वाचनम्
ಭಾಗಸೂಚನಾ
ದೇವಾಂತಕ, ತ್ರಿಶಿರಸ, ಮಹೋದರ, ಮಹಾಪಾರ್ಶ್ವರ ಸಂಹಾರ
ಮೂಲಮ್ - 1
ನರಾಂತಕಂ ಹತಂ ದೃಷ್ಟ್ವಾ ಚುಕ್ರುಶುರ್ನೈರ್ಋತರ್ಷಭಾಃ ।
ದೇವಾಂತಕ ಸ್ತ್ರೀಮೂರ್ಧಾ ಚ ಪೌಲಸ್ತ್ಯಶ್ಚ ಮಹೋದರಃ ॥
ಅನುವಾದ
ನರಾಂತಕನು ವಧೆಯಾದುದನ್ನು ನೋಡಿ ದೇವಾಂತಕ, ಪುಲಸ್ತ್ಯನಂದನ ತ್ರಿಶಿರಾ ಮತ್ತು ಮಹೋದರ ಈ ಶ್ರೇಷ್ಠ ರಾಕ್ಷಸರು ಹಾಹಾಕಾರ ಮಾಡಿದರು.॥1॥
ಮೂಲಮ್ - 2
ಆರೂಢೋ ಮೇಘಸಂಕಾಶಂ ವಾರಣೇದ್ರಂ ಮಹೋದರಃ ।
ವಾಲಿಪುತ್ರಂ ಮಹಾವೀರ್ಯಮಭಿದುದ್ರಾವ ವೇಗವಾನ್ ॥
ಅನುವಾದ
ಮಹೋದರನು ಮೇಘದಂತಹ ಆನೆಯನ್ನೇರಿ ಮಹಾಪರಾಕ್ರಮಿ ಅಂಗದನ ಮೇಲೆ ವೇಗದಿಂದ ಆಕ್ರಮಣಮಾಡಿದನು.॥2॥
ಮೂಲಮ್ - 3
ಭ್ರಾತೃವ್ಯಸನಸಂತಪ್ತಸ್ತದಾ ದೇವಾಂತಕೋ ಬಲೀ ।
ಆದಾಯ ಪರಿಘಂ ಘೋರಮಂಗದಂ ಸಮಭಿದ್ರವತ್ ॥
ಅನುವಾದ
ತಮ್ಮನು ಸತ್ತು ಹೋದುದರಿಂದ ಸಂತಪ್ತನಾದ ಬಲವಂತ ದೇವಾಂತಕನು ಭಯಾನಕ ಪರಿಘವನ್ನು ಕೈಯ್ಯಲ್ಲೆತ್ತಿಕೊಂಡು ಅಂಗದನನ್ನು ಆಕ್ರಮಿಸಿದನು.॥3॥
ಮೂಲಮ್ - 4
ರಥಮಾದಿತ್ಯ ಸಂಕಾಶಂ ಯುಕ್ತಂ ಪರಮವಾಜಿಭಿಃ ।
ಆಸ್ಥಾಯ ತ್ರಿಶಿರಾ ವೀರೋ ವಾಲಿಪುತ್ರಮಥಾಭ್ಯಗಾತ್ ॥
ಅನುವಾದ
ಹಾಗೆಯೇ ವೀರ ತ್ರಿಶಿರನು ಉತ್ತಮ ಕುದುರೆಗಳನ್ನು ಹೂಡಿದ ಸೂರ್ಯತುಲ್ಯ ತೇಜಸ್ವೀ ರಥವನ್ನೇರಿ ವಾಲಿ ಕುಮಾರನನ್ನು ಎದುರಿಸಲು ಬಂದನು.॥4॥
ಮೂಲಮ್ - 5
ಸ ತ್ರಿಭಿರ್ದೇವದರ್ಪಘ್ನೈ ರಾಕ್ಷಸೇಂದ್ರೈರಭಿದ್ರುತಃ ।
ವೃಕ್ಷಮುತ್ಪಾಟಯಾಮಾಸ ಮಹಾವಿಟಪಮಂಗದಃ ॥
ಮೂಲಮ್ - 6
ದೇವಾಂತಕಾಯ ತಂ ವೀರಶ್ಚಿಕ್ಷೇಪ ಸಹಸಾಂಗದಃ ।
ಮಹಾವೃಕ್ಷಂ ಮಹಾಶಾಖಂ ಶಕ್ರೋ ದೀಪ್ತಾಮಿವಾಶನಿಮ್ ॥
ಅನುವಾದ
ದೇವತೆಗಳ ದರ್ಪವನ್ನು ಮುರಿಯುವ ಆ ಮೂವರು ನಿಶಾಚರರು ಆಕ್ರಮಣಮಾಡಿದಾಗ ವೀರ ಅಂಗದನು ವಿಶಾಲ ರೆಂಬೆಗಳುಳ್ಳ ಒಂದು ವೃಕ್ಷವನ್ನು ಕಿತ್ತು ಕೊಂಡು, ಇಂದ್ರನು ಪ್ರಜ್ವಲಿತ ವಜ್ರಾಯುಧವನ್ನು ಪ್ರಹರಿಸುವಂತೆ ವಾಲಿಕುಮಾರನು ಆ ಮಹಾವೃಕ್ಷದಿಂದ ದೇವಾಂತಕ ನನ್ನು ಪ್ರಹರಿಸಿದನು.॥5-6॥
ಮೂಲಮ್ - 7
ತ್ರಿಶಿರಾಸ್ತಂ ಪ್ರಚಿಚ್ಛೇದ ಶರೈರಾಶೀವಿಷೋಪಮೈಃ ।
ಸ ವೃಕ್ಷಂ ಕೃತ್ತಮಾಲೋಕ್ಯ ಉತ್ಪಪಾತ ತಥಾಂಗದಃ ॥
ಮೂಲಮ್ - 8
ಸ ವವರ್ಷ ತತೋ ವೃಕ್ಷಾನ್ ಶಿಲಾಶ್ಚ ಕಪಿಕುಂಜರಃ ।
ತಾನ್ಪ್ರಚಿಚ್ಛೇದ ಸಂಕ್ರುದ್ಧಸ್ತ್ರಿಶಿರಾ ನಿಶಿತೈಃ ಶರೈಃ ॥
ಅನುವಾದ
ಆದರೆ ತ್ರಿಶಿರನು ವಿಷಧರ ಸರ್ಪಗಳಂತಿರುವ ಭಯಂಕರ ಬಾಣವನ್ನು ಹೂಡಿ ಆ ವೃಕ್ಷವನ್ನು ಕತ್ತರಿಸಿಬಿಟ್ಟನು. ವೃಕ್ಷವು ಪುಡಿಯಾದುದನ್ನು ನೋಡಿ ಕಪಿಕುಂಜರ ಅಂಗದನು ತತ್ಕಾಲ ಆಕಾಶಕ್ಕೆ ನೆಗೆದು ತ್ರಿಶಿರನ ಮೇಲೆ ವೃಕ್ಷಗಳ ಮತ್ತು ಶಿಲೆಗಳ ಮಳೆಗರೆದನು. ಆದರೆ ಕ್ರೋಧಗೊಂಡ ತ್ರಿಶಿರನು ಹರಿತ ಬಾಣಗಳಿಂದ ಅವನ್ನು ತುಂಡರಿಸಿ ಬೀಳಿಸಿದನು.॥7-8॥
ಮೂಲಮ್ - 9
ಪರಿಘಾಗ್ರೇಣ ತಾನ್ವೃಕ್ಷಾನ್ ಬಭಂಜ ಸ ಮಹೋದರಃ ।
ತ್ರಿಶಿರಾಶ್ಚಾಂಗದಂ ವೀರಮಭಿದುದ್ರಾವ ಸಾಯಕೈಃ ॥
ಅನುವಾದ
ಮಹೋದರನು ತನ್ನ ಪರಿಘದಿಂದ ಆ ವೃಕ್ಷಗಳನ್ನು ಮುರಿದು ಹಾಕಿದನು. ಬಳಿಕ ಬಾಣಗಳ ಮಳೆಗರೆದು ಅಂಗದನನ್ನು ಆಕ್ರಮಿಸಿದನು.॥9॥
ಮೂಲಮ್ - 10
ಗಜೇನ ಸಮಭಿದ್ರುತ್ಯ ವಾಲಿಪುತ್ರಂ ಮಹೋದರಃ ।
