒಂಭತ್ತು, ಒಂಭತ್ತು ವಾನರರನ್ನು ಕೊಲ್ಲುತ್ತಿದ್ದನು.॥37॥
ಮೂಲಮ್ - 38
ಸ ಶರೈಃ ಸೂರ್ಯಸಂಕಾಶೈಃ ಶಾತಕುಂಭ ವಿಭೂಷಣೈಃ ।
ವಾನರಾನ್ಸಮರೇ ವೀರಃ ಪ್ರಮಮಾಥ ಸುದುರ್ಜಯಃ ॥
ಅನುವಾದ
ಆ ಅತ್ಯಂತ ದುರ್ಜಯ ವೀರನು ಸ್ವರ್ಣಭೂಷಿತ ಸೂರ್ಯತುಲ್ಯ ಸಾಯಕಗಳಿಂದ ಯುದ್ಧದಲ್ಲಿ ವಾನರರನ್ನು ಧ್ವಂಸ ಮಾಡತೊಡಗಿದನು.॥38॥
ಮೂಲಮ್ - 39
ತೇ ಭಿನ್ನಗಾತ್ರಾಃ ಸಮರೇ ವಾನರಾಃ ಶರಪೀಡಿತಾಃ ।
ಪೇತುರ್ಮಥಿತಸಂಕಲ್ಪಾಃ ಸುರೈರಿವ ಮಹಾಸುರಾಃ ॥
ಅನುವಾದ
ಯುದ್ಧದಲ್ಲಿ ದೇವತೆಗಳಿಂದ ಪೀಡಿತರಾದ ದೊಡ್ಡ ದೊಡ್ಡ ಅಸುರರಂತೆ, ಇಂದ್ರಜಿತುವಿನ ಬಾಣಗಳಿಂದ ವ್ಯಥಿತರಾದ ವಾನರರ ಶರೀರಗಳು ಭಿನ್ನ ಭಿನ್ನವಾದುವು. ಅವರ ವಿಜಯದ ಆಸೆಯ ಮೇಲೆ ಹಿಮಪಾತವಾಗಿ, ಅವರು ನಿಶ್ಚೇಷ್ಟಿತರಾಗಿ ಭೂಮಿಯಲ್ಲಿ ಬಿದ್ದುಬಿಟ್ಟರು.॥39॥
ಮೂಲಮ್ - 40
ತೇ ತಪಂತಮಿವಾದಿತ್ಯಂ ಘೋರೈರ್ಬಾಣಗಭಸ್ತಿಭಿಃ ।
ಅಭ್ಯಧಾವಂತ ಸಂಕ್ರುದ್ಧಾಃ ಸಂಯುಗೇ ವಾನರರ್ಷಭಾಃ ॥
ಅನುವಾದ
ಆಗ ರಣರಂಗದಲ್ಲಿ ಬಾಣರೂಪೀ ಭಯಂಕರ ಕಿರಣಗಳಿಂದ ಸೂರ್ಯನಂತೆ ಉರಿಯುವ ಇಂದ್ರಜಿತುವಿನ ಮೇಲೆ ಮುಖ್ಯ ಮುಖ್ಯ ವಾನರರು ರೋಷದಿಂದ ಆಕ್ರಮಣ ಮಾಡಿದರು.॥40॥
ಮೂಲಮ್ - 41
ತತಸ್ತು ವಾನರಾಃ ಸರ್ವೇ ಭಿನ್ನದೇಹಾ ವಿಚೇತಸಃ ।
ವ್ಯಥಿತಾ ವಿದ್ರವಂತಿ ಸ್ಮ ರುಧಿರೇಣ ಸಮುಕ್ಷಿತಾಃ ॥
ಅನುವಾದ
ಆದರೆ ಅವನ ಬಾಣಗಳಿಂದ ಶರೀರ ಕ್ಷತ-ವಿಕ್ಷತವಾಗಿ ಅವರೆಲ್ಲ ವಾನರರೂ ನಿಶ್ಚೇಷ್ಟಿತರಂತಾಗಿ, ರಕ್ತದಿಂದ ತೊಯ್ದು ಹೋಗಿ, ನೋವಿನಿಂದ ಕಂಡ ಕಂಡಲ್ಲಿ ಓಡತೊಡಗಿದರು.॥41॥
ಮೂಲಮ್ - 42
ರಾಮಸ್ಯಾರ್ಥೇ ಪರಾಕ್ರಮ್ಯ ವಾನರಾಸ್ತ್ಯಕ್ತಜೀವಿತಾಃ ।
ನರ್ದಂತಸ್ತೇಽನಿವೃತ್ತಾಸ್ತು ಸಮರೇ ಸಶಿಲಾಯುಧಾಃ ॥
ಅನುವಾದ
ವಾನರರು ಶ್ರೀರಾಮನಿಗಾಗಿ ತಮ್ಮ ಜೀವದ ಹಂಗನ್ನು ತೊರೆದಿದ್ದರು. ಅವರು ಪರಾಕ್ರಮದಿಂದ ಗರ್ಜಿಸುತ್ತಾ, ಕೈಗಳಲ್ಲಿ ಶಿಲೆಗಳನ್ನೆತ್ತಿಕೊಂಡು ಯುದ್ಧದಲ್ಲಿ ಹಿಮ್ಮೆಟ್ಟದೆ ಮುಂದೆ ನಡೆದರು.॥42॥
