०६९ नरान्तकवधः

वाचनम्
ಭಾಗಸೂಚನಾ

ರಾವಣನ ಮಕ್ಕಳು ಮತ್ತು ಸಹೋದರರು ಯುದ್ಧಕ್ಕೆ ಹೋದುದು, ಅಂಗದನಿಂದ ನರಾಂತಕನ ಸಂಹಾರ

ಮೂಲಮ್ - 1

ಏವಂ ವಿಲಪಮಾನಸ್ಯ ರಾವಣಸ್ಯ ದುರಾತ್ಮನಃ ।
ಶ್ರುತ್ವಾ ಶೋಕಾಭಿಭೂತಸ್ಯ ತ್ರಿಶಿರಾ ವಾಕ್ಯಮಬ್ರವೀತ್ ॥

ಅನುವಾದ

ದುರಾತ್ಮನಾದ ರಾವಣನು ಶೋಕಪೀಡಿತನಾಗಿ ಹೀಗೆ ವಿಲಾಪ ಮಾಡುತ್ತಿರುವಾಗ ಶ್ರಿಶಿರನು ಹೇಳಿದನು-॥1॥

ಮೂಲಮ್ - 2

ಏವಮೇವ ಮಹಾವೀರ್ಯೋ ಹತೋ ನಸ್ತಾತಮಧ್ಯಮಃ ।
ನ ತು ಸತ್ಪುರುಷಾ ರಾಜನ್ವಿಲಪಂತಿ ಯಥಾ ಭವಾನ್ ॥

ಅನುವಾದ

ರಾಜನೇ! ನಮ್ಮ ಚಿಕ್ಕಪ್ಪನಾದ ಮಹಾವೀರ್ಯವಂತನಾಗಿದ್ದರೂ ಈಗ ಯುದ್ಧದಲ್ಲಿ ಹತನಾದುದರಲ್ಲಿ ಸಂದೇಹವಿಲ್ಲ. ಆದರೆ ನೀವು ಅಳುತ್ತಾ ಪ್ರಲಾಪಿಸಿದಂತೆ ಶ್ರೇಷ್ಠಪುರುಷರು ವಿಲಾಪ ಮಾಡುವುದಿಲ್ಲ.॥.॥

ಮೂಲಮ್ - 3

ನೂನಂ ತ್ರಿಭುವನಸ್ಯಾಪಿ ಪರ್ಯಾಪ್ತಸ್ತ್ವಮಸಿ ಪ್ರಭೋ ।
ಸ ಕಸ್ಮಾತ್ಪ್ರಾಕೃತ ಇವ ಶೋಚಸ್ಯಾತ್ಮಾನಮೀದೃಶಮ್ ॥

ಅನುವಾದ

ಪ್ರಭೋ! ನಿಶ್ಚಯವಾಗಿ ಮೂರು ಲೋಕಗಳನ್ನು ಎದುರಿಸಿ ನಿಲ್ಲುವ ಸಾಮರ್ಥ್ಯ ನಿಮ್ಮಲ್ಲಿದೆ. ಹಾಗಿರುವಾಗ ಹೀಗೆ ಸಾಧಾರಣ ಪುರುಷರಂತೆ ಏಕೆ ಶೋಕಿಸುತ್ತಿರುವಿರಿ.॥3॥

ಮೂಲಮ್ - 4

ಬ್ರಹ್ಮದತ್ತಾಸ್ತಿ ತೇ ಶಕ್ತಿಃ ಕವಚಂ ಸಾಯಕೋ ಧನುಃ ।
ಸಹಸ್ರಖರ ಸಂಯುಕ್ತೋ ರಥೋ ಮೇಘಸಮಸ್ವನಃ ॥

ಅನುವಾದ

ಬ್ರಹ್ಮದೇವರು ಕೊಟ್ಟಿರುವ ಶಕ್ತಿ, ಕವಚ, ಧನುರ್ಬಾಣಗಳು ನಿಮ್ಮಲ್ಲಿವೆ; ಜೊತೆಗೆ ಮೇಘಗರ್ಜನೆಯಂತೆ ಶಬ್ದ ಮಾಡುವ ರಥವೂ ಇದೆ. ಅದಕ್ಕೆ ಒಂದು ಸಾವಿರ ಕತ್ತೆಗಳನ್ನು ಕಟ್ಟಲಾಗುತ್ತದೆ.॥4॥

ಮೂಲಮ್ - 5

ತ್ವಯಾಸಕೃದ್ಧಿಶಸ್ತ್ರೇಣ ವಿಶಸ್ತಾ ದೇವದಾನವಾಃ ।
ಸ ಸರ್ವಾಯುಧಸಂಪನ್ನೋ ರಾಘವಂ ಶಾಸ್ತುಮರ್ಹಸಿ ॥

ಅನುವಾದ

ನೀವು ಒಂದೇ ಶಸ್ತ್ರದಿಂದ ದೇವ-ದಾನವರನ್ನು ಅನೇಕ ಸಲ ಪರಾಜಯಗೊಳಿಸಿರುವಿರಿ. ಆದ್ದರಿಂದ ಎಲ್ಲ ಪ್ರಕಾರದ ಅಸ್ತ್ರ-ಶಸ್ತ್ರಗಳಿಂದ ಸುಸಜ್ಜಿತನಾದ್ದರಿಂದ ನೀವು ರಾಮನನ್ನು ದಂಡಿಸಬಲ್ಲಿರಿ.॥5॥

ಮೂಲಮ್ - 6

ಕಾಮಂ ತಿಷ್ಠ ಮಹಾರಾಜ ನಿರ್ಗಮಿಷ್ಯಾಮ್ಯಹಂ ರಣೇ ।
ಉದ್ಧರಿಷ್ಯಾಮಿ ತೇ ಶತ್ರೂನ್ ಗರುಡಃ ಪನ್ನಗಾನಿವ ॥

ಅನುವಾದ

ಮಹಾರಾಜ! ಅಥವಾ ನಿಮಗೆ ಇಚ್ಛೆ ಇದ್ದರೆ ಇಲ್ಲೇ ಇರಿ. ನಾನು ಸ್ವತಃ ಯುದ್ಧಕ್ಕೆ ಹೋಗುವೆನು ಹಾಗೂ ಗರುಡನು ಸರ್ಪಗಳನ್ನು ಸಂಹರಿಸುವಂತೆ ನಮ್ಮ ಶತ್ರುಗಳನ್ನು ಬೇರುಸಹಿತ ಕಿತ್ತು ಬಿಸುಡುವೆನು.॥6॥

ಮೂಲಮ್ - 7

ಶಂಬರೋ ದೇವರಾಜೇನ ನರಕೋ ವಿಷ್ಣುನಾ ಯಥಾ ।
ತಥಾದ್ಯ ಶಯಿತಾ ರಾಮೋ ಮಯಾ ಯುಧಿ ನಿಪಾತಿತಃ ॥

ಅನುವಾದ

ಇಂದ್ರನು ಶಂಬರಾಸುರನನ್ನು ಮತ್ತು ವಿಷ್ಣು ನರಕಾಸುರನನ್ನು* ಕೊಂದಿರುವಂತೆಯೇ ಯುದ್ಧದಲ್ಲಿ ಇಂದು ನನ್ನಿಂದ ಹತನಾದ ರಾಮನು ಎಂದೆಂದಿಗೂ ಮಲಗಿಬಿಡುವನು.॥7॥

ಟಿಪ್ಪನೀ
  • ಇಲ್ಲಿ ಬಂದಿರುವ ನರಕಾಸುರನು ವಿಪ್ರಚಿತ್ತಿ ಎಂಬ ದಾನವನಿಂದ ಸಿಂಹಿಕೆಯ ಗರ್ಭದಿಂದ ಹುಟ್ಟಿರುವ ವಾತಾಪಿ, ನಮೂಚಿ, ಇಲ್ವಲ, ಸೃಮರ, ಅಂಧಕ, ನರಕ ಮತ್ತು ಕಾಲನಾಭ ಎಂಬ ಏಳು ಪುತ್ರರಲ್ಲಿ ಒಬ್ಬನು. ಭಗವಾನ್ ಶ್ರೀಕೃಷ್ಣನು ದ್ವಾಪರದಲ್ಲಿ ವಧಿಸಿದ ಭೂಮಿಪುತ್ರ ನರಕಾಸುರನು ಬೇರೆಯಾಗಿದ್ದಾನೆ. ಅವನು ತ್ರಿಶಿರಾ ಮತ್ತು ರಾವಣನ ಸಮಯದಲ್ಲಿ ಅವನು ಹುಟ್ಟಿರಲೇ ಇಲ್ಲ.
ಮೂಲಮ್ - 8

ಶ್ರುತ್ವಾ ತ್ರಿಶಿರಸೋ ವಾಕ್ಯಂ ರಾವಣೋ ರಾಕ್ಷಸಾಧಿಪಃ ।
ಪುನರ್ಜಾತಮಿವಾತ್ಮಾನಂ ಮನ್ಯತೇ ಕಾಲಚೋದಿತಃ ॥

ಅನುವಾದ

ತ್ರಿಶಿರನ ಮಾತನ್ನು ಕೇಳಿ ರಾಕ್ಷಸರಾಜ ರಾವಣನಿಗೆ ತನ್ನ ಪುನರ್ಜನ್ಮವಾದಷ್ಟು ಸಂತೋಷವಾಯಿತು. ಕಾಲಪ್ರೇರಿತನಾಗಿ ಅವನ ಬುದ್ಧಿ ಹೀಗಾಗಿತ್ತು.॥8॥

ಮೂಲಮ್ - 9

ಶ್ರುತ್ವಾತ್ರಿಶಿರಸೋ ವಾಕ್ಯಂ ದೇವಾಂತಕ ನರಾಂತಕೌ ।
ಅತಿಕಾಯಶ್ಚ ತೇಜಸ್ವೀ ಬಭೂವುರ್ಯುದ್ಧ ಹರ್ಷಿತಾಃ ॥

ಅನುವಾದ

ತ್ರಿಶಿರನ ಮಾತನ್ನು ಕೇಳಿ ದೇವಾಂತಕ, ನರಾಂತಕ ಮತ್ತು ತೇಜಸ್ವೀ ಅತಿಕಾಯ ಈ ಮೂವರೂ ಯುದ್ಧಕ್ಕಾಗಿ ಉತ್ಸಾಹಿತರಾದರು.॥9॥

ಮೂಲಮ್ - 10

ತತೋಽಹಮಹಮಿತ್ಯೇವಂ ಗರ್ಜಂತೋ ನೈರ್ಋತರ್ಷಭಾಃ ।
ರಾವಣಸ್ಯ ಸುತಾ ವೀರಾಃ ಶಕ್ರತುಲ್ಯ ಪರಾಕ್ರಮಾಃ ॥

ಅನುವಾದ

ನಾನು ಯುದ್ಧಕ್ಕೆ ಹೋಗುವೆ, ನಾನು ಹೋಗುವೆ ಎಂದು ಹೇಳುತ್ತಾ, ಗರ್ಜಿಸುತ್ತಾ ಆ ಮೂವರೂ ನಿಶಾಚರರು ಯುದ್ಧಕ್ಕಾಗಿ ಸಿದ್ಧರಾದರು. ರಾವಣನ ಆ ವೀರಪುತ್ರರು ಇಂದ್ರನಂತೆ ಪರಾಕ್ರಮಿಯಾಗಿದ್ದರು.॥10॥

ಮೂಲಮ್ - 11

ಅಂತರಿಕ್ಷಗತಾಃ ಸರ್ವೇ ಸರ್ವೇ ಮಾಯಾವಿಶಾರದಾಃ ।
ಸರ್ವೇ ತ್ರಿದಶದರ್ಪಘ್ನಾಃ ಸರ್ವೇ ಸಮರದುರ್ಮದಾಃ ॥

ಅನುವಾದ

ಅವರೆಲ್ಲರೂ ಅಂತರಿಕ್ಷ ಚರರೂ, ಮಾಯಾವಿಶಾರದರೂ, ರಣದುರ್ಮದರೂ, ದೇವತೆಗಳ ದರ್ಪವನ್ನು ದಮನ ಮಾಡುವವರಾಗಿದ್ದರು.॥11॥

ಮೂಲಮ್ - 12

ಸರ್ವೇ ಸುಬಲಸಂಪನ್ನಾಃ ಸರ್ವೇ ವಿಸ್ತೀರ್ಣಕೀರ್ತಯಃ ।
ಸರ್ವೇ ಸಮರಮಾಸಾದ್ಯ ನ ಶ್ರೂಯಂತೇಸ್ಮ ನಿರ್ಜಿತಾಃ ॥

