वाचनम्
ಭಾಗಸೂಚನಾ
ಕುಂಭಕರ್ಣನ ಮರಣದಿಂದ ರಾವಣನ ದುಃಖ
ಮೂಲಮ್ - 1
ಕುಂಭಕರ್ಣಂ ಹತಂ ದೃಷ್ಟ್ವಾ ರಾಘವೇಣ ಮಹಾತ್ಮನಾ ।
ರಾಕ್ಷಸಾ ರಾಕ್ಷಸೇಂದ್ರಾಯ ರಾವಣಾಯ ನ್ಯವೇದಯನ್ ॥
ಅನುವಾದ
ಮಹಾತ್ಮಾ ಶ್ರೀರಾಮಚಂದ್ರನು ಕುಂಭಕರ್ಣನನ್ನು ವಧಿಸಿದುದನ್ನು ನೋಡಿ ರಾಕ್ಷಸರು ಹೋಗಿ ರಾಜಾ ರಾವಣನ ಬಳಿಯಲ್ಲಿ ಹೇಳಿದರು.॥1॥
ಮೂಲಮ್ - 2
ರಾಜನ್ ಸ ಕಾಲಸಂಕಾಶಃ ಸಂಯುಕ್ತಃ ಕಾಲಕರ್ಮಣಾ ।
ವಿದ್ರಾವ್ಯ ವಾನರೀಂ ಸೇನಾಂ ಭಕ್ಷಯಿತ್ವಾ ಚ ವಾನರಾನ್ ॥
ಅನುವಾದ
ಮಹಾರಾಜಾ! ಕಾಲನಂತಿದ್ದ ಭಯಂಕರ ಪರಾಕ್ರಮಿ ಕುಂಭಕರ್ಣನು ವಾನರ ಸೈನ್ಯವನ್ನು ಓಡಿಸಿ, ಅನೇಕ ವಾನರರನ್ನು ತನ್ನ ತುತ್ತಾಗಿಸಿಕೊಂಡು ಸ್ವತಃ ಕಾಲನಿಗೆ ಕವಳವಾದನು.॥2॥
ಮೂಲಮ್ - 3
ಪ್ರತಪಿತ್ವಾ ಮುಹೂರ್ತಂ ತು ಪ್ರಶಾಂತೋ ರಾಮತೇಜಸಾ ।
ಕಾಯೇನಾರ್ಧಪ್ರವಿಷ್ಟೇನ ಸಮುದ್ರಂ ಭೀಮದರ್ಶನಮ್ ॥
ಮೂಲಮ್ - 4
ನಿಕೃತ್ತನಾಸಾ ಕರ್ಣೇನ ವಿಕ್ಷರದ್ರುಧಿರೇಣ ಚ ।
ರುದ್ಧ್ವಾ ದ್ವಾರಂ ಶರೀರೇಣ ಲಂಕಾಯಾಃ ಪರ್ವತೋಪಮಃ ॥
ಮೂಲಮ್ - 5
ಕುಂಭಕರ್ಣಸ್ತವ ಭ್ರಾತಾ ಕಾಕುತ್ಸ್ಥಶರಪೀಡಿತಃ ।
ಅಗಂಡಭೂತೋ ವಿಕೃತೋ ದಾವದಗ್ಧ ಇವ ದ್ರುಮಃ ॥
ಅನುವಾದ
ಅವನು ಎರಡು ಘಳಿಗೆ ತನ್ನ ಪ್ರತಾಪದಿಂದ ಬೆಳಗಿ ಕೊನೆಗೆ ಶ್ರೀರಾಮನ ತೇಜದಿಂದ ಶಾಂತನಾದನು. ಅರ್ಧಶರೀರ ಭಯಾನಕವಾದ ಸಮುದ್ರದಲ್ಲಿ ಬಿದ್ದುಹೋಯಿತು ಹಾಗೂ ಅರ್ಧ ಶರೀರ (ಮಸ್ತಕ)ವು ಕಿವಿ, ಮೂಗು ತುಂಡಾದ್ದರಿಂದ ರಕ್ತ ಸುರಿಯುತ್ತಾ ಲಂಕೆಯ ದ್ವಾರದಲ್ಲಿ ಬಿತ್ತು. ನಿಮ್ಮ ತಮ್ಮ ಪರ್ವತಾಕಾರ ಕುಂಭಕರ್ಣನ ಆ ಮಸ್ತಕವು ಲಂಕೆಯ ದ್ವಾರವನ್ನು ತಡೆದು ಬಿದ್ದಿದೆ. ಅವನು ಶ್ರೀರಾಮನ ಬಾಣ ಗಳಿಂದ ಘಾಸಿಗೊಂಡು ಅಗಂಡಭೂತವಾಗಿ (ಕೈ-ಕಾಲು, ಮಸ್ತಕ ಹೀನನಾಗಿ) ದಾವಾನಲದಿಂದ ದಗ್ಧವಾದ ಮರದಂತೆ ನಾಶವಾಗಿ ಹೋದನು.॥3-5॥
ಮೂಲಮ್ - 6
ಶ್ರುತ್ವಾ ವಿನಿಹತಂ ಸಂಖ್ಯೇ ಕುಂಭಕರ್ಣಂ ಮಹಾಬಲಮ್ ।
ರಾವಣಃ ಶೋಕಸಂತಪ್ತೋ ಮುಮೋಹ ಚ ಪಪಾತ ಚ ॥
ಅನುವಾದ
‘ಮಹಾಬಲೀ ಕುಂಭಕರ್ಣನು ಯುದ್ಧದಲ್ಲಿ ಸತ್ತುಹೋದನು’ ಎಂದು ಕೇಳಿ ರಾವಣನು ಶೋಕಸಂತಪ್ತನಾಗಿ ಮೂರ್ಛಿತನಾಗಿ ನೆಲಕ್ಕೆ ಬಿದ್ದು ಬಿಟ್ಟನು.॥6॥
ಮೂಲಮ್ - 7
ಪಿತೃವ್ಯಂ ನಿಹತಂ ಶ್ರುತ್ವಾ ದೇವಾಂತಕ ನರಾಂತಕೌ ।
ತ್ರಿಶಿರಾಶ್ಚಾತಿಕಾಯಶ್ಚ ರುರುದುಃ ಶೋಕಪೀಡಿತಾಃ ॥
ಅನುವಾದ
ತಮ್ಮ ಚಿಕ್ಕಪ್ಪನ ನಿಧನದ ವಾರ್ತೆ ಕೇಳಿ, ದೇವಾಂತಕ, ನರಾಂತಕ, ತ್ರಿಶಿರ ಮತ್ತು ಅತಿಕಾಯ ಇವರು ದುಃಖದಿಂದ ನೊಂದು ಬಿಕ್ಕಿಬಿಕ್ಕಿ ಅಳತೊಡಗಿದರು.॥7॥
ಮೂಲಮ್ - 8
ಭ್ರಾತರಂ ನಿಹತಂ ಶ್ರುತ್ವಾ ರಾಮೇಣಾಕ್ಲಿಷ್ಟ ಕರ್ಮಣಾ ।
ಮಹೋದರಮಹಾಪಾರ್ಶ್ವೌ ಶೋಕಾಕ್ರಾಂತೌ ಬಭೂವತುಃ ॥
ಅನುವಾದ
ಅನಾಯಾಸವಾಗಿ ಮಹತ್ಕಾರ್ಯಗಳನ್ನು ಮಾಡುವ ಶ್ರೀರಾಮನು ಕುಂಭಕರ್ಣನನ್ನು ಸಂಹರಿಸಿದನೆಂಬ ವಾರ್ತೆ ಕೇಳಿ, ಅವನ ಸೋದರರಾದ ಮಹೋದರ ಮತ್ತು ಮಹಾ ಪಾರ್ಶ್ವರೂ ಶೋಕಾಕ್ರಾಂತರಾದರು.॥8॥
ಮೂಲಮ್ - 9
ತತಃ ಕೃಚ್ಛ್ರಾತ್ಸ ಮಾಸಾದ್ಯ ಸಂಜ್ಞಾಂ ರಾಕ್ಷಸಪುಂಗವಃ ।