ಜಘಾನೋರಸಿ ಸಂಕ್ರುದ್ಧಸ್ತೋಮರೈರ್ವಜ್ರ ಸಂನಿಭೈಃ ॥
ಅನುವಾದ
ಜೊತೆಗೆ ಕುಪಿತನಾದ ಮಹೋದರನು ಆನೆಯ ಮೂಲಕ ಆಕ್ರಮಣ ಮಾಡಿ ವಾಲಿಕುಮಾರನ ಎದೆಗೆ ವಜ್ರತುಲ್ಯ ತೋಮರಗಳನ್ನು ಪ್ರಹರಿಸಿದನು.॥10॥
ಮೂಲಮ್ - 11
ದೇವಾಂತಕಶ್ಚ ಸಂಕ್ರುದ್ಧಃ ಪರಿಘೇಣ ತದಾಂಗದಮ್ ।
ಉಪಗಮ್ಯಾಭಿಹತ್ಯಾಶು ವ್ಯಪಚಕ್ರಾಮ ವೇಗವಾನ್ ॥
ಅನುವಾದ
ಹೀಗೆಯೇ ದೇವಾಂತಕನೂ ಅಂಗದನು ಬಳಿಗೆ ಬಂದು ಅತ್ಯಂತ ಕ್ರೋಧದಿಂದ ಪರಿಘದಿಂದ ಅವನಿಗೆ ಹೊಡೆದು ತತ್ಕ್ಷಣ ವೇಗವಾಗಿ ಅಲ್ಲಿಂದ ದೂರಹೋದನು.॥11॥
ಮೂಲಮ್ - 12
ಸ ತ್ರಿಭಿರ್ನೈರ್ಋತಶ್ರೇಷ್ಠೈರ್ಯುಗಪತ್ ಸಮಭಿದ್ರುತಃ ।
ನ ವಿವ್ಯಥೇ ಮಹಾತೇಜಾ ವಾಲಿಪುತ್ರಃ ಪ್ರತಾಪವಾನ್ ॥
ಅನುವಾದ
ಆ ಮೂವರೂ ಪ್ರಮುಖ ನಿಶಾಚರರು ಒಟ್ಟಿಗೆ ಆಕ್ರಮಿಸಿದರೂ ಮಹಾತೇಜಸ್ವೀ, ಪ್ರತಾಪಿ ವಾಲಿಕುಮಾರ ಅಂಗದನ ಮನಸ್ಸಿಗೆ ಕೊಂಚವೂ ವ್ಯಥೆಯಾಗಲಿಲ್ಲ.॥12॥
ಮೂಲಮ್ - 13
ಸ ವೇಗವಾನ್ ಮಹಾವೇಗಂ ಕೃತ್ವಾ ಪರಮದುರ್ಜಯಃ ।
ತಲೇನ ಸಮಭಿದ್ರುತ್ಯ ಜಘಾನಾಸ್ಯ ಮಹಾಗಜಮ್ ॥
ಅನುವಾದ
ಅಂಗದನು ಅತ್ಯಂತ ದುರ್ಜಯ, ವೇಗಶಾಲಿಯಾಗಿದ್ದನು. ಅವನು ಮಹೋದರನ ಮಹಾಗಜದ ಮೇಲೆ ಆಕ್ರಮಣ ಮಾಡಿ ಅದಕ್ಕೆ ವೇಗವಾಗಿ ಒಂದು ಅಂಗೈ ಏಟುಕೊಟ್ಟನು.॥13॥
ಮೂಲಮ್ - 14
ತಸ್ಯ ತೇನ ಪ್ರಹಾರೇಣ ನಾಗರಾಜಸ್ಯ ಸಂಯುಗೇ ।
ಪೇತತುರ್ನಯನೇ ತಸ್ಯ ವಿನನಾಶ ಸ ಕುಂಜರಃ ॥
ಅನುವಾದ
ಯುದ್ಧದಲ್ಲಿ ಆ ಪ್ರಹಾರದಿಂದ ಆನೆಯ ಎರಡು ಕಣ್ಣು ಹೊರಬಂದು ನೆಲಕ್ಕೆ ಬಿದ್ದು ಸತ್ತುಹೋಯಿತು.॥14॥
ಮೂಲಮ್ - 15
ವಿಷಾಣಂ ಚಾಸ್ಯ ನಿಷ್ಕೃಷ್ಯ ವಾಲಿಪುತ್ರೋ ಮಹಾಬಲಃ ।
ದೇವಾಂತಕಮಭಿದ್ರುತ್ಯ ತಾಡಯಾಮಾಸ ಸಂಯುಗೇ ॥
ಅನುವಾದ
ಮತ್ತೆ ಮಹಾಬಲಿ ವಾಲಿಕುಮಾರನು ಆ ಆನೆಯ ಒಂದು ದಂತವನ್ನು ಕಿತ್ತುಕೊಂಡು, ಧಾವಿಸಿಹೋಗಿ ಅದರಿಂದ ದೇವಾಂತಕನಿಗೆ ಪ್ರಹರಿಸಿದನು.॥15॥
ಮೂಲಮ್ - 16
ಸ ವಿಹ್ವಲಸ್ತು ತೇಜಸ್ವೀ ವಾತೋದ್ದೂತ ಇವ ದ್ರುಮಃ ।
ಲಾಕ್ಷಾರಸಸವರ್ಣಂ ಚ ಸುಸ್ರಾವ ರುಧಿರಂ ಮಹತ್ ॥
ಅನುವಾದ
ತೇಜಸ್ವೀ ದೇವಾಂತಕನು ಆ ಪ್ರಹಾರದಿಂದ ವ್ಯಾಕುಲನಾಗಿ ವಾಯುವಿನಿಂದ ಕಂಪಿಸುವ ವೃಕ್ಷದಂತೆ ನಡುಗತೊಡಗಿದನು. ಅವನ ಶರೀರದಿಂದ ಲಾವಾರಸದಂತೆ ರಕ್ತದ ಹೊಳೆಯೇ ಹರಿಯಿತು.॥16॥
ಮೂಲಮ್ - 17
ಅಥಾಶ್ವಾಸ್ಯ ಮಹಾತೇಜಾಃ ಕೃಚ್ಛ್ರಾದ್ದೇವಾಂತಕೋ ಬಲೀ ।
ಆವಿಧ್ಯ ಪರಿಘಂ ವೇಗಾದಾಜಘಾನ ತದಾಂಗದಮ್ ॥
ಅನುವಾದ
ಅನಂತರ ಮಹಾತೇಜಸ್ವಿ ಬಲವಂತ ದೇವಾಂತಕನು ಕಷ್ಟದಿಂದ ತನ್ನನ್ನು ಸಾವರಿಸಿಕೊಂಡು, ಪರಿಘವನ್ನು ಎತ್ತಿಕೊಂಡು ವೇಗವಾಗಿ ತಿರುಗಿಸಿ ಅಂಗದನ ಮೇಲೆ ಹೊಡೆದನು.॥17॥
ಮೂಲಮ್ - 18
ಪರಿಘಾಭಿಹತಶ್ಚಾಪಿ ವಾನರೇಂದ್ರಾತ್ಮಜಸ್ತದಾ ।
ಜಾನುಭ್ಯಾಂ ಪತಿತೋಭೂಮೌ ಪುನರೇವೋತ್ಪಪಾತ ಹ ॥
ಅನುವಾದ
ಆ ಪರಿಘದ ಏಟಿನಿಂದ ವಾನರರಾಜಕುಮಾರ ಅಂಗದನು ನೆಲಕ್ಕೆ ಮಂಡಿ ಊರಿ, ಮತ್ತೆ ಕೂಡಲೇ ಮೇಲಕ್ಕೆ ನೆಗೆದನು.॥18॥
ಮೂಲಮ್ - 19
ತಮುತ್ಪತಂತಂ ತ್ರಿಶಿರಾಸ್ತ್ರಿಭಿರ್ಬಾಣೈರಜಿಹ್ಮಗೈಃ ।
ಘೋರೈರ್ಹರಿಪತೇಃ ಪುತ್ರಂ ಲಲಾಟೇಽಭಿಜಘಾನ ಹ ॥
ಅನುವಾದ
ನೆಗೆಯುವಾಗ ತ್ರಿಶಿರನು ಹರಿತವಾದ ಭಯಂಕರ ಬಾಣಗಳಿಂದ ಅಂಗದನ ಹಣೆಗೆ ಹೊಡೆದನು.॥19॥
ಮೂಲಮ್ - 20
ತತೋಂಽಗದಂ ಪರಿಕ್ಷಿಪ್ತಂ ತ್ರಿಭಿರ್ನೈರ್ಋತಪುಂಗವೈಃ ।
ಹನುಮಾನಥ ವಿಜ್ಞಾಯ ನೀಲಶ್ಚಾಪಿ ಪ್ರತಸ್ಥತುಃ ॥
ಅನುವಾದ
ಅನಂತರ ಅಂಗದನು ಮೂವರು ರಾಕ್ಷಸರಿಂದ ಸುತ್ತುವರಿದಿರುವನು ಎಂದು ತಿಳಿದು ಹನುಮಂತ ಮತ್ತು ನೀಲನು ಅವನ ಸಹಾಯಕ್ಕಾಗಿ ಧಾವಿಸಿದರು.॥20॥
ಮೂಲಮ್ - 21
ತತಶ್ಚಿಕ್ಷೇಪ ಶೈಲಾಗ್ರಂ ನೀಲಸ್ತ್ರಿಶಿರಸೇ ತದಾ ।
ತದ್ರಾವಣಸುತೋ ಧೀಮಾನ್ಬಿಭೇದ ನಿಶಿತೈಃ ಶರೈಃ ॥
ಅನುವಾದ
ಆಗ ನೀಲನು ತ್ರಿಶಿರನ ಮೇಲೆ ಒಂದು ಪರ್ವತವನ್ನು ಎಸೆದನು. ಆದರೆ ಬುದ್ಧಿವಂತ ಆ ರಾವಣಪುತ್ರನು ತೀಕ್ಷ್ಣಬಾಣಗಳಿಂದ ಅದನ್ನು ಪುಡಿಗೈದನು.॥21॥
ಮೂಲಮ್ - 22
ತದ್ಬಾಣಶತನಿರ್ಭಿನ್ನಂ ವಿದಾರಿತ ಶಿಲಾತಲಮ್ ।
ಸವಿಸ್ಫುಲಿಂಗಂ ಸಜ್ವಾಲಂ ನಿಪಪಾತ ಗಿರೇಃ ಶಿರಃ ॥
ಅನುವಾದ
ಅವನ ನೂರಾರು ಬಾಣಗಳಿಂದ ಪುಡಿಯಾದ ಪರ್ವತ ಎಲ್ಲೆಡೆ ಚೆಲ್ಲಿಹೋಯಿತು. ಮತ್ತು ಆ ಪರ್ವತಶಿಖರವು ಕಿಡಿಗಳನ್ನು ಉಗುಳುತ್ತಾ ಬೆಂಕಿಯ ಜ್ವಾಲೆಯೊಂದಿಗೆ ಪೃಥಿವಿಯ ಮೇಲೆ ಬಿದ್ದುಹೋಯಿತು.॥22॥
ಮೂಲಮ್ - 23
ಸ ವಿಜೃಂಭಿತಮಾಲೋಕ್ಯ ಹರ್ಷಾದ್ದೇವಾಂತಕೋ ಬಲೀ ।
ಪರಿಘೇಣಾಭಿದುದ್ರಾವ ಮಾರುತಾತ್ಮಜಮಾಹವೇ ॥
ಅನುವಾದ
ತನ್ನ ತಮ್ಮನ ಹೆಚ್ಚಿದ ಪರಾಕ್ರಮವನ್ನು ನೋಡಿ ದೇವಾಂತಕನಿಗೆ ಬಹಳ ಹರ್ಷವಾಯಿತು. ಅವನು ಪರಿಘವನ್ನೆತ್ತಿಕೊಂಡು ಯುದ್ಧರಂಗದಲ್ಲಿ ಹನುಮಂತನ ಮೇಲೆ ಆಕ್ರಮಣಮಾಡಿದನು.॥23॥
ಮೂಲಮ್ - 24
ತಮಾಪತಂತಮುತ್ಪತ್ಯ ಹನೂಮಾನ್ ಕಪಿಕುಂಜರಃ ।
ಆಜಘಾನ ತದಾ ಮೂರ್ಧ್ನಿ ವಜ್ರಕಲ್ಪೇನ ಮುಷ್ಟಿನಾ ॥
ಅನುವಾದ
ಅವನು ಬರುತ್ತಿರುವುದನ್ನು ನೋಡಿ ಕಪಿಕುಂಜರ ಹನುಮಂತನು ನೆಗೆದು ತನ್ನ ವಜ್ರದಂತಹ ಮುಷ್ಟಿಯಿಂದ ಅವನ ತಲೆಗೆ ಹೊಡೆದನು.॥24॥
ಮೂಲಮ್ - 25
ಶಿರಸಿ ಪ್ರಾಹರದ್ವೀರಸ್ತದಾ ವಾಯುಸುತೋ ಬಲೀ ।
ನಾದೇನಾ ಕಂಪಯಚ್ಚೈವ ರಾಕ್ಷಸಾನ್ ಸ ಮಹಾಕಪಿಃ ॥
ಅನುವಾದ
ಬಲವಂತ ವಾಯುನಂದನ ಮಹಾಕಪಿ ಹನುಮಂತನು ಆಗ ದೇವಾಂತಕನ ಮಸ್ತಕದಲ್ಲಿ ಪ್ರಹಾರ ಮಾಡಿ, ಭೀಷಣ ಗರ್ಜನೆಯಿಂದ ರಾಕ್ಷಸರನ್ನು ನಡುಗಿಸಿ ಬಿಟ್ಟನು.॥25॥
ಮೂಲಮ್ - 26
ಸ ಮುಷ್ಟಿನಿಷ್ಪಿಷ್ಟವಿಭಿನ್ನಮೂರ್ಧಾ
ನಿರ್ವಾಂತದಂತಾಕ್ಷಿವಿಲಂಬಿಜಿಹ್ವಃ ।
ದೇವಾಂತಕೋ ರಾಕ್ಷಸರಾಜಸೂನು-
ರ್ಗತಾಸುರುರ್ವ್ಯಾಂ ಸಹಸಾ ಪಪಾತ ॥
ಅನುವಾದ
ಅವನ ಮುಷ್ಟಿಯ ಆಘಾತದಿಂದ ದೇವಾಂತಕನ ತಲೆ ಒಡೆದುಹೋಗಿ ಪುಡಿಯಾಯಿತು. ಹಲ್ಲು, ಕಣ್ಣುಗಳು, ನಾಲಿಗೆ ಹೊರಬಂದು ಆ ರಾಕ್ಷಸ ರಾಜಕುಮಾರ ಪ್ರಾಣಶೂನ್ಯವಾಗಿ ನೆಲಕ್ಕೆ ಬಿದ್ದುಹೋದನು.॥26॥
ಮೂಲಮ್ - 27
ತಸ್ಮಿನ್ ಹತೇ ರಾಕ್ಷಸಯೋಧಮುಖ್ಯೇ
ಮಹಾಬಲೇ ಸಂಯತಿ ದೇವಶತ್ರೌ ।
ಕ್ರುದ್ಧಸ್ತ್ರಿಶೀರ್ಷಾ ನಿಶಿತಾಸ್ತ್ರಮುಗ್ರಂ
ವವರ್ಷ ನೀಲೋರಸಿ ಬಾಣವರ್ಷಮ್ ॥
ಅನುವಾದ
ರಾಕ್ಷಸಯೋಧರಲ್ಲಿ ಪ್ರಧಾನ ನಾದ ಮಹಾಬಲಿ ದೇವದ್ರೋಹಿ ದೇವಾಂತಕನು ಯುದ್ಧದಲ್ಲಿ ಸತ್ತುಹೋದಾಗ ತ್ರಿಶಿರನಿಗೆ ಭಾರೀ ಕ್ರೋಧವುಂಟಾಗಿ ಅವನು ನೀಲನ ಎದೆಗೆ ಹರಿತವಾದ ಬಾಣಗಳ ಭಯಂಕರ ಮಳೆಗರೆದನು.॥27॥
ಮೂಲಮ್ - 28
ಮಹೋದರಸ್ತು ಸಂಕ್ರುದ್ಧಃ ಕುಂಜರಂ ಪರ್ವತೋಪಮಮ್ ।
ಭೂಯಃ ಸಮಧಿರುಹ್ಯಾಶು ಮಂದರಂ ರಶ್ಮಿವಾನಿವ ॥
ಅನುವಾದ
