वाचनम्
ಭಾಗಸೂಚನಾ
ಅತಿಕಾಯನ ಭಯಂಕರ ಯುದ್ಧ, ಲಕ್ಷ್ಮಣನಿಂದ ಅವನ ವಧೆ
ಮೂಲಮ್ - 1
ಸ್ವಬಲಂ ವ್ಯಥಿತಂ ದೃಷ್ಟ್ವಾ ತುಮುಲಂ ಲೋಮಹರ್ಷಣಮ್ ।
ಭ್ರಾತ್ಯಂಶ್ಚ ನಿಹತಾನ್ದೃಷ್ಟ್ವಾಶಕ್ರತುಲ್ಯ ಪರಾಕ್ರಮಾನ್ ॥
ಮೂಲಮ್ - 2
ಪಿತೃವ್ಯೌ ಚಾಪಿ ಸಂದೃಶ್ಯ ಸಮರೇ ಸಂನಿಪಾತಿತೌ ।
ಯುದ್ಧೋನ್ಮತ್ತಂ ಚ ಮತ್ತಂ ಚ ಭ್ರಾತರೌ ರಾಕ್ಷಸೋತ್ತಮೌ ॥
ಮೂಲಮ್ - 3
ಚುಕೋಪ ಚ ಮಹಾತೇಜಾ ಬ್ರಹ್ಮದತ್ತವರೋ ಯುಧಿ ।
ಅತಿಕಾಯೋಽದ್ರಿಸಂಕಾಶೋ ದೇವದಾನವ ದರ್ಪಹಾ ॥
ಅನುವಾದ
ಭಯಂಕರವೂ ರೋಮಾಂಚನಕಾರಿಯೂ ಆದ ತನ್ನ ಸೈನ್ಯವು ವ್ಯಥಿತವಾಗಿರುವುದನ್ನು, ಇಂದ್ರತುಲ್ಯ ಪರಾಕ್ರಮಿ ಗಳಾದ ತನ್ನ ಸಹೋದರರು ಹತರಾಗಿರುವುದನ್ನೂ, ಚಿಕ್ಕಂಪ್ಪದಿರಾದ ರಾಕ್ಷಸ ಶ್ರೇಷ್ಠರಾದ ಮಹೋದರ, ಮಹಾಪಾಶ್ವರು ಹತರಾಗಿರುವುದನ್ನು ನೋಡಿ, ಮಹಾತೇಜಸ್ವಿಯಾದ ಬ್ರಹ್ಮನಿಂದ ವರಗಳನ್ನು ಪಡೆದಿದ್ದ, ಪರ್ವತಸದೃಶನಾದ, ದೇವತೆಗಳ ಮತ್ತು ದಾನವರ ದರ್ಪಧ್ವಂಸಕನಾದ ಅತಿಕಾಯನು ಕ್ರುದ್ಧನಾದನು.॥1-3॥
ಮೂಲಮ್ - 4
ಸ ಭಾಸ್ಕರ ಸಹಸ್ರಸ್ಯ ಸಂಘಾತಮಿವ ಭಾಸ್ವರಮ್ ।
ರಥಮಾಸ್ಥಾಯ ಶಕ್ರಾರಿರಭಿದುದ್ರಾವ ವಾನರಾನ್ ॥
ಅನುವಾದ
ಇಂದ್ರಶತ್ರುವಾದ ಅವನು ಸಹಸ್ರ ಸೂರ್ಯರಂತಹ ದೇವೀಪ್ಯಮಾನವಾದ ತೇಜಸ್ವೀ ರಥದಲ್ಲಿ ಆರೂಢನಾಗಿ ವಾನರರನ್ನು ಆಕ್ರಮಿಸಿದನು.॥4॥
ಮೂಲಮ್ - 5
ಸ ವಿಸ್ಫಾರ್ಯ ತದಾ ಚಾಪಂ ಕಿರೀಟೀ ಮೃಷ್ಟಕುಂಡಲಃ ।
ನಾಮ ಸಂಶ್ರಾವಯಾಮಾಸ ನನಾದ ಚ ಮಹಾಸ್ವನಮ್ ॥
ಅನುವಾದ
ಅವನ ತಲೆಯ ಮೇಲೆ ಕಿರೀಟ ಮತ್ತು ಕಿವಿಗಳಲ್ಲಿ ಅಪ್ಪಟ ಚಿನ್ನದ ಕುಂಡಲಗಳು ಓಲಾಡುತ್ತಿದ್ದವು. ಅವನು ಧನುಷ್ಟಾಂಕಾರ ಮಾಡಿ ತನ್ನ ನಾಮಧೇಯವನ್ನು ಘೋಷಿಸಿ, ಜೋರಾಗಿ ಗರ್ಜಿಸಿದನು.॥5॥
ಮೂಲಮ್ - 6
ತೇನ ಸಿಂಹ ಪ್ರಣಾದೇನ ನಾಮ ವಿಶ್ರಾವಣೇನ ಚ ।
ಜ್ಯಾಶಬ್ದೇನ ಚ ಭೀಮೇನ ತ್ರಾಸಯಾಮಾಸ ವಾನರಾನ್ ॥
ಅನುವಾದ
ಆ ಸಿಂಹನಾದದಿಂದ, ನಾಮಘೋಷಣೆಯಿಂದ, ಭಯಾನಕ ಧನುಷ್ಟಂಕಾರದಿಂದ ಅವನು ವಾನರರನ್ನು ಭಯಗೊಳಿಸಿದನು.॥6॥
ಮೂಲಮ್ - 7
ತೇ ದೃಷ್ಟ್ವಾ ದೇಹಮಾಹಾತ್ಮ್ಯಂ ಕುಂಭಕರ್ಣೋಽಯಮುತ್ಥಿತಃ ।
ಭಯಾರ್ತಾ ವಾನರಾಃ ಸರ್ವೇ ಸಂಶ್ರಯಂತೇ ಪರಸ್ಪರಮ್ ॥
ಅನುವಾದ
ಅವನ ವಿಶಾಲ ಶರೀರವನ್ನು ನೋಡಿ, ಆ ವಾನರು ಕುಂಭಕರ್ಣನೇ ಪುನಃ ಎದ್ದು ನಿಂತಿರುವನೋ ಎಂದು ಯೋಚಿಸಿದರು. ಹೀಗೆ ಯೋಚಿಸಿ ಎಲ್ಲ ವಾನರರು ಭಯಗೊಂಡು ಒಬ್ಬರನ್ನೊಬ್ಬರ ಆಸರೆ ಪಡೆದರು.॥7॥
ಮೂಲಮ್ - 8
ತೇ ತಸ್ಯ ರೂಪಮಾಲೋಕ್ಯ ಯಥಾ ವಿಷ್ಣೋಸ್ತ್ರಿವಿಕ್ರಮೇ ।
ಭಯಾದ್ವಾ ನರಯೋಧಾಸ್ತೇ ವಿದ್ರವಂತಿ ತತಸ್ತತಃ ॥
ಅನುವಾದ
ತ್ರಿವಿಕ್ರಮ ಅವತಾರದ ಸಮಯ ಬೆಳೆದಿರುವ ವಿಷ್ಣುವಿನ ವಿರಾಟ್ ರೂಪದಂತೆ ಅವನ ಶರೀರವನ್ನು ನೋಡಿ ಆ ವಾನರ ಸೈನಿಕರು ಭಯದಿಂದ ಅತ್ತ-ಇತ್ತ ಓಡತೊಡಗಿದರು.॥8॥
ಮೂಲಮ್ - 9
ತೇಽತಿಕಾಯಂ ಸಮಾಸಾದ್ಯ ವಾನರಾ ಮೂಢಚೇತಸಃ ।
ಶರಣ್ಯಂ ಶರಣಂ ಜಗ್ಮುರ್ಲಕ್ಷ್ಮಣಾಗ್ರಜಮಾಹವೇ ॥
ಅನುವಾದ
ಅತಿಕಾಯನ ಹತ್ತಿರ ಹೋಗುತ್ತಲೇ ವಾನರರು ಭ್ರಾಂತಚಿತ್ತರಾದರು. ಅವರು ರಣರಂಗದಲ್ಲಿ ಲಕ್ಷ್ಮಣಾಗ್ರಜ ಶರಣಾಗತವತ್ಸಲ ಭಗವಾನ್ ಶ್ರೀರಾಮನಲ್ಲಿ ಶರಣಾದರು.॥9॥
ಮೂಲಮ್ - 10
ತತೋತಿಕಾಯಂ ಕಾಕುತ್ಸ್ಥೋ ರಥಸ್ಥಂ ಪರ್ವತೋಪಮಮ್ ।
ದದರ್ಶ ಧನ್ವಿನಂ ದೂರಾದ್ಗರ್ಜಂತಂ ಕಾಲಮೇಘವತ್ ॥
ಅನುವಾದ
ರಥದಲ್ಲಿ ಕುಳಿತಿರುವ ಪರ್ವತಾಕಾರ ಅತಿಕಾಯನನ್ನು ಶ್ರೀರಾಮನೂ ನೋಡಿದರು. ಅವನು ಕೈಯಲ್ಲಿ ಧನುಸ್ಸು ಹಿಡಿದಿದ್ದು, ಸ್ವಲ್ಪ ದೂರದಲ್ಲಿ ಪ್ರಳಯಕಾಲದ ಮೇಘದಂತೆ ಗರ್ಜಿಸುತ್ತಿದ್ದನು.॥10॥
ಮೂಲಮ್ - 11
ಸ ತಂ ದೃಷ್ಟ್ವಾ ಮಹಾಕಾಯಂ ರಾಘವಸ್ತುಸುವಿಸ್ಮಿತಃ ।
ವಾನರಾನ್ ಸಾಂತ್ವಯಿತ್ವಾಚ ವಿಭೀಷಣಮುವಾಚ ಹ ॥
ಅನುವಾದ
ಆ ಮಹಾಕಾಯ ನಿಶಾಚರನನ್ನು ನೋಡಿ ಶ್ರೀರಾಮಚಂದ್ರನಿಗೂ ವಿಸ್ಮಯವಾಯಿತು. ಅವನು ವಾನರರನ್ನು ಸಾಂತ್ವನಪಡಿಸಿ ವಿಭೀಷಣನಲ್ಲಿ ಕೇಳಿದನು.॥11॥
ಮೂಲಮ್ - 12
ಕೋಽಸೌ ಪರ್ವತ ಸಂಕಾಶೋಧನುಷ್ಮಾನ್ ಹರಿಲೋಚನಃ ।
ಯುಕ್ತೇ ಹಯಸಹಸ್ರೇಣ ವಿಶಾಲೇ ಸ್ಯಂದನೇ ಸ್ಥಿತಃ ॥
ಅನುವಾದ
ವಿಭೀಷಣನೇ! ಸಾವಿರ ಕುದುರೆಗಳನ್ನು ಹೂಡಿದ ವಿಶಾಲರಥದಲ್ಲಿ ಕುಳಿತಿರುವ ಆ ಪರ್ವತಾಕಾರ ನಿಶಾಚರನು ಯಾರು? ಅವನ ಕೈಯಲ್ಲಿ ಧನುಸ್ಸು ಇದ್ದು, ಕಣ್ಣುಗಳು ಸಿಂಹದಂತೆ ತೇಜಸ್ವಿಯಾಗಿವೆ.॥12॥
ಮೂಲಮ್ - 13
ಯ ಏಷ ನಿಶಿತೈಃ ಶೂಲೈಃ ಸುತೀಕ್ಷ್ಣೈಃ ಪ್ರಾಸತೋಮರೈಃ ।
ಅರ್ಚಿಷ್ಮದ್ಭಿರ್ವೃತೋ ಭಾತಿ ಭೂತೈರಿವ ಮಹೇಶ್ವರಃ ॥
ಅನುವಾದ
ಇವನು ಭೂತಗಳಿಂದ ಪರಿವೃತನಾದ ಭೂತನಾಥ ಮಹಾದೇವನಂತೆ ತೀಕ್ಷ್ಣ ಶೂಲ ಹಾಗೂ ಅತ್ಯಂತ ಹರಿತವಾದ ಅಲಗು ಗುಳುಳ್ಳ ತೇಜಸ್ವಿ ಪ್ರಾಸಗಳಿಂದ, ತೋಮರಗಳಿಂದ ಅದ್ಭುತವಾಗಿ ಶೋಭಿಸುತ್ತಿರುವನು.॥13॥
ಮೂಲಮ್ - 14
ಕಾಲಜಿಹ್ವಾ ಪ್ರಕಾಶಾಭಿರ್ಯ ಏಷೋಽಭಿವಿರಾಜತೇ ।
ಆವೃತೋರಥಶಕ್ತೀಭಿರ್ವಿದ್ಯುದ್ಭಿರಿವ ತೋಯದಃ ॥
ಅನುವಾದ
ಇಷ್ಟೇ ಅಲ್ಲದೆ ಕಾಲನ ಜಿಹ್ವೆಯಂತೆ ಪ್ರಕಾಶಿತವಾದ ರಥ ಶಕ್ತಿಗಳಿಂದ ಕೂಡಿದ ಈ ವೀರನಿಶಾಚರನು ವಿದ್ಯುನ್ಮಾಲೆಗಳಿಂದ ಆವೃತವಾದ ಮೇಘದಂತೆ ಪ್ರಕಾಶಿಸುತ್ತಿದ್ದಾನೆ.॥14॥
ಮೂಲಮ್ - 15
ಧನೂಂಷಿ ಚಾಸ್ಯ ಸಜ್ಜಾನಿ ಹೇಮಪೃಷ್ಠಾನಿ ಸರ್ವಶಃ ।
ಶೋಭಯಂತಿ ರಥಶ್ರೇಷ್ಠಂ ಶಕ್ರಚಾಪಮಿವಾಂಬರಮ್ ॥
ಅನುವಾದ
ಬೆನ್ನಿಗೆ ಚಿನ್ನವನ್ನು ಹೊದಿಸಿದ ಅನೇಕಾನೇಕ ಸುಸಜ್ಜಿತ ಧನುಸ್ಸುಗಳು ಕಾಮನ ಬಿಲ್ಲು ಆಕಾಶದಲ್ಲಿ ಸುಶೋಭಿತವಾದಂತೆ ಅವನ ರಥದ ಶೋಭೆಯನ್ನು ಹೆಚ್ಚಿಸುತ್ತಿವೆ.॥15॥
ಮೂಲಮ್ - 16