ಕುಂಭಕರ್ಣ ವಧಾದ್ದೀನೋ ವಿಲಲಾಪಾಕುಲೇಂದ್ರಿಯಃ ॥
ಅನುವಾದ
ಅನಂತರ ಬಹಳ ಕಷ್ಟದಿಂದ ಎಚ್ಚರಗೊಂಡ ರಾವಣನು ಕುಂಭಕರ್ಣನ ವಧೆಯಿಂದ ದುಃಖಿತನಾಗಿ ವಿಲಾಪಿಸುತ್ತಾ, ಅವನ ಇಂದ್ರಿಯಗಳೆಲ್ಲ ಶೋಕದಿಂದ ವ್ಯಾಕುಲಗೊಂಡವು..॥9॥
ಮೂಲಮ್ - 10
ಹಾ ವೀರ ರಿಪುದರ್ಪಘ್ನ ಕುಂಭಕರ್ಣ ಮಹಾಬಲ ।
ತ್ವಂ ಮಾಂ ವಿಹಾಯ ವೈ ದೈವಾದ್ಯಾತೋಽಸಿ ಯಮಸಾದನಮ್ ॥
ಅನುವಾದ
ಅವನು ಅಳುತ್ತಾ ಹೇಳುತ್ತಾನೆ- ಅಯ್ಯೋ! ಮಹಾಬಲಿ ವೀರನೇ! ಶತ್ರುಗಳ ದರ್ಪ ವಿಧ್ವಂಶಕನೇ! ಕುಂಭಕರ್ಣನೇ! ದೈವವಶದಿಂದ ನನ್ನನ್ನು ಅಸಹಾಯಕನಾಗಿಸಿ ನೀನು ಯಮಾಲಯಕ್ಕೆ ತೆರಳಿದೆಯಲ್ಲ.॥10॥
ಮೂಲಮ್ - 11
ಮಮ ಶಲ್ಯಮನುದ್ಧತ್ಯ ಬಾಂಧವಾನಾಂ ಮಹಾಬಲ ।
ಶತ್ರುಸೈನ್ಯಂ ಪ್ರತಾಪ್ಯೈಕಃ ಕ್ವ ಮಾಂ ಸಂತ್ಯಜ್ಯ ಗಚ್ಛಸಿ ॥
ಅನುವಾದ
ಮಹಾಬಲೀ ವೀರನೇ! ನೀನು ನನ್ನ ಹಾಗೂ ಈ ಬಂಧು-ಬಾಂಧವರ ಕಂಟಕ ದೂರಮಾಡದೆಯೇ ಶತ್ರು ಸೈನ್ಯವನ್ನು ಸಂತಪ್ತಗೊಳಿಸಿ ನನ್ನನ್ನು ಬಿಟ್ಟು ಒಬ್ಬನೇ ಹೊರಟು ಹೋಗುತ್ತಿದ್ದೆಯಲ್ಲ.॥11॥
ಮೂಲಮ್ - 12
ಇದಾನೀಂ ಖಲ್ವಹಂ ನಾಸ್ಮಿ ಯಸ್ಯ ಮೇ ಪತಿತೋ ಭುಜಃ ।
ದಕ್ಷಿಣೋಽಯಂ ಸಮಾಶ್ರಿತ್ಯ ನ ಬಿಭೇಮಿ ಸುರಾಸುರಾತ್ ॥
ಅನುವಾದ
ಈಗ ನಾನು ಖಂಡಿತವಾಗಿ ಶೂನ್ಯನಾಗಿ ಬಿಟ್ಟೆ, ಏಕೆಂದರೆ ಯಾರು ನನ್ನ ಬಲಭುಜದಂತಿದ್ದನೋ, ಯಾರ ಭರವಸೆಯಿಂದ ನಾನು ದೇವಾಸುರರಿಗೂ ಹೆದರುತ್ತಿರಲಿಲ್ಲವೋ ಆ ಕುಂಭಕರ್ಣನು ಧರಾಶಾಯಿ ಆದನು.॥12॥