ಅನಂತರ ಅತ್ಯಂತ ಕ್ರೋಧಗೊಂಡ ಮಹೋದರನು ಪುನಃ ಒಂದು ಪರ್ವತಾಕಾರ ಆನೆಯ ಮೇಲೆ ಸೂರ್ಯನು ಮಂದರಾಚಲದಲ್ಲಿ ಆರೂಢನಾದಂತೆ ಏರಿ ಕುಳಿತನು.॥28॥
ಮೂಲಮ್ - 29
ತತೋ ಬಾಣಮಯಂ ವರ್ಷಂ ನೀಲಸ್ಯೋಪರ್ಯಪಾತಯತ್ ।
ಗಿರೌ ವರ್ಷಂ ತಡಿಚ್ಚಕ್ರಚಾಪವಾನಿವ ತೋಯದಃ ॥
ಅನುವಾದ
ಆನೆಯನ್ನೇರಿ ಅವನು ನೀಲನ ಮೇಲೆ, ಕಾಮನ ಬಿಲ್ಲು ಹಾಗೂ ಸಿಡಿಲಿನಿಂದ ಕೂಡಿದ ಮೇಘಗಳು ಪರ್ವತದ ಮೇಲೆ ಮಳೆಗರೆಯುವಂತೆ ಬಾಣಗಳ ಮಳೆ ಸುರಿಸಿದನು.॥29॥
ಮೂಲಮ್ - 30
ತತಃ ಶರೌಘೈರಭಿವೃಷ್ಯಮಾಣೋ
ವಿಭಿನ್ನಗಾತ್ರಃ ಕಪಿಸೈನ್ಯಪಾಲಃ ।
ನೀಲೋ ಬಭೂವಾಥ ವಿಸೃಷ್ಟಗಾತ್ರೋ
ವಿಷ್ಟಂಭಿತಸ್ತೇನ ಮಹಾಬಲೇನ ॥
ಅನುವಾದ
ಬಾಣಗಳ ನಿರಂತರ ವರ್ಷಾದಿಂದ ವಾನರ ಸೇನಾಪತಿ ನೀಲನ ಶರೀರವೆಲ್ಲ ಕ್ಷತ-ವಿಕ್ಷತವಾಯಿತು. ಅವನ ಶರೀರ ಶಿಥಿಲವಾಯಿತು. ಹೀಗೆ ಮಹಾಬಲಿ ಮಹೋದರನು ಅವನನ್ನು ಮೂರ್ಛಿತಗೊಳಿಸಿ, ಅವನ ಬಲ ಪರಾಕ್ರಮವನ್ನು ಕುಂಠಿತಗೊಳಿಸಿದನು.॥30॥
ಮೂಲಮ್ - 31
ತತಸ್ತು ನೀಲಃ ಪ್ರತಿಲಭ್ಯ ಸಂಜ್ಞಃ
ಶೈಲಂ ಸಮುತ್ಪಾಟ್ಯ ಸವೃಕ್ಷಷಂಡಮ್ ।
ತತಃ ಸಮುತ್ಪತ್ಯ ಮಹೋಗ್ರವೇಗೋ
ಮಹೋದರಂ ತೇನ ಜಘಾನ ಮೂರ್ಧ್ನಿ ॥
ಅನುವಾದ
ಅನಂತರ ಎಚ್ಚರಗೊಂಡ ನೀಲನು ವೃಕ್ಷಸಮೂಹಗಳಿಂದ ಒಂದು ಪರ್ವತ ಶಿಖರವನ್ನು ಕಿತ್ತುಕೊಂಡನು. ಮಹಾವೇಗಶಾಲಿಯಾದ ಅವನು ನೆಗೆದು ಮಹೋದರನ ಮಸ್ತಕದಲ್ಲಿ ಆ ವೃಕ್ಷವನ್ನು ಅಪ್ಪಳಿಸಿದನು.॥3.॥
ಮೂಲಮ್ - 32
ತತಃ ಸ ಶೈಲೇಭಿನಿಪಾತಭಗ್ನೋ
ಮಹೋದರಸ್ತೇನ ಮಹಾದ್ವಿಪೇನ ।
ವ್ಯಾಮೋಹಿತೋ ಭೂಮಿತಲೇ ಗತಾಸುಃ
ಪಪಾತ ವಜ್ರಾಭಿಹತೋ ಯಥಾದ್ರಿಃ ॥
ಅನುವಾದ
ಆ ಪರ್ವತ ಶಿಖರದ ಆಘಾತದಿಂದ ಮಹೋದರನು ಆನೆಯೊಂದಿಗೆ ನುಚ್ಚುನೂರಾಗಿ, ಪ್ರಾಣಶೂನ್ಯನಾಗಿ ವಜ್ರದಿಂದ ಹೊಡೆದ ಪರ್ವತದಂತೆ ಪೃಥಿಯಲ್ಲಿ ಉರುಳಿಹೋದನು.॥32॥
ಮೂಲಮ್ - 33
ಪಿತೃವ್ಯಂ ನಿಹತಂ ದೃಷ್ಟ್ವಾತ್ರಿಶಿರಾಶ್ಚಾಪಮಾದದೇ ।
ಹನೂಮಂತಂ ಚ ಸಂಕ್ರುದ್ಧೋ ವಿವ್ಯಾಧ ನಿಶಿತೈಃ ಶರೈಃ ॥
ಅನುವಾದ
ಚಿಕ್ಕಪ್ಪನು ಸತ್ತು ಹೋದುದನ್ನು ನೋಡಿ ತ್ರಿಶಿರನು ಸಿಟ್ಟಿನಿಂದ ಕೆಂಡಾಮಂಡಲ ನಾದನು. ಅವನು ಕೈಯಲ್ಲಿ ಧನುಸ್ಸನ್ನೆತ್ತಿ ಕೊಂಡು ತೀಕ್ಷ್ಣ ಬಾಣಗಳಿಂದ ಹನುಮಂತನನ್ನು ಹೊಡೆಯತೊಡಗಿದನು.॥33॥
ಮೂಲಮ್ - 34
ಸ ವಾಯುಸೂನುಃ ಕುಪಿತಶ್ಚಿಕ್ಷೇಪ ಶಿಖರಂ ಗಿರೇಃ ।
ತ್ರಿಶಿರಾಸ್ತಚ್ಛರೈಸ್ತೀಕ್ಷ್ಣೈರ್ಬಿಭೇದ ಬಹುಧಾ ಬಲೀ ॥
ಅನುವಾದ
ಆಗ ಪವನನಂದನನು ಕುಪಿತನಾಗಿ ರಾಕ್ಷಸನ ಮೇಲೆ ಪರ್ವತಾಕಾರ ಶಿಲೆಯನ್ನು ಎಸೆದನು. ಆದರೆ ಬಲವಂತ ತ್ರಿಶಿರನು ತನ್ನ ಹರಿತ ಬಾಣಗಳಿಂದ ಅದನ್ನು ಪುಡಿಮಾಡಿ ಬಿಟ್ಟನು.॥34॥
ಮೂಲಮ್ - 35
ತದ್ವ್ಯರ್ಥಂ ಶಿಖರಂ ದೃಷ್ಟ್ವಾ ದ್ರುಮವರ್ಷಂ ತದಾಕಪಿಃ ।
ವಿಸಸರ್ಜ ರಣೇ ತಸ್ಮಿನ್ ರಾವಣಸ್ಯ ಸುತಂ ಪ್ರತಿ ॥
ಅನುವಾದ
ಆ ಪರ್ವತ ಪ್ರಹಾರ ವ್ಯರ್ಥವಾದುದನ್ನು ನೋಡಿ, ಕಪಿವರ ಹನುಮಂತನು ರಣರಂಗದಲ್ಲಿ ರಾವಣ ಪುತ್ರ ತ್ರಿಶಿರನ ಮೇಲೆ ವೃಕ್ಷಗಳ ಮಳೆಯನ್ನು ಪ್ರಾರಂಭಿಸಿದನು.॥35॥
ಮೂಲಮ್ - 36
ತಮಾಪತಂತಮಾಕಾಶೇ ದ್ರುಮವರ್ಷಂ ಪ್ರತಾಪವಾನ್ ।
ತ್ರಿಶಿರಾ ನಿಶಿತೈರ್ಬಾಣೈಶ್ಚಿಚ್ಛೇದ ಚ ನನಾದ ಚ ॥
ಅನುವಾದ
ಆದರೂ ಪ್ರತಾಪಿ ತ್ರಿಶಿರನು ಆಕಾಶದಿಂದ ಬೀಳುವ ವೃಕ್ಷಗಳ ಮಳೆಯನ್ನು ತನ್ನ ನಿಶಿತ ಬಾಣಗಳಿಂದ ಭಿನ್ನಭಿನ್ನಗೊಳಿಸಿ ಜೋರಾಗಿ ಗರ್ಜಿಸಿದನು.॥36॥