ಮೂಲಮ್ - 13

ದೇವೈರಪಿ ಸಗಂಧರ್ವೈಃ ಸಕಿನ್ನರಮಹೋರಗೈಃ ।
ಸರ್ವೇಽಸ್ತ್ರವಿದುಷೋ ವೀರಾಃ ಸರ್ವೇ ಯುದ್ಧವಿಶಾರದಾಃ ।
ಸರ್ವೇ ಪ್ರವರವಿಜ್ಞಾನಾಃ ಸರ್ವೇ ಲಬ್ಧವರಾಸ್ತಥಾ ॥

ಅನುವಾದ

ಅವರೆಲ್ಲರೂ ಉತ್ತಮ ಬಲವಂತರಾಗಿದ್ದು, ಅವರ ಕೀರ್ತಿ ಮೂರುಲೋಕಗಳಲ್ಲಿಯೂ ಹರಡಿತ್ತು. ಸಮರ ಭೂಮಿಯಲ್ಲಿ ಗಂಧರ್ವರಿಂದ, ಕಿನ್ನರರಿಂದ, ನಾಗಗಳಿಂದ, ದೇವತೆಗಳಿಂದ ಇವರು ಎಂದೂ ಸೋತಿರಲಿಲ್ಲ. ಅವರೆಲ್ಲರೂ ಅಸ್ತ್ರವೇತ್ತರೂ, ವೀರರೂ, ಯುದ್ಧ ಕಲೆಯಲ್ಲಿ ನಿಪುಣರಾಗಿದ್ದರು. ಅವರೆಲ್ಲರಿಗೂ ಅಸ್ತ್ರ-ಶಸ್ತ್ರಗಳ ಉತ್ತಮ ಜ್ಞಾನವಿದ್ದು, ತಪಸ್ಸಿನಿಂದ ವರವನ್ನು ಪಡೆದುಕೊಂಡಿದ್ದರು.॥12-13॥

ಮೂಲಮ್ - 14

ಸ ತೈಸ್ತಥಾ ಭಾಸ್ಕರತುಲ್ಯವರ್ಚಸೈಃ
ಸುತೈರ್ವೃತಃ ಶತ್ರುಬಲ ಶ್ರಿಯಾರ್ದನೈಃ ।
ರರಾಜ ರಾಜಾ ಮಘವಾನ್ಯಥಾಮರೈ-
ರ್ವೃತೋ ಮಹಾದಾನವ ದರ್ಪನಾಶನೈಃ ॥

ಅನುವಾದ

ಸೂರ್ಯನಂತೆ ತೇಜಸ್ವಿಗಳೂ, ಶತ್ರುಸೈನ್ಯದ ವಿಜಯಶ್ರೀಯನ್ನು ಧ್ವಂಸಮಾಡುವವರೂ ಆದ ಆ ಪುತ್ರರಿಂದ ಪರಿವೃತನಾದ ರಾವಣನು ದೊಡ್ಡದೊಡ್ಡ ದಾನವರ ದರ್ಪವನ್ನು ನುಚ್ಚುನೂರಾಗಿಸುವ ದೇವತೆಗಳಿಂದ ಸುತ್ತುವರೆದ ಇಂದ್ರ ನಂತೆ ಶೋಭಿಸುತ್ತಿದ್ದನು.॥14॥

ಮೂಲಮ್ - 15

ಸ ಪುತ್ರಾನ್ ಸಂಪರಿಷ್ವಜ್ಯ ಭೂಷಯಿತ್ವಾ ಚ ಭೂಷಣೈಃ ।
ಆಶೀರ್ಭಿಶ್ಚ ಪ್ರಶಸ್ತಾಭಿಃ ಪ್ರೇಷಯಾಮಾಸ ವೈರಣೇ ॥

ಅನುವಾದ

ರಾವಣನು ತನ್ನ ಪುತ್ರರನ್ನು ಆಲಿಂಗಿಸಿಕೊಂಡು, ನಾನಾ ರೀತಿಯ ಭೂಷಣಗಳಿಂದ ಅಲಂಕರಿಸಿ, ಪ್ರಶಸ್ತವಾದ ಆಶೀರ್ವಾದಗಳಿಂದ ಹರಸಿ ಯುದ್ಧಕ್ಕೆ ಕಳಿಸಿಕೊಟ್ಟನು.॥15॥

ಮೂಲಮ್ - 16

ಯುದ್ಧೋನ್ಮತ್ತಂ ಚ ಮತ್ತಂ ಚ ಭ್ರಾತರೌ ಚಾಪಿ ರಾವಣಃ ।
ರಕ್ಷಣಾರ್ಥಂ ಕುಮಾರಾಣಾಂ ಪ್ರೇಷಯಾಮಾಸ ಸಂಯುಗೇ ॥

ಅನುವಾದ

ರಾವಣನ ಅನುಜರಾದ ಯುದ್ಧೋನ್ಮತ್ತ ಮಹಾಪಾರ್ಶ್ವ ಮತ್ತು ಮಹೋದರ ಇಬ್ಬರನ್ನೂ ತನ್ನ ಮಕ್ಕಳ ರಕ್ಷಣೆಗಾಗಿ ಕಳಿಸಿಕೊಟ್ಟನು.॥16॥

ಮೂಲಮ್ - 17

ತೇಽಭಿವಾದ್ಯ ಮಹಾತ್ಮಾನಂ ರಾವಣಂ ಲೋಕ ರಾವಣಮ್ ।
ಕೃತ್ವಾ ಪ್ರದಕ್ಷಿಣಂ ಚೈವ ಮಹಾಕಾಯಾಃ ಪ್ರತಸ್ಥಿರೇ ॥

ಅನುವಾದ

ಆ ಮಹಾಕಾಯರಾದ ರಾಕ್ಷಸರೆಲ್ಲರೂ ಮಹಾಮನಾ ಲೋಕ ರಾವಣನನ್ನು ವಂದಿಸಿ, ಅವನಿಗೆ ಪ್ರದಕ್ಷಿಣೆ ಬಂದು ಯುದ್ಧಕ್ಕಾಗಿ ಹೊರಟರು.॥17॥

ಮೂಲಮ್ - 18

ಸರ್ವೌಷಧೀಭಿರ್ಗಂಧೈಶ್ಚ ಸಮಾಲಭ್ಯ ಮಹಾಬಲಾಃ ।
ನಿರ್ಜಗ್ಮುರ್ನೈರ್ಋತಶ್ರೇಷ್ಠಾಃ ಷಡೇತೇ ಯುದ್ಧಕಾಂಕ್ಷಿಣಃ ॥

ಮೂಲಮ್ - 19

ತ್ರಿಶಿರಾಶ್ಚಾತಿಕಾಯಶ್ಚ ದೇವಾಂತಕ ನರಾಂತಕೌ ।
ಮಹೋದರ ಮಹಾಪಾರ್ಶ್ವೌ ನಿರ್ಜಗ್ಮುಃ ಕಾಲಚೋದಿತಾಃ ॥

ಅನುವಾದ

ಎಲ್ಲ ರೀತಿಯ ಔಷಧಿಗಳನ್ನು, ಗಂಧಗಳನ್ನು ಸ್ಪರ್ಶಿಸಿ ಯುದ್ಧಾಭಿಲಾಷಿಗಳಾದ ತ್ರಿಶಿರಾ, ಅತಿಕಾಯ, ದೇವಾಂತಕ, ನರಾಂತಕ, ಮಹೋದರ ಮತ್ತು ಮಹಾಪಾರ್ಶ್ವ ಈ ಆರು ಮಹಾಬಲಿ ಶ್ರೇಷ್ಠ ನಿಶಾಚರರು ಕಾಲಪ್ರೇರಿತರಾಗಿ ಯುದ್ಧಕ್ಕಾಗಿ ಲಂಕೆಯಿಂದ ಹೊರಟರು.॥18-1.॥

ಮೂಲಮ್ - 20

ತತಃ ಸುದರ್ಶನಂ ನಾಗಂ ನೀಲಜೀಮೂತ ಸಂನಿಭಮ್ ।
ಐರಾವತಕುಲೇ ಜಾತಮಾರುರೋಹ ಮಹೋದರಃ ॥

ಅನುವಾದ

ಆಗ ಮಹೋದರನು ಐರಾವತ ಕುಲದಲ್ಲಿ ಹುಟ್ಟಿದ, ಕಪ್ಪು ಮೇಘದಂತೆ ಬಣ್ಣದ ‘ಸುದರ್ಶನ’ ಎಂಬ ಆನೆಯನ್ನೇರಿದನು.॥20॥

ಮೂಲಮ್ - 21

ಸರ್ವಾಯುಧ ಸಮಾಯುಕ್ತ ಸ್ತೂಣೀಭಿಶ್ಚಾಪ್ಯಲಂಕೃತಃ ।
ರರಾಜ ಗಜಮಾಸ್ಥಾಯ ಸವಿತೇವಾಸ್ತಮೂರ್ಧನಿ ॥

ಅನುವಾದ

ಸಮಸ್ತ ಆಯುಧಗಳಿಂದ, ಬತ್ತಳಿಕೆಗಳಿಂದ ಸಜ್ಜಾದ ಮಹೋದರನು ಆ ಆನೆಯ ಮೇಲೆ ಕುಳಿತು ಅಸ್ತಾಚಲದ ಶಿಖರದ ಮೇಲೆ ವಿರಾಜಮಾನ ಸೂರ್ಯನಂತೆ ಶೋಭಿಸುತ್ತಿದ್ದನು.॥21॥

ಮೂಲಮ್ - 22

ಹಯೋತ್ತಮಸಮಾಯುಕ್ತಂ ಸರ್ವಾಯುಧ ಸಮಾಕುಲಮ್ ।
ಆರುರೋಹ ರಥಶ್ರೇಷ್ಠಂ ತ್ರಿಶಿರಾ ರಾವಣಾತ್ಮಜಃ ॥

ಅನುವಾದ

ರಾವಣಕುಮಾರ ತ್ರಿಶಿರನು ಎಲ್ಲ ಪ್ರಕಾರದ ಶಸ್ತ್ರಾಸ್ತ್ರಗಳಿಂದ ತುಂಬಿದ, ಉತ್ತಮ ಕುದುರೆಗಳನ್ನು ಹೂಡಿದ ಒಂದು ಉತ್ತಮ ರಥದಲ್ಲಿ ಕುಳಿತುಕೊಂಡನು.॥22॥

ಮೂಲಮ್ - 23

ತ್ರಿಶಿರಾ ರಥಮಾಸ್ಥಾಯ ವಿರರಾಜ ಧನುರ್ಧರಃ ।
ಸವಿದ್ಯುದುಲ್ಕಃ ಸಜ್ವಾಲಃ ಸೇಂದ್ರಚಾಪ ಇವಾಂಬುದಃ ॥

ಅನುವಾದ

ಆ ರಥದಲ್ಲಿ ಕುಳಿತು ಧನುಸ್ಸನ್ನು ಧರಿಸಿದ ತ್ರಿಶಿರನು ವಿದ್ಯುತ್, ಉಲ್ಕೆ ಜ್ವಾಲೆ ಹಾಗೂ ಕಾಮನಬಿಲ್ಲಿನಿಂದ ಮೂಡಿದ ಮೇಘದಂತೆ ಶೋಭಿಸುತ್ತಿದ್ದನು.॥23॥

ಮೂಲಮ್ - 24

ತ್ರಿಭಿಃ ಕಿರೀಟೈಸಿಶಿರಾಃ ಶುಶುಭೇ ಸ ರಥೋತ್ತಮೇ ।
ಹಿಮವಾನಿವ ಶೈಲೇಂದ್ರಸ್ತ್ರಿಭಿಃ ಕಾಂಚನಪರ್ವತೈಃ ॥

ಅನುವಾದ

ಉತ್ತಮ ರಥದಲ್ಲಿ ಆರೂಢನಾಗಿ ಮೂರು ಕಿರೀಟಗಳಿಂದ ಕೂಡಿದ ತ್ರಿಶಿರಾನು ಮೂರು ಸುವರ್ಣ ಶಿಖರಗಳಿಂದ ಯುಕ್ತವಾದ ಗಿರಿರಾಜ ಹಿಮಾಲಯದಂತೆ ಶೋಭಿಸಿದನು.॥24॥

