वाचनम्
ಭಾಗಸೂಚನಾ
ಕುಂಭಕರ್ಣನ ಘೋರಯುದ್ಧ, ಶ್ರೀರಾಮನಿಂದ ಕುಂಭಕರ್ಣನ ವಧೆ
ಮೂಲಮ್ - 1
ತೇ ನಿವೃತ್ತಾ ಮಹಾಕಾಯಾಃ ಶ್ರುತ್ವಾಂಗದವಚಸ್ತದಾ ।
ನೈಷ್ಠಿಕೀಂ ಬುದ್ಧಿಮಾಸ್ಥಾಯ ಸರ್ವೇ ಸಂಗ್ರಾಮಕಾಂಕ್ಷಿಣಃ ॥
ಅನುವಾದ
ಅಂಗದನು ಆಡಿದ ಮಾತನ್ನು ಕೇಳಿ ಆ ವಿಶಾಲಕಾಯ ವಾನರರೆಲ್ಲರೂ ಸಾಯಲು ನಿಶ್ಚಯಿಸಿ ಯುದ್ಧಕ್ಕಾಗಿ ಮರಳಿ ಬಂದರು.॥1॥
ಮೂಲಮ್ - 2
ಸಮುದೀರಿತವೀರ್ಯಾಸ್ತೇ ಸಮಾರೋಪಿತ ವಿಕ್ರಮಾಃ ।
ಪರ್ಯವಸ್ಥಾಪಿತಾ ವಾಕ್ಯೈರಂಗದೇನ ಬಲೀಯಸಾ ॥
ಅನುವಾದ
ಮಹಾಬಲಿ ಅಂಗದನು ಅವರಲ್ಲಿ ಹಿಂದಿನ ಪರಾಕ್ರಮವನ್ನು ವರ್ಣಿಸಿ, ಅವರನ್ನು ತನ್ನ ಮಾತುಗಳಿಂದ ಸುದೃಢ ಹಾಗೂ ಬಲ-ವಿಕ್ರಮಸಂಪನ್ನರಾಗಿಸಿ ಯುದ್ಧಕ್ಕಾಗಿ ಹುರಿದುಂಬಿಸಿದನು.॥2॥
ಮೂಲಮ್ - 3
ಪ್ರಯಾತಾಶ್ಚ ಗತಾ ಹರ್ಷಂ ಮರಣೇ ಕೃತನಿಶ್ಚಯಾಃ ।
ಚಕ್ರುಃ ಸುತುಮುಲಂ ಯುದ್ಧಂ ವಾನರಾಸ್ತ್ಯಕ್ತ ಜೀವಿತಾಃ ॥
ಅನುವಾದ
ಆಗ ಆ ವಾನರರು ಪ್ರಾಣಾರ್ಪಣೆಯನ್ನು ನಿಶ್ಚಯಿಸಿ, ಹರ್ಷದೊಂದಿಗೆ ಮುನ್ನುಗ್ಗಿದರು ಹಾಗೂ ಜೀವದ ಹಂಗನ್ನು ತೊರೆದು ಅತ್ಯಂತ ಭಯಂಕರ ಯುದ್ಧ ಮಾಡತೊಡಗಿದರು.॥3॥
ಮೂಲಮ್ - 4
ಅಥ ವೃಕ್ಷಾನ್ಮಹಾಕಾಯಾಃ ಸಾನೂನಿ ಸುಮಹಾಂತಿ ಚ ।
ವಾನರಾಸ್ತೂರ್ಣಮುದ್ಯಮ್ಯ ಕುಂಭಕರ್ಣಮಭಿದ್ರವನ್ ॥
ಅನುವಾದ
ಆ ವಿಶಾಲಕಾಯ ವಾನರವೀರರು ವೃಕ್ಷ ಹಾಗೂ ದೊಡ್ಡ ದೊಡ್ಡ ಪರ್ವತ ಶಿಖರಗಳನ್ನೆತ್ತಿ ಕೊಂಡು ವೇಗವಾಗಿ ಕುಂಭಕರ್ಣನನ್ನು ಆಕ್ರಮಿಸಿದರು.॥4॥
ಮೂಲಮ್ - 5
ಕುಂಭಕರ್ಣಃ ಸುಸಂಕ್ರುದ್ಧೋ ಗದಾಮುದ್ಯಮ್ಯ ವೀರ್ಯವಾನ್ ।
ಧರ್ಷಯನ್ ಸ ಮಹಾಕಾಯಃ ಸಮಂತಾದ್ವ್ಯಕ್ಷಿಪದ್ ಲಿರಿಪೂನ್ ॥
ಅನುವಾದ
ಆದರೆ ಅತ್ಯಂತ ಕ್ರೋಧಗೊಂಡು ವಿಕ್ರಮಶಾಲೀ ಮಹಾಕಾಯ ಕುಂಭ ಕರ್ಣನು ಗದೆಯನ್ನೆತ್ತಿಕೊಂಡು ಶತ್ರುಗಳನ್ನು ಘಾಸಿಪಡಿಸಿ ಎಲ್ಲೆಡೆ ಚದುರಿಸಿಬಿಟ್ಟನು.॥5॥
ಮೂಲಮ್ - 6
ಶತಾನಿ ಸಪ್ತ ಚಾಷ್ಟೌ ಚ ಸಹಸ್ರಾಣಿ ಚ ವಾನರಾಃ ।
ಪ್ರಕೀರ್ಣಾಃ ಶೇರತೇ ಭೂಮೌ ಕುಂಭಕರ್ಣೇನ ತಾಡಿತಾಃ ॥
ಅನುವಾದ
ಕುಂಭಕರ್ಣನ ಪ್ರಹಾರದಿಂದ ಎಂಟುಸಾವಿರ ಏಳುನೂರು ವಾನರರು ಧರಶಾಯಿಯಾದರು.॥6॥
ಮೂಲಮ್ - 7
ಷೋಡಶಾಷ್ಟೌ ಚ ದಶ ಚ ವಿಂಶತ್ರಿಂ ಶತ್ತಥೈವ ಚ ।
ಪರಿಕ್ಷಿಪ್ಯ ಚ ಬಾಹುಭ್ಯಾಂ ಸ್ವಾದನ್ ಸ ಪರಿಧಾವತಿ ।
ಭಕ್ಷಯನ್ ಭೃಶಸಂಕ್ರುದ್ಧೋ ಗರುಡಃ ಪನ್ನಗಾನಿವ ॥
ಅನುವಾದ
ಅವನು ಹದಿನಾರು, ಎಂಟು, ಹತ್ತು, ಇಪ್ಪತ್ತು, ಮೂವತ್ತು-ಮೂವತ್ತು ವಾನರರನ್ನು ಭುಜಗಳಿಂದ ಬಾಚಿಕೊಳ್ಳುತ್ತಿದ್ದನು. ಗರುಡನು ಸರ್ಪಗಳನ್ನು ತಿನ್ನುವಂತೆ ಅತ್ಯಂತ ಕ್ರೋಧದಿಂದ ಅವನ್ನು ತಿಂದುಹಾಕುತ್ತಾ, ಎಲ್ಲೆಡೆ ಓಡುತ್ತಾ ಸಂಚರಿಸುತ್ತಿದ್ದನು.॥7॥
ಮೂಲಮ್ - 8
ಕೃಚ್ಛ್ರೇಣ ಚ ಸಮಾಶ್ವಸ್ತಾಃ ಸಂಗಮ್ಯ ಚ ತತಸ್ತತಃ ।
ವೃಕ್ಷಾದ್ರಿಹಸ್ತಾ ಹರಯಸ್ತಸ್ಥುಃ ಸಂಗ್ರಾಮಮೂರ್ಧನಿ ॥
ಅನುವಾದ
ಆಗ ವಾನರರು ಕಷ್ಟದಿಂದ ಧೈರ್ಯವಹಿಸಿ ಎಲ್ಲೆಡೆಗಳಿಂದ ಒಟ್ಟಿಗಾಗಿ, ವೃಕ್ಷ ಪರ್ವತ ಶಿಖರಗಳನ್ನು ಕೈಯಲ್ಲೆತ್ತಿಕೊಂಡು ಸಂಗ್ರಾಮ ಭೂಮಿಯಲ್ಲಿ ನಿಂತಿರುತ್ತಿದ್ದರು.॥8॥
ಮೂಲಮ್ - 9
ತತಃ ಪರ್ವತಮುತ್ಪಾಟ್ಯ ದ್ವಿವಿದಃ ಪ್ಲವಗರ್ಷಭಃ ।
ದುದ್ರಾವ ಗಿರಿಶೃಂಗಾಭಂ ವಿಲಂಬ ಇವ ತೋಯದಃ ॥
ಅನುವಾದ
ಅನಂತರ ಮೇಘದಂತೆ ವಿಶಾಲಕಾಯ ವಾನರಶ್ರೇಷ್ಠ ದ್ವಿವಿದನು ಒಂದು ಪರ್ವತವನ್ನು ಕಿತ್ತು ಪರ್ವತ ಶಿಖರದಂತೆ ಎತ್ತರನಾದ ಕುಂಭಕರ್ಣನ ಮೇಲೆ ಆಕ್ರಮಿಸಿದನು.॥9॥
ಮೂಲಮ್ - 10
ತಂ ಸಮುತ್ಪಾಟ್ಯ ಚಿಕ್ಷೇಪ ಕುಂಭಕರ್ಣಾಯ ವಾನರಃ ।
ತಮಪ್ರಾಪ್ಯ ಮಹಾಕಾಯಂ ತಸ್ಯ ಸೈನ್ಯೇಽಪತತ್ತತಃ ॥
ಅನುವಾದ
ಆ ಪರ್ವತವನ್ನು ಎತ್ತಿ ದ್ವಿವಿದನು ಕುಂಭಕರ್ಣನ ಮೇಲೆ ಎಸೆದನು. ಆದರೆ ಅದು ಅವನ ಮೇಲೆ ಬೀಳದೆ ಅವನ ಸೈನ್ಯದ ಮೇಲೆ ಬಿತ್ತು.॥10॥
ಮೂಲಮ್ - 11
ಮಮರ್ದಾಶ್ವಾನ್ ಗಜಾಂಶ್ಚಾಪಿ ರಥಾಂಶ್ಚಾಪಿ ಗಜೋತ್ತಮಾನ್ ।
ತಾನಿ ಚಾನ್ಯಾನಿ ರಕ್ಷಾಂಸಿ ಏವಂ ಚಾನ್ಯದ್ಗಿರೇಃ ಶಿರಃ ॥
ಅನುವಾದ
ಆ ಪರ್ವತ ಶಿಖರವು ರಾಕ್ಷಸ ಸೈನ್ಯದ ಎಷ್ಟೋ ಕುದುರೆ, ಆನೆ, ರಥಗಳನ್ನು, ಗಜರಾಜಗಳನ್ನು ಹಾಗೂ ಇತರ ರಾಕ್ಷಸರನ್ನು ಮರ್ದಿಸಿಬಿಟ್ಟಿತು.॥11॥
ಮೂಲಮ್ - 12
ತಚ್ಛೈಲ ವೇಗಾಭಿಹತಂ ಹತಾಶ್ವಂ ಹತಸಾರಥಿಮ್ ।
ರಕ್ಷಸಾಂ ರುಧಿರಕ್ಲಿನ್ನಂ ಬಭೂವಾಯೋಧನಂ ಮಹತ್ ॥
ಅನುವಾದ
ಶೈಲ-ಶಿಖರಗಳ ವೇಗದಿಂದ ಎಷ್ಟು ಕುದುರೆ, ಸಾರಥಿಗಳು, ಜಜ್ಜಿಹೋದ ರಣರಂಗವು ರಾಕ್ಷಸರ ರಕ್ತದಿಂದ ತೊಯ್ದುಹೋಯಿತು.॥12॥
ಮೂಲಮ್ - 13
ರಥಿನೋ ವಾನರೇಂದ್ರಾಣಾಂ ಶರೈಃ ಕಾಲಾಂತಕೋಪಮೈಃ ।
ಶಿರಾಂಸಿ ನರ್ದತಾಂ ಜಹ್ರುಃ ಸಹಸಾ ಭೀಮನಿಃಸ್ವನಾಃ ॥
ಅನುವಾದ
ಆಗ ಭಯಂಕರ ಸಿಂಹನಾದ ಮಾಡುವ ರಾಕ್ಷಸಸೇನೆಯ ರಥಿಕರು ಪ್ರಳಯಕಾಲದ ಯಮನಂತೆ ಭಯಂಕರ ಬಾಣಗಳಿಂದ ಗರ್ಜಿಸುತ್ತಿರುವ ವಾನರ ಸೇನಾಪತಿಗಳ ತಲೆಗಳನ್ನು ಕತ್ತರಿಸತೊಡಗಿದನು.॥13॥
ಮೂಲಮ್ - 14
ವಾನರಾಶ್ಚ ಮಹಾತ್ಮಾನಃ ಸಮುತ್ಪಾಟ್ಯ ಮಹಾದ್ರುಮಾನ್ ।
ರಥಾನಶ್ವಾನ್ ಗಜಾನುಷ್ಟ್ರಾನ್ ರಾಕ್ಷಸಾನಭ್ಯಸೂದಯನ್ ॥
ಅನುವಾದ
ಮಹಾತ್ಮರಾದ ವಾನರರೂ ಕೂಡ ದೊಡ್ಡ ದೊಡ್ಡ ವೃಕ್ಷಗಳನ್ನು ಕಿತ್ತು ಶತ್ರುಸೈನ್ಯದ ರಥ, ಕುದುರೆ, ಆನೆ, ಒಂಟೆ ಮತ್ತು ರಾಕ್ಷಸರನ್ನು ಸಂಹರಿಸತೊಡಗಿದರು.॥14॥
ಮೂಲಮ್ - 15
ಹನೂಮಾನ್ ಶೈಲಶೃಂಗಾಣಿ ಶಿಲಾಶ್ಚ ವಿವಿಧಾನ್ ದ್ರುಮಾನ್ ।
ವವರ್ಷ ಕುಂಭಕರ್ಣಸ್ಯ ಶಿರಸ್ಯಂಬರಮಾಸ್ಥಿತಃ ॥
ಅನುವಾದ
ಹನುಮಂತನು ಆಕಾಶದಿಂದ ಕುಂಭಕರ್ಣನು ತಲೆಯ ಮೇಲೆ ಪರ್ವತ ಶಿಖರಗಳನ್ನು, ಶಿಲೆಗಳನ್ನು, ನಾನಾ ಪ್ರಕಾರದ ವೃಕ್ಷಗಳನ್ನು ಮಳೆಗರೆಯತೊಡಗಿದನು.॥15॥
ಮೂಲಮ್ - 16
ತಾನಿ ಪರ್ವತ ಶೃಂಗಾಣಿ ಶೂಲೇನ ಸ ಬಿಭೇದ ಹ ।
ಬಭಂಜ ವೃಕ್ಷವರ್ಷಂ ಚ ಕುಂಭಕರ್ಣೋ ಮಹಾಬಲಃ ॥
ಅನುವಾದ
ಆದರೆ ಮಹಾಬಲಿ ಕುಂಭಕರ್ಣನು ತನ್ನ ಶೂಲದಿಂದ ಆ ಪರ್ವತ ಶಿಖರಗಳನ್ನು ಒಡೆದು ಹಾಕಿದನು ಹಾಗೂ ಸುರಿಯುವ ವೃಕ್ಷಗಳನ್ನು ತುಂಡುತುಂಡಾಗಿ ಕತ್ತರಿಸಿಹಾಕಿದನು.॥16॥
ಮೂಲಮ್ - 17
ತತೋ ಹರೀಣಾಂ ತದನೀಕಮುಗ್ರಂ
ದುದ್ರಾವ ಶೂಲಂ ನಿಶಿತಂ ಪ್ರಗೃಹ್ಯ ।
ತಸ್ಥೌ ಸ ತಸ್ಯಾಪತತಃ ಪರಸ್ತಾ
ನ್ಮಹೀಧರಾಗ್ರಂ ಹನುಮಾನ್ ಪ್ರಗೃಹ್ಯ॥
ಅನುವಾದ
ಅನಂತರ ಅವನು ತನ್ನ ತೀಕ್ಷ್ಣ ಶೂಲವನ್ನು ಕೈಯಲ್ಲಿ ಧರಿಸಿ ವಾನರರ ಆ ಭಯಂಕರ ಸೈನ್ಯವನ್ನು ಆಕ್ರಮಿಸಿದನು. ಇದನ್ನು ನೋಡಿ ಹನುಮಂತನು ಒಂದು ಪರ್ವತವನ್ನೆತ್ತಿಕೊಂಡು ಆ ಆಕ್ರಮಣಕಾರಿ ರಾಕ್ಷಸನನ್ನು ಎದುರಿಸಲು ನಿಂತುಕೊಂಡನು.॥17॥
ಮೂಲಮ್ - 18
ಸ ಕುಂಭಕರ್ಣಂ ಕುಪಿತೋ ಜಘಾನ
ವೇಗೇನ ಶೈಲೋತ್ತಮಭೀಮಕಾಯಮ್ ।
ಸಂ ಚುಕ್ಷುಭೇ ತೇನ ತದಾಭಿಭೂತೋ
ಮೇದಾರ್ದ್ರಗಾತ್ರೋ ರುಧಿರಾವಸಿಕ್ತಃ ॥
ಅನುವಾದ
ಅವನು ಕುಪಿತನಾಗಿ ಶ್ರೇಷ್ಠಪರ್ವತದಂತೆ ಭಯಾನಕ ಶರೀರವುಳ್ಳ ಕುಂಭಕರ್ಣನ ಮೇಲೆ ವೇಗದಿಂದ ಪ್ರಹರಿಸಿದನು. ಅವನ ಆ ಏಟಿನಿಂದ ಕುಂಭಕರ್ಣನು ವ್ಯಾಕುಲನಾಗಿ, ಅವನ ಶರೀರವಿಡೀ ಮೇದಸ್ಸಿನಿಂದ ನೆನೆದು ಹೋಗಿ ರಕ್ತದಿಂದ ತೊಯ್ದು ಹೋದನು.॥18॥
ಮೂಲಮ್ - 19
ಸ ಶೂಲಮಾವಿಧ್ಯ ತಡಿತ್ಪ್ರಕಾಶಂ
ಗಿರಿಂ ಯಥಾ ಪ್ರಜ್ವಲಿತಾಗ್ನಿಶೃಂಗಮ್ ।
ಬಾಹ್ವಂತರೇ ಮಾರುತಿಮಾಜಘಾನ
ಗುಹೋಽಚಲಂ ಕ್ರೌಂಚಮಿವೋಗ್ರಶಕ್ತ್ಯಾ ॥
ಅನುವಾದ
ಮತ್ತೆ ಅವನೂ ಕೂಡ ಸಿಡಿಲಿನಂತೆ ಹೊಳೆಯುತ್ತಿರುವ ಶೂಲವನ್ನು ತಿರುಗಿಸುತ್ತಾ, ಧಗ ಧಗನೆ ಉರಿಯುವ ಪರ್ವತದಂತಿದ್ದ ಹನುಮಂತನ ಎದೆಗೆ, ಕಾರ್ತಿಕೇಯನು ತನ್ನ ಭಯಾನಕ ಶಕ್ತಿಯಿಂದ ಕ್ರೌಂಚ ಪರ್ವತವನ್ನು ಪ್ರಹರಿಸುವಂತೆ, ಪ್ರಯೋಗಿಸಿದನು.॥19॥
ಮೂಲಮ್ - 20
ಸ ಶೂಲನಿರ್ಭಿನ್ನ ಮಹಾಭುಜಾಂತರಃ
ಪ್ರವಿಹ್ವಲಃ ಶೋಣಿತಮುದ್ವಮನ್ಮುಖಾತ್ ।
ನನಾದ ಭೀಮಂ ಹನುಮಾನ್ಮಹಾಹವೇ
ಯುಗಾಂತ ಮೇಘಸ್ತನಿತಸ್ವ ನೋಪಮಮ್ ॥
ಅನುವಾದ
ಆ ಮಹಾಸಮರದಲ್ಲಿ ಶೂಲದ ಏಟಿನಿಂದ ಹನುಮಂತನ ವಕ್ಷಃಸ್ಥಳವು ವಿದೀರ್ಣವಾಯಿತು. ಅವನು ವ್ಯಾಕುಲನಾಗಿ ರಕ್ತವನ್ನೇ ಕಾರಿದನು. ಆಗ ಅವನು ನೋವಿನಿಂದ ಪ್ರಳಯ ಕಾಲದ ಮೇಘಗರ್ಜನೆಯಂತೆ ಭಯಂಕರ ಆರ್ತನಾದ ಮಾಡಿದನು.॥20॥
ಮೂಲಮ್ - 21
ತತೋ ವಿನೇದುಃ ಸಹಸಾ ಪ್ರಹೃಷ್ಟಾ
ರಕ್ಷೋಗಣಾಸ್ತಂ ವ್ಯಥಿತಂ ಸಮೀಕ್ಷ್ಯ।
ಪ್ಲವಂಗಮಾಸ್ತು ವ್ಯಥಿತಾ ಭಯಾರ್ತಾಃ
ಪ್ರದುದ್ರುವುಃ ಸಂಯತಿ ಕುಂಭಕರ್ಣಾತ್ ॥
ಅನುವಾದ
ಹನುಮಂತನು ಆಘಾತದಿಂದ ಪೀಡಿತನಾದುದನ್ನು ನೋಡಿ ರಾಕ್ಷಸರು ಸಂತಸಗೊಂಡು ಹರ್ಷಧ್ವನಿಯಿಂದ ಕೋಲಾಹಲವನ್ನೇ ಎಬ್ಬಿಸಿದರು. ಇತ್ತ ಕುಂಭಕರ್ಣನ ಭಯದಿಂದ ವ್ಯಥಿತರಾದ ವಾನರರು ಯುದ್ಧಭೂಮಿಯನ್ನು ಬಿಟ್ಟು ಓಡತೊಡಗಿದರು.॥21॥
ಮೂಲಮ್ - 22
ತತಸ್ತು ನೀಲೋ ಬಲವಾನ್ ಪರ್ಯವಸ್ಥಾಪಯನ್ ಬಲಮ್ ।
ಪ್ರವಿಚಿಕ್ಷೇಪ ಶೈಲಾಗ್ರಂ ಕುಂಭಕರ್ಣಾಯ ಧೀಮತೇ ॥
ಅನುವಾದ
ಇದನ್ನು ನೋಡಿ ಬಲವಂತ ನೀಲನು ವಾನರ ಸೈನ್ಯಕ್ಕೆ ಧೈರ್ಯ ತುಂಬಿ, ಸುಸ್ಥಿರಗೊಳಿಸಿ, ಬುದ್ಧಿವಂತ ಕುಂಭಕರ್ಣನ ಮೇಲೆ ಒಂದು ಪರ್ವತ ಶಿಖರವನ್ನು ಎಸೆದನು.॥22॥
ಮೂಲಮ್ - 23
ತದಾಪತಂತಂ ಸಂಪ್ರೇಕ್ಷ್ಯ ಮುಷ್ಟಿನಾಭಿಜಘಾನ ಹ ।
ಮುಷ್ಟಿ ಪ್ರಹಾರಾಭಿಹತಂ ತಚ್ಛೈಲಾಗ್ರಂ ವ್ಯಶೀರ್ಯತ ।
ಸವಿಸ್ಪುಲಿಂಗಂ ಸಜ್ವಾಲಂ ನಿಪಪಾತ ಮಹೀತಲೇ ॥
ಅನುವಾದ
ಪರ್ವತ ಶಿಖರವು ತನ್ನ ಮೇಲೆ ಬೀಳುವುದನ್ನು ನೋಡಿ ಕುಂಭ ಕರ್ಣನು ಅದನ್ನು ಮುಷ್ಟಿಯಿಂದ ಹೊಡೆದನು. ಅವನ ಗುದ್ದಿನಿಂದ ಆ ಪರ್ವತ ಶಿಖರವು ನುಚ್ಚು ನೂರಾಗಿ ಬೆಂಕಿಯ ಕಿಡಿಗಳು ಮತ್ತು ಅಗ್ನಿಜ್ವಾಲೆ ಹೊರಟು ಪೃಥಿವಿಯ ಮೇಲೆ ಬಿದ್ದುಹೋಯಿತು.॥23॥
ಮೂಲಮ್ - 24
ಋಷಭಃ ಶರಭೋ ನೀಲೋ ಗವಾಕ್ಷೋ ಗಂಧಮಾದನಃ ।
ಪಂಚ ವಾನರಶಾರ್ದೂಲಾಃ ಕುಂಭಕರ್ಣಮುಪಾದ್ರವನ್ ॥
ಅನುವಾದ
ಬಳಿಕ ಋಷಭ, ನೀಲ, ಗವಾಕ್ಷ, ಗಂಧಮಾದನ ಈ ಐದು ಪ್ರಮುಖ ವಾನರ ವೀರರು ಕುಂಭಕರ್ಣನನ್ನು ಆಕ್ರಮಿಸಿದರು.॥24॥
ಮೂಲಮ್ - 25
ಶೈಲೈರ್ವೃಕ್ಷೈಸ್ತಲೈಃ ಪಾದೈರ್ಮುಷ್ಟಿಭಿಶ್ಚ ಮಹಾಬಲಾಃ ।
ಕುಂಭಕರ್ಣಂ ಮಹಾಕಾಯಂ ನಿಜಘ್ನುಃ ಸರ್ವತೋಯುಧಿ ॥
ಅನುವಾದ
ಆ ಮಹಾಬಲಿವೀರರೂ ನಾಲ್ಕು ಕಡೆಗಳಿಂದ ಮುತ್ತಿ ಯುದ್ಧದಲ್ಲಿ ಮಹಾಕಾಯ ಕುಂಭಕರ್ಣನನ್ನು ಪರ್ವತಗಳಿಂದ, ವೃಕ್ಷಗಳಿಂದ, ಅಂಗೈ, ಆಘಾತದಿಂದ, ಒದೆಯಿಂದ, ಮುಷ್ಟಿ ಯಿಂದ ಪ್ರಹರಿಸತೊಡಗಿದರು.॥25॥