ಯ ಏಷ ರಕ್ಷಃ ಶಾರ್ದೂಲೋ ರಣಭೂಮಿಂ ವಿರಾಜಯನ್ ।
ಅಭ್ಯೇತಿ ರಥಿನಾಂ ಶ್ರೇಷ್ಠೋ ರಥೇನಾದಿತ್ಯ ವರ್ಚಸಾ ॥
ಅನುವಾದ
ಇವನು ರಾಕ್ಷಸರಲ್ಲಿ ಸಿಂಹದಂತೆ ಪರಾಕ್ರಮಿ ಮತ್ತು ರಥಿಕರಲ್ಲಿ ಶ್ರೇಷ್ಠವೀರನು ತನ್ನ ಸೂರ್ಯತುಲ್ಯ ತೇಜಸ್ವೀ ರಥದಿಂದ ರಣರಂಗದ ಶೋಭೆಯನ್ನು ಹೆಚ್ಚಿಸುತ್ತಾ ನನ್ನೆದುರಿಗೆ ಬರುತ್ತಿರುವನು.॥16॥
ಮೂಲಮ್ - 17
ಧ್ವಜಶೃಂಗಪ್ರತಿಷ್ಠೇನ ರಾಹುಣಾಭಿವಿರಾಜತೇ ।
ಸೂರ್ಯರಶ್ಮಿಪ್ರಭೈರ್ಬಾಣೈರ್ದಿಶೋ ದಶ ವಿರಾಜಯನ್ ॥
ಅನುವಾದ
ಇವನ ಧ್ವಜದಲ್ಲಿ ರಾಹುವಿನ ಚಿಹ್ನೆ ಅಂಕಿತವಾಗಿದೆ. ಅದರಿಂದ ರಥದ ಶೋಭೆ ಬಹಳ ಹೆಚ್ಚಾಗಿದೆ. ಇವನು ಸೂರ್ಯ ಕಿರಣಗಳಂತೆ ಹೊಳೆಯುವ ಬಾಣಗಳಿಂದ ದಶದಿಕ್ಕುಗಳನ್ನು ಬೆಳಗುತ್ತಿದ್ದಾನೆ.॥17॥
ಮೂಲಮ್ - 18
ತ್ರಿನತಂ ಮೇಘನಿರ್ಹ್ರಾದಂ ಹೇಮಪೃಷ್ಠಮಲಂಕೃತಮ್ ।
ಶತಕ್ರತುಧನುಃ ಪ್ರಖ್ಯಂ ಧನುಶ್ಚಾಸ್ಯ ವಿರಾಜತೇ ॥
ಅನುವಾದ
ಇವನ ಧನುಸ್ಸಿನ ಹಿಂಭಾಗ ಚಿನ್ನದಿಂದ ಅಲಂಕೃತವಾಗಿದೆ. ಅದು ಎರಡೂ ತುದಿಗಳಲ್ಲಿ, ಮಧ್ಯದಲ್ಲಿಯೂ ಬಾಗಿಕೊಂಡಿದೆ. ಅದರ ಟಂಕಾರವು ಮೇಘಗರ್ಜನೆಯಂತಿದೆ. ಈ ನಿಶಾಚರನ ಧನುಸ್ಸು ಇಂದ್ರಧನುಸ್ಸಿನಂತೆ ಶೋಭಿಸುತ್ತಿದೆ.॥18॥
ಮೂಲಮ್ - 19
ಸಧ್ವಜಃ ಸಪತಾಕಶ್ಚ ಸಾನುಕರ್ಷೋ ಮಹಾರಥಃ ।
ಚತುಃಸಾದಿಸಮಾಯುಕ್ತೋ ಮೇಘಸ್ತನಿತನಿಃ ಸ್ವನಃ ॥
ಅನುವಾದ
ಇವನ ವಿಶಾಲ ರಥವು ಧ್ವಜ ಪತಾಕೆಗಳಿಂದಲೂ, ಮರದಿಂದಲೂ, ನಾಲ್ವರು ಸಾರಥಿಗಳಿಂದ ನಿಯಂತ್ರಿತವಾಗಿದ್ದು, ಇದರ ಗಡಗಡ ಶಬ್ದವು ಮೇಘಗರ್ಜನೆಯಂತೆ ಇವೆ.॥19॥
ಮೂಲಮ್ - 20
ವಿಂಶತಿರ್ದಶ ಚಾಷ್ಟೌ ಚತೂರ್ಣಾಸ್ಯ ರಥಮಾಸ್ಥಿತಾಃ ।
ಕಾರ್ಮುಕಾಣಿ ಚ ಭೀಮಾನಿ ಜ್ಯಾಶ್ಚ ಕಾಂಚನಪಿಂಗಲಾಃ ॥
ಅನುವಾದ
ಇವನ ರಥದಲ್ಲಿ ಇಪ್ಪತ್ತು ಬತ್ತಳಿಕೆಗಳೂ, ಹತ್ತು ಭಯಂಕರ ಧನುಸ್ಸುಗಳೂ, ಪಿಂಗಲವರ್ಣದ ಎಂಟು ನಾಣಿಗಳನ್ನು ಇರಿಸಲಾಗಿತ್ತು.॥20॥
ಮೂಲಮ್ - 21
ದ್ವೌ ಚ ಖಡ್ಗೌಚ ಪಾರ್ಶ್ವಸ್ಥೌ ಪ್ರದೀಪ್ತೌ ಪಾರ್ಶ್ವ ಶೋಭಿತೌ ।
ಚತುರ್ಹಸ್ತತ್ಸರುಚಿತೌ ವ್ಯಕ್ತಹಸ್ತದಶಾಯತೌ ॥
ಅನುವಾದ
ಎರಡೂ ಕಡೆಗಳಲ್ಲಿ ಥಳಥಳಿಸುತ್ತಿರುವ ಎರಡು ಖಡ್ಗಗಳು ಶೋಭಿಸುತ್ತಿದ್ದವು. ಅವುಗಳ ಹಿಡಿಕೆಗಳು ನಾಲ್ಕು ಗೇಣಿನಷ್ಟು ಅಗಲವೂ, ಹತ್ತು ಗೇಣುಗಳಷ್ಟು ಉದ್ದವಾಗಿಯೂ ಇದ್ದವು.॥21॥
ಮೂಲಮ್ - 22
ರಕ್ತ ಕಂಠಗುಣೋ ಧೀರೋ ಮಹಾಪರ್ವತ ಸಂನಿಭಃ ।
ಕಾಲಃ ಕಾಲಮಹಾವಕ್ತ್ರೋ ಮೇಘಸ್ಥ ಇವ ಭಾಸ್ಕರಃ ॥
ಅನುವಾದ
ಕತ್ತಿನಲ್ಲಿ ಕೆಂಪುಬಣ್ಣದ ಮೂಲೆಯನ್ನು ಧರಿಸಿದ, ಮಹಾಪರ್ವತದಂತೆ ಆಕಾರವುಳ್ಳ, ಧೀರ ವೀರ ಈ ನಿಶಾಚರನು ಕಪ್ಪುಬಣ್ಣದವನಾಗಿ ಕಾಣುತ್ತಿದ್ದನು. ಇವನ ವಿಶಾಲಮುಖವು ಕಾಲನ ಮುಖದಂತೆ ಭಯಂಕರ ವಾಗಿದ್ದು, ಮೋಡದ ಮರೆಯಲ್ಲಿರುವ ಸೂರ್ಯನಂತೆ ಪ್ರಕಾಸಿತನಾಗಿದ್ದನು..॥22॥
ಮೂಲಮ್ - 23
ಕಾಂಚನಾಂಗದನದ್ಧಾಭ್ಯಾಂ ಭುಜಾಭ್ಯಾಮೇಷ ಶೋಭತೇ ।
ಶೃಂಗಾಭ್ಯಾಮಿವ ತುಂಗಾಭ್ಯಾಂ ಹಿಮವಾನ್ ಪರ್ವತೋತ್ತಮಃ ॥
ಅನುವಾದ
ಭುಜಗಳಲ್ಲಿ ಸುವರ್ಣದ ತೊಳ್ಬಳೆಗಳಿಂದ ಭೂಷಿತನಾಗಿರುವ ಈ ರಾಕ್ಷಸನು ಎತ್ತರವಾದ ಎರಡು ಶಿಖರಗಳಿಂದ ಕೂಡಿರುವ ಹಿಮವತ್ಪರ್ವತದಂತೆ ಶೋಭಿಸುತ್ತಿದ್ದನು.॥23॥
ಮೂಲಮ್ - 24
ಕುಂಡಲಾಭ್ಯಾ ಮುಮಾಭ್ಯಾಂ ಚ ಭಾತಿವಕ್ತ್ರ ಸುಭಿಷಣಮ್ ।
ಪುನರ್ವಸ್ವಂತರಗತಂ ಪರಿಪೂರ್ಣೋ ನಿಶಾಕರಃ ॥
ಅನುವಾದ
ಅತ್ಯಂತ ಭೀಷಣ ಇವನು ಮುಖಮಂಡಲವು ಎರಡು ಕುಂಡಲಗಳಿಂದ ಅಲಂಕೃತವಾಗಿದ್ದು ಪುನರ್ವಸು ಎಂಬ ಎರಡು ನಕ್ಷಗಳ ನಡುವೆ ಸ್ಥಿತ ಪೂರ್ಣಚಂದ್ರನಂತೆ ಶೋಭಿಸುತ್ತಿತ್ತು.॥24॥
ಮೂಲಮ್ - 25
ಆಚಕ್ಷ್ವಮೇ ಮಹಾಬಾಹೋ ತ್ವಮೇನಂ ರಾಕ್ಷಸೋತ್ತಮಮ್ ।
ಯಂ ದೃಷ್ಟ್ವಾ ವಾನರಾಃ ಸರ್ವೇ ಭಯಾರ್ತಾ ವಿದ್ರುತಾ ದಿಶಃ ॥
ಅನುವಾದ
ಮಹಾಬಾಹೋ! ಇವನನ್ನು ನೋಡುತ್ತಲೇ ವಾನರ ರೆಲ್ಲರೂ ಭಯಗೊಂಡು ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ನೀನು ಈ ಶ್ರೇಷ್ಠ ರಾಕ್ಷಸನ ಪರಿಚಯವನ್ನು ನನಗೆ ಮಾಡಿಸು.॥25॥
ಮೂಲಮ್ - 26
ಸ ಪೃಷ್ಟೋ ರಾಜಪುತ್ರೇಣ ರಾಮೇಣಾಮಿತತೇಜಸಾ ।
ಆಚಚಕ್ಷೇ ಮಹಾತೇಜಾ ರಾಘವಾಯ ವಿಭೀಷಣಃ ॥
ಅನುವಾದ
ಅಮಿತ ತೇಜಸ್ವೀ ರಾಜಕುಮಾರ ಶ್ರೀರಾಮನು ಹೀಗೆ ಕೇಳಿದಾಗ ಮಹಾತೇಜಸ್ವೀ ವಿಭೀಷಣನು ರಘುನಾಥನಲ್ಲಿ ಹೀಗೆ ಹೇಳಿದನು .॥26॥
ಮೂಲಮ್ - 27
ದಶಗ್ರೀವೋ ಮಹಾತೇಜಾ ರಾಜಾ ವೈಶ್ರವಣಾನುಜಃ ।
ಭೀಮಕರ್ಮಾ ಮಹಾತ್ಮಾ ಹಿ ರಾವಣೋ ರಾಕ್ಷಸೇಶ್ವರಃ ॥
ಮೂಲಮ್ - 28
ತಸ್ಯಾಸೀದ್ವೀರ್ಯವಾನ್ ಪುತ್ರೋ ರಾವಣಪ್ರತಿಮೋ ಬಲೇ ।
ವೃದ್ಧಸೇವೀ ಶ್ರುತಿಧರಃ ಸರ್ವಾಸ್ತ್ರವಿದುಷಾಂ ವರಃ ॥
ಅನುವಾದ
ಭಗವಂತ! ಕುಬೇರನ ತಮ್ಮನೂ, ಮಹಾತೇಜಸ್ವಿಯೂ, ಮಹಾಕಾಯ, ಭಯಾನಕ ಕರ್ಮ ಮಾಡುವವನೂ, ರಾಕ್ಷಸರ ಒಡೆಯನೂ ಆದ ದಶಮುಖ ರಾವಣನಿಗೆ ಒಬ್ಬ ದೊಡ್ಡ ಪರಾಕ್ರಮಿ ಪುತ್ರನು ಹುಟ್ಟಿದನು. ಅವನು ರಾವಣನಂತೆ ಬಲಶಾಲಿಯಾಗಿದ್ದಾನೆ. ಅವನು ವೃದ್ಧಸೇವಿಯೂ, ವೇದ-ಶಾಸ್ತ್ರಗಳನ್ನು ಬಲ್ಲವನೂ ಹಾಗೂ ಸಮಸ್ತ ಅಸ್ತ್ರವೇತ್ತರಲ್ಲಿ ಶ್ರೇಷ್ಠನಾಗಿದ್ದಾನೆ.॥27-28॥
ಮೂಲಮ್ - 29
ಅಶ್ವಪೃಷ್ಠೇ ನಾಗಪೃಷ್ಠೇ ಖಡ್ಗೇ ಧನುಷಿ ಕರ್ಷಣೇ ।
ಭೇದೇ ಸಾಂತ್ವೇ ಚ ದಾನೇ ಚ ನಯೇ ಮಂತ್ರೇ ಚ ಸಂಮ್ಮತಃ ॥
ಅನುವಾದ
ಆನೆ-ಕುದುರೆಗಳ ಸವಾರಿಯಲ್ಲಿ, ಕತ್ತಿವರಸೆಯಲ್ಲಿ, ಧನುರ್ವಿದ್ಯೆಯಲ್ಲಿ, ಸಾಮ, ದಾನಾದಿ ಪ್ರಯೋಗದಲ್ಲಿ, ನ್ಯಾಯಯುಕ್ತ ವರ್ತನೆಯಲ್ಲಿ, ಮಂತ್ರಾಲೋಚನೆಯಲ್ಲಿ ಎಲ್ಲರಿಂದ ಸಮ್ಮಾನಿತನಾಗಿದ್ದಾನೆ.॥29॥
ಮೂಲಮ್ - 30
ಯಸ್ಯ ಬಾಹುಂ ಸಮಾಶ್ರಿತ್ಯ ಲಂಕಾಭವತಿ ನಿರ್ಭಯಾ ।