ಮೂಲಮ್ - 37
ಹನೂಮಾಂಸ್ತು ಸಮುತ್ಪತ್ಯ ಹಯಂ ಸ್ತ್ರಿಶಿರಸಸ್ತದಾ ।
ವಿದದಾರ ನಖೈಃ ಕ್ರುದ್ಧೋ ಗಜೇಂದ್ರಂ ಮೃಗರಾಡಿವ ॥
ಅನುವಾದ
ಆಗ ಹನುಮಂತನು ಹಾರಿ ತ್ರಿಶಿರನ ಬಳಿಗೆ ಹೋಗಿ, ಕುಪಿತವಾದ ಸಿಂಹವು ಆನೆಯನ್ನು ಸೀಳಿಹಾಕುವಂತೆ ರೋಷಗೊಂಡು ತ್ರಿಶಿರನ ಕುದುರೆಯನ್ನು ತನ್ನ ಹರಿತವಾದ ಉಗುರುಗಳಿಂದ ಸೀಳಿಹಾಕಿದನು.॥37॥
ಮೂಲಮ್ - 38
ಅಥ ಶಕ್ತಿಂ ಸಮಾಸಾದ್ಯ ಕಾಲರಾತ್ರಿಮಿವಾಂತಕಃ ।
ಚಿಕ್ಷೇಪಾನಿಲಪುತ್ರಾಯ ತ್ರಿಶಿರಾ ರಾವಣಾತ್ಮಜಃ ॥
ಅನುವಾದ
ಇದನ್ನು ನೋಡಿ ರಾವಣಪುತ್ರ ತ್ರಿಶಿರನು-ಯಮರಾಜನ ಕಾಲರಾತ್ರಿಯನ್ನು ಜೊತೆಗಿರಿಸಿಕೊಂಡಂತೆ ಶಕ್ತಿಯೊಂದನ್ನು ಎತ್ತಿಕೊಂಡು ಹನುಮಂತನ ಮೇಲೆ ಪ್ರಯೋಗಿಸಿದನು.॥38॥
ಮೂಲಮ್ - 39
ದಿವಃಕ್ಷಿಪ್ತಾ ಮಿವೋಲ್ಕಾಂ ತಾಂ ಶಕ್ತಿಂ ಕ್ಷಿಪ್ತಾಮಸಂಗತಾಮ್ ।
ಗೃಹೀತ್ವಾ ಹರಿಶಾರ್ದೂಲೋ ಬಭಂಜ ಚ ನನಾದ ಚ ॥
ಅನುವಾದ
ಆಕಾಶದಲ್ಲಿ ಉಲ್ಕಾ ಪಾತವಾದಂತೆ ಆ ಶಕ್ತಿಯ ಗತಿ ಕುಂಠಿತವಾಗದೆ ತನ್ನ ಕಡೆಗೆ ಬರುತ್ತಿರುವುದನ್ನು ನೋಡಿ ಹನುಮಂತನು ಅದನ್ನು ಕೈಯಿಂದ ಹಿಡಿದುಮುರಿದು ಹಾಕಿ ಭಯಂಕರ ಗರ್ಜನೆ ಮಾಡಿದನು.॥39॥
ಮೂಲಮ್ - 40
ತಾಂ ದೃಷ್ಟ್ವಾ ಘೋರ ಸಂಕಾಶಾಂ ಶಕ್ತಿಂ ಭಗ್ನಾಂ ಹನೂಮತಾ ।
ಪ್ರಹೃಷ್ಟಾ ವಾನರಗಣಾ ವಿನೇದುರ್ಜಲದಾ ಯಥಾ ॥
ಅನುವಾದ
ಹನುಮಂತನು ಆ ಶಕ್ತಿಯನ್ನು ಮುರಿದುದನ್ನು ನೋಡಿ ವಾನರರು ಹರ್ಷದಿಂದ ಉಲ್ಲಸಿತರಾಗಿ ಮೇಘಗಳಂತೆ ಗರ್ಜನೆ ಮಾಡಿದರು.॥40॥
ಮೂಲಮ್ - 41
ತತಃ ಖಡ್ಗಂ ಸಮುದ್ಯಮ್ಯ ತ್ರಿಶಿರಾ ರಾಕ್ಷಸೋತ್ತಮಃ ।
ನಿಚಖಾನ ತದಾ ಖಡ್ಗಂ ವಾನರೇಂದ್ರಸ್ಯ ವಕ್ಷಸಿ ॥
ಅನುವಾದ
ಆಗ ರಾಕ್ಷಸಶ್ರೇಷ್ಠ ತ್ರಿಶಿರನು ಖಡ್ಗವನ್ನೆತ್ತಿಕೊಂಡು ಕಪಿಶ್ರೇಷ್ಠ ಹನುಮಂತನ ವಕ್ಷಃಸ್ಥದಲ್ಲಿ ಪ್ರಹರಿಸಿದನು.॥41॥
ಮೂಲಮ್ - 42
ಖಡ್ಗ ಪ್ರಹಾರಾಭಿಹತೋ ಹನೂಮಾನ್ಮಾರುತಾತ್ಮಜಃ ।
ಆಜಘಾನ ತ್ರಿಮೂರ್ಧಾನಂ ತಲೇನೋರಸಿ ವೀರ್ಯವಾನ್ ॥
ಅನುವಾದ
ಖಡ್ಗದ ಏಟಿನಿಂದ ಗಾಯಗೊಂಡು ಪರಾಕ್ರಮಿ ವಾಯುನಂದನ ಹನುಮಂತನು ತ್ರಿಶರನ ಎದೆಗೆ ಒಂದು ಏಟು ಬಿಗಿದನು.॥42॥
ಮೂಲಮ್ - 43
ಸ ತಲಾಭಿಹತಸ್ತೇನ ಸ್ರಸ್ತಹಸ್ತಾಯುಧೋ ಭುವಿ ।
ನಿಪಪಾತ ಮಹಾತೇಜಾಸ್ತ್ರಿಶಿರಾಸ್ತ್ಯಕ್ತಚೇತನಃ ॥
ಅನುವಾದ
ಆ ಅಂಗೈ ಏಟು ತಗಲುತ್ತಲೇ ಮಹಾತೇಜಸ್ವೀ ತ್ರಿಶಿರನು ನಿಶ್ಚೇಷ್ಟಿತನಾದನು. ಅವನ ಕೈಯಿಂದ ಆಯುಧ ಜಾರಿಬಿದ್ದು, ಭೂಮಿಗೊರಗಿದನು.॥43॥
ಮೂಲಮ್ - 44
ಸ ತಸ್ಯ ಪತತಃ ಖಡ್ಗಂ ಸಮಾಚ್ಛಿದ್ಯ ಮಹಾಕಪಿಃ ।
ನನಾದ ಗಿರಿಸಂಕಾಶಸ್ತ್ರಾಸಯನ್ ಸರ್ವರಾಕ್ಷಸಾನ್ ॥
ಅನುವಾದ
ರಾಕ್ಷಸನ ಖಡ್ಗವು ಬೀಳುತ್ತಿರುವಾಗ ಪರ್ವತಾಕಾರ ಮಹಾಕಪಿ ಮಾರುತಿಯು ಅದನ್ನು ಕಸಿದುಕೊಂಡು ರಾಕ್ಷಸರೆಲ್ಲರನ್ನು ಭಯಪಡಿಸತೊಡಗಿದನು.॥44॥
ಮೂಲಮ್ - 45
ಅಮೃಷ್ಯಮಾಣಸ್ತಂ ಘೋಷಮುತ್ಪಪಾತ ನಿಶಾಚರಃ ।
ಉತ್ಪತ್ಯ ಚ ಹನೂಮಂತಂ ತಾಡಯಾಮಾಸ ಮುಷ್ಟಿನಾ ॥
ಅನುವಾದ
ಅವನ ಆ ಗರ್ಜನೆಯನ್ನು ಸಹಿಸದೆ ನಿಶಾಚರನು ಕೂಡಲೇ ನೆಗೆದು ನಿಂತುಕೊಂಡನು. ಏಳುತ್ತಲೇ ಅವನು ಹನುಮಂತನಿಗೆ ಒಂದು ಗುದ್ದಿದನು.॥45॥
ಮೂಲಮ್ - 46
