०७२ रावणेन-अतिकायमरणशोकः

वाचनम्
ಭಾಗಸೂಚನಾ

ರಾವಣನ ಚಿಂತೆ, ಲಂಕೆಯನ್ನು ಸುರಕ್ಷಿತವಾಗಿಡಲು ಆದೇಶ

ಮೂಲಮ್ - 1

ಅತಿಕಾಯಂ ಹತಂ ಶ್ರುತ್ವಾ ಲಕ್ಷ್ಮಣೇನ ಮಹಾತ್ಮನಾ ।
ಉದ್ವೇಗಮಗಮದ್ರಾಜಾ ವಚನಂ ಚೇದಮಬ್ರವೀತ್ ॥

ಅನುವಾದ

ಮಹಾತ್ಮಾ ಲಕ್ಷ್ಮಣನಿಂದ ಅತಿಕಾಯನು ಹತನಾದನೆಂಬ ವಾರ್ತೆ ಕೇಳಿ ರಾವಣನು ಉದ್ವಿಗ್ನನಾಗಿ ಹೇಳಿದನು.॥.॥

ಮೂಲಮ್ - 2

ಧೂಮ್ರಾಕ್ಷಃ ಪರಮಾಮರ್ಷೀ ಸರ್ವ ಶಸ್ತ್ರಭೃತಾಂ ವರಃ ।
ಅಕಂಪನಃ ಪ್ರಹಸ್ತಶ್ಚ ಕುಂಭಕರ್ಣಸ್ತಥೈವ ಚ ॥

ಮೂಲಮ್ - 3

ಏತೇ ಮಹಾಬಲಾ ವೀರಾ ರಾಕ್ಷಸಾ ಯುದ್ಧಕಾಂಕ್ಷಿಣಃ ।
ಜೇತಾರಃ ಪರಸೈನ್ಯಾನಾಂ ಪರೈರ್ನಿತ್ಯಾಪರಾಜಿತಾಃ ॥

ಅನುವಾದ

ಅತ್ಯಂತ ಕೋಪಿಷ್ಠನಾದ ಧೂಮ್ರಾಕ್ಷ, ಸಮಸ್ತ ಶಸ್ತ್ರಧಾರಿಗಳಲ್ಲಿ ಶ್ರೇಷ್ಠ ಅಕಂಪನ, ಪ್ರಹಸ್ತ ಹಾಗೂ ಕುಂಭಕರ್ಣ ಇವರೆಲ್ಲ ಮಹಾಬಲಿ ವೀರರಾಕ್ಷಸರು ಸದಾ ಯುದ್ಧಾಭಿಲಾಷಿಯಾಗಿದ್ದರು. ಇವರೆಲ್ಲರೂ ಶತ್ರುಸೈನ್ಯವನ್ನು ಜಯಿಸುವವರೂ, ಶತ್ರುಗಳಿಂದ ಎಂದೂ ಪರಾಜಿತರಾಗದವರಾಗಿದ್ದರು.॥2-3॥

ಮೂಲಮ್ - 4

ಸಸೈನ್ಯಾಸ್ತೇ ಹತಾವೀರಾ ರಾಮೇಣಾಕ್ಲಿಷ್ಟಕರ್ಮಣಾ ।
ರಾಕ್ಷಸಾಃ ಸುಮಹಾಕಾಯಾ ನಾನಾಶಸ್ತ್ರ ವಿಶಾರದಾಃ ॥

ಅನುವಾದ

ಆದರೆ ಅನಾಯಾಸದಿಂದ ಮಹತ್ಕಾರ್ಯ ಮಾಡುವ ರಾಮನು ನಾನಾರೀತಿಯ ಶಸ್ತ್ರಗಳಲ್ಲಿ ನಿಪುಣರಾದ ವಿಶಾಲಕಾಯ ವೀರ ರಾಕ್ಷಸರನ್ನು ಸೈನ್ಯ ಸಹಿತ ಸಂಹಾರಮಾಡಿಬಿಟ್ಟನು.॥4॥

ಮೂಲಮ್ - 5

ಅನ್ಯೇ ಚ ಬಹವಃ ಶೂರಾ ಮಹಾತ್ಮಾನೋ ನಿಪಾತಿತಾಃ ।
ಪ್ರಖ್ಯಾತಬಲವೀರ್ಯೇಣ ಪುತ್ರೇಣೇಂದ್ರಜಿತಾ ಮಮ ॥

ಮೂಲಮ್ - 6

ತೌ ಭ್ರಾತರೌ ತದಾ ಬದ್ಧೋ ಘೋರೈದತ್ತವರೈಃ ಶರೈಃ ।
ಯನ್ನ ಶಕ್ಯಂ ಸುರೈಃ ಸರ್ವೈರಸುರೈರ್ವಾ ಮಹಾಬಲೈಃ ॥