ಮೂಲಮ್ - 25

ಅತಿಕಾಯೋಽತಿ ತೇಜಸ್ವೀ ರಾಕ್ಷಸೇಂದ್ರ ಸುತಸ್ತದಾ ।
ಆರುರೋಹ ರಥಶ್ರೇಷ್ಠ ಶ್ರೇಷ್ಠಃ ಸರ್ವಧನುಷ್ಮತಾಮ್ ॥

ಅನುವಾದ

ರಾಕ್ಷಸರ ರಾಜಾ ರಾವಣನ ಪುತ್ರರಲ್ಲಿ ಅತ್ಯಂತ ತೇಜಸ್ವೀ ಅತಿಕಾಯನು ಎಲ್ಲ ಧನುರ್ಧಾರಿಗಳಲ್ಲಿ ಶ್ರೇಷ್ಠನಾಗಿದ್ದಾನೆ. ಅವನೂ ಕೂಡ ಆಗ ಉತ್ತಮ ರಥವೊಂದನ್ನು ಏರಿದನು.॥25॥

ಮೂಲಮ್ - 26

ಸುಚಕ್ರಾಕ್ಷಂ ಸುಸಂಯುಕ್ತಂ ಸ್ವನುಕರ್ಷಂ ಸುಕೂಬರಮ್ ।
ತೂಣೀ ಬಾಣಾಸನೈರ್ದೀಪ್ತಂ ಪ್ರಾಸಾಸಿ ಪರಿಘಾಕುಲಮ್ ॥

ಅನುವಾದ

ಅತಿಕಾಯನ ರಥವು ಸುಂದರವಾದ ಚಕ್ರಗಳಿಂದಲೂ, ಅಚ್ಚುಮಣೆಯಿಂದಲೂ, ಉತ್ತಮವಾದ ಕುದುರೆಗಳಿಂದಲೂ ಕೂಡಿತ್ತು. ತೋರು ಮರದಿಂದಲೂ (ನೊಗದ ಕೆಳಗಿನ ಮರ) ಸುಂದರವಾದ ಮೂಕಿಯಿಂದಲೂ ಯುಕ್ತವಾಗಿತ್ತು. ಬತ್ತಳಿಕೆ, ಬಾಣ ಮತ್ತು ಧನುಸ್ಸು, ಪ್ರಾಸ, ಖಡ್ಗ, ಪರಿಘಗಳಿಂದ ಆ ರಥವು ತುಂಬಿ ಪ್ರಕಾಶಿಸುತ್ತಿದ್ದಿತು.॥26॥

ಮೂಲಮ್ - 27

ಸ ಕಾಂಚನವಿಚಿತ್ರೇಣ ಕಿರೀಟೇನ ವಿರಾಜತಾ ।
ಭೂಷಣೈಶ್ಚ ಬಭೌ ಮೇರುಃ ಪ್ರಭಾಭಿರಿವ ಭಾಸಯನ್ ॥

ಅನುವಾದ

ಅವನು ಹೊಳೆಯುತ್ತಿರುವ ವಿಚಿತ್ರ ಸ್ವರ್ಣ ಕಿರೀಟ ಹಾಗೂ ಇತರ ಆಭರಣಗಳಿಂದ ಅಲಂಕೃತನಾಗಿದ್ದನು. ತನ್ನ ಪ್ರಭೆಯಿಂದಲೇ ಎಲ್ಲವನ್ನು ಬೆಳಗುತ್ತಾ ಮೇರುಪರ್ವತ ದಂತೆ ಸುಶೋಭಿತನಾಗಿದ್ದನು.॥27॥

ಮೂಲಮ್ - 28

ಸ ರರಾಜ ರಥೇ ತಸ್ಮಿನ್ರಾಜಸೂನುರ್ಮಹಾಬಲಃ ।
ವೃತೋ ನೈರ್ಋತಶಾರ್ದೂಲೈರ್ವಜ್ರಪಾಣಿರಿವಾಮರೈಃ ॥

ಅನುವಾದ

ಆ ರಥದಲ್ಲಿ ಶ್ರೇಷ್ಠ ನಿಶಾಚರರಿಂದ ಸುತ್ತುವರೆದು ಕುಳಿತಿರುವ ಮಹಾಬಲಿ ರಾಜಕುಮಾರನು ದೇವತೆಗಳಿಂದ ಪರಿವೃತನಾದ ವಜ್ರಪಾಣಿ ಇಂದ್ರನಂತೆ ಶೋಭಿಸುತ್ತಿದ್ದನು.॥28॥

ಮೂಲಮ್ - 29

ಹಯಮುಚ್ಚೈಃ ಶ್ರವಃಪ್ರಖ್ಯಂ ಶ್ವೇತಂ ಕನಕಭೂಷಣಮ್ ।
ಮನೋಜವಂ ಮಹಾಕಾಯಮಾರುರೋಹ ನರಾಂತಕಃ ॥

ಅನುವಾದ

ನರಾಂತಕನು ಉಚ್ಚೈಃಶ್ರವಕ್ಕೆ ಸಮವಾದ ಬಿಳಿಯ ಸುವರ್ಣಭೂಷಿತ ವಿಶಾಲಕಾಯ, ಮನೋವೇಗದಂತೆ ವೇಗಶಾಲಿಯಾದ ಕುದುರೆಯನ್ನು ಹತ್ತಿದನು.॥29॥

ಮೂಲಮ್ - 30

ಗೃಹೀತ್ವಾ ಪ್ರಾಸಮುಲ್ಕಾಭಂ ವಿರರಾಜ ನರಾಂತಕಃ ।
ಶಕ್ತಿಮಾದಾಯ ತೇಜಸ್ವೀ ಗುಹಃ ಶಿಖಿಗತೋ ಯಥಾ ॥

ಅನುವಾದ

ಉಲ್ಕೆಯಂತೆ ಬೆಳಗುವ ಪ್ರಾಸವನ್ನೆತ್ತಿಕೊಂಡು ತೇಜಸ್ವೀ ನರಾಂತಕನು ಶಕ್ತಿಯನ್ನು ಧರಿಸಿ ನವಿಲಿನ ಮೇಲೆ ಕುಳಿತುಕೊಂಡ ತೇಜಃಪುಂಜ ಕುಮಾರ ಕಾರ್ತಿಕೇಯನಂತೆ ಸುಶೋಭಿತನಾಗಿದ್ದನು.॥30॥

ಮೂಲಮ್ - 31

ದೇವಾಂತಕಃ ಸಮಾದಾಯ ಪರಿಘಂ ಹೇಮಭೂಷಣಮ್ ।
ಪರಿಗೃಹ್ಯ ಗಿರಿಂ ದೋರ್ಭ್ಯಾಂ ವಪುರ್ವಿಷ್ಣೋರ್ವಿಡಂಬಯನ್ ॥

ಅನುವಾದ

ಸಮುದ್ರ ಮಂಥನ ಸಮಯದಲ್ಲಿ ಎರಡೂ ಕೈಗಳಿಂದ ಮಂದರಾಚಲವನ್ನೆತ್ತಿಕೊಂಡ ವಿಷ್ಣುವಿನಂತೆ ದೇವಾಂತಕನು ಸ್ವರ್ಣಭೂಷಿತ ಪರಿಘವನ್ನೆತ್ತಿಕೊಂಡು ಪ್ರಕಾಶಿಸುತ್ತಿದ್ದನು.॥31॥

ಮೂಲಮ್ - 32

ಮಹಾಪಾರ್ಶ್ವೋ ಮಹಾತೇಜಾ ಗದಾಮಾದಾಯ ವೀರ್ಯವಾನ್ ।
ವಿರರಾಜ ಗದಾಪಾಣಿಃ ಕುಬೇರ ಇವ ಸಂಯುಗೇ ॥

ಅನುವಾದ

ಮಹಾತೇಜಸ್ವೀ ಮತ್ತು ಪರಾಕ್ರಮಿ ಮಹಾಪಾರ್ಶ್ವನು ಕೈಯಲ್ಲಿ ಗದೆ ಹಿಡಿದು ಯುದ್ಧದಲ್ಲಿ ಗದಾಧಾರಿ ಕುಬೇರನಂತೆ ಶೋಭಿಸತೊಡಗಿದನು.॥32॥

ಮೂಲಮ್ - 33½

ತೇ ಪ್ರತಸ್ಥುರ್ಮಹಾತ್ಮಾನೋಽಮರಾವತ್ಯಾಃ ಸುರಾ ಇವ ।
ತಾನ್ ಗಜೈಶ್ಚ ತುರಂಗೈಶ್ಚ ರಥೈಶ್ಚಾಂಬುದನಿಃ ಸ್ವನೈಃ ॥
ಅನೂತ್ಪೇತುರ್ಮಹಾತ್ಮಾನೋ ರಾಕ್ಷಸಾಃ ಪ್ರವರಾಯುಧಾಃ ।

ಅನುವಾದ

ಅಮರಾವತಿಯಿಂದ ಹೊರಟ ದೇವತೆಗಳಂತೆ ಅವರೆಲ್ಲ ಮಹಾಕಾಯ ನಿಶಾಚರರು ಲಂಕೆಯಿಂದ ಹೊರಟರು. ಅವರ ಹಿಂದೆ ಶ್ರೇಷ್ಠ ಆಯುಧಗಳನ್ನು ಧರಿಸಿದ ರಾಕ್ಷಸರು, ಆನೆ, ಕುದುರೆ, ಮೇಘಗಳಂತೆ ಶಬ್ದಮಾಡುವ ರಥಗಳಲ್ಲಿ ಕುಳಿತು ಯುದ್ಧಕ್ಕಾಗಿ ಹೊರಟರು.॥33½॥

ಮೂಲಮ್ - 34½

ತೇ ವಿರೇಜುರ್ಮಹಾತ್ಮಾನಃ ಕುಮಾರಾಃ ಸೂರ್ಯವರ್ಚಸಃ ॥
ಕಿರೀಟಿನಃ ಶ್ರಿಯಾ ಜುಷ್ಟಾ ಗ್ರಹಾ ದೀಪ್ತಾ ಇವಾಂಬರೇ ।

ಅನುವಾದ

ಸೂರ್ಯತುಲ್ಯ ತೇಜಸ್ವೀ, ಮಹಾಮನಸ್ವೀ ರಾಕ್ಷಸ ರಾಜಕುಮಾರರು ತಲೆಯ ಮೇಲೆ ಕಿರೀಟವನ್ನು ಧರಿಸಿ ಉತ್ತಮ ಶೋಭಾಸಂಪನ್ನರಾಗಿ ಆಕಾಶದಲ್ಲಿ ಬೆಳಗುವ ಗ್ರಹಗಳಂತೆ ಸುಶೋಭಿತರಾಗಿದ್ದರು.॥34½॥

ಮೂಲಮ್ - 35½

ಪ್ರಗೃಹೀತಾ ಬಭೌ ತೇಷಾಂ ಶಸ್ತ್ರಾಣಾಮಾವಲಿಃ ಸಿತಾ ॥
ಶರದಭ್ರಪ್ರತೀಕಾಶಾ ಹಂಸಾವಲಿರಿವಾಂಬರೇ ।

ಅನುವಾದ

ಅವರು ಧರಿಸಿದ ಅಸ್ತ್ರ-ಶಸ್ತ್ರಗಳ ಶ್ವೇತಪಂಕ್ತಿಯು ಆಕಾಶದಲ್ಲಿ ಶರದ್ಋತುವಿನ ಮೋಡಗಳಂತೆ, ಉಜ್ವಲ ಕಾಂತಿಯಿಂದ ಕೂಡಿದ ಹಂಸಗಳ ಸಾಲಿನಂತೆ ಕಂಡುಬರುತ್ತಿತ್ತು.॥35½॥

ಮೂಲಮ್ - 36½

ಮರಣಂ ವಾಪಿ ನಿಶ್ಚಿತ್ಯ ಶತ್ರೂಣಾಂ ವಾ ಪರಾಜಯಮ್ ॥
ಇತಿ ಕೃತ್ವಾ ಮತಿಂ ವೀರಾಃ ಸಂಜಗ್ಮುಃ ಸಂಯುಗಾರ್ಥಿನಃ ।