ತೇನ ಮುಷ್ಟಿ ಪ್ರಹಾರೇಣ ಸಂಚುಕೋಪ ಮಹಾಕಪಿಃ ।
ಕುಪಿತಶ್ಚ ನಿಜಗ್ರಾಹ ಕಿರೀಟೇ ರಾಕ್ಷಸರ್ಷಭಮ್ ॥
ಅನುವಾದ
ಅವನ ಮುಷ್ಠಿ ಆಘಾತದಿಂದ ಮಹಾಕಪಿ ಹನುಮಂತನಿಗೆ ಭಾರೀ ಕ್ರೋಧವುಂಟಾಯಿತು. ಕುಪಿತನಾಗಿ ಅವನು ಕಿರೀಟಸಹಿತ ರಾಕ್ಷಸನ ಮಸ್ತಕವನ್ನು ಹಿಡಿದುಕೊಂಡನು.॥46॥
ಮೂಲಮ್ - 47
ಸ ತಸ್ಯ ಶೀರ್ಷಾಣ್ಯಸಿನಾ ಶಿತೇನ
ಕಿರೀಟಜುಷ್ಟಾನಿ ಸಕುಂಡಲಾನಿ ।
ಕ್ರುದ್ಧಃ ಪ್ರಚಿಚ್ಛೇದ ಸುತೋಽನಿಲಸ್ಯ
ತ್ವಷ್ಟುಃ ಸುತಸ್ಯೇವ ಶಿರಾಂಸಿ ಶಕ್ರಃ ॥
ಅನುವಾದ
ಹಿಂದೆ ಇಂದ್ರನು ತ್ವಷ್ಟಾನ ಪುತ್ರ ವಿಶ್ವರೂಪನ ಮೂರು ಮಸ್ತಕಗಳನ್ನು ವಜ್ರದಿಂದ ಕತ್ತರಿಸಿದಂತೆ ಕುಪಿತನಾದ ಹನುಮಂತನು ರಾವಣ ಪುತ್ರ ತ್ರಿಶಿರನ ಕಿರೀಟ ಕುಂಡಲಗಳ ಸಹಿತ ಮೂರು ತಲೆಗಳನ್ನು ಹರಿತವಾದ ಖಡ್ಗದಿಂದ ಕತ್ತರಿಸಿ ಹಾಕಿದನು.॥47॥
ಮೂಲಮ್ - 48
ತಾನ್ಯಾಯತಾಕ್ಷಾಣ್ಯಗಸಂನಿಭಾನಿ
ಪ್ರದೀಪ್ತವೈಶ್ಚಾನರಲೋಚನಾನಿ ।
ಪೇತುಃ ಶಿರಾಂಸೀಂದ್ರರಿಪೋಃ ಪೃಥಿವ್ಯಾಂ
ಜ್ಯೋತೀಂಷಿ ಮುಕ್ತಾನಿ ಯಥಾರ್ಕಮಾರ್ಗಾತ್ ॥
ಅನುವಾದ
ಆ ಮಸ್ತಕಗಳ ಇಂದ್ರಿಯಗಳು ವಿಶಾಲವಾಗಿದ್ದ, ಕಣ್ಣುಗಳು ಉರಿಯುವ ಬೆಂಕಿಯಂತೆ ಇದ್ದವು. ಆ ಇಂದ್ರದ್ರೋಹಿ ತ್ರಿಶಿರನ ಮೂರು ತಲೆಗಳು ಆಕಾಶದಿಂದ ಬೀಳುವ ನಕ್ಷತ್ರಗಳಂತೆ ಪೃಥಿವಿಗೆ ಬಿದ್ದು ಬಿಟ್ಟವು.॥48॥
ಮೂಲಮ್ - 49
ತಸ್ಮಿನ್ಹತೇ ದೇವರಿಪೌ ತ್ರಿಶೀರ್ಷೇ
ಹನೂಮತಾ ಶಕ್ರಪರಾಕ್ರಮೇಣ ।
ನೇದುಃ ಪ್ಲವಂಗಾಃ ಪ್ರಚಜಾಲ ಭೂಮೀ
ರಕ್ಷಾಂಸ್ಯಥೋ ದುದ್ರುವಿರೇ ಸಮಂತಾತ್ ॥
ಅನುವಾದ
ದೇವದ್ರೋಹಿ ತ್ರಿಶಿರನು ಇಂದ್ರತುಲ್ಯ ಹನುಮಂತನ ಕೈಯಿಂದ ಹತನಾದಾಗ ಸಮಸ್ತವಾನರು ಹರ್ಷನಾದ ಮಾಡತೊಡಗಿದರು. ಭೂಮಿ ನಡುಗಿತು, ರಾಕ್ಷಸರೆಲ್ಲರೂ ದಿಕ್ಕಾಪಾಲಾಗಿ ಓಡಿಹೋದರು.॥49॥
ಮೂಲಮ್ - 50
ಹತಂ ತ್ರಿಶಿರಸಂ ದೃಷ್ಟ್ವಾ ತಥೈವ ಚ ಮಹೋದರಮ್ ।
ಹತೌ ಪ್ರೇಕ್ಷ್ಯದುರಾಧರ್ಷೌ ದೇವಾಂತಕ ನರಾಂತಕೌ ॥
ಮೂಲಮ್ - 51
ಚುಕೋಪ ಪರಮಾಮರ್ಷೀ ಮತ್ತೋ ರಾಕ್ಷಸಪುಂಗವಃ ।
ಜಗ್ರಾಹಾರ್ಚಿಷ್ಮತೀಂ ಚಾಪಿ ಗದಾಂ ಸರ್ವಾಯಸೀಂ ತದಾ ॥
ಅನುವಾದ
ತ್ರಿಶಿರ ಮತ್ತು ಮಹೋದರನು ಸತ್ತುಹೋದುದನ್ನು ನೋಡಿ, ದುರ್ಜಯ ವೀರ ದೇವಾಂತಕ, ನರಾಂತಕರು ಕಾಲಕ್ಕೆ ತುತ್ತಾದುದನ್ನು ತಿಳಿದ ಅತ್ಯಂತ ಅಸಹನೆಯಿಂದ ರಾಕ್ಷಸ ಶ್ರೇಷ್ಠ ಮತ್ತ (ಮಹಾಪಾರ್ಶ್ವ)ನು ಕುಪಿತನಾದನು. ಅವನು ಒಂದು ಉಕ್ಕಿನ ತೇಜಸ್ವೀ ಗದೆಯನ್ನೆತ್ತಿಕೊಂಡನು.॥50-51॥
ಮೂಲಮ್ - 52
ಹೇಮಪಟ್ಟಪರಿಕ್ಷಿಪ್ತಾಂ ಮಾಂಸ ಶೋಣಿತಫೇನಿಲಾಮ್ ।
ವಿರಾಜಮಾನಾಂ ವಿಪುಲಾಂ ಶತ್ರುಶೋಣಿತ ತರ್ಪಿತಾಮ್ ॥
ಅನುವಾದ
ಅದನ್ನು ಚಿನ್ನದ ತಗಡಿನಿಂದ ಹೊದಿಸಲಾಗಿತ್ತು. ಯುದ್ಧದಲ್ಲಿ ಶತ್ರುಗಳ ರಕ್ತ-ಮಾಂಸಗಳಿಂದ ಒದ್ದೆಯಾಗಿತ್ತು. ವಿಶಾಲ ಆಕಾರದ ಅದು ಸುಂದರ ಶೋಭೆಯಿಂದ ಕೂಡಿದ್ದು, ಶತ್ರುಗಳ ರಕ್ತ ದಿಂದ ತೃಪ್ತವಾಗುತ್ತಿತ್ತು.॥52॥
ಮೂಲಮ್ - 53
ತೇಜಸಾ ಸಂಪ್ರದೀಪ್ತಾಗ್ರಾಂ ರಕ್ತಮಾಲ್ಯ ವಿಭೂಷಿತಾಮ್ ।
ಐರಾವತ ಮಹಾಪದ್ಮಸಾರ್ವಭೌಮ ಭಯಾವಹಾಮ್ ॥
ಅನುವಾದ
ಅದರ ಅಗ್ರಭಾಗ ತೇಜದಿಂದ ಪ್ರಜ್ವಲಿತವಾಗಿತ್ತು. ಕೆಂಪು ಹೂವುಗಳಿಂದ ಅದನ್ನು ಸಿಂಗರಿಸಿತ್ತು. ಅದು ಐರಾವತ, ಪುಂಡರೀಕ, ಸಾರ್ವಭೌಮ ಎಂಬ ದಿಗ್ಗಜರನ್ನು ಭಯಪಡಿಸುವಂತಹುದಾಗಿತ್ತು.॥53॥