ಮೂಲಮ್ - 26
ಸ್ಪರ್ಶಾನಿವ ಪ್ರಹಾರಾಂಸ್ತಾನ್ ವೇದಯಾನೋ ನ ವಿವ್ಯಥೇ ।
ಋಷಭಂ ತು ಮಹಾವೇಗಂ ಬಾಹುಭ್ಯಾಂ ಪರಿಷಸ್ವಜೇ ॥
ಅನುವಾದ
ಇವರು ಜೋರಾಗಿ ಪ್ರಹರಿಸುತ್ತಿದ್ದರೂ ಯಾರೋ ಮೆಲ್ಲನೆ ಮುಟ್ಟುತ್ತಿರುವರು ಎಂದು ಅವನಿಗೆ ಅನಿಸುತ್ತಿತ್ತು. ಇವರ ಏಟಿನಿಂದ ಅವನಿಗೆ ಕೊಂಚವೂ ನೋವು ಆಗಲಿಲ್ಲ. ಅವನು ಮಹಾವೇಗಶಾಲಿ ಋಷಭನನ್ನು ಎರಡೂ ಭುಜಗಳಿಂದ ಹಿಡಿದುಕೊಂಡನು.॥26॥
ಮೂಲಮ್ - 27
ಕುಂಭಕರ್ಣಭುಜಾಭ್ಯಾಂ ತು ಪೀಡಿತೋವಾನರರ್ಷಭಃ ।
ನಿಪಪಾತರ್ಷಭೋ ಭೀಮಃ ಪ್ರಮುಖಾಗತ ಶೋಣಿತಃ ॥
ಅನುವಾದ
ಕುಂಭಕರ್ಣನ ಭುಜಗಳಿಂದ ಅದುಮಿಕೊಂಡಿದ್ದು ಭಯಂಕರ ವಾನರಶ್ರೇಷ್ಠ ಋಷಭನು ನೋವಿನಿಂದ ಬಾಯಿಯಲ್ಲಿ ರಕ್ತವನ್ನು ಉಗುಳುತ್ತಾ ನೆಲಕ್ಕೆ ಬಿದ್ದುಬಿಟ್ಟನು.॥27॥
ಮೂಲಮ್ - 28
ಮುಷ್ಟಿನಾ ಶರಭಂ ಹತ್ವಾ ಜಾನುನಾ ನೀಲಮಾಹವೇ ।
ಆಜಘಾನ ಗವಾಕ್ಷಂ ತು ತಲೇನೇಂದ್ರರಿಪುಸ್ತದಾ ।
ಪಾದೇನಾಭ್ಯಹನತ್ ಕ್ರುದ್ಧಸ್ತರಸಾ ಗಂಧಮಾದನಮ್ ॥
ಅನುವಾದ
ಅನಂತರ ಆ ಸಮರಭೂಮಿಯಲ್ಲಿ ಇಂದ್ರದ್ರೋಹಿ ಕುಂಭಕರ್ಣನು ಶರಭನನ್ನು ಗುದ್ದಿ, ನೀಲನನ್ನು ಮೊಣಕಾಲುಗಳಲ್ಲಿ ಅದುಮಿ, ಗವಾಕ್ಷನಿಗೆ ಅಂಗೈಯಿಂದ ಏಟುಕೊಟ್ಟನು. ಮತ್ತೆ ಕ್ರೋಧಗೊಂಡು ಅವನು ಗಂಧಮಾದನನ್ನು ಜೋರಾಗಿ ಒದ್ದುಬಿಟ್ಟನು.॥28॥
ಮೂಲಮ್ - 29
ದತ್ತಪ್ರಹಾರವ್ಯಥಿತಾ ಮುಮುಹುಃ ಶೋಣಿತೋಕ್ಷಿತಾಃ ।
ನಿಪೇತುಸ್ತೇ ತು ಮೇದಿನ್ಯಾಂ ನಿಕೃತ್ತಾ ಇವ ಕಿಂಶುಕಾಃ ॥
ಅನುವಾದ
ಅವನ ಪ್ರಹಾರದಿಂದ ವ್ಯಥಿತರಾದ ವಾನರರು ಮೂರ್ಛಿತರಾಗಿ ರಕ್ತದಿಂದ ತೊಯ್ದು ಹೋದರು. ಮತ್ತೆ ಕತ್ತರಿಸಿದ ಮುತ್ತಗದ ಮರದಂತೆ ನೆಲಕ್ಕೆ ಬಿದ್ದು ಬಿಟ್ಟರು.॥29॥
ಮೂಲಮ್ - 30
ತೇಷು ವಾನರಮುಖ್ಯೇಷು ಪಾತಿತೇಷು ಮಹಾತ್ಮಸು ।
ವಾನರಾಣಾಂ ಸಹಸ್ರಾಣಿ ಕುಂಭಕರ್ಣಂ ಪ್ರದುದ್ರುವುಃ ॥
ಅನುವಾದ
ಆ ಮಹಾತ್ಮಾ ಪ್ರಮುಖ ವಾನರರು ಧರಾಶಾಯಿ ಆದಾಗ ಸಾವಿರಾರು ವಾನರರು ಒಟ್ಟಿಗೆ ಕುಂಭಕರ್ಣನ ಮೇಲೆ ಮುಗಿಬಿದ್ದರು.॥30॥
ಮೂಲಮ್ - 31
ತಂ ಶೈಲಮಿವ ಶೈಲಾಭಾಃ ಸರ್ವೇ ತು ಪ್ಲವಗರ್ಷಭಾಃ ।
ಸಮಾರುಹ್ಯ ಸಮುತ್ಪತ್ಯ ದದಂಶುಶ್ಚ ಮಹಾಬಲಾಃ ॥
ಅನುವಾದ
ಪರ್ವತದಂತೆ ಕಾಣುವ ಆ ಸಮಸ್ತ ಮಹಾಬಲಿ ವಾನರ ಸೇನಾಪತಿಗಳು ಆ ಪರ್ವತಾಕಾರ ರಾಕ್ಷಸನ ಮೇಲೆ ಹತ್ತಿದರು ಹಾಗೂ ಹಲ್ಲುಗಳಿಂದ ಕಚ್ಚತೊಡಗಿದರು.॥31॥
ಮೂಲಮ್ - 32
ತಂ ನಖೈರ್ದಶನೈಶ್ಚಾಪಿ ಮುಷ್ಟಿಭಿರ್ವಾಹುಭಿಸ್ತಥಾ ।
ಕುಂಭಕರ್ಣಂ ಮಹಾಬಾಹುಂ ನಿಜಘ್ನುಃ ಪ್ಲವಗರ್ಷಭಾಃ ॥
ಅನುವಾದ
ಆ ವಾನರ ಶ್ರೇಷ್ಠರು ಉಗುರು, ಹಲ್ಲು, ಮುಷ್ಟಿ ಮತ್ತು ಅಂಗೈಯಿಂದ ಮಹಾಬಾಹು ಕುಂಭಕರ್ಣನನ್ನು ಹೊಡೆಯತೊಡಗಿದರು.॥32॥
ಮೂಲಮ್ - 33
ಸ ವಾನರಸಹಸ್ರೈಸ್ತು ವಿಚಿತಃ ಪರ್ವತೋಪಮಃ ।
ರರಾಜ ರಾಕ್ಷಸವ್ಯಾಘ್ರೋ ಗಿರಿರಾತ್ಮರುಹೈರಿವ ॥
ಅನುವಾದ
ವೃಕ್ಷಗಳಿಂದ ಕೂಡಿದ ಪರ್ವತದಂತೆ ಸಾವಿರಾರು ವಾನರರಿಂದ ವ್ಯಾಪ್ತವಾದ ಆ ಪರ್ವತಾಕಾರ ರಾಕ್ಷಸವೀರನು ಅದ್ಭುತವಾಗಿ ಶೋಭಿಸಿದನು.॥33॥
ಮೂಲಮ್ - 34
ಬಾಹುಭ್ಯಾಂ ವಾನರಾನ್ ಸರ್ವಾನ್ ಪ್ರಗೃಹ್ಯಸ ಮಹಾಬಲಃ ।
ಭಕ್ಷಯಾಮಾಸ ಸಂಕ್ರುದ್ಧೋ ಗರುಡಃ ಪನ್ನಗಾನಿವ ॥
ಅನುವಾದ
ಗರುಡನು ಸರ್ಪಗಳನ್ನು ತಿನ್ನುವಂತೆ, ಅತ್ಯಂತ ಕುಪಿತನಾದ ಆ ಮಹಾಬಲಿ ರಾಕ್ಷಸನು ಸಮಸ್ತ ವಾನರರನ್ನು ಎರಡೂ ಕೈಗಳಿಂದ ಹಿಡಿದು ಹಿಡಿದು ಭಕ್ತಿಸತೊಡಗಿದನು.॥34॥
ಮೂಲಮ್ - 35
ಪ್ರಕ್ಷಿಪ್ತಾಃ ಕುಂಭಕರ್ಣೇನ ವಕ್ತ್ರೇ ಪಾತಾಲಸಂನಿಭೇ ।
ನಾಸಾಪುಟಾಭ್ಯಾಂ ಸಂಜಗ್ಮುಃ ಕರ್ಣಾಭ್ಯಾಂ ಚೈವ ವಾನರಾಃ ॥
ಅನುವಾದ
ಕುಂಭಕರ್ಣನು ಪಾತಾಳದಂತೆ ಇದ್ದ ತನ್ನ ಬಾಯಿಯೊಳಗೆ ವಾನರರನ್ನು ತುಂಬುತ್ತಿದ್ದನು ಹಾಗೂ ಅವರು ಅವನ ಕಿವಿಗಳಿಂದ, ಮೂಗಿನಿಂದ ಹೊರಗೆ ಬರುತ್ತಿದ್ದರು.॥35॥
ಮೂಲಮ್ - 36
ಭಕ್ಷಯನ್ಭೃಶಸಂಕ್ರುದ್ಧೋ ಹರೀನ್ ಪರ್ವತಸಂನಿಭಃ ।
ಬಭಂಜ ವಾನರಾನ್ಸರ್ವಾನ್ ಸಂಕ್ರುದ್ಧೋ ರಾಕ್ಷಸೋತ್ತಮಃ ॥
ಅನುವಾದ
ಅದರಿಂದ ಅತಿ ಕ್ರುದ್ಧನಾದ ಪರ್ವತದಂತೆ ವಿಶಾಲಕಾಯನಾದ ಕುಂಭಕರ್ಣನು ವಾನರರನ್ನು ಭಕ್ಷಿಸುವಾಗಲೇ ಹಲ್ಲುಗಳಿಂದ ಜಗಿದು ಬಿಡುತ್ತಿದ್ದನು.॥36॥
ಮೂಲಮ್ - 37
ಮಾಂಸಶೋಣಿತಸಂಕ್ಲೇದಾಂ ಕುರ್ವನ್ ಭೂಮಿಂ ಸ ರಾಕ್ಷಸಃ ।
ಚಚಾರ ಹರಿಸೈನ್ಯೇಷು ಕಾಲಾಗ್ನಿರಿವ ಮೂರ್ಛಿತಃ ॥
ಅನುವಾದ
ರಣಭೂಮಿಯಲ್ಲಿ ರಕ್ತ-ಮಾಂಸದ ಕೆಸರನ್ನೇ ಉಂಟುಮಾಡುತ್ತಾ ಆ ರಾಕ್ಷಸನು ಕಾಲಾಗ್ನಿಯೋಪಾದಿಯಲ್ಲಿ ವಾನರ ಸೈನ್ಯದಲ್ಲಿ ಸಂಚರಿಸತೊಡಗಿದನು.॥37॥
ಮೂಲಮ್ - 38
ವಜ್ರಹಸ್ತೋ ಯಥಾ ಶಕ್ರಃ ಪಾಶಹಸ್ತ ಇವಾಂತಕಃ ।
ಶೂಲಹಸ್ತೋ ಬಭೌ ಯುದ್ಧೇ ಕುಂಭಕರ್ಣೋ ಮಹಾಬಲಃ ॥
ಅನುವಾದ
ಶೂಲವನ್ನೆತ್ತಿಕೊಂಡು ಯುದ್ಧಭೂಮಿಯಲ್ಲಿ ತಿರುಗಾಡುತ್ತಿರುವ ಮಹಾಬಲಿ ಕುಂಭಕರ್ಣನು ವಜ್ರಧಾರೀ ಇಂದ್ರ ಮತ್ತು ಪಾಶಧಾರೀ ಯಮನಂತೆ ಕಂಡುಬರುತ್ತಿದ್ದನು.॥3.॥
ಮೂಲಮ್ - 39
ಯಥಾ ಶುಷ್ಕಾಣ್ಯರಣ್ಯಾನಿ ಗ್ರೀಷ್ಮೇ ದಹತಿ ಪಾವಕಃ ।
ತಥಾ ವಾನರಸೈನ್ಯಾನಿ ಕುಂಭಕರ್ಣೋ ದದಾಹ ಸಃ ॥
ಅನುವಾದ
ಗ್ರೀಷ್ಮಋತುವಿನಲ್ಲಿ ದಾನಾನಲವು ಒಣಗಿದ ಕಾಡನ್ನು ಸುಡುವಂತೆಯೇ ಕುಂಭಕರ್ಣನು ವಾನರರನ್ನು ಸುಟ್ಟುಹಾಕಿದನು.॥3.॥
ಮೂಲಮ್ - 40
ತತಸ್ತೇ ವಧ್ಯಮಾನಾಸ್ತು ಹತಯೂಥಾಃ ಪ್ಲವಂಗಮಾಃ ।
ವಾನರಾ ಭಯಸಂವಿಗ್ನಾ ವಿನೇದುರ್ವಿಕೃತೈಃ ಸ್ವರೈಃ ॥
ಅನುವಾದ
ಕುಂಭಕರ್ಣನಿಂದ ಸತತ ಹತರಾದ ವಾನರರು ಭಯದಿಂದ ಉದ್ವಿಗ್ನರಾಗಿ ವಿಕೃತ ಸ್ವರದಿಂದ ಚೀತ್ಕಾರ ಮಾಡಿದರು.॥40॥
ಮೂಲಮ್ - 41
ಅನೇಕಶೋ ವಧ್ಯಮಾನಾಃ ಕುಂಭಕರ್ಣೇನ ವಾನರಾಃ ।
ರಾಘವಂ ಶರಣಂ ಜಗ್ಮುರ್ವ್ಯಥಿತಾ ಭಿನ್ನಚೇತಸಃ ॥
ಅನುವಾದ
ಕುಂಭಕರ್ಣನ ಪೆಟ್ಟುತಿಂದ ವಾನರರು ಹತಾಶರಾಗಿ, ದುಃಖದಿಂದ ಶ್ರೀರಾಮನಲ್ಲಿ ಶರಣಾದರು.॥41॥
ಮೂಲಮ್ - 42
ಪ್ರಭಗ್ನಾನ್ ವಾನರಾನ್ ದೃಷ್ಟ್ವಾವಜ್ರಹಸ್ತಾತ್ಮಜಾತ್ಮಜಃ ।
ಅಭ್ಯಧಾವತ ವೇಗೇನ ಕುಂಭಕರ್ಣಂ ಮಹಾಹವೇ ॥
ಅನುವಾದ
ವಾನರರು ಓಡುತ್ತಿರುವುದನ್ನು ನೋಡಿ ವಾಲಿಪುತ್ರ ಅಂಗದನು ಆ ಮಹಾಸಮರದಲ್ಲಿ ಕುಂಭಕರ್ಣನ ಕಡೆಗೆ ವೇಗವಾಗಿ ಓಡಿದನು.॥42॥
ಮೂಲಮ್ - 43½
ಶೈಲಶೃಂಗಂ ಮಹದ್ ಗೃಹ್ಯ ವಿನದನ್ ಸ ಮುಹುರ್ಮುಹುಃ ।
ತ್ರಾಸಯನ್ರಾಕ್ಷಸಾನ್ ಸರ್ವಾನ್ ಕುಂಭಕರ್ಣಪದಾನುಗಾನ್ ॥
ಚಿಕ್ಷೇಪ ಶೈಲಶಿಖರಂ ಕುಂಭಕರ್ಣಸ್ಯ ಮೂರ್ಧನಿ ।
ಅನುವಾದ
ಅವನು ಪದೇ ಪದೇ ಗರ್ಜಿಸುತ್ತಾ ಒಂದು ದೊಡ್ಡದಾದ ಪರ್ವತ ಶಿಖರವನ್ನೆತ್ತಿಕೊಂಡು ಕುಂಭಕರ್ಣನ ಅನುಯಾಯಿಗಳನ್ನು ಭಯಪಡಿಸುತ್ತಾ ಆ ಪರ್ವತ ಶಿಖರವನ್ನು ಅವನ ತಲೆಗೆ ಅಪ್ಪಳಿಸಿದನು.॥43॥
ಮೂಲಮ್ - 44
ಸ ತೇನಾಭಿಹತೋ ಮೂರ್ಧ್ನಿ ಶೈಲೇನೇಂದ್ರರಿಪುಸ್ತದಾ ॥
ಮೂಲಮ್ - 45
ಕುಂಭಕರ್ಣಃ ಪ್ರಜಜ್ವಾಲ ಕ್ರೋಧೇನ ಮಹತಾ ತದಾ ।
ಸೋಽಭ್ಯಧಾವತ ವೇಗೇನ ವಾಲಿಪುತ್ರಮಮರ್ಷಣಃ ॥
ಅನುವಾದ
ತಲೆಗೆ ಬಿದ್ದ ಪರ್ವತದ ಏಟನ್ನು ಸಹಿಸಲಾರದೆ ಇಂದ್ರದ್ರೋಹಿ ಕುಂಭಕರ್ಣನು ಆಗ ಮಹಾಕ್ರೋಧಗೊಂಡು ವೇಗವಾಗಿ ವಾಲಿಪುತ್ರನ ಕಡೆಗೆ ಧಾವಿಸಿದನು.॥44-45॥
ಮೂಲಮ್ - 46
ಕುಂಭಕರ್ಣೋ ಮಹಾನಾದಸ್ತ್ರಾಸಯನ್ ಸರ್ವವಾನರಾನ್ ।
ಶೂಲಂ ಸಸರ್ಜ ವೈ ರೋಷಾದಂಗದೇ ತು ಮಹಾಬಲಃ ॥
ಅನುವಾದ
ಜೋರಾಗಿ ಗರ್ಜಿಸುತ್ತಿರುವ ಮಹಾಬಲಿ ಕುಂಭಕರ್ಣನು ಸಮಸ್ತ ವಾನರರನ್ನು ಭಯಪಡಿಸುತ್ತಾ ರೋಷದಿಂದ ಅಗಂದನ ಮೇಲೆ ಶೂಲವನ್ನು ಪ್ರಹರಿಸಿದನು.॥46॥
ಮೂಲಮ್ - 47
ತದಾಪತಂತಂ ಬಲವಾನ್ ಯುದ್ಧ ಮಾರ್ಗವಿಶಾರದಃ ।
ಲಾಘವಾನ್ಮೋಕ್ಷಯಾಮಾಸ ಬಲವಾನ್ ವಾನರರ್ಷಭಃ ॥
ಅನುವಾದ
ಆದರೆ ಯುದ್ಧದ ಮರ್ಮವನ್ನು ತಿಳಿದಿದ್ದ ವಾನರಶ್ರೇಷ್ಠ ಅಂಗದನು ಲಾಘವದಿಂದ ಹಿಂದೆ ಸರಿದು ಆ ಶೂಲದಿಂದ ತನ್ನನ್ನು ತಪ್ಪಿಸಿಕೊಂಡನು.॥47॥
ಮೂಲಮ್ - 48
ಉತ್ಪತ್ಯ ಚೈನಂ ತರಸಾ ತಲೇನೋರಸ್ಯತಾಡಯತ್ ।
ಸ ತೇನಾಭಿಹತಃ ಕೋಪಾತ್ ಪ್ರಮುಮೋಹಾಚಲೋಪಮಃ ॥
ಅನುವಾದ
ಜೊತೆಗೆ ವೇಗವಾಗಿ ನೆಗೆದು ಅವನು ರಾಕ್ಷಸನ ಎದೆಗೆ ಒಂದು ಏಟುಕೊಟ್ಟನು. ಕ್ರೋಧಪೂರ್ವಕ ಹೊಡೆದ ಕೈಯ ಆಘಾತದಿಂದ ಪರ್ವತಾಕಾರದ ರಾಕ್ಷಸನು ಮೂರ್ಛಿತನಾದನು.॥48॥
ಮೂಲಮ್ - 49
ಸ ಲಬ್ಧ ಸಂಜ್ಞೋಽತಿಬಲೋ ಮುಷ್ಟಿಂ ಸಂಗ್ರಹ್ಯ ರಾಕ್ಷಸಃ ।
ಅಪಹಸ್ತೇನ ಚಿಕ್ಷೇಪ ವಿಸಂಜ್ಞಃ ಸ ಪಪಾತ ಹ ॥
ಅನುವಾದ
ಸ್ವಲ್ಪ ಹೊತ್ತಿನಲ್ಲೆ ಎಚ್ಚರಗೊಂಡ ಅತ್ಯಂತ ಬಲಶಾಲಿ ರಾಕ್ಷಸನೂ ಕೂಡ ಎಡಗೈಯ ಮುಷ್ಠಿಯಿಂದ ಅಂಗದನನ್ನು ಪ್ರಹರಿಸಲು, ಅದರಿಂದ ಅವನು ಮೂರ್ಛಿತನಾಗಿ ನೆಲಕ್ಕುರುಳಿದನು.॥49॥
ಮೂಲಮ್ - 50
ತಸ್ಮಿನ್ ಪ್ಲವಗಶಾರ್ದೂಲೇ ವಿಸಂಜ್ಞೇ ಪತಿತೇ ಭುವಿ ।
ತಚ್ಛೂಲಂ ಸಮುಪಾದಾಯ ಸುಗ್ರೀವಮಭಿದುದ್ರುವೇ ॥
ಅನುವಾದ
ವಾನರಶ್ರೇಷ್ಠ ಅಂಗದನು ನಿಶ್ಚೇಷ್ಟಿತನಾಗಿ ಧರಾಶಾಯಿಯಾದಾಗ ಕುಂಭಕರ್ಣನು ಅದೇ ಶೂಲವನ್ನೆತ್ತಿಕೊಂಡು ಸುಗ್ರೀವನ ಕಡೆಗೆ ಓಡಿದನು.॥50॥
ಮೂಲಮ್ - 51
ತಮಾಪತಂತಂ ಸಂಪ್ರೇಕ್ಷ್ಯಕುಂಭಕರ್ಣಂ ಮಹಾಬಲಮ್ ।
ಉತ್ಪಪಾತ ತದಾ ವೀರಃ ಸುಗ್ರೀವೋ ವಾನರಾಧಿಪಃ ॥
ಅನುವಾದ
ಮಹಾಬಲಿ ಕುಂಭಕರ್ಣನು ತನ್ನ ಕಡೆಗೆ ಓಡಿಬರುತ್ತಿರುವುದನ್ನು ನೋಡಿ ವಾನರ ರಾಜಾ ಸುಗ್ರೀವನು ಛಂಗನೆ ಮೇಲಕ್ಕೆ ನೆಗೆದನು.॥51॥
ಮೂಲಮ್ - 52
ಸಪರ್ವತಾಗ್ರಮುತ್ಕ್ಷಿಪ್ಯ ಸಮಾವಿಧ್ಯ ಮಹಾಕಪಿಃ ।
ಅಭಿದುದ್ರಾವ ವೇಗೇನ ಕುಂಭಕರ್ಣಂ ಮಹಾಬಲಮ್ ॥
ಅನುವಾದ
ಮಹಾಕಪಿ ಸುಗ್ರೀವನು ಒಂದು ಪರ್ವತಶಿಖರವನ್ನೆತ್ತಿಕೊಂಡು ಗರಗರನೆ ತಿರುಗಿಸುತ್ತಾ ಅದನ್ನು ಮಹಾಬಲಿ ಕುಂಭಕರ್ಣನ ಮೇಲೆ ಆಕ್ರಮಿಸಿದನು.॥52॥
ಮೂಲಮ್ - 53
ತಮಾಪತಂತಂ ಸಂಪ್ರೇಕ್ಷ್ಯ ಕುಂಭಕರ್ಣಃ ಪ್ಲವಂಗಮಮ್ ।
ತಸ್ಥೌ ವಿವೃತ್ತಸರ್ವಾಂಗೋ ವಾನರೇಂದ್ರಸ್ಯ ಸಮ್ಮುಖಃ ॥
ಅನುವಾದ
ವಾನರೇಂದ್ರ ಸುಗ್ರೀವನು ತನ್ನ ಮೇಲೆ ಆಕ್ರಮಣ ಮಾಡುವುದನ್ನು ಕಂಡು ಕುಂಭಕರ್ಣನು ತನ್ನ ಶರೀರವನ್ನು ಉಬ್ಬಿಸಿಕೊಂಡು ಅವನ ಎದುರಿಗೆ ನಿಂತನು.॥53॥
ಮೂಲಮ್ - 54
ಕಪಿಶೋಣಿತದಿಗ್ಧಾಂಗಂ ಭಕ್ಷಯಂತಂ ಮಹಾಕಪೀನ್ ।
ಕುಂಭಕರ್ಣಂ ಸ್ಥಿತಂ ದೃಷ್ಟ್ವಾ ಸುಗ್ರೀವೋ ವಾಕ್ಯಮಬ್ರವೀತ್ ॥
ಅನುವಾದ