ಮೂಲಮ್ - 43
ತೇ ದ್ರುಮೈಃ ಪರ್ವತಾಗ್ರೈಶ್ಚ ಶಿಲಾಭಿಶ್ಚ ಪ್ಲವಂಗಮಾಃ ।
ಅಭ್ಯವರ್ಷಂತ ಸಮರೇ ರಾವಣಿಂ ಸಮವಸ್ಥಿತಾಃ ॥
ಅನುವಾದ
ಸಮರಾಂಗಣದಲ್ಲಿ ನಿಂತಿರುವ ಆ ವಾನರರು ರಾವಣಕುಮಾರನ ಮೇಲೆ ವೃಕ್ಷ, ಪರ್ವತ, ಶಿಲೆಗಳ ಮಳೆಯನ್ನೇ ಸುರಿಸಿದರು.॥43॥
ಮೂಲಮ್ - 44
ತಂದ್ರುಮಾಣಾಂ ಶಿಲಾನಾಂ ಚ ವರ್ಷಂ ಪ್ರಾಣಹರಂ ಮಹತ್ ।
ವ್ಯಪೋಹತ ಮಹಾತೇಜಾ ರಾವಣಿಃ ಸಮಿತಿಂಜಯಃ ॥
ಅನುವಾದ
ವೃಕ್ಷ-ಶಿಲೆಗಳ ಆ ವೃಷ್ಟಿಯು ರಾಕ್ಷಸರ ಪ್ರಾಣಹರಣ ಮಾಡುವಂತಿದ್ದರೂ ಸಮರ ವಿಜಯೀ ಮಹಾತೇಜಸ್ವೀ ರಾವಣಪುತ್ರನು ತನ್ನ ಬಾಣಗಳಿಂದ ಅದನ್ನು ನಿವಾರಿಸಿಬಿಟ್ಟನು.॥44॥
ಮೂಲಮ್ - 45
ತತಃ ಪಾವಕಸಂಕಾಶೈಃ ಶರೈರಾಶೀವಿಷೋಪಮೈಃ ।
ವಾನರಾಣಾಮನೀಕಾನಿ ಬಿಭೇದ ಸಮರೇ ಪ್ರಭುಃ ॥
ಅನುವಾದ
ಬಳಿಕ ವಿಷಧರ ಸರ್ಪಗಳಂತೆ ಭಯಂಕರ ಅಗ್ನಿಯಂತಿರುವ ಬಾಣ ಗಳಿಂದ ಆ ಶಕ್ತಿಶಾಲಿ ವೀರನು ಸಮರಾಂಗಣದಲ್ಲಿ ವಾನರ ಸೈನಿಕರನ್ನು ಸಂಹರಿಸತೊಡಗಿದನು.॥45॥
ಮೂಲಮ್ - 46
ಅಷ್ಟಾದಶಶರೈಸ್ತೀಕ್ಷ್ಣೈಃ ಸ ವಿದ್ಧ್ವಾಗಂಧಮಾದನಮ್ ।
ವಿವ್ಯಾಧ ನವಭಿಶ್ಚೈವ ನಲಂ ದೂರಾದವಸ್ಥಿತಮ್ ॥
ಅನುವಾದ
ಅವನು ಹದಿನೆಂಟು ಹರಿತ ಬಾಣಗಳಿಂದ ಗಂಧಮಾದನನನ್ನು ಗಾಯಗೊಳಿಸಿ, ದೂರದಲ್ಲಿ ನಿಂತ ನಳನ ಮೇಲೆಯೂ ಒಂಭತ್ತು ಬಾಣಗಳನ್ನು ಪ್ರಹರಿಸಿದನು.॥46॥
ಮೂಲಮ್ - 47
ಸಪ್ತಭಿಸ್ತು ಮಹಾವೀರ್ಯೋ ಮೈಂದಂ ಮರ್ಮವಿದಾರಣೈಃ ।
ಪಂಚಭಿರ್ವಿಶಿಖೈಶ್ಚೈವ ಗಜಂ ವಿವ್ಯಾಧ ಸಂಯುಗೇ ॥
ಅನುವಾದ
ಬಳಿಕ ಮಹಾಪರಾಕ್ರಮಿ ಇಂದ್ರಜನಿತನು ಏಳು ಮರ್ಮಭೇದೀ ಸಾಯಕಗಳಿಂದ ಮೈಂದನನ್ನು ಮತ್ತು ಐದು ಬಾಣಗಳಿಂದ ಗಜನನ್ನೂ ಗಾಯಗೊಳಿಸಿದನು.॥47॥
ಮೂಲಮ್ - 48½
ಜಾಂಬವಂತಂ ತು ದಶಭಿರ್ನೀಲಂ ತ್ರಿಂಶದ್ಭಿರೇವ ಚ ।