ಮೂಲಮ್ - 13
ಕಥಮೇವಂ ವಿಧೋ ವೀರೋ ದೇವದಾನವ ದರ್ಪಹಾ ।
ಕಾಲಾಗ್ನಿಪ್ರತಿಮೋ ಹ್ಯದ್ಯ ರಾಘವೇಣ ರಣೇ ಹತಃ ॥
ಅನುವಾದ
ಕಾಲಾಗ್ನಿಯಂತೆ ಕಂಡುಬರುವ ದೇವ-ದಾನವರ ದರ್ಪವನ್ನು ಮುರಿಯುತ್ತಿದ್ದ ವೀರನು ಇಂದು ರಣಕ್ಷೇತ್ರದಲ್ಲಿ ರಾಮನ ಕೈಯಿಂದ ಹೇಗೆ ಹತನಾದನು.॥13॥
ಮೂಲಮ್ - 14
ಯಸ್ಯ ತೇ ವಜ್ರನಿಷ್ಪೇಷೋ ನ ಕುರ್ಯಾದ್ ವ್ಯಸನಂ ಸದಾ ।
ಸ ಕಥಂ ರಾಮಬಾಣಾರ್ತಃ ಪ್ರಸುಪ್ತೋಽಸಿ ಮಹೀತಲೇ ॥
ಅನುವಾದ
ತಮ್ಮನೇ! ನಿನಗೆ ವಜ್ರಾಯುಧದ ಪ್ರಹಾರವೂ ಏನೂ ಮಾಡುತ್ತಿರಲಿಲ್ಲ. ಅಂತಹ ನೀನು ಇಂದು ರಾಮನ ಬಾಣಗಳಿಂದ ಪೀಡಿತನಾಗಿ ಭೂತಲದಲ್ಲಿ ಏಕೆ ಮಲಗಿರುವೆ.॥14॥
ಮೂಲಮ್ - 15
ಏತೇ ದೇವಗಣಾಃ ಸಾರ್ಧಮೃಷಿಭಿರ್ಗಗನೇ ಸ್ಥಿತಾಃ ।
ನಿಹತಂ ತ್ವಾಂ ರಣೇದೃಷ್ಟ್ವಾ ವಿನದಂತಿ ಪ್ರಹರ್ಷಿತಾಃ ॥
ಅನುವಾದ
ಇಂದು ಸಮರಾಂಗಣದಲ್ಲಿ ನೀನು ಸತ್ತಿರುವುದನ್ನು ನೋಡಿ ಆಕಾಶದಲ್ಲಿ ನಿಂತಿರುವ ಈ ಋಷಿಗಳ ಸಹಿತ ದೇವತೆಗಳು ಹರ್ಷನಾದ ಮಾಡುತ್ತಿದ್ದಾರೆ.॥15॥
ಮೂಲಮ್ - 16
ಧ್ರುವಮದ್ಯೈವ ಸಂಹೃಷ್ಟಾ ಲಬ್ಧಲಕ್ಷಾಃ ಪ್ಲವಂಗಮಾಃ ।
ಆರೋಕ್ಷ್ಯಂತೀಹ ದುರ್ಗಾಣಿ ಲಂಕಾದ್ವಾರಾಣಿ ಸರ್ವಶಃ ॥
ಅನುವಾದ
ನಿಶ್ಚಯವಾಗಿ ಈಗ ಇಂತಹ ಸಂದರ್ಭನೋಡಿ ಹರ್ಷಗೊಂಡ ವಾನರರು ಇಂದೇ ಲಂಕೆಯ ಸಮಸ್ತ ದುರ್ಗಮ ದ್ವಾರಗಳನ್ನು ಆಕ್ರಮಿಸುವರು.॥16॥
ಮೂಲಮ್ - 17
ರಾಜ್ಯೇನ ನಾಸ್ತಿ ಮೇ ಕಾರ್ಯಂ ಕಿಂ ಕರಿಷ್ಯಾಮಿ ಸೀತಯಾ ।
ಕುಂಭಕರ್ಣ ವಿಹೀನಸ್ಯಜೀವಿತೇ ನಾಸ್ತಿ ಮೇ ಮತಿಃ ॥