ಕುಂಭಕರ್ಣನ ಇಡೀ ಶರೀರ ವಾನರರ ರಕ್ತದಿಂದ ತೊಯ್ದು ಹೋಗಿತ್ತು. ಅವನು ದೊಡ್ಡ ದೊಡ್ಡ ವಾನರರನ್ನು ತಿನ್ನುತ್ತಾ ಮುಂದೆ ನಿಂತಿದ್ದ ಅವನನ್ನು ನೋಡಿ ಸುಗ್ರೀವನು ಹೇಳಿದನು .॥54॥
ಮೂಲಮ್ - 55
ಪಾತಿತಾಶ್ಚ ತ್ವಯಾ ವೀರಾಃ ಕೃತಂ ಕರ್ಮ ಸುದುಷ್ಕರಮ್ ।
ಭಕ್ಷಿತಾನಿ ಚಸೈನಾನಿ ಪ್ರಾಪ್ತಂ ತೇ ಪರಮಂ ಯಶಃ ॥
ಮೂಲಮ್ - 56
ತ್ಯಜ ತದ್ವಾನರಾನೀಕಂ ಪ್ರಾಕೃತೈಃ ಕಿಂ ಕರಿಷ್ಯಸಿ ।
ಸಹಸ್ವೈಕಂ ನಿಪಾತಂ ಮೇ ಪರ್ವತಸ್ಯಾಸ್ಯ ರಾಕ್ಷಸ ॥
ಅನುವಾದ
ರಾಕ್ಷಸನೇ! ನೀನು ಅನೇಕ ವಾನರರನ್ನು ಕೊಂದು, ಅತ್ಯಂತ ದುಷ್ಕರವಾದ ಕಾರ್ಯಮಾಡಿ ತೋರಿಸಿದೆ. ಎಷ್ಟೋ ಸೈನಿಕರನ್ನು ನುಂಗಿಬಿಟ್ಟಿರುವೆ. ಇದರಿಂದ ನಿನಗೆ ಮಹಾಯಶ ಪ್ರಾಪ್ತವಾಗಿದೆ. ಈಗ ಈ ವಾನರ ಸೈನ್ಯವನ್ನು ಬಿಟ್ಟುಬಿಡು. ಸಾಧಾರಣ ಕಪಿಗಳೊಂದಿಗೆ ಕಾದಾಡಿ ಏನು ಮಾಡುವೆ? ನಿನಗೆ ಶಕ್ತಿ ಇದ್ದರೆ ನಾನು ಎಸೆದಿರುವ ಈ ಪರ್ವತದ ಏಟನ್ನು ಸಹಿಸಿಕೋ.॥55-56॥
ಮೂಲಮ್ - 57
ತದ್ವಾಕ್ಯಂ ಹರಿರಾಜಸ್ಯ ಸತ್ತ್ವಧೈರ್ಯಸಮನ್ವಿತಮ್ ।
ಶ್ರುತ್ವಾ ರಾಕ್ಷಸಶಾರ್ದೂಲಃ ಕುಂಭಕರ್ಣೋಽಬ್ರವೀದ್ವಚಃ ॥
ಅನುವಾದ
ವಾನರರಾಜನ ಸತ್ತ್ವಯುಕ್ತ ಮತ್ತು ಧೈರ್ಯ ದಿಂದ ಕೂಡಿದ ಮಾತನ್ನು ಕೇಳಿ ರಾಕ್ಷಸ ಶ್ರೇಷ್ಠ ಕುಂಭಕರ್ಣನು ನುಡಿದನು.॥57॥
ಮೂಲಮ್ - 58
ಪ್ರಜಾಪತೇಸ್ತು ಪೌತ್ರಸ್ತ್ವಂ ತಥೈವರ್ಕ್ಷರಜಃ ಸುತಃ ।
ಧೃತಿಪೌರುಷಸಂಪನ್ನಸ್ತಸ್ಮಾದ್ಗರ್ಜಸಿ ವಾನರ ॥
ಅನುವಾದ
ಎಲೈ ವಾನರನೇ! ನೀನು ಪ್ರಜಾಪತಿಯ ಮೊಮ್ಮಗ, ಋಕ್ಷರಾಜನ ಮಗ ಹಾಗೂ ಧೈರ್ಯ, ಪರಾಕ್ರಮದಿಂದ ಸಂಪನ್ನನಾಗಿರುವೆ. ಅದರಿಂದ ಹೀಗೆ ಗರ್ಜಿಸುತ್ತಿರುವೆ.॥58॥
ಮೂಲಮ್ - 59
ಸ ಕುಂಭಕರ್ಣಸ್ಯ ವಚೋ ನಿಶಮ್ಯ
ವ್ಯಾವಿಧ್ಯ ಶೈಲಂ ಸಹಸಾ ಮುಮೋಚ ।
ತೇನಾಜಘಾನೋರಸಿ ಕುಂಭಕರ್ಣಂ
ಶೈಲೇನ ವಜ್ರಾಶನಿ ಸಂನಿಭೇನ ॥
ಅನುವಾದ
ಕುಂಭಕರ್ಣನ ಮಾತನ್ನು ಕೇಳಿ ಸುಗ್ರೀವನು ವಜ್ರ ಮತ್ತು ಸಿಡಿಲಿನಂತಿದ್ದ ಆ ಶೈಲಶಿಖರವನ್ನು ಬೀಸಿ ಅವನ ವಕ್ಷಃಸ್ಥಳಕ್ಕೆ ಪ್ರಯೋಗಿಸಿದನು. ಅದರಿಂದ ಕುಂಭಕರ್ಣನ ಎದೆಯಲ್ಲಿ ಆಳವಾದ ಏಟು ಬಿತ್ತು.॥59॥
ಮೂಲಮ್ - 60
ತಚ್ಛೈಲಶೃಂಗಂ ಸಹಸಾ ವಿಭಿನ್ನಂ
ಭುಜಾಂತರೇ ತಸ್ಯ ತದಾ ವಿಶಾಲೇ ।
ತತೋ ವಿಷೇದುಃ ಸಹಸಾ ಪ್ಲವಂಗಾ
ರಕ್ಷೋ ಗಣಾಶ್ಚಾಪಿ ಮುದಾ ವಿನೇದುಃ ॥
ಅನುವಾದ
ಆದರೆ ಅವನ ವಿಶಾಲ ವಕ್ಷಃಸ್ಥಲಕ್ಕೆ ಡಿಕ್ಕಿ ಹೊಡೆದು ಆ ಪರ್ವತ ಶಿಖರ ನುಚ್ಚು ನೂರಾಯಿತು. ಇದನ್ನು ನೋಡಿ ವಾನರರು ವಿಷಾದಗೊಂಡರೆ, ರಾಕ್ಷಸರು ಹರ್ಷದಿಂದ ಗರ್ಜಿಸತೊಡಗಿದರು.॥60॥
ಮೂಲಮ್ - 61
ಸ ಶೈಲಶೃಂಗಾಭಿಹತಶ್ಚುಕೋಪ
ನನಾದಕೋಪಾಶ್ಚ ವಿವೃತ್ಯ ವಕ್ತ್ರಮ್ ।
ವ್ಯಾವಿಧ್ಯ ಶೂಲಂ ಸ ತಡಿತ್ಪ್ರಕಾಶಂ
ಚಿಕ್ಷೇಪ ಹರ್ಯಾಕ್ಷಪತೇರ್ವಧಾಯ ॥
ಅನುವಾದ
ಆ ಪರ್ವತದ ಏಟುತಿಂದು ಕುಂಭಕರ್ಣನಿಗೆ ಭಾರೀ ಕೋಪ ಬಂತು. ಅವನು ರೋಷದಿಂದ ಬಾಯಿ ತೆರೆದು ಜೋರಾಗಿ ಗರ್ಜಿಸತೊಡಗಿದನು. ಮತ್ತೆ ಅವನು ಸಿಡಿಲಿನಂತೆ ಹೊಳೆಯುವ ಶೂಲವನ್ನು ತಿರುಗಿಸುತ್ತಾ ಸುಗ್ರೀವನ ವಧೆಗಾಗಿ ಪ್ರಯೋಗಿಸಿದನು.॥61॥
ಮೂಲಮ್ - 62
ತತ್ಕುಂಭಕರ್ಣಸ್ಯ ಭುಜಪ್ರಣುನ್ನಂ
ಶೂಲಂ ಶಿತಂ ಕಾಂಚನದಾಮಯಷ್ಟಿಮ್ ।
ಕ್ಷಿಪ್ರಂ ಸಮುತ್ಪತ್ಯ ನಿಗೃಹ್ಯ ದೋರ್ಭ್ಯಾಂ
ಬಭಂಜ ವೇಗೇನ ಸುತೋಽನಿಲಸ್ಯ ॥
ಅನುವಾದ
ಚಿನ್ನದ ಲಾಡಿಗಳಿಂದ ಅಲಂಕೃತವಾದ ಆ ತೀಕ್ಷ್ಣವಾದ ಶೂಲವು ಕುಂಭಕರ್ಣನ ಕೈಯಿಂದ ಸಿಡಿಯುತ್ತಲೇ ವಾಯುಪುತ್ರ ಹನುಮಂತನು ಶೀಘ್ರವಾಗಿ ನೆಗೆದು ಅದನ್ನು ಎರಡು ಕೈಗಳಿಂದ ಹಿಡಿದು ಮುರಿದು ಹಾಕಿದನು.॥62॥
ಮೂಲಮ್ - 63
ಕೃತಂ ಭಾರಸಹಸ್ರಸ್ಯ ಶೂಲಂ ಕಾಲಾಯಸಂ ಮಹತ್ ।
ಬಭಂಜ ಜಾನುಮಾರೋಪ್ಯ ತದಾ ಹೃಷ್ಟಃ ಪ್ಲವಂಗಮಃ ॥
ಅನುವಾದ
ಆ ಮಹಾಶೂಲವು ಸಾವಿರ ಭಾರ ಕಪ್ಪಾದ ಕಬ್ಬಿಣದಿಂದ ಮಾಡಲಾಗಿತ್ತು. ಅದನ್ನು ಹನುಮಂತನು ಹರ್ಷದಿಂದ ಮೊಣಕಾಲಿನ ಮೇಲಿಟ್ಟು ಕೂಡಲೇ ಮುರಿದುಹಾಕಿದನು.॥63॥
ಮೂಲಮ್ - 64
ಶೂಲಂ ಭಗ್ನಂ ಹನುಮತಾದೃಷ್ಟ್ವಾ ವಾನರವಾಹಿನೀ ।
ಹೃಷ್ಟಾ ನನಾದ ಬಹುಶಃ ಸರ್ವತಶ್ಚಾಪಿ ದುದ್ರುವೇ ॥
ಅನುವಾದ
ಹನುಮಂತನು ಶೂಲವನ್ನು ಮುರಿದು ಹಾಕಿದುದನ್ನು ನೋಡಿ ವಾನರ ಸೈನ್ಯವು ಹರ್ಷಗೊಂಡು ಸಿಂಹನಾದ ಮಾಡುತ್ತಾ ಎಲ್ಲೆಡೆ ಓಡತೊಡಗಿದರು.॥64॥
ಮೂಲಮ್ - 65
ಬಭೂವಾಥ ಪರಿತ್ರಸ್ತೋ ರಾಕ್ಷಸೋ ವಿಮುಖೋಽಭವತ್ ।
ಸಿಂಹನಾದಂ ಚ ತೇ ಚಕ್ರುಃ ಪ್ರಹೃಷ್ಟಾವನಗೋಚರಾಃ ।
ಮಾರುತಿಂ ಪೂಜಯಾಂ ಚಕ್ರುರ್ದೃಷ್ಟ್ವಾ ಶೂಲಂ ತಥಾಗತಮ್ ॥
ಅನುವಾದ
ಆದರೆ ಆ ರಾಕ್ಷಸನು ನಡುಗಿ ಹೋದನು. ಅವನ ಮುಖ ಖಿನ್ನವಾಯಿತು. ವನಚರ ವಾನರರು ಅತ್ಯಂತ ಸಂತೋಷಗೊಂಡು ಸಿಂಹನಾದ ಮಾಡತೊಡಗಿದರು. ಅವರೆಲ್ಲರೂ ಶೂಲವು ಮುರಿದುಹೋದುದನ್ನು ನೋಡಿ ಪವನಕುಮಾರ ಹನುಮಂತನನ್ನು ಭೂರಿ ಭೂರಿ ಪ್ರಶಂಸಿಸಿದರು.॥65॥
ಮೂಲಮ್ - 66
ಸ ತತ್ತಥಾ ಭಗ್ನಮವೇಕ್ಷ್ಯ ಶೂಲಂ
ಚುಕೋಪ ರಕ್ಷೋಧಿಪತಿರ್ಮಹಾತ್ಮಾ ।
ಉತ್ಪಾಟ್ಯಲಂಕಾಮಲಯಾತ್ ಸ ಶೃಂಗಂ
ಜಘಾನ ಸುಗ್ರೀವಮುಪೇತ್ಯ ತೇನ ॥
ಅನುವಾದ
ಹೀಗೆ ಆ ಶೂಲವು ಭಗ್ನವಾದುದನ್ನು ನೋಡಿ ಮಹಾಕಾಯ ಕುಂಭಕರ್ಣನು ಭಾರೀ ಕ್ರೋಧಗೊಂಡು ಲಂಕೆಯ ಬಳಿ ಇರುವ ಮಲಯ ಪರ್ವತ ಶಿಖರವನ್ನು ಎತ್ತಿ ಸುಗ್ರೀವನ ಬಳಿಗೆ ಹೋಗಿ ಅವನ ಮೇಲೆ ಅಪ್ಪಳಿಸಿದನು.॥66॥
ಮೂಲಮ್ - 67
ಸ ಶೈಲಶೃಂಗಾಭಿಹತೋ ವಿಸಂಜ್ಞಃ
ಪಪಾತ ಭೂಮೌ ಯುಧಿ ವಾನರೇಂದ್ರಃ ।
ತಂ ವೀಕ್ಷ್ಯ ಭೂಮೌ ಪತಿತಂ ವಿಸಂಜ್ಞಂ
ನೇದುಃ ಪ್ರಹೃಷ್ಟಾ ಯುಧಿ ಯಾತುಧಾನಾಃ ॥
ಅನುವಾದ
ಆ ಶೈಲಶಿಖರದಿಂದ ಅಹತನಾದ ವಾನರರಾಜ ಸುಗ್ರೀವನು ನಿಶ್ಚೇಷ್ಟಿತನಾಗಿ ಯುದ್ಧರಂಗದಲ್ಲಿ ಬಿದ್ದು ಹೋದನು. ಅವನು ಮೂರ್ಛಿತನಾಗಿ ಬಿದ್ದಿದನ್ನು ನೋಡಿ ನಿಶಾಚರರು ಸಂತೋಷದಿಂದ ಸಿಂಹನಾದ ಮಾಡಿದರು.॥67॥
ಮೂಲಮ್ - 68
ಸಮಭ್ಯುಪೇತ್ಯಾದ್ಭುತ ಘೋರವೀರ್ಯಂ
ಸ ಕುಂಭಕರ್ಣೋ ಯುಧಿ ವಾನರೇಂದ್ರಮ್ ।
ಜಹಾರ ಸುಗ್ರೀವಮಭಿಪ್ರಗೃಹ್ಯ
ಯಥಾನಿಲೋ ಮೇಘಮಿವ ಪ್ರಚಂಡಃ ॥
ಅನುವಾದ
ಅನಂತರ ಕುಂಭಕರ್ಣನು ರಣರಂಗದಲ್ಲಿ ಅದ್ಭುತ ಪರಾಕ್ರಮ ಪ್ರಕಟಿಸುವ ವಾನರರಾಜ ಸುಗ್ರೀವನ ಬಳಿಗೆ ಹೋಗಿ ಪ್ರಚಂಡ ವಾಯುವು ಮೋಡಗಳನ್ನು ಹಾರಿಸಿಕೊಂಡು ಹೋಗುವಂತೆ ಅವನನ್ನು ಎತ್ತಿಕೊಂಡು ಲಂಕೆಯ ಕಡೆಗೆ ಹೊರಟನು.॥68॥
ಮೂಲಮ್ - 69
ಸ ತಂ ಮಹಾಮೇಘನಿಕಾಶರೂಪ-
ಮುತ್ಪಾಟ್ಯ ಗಚ್ಛನ್ಯುಧಿ ಕುಂಭಕರ್ಣಃ ।
ರರಾಜ ಮೇರುಪ್ರತಿಮಾನ ರೂಪೋ
ಮೇರುರ್ಯಥಾ ವ್ಯಚ್ಛ್ರಿತಘೋರಶೃಂಗಃ ॥
ಅನುವಾದ
ಮಹಾಮೇಘದಂತೆ ರೂಪವುಳ್ಳ ಸುಗ್ರೀವನನ್ನು ಯುದ್ಧರಂಗದಿಂದ ಎತ್ತಿಕೊಂಡು ಹೋಗುವಾಗ ಕುಂಭಕರ್ಣನು ಎತ್ತರವಾದ ಮತ್ತು ಭಯಂಕರವಾದ ಶಿಖರಗಳಿಂದ ಕೂಡಿದ ಮೇರುಪರ್ವತದಂತೆ ಶೋಭಿಸುತ್ತಿದ್ದನು.॥69॥
ಮೂಲಮ್ - 70
ತತಸ್ತಮಾದಾಯ ಜಗಾಮ ವೀರಃ
ಸಂಸ್ತೂಯಮಾನೋ ಯುಧಿ ರಾಕ್ಷಸೇಂದ್ರಃ ।
ಶೃಣ್ವನ್ನಿನಾದಂ ತ್ರಿದಿವಾಲಯಾನಾಂ
ಪ್ಲವಂಗರಾಜಗ್ರಹ ವಿಸ್ಮಿತಾನಾಮ್ ॥
ಅನುವಾದ
ಸುಗ್ರೀವನನ್ನೆತ್ತಿಕೊಂಡು ವೀರರಾಕ್ಷಸರಾಜನು ಲಂಕೆಯ ಕಡೆಗೆ ಹೊರಟಾಗ ರಣರಂಗದಲ್ಲಿ ರಾಕ್ಷಸರೆಲ್ಲರೂ ಅವನನ್ನು ಸ್ತುತಿಸತೊಡಗಿದ್ದರು. ವಾನರರಾಜನ ಸೆರೆಯಿಂದ ಆಶ್ಚರ್ಯಚಕಿತರಾದ ದೇವತೆಗಳು ದಃಖಜನಿತ ಶಬ್ದವು ಅವರಿಗೆ ಸ್ಪಷ್ಟವಾಗಿ ಕೇಳುತ್ತಿತ್ತು.॥70॥
ಮೂಲಮ್ - 71
ತತಸ್ತಮಾದಾಯ ತದಾ ಸ ಮೇನೇ
ಹರೀಂದ್ರ ಮಿಂದ್ರೋಪಮಮಿಂದ್ರವೀರ್ಯಃ ।
ಆಸ್ಮಿನ್ ಹೃತೇ ಸರ್ವಮಿದಂ ಹತಂ ಸ್ಯಾತ್
ಸರಾಘವಂ ಸೈನ್ಯಮಿತೀಂದ್ರಶತ್ರುಃ ॥
ಅನುವಾದ
ಇಂದ್ರನಂತೆ ಪರಾಕ್ರಮಿ ಇಂದ್ರದ್ರೋಹಿ ಕುಂಭಕರ್ಣನು ಆಗ ದೇವೇಂದ್ರ ತುಲ್ಯ ತೇಜಸ್ವೀ ವಾನರರಾಜ ಸುಗ್ರೀವನನ್ನು ಸೆರೆಹಿಡಿದು - ‘ಇವನು ಸತ್ತುಹೋಗುವುದರಿಂದ ಶ್ರೀರಾಮನ ಸಹಿತ ಇವೆಲ್ಲ ವಾನರ ಸೇನೆಯು ತಾನಾಗಿ ನಾಶವಾಗುವುದು’ ಎಂದು ಮನಸ್ಸಿನಲ್ಲಿ ಅಂದುಕೊಂಡನು.॥71॥
ಮೂಲಮ್ - 72
ವಿದ್ರುತಾಂ ವಾಹಿನೀಂ ದೃಷ್ಟ್ವಾ ವಾನರಾಣಾಮಿತತಸ್ತತಃ ।
ಕುಂಭಕರ್ಣೇನ ಸುಗ್ರೀವಂ ಗೃಹೀತಂ ಚಾಪಿ ವಾನರಮ್ ॥
ಮೂಲಮ್ - 73
ಹನೂಮಾಂಶ್ಚಿಂತಯಾಮಾಸ ಮತಿಮಾನ್ ಮಾರುತಾತ್ಮಜಃ ।
ಏವಂ ಗೃಹೀತೇ ಸುಗ್ರೀವೇ ಕಿಂ ಕರ್ತವ್ಯಂ ಮಯಾ ಭವೇತ್ ॥
ಅನುವಾದ
ವಾನರ ಸೈನ್ಯವು ಓಡಿಹೋಗುತ್ತಿದೆ, ವಾನರರಾಜ ಸುಗ್ರೀವನನ್ನು ಕುಂಭ ಕರ್ಣನು ಸೆರೆಹಿಡಿದನು, ಇದನ್ನು ನೋಡಿ ಬುದ್ಧಿವಂತ ಪವನಕುಮಾರ ಹನುಮಂತನು ಈಗ ನಾನೇನು ಮಾಡಬೇಕು ಎಂದು ಯೋಚಿಸಿದನು.॥72-73॥
ಮೂಲಮ್ - 74
ಯದ್ಧಿ ನ್ಯಾಯ್ಯಂ ಮಯಾ ಕರ್ತುಂ ತತ್ಕರಿಷ್ಯಾಮ್ಯ ಸಂಶಯಮ್ ।
ಭೂತ್ವಾ ಪರ್ವತ ಸಂಕಾಶೋ ನಾಶಯಿಷ್ಯಾಮಿ ರಾಕ್ಷಸಮ್ ॥
ಅನುವಾದ
ಈಗ ಉಚಿತವಾದ ಕಾರ್ಯವನ್ನು ನಾನು ನಿಃಸಂದೇಹವಾಗಿ ಮಾಡುವೆನು. ಪರ್ವತದಂತಹ ರೂಪವನ್ನು ತಾಳಿ ಈ ರಾಕ್ಷಸರನ್ನು ನಾಶಮಾಡುತ್ತೇನೆ.॥74॥
ಮೂಲಮ್ - 75
ಮಯಾ ಹತೇ ಸಂಯತಿ ಕುಂಭಕರ್ಣೇ
ಮಹಾಬಲೇ ಮುಷ್ಟಿವಿಶೀರ್ಣದೇಹೇ ।
ವಿಮೋಚಿತೇ ವಾನರಪಾರ್ಥಿವೇ ಚ
ಭವಂತು ಹೃಷ್ಟಾಃ ಪ್ಲವಂಗಾಃ ಸಮಗ್ರಾಃ ॥
ಅನುವಾದ
ಯುದ್ಧರಂಗದಲ್ಲಿ ಮುಷ್ಟಿಯಿಂದ ಗುದ್ದಿ ಗುದ್ದಿ ಮಹಾಬಲಿ ಕುಂಭಕರ್ಣನ ಶರೀರವನ್ನು ನುಚ್ಚುನೂರಾಗಿಸುವೆನು. ಹೀಗೆ ನನ್ನ ಕೈಯಿಂದ ಅವನು ಸತ್ತಾಗ ವಾನರರಾಜ ಸುಗ್ರೀವನನ್ನು ಅವನ ಸೆರೆಯಿಂದ ಬಿಡಿಸಿತರುವೆನು. ಆಗ ವಾನರರೆಲ್ಲ ಹರ್ಷಗೊಳ್ಳುವರು. ಹೀಗೆ ಮಾಡುವುದೇ ಸರಿಯಾಗಿದೆ.॥75॥
ಮೂಲಮ್ - 76
ಅಥ ವಾ ಸ್ವಯಮಪ್ಯೇಷ ಮೋಕ್ಷಂ ಪ್ರಾಪ್ಸ್ಯತಿ ವಾನರಃ ।
ಗೃಹೀತೋಽಯಂ ಯದಿ ಭವೇತ್ ತ್ರಿದಶೈಃ ಸಾಸುರೋರಗೈಃ ॥
ಅನುವಾದ
ಅಥವಾ ಸುಗ್ರೀವನು ಸ್ವತಃ ಅವನ ಸೆರೆಯಿಂದ ಬಿಡುಗಡೆ ಹೊಂದುವನು. ದೇವತೆಗಳು ಅಸುರರು ಅಥವಾ ನಾಗಗಳೂ ಇವನನ್ನು ಸೆರೆಹಿಡಿದರೂ ತನ್ನ ಪ್ರಯತ್ನದಿಂದಲೇ ಬಿಡುಗಡೆ ಹೊಂದುವನು.॥76॥
ಮೂಲಮ್ - 77
ಮನ್ಯೇ ನ ತಾವದಾತ್ಮಾನಂ ಬುಧ್ಯತೇ ವಾನರಾಧಿಪಃ ।
ಶೈಲಪ್ರಹಾರಾಭಿಹತಃ ಕುಂಭಕರ್ಣೇನ ಸಂಯುಗೇ ॥
ಅನುವಾದ
ಯುದ್ಧದಲ್ಲಿ ಕುಂಭಕರ್ಣನ ಶಿಲೆಯ ಪ್ರಹಾರದಿಂದ ಸುಗ್ರೀವನಿಗೆ ಆಳವಾದ ಹೊಡೆತ ಬಿದ್ದಿದೆ, ಅದರಿಂದ ಮೂರ್ಛಿತನಾದ ವಾನರರಾಜನು ಇನ್ನೂ ಎಚ್ಚರಗೊಳ್ಳಲಿಲ್ಲ ಎಂದು ನಾನು ತಿಳಿಯುತ್ತೇನೆ.॥77॥
ಮೂಲಮ್ - 78
ಅಯಂ ಮುಹೂರ್ತಾತ್ಸುಗ್ರೀವೋ ಲಬ್ಧಸಂಜ್ಞೋ ಮಹಾಹವೇ ।