ಮೂಲಮ್ - 7½

ಮೋಕ್ತುಂ ತದ್ಬಂಧನಂ ಘೋರಂ ಯಕ್ಷಗಂಧರ್ವ ಪನ್ನಗೈಃ ।
ತನ್ನ ಜಾನೇ ಪ್ರಭಾವೈರ್ವಾ ಮಾಯಯಾ ಮೋಹನೇನ ವಾ ॥
ಶರಬಂಧಾದ್ ವಿಮುಕ್ತೌ ತೌ ಭ್ರಾತರೌ ರಾಮಲಕ್ಷ್ಮಣೌ ।

ಅನುವಾದ

ಇನ್ನೂ ಅನೇಕ ಮಹಾಮನಸ್ವೀ ಶೂರವೀರ ರಾಕ್ಷಸರು ಅವನಿಂದ ಹತರಾದರು. ಬಲ-ಪರಾಕ್ರಮದಲ್ಲಿ ಎಲ್ಲೆಡೆ ವಿಖ್ಯಾತನಾದ ನನ್ನ ಮಗ ಇಂದ್ರಜಿತನು ಇಬ್ಬರೂ ಸಹೋದರರನ್ನು ನಾಗಪಾಶದಿಂದ ಬಂಧಿಸಿದ್ದನು. ಆ ಘೋರ ಬಂಧನವನ್ನು ಸಮಸ್ತ ದೇವತೆಗಳು, ಮಹಾಬಲೀ ಅಸುರರೂ ಬಿಚ್ಚಲಾರರು. ಯಕ್ಷ, ಗಂಧರ್ವ ಮತ್ತು ನಾಗಗಳಿಗೂ ಆ ಬಂಧನದಿಂದ ಬಿಡುಗಡೆ ಇಲ್ಲ. ಹೀಗಿದ್ದರೂ ಈ ಸಹೋದರ ರಿಬ್ಬರೂ ಆ ಬಾಣ ಬಂಧನದಿಂದ ಮುಕ್ತರಾದರು. ಯಾವ ಪ್ರಭಾವವೋ, ಮಾಯೆಯೋ, ಅಥವಾ ಯಾವ ಮೋಹಿನಿ ಔಷಧಿಯೋ ತಿಳಿಯದು, ಅದರ ಪ್ರಯೋಗದಿಂದ ಅವರು ಬಂಧನದಿಂದ ಬಿಡುಗಡೆ ಹೊಂದಿದರು.॥5-7॥

ಮೂಲಮ್ - 8½

ಯೇ ಯೋಧಾ ನಿರ್ಗತಾಃ ಶೂರಾ ರಾಕ್ಷಸಾ ಮಮ ಶಾಸನಾತ್ ॥
ತೇ ಸರ್ವೇ ನಿಹತಾ ಯುದ್ಧೇ ವಾನರೈಃ ಸುಮಹಾಬಲೈಃ ।

ಅನುವಾದ

ನನ್ನ ಆಜ್ಞೆಯಿಂದ ಯುದ್ಧಕ್ಕೆ ಹೋದ ಶೂರವೀರ ಯೋಧರೆಲ್ಲರನ್ನು ರಣರಂಗದಲ್ಲಿ ಮಹಾಬಲಿ ವಾನರರು ಕೊಂದು ಹಾಕಿದರು.॥8॥

ಮೂಲಮ್ - 9½

ತಂ ನ ಪಶ್ಯಾಮ್ಯಹಂ ಯುದ್ಧೇ ಯೋಽದ್ಯ ರಾಮಂ ಸಲಕ್ಷ್ಮಣಮ್ ॥
ಶಾಸಯೇತ್ಸಬಲಂ ವೀರ ಸಸುಗ್ರೀವಂ ವಿಭೀಷಣಮ್ ।

ಅನುವಾದ

ಯುದ್ಧದಲ್ಲಿ ಲಕ್ಷ್ಮಣ ಸಹಿತ ರಾಮನನ್ನು ಮತ್ತು ವಾನರ ಸೈನ್ಯವನ್ನು ಸುಗ್ರೀವ ಸಹಿತ ವಿಭೀಷಣನನ್ನು ನಾಶ ಮಾಡುವ ಯಾವ ವೀರನನ್ನು ಇಂದು ನಾನು ನೋಡುವುದಿಲ್ಲ.॥9॥