ಸುಗ್ರೀವ ಮೃಷಭಂ ಚೈವ ಸೋಂಽಗದಂ ದ್ವಿವಿದಂ ತಥಾ ॥
ಘೋರೈರ್ದತ್ತವರೈಸ್ತೀಕ್ಷ್ಣೈರ್ನಿಷ್ಪ್ರಾಣಾನಕರೋತ್ತದಾ ।
ಅನುವಾದ
ಮತ್ತೆ ಹತ್ತು ಅಂಬುಗಳಿಂದ ಅಂಗದನನ್ನು, ಮೂವತ್ತು ಸಾಯಕಗಳಿಂದ ನೀಲವನ್ನು ಗಾಯಗೊಳಿಸಿದನು. ವರದಾನದಿಂದ ದೊರಕಿದ ಅಸಂಖ್ಯ, ಭಯಾನಕ ಬಾಣಗಳಿಂದ ಪ್ರಹರಿಸುತ್ತಾ ಆಗ ಅವನು ಸುಗ್ರೀವ, ಋಷಭ, ಅಂಗದ ಮತ್ತು ದ್ವಿವಿದ ಇವರನ್ನು ಘಾಸಿಗೊಳಿಸಿದನು.॥48॥
ಮೂಲಮ್ - 49½
ಅನ್ಯಾನಪಿ ತಥಾ ಮುಖ್ಯಾನ್ವಾನರಾನ್ಬಹುಭಿಃ ಶರೈಃ ॥
ಅರ್ದಯಾಮಾಸ ಸಂಕ್ರುದ್ಧಃ ಕಾಲಾಗ್ನಿರಿವ ಮೂರ್ಛಿತಃ ।
ಅನುವಾದ
ಎಲ್ಲೆಡೆ ಹರಡಿದ ಪ್ರಳಯಾಗ್ನಿಯಂತೆ ಅತ್ಯಂತ ರೋಷಗೊಂಡ ಇಂದ್ರಜಿತನು ಇತರ ಶ್ರೇಷ್ಠ ವಾನರರನ್ನೂ ಅಸಂಖ್ಯ ಬಾಣಗಳಿಂದ ನೋಯಿಸಿದನು.॥49॥
ಮೂಲಮ್ - 50½
ಸ ಶರೈಃ ಸೂರ್ಯಸಂಕಾಶೈಃ ಸುಮುಕ್ತೈಃ ಶೀಘ್ರಗಾಮಿಭಿಃ ॥
ವಾನರಾಣಾಮನೀಕಾನಿ ನಿರ್ಮಮಂಥ ಮಹಾರಣೇ ।
ಅನುವಾದ
ಆ ಮಹಾಸಂಗ್ರಾಮದಲ್ಲಿ ರಾವಣಕುಮಾರನು ಬಿಟ್ಟಿರುವ ಸೂರ್ಯತುಲ್ಯ ತೇಜಸ್ವೀ, ಶೀಘ್ರಗಾಮಿ ಸಾಯಕಗಳಿಂದ ವಾನರ ಸೈನ್ಯವನ್ನು ನಾಶಮಾಡಿದನು.॥50॥
ಮೂಲಮ್ - 51½
ಆಕುಲಾಂ ವಾನರೀಂ ಸೇನಾಂ ಶರಜಾಲೇನ ಪೀಡಿತಾಮ್ ॥
ಹೃಷ್ಟಃ ಸ ಪರಯಾ ಪ್ರೀತ್ಯಾ ದದರ್ಶ ಕ್ಷತಜೋಕ್ಷಿತಾಮ್ ।
ಅನುವಾದ
ಅವನ ಬಾಣಜಾಲದಿಂದ ಪೀಡಿತವಾದ ವಾನರ ಸೈನ್ಯವು ವ್ಯಾಕುಲಗೊಂಡು, ರಕ್ತದಿಂದ ತೊಯ್ದುಹೋಯಿತು. ಶತ್ರುಸೈನ್ಯದ ಈ ದುರವಸ್ಥೆಯನ್ನು ನೋಡಿ ಅವನು ಹರ್ಷ, ಸಂತೋಷಗೊಂಡನು.॥51॥
ಮೂಲಮ್ - 52
ಪುನರೇವ ಮಹಾತೇಜಾ ರಾಕ್ಷಸೇಂದ್ರಾತ್ಮಜೋ ಬಲೀ ॥
ಮೂಲಮ್ - 53
ಸಂಸೃಜ್ಯ ಬಾಣವರ್ಷಂ ಚ ಶಸ್ತ್ರ ವರ್ಷಂಚ ದಾರುಣಮ್ ।
ಮಮರ್ದ ವಾನರಾನೀಕಂ ಪರಿತಸ್ತ್ವಿಂದ್ರಜಿದ್ ಬಲಿ ॥
ಅನುವಾದ