ತನಯಂ ಧಾನ್ಯಮಾಲಿನ್ಯಾ ಅತಿಕಾಯಮಿಮಂ ವಿದುಃ ॥
ಅನುವಾದ
ಇವನ ಬಾಹುಬಲದ ಆಶ್ರಯದಿಂದ ಲಂಕೆಯು ಸದಾ ನಿರ್ಭಯವಾಗಿದೆ. ಇವನು ರಾವಣನ ಇನ್ನೋರ್ವ ಪತ್ನೀ ಧಾನ್ಯ ಮಾಲಿನಿಯ ಪುತ್ರನಾಗಿದ್ದಾನೆ. ಇವನು ಅತಿಕಾಯನೆಂದು ಖ್ಯಾತನಾಗಿದ್ದಾನೆ.॥30॥
ಮೂಲಮ್ - 31
ಏತೇನಾರಾಧಿತೋ ಬ್ರಹ್ಮಾ ತಪಸಾ ಭಾವಿತಾತ್ಮನಾ ।
ಅಸ್ತ್ರಾಣಿ ಚಾಪ್ಯವಾಪ್ತಾನಿ ರಿಪವಶ್ಚ ಪರಾಜಿತಾಃ ॥
ಅನುವಾದ
ವಿಶುದ್ಧ ಅಂತಃಕರಣದಿಂದ ಅತಿಕಾಯನು ಬ್ರಹ್ಮದೇವರನ್ನು ಕುರಿತು ತಪಸ್ಸು ಮಾಡಿ, ಬ್ರಹ್ಮನಿಂದ ಅನೇಕ ದಿವ್ಯಾಸ್ತ್ರಗಳನ್ನು ಪಡೆದಿರುವನು. ಇವನು ಅನೇಕ ಶತ್ರುಗಳನ್ನು ಪರಾಜಿತಗೊಳಿಸಿರುವನು.॥31॥
ಮೂಲಮ್ - 32
ಸುರಾಸುರೈರವಧ್ಯತ್ವಂ ದತ್ತಮಸ್ಮೈ ಸ್ವಯಂಭುವಾ ।
ಏತಚ್ಚ ಕವಚಂ ದಿವ್ಯಂ ರಥಶ್ಚ ರವಿಭಾಸ್ವರಃ ॥
ಅನುವಾದ
ಬ್ರಹ್ಮದೇವರು ಇವನಿಗೆ ದೇವತೆಗಳಿಂದ ಹಾಗೂ ಅಸುರರಿಂದ ಸಾಯದಂತಹ ವರವನ್ನು ಕೊಟ್ಟಿರುವನು. ಈ ದಿವ್ಯ ಕವಚ ಮತ್ತು ಸೂರ್ಯನಂತೆ ತೇಜಸ್ವೀ ರಥವನ್ನು ಅವನೇ ಕೊಟ್ಟಿರುವನು.॥32॥
ಮೂಲಮ್ - 33
ಏತೇನ ಶತಶೋ ದೇವಾ ದಾನವಾಶ್ಚ ಪರಾಜಿತಾಃ ।
ರಕ್ಷಿತಾನಿ ಚ ರಕ್ಷಾಂಸಿ ಯಕ್ಷಾಶ್ಚಾಪಿ ನಿಷೂದಿತಾಃ ॥
ಅನುವಾದ
ಇವನು ದೇವ-ದಾನವರನ್ನು ಸಾವಿರಾರು ಬಾರಿ ಸೋಲಿಸಿ ರಾಕ್ಷಸರನ್ನು ರಕ್ಷಿಸಿರುವನು ಹಾಗೂ ಯಕ್ಷರನ್ನು ಹೊಡೆದು ಓಡಿಸಿರುವನು.॥33॥
ಮೂಲಮ್ - 34
ವಜ್ರಂ ವಿಷ್ಟಂಭಿತಂ ಯೇನ ಬಾಣೈರಿಂದ್ರಸ್ಯ ಧೀಮತಾಃ ।
ಪಾಶಃ ಸಲಿಲರಾಜಸ್ಯ ರಣೇ ಪ್ರತಿಹತಸ್ತಥಾ ॥
ಅನುವಾದ
ಈ ಬುದ್ಧಿವಂತ ರಾಕ್ಷಸನು ತನ್ನ ಬಾಣಗಳಿಂದ ಇಂದ್ರನ ವಜ್ರವನ್ನು ಕುಂಠಿತಗೊಳಿಸಿರುವನು ಹಾಗೂ ಯುದ್ಧದಲ್ಲಿ ಜಲದ ಸ್ವಾಮಿ ವರುಣನ ಪಾಶವನ್ನೂ ನಿಷ್ಫಲಗೊಳಿಸಿರುವನು.॥34॥
ಮೂಲಮ್ - 35
ಏಷೋಽತಿಕಾಯೋ ಬಲವಾನ್ ರಾಕ್ಷಸಾನಾಮಥರ್ಷಭಃ ।
ರಾವಣಸ್ಯ ಸುತೋ ಧೀಮಾನ್ ದೇವದಾನವದರ್ಪಹಾ ॥
ಅನುವಾದ
ರಾಕ್ಷಸರಲ್ಲಿ ಶ್ರೇಷ್ಠನಾದ ಈ ಬುದ್ಧಿವಂತ ರಾವಣಕುಮಾರ ಅತಿಕಾಯನು ಭಾರೀ ಬಲಿಷ್ಠನಾಗಿದ್ದು, ದೇವ- ದಾನವರ ದರ್ಪವನ್ನು ವಿನಾಶಗೊಳಿಸಿರುವನು.॥35॥
ಮೂಲಮ್ - 36
ತದಸ್ಮಿನ್ ಕ್ರಿಯತಾಂ ಯತ್ನಃ ಕ್ಷಿಪ್ರಂ ಪುರುಷಪುಂಗವ ।
ಪುರಾ ವಾನರಸೈನ್ಯಾನಿ ಕ್ಷಯಂ ನಯತಿ ಸಾಯಕೈಃ ॥
ಅನುವಾದ
ಪುರುಷೋತ್ತಮನೇ! ತನ್ನ ಸಾಯಕಗಳಿಂದ ಇವನು ವಾನರ ಸೈನ್ಯವನ್ನು ಸಂಹಾರ ಮಾಡುವ ಮೊದಲೇ ಈ ರಾಕ್ಷಸನನ್ನು ಕೊಲ್ಲುವ ಪ್ರಯತ್ನ ಬೇಗನೇ ಮಾಡು.॥36॥
ಮೂಲಮ್ - 37
ತತೋಽತಿಕಾಯೋ ಬಲವಾನ್ ಪ್ರವಿಶ್ಯ ಹರಿವಾಹಿನೀಮ್ ।
ವಿಸ್ಫಾರಯಾಮಾಸ ಧನುರ್ನನಾದ ಚ ಪುನಃ ಪುನಃ ॥
ಅನುವಾದ
ವಿಭೀಷಣ ಮತ್ತು ಶ್ರೀರಾಮನು ಹೀಗೆ ಮಾತನಾಡುತ್ತಿರುವಾಗಲೇ ಬಲವಂತ ಅತಿಕಾಯನು ವಾನರ ಸೈನ್ಯ ದೊಳಗೆ ನುಗ್ಗಿ ಪದೇ ಪದೇ ಗರ್ಜಿಸುತ್ತಾ, ಧನುಷ್ಕಂಕಾರ ಮಾಡತೊಡಗಿದನು.॥37॥
ಮೂಲಮ್ - 38
ತಂ ಭೀಮವಪುಷಂ ದೃಷ್ಟ್ವಾರಥಸ್ಥಂ ರಥಿನಾಂ ವರಮ್ ।
ಅಭಿಪೇತುರ್ಮಹಾತ್ಮಾನಃ ಪ್ರಧಾನಾಯೇ ವನೌಕಸಃ ॥
ಮೂಲಮ್ - 39
ಕುಮುದೋ ದ್ವಿವಿದೋ ಮೈಂದೋ ನೀಲಃ ಶರಭ ಏವ ಚ ।
ಪಾದಪೈಗಿರಿಶೃಂಗೈಶ್ಚ ಯುಗಪತ್ ಸಮಭಿದ್ರವನ್ ॥
ಅನುವಾದ
ರಥಿಗಳಲ್ಲಿ ಶ್ರೇಷ್ಠನೂ, ಭಯಂಕರ ಶರೀರವುಳ್ಳ ಆ ರಾಕ್ಷಸನು ರಥದಲ್ಲಿ ಕುಳಿತು ಬರುತ್ತಿರುವವನನ್ನು ಕುಮುದ, ದ್ವಿವಿದ, ಮೈದ, ನೀಲ, ಶರಭ ಮುಂತಾದ ಮುಖ್ಯ ಮುಖ್ಯ ಮಹಾಮನಸ್ವೀ ವಾನರರು ವೃಕ್ಷ ಹಾಗೂ ಪರ್ವತ ಶಿಖರಗಳನ್ನು ಧರಿಸಿಕೊಂಡು ಒಟ್ಟಿಗೆ ಅವನ ಮೇಲೆ ಮುಗಿದು ಬಿದ್ದರು.॥38-39॥
ಮೂಲಮ್ - 40
ತೇಷಾಂ ವೃಕ್ಷಾಂಶ್ಚ ಶೈಲಾಂಶ್ಚ ಶರೈಃ ಕನಕಭೂಷಣೈಃ ।
ಅತಿಕಾಯೋ ಮಹಾತೇಜಾಶ್ಚಿಚ್ಛೇದಾಸ್ತ್ರವಿದಾಂ ವರಃ ॥
ಅನುವಾದ
ಆದರೆ ಅಸ್ತ್ರವೇತ್ತರಲ್ಲಿ ಶ್ರೇಷ್ಠನಾದ ಮಹಾತೇಜಸ್ವೀ ಅತಿಕಾಯನು ಸ್ವರ್ಣಭೂಷಿತ ಬಾಣಗಳಿಂದ ವಾನರರು ಪ್ರಯೋಗಿಸಿದ ವೃಕ್ಷ-ಪರ್ವತ ಶಿಖರಗಳನ್ನು ಕತ್ತರಿಸಿ ಹಾಕಿದನು.॥40॥
ಮೂಲಮ್ - 41
ತಾಂಶ್ಚೈವ ಸರ್ವಾನ್ ಸ ಹರೀನ್ ಶರೈಃ ಸರ್ವಾಯಸೈರ್ಬಲೀ ।
ವಿವ್ಯಾಧಾಭಿಮುಖಾನ್ ಸಂಖ್ಯೇ ಭೀಮಕಾಯೋ ನಿಶಾಚರಃ ॥
ಅನುವಾದ
ಜೊತೆಗೆ ಆ ಬಲಂತ ಮತ್ತು ಭೀಮಕಾಯ ನಿಶಾಚರನು ಯುದ್ಧದಲ್ಲಿ ಎದುರಿಗೆ ಬಂದಿರುವ ಸಮಸ್ತ ವಾನರರನ್ನು ಲೋಹಬಾಣಗಳಿಂದ ಪ್ರಹರಿಸಿದನು.॥41॥
ಮೂಲಮ್ - 42
ತೇಽರ್ದಿತಾ ಬಾಣವರ್ಷೇಣ ಭಗ್ನಗಾತ್ರಾಃ ಪರಾಜಿತಾಃ ।
ನ ಶೇಕುರತಿಕಾಯಸ್ಯ ಪ್ರತಿಕರ್ತುಂ ಮಹಾಹವೇ ॥
ಅನುವಾದ
ಅವನ ಬಾಣವರ್ಷದಿಂದ ಎಲ್ಲ ವಾನರರ ಶರೀರಗಳು ಕ್ಷತ-ವಿಕ್ಷತವಾದುವು. ಎಲ್ಲರೂ ಸೋಲನ್ನೊಪ್ಪಿಕೊಂಡು, ಆ ಮಹಾಸಮರದಲ್ಲಿ ಅತಿಕಾಯನನ್ನು ಎದುರಿಸಲು ಅಸಮರ್ಥರಾದರು.॥42॥
ಮೂಲಮ್ - 43
ತತ್ಸೈನ್ಯಂ ಹರಿವೀರಾಣಾಂ ತ್ರಾಸಯಾಮಾಸ ರಾಕ್ಷಸಃ ।
ಮೃಗಯೂಥಮಿವ ಕ್ರುದ್ಧೋ ಹರಿರ್ಯೌವನ ದರ್ಪಿತಃ ॥
ಅನುವಾದ
ಯೌವನದಿಂದ ಗರ್ವಿತವಾದ ಕುಪಿತ ಸಿಂಹವು ಜಿಂಕೆಗಳ ಗುಂಪನ್ನು ಭಯಪಡಿಸುವಂತೆಯೇ ಆ ರಾಕ್ಷಸನು ವಾನರವೀರರನ್ನು ಬಹಳವಾಗಿ ಪೀಡಿಸತೊಡಗಿದನು.॥43॥
ಮೂಲಮ್ - 44
ಸ ರಾಕ್ಷಸೇಂದ್ರೋ ಹರಿಯೂಥಮಧ್ಯೇ
ನಾಯುಧ್ಯಮಾನಂ ನಿಜಘಾನ ಕಂಚಿತ್ ।
ಉತ್ಪತ್ಯ ರಾಮಂ ಸ ಧನುಃ ಕಲಾಪೀ
ಸಗರ್ವಿತಂ ವಾಕ್ಯಮಿದಂ ಬಭಾಷೇ ॥
ಅನುವಾದ
ವಾನರರ ಗುಂಪಿನಲ್ಲಿ ವಿಚರಿಸುತ್ತಾ ಅತಿಕಾಯನು ತನ್ನೊಡನೆ ಯುದ್ಧ ಮಾಡದ ಯಾವ ಯೋಧನನ್ನು ಕೊಂದಿಲ್ಲ. ಧನುರ್ಬಾಣಗಳನ್ನು ಧರಿಸಿದ ಆ ನಿಶಾಚರನು ನೆಗೆದು ಶ್ರೀರಾಮನ ಹತ್ತಿರ ಬಂದು ಗರ್ವದಿಂದ ಇಂತೆಂದನು.॥44॥
ಮೂಲಮ್ - 45
ರಥೇ ಸ್ಥಿತೋಽಹಂ ಶರಚಾಪಪಾಣಿ-