ಅನುವಾದ

ಇಂದು ನಾವು ಒಂದೋ ಶತ್ರುವನ್ನು ಸೋಲಿಸುವೆವು, ಇಲ್ಲವೇ ನಾವು ಮರಣಶಯ್ಯೆಯಲ್ಲಿ ಮಲಗುವೆವು ಎಂದು ನಿಶ್ಚಯಿಸಿಯೇ ಆ ವೀರ ರಾಕ್ಷಸರು ಯುದ್ಧಕ್ಕಾಗಿ ಹೋಗುತ್ತಿದ್ದರು.॥36½॥

ಮೂಲಮ್ - 37½

ಜಗರ್ಜುಶ್ಚ ಪ್ರಣೇದುಶ್ಚ ಚಿಕ್ಷಿಪುಶ್ಚಾಪಿ ಸಾಯಕಾನ್ ॥
ಜಗೃಹುಶ್ಚ ಮಹಾತ್ಮನೋ ನಿರ್ಯಾಂತೋ ಯುದ್ಧದುರ್ಮದಾಃ ।

ಅನುವಾದ

ಯುದ್ಧದುರ್ಮದ ಮಹಾಮನಸ್ವೀ ಆ ನಿಶಾಚರರು ಗರ್ಜಿಸುತ್ತಾ, ಸಿಂಹನಾದ ಮಾಡುತ್ತಾ, ಬಾಣಗಳನ್ನು ಬತ್ತಳಿಕೆಯಿಂದ ತೆಗೆದು ಶತ್ರುಗಳ ಮೇಲೆ ಎಸೆಯುತ್ತಿದ್ದರು.॥37½॥

ಮೂಲಮ್ - 38½

ಕ್ಷ್ವೇಡಿತಾ ಸ್ಫೋಟಿತಾನಾಂ ವೈ ಸಂಚಚಾಲೇವ ಮೇದಿನೀ ॥
ರಕ್ಷಸಾಂ ಸಿಂಹನಾದೈಶ್ಚ ಸಂಸ್ಫೋಟಿತಮಿವಾಂಬರಮ್ ।

ಅನುವಾದ

ಆ ರಾಕ್ಷಸರ ಗರ್ಜನೆಯಿಂದ, ಚಪ್ಪಾಳೆಗಳಿಂದ, ಸಿಂಹನಾದದಿಂದ ಭೂಮಿಯು ಕಂಪಿತವಾಗಿ, ಆಕಾಶವು ಸೀಳಿ ಹೋಗುವುದೋ ಎಂದೆನಿಸುತ್ತಿತ್ತು.॥38½॥

ಮೂಲಮ್ - 39½

ತೇಽಭಿನಿಷ್ಕ್ರಮ್ಯ ಮುದಿತಾ ರಾಕ್ಷಸೇಂದ್ರಾ ಮಹಾಬಲಾಃ ।
ದದೃಶುರ್ವಾನರಾನೀಕಂ ಸಮುದ್ಯತಶಿಲಾನಗಮ್ ।

ಅನುವಾದ

ಮಹಾಬಲಿ ರಾಕ್ಷಸಶ್ರೇಷ್ಠ ವೀರರು ಪ್ರಸನ್ನಚಿತ್ತರಾಗಿ ನಗರದಿಂದ ಹೊರಗೆ ಬಂದು, ಪರ್ವತ, ಶಿಖರಗಳನ್ನು, ದೊಡ್ಡ ದೊಡ್ಡ ವೃಕ್ಷಗಳನ್ನೆತ್ತಿಕೊಂಡು ಯುದ್ಧಕ್ಕೆ ಸಿದ್ಧವಾದ ವಾನರ ಸೈನ್ಯವನ್ನು ನೋಡಿದರು.॥39½॥

ಮೂಲಮ್ - 40

ಹರಯೋಽಪಿ ಮಹಾತ್ಮಾನೋ ದದೃಶೂ ರಾಕ್ಷಸಂ ಬಲಮ್ ॥

ಮೂಲಮ್ - 41

ಹಸ್ತ್ಯಶ್ವರಥಸಂಬಾಧಂ ಕಿಂಕಿಣೀ ಶತನಾದಿತಮ್ ।
ನೀಲಜೀಮೂತಸಂಕಾಶಂ ಸಮುದ್ಯತ ಮಹಾಯುಧಮ್ ॥

ಅನುವಾದ

ಮಹಾಮನಾ ವಾನರರೂ ರಾಕ್ಷಸರ ಸೈನ್ಯವನ್ನು ನೋಡಿದರು. ಅದು ಕೈಗಳಲ್ಲಿ ದೊಡ್ಡ ದೊಡ್ಡ ಆಯುಧಗಳನ್ನು ಧರಿಸಿ, ಆನೆ, ಕುದುರೆ, ರಥಗಳಿಂದ ತುಂಬಿದ್ದು ಸಾವಿರಾರು ಗಂಟೆಗಳಿಂದ ನಿನಾದಿತವಾಗುತ್ತಾ ಕಪ್ಪಾದ ಮೋಡಗಳಂತೆ ಕಂಡುಬರುತ್ತಿತ್ತು.॥40-41॥

ಮೂಲಮ್ - 42

ದೀಪ್ತಾ ನಲರವಿಪ್ರಖ್ಯೈರ್ನೈರ್ಋತೈಃ ಸರ್ವತೋವೃತಮ್ ।
ತದ್ದೃಷ್ಟ್ವಾ ಬಲಮಾಯಾಂತಂ ಲಬ್ಧಲಕ್ಷಾಃ ಪ್ಲವಂಗಮಾಃ ॥

ಮೂಲಮ್ - 43

ಸಮುದ್ಯತ ಮಹಾಶೈಲಾಃ ಸಂಪ್ರಣೇದುರ್ಮುಹುರ್ಮುಹುಃ ।
ಅಮೃಷ್ಯಮಾಣಾ ರಕ್ಷಾಂಸಿ ಪ್ರತಿನರ್ದಂತ ವಾನರಾಃ ॥

ಅನುವಾದ

ಉರಿಯುವ ಬೆಂಕಿಯಂತೆ ಮತ್ತು ಸೂರ್ಯನಂತೆ ತೇಜಸ್ವಿ ರಾಕ್ಷಸರಿಂದ ವ್ಯಾಪ್ತವಾದ ನಿಶಾಚರರ ಆ ಸೈನ್ಯವು ಬರುತ್ತಿರುವುದನ್ನು ನೋಡಿ ವಾನರರು ಪ್ರಹಾರ ಮಾಡಲು ಸಂದರ್ಭಕಾಯುತ್ತಾ ಮಹಾಪರ್ವತ ಶಿರಗಳನ್ನು ಎತ್ತಿಕೊಂಡು ಪದೇ ಪದೇ ಗರ್ಜಿಸುತ್ತಿದ್ದರು. ಅವರು ರಾಕ್ಷಸರ ಸಿಂಹನಾದವನ್ನು ಸಹಿಸದೆ, ಬದಲಿಗೆ ಜೋರಾಗಿ ಸಿಂಹನಾದವನ್ನು ಮಾಡುತ್ತಿದ್ದರು.॥42-43॥

ಮೂಲಮ್ - 44

ತತಃ ಸಮುತ್ಕೃಷ್ಟರವಂ ನಿಶಮ್ಯ
ರಕ್ಷೋಗಣಾ ವಾನರಯೂಥಪಾನಾಮ್ ।
ಅಮೃಷ್ಯಮಾಣಾಃ ಪರಹರ್ಷಮುಗ್ರಂ
ಮಹಾಬಲಾ ಭೀಮತರಂ ಪ್ರಣೇದುಃ ॥

ಅನುವಾದ

ವಾನರ ಸೇನಾಪತಿಗಳ ಆ ಗಟ್ಟಿಯಾದ ಗರ್ಜನೆಯನ್ನು ಕೇಳಿದ ಭಯಂಕರ ಹಾಗೂ ಮಹಾಬಲ ಸಂಪನ್ನ ರಾಕ್ಷಸರು ಶತ್ರುಗಳ ಹರ್ಷವನ್ನು ಸಹಿಸದೆ, ತಾವೂ ಭೀಷಣ ಸಿಂಹನಾದ ಮಾಡತೊಡಗಿದರು.॥44॥

ಮೂಲಮ್ - 45

ತೇ ರಾಕ್ಷಸಬಲಂ ಘೋರಂ ಪ್ರವಿಶ್ಯ ಹರಿಯೂಥಪಾಃ ।
ವಿಚೇರುರುದ್ಯತೈಃ ಶೈಲೈರ್ನಗಾಃ ಶಿಖರಿಣೋ ಯಥಾ ॥

ಅನುವಾದ

ಆಗ ವಾನರ ದಳಪತಿಗಳು ರಾಕ್ಷಸರ ಆ ಭಯಂಕರ ಸೈನ್ಯವನ್ನು ಹೊಕ್ಕು, ಶೈಲ ಶೃಂಗವನ್ನೆತ್ತಿಕೊಂಡ ಶಿಖರಗಳುಳ್ಳ ಪರ್ವತಗಳಂತೆ ರಣರಂಗದಲ್ಲಿ ಸಂಚರಿಸತೊಡಗಿದರು.॥45॥

ಮೂಲಮ್ - 46½

ಕೇಚಿದಾಕಾಶಮಾವಿಶ್ಯ ಕೇಚಿದುರ್ವ್ಯಾಂ ಪ್ಲವಂಗಮಾಃ ।
ರಕ್ಷಃ ಸೈನ್ಯೇಷು ಸಂಕ್ರುದ್ಧಾಃ ಕೇಚಿತ್ದ್ರುಮ ಶಿಲಾಯುಧಾಃ ॥
ದ್ರುಮಾಂಶ್ಚ ವಿಪುಲಸ್ಕಂಧಾನ್ಗೃಹ್ಯ ವಾನರಪುಂಗವಾಃ ।

ಅನುವಾದ

ವೃಕ್ಷಗಳನ್ನು, ಶಿಲೆಗಳನ್ನು ಆಯುಧವಾಗಿ ಧರಿಸಿದ ವಾನರಯೋಧರು ರಾಕ್ಷಸ ಸೈನಿಕರ ಮೇಲೆ ಅತ್ಯಂತ ಕ್ರುದ್ಧರಾಗಿ ಆಕಾಶದಲ್ಲಿ ಸಂಚರಿಸತೊಡಗಿದರು. ಎಷ್ಟೋ ವಾನರಶ್ರೇಷ್ಠರು ದೊಡ್ಡ ದೊಡ್ಡ ವೃಕ್ಷಗಳನ್ನೆತ್ತಿಕೊಂಡು ಭೂಮಿಯಲ್ಲಿ ತಿರುಗುತ್ತಿದ್ದರು.॥46½॥

ಮೂಲಮ್ - 47

ತದ್ಯುದ್ಧಮಭವದ್ಘೋರಂ ರಕ್ಷೋ ವಾನರಸಂಕುಲಮ್ ॥

ಮೂಲಮ್ - 48

ತೇ ಪಾದಪಶಿಲಾಶೈಲೈಶ್ಚಕ್ರುರ್ವೃಷ್ಟಿಮನೂಪಮಾಮ್ ।
ಬಾಣೌಘೈ ರ್ವಾರ್ಯಮಾಣಾಶ್ಚ ಹರಯೋ ಭೀಮವಿಕ್ರಮಾಃ ॥

ಅನುವಾದ

ಆಗ ರಾಕ್ಷಸರ ಮತ್ತು ವಾನರ ಯುದ್ಧವು ಘೋರ ರೂಪ ತಾಳಿತು. ರಾಕ್ಷಸರು ಬಾಣಗಳ ವರ್ಷದಿಂದ ವಾನರರನ್ನು ತಡೆದಾಗ, ಆ ಭಯಂಕರ ಪರಾಕ್ರಮಿಗಳಾದ ವಾನರರು ಅವರ ಮೇಲೆ ವೃಕ್ಷಗಳ, ಶಿಲೆಗಳ, ಪರ್ವತಶಿಖರಗಳ ಭಾರೀ ಮಳೆಯನ್ನೇ ಸುರಿಸಿದರು.॥47-48॥

ಮೂಲಮ್ - 49½

ಸಿಂಹನಾದಾನ್ವಿನೇದುಶ್ಚ ರಣೇ ರಾಕ್ಷಸ ವಾನರಾಃ ।
ಶಿಲಾಭಿಶ್ಚೂರ್ಣಯಾಮಾಸುರ್ಯಾತುಧಾನಾನ್ ಪ್ಲವಂಗಮಾಃ ॥
ನಿಜಘ್ನುಃ ಸಂಯುಗೇ ಕ್ರುದ್ಧಾಃ ಕವಚಾಭರಣಾವೃತಾನ್ ।