ಆ ರಾಕ್ಷಸ ರಾಜಕುಮಾರ ಇಂದ್ರಜಿತನು ಬಹಳ ತೇಜಸ್ವೀ, ಪ್ರಭಾವಶಾಲಿ, ಬಲವಂತ ನಾಗಿದ್ದನು. ಅವನು ಎಲ್ಲ ಕಡೆಗಳಿಂದ ಬಾಣಗಳ, ಇತರ ಅಸ್ತ್ರಾಸ್ತ್ರಗಳ ಮಳೆ ಸುರಿಸಿ ವಾನರ ಸೈನ್ಯವನ್ನು ಮರ್ದನ ಮಾಡಿದನು.॥52-53॥
ಮೂಲಮ್ - 54
ಸ್ವಸೈನ್ಯಮುತ್ಸೃಜ್ಯ ಸಮೇತ್ಯ ತೂರ್ಣಂ
ಮಹಾಹವೇ ವಾನರವಾಹಿನೀಷು ।
ಅದೃಶ್ಯಮಾನಃ ಶರಜಾಲಮುಗ್ರಂ
ವವರ್ಷ ನೀಲಾಂಬುಧರೋ ಯಥಾಂಬು ॥
ಅನುವಾದ
ಅನಂತರ ಅವನು ತನ್ನ ಸೈನ್ಯವನ್ನು ಬಿಟ್ಟು, ವಾನರ ಸೈನ್ಯದಲ್ಲಿ ಸೇರಿಕೊಂಡು ಅದೃಶ್ಯನಾಗಿ ಕಾರ್ಮುಗಿಲು ಮುಸಲಧಾರೆಯಾಗಿ ಮಳೆಗರೆಯುವಂತೆ ವಾನರ ಸೈನ್ಯದ ಮೇಲೆ ಭಯಾನಕ ಬಾಣಸಮೂಹಗಳ ಮಳೆ ಸುರಿಸತೊಡಗಿದನು.॥54॥
ಮೂಲಮ್ - 55
ತೇ ಶಕ್ರಜಿದ್ಪಾಣವಿಶೀರ್ಣ ದೇಹಾ
ಮಾಯಾಹತಾ ವಿಸ್ವರಮುನ್ನದಂತಃ ।
ರಣೇ ನಿಪೇತುರ್ಹರಯೋಽದ್ರಿಕಲ್ಪಾ
ಯಥೇಂದ್ರ ವಜ್ರಾಭಿಹತಾ ನಗೇಂದ್ರಾಃ ॥
ಅನುವಾದ
ಇಂದ್ರನ ವಜ್ರಾಘಾತದಿಂದ ದೊಡ್ಡ ದೊಡ್ಡ ಪರ್ವತಗಳು ನೆಲಸಮವಾಗುವಂತೆ, ಆ ಪರ್ವತಾಕಾರ ವಾನರರು ರಣಭೂಮಿಯಲ್ಲಿ ಇಂದ್ರ ಜಿತುವಿನ ಬಾಣಗಳಿಂದ ಶರೀರ ಕ್ಷತ-ವಿಕ್ಷತವಾಗಿ ವಿಕೃತ ಸ್ವರದಿಂದ ಚೀರುತ್ತಾ ನೆಲಕ್ಕೆ ಬಿದ್ದುಬಿಟ್ಟರು.॥55॥
ಮೂಲಮ್ - 56
ತೇ ಕೇವಲಂ ಸಂದದೃಶುಃ ಶಿತಾಗ್ರಾನ್
ಬಾಣಾನ್ರಣೇ ವಾನರ ವಾಹಿನೀಷು ।
ಮಾಯಾವಿಗೂಢಂ ತು ಸುರೇಂದ್ರಶತ್ರುಂ
ನ ಚಾತ್ರ ತಂ ರಾಕ್ಷಸಮಪ್ಯಪಶ್ಯನ್ ॥
ಅನುವಾದ
ರಣಭೂಮಿಯಲ್ಲಿ ವಾನರ ಸೈನ್ಯದ ಮೇಲೆ ಬೀಳುತ್ತಿರುವ ತೀಕ್ಷ್ಣ ಬಾಣಗಳನ್ನು ಮಾತ್ರ ನೋಡುತ್ತಿದ್ದರು. ಮಾಯೆಯಿಂದ ಅಡಗಿದ್ದ ಆ ಇಂದ್ರದ್ರೋಹೀ ರಾಕ್ಷಸನನ್ನು ನೋಡುತ್ತಿರಲಿಲ್ಲ.॥56॥
ಮೂಲಮ್ - 57
ತತಃ ಸ ರಕ್ಷೋಧಿಪತಿರ್ಮಹಾತ್ಮಾ
ಸರ್ವಾ ದಿಶೋ ಬಾಣಗಣೈಃ ಶಿತಾಗ್ರೈಃ ।
ಪ್ರಚ್ಛಾದಯಾಮಾಸ ರವಿಪ್ರಕಾಶೈ-
ರ್ವಿದಾರಯಾಮಾಸ ಚ ವಾನರೇಂದ್ರಾನ್ ॥
ಅನುವಾದ
ಆಗ ಆ ಮಹಾಕಾಯ ರಾಕ್ಷಸನು ಹರಿತವಾದ ಸೂರ್ಯತುಲ್ಯ ತೇಜಸ್ವೀ ಬಾಣ ಸಮೂಹದಿಂದ ಸಮಸ್ತ ದಿಕ್ಕುಗಳನ್ನು ಮುಚ್ಚಿ, ವಾನರ ಸೇನಾಪತಿಗಳನ್ನು ವಿವೀರ್ಣಗೊಳಿಸಿದನು.॥57॥