ರ್ನ ಪ್ರಾಕೃತಂ ಕಂಚನ ಯೋಧಯಾಮಿ ।
ಯಸ್ಯಾಸ್ತಿ ಶಕ್ತಿರ್ವ್ಯವಸಾಯಯುಕ್ತೋ
ದದಾತು ಮೇ ಶೀಘ್ರಮಿಹಾದ್ಯ ಯುದ್ಧಮ್ ॥
ಅನುವಾದ
ನಾನು ಧನುರ್ಬಾಣಗಳನ್ನು ಧರಿಸಿ ರಥದಲ್ಲಿ ಕುಳಿತಿರುವೆನು. ಯಾವುದೇ ಸಾಧಾರಣ ಪ್ರಾಣಿಯೊಂದಿಗೆ ಯುದ್ಧಮಾಡುವ ವಿಚಾರ ನನಗಿಲ್ಲ. ಯಾರೊಳಗೆ ಶಕ್ತಿಯಿದೆಯೋ, ಸಾಹಸ, ಉತ್ಸಾಹವಿದೆಯೋ, ಅವನು ಶೀಘ್ರವಾಗಿ ನನ್ನೆದುರಿಗೆ ಬಂದು ಯುದ್ಧದ ಅವಕಾಶ ಕೊಡಲಿ.॥45॥
ಮೂಲಮ್ - 46
ತತ್ತಸ್ಯ ವಾಕ್ಯಂ ಬ್ರುವತೋ ನಿಶಮ್ಯ
ಚುಕೋಪ ಸೌಮಿತ್ರಿರಮಿತ್ರ ಹಂತಾ ।
ಅಮೃಷ್ಯಮಾಣಶ್ಚ ಸಮುತ್ಪಪಾತ
ಜಗ್ರಾಹ ಚಾಪಂ ಚ ತತಃ ಸ್ಮಯಿತ್ವಾ ॥
ಅನುವಾದ
ಅವನ ಈ ಅಹಂಕಾರಪೂರ್ಣ ಮಾತನ್ನು ಕೇಳಿ ಶತ್ರುಹಂತಾ ಸಮಿತ್ರಾನಂದನ ಲಕ್ಷ್ಮಣನಿಗೆ ಭಾರೀ ಕೋಪ ಬಂತು. ರಾಕ್ಷಸನ ಮಾತನ್ನು ಸಹಿಸದೆ ಅವನು ಮುಂದೆ ಬಂದು ಮುಗುಳ್ನಗುತ್ತಾ ತನ್ನ ಧನುಸ್ಸನ್ನೆತ್ತಿಕೊಂಡನು.॥46॥
ಮೂಲಮ್ - 47
ಕ್ರುದ್ಧಃ ಸೌಮಿತ್ರಿರುತ್ಪತ್ಯ ತೂಣಾದಾಕ್ಷಿಪ್ಯ ಸಾಯಕಮ್ ।
ಪುರಸ್ತಾದತಿಕಾಯಸ್ಯ ವಿಚಕರ್ಷ ಮಹದ್ಧನುಃ ॥
ಅನುವಾದ
ಕುಪಿತನಾದ ಲಕ್ಷ್ಮಣನು ಹಾರಿ ಮುಂದೆ ಬಂದು ಬತ್ತಳಿಕೆಯಿಂದ ಬಾಣವನ್ನು ಸೆಳೆದು ಅತಿಕಾಯನು ಎದುರಿಗೆ ಬಂದು ತನ್ನ ವಿಶಾಲ ಧನುಸ್ಸನ್ನು ಝೇವಡೆಗೈದನು.॥47॥
ಮೂಲಮ್ - 48
ಪೂರಯನ್ಸ ಮಹೀಂ ಸರ್ವಾಮಾಕಾಶಂ ಸಾಗರಂ ದಿಶಃ ।
ಜ್ಯಾಶಬ್ದೋ ಲಕ್ಷ್ಮಣಸ್ಯೋಗ್ರಸ್ತ್ರಾಸಯನ್ ರಜನೀಚರಾನ್ ॥
ಅನುವಾದ
ಲಕ್ಷ್ಮಣನ ಧನುಷ್ಟಂಕಾರದ ಶಬ್ದ ಭಯಂಕರವಾಗಿತ್ತು. ಅದು ಭೂಮಿ, ಆಕಾಶ ಮತ್ತು ಎಲ್ಲ ದಿಕ್ಕುಗಳಲ್ಲಿ ಪ್ರತಿಧ್ವನಿಸಿತು ಹಾಗೂ ನಿಶಾಚರನು ಸಹಿಸದಾದನು.॥48॥
ಮೂಲಮ್ - 49
ಸೌಮಿತ್ರೇಶ್ಚಾಪನಿರ್ಘೋಷಂ ಶ್ರುತ್ವಾ ಪ್ರತಿಭಯಂ ತದಾ ।
ವಿಸಿಸ್ಮಿಯೇ ಮಹಾತೇಜಾ ರಾಕ್ಷಸೇಂದ್ರಾತ್ಮಜೋ ಬಲೀ ॥
ಅನುವಾದ
ಸುಮಿತ್ರಾಕುಮಾರನ ಧನುಸ್ಸಿನ ಆ ಭಯಾನಕ ಟಂಕಾರವನ್ನು ಕೇಳಿ ಆಗ ಮಹಾತೇಜಸ್ವೀ ಬಲವಾನ್ ರಾಕ್ಷಸ ರಾಜಕುಮಾರ ಅತಿಕಾಯನಿಗೆ ವಿಸ್ಮಯ ಉಂಟಾಯಿತು.॥49॥
ಮೂಲಮ್ - 50
ತದಾತಿಕಾಯಃ ಕುಪಿತೋ ದೃಷ್ಟ್ವಾ ಲಕ್ಷ್ಮಣ ಮುತ್ಥಿತಮ್ ।
ಆದಾಯ ನಿಶಿತಂ ಬಾಣಮಿದಂ ವಚನಮಬ್ರವೀತ್ ॥
ಅನುವಾದ
ತನ್ನನ್ನು ಎದುರಿಸಲು ಬಂದ ಲಕ್ಷ್ಮಣನನ್ನು ನೋಡಿ ಅತಿಕಾಯನು ರೋಷದಿಂದ ತೀಕ್ಷ್ಣವಾದ ಬಾಣವನ್ನೆತ್ತಿಕೊಂಡು ಹೀಗೆ ಹೇಳಿದನು.॥50॥
ಮೂಲಮ್ - 51
ಬಾಲಸ್ತ್ವಮಸಿ ಸೌಮಿತ್ರೇ ವಿಕ್ರಮೇಷ್ವವಿಚಕ್ಷಣಃ ।
ಗಚ್ಛ ಕಿಂ ಕಾಲ ಸದೃಶಂ ಮಾಂ ಯೋಧಯಿತುಮಿಚ್ಛಸಿ ॥
ಅನುವಾದ
ಸುಮಿತ್ರಾಕುಮಾರ! ನೀನು ಇನ್ನು ಬಾಲಕನಾಗಿರುವೆ. ಪರಾಕ್ರಮ ತೋರಲು ಕುಶಲನಲ್ಲ, ಮರಳಿ ಹೋಗು. ನಾನು ನಿನಗೆ ಕಾಲನಂತೆ ಇದ್ದೇನೆ. ನನ್ನೊಡನೆ ಕಾದಲು ಏಕೆ ಬಯಸುತ್ತಿರುವೆ.॥51॥
ಮೂಲಮ್ - 52
ನ ಹಿ ಮದ್ಬಾಹುಸೃಷ್ಟಾನಾಂ ಬಾಣಾನಾಂ ಹಿಮವಾನಪಿ ।
ಸೋಢುಮುತ್ಸಹತೇ ವೇಗಮಂತರಿಕ್ಷಮಥೋ ಮಹೀ ॥
ಅನುವಾದ
ನಾನು ಪ್ರಯೋಗಿಸಿದ ಬಾಣಗಳ ವೇಗವನ್ನು ಗಿರಿರಾಜ ಹಿಮಾಲಯವೂ ಸಹಿಸಲಾರದು. ಪೃಥಿವಿ, ಆಕಾಶವೂ ಕೂಡ ಸಹಿಸಲಾರದು.॥52॥
ಮೂಲಮ್ - 53
ಸುಖಪ್ರಸುಪ್ತಂ ಕಾಲಾಗ್ನಿಂ ನಿಬೋಧಯಿತುಮಿಚ್ಛಸಿ ।
ನ್ಯಸ್ಯ ಚಾಪಂ ನಿವರ್ತಸ್ವ ಪ್ರಾಣಾನ್ನ ಜಹಿ ಮದ್ಗತಃ ॥
ಅನುವಾದ
ನೀನು ಮಲಗಿರುವ (ಶಾಂತವಾದ) ಪ್ರಳಯಾಗ್ನಿಯನ್ನು ಏಕೆ ಎಚ್ಚರಿಸುವೆ? ಧನುಸ್ಸನ್ನು ಇಲ್ಲೇ ಬಿಟ್ಟು ಹೊರಟುಹೋಗು. ನನ್ನೊಡನೆ ಕಾದಾಡಿ ಪ್ರಾಣಗಳನ್ನು ಕಳೆದುಕೊಳ್ಳಬೇಡ.॥53॥
ಮೂಲಮ್ - 54
ಅಥ ವಾ ತ್ವಂ ಪ್ರತಿಸ್ತಬ್ದೋ ನ ನಿವರ್ತಿತುಮಿಚ್ಛಸಿ ।
ತಿಷ್ಠ ಪ್ರಾಣಾನ್ಪರಿತ್ಯಜ್ಯ ಗಮಿಷ್ಯಸಿ ಯಮಕ್ಷಯಮ್ ॥
ಅನುವಾದ
ಇಲ್ಲವೇ ನೀನು ಭಾರೀ ಅಹಂಕಾರಿಯಾಗಿದ್ದು ಹಿಂದಿರುಗಿ ಹೋಗಲು ಬಯಸದಿದ್ದರೆ, ನಿಲ್ಲು. ಈಗಲೇ ಪ್ರಾಣ ಕಳಕೊಂಡು ಯಮಲೋಕದ ಯಾತ್ರೆ ಮಾಡುವೆ.॥54॥
ಮೂಲಮ್ - 55
ಪಶ್ಯ ಮೇ ನಿಶಿತಾನ್ಭಾಣಾನ್ ರಿಪುದರ್ಪನಿಷೂದನಾನ್ ।
ಈಶ್ವರಾಯುಧ ಸಂಕಾಶಾಂ ಸ್ತಪ್ತಕಾಂಚನಭೂಷಣಾನ್ ॥
ಮೂಲಮ್ - 56
ಏಷ ತೇ ಸರ್ಪಸಂಕಾಶೋ ಬಾಣಃ ಪಾಸ್ಯತಿ ಶೋಣಿತಮ್ ।
ಮೃಗರಾಜ ಇವ ಕ್ರುದ್ಧೋ ನಾಗರಾಜಸ್ಯ ಶೋಣಿತಮ್ ।
ಇತ್ಯೇವ ಮುಕ್ತ್ವಾ ಸಂಕ್ರುದ್ಧಃ ಶರಂ ಧನುಷಿ ಸಂದಧೇ ॥
ಅನುವಾದ
ಕುಪಿತವಾದ ಸಿಂಹವು ಆನೆಯ ರಕ್ತವನ್ನು ಕುಡಿಯುವಂತೆ, ಇವು ಸರ್ಪದಂತಹ ಭಯಂಕರ ಬಾಣಗಳು ನಿನ್ನ ರಕ್ತಪಾನ ಮಾಡುವವು. ಹೀಗೆ ಹೇಳಿ ಅತಿಕಾಯನು ಕುಪಿತನಾಗಿ ಧನುಸ್ಸಿಗೆ ಬಾಣಸಂಧಾನ ಮಾಡಿದನು.॥55-56॥
ಮೂಲಮ್ - 57
ಶ್ರುತ್ವಾತಿಕಾಯಸ್ಯ ವಚಃ ಸರೋಷಂ
ಸಗರ್ವಿತಂ ಸಂಯತಿ ರಾಜಪುತ್ರಃ ।
ಸ ಸಂಚುಕೋಪಾತಿಬಲೋ ಮನಸ್ವೀ
ಉವಾಚ ವಾಕ್ಯಂ ಚ ತತೋ ಮಹಾರ್ಥಮ್ ॥
ಅನುವಾದ
ರಣರಂಗದಲ್ಲಿ ಅತಿಕಾಯನ ರೋಷ, ಗರ್ವದಿಂದ ತುಂಬಿದ ಮಾತನ್ನು ಕೇಳಿ ಅತ್ಯಂತ ಬಲಶಾಲಿ ಮನಸ್ವೀ ರಾಜಕುಮಾರ ಲಕ್ಷ್ಮಣನಿಗೆ ಭಾರೀ ಸಿಟ್ಟು ಬಂತು. ಅವನು ಹೀಗೆ ಅರ್ಥಯುಕ್ತಮಾತನ್ನು ಹೇಳಿದನು.॥57॥
ಮೂಲಮ್ - 58
ನ ವಾಕ್ಯಮಾತ್ರೇಣ ಭವಾನ್ಪ್ರಧಾನೋ
ನ ಕತ್ಥನಾತ್ ಸತ್ಪುರುಷಾ ಭವಂತಿ ।
ಮಯಿ ಸ್ಥಿತೇ ಧನ್ವಿನಿ ಬಾಣಪಾಣೌ
ನಿದರ್ಶಯಸ್ವಾತ್ಮಬಲಂ ದುರಾತ್ಮನ್ ॥
ಅನುವಾದ
ದುರಾತ್ಮನೇ! ಕೇವಲ ಮಾತು ಆಡುವುದರಿಂದ ನೀನು ದೊಡ್ಡವನಾಗಲಾರೆ. ಬಡಾಯಿಕೊಚ್ಚಿಕೊಂಡ ಮಾತ್ರದಲ್ಲಿ ದೊಡ್ಡ ಮನುಷ್ಯನಾಗುವುದಿಲ್ಲ. ನಾನು ಕೈಯಲ್ಲಿ ಧನುರ್ಬಾಣಗಳನ್ನು ಹಿಡಿದು ನಿನ್ನ ಮುಂದೆ ನಿಂತಿರುವೆನು. ನೀನು ನಿನ್ನ ಪೂರ್ಣಬಲವನ್ನು ತೋರು.॥58॥
ಮೂಲಮ್ - 59