ಅನುವಾದ
ಈಗ ನನಗೆ ರಾಜ್ಯದಿಂದ ಯಾವ ಪ್ರಯೋಜನವೂ ಇಲ್ಲ, ಸೀತೆಯನ್ನು ಪಡೆದು ನಾನೇನು ಮಾಡಲಿ? ಕುಂಭಕರ್ಣನಲ್ಲದೆ ಬದುಕುಳಿಯುವ ಮನಸ್ಸೇ ನನಗಿಲ್ಲ.॥17॥
ಮೂಲಮ್ - 18
ಯದ್ಯಹಂ ಭ್ರಾತೃಹಂತಾರಂ ನ ಹನ್ಮಿ ಯುಧಿ ರಾಘವಮ್ ।
ನನು ಮೇ ಮರಣಂ ಶ್ರೇಯೋ ನ ಚೇದಂ ವ್ಯರ್ಥಜೀವಿತಮ್ ॥
ಅನುವಾದ
ಯುದ್ಧದಲ್ಲಿ ನನ್ನ ತಮ್ಮನನ್ನು ವಧೆಮಾಡಿದ ರಾಮನನ್ನು ಕೊಲ್ಲದಿದ್ದರೆ ನಾನು ಸಾಯುವುದೇ ಒಳಿತು. ಈ ನಿರರ್ಥಕ ಜೀವನವನ್ನು ಸುರಕ್ಷಿತವಾಗಿಡುವುದು ಎಂದಿಗೂ ಒಳ್ಳೆಯದಲ್ಲ.॥18॥
ಮೂಲಮ್ - 19
ಅದ್ಯೈವ ತಂ ಗಮಿಷ್ಯಾಮಿ ದೇಶಂ ಯತ್ರಾನುಜೋ ಮಮ ।
ನಹಿ ಭ್ರಾತೃನ್ ಸಮುತ್ಸಜ್ಯ ಕ್ಷಣಂ ಜೀವಿತುಮುತ್ಸಹೇ ॥
ಅನುವಾದ
ನನ್ನ ತಮ್ಮ ಕುಂಭಕರ್ಣನು ಹೋದ ಊರಿಗೇ ನಾನು ಇಂದೇ ಹೊರಟುಹೋಗುವೆನು. ನಾನು ನನ್ನ ತಮ್ಮಂದಿರನ್ನು ಬಿಟ್ಟು ಕ್ಷಣಕಾಲವೂ ಬದುಕುಳಿಯಲು ಬಯಸುವುದಿಲ್ಲ.॥19॥
ಮೂಲಮ್ - 20
ದೇವಾ ಹಿ ಮಾಂ ಹಸಿಷ್ಯಂತಿದೃಷ್ಟ್ವಾ ಪೂರ್ವಾಪಕಾರಿಣಮ್ ।
ಕಥಮಿಂದ್ರಂ ಜಯಿಷ್ಯಾಮಿ ಕುಂಭಕರ್ಣ ಹತೇ ತ್ವಯಿ ॥
ಅನುವಾದ
ನಾನು ಮೊದಲು ದೇವತೆಗಳನ್ನು ಅಪಮಾನಪಡಿಸಿದ್ದೆ, ಈಗ ಅವರು ನನ್ನನ್ನು ನೋಡಿ ನಗುವರು. ಅಯ್ಯೋ! ಕುಂಭಕರ್ಣನೇ! ನೀನು ಸತ್ತು ಹೋದ ಮೇಲೆ ಈಗ ನಾನು ಇಂದ್ರನನ್ನು ಹೇಗೆ ಜಯಿಸಲಿ.॥20॥
ಮೂಲಮ್ - 21
ತದಿದಂ ಮಾಮನುಪ್ರಾಪ್ತಂ ವಿಭೀಷಣವಚಃ ಶುಭಮ್ ।
ಯದಜ್ಞಾನಾನ್ಮಯಾ ತಸ್ಯನ ಗೃಹೀತಂ ಮಹಾತ್ಮನಃ ॥