ಅನುವಾದ

ರಾಕ್ಷಸರ ಮತ್ತು ವಾನರರ ಎರಡೂ ಸೈನ್ಯಗಳು ರಣಕ್ಷೇತ್ರದಲ್ಲಿ ಸಿಂಹದಂತೆ ಗರ್ಜಿಸುತ್ತಿದ್ದರು. ಕುಪಿತರಾದ ವಾನರರು ಕಮಚ ಮತ್ತು ಆ ಭೂಷಣಗಳಿಂದ ಅಲಂಕೃತರಾದ ಅನೇಕ ರಾಕ್ಷಸರನ್ನು ಯುದ್ಧದಲ್ಲಿ ಶಿಲೆಗಳಿಂದ ಹೊಡೆದು ಕೊಂದುಹಾಕಿದರು.॥49½॥

ಮೂಲಮ್ - 50½

ಕೇಚಿದ್ರಥಗತಾನ್ ವೀರಾನ್ ಗಜವಾಜಿಗತಾನಪಿ ॥
ನಿಜಘ್ನುಃ ಸಹಸಾಽಽಪ್ಲುತ್ಯ ಯಾತುಧಾನಾನ್ ಪ್ಲವಂಗಮಾಃ ।

ಅನುವಾದ

ಆನೆ, ರಥ, ಕುದುರೆಗಳ ಮೇಲೆ ಕುಳಿತಿರುವ ವೀರರಾಕ್ಷಸರನ್ನು ಎಷ್ಟೋ ವಾನರರು ನೆಗೆದು ನೆಗೆದು ಸಂಹರಿಸುತ್ತಿದ್ದರು.॥50½॥

ಮೂಲಮ್ - 51½

ಶೈಲಶೃಂಗಾನ್ವಿತಾಂಗಾಸ್ತೇ ಮುಷ್ಟಿಭಿರ್ವಾಂತಲೋಚನಾಃ ॥
ಚೇಲುಃ ಪೇತುಶ್ಚ ನೇದುಶ್ಚ ತತ್ರ ರಾಕ್ಷಸಪುಂಗವಾಃ ।

ಅನುವಾದ

ಅಲ್ಲಿ ಮುಖ್ಯ ಮುಖ್ಯ ರಾಕ್ಷಸರ ಶರೀರಗಳು ಪರ್ವತಗಳಿಂದ ಮುಚ್ಚಿಹೋದುವು. ವಾನರರ ಮುಷ್ಠಿಗಳ ಏಟು ತಿಂದು ಎಷ್ಟೋ ಜನರು ಕಣ್ಣುಗಳು ಹೊರಬಂದವು. ಆ ನಿಶಾಚರರು ಓಡುತ್ತಾ ಬೀಳುತ್ತಾ ಚೀತ್ಕಾರಮಾಡುತ್ತಿದ್ದರು.॥51½॥

ಮೂಲಮ್ - 52½

ರಾಕ್ಷಸಾಶ್ಚ ಶರೈಸ್ತೀಕ್ಷ್ಣೈರ್ಬಿಭಿದುಃ ಕಪಿಕುಂಜರಾನ್ ॥
ಶೂಲಮುದ್ಗರಖಡ್ಗೈಶ್ಚ ಜಘ್ನುಃ ಪ್ರಾಸೈಶ್ಚ ಶಕ್ತಿಭಿಃ ।

ಅನುವಾದ

ರಾಕ್ಷಸರೂ ಕೂಡ ಹರಿತವಾದ ಬಾಣಗಳಿಂದ ವಾನರ ಶ್ರೇಷ್ಠರನ್ನು ಸೀಳಿ ಹಾಕಿದರು ಹಾಗೂ ಶೂಲ, ಮುದ್ಗರ, ಖಡ್ಗ, ಪ್ರಾಸಗಳಿಂದ, ಶಕ್ತಿಗಳಿಂದ ಅನೇಕರನ್ನು ಕೊಂದುಹಾಕಿದರು.॥52½॥

ಮೂಲಮ್ - 53½

ಅನ್ಯೋನ್ಯಂ ಪಾತಯಾಮಾಸುಃ ಪರಸ್ಪರ ಜಯೈಷಿಣಃ ॥
ರಿಪುಶೋಣಿತ ದಿಗ್ಧಾಂಗಾಸ್ತತ್ರ ವಾನರ ರಾಕ್ಷಸಾಃ ।

ಅನುವಾದ

ಶತ್ರುಗಳ ರಕ್ತದಿಂದ ತೊಯ್ದು ವಾನರರು, ರಾಕ್ಷಸರು ಪರಸ್ಪರ ಗೆಲ್ಲುವ ಇಚ್ಛೆಯಿಂದ ಒಬ್ಬರು ಮತ್ತೊಬ್ಬರನ್ನು ಧರಾಶಾಯಿಯಾಗಿಸುತ್ತಿದ್ದರು.॥53½॥

ಮೂಲಮ್ - 54½

ತತಃ ಶೈಲೈಶ್ಚ ಖಡ್ಗೈಶ್ಚ ವಿಸೃಷ್ಟೈರ್ಹರಿರಾಕ್ಷಸೈಃ ॥
ಮುಹೂರ್ತೇನಾವೃತಾ ಭೂಮಿರಭವಚ್ಛೋಣಿತೋಕ್ಷಿತಾ ।

ಅನುವಾದ

ವಾನರರು, ರಾಕ್ಷಸರು ಎಸೆದಿರುವ ಪರ್ವತ ಶಿಖರಗಳಿಂದ, ಖಡ್ಗಗಳಿಂದ ಆ ಯುದ್ಧಭೂಮಿಯು ಮುಚ್ಚಿಹೋಗಿ ರಕ್ತದ ಪ್ರವಾಹದಿಂದ ನೆನೆದುಹೋಯಿತು.॥54½॥

ಮೂಲಮ್ - 55

ವಿಕೀಣೈಃ ಪರ್ವತಾಕಾರೈ ರಕ್ಷೋಭಿ ರಭಿಮದಿತೈಃ ।
ಆಸೀದ್ವಸುಮತೀ ಪೂರ್ಣಾ ತದಾ ಯುದ್ಧಮದಾನ್ವಿತೈಃ ॥

ಅನುವಾದ

ಯುದ್ಧೋನ್ಮತ್ತರಾದ ಪರ್ವತಾಕಾರ ರಾಕ್ಷಸರು ಶಿಲೆಗಳ ಏಟಿನಿಂದ ಜಜ್ಜಿಹೋಗಿ ಎಲ್ಲೆಡೆ ಚೆಲ್ಲಿಹೋಗಿದ್ದರು. ಅದರಿಂದ ಅಲ್ಲಿಯ ಭೂಪ್ರದೇಶ ತುಂಬಿ ಹೋಗಿತ್ತು.॥55॥

ಮೂಲಮ್ - 56

ಆಕ್ಷಿಪ್ರಾಃ ಕ್ಷಿಪ್ಯಮಾಣಾಶ್ಚ ಭಗ್ನಶೈಲಾಶ್ಚ ವಾನರಾಃ ।
ಪುನರಂಗೈಸ್ತಥಾ ಚಕ್ರುರಾಸನ್ನಾ ಯುದ್ಧಮದ್ಭುತಮ್ ॥

ಅನುವಾದ

ವಾನರರ ಯುದ್ಧದ ಸಾಧನವಾದ ಪರ್ವತ ಶಿಖರಗಳನ್ನು ರಾಕ್ಷಸರು ಪುಡಿ ಮಾಡಿಬಿಡುತ್ತಿದ್ದರು. ಅವರ ಪ್ರಹಾರದಿಂದ ವಿಚಲಿತರಾದ ವಾನರರು ರಾಕ್ಷಸರ ಹತ್ತಿರ ಹೋಗಿ ತಮ್ಮ ಕೈ-ಕಾಲುಗಳಿಂದ, ಶರೀರದಿಂದ ಯುದ್ಧಮಾಡತೊಡಗಿದರು.॥56॥

ಮೂಲಮ್ - 57

ವಾನರಾನ್ವಾನರೈರೇವ ಜಘ್ನುಸ್ತೇ ನೈರ್ಋತರ್ಷಭಾಃ ।
ರಾಕ್ಷಸಾನ್ರಾಕ್ಷಸೈರೇವ ಜಘ್ನುಸ್ತೇ ವಾನರಾ ಅಪಿ ॥

ಅನುವಾದ

ರಾಕ್ಷಸರ ಮುಖ್ಯ ಮುಖ್ಯ ವೀರರು ವಾನರರನ್ನು ಹಿಡಿದು ಬೇರೆ ಕಪಿಗಳ ಮೇಲೆ ಎಸೆಯುತ್ತಿದ್ದರು. ಹಾಗೆಯೇ ವಾನರರೂ ಕೂಡ ರಾಕ್ಷಸರಿಂದ ರಾಕ್ಷಸರನ್ನು ಬಡಿಯುತ್ತಿದ್ದರು.॥57॥

ಮೂಲಮ್ - 58

ಆಕ್ಷಿಪ್ಯ ಚ ಶಿಲಾಃ ಶೈಲಾಂಜಘ್ನುಸ್ತೇ ರಾಕ್ಷಸಾಸ್ತದಾ ।
ತೇಷಾಂ ಚಾಚ್ಛಿದ್ಯ ಶಸ್ತ್ರಾಣಿ ಜಘ್ನೂ ರಕ್ಷಾಂಸಿ ವಾನರಾಃ ॥

ಅನುವಾದ

ಆ ರಾಕ್ಷಸರು ತಮ್ಮ ಶತ್ರುಗಳ ಕೈಗಳಿಂದ ಶಿಲೆಗಳನ್ನು ಪರ್ವತಗಳನ್ನು ಕಿತ್ತು ಅವರ ಮೇಲೆಯೇ ಪ್ರಹರಿಸುತ್ತಿದ್ದರು. ವಾನರರೂ ರಾಕ್ಷಸರ ಆಯುಧಗಳನ್ನು ಕಿತ್ತುಕೊಂಡು ಅವುಗಳಿಂದಲೆ ಅವರನ್ನು ವಧಿಸುತ್ತಿದ್ದರು.॥58॥

ಮೂಲಮ್ - 59

ನಿಜಘ್ನುಃ ಶೈಲಶೃಂಗೈಶ್ಚ ಬಿಭಿದುಶ್ಚ ಪರಸ್ಪರಮ್ ।
ಸಿಂಹನಾದಾನ್ ವಿನೇದುಶ್ಚ ರಣೇ ರಾಕ್ಷಸವಾನರಾಃ ॥

ಅನುವಾದ

ಹೀಗೆ ರಾಕ್ಷಸ ಮತ್ತು ವಾನರಯೋಧರು ಒಬ್ಬರು ಮತ್ತೊಬ್ಬರನ್ನು ಪರ್ವತ ಶಿಖರಗಳಿಂದ, ಅಸ್ತ್ರ-ಶಸ್ತ್ರಗಳಿಂದ ಕೊಲ್ಲುತ್ತಾ ರಣರಂಗದಲ್ಲಿ ಸಿಂಹದಂತೆ ಗರ್ಜಿಸುತ್ತಿದ್ದರು.॥59॥

ಮೂಲಮ್ - 60

ಛಿನ್ನ ವರ್ಮತನುತ್ರಾಣಾ ರಾಕ್ಷಸಾ ವಾನರೈರ್ಹತಾಃ ।
ರುಧಿರಂ ಪ್ರಸೃತಾಸ್ತತ್ರ ರಸಸಾರಮಿವ ದ್ರುಮಾಃ ॥

ಅನುವಾದ

ರಾಕ್ಷಸರ ಕವಚಾದಿಗಳು ಭಿನ್ನಭಿನ್ನರಾದುವು. ವಾನರರಿಂದ ಏಟು ತಿಂದ ರಾಕ್ಷಸರ ಶರೀರಗಳಿಂದ ಮರದ ರೆಂಬೆಗಳಿಂದ ಅಂಟು ಸುರಿಯುವಂತೆ ರಕ್ತಹರಿಯುತ್ತಿತ್ತು.॥60॥