ಕರ್ಮಣಾ ಸೂಚಯಾತ್ಮಾನಂ ನ ವಿಕತ್ಥಿತುಮರ್ಹಸಿ ।
ಪೌರುಷೇಣ ತು ಯೋ ಯುಕ್ತಃ ಸ ತು ಶೂರ ಇತಿ ಸ್ಮೃತಃ ॥
ಅನುವಾದ
ಪರಾಕ್ರಮದ ಮೂಲಕ ತನ್ನ ಪರಿಚಯವನ್ನು ಕೊಡು. ಆತ್ಮಶ್ಲಾಘನೆ ನಿನಗೆ ಉಚಿತವಲ್ಲ. ಪುರಷಾರ್ಥ ಇರುವವನನ್ನೇ ಶೂರನೆಂದು ತಿಳಿಯಲಾಗುತ್ತದೆ.॥59॥
ಮೂಲಮ್ - 60
ಸರ್ವಾಯುಧ ಸಮಾಯುಕ್ತೋ ಧನ್ವೀ ತ್ವಂ ರಥಮಾಸ್ಥಿತಃ ।
ಶರೈರ್ವಾ ಯದಿ ವಾಪ್ಯಸ್ತ್ರೈದರ್ಶಯಸ್ವ ಪರಾಕ್ರಮಮ್ ॥
ಅನುವಾದ
ನಿನ್ನ ಬಳಿ ಎಲ್ಲ ವಿಧದ ಆಯುಧಗಳು ಇವೆ. ಧನುಸ್ಸನ್ನು ಹಿಡಿದು ರಥದಲ್ಲಿ ಕುಳಿತಿರುವೆ, ಆದ್ದರಿಂದ ಬಾಣಗಳಿಂದ ಹಾಗೂ ಇತರ ಶಸ್ತ್ರಾಸ್ತ್ರಗಳಿಂದ ಮೊದಲು ನಿನ್ನ ಪರಾಕ್ರಮ ತೋರು.॥60॥
ಮೂಲಮ್ - 61
ತತಃ ಶಿರಸ್ತೇ ನಿಶಿತೈಃ ಪಾತಯಿಷ್ಯಾಮ್ಯಹಂ ಶರೈಃ ।
ಮಾರುತಃ ಕಾಲ ಸಂಪಕ್ವಂ ವೃಂತಾತ್ತಾಲಲಂ ಯಥಾ ॥
ಅನುವಾದ
ಅನಂತರ ನಾನು ನನ್ನ ಹರಿತವಾದ ಬಾಣಗಳಿಂದ ವಾಯುವು ಹಣ್ಣಾದ ತಾಳೆಯ ಹಣ್ಣನ್ನು ತೊಟ್ಟಿನಿಂದ ಕಳಚಿ ಬೀಳಿಸುವಂತೆ ನಿನ್ನ ಮಸ್ತಕವನ್ನು ಕೆಡಹುವೆನು.॥61॥
ಮೂಲಮ್ - 62
ಅದ್ಯ ತೇ ಮಾಮಕಾ ಬಾಣಾಸ್ತಪ್ತಕಾಂಚನಭೂಷಣಾಃ ।
ಪಾಸ್ಯಂತಿ ರುಧಿರಂ ಗಾತ್ರಾದ್ಬಾಣ ಶಲ್ಯಾಂತರೋತ್ಥಿತಮ್ ॥
ಅನುವಾದ
ಕಾದ ಚಿನ್ನದಿಂದ ವಿಭೂಷಿತವಾದ ನನ್ನ ಬಾಣಗಳು ನಿನ್ನ ಶರೀರ ಹೊಕ್ಕು ಮೊನೆಯಿಂದ ನಿನ್ನ ರಕ್ತಪಾನ ಮಾಡುವವು.॥62॥
ಮೂಲಮ್ - 63
ಬಾಲೋಽಯಮಿತಿ ವಿಜ್ಞಾಯ ನಮಾವಜ್ಞಾತುಮರ್ಹಸಿ ।
ಬಾಲೋ ವಾ ಯದಿ ವಾ ವೃದ್ಧೋ ಮೃತ್ಯುಂ ಜಾನೀಹಿ ಸಂಯುಗೇ ॥
ಅನುವಾದ
ನೀನು ನನ್ನನ್ನು ಬಾಲಕನೆಂದು ತಿಳಿದು ಅವಹೇಳನ ಮಾಡಬೇಡ. ನಾನು ಬಾಲಕನಿರಲಿ, ವೃದ್ಧನಿರಲೀ, ಸಂಗ್ರಾಮದಲ್ಲಿ ನೀನು ನನ್ನನ್ನು ಕಾಲನೆಂದೇ ತಿಳಿ.॥63॥
ಮೂಲಮ್ - 64
ಬಾಲೇನ ವಿಷ್ಣುನಾ ಲೋಕಾಸ್ತ್ರಯಃ ಕ್ರಾಂತಾಸ್ತ್ರಿವಿಕ್ರಮೈಃ ।
ಲಕ್ಷ್ಮಣಸ್ಯ ವಚಃ ಶ್ರುತ್ವಾ ಹೇತುಮತ್ಪರಮಾರ್ಥವತ್ ।
ಅತಿಕಾಯಃ ಪ್ರಚುಕ್ರೋಧ ಬಾಣಂ ಚೋತ್ತಮಮಾದದ ॥
ಅನುವಾದ
‘ವಾಮನರೂಪಧಾರಿ ವಿಷ್ಣುವು ನೋಡಲು ಬಾಲಕನಂತಿದ್ದರೂ ತನ್ನ ಮೂರು ಹೆಜ್ಜೆಗಳಿಂದ ಮೂರು ಲೋಕಗಳನ್ನೇ ಅಳೆದಿದ್ದನು’. ಲಕ್ಷ್ಮಣನ ಯಥಾರ್ಥವಾದ ಯುಕ್ತಿಯುಕ್ತ ಮಾತನ್ನು ಕೇಳಿ ಅತಿಕಾಯನು ಕೋಪದಿಂದ ಕೆಂಡಾಮಂಡಲನಾಗಿ, ಒಂದು ಉತ್ತಮ ಬಾಣವನ್ನೆತ್ತಿಕೊಂಡನು.॥64॥
ಮೂಲಮ್ - 65
ತತೋ ವಿದ್ಯಾಧರಾ ಭೂತಾ ದೇವಾ ದೈತ್ಯಾ ಮಹರ್ಷಯಃ ।
ಗುಹ್ಯಕಾಶ್ಚ ಮಹಾತ್ಮಾನಸ್ತದ್ ಯುದ್ಧಂ ದ್ರಷ್ಟುಮಾಗಮನ್ ॥
ಅನುವಾದ
ಆಗ ವಿದ್ಯಾಧರರು, ಭೂತಗಳು, ದೇವತೆಗಳು, ದೈತ್ಯರು, ಮಹರ್ಷಿಗಳು, ಗುಹ್ಯಕರು ಆ ಯುದ್ಧವನ್ನು ನೋಡಲು ಆಗಮಿಸಿದರು.॥65॥
ಮೂಲಮ್ - 66
ತತೋಽತಿಕಾಯಃ ಕುಪಿತಶ್ಚಾಪಮಾರೋಪ್ಯ ಸಾಯಕಮ್ ।
ಲಕ್ಷ್ಮಣಾಯ ಪ್ರಚಿಕ್ಷೇಪ ಸಂಕ್ಷಿಪನ್ನಿವ ಚಾಂಬರಮ್ ॥
ಅನುವಾದ
ಆಗ ಅತಿಕಾಯನು ಕುಪಿತನಾಗಿ ಧನುಸ್ಸಿಗೆ ಉತ್ತಮ ಬಾಣಗಳನ್ನು ಹೂಡಿ, ಆಕಾಶವನ್ನೆ ನುಂಗಿ ಬಿಡುವುದೋ ಎಂಬಂತೆ ಲಕ್ಷ್ಮಣನ ಮೇಲೆ ಪ್ರಯೋಗಿಸಿದನು.॥66॥
ಮೂಲಮ್ - 67
ತಮಾಪತಂತಂ ನಿಶಿತಂ ಶರಮಾಶೀವಿಷೋಪಮಮ್ ।
ಅರ್ಧಚಂದ್ರೇಣ ಚಿಚ್ಛೇದ ಲಕ್ಷ್ಮಣಃ ಪರವೀರಹಾ ॥
ಅನುವಾದ
ಆದರೆ ಶತ್ರುಸಂಹಾರಕನಾದ ಲಕ್ಷ್ಮಣನು ಒಂದು ಅರ್ಧಚಂದ್ರಾಕಾರ ಬಾಣದಿಂದ ತನ್ನ ಕಡೆಗೆ ಬರುತ್ತಿರುವ ವಿಷದಂತಹ ಭಯಂಕರ ಬಾಣವನ್ನು ಕತ್ತರಿಸಿ ಹಾಕಿದನು.॥67॥
ಮೂಲಮ್ - 68
ತಂ ನಿಕೃತ್ತಂ ಶರಂ ದೃಷ್ಟ್ವಾ ಕೃತ್ತಭೋಗಮಿವೋರಗಮ್ ।
ಅತಿಕಾಯೋ ಭೃಶಂ ಕ್ರುದ್ಧಃ ಪಂಚ ಬಾಣಾನ್ಸಮಾದದೇ ॥
ಅನುವಾದ
ಸರ್ಪದ ಹೆಡೆ ತುಂಡಾದಂತೆ ಆ ಬಾಣವು ತುಂಡಾದುದನ್ನು ನೋಡಿ ಅತ್ಯಂತ ಕುಪಿತನಾದ ಅತಿಕಾಯನು ಐದು ಬಾಣಗಳನ್ನು ಧನುಸ್ಸಿಗೆ ಹೂಡಿದನು.॥68॥
ಮೂಲಮ್ - 69
ತಾನ್ ಶರಾನ್ ಸಂಪ್ರಚಿಕ್ಷೇಪ ಲಕ್ಷ್ಮಣಾಯ ನಿಶಾಚರಃ ।
ತಾನಪ್ರಾಪ್ತಾನ್ಶಿತೈರ್ಬಾಣೈಶ್ಚಿಚ್ಛೇದ ಭರತಾನುಜಃ ॥
ಅನುವಾದ
ಮತ್ತೆ ಆ ನಿಶಾಚರನು ಲಕ್ಷ್ಮಣನ ಮೇಲೆ ಆ ಐದು ಬಾಣಗಳನ್ನು ಪ್ರಯೋಗಿಸಿದನು. ಆ ಬಾಣಗಳನ್ನು ತನ್ನ ಬಳಿಗೆ ಬರುವ ಮೊದಲೇ ಲಕ್ಷ್ಮಣನು ಹರಿತವಾದ ಸಾಯಕಗಳಿಂದ ತುಂಡು ತುಂಡಾಗಿಸಿದನು.॥69॥
ಮೂಲಮ್ - 70
ಸ ತಾನ್ ಛಿತ್ವಾ ಶಿತೈರ್ಬಾಣೈರ್ಲಕ್ಷ್ಮಣಃ ಪರವೀರಹಾ ।
ಆದದೇ ನಿಶಿತಂ ಬಾಣಂ ಜ್ವಲಂತಮಿವ ತೇಜಸಾ ॥
ಅನುವಾದ
ಶತ್ರುವೀರರನ್ನು ಸಂಹಾರ ಮಾಡುವ ಲಕ್ಷ್ಮಣನು ಆ ಬಾಣಗಳನ್ನು ಖಂಡಿಸಿ, ಒಂದು ತೀಕ್ಷ್ಣವಾದ ಬಾಣವನ್ನೆತ್ತಿಕೊಂಡನು. ಅದು ತನ್ನ ತೇಜದಿಂದ ಪ್ರಜ್ವಲಿತವಾಗುತ್ತಿತ್ತು.॥70॥
ಮೂಲಮ್ - 71
ತಮಾದಾಯ ಧನುಃಶ್ರೇಷ್ಠೇ ಯೋಜಯಾಮಾಸ ಲಕ್ಷ್ಮಣಃ ।
ವಿಚಕರ್ಷ ಚವೇಗೇನ ವಿಸಸರ್ಜ ಚ ಸಾಯಕಮ್ ॥
ಅನುವಾದ
ಅದನ್ನು ತನ್ನ ಧನುಸ್ಸಿಗೆ ಹೂಡಿ, ನಾಣನ್ನು ಸೆಳೆದು, ವೇಗವಾಗಿ ಅತಿಕಾಯನಿಗೆ ಪ್ರಯೋಗಿಸಿದನು.॥71॥
ಮೂಲಮ್ - 72
ಪೂರ್ಣಾಯತ ವಿಸೃಷ್ಟೇನ ಶರೇಣ ನತಪರ್ವಣಾ ।
ಲಲಾಟೇ ರಾಕ್ಷಸ ಶ್ರೇಷ್ಠಮಾಜಘಾನ ಸ ವೀರ್ಯವಾನ್ ॥
ಅನುವಾದ
ಆ ಕರ್ಣಾಂತವಾಗಿ ಧನುಸ್ಸನ್ನು ಸೆಳೆದು ಬಿಟ್ಟಿರುವ ಬಾಗಿದ ಗಂಟುಗಳುಳ್ಳ ಬಾಣದಿಂದ ಲಕ್ಷ್ಮಣನು ರಾಕ್ಷಸ ಶ್ರೇಷ್ಠ ಅತಿಕಾಯನ ಹಣೆಯನ್ನು ಒಡೆದು ಹಾಕಿದನು.॥72॥
ಮೂಲಮ್ - 73
ಸ ಲಲಾಟೇ ಶರೋ ಮಗ್ನಸ್ತಸ್ಯ ಭೀಮಸ್ಯ ರಕ್ಷಸಃ ।
ದದೃಶೇ ಶೋಣಿತೇನಾಕ್ತಃ ಪನ್ನಗೇಂದ್ರ ಇವಾಚಲೇ ॥
ಅನುವಾದ
ಆ ಬಾಣವು ಆ ಭಯಾನಕ ರಾಕ್ಷಸನ ಲಲಾಟದಲ್ಲಿ ನೆಟ್ಟಿಹೋಯಿತು ಮತ್ತು ರಕ್ತದಿಂದ ತೊಯ್ದು ಪರ್ವತಕ್ಕೆ ಅಂಟಿಕೊಂಡಿರುವ ನಾಗರಾಜನಂತೆ ಕಂಡುಬರುತ್ತಿತ್ತು.॥73॥
ಮೂಲಮ್ - 74½