ಮೂಲಮ್ - 58
ಸ ಶೂಲನಿಸ್ತ್ರಿಂಶಪರಶ್ವಧಾನಿ
ವ್ಯಾವಿದ್ಧದೀಪ್ತಾನಲಸಪ್ರಭಾಣಿ ।
ಸುವಿಸ್ಫುಲಿಂಗೋಜ್ಜ್ವಲ ಪಾವಕಾನಿ
ವವರ್ಷ ತೀವ್ರಂ ಪ್ಲವಗೇಂದ್ರ ಸೈನ್ಯೇ ॥
ಅನುವಾದ
ಅವನು ವಾನರ ಸೈನ್ಯದ ಮೇಲೆ ಭುಗಿಲೆದ್ದ ಬೆಂಕಿಯಂತೆ ದೀಪ್ತವಂತ ಹಾಗೂ ಕಿಡಿಗಳ ಸಹಿತ ಅಗ್ನಿಯನ್ನು ಪ್ರಕಟಿಸುವ ಶೂಲ, ಖಡ್ಗ, ಕೊಡಲಿ ಇವುಗಳ ದುಃಸಹ ವೃಷ್ಟಿ ಮಾಡತೊಡಗಿದನು.॥58॥
ಮೂಲಮ್ - 59
ತತೋಜ್ವಲನಸಂಕಾಶೈಃ ಬಾಣೈರ್ವಾನರಯೂಥಪಾಃ ।
ತಾಡಿತಾಃ ಶಕ್ರಜಿದ್ಬಾಣೈಃ ಪ್ರುಲ್ಲಾ ಇವ ಕಿಂಶುಕಾಃ ॥
ಅನುವಾದ
ಇಂದ್ರಜಿತನು ಪ್ರಯೋಗಿಸಿದ ಅಗ್ನಿತುಲ್ಯ ತೇಜಸ್ವೀ ಬಾಣಗಳಿಂದ ಗಾಯಗೊಂಡು, ರಕ್ತದಿಂದ ತೊಯ್ದು ಎಲ್ಲ ವಾನರ ದಳಪತಿಗಳು ಅರಳಿನಿಂತ ಮುತ್ತುಗದ ಮರದಂತೆ ಕಂಡುಬರುತ್ತಿದ್ದರು.॥59॥
ಮೂಲಮ್ - 60
ತೇಽನ್ಯೋನ್ಯಮಭಿಸರ್ಪಂತೋ ನಿನದಂತಶ್ಚ ವಿಸ್ವರಮ್ ।
ರಾಕ್ಷಸೇಂದ್ರಾಸ್ತ್ರನಿರ್ಭಿನ್ನಾ ನಿಪೇತುರ್ವಾನರರ್ಷಭಾಃ ॥
ಅನುವಾದ
ರಾಕ್ಷಸರಾಜ ಇಂದ್ರಜಿತನ ಬಾಣಗಳಿಂದ ವಿದೀರ್ಣವಾದ ವಾನರಶ್ರೇಷ್ಠರು ಒಬ್ಬರು ಮತ್ತೊಬ್ಬರ ಮುಂದೆ ಹೋಗಿ ವಿಕೃತ ಸ್ವರದಿಂದ ಚೀತ್ಕರಿಸುತ್ತಾ ಧರಾಶಾಯಿಯಾಗುತ್ತಿದ್ದರು.॥60॥
ಮೂಲಮ್ - 61
ಉದೀಕ್ಷಮಾಣಾ ಗಗನಂ ಕೇಚಿನ್ನೇತ್ರೇಷು ತಾಡಿತಾಃ ।
ಶರೈರ್ವಿವಿಶುರನ್ಯೋನ್ಯಂ ಪೇತುಶ್ಚ ಜಗತೀತಲೇ ॥
ಅನುವಾದ
ಎಷ್ಟೋ ವಾನರರು ಆಕಾಶದತ್ತ ನೋಡುತ್ತಿದ್ದರು. ಆಗ ಅವರ ಕಣ್ಣುಗಳಿಗೆ ಬಾಣಗಳ ಏಟು ಬೀಳುತ್ತಿತ್ತು. ಇದರಿಂದ ಪರಸ್ಪರ ತಾಗಿಕೊಂಡು ನೆಲಕ್ಕೆ ಬಿದ್ದು ಹೋದರು.॥61॥
ಮೂಲಮ್ - 62
ಹನೂಮಂತಂ ಚ ಸುಗ್ರೀವಮಂಗದಂ ಗಂಧಮಾದನಮ್ ।
ಜಾಂಬವಂತಂ ಸುಷೇಣಂ ಚ ವೇಗದರ್ಶಿನಮೇವ ಚ ॥
ಮೂಲಮ್ - 63
ಮೈಂದಂ ಚ ದ್ವಿವಿದಂ ನೀಲಂ ಗವಾಕ್ಷಂ ಗವಯಂ ತಥಾ ।