ಮೂಲಮ್ - 54
ಗದಾಮಾದಾಯ ಸಂಕ್ರುದ್ಧೋ ಮತ್ತೋ ರಾಕ್ಷಸಪುಂಗವಃ ।
ಹರೀನ್ಸಮಭಿದುದ್ರಾವ ಯುಗಾಂತಾಗ್ನಿರಿವ ಜ್ವಲನ್ ॥
ಅನುವಾದ
ಆ ಗದೆಯನ್ನೆತ್ತಿಕೊಂಡು ಕ್ರೋಧಗೊಂಡ ರಾಕ್ಷಸಶ್ರೇಷ್ಠ ಮತ್ತ (ಮಹಾಪಾರ್ಶ್ವ)ನು ಪ್ರಳಯಕಾಲದ ಅಗ್ನಿಯಂತೆ ಪ್ರಜ್ವಲಿತನಾಗಿ ವಾನರರ ಕಡೆಗೆ ಧಾವಿಸಿದನು.॥54॥
ಮೂಲಮ್ - 55
ಅಥರ್ಷಭಃ ಸಮುತ್ಪತ್ಯ ವಾನರೋ ರಾವಣಾನುಜಮ್ ।
ಮತ್ತಾನೀಕ ಮುಪಾಗಮ್ಯ ತಸ್ಥೌ ತಸ್ಯಾಗ್ರತೋ ಬಲೀ ॥
ಅನುವಾದ
ಆಗ ಋಷಿಭನೆಂಬ ಬಲವಂತ ವಾನರನು ನೆಗೆದು ರಾವಣನ ತಮ್ಮ ಮತ್ತಾನೀಕ (ಮಹಾಪಾರ್ಶ್ವ)ನ ಬಳಿಗೆ ಬಂದು ಅವನ ಎದುರಿಗೆ ನಿಂತುಕೊಂಡನು.॥55॥
ಮೂಲಮ್ - 56
ತಂ ಪುರಸ್ತಾತ್ಸ್ಥಿತಂ ದೃಷ್ಟ್ವಾ ವಾನರಂ ಪರ್ವತೋಪಮಮ್ ।
ಆಜಘಾನೋರಸಿ ಕ್ರುದ್ಧೋ ಗದಯಾ ವಜ್ರಕಲ್ಪಯಾ ॥
ಅನುವಾದ
ಎದುರಿಗೆ ನಿಂತಿರುವ ಪರ್ವತಾಕಾರ ವಾನರವೀರ ಋಷನನನ್ನು ನೋಡಿ ಕುಪಿತನಾದ ಮಹಾಪಾಶ್ವನು ತನ್ನ ವಜ್ರದಂತಹ ಗದೆಯಿಂದ ಅವನ ಎದೆಗೆ ಪ್ರಹರಿಸಿದನು.॥56॥
ಮೂಲಮ್ - 57
ಸ ತಯಾಭಿಹತಸ್ತೇನ ಗದಯಾ ವಾನರರ್ಷಭಃ ।
ಭಿನ್ನವಕ್ಷಾಃ ಸಮಾಧೂತಃ ಸುಸ್ರಾವ ರುಧಿರಂ ಬಹು ॥
ಅನುವಾದ
ಅವನ ಗದಾಘಾತ ದಿಂದ ವಾನರಶ್ರೇಷ್ಠ ಋಷಭನ ವಕ್ಷಃಸ್ಥಳವು ಕ್ಷತ-ವಿಕ್ಷತವಾಯಿತು. ಅವನು ನಡುಗಿಹೋದನು. ಮತ್ತು ಹೆಚ್ಚಾಗಿ ರಕ್ತ ಹರಿಯತೊಡಗಿತು.॥57॥
ಮೂಲಮ್ - 58
ಸ ಸಂಪ್ರಾಪ್ಯ ಚಿರಾತ್ ಸಂಜ್ಞಾಮೃಷಭೋ ವಾನರೇಶ್ವರಃ ।
ಕ್ರುದ್ಧೋ ವಿಸ್ಫುರಮಾಣೌಷ್ಠೋಮಹಾಪಾರ್ಶ್ವ ಮುದೈಕ್ಷತ ॥
ಅನುವಾದ
ಸ್ವಲ್ಪ ಹೊತ್ತಿನಲ್ಲಿ ಎಚ್ಚರಗೊಂಡು ವಾನರರಾಜ ಋಷಭನು ಕುಪಿತನಾಗಿ ಮಹಾ ಪಾಶ್ವನ ಕಡೆಗೆ ನೋಡಿದನು. ಆಗ ಅವನು ತುಟಿಗಳು ಅದುರುತ್ತಿದ್ದವು.॥58॥
ಮೂಲಮ್ - 59
ಸ ವೇಗವಾನ್ ವೇಗವದಭ್ಯುಪೇತ್ಯ
ತಂ ರಾಕ್ಷಸಂ ವಾನರವೀರಮುಖ್ಯಃ ।
ಸಂವರ್ತ್ಯ ಮುಷ್ಟಿಂ ಸಹಸಾ ಜಘಾನ
ಬಾಹ್ವಂತರೇ ಶೈಲನಿಕಾಶರೂಪಃ ॥
ಅನುವಾದ
ವಾನರವೀರರಲ್ಲಿ ಪ್ರಧಾನವಾದ ಋಷಭನ ರೂಪವು ಪರ್ವತದಂತೆ ಕಂಡುಬರುತ್ತಿತ್ತು. ವೇಗಶಾಲಿಯಾದ ಅವನು ವೇಗದಿಂದ ಆ ರಾಕ್ಷಸನ ಬಳಿಗೆ ಹೋಗಿ ಮುಷ್ಟಿಬಿಗಿದು ಅವನ ಎದೆಗೆ ಪ್ರಹರಿಸಿದನು.॥59॥
ಮೂಲಮ್ - 60
ಸ ಕೃತ್ತಮೂಲಃ ಸಹಸೇವ ವೃಕ್ಷಃ
ಕ್ಷಿತೌ ಪಪಾತ ಕ್ಷತಜೋಕ್ಷಿತಾಂಗಃ ।
ತಾಂ ಚಾಸ್ಯ ಘೋರಾಂ ಯಮದಂಡ ಕಲ್ಪಾಂ
ಗದಾಂ ಪ್ರಗೃಹ್ಯಾಶು ತದಾ ನನಾದ ॥
ಅನುವಾದ
ಅದರಿಂದ ಮಹಾಪಾರ್ಶ್ವನು ಬೇರು ತುಂಡಾದ ವೃಕ್ಷದಂತೆ ನೆಲಕ್ಕೆ ಬಿದ್ದು ಬಿಟ್ಟನು. ಅವನ ಸರ್ವಾಂಗವು ರಕ್ತದಿಂದ ತೊಯ್ದು ಹೋಗಿತ್ತು. ಇತ್ತ ಋಷಭನು ಆ ನಿಶಾಚರನ ಯಮದಂಡದಂತೆ ಇದ್ದ ಭಯಂಕರ ಗದೆಯನ್ನು ಶೀಘ್ರವಾಗಿ ಕಿತ್ತುಕೊಂಡು ಜೋರಾಗಿ ಗರ್ಜಿಸತೊಡಗಿದನು.॥60॥
ಮೂಲಮ್ - 61
ಮುಹೂರ್ತಮಾಸೀತ್ ಸ ಗತಾಸುಕಲ್ಪಃ
ಪ್ರತ್ಯಾಗತಾತ್ಮಾ ಸಹಸಾ ಸುರಾರಿಃ ।
ಉತ್ಪತ್ಯ ಸಂಧ್ಯಾಭಸಮಾನವರ್ಣ-
ಸ್ತಂ ವಾರಿರಾಜಾತ್ಮಜಮಾಜಘಾನ ॥
ಅನುವಾದ
ದೇವದ್ರೋಹಿ ಮಹಾಪಾರ್ಶ್ವನು ಮುಹೂರ್ತ ಮಾತ್ರ ಹೆಣದಂತೆ ಬಿದ್ದಿದ್ದನು. ಮತ್ತೆ ಎಚ್ಚರಗೊಂಡು ಅವನು ಕೂಡಲೇ ನೆಗೆದು ನಿಂತುಕೊಂಡನು. ಅವನ ರಕ್ತರಂಜಿತ ಶರೀರವು ಸಂಧ್ಯಾಕಾಲದ ಮೋಡದಂತೆ ಕೆಂಪಾಗಿ ಕಂಡುಬರುತ್ತಿತ್ತು. ಅವನು ವರುಣಪುತ್ರ ಋಷಭನಿಗೆ ಬಲವಾಗಿ ಹೊಡೆದನು.॥61॥