ರಾಕ್ಷಸಃ ಪ್ರಚಕಂಪೇಽಥ ಲಕ್ಷ್ಮಣೇಷು ಪ್ರಪೀಡಿತಃ ।
ರುದ್ರಬಾಣಹತಂ ಘೋರಂ ಯಥಾ ತ್ರಿಪುರ ಗೋಪುರಮ್ ॥
ಚಿಂತಯಾಮಾಸ ಚಾಶ್ವಾಸ್ಯ ವಿಮೃಶ್ಯ ಚ ಮಹಾಬಲಃ ।
ಅನುವಾದ
ಲಕ್ಷ್ಮಣನ ಬಾಣದಿಂದ ಅತ್ಯಂತ ಪೀಡಿತನಾಗಿ ಭಗವಾನ್ ರುದ್ರನ ಬಾಣದಿಂದ ತ್ರಿಪುರನ ಭಯಂಕರ ಗೋಪುರ ಕಂಪಿಸಿದಂತೆ ಆ ರಾಕ್ಷಸನು ನಡುಗಿಹೋದನು. ಸ್ವಲ್ಪ ಹೊತ್ತಿನಲ್ಲಿ ಸುಧಾರಿಸಿಕೊಂಡು ಮಹಾಬಲಿ ಅತಿಕಾಯನು ಚಿಂತಾತುರನಾಗಿ ಏನೋ ಯೋಚಿಸತೊಡಗಿದನು.॥74½॥
ಮೂಲಮ್ - 75
ಸಾಧು ಬಾಣ ನಿಪಾತೇನ ಶ್ಲಾಘನೀಯೋಽಸಿ ಮೇ ರಿಪುಃ ॥
ಮೂಲಮ್ - 76
ವಿಧಾಯೈವಂ ವಿದಾರ್ಯಾಸ್ಯಂ ನಿಯಮ್ಯ ಚ ಭುಜಾವುಭೌ ।
ಸ ರಥೋಪಸ್ಥಮಾಸ್ಥಾಯ ರಥೇನ ಪ್ರಚಚಾರ ಹ ॥
ಅನುವಾದ
ಭಲೇ ಲಕ್ಷ್ಮಣ! ಇಂತಹ ಅಮೋಘ ಬಾಣವನ್ನು ಪ್ರಯೋಗಿಸಲು ಸಮರ್ಥನಾದ್ದರಿಂದ ನೀನು ನಿಶ್ಚಯವಾಗಿಯೂ ಶ್ಲಾಘನೀಯ ಶತ್ರುವೇ ಆಗಿರುವೆ; ಹೀಗೆ ಹೇಳಿ ಅತಿಕಾಯನು ಮುಖವನ್ನು ತಗ್ಗಿಸಿ ಭುಜಗಳನ್ನು ಕೆಳಕ್ಕೆ ಚೆಲ್ಲಿ ರಥದ ಹಿಂಭಾಗದಲ್ಲಿ ಕುಳಿತು ಸ್ವಲ್ಪ ಮುಂದೆ ಹೋದನು.॥75-76॥
ಮೂಲಮ್ - 77
ಏವಂ ತ್ರೀನ್ಪಂಚ ಸಪ್ತೇತಿ ಸಾಯಕಾನ್ ರಾಕ್ಷಸರ್ಷಭಃ ।
ಆದದೇ ಸಂದಧೇ ಚಾಪಿ ವಿಚಕರ್ಷೋತ್ಸಸರ್ಜ ಚ ॥
ಅನುವಾದ
ಆ ರಾಕ್ಷಸಶ್ರೇಷ್ಠ ವೀರನು ಕ್ರಮವಾಗಿ ಒಂದು, ಮೂರು, ಐದು ಮತ್ತು ಏಳು ಸಾಯಕಗಳನ್ನು ಧನುಸ್ಸಿಗೆ ಹೂಡಿ ವೇಗವಾಗಿ ಲಕ್ಷ್ಮಣನ ಮೇಲೆ ಪ್ರಯೋಗಿಸಿದನು.॥77॥
ಮೂಲಮ್ - 78
ತೇ ಬಾಣಾಃ ಕಾಲಸಾಂಕಾಶಾ ರಾಕ್ಷಸೇಂದ್ರ ಧನುಶ್ಚ್ಯುತಾಃ ।
ಹೇಮಪುಂಖಾ ರವಿಪ್ರಖ್ಯಾಶ್ಚಕ್ರುರ್ದೀಪ್ತಮಿವಾಂಬರಮ್ ॥
ಅನುವಾದ
ರಾಕ್ಷಸನು ಪ್ರಯೋಗಿಸಿದ ಸುವರ್ಣಭೂಷಿತ, ಸೂರ್ಯತುಲ್ಯ, ತೇಜಸ್ವೀ, ಕಾಲನಂತೆ ಭಯಂಕರ ಬಾಣಗಳು ಆಕಾಶವನ್ನೇ ಬೆಳಗಿಸಿದವು.॥78॥
ಮೂಲಮ್ - 79
ತತಸ್ತಾನ್ ರಾಕ್ಷಸೋತ್ಸಷ್ಟಾನ್ ಶರೌಘಾನ್ ರಾಘವಾನುಜಃ ।
ಅಸಂಭ್ರಾಂತಃ ಪ್ರಚಿಚ್ಛೇದ ನಿಶಿತೈರ್ಬಹುಭಿಃ ಶರೈಃ ॥
ಅನುವಾದ
ಆದರೆ ರಾಮಾನುಜ ಲಕ್ಷ್ಮಣನು ಏನೂ ಗಾಬರಿಗೊಳ್ಳದೆ ನಿಶಾಚರನು ಬಿಟ್ಟ ಬಾಣಸಮೂಹವನ್ನು ಹರಿತವಾದ ಅನೇಕ ಸಾಯಕಗಳಿಂದ ಕತ್ತರಿಸಿ ಹಾಕಿದನು.॥79॥
ಮೂಲಮ್ - 80
ತಾನ್ಶರಾನ್ಯುಧಿ ಸಂಪ್ರೇಕ್ಷ್ಯ ನಿಕೃತ್ತಾನ್ ರಾವಣಾತ್ಮಜಃ ।
ಚುಕೋಪ ತ್ರಿದಶೇಂದ್ರಾರಿರ್ಜಗ್ರಾಹ ನಿಶಿತಂ ಶರಮ್ ॥
ಅನುವಾದ
ಆ ಬಾಣಗಳು ತುಂಡಾದುದನ್ನು ನೋಡಿ ಇಂದ್ರದ್ರೋಹಿ ರಾವಣಕುಮಾರನು ಕ್ರೋಧಗೊಂಡು ಒಂದು ತೀಕ್ಷ್ಣವಾದ ಬಾಣವನ್ನು ಕೈಯ್ಯಲ್ಲೆತ್ತಿಕೊಂಡನು.॥80॥
ಮೂಲಮ್ - 81
ಸ ಸಂಧಾಯ ಮಹಾತೇಜಾಸ್ತಂ ಬಾಣಂ ಸಹಸೋತ್ಸಜತ್ ।
ತತಃ ಸೌಮಿತ್ರಿಮಾಯಾಂತಮಾಜಘಾನ ಸ್ತನಾಂತರೇ ॥
ಅನುವಾದ
ಅದನ್ನು ಧನುಸ್ಸಿಗೆ ಹೂಡಿ ಮಹಾತೇಜಸ್ವೀ ವೀರನು, ಎದುರಿಗೆ ಬರುತ್ತಿರುವ ಸುಮಿತ್ರಾಕುಮಾರನ ಎದೆಗೆ ಪ್ರಯೋಗಿಸಿ ಗಾಯಗೊಳಿಸಿದನು.॥81॥
ಮೂಲಮ್ - 82
ಅತಿಕಾಯೇನ ಸೌಮಿತ್ರಿಸ್ತಾಡಿತೋ ಯುಧಿ ವಕ್ಷಸಿ ।
ಸುಸ್ರಾವ ರುಧಿರಂ ತೀವ್ರಂ ಮದಂ ಮತ್ತ ಇವ ದ್ವಿಪಃ ॥
ಅನುವಾದ
ಅತಿಕಾಯನ ಆ ಬಾಣದ ಏಟಿನಿಂದ ಲಕ್ಷ್ಮಣನ ವಕ್ಷಃಸ್ಥಳದಿಂದ ಮತ್ತ ಗಜವು ಗಂಡಸ್ಥಳದಿಂದ ಮದವನ್ನು ಸುರಿಸುವಂತೆ ರಕ್ತ ಹರಿಯತೊಡಗಿತು.॥82॥
ಮೂಲಮ್ - 83
ಸ ಚಕಾರ ತದಾತ್ಮಾನಂ ವಿಶಲ್ಯಂ ಸಹಸಾ ವಿಭುಃ ।
ಜಗ್ರಾಹ ಚ ಶರಂ ತೀಕ್ಷ್ಣ ಮಸ್ತ್ರೇಣಾಪಿ ಸಮಾದಧೇ ॥
ಅನುವಾದ
ಮತ್ತೆ ಸಾಮರ್ಥ್ಯಶಾಲಿ ಲಕ್ಷ್ಮಣನು ಕೂಡಲೇ ತನ್ನ ಎದೆಯಿಂದ ಆ ಬಾಣವನ್ನು ಕಿತ್ತುಬಿಟ್ಟನು. ಮತ್ತೆ ಒಂದು ಹರಿತವಾದ ಸಾಯಕವನ್ನೆತ್ತಿಕೊಂಡು ಅದನ್ನು ಆಗ್ನೇಯಾಸದಿಂದ ಅಭಿಮಂತ್ರಿಸಿದನು.॥83॥
ಮೂಲಮ್ - 84
ಆಗ್ನೇಯೇನ ತದಾಸ್ತ್ರೇಣ ಯೋಜಯಾಮಾಸ ಸಾಯಕಮ್ ।
ಸ ಜಜ್ವಾಲ ತದಾ ಬಾಣೋ ಧನುಷ್ಯಸ್ಯ ಮಹಾತ್ಮನಃ ॥
ಅನುವಾದ
ಆಗ್ನೇಯಾಸದಿಂದ ಅಭಿಮಂತ್ರಿಸಿದ ಲಕ್ಷ್ಮಣನು ತನ್ನ ಆ ಸಾಯಕವನ್ನು ಧನುಸ್ಸಿಗೆ ಹೂಡುತ್ತಲೇ ಅಗ್ನಿಯಂತೆ ಪ್ರಜ್ವಲಿತವಾಯಿತು.॥84॥
ಮೂಲಮ್ - 85
ಅತಿಕಾಯೋಽತಿ ತೇಜಸ್ವೀ ಸೌರಮಸ್ತ್ರಂ ಸಮಾದಧೇ ।
ತೇನ ಬಾಣಂ ಭುಜಂಗಾಭಂ ಹೇಮಪುಂಖಮಯೋಜಯತ್ ॥
ಅನುವಾದ
ಅತ್ತ ಅತ್ಯಂತ ತೇಜಸ್ವೀ ಅತಿಕಾಯನೂ ಕೂಡ ಒಂದು ಸುವರ್ಣಮಯ ರೆಕ್ಕೆಗಳುಳ್ಳ, ವಿಷಧರ ಸರ್ಪದಂತಿರುವ ಬಾಣವನ್ನೆತ್ತಿಕೊಂಡು ಧನುಸ್ಸಿಗೆ ಹೂಡಿದನು.॥85॥
ಮೂಲಮ್ - 86
ತದಸ್ತ್ರಂ ಜ್ವಲಿತಂ ಘೋರಂ ಲಕ್ಷ್ಮಣಃ ಶರಮಾಹಿತಮ್ ।
ಅತಿಕಾಯಾಯ ಚಿಕ್ಷೇಪ ಕಾಲದಂಡಮಿವಾಂತಕಃ ॥
ಅನುವಾದ
ಆಗ್ನೇಯಾಸ್ತ್ರವು ತನ್ನ ಕಡೆಗೆ ಬರುತ್ತಿರುವುದನ್ನು ನೋಡಿ, ನಿಶಾಚರ ಅತಿಕಾಯನು ಕೂಡಲೇ ಭಯಂಕರ ಬಾಣವೊಂದನ್ನು ಸೂರ್ಯಾಸ್ತ್ರದಿಂದ ಅಭಿಮಂತ್ರಿಸಿ ಪ್ರಯೋಗಿಸಿದನು.॥86॥
ಮೂಲಮ್ - 87
ಆಗ್ನೇಯಾಸ್ತ್ರಾಭಿಸಂಯುಕ್ತಂ ದೃಷ್ಟ್ವಾ ಬಾಣಂ ನಿಶಾಚರಃ ।
ಉತ್ಸಸರ್ಜ ತದಾ ಬಾಣಂ ರೌದ್ರಂ ಸೂರ್ಯಾಸ್ತ್ರಯೋಜಿತಮ್ ॥
ಮೂಲಮ್ - 88
ತಾವುಭಾವಂಬರೇ ಬಾಣಾವನ್ಯೋನ್ಯಮಭಿಜಘ್ನತುಃ ।
ತೇಜಸಾ ಸಂಪ್ರದೀಪ್ತಾಗ್ನೌ ಕ್ರುದ್ಧಾವಿವ ಭುಜಂಗಮೌ ॥
ಮೂಲಮ್ - 89
ತಾವನ್ಯೋನ್ಯಂ ವಿನಿರ್ದಹ್ಯ ಪೇತತುಃ ಪೃಥಿವೀತಲೇ ॥
ಅನುವಾದ
ಆ ಎರಡೂ ಅಸ್ತ್ರಗಳ ತುದಿಯು ಪ್ರಜ್ವಲಿತವಾಗುತ್ತಾ ಆಕಾಶದಲ್ಲಿ ಎರಡು ಕುಪಿತವಾದ ಸರ್ಪಗಳು ಪರಸ್ಪರ ಕಾದಾಡುವಂತೆ, ಎರಡೂ ಢಿಕ್ಕಿ ಹೊಡೆದು ಒಂದು ಒಂದನ್ನು ದಗ್ಧಗೊಳಿಸಿ ಭೂಮಿಗೆ ಬಿದ್ದುಹೋದುವು.॥87-89॥
ಮೂಲಮ್ - 90
ನಿರರ್ಚಿಷೌ ಭಸ್ಮಕೃತೌ ನ ಭ್ರಾಜೇತೇ ಶರೋತ್ತಮೌ ।
ತಾವುಭೌ ದೀಪ್ಯಮಾನೌ ಸ್ಮ ನ ಭ್ರಾಜೇತೇ ಮಹೀತಲೇ ॥
ಅನುವಾದ