ಕೇಸರಿಂ ಹರಿಲೋಮಾನಂ ವಿದ್ಯುದ್ದಂಷ್ಟ್ರಂ ಚ ವಾನರಮ್ ॥
ಮೂಲಮ್ - 64
ಸೂರ್ಯಾನನಂ ಜ್ಯೋತಿಮುಖಂ ತಥಾ ದಧಿಮುಖಂ ಹರಿಮ್ ।
ಪಾವಕಾಕ್ಷಂ ನಲಂ ಚೈವ ಕುಮುದಂ ಚೈವ ವಾನರಮ್ ॥
ಮೂಲಮ್ - 65
ಪ್ರಾಸೈಃ ಶೂಲೈಃ ಶಿತೈರ್ಬಾಣೈರಿಂದ್ರಜಿನ್ಮಂತ್ರಸಂಹಿತೈಃ ।
ವಿವ್ಯಾಧ ಹರಿಶಾರ್ದೂಲಾನ್ ಸರ್ವಾಂಸ್ತಾನ್ರಾಕ್ಷಸೋತ್ತಮಃ ॥
ಅನುವಾದ
ರಾಕ್ಷಸ ಪ್ರವರ ಇಂದ್ರಜಿತು ದಿವ್ಯ ಮಂತ್ರಗಳಿಂದ ಅಭಿಮಂತ್ರಿಸಿ ಪ್ರಾಸ, ಶೂಲ, ಹರಿತವಾದ ಬಾಣಗಳಿಂದ ಹನುಮಂತ, ಸುಗ್ರೀವ, ಅಂಗದ, ಗಂಧಮಾದನ, ಜಾಂಬವಂತ, ಸುಷೇಣ, ವೇಗದರ್ಶಿ, ಮೈಂದ, ದ್ವಿವಿದ, ನೀಲ, ಗವಾಕ್ಷ, ಗವಯ, ಕೇಸರೀ ಹರಿಲೋಮಾ, ವಿದ್ಯುದ್ದಂಷ್ಟ್ರ, ಸೂರ್ಯಾನನ, ಜೋತಿರ್ಮುಖ, ದಧಿಮುಖ, ಪಾವಕಾಕ್ಷ, ನಳ ಮತ್ತು ಕುಮುದ ಮುಂತಾದ ಎಲ್ಲ ಶ್ರೇಷ್ಠ ವಾನರರನ್ನು ಗಾಯಗೊಳಿಸಿದನು.॥62-65॥
ಮೂಲಮ್ - 66
ಸ ವೈ ಗದಾಭಿರ್ಹರಿಯೂಥಮುಖ್ಯಾನ್
ನಿರ್ಭಿದ್ಯ ಬಾಣೈಸ್ತಪನೀಯವರ್ಣೈಃ ।
ವವರ್ಷ ರಾಮಂ ಶರವೃಷ್ಟಿಜಾಲೈಃ
ಸಲಕ್ಷ್ಮಣಂ ಭಾಸ್ಕರರಶ್ಮಿಕಲ್ಪೈಃ ॥
ಅನುವಾದ
ಗದೆಗಳಿಂದ, ಸುವರ್ಣದಂತಹ ಕಾಂತಿವಂತ ಬಾಣಗಳಿಂದ ವಾನರ ದಳಪತಿಗಳನ್ನು ಘಾಸಿಗೊಳಿಸಿ, ಅವನು ಲಕ್ಷ್ಮಣ ಸಹಿತ ಶ್ರೀರಾಮನ ಮೇಲೆ ಸೂರ್ಯಕಿರಣಗಳಂತೆ ಹೊಳೆಯುವ ಬಾಣಸಮೂಹಗಳನ್ನು ಮಳೆಗರೆದನು.॥66॥
ಮೂಲಮ್ - 67
ಸ ಬಾಣವರ್ಷೈರಭಿವೃರ್ಷ್ಯಮಾಣೋ
ಧಾರಾನಿಪಾತಾನಿವ ತಾನಚಿಂತ್ಯ ।
ಸಮೀಕ್ಷಮಾಣಃ ಪರಮಾದ್ಭುತಶ್ರೀ
ರಾಮಸ್ತದಾ ಲಕ್ಷ್ಮಣಮಿತ್ಯುವಾಚ ॥
ಅನುವಾದ
ಆ ಬಾಣ ವರ್ಷಕ್ಕೆ ಗುರಿಯಾದ ಪರಮಾದ್ಭುತ ಶೋಭಾಸಂಪನ್ನ ಶ್ರೀರಾಮನು ಜಲಧಾರೆಯಂತೆ ಬೀಳುವ ಆ ಬಾಣಗಳನ್ನು ಲೆಕ್ಕಿಸದೆ ಲಕ್ಷ್ಮಣನ ಕಡೆಗೆ ನೋಡಿ ಹೇಳಿದನು.॥67॥
ಮೂಲಮ್ - 68
ಅಸೌ ಪುನರ್ಲಕ್ಷ್ಮಣ ರಾಕ್ಷಸೇಂದ್ರೋ
ಬ್ರಹ್ಮಾಸ್ತ್ರಮಾಶ್ರಿತ್ಯ ಸುರೇಂದ್ರಶತ್ರುಃ ।