ಮೂಲಮ್ - 62
ಸ ಮೂರ್ಛಿತೋ ಭೂಮಿತಲೇ ಪಪಾತ
ಮುಹೂರ್ತಮುತ್ಪತ್ಯ ಪುನಃ ಸಸಂಜ್ಞಃ ।
ತಾಮೇವ ತಸ್ಯಾದ್ರಿವರಾದ್ರಿಕಲ್ಪಾಂ
ಗದಾಂ ಸಮಾವಿಧ್ಯ ಜಘಾನ ಸಂಖ್ಯೇ ॥
ಅನುವಾದ
ಆ ಏಟಿನಿಂದ ಋಷಭನು ಮೂರ್ಛಿತನಾಗಿ ನೆಲಕ್ಕೆ ಬಿದ್ದನು. ಎರಡು ಗಳಿಗೆಯಲ್ಲಿ ಎಚ್ಚರಗೊಂಡು ಅವನು ಪುನಃ ನೆಗೆದು ಮುಂದೆ ಬಂದು ಯುದ್ಧದಲ್ಲಿ ಪರ್ವತದ ಬಂಡೆಯಂತಿದ್ದ ಮಹಾಪಾಶ್ವದ ಗದೆಯನ್ನು ಗರಗರನೆ ತಿರುಗಿಸುತ್ತಾ ಅವರಿಂದ ನಿರಾಚರನನ್ನು ಪ್ರಹರಿಸಿದನು.॥62॥
ಮೂಲಮ್ - 63
ಸಾ ತಸ್ಯ ರೌದ್ರಾ ಸಮುಪೇತ್ಯ ದೇಹಂ
ರೌದ್ರಸ್ಯ ದೇವಾಧ್ವರವಿಪ್ರಶತ್ರೋಃ ।
ಬಿಭೇದ ವಕ್ಷಃ ಕ್ಷತಜಂ ಚ ಭೂರಿ
ಸುಸ್ರಾವ ಧಾತ್ವಂಭ ಇವಾದ್ರಿ ರಾಜಃ ॥
ಅನುವಾದ
ದೇವತೆ, ಯಜ್ಞ, ಬ್ರಾಹ್ಮಣರ ಶತ್ರುವಾದ ಆ ರೌದ್ರ ರಾಕ್ಷಸನ ಶರೀರದ ಮೇಲೆ ಆ ಭಯಂಕರ ಗದೆಯಿಂದ ಹೊಡೆದು ವಕ್ಷಃಸ್ಥಳವನ್ನು ವಿದೀರ್ಣಗೊಳಿಸಿದನು. ಮತ್ತೆ ಪರ್ವತರಾಜ ಹಿಮಾಲಯವು ಗೈರಿಕಾದಿ ಧಾತುಗಳನ್ನು ಹರಿಸುವಂತೆ ರಾಕ್ಷಸನ ಶರೀರದಿಂದ ರಕ್ತ ಹರಿಯ ತೊಡಗಿತು.॥63॥
ಮೂಲಮ್ - 64½
ಅಭಿದುದ್ರಾವ ವೇಗೇನ ಗದಾಂ ತಸ್ಯ ಮಹಾತ್ಮನಃ ।
ತಾಂ ಗೃಹೀತ್ವಾ ಗದಾಂ ಭೀಮಾಮಾವಿಧ್ಯ ಚ ಪುನಃ ಪುನಃ ॥
ಮತ್ತಾನೀಕಂ ಮಹಾತ್ಮಾ ಸಜಘಾನ ರಣಮೂರ್ಧನಿ ।
ಅನುವಾದ
ಆಗ ಆ ರಾಕ್ಷಸನನು ಮಹಾಮನಾ ಋಷಭನ ಕೈಯಿಂದ ತನ್ನ ಗದೆಯನ್ನು ಕಿತ್ತುಕೊಳ್ಳಲು ಅವನ ಮೇಲೆ ಆಕ್ರಮಣ ಮಾಡಿದನು. ಆದರೆ ಋಷಭನು ಆ ಭಯಾನಕ ಗದೆಯನ್ನು ಪದೇ ಪದೇ ತಿರುಗಿಸುತ್ತಾ, ವೇಗವಾಗಿ ಮಹಾಪಾರ್ಶ್ವನ ಮೇಲೆ ಆಕ್ರಮಣ ಮಾಡಿದನು. ಹೀಗೆ ಆ ಮಹಾಮನಸ್ವೀ ವಾನರವೀರನು ಅದೇ ಗದೆಯಿಂದ ಆ ನಿಶಾಚರನನ್ನು ಸಂಹರಿಸಿಬಿಟ್ಟನು.॥64॥
ಮೂಲಮ್ - 65½
ಸ ಸ್ವಯಾ ಗದಯಾ ಭಗ್ನೋ ವಿಶೀರ್ಣದಶನೇಕ್ಷಣಃ ॥
ನಿಪಪಾತ ತದಾ ಮತ್ತೋ ವಜ್ರಾಹತ ಇವಾಚಲಃ ।
ಅನುವಾದ
ತನ್ನ ಗದೆಯಿಂದಲೇ ಏಟು ತಿಂದು ಮಹಾಪಾಶ್ವನ ಹಲ್ಲುಮುರಿದು, ಕಣ್ಣು ಒಡೆದು ಹೋದವು. ಅವನು ವಜ್ರಪ್ರಹಾರದಿಂದ ಉರುಳುವ ಪರ್ವತ ಶಿಖರದಂತೆ ತತ್ಕಾಲ ಧರಾಶಾಯಿಯಾದನು.॥65॥
ಮೂಲಮ್ - 66
ವಿಶೀರ್ಣನಯನೇ ಭೂಮೌ ಗತಸತ್ತ್ವೇ ಗತಾಯುಷಿ ।
ಪತಿತೇ ರಾಕ್ಷಸೇ ತಸ್ಮಿನ್ವಿದ್ರುತಂ ರಕ್ಷಸಾಂ ಬಲಮ್ ॥
ಅನುವಾದ
ಕಣ್ಣುಗಳು ನಾಶವಾಗಿ, ಚೈತನ್ಯ ಉಡುಗಿ ಆ ರಾಕ್ಷಸ ಮಹಾಪಾರ್ಶ್ವನು ಸತ್ತು ನೆಲಕ್ಕೆ ಬಿದ್ದಾಗ ರಾಕ್ಷಸರ ಸೈನ್ಯವು ದಿಕ್ಕಾಪಾಲಾಗಿ ಓಡಿಹೋಯಿತು.॥66॥
ಮೂಲಮ್ - 67
ತಸ್ಮಿನ್ ಹತೇ ಭ್ರಾತರಿ ರಾವಣಸ್ಯ
ತನ್ನೈರ್ಋತಾನಾಂ ಬಲಮರ್ಣವಾಭಮ್ ।
ತ್ಯಕ್ತಾಯುಧಂ ಕೇವಲ ಜೀವಿತಾರ್ಥಂ
ದುದ್ರಾವ ಭಿನ್ನಾರ್ಣವಸಂನಿಕಾಶಮ್ ॥
ಅನುವಾದ
ರಾವಣನ ತಮ್ಮ ಮಹಾಪಾಶ್ವನ ವಧೆಯಾದಾಗ ಸಮುದ್ರದಂತಹ ರಾಕ್ಷಸರ ವಿಶಾಲ ಸೈನ್ಯವು ಆಯುಧಗಳನ್ನು ಎಸೆದು, ಪ್ರಾಣ ಉಳಿಸಿಕೊಳ್ಳಲು, ಆಣೆಕಟ್ಟು ಒಡೆದು ನೀರು ಎಲ್ಲೆಡೆ ಹರಿಯುವಂತೆ ಕಂಡ ಕಂಡ ಕಡೆಗೆ ಓಡತೊಡಗಿದರು.॥67॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಎಪ್ಪತ್ತನೆಯ ಸರ್ಗ ಪೂರ್ಣವಾಯಿತು.॥70॥