ಅವೆರಡೂ ಬಾಣಗಳೂ ಉತ್ತಮ ಕೋಟಿಯದಾಗಿದ್ದು, ತಮ್ಮ ದೀಪ್ತಿಯಿಂದ ಪ್ರಕಾಶಿತವಾಗುತ್ತಿದ್ದವು. ಆದರೂ ಒಂದು ಮತ್ತೊಂದರ ತೇಜದಿಂದ ಭಸ್ಮವಾಗಿ ತಮ್ಮ ತಮ್ಮ ತೇಜ ಕಳೆದುಕೊಂಡು ನಿಷ್ಫಲವಾದವು.॥90॥
ಮೂಲಮ್ - 91
ತತೋಽತಿಕಾಯಃ ಸಂಕ್ರುದ್ಧಸ್ತ್ವಾಷ್ಟ್ರಮೈಷೀಕಮುತ್ಸಜತ್ ।
ತತಶ್ಚಿಚ್ಛೇದ ಸೌಮಿತ್ರಿರಸ್ತ್ರಮೈಂದ್ರೇಣ ವೀರ್ಯವಾನ್ ॥
ಅನುವಾದ
ಅನಂತರ ಅತಿಕಾಯನು ಅತ್ಯಂತ ಕುಪಿತನಾಗಿ ತ್ವಷ್ಟಾದೇವತೆಯ ಮಂತ್ರದಿಂದ ಅಭಿಮಂತ್ರಿಸಿದ ಒಂದು ಐಷಿಕಾಸ್ತ್ರವನ್ನು ಬಿಟ್ಟರೆ, ಪರಾಕ್ರಮಿ ಲಕ್ಷ್ಮಣನು ಆ ಅಸ್ತ್ರವನ್ನು ಐಂದ್ರಾಸ್ತ್ರದಿಂದ ತುಂಡರಿಸಿದನು.॥91॥
ಮೂಲಮ್ - 92
ಐಷೀಕಂ ನಿಹತಂ ದೃಷ್ಟ್ವಾ ಕುಮಾರೋ ರಾವಣಾತ್ಮಜಃ ।
ಯಾಮ್ಯೇನಾಸ್ತ್ರೇಣ ಸಂಕ್ರುದ್ಧೋ ಯೋಜಯಾಮಾಸ ಸಾಯಕಮ್ ॥
ಮೂಲಮ್ - 93
ತತಸ್ತದಸ್ತ್ರಂ ಚಿಕ್ಷೇಪ ಲಕ್ಷ್ಮಣಾಯ ನಿಶಾಚರಃ ।
ವಾಯುವ್ಯೇನ ತದಸ್ತ್ರೇಣ ನಿಜಘಾನ ಸ ಲಕ್ಷ್ಮಣಃ ॥
ಅನುವಾದ
ಐಷಿಕಾಸ್ತ್ರವು ನಾಶವಾಗಿರುವುದನ್ನು ನೋಡಿ ರಾವಣಪುತ್ರ ಅತಿಕಾಯನಿಗೆ ಮಿತಿಮೀರಿದ ಕೋಪವುಂಟಾಯಿತು. ಆಗ ರಾಕ್ಷಸನು ಒಂದು ಸಾಯಕವನ್ನು ಯಾಮ್ಯಾಸ್ತ್ರದಿಂದ ಅಭಿಮಂತ್ರಿಸಿ ಲಕ್ಷ್ಮಣನಿಗೆ ಗುರಿಯಿಟ್ಟು ಪ್ರಯೋಗಿಸಿದನು; ಆದರೆ ಲಕ್ಷ್ಮಣನು ವಾಯವ್ಯಾಸದಿಂದ ಅದನ್ನು ನಾಶಗೊಳಿಸಿದನು.॥92-93॥
ಮೂಲಮ್ - 94
ಅಥೈನಂ ಶರಧಾರಾಭಿರ್ಧಾರಾಭಿರಿವ ತೋಯದಃ ।
ಅಭ್ಯವರ್ಷತ ಸಂಕ್ರುದ್ಧೋ ಲಕ್ಷ್ಮಣೋ ರಾವಣಾತ್ಮಜಮ್ ॥
ಅನುವಾದ
ಅನಂತರ ಮೇಘಗಳು ನೀರನ್ನು ಸುರಿಸುವಂತೆ ಲಕ್ಷ್ಮಣನು ಅತ್ಯಂತ ಕುಪಿತನಾಗಿ ಅತಿಕಾಯನ ಮೇಲೆ ಬಾಣಗಳ ಮಳೆಗರೆಯಲು ಪ್ರಾರಂಭಿಸಿದನು.॥94॥
ಮೂಲಮ್ - 95
ತೇಽತಿಕಾಯಂ ಸಮಾಸಾದ್ಯ ಕವಚೇ ವಜ್ರಭೂಷಿತೇ ।
ಭಗ್ನಾಗ್ರಶಲ್ಯಾಃ ಸಹಸಾ ಪೇತುರ್ಬಾಣಾ ಮಹೀತಲೇ ॥
ಅನುವಾದ
ಅತಿಕಾಯನು ಒಂದು ದಿವ್ಯ ಕವಚ ಧರಿಸಿದ್ದನು, ಅದಕ್ಕೆ ನವರತ್ನಗಳನ್ನು ಜೋಡಿಸಿದ್ದು, ಅಭೇದ್ಯವಾಗಿತ್ತು. ಇದರಿಂದ ಲಕ್ಷ್ಮಣನ ಬಾಣಗಳು ಕವಚಕ್ಕೆ ತಗಲುತ್ತಲೇ ತುದಿಗಳು ಮುರಿದು ನೆಲಕ್ಕೆ ಬಿದ್ದುಹೋದವು.॥95॥
ಮೂಲಮ್ - 96
ತಾನ್ಮೋಘಾನಭಿ ಸಂಪ್ರೇಕ್ಷ್ಯ ಲಕ್ಷ್ಮಣಃ ಪರವೀರಹಾ ।
ಅಭ್ಯವರ್ಷತ ಬಾಣಾನಾಂ ಸಹಸ್ರೇಣ ಮಹಾಯಶಾಃ ॥
ಅನುವಾದ
ಆ ಬಾಣಗಳು ನಿಷ್ಫಲವಾಗಿರುವುದನ್ನು ನೋಡಿ ಶತ್ರುಗಳನ್ನು ಸಂಹಾರ ಮಾಡುವ ಮಹಾಯಶಸ್ವೀ ಲಕ್ಷ್ಮಣನು ಪುನಃ ಸಾವಿರಾರು ಬಾಣಗಳ ಮಳೆಯನ್ನು ಸುರಿಸಿದನು.॥96॥
ಮೂಲಮ್ - 97
ಸ ವೃಷ್ಯಮಾಣೋ ಬಾಣೌಘೈರತಿಕಾಯೋ ಮಹಾಬಲಃ ।
ಅವಧ್ಯಕವಚಃ ಸಂಖ್ಯೇ ರಾಕ್ಷಸೋ ನೈವ ವಿವ್ಯಥೇ ॥
ಅನುವಾದ
ಮಹಾಬಲಿ ಅತಿಕಾಯನ ಕವಚವು ಅಭೇದ್ಯವಾದ್ದರಿಂದ ಯುದ್ಧದಲ್ಲಿ ಬಾಣಗಳ ವರ್ಷವಾಗುತ್ತಿದ್ದರೂ ಆ ರಾಕ್ಷಸನು ವ್ಯಥಿತನಾಗಲಿಲ್ಲ.॥97॥
ಮೂಲಮ್ - 98
ಶರಂ ಚಾಶೀವಿಷಾಕಾರಂ ಲಕ್ಷ್ಮಣಾಯ ವ್ಯಪಾಸೃಜತ್ ।
ಸ ತೇನ ವಿದ್ಧಃ ಸೌಮಿತ್ರಿರ್ಮರ್ಮದೇಶೇ ಶರೇಣ ಹ ॥
ಅನುವಾದ
ಅವನು ಲಕ್ಷ್ಮಣನ ಮೇಲೆ ವಿಷಧರ ಸರ್ಪದಂತಹ ಭಯಂಕರ ಬಾಣವನ್ನು ಪ್ರಯೋಗಿಸಿದನು. ಆ ಬಾಣದಿಂದ ಸುಮಿತ್ರಾಕುಮಾರನ ಮರ್ಮಸ್ಥಾನದಲ್ಲಿ ಏಟುಬಿತ್ತು.॥98॥
ಮೂಲಮ್ - 99
ಮುಹೂರ್ತಮಾತ್ರಂ ನಿಃಸಂಜ್ಞೊ ಹ್ಯಭವಚ್ಛತ್ರುತಾಪನಃ ।
ತತಃ ಸಂಜ್ಞಾಮುಪಾಲಭ್ಯ ಚತುರ್ಭಿಃ ಸಾಯಕೋತ್ತಮೈಃ ॥
ಮೂಲಮ್ - 100
ನಿಜಘಾನ ಹಯಾನ್ ಸಂಖ್ಯೇ ಸಾರಥಿಂ ಚ ಮಹಾಬಲಃ ।
ಧ್ವಜಸ್ಯೋನ್ಮಥನಂ ಕೃತ್ವಾ ಶರವರ್ಷೈರರಿಂದಮಃ ॥
ಅನುವಾದ
ಅದರಿಂದ ಶತ್ರುತಾಪನ ಲಕ್ಷ್ಮಣನು ಎರಡು ಗಳಿಗೆ ಮೂರ್ಛಿತನಾಗಿ ಬಿದ್ದಿದ್ದನು. ಮತ್ತೆ ಎಚ್ಚರಗೊಂಡು ಮಹಾಬಲಿ ಶತ್ರುದಮನ ವೀರನು ಬಾಣಗಳ ವರ್ಷದಿಂದ ಶತ್ರುವಿನ ರಥದ ಧ್ವಜವನ್ನು ನಾಶಮಾಡಿ ಉತ್ತಮ ನಾಲ್ಕು ಸಾಯಕಗಳಿಂದ ರಣರಂಗದಲ್ಲಿ ಅವನ ಕುದುರೆ ಹಾಗೂ ಸಾರಥಿಯನ್ನು ಸಂಹರಿಸಿದನು.॥99-100॥
ಮೂಲಮ್ - 101½
ಅಸಂಭ್ರಾಂತಃ ಸ ಸೌಮಿತ್ರಿಸ್ತಾನ್ ಶರಾನಭಿಲಕ್ಷಿತಾನ್ ।
ಮುಮೋಚ ಲಕ್ಷ್ಮಣೋ ಬಾಣಾನ್ವಧಾರ್ಥಂ ತಸ್ಯ ರಕ್ಷಸಃ ॥
ನ ಶಶಾಕ ರುಜಂ ಕರ್ತುಂ ಯುಧಿ ತಸ್ಯ ನರೋತ್ತಮಃ ॥
ಅನುವಾದ
ಬಳಿಕ ಗಾಬರಿ ಗೊಳ್ಳದಿರುವ ನರಶ್ರೇಷ್ಠ ಲಕ್ಷ್ಮಣನು ಆ ರಾಕ್ಷಸನ ವಧೆಗಾಗಿ ಆರಿಸಿದ ಅನೇಕ ಬಾಣಗಳನ್ನು ಪ್ರಯೋಗಿಸಿಯೂ, ಅವು ಯುದ್ಧದಲ್ಲಿ ನಿಶಾಚರನ ಶರೀರವನ್ನು ಗಾಯಗೊಳಿಸದಾದನು.॥101॥
ಮೂಲಮ್ - 102
ಅಥೈನಮಭ್ಯುಪಾಗಮ್ಯ ವಾಯುರ್ವಾಕ್ಯಮುವಾಚ ಹ ॥
ಮೂಲಮ್ - 103
ಬ್ರಹ್ಮದತ್ತವರೋ ಹ್ಯೇಷ ಅವಧ್ಯಕವಚಾವೃತಃ ।
ಬ್ರಾಹ್ಮೇಣಾಸ್ತ್ರೇಣ ಭಿಂಧ್ಯೇನಮೇಷ ವಧ್ಯೋ ಹಿ ನಾನ್ಯಥಾ ।
ಅವಧ್ಯ ಏಷ ಹ್ಯನ್ಯೇಷಾಮಸ್ತ್ರಾಣಾಂ ಕವಚೀ ಬಲೀ ॥
ಅನುವಾದ
ಆಗ ವಾಯು ದೇವರು ಅವನ ಬಳಿಗೆ ಬಂದು ಹೇಳಿದನು-ಸುಮಿತ್ರಾನಂದನನೇ! ಈ ರಾಕ್ಷಸನಿಗೆ ಬ್ರಹ್ಮನ ವರ ದೊರೆತಿದೆ. ಈ ಅಭೇದ್ಯ ಕವಚದಿಂದ ರಕ್ಷಿತನಾಗಿದ್ದಾನೆ. ಆದ್ದರಿಂದ ಇದನ್ನು ಬ್ರಹ್ಮಾಸ್ತ್ರದಿಂದ ಒಡೆದು ಹಾಕು. ಇಲ್ಲದಿದ್ದರೆ ಇವನು ಸಾಯಲಾರನು. ಈ ಕವಚಧಾರೀ ಬಲಿಷ್ಠ ನಿಶಾಚರನು. ಬೇರೆ ಅಸ್ತ್ರಗಳಿಂದ ಅವಧ್ಯನಾಗಿದ್ದಾನೆ.॥102-103॥
ಮೂಲಮ್ - 104
ತತಸ್ತು ವಾಯೋರ್ವಚನಂ ನಿಶಮ್ಯ
ಸೌಮಿತ್ರಿರಿಂದ್ರ ಪ್ರತಿಮಾನವೀರ್ಯಃ ।
ಸಮಾದಧೇ ಬಾಣಮಥೋಗ್ರವೇಗಂ ।
ತದ್ಬ್ರಾಸ್ತ್ರಮನ್ತ್ರಂ ಸಹಸಾ ನಿಯೋಜ್ಯ ॥
ಅನುವಾದ
ಲಕ್ಷ್ಮಣನು ಇಂದ್ರನಂತೆ ಪರಾಕ್ರಮಿಯಾಗಿದ್ದನು. ಅವನು ವಾಯುದೇವರ ಮಾತನ್ನು ಕೇಳಿ ಒಂದು ಭಯಂಕರ ವೇಗವುಳ್ಳ ಬಾಣವನ್ನು ಬ್ರಹ್ಮಾಸ್ತ್ರದಿಂದ ಅಭಿಮಂತ್ರಿಸಿ ಧನುಸ್ಸಿಗೆ ಹೂಡಿದನು.॥104॥
ಮೂಲಮ್ - 105