ಅನುವಾದ
ಮಹಾತ್ಮಾ ವಿಭೀಷಣನು ಹೇಳಿದ ಉತ್ತಮ ಮಾತುಗಳನ್ನು ಅಜ್ಞಾನವಶ ಸ್ವೀಕರಿಸಲಿಲ್ಲ. ಅದು ಇಂದು ನನ್ನ ಮೇಲೆ ಪ್ರತ್ಯಕ್ಷವಾಗಿ ಬಂದೊದಗಿದೆ.॥21॥
ಮೂಲಮ್ - 22
ವಿಭೀಷಣವಚಸ್ತಾವತ್ ಕುಂಭಕರ್ಣ ಪ್ರಹಸ್ತಯೋಃ ।
ವಿನಾಶೋಯಂ ಸಮುತ್ಪನ್ನೋ ಮಾಂ ವ್ರೀಡಯತಿ ದಾರುಣಃ ॥
ಅನುವಾದ
ಕುಂಭಕರ್ಣ ಮತ್ತು ಪ್ರಹಸ್ತರ ಈ ದಾರುಣ ವಿನಾಶ ಉತ್ಪನ್ನವಾದಾಗಿನಿಂದ ವಿಭೀಷಣನ ಮಾತು ನೆನಪಾಗಿ ನನ್ನನ್ನು ಲಜ್ಜಿತವನ್ನಾಗಿಸಿದೆ.॥22॥
ಮೂಲಮ್ - 23
ತಸ್ಯಾಯಂ ಕರ್ಮಣಃ ಪ್ರಾಪ್ತೋ ವಿಪಾಕೋ ಮಮ ಶೋಕದಃ ।
ಯನ್ಮಯಾ ಧಾರ್ಮಿಕಃ ಶ್ರೀಮಾನ್ ಸ ನಿರಸ್ತೋ ವಿಭೀಷಣಃ ॥
ಅನುವಾದ
ಧರ್ಮಪರಾಯಣ ಶ್ರೀಮಾನ್ ವಿಭೀಷಣನನ್ನು ನಾನು ಮನೆಯಿಂದ ಹೊರಹಾಕಿದ್ದೇನೋ, ಅದೇ ಕರ್ಮದ ಈ ಶೋಕದಾಯಕ ಪರಿಣಾಮ ಈಗ ನನಗೆ ಭೋಗಿಸಬೇಕಾಯಿತು.॥23॥
ಮೂಲಮ್ - 24
ಇತಿ ಬಹುವಿಧಮಾಕುಲಾಂತರಾತ್ಮಾ
ಕೃಪಣಮತೀವ ವಿಲಪ್ಯ ಕುಂಭಕರ್ಣಮ್ ।
ನ್ಯಪತದಪಿ ದಶಾನನೋ ಭೃಶಾರ್ತ-
ಸ್ತಮನುಜಮಿಂದ್ರರಿಪುಂ ಹತಂ ವಿದಿತ್ವಾ ॥
ಅನುವಾದ
ಹೀಗೆ ಬಗೆಬಗೆಯಾಗಿ ದೀನನಾಗಿ ಅತ್ಯಂತ ವಿಲಾಪ ಮಾಡಿ ವ್ಯಾಕುಲಚಿತ್ತನಾದ ದಶಮುಖ ರಾವಣನು ತನ್ನ ತಮ್ಮ ಇಂದ್ರಶತ್ರು ಕುಂಭಕರ್ಣನ ವಧೆಯನ್ನು ಸ್ಮರಿಸುತ್ತಾ ಬಹಳ ವ್ಯಥಿತವಾಗಿ ಪುನಃ ಭೂಮಿಗೆ ಬಿದ್ದು ಬಿಟ್ಟನು.॥24॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಅರವತ್ತೆಂಟನೆ ಸರ್ಗ ಪೂರ್ಣವಾಯಿತು.॥68॥