ಮೂಲಮ್ - 61

ರಥೇನ ಚ ರಥಂ ಚಾಪಿ ವಾರಣೇನಾಪಿ ವಾರಣಮ್ ।
ಹಯೇನ ಚ ಹಯಂ ಕೇಚಿನ್ನಿರ್ಜಘ್ನುರ್ವಾನರಾ ರಣೇ ॥

ಅನುವಾದ

ಎಷ್ಟೋ ವಾನರರು ರಣರಂಗದಲ್ಲಿ ರಥದಿಂದ ರಥವನ್ನು, ಆನೆಯಿಂದ ಆನೆಯನ್ನು, ಕುದುರೆಯಿಂದ ಕುದುರೆಯನ್ನು ಹೊಡೆದು ಉರುಳಿಸುತ್ತಿದ್ದರು.॥61॥

ಮೂಲಮ್ - 62

ಕ್ಷುರಪ್ರೈರರ್ಧಚಂದ್ರೈಶ್ಚ ಭಲ್ಲೈಶ್ಚ ನಿಶಿತೈಃ ಶರೈಃ ।
ರಾಕ್ಷಸಾ ವಾನರೇಂದ್ರಾಣಾಂ ಬಿಭಿದುಃ ಪಾದಪಾನ್ ಶಿಲಾಃ ॥

ಅನುವಾದ

ವಾನರ ಸೇನಾನಾಯಕರು ಎಸೆದಿರುವ ವೃಕ್ಷ ಮತ್ತು ಶಿಲೆಗಳನ್ನು ರಾಕ್ಷಸರು ಯೋಧರು ತೀಕ್ಷ್ಣವಾದ ಕ್ಷುರಪ್ರ, ಅರ್ಧಚಂದ್ರ ಮತ್ತು ಭಲ್ಲವೆಂಬ ಬಾಣಗಳಿಂದ ಒಡೆದು ಮುರಿದುಹಾಕುತ್ತಿದ್ದರು.॥62॥

ಮೂಲಮ್ - 63

ವಿಕೀರ್ಣಾಃ ಪರ್ವತಾಸೈಶ್ಚ ದ್ರುಮಶ್ಛಿನ್ನೈಶ್ಚ ಸಂಯುಗೇ ।
ಹತೈಶ್ಚ ಕಪಿರಕ್ಷೋಭಿ ರ್ದುರ್ಗಮಾ ವಸುಧಾಭವತ್ ॥

ಅನುವಾದ

ಪುಡಿಯಾಗಿ ಬಿದ್ದಿರುವ ಪರ್ವತಗಳಿಂದ, ತುಂಡಾದ ವೃಕ್ಷಗಳಿಂದ, ರಾಕ್ಷಸರ ಮತ್ತು ವಾನರ ಹೆಣಗಳಿಂದ ಆ ಯುದ್ಧಭೂಮಿಯಲ್ಲಿ ಕಾಲಿಡಲೂ ಕಷ್ಟವಾಗುತ್ತಿತ್ತು.॥63॥

ಮೂಲಮ್ - 64

ತೇ ವಾನರಾ ಗರ್ವಿತಹೃಷ್ಟ ಚೇಷ್ಟಾಃ
ಸಂಗ್ರಾಮಮಾಸಾದ್ಯ ಭಯಂ ವಿಮುಚ್ಯ ।
ಯುದ್ಧಂ ಸ್ಮ ಸರ್ವೇ ಸಹ ರಾಕ್ಷಸೈಸ್ತೇ
ನಾನಾಯುಧಾಶ್ಚಕ್ರುರದೀನಸತ್ತ್ವಾಃ ॥

ಅನುವಾದ

ವಾನರರ ಎಲ್ಲ ಚೇಷ್ಟೆಗಳು ಹರ್ಷೋತ್ಸಾಹದಿಂದ ಕೂಡಿದ್ದವು. ಹೃದಯದಲ್ಲಿ ದೀನತೆ ಇಲ್ಲದೆ ಅವರು ರಾಕ್ಷಸರ ನಾನಾ ಪ್ರಕಾರದ ಆಯುಧ ಗಳನ್ನು ಕಸಿದುಕೊಂಡಿದ್ದರು. ಆದ್ದರಿಂದ ಅವರೆಲ್ಲರೂ ಸಂಗ್ರಾಮದಲ್ಲಿ ಭಯಬಿಟ್ಟು ಕಾದಾಡುತ್ತಿದ್ದರು.॥64॥

ಮೂಲಮ್ - 65

ತಸ್ಮಿನ್ಪ್ರವೃತ್ತೇ ತುಮುಲೇ ವಿಮರ್ದೇ
ಪ್ರಹೃಷ್ಯಮಾಣೇಷು ವಲೀಮುಖೇಷು ।
ನಿಪಾತ್ಯ ಮಾನೇಷು ಚ ರಾಕ್ಷಸೇಷು
ಮಹರ್ಷಯೋ ದೇವಗಣಾಶ್ಚ ನೇದುಃ ॥

ಅನುವಾದ

ಈ ಪ್ರಕಾರ ಭಯಂಕರ ಯುದ್ಧವಾದಾಗ ವಾನರರ ಕೈಮೇಲಾಗಿತ್ತು. ರಾಕ್ಷಸ ಸೈನಿಕರು ಸತ್ತು ಬೀಳುತ್ತಿದ್ದರು. ವಾನರರು ಆನಂದಭರಿತರಾದರು. ಆಗ ಮಹರ್ಷಿಗಳು, ದೇವತೆಗಳು ಹರ್ಷನಾದ ಮಾಡುತ್ತಿದ್ದರು.॥65॥

ಮೂಲಮ್ - 66

ತತೋ ಹಯಂ ಮಾರುತ ತುಲ್ಯವೇಗ-
ಮಾರುಹ್ಯ ಶಕ್ತಿಂ ನಿಶಿತಾಂ ಪ್ರಗೃಹ್ಯ ।
ನರಾಂತಕೋ ವಾನರರಾಜಸೈನ್ಯಮುಗ್ರಂ
ಮಹಾರ್ಣವಂ ಮೀನ ಇವಾವಿವೇಶ ॥

ಅನುವಾದ

ಬಳಿಕ ವಾಯುವಿನಂತೆ ವೇಗವುಳ್ಳ ಕುದುರೆಯನ್ನೇರಿ, ಕೈಯಲ್ಲಿ ತೀಕ್ಷ್ಣಶಕ್ತಿಯನ್ನು ಎತ್ತಿಕೊಂಡ ನರಾಂತಕನು ವಾನರರ ಭಯಂಕರ ಸೈನ್ಯದಲ್ಲಿ ಮತ್ಸ್ಯವು ಮಹಾಸಾರದಲ್ಲಿ ಪ್ರವೇಶಿಸಿದಂತೆ ಪ್ರವೇಶಿಸಿದನು.॥66॥

ಮೂಲಮ್ - 67

ಸ ವಾನರಾನ್ಸಪ್ತ ಶತಾನಿ ವೀರಃ
ಪ್ರಾಸೇನ ದೀಪ್ತೇನ ವಿನಿರ್ಬಿಭೇದ ।
ಏಕ ಕ್ಷಣೇನೇಂದ್ರ ರಿಪುರ್ಮಹಾತ್ಮಾ
ಜಘಾನಸೈನ್ಯಂ ಹರಿಪುಂಗವಾನಾಮ್ ॥

ಅನುವಾದ

ಆ ಮಹಾಕಾಯ ಇಂದ್ರದ್ರೋಹಿ ವೀರ ನಿಶಾಚರನು ಹೊಳೆಯುತ್ತಿರುವ ಭಲ್ಲೆಯಿಂದ ಒಬ್ಬನೇ ಏಳು ನೂರು ವಾನರರನ್ನು ಕೊಂದು, ಕ್ಷಣಾರ್ಧ ದಲ್ಲಿ ವಾನರರ ದೊಡ್ಡದಾದ ಸೈನ್ಯವನ್ನು ಸಂಹಾರ ಮಾಡಿದನು.॥67॥

ಮೂಲಮ್ - 68

ದದೃಶುಶ್ಚ ಮಹಾತ್ಮಾನಂ ಹಯಪೃಷ್ಠ ಪ್ರತಿಷ್ಠಿತಮ್ ।
ಚರಂತಂ ಹರಿಸೈನ್ಯೇಷು ವಿದ್ಯಾಧರ ಮಹರ್ಷಯಃ ॥

ಅನುವಾದ

ಕುದುರೆಯನ್ನೇರಿ ವಾನರ ಸೈನ್ಯದಲ್ಲಿ ವಿಚಾರಿಸುವ ಆ ಮಹಾಮನಸ್ವೀ ವೀರನನ್ನು ವಿದ್ಯಾಧರರು, ಮಹರ್ಷಿಗಳು ನೋಡಿದರು.॥68॥

ಮೂಲಮ್ - 69

ಸ ತಸ್ಯ ದದೃಶೇ ಮಾರ್ಗೋ ಮಾಂಸ ಶೋಣಿತಕರ್ದಮಃ ।
ಪತಿತೈಃ ಪರ್ವತಾಕಾರೈರ್ವಾನರೈರಭಿಸಂವೃತಃ ॥

ಅನುವಾದ

ಅವನು ಹೋದ ಮಾರ್ಗದಲ್ಲಿ ಧರಾಶಾಯಿಯಾದ ಪರ್ವತಾಕಾರದ ವಾನರರಿಂದ ಮುಚ್ಚಿಹೋಗುತ್ತಿತ್ತು ಹಾಗೂ ಅಲ್ಲಿ ರಕ್ತ-ಮಾಂಸದ ಕೆಸರೇ ಉಂಟಾಗುತ್ತಿತ್ತು.॥6.॥

ಮೂಲಮ್ - 70

ಯಾವದ್ವಿಕ್ರಮಿತುಂ ಬುದ್ಧಿಂ ಚಕ್ರುಃ ಪ್ಲವಂಗಪುಂಗವಾಃ ।
ತಾವದೇತಾನತಿಕ್ರಮ್ಯ ನಿರ್ಬಿಭೇದ ನರಾಂತಕಃ ॥

ಅನುವಾದ

ವಾನರರ ಪ್ರಧಾನವೀರರು ಪರಾಕ್ರಮ ತೋರುವ ವಿಚಾರ ಮಾಡುವುದೊಳಗೆಯೇ ನರಾಂತಕನು ಇವರೆಲ್ಲರನ್ನು ದಾಟಿ ಭಲ್ಲೆಯಿಂದ ಗಾಯಗೊಳಿಸುತ್ತಿದ್ದನು.॥70॥

ಮೂಲಮ್ - 71

ಜ್ವಲಂತಂ ಪ್ರಾಸಮುದ್ಯಮ್ಯ ಸಂಗ್ರಾಮಾಗ್ರೇ ನರಾಂತಕಃ ।
ದದಾಹ ಹರಿಸೈನ್ಯಾನಿ ವನಾನೀವ ವಿಭಾವಸುಃ ॥

ಅನುವಾದ

ಕಾಡುಗಿಚ್ಚು ಕಾಡನ್ನು ಸುಡುವಂತೆಯೇ ಪ್ರಜ್ವಲಿತ ಪ್ರಾಸವನ್ನೆತ್ತಿಕೊಂಡ ನರಾಂತಕನು ವಾನರ ಸೈನ್ಯವನ್ನು ಭಸ್ಮಮಾಡುತ್ತಿದ್ದನು.॥71॥

ಮೂಲಮ್ - 72

ಯಾವದುತ್ಪಾಟಯಾಮಾಸುರ್ವೃಕ್ಷಾನ್ ಶೈಲಾನ್ ವನೌಕಸಃ ।
ತಾವತ್ಪ್ರಾಸಹತಾಃ ಪೇತುರ್ವಜ್ರಕೃತ್ತಾ ಇವಾಚಲಾಃ ॥

ಅನುವಾದ

ವಾನರರು ವೃಕ್ಷ-ಪರ್ವತಗಳನ್ನು ಕೀಳುವಷ್ಟರಲ್ಲಿ ನರಾಂತನ ಭಲ್ಲೆಯ ಏಟು ತಿಂದು ವಜ್ರದ ಹೊಡೆತದಿಂದ ಪರ್ವತ ಪುಡಿ ಯಾಗುವಂತೆ ಸತ್ತುಹೋಗುತ್ತಿದ್ದರು.॥72॥

ಮೂಲಮ್ - 73

ದಿಕ್ಷು ಸರ್ವಾಸು ಬಲವಾನ್ ವಿಚಚಾರ ನರಾಂತಕಃ ।
ಪ್ರಮೃದ್ಗನ್ ಸರ್ವತೋ ಯುದ್ಧೇ ಪ್ರಾವೃಟ್ಕಾಲೇ ಯಥಾನಿಲಃ ॥