ಆತ್ಮನೋ ವಾನರಾಣಾಂ ಚ ಯತ್ಪಥ್ಯಂ ತತ್ಕರಿಷ್ಯತಿ ॥
ಅನುವಾದ
ಒಂದೇ ಮುಹೂರ್ತದಲ್ಲಿ ಸುಗ್ರೀವನು ಎಚ್ಚರಗೊಂಡಾಗ ಮಹಾಸಮರದಲ್ಲಿ ತನಗೆ ಮತ್ತು ವಾನರರಿಗೆ ಹಿತಕರವಾದ ಕರ್ಮವನ್ನೇ ಮಾಡುವನು.॥78॥
ಮೂಲಮ್ - 79
ಮಯಾ ತು ಮೋಕ್ಷಿತಸ್ಯಾಸ್ಯ ಸುಗ್ರೀವಸ್ಯ ಮಹಾತ್ಮನಃ ।
ಅಪ್ರೀತಿಶ್ಚ ಭವೇತ್ಕಷ್ಟಾ ಕೀರ್ತಿನಾಶಶ್ಚ ಶಾಶ್ವತಃ ॥
ಅನುವಾದ
ನಾನು ಇವನನ್ನು ಬಿಡಿಸಿದರೆ ಮಹಾತ್ಮಾ ಸುಗ್ರೀವನಿಗೆ ಸಂತೋಷವಾಗಲಾರದು, ಬದಲಿಗೆ ದುಃಖವೇ ಆದೀತು. ಇದರಿಂದ ಅವನ ಯಶಸ್ಸು ನಾಶವಾಗಿಹೋದೀತು.॥79॥
ಮೂಲಮ್ - 80
ತಸ್ಮಾನ್ಮುಹೂರ್ತಂ ಕಾಂಕ್ಷಿಷ್ಯೇ ವಿಕ್ರಮಂ ಪಾರ್ಥಿವಸ್ಯ ತು ।
ಭಿನ್ನಂ ಚ ವಾನರಾನೀಕಂ ತಾವದಾಶ್ವಾಸಯಾಮ್ಯಹಮ್ ॥
ಅನುವಾದ
ಆದ್ದರಿಂದ ಅವನ ಬಿಡುಗಡೆಗಾಗಿ ಒಂದು ಮುಹೂರ್ತ ಕಾಯುವೆನು. ಮತ್ತೆ ಅವನು ಬಿಡುಗಡೆ ಹೊಂದಿದಾಗ ಅವನ ಪರಾಕ್ರಮವನ್ನು ನೋಡುವೆನು. ಅಲ್ಲಿಯವರೆಗೆ ವಾನರ ಸೈನಿಕರಿಗೆ ಧೈರ್ಯತುಂಬವೆನು.॥80॥
ಮೂಲಮ್ - 81
ಇತ್ಯೇವಂ ಚಿಂತಯಿತ್ವಾಥ ಹನೂಮಾನ್ಮಾರುತಾತ್ಮಜಃ ।
ಭೂಯಃ ಸಂಸ್ತಂಭಯಾಮಾಸ ವಾನರಾಣಾಂ ಮಹಾಚಮೂಮ್ ॥
ಅನುವಾದ
ಹೀಗೆ ವಿಚಾರ ಮಾಡಿ ಪವನನಂದನ ಮಾರುತಿಯು ವಾನರರ ವಿಶಾಲವಾಹಿನಿಗೆ ಆಶ್ವಾಸನೆಯನ್ನಿತ್ತು ಸ್ಥಿರವಾಗಿ ಸ್ಥಾಪಿಸಿದನು.॥8.॥
ಮೂಲಮ್ - 82
ಸ ಕುಂಭಕರ್ಣೋಽಥ ವಿವೇಶ ಲಂಕಾಂ
ಸ್ಪುರಂತಮಾದಾಯ ಮಹಾಹರಿಂ ತಮ್ ।
ವಿಮಾನಚರ್ಯಾಗೃಹಗೋಪುರಸ್ಥೈಃ
ಪುಷ್ಪಾಗ್ರ್ಯವರ್ಷ್ಯೆರಭಿಪೂಜ್ಯಮಾನಃ ॥
ಅನುವಾದ
ಅತ್ತ ಕುಂಭಕರ್ಣನು ಕೈ-ಕಾಲು ಆಡಿಸುತ್ತಾ ಮಹಾವಾನರ ಸುಗ್ರೀವನನ್ನು ಹಿಡಿದುಕೊಂಡು ಲಂಕೆಯನ್ನು ಹೊಕ್ಕನು. ಆಗ ಬೀದಿಯ ಇಕ್ಕೆಡೆಗಳ ಮನೆಗಳ ಮಹಡಿಗಳಿಂದ ಸ್ತ್ರೀ-ಪುರುಷರು ಕುಂಭಕರ್ಣನನ್ನು ಸ್ವಾಗತ- ಸತ್ಕಾರ ಮಾಡುತ್ತಾ ಅವನ ಮೇಲೆ ಉತ್ತಮ ಹೂವುಗಳನ್ನು ಚೆಲ್ಲುತ್ತಿದ್ದರು.॥82॥
ಮೂಲಮ್ - 83
ಲಾಜಗಂಧೋದವರ್ಷೈಸ್ತು ಸೇಚ್ಯಮಾನಃ ಶನೈಃ ಶನೈಃ ।
ರಾಜವೀಥ್ಯಾಸ್ತು ಶೀತತ್ವಾತ್ಸಂಜ್ಞಾಂ ಪ್ರಾಪ ಮಹಾಬಲಃ ॥
ಅನುವಾದ
ಅರಳು ಮತ್ತು ಪನ್ನೀರಿನ ಮಳೆಗರೆದು ಅಭಿಷಿಕ್ತನಾಗುತ್ತಿದ್ದಾಗ ರಾಜಬೀದಿಯ ಶೀತಲವಾದಾಗ ಮಹಾಬಲಿ ಸುಗ್ರೀವನು ನಿಧಾನವಾಗಿ ಎಚ್ಚರಗೊಂಡನು.॥83॥
ಮೂಲಮ್ - 84
ತತಃ ಸ ಸಂಂಜ್ಞಾ ಮುಪಲಭ್ಯ ಕೃಚ್ಛ್ರಾದ್
ಬಲೀಯಸಸ್ತಸ್ಯ ಭುಜಾಂತರಸ್ಥಃ ।
ಅವೇಕ್ಷಮಾಣಃ ಪುರರಾಜಮಾರ್ಗಂ
ವಿಚಿಂತಯಾಮಾಸ ಮುಹುರ್ಮಹಾತ್ಮಾ ॥
ಅನುವಾದ
ಕಷ್ಟದಿಂದ ಸುಚೇತನಾಗಿ ಬಲಿಷ್ಠ ಕುಂಭಕರ್ಣನ ಭುಜಗಳಲ್ಲಿ ಅದುಮಿ ಹಿಡಿದದ್ದ ಮಹಾತ್ಮಾ ಸುಗ್ರೀವನು ನಗರ ಮತ್ತು ರಾಜಬೀದಿಯನ್ನು ನೋಡಿ ಯೋಚಿಸತೊಡಗಿದನು .॥84॥
ಮೂಲಮ್ - 85
ಏವಂ ಗೃಹೀತೇನ ಕಥಂ ನು ನಾಮ
ಶಕ್ಯಂ ಮಯಾ ಸಂಪ್ರತಿಕರ್ತುಮದ್ಯ ।
ತಥಾ ಕರಿಷ್ಯಾಮಿ ಯಥಾ ಹರೀಣಾಂ
ಭವಿಷ್ಯತೀಷ್ಟಂಚ ಹಿತಂ ಚ ಕಾರ್ಯಮ್ ॥
ಅನುವಾದ
ಈ ರಾಕ್ಷಸನ ಸೆರೆಯಲ್ಲಿದ್ದು ನಾನು ಹೇಗೆ ಪ್ರತಿಕಾರ ಮಾಡಬಲ್ಲೆ? ವಾನರರಿಗೆ ಅಭೀಷ್ಟ ಮತ್ತು ಹಿತಕರವಾದ ಕಾರ್ಯವನ್ನೇ ಮಾಡುವೆನು.॥85॥
ಮೂಲಮ್ - 86
ತತಃ ಕರಾಗ್ರೈಃ ಸಹಸಾ ಸಮೇತ್ಯ
ರಾಜಾ ಹರೀಣಾಮಮರೇಂದ್ರ ಶತ್ರೋಃ ।
ಖರೈಶ್ಚ ಕರ್ಣೌ ದಶನೈಶ್ಚ ನಾಸಾಂ
ದದಂಶ ಪಾದೈರ್ವಿದದಾರ ಪಾರ್ಶ್ವೌ ॥
ಅನುವಾದ
ಹೀಗೆ ನಿಶ್ಚಯಿಸಿ ವಾನರರಾಜಾ ಸುಗ್ರೀವನ ಕೈಯಲ್ಲಿ ತೀಕ್ಷ್ಣ ಉಗುರುಗಳಿಂದ ಇಂದ್ರಶತ್ರು ಕುಂಭಕರ್ಣನ ಎರಡೂ ಕಿವಿಗಳನ್ನು ಹರಿದುಹಾಕಿದನು. ಹಲ್ಲುಗಳಿಂದ ಮೂಗನ್ನು ಕಚ್ಚಿ, ಕಾಲುಗಳ ಉಗುರುಗಳಿಂದ ಆ ರಾಕ್ಷಸನ ಎರಡೂ ಪಕ್ಕೆಗಳನ್ನು ಸೀಳಿಹಾಕಿದನು.॥86॥
ಮೂಲಮ್ - 87
ಸ ಕುಂಭಕರ್ಣೋ ಹೃತಕರ್ಣನಾಸೋ
ವಿದಾರಿತಸ್ತೇನ ರದೈರ್ನಖೈಶ್ಚ ।
ರೋಷಾಭಿಭೂತಃ ಕ್ಷತಜಾರ್ದ್ರಗಾತ್ರಃ
ಸುಗ್ರೀವಮಾವಿಧ್ಯ ಪಿಪೇಷ ಭೂಮೌ ॥
ಅನುವಾದ
ಸುಗ್ರೀವನ ಉಗುರು - ಹಲ್ಲುಗಳಿಂದ ಕಿವಿ - ಮೂಗನ್ನು ಕಳೆದುಕೊಂಡು, ಪಕ್ಕೆಗಳು ಹರಿದುಹೋದದ್ದರಿಂದ ಕುಂಭಕರ್ಣನ ಇಡೀ ಶರೀರ ರಕ್ತಸಿಕ್ತವಾಯಿತು. ಆಗ ಅವನಿಗೆ ಭಾರೀ ರೋಷಉಂಟಾಗಿ ಅವನು ಸುಗ್ರೀವನನ್ನು ಗಿರಗಿರನೆ ತಿರುಗಿಸುತ್ತಾ ನೆಲಕ್ಕೆ ಅಪ್ಪಳಿಸಿ ಅವನನ್ನು ನೆಲದಲ್ಲಿ ತೀಡಲುತೊಡಗಿದನು.॥87॥
ಮೂಲಮ್ - 88
ಸ ಭೂತಲೇ ಭೀಮಬಲಾಭಿಪಿಷ್ಟಃ
ಸುರಾರಿಭಿಸ್ತೈರಭಿಹನ್ಯಮಾನಃ ।
ಜಗಾಮ ಖಂ ಕಂದುಕವಜ್ಜವೇನ
ಪುನಶ್ಚ ರಾಮೇಣ ಸಮಾಜಗಾಮ ॥
ಅನುವಾದ
ಭಯಾನಕ ಬಲಶಾಲಿ ಕುಂಭಕರ್ಣನು ಅವನನ್ನು ನೆಲದಲ್ಲಿ ಮರ್ದಿಸುತ್ತಿರುವಾಗ ಸುಗ್ರೀವನು ಚೆಂಡಿನಂತೆ ವೇಗವಾಗಿ ಮೇಲಕ್ಕೆ ನೆಗೆದು ಶ್ರೀರಾಮಚಂದ್ರನ ಬಳಿಗೆ ಬಂದು ಸೇರಿದನು.॥88॥
ಮೂಲಮ್ - 89
ಕರ್ಣನಾಸಾವಿಹೀನಸ್ತು ಕುಂಭಕರ್ಣೋ ಮಹಾಬಲಃ ।
ರರಾಜ ಶೋಣಿತೋತ್ಸಿಕ್ತೋ ಗಿರಿಃ ಪ್ರಸ್ರವಣೈರಿವ ॥
ಅನುವಾದ
ಮಹಾಬಲಿ ಕುಂಭಕರ್ಣನು ಮೂಗು ಕಿವಿಗಳನ್ನು ಕಳೆದುಕೊಂಡಿದ್ದನು, ಅವನ ಶರೀರದಿಂದ ಪರ್ವತದ ಮೇಲಿನಿಂದ ಹರಿದು ಬರುವ ನೀರಿನ ಝರಿಯಂತೆ ರಕ್ತ ಹರಿಯುತ್ತಿತ್ತು. ಅವನು ರಕ್ತದಿಂದ ತೊಯ್ದು ಹೋಗಿ ಝರಿಗಳಿಂದ ಕೂಡಿದ ಶೈಲಶಿಖರದಂತೆ ಶೋಭಿಸುತ್ತಿದ್ದನು.॥89॥
ಮೂಲಮ್ - 90
ಶೋಣಿತಾರ್ದ್ರೋ ಮಹಾಕಾಯೋ ರಾಕ್ಷಸೋ ಭೀಮದರ್ಶನಃ ।
ಯುದ್ಧಾಯಾಭಿಮುಖೋ ಭೂಯೋ ಮನಶ್ಚಕ್ರೇ ನಿಶಾಚರಃ ॥
ಅನುವಾದ
ಮಹಾಕಾಯ ರಾಕ್ಷಸನು ರಕ್ತದಿಂದ ತೊಯ್ದು ಹೋಗಿ ಇನ್ನು ಭಯಾನಕವಾಗಿ ಕಂಡು ಬರುತ್ತಿದ್ದನು. ಆ ನಿಶಾಚರನು ಪುನಃ ಶತ್ರುವಿನೊಡನೆ ಯುದ್ಧ ಮಾಡುವುದಾಗಿ ನಿಶ್ಚಯಿಸಿದನು.॥90॥
ಮೂಲಮ್
(ಶ್ಲೋಕ - 91)
ಅಮರ್ಷಾಚ್ಛೋಣಿತೋದ್ಗಾರೀ ಶುಶುಭೇ ರಾವಣಾನುಜಃ ।
ನೀಲಾಂಜನಚಯಪ್ರಖ್ಯಃ ಸಸಂಧ್ಯ ಇವ ತೋಯದಃ ॥
ಅನುವಾದ
ರಕ್ತವನ್ನೇ ಕಾರುತ್ತಾ, ಕಾಡಿಗೆಯ ಬೆಟ್ಟದಂತೆ ಕಪ್ಪಾಗಿದ್ದ ಕುಂಭಕರ್ಣನು ಸಂಧ್ಯಾಕಾಲದ ಮೇಘದಂತೆ ಶೋಭಿಸುತ್ತಿದ್ದನು.॥91॥
ಮೂಲಮ್ - 92
ಗತೇ ಚ ತಸ್ಮಿನ್ಸುರರಾಜಶತ್ರುಃ
ಕ್ರೋಧಾತ್ಪ್ರದುದ್ರಾವ ರಣಾಯ ಭೂಯಃ ।
ಅನಾಯುಧೋಽಸ್ಮೀತಿ ವಿಚಿಂತ್ಯ ರೌದ್ರೋ
ಘೋರಂ ತದಾ ಮುದ್ಗರ ಮಾಸಸಾದ ॥
ಅನುವಾದ
ಸುಗ್ರೀವನು ತಪ್ಪಿಸಿಕೊಂಡು ಓಡಿಹೋದಾಗ ಇಂದ್ರದ್ರೋಹಿ ರಾಕ್ಷಸನು ಪುನಃ ಯುದ್ಧಕ್ಕಾಗಿ ಓಡಿದನು. ನನ್ನ ಬಳಿ ಯಾವುದೇ ಆಯುಧವಿಲ್ಲ ವೆಂದು ಯೋಚಿಸಿ, ಅವನು ಒಂದು ದೊಡ್ಡ ಭಯಂಕರ ಮುದ್ಗರವನ್ನು ಎತ್ತಿಕೊಂಡನು.॥92॥
ಮೂಲಮ್ - 93
ತತಃ ಸ ಪುರ್ಯಾಃ ಸಹಸಾ ಮಹೌಜಾ
ನಿಷ್ಕ್ರಮ್ಯ ತದ್ವಾನರಸೈನ್ಯಮುಗ್ರಮ್ ।
ಬಭಕ್ಷ ರಕ್ಷೋ ಯುಧಿ ಕುಂಭಕರ್ಣಃ
ಪ್ರಜಾ ಯುಗಾಂತಾಗ್ನಿರಿವ ಪ್ರವೃದ್ಧಃ ॥
ಅನುವಾದ
ಅನಂತರ ಮಹಾ ಬಲಶಾಲಿ ರಾಕ್ಷಸ ಕುಂಭಕರ್ಣನು ಲಂಕೆ ಯಿಂದ ಹೊರಟು ಪ್ರಜೆಗಳನ್ನು ಭಕ್ಷಿಸುವ ಪ್ರಳಯಕಾಲದ ಪ್ರಜ್ವಲಿತ ಅಗ್ನಿ ಯಂತೆ ಅವನು ರಣರಂಗದಲ್ಲಿ ಭಯಂಕರ ವಾನರ ಸೈನ್ಯವನ್ನು ನುಂಗತೊಡಗಿದನು.॥93॥
ಮೂಲಮ್ - 94
ಬುಭುಕ್ಷಿತಃ ಶೋಣಿತಮಾಂಸಗೃಧ್ನುಃ
ಪ್ರವಿಶ್ಯ ತದ್ ವಾನರಸೈನ್ಯಮುಗ್ರಮ್ ।
ಚಖಾದ ರಕ್ಷಾಂಸಿ ಹರೀನ್ಪಿಶಾಚಾ-
ನೃಕ್ಷಾಂಶ್ಚ ಮೋಹಾದ್ಯುಧಿ ಕುಂಭಕರ್ಣಃ ।
ಯಥೈವ ಮೃತ್ಯುರ್ಹರತೇ ಯುಗಾಂತೇ
ಸ ಭಕ್ಷಯಾಮಾಸ ಹರೀಂಶ್ಚ ಮುಖ್ಯಾನ್ ॥
ಅನುವಾದ
ಆಗ ಕುಂಭಕರ್ಣನಿಗೆ ಹಸಿವು ಸತಾಯಿಸುತ್ತಿತ್ತು. ಅದರಿಂದ ಅವನು ರಕ್ತಮಾಂಸಕ್ಕಾಗಿ ಹಾತೊರೆಯುತ್ತಿದ್ದನು. ಅವನು ಆ ಭಯಂಕರ ವಾನರ ಸೇನೆಯೊಳಗೆ ನುಗ್ಗಿ ಮೋಹವಶ ವಾನರರನ್ನು, ಕರಡಿ ಗಳನ್ನು, ಜೊತೆ ಜೊತೆಗೆ ರಾಕ್ಷಸರನ್ನು ಮತ್ತು ಪಿಶಾಚಿಗಳನ್ನು ತಿನ್ನತೊಡಗಿದನು. ಅವನು ಮುಖ್ಯ ಮುಖ್ಯ ವಾನರರನ್ನು ಪ್ರಳಯ ಕಾಲದಲ್ಲಿ ಮೃತ್ಯುವು ಪ್ರಾಣಿಗಳನ್ನು ಕೊಲ್ಲುವಂತೆ ತುತ್ತಾಗಿಸಿದನು.॥94॥
ಮೂಲಮ್ - 95
ಏಕಂ ದ್ವೌ ತ್ರೀನ್ ಬಹೂನ್ ಕ್ರುದ್ಧೋ ವಾನರಾನ್ಸಹ ರಾಕ್ಷಸೈಃ ।
ಸಮಾದಾಯೈಕ ಹಸ್ತೇನ ಪ್ರಚಿಕ್ಷೇಪ ತ್ವರನ್ಮುಖೇ ॥
ಅನುವಾದ
ಅವನು ಬಹಳ ಅವಸರದಿಂದ ಕ್ರೋಧಗೊಂಡು ಒಂದು ಕೈಯಿಂದ ಒಂದು, ಎರಡು, ಮೂರು ಹಾಗೂ ಅನೇಕ ರಾಕ್ಷಸರನ್ನು ಮತ್ತು ವಾನರರನ್ನು ಬಾಚಿ ತನ್ನ ಬಾಯೊಳಗೆ ತುರುಕಿಸುತ್ತಿದ್ದನು.॥95॥
ಮೂಲಮ್ - 96
ಸಂಪ್ರಸ್ರವಂಸ್ತದಾ ಮೇದಃ ಶೋಣಿತಂ ಚ ಮಹಾಬಲಃ ।
ವಧ್ಯಮಾನೋ ನಗೇಂದ್ರಾಗ್ರೈರ್ಭಕ್ಷಯಾಮಾಸ ವಾನರಾನ್ ॥
ಅನುವಾದ
ಆಗ ಆ ಮಹಾಬಲಿ ನಿಶಾಚರನು ಪರ್ವತ ಶಿಖರಗಳ ಏಟು ತಿನ್ನುತ್ತಿದ್ದರೂ ಬಾಯಿಯಿಂದ ರಕ್ತ ಮೆದಸ್ಸು ಉಗುಳುತ್ತಾ ಅವರೆಲ್ಲರನ್ನು ಭಕ್ಷಿಸುತ್ತಿದ್ದನು.॥96॥
ಮೂಲಮ್ - 97
ತೇ ಭಕ್ಷ್ಯ ಮಾಣಾ ಹರಯೋ ರಾಮಂ ಜಗ್ಮುಸ್ತದಾ ಗತಿಮ್ ।
ಕುಂಭಕರ್ಣೋ ಭೃಶಂ ಕ್ರುದ್ಧಃ ಕಪೀನ್ಖಾದನ್ ಪ್ರಧಾವತಿ ॥
ಅನುವಾದ
ತಿಂದುಳಿದ ವಾನರರು ಶ್ರೀರಾಮನನ್ನು ಶರಣಾಗಲು ಓಡುತ್ತಿದ್ದರು. ಅತ್ತ ಕುಂಭಕರ್ಣನು ಅತ್ಯಂತ ಕುಪಿತನಾಗಿ ವಾನರರನ್ನು ತಿನ್ನುತ್ತಾ ಮುಂದೆ ಮುಂದೆ ಹೋಗುತ್ತಿದ್ದನು.॥97॥
ಮೂಲಮ್ - 98
ಶತಾನಿ ಸಪ್ತ ಚಾಷ್ಟೌ ಚ ವಿಂಶತ್ರಿಂ ಶತ್ತಥೈವ ಚ ।
ಸಂಪರಿಷ್ವಜ್ಯ ಬಾಹುಭ್ಯಾಂ ಖಾದನ್ ವಿಪರಿಧಾವತಿ ॥
ಅನುವಾದ
ಅವನು ಏಳು, ಎಂಟು, ಇಪ್ಪತ್ತು, ಮೂವತ್ತು ಹಾಗೂ ನೂರು ನೂರು ವಾನರರನ್ನು ಎರಡೂ ಕೈಗಳಿಂದ ಬಾಚಿ ತಿಂದು ಹಾಕುತ್ತಾ ರಣಭೂಮಿಯಲ್ಲಿ ಓಡುತ್ತಾ ತಿರುಗುತ್ತಿದ್ದನು.॥98॥
ಮೂಲಮ್ - 99
ಮೇದೋವಸಾ ಶೋಣಿತ ದಿಗ್ಧಗಾತ್ರಃ
ಕರ್ಣಾವಸಕ್ತಗ್ರಧಿತಾಂತ್ರಮಾಲಃ ।
ವವರ್ಷ ಶೂಲಾನಿ ಸುತೀಕ್ಷ್ಣದಂಷ್ಟ್ರಃ
ಕಾಲೋಯುಗಾಂತಸ್ಥ ಇವ ಪ್ರವೃದ್ಧಃ ॥
ಅನುವಾದ
ಅವನ ಶರೀರಕ್ಕೆ ಮೆದಸ್ಸು, ರಕ್ತ ಮೆತ್ತಿಕೊಂಡಿತ್ತು. ಅವನ ಕಿವಿಗಳಲ್ಲಿ ಕುರುಳ ಬಳ್ಳಿ ನೇತಾಡುತ್ತಿದ್ದವು. ತೀಕ್ಷ್ಣವಾದ ಕೊರೆದಾಡೆಯುಳ್ಳ ಅವನು ಮಹಾಪ್ರಳಯದಲ್ಲಿ ಪ್ರಾಣಿ ಗಳನ್ನು ಸಂಹರಿಸುವ ವಿಶಾಲರೂಪಧಾರೀ ಕಾಲನಂತೆ ವಾನರರ ಮೇಲೆ ಶೂಲಗಳನ್ನು ಮಳೆಗರೆಯುತ್ತಿದ್ದನು.॥99॥
ಮೂಲಮ್ - 100
ತಸ್ಮಿನ್ಕಾಲೇ ಸುಮಿತ್ರಾಯಾಃ ಪುತ್ರಃ ಪರಬಲಾರ್ದನಃ ।
ಚಕಾರ ಲಕ್ಷ್ಮಣಃ ಕ್ರುದ್ಧೋ ಯುದ್ಧಂ ಪರಪುರಂಜಯಃ ॥
ಅನುವಾದ
ಆ ಸಮಯದಲ್ಲಿ ಶತ್ರುಸೈನ್ಯ ಸಂಹಾರಕನಾದ ಸುಮಿತ್ರಾಕುಮಾರ ಲಕ್ಷ್ಮಣನು ಕುಪಿತನಾಗಿ ಆ ರಾಕ್ಷಸನೊಡನೆ ಯುದ್ಧ ಮಾಡತೊಡಗಿದನು.॥100॥