ನಿಪಾತಯಿತ್ವಾ ಹರಿಸೈನ್ಯ ಮಸ್ಮಾನ್
ಶಿತೈಃ ಶರೈರರ್ದಯತಿ ಪ್ರಸಕ್ತಮ್ ॥
ಅನುವಾದ
ಲಕ್ಷ್ಮಣ! ಆ ಇಂದ್ರದ್ರೋಹಿ ರಾಕ್ಷಸರಾಜ ಇಂದ್ರಜಿತು ಪ್ರಾಪ್ತವಾದ ಬ್ರಹ್ಮಾಸ್ತ್ರದ ಆಶ್ರಯಪಡೆದು ವಾನರ ಸೈನಿಕರನ್ನು ಧರಾಶಾಯಿಗಿಸಿ, ಈಗ ಹರಿತಬಾಣಗಳಿಂದ ನಮ್ಮಿಬ್ಬರನ್ನು ಪೀಡಿಸುತ್ತಿದ್ದಾನೆ.॥68॥
ಮೂಲಮ್ - 69
ಸ್ವಯಂಭುವಾ ದತ್ತವರೋ ಮಹಾತ್ಮಾ
ಸಮಾಹಿತೋಂಽತರ್ಹಿತ ಭೀಮಕಾಯಃ ।
ಕಥಂ ನು ಶಕ್ಯೋ ಯುಧಿ ನಷ್ಟದೇಹೋ
ನಿಹಂತುಮದ್ಯೇಂದ್ರಜಿದುದ್ಯತಾಸ್ತ್ರಃ ॥
ಅನುವಾದ
ಬ್ರಹ್ಮದೇವರಿಂದ ವರವನ್ನು ಪಡೆದು ಸದಾ ಎಚ್ಚರವಾಗಿರುವ ಈ ಮಹಾಮನಸ್ವೀ ವೀರನು ತನ್ನ ಭೀಷಣ ಶರೀರವನ್ನು ಅದೃಶ್ಯಗೊಳಿಸಿಕೊಂಡಿರುವನು. ಯುದ್ಧದಲ್ಲಿ ಈ ಇಂದ್ರಜಿತನ ಶರೀರ ಕಾಣುವುದೇ ಇಲ್ಲ. ಆದರೆ ಇವನು ಶಸ್ತ್ರಪ್ರಯೋಗ ಮಾಡುತ್ತಾ ಇದ್ದಾನೆ. ಹೀಗಿರುವಾಗ ನಾವು ಇವನನ್ನು ಹೇಗೆ ಕೊಲ್ಲುವುದು.॥69॥
ಮೂಲಮ್ - 70
ಮನ್ಯೇ ಸ್ವಯಂಭೂರ್ಭಗವಾನಚಿಂತ್ಯ
ಸ್ತಸ್ಯೈತದಸಂ ಪ್ರಭವಶ್ಚಯೋಽಸ್ಯ ।
ಬಾಣಾವಪಾತಾಂಸ್ತ್ವ ಮಿಹಾದ್ಯ ಧೀಮಾನ್
ಸಹಾವ್ಯಗ್ರಮನಾಃ ಸಹಸ್ವ ॥
ಅನುವಾದ
ಸ್ವಯಂಭೂ ಬ್ರಹ್ಮದೇವರ ಸ್ವರೂಪ ಅಚಿಂತ್ಯವಾಗಿದೆ. ಅವರೇ ಈ ಜಗತ್ತಿನ ಆದಿಕಾರಣರಾಗಿದ್ದಾರೆ. ಅವರದೇ ಈ ಅಸ್ತ್ರವಾಗಿದೆ ಎಂದು ನಾನು ತಿಳಿಯುತ್ತೇನೆ. ಬುದ್ಧಿವಂತ ಸುಮಿತ್ರಾಕುಮಾರನೇ! ನೀನು ಮನಸ್ಸಿನಲ್ಲಿ ಯಾವುದೇ ಗಾಬರಿಪಡದೆ, ನನ್ನೊಂದಿಗೆ ಇಲ್ಲಿ ಸುಮ್ಮನೆ ನಿಂತುಕೊಂಡು ಬಾಣಗಳ ಏಟನ್ನು ಸಹಿಸಿಕೋ.॥70॥
ಮೂಲಮ್ - 71
ಪ್ರಚ್ಛಾದಯತ್ಯೇಷ ಹಿ ರಾಕ್ಷಸೇಂದ್ರಃ
ಸರ್ವಾ ದಿಶಃ ಸಾಯಕವೃಷ್ಟಿಜಾಲೈಃ ।
ಏತಚ್ಚ ಸರ್ವಂ ಪತಿತಾಗ್ರ್ಯಶೂರಂ
ನ ಭ್ರಾಜತೇ ವಾನರರಾಜ ಸೈನ್ಯಮ್ ॥
ಅನುವಾದ
ಈ ರಾಕ್ಷಸರಾಜ ಇಂದ್ರಜಿತು ಈಗ ಬಾಣ ಸಮೂಹಗಳ ಮಳೆಗರೆದು ಎಲ್ಲ ದಿಕ್ಕುಗಳನ್ನು ಮುಚ್ಚಿಬಿಟ್ಟಿರುವನು. ವಾನರರಾಜ ಸುಗ್ರೀವನ ಈ ಸೈನ್ಯದ ಮುಖ್ಯ ಮುಖ್ಯ ಶೂರವೀರನು ಧರಾಶಾಯಿಯಾಗಿ, ಶೋಭೆಯನ್ನು ಕಳೆದುಕೊಂಡಿರುವರು.॥71॥