ಅನುವಾದ

ವರ್ಷಾಕಾಲದಲ್ಲಿ ಪ್ರಚಂಡವಾಯುವು ಎಲ್ಲ ವೃಕ್ಷಗಳನ್ನು ಮುರಿದು ಕಿತ್ತುಹಾಕುತ್ತಾ ಬೀಸುವಂತೆ ಬಲವಂತ ನರಾಂತಕನು ರಣಭೂಮಿಯಲ್ಲಿ ವಾನರರನ್ನು ಮರ್ದಿಸುತ್ತಾ ಸಂಚರಿಸುತ್ತಿದ್ದನು.॥73॥

ಮೂಲಮ್ - 74

ನ ಶೇಕುರ್ಧಾವಿತುಂ ವೀರಾ ನಸ್ಥಾತುಂ ಸ್ಪಂದಿತುಂ ಭಯಾತ್ ।
ಉತ್ಪತಂತಂ ಸ್ಥಿತಂ ಯಾಂತಂ ಸರ್ವಾನ್ವಿವ್ಯಾಧವೀರ್ಯವಾನ್ ॥

ಅನುವಾದ

ವಾನರ ವೀರರು ಭಯದಿಂದಾಗಿ ಓಡಲಾರದೆ, ನಿಂತುಕೊಳ್ಳಲಾರದೆ, ಬೇರೆ ಯಾವುದೇ ಚೇಷ್ಟೆಮಾಡಲಾಗುತ್ತಿರಲಿಲ್ಲ. ಪರಾಕ್ರಮಿ ನರಾಂತಕನು ನೆಗೆಯುತ್ತಾ ಎಲ್ಲ ವಾನರರನ್ನು ಭಲ್ಲೆಯಿಂದ ಕೊಲ್ಲುತ್ತಿದ್ದನು.॥74॥

ಮೂಲಮ್ - 75

ಏತೇನಾಂತಕ ಕಲ್ಪೇನ ಪ್ರಾಸೇನಾದಿತ್ಯತೇಜಸಾ ।
ಭಗ್ನಾನಿ ಹರಿಸೈನ್ಯಾನಿ ನಿಪೇತುರ್ಧರಣೀತಲೇ ॥

ಅನುವಾದ

ಆ ಭಲ್ಲೆಯು ಸೂರ್ಯನಂತೆ ಹೊಳೆಯುತ್ತಿತ್ತು ಹಾಗೂ ಯಮನಂತೆ ಭಯಂಕರವಾಗಿ ಕಂಡುಬರುತ್ತಿತ್ತು. ಆ ಒಂದೇ ಭಲ್ಲೆಯ ಏಟಿನಿಂದ ಗುಂಪು ಗುಂಪಾದ ವಾನರರು ಧರಾಶಾಯಿಯಾದರು.॥75॥

ಮೂಲಮ್ - 76

ವಜ್ರನಿಷ್ಪೇಷಸದೃಶಂ ಪ್ರಾಸಸ್ಯಾಭಿನಿಪಾತನಮ್ ।
ನ ಶೇಕುರ್ವಾನರಾಃ ಸೋಢುಂ ತೇ ವಿನೇದುರ್ಮಹಾಸ್ವನಮ್ ॥

ಅನುವಾದ

ವಜ್ರದ ಆಘಾತವನ್ನು ಎಣಿಸದ ಆ ಪ್ರಾಸದ ದಾರುಣ ಪ್ರಹಾರವನ್ನು ವಾನರರು ಸಹಿಸದಾದರು. ಅವರು ಜೋರಾಗಿ ಚೀತ್ಕರಿಸತೊಡಗಿದರು.॥76॥

ಮೂಲಮ್ - 77

ಪತತಾಂ ಹರಿ ವೀರಾಣಾಂ ರೂಪಾಣಿ ಪ್ರಚಕಾಶಿರೇ ।
ವಜ್ರಭಿನ್ನಾಗ್ರಕೂಟಾನಾಂ ಶೈಲಾನಾಂ ಪತತಾಮಿವ ॥

ಅನುವಾದ

ವಜ್ರಾಯುಧದ ಆಘಾತದಿಂದ ಪರ್ವತ ಶಿಖರಗಳು ವಿದೀರ್ಣವಾದಂತೆ, ವಾನರರು ಧರಾಶಾಯಿಯಾಗಿ ವಾನರರೂಪೀ ಪರ್ವತದಂತೆ ಕಂಡುಬರುತ್ತಿತ್ತು.॥77॥

ಮೂಲಮ್ - 78

ಯೇ ತು ಪೂರ್ವಂ ಮಹಾತ್ಮಾನಃ ಕುಂಭಕರ್ಣೇನ ಪಾತಿತಾಃ ।
ತೇ ಸ್ವಸ್ಥಾ ವಾನರ ಶ್ರೇಷ್ಠಾಃ ಸುಗ್ರೀವಮುಪತಸ್ಥಿರೇ ॥

ಅನುವಾದ

ಮೊದಲು ಕುಂಭಕರ್ಣನು ರಣಭೂಮಿಯಲ್ಲಿ ಬೀಳಿಸಿದ ಮಹಾಮನಸ್ವೀ ಶ್ರೇಷ್ಠವಾನರರು ಈಗ ಸ್ವಸ್ಥರಾಗಿ ಸುಗ್ರೀವನ ಸೇವೆಯಲ್ಲಿ ಉಪಸ್ಥಿತರಾದರು.॥78॥

ಮೂಲಮ್ - 79

ಪ್ರೇಕ್ಷಮಾಣಃ ಸ ಸುಗ್ರೀವೋ ದದೃಶೇ ಹರಿವಾಹಿನೀಮ್ ।
ನರಾಂತಕ ಭಯತ್ರಸ್ತಾಂ ವಿದ್ರವಂತೀಂ ಯತಸ್ತತಃ ॥

ಅನುವಾದ

ಸುಗ್ರೀವನು ಸುತ್ತಲೂ ದೃಷ್ಟಿಹರಿಸಿದಾಗ ನರಾಂತಕನ ಭಯದಿಂದ ವಾನರ ಸೈನ್ಯವು ಅತ್ತ-ಇತ್ತ ಓಡುತ್ತಿತ್ತು.॥79॥

ಮೂಲಮ್ - 80

ವಿದ್ರುತಾಂ ವಾಹಿನೀಂ ದೃಷ್ಟ್ವಾ ಸ ದದರ್ಶ ನರಾಂತಕಮ್ ।
ಗೃಹೀತಪ್ರಾಸಮಾಯಾಂತಂ ಹಯಪೃಷ್ಠಪ್ರತಿಷ್ಠಿತಮ್ ॥

ಅನುವಾದ

ಓಡುತ್ತಿರುವ ಸೈನ್ಯವನ್ನು ನೋಡಿ ಅವನು ನರಾಂತಕನ ಕಡೆಗೆ ದೃಷ್ಟಿ ಹರಿಸಿದನು. ಅವನು ಕುದುರೆಯನ್ನೇರಿ ಕೈಯಲ್ಲಿ ಭಲ್ಲೆಯನ್ನೆತ್ತಿಕೊಂಡು ಬರುತ್ತಿದ್ದನು.॥80॥

ಮೂಲಮ್ - 81

ದೃಷ್ಟ್ವೋವಾಚ ಮಹಾತೇಜಾಃ ಸುಗ್ರೀವೋ ವಾನರಾಧಿಪಃ ।
ಕುಮಾರಮಂಗದಂ ವೀರಂ ಶಕ್ರತುಲ್ಯ ಪರಾಕ್ರಮಮ್ ॥

ಅನುವಾದ

ಅವನನ್ನು ನೋಡಿ ಮಹಾತೇಜಸ್ವೀ ವಾನರರಾಜ ಸುಗ್ರೀವನು ಇಂದ್ರತುಲ್ಯ ಪರಾಕ್ರಮಿ ಕುಮಾರ ಅಂಗದನಲ್ಲಿ ಹೇಳಿದನು.॥81॥

ಮೂಲಮ್ - 82

ಗಚ್ಛೈನಂ ರಾಕ್ಷಸಂ ವೀರಂ ಯೋಽಸೌ ತುರಗಮಾಸ್ಥಿತಃ ।
ಕ್ಷೋಭಯಂತಂ ಹರಿಬಲಂ ಕ್ಷಿಪ್ರಂ ಪ್ರಾಣೈರ್ವಿಯೋಜಯ ॥

ಅನುವಾದ

ಮಗು! ಕುದುರೆಯನ್ನೇರಿ ವಾನರ ಸೈನ್ಯದಲ್ಲಿ ಕ್ಷೋಭೆಯನ್ನೆಬ್ಬಿಸುತ್ತಿರುವ ವೀರರಾಕ್ಷಸನನ್ನು ಎದುರಿಸಲು ಹೋಗಿ ಅವನನ್ನು ಬೇಗನೆ ಸಂಹರಿಸಿಬಿಡು.॥8.॥

ಮೂಲಮ್ - 83

ಸ ಭರ್ತುರ್ವಚನಂ ಶ್ರುತ್ವಾ ನಿಷ್ಪಪಾತಾಂಗದಸ್ತದಾ ।
ಅನೀಕಾನ್ಮೇಘಸಂಕಾಶಾದಂಶುಮಾನಿವ ವೀರ್ಯವಾನ್ ॥

ಅನುವಾದ

ಒಡೆಯನ ಆಜ್ಞೆಯನ್ನು ಕೇಳಿ ಪರಾಕ್ರಮಿ ಅಂಗದನು ಆಗ ಸೂರ್ಯನು ಮೋಡಗಳಿಂದ ಪ್ರಕಟನಾಗುವಂತೆ ಮೇಘಗಳಂತಿದ್ದ ವಾನರ ಸೈನ್ಯದಿಂದ ಹೊರಟರು.॥83॥

ಮೂಲಮ್ - 84

ಶೈಲಸಂಘಾತ ಸಂಕಾಶೋ ಹರೀಣಾಮುತ್ತಮೋಂಽಗದಃ ।
ರರಾಜಾಂಗದ ಸಂನದ್ಧಃ ಸಧಾತುರಿವ ಪರ್ವತಃ ॥

ಅನುವಾದ

ವಾನರ ಶ್ರೇಷ್ಠ ಅಂಗದನು ಶೈಲ ಸಮೂಹ ದಂತೆ ವಿಶಾಲ ಕಾಯನಾಗಿದ್ದನು. ಅವನು ತೊಳ್ಬಂದಿಗಳನ್ನು ಧರಿಸಿದ್ದನು, ಅದರಿಂದ ಸುವರ್ಣಾದಿ ಧಾತುಗಳಿಂದ ಕೂಡಿದ ಪರ್ವತದಂತೆ ಶೋಭಿಸುತ್ತಿದ್ದನು.॥84॥

ಮೂಲಮ್ - 85

ನಿರಾಯುಧೋ ಮಹಾತೇಜಾಃ ಕೇವಲಂ ನಖದಂಷ್ಟ್ರವಾನ್ ।
ನರಾಂತಕಮಭಿಕ್ರಮ್ಯವಾಲಿಪುತ್ರೋಽಬ್ರವೀದ್ ವಚಃ ॥

ಅನುವಾದ

ಮಹಾತೇಜಸ್ವಿ ವಾಲಿಪುತ್ರ ಅಂಗದನ ಬಳಿ ಯಾವುದೇ ಆಯುಧಗಳಿರಲಿಲ್ಲ. ಕೇವಲ ಉಗುರು, ಕೊರೆದಾಡೆಯೇ ಅವನ ಅಸ್ತ್ರ-ಶಸ್ತ್ರಗಳಾಗಿದ್ದವು. ಅವನು ನರಾಂತಕನ ಬಳಿಗೆ ಹೋಗಿ ಇಂತೆಂದನು.॥85॥

ಮೂಲಮ್ - 86

ತಿಷ್ಠ ಕಿಂ ಪ್ರಾಕೃತೈರೇಭಿರ್ಹರಿಭಿಸ್ತ್ವಂ ಕರಿಷ್ಯಸಿ ।
ಅಸ್ಮಿನ್ವಜ್ರಸಮಸ್ಪರ್ಶಂ ಪ್ರಾಸಂ ಕ್ಷಿಪ ಮಮೋರಸಿ ॥