ಮೂಲಮ್ - 10½

ಅಹೋ ಸುಬಲವಾನ್ ರಾಮೋ ಮಹದಸ್ತ್ರ ಬಲಂ ಚ ವೈ ॥
ಯಸ್ಯ ವಿಕ್ರಮಮಾಸಾದ್ಯ ರಾಕ್ಷಸಾ ನಿಧನಂ ಗತಾಃ ।

ಅನುವಾದ

ನಿಶ್ಚಯವಾಗಿ ರಾಮನು ಬಲಿಷ್ಠನೇ ಸರಿ. ಅವನಿಗೆ ಮಹಾಸ್ತ್ರಗಳ ಬಲವೂ ಇದೆ. ಅವನ ಅತುಲ ಪರಾಕ್ರಮದಿಂದ ಅಸಂಖ್ಯ ರಾಕ್ಷಸರು ಕಾಲವಶರಾದರು.॥10॥

ಮೂಲಮ್ - 11½

ತಂ ಮನ್ಯೇ ರಾಘವಂ ವೀರಂ ನಾರಾಯಣಮನಾಮಯಮ್ ॥
ತದ್ಭಯಾದ್ಧಿ ಪುರೀ ಲಂಕಾಪಿಹಿತದ್ವಾರತೋರಣಾ ।

ಅನುವಾದ

ಆ ವೀರ ರಘುನಾಥನನ್ನು ರೋಗ-ಶೋಕರಹಿತ ಸಾಕ್ಷಾತ್ ನಾರಾಯಣನೆಂದೇ ನಾನು ತಿಳಿಯುತ್ತೇನೆ. ಏಕೆಂದರೆ ಅವನ ಭಯದಿಂದಲೇ ಲಂಕೆಯ ಎಲ್ಲ ಹೆಬ್ಬಾಗಿಲುಗಳು, ಹೊರದ್ವಾರಗಳು ಮುಚ್ಚಲ್ಪಟ್ಟಿರುತ್ತವೆ.॥11॥

ಮೂಲಮ್ - 12½

ಅಪ್ರಮತ್ತೈಶ್ಚ ಸರ್ವತ್ರ ಗುಲ್ಮೇರಕ್ಷ್ಯಾ ಪುರೀ ತ್ವಿಯಮ್ ॥
ಅಶೋಕವನಿಕಾ ಚೈವ ಯತ್ರ ಸೀತಾಭಿರಕ್ಷ್ಯತೇ ।

ಅನುವಾದ

ರಾಕ್ಷಸರೇ! ನೀವು ಎಲ್ಲ ಸಮಯದಲ್ಲಿ ಎಚ್ಚರವಾಗಿದ್ದು ಪುರಿಯನ್ನು ರಕ್ಷಿಸಬೇಕು. ಹೆಚ್ಚಾಗಿ ಸೀತೆಯಿರುವ ಅಶೋಕವನವಂತೂ ವಿಶೇಷವಾಗಿ ರಕ್ಷಿಸಿರಿ.॥12॥

ಮೂಲಮ್ - 13

ನಿಷ್ಕ್ರಾಮೋ ವಾ ಪ್ರವೇಶೋ ವಾ ಜ್ಞಾತವ್ಯಃ ಸರ್ವದೈವ ನಃ ॥

ಮೂಲಮ್ - 14

ಯತ್ರ ಯತ್ರ ಭವೇದ್ಗುಲ್ಮಸ್ತತ್ರ ತತ್ರ ಪುನಃ ಪುನಃ ।
ಸರ್ವತಶ್ಚಾಪಿ ತಿಷ್ಠಧ್ವಂ ಸ್ವೈಃ ಸ್ವೈಃ ಪರಿವೃತಾ ಬಲೈಃ ॥

ಅನುವಾದ

ಅಶೋಕವನದಲ್ಲಿ ಯಾರು ಯಾವಾಗ ಹೋಗುತ್ತಾರೆ, ಯಾವಾಗ ಹೊರಗೆ ಬರುತ್ತಾರೆ ಇದನ್ನು ಸದಾ ಗಮನಿಸುತ್ತಾ ಇರಬೇಕು. ಸೈನಿಕರ ಶಿಬಿರಗಳು ಇರುವಲ್ಲಿ ಪದೇ ಪದೇ ಕಣ್ಣಿಡಬೇಕು. ಎಲ್ಲೆಡೆ ನಮ್ಮ ಸೈನಿಕರು ಕಾವಲು ಕಾಯಬೇಕು.॥13-14॥

ಮೂಲಮ್ - 15

ದ್ರಷ್ಟವ್ಯಂ ಚ ಪದಂ ತೇಷಾಂ ವಾನರಾಣಾಂ ನಿಶಾಚರಾಃ ।
ಪ್ರದೋಷೇ ವಾರ್ಧರಾತ್ರೇ ವಾ ಪ್ರತ್ಯೂಷೇ ವಾಪಿ ಸರ್ವತಃ ॥