ಮೂಲಮ್ - 72
ಆವಾಂ ತು ದೃಷ್ಟ್ವಾ ಪತಿತೌ ವಿಸಂಜ್ಞೌ
ನಿವೃತ್ತಯುದ್ಧೌ ಹತಹರ್ಷರೋಷೌ ।
ಧ್ರುವಂ ಪ್ರವೇಕ್ಷ್ಯತ್ಯಮರಾರಿವಾಸ-
ಮಸೌ ಸಮಾಸಾದ್ಯ ರಣಾಗ್ರ್ಯಲಕ್ಷ್ಮೀಮ್ ॥
ಅನುವಾದ
ನಾವಿಬ್ಬರೂ ಹರ್ಷ-ರೋಷ ರಹಿತರಾಗಿ ಯುದ್ಧದಿಂದ ನಿವೃತ್ತರಾಗಿ ನಿಷ್ಚೇಷ್ಟಿತರಂತೆ ಬಿದ್ದುಬಿಟ್ಟಾಗ ನಮ್ಮನ್ನು ಆ ಸ್ಥಿತಿಯಲ್ಲಿ ನೋಡಿ ಯುದ್ಧದಲ್ಲಿ ವಿಜಯ ಪಡೆದು ಖಂಡಿತವಾಗಿ ಈ ರಾಕ್ಷಸನು ಲಂಕೆಗೆ ಮರಳಿಹೋಗುವನು.॥72॥
ಮೂಲಮ್ - 73
ತತಸ್ತು ತಾವಿಂದ್ರ್ರ ಜಿತೋಽಸ್ತ್ರಜಾಲೈ-
ರ್ಬಭೂವತುಸ್ತತ್ರ ತದಾ ವಿಶಸ್ತೌ ।
ಸ ಚಾಪಿ ತೌ ತತ್ರ ವಿಷಾದಯಿತ್ವಾ
ನನಾದ ಹರ್ಷಾದ್ಯುಧಿ ರಾಕ್ಷಸೇಂದ್ರಃ ॥
ಅನುವಾದ
ಅನಂತರ ರಾಮ-ಲಕ್ಷ್ಮಣರಿಬ್ಬರೂ ಇಂದ್ರಜಿತುವಿನ ಬಾಣಗಳಿಂದ ಬಹಳ ಗಾಯಗೊಂಡರು. ಆಗ ಅವರಿಬ್ಬರನ್ನು ಯುದ್ಧದಲ್ಲಿ ಪೀಡಿತಗೊಳಿಸಿ ಆ ರಾಕ್ಷಸ ರಾಜನು ಜೋರಾಗಿ, ಹರ್ಷದಿಂದ ಗರ್ಜಿಸಿದನು.॥73॥
ಮೂಲಮ್ - 74
ತತಸ್ತದಾ ವಾನರ ಸೈನ್ಯಮೇವಂ
ರಾಮಂ ಚ ಸಂಖ್ಯೇ ಸಹ ಲಕ್ಷ್ಮಣೇನ ।
ವಿಷಾದಯಿತ್ವಾ ಸಹಸಾ ವಿವೇಶ
ಪುರೀಂ ದಶಗ್ರೀವಭುಜಾಭಿಗುಪ್ತಾಮ್ ।
ಸಂಸ್ತೂಯಮಾನಃ ಸ ತು ಯಾತುಧಾನೈಃ
ಪಿತ್ರೇ ಚ ಸರ್ವಂ ಹೃಷಿತೋಽಭ್ಯುವಾಚ ॥
ಅನುವಾದ
ಈ ಪ್ರಕಾರ ಸಂಗ್ರಾಮದಲ್ಲಿ ವಾನರ ಸೈನ್ಯವನ್ನು ಮತ್ತು ರಾಮ-ಲಕ್ಷ್ಮಣರನ್ನು ಮೂರ್ಛಿತಗೊಳಿಸಿ ಇಂದ್ರಜಿತು ಕೂಡಲೇ ರಾವಣಪಾಲಿತ ಲಂಕೆಗೆ ತೆರಳಿದನು. ಆಗ ಸಮಸ್ತ ನಿಶಾಚರರು ಅವನನ್ನು ಸ್ತುತಿಸುತ್ತಿದ್ದರು. ಅವನು ತಂದೆಯ ಬಳಿ ಸಂತೋಷದಿಂದ ತನ್ನ ವಿಜಯದ ಸಮಾಚಾರ ತಿಳಿಸಿದನು.॥74॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಎಪ್ಪತ್ತಮೂರನೆಯ ಸರ್ಗ ಪೂರ್ಣವಾಯಿತು.॥73॥