ಮೂಲಮ್ - 101
ಸ ಕುಂಭಕರ್ಣಸ್ಯ ಶರಾನ್ ಶರೀರೇ ಸಪ್ತ ವೀರ್ಯವಾನ್ ।
ನಿಚಖಾನಾದದೇ ಚಾನ್ಯಾನ್ ವಿಸಸರ್ಜ ಚ ಲಕ್ಷ್ಮಣಃ ॥
ಅನುವಾದ
ಆ ಪರಾಕ್ರಮಿ ಲಕ್ಷ್ಮಣನು ಕುಂಭಕರ್ಣನ ಶರೀರದಲ್ಲಿ ಏಳು ಬಾಣಗಳನ್ನು ನೆಟ್ಟನು. ಮತ್ತೆ ಬೇರೆ ಬಾಣಗಳನ್ನು ಎತ್ತಿಕೊಂಡು ಅವನ ಮೇಲೆ ಪ್ರಯೋಗಿಸಿದನು.॥101॥
ಮೂಲಮ್ - 102
ಪೀಡ್ಯಮಾನಸ್ತದಸ್ತ್ರಂ ತು ವಿಶೇಷಂ ತತ್ಸರಾಕ್ಷಸಃ ।
ತತಶ್ಚುಕೋಪ ಬಲವಾನ್ ಸುಮಿತ್ರಾನಂದವರ್ಧನಃ ॥
ಅನುವಾದ
ಅವುಗಳಿಂದ ಪೀಡಿತನಾದ ರಾಕ್ಷಸನು ಲಕ್ಷ್ಮಣನ ಆ ಬಾಣಗಳನ್ನು ನಿರ್ವೀರ್ಯಗೊಳಿಸಿದನು. ಆಗ ಸುಮಿತ್ರಾನಂದವರ್ಧನ ಬಲವಂತ ಲಕ್ಷ್ಮಣನಿಗೆ ಭಾರೀ ಕ್ರೋಧ ಉಂಟಾಯಿತು.॥102॥
ಮೂಲಮ್ - 103
ಅಥಾಸ್ಯ ಕವಚಂ ಶುಭ್ರಂ ಜಾಂಬೂನದಮಯಂ ಶುಭಮ್ ।
ಪ್ರಚ್ಛಾದಯಾಮಾಸ ಶರೈಃ ಸಂಧ್ಯಾಭ್ರಮಿವ ಮಾರುತಃ ॥
ಅನುವಾದ
ಅವನು ಕುಂಭಕರ್ಣನ ಸುವರ್ಣನಿರ್ಮಿತ ಸುಂದರ ಕವಚವನ್ನು ಚಂಡಮಾರುತವು ಸಂಧ್ಯಾಕಾಲದ ಮೋಡಗಳನ್ನು ಚದುರಿಸುವಂತೆ ಬಾಣಗಳಿಂದ ಮುಚ್ಚಿಬಿಟ್ಟನು.॥103॥
ಮೂಲಮ್ - 104
ನೀಲಾಂಜನಚಯಪ್ರಖ್ಯಃ ಶರೈಃ ಕಾಂಚನಭೂಷಣೈಃ ।
ಆಪೀಡ್ಯಮಾನಃ ಶುಶುಭೇ ಮೇಘೈಃ ಸೂರ್ಯ ಇವಾಂಶುಮಾನ್ ॥
ಅನುವಾದ
ಕಾಡಿಗೆಯ ಬೆಟ್ಟದಂತೆ ಕಪ್ಪಾದ ಕುಂಭಕರ್ಣನು ಲಕ್ಷ್ಮಣನ ಸುವರ್ಣಭೂಷಿತ ಬಾಣಗಳಿಂದ ಮುಚ್ಚಿಹೋಗಿ ಮೋಡಗಳಿಂದ ಮುಚ್ಚಿಹೋದ ಸೂರ್ಯನಂತೆ ಶೋಭಿಸುತ್ತಿದ್ದನು.॥104॥
ಮೂಲಮ್ - 105
ತತಃ ಸ ರಾಕ್ಷಸೋ ಭೀಮಃ ಸುಮಿತ್ರಾನಂದವರ್ಧನಮ್ ।
ಸಾವಜ್ಞಮೇವ ಪ್ರೋವಾಚ ವಾಕ್ಯಂ ಮೇಘೌಘನಿಃಸ್ವನಃ ॥
ಅನುವಾದ
ಆಗ ಆ ಭಯಂಕರ ರಾಕ್ಷಸನು ಮೇಘದಂತೆ ಗರ್ಜಿಸುತ್ತಾ ಗಂಭೀರ ವಾಣಿಯಿಂದ ಸುಮಿತ್ರಾನಂದನ ಲಕ್ಷ್ಮಣನನ್ನು ತಿರಸ್ಕರಿಸುತ್ತಾ ನುಡಿದನು.॥105॥
ಮೂಲಮ್ - 106
ಅಂತಕಸ್ಯಾಪ್ಯಕಷ್ಟೇನ ಯುಧಿ ಜೇತಾರಮಾಹವೇ ।
ಯುಧ್ಯತಾ ಮಾಮಭೀತೇನ ಖ್ಯಾಪಿತಾ ವೀರತಾ ತ್ವಯಾ ॥
ಅನುವಾದ
ಲಕ್ಷ್ಮಣಾ! ಯುದ್ಧದಲ್ಲಿ ಯಮರಾಜನನ್ನು ಕೂಡ ಸುಲಭವಾಗಿ ಗೆಲ್ಲುವ ಶಕ್ತಿವಂತನಾಗಿದ್ದೇವೆ. ನೀನು ನನ್ನೊಂದಿಗೆ ನಿರ್ಭಯವಾಗಿ ಯುದ್ಧಮಾಡುತ್ತಾ ತನ್ನ ಪರಾಕ್ರಮದ ಪರಿಚಯ ಮಾಡಿಸಿರುವೆ.॥106॥
ಮೂಲಮ್ - 107
ಪ್ರಗೃಹೀತಾಯುಧಸ್ಯೇಹ ಮೃತ್ಯೋರಿವ ಮಹಾಮೃಧೇ ।
ತಿಷ್ಠನ್ನಪ್ಯಗ್ರತಃ ಪೂಜ್ಯಃ ಕಿಮು ಯುದ್ಧ ಪ್ರದಾಯಕಃ ॥
ಅನುವಾದ
ನಾನು ಮಹಾಸಂಗ್ರಾಮದಲ್ಲಿ ಮೃತ್ಯುವಿನಂತೆ ಆಯುಧ ಪಿಡಿದು ಯುದ್ಧಕ್ಕೆ ತೊಡಗಿದರೆ ಆಗ ನನ್ನ ಎದುರಿಗೆ ನಿಲ್ಲುವ ವೀರನೂ ಪ್ರಸಂಸೆಗೆ ಪಾತ್ರನಾಗುತ್ತಾನೆ. ಹಾಗಿರುವಾಗ ನನ್ನೊಡನೆ ಯುದ್ಧ ಮಾಡುವವನ ಕುರಿತು ಹೇಳುವುದೇನಿದೆ.॥107॥
ಮೂಲಮ್ - 108
ಐರಾವತಂ ಸಮಾರೂಢೋ ವೃತಃ ಸರ್ವಾಮರೈಃ ಪ್ರಭುಃ ।
ನೈವ ಶಕ್ರೋಽಪಿ ಸಮರೇ ಸ್ಥಿತಪೂರ್ವಃ ಕದಾಚನ ॥
ಅನುವಾದ
ಐರಾವತ ಆರೂಢನಾಗಿ ಸಮಸ್ತ ದೇವತೆಗಳಿಂದ ಪರಿವೃತನಾದ ಶಕ್ತಿಶಾಲೀ ಇಂದ್ರನೂ ಕೂಡ ಮೊದಲು ನನ್ನ ಎದುರಿಗೆ ಯುದ್ಧದಲ್ಲಿ ನಿಲ್ಲಲಾರದೆ ಹೋದನು.॥108॥
ಮೂಲಮ್ - 109
ಅದ್ಯ ತ್ವಯಾಹಂ ಸೌಮಿತ್ರೇ ಬಾಲೇನಾಪಿ ಪರಾಕ್ರಮೈಃ ।
ತೋಷಿತೋ ಗಂತುಮಿಚ್ಛಾಮಿ ತ್ವಾಮನುಜ್ಞಾಪ್ಯ ರಾಘವಮ್ ॥
ಅನುವಾದ
ಸುಮಿತ್ರಾನಂದನ! ನೀನು ಬಾಲಕನಾಗಿದ್ದರೂ ಇಂದು ತನ್ನ ಪರಾಕ್ರಮದಿಂದ ನನ್ನನ್ನು ಸಂತುಷ್ಟಗೊಳಿಸಿರುವೆ. ಆದ್ದರಿಂದ ನಿನ್ನ ಅನುಮತಿ ಪಡೆದು ಯುದ್ಧಕ್ಕಾಗಿ ರಾಮನ ಬಳಿಗೆ ಹೋಗಲು ಬಯಸುವೆನು.॥109॥
ಮೂಲಮ್ - 110
ಯತ್ ತು ವೀರ್ಯ ಬಲೋತ್ಸಾಹೈಸ್ತೋಷಿತೋಽಹಂ ರಣೇ ತ್ವಯಾ ।
ರಾಮಮೇವೈಕಮಿಚ್ಛಾಮಿ ಹಂತುಂ ಯಸ್ಮಿನ್ಹತೇ ಹತಮ್ ॥
ಅನುವಾದ
ನೀನು ನಿನ್ನ ಬಲ-ವೀರ್ಯ-ಉತ್ಸಾಹದಿಂದ ರಣಭೂಮಿಯಲ್ಲಿ ನನ್ನನ್ನು ಸಂತೋಷಪಡಿಸಿರುವೆ. ಅದರಿಂದ ಈಗ ನಾನು ಕೇವಲ ರಾಮನನ್ನೇ ವಧಿಸಲು ಬಯಸುತ್ತೇನೆ. ಅವನು ಸತ್ತುಹೋದಾಗ ಎಲ್ಲ ಶತ್ರುಸೈನ್ಯ ತಾನಾಗಿ ಮಡಿದುಹೋದೀತು.॥110॥
ಮೂಲಮ್ - 111
ರಾಮೇ ಮಯಾತ್ರಿ ನಿಹತೇ ಯೇಽನ್ಯೇ ಸ್ಥಾಸ್ಯಂತಿ ಸಂಯುಗೇ ।
ತಾನಹಂ ಯೋಧಯಿಷ್ಯಾಮಿ ಸ್ವಬಲೇನ ಪ್ರಮಾಥಿನಾ ॥
ಅನುವಾದ
ನಾನು ರಾಮನನ್ನು ಕೊಂದ ಬಳಿಕ, ಬೇರೆ ಯೋಧರು ಯುದ್ಧದಲ್ಲಿ ನಿಂತು ಎದುರಿಸಿದರೆ ಅವರೆಲ್ಲರ ಜೊತೆಗೆ ನನ್ನ ಸಂಹಾರಕಾರೀ ಬಲದಿಂದ ಯುದ್ಧ ಮಾಡುವೆನು.॥111॥
ಮೂಲಮ್ - 112
ಇತ್ಯುಕ್ತವಾಕ್ಯಂ ತದ್ರಕ್ಷಃ ಪ್ರೋವಾಚ ಸ್ತುತಿಸಂಹಿತಮ್ ।
ಮೃಧೇ ಘೋರತರಂ ವಾಕ್ಯಂ ಸೌಮಿತ್ರಿಃ ಪ್ರಹಸನ್ನಿವ ॥
ಅನುವಾದ
ರಾಕ್ಷಸನು ಹೀಗೆ ಹೇಳಿದಾಗ ಸುಮಿತ್ರಾಕುಮಾರ ಲಕ್ಷ್ಮಣನು ರಣಭೂಮಿಯಲ್ಲಿ ಗಹಗಹಿಸಿ ನಕ್ಕು ಅವನ ಪ್ರಶಂಸೆಯಿಂದ ಕೂಡಿದ ಕಠೋರವಾಗಿ ನುಡಿದನು .॥112॥
ಮೂಲಮ್ - 113½
ಯತ್ತ್ವಂ ಶಕ್ರಾದಿಭಿರ್ದೇವೈ ರಸಹ್ಯಂ ಪ್ರಾಪ್ಯ ಪೌರುಷಮ್ ।
ತತ್ಸತ್ಯಂ ನಾನ್ಯಥಾ ವೀರ ದೃಷ್ಟಸ್ತೇಽದ್ಯ ಪರಾಕ್ರಮಃ ॥
ಏಷ ದಾಶರಥೀ ರಾಮಸ್ತಿಷ್ಠತ್ಯದ್ರಿರಿವಾಚಲಃ ।
ಅನುವಾದ
ವೀರ ಕುಂಭಕರ್ಣ! ನೀನು ಮಹಾಪೌರುಷ ಪಡೆದು ಇಂದ್ರಾದಿ ದೇವತೆಗಳಿಗೂ ಅಸಹ್ಯನಾದ ನಿನ್ನ ಮಾತು ಸುಳ್ಳಲ್ಲ, ನಿಜವೇ ಆಗಿದೆ. ನಾನು ಸ್ವತಃ ಇಂದು ನಿನ್ನ ಪರಾಕ್ರಮವನ್ನು ನೋಡಿದೆ. ನೀನು ಯುದ್ಧಮಾಡಲು ಬಯಸುತ್ತಿರುವ ಶ್ರೀರಾಮನು ಇಲ್ಲೇ ಪರ್ವತದಂತೆ ಅವಿಚಲನಾಗಿ ನಿಂತಿರುವನು.॥113॥
ಮೂಲಮ್ - 114
ಇತಿ ಶ್ರುತ್ವಾ ಹ್ಯನಾದೃತ್ಯ ಲಕ್ಷ್ಮಣಂ ಸ ನಿಶಾಚರಃ ॥
ಮೂಲಮ್ - 115
ಅತಿಕ್ರಮ್ಯ ಚ ಸೌಮಿತ್ರಿಂ ಕುಂಭಕರ್ಣೋ ಮಹಾಬಲಃ ।
ರಾಮಮೇವಾಭಿದುದ್ರಾವ ಕಂಪಯನ್ನಿವ ಮೇದಿನೀಮ್ ॥
ಅನುವಾದ
ಲಕ್ಷ್ಮಣನ ಮಾತನ್ನು ಕೇಳಿ ಅದನ್ನು ಆದರಿಸದೆ ಮಹಾಬಲಿ ನಿಶಾಚರ ಕುಂಭಕರ್ಣನು ಸುಮಿತ್ರಾಕುಮಾರನನ್ನು ದಾಟಿ ಶ್ರೀರಾಮನನ್ನು ಆಕ್ರಮಿಸಿದನು. ಆಗ ಅವನು ಪದಾಘಾತದಿಂದ ಭೂಮಿ ನಡುಗುತ್ತಿತ್ತು.॥114-115॥
ಮೂಲಮ್ - 116
ಅಥ ದಾಶರಥೀ ರಾಮೋ ರೌದ್ರಮಸ್ತ್ರಂ ಪ್ರಯೋಜಯನ್ ।
ಕುಂಭಕರ್ಣಸ್ಯ ಹೃದಯೇ ಸಸರ್ಜ ನಿಶಿತಾನ್ಶರಾನ್ ॥
ಅನುವಾದ
ಅವನು ಬರುತ್ತಿರುವುದನ್ನು ನೋಡಿ ದಶರಥನಂದನ ಶ್ರೀರಾಮನು ರೌದ್ರಾಸ್ತ್ರವನ್ನು ಪ್ರಯೋಗಿಸಿ ಕುಂಭಕರ್ಣನ ಎದೆಗೆ ಅನೇಕ ಹರಿತವಾದ ಬಾಣಗಳನ್ನು ಹೊಡೆದನು.॥116॥
ಮೂಲಮ್ - 117
ತಸ್ಯ ರಾಮೇಣ ವಿದ್ಧಸ್ಯ ಸಹಸಾಭಿಪ್ರಧಾವತಃ ।
ಅಂಗಾರಮಿಶ್ರಾಃ ಕ್ರುದ್ಧಸ್ಯ ಮುಖಾನ್ನಿಶ್ಚೇರುರರ್ಚಿಷಃ ॥
ಅನುವಾದ
ಶ್ರೀರಾಮನ ಬಾಣಗಳಿಂದ ಘಾಸಿಗೊಂಡ ಕುಂಭಕರ್ಣನು ಕ್ರೋಧಗೊಂಡು ಬಾಯಿಯಿಂದ ಬೆಂಕಿಯನ್ನು ಉಗುಳುತ್ತಾ ರಾಮನ ಮೇಲೆ ಆಕ್ರಮಣ ಮಾಡಿದನು.॥11.॥
ಮೂಲಮ್ - 118
ರಾಮಾಸವಿದ್ಧೋ ಘೋರಂ ವೈ ನರ್ದನ್ ರಾಕ್ಷಸಪುಂಗವಃ ।
ಅಭ್ಯಧಾವತ ಸಂಕ್ರುದ್ಧೋ ಹರೀನ್ ವಿದ್ರಾವಯನ್ರಣೇ ॥
ಅನುವಾದ
ಭಗವಾನ್ ಶ್ರೀರಾಮನ ಅಸ್ತ್ರದಿಂದ ಪೀಡಿತನಾಗಿ ರಾಕ್ಷಸಶ್ರೇಷ್ಠ ಕುಂಭಕರ್ಣನು ಗರ್ಜಿಸುತ್ತಾ ಯುದ್ಧದಲ್ಲಿ ವಾನರರನ್ನು ಓಡಿಸುತ್ತಾ ಕ್ರೋಧಪೂರ್ವಕ ಅವನೆಡೆಗೆ ಧಾವಿಸಿದನು.॥118॥
ಮೂಲಮ್ - 119
ತಸ್ಯೋರಸಿ ನಿಮಗ್ನಾಸ್ತೇಶರಾ ಬರ್ಹಿಣವಾಸಸಃ ।
ಹಸ್ತಾಚ್ಚಾಸ್ಯ ಪರಿಭ್ರಷ್ಟಾ ಗದಾಚೋರ್ವ್ಯಾಂ ಪಪಾತ ಹ ॥
ಅನುವಾದ
ನವಿಲುಗರಿಯುಕ್ತ ಶ್ರೀರಾಮನು ಬಾಣಗಳು ಕುಂಭಕರ್ಣನ ಎದೆಯನ್ನು ಹೊಕ್ಕವು. ಅದರಿಂದ ವ್ಯಾಕುಲನಾಗಿ ಅವನ ಕೈಯಿಂದ ಗದೆಯು ನೆಲಕ್ಕೆ ಬಿದ್ದುಹೋಯಿತು.॥119॥
ಮೂಲಮ್ - 120½
ಆಯುಧಾನಿ ಚ ಸರ್ವಾಣಿ ವಿಪ್ರಾಕೀರ್ಯಂತ ಭೂತಲೇ ।
ಸ ನಿರಾಯುಧಮಾತ್ಮಾನಂ ಯದಾ ಮೇನೇ ಮಹಾಬಲಃ ॥
ಮುಷ್ಟಿಭ್ಯಾಂ ಕರಾಭ್ಯಾಂ ಚ ಚಕಾರ ಕದನಂ ಮಹತ್ ।
ಅನುವಾದ
ಇಷ್ಟೇ ಅಲ್ಲದೆ ಅವನ ಇತರ ಆಯುಧಗಳೆಲ್ಲ ಬಿದ್ದು ಹೋದುವು. ತನ್ನ ಬಳಿಯಲ್ಲಿ ಯಾವುದೇ ಆಯುಧಗಳು ಇಲ್ಲವೆಂದು ತಿಳಿದು ಮಹಾಬಲಿ ನಿಶಾಚರನು ಮುಷ್ಟಿಗಳಿಂದಲೇ ವಾನರರ ಸಂಹಾರ ಪ್ರಾರಂಭಿಸಿದನು.॥120½॥
ಮೂಲಮ್ - 121
ಸ ಬಾಣೈರತಿವಿದ್ಧಾಂಗಃ ಕ್ಷತಜೇನ ಸಮುಕ್ಷಿತಃ ।
ರುಧಿರಂ ಪ್ರತಿಸುಸ್ರಾವ ಗಿರಿಃ ಪ್ರಸ್ರವಣಂ ಯಥಾ ॥
ಅನುವಾದ
ಬಾಣಗಳಿಂದ ಅವನ ಸರ್ವಾಂಗವೂ ಗಾಯಗೊಂಡಿತ್ತು. ಇದರಿಂದ ರಕ್ತದಿಂದ ತೊಯ್ದು ಪರ್ವತದಿಂದ ಹರಿಯುವ ನೀರಿನ ಸಲೆಗಳಂತೆ ಅವನ ಶರೀರದಿಂದ ರಕ್ತ ಹರಿಯತೊಡಗಿತು.॥121॥
ಮೂಲಮ್ - 122
ಸ ತ್ರಿವೇಣ ಚ ಕೋಪೇನ ರುಧಿರೇಣ ಚ ಮೂರ್ಛಿತಃ ।
ವಾನರಾನ್ರಾಕ್ಷಸಾನೃಕ್ಷಾನ್ ಖಾದನ್ ಸ ಪರಿಧಾವತಿ ॥
ಅನುವಾದ
ರಕ್ತಪ್ರವಾಹದಿಂದ ದುಃಸಹ ಕ್ರೋಧದಿಂದ ವ್ಯಾಕುಲನಾಗಿ ವಾನರರನ್ನು, ಕರಡಿಗಳನ್ನು, ರಾಕ್ಷಸರನ್ನು ತಿಂದುಹಾಕುತ್ತಾ ಎಲ್ಲೆಡೆ ಓಡತೊಡಗಿದನು.॥122॥
ಮೂಲಮ್ - 123
ಅಥ ಶೃಂಗಂ ಸಮಾವಿಧ್ಯ ಭೀಮಂ ಭೀಮಪರಾಕ್ರಮಃ ।
ಚಿಕ್ಷೇಪ ರಾಮಮುದ್ದಿಶ್ಯ ಬಲವಾನಂತಕೋಪಮಃ ॥
ಅನುವಾದ
ಆಗಲೇ ಯಮನಂತೆ ಕಾಣುವ ಆ ಬಲವಂತ, ಭಯಾನಕ ಪರಾಕ್ರಮೀ ನಿಶಾಚರನು ಒಂದು ಭಯಂಕರ ಪರ್ವತವನ್ನು ಎತ್ತಿ ಬೀಸಿ ಶ್ರೀರಾಮಚಂದ್ರನ ಮೇಲೆ ಎಸೆದನು.॥123॥
ಮೂಲಮ್ - 124
ಅಪ್ರಾಪ್ತಮಂತರಾ ರಾಮಃ ಸಪ್ತಭಿಸ್ತಮಜಿಹ್ಮಗೈಃ ।
ಚಿಚ್ಛೇದ ಗಿರಿಶೃಂಗಂ ತಂ ಪುನಃ ಸಂಧಾಯಕಾರ್ಮುಕಮ್ ॥
ಅನುವಾದ
ಆದರೆ ಶ್ರೀರಾಮನು ಬಾಣಾನುಸಂಧಾನಮಾಡಿ ನೇರವಾಗಿ ಹೋಗುವ ಏಳು ಬಾಣಗಳನ್ನು ಪ್ರಯೋಗಿಸಿ ಆ ಪರ್ವತವು ತನ್ನ ಬಳಿಗೆ ಬರುವ ಮೊದಲೇ ಅದನ್ನು ನುಚ್ಚು ನೂರು ಮಾಡಿದನು.॥124॥
ಮೂಲಮ್ - 125
ತತಸ್ತು ರಾಮೋ ಧರ್ಮಾತ್ಮಾ ತಸ್ಯಶೃಂಗಂ ಮಹತ್ತದಾ ।
ಶರೈಃ ಕಾಂಚನಚಿತ್ರಾಂಗೈಶ್ಚಿಚ್ಛೇದ ಭರತಾಗ್ರಜಃ ॥
ಮೂಲಮ್ - 126
ತನ್ಮೇರುಶಿಖರಾಕಾರಂ ದ್ಯೋತಮಾನಮಿವ ಶ್ರಿಯಾ ।
ದ್ವೇ ಶತೇವಾನರಾಣಾಂ ಚ ಪತಮಾನಮಪಾತಯತ್ ॥
ಅನುವಾದ
ಭರತಾಗ್ರಜ ಧರ್ಮಾತ್ಮಾ ಶ್ರೀರಾಮನು ಸುವರ್ಣಭೂಷಿತ ವಿಚಿತ್ರ ಬಾಣಗಳಿಂದ ಆ ಪರ್ವತವನ್ನು ಪುಡಿಗೈದಾಗ ತನ್ನ ಪ್ರಭೆಯಿಂದ ಬೆಳಗುವ ಆ ಮೇರುಪರ್ವತದ ಶೃಂಗದಶೃದ ಶಿಖರವು ಭೂಮಿಗೆ ಬೀಳುತ್ತಾ ಎರಡು ನೂರು ವಾನರರನ್ನು ಧರಾಶಾಯಿಯಾಗಿಸಿತು.॥125-126॥
ಮೂಲಮ್ - 127
ತಸ್ಮಿನ್ಕಾಲೇ ಸ ಧರ್ಮಾತ್ಮಾ ಲಕ್ಷ್ಮಣೋ ರಾಮಮಬ್ರವೀತ್ ।
ಕುಂಭಕರ್ಣವಧೇ ಯುಕ್ತೋ ಯೋಗಾನ್ ಪರಿಮೃಶನ್ಬಹೂನ್ ॥
ಅನುವಾದ