ಅನುವಾದ

ಎಲವೋ ನಿಶಾಚರನೇ! ನಿಲ್ಲು! ಈ ಸಾಧಾರಣ ಕಪಿಗಳನ್ನು ಕೊಂದು ಏನು ಮಾಡುವೆ? ನಿನ್ನ ಭಲ್ಲೆಯ ಏಟು ವಜ್ರದಂತೆ ಅಸಹ್ಯವಾಗಿದೆಯಲ್ಲ, ಅದರಿಂದ ನನ್ನ ಎದೆಗೆ ಹೊಡಿ ನೋಡುವಾ.॥86॥

ಮೂಲಮ್ - 87

ಅಂಗದಸ್ಯ ವಚಃ ಶ್ರುತ್ವಾ ಪ್ರಚುಕ್ರೋಧ ನರಾಂತಕಃ ।
ಸಂದಶ್ಯ ದಶನೈರೋಷ್ಠಂ ನಿಃಶ್ವಸ್ಯ ಚ ಭುಜಂಗವತ್ ।
ಅಭಿಗಮ್ಯಾಂಗದಂ ಕ್ರುದ್ಧೋ ವಾಲಿಪುತ್ರಂ ನರಾಂತಕಃ ॥

ಅನುವಾದ

ಅಂಗದನ ಮಾತು ಕೇಳಿ ನರಾಂತಕನಿಗೆ ಭಾರೀ ಕ್ರೋಧ ಉಂಟಾಯಿತು. ಅವನು ಕುಪಿತನಾಗಿ ಅವುಡುಗಚ್ಚಿ ಸರ್ಪದಂತೆ ಬುಸುಗುಟ್ಟುತ್ತಾ ವಾಲಿಪುತ್ರ ಅಂಗದನ ಬಳಿಗೆ ಬಂದನು.॥87॥

ಮೂಲಮ್ - 88

ಪ್ರಾಸಂ ಸಮಾವಿಧ್ಯ ತದಾಂಗದಾಯ
ಸಮುಜ್ಜ್ವಲಂತಂ ಸಹಸೋತ್ಸ ಸರ್ಜ ।
ಸ ವಾಲಿಪುತ್ರೋರಸಿ ವಜ್ರಕಲ್ಪೇ
ಬಭೂವ ಭಗ್ನೋ ನ್ಯಪತಚ್ಚ ಭೂಮೌ ॥

ಅನುವಾದ

ಅವನು ಹೊಳೆಯುತ್ತಿರುವ ಆ ಭಲ್ಲೆಯನ್ನು ತಿರುಗಿಸುತ್ತಾ ಅಂಗದನಿಗೆ ಹೊಡೆದನು. ಅಂಗದನ ವಕ್ಷಃಸ್ಥಳವು ವಜ್ರದಂತೆ ಕಠೋರವಾಗಿತ್ತು. ನರಾಂತಕನ ಭಲ್ಲೆ ಎದೆಗೆ ತಗುಲಿ ಮುರಿದು ನೆಲಕ್ಕೆ ಬಿದ್ದುಹೋಯಿತು.॥88॥

ಮೂಲಮ್ - 89

ತಂ ಪ್ರಾಸಮಾಲೋಕ್ಯ ತದಾ ವಿಭಗ್ನಂ
ಸುಪರ್ಣ ಕೃತ್ತೋರಗ ಭೋಗಕಲ್ಪಮ್ ।
ತಲಂ ಸಮುದ್ಯಮ್ಯ ಸ ವಾಲಿಪುತ್ರ-
ಸ್ತುರಂಗಮಸ್ಯಾಭಿಜಘಾನ ಮೂರ್ಧ್ನಿ ॥

ಅನುವಾದ

ಆ ಭಲ್ಲೆಯು ಗರುಡನು ಕೊಂದಿರುವ ಸರ್ಪದ ಶರೀರದಂತೆ ತುಂಡುತುಂಡಾಗಿ ಬಿದ್ದಿರುವುದನ್ನು ನೋಡಿ ವಾಲಿಪುತ್ರ ಅಂಗದನು ಅಂಗೈಯನ್ನು ಎತ್ತಿ ನರಾಂತಕನ ಕುದುರೆಯ ತಲೆಯ ಮೇಲೆ ಜೋರಾಗಿ ಹೊಡೆದನು.॥8.॥

ಮೂಲಮ್ - 90

ನಿಭಗ್ನ ಪಾದಃ ಸ್ಫುಟಿತಾಕ್ಷಿತಾರೋ
ನಿಷ್ಕ್ರಾಂತ ಜಿಹ್ವೋಽಚಲ ಸಂನಿಕಾಶಃ ।
ಸ ತಸ್ಯ ವಾಜೀ ನಿಪಪಾತ ಭೂಮೌ
ತಲಪ್ರಹಾರೇಣ ವಿಶೀರ್ಣ ಮೂರ್ಧಾ ॥

ಅನುವಾದ

ಆ ಪ್ರಹಾರದಿಂದ ಕುದುರೆಯ ತಲೆ ಒಡೆದುಕಾಲುಗಳು ಜಾರಿದವು, ಕಣ್ಣುಗಳು ಒಡೆದುಹೋದವು, ನಾಲಿಗೆ ಹೊರಚಾಚಿ ಆ ಪರ್ವತಾಕಾರ ಕುದುರೆಯು ಪ್ರಾಣಹೀನವಾಗಿ ನೆಲಕ್ಕೆ ಉರುಳಿತು.॥90॥

ಮೂಲಮ್ - 91

ನರಾಂತಕಃ ಕ್ರೋಧವಶಂ ಜಗಾಮ
ಹತಂ ತುರಂಗಂ ಪತಿತಂ ಸಮೀಕ್ಷ್ಯ ।
ಸ ಮುಷ್ಟಿಮುದ್ಯಮ್ಯ ಮಹಾಪ್ರಭಾವೋ
ಜಘಾನ ಶೀರ್ಷೇ ಯುಧಿ ವಾಲಿಪುತ್ರಮ್ ॥

ಅನುವಾದ

ಕುದುರೆಯು ಸತ್ತುಬಿದ್ದಿರುವುದನ್ನು ನೋಡಿ ನರಾಂತಕನು ಕೆಂಡಾಮಂಡಲನಾದನು. ಆ ಪ್ರಭಾವಶಾಲಿ ನಿಶಾಚರನು ಮುಷ್ಟಿಬಿಗಿದು ವಾಲಿಕುಮಾರನ ತಲೆಗೆ ಹೊಡೆದನು.॥91॥

ಮೂಲಮ್ - 92

ಅಥಾಂಗದೋ ಮುಷ್ಟಿ ವಿಶೀರ್ಣ ಮೂರ್ಧಾ
ಸುಸ್ರಾವ ತೀವ್ರಂ ರುಧಿರಂ ಭೃಶೋಷ್ಣಮ್ ।
ಮುಹುರ್ವಿಜಜ್ವಾಲ ಮುಮೋಹ ಚಾಪಿ
ಸಂಜ್ಞಾಂ ಸಮಾಸಾದ್ಯ ವಿಸಿಸ್ಮಿಯೇ ಚ ॥

ಅನುವಾದ

ಮುಷ್ಟಿಯ ಆಘಾತದಿಂದ ಅಂಗದನ ತಲೆ ಒಡೆಯಿತು. ಅದರಿಂದ ಬಿಸಿ-ಬಿಸಿಯಾದ ರಕ್ತ ಹರಿಯತೊಡಗಿತು. ಅವನ ತಲೆ ಉರಿಯುತ್ತಿದ್ದು, ಮೂರ್ಛಿತನಾದನು. ಸ್ವಲ್ಪಹೊತ್ತಿನಲ್ಲಿ ಮೂರ್ಛೆ ತಳೆದು, ಆ ರಾಕ್ಷಸನ ಶಕ್ತಿಯನ್ನು ನೋಡಿ ಆಶ್ಚರ್ಯಚಕಿತನಾದನು.॥92॥

ಮೂಲಮ್ - 93

ಅಥಾಂಗದೋ ವಜ್ರಸಮಾನವೇಗಂ
ಸಂವರ್ತ್ಯ ಮುಷ್ಟಿಂ ಗಿರಿಶೃಂಗ ಕಲ್ಪಮ್ ।
ನಿಪಾತಯಾಮಾಸ ತದಾ ಮಹಾತ್ಮಾ
ನರಾಂತಕಸ್ಯೋರಸಿ ವಾಲಿಪುತ್ರಃ ॥

ಅನುವಾದ

ಮತ್ತೆ ಅಂಗದನು ಪರ್ವತಶಿಖರದಂತೆ ಮೃತ್ಯುವಿಗೆ ಸಮಾನವಾದ ಮುಷ್ಟಿಬಿಗಿದು, ಮಹಾತ್ಮಾ ವಾಲಿಕುಮಾರನು ನರಾಂತಕನ ವಕ್ಷಃಸ್ಥಳದಲ್ಲಿ ಪ್ರಹರಿಸಿದನು.॥93॥

ಮೂಲಮ್ - 94

ಸ ಮುಷ್ಟಿನಿರ್ಭಿನ್ನನಿಮಗ್ನವಕ್ಷಾ
ಜ್ವಾಲಾ ವಮನ್ಶೋಣಿತ ದಿಗ್ಧಗಾತ್ರಃ ।
ನರಾಂತಕೋ ಭೂಮಿತಲೇ ಪಪಾತ
ಯಥಾಚಲೋ ವಜ್ರನಿಪಾತ ಭಗ್ನಃ ॥

ಅನುವಾದ

ಮುಷ್ಟಿಯ ಆಘಾತದಿಂದ ನರಾಂತಕನ ಹೃದಯಒಡೆದುಹೋಯಿತು. ಅವನು ಬಾಯಿಂದ ಬೆಂಕಿಯ ಜ್ವಾಲೆಗಳು ಹೊರಟವು. ಶರೀರವೆಲ್ಲ ರಕ್ತದಿಂದ ತೊಯ್ದು ಹೋಯಿತು. ವಜ್ರಾಘಾತ ತಗುಲಿದ ಪರ್ವತದಂತೆ ಅವನು ನೆಲಕ್ಕೆ ಬಿದ್ದುಬಿಟ್ಟನು.॥94॥

ಮೂಲಮ್ - 95

ತದಾಂತರಿಕ್ಷೇ ತ್ರಿದಶೋತ್ತಮಾನಾಂ
ವನೌಕಸಾಂ ಚೈವ ಮಹಾಪ್ರಣಾದಃ ।
ಬಭೂವ ತಸ್ಮಿನ್ನಿ ಹತೇಗ್ರ್ಯವೀರ್ಯೇ
ನರಾಂತಕೇ ವಾಲಿಸುತೇನ ಸಂಖ್ಯೇ ॥

ಅನುವಾದ

ಯುದ್ಧದಲ್ಲಿ ವಾಲಿಕುಮಾರನು ಉತ್ತಮ ಪರಾಕ್ರಮಿ ನರಾಂತನನ್ನು ವಧಿಸಿದಾಗ ಆಕಾಶದಲ್ಲಿ ದೇವತೆಗಳು ಮತ್ತು ಭುವಿಯಲ್ಲಿ ವಾನರರು ಜೋರಾಗಿ ಹರ್ಷನಾದ ಮಾಡಿದರು.॥95॥

ಮೂಲಮ್ - 96

ಅಥಾಂಗದೋ ರಾಮಮನಃ ಪ್ರಹರ್ಷಣಂ
ಸುದುಷ್ಕರಂ ತಂ ಕೃತವಾನ್ ಹಿ ವಿಕ್ರಮಮ್ ।
ವಿಸಿಷ್ಮಿಯೇ ಸೋಽಪ್ಯಥ ಭೀಮಕರ್ಮಾ
ಪುನಶ್ಚ ಯುದ್ಧೇ ಸ ಬಭೂವ ಹರ್ಷಿತಃ ॥

ಅನುವಾದ

ಶ್ರೀರಾಮಚಂದ್ರನ ಮನಸ್ಸಿಗೆ ಅತ್ಯಂತ ಹರ್ಷತರುವ ಪರಮ ದುಷ್ಕರ ಕಾರ್ಯವನ್ನು ಅಂಗದನು ಮಾಡಿದ್ದನು. ಅದರಿಂದ ಶ್ರೀರಾಮನಿಗೆ ಭಾರೀ ವಿಸ್ಮಯವಾಯಿತು. ಬಳಿಕ ಭೀಷಣಕರ್ಮ ಮಾಡುವ ಅಂಗದನು ಪುನಃ ಯುದ್ಧಕ್ಕಾಗಿ ಹರ್ಷೋತ್ಸಾಹದಿಂದ ತುಂಬಿಹೋದನು.॥96॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಅರವತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥69॥