ಅನುವಾದ

ನಿಶಾಚರರೇ! ಪ್ರದೋಷ ಕಾಲ, ಮಧ್ಯರಾತ್ರಿ, ಪ್ರಾತಃಕಾಲದಲ್ಲಿಯೂ ವಾನರರು ಬಂದು ಹೋಗುವುದನ್ನು ಗಮನಿಸುತ್ತಿರಬೇಕು.॥15॥

ಮೂಲಮ್ - 16

ನಾವಜ್ಞಾ ತತ್ರ ಕರ್ತವ್ಯಾ ವಾನರೇಷು ಕದಾಚನ ।
ದ್ವಿಷತಾಂ ಬಲಮುದ್ಯುಕ್ತಮಾಪತತ್ ಕಿಂ ಸ್ಥಿತಂ ಯಥಾ ॥

ಅನುವಾದ

ವಾನರರನ್ನು ಎಂದೂ ಉಪೇಕ್ಷಿಸಬಾರದು. ಶತ್ರುಗಳ ಸೈನ್ಯವು ಯುದ್ಧಕ್ಕಾಗಿ ಉದ್ಯಮಶೀಲವಾಗಿಲ್ಲವಲ್ಲ ಎಂಬುದರ ಕಡೆಗೆ ದೃಷ್ಟಿ ಇಡಬೇಕು. ಆಕ್ರಮಣ ಮಾಡದೆ ಇದ್ದಲ್ಲೇ ಇದ್ದಾರೆಯೇ ಎಂಬುದನ್ನು ಗಮನಿಸಬೇಕು.॥16॥

ಮೂಲಮ್ - 117

ತತಸ್ತೇ ರಾಕ್ಷಸಾಃ ಸರ್ವೇ ಶ್ರುತ್ವಾ ಲಂಕಾಧಿಪಸ್ಯ ತತ್ ।
ವಚನಂ ಸರ್ವಮಾತಿಷ್ಠನ್ ಯಥಾವತ್ತು ಮಹಾಬಲಾಃ ॥

ಅನುವಾದ

ಲಂಕಾಪತಿಯ ಈ ಆದೇಶವನ್ನು ಕೇಳಿ ಸಮಸ್ತ ಮಹಾಬಲಿ ರಾಕ್ಷಸರು ಅದೆಲ್ಲವನ್ನು ಯಥಾವತ್ತಾಗಿ ಪಾಲಿಸತೊಡಗಿದರು.॥17॥

ಮೂಲಮ್ - 18

ತಾನ್ಸರ್ವಾನ್ಹಿ ಸಮಾದಿಶ್ಯ ರಾವಣೋ ರಾಕ್ಷಸಾಧಿಪಃ ।
ಮನ್ಯುಶಲ್ಯಂ ಸಹನ್ದೀನಃ ಪ್ರವಿವೇಶ ಸ್ವಮಾಲಯಮ್ ॥

ಅನುವಾದ

ಅವರೆಲ್ಲರಿಗೆ ಹೀಗೆ ಆದೇಶಕೊಟ್ಟು ರಾವಣನು ತನ್ನ ಹೃದಯಕ್ಕೆ ಚುಚ್ಚಿದ ದುಃಖ ಮತ್ತು ಕ್ರೋಧರೂಪೀ ಮುಳ್ಳಿನ ನೋವನ್ನು ತುಂಬಿಕೊಂಡು ದೀನಭಾವದಿಂದ ತನ್ನ ಅಂತಃಪುರಕ್ಕೆ ಹೋದನು.॥18॥

ಮೂಲಮ್ - 19

ತತಃ ಸ ಸಂದೀಪಿತ ಕೋಪವಹ್ನಿ-
ರ್ನಿಶಾಚರಾಣಾಮಧಿಪೋ ಮಹಾಬಲಃ ।
ತದೇವ ಪುತ್ರವ್ಯಸನಂ ವಿಚಿಂತಯನ್
ಮುಹುರ್ಮುಹುಶ್ಚೈವ ತದಾ ವಿನಿಃಶ್ವಸನ್ ॥

ಅನುವಾದ

ಮಹಾಬಲಿ ನಿಶಾಚರ ರಾಜ ರಾವಣನ ಕ್ರೋದಾಗ್ನಿಯು ಉರಿದೆದ್ದಿತು. ಅವನು ತನ್ನ ಪುತ್ರನ ಮೃತ್ಯುವನ್ನು ನೆನೆದು, ಪದೇ ಪದೇ ನಿಟ್ಟುಸಿರುಬಿಡುತ್ತಿದ್ದನು.॥1.॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಎಪ್ಪತ್ತೆರಡನೆಯ ಸರ್ಗ ಪೂರ್ಣವಾಯಿತು.॥72॥