ತಸ್ಮಿನ್ ವರಾಸ್ತ್ರೇ ತು ನಿಯುಜ್ಯಮಾನೇ
ಸೌಮಿತ್ರಿಣಾ ಬಾಣವರೇ ಶಿತಾಗ್ರೇ ।
ದಿಶಶ್ಚ ಚಂದ್ರಾರ್ಕಮಹಾಗ್ರಹಾಶ್ಚ
ನಭಶ್ಚ ತತ್ರಾಸ ರರಾಸ ಚೋರ್ವೀ ॥
ಅನುವಾದ
ಸುಮಿತ್ರಾ ಕುಮಾರ ಲಕ್ಷ್ಮಣನು ಹರಿತವಾದ ಆ ಶ್ರೇಷ್ಠ ಬಾಣದಲ್ಲಿ ಬ್ರಹ್ಮಾಸ್ತ್ರವನ್ನು ಸಂಯೋಜಿಸಿದಾಗ ಸಮಸ್ತ ದಿಕ್ಕುಗಳು, ಚಂದ್ರ-ಸೂರ್ಯರು ಹಾಗೂ ದೊಡ್ಡ ದೊಡ್ಡ ಗ್ರಹರು, ಅಂತರಿಕ್ಷ ಲೋಕದ ಪ್ರಾಣಿಗಳು ನಡುಗಿಹೋದರು. ಭೂಮಂಡಲದಲ್ಲಿ ಮಹಾನ್ ಕೋಲಾಹಲವುಂಟಾಯಿತು.॥105॥
ಮೂಲಮ್ - 106
ತಂ ಬ್ರಹ್ಮಣೋಸ್ತ್ರೇಣ ನಿಯೋಜ್ಯ ಚಾಪೇ
ಶರಂ ಸುಪುಂಖಂ ಯಮದೂತಕಲ್ಪಮ್ ।
ಸೌಮಿತ್ರಿರಿಂದ್ರಾರಿಸುತಸ್ಯ ತಸ್ಯ
ಸಸರ್ಜ ಬಾಣಂ ಯುಧಿ ವಜ್ರಕಲ್ಪಮ್ ॥
ಅನುವಾದ
ಸುಮಿತ್ರಾಕುಮಾರನು ಸುಂದರ ರೆಕ್ಕೆಗಳುಳ್ಳ ಯಮದೂತನಂತೆ ಭಯಂಕರ ವಜ್ರದಂತೆ ಅಮೋಘವಾಗಿದ್ದ ಬಾಣವನ್ನು ಬ್ರಹ್ಮಾಸ್ತ್ರದಿಂದ ಅಭಿಮಂತ್ರಿಸಿ ಧನುಸ್ಸಿಗೆ ಹೂಡಿ ಯುದ್ಧದಲ್ಲಿ ಆ ಬಾಣವನ್ನು ಇಂದ್ರ ದ್ರೋಹಿ ರಾವಣನ ಮಗ ಅತಿಕಾಯನಿಗೆ ಗುರಿಯಿಟ್ಟು ಪ್ರಯೋಗಿಸಿದನು.॥106॥
ಮೂಲಮ್ - 107
ತಂ ಲಕ್ಷ್ಮಣೋತ್ಸೃಷ್ಟ ವಿವೃದ್ಧವೇಗಂ
ಸಮಾಪತಂತಂ ಶ್ವಸಮೋಗ್ರವೇಗಮ್ ।
ಸುಪರ್ಣವಜ್ರೋತ್ತಮ ಚಿತ್ರಪುಂಖಂ
ತದಾತಿಕಾಯಃ ಸಮರೇ ದದರ್ಶ ॥
ಅನುವಾದ
ಲಕ್ಷ್ಮಣನು ಪ್ರಯೋಗಿಸಿದ ಆ ಬಾಣದ ವೇಗ ಬಹಳ ಹೆಚ್ಚಾಗಿತ್ತು. ಅದಕ್ಕೆ ಗರುಡನ ರೆಕ್ಕೆಗಳಂತೆ ಪಂಖಗಳಿದ್ದವು. ಅದಕ್ಕೆ ವಜ್ರಗಳನ್ನು ಜೋಡಿಸಿದ್ದು, ವಿಚಿತ್ರವಾಗಿ ಶೋಭಿಸುತ್ತಿತ್ತು. ಸಮರಾಂಗಣದಲ್ಲಿ ಅತಿಕಾಯನು ಆ ಬಾಣವು ವಾಯುವಿನಂತೆ ಭಯಂಕರ ವೇಗದಿಂದ ತನ್ನ ಕಡೆಗೆ ಬರುವುದನ್ನು ನೋಡಿದನು.॥107॥
ಮೂಲಮ್ - 108
ತಂ ಪ್ರೇಕ್ಷಮಾಣಃ ಸಹಸಾತಿಕಾಯೋ
ಜಘಾನ ಬಾಣೈರ್ನಿಶಿತೈರನೇಕೈಃ ।
ಸ ಸಾಯಕಸ್ತಸ್ಯ ಸುಪರ್ಣವೇಗ-
ಸ್ತಥಾತಿವೇಗೇನ ಜಗಾಮ ಪಾರ್ಶ್ವಮ್ ॥
ಅನುವಾದ
ಅದನ್ನು ನೋಡಿ ಅತಿಕಾಯನು ಅದಕ್ಕೆ ಅನೇಕ ಹರಿತವಾದ ಬಾಣಗಳನ್ನು ಬಿಟ್ಟರೂ ಅದು ಗುರಡನಂತೆ ವೇಗಶಾಲಿ ಸಾಯಕವು ವೇಗವಾಗಿ ಅವನ ಬಳಿಗೆ ಬಂತು.॥108॥
ಮೂಲಮ್ - 109
ತಮಾಗತಂ ಪ್ರೇಕ್ಷ್ಯ ತದಾತಿಕಾಯೋ
ಬಾಣಂ ಪ್ರದೀಪ್ತಾಂತಕ ಕಾಲಕಲ್ಪಮ್ ।
ಜಘಾನ ಶಕ್ತ್ಯಷ್ಟಿ ಗದಾಕುಠಾರೈಃ
ಶೂಲೈಃ ಶರೈಶ್ಚಾಪ್ಯವಿಪನ್ನಚೇಷ್ಟಃ ॥
ಅನುವಾದ
ಪ್ರಜ್ವಲಿಸುವ ಅಂತಕನಂತೆ, ಕಾಲನಂತೆ ಇದ್ದ ಆ ಬಾಣವು ಅತ್ಯಂತ ನಿಕಟವಾಗಿ ಬಂದುದನ್ನು ನೋಡಿಯೂ ಅತಿಕಾಯನು ಸುಮ್ಮನಿರದೆ ಶಕ್ತಿ, ಋಷ್ವಿ, ಗದೆ, ಕುಠಾರ, ಶೂಲ ಹಾಗೂ ಬಾಣಗಳಿಂದ ಅದನ್ನು ನಾಶಪಡಿಸಲು ಪ್ರಯತ್ನಿಸಿದನು.॥109॥
ಮೂಲಮ್ - 110
ತಾನ್ಯಾಯುಧಾನ್ಯದ್ಭುತವಿಗ್ರಹಾಣಿ
ಮೋಘಾನಿ ಕೃತ್ವಾ ಸ ಶರೋಽಗ್ನಿದೀಪ್ತಃ ।
ಪ್ರಗೃಹ್ಯ ತಸ್ಯೈವ ಕಿರೀಟಜುಷ್ಟಂ
ತದಾತಿಕಾಯಸ್ಯ ಶಿರೋ ಜಹಾರ ॥
ಅನುವಾದ
ಆದರೆ ಅಗ್ನಿಯಂತೆ ಪ್ರಜ್ವಲಿತ ಆ ಬಾಣವು ಆ ಅದ್ಭುತ ಅಸ್ತ್ರಗಳನ್ನು ವ್ಯರ್ಥಗೊಳಿಸಿ, ಅತಿಕಾಯನ ಮುಕುಟಸಹಿತ ಮಸ್ತಕವನ್ನು ತುಂಡರಿಸಿತು.॥110॥
ಮೂಲಮ್ - 111
ತಚ್ಛಿರಃ ಸಶಿರಸ್ತ್ರಾಣಂ ಲಕ್ಷ್ಮಣೇಷು ಪ್ರಮರ್ದಿತಮ್ ।
ಪಪಾತ ಸಹಸಾ ಭೂಮೌ ಶೃಂಗಂ ಹಿಮವತೋ ಯಥಾ ॥
ಅನುವಾದ
ಲಕ್ಷ್ಮಣನ ಬಾಣದಿಂದ ತುಂಡಾದ ರಾಕ್ಷಸನ ಶಿರಸ್ತ್ರಾಣ ಸಹಿತ ಆ ಮಸ್ತಕವು ಹಿಮಾಲಯದ ಶಿಖರದಂತೆ ಕೂಡಲೇ ನೆಲಕ್ಕೆ ಬಿದ್ದುಹೋಯಿತು.॥111॥
ಮೂಲಮ್ - 112
ತಂ ಭೂಮೌ ಪತಿತಂ ದೃಷ್ಟ್ವಾ ವಿಕ್ಷಿಪ್ತಾಂಬರ ಭೂಷಣಮ್ ।
ಬಭೂವುರ್ವ್ಯಥಿತಾಃ ಸರ್ವೇಹತಶೇಷಾ ನಿಶಾಚರಾಃ ॥
ಅನುವಾದ
ಅವನ ವಸ್ತ್ರ-ಒಡವೆಗಳೆಲ್ಲ ಚೆಲ್ಲಿಹೋದುವು. ಅದನ್ನು ಭೂಮಿಗೆ ಬಿದ್ದಿರುವುದನ್ನು ನೋಡಿ, ಬದುಕಿ ಉಳಿದ ನಿಶಾಚರರು ವ್ಯಥಿತರಾದರು.॥112॥
ಮೂಲಮ್ - 113
ತೇ ವಿಷಣ್ಣ ಮುಖಾ ದೀನಾಃ ಪ್ರಹಾರಜನಿತಶ್ರಮಾಃ ।
ವಿನೇದುರುಚ್ಛೈರ್ಬಹವಃ ಸಹಸಾ ವಿಸ್ವರೈಃ ಸ್ವರೈಃ ॥
ಅನುವಾದ
ಅವರ ಮುಖಗಳಲ್ಲಿ ವಿಷಾದ ಆವರಿಸಿತು. ಅವರು ಪೆಟ್ಟು ತಿಂದು, ಬಳಲಿ ಇನ್ನೂ ದುಃಖಿತರಾಗಿದ್ದರು. ಆದ್ದರಿಂದ ಆ ಬಹುಸಂಖ್ಯೆಯ ರಾಕ್ಷಸರು ವಿಕೃತ ಸ್ವರದಿಂದ ಜೋರಾಗಿ ಅತ್ತು, ಚೀರತೊಡಗಿದರು.॥113॥
ಮೂಲಮ್ - 114
ತತಸ್ತತ್ಪರಿತಂ ಯಾತಾ ನಿರಪೇಕ್ಷಾ ನಿಶಾಚರಾಃ ।
ಪುರೀಮಭಿಮುಖಾ ಭೀತಾ ದ್ರವಂತೋ ನಾಯಕೇ ಹತೇ ॥
ಅನುವಾದ
ಸೇನಾಪತಿಯು ಹತನಾದಾಗ ನಿಶಾಚರರ ಯುದ್ಧೋತ್ಸಾಹ ಉಡುಗಿಹೋಗಿ ಕೂಡಲೇ ಲಂಕೆಯ ಕಡೆಗೆ ಓಡಿದರು.॥114॥
ಮೂಲಮ್ - 115
ಪ್ರಹರ್ಷಯುಕ್ತಾ ಬಹವಸ್ತು ವಾನರಾಃ
ಪ್ರಫುಲ್ಲಪದ್ಮ ಪ್ರತಿಮಾನನಾಸ್ತದಾ ।
ಅಪೂಜಯನ್ಲ್ಲಕ್ಷ್ಮಣಮಿಷ್ಟಭಾಗಿನಂ
ಹತೇ ರಿಪೌ ಭೀಮಬಲೇ ದುರಾಸದೇ ॥
ಅನುವಾದ
ಇತ್ತ ಆ ಭಯಂಕರ ಬಲಶಾಲಿ ದುರ್ಜಯ ಶತ್ರುವು ಸತ್ತುಹೋದಾಗ ವಾನರರೆಲ್ಲ ಉತ್ಸಾಹಗೊಂಡರು. ಅವರ ಮುಖಗಳು ಪ್ರಫುಲ್ಲ ಕಮಲದಂತೆ ಅರಳಿದವು. ವಿಜಯೇಚ್ಛುಗಳಾದ ಅವರು ವೀರವರ ಲಕ್ಷ್ಮಣನನ್ನು ಭೂರಿ ಭೂರಿ ಪ್ರಶಂಸಿಸಿದರು.॥115॥
ಮೂಲಮ್ - 116
ಅತಿಬಲಮತಿಕಾಯಮಭ್ರಕಲ್ಪಂ
ಯುಧಿ ವಿನಿಪಾತ್ಯ ಸ ಲಕ್ಷ್ಮಣಃ ಪ್ರಹೃಷ್ಟಃ ।
ತ್ವರಿತಮಥ ತದಾ ಸ ರಾಮಪಾರ್ಶ್ವಂ
ಕಪಿನಿವಹೈಶ್ಚಸುಪೂಜಿತೋ ಜಗಾಮ ॥
ಅನುವಾದ
ಯುದ್ಧದಲ್ಲಿ ಅತ್ಯಂತ ಬಲಶಾಲಿ ಮತ್ತು ಮೇಘದಂತೆ ವಿಶಾಲ ಅತಿಕಾಯನನ್ನು ಧರಾಶಾಯಿ ಗೊಳಿಸಿದ ಲಕ್ಷ್ಮಣನು ಸಂತಸಗೊಂಡನು. ಅವನು ಆಗ ವಾನರ ಸಮೂಹದಿಂದ ಸಮ್ಮಾನಿತನಾಗಿ ಕೂಡಲೇ ಶ್ರೀರಾಮ ಚಂದ್ರನ ಬಳಿಗೆ ಬಂದನು.॥116॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಎಪ್ಪತ್ತೊಂದನೆಯ ಸರ್ಗ ಪೂರ್ಣವಾಯಿತು.॥71॥