ಆಗ ಕುಂಭಕರ್ಣನ ವಧೆಗೆ ನಿಯುಕ್ತನಾದ ಧರ್ಮಾತ್ಮಾ ಲಕ್ಷ್ಮಣನು ಅವನ ವಧೆಯ ಅನೇಕ ಯುಕ್ತಿಗಳನ್ನು ಯೋಚಿಸುತ್ತಾ ರಾಮನಲ್ಲಿ ಹೇಳಿದನು.॥127॥
ಮೂಲಮ್ - 128
ನೈವಾಯಂ ವಾನರಾನ್ರಾಜನ್ ನ ವಿಜಾನಾತಿ ರಾಕ್ಷಸಾನ್ ।
ಮತ್ತಃ ಶೋಣಿತಗಂಧೇನ ಸ್ವಾನ್ಪರಾಂಶ್ಚೈವ ಖಾದತಿ ॥
ಅನುವಾದ
ಅಣ್ಣಾ! ಈ ರಾಕ್ಷಸನು ರಕ್ತದ ಸೊಗಡಿನಿಂದ ಉನ್ಮತ್ತನಾಗಿ ವಾನರರು ಯಾರು ರಾಕ್ಷಸರು ಯಾರು ಎಂಬುದನ್ನೂ ತಿಳಿಯುತ್ತಿಲ್ಲ. ತನ್ನ ಮತ್ತು ಶತ್ರುಪಕ್ಷದ ಎಲ್ಲ ಯೋಧರನ್ನು ತಿನ್ನುತ್ತಿರುವನು.॥128॥
ಮೂಲಮ್ - 129
ಸಾಧ್ವೇನಮಧಿರೋಹಂತು ಸರ್ವತೋ ವಾನರರ್ಷಭಾಃ ।
ಯೂಥಪಾಶ್ಚ ಯಥಾ ಮುಖ್ಯಾಸ್ತಿಷ್ಠಂತ್ವಸ್ಮಿನ್ ಸಮಂತತಃ ॥
ಅನುವಾದ
ಆದ್ದರಿಂದ ಶ್ರೇಷ್ಠವಾನರ ದಳಪತಿಗಳನ್ನು ಪ್ರಧಾನರಾದ ವರೆಲ್ಲರೂ ಎಲ್ಲ ಕಡೆಗಳಿಂದ ಇವನ ಶರೀರದ ಮೇಲೆ ಹತ್ತಿ ಕುಳಿತುಕೊಳ್ಳಲಿ.॥129॥
ಮೂಲಮ್ - 130
ಅದ್ಯಾಯಂ ದುರ್ಮತಿಃ ಕಾಲೇ ಗುರಭಾರ ಪ್ರಪೀಡಿತಃ ।
ಪ್ರಚರನ್ರಾಕ್ಷಸೋ ಭೂಮೌ ನಾನ್ಯಾನ್ ಹನ್ಯಾತ್ ಪ್ಲವಂಗಮಾನ್ ॥
ಅನುವಾದ
ಹೀಗಾದರೆ ಈ ದುರ್ಬುದ್ಧಿ ನಿಶಾಚರನು ಈಗ ಗುರುತರ ಭಾರದಿಂದ ಪೀಡಿತನಾಗಿ ರಣಭೂಮಿಯಲ್ಲಿ ಸಂಚರಿಸುವಾಗ ಬೇರೆ ವಾನರರನ್ನು ಸಂಹರಿಸಲಾರನು.॥130॥
ಮೂಲಮ್ - 131
ತಸ್ಯ ತದ್ವಚನಂ ಶ್ರುತ್ವಾ ರಾಜಪುತ್ರಸ್ಯ ಧೀಮತಃ ।
ತೇ ಸುಮಾರುರುಹುರ್ಹೃಷ್ಟಾಃ ಕುಂಭಕರ್ಣಂ ಮಹಾಬಲಾಃ ॥
ಅನುವಾದ
ಬುದ್ಧಿವಂತ ರಾಜಕುಮಾರ ಲಕ್ಷ್ಮಣನ ಈ ಮಾತನ್ನು ಕೇಳಿ ಆ ಮಹಾಬಲಿ ವಾನರ ದಳಪತಿಗಳು ಹರ್ಷದಿಂದ ಕುಂಭಕರ್ಣನ ಮೇಲೆ ಹತ್ತಿ ಕುಳಿತರು.॥131॥
ಮೂಲಮ್ - 132
ಕುಂಭಕರ್ಣಸ್ತು ಸಂಕ್ರುದ್ಧಃ ಸಮಾರೂಢಃ ಪ್ಲವಂಗಮೈಃ ।
ವ್ಯಧೂನಯತ್ತಾನ್ವೇಗೇನ ದುಷ್ಟಹಸ್ತೀವ ಹಸ್ತಿಪಾನ್ ॥
ಅನುವಾದ
ವಾನರರು ಹತ್ತಿಕುಳಿತಾಗ ಕುಂಭಕರ್ಣನು ಅತ್ಯಂತ ಕುಪಿತನಾಗಿ ಕೆರಳಿದ ಆನೆಯು ಮಾವುತನನ್ನು ಕೆಡವಿಹಾಕುವಂತೆ ಅವನು ವೇಗದಿಂದ ವಾನರರನ್ನು ತನ್ನ ದೇಹವನ್ನು ಅಲುಗಾಡಿಸಿ ಬೀಳಿಸಿಬಿಟ್ಟನು.॥132॥
ಮೂಲಮ್ - 133
ತಾನ್ದೃಷ್ಟ್ವಾ ನಿಧುತಾನ್ರಾಮೋ ರುಷ್ಟೋಽಯಮಿತಿ ರಾಕ್ಷಸಮ್ ।
ಸಮುತ್ಪಪಾತ ವೇಗೇನ ಧನುರುತ್ತಮಮಾದದೇ ॥
ಅನುವಾದ
ಅವರೆಲ್ಲರನ್ನು ಬೀಳಿಸಿದುದನ್ನು ನೋಡಿ ಕುಂಭಕರ್ಣನು ದುಷ್ಟನಾಗಿದ್ದಾನೆಂದು ಶ್ರೀರಾಮನು ತಿಳಿದುಕೊಂಡನು. ಮತ್ತೆ ಅವನು ಒಂದು ಉತ್ತಮ ಧನುಸ್ಸನ್ನು ಕೈಗೊಂಡು ವೇಗವಾಗಿ ನೆಗೆದು ಅವನೆಡೆಗೆ ಸಾಗಿದನು.॥133॥
ಮೂಲಮ್ - 134
ಕ್ರೋಧರಕ್ತೇಕ್ಷಣೋ ಧೀರೋ ನಿರ್ದಹನ್ನಿವ ಚಕ್ಷುಷಾ ।
ರಾಘವೋ ರಾಕ್ಷಸಂ ವೇಗಾ ಭಿದುದ್ರಾವ ವೇಗಿತಃ ।
ಯೂಥಪಾನ್ಹರ್ಷಯನ್ಸರ್ವಾನ್ ಕುಂಭಕರ್ಣ ಬಲಾರ್ದಿತಾನ್ ॥
ಅನುವಾದ
ಆ ಧೀರವೀರ ಶ್ರೀರಘುನಾಥನು ಕಣ್ಣುಕೆಂಪಾಗಿಸಿ ತನ್ನ ಕಣ್ಣುಗಳಿಂದಲೇ ಆತನನ್ನು ಸುಟ್ಟು ಬಿಡುವನೋ ಎಂಬಂತೆ ನೋಡಿದನು. ಕುಂಭಕರ್ಣನ ಬಲದಿಂದ ಪೀಡಿತರಾದ ಸಮಸ್ತ ವಾನರ ದಳಪತಿಯವರ ಹರ್ಷವನ್ನು ಹೆಚ್ಚಿಸುತ್ತಾ ವೇಗವಾಗಿ ಅವನ ಮೇಲೆ ಆಕ್ರಮಣಮಾಡಿದನು.॥134॥
ಮೂಲಮ್ - 135
ಸ ಚಾಪಮಾದಾಯ ಭುಜಂಗಕಲ್ಪಂ
ದೃಢಜ್ಯಮುಗ್ರಂ ತಪನೀಯ ಚಿತ್ರಮ್ ।
ಹರೀನ್ಸಮಾಶ್ವಾಸ್ಯ ಸಮುತ್ಪಪಾತ
ರಾಮೋ ನಿಬದ್ಧೋತ್ತಮತೂಣಬಾಣಃ ॥
ಅನುವಾದ
ಸುದೃಢವಾದ ನೇಣಿನಿಂದ ಕೂಡಿದ, ಸರ್ಪದಂತೆ ಭಯಂಕರವಾದ, ಸುವರ್ಣಜಟಿತವಾದ ವಿಚಿತ್ರ ಶೋಭಾಸಂಪನ್ನ ಉಗ್ರ ಧನುಸ್ಸನ್ನು ಕೈಯಲ್ಲಿ ಹಿಡಿದು, ಶ್ರೀರಾಮನು ಉತ್ತಮ ಬತ್ತಳಿಕೆಯನ್ನು ಕಟ್ಟಿಕೊಂಡು, ವಾನರರನ್ನು ಸಮಾಧಾನಪಡಿಸಿ, ಅವನು ಕುಂಭಕರ್ಣನನ್ನು ವೇಗವಾಗಿ ಆಕ್ರಮಿಸಿದನು.॥13.॥
ಮೂಲಮ್ - 136
ಸ ವಾನರಗಣೈಸ್ತೈಸ್ತು ವೃತಃ ಪರಮದುರ್ಜಯೈಃ ।
ಲಕ್ಷ್ಮಣಾನುಚರೋ ವೀರಃ ಸಂಪ್ರತಸ್ಥೇ ಮಹಾಬಲಃ ॥
ಅನುವಾದ
ಆಗ ಅತ್ಯಂತ ದುರ್ಜಯ ವಾನರ ಸಮೂಹ ಅವನನ್ನು ಸುತ್ತಲೂ ಆವರಿಸಿಕೊಂಡಿದ್ದರು. ಲಕ್ಷ್ಮಣನೂ ಅವನ ಹಿಂದೆ ನಡೆಯುತ್ತಿದ್ದನು. ಹೀಗೆ ಆ ಮಹಾಬಲಿ ವೀರರಾಮನು ಮುಂದರಿದನು.॥136॥
ಮೂಲಮ್ - 137
ಸ ದದರ್ಶ ಮಹಾತ್ಮಾನಂ ಕಿರೀಟಿನಮರಿಂದಮಮ್ ।
ಶೋಣಿತಾಪ್ಲುತರಕ್ತಾಕ್ಷಂ ಕುಂಭಕರ್ಣಂ ಮಹಾಬಲಃ ॥
ಮೂಲಮ್ - 138
ಸರ್ವಾನ್ಸಮಭಿಧಾವಂತಂ ಯಥಾ ರುಷ್ಟಂ ದಿಶಾಗಜಮ್ ।
ಮಾರ್ಗಮಾಣಂ ಹರೀನ್ಕ್ರುದ್ಧಂ ರಾಕ್ಷಸೈಃ ಪರಿವಾರಿತಮ್ ॥
ಅನುವಾದ
ಶತ್ರುದಮನ ಕುಂಭಕರ್ಣನು ತಲೆಯಲ್ಲಿ ಕಿರೀಟ ಧರಿಸಿದ್ದನು, ಶರೀರವೆಲ್ಲ ರಕ್ತದಿಂದ ತೊಯ್ದು ಹೋಗಿತ್ತು. ರೋಷಗೊಂಡ ದಿಗ್ಗಜರಂತೆ ಕ್ರೋಧದಿಂದ ವಾನರರನ್ನು ಹುಡುಕುತ್ತಾ ಎಲ್ಲರ ಮೇಲೆ ಆಕ್ರಮಣ ಮಾಡುತ್ತಿರುವ, ಅನೇಕ ರಾಕ್ಷಸರಿಂದ ಸುತ್ತುವರೆದ ಮಹಾಕಾಯ ರಾಕ್ಷಸನನ್ನು ಮಹಾಬಲಶಾಲೀ ಶ್ರೀರಾಮನು ನೋಡಿದನು.॥137-138॥
ಮೂಲಮ್ - 139
ವಿಂಧ್ಯಮಂದರಸಂಕಾಶಂ ಕಾಂಚನಾಂಗದ ಭೂಷಣಮ್ ।
ಸ್ರವಂತಂ ರುಧಿರಂ ವಕ್ತ್ರಾದ್ ವರ್ಷಮೇಘಮಿವೋತ್ಥಿತಮ್ ॥
ಅನುವಾದ
ಅವನು ವಿಂಧ್ಯ, ಮಂದರಾಚಲದಂತೆ ಕಂಡುಬರುತ್ತಿದ್ದನು. ಸ್ವರ್ಣ ಭುಜಕೀರ್ತಿಗಳಿಂದ ಭೂಷಿತನಾಗಿ, ವರ್ಷಾಕಾಲದ ಜಲವರ್ಷಿ ಮೇಘಗಳಂತೆ ಬಾಯಿಯಿಂದ ರಕ್ತದ ಮಳೆಗರೆಯುತ್ತಿದ್ದನು.॥139॥
ಮೂಲಮ್ - 140
ಜಿಹ್ವಯಾ ಪರಿಲಿಹ್ಯಂತಂ ಸೃಕ್ಕಿಣೇ ಶೋಣಿತೋಕ್ಷಿತೇ ।
ಮೃದ್ಗಂತಂ ವಾನರಾನೀಕಂ ಕಾಲಾಂತಕ ಯಮೋಪಮಮ್ ॥
ಅನುವಾದ
ರಕ್ತ ಒಸರುತ್ತಿರುವ ತುಟಿಗಳನ್ನು ನೆಕ್ಕುತ್ತಿದ್ದನು. ಅವನು ಪ್ರಳಯಕಾಲದ ಸಂಹಾರಕಾರೀ ಯಮನಂತೆ ವಾನರರನ್ನು ಅರೆಯುತ್ತಿದ್ದನು.॥140॥
ಮೂಲಮ್ - 141
ತಂ ದೃಷ್ಟ್ವಾ ರಾಕ್ಷಸಶ್ರೇಷ್ಠಂ ಪ್ರದೀಪ್ತಾನಲ ವರ್ಚಸಮ್ ।
ವಿಸ್ಫಾರಯಾಮಾಸ ತದಾ ಕಾರ್ಮುಕಂ ಪುರುಷರ್ಷಭಃ ॥
ಅನುವಾದ
ಹೀಗೆ ಪ್ರಜ್ವಲಿತ ಅಗ್ನಿಯಂತೆ ತೇಜಸ್ವೀ ರಾಕ್ಷಸಶ್ರೇಷ್ಠ ಕುಂಭಕರ್ಣನನ್ನು ನೋಡಿ ಪುರುಷಪ್ರವರ ಶ್ರೀರಾಮನು ತತ್ಕಾಲ ತನ್ನ ಧನುಸ್ಸನ್ನು ಸೆಳೆದನು.॥141॥
ಮೂಲಮ್ - 142
ಸ ತಸ್ಯ ಚಾಪನಿರ್ಘೋಷಾ ತ್ಕುಪಿತೋ ರಾಕ್ಷಸರ್ಷಭಃ ।
ಅಮೃಷ್ಯಮಾಣಸ್ತಂ ಘೋಷಮಭಿದುದ್ರಾವ ರಾಘವಮ್ ॥
ಅನುವಾದ
ಅವನ ಧನುಷ್ಟಂಕಾರ ಕೇಳಿ ರಾಕ್ಷಸಶ್ರೇಷ್ಠ ಕುಂಭಕರ್ಣನು ಕುಪಿತನಾದನು ಹಾಗೂ ಆ ಧನುಷ್ಟಂಕಾರವನ್ನು ಸಹಿಸದೆ ಶ್ರೀರಘುನಾಥನ ಕಡೆಗೆ ಓಡಿದನು.॥142॥
ಟಿಪ್ಪನೀ
*ಈ ಶ್ಲೋಕದ ಮುಂದೆ ಕೆಲವು ಪ್ರತಿಗಳಲ್ಲಿ ಕೆಳಗಿನ ಶ್ಲೋಕಗಳು ಉಪಲಬ್ಧವಾಗುತ್ತವೆ. ಅವು ಉಪಯೋಗೀ ಆದ್ದರಿಂದ ಅವನ್ನು ಅರ್ಥಸಹಿತ ಇಲ್ಲಿ ಕೊಡಲಾಗಿದೆ-
ಪುರಸ್ತಾದ್ ರಾಘವಸ್ಯಾರ್ಥೇ ಗದಾಯುಕ್ತೋ ವಿಭೀಷಣಃ ।
ಅಭಿದುದ್ರಾವ ವೇಗೇನ ಭ್ರಾತಾ ಭ್ರಾತರಮಾಹವೇ ॥
ವಿಭೀಷಣಂ ಪುರೋದೃಷ್ಟ್ವಾ ಕುಂಭಕರ್ಣೀಽಬ್ರವೀದಿದಮ್ ।
ಪ್ರಹರಸ್ವರಣೇ ಶೀಘ್ರಂ ಕ್ಷತ್ರಧರ್ಮೇ ಸ್ಥಿರೋ ಭವ ॥
ಭಾತೃಸ್ನೇಹಂ ಪರಿತ್ಯಜ್ಯ ರಾಘವಸ್ಯ ಪ್ರಿಯಂ ಕುರು ।
ಅಸ್ಮತ್ಕಾರ್ಯಂ ಕೃತಂ ವತ್ಸ ಯಸ್ತ್ವಂ ರಾಮಮುಪಾಗತಃ ॥
ತ್ವಮೇಕೋ ರಕ್ಷಸಾಂ ಲೋಕೇ ಸತ್ಯಧರ್ಮಾಭಿರಕ್ಷಿತಾ ।
ನಾಸ್ತಿ ಧರ್ಮಾಭಿರಕ್ತಾನಾಂ ವ್ಯಸನಂ ತು ಕದಾಚನ ॥
ಸಂತಾನಾರ್ಥಂ ತ್ವಮೇವೈಕಃ ಕುಲಸ್ಯಾಸ್ಯ ಭವಿಪ್ಯಸಿ ।
ರಾಘವಸ್ಯ ಪ್ರಸಾದಾತ್ ತ್ವಂ ರಕ್ಷಸಾಂ ರಾಜ್ಯಮಾಪ್ಸ್ಯಸಿ ॥
ಪ್ರಕೃತ್ಯಾ ಮಮ ದುರ್ಧರ್ಷ ಶೀಘ್ರಂ ಮಾರ್ಗಾದಪಕ್ರಮ ।
ನ ಸ್ಥಾತವ್ಯಂ ಪುರಸ್ತಾನ್ಮೇ ಸಂಭ್ರಾನ್ನಷ್ಟಚೇತಸಃ ॥
ನ ವೇದ್ಮಿ ಸಂಯುಗೇ ಸಕ್ತಃ ಸ್ವಾನ್ ಪರಾನ್ ವಾ ನಿಶಾಚರ ।
ರಕ್ಷಣೀಯೋಽಸಿ ಮೇ ವತ್ಸ ಸತ್ಯಮೇತದ್ ಬ್ರವೀಮಿ ತೇ ॥
ಏವಮುಕ್ತೋ ವಚಸ್ತೇನ ಕುಂಭಕರ್ಣೇನ ಧೀಮತಾ ।
ವಿಭೀಷಣೋ ಮಹಾಬಾಹುಃ ಕುಂಭಕರ್ಣಮುವಾಚ ಹ ॥
ಗದಿತಂ ಮೇ ಕುಲಸ್ಯಾಸ್ಯ ರಕ್ಷಣಾರ್ಥಮರಿಂದಮ ।
ನ ಶ್ರುತಂ ಸರ್ವರಕ್ಷೋಭಿಸ್ತತೋಽಹಂ ರಾಮಮಾಗತಃ ॥
ಕೃತಂ ತು ತನ್ಮಹಾಭಾಗ ಸುಕೃತಂ ದುಷ್ಕೃತಂ ತು ವಾ ।
ಏವಮುಕ್ತ್ವಾಶ್ರುಪೂರ್ಣಾಕ್ಷೋ ಗದಾಪಾಣಿರ್ವಿಭೀಷಣಃ
ಏಕಾಂತಮಾಶ್ರಿತೋ ಭೂತ್ವಾ ಚಿಂತಯಾಮಾಸ ಸಂಸ್ಥಿತಃ ॥
ಆಗ ಶ್ರೀರಾಮಚಂದ್ರನಿಗಾಗಿ ಯುದ್ಧ ಮಾಡಲು ಗದಾಪಾಣಿಯಾಗಿ ವಿಭೀಷಣನು ಅವನ ಮುಂದೆ ಬಂದು ನಿಂತು, ಆ ಯುದ್ಧರಂಗದಲ್ಲಿ ತಮ್ಮನಾಗಿದ್ದರೂ ಅಣ್ಣನನ್ನು ಎದುರಿಸಲು ವೇಗವಾಗಿ ಮುಂದೆ ಹೋದನು. ವಿಭೀಷಣನನ್ನು ಎದುರಿಗೆ ನೋಡಿ ಕುಂಭಕರ್ಣನು ಹೀಗೆ ಹೇಳಿದನು- ವತ್ಸ ! ನೀನು ಅಣ್ಣನೆಂಬ ಸ್ನೇಹಬಿಟ್ಟು ಶ್ರೀರಘುನಾಥನ ಪ್ರಿಯವನ್ನು ಮಾಡು ಹಾಗೂ ರಣರಂಗದಲ್ಲಿ ನನ್ನ ಮೇಲೆ ಗದೆಯನ್ನೆತ್ತು. ಈಗ ನೀನು ಕ್ಷಾತ್ರಧರ್ಮದಲ್ಲಿ ಸ್ಥಿರವಾಗಿ ನಿಲ್ಲು. ನೀನು ಶ್ರೀರಾಮನಲ್ಲಿ ಶರಣಾಗಿ ನಮ್ಮೆಲ್ಲರ ಒಳಿತನ್ನು ಮಾಡಿರುವೆ. ಈ ಜಗತ್ತಿನಲ್ಲಿ ಸತ್ಯ ಧರ್ಮವನ್ನು ರಕ್ಷಿಸುವವನು ರಾಕ್ಷಸರಲ್ಲಿ ನೀನೊಬ್ಬನೇ ಇರುವಿ. ಧರ್ಮದಲ್ಲಿ ಅನುರಕ್ತನಾದವನು ಎಂದಿಗೂ ಯಾವುದೇ ದುಃಖವನ್ನು ಅನುಭವಿಸುವುದಿಲ್ಲ. ಈಗ ಏಕಮಾತ್ರ ನೀನೇ ಈ ಕುಲದ ಸಂತಾನಪರಂಪರೆಯನ್ನು ಸುರಕ್ಷಿತವಾಗಿಡಲು ಬದುಕಿ ಇರುವೆ. ಶ್ರೀರಘುನಾಥನ ಕೃಪೆಯಿಂದಲೇ ನಿನಗೆ ರಾಕ್ಷಸರ ರಾಜ್ಯ ಪ್ರಾಪ್ತವಾಗುವುದು. ದುರ್ಜಯವೀರನೇ! ನನ್ನ ಪ್ರಕೃತಿ ನಿನಗೆ ತಿಳಿದೇ ಇದೆ. ಆದ್ದರಿಂದ ಬೇಗನೆ ನನ್ನ ದಾರಿ ಬಿಟ್ಟು ದೂರ ಹೊರಟುಹೋಗು. ಈಗ ಭ್ರಾಂತನಾಗಿ ನನ್ನ ವಿಚಾರಶಕ್ತಿ ನಾಶವಾಗಿದೆ; ಆದ್ದರಿಂದ ನೀನು ನನ್ನ ಮುಂದೆ ನಿಲ್ಲಬೇಡ. ನಿಶಾಚರನೇ! ಈಗ ಯುದ್ಧದಲ್ಲಿ ಆಸಕ್ತನಾದ ಕಾರಣ ನನಗೆ ತನ್ನವರ ಅಥವಾ ಪರರ ಪರಿಚಯವಾಗುತ್ತಿಲ್ಲ. ಆದರೂ ಮಗು! ನೀನು ನನಗಾಗಿ ರಕ್ಷಣೀಯನಾಗಿರುವೆ. ನಾನು ನಿನ್ನನ್ನು ವಧಿಸಲು ಬಯಸುವುದಿಲ್ಲ. ಈ ನಿಜವಾದ ಮಾತನ್ನೇ ನಿನಗೆ ಹೇಳುತ್ತಿದ್ದೇನೆ. ಬುದ್ಧಿವಂತ ಕುಂಭಕರ್ಣನು ಹೀಗೆ ಹೇಳಿದಾಗ ಮಹಾಬಾಹು ವಿಭೀಷಣನು ಅವನಲ್ಲಿ ಹೇಳಿದನು - ‘ಶತ್ರುದಮನ ವೀರನೇ! ನಾನು ಈ ಕುಲದ ರಕ್ಷಣೆಗಾಗಿ ಬಹಳಷ್ಟು ಹೇಳಿದ್ದೆ; ಆದರೆ ಸಮಸ್ತ ರಾಕ್ಷಸರು ನನ್ನ ಮಾತನ್ನು ಕೇಳಲಿಲ್ಲ. ಆದ್ದರಿಂದ ನಾನು ನಿರಾಶನಾಗಿ ಶ್ರೀರಾಮನಲ್ಲಿ ಶರಣಾದೆ. ಮಹಾಭಾಗನೇ! ಇದು ನನಗೆ ಪಾಪವೋ, ಪುಣ್ಯವೋ, ಅಂತೂ ಈಗ ನಾನು ಶ್ರೀರಾಮನ ಆಶ್ರಯ ಪಡೆದಿರುವೆನು’ ಎಂದು ಹೇಳಿ ಗದಾಧಾರೀ ವಿಭೀಷಣನ ಕಣ್ಣುಗಳಲ್ಲಿ ನೀರು ತುಂಬಿ, ಅವನು ಏಕಾಂತವನ್ನು ಆಶ್ರಯಿಸಿ ಚಿಂತಿಸತೊಡಗಿದನು.
ಮೂಲಮ್ - 143
ತತಸ್ತು ವಾತೋದ್ಧತಮೇಘಕಲ್ಪಂ
ಭುಜಂಗರಾಜೋತ್ತಮ ಭೋಗಬಾಹುಃ ।
ತಮಾಪತಂತಂ ಧರಣೀಧರಾಭ
ಮುವಾಚ ರಾಮೋ ಯುಧಿ ಕುಂಭಕರ್ಣಮ್ ॥
ಅನುವಾದ
ನಾಗರಾಜ ವಾಸುಕಿಯಂತೆ ವಿಶಾಲ ಮತ್ತು ದುಂಡಾದ ಭುಜಗಳುಳ್ಳ ಭಗವಾನ್ ಶ್ರೀರಾಮನು, ತನ್ನ ಮೇಲೆ ಆಕ್ರಮಿಸುತ್ತಿರುವ ವಾಯುಪ್ರೇರಿತ ಮೇಘದಂತೆ ಕಪ್ಪಾದ ಪರ್ವತೋಪಮ ಕುಂಭಕರ್ಣನಲ್ಲಿ ಹೀಗೆಂದನು.॥143॥
ಮೂಲಮ್ - 144
ಆಗಚ್ಛ ರಕ್ಷೋಧಿಪ ಮಾ ವಿಷಾದ
ಮವಸ್ಥಿತೋಽಹಂ ಪ್ರಗೃಹೀತಚಾಪಃ ।
ಅವೇಹಿ ಮಾಂ ರಾಕ್ಷಸವಂಶನಾಶನಂ
ಯಸ್ತ್ವಂ ಮುಹೂರ್ತಾದ್ ಭವಿತಾ ವಿಚೇತಾಃ ॥
ಅನುವಾದ
ರಾಕ್ಷಸರಾಜನೇ ಬಾ, ವಿಷಾದಪಡಬೇಡ. ನಾನು ಧನುರ್ಧಾರಿಯಾಗಿ ನಿಂತಿರುವೆನು. ರಾಕ್ಷಸವಂಶವನ್ನು ಸಂಹರಿಸುವವನು ನಾನೆಂದು ತಿಳಿ. ಇನ್ನು ಎರಡು ಗಳಿಗೆಯಲ್ಲಿ, ನೀನು ಚೈತನ್ಯ ಕಳೆದುಕೊಳ್ಳುವೆ.॥144॥
ಮೂಲಮ್ - 145
ರಾಮೋಽಯಮಿತಿ ವಿಜ್ಞಾಯಜಹಾಸ ವಿಕೃತಸ್ವನಮ್ ।
ಅಭ್ಯಧಾವತ ಸಂಕ್ರುದ್ಧೋ ಹರೀನ್ವಿದ್ರಾವಯನ್ರಣೇ ॥
ಅನುವಾದ
ಇವನೇ ರಾಮನು ಎಂದು ತಿಳಿದು ಆ ರಾಕ್ಷಸನು ವಿಕೃತವಾಗಿ ಅಟ್ಟಹಾಸ ಮಾಡುತ್ತಾ, ಅತ್ಯಂತ ಕುಪಿತನಾಗಿ ರಣಕ್ಷೇತ್ರದಲ್ಲಿ ವಾನರರನ್ನು ಅಟ್ಟುತ್ತಾ ಅವನೆಡೆಗೆ ಧಾವಿಸಿದನು.॥145॥
ಮೂಲಮ್ - 146
ದಾರಯನ್ನಿವ ಸರ್ವೇಷಾಂ ಹೃದಯಾನಿ ವನೌಕಸಾಮ್ ।
ಪ್ರಹಸ್ಯ ವಿಕೃತಂ ಭೀಮಂ ಸ ಮೇಘಸ್ತನಿತೋಪಮಮ್ ॥
ಮೂಲಮ್ - 147
ಕುಂಭಕರ್ಣೋ ಮಹಾತೇಜಾ ರಾಘವಂ ವಾಕ್ಯಮಬ್ರವೀತ್ ।
ನಾಹಂ ವಿರಾಧೋ ವಿಜ್ಞೇಯೋ ನ ಕಬಂಧಃ ಖರೋ ನ ಚ ।
ನ ವಾಲೀ ನ ಚ ಮಾರೀಚಃ ಕುಂಭಕರ್ಣಃ ಸಮಾಗತಃ ॥
ಅನುವಾದ
ಮಹಾತೇಜಸ್ವೀ ಕುಂಭಕರ್ಣನು ಸಮಸ್ತ ವಾನರರ ಹೃದಯಗಳ್ನು ಸೀಳುತ್ತಾ ವಿಕೃತ ಸ್ವರದಿಂದ ಜೋರಾಗಿ ಅಟ್ಟಹಾಸ ಮಾಡಿ ಮೇಘಗಂಭೀರ ಹಾಗೂ ಭಯಂಕರವಾಣಿಯಿಂದ ಶ್ರೀರಾಮನಲ್ಲಿ ಹೇಳಿದನು - ರಾಮಾ! ನನ್ನನ್ನು ವಿರಾಧ, ಕಬಂಧ, ಖರನೆಂದು ತಿಳಿಯಬಾರದು. ನಾನು ಮಾರೀಚ, ವಾಲಿಯೂ ಅಲ್ಲ. ಈ ಕುಂಭಕರ್ಣನು ನಿನ್ನೊಡನೆ ಕಾದಾಡಲು ಬಂದಿರುವನು.॥146-147॥
ಮೂಲಮ್ - 148
ಪಶ್ಯ ಮೇ ಮುದ್ಗರಂ ಭೀಮಂ ಸರ್ವಂ ಕಾಲಾಯಸಂ ಮಹತ್ ।
ಅನೇನ ನಿರ್ಜಿತಾ ದೇವಾ ದಾನವಾಶ್ಚ ಪುರಾ ಮಯಾ ॥
ಅನುವಾದ
ನನ್ನ ಈ ಭಯಂಕರ ವಿಶಾಲ ಮುದ್ಗರವನ್ನು ನೋಡು. ಇದು ಕಪ್ಪಾದ ಲೋಹದಿಂದ ಮಾಡಿದುದಾಗಿದೆ. ಇದರಿಂದಲೇ ನಾನು ಹಿಂದೆ ಸಮಸ್ತ ದೇವತೆಗಳನ್ನು, ದಾನವರನ್ನು ಸೋಲಿಸಿರುವೆನು.॥148॥
ಮೂಲಮ್ - 149
ವಿಕರ್ಣನಾಸ ಇತಿ ಮಾಂ ನಾವಜ್ಞಾತುಂ ತ್ವಮರ್ಹಸಿ ।
ಸ್ವಲ್ಪಾಪಿ ಹಿ ನ ಮೇ ಪೀಡಾ ಕರ್ಣನಾಸಾವಿನಾಶನಾತ್ ॥
ಅನುವಾದ
ನನ್ನ ಮೂಗು-ಕಿವಿಗಳ ತುದಿಗಳು ಹರಿದು ಹೋಗಿದೆ, ಎಂದು ತಿಳಿದು ನೀನು ನನ್ನನ್ನು ಅವಹೇಳನ ಮಾಡಬೇಡ. ಇವೆರಡೂ ನಾಶವಾದ್ದರಿಂದ ನನಗೆ ಯಾವ ನೋವೂ ಇಲ್ಲ.॥149॥
ಮೂಲಮ್ - 150
ದರ್ಶಯೇಕ್ಷ್ವಾಕುಶಾರ್ದೂಲ ವೀರ್ಯಂ ಗಾತ್ರೇಷು ಮೇಽನಘ ।
ತತಸ್ತ್ವಾಂ ಭಕ್ಷಯಿಷ್ಯಾಮಿ ದೃಷ್ಟಪೌರುಷವಿಕ್ರಮಮ್ ॥
ಅನುವಾದ
ಅನಘ ರಘುನಂದನ! ನೀನು ಇಕ್ಷ್ವಾಕುವಂಶದ ವೀರ ಪುರುಷನಾಗಿರುವೆ. ಆದ್ದರಿಂದ ನನ್ನ ಮೇಲೆ ನಿನ್ನ ಪರಾಕ್ರಮವನ್ನು ತೋರು. ನಿನ್ನ ಪೌರುಷ, ಬಲ ಪರಾಕ್ರಮವನ್ನು ನೋಡಿಯೇ ನಾನು ನಿನ್ನನ್ನು ತಿಂದುಬಿಡುವೆನು.॥150॥
ಮೂಲಮ್ - 151
ಸ ಕುಂಭಕರ್ಣಸ್ಯವಚೋ ನಿಶಮ್ಯ
ರಾಮಃ ಸಪುಂಖಾನ್ವಿಸಸರ್ಜ ಬಾಣಾನ್ ।
ತೈರಾಹತೋ ವಜ್ರಸಮಪ್ರವೇಗೈ-
ರ್ನ ಚುಕ್ಷುಭೇ ನ ವ್ಯಥತೇ ಸುರಾರಿಃ ॥
ಅನುವಾದ
ಕುಂಭಕರ್ಣನ ಮಾತನ್ನು ಕೇಳಿ ಶ್ರೀರಾಮನು ಅವನ ಮೇಲೆ ಸುಂದರ ಪಂಖಗಳುಳ್ಳ ಅನೇಕ ಬಾಣಗಳನ್ನು ಪ್ರಯೋಗಿಸಿದನು. ವಜ್ರದಂತೆ ವೇಗವುಳ್ಳ ಆ ಬಾಣಗಳ ಏಟು ತಿಂದರೂ ಆ ದೇವದ್ರೋಹಿ ರಾಕ್ಷಸನು ವ್ಯಥಿತನಾಗಲಿಲ್ಲ. ಕ್ಷುಬ್ದನೂ ಆಗಲಿಲ್ಲ.॥151॥
ಮೂಲಮ್ - 152
ಯೈಃ ಸಾಯಕೈಃ ಸಾಲವರಾ ನಿಕೃತ್ತಾ
ವಾಲೀ ಹತೋ ವಾನರ ಪುಂಗವಶ್ಚ ।
ತೇ ಕುಂಭಕರ್ಣಸ್ಯ ತದಾ ಶರೀರಂ
ವಜ್ರೋಪಮಾ ನ ವ್ಯಥಯಾಂ ಪ್ರಚಕ್ರುಃ ॥
ಅನುವಾದ
ಯಾವ ಬಾಣಗಳು ಶ್ರೇಷ್ಠ ತಾಲವೃಕ್ಷಗಳನ್ನು ಕತ್ತರಿಸಿದ್ದವೋ, ವಾನರರಾಜಾ ವಾಲಿಯನ್ನು ವಧಿಸಿದ್ದವೋ, ಅವೇ ವಜ್ರೋಪಮ ಬಾಣಗಳು ಆಗ ಕುಂಭಕರ್ಣನ ಶರೀರವನ್ನು ನೋಯಿಸಲಿಲ್ಲ.॥152॥
ಮೂಲಮ್ - 153
ಸ ವಾರಿಧಾರಾ ಇವ ಸಾಯಕಾಂಸ್ತಾನ್
ಪಿಬನ್ ಶರೀರೇಣ ಮಹೇಂದ್ರ ಶತ್ರುಃ ।
ಜಘಾನ ರಾಮಸ್ಯ ಶರಪ್ರವೇಗಂ
ವ್ಯಾವಿಧ್ಯ ತಂ ಮುದ್ಗರಮುಗ್ರವೇಗಮ್ ॥
ಅನುವಾದ
ಮಹೇಂದ್ರ ಶತ್ರು ಕುಂಭಕರ್ಣನು ಜಲಧಾರೆಯಂತಿರುವ ಶ್ರೀರಾಮನ ಬಾಣ ವರ್ಷವನ್ನು ಶರೀರದಿಂದ ಕುಡಿಯತೊಡಗಿ, ಭಯಂಕರ ವೇಗಶಾಲಿ ಮುದ್ಗರವನ್ನು ಬೀಸುತ್ತಾ ಬಾಣಗಳ ವೇಗವನ್ನು ನಾಶಗೊಳಿಸಿದನು.॥153॥
ಮೂಲಮ್ - 154
ತತಸ್ತು ರಕ್ಷಃ ಕ್ಷತಜಾನುಲಿಪ್ತಂ
ವಿತ್ರಾಸನಂ ದೇವಮಹಾಚಮೂನಾಮ್ ।
ವ್ಯಾವಿಧ್ಯ ತಂ ಮುದ್ಗರಮುಗ್ರವೇಗಂ
ವಿದ್ರಾವಯಾಮಾಸ ಚಮೂಂ ಹರೀಣಾಮ್ ॥
ಅನುವಾದ
ದೇವತೆಗಳ ವಿಶಾಲ ಸೈನ್ಯವನ್ನು ಭಯಪಡಿಸುವ ಆ ರಾಕ್ಷಸನು ರಕ್ತದಿಂದ ತೋಯ್ದು ಹೋಗಿ ವೇಗಶಾಲೀ ಮುದ್ಗರವನ್ನು ತಿರುಗಿಸುತ್ತಾ ವಾನರ ಸೈನ್ಯವನ್ನು ಹಿಂದಕ್ಕಟ್ಟಿದನು.॥154॥
ಮೂಲಮ್ - 155
ವಾಯುವ್ಯಮಾದಾಯ ತತೋಽಪರಾಸ್ತ್ರಂ
ರಾಮಃ ಪ್ರಚಿಕ್ಷೇಪ ನಿಶಾಚರಾಯ ।
ಸಮುದ್ಗರಂ ತೇನ ಜಹಾರ ಬಾಹುಂ
ಸ ಕೃತ್ತ ಬಾಹುಸ್ತುಮುಲಂ ನನಾದ ॥
ಅನುವಾದ
ಇದನ್ನು ನೋಡಿದ ಶ್ರೀರಾಮನು ವಾಯವ್ಯ ಎಂಬ ಇನ್ನೊಂದು ಅಸ್ತ್ರವನ್ನು ಸಂಧಾನಗೈದು ಅದನ್ನು ಕುಂಭಕರ್ಣನ ಮೇಲೆ ಪ್ರಯೋಗಿಸಿದನು. ಇದರಿಂದ ಆ ನಿಶಾಚರನ ಮುದ್ಗರಸಹಿತ ಬಲತೋಳು ತುಂಡಾಯಿತು. ಭುಜ ತುಂಡಾದಾಗ ಆ ರಾಕ್ಷಸನು ಭಯಾನಕವಾಗಿ ಚೀತ್ಕರಿಸತೊಡಗಿದನು.॥155॥
ಮೂಲಮ್ - 156
ಸ ತಸ್ಯ ಬಾಹುರ್ಗಿರಿಶೃಂಗಕಲ್ಪಃ
ಸಮುದ್ಗರೋ ರಾಘವಬಾಣಕೃತ್ತಃ ।
ಪಪಾತ ತಸ್ಮಿನ್ಹರಿರಾಜಸೈನ್ಯೇ
ಜಘಾನತಾಂ ವಾನರ ವಾಹಿನೀಂ ಚ ॥
ಅನುವಾದ
ಪರ್ವತ ಶಿಖರದಂತೆ ಕಂಡುಬರುತ್ತಿದ್ದ ಆ ಬಾಹು ಶ್ರೀರಾಮನ ಬಾಣದಿಂದ ತುಂಡಾಗಿ ಮುದ್ಗರ ಸಹಿತ ವಾನರರ ಸೈನ್ಯದಲ್ಲಿ ಬಿತ್ತು. ಅದರ ಕೆಳಗೆ ಎಷ್ಟೋ ವಾನರ ಸೈನಿಕರು ಜಜ್ಜಿ ಸತ್ತು ಹೋದರು.॥156॥
ಮೂಲಮ್ - 157
ತೇ ವಾನರಾ ಭಗ್ನ ಹತಾವಶೇಷಾಃ
ಪರ್ಯಂತಮಾಶ್ರಿತ್ಯ ತದಾ ವಿಷಣ್ಣಾಃ ।
ಪ್ರಪೀಡಿತಾಂಗಾ ದದೃಶುಃ ಸುಘೋರಂ
ನರೇಂದ್ರ ರಕ್ಷೋಧಿಪಸಂನಿಪಾತಮ್ ॥
ಅನುವಾದ
ಅಂಗ-ಭಂಗ ಅಥವಾ ಸಾವಿನಿಂದ ಉಳಿದ ವಾನರರು ಖಿನ್ನರಾಗಿ ಒಂದೆಡೆ ಹೋಗಿ ನಿಂತರು. ಅವರ ಶರೀರಗಳು ತುಂಬಾ ನೋಯುತ್ತಿದ್ದು, ಅವರು ಸುಮ್ಮನೆ ನಿಂತು ಮಹಾರಾಜಾ ಶ್ರೀರಾಮನ ಮತ್ತು ರಾಕ್ಷಸ ಕುಂಭಕರ್ಣನ ಸಂಗ್ರಾಮವನ್ನು ನೋಡತೊಡಗಿದರು.॥157॥
ಮೂಲಮ್ - 158
ಸ ಕುಂಭಕರ್ಣೋಽಸ್ತ್ರನಿಕೃತ್ತಬಾಹು-
ರ್ಮಹಾಸಿಕೃತ್ತಾಗ್ರ ಇವಾಚಲೇಂದ್ರಃ ।
ಉತ್ಪಾಟಯಾಮಾಸ ಕರೇಣ ವೃಕ್ಷಂ
ತತೋಽಭಿದುದ್ರಾವ ರಣೇ ನರೇಂದ್ರಮ್ ॥
ಅನುವಾದ
ವಾಯವ್ಯಾಸದಿಂದ ಒಂದು ತೋಳು ತುಂಡಾದಾಗ ಕುಂಭಕರ್ಣನು ಶಿಖರಹೀನ ಪರ್ವತದಂತೆ ಕಂಡು ಬರುತ್ತಿತ್ತು. ಅವನು ಒಂದೇ ಕೈಯಿಂದ ಒಂದು ತಾಳೆಮರವನ್ನು ಕಿತ್ತು, ಅದನ್ನೆತ್ತಿಕೊಂಡು ಯುದ್ಧದಲ್ಲಿ ಮಹಾರಾಜ ಶ್ರೀರಾಮನ ಮೇಲೆ ಆಕ್ರಮಣ ಮಾಡಿದನು.॥158॥
ಮೂಲಮ್ - 159
ತ ತಸ್ಯ ಬಾಹುಂ ಸಹತಾಲವೃಕ್ಷಂ
ಸಮುದ್ಯತಂ ಪನ್ನಗ ಭೋಗಕಲ್ಪಮ್ ।
ಐಂದ್ರಾಸ್ತ್ರಯುಕ್ತೇನ ಜಘಾನ ರಾಮೋ
ಬಾಣೇನ ಜಾಂಬೂನದ ಚಿತ್ರಿತೇನ ॥
ಅನುವಾದ
ಆಗ ಶ್ರೀರಾಮನು ಒಂದು ಸ್ವರ್ಣಭೂಷಿತ ಬಾಣವನ್ನೆತ್ತಿಕೊಂಡು ಅದನ್ನು ಐಂದ್ರಾಸ್ತ್ರದಿಂದ ಅಭಿಮಂತ್ರಿಸಿ, ಅದರಿಂದ ಸರ್ಪದಂತೆ ಮೇಲಕ್ಕೆದ್ದ ರಾಕ್ಷಸನ ಇನ್ನೊಂದು ಬಾಹುವನ್ನು ವೃಕ್ಷಸಹಿತ ಕತ್ತರಿಸಿ ಹಾಕಿದನು.॥159॥
ಮೂಲಮ್ - 160
ಸ ಕುಂಭಕರ್ಣಸ್ಯ ಭುಜೋ ನಿಕೃತ್ತಃ
ಪಪಾತ ಭೂಮೌ ಗಿರಿಸಂನಿಕಾಶಃ ।
ವಿವೇಷ್ಟಮಾನೋ ನಿಜಘಾನ ವೃಕ್ಷಾನ್
ಶೈಲಾನ್ ಶಿಲಾವಾನರ ರಾಕ್ಷಸಾಂಶ್ಚ ॥
ಅನುವಾದ
ಕುಂಭಕರ್ಣನ ತುಂಡಾದ ಆ ಬಾಹು ಪರ್ವತಶಿಖರದಂತೆ ನೆಲಕ್ಕೆ ಬಿದ್ದು, ಅತ್ತ-ಇತ್ತ ಚಲಿಸತೊಡಗಿತು. ಅದು ಎಷ್ಟೋ ವೃಕ್ಷಗಳನ್ನು, ಶೈಲಶಿಖರಗಳನ್ನು, ವಾನರ-ರಾಕ್ಷಸರನ್ನು ಜಜ್ಜಿಹಾಕಿತು.॥160॥
ಮೂಲಮ್ - 161
ತಂ ಛಿನ್ನಬಾಹುಂ ಸಮವೇಕ್ಷ್ಯ ರಾಮಃ
ಸಮಾಪತಂತಂ ಸಹಸಾ ನದಂತಮ್ ।
ದ್ವಾವರ್ಧಚಂದ್ರೌ ನಿಶಿತೌ ಪ್ರಗೃಹ್ಯ
ಚಿಚ್ಛೇದ ಪಾದೌ ಯುಧಿ ರಾಕ್ಷಸಸ್ಯ ॥
ಅನುವಾದ
ಎರಡೂ ಭುಜಗಳು ತುಂಡಾಗಿ ಆ ರಾಕ್ಷಸನು ಆರ್ತನಾದ ಮಾಡುತ್ತಾ ಶ್ರೀರಾಮನನ್ನು ಆಕ್ರಮಿಸಿದನು. ಅವನು ಆಕ್ರಮಿಸಿದನ್ನು ನೋಡಿ ಶ್ರೀರಾಮನ ಎರಡು ತೀಕ್ಷ್ಣವಾದ ಅರ್ಧ ಚಂದ್ರಾಕಾರ ಬಾಣಗಳನ್ನೆತ್ತಿಕೊಂಡು ಅವುಗಳಿಂದ ರಣರಂಗದಲ್ಲಿ ಆ ರಾಕ್ಷಸನ ಎರಡೂ ಕಾಲುಗಳನ್ನು ಕತ್ತರಿಸಿದನು.॥161॥
ಮೂಲಮ್ - 162
ತೌ ತಸ್ಯ ಪಾದೌ ಪ್ರದಿಶೋ ದಿಶಶ್ಚ
ಗಿರೇರ್ಗುಹಾಶ್ಚೈವ ಮಹಾರ್ಣವಂ ಚ ।
ಲಂಕಾ ಚ ಸೇನಾಂ ಕಪಿರಾಕ್ಷಸಾನಾಂ
ವಿನಾದಯಂತೌ ವಿನಿಪೇತತುಶ್ಚ ॥
ಅನುವಾದ
ಅವನ ಎರಡೂ ಕಾಲುಗಳು, ದಶದಿಕ್ಕುಗಳನ್ನು, ಪರ್ವತದ ಕಂದರಗಳನ್ನು, ಮಹಾಸಾಗರ, ಲಂಕೆಯನ್ನು, ವಾನರರ, ರಾಕ್ಷಸರ ಸೈನ್ಯಗಳನ್ನು ಪ್ರತಿಧ್ವನಿಸುತ್ತಾ ಭೂಮಿಯ ಮೇಲೆ ಬಿದ್ದು ಹೋದುವು.॥162॥
ಮೂಲಮ್ - 163
ನಿಕೃತ್ತ ಬಾಹುರ್ವಿನಿಕೃತ್ತಪಾದೋ
ವಿದಾರ್ಯ ವಕ್ತ್ರಂ ಬಡವಾಮುಖಾಭಮ್ ।
ದುದ್ರಾವ ರಾಮಂ ಸಹಸಾಭಿಗರ್ಜನ್
ರಾಹುರ್ಯಥಾ ಚಂದ್ರಮಿವಾಂತರಿಕ್ಷೇ ॥
ಅನುವಾದ
ಎರಡು ಭುಜಗಳು, ಎರಡೂ ಕಾಲುಗಳು ತುಂಡಾಗಿ ಅವನು ವಡವಾನಲದಂತೆ ತನ್ನ ವಿಕರಾಳ ಬಾಯಿಯನ್ನು ಅಗಲಿಸಿ ರಾಹುವು ಚಂದ್ರನನ್ನು ನುಂಗುವಂತೆ ಶ್ರೀರಾಮನನ್ನು ನುಂಗಿಹಾಕಲು ಭಯಾನಕ ಗರ್ಜನೆ ಮಾಡುತ್ತಾ ಅವನಮೇಲೆ ಆಕ್ರಮಿಸಿದನು.॥163॥
ಮೂಲಮ್ - 164
ಅಪೂರಯತ್ತಸ್ಯ ಮುಖಂ ಶಿತಾಗ್ರೈ
ರಾಮಃ ಶರೈರ್ಹೇಮಪಿನದ್ಧಪುಂಖೈಃ ।
ಸಂಪೂರ್ಣವಕ್ತ್ರೋ ನ ಶಶಾಕ ವಕ್ತುಂ
ಚುಕೂಜ ಕೃಚ್ಛ್ರೇಣ ಮುಮೂರ್ಚ್ಛ ಚಾಪಿ ॥
ಅನುವಾದ
ಆಗ ಶ್ರೀರಾಮಚಂದ್ರನು ಸುವರ್ಣಜಟಿತ ರೆಕ್ಕೆಗಳುಳ್ಳ ತನ್ನ ಬಾಣಗಳಿಂದ ಅವನ ಬಾಯಿಯನ್ನು ತುಂಬಿಬಿಟ್ಟನು. ಬಾಯಿ ಮುಚ್ಚಿದ್ದರಿಂದ ಅವನು ಮಾತನಾಡಲೂ ಅಸಮರ್ಥನಾಗಿ, ಬಹಳ ಕಷ್ಟದಿಂದ ಆರ್ತನಾದ ಮಾಡುತ್ತಾ ಮೂರ್ಛಿತನಾದನು.॥164॥
ಮೂಲಮ್ - 165
ಅಥಾದದೇ ಸೂರ್ಯಮರೀಚಿ ಕಲ್ಪಂ
ಸ ಬ್ರಹ್ಮದಂಡಾಂತಕ ಕಾಲಕಲ್ಪಮ್ ।
ಅರಿಷ್ಟಮೈಂದ್ರಂ ನಿಶಿತಂ ಸುಪುಂಖಂ
ರಾಮಃ ಶರಂ ಮಾರುತ ತುಲ್ಯವೇಗಮ್ ॥
ಮೂಲಮ್ - 166
ತಂ ವಜ್ರಜಾಂಬೂದಚಾರುಪುಂಖಂ
ಪ್ರದೀಪ್ತ ಸೂರ್ಯ ಜ್ವಲನ ಪ್ರಕಾಶಮ್ ।
ಮಹೇಂದ್ರ ವಜ್ರಾಶನಿ ತುಲ್ಯವೇಗಂ
ರಾಮಃ ಪ್ರಚಿಕ್ಷೇಪ ನಿಶಾಚರಾಯ ॥
ಅನುವಾದ
ಅನಂತರ ಭಗವಾನ್ ಶ್ರೀರಾಮನು ಬ್ರಹ್ಮದಂಡ ಹಾಗೂ ವಿನಾಶಕಾರೀ ಕಾಲದಂತಹ ಭಯಂಕರ ಹರಿತವಾದ ಸೂರ್ಯಕಿರಣಗಳಂತೆ ಹೊಳೆಯುವ, ಇಂದ್ರಾಸ್ತ್ರದಿಂದ ಅಭಿಮಂತ್ರಿತ, ಶತ್ರುನಾಶಕ, ತೇಜಸ್ವೀ ಸೂರ್ಯ ಮತ್ತು ಪ್ರಜ್ವಲಿತ ಅಗ್ನಿಯಂತೆ ದೇದೀಪ್ಯಮಾನವಾದ, ವಜ್ರ ಮತ್ತು ಸುವರ್ಣಭೂಷಿತ, ಸುಂದರ ರೆಕ್ಕೆಗಳುಳ್ಳ, ವಾಯು ಮತ್ತು ಇಂದ್ರನ ವಜ್ರದಂತೆ, ಸಿಡಿಲಿನಂತೆ ವೇಗವುಳ್ಳ ಬಾಣವನ್ನು ಕೈಗೆತ್ತಿಕೊಂಡು ಆ ನಿರಾಚರನಿಗೆ ಗುರಿಯಿಟ್ಟು ಪ್ರಯೋಗಿಸಿದನು.॥165-166॥
ಮೂಲಮ್ - 167
ಸ ಸಾಯಕೋ ರಾಘವ ಬಾಹುಚೋದಿತೋ
ದಿಶಃಸ್ವಭಾಸಾ ದಶ ಸಂಪ್ರಕಾಶಯನ್ ।
ವಿಧೂಮವೈಶ್ವಾನರಭೀಮ ದರ್ಶನೋ
ಜಗಾಮ ಶಕ್ರಾಶನಿಭೀಮವಿಕ್ರಮಃ ॥
ಅನುವಾದ
ಶ್ರೀರಘುನಾಥನ ಬಾಹುಮುಕ್ತವಾದ ಆ ಬಾಣವು ತನ್ನ ಪ್ರಭೆಯಿಂದ ದಶದಿಕ್ಕುಗಳನ್ನು ಬೆಳಗುತ್ತಾ, ಇಂದ್ರನ ವಜ್ರಾಯುಧದಂತೆ ಅತ್ಯಂತ ವೇಗದಿಂದ ಹೊರಟಿತು. ಅದು ಹೊಗೆಯಿಲ್ಲದ ಅಗ್ನಿಯಂತೆ ಭಯಾನಕವಾಗಿ ಕಂಡುಬರುತ್ತಿತ್ತು.॥167॥
ಮೂಲಮ್ - 168
ಸ ತನ್ಮಹಾಪರ್ವತಕೂಟಸಂನಿಭಂ
ಸವೃತ್ತದಂಷ್ಟ್ರಂ ಚಲಚಾರುಕುಂಡಲಮ್ ।
ಚಕರ್ತ ರಕ್ಷೋಽಧಿಪತೇಃ ಶಿರಸ್ತದಾ
ಯಥೈವ ವೃತ್ರಸ್ಯ ಪುರಾ ಪುರಂದರಃ ॥
ಅನುವಾದ
ಹಿಂದೆ ದೇವೇಂದ್ರನು ವೃತ್ರಾಸುರನ ಮಸ್ತಕವನ್ನು ಕತ್ತರಿಸಿದಂತೆಯೇ ಆ ಬಾಣವು ರಾಕ್ಷಸರಾಜ ಕುಂಭಕರ್ಣನ ಮಹಾಪರ್ವತ ಶಿಖರದಂತೆ ಎತ್ತರವಾದ, ದುಂಡಾಗಿದ್ದ, ಓಲಾಡುತ್ತಿರುವ ಕುಂಡಲಗಳಿಂದ ಅಲಂಕೃತವಾದ ಮಸ್ತಕವನ್ನು ದೇಹದಿಂದ ಬೇರ್ಪಡಿಸಿತು.॥168॥
ಮೂಲಮ್ - 169
ಕುಂಭಕರ್ಣಶಿರೋ ಭಾತಿ ಕುಂಡಲಾಲಂಕೃತಂ ಮಹತ್ ।
ಆದಿತ್ಯೇಽಭ್ಯುದಿತೇ ರಾತ್ರೌ ಮಧ್ಯಸ್ಥ ಇವ ಚಂದ್ರಮಾಃ ॥
ಅನುವಾದ
ಕುಂಭಕರ್ಣನ ಕುಂಡಲಗಳಿಂದ ಅಲಂಕೃತ ವಿಶಾಲಮಸ್ತಕವು ಪ್ರಾತಃಕಾಲ ಸೂರ್ಯೋದಯ ವಾದಾಗ ಆಕಾಶದ ಮಧ್ಯದಲ್ಲಿ ಇರುವ ಚಂದ್ರನಂತೆ ನಿಸ್ತೇಜವಾಯಿತು.॥169॥
ಮೂಲಮ್ - 170
ತದ್ರಾಮಬಾಣಾಭಿಹತಂ ಪಪಾತ
ರಕ್ಷಃಶಿರಃ ಪರ್ವತ ಸಂನಿಕಾಶಮ್ ।
ಬಭಂಜ ಚರ್ಯಾಗೃಹ ಗೋಪುರಾಣಿ
ಪ್ರಾಕಾರಮುಚ್ಚಂ ತಮಪಾತಯಚ್ಚ ॥
ಅನುವಾದ
ಶ್ರೀರಾಮನ ಬಾಣಗಳಿಂದ ತುಂಡಾದ ರಾಕ್ಷಸನ ಆ ಪರ್ವತಾಕಾರ ಮಸ್ತಕವು ಲಂಕೆಯಲ್ಲಿ ಹೋಗಿ ಬಿತ್ತು. ಅದರ ಢಿಕ್ಕಿಯಿಂದ ಬೀದಿಯ ಇಕ್ಕೆಲಗಳಲ್ಲಿದ್ದ ಎಷ್ಟೋ ಮನೆಗಳು, ಎತ್ತರವಾದ ಪ್ರಾಕಾರಗಳು ನೆಲಸಮವಾದುವು.॥170॥
ಮೂಲಮ್ - 171
ತಚ್ಚಾತಿಕಾಯಂ ಹಿಮವತ್ಪ್ರಕಾಶಂ
ರಕ್ಷಸ್ತದಾ ತೋಯನಿಧೌ ಪಪಾತ ।
ಗ್ರಾಹಾನ್ ಪರಾನ್ ಮೀನವರಾನ್ ಭುಜಂಗಮಾನ್
ಮಮರ್ದ ಭೂಮಿಂ ಚ ತದಾ ವಿವೇಶ ॥
ಅನುವಾದ
ಹಾಗೆಯೇ ಹಿಮಾಲಯದಂತೆ ಕಂಡುಬರುತ್ತಿದ್ದ ರಾಕ್ಷಸನ ವಿಶಾಲದೇಹವು ಸಮುದ್ರದ ನೀರಿನಲ್ಲಿ ಬಿದ್ದು, ದೊಡ್ಡ ದೊಡ್ಡ ಮೊಸಳೆ, ಮೀನು, ಹಾವು ಗಳನ್ನು ಮರ್ದಿಸುತ್ತಾ ಭೂಮಿಯೊಳಗೆ ಸೇರಿಕೊಂಡಿತು.॥171॥
ಮೂಲಮ್ - 172
ತಸ್ಮಿನ್ಹತೇ ಬ್ರಾಹ್ಮಣ ದೇವಶತ್ರೌ
ಮಹಾಬಲೇ ಸಂಯತಿ ಕುಂಭಕರ್ಣೇ ।
ಚಚಾಲ ಭೂರ್ಭೂಮಿಧರಾಶ್ಚ ಸರ್ವೇ
ಹರ್ಷಾಚ್ಚ ದೇವಾಸ್ತುಮುಲಂ ಪ್ರಣೇದುಃ ॥
ಅನುವಾದ
ಬ್ರಾಹ್ಮಣರ ಮತ್ತು ದೇವತೆಗಳ ಶತ್ರು ಮಹಾಬಲಿ ಕುಂಭಕರ್ಣನು ಯುದ್ಧದಲ್ಲಿ ಮಡಿದುಹೋದಾಗ ಭೂಮಿಯು ತೂಗಾಡಿತು, ಪರ್ವತಗಳು ನಡುಗತೊಡಗಿದವು; ಸಮಸ್ತ ದೇವತೆಗಳು ಹರ್ಷತುಂಬಿ ತುಮುಲ ನಾದ ಮಾಡಿದರು.॥172॥
ಮೂಲಮ್ - 173
ತತಸ್ತು ದೇವರ್ಷಿ ಮಹರ್ಷಿ ಪನ್ನಗಾಃ
ಸುರಾಶ್ಚ ಭೂತಾನಿ ಸುಪರ್ಣಗುಹ್ಯಕಾಃ ।
ಸಯಕ್ಷಗಂಧರ್ವಗಣಾ ನಭೋಗತಾಃ
ಪ್ರಹರ್ಷಿತಾ ರಾಮಪರಾಕ್ರಮೇಣ ॥
ಅನುವಾದ
ಆಗ ಆಗಸದಲ್ಲಿ ನಿಂತಿದ್ದ ದೇವರ್ಷಿ, ಮಹರ್ಷಿ, ಸರ್ಪ, ದೇವತಾ, ಭೂತಗಣ, ಗರುಡ, ಗುಹ್ಯಕ, ಯಕ್ಷ, ಗಂಧರ್ವರು ಶ್ರೀರಾಮನ ಪರಾಕ್ರಮ ನೋಡಿ ಬಹಳ ಸಂತೋಷಗೊಂಡರು.॥173॥
ಮೂಲಮ್ - 174
ತತಸ್ತು ತೇ ತಸ್ಯ ವಧೇನ ಭೂರಿಣಾ
ಮನಸ್ವಿನೋ ನೈರ್ಋತರಾಜಬಾಂಧವಾಃ ।
ವಿನೇದುರುಚ್ಚೈರ್ವ್ಯಥಿತಾ ರಘೂತ್ತಮಂ
ಹರಿಂ ಸಮೀಕ್ಷ್ಯೈವ ಯಥಾ ಮತಂಗಜಾಃ ॥
ಅನುವಾದ
ಕುಂಭಕರ್ಣನ ವಧೆಯಿಂದ ರಾಕ್ಷಸರಾಜ ರಾವಣನ ಬಂಧುಗಳಿಗೆ ಬಹಳ ದುಃಖವಾಯಿತು. ಅವರು ರಘುಕುಲತಿಲಕ ಶ್ರೀರಾಮನ ಕಡೆಗೆ ನೋಡುತ್ತಾ, ಸಿಂಹವನ್ನು ಕಂಡ ಆನೆಯು ಘೀಳಿಡುವಂತೆಯೇ ಗಟ್ಟಿಯಾಗಿ ಅಳತೊಡಗಿದರು.॥174॥
ಮೂಲಮ್ - 175
ಸ ದೇವಲೋಕಸ್ಯ ತಮೋ ನಿಹತ್ಯ
ಸೂರ್ಯೋ ಯಥಾ ರಾಹುಮುಖಾದ್ವಿಮುಕ್ತಃ ।
ತಥಾ ವ್ಯಭಾಸೀದ್ಧರಿಸೈನ್ಯಮಧ್ಯೇ
ನಿಹತ್ಯ ರಾಮೋ ಯುಧಿ ಕುಂಭಕರ್ಣಮ್ ॥
ಅನುವಾದ
ದೇವತಾ ಸಮೂಹಕ್ಕೆ ದುಃಖ ಕೊಡುವ ಕುಂಭಕರ್ಣನನ್ನು ಯುದ್ಧದಲ್ಲಿ ವಧಿಸಿ, ವಾನರರ ಸೈನ್ಯದ ನಡುವೆ ನಿಂತಿದ್ದ ಭಗವಾನ್ ಶ್ರೀರಾಮನು ರಾಹುವಿನ ಬಾಯಿಯಿಂದ ಬಿಡುಗಡೆ ಹೊಂದಿದ ಸೂರ್ಯನಂತೆ ಅಂಧಕಾರವನ್ನು ನಾಶಮಾಡಿ ಪ್ರಕಾಶಿಸುತ್ತಿದ್ದನು.॥175॥
ಮೂಲಮ್ - 176
ಪ್ರಹರ್ಷಮೀಯುರ್ಬಹವಸ್ತು ವಾನರಾಃ
ಪ್ರಬುದ್ಧಪದ್ಮ ಪ್ರತಿಮೈರಿವಾನನೈಃ ।
ಅಪೂಜಯನ್ರಾಘವಮಿಷ್ಟಭಾಗಿನಂ
ಹತೇ ರಿಪೌ ಭೀಮಬಲೇ ದುರಾತ್ಮಜಮ್ ॥
ಅನುವಾದ
ಭಯಾನಕ ಬಲಶಾಲೀ ಶತ್ರುವಿನ ಸಂಹಾರದಿಂದ ಅಸಂಖ್ಯ ವಾನರರಿಗೆ ಬಹಳ ಸಂತೋಷವಾಯಿತು. ಅವರ ಮುಖಗಳು ಅರಳಿದ ಕಮಲದಂತೆ ಹರ್ಷೋಲ್ಲಾಸದಿಂದ ಅರಳಿದವು. ಅವರು ಸಲಮನೋರಥನಾದ ರಾಜಕುಮಾರ ಭಗವಾನ್ ಶ್ರೀರಾಮನನ್ನು ಭೂರಿ-ಭೂರಿಯಾಗಿ ಪ್ರಶಂಸಿಸಿದರು.॥176॥
ಮೂಲಮ್ - 177
ಸ ಕುಂಭಕರ್ಣಂ ಸುರಸೈನ್ಯ ಮರ್ದನಂ
ಮಹತ್ಸು ಯುದ್ಧೇಷು ಕದಾಚನಾಜಿತಮ್ ।
ನನಂದ ಹತ್ವಾ ಭರತಾಗ್ರಜೋ ರಣೇ
ಮಹಾಸುರಂ ವೃತ್ರಮಿವಾಮರಾಧಿಪಃ ॥
ಅನುವಾದ
ದೊಡ್ಡ ದೊಡ್ಡ ಯುದ್ಧಗಳಲ್ಲಿ ಸೋಲದ ದೇವತೆಗಳ ಸೈನ್ಯವನ್ನು ಮರ್ಧಿಸುವ ಆ ಮಹಾರಾಕ್ಷಸ ಕುಂಭಕರ್ಣನನ್ನು ವಧಿಸಿದಾಗ, ವೃತ್ರಾಸುರನನ್ನು ವಧಿಸಿ ದೇವೇಂದ್ರನಿಗೆ ಆದ ಸಂತೋಷ ದಂತೆ ರಘುನಾಥನು ಆನಂದ ತುಂದಿಲನಾದನು.॥177॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಅರವತ್ತೇಳನೆಯ ಸರ್ಗ ಪೂರ್ಣವಾಯಿತು.॥67॥